ಹೀಗೊಂದು ಸಂಜೆ
ಇವತ್ತು ಆಫೀಸಿನಿಂದ ಬರೋದು ತಡವಾಗಿ ಹೋಯ್ತು ಅಂತ ಲಗುಬಗೆಯಿಂದ ಬರೋವಾಗ ದಾರಿ ಸವೀಲಿ ಅಂತ ರೇಡಿಯೋ ಹಚ್ಚಿದರೆ ಕನೆಕ್ಟಿಕಟ್ ಪ್ರೈಮರಿ ಎಲೆಕ್ಷನ್‌ನಲ್ಲಿ ಹಿಂಗಾಯ್ತು ಹಂಗಾಯ್ತು, ಲೀಬರ್‌ಮನ್ ಬರ್ತಾನೆ, ಇಲ್ಲ ಲೆಮಾಂಟ್ ಬರ್ತಾನೆ ಅಂತ ಕಥೆ ಹಚ್ಚಿದ್ರು. ಥೂ ಇವರಾ ಅಂತ ರೆಡಿಯೋ ತಲೆ ಮೇಲೆ ಹೊಡೆದಿದ್ದಕ್ಕೆ ಒಂದೇ ಉಸಿರಿಗೆ ಹೆದರಿಕೊಂಡ್ ಮಗೂ ಥರಾ ಗಪ್ ಚುಪ್ ಆಯ್ತು. ಸರಿ ಹೊರಗಡೆ ಏನಿಲ್ಲದಿದ್ದರೂ ಖಾಲಿ ರಸ್ತೇನಾದ್ರೂ ಇದ್ದಿತಾದ್ರಿಂದ ಅಕ್ಕಪಕ್ಕದ ಡ್ರೈವರುಗಳ ಜೊತೆ ಚವಕಾಸೀ ಮಾಡೋ ಯಾವ ಅವಕಾಶವೂ ಇದ್ದಂಗ್ ಕಾಣ್ಲಿಲ್ಲ. ಇತ್ಲಾಗ್ ರೇಡೀಯೋನೂ ಬೇಡಾ, ಅತ್ಲಾಗ್ ಹೊಟ್ಟೆ ಒಳಗಿನ ಯೋಚ್ನೆಗಳಿಗೂ ಉಪಚಾರ ಮಾಡೋದು ಬೇಡ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು ಸ್ವಲ್ಪ ದಿನವೆಲ್ಲ ಪರದೇ ನೋಡೋ ಕಣ್ಣಿಗಾದ್ರೂ ವಿರಾಮ ಸಿಗಲಿ ಅಂತ ದೂರದವರೆಗೆ ಕಣ್ಣು ಹಾಯಿಸಿದ್ದಕ್ಕೆ ದೊಡ್ಡೋರ್ ಮನೆ ಲೈಟನ್ನು ಅಪಾರದರ್ಶಕ ಬಲ್ಬ್‌ನಲ್ಲಿ ಅಡಗಿಸಿದಾಗ ಕಾಣೋ ಪ್ರಕಾಶದುಂಡೆಯಂತೆ ದಿಗಂತದಲ್ಲಿ ದೊಡ್ಡ ಚಂದ್ರಮ ಅದಾಗಲೇ ತಲೆ ಎತ್ತುತ್ತಿದ್ದ. ಇನ್ನೇನು ಹುಣ್ಣಿಮೆ ಹತ್ರ ಬಂತು ಅನ್ನೋ ಸಡಗರದಿಂದ ಬೀಗ್ತಾ ಇರೋ ಅವನನ್ನ ಅವನ ಮುಂದೆ ಚದುರಿದ ಮೋಡಗಳು ಸ್ವಲ್ಪ ಕಾಲ ಮುತ್ತಿದವಂತೆ ಕಂಡು ಬಂದರೂ ಚಂದ್ರನ ದೊಡ್ಡ ಮುಖ ಒಂದಲ್ಲ ಒಂದು ಕೋನದಿಂದ ಕಾಣ್ತಾನೇ ಇತ್ತು.
ದಾರಿ ಉದ್ದುಕೂ ಒಂಥರಾ ಚತುರ್ದಶಿ ಕಳೆದು ಹುಣ್ಣಿಮೆ ಬರೋ ಕಳೆ ಇತ್ತು, ಇನ್ನೂ ಚುಮುಚುಮು ಬೆಳಕನ್ನು ತಾನು ಹೋದ ದಾರಿಯಲ್ಲಿ ಬಿಟ್ಟು ಸ್ವಲ್ಪ ಬೇಗನೇ ಆಫೀಸು ಬಿಟ್ಟು ಹೋದವನಂತೆ ಸೂರ್ಯ ಕಾಣೆಯಾಗಿದ್ದ. ದಾರಿ ಹೊರಳಿದಂತೆ, ದಿಕ್ಕು ಬದಲಾದಂತೆ ಎಲ್ಲಿಂದ ನೋಡಿದರೂ ಚಂದ್ರನ ಒಂದೇ ಮುಖ ಯಾವಾಗಲೂ ಸಿಎನ್‌ಎನ್‌ನಲ್ಲಿ ತೋರಿಸೋ ಪ್ರೆಸಿಡೆಂಟ್ ಬುಷ್ ಮುಖದ ಹಾಗೆ ಯಾವ ಸ್ವಾರಸ್ಯವೂ ಇಲ್ಲದೇ ಒಂದೇ ರೀತಿ ಕಾಣುತ್ತಿತ್ತು. ಇನ್ನೇನು ಆಗಷ್ಟ್ ಕಳೆದು ಸೆಪ್ಟೆಂಬರ್ ಒಂದು ಬರಲಿ ಬೀಸೋಕೆ ಶುರು ಮಾಡ್ತೀನಿ ಅಂತ ಟ್ರಯಲ್ ನೋಡೋರ್ ಥರಾ ಗಾಳಿ ಅಲ್ಲಲ್ಲಿ ಬೀಸಿ ಗಿಡಮರಗಳನ್ನ ತೂಗಾಡಿಸುತ್ತಿತ್ತು.
ಈ ಚಂದ್ರನ ಮುಖ ನೋಡಿದ್ ಕೂಡ್ಲೇ ನಾನು ನಮ್ಮ ಹೈ ಸ್ಕೂಲಲ್ಲಿ ಜ್ಯೋತಿಲಿಂಗಪ್ಪ ಮೇಷ್ಟ್ರಿಗೆ ಕೇಳಿದ ಒಂದು ಪ್ರಶ್ನೆ ನೆನಪಿಗೆ ಬಂತು - ಸೂರ್ಯ ಅಥವಾ ಚಂದ್ರ ಮುಳುಗುವಾಗ ಹಾಗೂ ಹುಟ್ಟುವಾಗ ನಮಗೆ ದೊಡ್ಡದಾಗಿ ಕಾಣೋದ್ಯಾಕೆ? ಅದೇ ನೆತ್ತಿಮೇಲೆ ಬಂದಾಗ ಚಿಕ್ಕವಾಗಿ ಕಾಣ್ತಾವಲ್ಲ! ನನಗೆ ನಾನು ಹೀಗೆ ಕೇಳಿದ್ದೆ ಅನ್ನೋ ಪ್ರಶ್ನೆ ಮಾತ್ರ ನೆನಪಿದೆಯೇ ವಿನಾ ಅವರು ಏನು ಉತ್ರ ಕೊಟ್ರು ಅನ್ನೋದ್ ನೆನಪಲ್ಲಿಲ್ಲ! ಆದ್ರೂ ಯಾಕಿದ್ದಿರಬಹುದು, ಅದರ ಉತ್ರ ನನಗ್ಗೊತ್ತಿದೆಯೋ ಇಲ್ಲವೋ ಅದನ್ನ ಸಾಮಾನ್ಯರಿಗೂ ತಿಳಿಸಿ ಹೇಳೋಕೆ ಸಾಧ್ಯವೇ? ಸಾಪೇಕ್ಷ ಸಿದ್ಧಾಂತ (relativity), ಆಕಾಶಕಾಯಗಳು ಸುತ್ತುವ ಪಥ (oribit), ಹಾಗೂ ನಾವು ನೋಡುವ ಮಾಧ್ಯಮ (medium) ಇವುಗಳ ಸಹಾಯದಿಂದ ವಿವರಿಸಲೇ, ಅಥವಾ ದೊಡ್ಡದಾಗಿ ಕಂಡಾಗೆಲ್ಲ ಹತ್ತಿರವಿರ್ತಾವೆ, ಇಲ್ಲವಾದರೆ ದೂರ ಎಂದಷ್ಟೇ ಹೇಳಿ ಜಾರಿಕೊಳ್ಳಲೇ? ಹೀಗೆ ಯೋಚಿಸುತ್ತಾ ಮನಸ್ಸು ಒಳಗೆ ಸರಿದಂತೆಲ್ಲಾ ಹೊಟ್ಟೆ ಒಳಗಿನ ಯೋಚನೆಗಳು ಹೊಟ್ಟೆಯಲ್ಲೇ ಇರಲಿ ಎಂದು ಎಚ್ಚರಿಸಿಕೊಂಡು ಮತ್ತೇನಾದರೂ ಅಲ್ಲಲ್ಲಿ ಕಂಡೀತೇ ಎಂದು ಅತ್ತಿತ್ತ ನೋಡತೊಡಗಿದೆ.
ಈಗಾಗ್ಲೇ ನಾನು ಸುಮಾರು ದೂರ ಬಂದಿದ್ರಿಂದ ಟ್ರಾಫಿಕ್ಕು ನಿಧಾನವಾಗಿ ಹೆಚ್ಚಾಗ ತೊಡಗಿತ್ತು, ಆದರೆ ಮೊಟ್ಟಮೊದಲನೇ ಸಾರಿ ಹೀಗೆ ಬಿಲ್ಡ್ ಅಪ್ ಆಗುವ ಟ್ರಾಫಿಕ್ ಮೇಲೆ ಪ್ರೀತಿಯೂ ಹುಟ್ಟಿತು! ನಮ್ ನ್ಯೂ ಜೆರ್ಸಿ ಬದುಕೇ ಚೆಂದ - ಯಾವಾಗ್ ನೋಡಿದ್ರೂ, ಎಷ್ಟ್ ಹೊತ್‌ನಲ್ಲಾದ್ರೂ ಇಲ್ಲಿ ರಸ್ತೆಗಳು ಖಾಲಿ ಇರೋದೇ ಇಲ್ಲ. ನಾನೇ ಭಯಂಕರ ವ್ಯಸ್ತ, ವಿಪರೀತ ಕೆಲಸಾ ಮಾಡೋನೂ ಅಂತೆಲ್ಲ ಅಂದುಕೊಂಡು ರಸ್ತೆಗಿಳಿದ್ರೆ ನನಗಿಂತಲೂ ಹೆಚ್ಚಿನ ತರಾತುರಿಯಲ್ಲಿ ಇರೋ ಜನರೇ ಹೆಚ್ಚು. ಇಲ್ಲಿನ ಜನಸಾಂದ್ರತೆ ಒಂದು ರೀತಿ ನಮ್ಮೂರುಗಳನ್ನು ನೆನಪಿಸುತ್ತೆ, ಆದ್ದರಿಂದಲೇ ನಾನು ಕಂಡ ಅಮೇರಿಕ ನನಗೆ ನ್ಯೂ ಜೆರ್ಸಿ ಮಯವಾಗಿ ಕಾಣೋದು. ಯಾವಾಗ್ ನೋಡಿದ್ರೂ ಜನ ಇರೋ ರಸ್ತೆ, ವ್ಯಾಪಾರ ವಹಿವಾಟುಗಳು ಅಲ್ಲಲ್ಲಿ ವಿಪರೀತ ಹೊತ್ತು ತೆಗೆದುಕೊಂಡು ಬೇಜಾರು ಮಾಡುವುದೇ ಹೆಚ್ಚಾದರೂ ಕೆಲವೊಮ್ಮೆ ಇಂದಿನ ಹಾಗೆ ಅಕ್ಕಪಕ್ಕದಲ್ಲಿ ಜನರನ್ನು ನೋಡಿ ಖುಷಿಯೂ ಆಗುತ್ತೆ. ಹಿಂದೆ ದೃಷ್ಟಿಯಂತೆ ಸೃಷ್ಟಿಯೆಂದು (ಹೊರಗಿನ ಸೃಷ್ಟಿ ನೋಡುವವರ ದೃಷ್ಟಿಯಲ್ಲಿದೆ ಎಂಬರ್ಥದಲ್ಲಿ) ಯಾರೋ ಸುಳ್ಳು ಹೇಳಿದ್ದರೆಂದು ಮುಂಜಾವಿನ ಬಗ್ಗೆ ಬರೆಯೋವಾಗ ಹೇಳಿದ್ದೆ, ಮುಂಜಾನೆ ಮತ್ತು ಸಂಜೆಗಳ ಬಗ್ಗೆ ಬರೆದ ಮಾತ್ರಕ್ಕೆ ಆ ನಿಲುವಿನಲ್ಲಿ ಬದಲಾವಣೆ ಆಗಿದೆ ಎಂದು ಇಲ್ಲಿ ಹೇಳೋದಿಲ್ಲ, ಬದಲಿಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ನಮ್ಮ ನೆರೆಹೊರೆ ಎಂದು ಸೂಚ್ಯವಾಗಿ ಹೇಳಿಬಿಡುತ್ತೇನೆ, ಅಷ್ಟೇ.
ಸದ್ಯ, ಕಳೆದ ವಾರದ ಬಿಸಿವಾತಾವರಣವಿಲ್ಲ, ಕಿಟಕಿಗಳನ್ನು ಇಳಿಸಿದರೆ ಆರ್ದ್ರ ಹವೆ ಅಂಟೋದಿಲ್ಲ - ಗಾಳಿ ಒಂದು ರೀತಿ ತೆಳುವಾಗಿ ಬೀಸಿ ಮುಖದ ಮೇಲೆ ತೀಡಿ ಮುಗುಳ್ನಗು ಎಂದು ಒತ್ತಾಯಮಾಡುವಂತೆ ಸುಳಿದುಹೋಯಿತು. ಒಂದ್ ಕಡೆ ಮನಸ್ಸು ನಾಳೆ ಏನೇನ್ ಮಾಡ್‌ಬೇಕು ಅಂತ ಲೆಕ್ಕ ಹಾಕ್ತಾ ಬಿದ್‌ಕೊಂಡಿತ್ತು, ಮತ್ತೊಂದು ಕಡೆ ಸದ್ಯ ಮನೇಗ್ ಹೋಗಿ ಬಿದ್ರೆ ಸಾಕು ಅನ್ನಿಸಿದ್ದೇ ತಡ ಇಡೀ ಲೋಕವನ್ನೇ ನುಂಗೋ ಹಾಗೆ ಬಾಯಿ ಮತ್ತು ಶಬ್ದ ಮಾಡುವಂತ ದೊಡ್ಡ ಆಕಳಿಕೆ ಬಂದಿದ್ದೇ ತಡ - ಪಕ್ಕದಲ್ಲಿ ಯಾರೋ ಕುಳಿತಿದ್ದಾರೇನೋ ಅನ್ನೋ ಹಾಗೆ 'ಎಕ್ಸ್‌ಕ್ಯೂಸ್ ಮೀ' ಎಂದು ಅಂದಿಂದಕ್ಕೆ ನನಗೇ ನಗುಬಂತು!
2 comments:
Satish : Namaskara..Nim blogige balagalittu modalne sari nodthidini
Antha Ranga sAku sakkat title!!
Nange kannada odhodhu kashta. kammi yenadru idre odthini illandre long posts continous agi odidre thale novu barutthe :-)
Haagagi bejar madkolbedi
Soni...namaskaara.
'antaranga'kke svaagata.
bEjAru Enu illa, nIvu purusottu iddAga Odi. bEre EnillaveMdarU nimage tale nOvu baradE irali!
Post a Comment