Sunday, August 27, 2006

ಗಣೇಶಾಯಣ

ಭಾದ್ರಪದ ಶುಕ್ಲದ ಚೌತಿಯಂದು ಗಣೇಶ ಭಕ್ತರ ಮನೇಲಿ ಸಂಪು ಹೊಡೆದು ಇಲಿ ಮೇಲೆ ಸವಾರಿ ಮಾಡಿ ಬರತಾ ಇರಬೇಕಾದ್ರೆ...

'ಮೊದಲೇ ಭಾರ, ಸವಕಾರ್ರಿಗೆ ಸ್ವಲ್ಪ ಕಡಿಮೆ ಊಟ ಮಾಡಿ ಅಂತ ಹೇಳಿದ್ರೂನೂವೆ ಕೇಳ್ದೆ ಆ ಪಾಟಿ ಊಟ ಮಾಡಿದ್ರೆ ನಾನು ಬಡಪಾಯಿ ಇಲಿ ಹೆಂಗಾದ್ರೂ ಭಾರ ತಾಳ್ಲಿ...' ಎಂದು ಉಸಿರು ಬಿಡುತ್ತಲೇ ದಾರಿಯಲ್ಲಿ ಅಲ್ಲಲ್ಲಿ ಗುಂಡಿಬಿದ್ದ ರಸ್ತೆಗಳನ್ನೂ, ಮಳೆ ಬಂದು ತುಂಬಿಕೊಂಡ ಹೊಂಡಗಳನ್ನೂ ನೋಡಿಕೊಂಡು ಹುಷಾರಾಗಿ ನಡೆದು ಬರುತ್ತಿದ್ದರೂ ಇಲಿರಾಯರಿಗೆ ಎಷ್ಟೋ ಬಾರಿ ಇನ್ನೇನು ಬಿದ್ದೇ ಬಿಟ್ಟೆ ಎನ್ನುವಂತಾಗಿತ್ತು. ಹೀಗೆ ಅಲ್ಲಲ್ಲಿ ಜಾರಿಬೀಳುವ ಹೆದರಿಕೆ ಒಂದುಕಡೆ ಇದ್ದರೂ ಮಧ್ಯೆ ಸಿಟ್ಟೂ ಬಂತು, 'ಯಾರೋ ಅದೋ ಸಾರಿಗೆ ಮಂತ್ರಿಗಳು? ಬರೀ ಜನಗಳ ಹಣ ತಿನ್ನುತ್ತಾರೆಯೇ ವಿನಾ ನೆಟ್ಟಗೆ ಒಂದು ರಸ್ತೆಯನ್ನು ಮೇಂಟೇನ್ ಮಾಡೋದಿಲ್ಲವಲ್ಲಾ, ನನಗೆ ಬರೋ ಸಿಟ್ಟಿಗೆ ಇನ್ನೇನಾದ್ರೂ ಆಗ್ಲಿ ಅಂತಿದ್ದೆ, ಸದ್ಯಕ್ಕೆ ಅವರು ಎಲ್ಲಾದ್ರೂ ಈ ಸಮಯದಲ್ಲಿ ಹೋಗ್ತಾ ಇದ್ರೆ ಅವರ ಕಾರು ಕೂಡಲೇ ಪಂಕ್ಚರ್ ಆಗಲಿ!' ಎಂದು ಇಲಿ ಶಾಪ ಕೊಟ್ಟಿತು.

ಮೇಲೆ ಗಗನದಲ್ಲಿ ಇನ್ನೇನು ಸಂಜೆಯಾಗಿ ಹಲವಾರು ನಕ್ಷತ್ರಗಳು ಹೊಳೆಯಲು ಮೊದಲು ಮಾಡುವ ಹೊತ್ತಿನಲ್ಲಿ ಆಗ ತಾನೇ ಉದಯಿಸಿ ಮೇಲೆ ಬಂದ ಚಂದ್ರ ತನ್ನ ಸನಿಹದಲ್ಲಿರುವ ನಕ್ಷತ್ರಿಣಿಯೊಂದರೊಡನೆ ಸಲ್ಲಾಪ ನಡೆಸಿದ್ದ. ಆ ನಕ್ಷತ್ರಿಣಿ ಸಹ ತನ್ನ ಕಣ್ಣಿಗೆ ಕಂಡ ಹಾಗೆ ಚೌತಿಯ ಚಂದ್ರನ ಕಂಸವನ್ನು ಹೊಗಳಿದ್ದೇ ಹೊಗಳಿದ್ದು. ಇವರಿಬ್ಬರು ಹೀಗೆ ಮಾತನಾಡುತ್ತಿರಲು ನೆಲದಲ್ಲಿ ಗಣೇಶರಾಯರ ಸವಾರಿ ನಡೆದಿತ್ತು.

ನಕ್ಷತ್ರಿಣಿ ಚಂದ್ರನನ್ನು ಕುರಿತು, 'ನೋಡಿ, ಪುಕ್ಕಟೆ ಸಿಗುತ್ತೇ ಅಂದ್ರೆ ಜನಗಳು ಏನು ಬೇಕಾದ್ರೂ ಮಾಡೋಕೂ ತಯಾರಿರ್ತಾರೆ...'
ಚಂದ್ರ ಒಮ್ಮೆ ಸಂಭಾಷಣೆ ಬೇರೆ ದಿಕ್ಕು ಹಿಡಿದಿದ್ದನ್ನು ನೋಡಿ ಕಕ್ಕಾಬಿಕ್ಕಿಯಾದರೂ ತೋರಿಸಿಕೊಳ್ಳದೇ 'ಏನು, ಯಾರನ್ನು ಕುರಿತು ಹೇಳುತ್ತಿದ್ದೀರಿ?'
ನಕ್ಷತ್ರಿಣಿ 'ಇನ್ಯಾರನ್ನು, ಅಲ್ಲಿ ಕೆಳಗೆ ನೋಡಿ. ಪಾಪ, ಆ ಇಲಿಗೂ ವಯಸ್ಸಾಯಿತು ಅನ್ನೋ ತಿಳುವಳಿಕೆ ಇಲ್ಲವೇ? ಸುಮ್ನೇ ಯಾರೋ ಮಾಡಿ ಹಾಕ್ತಾರೆ, ಭಕ್ತರು ಕೊಟ್ಟಿದ್ದು ಅನ್ನೋ ನೆಪದಲ್ಲಿ ಎಲ್ಲವನ್ನೂ ಒಳಗೆ ಸೇರಿಸೋ ದುರ್ಬುದ್ಧಿ ಬೇರೆ ಕೇಡಿಗೆ'.

ಚಂದ್ರ, ಸದ್ಯ ತನ್ನನ್ನು ಕುರಿತು ಹೇಳುತ್ತಿಲ್ಲವೆಂದು ಸಮಾಧಾನ ಮಾಡಿಕೊಂಡು, ಸಿಕ್ಕ ಅವಕಾಶದಲ್ಲಿ ಮಿಂಚೋಣವೆಂದುಕೊಂಡು 'ಹೌದು, ನಾನೂ ಬಹಳ ದಿನಗಳಿಂದ ನೋಡ್ತಾ ಇದ್ದೇನೆ, ಇವರ ಸವಾರಿ ಹೀಗೇ ನಡೀತಾ ಇದೆ.'

ನಕ್ಷತ್ರಿಣಿ 'ತಲೆಯೇನೋ ಆನೆಯದ್ದು ತಂದಿಟ್ಟರು ಎಂದ ಮಾತ್ರಕ್ಕೆ ತಿನ್ನೋದು ಹಾಗೇ ಆಗಬೇಕೆ? ಸ್ವಲ್ಪ ಬುದ್ಧಿ ಅನ್ನೋದು ಬೇಡವೇ...'
ಚಂದ್ರ 'ಅಯ್ಯೋ, ತಲೇ ಆನೇದಾದ್ದ ಮೇಲೆ ಬುದ್ಧಿನೂ ಹಾಗೇನೇ! ಕೆಳಗಿನದು ಮನುಷ್ಯ ದೇಹ ಅನ್ನೋದು ಹೇಗೆ ತಾನೆ ಗೊತ್ತಾಗುತ್ತೆ?' ಎಂದು ತಾನೇ ಸಿಡಿಸಿದ ಜೋಕಿಗೆ ಜೋರಾಗಿ ನಗತೊಡಗಿದ.
ನಕ್ಷತ್ರಿಣಿ ಸ್ವಲ್ಪ ನಕ್ಕ ಹಾಗೆ ಮಾಡಿ 'ಈಗೊಂದು ಮಜಾ ಆಗಬೇಕು, ಈ ದೊಡ್ಡ ಹೊಟ್ಟೆ ದೊಳ್ಳಣ್ಣ ಬಿದ್ರೆ ಒಳ್ಳೇ ಮಜಾ ಇರತ್ತೆ!'
ಚಂದ್ರ 'ಅಯ್ಯೋ, ಹಾಗನ್ನಬೇಡಿ, ಅಕಸ್ಮಾತ್ ಬಿದ್ರೆ, ಭೂದೇವಿಯ ಕಥೆ ಏನು, ಅಲ್ಲಿ ದೊಡ್ಡ ಕುಳಿ ಬಿದ್ದೋಗುತ್ತೆ, ಗೊತ್ತಾ?' ಎಂದಾಗ ಇಬ್ಬರೂ ಜೋರಾಗಿ ನಗತೊಡಗಿದರು.

ಇತ್ತ ಇಲಿ, ಇಷ್ಟೊತ್ತಿಗಾಗಲೇ ಮನೆ ಸೇರಬೇಕಿತ್ತು, ಇನ್ನೂ ಜೀತ ಮುಗಿದಿಲ್ಲ ಎಂದು ಉಸಿರು ಬಿಡುತ್ತಾ ನಡೆಯುತ್ತಿರುವಾಗ ಮೇಲಿನಿಂದ ನಕ್ಷತ್ರಿಣಿ ಹಾಗೂ ಚಂದ್ರ ಜೋರಾಗಿ ನಕ್ಕ ಹಾಗೆ ಕೇಳಿಸಿತು. ಏನೋ ಸುಮ್ಮನೇ ಇದ್ದಿರಬೇಕು ಎಂದುಕೊಂಡರೂ ಮತ್ತೆ ಮತ್ತೆ ನಗೆ ಕೇಳಿದಾಗ ನನ್ನನ್ನು ಉದ್ದೇಶಿಸಿಯೇ ಇರಬೇಕು, ಇವರಿಗೆಲ್ಲ ಮಾಡ್ತೀನಿ ಎಂದು ಕಣ್ಣು ಮುಚ್ಚಿ ಸಂಕಲ್ಪ ಮಾಡಿಕೊಳ್ಳುತ್ತಿದ್ದಂತೆ ಏಕಾಗ್ರತೆ ಹಾಗೂ ಆಯ ಎರಡೂ ತಪ್ಪಿ ಹೋಗಿ ಮೇಲಿದ್ದ ಗಣಪತಿ ಎರೆಡೆರಡು ಪಲ್ಟಿಯಾಗಿ ಬಿದ್ದು ಹೋದನು, 'ಸದ್ಯ, ನಾನು ಗಣಪತಿಯ ಅಡಿಗೆ ಸಿಕ್ಕಿಕೊಳ್ಳಲಿಲ್ಲ!' ಎಂದು ಜೀವ ಉಳಿಸಿಕೊಂಡಿದ್ದಕ್ಕೆ ಪರಶಿವನಿಗೆ ನಮಿಸುತ್ತಾ, ಇನ್ನೇನು ಗಣಪತಿಯಿಂದ ತಿನ್ನಬೇಕಲ್ಲ ಒದೆಯನ್ನ ಎಂದು ನಡುಗುತ್ತಾ ರಸ್ತೆಬದಿಯಲ್ಲಿ ಕುಳಿತುಕೊಂಡಿತು.

ಎರಡು ನಿಮಿಷವಾದರೂ ತನ್ನೊಡೆಯ ಮೇಲೆ ಏಳದಿದ್ದುದನ್ನು ನೋಡಿ, ಏನಾದರೂ ಪ್ರಮಾದವಾಗಿ ಹೋಯಿತೇ ಎಂದು ನಡುಗುತ್ತಲೇ ಬಿದ್ದ ಗಣಪತಿಯತ್ತ ಬಂದು ನೋಡಲು, ಒಂದೆಡೆ ಹೊಟ್ಟೆಯೊಡೆದು ಗಣಪತಿ ನರಳುತ್ತಾ ಬಿದ್ದುಕೊಂಡಿದ್ದರೆ, ಮತ್ತೊಂದೆಡೆ ಭಕ್ಷ್ಯ ಬೋಜನಗಳು ದಂಡಿಯಾಗಿ ರಸ್ತೆ ಬದಿಯಲ್ಲಿ ಬಿದ್ದುಕೊಂಡಿವೆ, ವಾಸನೆಯನ್ನು ಗ್ರಹಿಸಿ ಹೋಗಲೇ ಎಂದು ಒಂದು ಮನಸ್ಸಿಗೆ ಅನ್ನಿಸಿದರೂ ಒಡೆಯ ಬಿದ್ದಿದ್ದಕ್ಕೆ ಕೂಡಲೇ ಏನಾದರೂ ಮಾಡಬೇಕೆಂದು ತಲೆಕೆರೆಯುತ್ತಾ ನಿಂತುಕೊಂಡಿತು.

ಆಕಾಶದಲ್ಲಿ ಇಂತಹ ಘಳಿಗೆಯನ್ನೇ ಕಾಯುತ್ತಾ ಇದ್ದ ಚಂದ್ರ ಹಾಗೂ ನಕ್ಷತ್ರಿಣಿಯರಿಬ್ಬರೂ ಜೋರಾಗಿ ನಗಲುತೊಡಗಿದರು, ಆ ನಗುವಿನಲ್ಲೇ ಚಂದ್ರ 'ಸೊಂಡಲಿದ್ದೋರೆಲ್ಲ ಆನೆಗಳಲ್ಲ!' ಎಂದರೆ, ನಕ್ಷತ್ರಿಣಿ 'ದೊಡ್ಡ ತಲೆ ಇದ್ದೋರೆಲ್ಲ ಬುದ್ಧಿವಂತರಲ್ಲ!' ಎಂದು ಇನ್ನೂ ಜೋರಾಗಿ ನಗಲುತೊಡಗಿದರು.

ಕೆಳಗೆ ಬಿದ್ದ ಗಣಪತಿಗೆ ತಾನು ಬಿದ್ದು ಹೊಟ್ಟೆಯೊಡೆದು ಉಂಟಾದ ನೋವಿಗಿಂತಲೂ ಯಾರು ಯಾರು ಎಲ್ಲೆಲ್ಲಿಂದ ನೋಡಿ ಏನಂದುಕೊಳ್ಳುತ್ತಿದ್ದಾರೋ ಎಂದು ಸುತ್ತಲೂ ವೀಕ್ಷಿಸಲು, ಒಂದು ಕಡೆ ಇಲಿ ನಡುಗುತ್ತಾ ನಿಂತಿರಲು, ಮೇಲಿನಿಂದ ಆಕಾಶವೇ ಹಾರಿ ಹೋಗುವಂತೆ ನಗು ಕೇಳಿಸಿತು. ಈ ಕೆಲಸಕ್ಕೆ ಬಾರದ ಇಲಿ ಯಾರಿಗೂ ಈ ಘಟನೆಯನ್ನು ಹೇಳದಿದ್ದರೆ ಸಾಕು ಎಂದು ಮೇಲೆ ಯಾರು ನಗುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ನೋಡಲು ಅರ್ಧ ಮುಸುಡಿಯ ಚಂದ್ರ ಕಾಣಿಸಿದನು. 'ಎಲಾ ಇವನ ಕೊಬ್ಬೇ, ವಿಚಾರಿಸಿಕೊಳ್ತೇನೆ, ಗೂಳಿ ಗುಂಡಿಗೆ ಬಿದ್ದರೆ ಆಳಿಗೊಂದು ಕಲ್ಲಂತೆ, ಈಗ ಕೆಲಸಕ್ಕೆ ಬಾರದ ಇವನ ನಗೆಯನ್ನೂ ನೋಡಬೇಕಾಗಿ ಬಂತು' ಎಂದು ಸಿಟ್ಟು ಬಂದರೂ ಮೊದಲು ಹರಿದ ಹೊಟ್ಟೆಯನ್ನು ಸರಿ ಮಾಡಿಕೊಳ್ಳುವುದು ಕ್ಷೇಮವೆಂದು ಅಲ್ಲೇ ರಸ್ತೆ ಬದಿಯಲ್ಲಿ ಬಳ್ಳಿಗಳೇನಾದರೂ ಇದ್ದಾವೆಯೇ ಎಂದು ನೋಡಲು ಬೇರೇನೂ ಕಾಣದೆ, ಅಲ್ಲೇ ಹರಿದು ಬಿಲವನ್ನು ಸೇರುತ್ತಿದ್ದ ಹಾವೊಂದು ಕಾಣಿಸಿತು.

ಗಣಪತಿಯ ಅವಸ್ಥೆ ನೋಡಿ ಹಾವಿಗೆ ನಗು ಬರುವುದಿರಲಿ ಗಣಪತಿಯು ತನ್ನನ್ನು ಹುಡುಕಿಕೊಂಡು ಬರುತ್ತಿರುವುದು ಏಕೆ ಎಂದು ಗೊತ್ತಾಗಿ ಹೋಗಿ, ಆರ್ತನಾಗಿ 'ಬೇಡಾ ಸ್ವಾಮಿ, ನನಗೂ ಹೆಂಡತಿ ಮಕ್ಕಳಿದ್ದಾರೆ, ಬಿಟ್ಟುಬಿಡಿ, ನನ್ನಷ್ಟಕ್ಕೆ ನಾನು ಇದ್ದು ಬಿಡುತ್ತೇನೆ' ಎಂದು ಕೇಳಿಕೊಂಡರೂ, ಗಣಪತಿ ಹಾವಿನ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೇ, ಸದ್ಯಕ್ಕೆ ಇದೇ ಆಗಬಹುದು ಎಂದು ಆ ಹಾವಿನಿಂದಲೇ ಹೊಟ್ಟೆಯನ್ನು ಬಿಗಿದುಕಟ್ಟಿ ಮೈ ಕೊಡವಿಕೊಂಡು ಎದ್ದು ನಿಂತನು, ಏನಾಶ್ಚರ್ಯ, ತನ್ನ ದಂತವೂ ಒಂದು ಮುರಿದು ಹೋಗಿದೆ! ಮೇಲಿನಿಂದ ಇನ್ನೂ ನಗೆ ಬೇರೆ ನಿಂತಿಲ್ಲ. ಮುರಿದ ದಂತವನ್ನೇ ಚಂದ್ರನೆಡೆಗೆ ಎಸೆದದ್ದಾಯಿತು, ಅದು ಚಂದ್ರನ ಎತ್ತರವನ್ನು ಸೇರದೇ ಅಲ್ಲೇ ಪಕ್ಕದ ಪೊದೆಯಲ್ಲಿ ಬಿದ್ದಿತು.

ಗಣಪತಿ ತಮ್ಮೆಡೆಗೆ ಮುರಿದ ದಂತವನ್ನು ಎಸೆಯುವ ಹೊತ್ತಿಗೆ ನಕ್ಷತ್ರಿಣಿಯ ಕೋಮಲ ಮುಖದಲ್ಲಿ ನಗೆ ನಿಧಾನವಾಗಿ ಮಾಸತೊಡಗಿ, ಇನ್ನು ಇಲ್ಲಿದ್ದರೆ ಕೆಲಸ ಕೆಟ್ಟೀತು ಎಂದು ಆಕೆ ಮೆಲ್ಲನೆ ಜಾರಿಕೊಂಡಳು, ಪೆದ್ದ ಚಂದ್ರ ತನ್ನ ನಗೆಯನ್ನು ಇನ್ನೂ ಮುಂದುವರಿಸಿಯೇ ಇದ್ದ.

ಗಣಪತಿ, 'ಎಲವೋ ಚಂದ್ರಾ, ಬಿದ್ದವನನ್ನು ನೋಡಿ ನೀನು ಸಹಾಯ ಮಾಡುವುದಿರಲಿ ಅಪಹಾಸ್ಯ ಮಾಡಿ ನಗುತ್ತಿದ್ದೀಯಲ್ಲ, ನಿನಗೇನಾದರು ಬುದ್ಧಿ ನೆಟ್ಟಗಿದೆಯೇ?' ಎಂದು ಬೆದರಿಸಲು,
ಚಂದ್ರನಿಗೆ ಪರಿಸ್ಥಿತಿಯ ಅರಿವಾಗಿ 'ನಾನಲ್ಲ ಗಣೇಶಾ, ಈ ನಕ್ಷತ್ರಿಣಿಯದ್ದೇ ಎಲ್ಲಾ ಪಾರುಪತ್ಯ...' ಎಂದು ನಕ್ಷತ್ರಿಣಿಯ ಕಡೆಗೆ ತಿರುಗಿದರೆ ಆಕೆ ಎಲ್ಲಿದ್ದಾಳೆ ಅಲ್ಲಿ? ಇನ್ನು ಪರಿಸ್ಥಿತಿ ಕೈ ಮೀರಿತೆಂದು ಚಂದ್ರನಿಗೂ ಅರಿವಿಗೆ ಬಂತು, 'ಥೂ, ಇನ್ನು ಸತ್ರೂ ಈ ಹುಡುಗಿಯರ ಸಹವಾಸ ಮಾಡಲ್ಲಪ್ಪಾ' ಎಂದು ಮನದಲ್ಲೇ ಮಂಡಿಗೆ ತಿನ್ನುತ್ತಿದ್ದರೆ, ಇತ್ತ ಗಣಪತಿಗೆ ಕೋಪ ಇನ್ನೂ ಹೆಚ್ಚಾಯಿತು - ಮಂಗ ತಾನು ಮೊಸರು ತಿಂದು ಮೇಕೆ ಮುಸುಡಿಗೆ ಅಂಟಿಸಿದ ಹಾಗೆ ಮಾಡಲು ಚಂದ್ರ ತನ್ನ ಸುತ್ತಲಿದ್ದ ನಕ್ಷತ್ರಗಳ ಸಬೂಬನ್ನು ಹೇಳುತ್ತಿದ್ದಾನೆ ಎಂದು.

'ಪ್ರತೀ ವರ್ಷ ಇದೇ ದಿನ ನಿನ್ನ ಮುಸುಡಿಯನ್ನು ಯಾರು ಯಾರು ನೋಡುತ್ತಾರೋ ಅವರಿಗೆಲ್ಲ ಒಂದಲ್ಲ ಒಂದು ಅಪವಾದ ಬಂದು ತಟ್ಟಲಿ!' ಎಂದು ಶಾಪವನ್ನು ಕೊಟ್ಟೇ ಬಿಟ್ಟ.

ಚಂದ್ರ ಕಣ್ಣೀರು ಸುರಿಸಿ ಎಷ್ಟೇ ಗೋಳು ಹೊಯ್ದು ಕೊಂಡರೂ, ಗಣಪತಿಯ ಮುಖ ಒಂದು ಚೂರೂ ಬದಲಾಯಿಸಲಿಲ್ಲ.

ಇತ್ತ ಇನ್ನಷ್ಟು ಹೆದರಿಕೊಂಡು ನಿಂತ ಇಲಿಯತ್ತ ನೋಡಿ ಗಣಪತಿ 'ಗೂಬೆ, ಇನ್ನೂ ಏನ್ ಮುಖಾ ನೋಡ್ತಾ ನಿಂತಿದ್ದೀಯ, ನಡಿ ಹೊರಡು...' ಎಂದು ಆದೇಶ ಕೊಡಲು ಇಲಿ ತನ್ನ ಮೈ-ಕೈ-ಕಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ಗಟ್ಟಿ ಮಾಡಿಕೊಂಡು ಸವಾರಿಗೆ ತಯಾರಾಗಿ ಬಂದು ನಿಂತಿತು.

1 comment:

Enigma said...

he he he amele upsamhara