ಗುಮ್ಮನಗುಸುಗ
ನಮ್ಮೂರುಗಳಲ್ಲಿ 'ಗುಮ್ಮನಗುಸುಗ' ಎನ್ನುವ ಪದವನ್ನು ಬೈಯುವುದಕ್ಕೆ ಬಳಸುತ್ತಾರೆ - ಗುಮನ್‌ಗುಸ್ಗ ಅನ್ನೋದು ಅದರ ಆಡು ಪದವಷ್ಟೇ. ಗುಮ್ಮನಗಸುಗ ಎಂದರೆ ಮನಸ್ಸಿನಲ್ಲೇ ಮಂಡಿಗೆ ತಿನ್ನುವವನು ಎಂದರ್ಥ ಅಂದರೆ ಯಾವಾಗಲೂ ಸ್ವಯಂ ಕೇಂದ್ರೀಕೃತ ವ್ಯಕ್ತಿ ಅಥವಾ ಗ್ರಾಂಥಿಕ ಭಾಷೆಯಲ್ಲಿ ಹೇಳೋದಾದರೆ ಅಂತರ್ಮುಖಿ. ಆಶ್ಚರ್ಯವೆಂದರೆ 'ಅಂತರ್ಮುಖಿ' ಪದದ ಬಳಕೆಯನ್ನು ಹೊಗಳಿಕೆಗೂ, 'ಗುಮ್ಮನಗುಸುಗ' ವನ್ನು ಬೈಯೋದಕ್ಕೂ ಬಳಸೋದು, ನನ್ನ ಪ್ರಕಾರ ಎರಡೂ ಒಂದೇ!
ಹಲವಾರು ವರ್ಷಗಳ ಹಿಂದೆ ಸ್ಟ್ಯಾಟೆನ್ ಐಲ್ಯಾಂಡಿನಲ್ಲಿ ಧ್ಯಾನವನ್ನು ಕಲಿಯೋದಕ್ಕೆ ಹೋದಾಗ ನಮ್ಮೊಳಗೆ ಹೊರಗಿನ ವಿಶ್ವಕ್ಕಿಂತ ದೊಡ್ಡದಾದ ವಿಶ್ವವೊಂದಿದೆ, ಅದರ ಮೇಲೇ ಮನಸ್ಸನ್ನು ಕೇಂದ್ರೀಕರಿಸಿ ಶುದ್ಧ ಧ್ಯಾನದ ಮೂಲಕ ನಮಗಂಟಿದ ಸಂಸ್ಕಾರಗಳನ್ನು ವಿಶ್ಲೇಶಿಸಿಕೊಳ್ಳಬಹುದು ಎಂದು ಪ್ರವಚನಗಳನ್ನು ಕೇಳಿದ್ದೆ. ಅದೇ ರೀತಿ ಬೇಕಾದಷ್ಟು ಕಡೆಯಲ್ಲಿ ಮನಶಾಸ್ತ್ರಕ್ಕೆ ಸಂಬಂಧಿಸಿದ ನಡವಳಿಕೆಗಳನ್ನು ಆವಲೋಕಿಸುವಾಗ introvert ಹಾಗೂ extravert ಎನ್ನುವ ವ್ಯಾಖ್ಯೆಗಳು ನಮ್ಮ ನಡವಳಿಕೆ ಹಾಗೂ ನಡತೆಗಳನ್ನು ಹೇಗೆ ರೂಪಿಸಬಲ್ಲದು, ನಾವು ಹೇಗೆ ಆಲೋಚಿಸುತ್ತೇವೆ ಎಂದೆಲ್ಲಾ ತಕ್ಕಮಟ್ಟಿಗೆ ಓದಿ ಕುತೂಹಲಿತನಾಗಿದ್ದೇನೆ.
ನನ್ನ ಮನಸ್ಸಿನಲ್ಲಿರುವುದನ್ನು ಸ್ಪುಟವಾಗಿ ಹೇಳಲು ಸಾಧ್ಯವಾಗದಿರುವಾಗ ಎಷ್ಟೋ ಸಲ ಹಾಗೆ ಮಾಡದೇ ಇರುವಲ್ಲಿನ ತೊಡಕೇನು ಎಂದು ಪ್ರಶ್ನಿಸಿಕೊಂಡಾಗೆಲ್ಲ ಭಾಷೆಯಂತೂ ಖಂಡಿತವಾಗಿ ಅಡ್ಡ ಬಂದಿದ್ದಿಲ್ಲ, ಅದರ ಬದಲಿಗೆ ವಿಚಾರಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಅದನ್ನು ಅಗತ್ಯಕ್ಕೆ ತಕ್ಕಂತೆ, ಕೇಳುವವರಿಗೆ ತಕ್ಕಂತೆ ಹಾಗೂ ಆ ಸಮಯದ ಮಿತಿಯಲ್ಲಿ ಸ್ಪುಟವಾಗಿ ಹೇಳುವುದು ಎಲ್ಲರಿಗೂ ಸಾಧ್ಯವಾಗದ ಮಾತು. ಎಷ್ಟೋ ಜನ ಸಭಾಕಂಪನವನ್ನು ಗೆಲ್ಲೋದಕ್ಕೆ ಬಹಳಷ್ಟು ಪ್ರಯತ್ನವನ್ನು ಮಾಡುತ್ತಾರೆ, ಈ ನಿಟ್ಟಿನಲ್ಲಿ ಅಂತರ್ಮುಖಿ ಬಹಿರ್ಮುಖಿ ಆಗುವುದೂ ಬಹಳ ಮುಖ್ಯವಾಗುತ್ತದೆ. ದಿಢೀರನೆ ಒಂದೇ ದಿನದಲ್ಲಿ ಸ್ವಭಾವದ ಬದಲಾವಣೆ ಆಗೋದು ಕಷ್ಟ, ಅದರ ಬದಲಿಗೆ ಹಂತಹಂತವಾಗಿ ಮುಂದುವರಿದರೆ ಎಂತಹವರೂ ತಕ್ಕಮಟ್ಟಿಗೆ ತಮ್ಮ ವಿಚಾರಗಳನ್ನು ನಿರ್ಭಯವಾಗಿ ಹೊರಹಾಕಬಲ್ಲರು.
ನಾನು ಶಾಲಾ ದಿನಗಳಿಗೇನಾದರೂ ಹಿಂತಿರುಗಿ ಹೋಗುವಂತಿದ್ದರೆ ನನ್ನ ವಿಧೇಯತೆಯ ಸೋಗನ್ನು ಕಿತ್ತು ಹಾಕಿ ಸ್ವಲ್ಪ ಕುತೂಹಲ ಮನಸ್ಸಿಗೆ ಒತ್ತು ನೀಡಿ, ನನಗೆ ಪಾಠ ಮಾಡುತ್ತಿದ್ದ ಮೇಷ್ಟ್ರುಗಳಿಗೆಲ್ಲಾ ಮನಸಾ ಇಚ್ಚಾ ಪ್ರಶ್ನೆಗಳನ್ನು ಕೇಳಿಬಿಡುತ್ತೇನೆ ಎನಿಸುತ್ತದೆ. 'ವಿದ್ಯೆಗೆ ವಿನಯವೇ ಭೂಷಣ' ಎಂಬ ದೊಡ್ಡ ಮಾತುಗಳನ್ನು ಆಡಿಯೇ ನಾವು ಕಲಿಯಬೇಕಾದ ಸಮಯದಲ್ಲಿ 'ದೊಡ್ಡವರಿಗೆ' ಎದುರು ಮಾತನಾಡಬೇಡ ಎಂಬರ್ಥದಲ್ಲಿ ನಮ್ಮ ಕೈ ಬಾಯಿಗಳನ್ನು ಕಟ್ಟಿಹಾಕಿಬಿಟ್ಟರೇನೋ ಅನ್ನಿಸಿಬಿಡುತ್ತದೆ, ಎಷ್ಟೋ ದಿನ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗದೇ ಶಾಲೆಯಿಂದ ಅಂದು ಮನೆಗೆ ಹೋಗಿದ್ದರಿಂದ ನನ್ನ ಸ್ವಭಾವದಲ್ಲಿ ಬೇಕಾದಷ್ಟು ಮಾರ್ಪಾಟುಗಳಾಗಿವೆ - it can wait - we will get to the bottom of it later - ಎನ್ನೋದು ನಿತ್ಯಮಂತ್ರವಾಗಿ ಹೋಗಿದೆ.
ನನ್ನ ಪ್ರಕಾರ ಕ್ರಮಬದ್ಧವಾಗಿ, ಒಂದು ರೀತಿಯ ಧ್ಯಾನದ ಮಟ್ಟದಲ್ಲಿ ಒಳಗಿನ ಅವಲೋಕನ ನಡೆಯದೇ ಹೋದರೆ ಅದು ಹೆಚ್ಚು 'ಚಿಂತೆ'ಯನ್ನು ಮೂಡಿಸುವುದೇ ವಿನಾ 'ಚಿಂತನೆ'ಯನ್ನಲ್ಲ. ಹೊರಗಿನ ಪ್ರಪಂಚವನ್ನು ನೋಡಲ್ಲಿಕ್ಕೆ ಖರ್ಚಾಗುವ ಶಕ್ತಿಗಿಂತಲೂ ಒಳಗಿನದನ್ನು ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ ಬಹಳಷ್ಟು ನಷ್ಟವಾಗುವ ಸಂಭವವೇ ಹೆಚ್ಚು. ಚದುರಂಗದಾಟದಲ್ಲಿ ಹಿಂದೆ-ಮುಂದೆ ಆಗುವ, ಆಗಿ-ಹೋಗಬಹುದಾದ ನಡೆಗಳನ್ನೆಲ್ಲ ಯೋಚಿಸಿದಷ್ಟೂ ಅದಕ್ಕೆ ಅಂತ್ಯವೆಂಬುದಿಲ್ಲ, ಆದರೆ ಏನೆಲ್ಲ ಸಾಧ್ಯತೆ-ಬಾಧ್ಯತೆಗಳನ್ನೆಲ್ಲ ಲೆಕ್ಕ ಹಾಕಿದರೂ ಕೊನೆಯಲ್ಲಿ ನಡೆಯುವುದೂ ನಡೆದೇ ತೀರುವುದರಿಂದ ಒಳಗಿನ ತಲ್ಲಣಗಳನ್ನು ಅರಸಿ ಹೊರಡುವ ಮುನ್ನ ಅದೊಂದು ತೆರೆದ ಪಯಣವೆಂಬುದನ್ನು ಮಾತ್ರ ಖಂಡಿತವಾಗಿ ನೆನಪಿನಲ್ಲಿಟ್ಟಿರುತ್ತೇನೆ. ಹಾಗೆಂದು ದಿಢೀರನೆ ಗುಮ್ಮನಗುಸುಗನ ತನದಿಂದ outgoing personality ಆಗುವುದೂ ಸಾಧ್ಯವಿಲ್ಲ. ನನಗೆ ಅಂತರ್ಮುಖತೆಯಿಂದ ಯಾವ ಬೇಸರವೂ ಇಲ್ಲ, ಅದರ ಬದಲಿಗೆ ಅಂತರ್ಮುಖತೆಯಿಂದ ಹೊರಬರಬಹುದಾದ side products ಗಳಾದ ನಾಚಿಕೆ, ಭಿಡೆ, ಅಂಜಿಕೆಗಳು ಹಾಗೂ ಇವುಗಳು ಹುಟ್ಟಿಸುವ ಅವಾಂತರಗಳಿಗೆ ಕೊನೆಯಿಲ್ಲ ಮೊದಲಿಲ್ಲವಾದ್ದರಿಂದ ಅಂತಹವುಗಳನ್ನು ಸಾರಾಸಗಟು ದ್ವೇಷಿಸತೊಡಗುತ್ತೇನೆ. ಅಂತರ್ಮುಖಿಗಳು ಅಂದುಕೊಂಡಂತೆ ಎಷ್ಟೋ ಜನರು ಅವರ ಬಗ್ಗೆ ಯೋಚಿಸುತ್ತಾರೆ, ಅವರ ಬಗ್ಗೆ 'ಏನನ್ನೋ' ತಿಳಿದುಕೊಳ್ಳುತ್ತಾರೆ ಎಂಬುದಾಗಿ, ಆದರೆ ನಿಜ ಸಂಗತಿಯೆಂದರೆ ನಾವು ಒಡನಾಡುವ ವ್ಯಕ್ತಿಗಳಿಗೆ ಅದಕ್ಕೆಲ್ಲಾ ಸಮಯವೇ ಇರೋದಿಲ್ಲ, ಅವರೂ ಉಳಿದವರ ಹಾಗೆ ಒಂದಲ್ಲ ಒಂದು trench ನಲ್ಲಿ ಬಿದ್ದವರೇ. ಒಂದು ವೇಳೆ ಹಾಗೆ ತಿಳಿದುಕೊಂಡರೂ ಅದರಿಂದ ಅಂತಹದ್ದೇನೂ 'ಮಹಾನ್' ಘಟಿಸೋದಿಲ್ಲವಲ್ಲ!
ಪ್ರತಿಯೊಬ್ಬರಿಗೂ ಅವರವರ ಬಗ್ಗೆ ತಿಳಿದುಕೊಳ್ಳಲು, ಅಲ್ಲಲ್ಲಿ ಅವಲೋಕನ ಮಾಡಿಕೊಳ್ಳಲು introspection ಹಂತಗಳಿರಬೇಕೇ ವಿನಾ ಹಳೆಯದನ್ನೇ ಹಚ್ಚಿ ಕೊರಗುವುದೇ ಬದುಕಾಗಬಾರದು. ಈ introspection ಹಂತ ಎಷ್ಟು ಸರಳವಾಗಿರಬೇಕೆಂದರೆ ಒಂದು ರೀತಿ ಕಾರಿನಲ್ಲಿ rearview mirror ಇದ್ದ ಹಾಗೆ, ಅಲ್ಲದೇ ಮುಂದಿನ ಬದುಕಿನಲ್ಲಿ ಆಗಬೇಕಾದ್ದನ್ನು ಎದುರಿಸೋದು ಬೇಕಾದಷ್ಟಿರುವಾಗ ಈ ಹಿಂತಿರುಗಿ ನೋಡಬಹುದಾದ ಕನ್ನಡಿ ಎಷ್ಟು ಸಾಧ್ಯವೋ ಅಷ್ಟು ಚಿಕ್ಕದಿರಬೇಕು ಅಲ್ಲದೇ ಆದಷ್ಟು ಬೇಗ ಅಲ್ಲಿ ಇಣುಕಿ ಅದರಿಂದ ಹೊರಬರಬೇಕು. ಮುಂಬರುವ ಮಾರ್ಗವನ್ನೇ ಮೈಯೆಲ್ಲ ಕಣ್ಣಾಗಿ ಸವೆಸುವ ಅಗತ್ಯವಿರುವಾಗ ಇನ್ನು ಹಿಂದಿನದ್ದನ್ನ ಅವಲೋಕಿಸುತ್ತಾ ಕುಳಿತುಕೊಳ್ಳುವುದಕ್ಕೆ ಸಮಯವಾದರೂ ಎಲ್ಲಿದೆ, ಅಲ್ಲದೇ ಹಿಂದಿನ ದಾರಿಯಲ್ಲಿ ಹಾದು ಹೋದ ಮರ-ಗಿಡ-ಕಂಟಿಗಳನ್ನೆಲ್ಲ ಎಷ್ಟೂ ಅಂತ ನೆನಪಿನಲ್ಲಿಡೋಕಾದರೂ ಸಾಧ್ಯ?
ಮನಸ್ಸಿನಲ್ಲಿದ್ದದ್ದನ್ನು ನಿರರ್ಗಳವಾಗಿ ಹೇಳಬೇಕು, ಸ್ಪುಟವಾಗಿ ಮಾತನಾಡಬೇಕು, ಇನ್ನೊಬ್ಬರು ಮಾತನಾಡುವಾಗ ಅವರ ಮಾತಿನ ಮೇಲೆ ನಿಗಾ ಇಡಬೇಕೇ ವಿನಾ ಅವರು ಹಿಂದೆ ಏನು ಮಾಡಿದ್ದರೆಂದಾಗಲೀ, ಅವರ ಮಾತಿಗೆ ನಾನೇನು ಪ್ರತಿಯಾಗಿ ಮಾತನಾಡಬೇಕು ಎಂದು ಯೋಚಿಸಿಕೊಳ್ಳೋದು ಒಳ್ಳೆಯ ಅಭ್ಯಾಸವಲ್ಲ - ಇನ್ನೂ ಮುಂತಾಗಿ ಹಲವಾರು ಅಣಿಮುತ್ತುಗಳನ್ನು ಅಲ್ಲಲ್ಲಿ ಓದುತ್ತೇನೆ, ಆದರೆ ನಾನು ಹೀಗೇಕೆ ಕಾರ್ಯತತ್ಪರನಾಗುವುದಿಲ್ಲ ಎನ್ನುವುದಕ್ಕೆ ಉತ್ತರವನ್ನರಸಿ ಮತ್ತೆ ಒಳಗೆ ಹಿಣುಕಿ ನೋಡುತ್ತೇನೆ. ಆದರೆ ಒಮ್ಮೆ ಒಳಗೆ ಹೋದವನು ಒಂದು ರೀತಿ ಗೂಗಲ್‍ನಲ್ಲಿ ಮಾಹಿತಿಗೆ ತಿಣುಕಾಡುವವರಂತೆ ಹೋದ ದಾರಿಯಲ್ಲಿ ಹಿಂತಿರುಗಿ ಬಾರದೇ ಮತ್ತಿನ್ನೆಲ್ಲೋ ಹೋಗುವ ಸಾಧ್ಯತೆಯೇ ಹೆಚ್ಚಾಗಿ ತೋರತೊಡಗುತ್ತದೆ.
No comments:
Post a Comment