ಜಾಗತೀಕರಣ ಅಂದ್ರೆ ಸಾಕು, ಎಲ್ಲವೂ ನಿಧಾನವಾಗಿ ಹೋಗುತ್ತಲ್ಲಾ!
ಕಳೆದೆರಡು ದಿನಗಳಿಂದ ಜಾಗತೀಕರಣದ ಬಗ್ಗೆ ನನ್ನ ನಿಲುವು, ಇತ್ತೀಚಿನ ಮಾಹಿತಿಗಳನ್ನೆಲ್ಲ ಕಕ್ಕಿಕೊಳ್ಳೋಣ ಎಂದು ಆಲೋಚಿಸಿದಂತೆಲ್ಲಾ ಬರವಣಿಗೆ ನಿಧಾನವಾಗಿ ಹೋಗಿ, ನಾನೂ ಒಂಥರಾ ನಮ್ಮೂರಿನ ಬುದ್ಧಿಜೀವಿಗಳ ಹಾಗೆ ಆಗಿ ಹೋಗಿದ್ದೇನೆ - ಯಾವುದೇ ಪ್ರಶ್ನೆ ಕೇಳಿದ್ರೂ ಯೋಚ್ನೇ ಮಾಡೋರ್ ಮುಖಾ ಹಾಕ್ಕೋತಾರೇ ವಿನಾ ಅಪ್ಪಂತಾ ಉತ್ರ ಮಾತ್ರ ಹೊರಗ್ ಬರೋದಿಲ್ಲ! ಒಂಥರಾ ಈ ನಿಧಾನ ಅನ್ನೋದು ಒಳ್ಳೇದೇ ಆಯ್ತು, ನಿಲುವುಗಳನ್ನು ಯಾಕಾದ್ರೂ ಹೇಳ್‌ಕೋ ಬೇಕು, ಸುಮ್ನೇ ಅಡ್ಡಕತ್ರಿಯಲ್ಲಿ ಯಾಕಾದ್ರೂ ಸಿಕ್ಕಿ ಹಾಕ್ಕೋಬೇಕು ಎನ್ನೋ ಯೋಚ್ನೇ ಬಂದಿದ್ದೇ ತಡ ಈ ಪೋಸ್ಟನ್ನು ಬರೆಯತೊಡಗಿದೆ. ಮತ್ತೆ ಹೀಗೆ ಬರೆಯೋಕೆ ಶುರುಮಾಡಿದ್ದು ಯಾಕೆ ಅಂತ ಕೇಳ್ಕೊಂಡ್ರೆ 'ಸಾಧಿಸಿಕೊಳ್ಳುವುದು' ಎನ್ನೋ ಉತ್ರಾ ಬಂತು, 'ಏನನ್ನು?' ಅನ್ನೋ ಮರು ಪ್ರಶ್ನೆಗೆ ಮುಖ ಮತ್ತೆ ಬುದ್ಧಿಜೀವಿಗಳ ಹಾಗೆ ಆಗಿ ಹೋಯ್ತು, ಉತ್ತರಕ್ಕಾಗಿ ಕಾಯೋಣ, ಯಾವಾಗ್ ಬರುತ್ತೋ ನೋಡೋಣ!
'ಗ್ಲೋಬಲ್ ವಿಲ್ಲೇಜ್' ಅಂಥಾರಲ್ಲ ಹಾಗೆ - ಒಂದು ಕಡೆ ಮಾಹಿತಿ ಸುಪರ್ ಹೈವೇ, ಅದು ಕನೆಕ್ಟ್ ಮಾಡೋದು 'ವಿಲ್ಲೇಜ್' ಗಳನ್ನ - ಒಂಥರಾ ನ್ಯಾಷನಲ್ ಹೈವೇ ಸಾಧ್ಯವಾದಷ್ಟು ಶಹರಗಳನ್ನ ಅವಾಯ್ಡ್ ಮಾಡ್‌ಕೊಂಡು ಹೋಗುತ್ತಲ್ಲ ಹಾಗೆ, ಅಲ್ಲ, ಈ ಹೈವೇ ಇರೋದ್ರಿಂದ್ಲೇ ದಿನಕಳೆದಂತೆ ಶಹರಗಳು ಹುಟ್ಟುತ್ತಲ್ಲ ಹಾಗೆ!
'ನಾನು ಸೆಲ್‌ಫೋನ್ ಮಾತ್ರ ಉಪಯೋಗಿಸ್ತೀನಿ, ಬಟ್ ಜಾಗತೀಕರಣ ಅಂದ್ರೇ ಮಾತ್ರ ಮೈಯಲ್ಲ ಉರಿಯುತ್ತೆ', ಅಥವಾ 'ಕುಡಿಯೋಕ್ ಕೋಕ್ ಇರಲಿ, ಜಾಗತೀಕರಣ ದೂರ ಇರಲಿ', ಅಥವಾ 'ನಮ್ ಮಾವನ್ನ್ ಮಗ ಬಿಪಿಓ ಸಂಬಂಧೀ ಕೆಲಸದಲ್ಲಿ ಮಹಾ ದುಡ್ ಮಾಡ್ತಾನ್ರೀ, ಅದೇನೋ ಕೆಟ್ಟ್ ಜಾಗತೀಕರಣದ ಪ್ರಭಾವವಂತೆ!' ಅನ್ನೋ ಹೇಳಿಕೆಗಳಲ್ಲೇ ನಮ್ಮೂರಿನ ಜಾಣರ ಜಾಣತನವೆಲ್ಲ ಕರಗಿಹೋಗಿ ಬಿಡ್ತು. 'ಅಹಿಂಸೆಯನ್ನು ಕೈ ಹಿಡಿ, ಬೀದಿ ನಾಯಿಗೆ ಕಲ್ ಹೊಡಿ' ಅನ್ನೋ ರೀತಿ ವ್ಯತಿರಿಕ್ತವಾದ ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ. ಹಗಲೆಲ್ಲ ಅಲ್ಲಲ್ಲಿ ಏನೇನೋ ಓದಿಕೊಂಡು, ರಾತ್ರಿ ಬಂದಾಗ ಕಂಠಪೂರ್ತಿ ಕುಡಿದು, ಕುಡಿದದ್ದನ್ನ ಅರಗಿಸಿಕೊಳ್ಳಲಾರದೇ ಕುಳಿತಲ್ಲೇ ಕಕ್ಕಿಕೊಳ್ಳೋರ ಥರಾ ಆಗಿ ಹೋಗಿ ಬಿಟ್ನೇ ಎಂದು ಯೋಚಿಸಿಕೊಂಡು ಭಯಪಟ್ಟಿದ್ದಿದೆ.
ಪಿರಂಗಿಯೋರ ಆಡಳಿತವನ್ನು ಸಕತ್ತಾಗಿ ದ್ವೇಷಿಸಿದ್ದ ಫಲವೇ ನಾವೆಲ್ಲ ಅವರ ತೆಕ್ಕೆಗೆ ಬಹಳಷ್ಟು ಗಟ್ಟಿಯಾಗಿ ಒತ್ತಿಕೊಳ್ಳೋ ಹಾಗಾಗಿದ್ದು, ಹಾಗೆ ಇವತ್ತು ಸಹ ಅಫಘಾನಿಸ್ತಾನದಲ್ಲಿ ಕೋಕ್ ಮಾರಾಟಕ್ಕೆ ಬರುತ್ತೆ ಅಂದ್ರೆ ಸ್ಥಳೀಯರ ಕೈಯಲ್ಲಿ ಉಳಿದಿರೋ ತಂತ್ರಗಳು ಕಡಿಮೆ ಅಂತಲೇ ಅರ್ಥ - ಶಿಲಾ ಯುಗದಲ್ಲಿ ಇರೋದಕ್ಕೆ ಯಾರ ಮನಸೂ ಒಪ್ಪೋದಿಲ್ಲ, ಆಧುನಿಕತೆ ಸೊಂಪು ಎಲ್ಲರಿಗೂ ಬೇಕು, ಆದರೆ ಅದು ಜೊತೆಯಲ್ಲಿ ತರೋ ಹಲವಾರು ಬಳುವಳಿಗಳು ಬೇಡ ಅಂದ್ರೆ ಹೇಗೆ? ಸಮಯದ ಪರಂಪರೆಯಲ್ಲಿ ದೇಶ, ನೀತಿ ಎಲ್ಲವೂ ಬದಲಾಗುವ ಹೊತ್ತಿನಲ್ಲಿ ಬದಲಾವಣೆಗೆ ನಾವೂ ತಕ್ಕಂತೆ ಸ್ಪಂದಿಸದೇ ಹೋದರೆ ಯಾರಿಗೆ ನಷ್ಟ, ಜೊತೆಯಲ್ಲಿ ಕೇವಲ ಕೆಲವೊಂದಕ್ಕೆ ಮಾತ್ರ ಅಂಟಿಕೊಂಡು ಎಲ್ಲವೂ ಬೇಕು ಅನ್ನುವ ನಾಟಕವಾದರೂ ಎಷ್ಟು ದಿನ ನಡೆಯಬಲ್ಲದು? ಸರಿ, ನಮ್ಮೂರಿನ ಬುದ್ಧಿವಂತರು ಜಾಗತೀಕರಣವನ್ನು ವಿರೋಧಿಸಿದರೂ ಅಂತಲೇ ತಿಳ್‌ಕೊಳ್ಳೋಣ, ಅಂದ್ರೆ ಅವರು ಅಮೇರಿಕವನ್ನು ದ್ವೇಷಿಸ್ತಾರೆ ಅಂತಲೇ? ಹಾಗಾದ್ರೇ ಅಮೇರಿಕದಿಂದ ಅಪರೂಪಕ್ಕೆ ಭೇಟಿಕೊಡೋ ನನ್ನನ್ನೂ ದ್ವೇಷ್ಟಿಸ್ತಾರೆ ಅಂತಲೇ?
ಜಾಗತೀಕರಣ ಅಂದ್ರೆ ಅಲ್ಲಿ ಫೋಕಸ್ಸಿಗೆ ಬರೋದು ಅಮೇರಿಕವೋ, ತೃತೀಯ ಜಗತ್ತೋ? ಅಪರೂಪಕ್ಕೆ ವಿದೇಶೀ ಬಣ್ಣ ಹೋತ್‌ಗಂಡ್ ಬರೋ ನಾನೋ ಅಥವಾ ಇದ್ದ ಊರಲ್ಲೇ ಘಂಟೆಗೊಂದು ಬಣ್ಣ ಬದಲಾಯಿಸೋ ಇವರೋ?
2 comments:
ಸತೀಶ್ ಅವರೆ,
ಜಾಗತೀಕರಣದ ವಿರೋಧದ ಬಗ್ಗೆ ಹೇಳುವುದಾದರೆ ಮಕ್ಕಳ ನಡವಳಿಕೆಯನ್ನು ಗಮನಿಸಿ ಹೋಲಿಕೆ ಮಾಡಿದರೆ ಗೊತ್ತಾದೀತು.
ಇದನ್ನು ಮಾಡಬೇಡ ಮಗೂ ಅಂತ ನಾವು ಏನನ್ನು ಹೇಳುತ್ತೇವೋ, ಮಕ್ಕಳಿಗೆ ಅದರಲ್ಲಿ ಕುತೂಹಲ ಹೆಚ್ಚು. ದೊಡ್ಡವರು ಮರೆಯಾದ ತಕ್ಷಣ ಅವರ ಮನಸ್ಸು ಆ ಮಾಡಬೇಡ ಅಂದಿದ್ದ ವಿಷಯದ ಕಡೆಗೆ ತಿರುಗುತ್ತದೆ.
ಜಾಗತೀಕರಣವನ್ನು ದ್ವೇಷಿಸಿದ ಫಲವೇ ನಾವೆಲ್ಲ ಅದರ ತೆಕ್ಕೆಯೊಳಗೆ ಗಟ್ಟಿಯಾಗಿ ಸೇರಿಕೊಂಡಿದ್ದೇವೆ ಎಂಬೋ ನಿಮ್ಮ ಮಾತು ನೂರಕ್ಕೆ ನೂರು ಸತ್ಯ.
ಜಾಗತೀಕರಣವನ್ನು ಸಾರಾಸಗಟಾಗಿ ದ್ವೇಷಿಸೋ ಬದ್ಲು ತಪ್ಪಿದ್ದನ್ನು ತಿದ್ದಿಕೊಂಡು ಒಪ್ಪು ಇದ್ದುದನ್ನು ಅಪ್ಪಿಕೊಳ್ಳೋ ಮನೋಭಾವ ನಮ್ಮೆಲ್ಲರದಾಗಲಿ ಎಂಬ ಹಾರೈಕೆ.
ಆವಿ ಅವರೇ,
ಏನೋಪ್ಪ, ಈ ಜಾಗತೀಕರಣ ಅನ್ನೋದು ಕೆಲವೊಮ್ಮೆ ಎಲ್ಲವನ್ನೂ ನುಂಗೋ ಹೆಬ್ಬಾವು ಕಂಡ ಹಾಗ್ ಕಾಣ್ಸುತ್ತೆ, ಇನ್ನು ಕೆಲವೊಮ್ಮೆ ಬೃಹತ್ ಚೇಂಜ್ ಏಜೆಂಟ್ ಆಗಿ ತೋರುತ್ತೆ!
Post a Comment