Friday, August 25, 2006

ನ್ಯೂ ಯಾರ್ಕ್ ನೆನಪುಗಳು

ಹಲವಾರು ದಿನಗಳ ನಂತರ ಈ ದಿನ ನ್ಯೂ ಯಾರ್ಕಿಗೆ ಹೋಗಿದ್ದೆ, ಅದೇ ರೈಲು ನಿಲ್ದಾಣ, ಕುರ್ರೋ-ಮರ್ರೋ ಕಿರುಚಿಕೊಂಡು ಓಡಾಡುವ ರೈಲುಗಳು ಅಪರೂಪಕ್ಕೆ ಮುಖ ತೋರಿಸಿದವನು ಎಂದು ಮುಖ ತಿರುಗಿಸಿಕೊಂಡು ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿದ್ದವು. ಈ ಹಿಂದೆ ಪ್ರತೀ ಸಾರಿ ನ್ಯೂ ಯಾರ್ಕಿನವನಂತೆಯೇ ಹೋಗಿ ಬರುತ್ತಿದ್ದವನು, ಈ ದಿನ ಪ್ರವಾಸಿಯಾಗಿ ಬದಲಾಗಿ ಹೋದರೆ ಹೇಗೆ ಎಂದು ಅನ್ನಿಸಿದ್ದೇ ತಡ, ಇದೇ ಮೊದಲ ಬಾರಿ ಮಹಾನಗರಿಗೆ ಬಂದ ದೃಷ್ಟಿಕೋನವನ್ನಿಟ್ಟುಕೊಂಡು ಸುತ್ತಲನ್ನು ಹೊಸ ಕೋನಗಳಿಂದ ನೋಡತೊಡಗಿದೆ.

ವರ್ಲ್ಡ್ ಟ್ರೇಡ್ ಸೆಂಟರ್ ಟ್ರೇನ್ ನಿಲ್ದಾಣದಲ್ಲಿ ಕೆಳಗಿನಿಂದ ಮೇಲೆ ಹತ್ತಿ ಬರುವಾಗ ಇರುವ ಮೆಟ್ಟಿಲುಗಳ ಸಂಖ್ಯೆ ಹೆಚ್ಚಾದವೇನೋ ಎನ್ನಿಸಿ ಭಾರವಾದ ಲ್ಯಾಪ್‌ಟಾಪಿನ ಬ್ಯಾಗನ್ನು ಹೊತ್ತುಕೊಂಡು ಮೇಲೆ ಬರುವಾಗ ಕುಬ್ಜನಾಗಿ ಹೋದಂತೆನಿಸಿತು, ಹಿಂದೆ ದಿನವೂ ಮೆಟ್ಟಿಲಗಳನ್ನು ಹತ್ತಿ-ಇಳಿಯುವ ರೂಢಿ ತಪ್ಪಿ ಹೋಗಿತ್ತು. ಹಾಗೇ ಟ್ರೇನ್ ಸ್ಟೇಷನ್‌ನಿಂದ ಹೊರಬರುತ್ತಿದ್ದಂತೆ ಹೊರಗೆ ಸೆಪ್ಟೆಂಬರ್ ೧೧, ೨೦೦೧ ರ ಘಟನೆಗಳಿಗೆ ಸಂಬಂಧಿಸಿದಂತೆ ಸುತ್ತಲೂ ಬಹಳಷ್ಟು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಅವುಗಳ ಮೇಲೆಲ್ಲ ಒಮ್ಮೆ ಕಣ್ಣಾಡಿಸಿ, ಅಲ್ಲಿ ಹರವಿಕೊಂಡ ಟಿವಿ ಕ್ಯಾಮೆರಾಗಳಿಗೆ ಅಡ್ಡ ಬರದಂತೆ ಹಾಗೂ ಫುಟ್‌ಪಾತ್ ಮೇಲೆ ಏನೋ ಒಂದು ಗುರಿಯಿಂದ ಅತ್ತಿತ್ತ ನಡೆಯುವ ಅಗಾಧವಾದ ಜನಸ್ತೋಮದ ನಡುವೆ ಯಾರಿಗೂ ಢಿಕ್ಕಿ ಹೊಡೆಯದೇ ಬಾವಲಿಯ ಹಾಗೆ ತಪ್ಪಿಸಿಕೊಂಡು ರಸ್ತೆ ದಾಟುವಷ್ಟರಲ್ಲಿ ಈ ನಗರಕ್ಕೆ ನಾನೂ ಹೊಸಬನಾಗಿ ಹೋಗಿದ್ದೇನೆ ಎನ್ನಿಸಿತು. ಈ ಮಹಾನಗರವೇ ಹೀಗೆ ಅದರ ಬೆಳವಣಿಗೆಯ ವೇಗವನ್ನು ಒಂದು ದಿನ ತಪ್ಪಿಸಿಕೊಂಡರೂ ಎಲ್ಲೋ ಹಿಂದುಳಿದ ಹಾಗೆ ಅನ್ನಿಸೋದು.

ಫುಟ್‌ಪಾತ್‌ಗಳಲ್ಲಿ ಯಾವ ವ್ಯತ್ಯಾಸವೂ ಕಾಣಲಿಲ್ಲ, ಅವೇ ಹಾಟ್‌ಡಾಗ್ ವೆಂಡರ್‌ಗಳು, ಅವೇ ಡಿಸ್ಕೌಂಟ್ ಕೊಡುತ್ತೇವೆ, ಅಥವಾ ಸೇಲ್‌ನಲ್ಲಿವೆ ಎಂದು ವ್ಯಾಪಾರಕ್ಕೆ ತಮ್ಮನ್ನು ತೆರೆದುಕೊಂಡ ಔಟ್‌ಲೆಟ್ ಅಂಗಡಿಗಳು. ಉರಿ ಬಿಸಿಲಿನಲ್ಲೂ ಥರಾವರಿ ಲೈಟುಗಳನ್ನು ಉರಿಸುವ ದೊಡ್ಡ ದೊಡ್ಡ ಕಟ್ಟಡಗಳ ಗತ್ತಿನಲ್ಲಿ ಯಾವ ಅಂಶವೂ ಕಡಿಮೆ ಆದಂತಿರಲಿಲ್ಲ.

ಕೆಲಸವನ್ನು ಮುಗಿಸಿಬರುವಾಗ ಮೊಟ್ಟ ಮೊದಲ ಬಾರಿಗೆ ಎನ್ನುವಂತೆ ಮುಂದೆ ಸಿಕ್ಕುವ ಟ್ರೈನ್ ಅನ್ನು ಹಿಡಿಯದೇ ಒಂದರ್ಧ ಘಂಟೆ ಪ್ರದರ್ಶನಕ್ಕಿಟ್ಟ ಈ ಛಾಯಾಚಿತ್ರಗಳನ್ನು ನೋಡಿದರೆ ಹೇಗೆ ಎನ್ನಿಸಿ ಒಂದೊಂದನ್ನೇ ವಿವರವಾಗಿ ನೋಡುತ್ತಾ ಬಂದೆ - ಅಲ್ಲಿ ತೋರಿಸಿದ್ದ ಎಲ್ಲ ಚಿತ್ರಗಳೂ ವೃತ್ತಿಪರರು ಹಿಡಿದಿಟ್ಟ ಚಿತ್ರಗಳು - ಟ್ವಿನ್ ಟವರ್‌ಗಳು ಬಿದ್ದ ಬಗೆಯನ್ನು, ಅದರ ನಂತರದ ಪರಿಣಾಮಗಳನ್ನು ಜನಗಳ ಮುಖದ ಮೇಲೆ ತೋರಿಸುವ ಪ್ರಯೋಗ ನಡೆದಿತ್ತು. ಆಗ ಕಟ್ಟಡಗಳು ಹೊತ್ತಿ ಉರಿಯುತ್ತಿರುವುದನ್ನು ನೋಡಿ ಫೋಟೋದಲ್ಲಿ ಜನರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವುದನ್ನು ತೋರಿಸಿದ್ದರೆ, ಅಂತಹ ಫೋಟೋಗಳನ್ನು ಐದು ವರ್ಷಗಳ ನಂತರ ನೋಡುತ್ತಿರುವ ಜನರ ಮುಖಗಳನ್ನು ನೋಡುವುದೂ ಅಷ್ಟೇ ಸ್ವಾರಸ್ಯಕರವಾಗಿತ್ತು. ಒಟ್ಟಿನಲ್ಲಿ ಎಲ್ಲ ಫೋಟೋಗಳನ್ನು ನೋಡುತ್ತಾ ಬಂದೆಂತೆಲ್ಲ ಈ ಪ್ರಪಂಚದಲ್ಲಿ ಭಯೋತ್ಪಾದಕರಂತ ಕೆಟ್ಟ ಜನರಾದರೂ ಏಕಿರುತ್ತಾರೆ ಎನ್ನುವ ಬಾಲಿಶ ಪ್ರಶ್ನೆ ತಾನೇ ತಾನಾಗಿ ಮನದಲ್ಲಿ ಮೂಡಿ ಮರೆಯಾಯಿತು, ಜೊತೆಯಲ್ಲಿ ಮೊಟ್ಟ ಮೊದಲ ಬಾರಿಗೆ - ನಾನು ಅಮೇರಿಕನ್ ಅಲ್ಲದಿದ್ದರೂ ಸಹ - ಅಮೇರಿಕನ್ ಮೌಲ್ಯಗಳನ್ನು ಎತ್ತಿ ಹಿಡಿಯುವ ಆಲೋಚನೆಯೊಂದು ಮನದಲ್ಲಿ ಸುಳಿದು ಹೋಯಿತು!

ಅನ್ಯಾಯದ ವಿರುದ್ಧ, ಅಮಾಯಕರ ಪ್ರಾಣ ತೆಗೆಯುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ರಾಷ್ಟ್ರೀಯತೆ ಬೇಕಾಗೋದಿಲ್ಲ, ಅಲ್ಲಿ ತಗುಲಿಸಿದ ಫೋಟೋಗಳನ್ನು ನೋಡುತ್ತಿದ್ದರೆ ಎಂತಹವರ ಮನಸ್ಸಾದರೂ ಕರಗಲಿಕ್ಕೆ ಸಾಕು. ಹೀಗೆ ಅಪರೂಪಕ್ಕೊಮ್ಮೆ ಬಂದ ಹೊಸದಾದ ನ್ಯೂ ಯಾರ್ಕ್ ಸಂಬಂಧೀ ನೆನಪುಗಳು ನನ್ನನ್ನು ಆ ಕ್ಷಣದ ಮಟ್ಟಿಗೆ ನ್ಯೂ ಯಾರ್ಕ್ನವನನ್ನಾಗಿ ಮಾಡಿಬಿಟ್ಟವು ಎಂದರೆ ತಪ್ಪೇನೂ ಇಲ್ಲ.

No comments: