ಏನ್ ಬೇಡಾ ಅಂದ್ರೂ ಈ ಕೆಲ್ಸಾ ಮಾಡ್ಬೋದ್ ನೋಡಿ...
ಹತ್ತ್ ಹನ್ನೊಂದ್ ವರ್ಷದ್ ಹಿಂದೆ ನಾವೆಲ್ಲಾ ನೋಡಿದ ಹಾಗೆ ಒಂದು ಡಾಲರ್ಗೆ ಸುಮಾರು ಮುವ್ವತ್ತಾರೂವರೆ ರೂಪಾಯಿ ಇತ್ತು. ಇನ್ನು ಸ್ವಲ್ಪ ದಿನಗಳಲ್ಲಿ ಆ ಕಾಲ ಮತ್ತೆ ಪುನಃ ಮರುಕಳಿಸ್ತಾ ಇದೆ ಅಂತ ಹೇಳೋದರಲ್ಲಿ ತಪ್ಪೇನೂ ಇಲ್ಲಾ. ವಿದೇಶಕ್ಕೆ ವಲಸೆ ಬಂದವರಿಗೆ ಅವರು ಲೆಕ್ಕದಲ್ಲಿ ಎಷ್ಟೇ ದಡ್ಡರಾದ್ರೂ ಹಿಂದುಳಿದವರಾದ್ರೂ ಕೊನೇಪಕ್ಷ ಅವರ ತಲೆಯಲ್ಲಿ ಒಂದು ಕ್ಯಾಲ್ಕುಲೇಟರ್ ಪ್ರಾಸೆಸ್ ಯಾವಾಗ್ಲೂ ನಡೀತಲೇ ಇರುತ್ತೆ - ಅದೇ ರುಪಾಯಿ-ಫಾರಿನ್ ಕರೆನ್ಸಿ ಕನ್ವರ್ಷನ್ ಫ್ಯಾಕ್ಟರ್! ಯಾವುದೇ ಅಂಗಡಿಯಲ್ಲಿ ಏನೇ ಕೊಂಡರೂ, ಒಂದು ಸ್ಟಾರ್ಬಕ್ಸ್ ಕಾಫಿಯಿಂದ ಹಿಡಿದು ವಾಷಿಂಗ್ ಮೆಷೀನ್ ವರೆಗೆ, ಅದು ರುಪಾಯಿಗೆ ತನ್ನಿಂದ ತಾನೇ ಕನ್ವರ್ಟ್ ಆಗೇ ಆಗುತ್ತದೆ, ನಮ್ಮ ಸಮಾಧಾನಕ್ಕಾಗಿಯಾದರೂ. ನನ್ನಂತಹವರಿಗೆ ಕರೆನ್ಸಿ ಕನವರ್ಷನ್ ಪ್ರಾಸೆಸ್ ಜೊತೆಗೆ ಟೆಂಪರೇಚರ್ ಕನ್ವರ್ಷನ್ (ಫ್ಯಾರನ್ಹೈಟ್ನಿಂದ ಸೆಂಟಿಗ್ರೇಡ್ ಹಾಗೂ ವೈಸಾ ವರ್ಸಾ) ಕೂಡಾ ತಲೆಯಲ್ಲಿ ಯಾವಾಗ್ಲೂ ನಡೆಯುತ್ತಿರುವ ಪ್ರಾಸೆಸ್ಸುಗಳಲ್ಲೊಂದು, ಅದು ಬೇರೆ ವಿಷಯ.
ನಾಲ್ಕೈದು ವರ್ಷಗಳ ಹಿಂದೆ (ಇರಬೇಕು), ರೂಪಾಯಿ ಬೆಲೆ ಇಳಿಮುಖವಾಗಿ ನಲವತ್ತೆಂಟು ದಾಟಿ ಹೋಗಿದ್ದ ಕಾಲದಲ್ಲಿ, ನಾವುಗಳೆಲ್ಲ ರೂಪಾಯಿ ಕಥೆ ಮುಗಿಯಿತೆಂದುಕೊಂಡು ಎರಡು ಡಾಲರ್ಗೆ ನೂರು ರುಪಾಯಿ ಎಂದು ಕನ್ವರ್ಷನ್ ಮಾಡಿಕೊಳ್ಳಲು ಆರಂಭಗೊಂಡಿದ್ದೆವು. ಅದೇ ಸಮಯದಲ್ಲಿ ಬಿಪಿಓ ಟ್ರಾನ್ಸಾಕ್ಷನ್ನೂ ಕೂಡಾ ಹೆಚ್ಚಾದದ್ದೆಂದು ಕಾಣಿಸುತ್ತದೆ, ಇನ್ಫೋಸಿಸ್, ವಿಪ್ರೋಗಳಂತ ಕಂಪನಿಗಳವರು ತಮ್ಮ ಲಾಭವನ್ನು ರುಪಾಯಿಗೆ ಕನ್ವರ್ಟ್ ಮಾಡಿಕೊಂಡು ಬಹಳ ಖುಷಿ ಪಡುತ್ತಿದ್ದ ಕಾಲ. ರೂಪಾಯಿಯ ಬೆಲೆಯ ಹೆಚ್ಚಳದಲ್ಲಿ ಇಳಿತವಾದಂತೆ ಡಾಲರ್ನಲ್ಲಿ ವ್ಯವಹಾರ ಮಾಡೋ ಎಕ್ಸ್ಪೋರ್ಟ್ನವರಿಗಂತೂ ಬಹಳ ಅನುಕೂಲವಾದರೆ, ಅದೇ ರೂಪಾಯಿಯನ್ನು ಡಾಲರ್ಗೆ ಕನ್ವರ್ಟ್ ಮಾಡಿಕೊಂಡು ಜೀವನ ಸಾಗಿಸೋ ಪ್ರಯಾಣಿಕರಿಗಾಗಲೀ, ವಿದ್ಯಾರ್ಥಿಗಳಿಗಾಗಲೀ ಅಷ್ಟೇ ಅನಾನುಕೂಲವಾದೀತು. ಜೊತೆಯಲ್ಲಿ, ಅಮೇರಿಕದಂತಹ ರಾಷ್ಟ್ರಗಳಿಂದ ಭಾರತಕ್ಕೆ ಹಣ ಕಳಿಸೋ ನನ್ನಂಥವರು ರೂಪಾಯಿಯ ಬೆಲೆ ಕುಸಿದಷ್ಟೂ ನೇರವಾಗಿ ಅನುಕೂಲಿತರಾದಂತೆ ಕಂಡುಬಂದರೂ ಒಂದಕ್ಕೆರೆಡು ಬೆಲೆ ತೆರುವ ರೀತಿಯಿಂದಲಾದರೂ ಹೆಚ್ಚು ಹೆಚ್ಚು ರೂಪಾಯಿಯನ್ನು ಬಳಸತೊಡುಗುವುದು ಸಹಜ. ಒಟ್ಟಿನಲ್ಲಿ, ರೂಪಾಯಿಯ ಬೆಲೆ ಏರುಮುಖವಾಗುವುದು ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದೇ ಎಂದು ಹೇಳಬೇಕು. ಕ್ಯಾಚ್ ಏನಪ್ಪಾ ಎಂದರೆ, ರೂಪಾಯಿಯ ಬೆಲೆ ಬರೀ ಡಾಲರ್ಗೆ ಸಂಬಂಧಿಸಿದಂತೆ ಏರಿದರೆ ಮಾತ್ರ ಸಾಲದು, ಜಪಾನಿನ ಯೆನ್, ಯೂರೋಪಿನ ಯೂರೋ ಪೌಂಡ್ ಮುಂತಾದವುಗಳಿಗೂ ಸಹ ಪೈಪೋಟಿ ನೀಡುವುದು. ಡಾಲರ್ ಬೆಲೆಯಲ್ಲಿ ಇಳಿಮುಖವಾದಂತೆ ಉಳಿದೆಲ್ಲ ಕರೆನ್ಸಿಗಳು ಇಳಿಮುಖವಾಗಿ ರೂಪಾಯಿಯ ಪ್ರಾಬಲ್ಯ ಹೆಚ್ಚಾದರೆ ಒಳ್ಳೆಯದು ಎನ್ನುವುದು ನನ್ನ ಅನಿಸಿಕೆ.
ಸರಿ, ನಾವು ರೂಪಾಯಿಯ ಬೆಲೆ ಏರಿದಂತೆ ಇಲ್ಲಿಂದ ಡಾಲರ್ ಅನ್ನು ಕಳಿಸಿದರೆ ಬ್ಯಾಂಕ್ ಕನ್ವರ್ಷನ್ ಮಾಡಿದ ನಂತರ ಪ್ರತೀ ಡಾಲರ್ಗೆ ನಮಗೆ ಕೈಗೆ ಸಿಗುವಾಗ ಮುವತ್ತೈದೇ ರುಪಾಯಿಯಾಗಬಹುದು. ಆ ಮುವತ್ತೈದು ರೂಪಾಯಿಯನ್ನು ತೆಗೆದುಕೊಂಡು ನಾವೇನು ಮಾಡುತ್ತೇವೆ ಅನ್ನೋದು ಮುಖ್ಯ. ಈಗಾಗಲೇ ನನ್ನಂತಹವರು ಪರ್ಸನಲ್ ಹಣವನ್ನು ಬ್ಯಾಂಕುಗಳ ಮೂಲಕ ಭಾರತಕ್ಕೆ ಕಳಿಸದಿದ್ದರೂ, ಮತ್ತೊಂದು ದಿಸೆಯಲ್ಲಿ ಭಾರತಕ್ಕೆ ವಿದೇಶಿ ಹಣ ನುಗ್ಗುತ್ತಲೇ ಇದೆ, ಅದೇ ಇನ್ವೆಷ್ಟ್ಮೆಂಟ್ಗೋಸ್ಕರ - ಭಾರತದ ಸೆಕ್ಯೂರಿಟೀಸ್ ಮಾರ್ಕೆಟ್ಟುಗಳಲ್ಲಿ ಹಣವನ್ನು ತೊಡಗಿಸಲು ನಾ ಮುಂದು ತಾ ಮುಂದು ಎಂದು ವ್ಯಕ್ತಿಯ (individual) ಮಟ್ಟದಿಂದ ಹಿಡಿದು ಸಂಸ್ಥೆಗಳವರೆಗೆ (institution) ಎಲ್ಲರೂ ಮುನ್ನುಗ್ಗುತ್ತಿರುವುದು ಇತ್ತೀಚಿನ ಬೆಳವಣಿಗೆಗಳಲ್ಲೊಂದು. ಈ ಐ-ಐ (i-i ಅಂದರೆ individual-institution) ಹಣ ಭಾರತಕ್ಕೆ ಹರಿದು ಬರುತ್ತಿರುವ ವಿಷಯ ಇಂದು ನಿನ್ನೆಯದಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಐ-ಐ ಹಣ ಹೆಚ್ಚಾಗಿರುವುದು ಒಂದು ಮಹತ್ತರ ಬೆಳವಣಿಗೆ.
ಹಾಗಾದ್ರೆ, ಏನೂ ಬೇಡಾ ಅಂದ್ರೂ ನಾವೆಲ್ಲ ಯಾವ ಕೆಲಸವನ್ನು ಮಾಡಬಹುದು? ಒಂದು ಭಾರತದಂತಹ ಏರುಮುಖದ ಮಾರುಕಟ್ಟೆಗಳಲ್ಲಿ ಹಣ ತೊಡಗಿಸುವುದು, ಮತ್ತೊಂದು ಹಾಗೆ ಹಣ ತೊಡಗಿಸುವವರಿಗೆ ಅನುಕೂಲವಾಗಲೆಂದು ಫೈನಾನ್ಸಿಯಲ್ ಸರ್ವೀಸಸ್ ಕಂಪನಿಗಳನ್ನು ತೆರೆಯುವುದು. ಉದಾಹರಣೆಗೆ, ಅಮೇರಿಕದಲ್ಲಿ ಸಿಗುವ ಫೈನಾನ್ಸಿಯಲ್ ಸರ್ವೀಸ್ ಬಗ್ಗೆ ಎಲ್ಲರಿಗೂ ಗೊತ್ತಿರೋದೇ - ನಿಮ್ಮ ಗಟ್ಟಿತನವನ್ನು ಆಧರಿಸಿ ಸಾವಿರ ಡಾಲರುಗಳಿಂದ ಹಿಡಿದು ಮಿಲಿಯನ್ ಡಾಲರುಗಳ ವರೆಗೆ ನೀವು ಹೂಡಿಕೆಯನ್ನು ಮಾಡಿದ್ದಲ್ಲಿ, ನಿಮ್ಮ ಫೈನಾನ್ಸಿಯಲ್ ಅಡ್ವೈಸರ್ ಎನ್ನುವ ಮಹಾಶಯ ನಿಮ್ಮ ಹೂಡಿಕೆಯ ಧೇಯೋದ್ದೇಶಗಳಿಗನುಗುಣವಾಗಿ ನಿಮ್ಮ ಹಣವನ್ನು ಸರಿಯಾಗಿ ಮಾರುಕಟ್ಟೆಯಲ್ಲಿ ತೊಡಗಿಸಿ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತಾನೆ. ಅವನ ಹಿಂದೆ ಬ್ಯಾಂಕು, ಇನ್ವೆಷ್ಟ್ಮೆಂಟ್ ಸಂಸ್ಥೆಗಳ ನೆಟ್ವರ್ಕ್ ಹಾಗೂ ಸಪೋರ್ಟ್ ಇರಬಹುದು, ಅಥವಾ ಆತ ಒಬ್ಬೊಂಟಿ ವ್ಯಕ್ತಿಯಾಗಿರಬಹುದು. ಯಾವುದೂ ಬೇಡವೆಂದರೆ ನಿಮ್ಮ ಹಣವನ್ನು ನೀವೇ ಆನ್ಲೈನ್ ಮಾಧ್ಯಮ (ಇ-ಟ್ರೇಡ್, ಅಮೆರಿಟ್ರೇಡ್, ಇತ್ಯಾದಿ)ಗಳಲ್ಲಿ ತೊಡಗಿಸಬಹುದು. ಆದರೆ ಭಾರತದಲ್ಲಿ ನೇರವಾಗಿ ಹಣವನ್ನು ತೊಡಗಿಸಬೇಕೆಂದುಕೊಂಡವರಿಗೆ ಈ ರೀತಿಯ ಅನುಕೂಲಗಳು ಇವೆಯೆಂದು ನನಗೆ ತಿಳಿದಿದ್ದರೂ ಅವು ಅಮೇರಿಕನ್ ಮಾರುಕಟ್ಟೆಯಲ್ಲಿ ದೊರೆಯುವ ಸೌಲಭ್ಯಗಳಿಗೆ ಯಾವ ರೀತಿಯಲ್ಲೂ ಇನ್ನೂ ಪೈಪೋಟಿ ಕೊಡುವ ಹಂತದಲ್ಲಿಲ್ಲ - ಮುಂದೆ ಒಂದು ಮಹಾನ್ ಆಗಿ ಬೆಳೆಯಬಹುದಾದ ಕ್ಷೇತ್ರವಿದು. ಅದಕ್ಕೋಸ್ಕರವೇ, ನಿಮ್ಮಲ್ಲಿ ಇಂತಹ ಸರ್ವೀಸ್ ಮೈಂಡೆಡ್ನೆಸ್ ಇದ್ದರೆ - ನನ್ನಂತಹವರಿಗೆ ಅನುಕೂಲವಾಗಲೆಂಬಂತೆ ಒಂದು ಸಣ್ಣ ಉದ್ಯಮವನ್ನು ತೆರೆದು ಮುಂದೆ ಅದೇ ಮಹಾ ಕಾರ್ಪೋರೇಷನ್ ಆಗಿ ಬೆಳೆಯುವ ಎಲ್ಲ ಲಕ್ಷಣವೂ ಇರೋದರಿಂದ ಇದು ಖಂಡಿತವಾದ ಸುಸಮಯ ಎಂದು ನನ್ನ ’ಅಂತರಂಗ’ ಕಣೀ ಹೇಳತೊಡಗುವುದನ್ನು ನಾನು ಎಷ್ಟೇ ಕಷ್ಟಪಟ್ಟರು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ! ಈಗಾಗಲೇ IBI, SBI ಮುಂತಾದ ಬ್ಯಾಂಕುಗಳು ಆ ಕೆಲಸವನ್ನು ಮಾಡುತ್ತಿವೆ ಎಂದಿರಾ, ಅವುಗಳ ಸರ್ವೀಸನ್ನು ಬಲ್ಲವರೇ ಬಲ್ಲರು - ನೀವಾದರೂ ಒಂದು ನಂಬಿಕಸ್ಥ ಹೊಸ ಕಂಪನಿಯನ್ನು ಹೊರಡಿಸಿ ನಾವೆಲ್ಲ ನಿಮ್ಮ ಸಹಾಯವನ್ನು ಪಡೆದು ಜೀವನದಲ್ಲಿ ಸ್ವಲ್ಪವಾದರೂ ಮುಂದೆ ಬರೋಣ, ಏನಂತೀರಿ? ಅಮೇರಿಕದ ಇನ್ವೆಷ್ಟ್ಮೆಂಟ್ ಬ್ಯಾಂಕಿಂಗ್ ಕಂಪನಿಗಳು ಭಾರತದಲ್ಲಿ ಟಿಕ್ಕಾಣಿ ಹೂಡಿ ಅವರ ಹೆಸರುಗಳನ್ನು ಮನೆ ಮಾತು ಮಾಡುವುದರ ಮೊದಲೇ ಮಹಾನ್ ಸುವರ್ಣ ಅವಕಾಶವೇ ಕಾದಿದೆ ಎಂಬುದು ನನ್ನ ಅಭಿಮತ.