Tuesday, August 28, 2007

ಪರಿಮಿತ ಮನಸ್ಸು ಅಪರಿಮಿತ ಜೀವಸಂಕುಲ

ಜೀವ ಸಂಕುಲ ಅನ್ನೋದು ಬಹಳ ಸ್ವಾರಸ್ಯಕರವಾದದ್ದು ಎಂದು ಅನ್ನಿಸಿದ್ದು ಪ್ರತೀ ದಿನ ಆಫೀಸಿನಿಂದ ಬರುವ ದಾರಿಯಲ್ಲಿ ಕಾಣುವ ಒಂದು ಹಸಿರುಕಟ್ಟಿದ ನೀರು ತುಂಬಿದ ಹೊಂಡವನ್ನು ನೋಡಿದಾಗ. ಮಳೆ ಬಾರದಿದ್ದ ದಿನಗಳಲ್ಲಿ ಅಲ್ಲಿ ಹೆಚ್ಚು ಪಾಚಿ ಬೆಳೆಯದೇ ಅಲ್ಲಲ್ಲಿ ತ್ಯಾಪೆ ಹಾಕಿದವರ ಹಾಗೆ ಬರಿ ನೀರು ಕಾಣಿಸುತ್ತಿತ್ತು, ಕಳೆದ ಒಂದೆರಡು ವಾರಗಳಲ್ಲಿ ಹುಲುಸಾದ ಮಳೆಯಿಂದಾಗಿ ಈಗ ಎಲ್ಲಿ ನೋಡಿದರಲ್ಲಿ ಹಸಿರೇ ಹಸಿರು, ಅಲ್ಲಿ ನೀರೇ ಇಲ್ಲವೇನೋ ಎನ್ನಿಸುವಂತೆ ಅಗಾಧವಾದ ಶಾಂತಿಯನ್ನು ತನ್ನ ಮುಖದಲ್ಲಿ ಪ್ರತಿಫಲಿಸುವ ಸಂತನ ನಿಷ್ಕಲ್ಮಷ ಮುಖದಂತೆ ಒಂದು ರೀತಿಯ ಸ್ತಬ್ದಚಿತ್ರ. ಬರೀ ಕೀಟಗಳನ್ನು ಅಧ್ಯಯನ ಮಾಡಿಯೇ ಎಷ್ಟೋ ಜನುಮಗಳನ್ನು ಕಳೆಯಬಹುದು, ಪ್ರಪಂಚದಾದ್ಯಂತ ಇರುವ ಇನ್ನೂ ಹೆಸರಿಡದ ಕೀಟಗಳ ಸಂತಾನವನ್ನು ಅವುಗಳ ಚಲನವಲನವನ್ನು ಶೋಧಿಸಿಕೊಂಡು ಹೊರಟರೆ ಕೀಟಗಳ ಸಾಮಾಜಿಕ ಬದುಕಿನ ಬಗ್ಗೆ ಏನೇನೆಲ್ಲವನ್ನು ಕಂಡುಹಿಡಿಯಬಹುದು. ಸ್ಥಿರ ಸಸ್ಯಗಳು, ನಡೆದಾಡುವ ಸಸ್ಯಗಳು, ಸಸ್ಯಗಳಂತಿರುವ ಕೀಟಗಳು, ಕೀಟದ ಹಾಗಿರುವ ಕೀಟಗಳನ್ನು ಭಕ್ಷಿಸುವ ಸಸ್ಯಗಳು ಇನ್ನೂ ಏನೇನೆಲ್ಲವನ್ನು ಅಗಾಧವಾದ ಬ್ರಹ್ಮಾಂಡ ತನ್ನ ಒಡಲಲ್ಲಿ ತುಂಬಿಕೊಂಡಿದೆ ಎಂದು ಒಮ್ಮೆ ಸೋಜಿಗವಾಯಿತು.

ಒಂದು ವೇಳೆ ಈ ಪ್ರಪಂಚದಲ್ಲಿರುವ ಅಣು ಬಾಂಬುಗಳು, ರಸಾಯನಿಕ ಬಾಂಬುಗಳು ಮತ್ತಿತರ ಆಯುಧ-ಸ್ಫೋಟಕಗಳೆಲ್ಲವನ್ನೂ ಉರಿಸಿ-ಸಿಡಿಸಿದರೆ ಏನಾಗಬಹುದು ಎಂಬ ಯೋಚನೆ ಬಂತು. ಈ ಭೂಮಿಯ ಮೇಲ್ಮೈ, ಒಳಗೆ, ನೀರಿನೊಳಗೆ ಅದೆಷ್ಟೋ ಶಾಖ ಉತ್ಪನ್ನವಾದರೂ, ಇಡೀ ಭೂಮಂಡಲದಲ್ಲಿನ ನೀರು ಕೊತಕೊತನೆ ಕುದ್ದು ಆವಿಯಾದರೂ ಅಥವಾ ಅತಿಶೀತದಲ್ಲಿ ಮಂಜುಗಡ್ಡೆಯಾಗಿ ಪರಿವರ್ತನೆಗೊಂಡು ನೂರು ವರ್ಷ ಸೂರ್ಯನ ಕಿರಣಗಳು ಕಾರ್ಮೋಡವನ್ನು ದಾಟಿ ಭೂಮಿಯನ್ನು ತಲುಪದೇ ಇದ್ದರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವುದಾದರೊಂದಿಷ್ಟು ಜೀವ ಜಂತುಗಳು ಬದುಕೇ ಇರುತ್ತವೆ ಎನ್ನುವುದು ನನ್ನ ನಂಬಿಕೆಯಾಗಿ ಹೋಗಿದೆ. ಜೀವರಾಶಿಗಳಲ್ಲಿ ಮಾನವ ಅತಿಪ್ರಭಲ, ಬುದ್ಧಿಜೀವಿ ಎಂದೇನೇನೆಲ್ಲ ಖ್ಯಾತಿಯನ್ನು ಪಡೆದುಕೊಂಡಿದ್ದರೂ, ಅದೇ ತಾನೆ ಹುಟ್ಟಿದ ಮೀನಿನ ಮರಿಯಿಂದ ಹಿಡಿದು, ಮರ್ಕಟ-ಮಾರ್ಜಾಲ ಸಂತಾನಗಳಿಗೆ ತುಲನೆ ಮಾಡಿದಲ್ಲಿ ಮಾನವ ಶಿಶು ಎಷ್ಟೊಂದು ದುರ್ಬಲವಾದದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂದಿಲ್ಲದ ಜಾಗೆಯಲ್ಲಿ ನಾಳೆ ಹುಟ್ಟಿ ಅಂದೇ ಸತ್ತು ಜೀರ್ಣಗೊಳ್ಳುವ ನಾಯಿಕೊಡೆಗಳಿಂದ ಹಿಡಿದು, ಆಕಳಿನ ಸಗಣಿಯಲ್ಲೇ ಹುಟ್ಟಿಬೆಳೆದು ವಿಜೃಂಬಿಸುವ ಗೆದ್ದಲು ಹುಳಗಳಿಂದ ಹಿಡಿದು, ಶೀತಕಗಳಲ್ಲೂ ಸಂತಾನ ವರ್ಧಿಸುವ ಜಿರಲೆಗಳನ್ನು ನೋಡಿ ಸೋಜಿಗಗೊಂಡಿದ್ದೇನೆ. ಇಂತಹ ವಿಭಿನ್ನ ಪ್ರಾಣಿ-ಪಕ್ಷಿ ಕಶೇರುಕ-ಅಕಶೇರುಕ ಸಂತಾನಗಳ ನಡುವೆ ಅದೆಂತಹ ಸಂಭಾಷಣೆ ನಡೆದೀತು ಎಂದು ಯೋಚಿಸತೊಡಗುತ್ತೇನೆ. ಸಮುದ್ರ ತೀರದಲ್ಲಿ ನಡೆದಾಡುವವರಿಗೆ ದಿಢೀರನೆ ಸುನಾಮಿ ಅಲೆಗಳು ಕಾಣಿಸಿಕೊಂಡ ಹಾಗೆ ಬಚ್ಚಲು ಮೋರಿಯಲ್ಲಿ ಆಹಾರವನ್ನು ಹೊಂಚುತ್ತಿರುವ ಇರುವೆಗೆ ಪಕ್ಕನೆ ತನ್ನ ಮೇಲೆ ಬಿದ್ದ ನೀರು ಅದರದ್ದೇ ಆದ ಲೋಕದ ಒಂದು ಸುನಾಮಿಯ ಅನುಭವಕ್ಕೆ ಸಮನಾಗುವುದೇ ಎಂದು ತೂಗತೊಡಗುತ್ತೇನೆ.

ತಾನು ಸಾಕಿಯಾಗಲೀ, ಸಲಹಿಯಾಗಲೀ, ಬೇಟೆಯಾಡಿಯಾಗಲೀ ಉಳಿದ ಜೀವಜಂತುಗಳನ್ನು ಕೊಂದು ಬದುಕುವ ಹಕ್ಕನ್ನು ಯಾರು ಯಾರಿಗೆ ಕೊಟ್ಟರು? ಆಹಾರ ಸರಪಳಿಯ ನ್ಯಾಯದಲ್ಲಿ ಯಾರು ಯಾರನ್ನು ಬೇಕಾದರೂ ಭಕ್ಷಿಸಬಹುದಾಗಿದ್ದರೆ ಮಾನವ ಜನಾಂಗಕ್ಕೆ ಪ್ರಾಣಿಗಳಿಂದಾಗುವ ಅಪಾಯಗಳನ್ನು ವಿಶೇಷವಾಗಿ ನೋಡಬೇಕಿತ್ತೇಕೆ? ನಾವು ಯಾವ ಪ್ರಾಣಿಯ ಸಂತತಿಯನ್ನಾದರೂ ಕೊಲ್ಲಬಹುದು, ಆದರೆ ಮನುಷ್ಯನ ಸಂತತಿಗೆ ಇನ್ಯಾವುದೇ ಪ್ರಾಣಿ ಅಪಾಯ ತಂದೊಡ್ಡಿದ್ದೇ ಆದಲ್ಲಿ ಅದನ್ನು ಆಕ್ರಮಣ-ಅತಿಕ್ರಮಣ ಎಂಬ ಹಣೆಪಟ್ಟಿಯನ್ನಿಟ್ಟೇಕೆ ನೋಡುತ್ತೇವೆ?

ಪ್ರತಿಯೊಂದರಲ್ಲೂ ಜೀವವಿರುತ್ತದೆ ನೋಡುವ ಕಣ್ಣುಗಳಿದ್ದರೆ - ನಾವು ನಮ್ಮೊಳಗಿನ ಪ್ರಪಂಚದಲ್ಲೇ ಹೂತು ಹೋಗುವುದರ ಬದಲು ನಮ್ಮ ನೆರೆಹೊರಯನ್ನು ವೀಕ್ಷಿಸಿದಲ್ಲಿ ನಿಸರ್ಗದ ಒಂದು ಚಕ್ರ ಉರುಳತಲೇ ಇರುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಭುವಿಯನ್ನು ಬೆಳಗಿ ಹುಣ್ಣಿಮೆ ಚಂದ್ರ ಬರುತ್ತಾನೆ, ಒಂದು ದಿನವೂ ತಪ್ಪಿಸದೇ ಸೂರ್ಯಬರುತ್ತಾನೆ. ಈ ಸೂರ್ಯನ ಕಿರಣಗಳು ದ್ಯುತಿಸಂಶ್ಲೇಷಣೆಗೆ ಇಂಬುಕೊಡುತ್ತವೆ. ಎಂತಹ ಛಳಿ-ಮಳೆ-ಗಾಳಿಯಲ್ಲೂ ಗಿಡಮರಗಳು ಬದುಕಿ ಬಾಳುವುದೂ ಅಲ್ಲದೇ ಬುಡದಿಂದ ಹೀರಿ-ಗ್ರಹಿಸಿದ್ದನ್ನು ತಲೆಯವರೆಗೆ ಏರಿಸುವ ಯಂತ್ರರಹಿತ ತಂತ್ರವನ್ನು ತಮ್ಮೊಳಗಿಟ್ಟುಕೊಂಡಿವೆ. ಯಾರೋ ಉದುರಿಸಿ ಹಾಕಿದರೆಂದು ತಾವು ಕಟ್ಟಿದ ಜೇನುಗೂಡನ್ನು ಸಂರಕ್ಷಿಸಲು ಹೋಗಿ ಜೇನುನೊಣಗಳು ಕುಟುಕಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ, ಅಗಾಧವಾದ ಜೇನು ಹುಳಗಳ ಮಹಾಯಾಗದಲ್ಲಿ ಒಂದೇ ಒಂದು ರಾಣಿ ಜೇನು ಎಲ್ಲ ಕಾರ್ಯಗಳನ್ನೂ ನಿರ್ವಹಿಸಿ ತನ್ನ ದೊಡ್ಡತನವನ್ನು ಮೆರೆಯುತ್ತದೆ. ಈ ಕೀಟ-ಪಕ್ಷಿ-ಸಸ್ಯಗಳ ಇನ್‌ಸ್ಟಿಂಕ್ಟ್ ಏನು? ಅವುಗಳು ನಮ್ಮಂತಹ ನೀಚರ ನಡುವೆ ಬದುಕುವುದಾದರೂ ಹೇಗೆ ಎಂದೆನಿಸೋಲ್ಲವೇ?

ಯಾವುದೇ ವಾತಾವರಣದಲ್ಲಿಯೂ ಕಾರಿನ ವಿಂಡ್‌ಶೀಲ್ಡ್‌ಗೆ ಬಡಿದು ಅನೇಕ ಹುಳ-ಜೀವ-ಜಂತುಗಳ ಜೀವ ಹಾರಿ ಹೋಗುತ್ತದೆ. ಹೀಗೆ ಜೀವ ಇರುವವುಗಳಲ್ಲಿ ಒಂದು ಲೌಕಿಕ ಆತ್ಮವೆನ್ನುವುದು ಇರುವುದೇ ಹೌದಾದರೆ, ಆತ್ಮಕ್ಕೆ ಹಾಗೂ ಶರೀರಕ್ಕೆ ಸಂಬಂಧವೇ ಇಲ್ಲದೇ ಹೋದರೆ ಇರುವೆಯ ಆತ್ಮಕ್ಕೂ ಮಾನವನ ಆತ್ಮಕ್ಕೂ ವ್ಯತ್ಯಾಸವೇನು ಉಳಿಯುತ್ತದೆ ಎನ್ನುವುದು ಈ ಕ್ಷಣದ ಪ್ರಶ್ನೆ ಅಷ್ಟೇ.

ಹಸಿರುಕಟ್ಟಿದ ಪಾಚಿಯ ನೀರಿನ ಹೊಂಡ ಅಥವಾ ಕೊಳ ತನ್ನದೇ ಒಂದು ಸ್ಟೇಟ್‌ಮೆಂಟನ್ನು ಪ್ರಪಂಚಕ್ಕೆ ಪ್ರಚುರಪಡಿಸುತ್ತದೆ. ಪಾಚಿಯ ಕೆಳಗೆ ಮೇಲೆ ಹಾಗೂ ನಡುವೆ ನಡೆಯುತ್ತಿರುವ ಬೇಕಾದಷ್ಟು ಸಾಧನೆಗಳನ್ನು ನಾವು ಗಮನಿಸೋದೇ ಇಲ್ಲ. ನಮಗೆಲ್ಲ ನಮ್ಮ ನಮ್ಮ ಪ್ರಪಂಚವೇ ದೊಡ್ಡದು, ಅದರ ಸುತ್ತಮುತ್ತಲೇ ಎಲ್ಲವೂ ಸುತ್ತೋದು ಎಂದು ಪಿಚ್ಚೆನಿಸುತ್ತದೆ. ಪಾಚಿಯನ್ನು ಫೋಟೋ ತೆಗೆಯೋಣವಾ ಎಂದು ಒಮ್ಮೆ ಕ್ಯಾಮೆರಾಕ್ಕೆ ಕೈ ಚಾಚುತ್ತದೆ, ಎಲ್ಲವನ್ನೂ ಫೋಟೋ ಹೊಡೆದೂ ಹೊಡೆದೂ ನನ್ನ ಸಂಗ್ರಹಿಸಬೇಕು ಎನ್ನುವ ಸ್ವಾರ್ಥವನ್ನು ಮೊಟ್ಟಮೊದಲ ಸಾರಿ ಗೆದ್ದೆನೆಂಬ ಹರ್ಷವನ್ನು ಕಣ್ಣುಗಳು ಪ್ರತಿಬಿಂಬಿಸ ತೊಡಗುತ್ತವೆ.