ಮಾತು-ಮೌನ
ಇವತ್ತು ಬಿಜೆ'ಸ್ ನಲ್ಲಿ ಸಾಮಾನ್ಯವಾಗಿ ವಾರದ ಶಾಪ್ಪಿಂಗ್ ಮಾಡ್ತಾ ಇದ್ದವನಿಗೆ ನನ್ನ ಹಿಂದೆ ಯಾರೋ ಮಾತನಾಡಿಸಿದಂತಾಯಿತು, ತಿರುಗಿ ನೋಡಿದೆ ಒಬ್ಬ ಸ್ಥಳೀಯ ಅಮೇರಿಕನ್ ಹುಡುಗಿ ತನ್ನ ಶಾಪ್ಪಿಂಗ್ ಕಾರ್ಟನ್ನು ತಳ್ಳಿಕೊಂಡು ಮಾತನಾಡಿಕೊಂಡು ಬರುತ್ತಿದ್ದಳು, ಬಹಳ ಸಭ್ಯಸ್ಥಳಾಗಿದ್ದಂತೆ ಕಂಡು ಬರುತ್ತಿದ್ದ ಹುಡುಗಿ ಸುಮ್ಮನೇ ತನ್ನಷ್ಟಕ್ಕೆ ತಾನೇ ಏನೋ ಹೇಳಿಕೊಂಡಿರಬೇಕೆಂದು ನನ್ನಷ್ಟಕ್ಕೆ ನಾನು ಸುಮ್ಮನಿದ್ದೆ. ಮತ್ತೆ ಪುನಃ ಒಂದು ಐದು ಕ್ಷಣದ ನಂತರ ಆಕೆಯದೇ ಮಾತುಕೇಳಿತು, ಈ ಬಾರಿ ಸ್ಪಷ್ಟವಾಗಿ When do I expect to see you? ಎಂದು ಕೇಳಿಸಿತು, ನಾನು ಮತ್ತೆ ಹಿಂತಿರುಗಿ ನೋಡಿದೆ, ಕೈಯಲ್ಲಿ ಸೆಲ್‌ಫೋನ್ ಸಹ ಇಲ್ಲವಾದ್ದರಿಂದ ಯಾರನ್ನು ಕುರಿತು ಈ ಮಾತುಗಳನ್ನು ಹೇಳುತ್ತಿರಬಹುದು ಎಂದು ಕುತೂಹಲ ಮೂಡಿದ್ದರಿಂದ ನಾನು ಅಲ್ಲಿಯೇ ನಿಂತೆ, ಆಕೆ ಹಾಗೇ ಮಾತನಾಡುತ್ತಲೇ ಮುಂದೆ ಹೊರಟುಹೋದಳು. ಆಗ ನನ್ನ ಪಕ್ಕನೆ ಹೊಳೆಯಿತು, ಆಕೆಯ ಸೆಲ್ ಫೋನ್ ಬ್ಯಾಗ್‌ನಲ್ಲಿದೆ, ಆಕೆ ಬ್ಲೂ ಟೂಥ್ ಸಹಾಯದಿಂದ ವೈರ್‌ಲೆಸ್‌ನಲ್ಲಿ ಕೇಬಲ್‌ಲೆಸ್ ಆಗಿ ಮಾತನಾಡುತ್ತಿದಾಳೆ ಎಂದು. ಆಕೆ ನನ್ನ ಹಾಗೆ ಇನ್ನೆಷ್ಟೋ ಜನಕ್ಕೆ ಗೊಂದಲವನ್ನು ಹುಟ್ಟಿಸಿರಲಿಕ್ಕೆ ಸಾಕು, ಅಥವಾ ಇಂತದ್ದನ್ನೆಲ್ಲ ಅರ್ಥ ಮಾಡಿಕೊಳ್ಳುವಲ್ಲಿ ನಾನೇ ನಿಧಾನವಾಗಿ ಹೋಗಿದ್ದೇನೆಯೋ ಎಂದು ಒಮ್ಮೆ ಸಂಶಯವೂ ಹುಟ್ಟಿತು.
ಅಂದಹಾಗೆ ನೀವೆಲ್ಲ ಒಬ್ಬೊಬ್ಬರೇ ಇದ್ದಾಗ ಮಾತನಾಡಿಕೊಳ್ಳುತ್ತೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ನನ್ನಷ್ಟಕ್ಕೆ ಏನಾದರೊಂದನ್ನು ಆಗಾಗ್ಗೆ ಗೊಣಗಿಕೊಳ್ಳುತ್ತಿರುತ್ತೇನೆ. ವಿಶೇಷತಃ ನಾನೊಬ್ಬನೇ ಡ್ರೈವ್ ಮಾಡಿಕೊಂಡು ಎಲ್ಲಿಗಾದರೂ ದೂರ ಹೋಗುತ್ತಿರುವಾಗ ನನ್ನ ಮತ್ತು ಎದುರಿನ ವಿಂಡ್‌ಶೀಲ್ಡ್ ನಡುವಿನ ಅವಕಾಶದಲ್ಲಿ ಹುಟ್ಟುವ ಬೇಕಾದಷ್ಟು ಸನ್ನಿವೇಶಗಳಿಗೆ ನಾನು ಧ್ವನಿಯಾಗಿದ್ದೇನೆ, ಅದರ ಜೊತೆಯಲ್ಲಿ ಹಿಮ್ಮೇಳದಂತೆ ಆಗಾಗ್ಗೆ ಹಿಂತಿರುಗಿ ನೋಡುವ ಪುಟ್ಟ ಕನ್ನಡಿಯ ತಾಳವೂ ಸೇರಿಕೊಳ್ಳುತ್ತದೆ. ಹೆಚ್ಚಿನ ಮಾತುಗಳು ರಚನಾತ್ಮಕ ಪ್ರಕ್ರಿಯೆಯ ಒಂದು ಹಂತವಾಗಿ ಧ್ವನಿಯನ್ನು ಪಡೆದರೆ, ಇನ್ನು ಕೆಲವು ಮಾಡಿದ ಏನೋ ತಪ್ಪಿಗೆ, ಅಥವಾ ಹೀಗೆ ಮಾಡಬಾರದಾಗಿತ್ತೇ ಎಂದು ಸ್ಟಿಯರಿಂಗ್ ವ್ಹೀಲ್ ಕುಟ್ಟುವ ಶಬ್ದಕ್ಕೆ ತಕ್ಕನಾಗಿ 'ಶಿಟ್ಟ್...' ಆಗಿ ಪರಿವರ್ತನೆ ಹೊಂದುತ್ತವೆ. ಆದರೆ ಒಬ್ಬೊಬ್ಬರೇ ಮಾತನಾಡಬಾರದು ಎಂದೇನೂ ಕಾನೂನಿಲ್ಲವಲ್ಲ, ಅಲ್ಲದೇ ನಾವು ಮಾತನಾಡುವುದು ಯಾವಾಗಲೂ ಇನ್ನೊಬ್ಬರ ಜೊತೆಯೇ ಏಕಾಗಬೇಕು? ಎಷ್ಟೋ ಸಾಕುಪ್ರಾಣಿಗಳು, ನಿರ್ಜೀವ ವಸ್ತುಗಳು ನಮ್ಮ ಮಾತಿಗೆ ಪ್ರತ್ಯುತ್ತರ ಕೊಡಲಾರವು ಎಂದು ಗೊತ್ತಿದ್ದರು ನಾವು ಅವುಗಳ ಜೊತೆಯಲ್ಲೆಲ್ಲ ಸಂವಾದಕ್ಕೆ ಇಳಿಯುವುದಿಲ್ಲವೇ (ದೇವರ ವಿಗ್ರಹವೂ ಸೇರಿ)? ಹಾಗೇ, ನನ್ನ ಮಾತುಗಳಿಗೆ ಕಾರಿನೊಳಗಿನ ಆಯಾಮದಲ್ಲಿ - ಕುಡಿದ ಕಾಫಿ ಅಥವಾ ಚಹಾದ ಪರಿಣಾಮಕ್ಕೆ ತಕ್ಕಂತೆ - ಒಂದಿಷ್ಟು ಮಾತುಗಳು ಹೊರಬಂದೇ ಬರುತ್ತವೆ. ಎಷ್ಟೋ ಸಾರಿ ಅಪ್ಯಾಯಮಾನವಾಗಿ, ಹೃದಯಕ್ಕೆ ಹತ್ತಿರವಾಗಿ ಹುಟ್ಟಿಬರುವ ಈ ಮಾತುಗಳು ನನಗೇ ಪ್ರಿಯ, ಅಲ್ಲದೇ ಬೇರೆ ಯಾರೊಡನೆಯಾದರೂ ಈ ರೀತಿ ಮಾತನಾಡಬೇಕು ಎಂದುಕೊಂಡರೆ ಒಂದೇ ಭಾಷೆಯೋ ಭಾಂಧವ್ಯದ ಕೊರತೆಯೋ, ಇನ್ಯಾವುದೋ ಒಂದು ಅಡ್ಡಿ ಬಂದೇ ಬರುತ್ತದೆ.
ಹೀಗೆ ಒಬ್ಬೊಬ್ಬರೇ ಮಾತನಾಡಿಕೊಳ್ಳುವ ಪರಿಪಾಟ ಇಂದು ನಿನ್ನೆಯದಲ್ಲ, ಅಲ್ಲದೇ ನನಗೊಬ್ಬನಿಗೆ ಅಂಟಿದ ರೋಗರುಜಿನಾದಿವ್ಯಸನವೂ ಅಲ್ಲ - ಹಿಂದಿಯ ಮೈಥಿಲಿಶರಣ ಗುಪ್ತರು ತಮ್ಮ 'ಪಂಚವಟಿ' ಮಹಾಕಾವ್ಯದಲ್ಲಿ ಲಕ್ಷ್ಮಣ ಸೀತೆಯನ್ನು ಹಗಲು-ರಾತ್ರಿ ಕಾಯುತ್ತಿರುವಾಗ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿದ್ದ ಎಂದು ವರ್ಣಿಸಿದ್ದಾರೆ. ಅಂದರೆ ನನ್ನಂತಹವರ ಈ ಗುಂಪಿನಲ್ಲಿ ರಾಮಾಯಣದ ಲಕ್ಷ್ಮಣನಿದ್ದಾನೋ ಇಲ್ಲವೋ ಗೊತ್ತಿಲ್ಲ, ಆದರೆ ಅವನನ್ನು ಚಿತ್ರಿಸಿದ ಕವಿಗಳಿದ್ದಾರೆ ಹಾಗೇ ಮನದೊಳಗಿನ ಪ್ರಪಂಚದ ವ್ಯಾಪಾರದಲ್ಲಿ ತಮ್ಮ ಮನಸ್ಸನ್ನು ಒಂದು ಕ್ಷಣವಾದರೂ ಹುದುಗಿಸಿಕೊಂಡು ತಮ್ಮನ್ನು ಮರೆಯುವ ಎಲ್ಲರೂ ಸೇರಿಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವುದನ್ನು 'ಹುಚ್ಚು' ಎಂದು ವರ್ಗೀಕರಣ ಮಾಡಲು ಮಾತ್ರ ಹೋಗಬೇಡಿ - ಏಕೆಂದರೆ ನನ್ನ ಪ್ರಕಾರ 'ಹುಚ್ಚು' ಹಿಡಿದವರಿಗೆ ತಮಗೆ ಹುಚ್ಚು ಹಿಡಿದಿದೆ ಎಂದು ಗೊತ್ತಿರೋದಿಲ್ಲ, ಅಕಸ್ಮಾತ್ ಅಂತವರಿಗೆ ಹುಚ್ಚು ಹಿಡಿದಿದೆ ಎಂದು ಗೊತ್ತಾದ ತಕ್ಷಣ ಹಿಡಿದ ಹುಚ್ಚು ಬಿಟ್ಟು ಹೋಗುತ್ತದೆ. ಆದ್ದರಿಂದಲೇ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವವರು ಹುಚ್ಚರಾಗಬೇಕೆಂದೇನೂ ಇಲ್ಲ, ಆದರೆ ಅಂತಹವರ ಜೊತೆಯಲ್ಲಿ ವ್ಯವಹರಿಸುವಾಗ ಅವರವರ ರಕ್ಷಣೆ ಅವರವರದು - ಎಷ್ಟು ಹೊತ್ತಿನಲ್ಲಿ ಎಲ್ಲಿಂದ ಏನೇನು ಬರುತ್ತದೆ ಎಂದು ಯಾರಿಗೆ ಗೊತ್ತು!
ಮಾತು ಮೌನವನ್ನು ಸೀಳಿಬರುತ್ತದೆ ಎಂದು ಬೇಕಾದಷ್ಟು ಕಡೆ ಓದಿದ್ದೇನೆ, ಆದರೆ ಮೌನ ಮಾತನ್ನು ಕಟ್ಟಿ ಹಾಕುತ್ತದೆ ಎನ್ನುವುದು ನನ್ನ ಅಭಿಮತ. ಮಾತು ಬಂಗಾರ, ಮೌನ ಬೆಳ್ಳಿ, ಅಲ್ಲದೇ talk more - work less ಎನ್ನುವುದು ನನ್ನ ಹೊಸ ಜಾಣ್ಣುಡಿ. ಏಕೆಂದರೆ ನಿಮಗೆ ಯಾವುದಾದರೊಂದು ಕೆಲಸವನ್ನು ಅಸೈನ್ ಮಾಡಿದ್ದರೆ ಅದರ ಬಗ್ಗೆ ಸಾಧ್ಯವಾದಷ್ಟು ಎಲ್ಲ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಸಂಪೂರ್ಣವಾಗಿ ಮನನಮಾಡಿಕೊಂಡು ಅನಂತರ ಕೆಲಸವನ್ನು ಶುರು ಮಾಡಿದರೆ ಮುಂದೆ ಪದೇ-ಪದೇ ಬಂದೂ-ಹೋಗಿ, ಪ್ರಶ್ನೆಗಳನ್ನು ಕೇಳಿ ಮಾಡಿದ ಕೆಲಸಕ್ಕೆ ತೇಪೆ ಹಚ್ಚುವುದು ತಪ್ಪೀತು. ಅಥವಾ ಒಂದು ವೇಳೆ ನನಗೆ ಯಾವುದಾದರೂ ಕೆಲಸದಲ್ಲಿ ಅಷ್ಟೊಂದು ಸರಿಯಾದ ಮಾಹಿತಿ ಇಲ್ಲದಿದ್ದಾಗ ಪ್ರಶ್ನೆಗಳನ್ನು ಕೇಳುವುದರ ಮೂಲಕ - ಅಲ್ಲಲ್ಲಿ ಚರ್ಚಿಸುವುದರ ಮೂಲಕ - ಅಂದರೆ ಮಾತನ್ನು ಹೆಚ್ಚು ಆಡುವುದರ ಮೂಲಕ ಎಷ್ಟೋ ವಿಷಯಗಳನ್ನು ಬಗೆ ಹರಿಸಿಕೊಂಡಿದ್ದೇನೆ. ತಪ್ಪೋ-ಸರಿಯೋ ಮಾತನಾಡುವವರು ಜಾಣರು, ಗುಮ್ಮನಕುಸಕರ ಹಾಗೆ ಮನಸ್ಸಿನಲ್ಲೇ ಮಂಡಿಗೆ ತಿನ್ನುವವರು ಮತ್ತೇನೋ ಒಂದು ತರಹ.
ಮಾತನಾಡಬೇಕು, ಆಡಿದಂತೆ ನಡೆಯಬೇಕು ಅದಪ್ಪಾ ಬದುಕು, ಮಾತನಾಡದೇ ಬರೀ ಸೋಗನ್ನು ಹಾಕಿಕೊಂಡು ಬದುಕಿದರೆ ಅದರಲ್ಲಿ ಯಾವ ಸ್ವಾರಸ್ಯ ಯಾರಿಗೆ ಕಂಡಿದೆಯೋ ಯಾರು ಬಲ್ಲರು? ಮಾತನ್ನು ಕೊಡಬಹುದು, ಹಂಚಬಹುದು - ಮೌನವನ್ನಲ್ಲ - ಮಾತಿನಲ್ಲಿ ಸಂಭ್ರಮದಿಂದ ಶೋಕದವರೆಗೆ ಏನೇನೆಲ್ಲ ಭಾವನೆಯನ್ನು ಬಯಲುಮಾಡಬಹುದು, ಆದರೆ ಮೌನದ್ದು ಯಾವಾಗಲೂ ಒಂದೇ ಸೋಗು, ಅದೇ ರಾಗ. ಮಾತು ಅನ್ನೋದು ಅರುಳು ಹುರಿದಂತಾಗಬಹುದು, ಮೌನ ಎನ್ನೋದು ಆಶಾಡದ ಕಪ್ಪು ಛಾಯೆ. ಮಾತಿನಿಂದ ಕೋಟೆಗಳು ಬಿದ್ದಿವೆ, ಊರುಗಳು ಗೆದ್ದಿವೆ, ಮೌನದಿಂದ ಇನ್ನೊಬ್ಬರ ಮನದಲ್ಲಿ ಮಹಲುಗಳು ನಿಂತಿವೆಯೇ ಹೊರತು ಏನನ್ನೂ ಭೌತಿಕವಾಗಿ ಕಟ್ಟಿದಂತಿಲ್ಲ. ಮಾತಿನ ಮಲ್ಲರು ಕೆಲವರು, ಮುಂದುವರಿದ ದೇಶಗಳು ಏನನ್ನು ಮಾಡುತ್ತವೆಯೋ ಬಿಡುತ್ತವೆಯೋ ಇಂತಹ ಮಲ್ಲರನ್ನು ಬಹಳಷ್ಟು ಹುಟ್ಟುಹಾಕಿವೆ - ಇವರು ತಮ್ಮ ಮೋಡಿಯಿಂದ ಎಂತಹವರನ್ನೂ ಕಟ್ಟಿಹಾಕಬಲ್ಲರು.
ನೋಡಿದ್ರಾ, ತನ್ನ ಸುಂದರ ಕೇಶರಾಶಿಯ ನಡುವೆ ನೀಲಿಹಲ್ಲಿನ (ಬ್ಲೂ ಟೂಥ್) ತಂತ್ರಜ್ಜಾನದಿಂದ ಮಾತನಾಡಿದ್ದಕ್ಕೆ ನಾನು ನನ್ನ ಮೌನವನ್ನು ಸೀಳಿ ಇಷ್ಟೊಂದನ್ನು ಬರೆಯುವ ನಡುವೆ ಎಷ್ಟೊಂದನ್ನು ಆಡಿಕೊಳ್ಳುವಂತಾಯಿತು. ಅಕಸ್ಮಾತ್ ಈ ಲೋಕದಲ್ಲಿ ಎಲ್ಲರ ನಾಲಿಗೆಯೂ ಬಿದ್ದೇನಾದರೂ ಹೋದರೆ ಆ ಕರಾಳ ದಿನ ಹೇಗಿರಬಹುದು, ಆ ಮೌನ ಅದೆಷ್ಟು ಭಯಂಕರವಾಗಿರಬಹುದು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ!