Tuesday, February 09, 2010

ಬೀಳದೇ ಏಳೋದಾದರೂ ಹೇಗೆ?

ಹೀಗೇ ಒಂದು ಛಳಿಗಾಲದ ದಿನ, ಮಧ್ಯಾಹ್ನ ಆಗಿ ಸಂಜೆ ನಾಲ್ಕು ಘಂಟೆ ಹೊತ್ತಿಗೆಲ್ಲಾ ಅದನ್ನು ದಿನ ಎನ್ನಬೇಕೋ, ಕತ್ತಲು ಎನ್ನಬೇಕೋ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದಾದಂತಹ ಮಸುಕು ಮುಸುಕಿದ ಮುಸ್ಸಂಜೆ. ಈಗಲೋ ಆಗಲೋ ಉಸಿರು ಕಳೆದುಕೊಂಡು ಹೋಗೇ ಬಿಟ್ಟ ಎನ್ನುವ ಸೂರ್ಯನನ್ನು ಸಂತೈಸುವ ಹಾಗೆ ಅಲ್ಲಲ್ಲಿ ಬಿದ್ದುಕೊಂಡು ಛಳಿಗೆ ಗಟ್ಟಿಯಾಗಿ ಮುಖ ಸಿಂಡರಿಸಿಕೊಂಡ ಹಿಮದ ತುಕುಡಿಗಳು ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಬೆಳಕಿನ ಸೈನಿಕರ ಉತ್ಸಾಹ ಕತ್ತಲಿನ ಶತ್ರುಗಳ ಎದುರು ಸಂಪೂರ್ಣವಾಗಿ ಕಳೆದು ಹೋಗದ ಹಾಗೆ ಕಾಪಾಡಿಕೊಂಡಿದ್ದವು. ಯಾವತ್ತಿನಂತೆ ರಸ್ತೆಗಳು ಊರ್ಧ್ವಮುಖಿಗಳಾಗಿ ತಮ್ಮನ್ನು ತಾವು ಸೇವೆಗೆ ಒಪ್ಪಿಸಿಕೊಂಡಿದ್ದರೂ ಕಪ್ಪಗಿನ ರಸ್ತೆಗಳ ಮೇಲೆ ಬೂದಿ ಬಳಿದುಕೊಂಡ ಹಾಗಿನ ಛಾಯೆ ಯಾಕೋ ಮುಂಬರುವ ಕೆಟ್ಟದ್ದನ್ನು ತಾವು ಬಲ್ಲೆವು ಎಂಬಂತೆ ಅಜ್ಜ-ಮುತ್ತಾತರ ಭಂಗಿಯಲ್ಲಿ ಇದ್ದವು. ನಮ್ಮ ಮನೆಯ ಡ್ರೈವ್‌ ವೇ ತನ್ನ ಮೇಲಿನ ಅರ್ಧ ಇಂಚು ದಪ್ಪಗಿನ ಐಸ್ ಲೇಯರ್‌ನ್ ಅವಶೇಷಗಳಡಿಯಲ್ಲಿ ಸಮಾಧಿಯಾಗಿತ್ತು, ನಮ್ಮ ಮನೆಯ ಮೇಲ್ ಬಾಕ್ಸ್ Mohawk Indian ಹೇರ್ ಸ್ಟೈಲ್ ಮಾಡಿಕೊಂಡು ತನ್ನ ಮೇಲೆ ಒಂದು ರೀತಿಯ ಚೂಪನೆ ಐಸ್ ಪದರವನ್ನು ನಿರ್ಮಿಸಿಕೊಂಡಿತ್ತು, ಅದರ ಬುಡದಲ್ಲಿ ಲಾಲಿ ಪಾಪ್ ನೆಕ್ಕಿ ಬಣ್ಣದ ಜೊಲ್ಲು ಸುರಿಸುವ ಮುಗ್ಧ ಮಗುವಿನಂತೆ ಬಿಸಿಲಿಗೆ ಕರಗಿ ಐಸ್ ನೀರಾಗುತ್ತ ನೀರಾಗುತ್ತ ಹನಿಗಳು ಅಲ್ಲಲ್ಲಿ ಹೆಪ್ಪು ಕಟ್ಟಿಕೊಂಡು ಮೇಲ್ ಬಾಕ್ಸ್ ಸಂರಕ್ಷರ ಹಾಗಿನ ಚೂಪುಗಳನ್ನು ನಿರ್ಮಿಸಿಕೊಂಡಿದ್ದವು.

ಬ್ಲ್ಮೂಮ್‌ಬರ್ಗ್ ರೆಡಿಯೋದಲ್ಲಿ ಮಾರ್ಕೆಟ್ ಬಿದ್ದ ಬಗ್ಗೆ ಅರಚಿಕೊಳ್ಳುತ್ತಿದ್ದರು, ಈಗಾಗಲೇ ನೀರಲ್ಲಿ ಮುಳುಗಿದೋನಿಗೆ ಮಳೆಯೇನು ಛಳಿಯೇನು ಎನ್ನುವ ಧೋರಣೆಯನ್ನು ತಾಳಿಕೊಂಡ ಜನರಿಗೆ ಇವರೆಲ್ಲ ಮತ್ತಿನ್ನಷ್ಟು ಹೆದರಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರಲ್ಲ ಎನ್ನಿಸಿತು. ಈ ಅರಚುವ ರೆಡಿಯೋ ಧ್ವನಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ’ಬಿಸಿಲೇ ಇರಲಿ, ಮಳೆಯೇ ಇರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ…’ ಎನ್ನುವಂತೆ ಎದುರು ಮನೆ ಮಕ್ಕಳು ಕೊರೆಯುವ ಛಳಿಯನ್ನೂ ನಿರ್ಲಕ್ಷಿಸಿ ಸ್ಲೆಡ್ಡಿಂಗ್ ಆಡುತ್ತಿದ್ದರು, ಅವರ ನಗುವಿನಲ್ಲಿ ಯಾವುದೇ ಒತ್ತಡವಿದ್ದ ಹಾಗಿರಲಿಲ್ಲ. ನಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನ ಮರಗಳು ಅಲುಗಾಡಲೂ ಸಂಕೋಚಗೊಂಡವರಂತೆ ಸ್ಥಿರವಾಗಿ ನಿಂತಿದ್ದವು, ನಿತ್ಯಹರಿದ್ವರ್ಣಿಗಳಂತೂ ಈ ಟ್ಯಾಕ್ಸ್ ಸೀಜನ್ನ್‌ನಲ್ಲಿ ಎಲ್ಲಿ ನಕ್ಕರೆ ಅದಕ್ಕೆ ಟ್ಯಾಕ್ಸ್ ಹಾಕಿ ಬಿಡುತ್ತಾರೋ ಎಂದು ಬಾಯನ್ನು ಹೊಲಿದುಕೊಂಡವರಂತಿದ್ದವು.

ಮನೆಯ ಟ್ರ್ಯಾಷ್ ಕ್ಯಾನುಗಳನ್ನು ಎತ್ತಿಡುತ್ತಾ ನಾನು ’ನಿಧಾನವಾಗಿ ನಡೆಯಬೇಕು, ಬಿದ್ದರೆ ಅಷ್ಟೇ ಗತಿ…’ ಎಂದು ಏನೇನೆಲ್ಲ ಮನಸ್ಸಿನ್ನಲ್ಲಿ ಅಂದುಕೊಂಡರೂ, ಅಂದುಕೊಂಡವುಗಳು ಪ್ರಯೋಜನಕ್ಕೆ ಬಾರವು ಏನಿದ್ದರೂ ಕ್ರಿಯಾಶೀಲತೆ ಮುಖ್ಯ ಎನ್ನುವ ವಿಧಿ ಕಣ್ಣು ತೆಗೆದು ಕಣ್ಣು ಬಿಡುವಷ್ಟರಲ್ಲಿ ನನ್ನ ಕಾಲುಗಳು ತಲೆಗಿಂತ ಮೊದಲು ಹೋಗತೊಡಗಿ ದೊಪ್ಪನೆ ಜಾರಿ ಬಿದ್ದದ್ದಾಯಿತು. ಕೈ ಊರಿ ಎದ್ದು, ಮೈ ಕೈ ಕೊಡವಿಕೊಂಡು ಸುಧಾರಿಸಿಕೊಳ್ಳೂತ್ತಾ ಸದ್ಯ ಯಾವುದೇ ಎಲುಬು ಮುರಿಯಲಿಲ್ಲ ಎಂದು ಸಮಾಧಾನ ಪಡುವಂತಾಯಿತು. ಕತ್ತಲಿನ ದಯೆಗೆ ನಾನು ನೆಲಕ್ಕೆ ಅಪ್ಪಳಿಸಿದ ದೃಷ್ಯ ಜನಜನಿತವಾಗಲಿಲ್ಲ. ನೆಲದಲ್ಲಿನ ಐಸ್ ಪದರ ನಮಗೇನೂ ಆಗಿಲ್ಲ ಎಂದು ಬೀಗಿದಂತೆ ಕಾಣಿಸಿತು. ನಾನು ಚೆಲ್ಲಾ ಪಿಲ್ಲಿಯಾದ ಟ್ರ್ಯಾಷ್ ಕ್ಯಾನ್‌ಗಳನ್ನು ಮತ್ತೆ ಎತ್ತಿಟ್ಟು ಕೆಲಸ ಮುಂದುವರೆಸಿದೆ.

ಈ ಏಳು-ಬೀಳುಗಳು ಸಹಜ, ಆದರೆ ವಯಸ್ಸಾಗುತ್ತಾ ಬಂದ ಹಾಗೆ ಬೀಳುಗಳ ಬಗ್ಗೆ ಗಮನಕೊಡಬೇಕಾಗುತ್ತದೆ, ಎಲ್ಲ ಬೀಳುಗಳೂ ಏಳುಗಳಲ್ಲಿ ಕೊನೆಯಾಗಬೇಕು ಎಂದೇನೂ ಇಲ್ಲ. ಬಹಳ ಸರಳವಾದ ಸಿದ್ಧಾಂತ, ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವುದು ಸರಿ, ಆದರೆ ಹೆಚ್ಚಿನ ರಿಟರ್ನ್ ಬಯಸಿದಂತೆ ಅಲ್ಲಿ ರಿಸ್ಕ್ ಹೆಚ್ಚಾಗುತ್ತದೆ, ಎಲ್ಲರಿಗೂ ಎಲ್ಲ ರಿಸ್ಕ್ ಟೇಕಿಂಗ್ ಸ್ಟ್ರಾಟೆಜಿ ಅನ್ವಯಿಸುವುದಿಲ್ಲ, ಕೆಲವೊಮ್ಮೆ ಸೇಫ್ಟಿ ಫರ್ಸ್ಟ್ ಎಂದುಕೊಂಡು ಯಾವುದು ನಮ್ಮ ಹಿತರಕ್ಷಣೆಯನ್ನು ಮಾಡಬಹುದೋ ಅಂತಹ ಹೂಡಿಕೆಯನ್ನು ಮಾಡುವುದು ಒಳ್ಳೆಯದು. ಇವೆಲ್ಲ ಗುಡ್ ಎಕನಾಮಿಕ್ಸ್ ಇಂಡಿಕೇಟರುಗಳು, ಹೂಡಿಕೆಯ ಮೂಲಭೂತ ಅಂಶಗಳು – ಇವುಗಳ ಬಗ್ಗೆ ಅದೆಷ್ಟೇ ಪಬ್ಲಿಷ್ ಆಗಿದ್ದರೂ ಸಹ ಬೀಳುವವರು ಮಾತ್ರ ಕಡಿಮೆಯಾಗೋದಿಲ್ಲ. ಅದರಲ್ಲೂ ನನ್ನಂತಹವರು ಎಲ್ಲವನ್ನು ತಮ್ಮಷ್ಟಕ್ಕೇ ತಾವೇ ಅನುಭವಿಸಿ ನೋಡುತ್ತೇವೆ ಎಂದು ಕಂಕಣ ತೊಟ್ಟುಕೊಂಡಿರುವಾಗ…ಯಾವ ಉಪದೇಶ ಎಲ್ಲಿಯ ಲೆಕ್ಕ ಬಿಡಿ. ಬೀಳದೇ ಏಳೋದಾದರೂ ಹೇಗೆ? ಒಮ್ಮೆ ಬಿದ್ದ ಅನುಭವದ ಲೆಕ್ಕಕ್ಕೆ ಮತ್ತೆ-ಮತ್ತೆ ಮೇಲೆ ಹೋಗುವ ರಿಯಾಯತಿ ಸಿಗಬಹುದೇ? ಬಿದ್ದರೆ ಮಾತ್ರ ಏಳಲು ಬಿಡುತ್ತೇನೆ ಎನ್ನುವ ಆಟದ ನಿಯಮಗಳನ್ನು ಯಾರು ಬರೆದವರು? ಅದನ್ನೇಕೆ ನಾವು ಒಪ್ಪಿಕೊಳ್ಳಬೇಕು? ಈ ಒಪ್ಪಿಕೊಳ್ಳದ ನಿಯಮಕ್ಕೆ ಬೀಳುವ-ಏಳುವ ಅನುಪಾತಗಳನ್ನಾದರೂ ಸಮತೂಕ ಮಾಡಬೇಕು ಎನ್ನುವ ಹಂಬಲವೇಕಿಲ್ಲ? ಕೆಟ್ಟ ಮೇಲೆ ಬುದ್ದಿ ಬಂದದ್ದು ಎಲ್ಲಿ ಹೋಯಿತು, ಅದು ಮತ್ತೆ-ಮತ್ತೆ ನಮ್ಮನ್ನು ಬೀಳದಂತೆ ತಡೆಹಿಡಿಯೋದರಲ್ಲಿ ವಿಫಲವಾಗೋದೇಕೆ?

ಬಿದ್ದರೆ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವ ಮಧ್ಯಮ ವರ್ಗದ ಕೊರಗುಗಳು ಎದ್ದ ಮೇಲಾಗಬಹುದಾದ ಸಂಭ್ರಮದ ಸಂತೋಷವನ್ನು ಕಸಿದುಕೊಂಡು ಬಿಡುತ್ತವೆ. ನೆಲವನ್ನು ಬಿಟ್ಟು ಮೇಲೇರದ ಮಧ್ಯಮ ವರ್ಗದ ಬಂಧನಗಳು ಎದ್ದು ಹಾರಾಡಬಹುದಾದ ಮನದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ ಗೂಟಕ್ಕೆ ಕಟ್ಟಿದ ತುಡುಗು ದನದ ಮೂಗುದಾರದಂತೆ ಸುತ್ತಿಕೊಂಡುಬಿಡುತ್ತವೆ. ಇವತ್ತಿಲ್ಲದಿದ್ದರೆ ನಾಳೆ, ಇಂದಲ್ಲದಿದ್ದರೆ ಮುಂದೆ ಎನ್ನುವ ಆಶಾವಾದ ತಿಪ್ಪೆ ಸಾರುವ ಸಗಣಿಯಾಗುತ್ತದೆ. ಮುಂದಿನ ಜನ್ಮದಲ್ಲಿ ಮಾಡಿದರೆ ಆಯಿತು ಎನ್ನುವುದು ನನಗದು ಬೇಕೇ ಬೇಕು ಎಂದು ಹಠ ಹಿಡಿದ ಮಗುವಿಗೆ ನಾಳೆ ಕೊಡುತ್ತೇನೆ ಎಂದು ಸಾಂತ್ವನ ಹೇಳುವ ಒಣ ತತ್ವವಾಗುತ್ತದೆ. ಏನೆಲ್ಲವನ್ನು ಮಾಡಬೇಕು ಎನ್ನುವ ಉನ್ಮಾದ ಏನೂ ಮಾಡಿಲ್ಲವಲ್ಲ ಎನ್ನುವ ಉದ್ವೇಗದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹದ ನೀರಿನ ಒಂದು ಭಾಗವಾಗುತ್ತದೆ. ಅವರವರ ತೂಕಕ್ಕೆ ಅವರವರ ಸಾಮರ್ಥ್ಯಕ್ಕೆ ಬೀಳದೇ ಎದ್ದೋ ಅಥವಾ ಎದ್ದು ಬಿದ್ದೋ ನೆಲೆ ನಿಲ್ಲಿಸುವ ಗುರುತ್ವಾಕರ್ಷಣ ಶಕ್ತಿ ಈ ಹೊತ್ತಿನ ತತ್ವದ ಮಹಾ ಲೆವೆಲ್ಲರ್ ಆಗಿಬಿಡುತ್ತದೆ.

5 comments:

ಸಾಗರದಾಚೆಯ ಇಂಚರ said...

ಕೆಳಗಿನ ಮಾತುಗಳು

ನೆಲವನ್ನು ಬಿಟ್ಟು ಮೇಲೇರದ ಮಧ್ಯಮ ವರ್ಗದ ಬಂಧನಗಳು ಎದ್ದು ಹಾರಾಡಬಹುದಾದ ಮನದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ ಗೂಟಕ್ಕೆ ಕಟ್ಟಿದ ತುಡುಗು ದನದ ಮೂಗುದಾರದಂತೆ ಸುತ್ತಿಕೊಂಡುಬಿಡುತ್ತವೆ.

ಎಷ್ಟು ವಾಸ್ತವವಲ್ಲವೇ?

ಒಳ್ಳೆಯ ಲೇಖನ

ಗೌತಮ್ ಹೆಗಡೆ said...

ಮಧ್ಯಮ ವರ್ಗದ ಬಗ್ಗೆ ನೀವು ಹೇಳಿದ ಮಾತು ನನಗೆ ಯಾಕೋ ಜಾಸ್ತಿ ನಾಟಿತು.ಬಹುಷಃ ನಾನೂ ಅಲ್ಲಿಂದಾನೆ ಬಂದದ್ದು ಕಾರಣವಿರಬೇಕು

AntharangadaMaathugalu said...

ಜೀವನದ ಎಲ್ಲಾ ರಸವತ್ತಾದ ಅನುಭವಗಳೂ ನಮ್ಮಂಥಹ ಮಧ್ಯಮ ವರ್ಗದ ಜನರಿಗೇ ಆಗೋದು.. ಆ ಮಟ್ಟಿಗೆ (ಅನುಭವಗಳ) ನಾವು ಶ್ರೀಮಂತರು !! ಬೀಳದೇ ಇದ್ದರೆ ಏಳುವುದರ ಮಹತ್ವ ಗೊತ್ತೇ ಆಗೊಲ್ಲ... ಸಮಸ್ಯೆಗಳೊಂದಿಗೆ ನಾವು ಬಿದ್ದಾಗ ಏಳಲು ದಾರಿಗಳನ್ನು ಬುದ್ಧಿ ಹುಡುಕಿ ಕೊಡುತ್ತದೆ (ಕೆಟ್ಟ ಮೇಲೆ ಬಂದದ್ದು...).. :-) ನಿಮ್ಮ ವಿಚಾರಗಳು ಬಹಳ ವಾಸ್ತವಿಕವಾಗಿವೆ.. ಧನ್ಯವಾದಗಳು...

KC said...

ಚಳಿಗಾಲದ ವರ್ಣನೆ ತುಂಬಾ ಚೆನ್ನಾಗಿದೆ.
ಈ ಸಾಲು ಇಷ್ಟ ಆಯ್ತು - "ಬಿದ್ದರೆ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವ ಮಧ್ಯಮ ವರ್ಗದ ಕೊರಗುಗಳು ಎದ್ದ ಮೇಲಾಗಬಹುದಾದ ಸಂಭ್ರಮದ ಸಂತೋಷವನ್ನು ಕಸಿದುಕೊಂಡು ಬಿಡುತ್ತವೆ."
-Krupesh

Satish said...

ಸಾ.ಇ.
ಧನ್ಯವಾದಗಳು.

ಗೌತಮ್,
ನಾವೆಲ್ಲರೂ ಅದೇ ವರ್ಗದವರೇ, ಅಲ್ಲೇ ಇರ್ತೀವಿ ಇನ್ನೂ ಸಾಕಷ್ಟು ಜನ್ಮಗಳವರೆಗೆ :-)

ಅ.ಮಾ.
ಧನ್ಯವಾದಗಳು.

ಕೃಪೇಶ,
ಧನ್ಯವಾದಗಳು