Saturday, April 25, 2020

ಎಲ್ಲಾ ಕಸಮಯವೋ!

ಕೊರೋನಾ ವೈರಸ್‌ಗೆ ಸಂಬಂಧಿಸಿದ ಬಿಕ್ಕಟ್ಟನ್ನು ನಾವೆಲ್ಲ ಎದುರಿಸುತ್ತಿರುವಾಗ ಒಂದು ವಿಷಯವನ್ನು ನಮ್ಮ ಅನುಕೂಲಕ್ಕೋಸ್ಕರ ಮರೆತುಬಿಡುತ್ತಿದ್ದೇವೆಂದರೆ ಅದು ನಮ್ಮ ಕಸ ಸಂಸ್ಕರಣೆಯ ವೈಫಲ್ಯ.  ನಮ್ಮ ತಂತ್ರಜ್ಞಾನಗಳು ಅದೆಷ್ಟೇ ಮುಂದುವರೆದರೂ, ಬಾಲ್ಟಿಮೋರ್‌ನಿಂದ ಬೆಂಗಳೂರಿನವರೆಗೆ ನಾವು ಕಸವನ್ನು ಪರಿಷ್ಕರಿಸುವ ರೀತಿಯನ್ನು ನೋಡಿದರೆ ತಿರಸ್ಕಾರ ಮೂಡುತ್ತದೆ.  ಇತ್ತೀಚೆಗೆ I-95ನಲ್ಲಿ ಡ್ರೈವ್ ಮಾಡುತ್ತಾ ಇನ್ನೇನು ಬಾಲ್ಟಿಮೋರ್ ನಗರವನ್ನು ಹೊಕ್ಕುತ್ತಿರುವಂತೆ (ಕಸವನ್ನು ಸುಟ್ಟು) ಗಗನಕ್ಕೆ  ಹೊಗೆಯನ್ನು ಉಗುಳುವ ಹೊಗೆ ಕೊಳವೆಗಳು ನಾವು ಇನ್ನೂ ಜೀವಂತವಿದ್ದೇವೆ ಎಂದು ನೆನಪಿಸಿದವು.  ಅದೇ ರೀತಿ ನೀವು ಭಾರತದ ಯಾವುದೇ ಮಹಾನಗರಕ್ಕೆ ಹೋದರೂ ಕಸದ ಪ್ರಮಾಣ ಮತ್ತು ಸಂಸ್ಕರಣಾ ವಿಧಾನ ಎರಡೂ ನಿಮ್ಮನ್ನು ಹೈರಾಣಾಗಿಸುತ್ತವೆ ಎಂದರೆ ತಪ್ಪೇನಿಲ್ಲ.



ದಿನೇ-ದಿನೇ ಬೃಹದಾಕಾರವಾಗಿ ಬೆಳೆಯುವ ಕಸದ ಪ್ರಮಾಣ ಒಂದು ದಿನ ಇಡೀ ಪ್ರಪಂಚದ ಪ್ರಗತಿಗೇ ಮಾರಕವಾಗಬಹುದೇ ಎಂಬ ಕೊರಗು ಇತ್ತೀಚೆಗೆ ಬಲವಾಗಿ ಕಾಡುತ್ತಿದೆ.

***
ನಮ್ಮ ಆಧುನಿಕ ಬದುಕಿನಲ್ಲಿ ನಾವೇ ಉತ್ಪಾದಿಸಿದ ಸಮಸ್ಯೆಗಳಲ್ಲಿ ಈ ಕಸವೂ ಒಂದು.  ಇದನ್ನ ಕಸ ಅನ್ನಿ, ಟ್ರ್ಯಾಶ್ ಅನ್ನಿ, ಅಥವಾ ರಬ್ಬಿಶ್ ಅನ್ನಿ, ತ್ಯಾಜ್ಯ ಅನ್ನಿ, ಕಲ್ಮಷ ಅನ್ನಿ - ಎಲ್ಲವೂ ಒಂದೇ.   ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದ್ದೇ ಇದೆ, ಆದರೆ ಭಾರತದಲ್ಲಿ ಇದು ಅತಿ ಹೆಚ್ಚು ಎನ್ನಬಹುದು.  ಈಗಿನ ಎಲ್ಲೆಲ್ಲೂ ಕಸವೇ ಕಸ ಎನ್ನುವ ಅಂತಿಮ ಹಂತವನ್ನು ತಲುಪುವಲ್ಲಿ ಸಹಾಯ ಹಸ್ತ ನೀಡಿದ ಪೆಡಂಭೂತಗಳಲ್ಲಿ ಮುಖ್ಯವಾದುವು: ಯದ್ವಾತದ್ವಾ ಬೆಳೆದ ಜನಸಂಖ್ಯೆ, ಎಂಥ ಸಮಸ್ಯೆಗಳನ್ನೂ ಉಲ್ಬಣಗೊಳಿಸಬಲ್ಲ ಜನಸಾಂದ್ರಂತೆ, ಇವೆಲ್ಲಕ್ಕೂ ಮೂಲಭೂತ ಕಾರಣವಾದ ಪ್ಲಾನಿಂಗ್ (ಅಥವಾ ಪ್ಲಾನಿಂಗ್ ಇರದೇ ಇರುವ ಸ್ಥಿತಿ), ಎಂಥ ಸಂದರ್ಭವನ್ನೂ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುವ ರಾಜಕೀಯ ಮುತ್ಸದ್ದಿತನ ಹಾಗೂ ಲಂಚ ಲಂಪಟತನ.

ಭಾರತದವೆಂದರೆ ಬೆಂಗಳೂರೊಂದೇ ಅಲ್ಲ, ಆದರೆ ನಮ್ಮ ಬೆಂಗಳೂರಿಗೆ ಈ ಗತಿ ಬಂದಿರುವಾಗ ಇನ್ನುಳಿದ ನಗರಗಳ ಪಾಲು ಹೇಗಿರಬೇಡ.  ಏಳು (೨೦೧೧) ವರ್ಷಗಳ ಹಿಂದೆ ೮೫ ಲಕ್ಷ ಜನಸಂಖ್ಯೆ ಇದ್ದ ಬೆಂಗಳೂರು ಇಂದು ೧೨೫ ಲಕ್ಷ (೨೦೧೭) ತಲುಪಿದೆ. ಇಲ್ಲಿ ನೂರಕ್ಕೆ ತೊಂಭತ್ತು ಜನ ಅಕ್ಷರಕುಕ್ಷಿಗಳಿದ್ದರೂ ಸಹ, ಇಡೀ ನಗರ ಅನಾಗರೀಕರ ಬೀಡಾಗಿದೆ.  ತಮ್ಮ ಮನೆಯ ಒಳಗನ್ನು ಬೆಳಗಿಕೊಳ್ಳುವ ಜನ, ಹೊರಗನ್ನು ಅದೆಷ್ಟು ಕೊಳಕಾಗಿಟ್ಟುಕೊಂಡಿದ್ದಾರೆಂದರೆ ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ, ಆದ್ದರಿಂದ ಎಲ್ಲರಿಗೂ ಅದು ’ಒಪ್ಪಿಕೊಂಡ’ ಅಥವಾ ’ಒಗ್ಗಿಕೊಂಡ" ವಿಷಯವಾಗಿದೆ.

ಒಂದು ನಗರ ನಿರ್ಮಲೀಕರಣಗೊಳ್ಳ ಬೇಕಾದರೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಚೆನ್ನಾಗಿರಬೇಕು.  ಅಲ್ಲಿ ಬಳಕೆಯಾಗುವ ನೀರನ್ನು ಪರಿಷ್ಕರಿಸಿ ತ್ಯಾಜ್ಯ ಪದಾರ್ಥಗಳನ್ನು ಬೇರ್ಪಡಿಸಿಬೇಕು.  ಇದೇ ರೀತಿ ಕಸವನ್ನು ಸಹ ಪರಿಷ್ಕರಿಸಿ, ರಿಸೈಕಲ್ ಮಾಡಬಹುದಾದವುಗಳನ್ನು ಬೇರ್ಪಡಿಸಿ ರಿಸೈಕಲ್ ಮಾಡಬೇಕು.  ಇವೆಲ್ಲಕ್ಕೂ ವ್ಯವಸ್ಥಿತವಾದ ಸಾಮಾಜಿಕ ಕಾಳಜಿ ಇರಬೇಕು.  ನಗರೀಕರಣ, ಅತಿ ಜನಸಾಂದ್ರತೆಯಿಂದ ನಮ್ಮ ಸಮಸ್ಯೆಗಳು ಹೆಚ್ಚಿ ನಮ್ಮ ಪರಿಸ್ಥಿತಿ ಹೀಗಾಗಿದೆ ಎಂದು ತಳ್ಳಿ ಹಾಕುವಂತಿಲ್ಲ.  ಉದಾಹರಣೆಗೆ, ೯೦ ಲಕ್ಷ ಜನಸಂಖ್ಯೆ ಇರುವ ನ್ಯೂ ಯಾರ್ಕ್ ನಗರ, ಇದಕ್ಕಿಂತಲೂ ನಾಲ್ಕು ಪಟ್ಟು ಜನಸಾಂದ್ರತೆ ಇರುವ ಟೋಕ್ಯೋದಲ್ಲಿ ಜನರು ಬದುಕುತ್ತಿಲ್ಲವೇ? ಅಲ್ಲಿಯೂ ಕಸದ ಸಮಸ್ಯೆ ಇದೆಯೇ ಎಂದು ಯೋಚಿಸಬೇಕಾಗುತ್ತದೆ.

ನಮ್ಮ ಕಸದ ಸಮಸ್ಯೆಗೆ ನಾವು ಏನು ಮಾಡಬೇಕು? ಈ ಹಿಂದೆ ವ್ಯವಸ್ಥಿತವಾದ ಪ್ಲಾನ್ ಇಲ್ಲದೇ ಅಡ್ಡಾದಿಡ್ಡಿಯಾಗಿ ಬೆಳೆದ ನಗರಗಳ ಕನಿಷ್ಠ ಇನ್‌ಫ್ರಾಸ್ಟ್ರಕ್ಚರ್ ಅನ್ನು ಬೆಳೆಸುವುದರ ಜೊತೆಗೆ, ಅಲ್ಲಿ ಎಲ್ಲೆಲ್ಲಿಂದಲೋ ವಲಸೆ ಬಂದು ಸೇರಿಕೊಂಡ ಜನರ ತಿಳುವಳಿಕೆಯನ್ನು ಹೆಚ್ಚಿಸಬೇಕು.  ಜೊತೆಗೆ ತಿರಸ್ಕೃತ ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಸರಿಯಾಗಿ "ವಿನಿಯೋಗಿಸುವ" ಉದ್ಯಮಗಳು ಹಾಗೂ ಅದಕ್ಕೆ ಸೂಕ್ತವಾದ ಟೆಕ್ನಾಲಜಿ ಮತ್ತು ಮಷೀನುಗಳ ಸಹಾಯದಿಂದ ಕಸದ ಪೆಡಂಭೂತವನ್ನು ನಿಯಂತ್ರಿಸಬಹುದು.   ನಾನು ನೋಡಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಈಗ      ಚಾಲ್ತಿಯಲ್ಲಿರುವ ವ್ಯವಸ್ಥೆ ಕಲೆಕ್ಟ್ ಎಂಡ್ ಡಂಪ್.  ಇದು ಹೀಗೇ ಮುಂದುವರೆದರೆ ಇಡೀ ನಗರವೇ ತಿಪ್ಪೇಗುಂಡಿಯಾಗುವುದು ಗ್ಯಾರಂಟಿ.

ಕಸವನ್ನು ಕಲೆಕ್ಟ್ ಮಾಡಿ, ಅದನ್ನು ಸರಿಯಾಗಿ ಬೇರ್ಪಡಿಸಿ, ರಿಸೈಕಲ್ ಮಾಡುವವನ್ನು ಸರಿಯಾದ ಜಾಗಕ್ಕೆ ತಲುಪಿಸಿ, ಕೊಳೆಯುವುದನ್ನು ಕಾಂಪೋಸ್ಟ್ ಆಗಿ ಪರಿವರ್ತಿಸಿ ಮತ್ತೆ ಅವೇ ರಿಸೋರ್ಸುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆ ಆಗುವಂತೆ ನೋಡಿಕೊಳ್ಳುವುದು ತ್ಯಾಜ್ಯವನ್ನು ಪರಿಷ್ಕರಿಸಲು ಇರುವ ಒಂದು ಸಾಲಿನ ಸೂತ್ರ.  ಮೊದಲೆಲ್ಲ ನಮ್ಮಲ್ಲಿ ಪ್ಲಾಸ್ಟಿಕ್ಕುಗಳು ಬಳಕೆಯಾಗುತ್ತಿರಲಿಲ್ಲ.  ಮನೆಗೊಂದು ತಿಪ್ಪೇಗುಂಡಿ ಇರುತ್ತಿತ್ತು, ಅಲ್ಲಿ ದಿನಬಳಕೆಯ ತ್ಯಾಜ್ಯ ಕೊಳೆತು ಗೊಬ್ಬರವಾಗುತ್ತಿತ್ತು. ಹಳೆಯ ಟೂತ್‌ಪೇಸ್ಟ್ ಟ್ಯೂಬುಗಳಿಂದ ಹಿಡಿದು, ಒಡೆದ ಪ್ಲಾಸ್ಟಿಕ್ ಕೊಡಪಾನಗಳ ತುಂಡುಗಳನ್ನು, ಖಾಲಿ ಬಾಟಲುಗಳನ್ನು, ರದ್ದಿ ಪೇಪರುಗಳನ್ನು ದುಡ್ಡು ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದಿಷ್ಟೇ ಅಲ್ಲ, ಹಳೆಯ ಪಾತ್ರೆಗಳನ್ನೂ, ರೇಷ್ಮೆ ಬಟ್ಟೆ ಮೊದಲಾದವುಗಳನ್ನೂ ಸಹ ನಮಗೆ ಗೊತ್ತಾದ ರೀತಿಯಲ್ಲಿ ’ರಿಸೈಕಲ್’ ಮಾಡುತ್ತಿದ್ದೆವು.
ಇಂದಿನ ಆಧುನಿಕ ಜನತೆಗೆ ತಮ್ಮ ತ್ಯಾಜ್ಯವನ್ನು ವಿನಿಯೋಗಿಸಲು ತಾವು ಹಣವನ್ನೇಕೆ ಖರ್ಚು ಮಾಡಬೇಕು ಎಂಬ ಸರಳ ಸತ್ಯ ತಿಳಿಯುತ್ತಿಲ್ಲ?  ನಿಮ್ಮ ಮನೆಯ ಮುಸುರೆಯನ್ನು ತೊಳೆಯುವವರಿಗೆ ದುಡ್ಡು ಕೊಡುವುದಿಲ್ಲವೇ? ಹಾಗೇ ತ್ಯಾಜ್ಯ ತೆಗೆದು ಪರಿಷ್ಕರಿಸಲು ಕೂಡ ಹಣ ತೆರಬೇಕಾಗುತ್ತದೆ.  ಅಲ್ಲದೇ ತ್ಯಾಜ್ಯವನ್ನು ಪರಿಷ್ಕರಿಸುವ ಉದ್ಯಮ/ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ಒಂದು ವ್ಯವಸ್ಥೆಯ ಮುಖ್ಯ ಅಂಗವನ್ನಾಗಿ ಪರಿಗಣಿಸಬೇಕಾಗುತ್ತದೆ.  ನನ್ನ ಅನಿಸಿಕೆಯ ಪ್ರಕಾರ, ನಾವು ಸೇವಿಸುವ ಆಹಾರಕ್ಕೆಷ್ಟು ಪ್ರಾಮುಖ್ಯತೆ ನೀಡುತ್ತೇವೆ ಅದರ ಕಾಲು ಪಟ್ಟಾದರೂ ತ್ಯಾಜ್ಯ ಸಂಸ್ಕರಣೆಗೆ ಮನ್ನಣೆ ನೀಡಬೇಕಾಗುತ್ತದೆ.  ಇಲ್ಲವೆಂದಾದಲ್ಲಿ ಇಂದು ನಾವು ಬೆಲೆ ತೆರದೆಯೇ ಕಸವನ್ನು ಎಲ್ಲಿ ಬೇಕಂದಲ್ಲಿ ಎಸೆದು ಮುಂದೆ ಅದು ಎಲ್ಲವನ್ನು ಮೀರಿ ಬೆಳೆತು ಅನೇಕ ಅನಾಹುತಗಳು, ಹಾನಿಗಳೂ ಸಂಭವಿಸುವಾಗ ತುಂಬಾ ನಿಧಾನವಾಗಿರುತ್ತದೆ.

***

ನಮ್ಮಲ್ಲಿ ತಂತ್ರಜ್ಞಾನ, ಅವಿಷ್ಕಾರ ಬೇರೆ ಎಲ್ಲ ದೇಶಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆಯುತ್ತಿದೆ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಂತೋಷವಾಗುತ್ತದೆ.  ವಿಶ್ವದ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಆರನೇ ಸಾಲಿನಲ್ಲಿದೆ ಎಂದು ಓದಿದಾಗ ಖುಷಿಯಾಗುತ್ತದೆ.  ನಮ್ಮಲ್ಲಿ ಅನೇಕ ಉದ್ಯಮಗಳು ಬೆಳೆಯುತ್ತಿವೆ, ನಾವು ಅತಿ ಹೆಚ್ಚು ಇಂಜಿನಿಯರುಗಳನ್ನು ಹೊರತರುತ್ತೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಆದರೆ, ಈವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸದ ಸಮಸ್ಯೆ ಉಲ್ಬಣಗೊಂಡಿರುವುದನ್ನು ನೋಡಿಯೂ ನೋಡದೇ ಇರುವಂತಿರುವುದು ಏಕೆ? ಎಂದು ಯೋಚಿಸಿದರೆ ಉತ್ತರ ದೊರೆಯುವುದಿಲ್ಲ.

ಅಮೇರಿಕದಲ್ಲಿ ವೇಷ್ಟ್ ಮ್ಯಾನೇಜ್‌ಮೆಂಟ್ ಕಂಪನಿಯಂಥವುಗಳು ಪಬ್ಲಿಕ್ ಟ್ರೇಡಿಂಗ್ ಕಂಪನಿಗಳಾಗಿ ಬೆಳೆದು ತಮ್ಮ ಗ್ರಾಹಕರಿಗೆ, ಬಳಕೆದಾರರಿಗೆ ಸೇವೆಯನ್ನು ಸಲ್ಲಿಸುತ್ತಿಲ್ಲವೇ? ಹಾಗೆಯೇ ನಮ್ಮಲ್ಲೂ ಸಹ ಈ ಸಮಸ್ಯೆಗೆ ಇದುವರೆಗೆ ಯಾರೂ ಉತ್ತರವನ್ನೇ ಕಂಡು ಹಿಡಿಯದಂಥ ಅಸಹಾಯಕ ಪರಿಸ್ಥಿತಿ ಬಂದಿದೆಯೇ?

ಮುಂದೆ ಇದೇ ಬೆಂಗಳೂರಿನ ಜನಸಂಖ್ಯೆ ದ್ವಿಗುಣವಾದಾಗ, ಈ ಕಸದ ಮಹಾತ್ಮೆ ಏನಾಗಿರಬೇಡ? ಮನೆಯ ದಿನನಿತ್ಯದ ಕಸದ ಜೊತೆಗೆ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಉತ್ಪನ್ನಗಳೂ, ಲಿಥಿಯಂ ಬ್ಯಾಟರಿಗಳೂ ಸೇರಿಕೊಂಡು, ನೀರು-ಮಣ್ಣು ಎರಡೂ ಪಾದರಸ, ಆರ್ಸೆನಿಕ್, ಮೊದಲಾದ ವಿಷ ಪದಾರ್ಥಗಳಿಂದ ಕೂಡಿಕೊಂಡರೆ ಯಾರಿಗೆ ಹಾನಿ ಎಂದು ಎಲ್ಲರೂ ಯೋಚಿಸಬೇಕಾದ ವಿಚಾರ.  ಎಲ್ಲಾ ಕಡೆ ಕಸಮಯವಾಗಿದೆ.  ಇನ್ನೂ ನಾವು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗದಿದ್ದರೆ, ನಿಸರ್ಗ ಎಂದಿನಂತೆ ತನ್ನನ್ನು ತಾನು ನೋಡಿಕೊಳ್ಳುತ್ತದೆ, ಅದಕ್ಕೆಲ್ಲ ಬೆಲೆ ತೆರಬೇಕಾದವರು ನಾವೇ!

No comments: