ನ್ಯೂಸ್ ಪೇಪರುಗಳ ಪಾತ್ರ ಏನು?
ನಮ್ಮ ಸಮಾಜದಲ್ಲಿ ನ್ಯೂಸ್ ಪೇಪರುಗಳ ಪಾತ್ರ ಏನು?
ನಾವೆಲ್ಲ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ನ್ಯೂಸ್ ಅಂದ್ರೆ ಸುದ್ದಿಗಳನ್ನ consume ಮಾಡ್ತೀವಿ. ಅಲ್ವಾ? ಹೀಗೆ ಪ್ರತಿ ದಿನ ಸುದ್ದಿಗಳನ್ನ ಓದೋದರಿಂದ ಬಿಡೋದರಿಂದ, ನಿಮಗೆ ಮಹತ್ವದ ವಿಷಯಗಳು ತಿಳಿತಾವೋ ಇಲ್ವೋ, ಆದರೆ ಅದರಿಂದ ನಿಮ್ಮ ಬ್ಲಡ್ ಪ್ರೆಶರ್ ಹೆಚ್ಚೋದಂತೂ ಗ್ಯಾರಂಟಿ!
ನಾನು ದಿನಪ್ರಂತಿ ಓದೋ ನ್ಯೂಸ್ ಪೇಪರುಗಳಲ್ಲಿ, ನಮ್ಮ ನೆಚ್ಚಿನ ಪ್ರಜಾವಾಣಿ ಜೊತೆಗೆ, ವಾಲ್ ಸ್ಟ್ರೀಟ್ ಜರ್ನಲ್, ಇವರೆಡನ್ನ ಹೆಚ್ಚೂ ಕಡಿಮೆ ರೆಗ್ಯುಲರ್ ಆಗಿ ಓದಿದ್ರೆ, ಅಪರೂಪಕ್ಕೊಮ್ಮೆ ನ್ಯೂ ಯಾರ್ಕ್ ಟೈಮ್ಸ್ ಕೂಡಾ ಓದ್ತೀನಿ.
ಈ ಲೆಫ಼್ಟಿಸ್ಟ್, ರೈಟಿಸ್ಟ್, ಸೆನ್ಟ್ರಿಸ್ಟು-ಇತ್ಯಾದಿಗಳನ್ನೆಲ್ಲ ಅರ್ಥ ಮಾಡಿಕೊಂಡು, ಅವುಗಳ ಒಂದೊಂದು ಹಿನ್ನೆಲೆಯಲ್ಲಿ ಒಂದೊಂದು ವಿದ್ಯಮಾನಗಳನ್ನೆಲ್ಲ ಓದ್ತಾ ಬಂದಾಗ, ನಿಮಗೇ ಆಶ್ಚರ್ಯ ಆಗತ್ತೆ... ಈ ಪ್ರಪಂಚದಲ್ಲಿ ಇನ್ಫ಼ರಮೇಷನ್ ಗಿಂತ ಹೆಚ್ಚು ಮಿಸ್ ಇನ್ಫ಼ರ್ಮೇಷನ್ನೇ ತುಂಬಿದೆ ಅಂತ!
***
ಕೆಲವೊಂದು ಟೈಮ್ ಅನ್ಸತ್ತೆ: ನಾವ್ಯಾಕೆ ನ್ಯೂಸ್ ಪೇಪರುಗಳನ್ನ ಓದ್ತೀವಿ, ಓದಬೇಕು? ಪ್ರಪಂಚದ ಎಲ್ಲಾ ಆಗುಹೋಗುಗಳನ್ನ ತಿಳಕೊಳ್ಳದೇ ಇದ್ರೆ ಏನು ನಷ್ಟ. ಪ್ರತಿಯೊಂದು ನ್ಯೂಸ್ ಅಥವಾ ವಿದ್ಯಮಾನಕ್ಕೂ ಎರಡು ಅಥವಾ ಹೆಚ್ಚು ದೃಷ್ಟಿಕೋನ ಇರೋದ್ರಿಂದ ಯಾರು ಹೇಳೋದು ಸರಿ, ಯಾರು ತಪ್ಪು? ಎಲ್ಲದಕ್ಕಿಂತ ಮುಖ್ಯ, ನೀವು ಯಾವ ಕಡೆ ಇದ್ದೀರಿ, ಯಾವ ಕಡೆಯಿಂದ ನೋಡ್ತಾ ಇದ್ದೀರಿ?
ಎರಡು ದೇಶಗಳ ಗಡಿಯ ನಡುವೆ ಆಗೋ ಚಕಮಕಿಯಲ್ಲಿ ಸತ್ತು ಹೋಗೋ ಸೈನಿಕರಿಗೆ ಒಂದು ಕಡೆ ಹುತಾತ್ಮರು ಅನ್ನೋ ಹಣೆ ಪಟ್ಟಿಯನ್ನು ಅಂಟಿಸಿ, ಅವರ ಕಳೇಬರವನ್ನ ಮೆರವಣಿಗೆ ಮಾಡಿ, ವೀರೋಚಿತ ಮರಣ ಗೌರವವನ್ನು ಕೊಡೋದು ಸಾಮಾನ್ಯ. ಅದೇ ಸೈನಿಕರನ್ನ ಬಂಡುಕೋರರು, ನುಸುಳುಕೋರರು, ಭಯೋತ್ಪಾದಕರು ಎಂದು ಹಣೆಪಟ್ಟಿ ಇಟ್ಟು ಸಾರುವ ತತ್ವ ಮತ್ತೊಂದು ಕಡೆಯದ್ದು. ಆಗ ಇರೋ ಒಂದು ಸುದ್ದಿಯನ್ನೇ ನೀವು ಎರಡು ರೀತಿಯಿಂದ ನೋಡಿದಾಗ, ಎಲ್ಲವೂ ಸರಿ ಅನ್ನಿಸೋಲ್ಲವೇ?
ಶಿಲಾಕುಲವಲಸೆ ಕಾದಂಬರಿಯಲ್ಲಿ, ಕೆ.ಎನ್. ಗಣೇಶಯ್ಯನವರು ಹೇಳೋ ಹಾಗೆ, ಈ ಮಾನವನ ಇತಿಹಾಸವನ್ನೇ ಮೂರು ಪದಗಳಿಗೆ ಮಿತಿಗೊಳಿಸಿದೆವಾದರೆ, ನಮಗೆ ಸಿಗೋದು: ಹುಟ್ಟಿದ, ಕಾದಾಡಿದ ಮತ್ತು ಮಡಿದ. ಹಾಗಿರುವಾಗ, ದಿನಾ ಸಾಯೋರಿಗೆ ಅಳೋರು ಯಾರು ಎಂದು ಯುದ್ಧಗಳ ಬಗ್ಗೆ, ಕದನ ಮತ್ತು ಕದನ ವಿರಾಮಗಳ ಬಗ್ಗೆ ಓದಿ ಏನು ಸಾಧಿಸೋದಿದೆ ನೀವೇ ಹೇಳಿ?
ಇನ್ನು ಈ ನ್ಯೂಸ್ ಪೇಪರುಗಳ ಮಾಲಿಕರು ಯಾರು? ಅವರ ಮೂಲ ಉದ್ದೇಶ ಏನು ನೋಡಿದಾಗ ಎರಡು ವಿಷಯಗಳು ಸ್ಪಷ್ಟವಾಗುತ್ತವೆ: ಒಂದು ನ್ಯೂಸ್ ಪೇಪರ್ ಅನ್ನೋದು ಚಾರಿಟಿ ಕೆಲಸವಲ್ಲ ಅದೊಂದು ಬಿಸಿನೆಸ್ಸು. ಮತ್ತೊಂದು, ಅದರ ಓನರುಗಳಿಗೆ ಅವರದ್ದೇ ಆದ ಒಂದು ಅಜೆಂಡಾ ಇದೆ ಅಂತ.
ಅಮೇರಿಕದ ಬಿಲಿಯನರುಗಳು ಇಲ್ಲಿನ ಮುಖ್ಯ ವಾಹಿನಿ ಮೀಡಿಯಾಗಳನ್ನ, ಸೋಷಿಯಲ್ ಮೀಡಿಯಾವನ್ನೂ ಸೇರಿ, ಖರೀದಿ ಮಾಡಿ, ತಮ್ಮದೇ ಆದ ಒಂದು ಪ್ರೊಪೋಗ್ಯಾಂಡಾ ಅನ್ನು ಸಾರುತ್ತಾ, ಮಾರುತ್ತಾ ಇಲ್ಲವೇ?
ಈ ದುಡ್ಡಿನ ಧಣಿಗಳಿಗೆಲ್ಲ ನ್ಯೂಸ್ ಪೇಪರ್ ಮಾಲಿಕತ್ವ ಏಕೆ ಅಂತ ಕೇಳಿದರೆ, ಅದರ ಮೂಲಕ ಅವರು ಜನರನ್ನ ತಲುಪಬಲ್ಲರು ಮತ್ತು ಆಯಾ ದೇಶಗಳ ಚುನಾವಣಾ ಔಟ್‌ಕಮ್ ಅನ್ನೇ ಬದಲಾಯಿಸಬಲ್ಲರು. ನಿಮಗೆ ಗೊತ್ತಿರೋ ಹಾಗೆ ಅಫ಼ಘಾನಿಸ್ತಾನದ, so called, ಬಂಡುಕೋರರು, ತಾಲಿಬಾನ್ ಸಪೋರ್ಟ್ ಮಾಡುವವರು, ಅಮೇರಿಕದಂತಹ ಒಂದು ಪ್ರಭಲ ಸೈನ್ಯವನ್ನು ಕೆಲವೇ ದಿನ/ಘಂಟೆಗಳಲ್ಲಿ ಹಿಮ್ಮೆಟ್ಟಿಸಿ ಹೊರಹೋಗುವಂತೆ ಮಾಡಿದ್ದು, ಈಗಿನ X, ಆಗಿನ Twitter ಸಹಾಯದಿಂದ ಅಂದ್ರೆ ನಿಮಗೆ ನಂಬೋಕೆ ಆಗುತ್ತಾ?
ನನ್ನ ಪ್ರಕಾರ, ಈ ದಿನನಿತ್ಯದ ನ್ಯೂಸ್ ಪೇಪರ್ ಓದುಗರು, ತಮಗೆ ತಾವೇ ಗೊತ್ತಿಲ್ಲದಂತೆ ಒಂದು ರೀತಿಯ ರಿಪೋರ್ಟರುಗಳ ಮಂತ್ರ ಮಂತ್ರಾಕ್ಷತೆಯ ಪ್ರಭಾವಕ್ಕೆ ಒಳಗಾಗಿ, ಕೊನೆಗೆ ಆಯಾ ನ್ಯೂಸ್ ಪೇಪರಿನ ಪ್ರೊಪೊಗ್ಯಾಂಡದಲ್ಲಿ ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ತಮ್ಮಷ್ಟಕ್ಕೆ ತಾವೆ involve ಆಗಿ ಹೋಗುತ್ತಾರೆ. ಹೀಗೆ ನೀವು, ಒಂದು, ಎರಡು ದಶಕಗಳ ದೈನಿಕ ಓದಿನಿಂದ ನಿಮ್ಮ ತಲೆ ದೊಡ್ಡದು ಮತ್ತು ಭಾರವೂ ಆಗುತ್ತಾ ಹೋಗುತ್ತದೆ, ಜೊತೆಗೆ ಈ ನ್ಯೂಸ್ ಪೇಪರುಗಳ ಓನರುಗಳ ಅಜೆಂಡಾವೂ ಕೂಡ.
ಒಂದಂತೂ ನಿಜ: ಈ ನ್ಯೂಸ್ ರೀಡಿಂಗ್ Entertainment ಆಗಲಾರದು, ಬದಲಿಗೆ, ಅದೊಂದು slow poison ಆಗದಿದ್ರೆ ಸಾಕು.
ಹಾಗಂತ, ನ್ಯೂಸ್ ಪೇಪರ್‌ನಲ್ಲಿ ಬರೋದೆಲ್ಲವೂ ಪೊಲಿಟಿಕಲ್ ಕಾಮೆಂಟರಿ ಎಂದು ಹೇಳಲಾಗದು. ಅಲ್ಲಿ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಮನರಂಜನೆಗೆ ಕೂಡ ಆಸ್ಪದ ಉಂಟು. ಹಾಗೇ, ಅಲ್ಲಲ್ಲಿ ಪಂಡಿತ ಮತ್ತು ಪಾಮರರ ಒಪಿನಿಯನ್ ಕೂಡಾ ಉಂಟು: ಪಂಡಿತರು OpEd ಎಂದು ಬರೆದು ಕೊಂಡರೆ, ಪಾಮರರು,ಲೇಖನಕ್ಕೆ ಸಂಬಂಧಿಸಿದ ಕಾಮೆಂಟುಗಳಲ್ಲಿ ತಮ್ಮ ತತ್ವವನ್ನು ಹೆಣೆಯುತ್ತಾರೆ. ಮುಂದೆ, ಅದೇ ಒಂದು ದೊಡ್ಡ ಬಿಸಿನೆಸ್ ಆಗಿಯೂ ಕಂಡುಬರುತ್ತದೆ. ಏಕೆಂದ್ರೆ, ನನ್ನ ಪ್ರಕಾರ, ಎಲೆಕ್ಷನ್ ಸಮಯದಲ್ಲಿ, ಜನರಿಗೆ ದುಡ್ಡುಕೊಟ್ಟು ಅವರ "opinion" ಅನ್ನೋ ಬರೆಸೋ ಮುಖಂಡರನ್ನ ನಾವು ಅದೆಷ್ಟು ನೋಡಿಲ್ಲ?!
***
ಈ ನ್ಯೂಸ್ ಪೇಪರುಗಳ ಆರ್ಟಿಕಲ್‌ಗಳಲ್ಲಿ "ಜನಪ್ರಿಯತೆ" ಅಂತ ಒಂದು ವಿಷಯ ಬಂದೇ ಬರುತ್ತೆ... ಹೆಚ್ಚು ಜನ ಓದುವಂತದ್ದು, ಅಥವಾ ಓದಿದರು ಅಂತ... ಹೀಗೆ ಜನಪ್ರಿಯತೆ ಸಿಕ್ಕಲೀ ಅಂತಲೇ ಆರ್ಟಿಕಲ್ ಟೈಟಲುಗಳನ್ನ, un-necessary ಪನ್ ಗಳನ್ನ ಜೋಡಿಸೋ ಜನರಿಗೆ ಲೆಕ್ಕವಿಡಲು ಸಾಧ್ಯವೇ?
ಹೀಗೆ ಒಂದು ದೇಶದ ನ್ಯೂಸ್ ಪೇಪರ್ ಗಳನ್ನ ನೋಡಿದರೆ, ಅದರ ವಿಶಾಲತೆ ಅರ್ಥವಾಗುತ್ತದೆ. ಹಾಗೆ, ಇದೇ ಪ್ರೊಪೊಗ್ಯಾಂಡಾವನ್ನು ಒಂದೆರಡು ತಲೆಮಾರುಗಳ ಕಾಲ ಯಶಸ್ವಿಯಾಗಿ ನಡೆಸಿಕೊಂಡು ಬಂದಲ್ಲಿ, ಇತಿಹಾಸವನ್ನೇ ಬರೆದಂತಾಗುತ್ತದೆ!
ಈಗ ಹೇಳಿ, ನೀವು ಯಾಕೆ ನ್ಯೂಸ್ ಪೇಪರ್ ಓದ್ತೀರಾ? ನಮ್ಮ-ನಿಮ್ಮನ್ನು ಬೆಳೆಸುವಲ್ಲಿ ಅವುಗಳ ಪಾತ್ರ ಏನು ಅಂತ?