Sunday, August 16, 2009

ಕೇವಲ 62 ವರ್ಷದ ಸ್ವಾತ್ಯಂತ್ರ್ಯ

ನಿನ್ನೆ ಸ್ವಾತಂತ್ರ್ಯೋತ್ಸವಗಳನ್ನು ಟಿವಿಯಲ್ಲಿ ನೋಡ್ತಾ ಇದ್ದಾಗ, ವರದಿಗಳನ್ನು ಓದ್ತಾ ಇದ್ದಾಗ ನಮ್ಮದು ಕೇವಲ 62 ವರ್ಷದ ಸ್ವಾತ್ಯಂತ್ರ್ಯ ಅಷ್ಟೇ ಅಂತ ಅನ್ಸಿದ್ದು ವಿಶೇಷ. ಈ ಹಿಂದೆ ನನಗೆ ನೆನಪಿರೋ ಹಾಗೆ ನಮ್ಮ ಹೈ ಸ್ಕೂಲು ದಿನಗಳಿಂದ ಹಿಡಿದು ನಲವತ್ತು, ಐವತ್ತು, ಅರವತ್ತು ವರ್ಷಗಳ ಆಚರಣೆಗಳನ್ನು ಮಾಡಿ-ನೋಡಿದ್ದರೂ ಈಗ ಅನ್ನಿಸ್ತಿರೋ ಹಾಗೆ ನಮ್ಮ ದೇಶ ಬ್ರಿಟೀಷರಿಂದ ಸ್ವಾತ್ರಂತ್ರ್ಯ ಪಡೆದದ್ದು ರಿಲೇಟಿ‌ವ್ ಆಗಿ ಇತ್ತೀಚೆಗೆ ಅನ್ನೋ ಭಾವನೆ ಬಲವಾಗ್ತಿದೆ.

ಈ ಆರು ದಶಕಗಳ ಸ್ವಾತಂತ್ರ್ಯದಲ್ಲಿ ನನಗೆ ಗೊತ್ತಿರೋ ಹಾಗೆ ಎರಡು-ಮೂರು ದಶಕಗಳನ್ನು ಚೆನ್ನಾಗಿ ಗಮನಿಸಿದರೆ, ಅದರಲ್ಲೂ ನಮ್ಮ ವಯಸ್ಸಿನವರಿಗೆ ಅನ್ವಯವಾಗುವ ಎಂಭತ್ತು ಹಾಗೂ ತೊಂಭತ್ತರ ದಶಕಗಳಲ್ಲಿ ಭಾರತ ಬಹಳಷ್ಟು ಬೆಳೆದಿದೆ. ತದನಂತರ ಎರಡು ಸಾವಿರದ ದಶಕದಲ್ಲಂತೂ ಎಲ್ಲಾ ಬೆಳವಣಿಗೆಗಳು ಮುಗಿಲು ಮುಟ್ಟಿದವು ಎಂದೇ ಹೇಳಬೇಕು. ನಾವು ಪಾಕಿಸ್ತಾನದವರ ಹಾಗೆ ಸ್ವಾತಂತ್ರ್ಯ ಸಿಕ್ಕ ಮೊದಲನೇ ದಿನದಿಂದ ವಿದೇಶಿಯರಿಗೆ ನಮ್ಮ ಮಾರ್ಕೆಟ್ಟುಗಳನ್ನು ತೆರೆದುಕೊಳ್ಳಲಿಲ್ಲ, ಎಂಭತ್ತು ಹಾಗು ತೊಂಭತ್ತರ ದಶಕದ ಅಂತ್ಯದವರೆಗೂ ಎಲ್ಲವೂ ಸರ್ಕಾರೀ ಸ್ವಾಧೀನದಲ್ಲೇ ಇತ್ತು. ಇಂದಿಗೂ ಸಹ ಬೇಕಾದಷ್ಟು ರಂಗಗಳಲ್ಲಿ ಸರ್ಕಾರಿ ಹಿಡಿತವಿದೆ. ನಮ್ಮ ದೇಶಕ್ಕೆ ವಿದೇಶಿ ಸರಕುಗಳು ನಿಧಾನವಾಗಿ ಬಂದವು. ರಕ್ಷಣಾ ತಂತ್ರಜ್ಞಾನವೇನೋ ಮೊದಲೇ ತೆರೆದುಕೊಂಡಿತು, ಆದರೆ ಮಿಕ್ಕವು ತಡವಾಗಿದ್ದಂತೂ ನಿಜ.

ಈ ಜಾಗತೀಕರಣ ಅನ್ನೋ ನಾಣ್ಯಕ್ಕೆ ಎರಡು ಮುಖಗಳಿದ್ದರೆ, ಅದರಲ್ಲಿ ಮೊದಲನೆಯದು ಒಂದು ದೇಶದ ಒಳಗಿನಿಂದ ಹೊರಹೋಗುವುದನ್ನು ಪ್ರತಿಬಿಂಬಿಸಿದರೆ ಮತ್ತೊಂದು ಹೊರದೇಶಗಳಿಂದ ಒಳಬರುವುದನ್ನು ಪ್ರತಿನಿಧಿಸುತ್ತದೆ. ಈ ಒಳ-ಹೊರ ಹೋಗುವುದನ್ನು ಯಾವುದೇ ವಿಚಾರಕ್ಕೂ ಅಳವಡಿಸಬಹುದು - ಆಮದು/ರಫ್ತು, ಸಂಸ್ಕೃತಿ, ಭಾಷೆ, ತಂತ್ರಜ್ಞಾನ, ವಿನ್ಯಾಸ, ವಿದ್ಯೆ, ಆಚಾರ-ವಿಚಾರ, ಇತ್ಯಾದಿ. ಸರಿ, ನಮಗೇನೋ ಇಂಗ್ಲೀಷರಿಂದ ಸ್ವಾತ್ರಂತ್ರ್ಯ ಸಿಕ್ಕಿತು, ಆದರೆ ಇವತ್ತಿನವರೆಗೂ ಉಳಿದ ದೇಶಗಳಲ್ಲಿ ಇಂಗ್ಲೀಷರ ಸಂತಂತಿ ಅಳಿದುಳಿದ ಹಾಗೆ ಭಾರತದಲ್ಲಿ ಏಕೆ ಮುಂದುವರೆಯಲಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಯಾವಾಗಲೂ ಛಳಿಯೆಂದು ಒದ್ದಾಡುವ ಯುರೋಪಿಯನ್ನರಿಗೆ ಭಾರತದಂತಹ ದೇಶದಲ್ಲಿ ಬೇಕಾದಷ್ಟು ಹವಾಮಾನದ ವೇರಿಯೇಷನ್ನುಗಳಿರುವಂಥ ಪ್ರದೇಶಗಳಿರುವಾಗ ನಮ್ಮಲ್ಲಿ ಎರಡನೇ ಮೂರನೇ ಜನರೇಷನ್ನ್ ಭಾರತೇತರ ಮೂಲದ ಜನರು ಏಕೆ ನೆಲಸದಿದ್ದಿರಬಹುದು? ಅದೇ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಹೆಚ್ಚು ಹೆಚ್ಚು ಯುರೋಪ್ ಪ್ರಭಾವವನ್ನು ಇವತ್ತಿನವರೆಗೂ ನಾವು ಕಾಣಬಹುದು. ಏಕೆ ಹೀಗೆ?

ಭಾರತದ ನೆಲವನ್ನು ಶತಮಾನಗಳ ಕಾಲ ಆಳಿದ ಯುರೋಪಿಯನ್ನರ ಪ್ರಭಾವ ನಮ್ಮಲ್ಲಿ ಇವತ್ತಿಗೂ ಬಹಳ ದೊಡ್ಡದು. ಒಳ್ಳೆಯದು ಕೆಟ್ಟದ್ದು ಎಂದು ಆಲೋಚಿಸುವುದನ್ನು ಆಬ್ಜೆಕ್ಟಿವ್ ಆಗಿ ಮಾಡಬೇಕಾಗುತ್ತದೆ. ನಮ್ಮಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು, ಸ್ಥಳೀಯ ರಾಜ ಪರಂಪರೆಗಳನ್ನು ಒಡೆದು-ಒಂದುಗೂಡಿಸಿ ಆಳಿ ಒಂದು ಭಾರತ ದೇಶವಾಯಿತು. ಜೊತೆಗೆ ರೇಲ್ ರೋಡ್, ಅಂಚೆ ವ್ಯವಸ್ಥೆ, ಆಂಗ್ಲ ವಿದ್ಯಾಭ್ಯಾಸ, ವಸ್ತ್ರ ವಿನ್ಯಾಸಗಳು, ಕೇಶ ಶೈಲಿ, ಮತ ಪಂಗಡಗಳು, ಆಹಾರ-ವಿಚಾರಗಳು, ಪಾನೀಯಗಳು, ಹೂವುಗಳು, ತರಕಾರಿಗಳು, ವಿಷಯ-ವಸ್ತುವನ್ನೊಂದನ್ನು ಬೇರೆ-ಬೇರೆ ರೀತಿಯಲ್ಲಿ ನೋಡುವ ದೃಷ್ಟಿಕೋನ... ಹೀಗೆ ಪಟ್ಟಿ ಮುಂದುವರೆಯುತ್ತದೆ. ಇವೆಲ್ಲ ನಮ್ಮನ್ನು ಆಳಿದವರು ನಮಗೆ ನೀಡಿದ ಬಳುವಳಿ. ಇಂತಹ ಬಳುವಳಿಗಳು ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ತಲೆಮಾರುಗಳು ಮುಂದುವರೆದ ಹಾಗೆ ಅವುಗಳು ಒಂದೊಂದೇ ವಿಶೇಷ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಯಾವುದು ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ಒಂದು ಭಾಷೆಯಾಗಿ ಯಾವುದು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ ನಮ್ಮನ್ನು ಒಂದುಗೂಡಿಸಿರಲಿಲ್ಲವೋ ಆ ಕೆಲಸವನ್ನು ಇಂಗ್ಲೀಷ್ ಮಾಡಿತು. ತಲೆ ತಲೆಮಾರುಗಳ ತರುವಾಯ ಯಾವ ವ್ಯವಹಾರ-ವಾಣಿಜ್ಯ ನಮ್ಮಲ್ಲಿ ಉಳಿದು-ಬೆಳೆದುಕೊಂಡು ಬಂದಿತ್ತೋ ಅದರ ಸ್ಥಳದಲ್ಲಿ ಇಂಗ್ಲೀಷ್ ಮೂಲದ ಬಿಸಿನೆಸ್ಸ್ ಪ್ರಾಸೆಸ್ಸುಗಳು ಬಂದವು. ಈ ಜಗತ್ತಿನಲ್ಲಿ ಯಾರು-ಏನು-ಎಲ್ಲೆಲ್ಲಿ-ಹೇಗೆ ಎನ್ನುವ ನಿರ್ಧಾರಗಳು ನಿಲುವುಗಳು ಬದಲುಗೊಂಡವು. ಜಗತ್ತು ಚಿಕ್ಕದಾಯಿತು, ಮನುಷ್ಯ ಪರಂಪರೆಗಳು ಮೊದಲಿಗಿಂತ ಹತ್ತಿರ ಬಂದವು.

ನಮ್ಮ ಸಾವಿರಾರು ವರ್ಷಗಳ ಪರಂಪರೆಯ ಮುಂದೆ ಈ ಸ್ವಾತಂತ್ರ್ಯೋತ್ತರ ಆರು ದಶಕಗಳು ಸಂಖ್ಯೆಯಲ್ಲಿ ಬಹಳ ದೊಡ್ಡವೇನು ಅಲ್ಲ, ಆದರೆ ಈ ಆರು ದಶಕಗಳಲ್ಲಿ ಆದ ದೇಶದ ಬೆಳವಣಿಗೆ ಹಾಗೂ ಪ್ರಗತಿ ಗಣನೀಯ. ನಮಗೆ ನಮ್ಮ ಮೂಲಭೂತ ಸಮಸ್ಯೆಗಳು ಎಂದಿಗೂ ಇರುವಂಥವೇ ಎನ್ನಿಸುವಂತಾಗಿದೆ, ನಮ್ಮ ದೇಶದಲ್ಲಿ ನೂರಕ್ಕೆ ಐವತ್ತು ಮಂದಿಗೆ ತಮ್ಮ ಹೆಸರನ್ನು ಬರೆಯಲು ಬಾರದು ಎನ್ನುವುದರಲ್ಲಿ ಬದಲಾವಣೆಯನ್ನು ಕಾಣಲು ಇನ್ನೂ ಬಹಳ ವರ್ಷಗಳೇ ಬೇಕಾಗುತ್ತವೆ, ನಮ್ಮವರಿಗೆಲ್ಲ ಸ್ವಚ್ಛ ಕುಡಿಯುವ ನೀರಿನ ಅಗತ್ಯ ಯಾವತ್ತಿನಿಂದ ಇದ್ದರೂ ಅದನ್ನು ಪೂರೈಸುವುದು ಇನ್ನೂ ಪ್ರಯತ್ನವಾಗಿಯೇ ಉಳಿಯುತ್ತದೆ, ಕೋಟ್ಯಾಂತರ ಜನರು ಕೆಲಸ ಮಾಡಬಲ್ಲವರಾದರೂ, ಕೆಲಸವಿಲ್ಲದವರಾಗುತ್ತಾರೆ. ಜನರಿಂದ ಜನರಿಗಾಗಿ ಬೇಕಾಗುವ ಕೆಲಸ ಹುಟ್ಟಿ ಇಂಡಸ್ಟ್ರಿಗಳು ಬೆಳೆಯದೇ ಹೋಗಿ, ಅಗತ್ಯದ ಕೆಲಸ ಕಾರ್ಯಗಳಲ್ಲಿ ಚಿಕ್ಕ ಮಕ್ಕಳ ಬಳಕೆಯಾಗುತ್ತದೆ. ವೃತ್ತಿ ಶಿಕ್ಷಣ ಸಂಬಂಧಿ ನಿಲುವು ಹೆಚ್ಚಾಗದೇ ಒಂದು ವಿದ್ಯೆ, ಬಿಸಿನೆಸ್ಸನ್ನು ತಮ್ಮದೆನ್ನಿಸಿಕೊಳ್ಳದೇ ಎಲ್ಲರಿಗೂ ಎಲ್ಲವೂ ಗೊತ್ತು ಆದರೆ ಯಾರೂ ಪರಿಣಿತರಿಲ್ಲವೆನ್ನುವಂತಾಗುತ್ತದೆ.

ನನ್ನಂಥವರಿಗೆ ಆರು ದಶಕಗಳ ಸ್ವಾತಂತ್ರ್ಯದ ಸವಿಯುಂಡ ಒಂದು ದೇಶದ ಹಿನ್ನೆಲೆಯಿದೆ, ಜೊತೆಗೆ ೨೩ ದಶಕಗಳ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಮತ್ತೊಂದು ದೇಶದ ಸದರಿ ಆಗು-ಹೋಗುಗಳ ಅರಿವಿದೆ. ತಂತ್ರಜ್ಞಾನ-ಸಂವಹನ ರಂಗದಲ್ಲಿ ಇತ್ತೀಚೆಗೆ ಕ್ರಾಂತಿಯಾದದ್ದನ್ನು ನಾವು ಕಣ್ಣಾರೆ ಕಂಡು ಅನುಭವಿಸಿದ್ದೇವೆ. ಇನ್ನೂ ಎರಡು ದಶಕಗಳ ಬಳಕೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಜನರ ಅಂತರ್ಜಾಲದ ಸೂಪರ್ ಹೈವೇ ಹಾಗೂ ನೂರಾರು ವರ್ಷಗಳ ಹಿಂದೆ ಯಾರೋ ತೆರೆದಿಟ್ಟ ದಾರಿಗಳಿರುವಾಗ ಮುಂದೆ ಇವೆಲ್ಲ ಮುಂದೆ ಹೇಗೆ ಎನ್ನುವ ಕುತೂಹಲ ಎಂದಿಗಿಂತಲೂ ಇನ್ನೂ ಬಲವಾಗಬಹುದು.

ನಮ್ಮಲ್ಲಿ ಸಮಸ್ಯೆಗಳು ಹೆಚ್ಚು ಎಂದು ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ಹೆಚ್ಚು ಜನಸಂಖ್ಯೆಯೇ ಎಲ್ಲದಕ್ಕೂ ಕಾರಣ ಎಂದು ದೂರಿ ಫಲವಿಲ್ಲ. ಇವೆಲ್ಲ ನಮ್ಮತನದಲ್ಲಿ ಅವಿಭಾಜ್ಯವಾಗಿ ಸೇರಿಹೋಗಿವೆ. ನಮ್ಮ ದೇಶವನ್ನು ಅಮೇರಿಕದಷ್ಟು ಉದ್ದ-ಅಗಲವಾಗಿ ಹಿಗ್ಗಿಸಲಾಗದು. ನಮ್ಮಲ್ಲಿ ಅಮೇರಿಕದ ಸವಲತ್ತು-ಸಂಪನ್ಮೂಲಗಳನ್ನು ಒಂದೇ ದಿನದಲ್ಲಿ ಸೃಷ್ಟಿಸಲಾಗದು. ನಮ್ಮ ಮೂಲಭೂತ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿರ್ಮೂಲನ ಮಾಡಲಾಗದು. ಇವುಗಳಿಗೆಲ್ಲ ಉತ್ತರ ಬಹಳ ದೂರದ ಪ್ರಯಾಣ ಹಾಗೂ ಅಂತಹ ಅಪರಿಮಿತ ಪ್ರಯಾಣದಲ್ಲಿ ದೊರಕುವ ಯಶಸ್ಸಿನ ಮೈಲುಗಳು ಈ ಸಮಸ್ಯೆಗಳಿಗೆ ಉತ್ತರಗಳು. ಇನ್ನೂ ನೂರು-ಇನ್ನೂರು ವರ್ಷಗಳಲ್ಲಾದರೂ ನಾವು ಪ್ರಭಲರಾಗುತ್ತೇವೆ. ನಮ್ಮ ಸಂಖ್ಯೆ ನಮ್ಮ ಶಕ್ತಿಯಾಗುತ್ತದೆ. ನಾವು ಎಲ್ಲರಿಗಿಂತ ಮುಂದಿರುತ್ತೇವೆ.

ಇವು ಬರೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡೋ ವಿಷ್ ಆಗಲೀ ವಿಷ್‌ಫುಲ್ ಆಲೋಚನೆಗಳಾಗಲೀ ಆಗದೇ ಆದಷ್ಟು ಬೇಗ ನಿಜವಾಗುವುದನ್ನು ನಮ್ಮ ತಲೆಮಾರು ನೋಡಿದ್ದರೆ ಎಷ್ಟೊಂದು ಚೆನ್ನಿತ್ತು ಅನ್ನಿಸೋದಿಲ್ಲವೇ?

3 comments:

ಕೇಶವ ಪ್ರಸಾದ್.ಬಿ.ಕಿದೂರು said...

ಲೇಖನ ಚೆನ್ನಾಗಿದೆ.
ಕೇಶವ ಪ್ರಸಾದ್ ಬಿ ಕಿದೂರು

MY SOUL IS MATHEMATICS said...

ಲೇಖನ ತುಂಬಾ ಚೆನ್ನಾಗಿದೆ. ಸ್ವಾತಂತ್ರೋತ್ಸವದ ದಿವಸದ ಪ್ರಸ್ತುತವಾಗಿದೆ. ಗಾಂಧಿ, ನೆಹರೂ, ಸುಭಾಷ್ ಹೀಗೆ ಮೊದಲಾದವರು ತಂದುಕೊಟ್ಟ ಸ್ವಾತಂತ್ರೈ ಸರಿಯಾಗಿ ಅನುಭವಿಸಲು ಆಗುತ್ತಿಲ್ಲ. ದೇಶದ ತುಂಬಾ ಭಯೋತ್ಪಾದನೆ,ರಾಜಕೀಯ ಗೊಂದಲ, ಅಸ್ಥಿರತೆ , ಜನಸಂಖ್ಯೆ ತುಂಬಾ ಕಾಡುತ್ತಿದೆ. ಜೊತೆಗೆ ಅಮೇರಿಕಾಕ್ಕೆ ಇಂಡಿಯಾದಿಂದ ವಲಸೆ. ದೇಶ ಏನಾಗಬೇಕು ಹೇಳಿ ಸ್ವಾಮಿ. ಹೋಗಲಿ ನಮ್ಮ ಮಕ್ಕಳಿಗೆ ನಾವೆಲ್ಲ ದಾಸ್ಯದಲ್ಲಿದ್ದೆವು. ಗುಲಾಮರಂತಿದ್ದೆವು ಈಗ ಹೀಗೆ ಸ್ವೇಚ್ಚೆಯಿಂದ ಇದ್ದೀವಿ ಎಂದರೆ ಅವರಲ್ಲಿ ಭಾವನೆಗಳೇ ಹುಟ್ಟುವುದಿಲ್ಲ. ಈ ಸಂದರ್ಭದಲ್ಲಿ ಗಾಂಧಿಯೂ ನೆನಪಾಗುವುದಿಲ್ಲ. ಸೊಣಕಲು ಶರೀರದ ತುಂಡು ಬಟ್ಟೆಯುಟ್ಟ ಗಾಂಧಿಯ ಮಾತನ್ನು ಆ ದಿನಗಳಲ್ಲಿ ಇಡೀ ೩೮ ಕೋಟಿ ಜನ ಕೇಳುತಿದ್ದರು ಎಂದರೆ ನನಗೆ ಆಶ್ಚರ್ಯ. ಆನಂದ ಅಂತವರೂ ಇನ್ನೂ ಹುಟ್ಟಿ ಬರಲಿಲ್ಲ. ಗಾಂಧಿಯೇನು ಭಯೋತ್ದಾದಕ, ಕಮಾಂಡಡರ‍್ , ಹೋಗಲಿ ಚರಿಸ್ಮಾಟಿಕ್ ಪಿಲ್ಮ ಹೀರೋ ಕೂಡ ಅಲ್ಲ. ಇಡೀ ಇಂಡಿಯಾ ಸೊಣಕಲು ವ್ಯಕ್ತಿಯಿಂದ ಪಾರಯಾತೆಂದರೆ! ಇದನ್ನೆಲ್ಲಾ ನಮ್ಮ ಮಕ್ಕಳಿಗೆ ಹೇಳುವರು ಯಾರು? ಈ ಶಿಕ್ಷಕ, ಉಪನ್ಯಾಸಕರೂ ಕೂಡ ನೆಪ ಹೇಳಿಕೊಂಡು ಮಕ್ಕಳಿಗೆ ಪಾಠದ ಜೊತೆಗೆ ನೈತಿಕತೆ ಯನ್ನು ಭೋದಿಸುವುದನ್ನು ಮರೆತಿದ್ದಾರೆ. ಇರಲಿ ಸ್ವಾತಂತ್ರೈದ ದಿವಸದ ಪ್ರಸ್ತುತ ಲೇಖನ ಚೆನ್ನಾಗಿದೆ. ಅಕ್ಟೋಬರ‍್ ಎರಡರಂದು ಗಾಂಧಿ ಯ ಬಗ್ಗೆ ತಮ್ಮ ಲೇಖನಿ ಮೂಡಿ ಬರಲಿ

Satish said...

ಕೇಶವ್,
ಧನ್ಯವಾದಗಳು.

ವಾಸು,
ಗಾಂಧಿಯ ಬಗ್ಗೆ ಲೇಖನ ಬರೆಯೋದಕ್ಕೆ ಅಕ್ಟೋಬರ್ ಎರಡರವರೆಗೆ ಕಾಯಬೇಕೇಕೆ? ಈ ವಾರದ ’ವಿಕ್ರಾಂತಕರ್ನಾಟಕ"ದಲ್ಲಿ ಗಾಂಧಿಯ ಬಗ್ಗೆ ಲೇಖನವನ್ನು ನೋಡಿದಾಗ ಹೀಗನಿಸಿತು. :-)