Showing posts with label ಅಬ್ಸರ್‌ವೇಶನ್. Show all posts
Showing posts with label ಅಬ್ಸರ್‌ವೇಶನ್. Show all posts

Thursday, February 08, 2024

ನಮ್ಮ ನಡವಳಿಕೆಗಳು

ಕೋವಿಡ್ ಮುಗಿದ ನಂತರ ನಮ್ಮ ಡ್ರೈವಿಂಗ್ ಹ್ಯಾಬಿಟ್‌ನಲ್ಲಿ ಬಹಳ ವ್ಯತ್ಯಾಸವಾಗಿದೆ ಅನ್ನಿಸಿದ್ದು ಇದೇ ಮೊದಲ ಸಲ ಏನಲ್ಲ.

ಕೋವಿಡ್ ಲಾಕ್‌ಡೌನ್ ಆಗೋದಕ್ಕೆ ಮುಂಚೆಲ್ಲ ನಾವು ನಮ್ಮ ನಮ್ಮ ಕಾರುಗಳನ್ನ ಹೆಚ್ಚಾಗಿ ಬಳಸ್ತಾ ಇದ್ವಿ.  ಆಫ಼ೀಸಿಗೆ ಹೋಗಿ ಬರೋದರ ಜೊತೆಗೆ, ಶಾಪಿಂಗ್, ರಿಕ್ರಿಯೇಷನ್ ಜೊತೆಗೆ ಅಪರೂಪಕ್ಕೊಮ್ಮೆ ಊಟಕ್ಕೆ ಹೊರಗಡೆ ಹೋಗಿ ಬರ್ತಾ ಇರೋದ್ಲಿಂದಾದ್ರೂ ನಮ್ಮ ಕಾರುಗಳು ಹೆಚ್ಚು ಓಡುತ್ತಿದ್ದವು. ನಮಗೆ ಆಫ಼ೀಸಿನ ಹೊರಗಿನ ಊರಿನ ಒಂದಿಷ್ಟು ದರ್ಶನವಾದರೂ ಆಗ್ತಿತ್ತು.

ಕೋವಿಡ್ ಬಂದ ಮೇಲೆ ನಮ್ಮ ನಮ್ಮ ನಡವಳಿಕೆ ಮೇಲೆ ಅಗಾಧವಾದ ಪರಿಣಾಮ ಬೀರುವಷ್ಟರ ಮಟ್ಟಿಗೆ ಬದಲಾವಣೆಗಳಾಗಿವೆ. ಉದಾಹರಣೆಗೆ, ನಾವು ಮೊದಲಿನ ಹಾಗೆ ಏರ್‌ಪೋರ್ಟಿನಿಂದ ಜನರನ್ನು ಪಿಕ್‌ಅಪ್ ಮಾಡೋದಿಲ್ಲ, ಏರ್‌ಪೋರ್ಟ್‌ನಿಂದ ಜನರು, ಬದಲಿಗೆ ಊಬರ್ ಅಥವಾ ಲಿಫ಼್ಟ್ ಸರ್ವೀಸುಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ನಾವು ದಿನಸಿ ಸಾಮಾನುಗಳ ಶಾಪಿಂಗ್‌ಗೋಸ್ಕರ ಮನೆ ಬಿಟ್ಟು ಹೋಗದೇ ಮೂರು ವರ್ಷಗಳಾಗಿ ಹೋದವು ಎನ್ನಬಹುದು. ಇಂಡಿಯನ್ ಸ್ಟೋರ್ ಮತ್ತು ಅಮೇರಿಕನ್ ಸ್ಟೋರ್‌ಗಳೆಲ್ಲವೂ ಸಹ ಹೋಮ್‌ ಡೆಲಿವರಿಯನ್ನು ಶುರು ಮಾಡಿಕೊಂಡ ಬಳಿಕ, ನಮ್ಮ ಆರ್ಡರುಗಳನ್ನು ಫ಼ೋನ್ ಮೂಲಕ ಮಾಡಿದರೆ ಸಾಕು, ಕೆಲವೊಮ್ಮೆ ಅದೇ ದಿನ ಸಂಜೆಯೇ ಮನೆಯ ಬಾಗಿಲಿಗೆ ಬಂದು ಅವರು ಸಾಮಾನುಗಳನ್ನು ತಲಿಪಿಸಿದ್ದೂ ಇದೆ. ಉದಾಹರಣೆಗೆ, ಕಳೆದ ಶುಕ್ರವಾರ ಮಧ್ಯಾಹ್ನ ಕಳುಹಿಸಿದ ಆರ್ಡರ್ ಶನಿವಾರ ಬೆಳಗ್ಗೆಯ ಹೊತ್ತಿಗೆ ಎಲ್ಲಾ ಬಂದು ಸೇರಿ ಆಗಿತ್ತು.

ಇನ್ನು, ಈ ಹಣದುಬ್ಬರದ ದೆಸೆಯಿಂದ ಮಧ್ಯಮ ವರ್ಗದ ಅನೇಕ ಕುಟುಂಬಗಳು ಹೊರಗಡೆ ಹೋಗಿ ಊಟ ಮಾಡುವುದನ್ನು ಕಡಿಮೆ ಮಾಡಿರಬಹುದು. ಕಳೆದ ಎರಡು ಮೂರು ವರ್ಷಗಳಲ್ಲಿ ಟೇಕ್‌ಔಟ್ ಆರ್ಡರುಗಳು ಹೆಚ್ಚಿದಂತೆ ಅಂಗಡಿ-ಹೋಟೆಲುಗಳಲ್ಲಿ ಹೋಗಿ ಸಮಯವನ್ನು ಕಳೆಯುವವರ ಸಂಖ್ಯೆ ಕಡಿಮೆ ಆಗಿದೆ. ಇನ್ನು ಆಫ಼ೀಸಿಗೆ ಹೋಗಿ ಬರುವವರ ಸಂಖ್ಯೆಯೂ ಏನು ಹೆಚ್ಚಿಲ್ಲ. ಮೊದಲಿನ ಹಾಗೆ ವಾರಕ್ಕೆ ಐದು ದಿನವೂ ಆಫ಼ೀಸಿಗೆ ಹೋಗಿ ಬರುವ ಸ್ಥಿತಿ ಮರುಕಳಿಸುವ ಸಾಧ್ಯತೆ ಕಡಿಮೆ.

***

ನಮ್ಮ ಆಫ಼ೀಸಿನಲ್ಲಿ ಒಬ್ಬ ಚೈನೀಸ್ ಮೂಲದ ವ್ಯಕ್ತಿಯ ಜೊತೆಗೆ ಮಾತನಾಡುತ್ತಿದ್ದೆ. ಅವನೋ, ವರ್ಷಕ್ಕೆ ಎರಡು, ಹೆಚ್ಚೆಂದರೆ ಮೂರು ಸರ್ತಿ ಆಫ಼ೀಸಿಗೆ ಬಂದರೆ ಅದೇ ದೊಡ್ಡದು. "ನಾನು ಟೆಕ್ನಿಕಲ್ ವರ್ಕರ್, ನನಗೆ ಇಂಟರ್ನೆಟ್ ಕನೆಕ್ಟ್ ಆಗಿರುವ ಲ್ಯಾಪ್‌ಟಾಪ್ ಒಂದಿದ್ದರೆ, ನಾನು ಎಲ್ಲಿಂದ ಬೇಕಾದರೂ ಕೆಲಸ ಮಾಡಬಲ್ಲೆ! ನಾನು ಇಲ್ಲಿಗೆ ಬಂದರೆ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ" ಎಂದು ಜಂಭದಿಂದ ಹೇಳಿಕೊಳ್ಳುತ್ತಿದ್ದ. ನಾನು, ಮನದಲ್ಲಿಯೇ, "ಇಂಥವರಿಂದಲೇ ಇರಬೇಕು, ನಮ್ಮ ಆಫ಼ೀಸಿನಲ್ಲಿ ಯಾರೂ ಯು.ಎಸ್. ನಿಂದ ಹೊರಗಡೆ ಕಂಪನಿ ಕಂಪ್ಯೂಟರ್ ಮತ್ತು ಫ಼ೋನುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ, ಎಂದು ಆರ್ಡರ್ ಹೊರಡಿಸಿರೋದು" ಎಂದುಕೊಂಡೆ. ಅವನ ಜೊತೆ ಮಾತನಾಡುತ್ತಾ ಒಂದು ವಿಷಯ ಯೋಚಿಸುವಂತಾಯ್ತು, ಅವನು ಅಮೇರಿಕದಲ್ಲಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಇದ್ದರೂ, ಯಾವ ವಿಚಾರದಲ್ಲೂ ಅವನು ಅಮೇರಿಕನ್ ಆಗಲಿಕ್ಕೆ ಹೇಗೆ ಸಾಧ್ಯ?

ಅವನು ಇಲ್ಲಿ ಇಷ್ಟು ವರ್ಷ ಇದ್ದರೂ, ಅವನ ಇಂಗ್ಲೀಷ್ ಬಳಕೆ ಅಷ್ಟಕ್ಕಷ್ಟೇ. ನಮ್ಮ ಸಂಭಾಷಣೆಯಲ್ಲಿ, ನಾನು ಹೇಳಿದ, "Better get your ducks in a row!" ಎಂಬ ಮಾತಿಗೆ ಅವನು ಕಕ್ಕಾಬಿಕ್ಕಿಯಾಗಿ, ಹಾಗಂದ್ರೆ? ಎಂದು ಕೇಳಿದ... ಅದಕ್ಕೆ ನಾನು, "Make proper plans, get things ready!" ಎಂದು ಸಮಜಾಯಿಷಿ ಹೇಳಿ ಅವನನ್ನು ಸಮಾಧಾನ ಪಡಿಸುವಂತಾಯ್ತು!

ಅವನು ಮೊದಲೇ ಶತಮೊಂಡ, ಈಗಂತೂ ಮುನಿಸಿಕೊಂಡಿದ್ದಾನೆ ಎನ್ನುವಂತೆ, ಸುಮಾರು ಕಾಲು ಶತಮಾನಕ್ಕೂ ಹೆಚ್ಚು ಅಮೇರಿಕದಲ್ಲಿ ಕಳೆದಿದ್ದರೂ, ಅಮೇರಿಕನ್ ವ್ಯವಸ್ಥೆಯಲ್ಲಿ ಆ ವ್ಯಕ್ತಿ ನೇರವಾಗಿ ಪಾಲ್ಗೊಂಡಿದ್ದಂತೆ ಕಾಣಿಸಲಿಲ್ಲ. ತಮ್ಮ ಉಡುಗೆ-ತೊಡುಗೆಯಿಂದ ಹಿಡಿದು, ತಾವು ಶಾಪ್ ಮಾಡುವ ಅಂಗಡಿಗಳು ಎಲ್ಲವೂ ಚೈನೀಸ್ ಮಯವಾಗಿದ್ದರೆ, ತಾವು ಮಾತನಾಡುವ ಭಾಷೆ ಚೈನೀಸ್ ಆಗಿದ್ದು, ತಮ್ಮ ಫ಼ೋನಿನಲ್ಲಿರುವ ನೂರಕ್ಕೆ ತೊಂಬತ್ತರಷ್ಟು ಜನರು ಚೈನೀಸ್ ಆಗಿದ್ದರೆ, ಇಂತಹವರು ಅದು ಯಾವ ರೀತಿಯಲ್ಲಿ "ಅಮೇರಿಕನ್" ಆಗಲಿಕ್ಕೆ ಸಾಧ್ಯ?

ಇಂಥವರಿಗೆ ಆಫ಼ೀಸಿಗೆ ಬರಲು ಕಷ್ಟವಾಗದೇ ಇನ್ನೇನು? (ಹೀಗೇ ಬಂದ ಮತ್ತೊಂದು ಮಾಹಿತಿಯ ಪ್ರಕಾರ, ಈ ಚೈನೀಸ್ ದಂಪತಿಗಳು ಒಂದು ಅಮೇಜ಼ಾನ್ ಸ್ಟೋರ್ ಅನ್ನೂ ಕೂಡ ನಡೆಸಿಕೊಂಡು ಅದರಲ್ಲಿ ಮರ್ಚಂಟೈಸ್ ಅನ್ನು ಮಾರುತ್ತಿದ್ದಾರಂತೆ.)  ತಮ್ಮ ಸುತ್ತಮುತ್ತಲೂ ಅಂತದೇ ನೆರೆಹೊರೆ, ಎಲ್ಲೂ ಡ್ರೈವ್ ಮಾಡಲಾಗದ, ಮಾಡಲು ಅಗತ್ಯವಿಲ್ಲದ ವ್ಯವಸ್ಥೆ. ಮನೆಯಲ್ಲಿ ಕುಳಿತಲ್ಲಿಂದಲೇ ಕೆಲಸ - ಒಂದಲ್ಲದಿದ್ದರೆ ಎರಡು. ಫ಼ೋನ್ ತಿರುಗಿಸಿದರೆ ಅಗಾಧವಾದ ಮತ್ತು ಅಪರಿಮಿತವಾದ (ಚೈನೀಸ್) ಮನರಂಜನೆ ಸಿಗುವ ವ್ಯವಸ್ಥೆ. ಹೀಗಿರುವಾಗ ಯಾರು ಅಮೇರಿಕನ್ನರು, ಯಾರು ಅಲ್ಲ... ಎಂದು ಕೇಳಿಕೊಳ್ಳಬೇಕಾದ ಅನಿವಾರ್ಯತೆ!

ಈ ಉದಾಹರಣೆ ನಮಗೂ ಅನ್ವಯವಾದೀತು... ನಾವು ಭಾರತೀಯ ಊಟ-ತಿಂಡಿಯನ್ನು ಸವಿದು, ಭಾರತೀಯ ನ್ಯೂಸ್, ಟಿವಿ, ಮನರಂಜನೆಯ ಮಾಧ್ಯಮಗಳನ್ನು ಅನುಸರಿಸಿ, ಭಾರತೀಯರ ನಡುವೆಯೇ ಹೊಂದಾಣಿಕೊಂಡು ಬೆಳೆಯುವುದಾದರೆ... ನಮಗೆ ಬೇಕಾದ ಪದಾರ್ಥಗಳೆಲ್ಲವೂ ಮನೆಗೆ ಬಂದು ಬೀಳುವ ವ್ಯವಸ್ಥ ಇದ್ದರೆ... ದೇವಸ್ಥಾನ, ಕನ್ನಡ ಸಂಘ ಮತ್ತು ಇಂಡಿಯನ್  ಸಂಬಂಧಿತ ಕಾರ್ಯಕ್ರಮಗಳಿಗೆ ಮಾತ್ರ ಹೋಗಿ ಬರುವಂತಾದರೆ... ನಾವು ಅಮೇರಿಕದಲ್ಲೇ ಏಕಿರಬೇಕು? ಅಮೇರಿಕದಲ್ಲೇ ಯಾಕಾದರೂ ಇರಬೇಕು?

***

ಒಂದು ಸಮಾಜ, ದೇಶದ ಮೇಲಿನ ಅವಲಂಬನೆ ನಮ್ಮ ದೈನಂದಿನ ಅಗತ್ಯಗಳನ್ನೂ ಮೀರಿದ್ದಾಗಿರುತ್ತದೆ. ಅದು ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕ ಅಗತ್ಯಗಳನ್ನೂ ಒಳಗೊಂಡಿರುತ್ತದೆ. ಇದೇ ಅಮೇರಿಕನ್ ಸಂಬಳವನ್ನು ಬೇರೆ ಯಾವುದೋ ದೇಶದಲ್ಲಿ ಕುಳಿತುಕೊಂಡು ತೆಗೆದುಕೊಳ್ಳುವುದು ನಿಜವಾದರೆ, ಅಲ್ಲಿಗೆ ಸುಮ್ಮನೇ ಹೋಗಲಾಗುತ್ತದೆಯೇ? ನಮ್ಮ ಹಾಗೆ ಬೇರೆ ದೇಶಗಳಿಂದ ಬಂದು ಇಲ್ಲಿ ನೆಲೆಯನ್ನು ಕಂಡುಕೊಂಡವರು, ನಾವು ಯಾವಾಗಲೂ ಒಂದು ದ್ವಂದ್ವದಲ್ಲಿಯೇ ಇರುತ್ತೇವೆ. ಒಂದಿಪ್ಪತ್ತು ವರ್ಷಗಳಾದ ನಂತರ, ಅಲ್ಲಿನ ಬೇರುಗಳು ನಿಧಾನವಾಗಿ ಕಣ್ಮರೆಯಾಗುತ್ತ ಬಂದ ಹಾಗೆ, ನಾವು ಹೆಚ್ಚು ಹೆಚ್ಚು ಇಲ್ಲಿಯವರೇ ಆಗಿ ಹೋಗುತ್ತೇವೆ. ಇಲ್ಲೇ ಹುಟ್ಟಿ-ಬೆಳೆದ ನಮ್ಮ ಮಕ್ಕಳು ನಮ್ಮ ಹಾಗಂತೂ ಅಲ್ಲ... ಅವರಿಗೆ ನಮ್ಮ ಸಂಸ್ಕೃತಿಯ ಧೋರಣೆ ಏನೇ ಇದ್ದರೂ ಅದು ಕಡಿಮೆಯೇ... ಇಲ್ಲೇ ಬೆಳೆದು ಕಲಿತು, ಮುಂದೆ ಹೋಗುವ ಅವರಿಗೆ ಇಲ್ಲಿಯ ಸಂಸ್ಕೃತಿಯೇ ಮುಖ್ಯ.

ಇಲ್ಲಿ ಹುಟ್ಟಿ-ಬೆಳೆಯದಿದ್ದರೇನಂತೆ? ಇಲ್ಲೇ ದುಡಿದು, ಇಲ್ಲಿನ ವ್ಯವಸ್ಥೆಯಲ್ಲಿ ಟ್ಯಾಕ್ಸ್ ಕಟ್ಟಿ ಬದುಕುತ್ತಿಲ್ಲವೇನು? ಹಾಗಿದ್ದ ಮೇಲೆ, ನಾವು ಕಟ್ಟಿದ ಟ್ಯಾಕ್ಸ್‌ನ ಒಂದೊಂದು ಡಾಲರ್ ಮತ್ತು ಅದು ಎಲ್ಲಿ, ಹೇಗೆ ವಿನಿಯೋಗ ಆಗುತ್ತಿದೆ ಎನ್ನುವುದರಲ್ಲಿ ನಾವು ಪರೋಕ್ಷವಾಗಿ ಫಲಾನುಭವಿಗಳಾಗಿದ್ದೇವಲ್ಲವೇ? ಈ ಟ್ಯಾಕ್ಸ್‌ನಿಂದ ಉಳಿದ ಹಣ, ಮುಂದೊಂದು ದಿನ ಯುಕ್ರೇನ್‌ ಅನ್ನು ರಷ್ಯಾದಿಂದ ಸಂರಕ್ಷಿಸುವ ಹಣವಾಗಿ, ಅಥವಾ ಇಸ್ರೇಲ್‌ನಲ್ಲಿ ಸಿಡಿಯುವ ಮದ್ದುಗುಂಡುಗಳ ತಲೆಯಾಗಿ  ಬಳಕೆ ಆದೀತೆಂದು ಯಾರು ಕಂಡವರು? ಬರೀ ಟ್ಯಾಕ್ಸ್ ಕಟ್ಟಿದರೆ ಸಾಕೇ? ಅದು ಹೇಗೆ ವಿನಿಯೋಗವಾಗಬೇಕು ಅಥವಾ ಬೇಡ ಎನ್ನುವುದರಲ್ಲಾದರೂ ನಮ್ಮ ಅನಿಸಿಕೆಯನ್ನು ನಾವು ವ್ಯಕ್ತಪಡಿಸಿಕೊಳ್ಳಲಿಲ್ಲವೆಂದರೆ?

***

ಅಮೇರಿಕದ ಮುಖ್ಯ ವ್ಯಾಲ್ಯೂಗಳಲ್ಲಿ ಒಂದು ಫ಼್ರೀಡಮ್! ಇದನ್ನು ಸ್ವತಂತ್ರ, ಸ್ವಾಯುತ್ತತೆ, ಬಿಡುಗಡೆ, ಆಯ್ಕೆ ಮುಂತಾದ ಪರ್ಯಾಯ ಪದಗಳನ್ನು ಬಳಸಿ ಹೇಳಿದರೂ ಕೂಡಾ, ಇಲ್ಲಿನ ಫ಼್ರೀಡಮ್‌ಗೂ ಮತ್ತು ಉಳಿದ ದೇಶಗಳ ಫ಼್ರೀಡಮ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಉದಾಹರಣೆಗೆ, ನಾವು ಇಲ್ಲಿ ಅಮೇರಿಕನ್ ಪ್ರೆಸಿಡೆಂಟ್‌ಗಳನ್ನು ಕುರಿತು ಸಾರ್ವಜನಿಕವಾಗಿ ಜೋಕ್ ಮಾಡಿಕೊಂಡು ಕಾಮೆಡಿ ಶೋಗಳಲ್ಲಿ ನಗುವ ಹಾಗೆ, ಅನೇಕ ಪ್ರಜಾಪ್ರಭುತ್ವ ಇರುವ ದೇಶಗಳಲ್ಲಿ  ಮಾಡಲಾಗದು. ಕೋವಿಡ್ ಬಂದು ಎಲ್ಲ ದೇಶಗಳೂ ಖಡಾಖಂಡಿತ ಲಾಕ್‌ಡೌನ್‌ಗಳನ್ನು ಘೋಷಿಸಿ, ಕೆಲವು ದೇಶಗಳಲ್ಲಿ ರಸ್ತೆಯ ಮೇಲೆ ವಾಹನಗಳ ಓಡಾಟವನ್ನು ನಿರ್ಬಂಧಗೊಳಿಸಿದಾಗಲೂ, ಅಮೇರಿಕದಲ್ಲಿ ನಮ್ಮ ’ಫ಼್ರೀಡಮ್’ಗೆ ಯಾವ ಕುಂದುಕೊರತೆಯೂ ಆಗಲಿಲ್ಲ. ಒಂದು ದೇಶದಲ್ಲಿ ಬದುಕಿ, ಅಲ್ಲಿನ ನೀರು ಕುಡಿದು, ಅಲ್ಲಿನ ಅನ್ನವನ್ನು ತಿಂದ ಮೇಲೆ ಅಲ್ಲಿನ ದೇಶದ ಮೇಲೆ ಒಂದು ರೀತಿಯ ನಿಷ್ಠೆ, ಭಕ್ತಿ ಹಾಗೂ ನಿಯತ್ತು ಬರಲೇ ಬೇಕಾಗುತ್ತದೆ. ಒಂದು ವೇಳೆ ಅದು ಹಾಗಿಲ್ಲವೆಂದರೆ, ನಮ್ಮದೆಲ್ಲ ಬರೀ ಪಾಸ್‌ಪೋರ್ಟುಗಳನ್ನು ಹೊಂದಿದ, ಎದೆಕರಗದ ದೇಶಭಕ್ತಿಯ ನೋವಿರದ ನಾಗರಿಕತೆ ಆಗಿ ಹೋಗುತ್ತದೆ.

ನಾವು, ಹೆಚ್ಚಿನವರಾಗಿ, ಇಲ್ಲಿ ಇಂಜಿನಿಯರ್ ಮತ್ತು ಡಾಕ್ಟರುಗಳಾಗಿ ಬಂದೆವು, ಕೆಲಸ ಮಾಡತೊಡಗಿದೆವು. ಆದರೆ, ಇಲ್ಲೇ ಹುಟ್ಟಿ ಬೆಳೆದ ನಮ್ಮ ಮಕ್ಕಳು ಇಲ್ಲಿನ ಸೈನ್ಯವನ್ನು ಸೇರಿ ದೇಶಸೇವೆ ಮಾಡುವುದನ್ನು ನಾವು ಸುಲಭವಾಗಿ ಸಹಿಸಲಾರೆವು. ಇಲ್ಲಿನ ಸ್ಥಳೀಯ ಕಮ್ಯೂನಿಟಿ ಸರ್ವಿಸುಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಲ್ಲಿ ಹಿಂದೇಟು ಹಾಕುವುದರ ಜೊತೆಜೊತೆಗೆ ನಮ್ಮ ಮಕ್ಕಳನ್ನೂ ಆ ನಿಟ್ಟಿನಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಲಾರೆವು. ಇಲ್ಲಿನ ಬ್ಲೂ ಕಾಲರ್ ಸೇವೆ, ಸರ್ವೀಸುಗಳು ನಮಗಲ್ಲ. ಬಿಳಿ ಕಾಲರ್ ಸೇವೆ ಸರ್ವೀಸುಗಳಲ್ಲಿ ಕೈ ತುಂಬ ದುಡಿದು, ಯಶಸ್ವಿ ಜೀವನವನ್ನು ಸಾಗಿಸಿದರೆ ಸಾಕು, ಅಷ್ಟೇ!

ನಮ್ಮ ಪಕ್ಕದ ಮನೆಯಲ್ಲಿ ಇರೋರೇ ನಮಗೆ ಗೊತ್ತಿಲ್ಲದಿರುವಾಗ ಇನ್ನು ಈ ದೇಶ-ಪ್ರಪಂಚಗಳನ್ನು ಹೇಗೆ ತಿಳಿದುಕೊಂಡಾದರೂ ಏನು ಪ್ರಯೋಜನ? ಅದೆಲ್ಲ ಬೇಡ, ಇಂಟರ್ನೆಟ್ ಕನೆಕ್ಟ್ ಆಗಿರುವ ಲ್ಯಾಪ್‌ಟಾಪ್ ಒಂದನ್ನು ಕಟ್ಟಿಕೊಂಡು ಯಾವುದಾದರೊಂದು ದ್ವೀಪದಲ್ಲಿದ್ದರೂ ಸಾಕಲ್ಲ? ಅಮೇರಿಕದಲ್ಲೇ ಏಕಿರಬೇಕು?

Sunday, February 04, 2024

ಸ್ಥಳಾಂತರ

ಒಂದು ಶುಭ್ರವಾದ ಮಧ್ಯಾಹ್ನ ಎಲ್ಲರೂ ಸುಧಾ ಹೋಟ್ಲು ಸರ್ಕಲ್ ಹತ್ರ ಸೇರಿದ್ರು. ಅದು ಸರ್ಕಲ್ ಅಂದ್ರೆ ನಾಲ್ಕು ರಸ್ತೆ ಕೂಡೋ ಜಾಗಾನೇ ಅಂತ ಆಗಬೇಕಿಲ್ಲ.  ಅದೊಂದು ಸಣ್ಣ ವ್ಯಾಪಾರದ ಸ್ಥಳ. ಒಂದು ಮುಖ್ಯ ರಸ್ತೆ, ಅದಕ್ಕೆ ಲಂಭವಾಗಿ ಹೊರಟಿರೋ ಮತ್ತೊಂದು ರಸ್ತೆ ಅನ್ನಬೇಕು ಅಷ್ಟೇ. ಈ ಊರಿನ ಮುಖ್ಯವಾದ ಸ್ಥಳಕ್ಕೆ ಯಾವ ಒಬ್ಬ ಮಹಾತ್ಮರ ಹೆಸರೂ ಇನ್ನೂ ಯಾರೂ ಏಕೆ ಇಟ್ಟಿಲ್ಲ ಅನ್ನೋದು ಒಳ್ಳೆಯ ಪ್ರಶ್ನೆ.

ಹೀಗಿರೋ ಸ್ಥಳ, ಬೆಳಿಗ್ಗೆ ಮತ್ತು ಸಂಜೆ ಹೂವು ತರಕಾರಿ ಮಾರೋ ಜನರಿಂದ ಮತ್ತು ಅವನ್ನು ಖರೀದಿ ಮಾಡೋ ಗ್ರಾಹಕರಿಂದ ಒಂದು ರೀತಿ ಗಿಜುಗುಟ್ಟುತ್ತಾ ಇರೋದನ್ನ ಬಿಟ್ರೆ, ಮಧ್ಯಾಹ್ನ ಊಟದ ಸಮಯವೊಂದನ್ನು ಬಿಟ್ಟು ಉಳಿದೆಲ್ಲ ಸಮಯ ತಣ್ಣಗೇ ಇರೋದು ಅಂತ ಹೇಳ್‌ಬಹುದು.

ಈ ಮೂರು ರಸ್ತೆಗಳು ಕೂಡುವಂತ ಸ್ಥಳದಲ್ಲಿ ಇರೋದು ಸುಧಾ ಹೋಟ್ಲು. ಘಟ್ಟದ ಕೆಳಗಿಂದ ದಶಕಗಳ ಹಿಂದೆ ಬಂದು, ಈ ಊರಿನಲ್ಲಿ ನೆಲೆನಿಂತ ಒಂದು ಸಣ್ಣ ಭಟ್ಟರ ಹೋಟೆಲ್. ಅಂದು ಅವರ ಹಿರಿಯ ಮಗಳ ಹೆಸರಿನಿಂದ ಆರಂಭವಾಗಿದ್ದು, ಇವತ್ತಿಗೂ ಇನ್ನೂ ಮುಂದುವರೆಯುತ್ತಿದೆ. ಭಟ್ಟರು ಕಾಲವಾಗಿ ಅದೆಷ್ಟೋ ವರ್ಷಗಳು ಸಂದಿವೆ. ಅವರ ಹೆಂಡತಿ ಇನ್ನೂ ತಮ್ಮ ಎಂಬತ್ತರ ಪ್ರಾಯದಲ್ಲಿ ಇದ್ದರೂ, ಆಗಾಗ್ಗೆ ಹೋಟೆಲ್ ಹಿಂದೆ ಮುಂದೆ ಸುಳಿಯುತ್ತಾರಾದರೂ, ಅವರು ಹಾಕಿಕೊಟ್ಟ ರೆಸಿಪಿ ಅಲ್ಲಿನ ಜನರ ಬಾಯಿ ರುಚಿಯಲ್ಲಿ ಗಾಢವಾಗಿ ನಿಂತು ಬಿಟ್ಟಿದೆ.

ದಿನ ಬೆಳಗ್ಗೆ ತಿಂಡಿಗೆ ಜನ ಅಷ್ಟೊಂದು ಬರ್ತಿರಲಿಲ್ಲ, ಆದ್ರೆ, ಮಧ್ಯಾಹ್ನ ಊಟದ ಹೊತ್ತಿಗೆ ಮಾತ್ರ ಜನ ದಂಡಿಯಾಗಿ ಅದೆಲ್ಲೆಲ್ಲಿಂದಲೋ ಬರೋರು. ಅಮ್ಮನ ಕೈ ರುಚಿ - ಅಂತಲೇ ಫ಼ೇಮಸ್ಸಾಗಿರೋ ಘಮಘಮಿಸೋ ಉಪ್ಪಿಟ್ಟು, ಚಿತ್ರಾನ್ನ, ಪುಳಿಯೋಗರೆ, ಅನ್ನ-ಸಾಂಬಾರ್ ಜೊತೆ ಜೊತೆಗೆ ಕೀರು-ಪಾಯಸ ಅಂತಾ ಏನಾದ್ರೂ ಸಿಹಿ ಪ್ರತಿದಿನ ಸಿಕ್ಕೇ ಸಿಗೋದು. ಈ ಬೆಲೆ ಏರಿಕೆ ದಿನಗಳಲ್ಲಿ ಕಡಿಮೆ ಬೆಲೆಗೆ ಪುಷ್ಕಳ ಭೋಜನ ಅನ್ನೋ ಮನೆ ಮಾತಿನ ಹಿನ್ನೆಲೆಯಲ್ಲಿ ನಮ್ಮೂರಿಗೆ ಬಂದೋರೆಲ್ಲ ಸುಧಾ ಹೋಟ್ಲಲ್ಲೇ ಊಟ ಮಾಡೋದಕ್ಕೆ ಖಾಯಸ್ ಮಾಡ್ತಿದ್ರು ಅನ್ನಬಹುದು.

ಎಲ್ಲರ ಬಾಯಲ್ಲಿ "ಸುಧಾ ಹೋಟ್ಲು" ಅಂತ ಇದ್ದುದ್ದಕ್ಕೆ, ಭಟ್ಟರ ಮಗ "ಹೋಟೇಲ್ ಸುಧಾ" ಎಂದು ಇಂಗ್ಲೀಷಿನಲ್ಲಿ ಬರೆಸಿ ದಪ್ಪ ಅಕ್ಷರಗಳಲ್ಲಿ ಬೋರ್ಡು ಹಾಕಿದ ದಿನವೇ ನಮ್ಮೂರಿಗೆ ಆಧುನಿಕತೆ ಬಂದಿದ್ದೂ ಅಂತ ಅನ್ಸುತ್ತೆ. ಯಾರು ಏನ್ ಬೇಕಾದ್ರೂ ಬೋರ್ಡ್ ಹಾಕ್ಕೊಳ್ಳಿ, ಜನ್ರ ಬಾಯಲ್ಲಿ ಅದು ಸುಧಾ ಹೋಟ್ಲು, ಕೆಲವೊಮ್ಮೆ ಓಟ್ಲು ಆಗಿದ್ದು, ಮತ್ತೆ ಹಾಗೇ ಎಲ್ಲ ಕಡೆಗೂ ಹೇಳಿ-ಕೇಳೀ ಬರ್ತಾ ಇದ್ದದ್ದು ನಮ್ಮೂರಿನ ಒಂದು ಅಂಗವಾಗಿದ್ದಂತೂ ನಿಜ.

ಕಾಲ ಕ್ರಮೇಣ ಎಲ್ಲರೂ ಎಲ್ಲ ಕಡೆಗಳಲ್ಲಿ ವಲಸೆ ಹೋಗಿ ನೆಲೆ ನಿಂತ ಮೇಲೆ, ಭಟ್ಟರ ಕೊನೇ ಮಗ ಕೊಟ್ರೇಶಿ ಹೋಟ್ಲನ್ನ ಇನ್ನೂ ನಡೆಸಿಕೊಂಡು ಬರ್ತಾ ಇರೋದನ್ನ ಎಂಬತ್ತರ ಗಡಿ ದಾಟಿ ನಿಂತು, ಟೊಂಕ ಬಗ್ಗಿದ್ದರೂ ಮೈ ಬಗ್ಗದೇ ಇನ್ನೂ ಗಟ್ಟಿಯಾಗೇ ಇರೋ ಅಮ್ಮ, ಇವತ್ತಿಗೂ ತನ್ನ ಕೈ ರುಚಿ ಹೋಟೆಲಿನ ಗ್ರಾಹಕರಿಗೆ ತಪ್ಪದಂತೆ ಜತನದಿಂದ ನೋಡಿಕೊಂಡಿರುವುದು ನಮ್ಮೂರಿನ ಮೂರು ತಲೆಮಾರುಗಳ ಬಾಯಿ ರುಚಿ ಆಗಿ ಹೋಗಿದೆ ಎನ್ನಬಹುದು.

***

ಬಾಯಲ್ಲಿ ಮುಂಡು ಬೀಡಿ ಇಟ್ಟುಕೊಂಡು, ಮುಂಡಾಸ ಕಟ್ಟಿಕೊಂಡು ಅಡ್ಡಪಂಚೆಯನ್ನು ಗಂಟು ಹಾಕಿ ಗಟ್ಟಿಗೊಳಿಸಿದ ದಾಂಡಿಗರು ಓಡಾಡುವ ನಮ್ಮೂರಿನ ಬೀದಿಗಳಲ್ಲಿ ಕ್ರಮೇಣ ಪ್ಯಾಂಟು-ಶರಟುಗಳು ಓಡಾಡಲಾರಂಭಿಸಿದವು. ಅದೆಲ್ಲೋ ಒಂದು ಫ಼್ಯಾಕ್ಟರಿ ತೆಗೆದರು ಎನ್ನುವ ಹೆಸರಿನಲ್ಲಿಯೋ, ಅಥವಾ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿ ಹಾದು ಹೋಗುವ ಹೆದ್ದಾರಿಯ ದೆಸೆಯಿಂದ ನಮ್ಮೂರಿನಲ್ಲಿ ಆಗಂತುಕರ ಮತ್ತು ಅಪರಿಚಿತರ ಲವಲವಿಕೆಗಳು ಜೋರಾಗತೊಡಗಿದವು. ಊರಿಗೆ ನಾಲ್ಕು ಲ್ಯಾಂಡ್ ಲೈನುಗಳ ದೂರವಾಣಿ ಇದ್ದಂತಹ ಊರಿನಲ್ಲಿ ದಿಢೀರನೆ ಎಲ್ಲೆಂದರಲ್ಲಿ ಜಂಗಮವಾಣಿಗಳು ಬಂದವೆಂದರೆ? ಅವೇ ರಸ್ತೆಗಳು, ಅವು-ಅವೇ ಊರುಗಳು. ಆದರೆ, ಜನರು ನಿಂತಲ್ಲಿ ನಿಲ್ಲಲಾರರಾದರು. ಹೆಚ್ಚು ಹೆಚ್ಚು ಓಡಾಡುವುದೇ ಉದ್ದೇಶವೆಂಬಂತೆ ಎಲ್ಲರೂ ಎಲ್ಲ ಕಡೆಗೂ ಎಲ್ಲ ಕಾಲಗಳಲ್ಲಿ ಹರಡಿಕೊಳ್ಳುತ್ತಾ ಹೋದರು. ಒಂದು ಕಾಲದಲ್ಲಿ ದುಡ್ಡು ತೆಗೆದುಕೊಂಡು ಊಟ ಕೊಡುವ ಹೋಟೆಲಿನವರೂ ಸಹ, ತಮ್ಮಲ್ಲಿ ಬಂದು ತಿಂದು ಹೋಗುತ್ತಿದ್ದವರನ್ನು ತಮ್ಮ ಮನೆಯವರಂತೆಯೇ ವಿಚಾರಿಸಿಕೊಂಡು, ಅವರ ಹಿಂದು-ಮುಂದುಗಳನ್ನು ಅರಿತುಕೊಂಡಿರುತ್ತಿದ್ದರು. ಸುಧಾ ಹೋಟ್ಲು ಎನ್ನುವ ವೇದಿಕೆಯೊಂದರಲ್ಲೇ ಅನೇಕ ಆಗು-ಹೋಗುಗಳ ಬಗ್ಗೆ ವ್ಯಾಖ್ಯಾನಿಸಲಾಗುತ್ತಿತ್ತು. ಇನ್ನು ಊರಿನಲ್ಲಿದ್ದ ಸೆಲೂನುಗಳೂ, ಬೀಡಾ ಅಂಗಡಿಗಳೂ, ಕಿರಾಣಿ ಗುರಾಣಗಳೂ, ಹಿಟ್ಟಿನ ಮಿಲ್ಲುಗಳೂ ಇನ್ನೆಲ್ಲವನ್ನೂ ಒಟ್ಟು ಹಾಕಿ ನೋಡಿದರೆ, ಯಾವೊಂದು ಸಂವಹನದ ಸಮರ್ಪಕ ವ್ಯವಸ್ಥೆಯಿಲ್ಲದಿದ್ದರೂ ಎಲ್ಲವೂ ಸಮರ್ಪಕವಾಗೇ ನಡೆದುಕೊಂಡು ಹೋಗುತ್ತಿತ್ತು. ಊರಿರುವಲ್ಲಿ ಪೋಸ್ಟ್ ಆಫ಼ೀಸು ಇರುವಷ್ಟೇ ಸಹಜವಾಗಿ ಒಮ್ಮೊಮ್ಮೆ ಹೊಡೆದಾಟಗಳೂ, ರೋಧನಗಳೂ, ಒ.ಸಿ. ನಂಬರುಗಳ ಎಕ್ಸ್ ಚೇಂಜುಗಳೂ, ಚುನಾವಣಾ ಪ್ರಣಾಳಿಕೆ ಮತ್ತು ಷಡ್ಯಂತ್ರಗಳೂ ಮೊದಲಾಗಿ ಎಲ್ಲವೂ ಇಂತಹ ಪಬ್ಲಿಕ್ ಸ್ಥಳಗಳಲ್ಲೇ ನಡೆಯುತ್ತಿದ್ದವೆಂದರೆ?

ಈ ಸಂಬಂಧವಾಗೇ ನಮ್ಮ ಹಿರಿಯರು ಹೇಳಿದ್ದಿರಬಹುದು - ನಾಲ್ಕು ಜನ ನಂಬುವಂತೆ ಬದುಕು ಮಗಾ! ಎಂಬುದಾಗಿ.

***

ಇತ್ತೀಚೆಗಂತೂ ನಮ್ಮೂರಿನ ರಸ್ತೆಗಳಲ್ಲಿ ಹೊರಗಿನವರದೇ ಆಟಾಟೋಪ. ಮಿರಿಮಿರಿ ಮಿಂಚುವ ಕಾರಿನಿಂದ ಇಳಿದು ರಸ್ತೆಗೆ ಓಡುವ ಮಕ್ಕಳಿಗೆ ಅವರ ಹಿಂದೆ ಮುಂದೆ ಯಾವ ವಾಹನಗಳು ಬಂದರೂ ಕಾಣವು. ಇಂತಹ ಮಕ್ಕಳನ್ನೇ ತಮ್ಮ ವೃತ್ತದ ಕೇಂದ್ರದಲ್ಲಿಟ್ಟುಕೊಂಡು ಸುತ್ತುವ ಪೋಷಕರಿಗೆ ಯಾವಾಗಲೂ ಅವುಗಳ ಸುತ್ತ ಸುತ್ತುವುದೇ ಕಾಯಕವಾಗಿ ಪರಿಣಮಿಸಿದೆ. ಗ್ರಾಹಕರ ಸಂತುಷ್ಟಿಯೇ ನಮ್ಮ ಖುಷಿ, ಎಂದು, ಒಂದಕ್ಕೆರಡು ರೇಟ್ ಹಾಕಿ ಸಾಮಾನ್ಯ ಗೃಹಬಳಕೆ ವಸ್ತುಗಳನ್ನೇ ಬಿಂಕ ಬಿನ್ನಾಣದಿಂದ ಮಾರಾಟ ಮಾಡುವ ಅಂಗಡಿಯ ಹುಡುಗಿಯರು ಊರಿನ ಸೇಲ್ಸ್ ಅನ್ನು ಅದ್ಯಾವಾಗಲೋ ಹೆಚ್ಚಿಸಿಯಾಗಿದೆ. ಅದೇನೇ ಆಗಲಿ, ಬಿಡಲಿ ಇವತ್ತಿಗೂ ಸುಧಾ ಹೋಟ್ಲಿಗೆ ಹೋಗುವ ಗ್ರಾಹಕರ ಸಂಖ್ಯೆಯಲ್ಲಾಗಲೀ, ಆ ಹೋಟೆಲಿನ ಆಯ-ವ್ಯಯದಲ್ಲಾಗಲೀ ಯಾವ ವ್ಯತ್ಯಾಸವೂ ಆದಂತಿಲ್ಲ... ಎಂದುಕೊಳ್ಳುವ ಹೊತ್ತಿಗೆ...

ಒಂದು ದಿನ ಒಳ್ಳೆಯ ನಾಜೂಕಾದ ಬಟ್ಟೆ ಧರಿಸಿದ ಯುವಕರು ದಿಢೀರನೇ ಕಾರಿನಲ್ಲಿ ಬಂದರು. ಆ ಮೂರು ರಸ್ತೆಗಳು ಕೂಡುವ ಕೇಂದ್ರದಲ್ಲಿ, ಸುಧಾ ಹೋಟ್ಲು ಇರುವ ಮೂಲೆಯಲ್ಲಿ ಹೊಸ ಬೈಕ್ ಶೋ ರೂಮ್ ಒಂದು ಆರಂಭವಾಗುವ ಸೂಚನೆಗಳನ್ನು ನೀಡಿ, ತಣ್ಣಗಿದ್ದ ಊರಿನಲ್ಲಿ, ಹೊಸ ಕಲರವವನ್ನು ಹುಟ್ಟು ಹಾಕುವ ಹಾಗೆ, ನೀರಿನಲ್ಲಿ ಕಲ್ಲು ಎಸೆದು ಹೋದಂತೆ ಮಾಡಿ ಹೋದರು.

ಶೋ ರೂಮ್ ತೆರೆದ ಮೊದಲ ವಾರ ಬೈಕ್ ಶೋ ರೂಮಿಗೆ ಬರುವ ಗ್ರಾಹಕರನ್ನು, ಲಲನೆಯರು ಹೂವಿನ ಪಕಳೆಗಳನ್ನು ಅವರು ನಡೆದು ಬರುವ ದಾರಿಯಲ್ಲಿ ಎರಚಿ ಸ್ವಾಗತಿಸುತ್ತಾರಂತೆ ಎನ್ನುವ ಸುದ್ದಿ ನಮ್ಮೂರಿನಲ್ಲಿ ಸದ್ದು ಮಾಡತೊಡಗಿತು. ಆದರೆ, ಒಂದು ಕಡೆ ಚಂಬಣ್ಣನವರ ಕಿರಾಣಿ ಅಂಗಡಿ, ಅದರ ಪಕ್ಕ ರಾಜೂ ಇಟ್ಟಿರುವ ಇಸ್ತ್ರಿ ಅಂಗಡಿ, ಅದರ ಪಕ್ಕದಲ್ಲಿ ಸೇಟ್ ಇಟ್ಟುಕೊಂಡ ಸೆಲೂನನ್ನು ಬಿಟ್ಟರೆ,. ಆ ಸರ್ಕಲ್‌ನಲ್ಲಿ ಇದ್ದದ್ದು ಸುಧಾ ಹೋಟ್ಲು ಮಾತ್ರವೇ! ಈ ಬೈಕ್ ಶೋ ರೋಮ್ ಅನ್ನು ಕಟ್ಟಲು, ಬೆಳೆಸಲು ಯಾವುದನ್ನ ಆಹುತಿ ತೆಗೆದುಕೊಳ್ಳುತ್ತಾರೋ ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಯಿತು.

ಬೆಳೆಯುವ ಊರಿಗೆ ಬೈಕುಗಳು ಬೇಕು ನಿಜ... ಆದರೆ, ಕಿರಾಣಿ ಅಂಗಡಿ, ಇಸ್ತ್ರಿ ಅಂಗಡಿ, ಕಟಿಂಗ್ ಶಾಪು ಮತ್ತು ಎಲ್ಲರ ನೆಚ್ಚಿನ ಹೋಟೆಲ್ಲು... ಯಾರು ಯಾರಿಗೆ ಬೇಕು  ಯಾರು ಯಾರಿಗೆ ಬೇಡ? ಹೀಗಿರುವಾಗ ಆ ಒಂದು ಕರಾಳ ದಿನವೂ ಬಂದೇ ಬಿಟ್ಟಿತು.

ಸುಮಾರು ಐದಾರು ಕಾರುಗಳಲ್ಲಿ ಬಂದಿಳಿದ ದಾಂಡಿಗರು, ಹೊಟೇಲಿನ ಕಡೆಗೆ ಧಾವಿಸಿದರು. ಇವರೆಲ್ಲ ಗುಂಪಾಗಿ ಒಟ್ಟಿಗೆ ಬಂದ ರಭಸವನ್ನು ಕಂಡು, ಗಲ್ಲಾ ಪೆಟ್ಟಿಗೆ ಮುಂದೆ ಕುಳಿತಿದ್ದ ಕೊಟ್ರೇಶಿ, ’ಪರವಾಗಿಲ್ಲ ಇವತ್ತು ಜನ ಮುಂಜಾನೆ ಹನ್ನೊಂದೂವರೆಗೇ ಊಟಕ್ಕೆ ಬರೋಕೆ ಶುರು ಮಾಡಿದ್ದಾರೆ...’ ಎಂದು ಕಣ್ಣರಳಿಸಿ ನೋಡುತ್ತಿರುವ ಹೊತ್ತಿಗೆ ಅದೇನೇನೋ ಮಾತುಗಳು ಕೇಳ ತೊಡಗಿದವು. ಬಂದ ದಾಂಢಿಗರು ಗಡ್ಡ ಧಾರಿಗಳು, ಅದೆಲ್ಲೋ ದೂರದ ಪಂಜಾಬಿನ ಲೂಧಿಯಾನದವರಂತೆ... ಅವರಲ್ಲಿ ಕೆಲವರು ದಷ್ಟಪುಷ್ಟರೂ, ಕೈಗೆ ವಿಷ್ಣುವರ್ಧನ್ ಬಳೆ ಧರಿಸಿದವರೂ ಇದ್ದರು. ಇಂಗ್ಲೀಷು, ಹಿಂದಿಗಳಲ್ಲಿ ಮಾತನಾಡುತ್ತಿದ್ದ ಜನರು ಹೋಟೇಲಿನಲ್ಲಿ ಒಮ್ಮೆಲೇ ಕೋಲಾಹಲ ನಡೆಸತೊಡಗಿದರು. ಅವರ ಮಾತಿನ ಸಾರಾಂಶದಂತೆ ಸುಧಾ ಹೋಟ್ಲು ಜಾಗದ ಸಮೇತ ಮಾರಾಟವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಬೈಕ್ ಶೋ ರೂಮ್ ಆಗಿ ಪರಿವರ್ತನೆಗೊಳ್ಳಲಿದೆ. ಈ ಆಸ್ತಿಯ ವ್ಯಾಪಾರವನ್ನೆಲ್ಲ ಕೊಟ್ರೇಶಿಯ ಅಣ್ಣ, ಆನಂದನೇ ಬೆಂಗಳೂರಿನಲ್ಲಿ ಕುಳಿತು ಮಾಡಿದ್ದಾನಂತೆ. ಅವನ ಹೆಂಡತಿಗೂ ಕೊಟ್ರೇಶಿಗೂ ಅಷ್ಟಾಗಿ ಆಗಿ ಬರದಿದ್ದರಿಂದ ಅಣ್ಣ ತಮ್ಮಂದಿರಲ್ಲಿ ಯಾವೊಂದು ಬಾಂಧವ್ಯವೂ ಉಳಿಯದೇ, ಕೊಟ್ರೇಶಿ ಈ ರೀತಿ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಸ್ಥಿತಿ ಬಂದೊದಗಿತಂತೆ.

ಈ ದಾಂಡಿಗರೆಲ್ಲ ಬಂದು ಬೆಂಚು-ಮೇಜುಗಳನ್ನು ಎಳೆದಾಡಿ ಒಂದು ಕಡೆಗೆ ಗುಂಪು ಹಾಕುವ ಹೊತ್ತಿಗೆ ಅಲ್ಲಿ ಕಣ್ಣೀರಿಡುವ ದೃಶ್ಯ ಭಟ್ಟರ ಹೆಂಡತಿಯದು...’ನಾನು ಸಾಯುವ ಮುಂಚೆ ಇಂತದ್ದನ್ನು ನೋಡಬೇಕಿತ್ತಾ? ದೇವರೇ, ನನ್ನನ್ಯಾಕೆ ಇನ್ನೂ ಜೀವಂತವಾಗಿಟ್ಟಿದ್ದೀಯ?’ ಎಂದು ಪ್ರಲಾಪಿಸಿ ಆರ್ತತೆಯಲ್ಲೂ ಇರುವಿಕೆಯನ್ನು ದೂರಿ, ಸುತ್ತಲಿನವರಿಂದ ಸಂತಾಪವನ್ನು ಗಳಿಸಿಕೊಳ್ಳುವುದರಲ್ಲೇನೋ ಶಕ್ತಳಾದ ಹೆಂಗಸು, ತನ್ನ ಹೋಟಲನ್ನು ಉಳಿಸಿಕೊಳ್ಳಲು ಅಸಹಾಯಕಳಾಗೇ ಕಂಡಳು.

ಹೋಟೆಲಿನ ನೈಋತ್ಯ ಮೂಲೆಯಲ್ಲಿ ಇನ್ನೂ ಈಗಷ್ಟೆ ಕತ್ತರಿಸಿಟ್ಟ ಕೊತ್ತುಬರಿ ಸೊಪ್ಪು ಮತ್ತು ಸಬ್ಸಿಗೆ ಸೊಪ್ಪುಗಳು ಚಟ್ಟಂಬಡೆಯಾಗಿ ಹೊರಬರುವ ಹುನ್ನಾರದಲ್ಲಿ ಕಲಿಸಿದ ಹಿಟ್ಟಿನೊಂದಿಗೆ ಒಡನಾಟವನ್ನು ಬೆಳೆಸುವ ಆಲೋಚನೆಯಲ್ಲಿದ್ದವು. ಗ್ಯಾಸ್ ಒಲೆಯ ಮೇಲೆ ದೊಡ್ಡ ಬಾಂಡಲೆಯೊಂದು ತನ್ನ ಹಿನ್ನೆಲೆಯನ್ನು ಕೆನ್ನಾಲಗೆಗಳಿಗೆ ಒಡ್ಡಿಕೊಂಡಿದ್ದರೂ ಶಾಂತ ಚಿತ್ತನಾಗಿ ತನ್ನೊಳಗೆ ಹುದುಕಿಕೊಂಡಿದ್ದ ಎಣ್ಣೆಯೊಳಗೆ ಒಂದು ಗುಳ್ಳೆಯೂ ಬಾರದಂತೆ ನೋಡಿಕೊಂಡಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಒಕ್ಕರಿಸುವ ಹಸಿದ ಗ್ರಾಹಕರ ದಣಿವಾರಿಸಲು ಎಲ್ಲ ಸ್ಟೀಲಿನ ನೀರಿನ ಜಗ್ಗುಗಳೂ ತಮ್ಮೊಳಗೆ ತುಂಬಿಕೊಂಡಿದ್ದ ನೀರಿನ ಅಂತರಂಗದ ಶಕ್ತಿಯ ಫಲದಿಂದ ತಮ್ಮ ಹೊರ ಮೇಲ್ಮೈಯಲ್ಲಿಯೂ ಸಣ್ಣ ನೀರಿನ ಹನಿಗಳನ್ನು ಪ್ರಚುರ ಪಡಿಸತೊಡಗಿದ್ದವು.  ಮೇಲೆ ಇದ್ದ ಕರಿ ಬಣ್ಣದ ಮಂಗಳೂರು ಹಂಚಿನ ಸೂರಿನ ನಡುವೆ ಒಂದೇ ಒಂದು ಅಡ್ಡ ಪಟ್ಟಿಯ ಸಹವಾಸಕ್ಕೆ ಅಂಟಿಕೊಂಡಿದ್ದ ಫ಼್ಯಾನು, ತಾನು ನಿಧಾನವಾಗಿ ತಿರುಗುತ್ತ, ಗಾಳಿ ಬೀಸುವುದಿರಲಿ, ತನ್ನ ಸುತ್ತಲಿನ ಜೇಡರ ಬಲೆಗಳಿಗೆ, ’ಹತ್ತಿರ ಬಂದೀರಿ ಜೋಕೆ!’ ಎಂದು ಸೂಚನೆ ನೀಡುತ್ತಿದ್ದಂತಿತ್ತು.

ಹೊಟ್ಟೆ, ಮೈ-ಕೈ ತುಂಬಿ ಕೊಂಡ ದಾಂಡಿಗರಿಗೆ ಹಸಿದವರ ಸಂಕಟಗಳು ಅರ್ಥವಾಗುವುದಾದರೂ ಹೇಗೆ? 'ಇವತ್ತಿನಿಂದ ಹೋಟೆಲ್ ಬಂದ್!' ಎಂದು ದೊಡ್ಡ ದರ್ಪದ ಧ್ವನಿಯಲ್ಲಿ ಹೇಳಿ ಬಿಟ್ಟರೆ ಸಾಕೆ? ಒಂದು ಊರಿನ ಹೃದಯ ಭಾಗದಲ್ಲಿ ಮೂರು ತಲೆಮಾರುಗಳಿಂದ ಜನರನ್ನು ಸಂತೈಸಿಕೊಂಡು ಬಂದ ಅನ್ನಪೂರ್ಣೇಶ್ವರಿಯ ಅಪರಾವತಾರ ಸುಧಾ ಹೋಟೇಲಿನ ಆಂತರ್ಯದ ಆಳ ಕೇವಲ ಇಷ್ಟೆಯೇ?

ಈಗಾಗಲೇ ಮಧ್ಯಾಹ್ನದ ಊಟದ ಹೊತ್ತಾಗುತ್ತಿದ್ದರಿಂದ, ಕೊಟ್ರೇಶಿ ತನ್ನ ಹರುಕು ಮುರುಕು ಹಿಂದಿಯಲ್ಲಿ ಒಳ ನುಗ್ಗಿದ ದಾಂಡಿಗರಿಗೆ ಒಂದೆರಡು ಗಂಟೆ ಸಮಯಾವಕಾಶಕ್ಕಾಗಿ ಕಾಡಿ ಬೇಡಿದ ಮೇಲೆ, ಅವರು ಒಪ್ಪಿಕೊಂಡರು. ಬಂದ ಜನರೆಲ್ಲ ಮುಗಿ ಬಿದ್ದು ಊಟ ಮಾಡುವುದರ ಜೊತೆಗೆ, ಇನ್ನು ನಾಳೆಯಿಂದ ಎಲ್ಲಿಗೆ ಹೋಗೋದು ಎಂದು ಯೋಚಿಸ ತೊಡಗಿದರು. ಸರ್ಕಲ್ಲಿನಲ್ಲಿ ಹೊಸದಾಗಿ ಸಂಜೆಗೆ ಸೇರಿಕೊಂಡ ಪಾನೀಪೂರಿ ತಳ್ಳುಗಾಡಿಗಳಿಂದ ಎಂದಾದರೂ ಹೊಟ್ಟೆ ತುಂಬುವುದುಂಟೇ? ಒಂದು ವೇಳೆ ಹೊಟ್ಟೆ ತುಂಬಿದರೂ, ಅಮ್ಮನ ಕೈ ರುಚಿಯ ಅಡುಗೆ ಎಂದಾದರೂ ಸಿಗುವುದೇ? "ಛೇ, ಈ ಊರಿಗೆ ಈ ರೀತಿ ಕಲಿಗಾಲ ಬರಬಾರದಿತ್ತಪ್ಪಾ...’ ಎಂದು ಎಲ್ಲರೂ ಮಮ್ಮಲ ಮರುಗುವವರೇ!

***

ಇನ್ನೇನು ಮಧ್ಯಾಹ್ನದ ಊಟವಾದರೂ ಬಂದ ಜನ ಹೋಗಲೊಲ್ಲರು. ಇಷ್ಟರಲ್ಲೇ ಒಂದಿಷ್ಟು ಮಂದಿ ಊರಿನ ಹಿರಿಯರಾದ ಜರ್ಮಲೆ ಚಂದ್ರಣ್ಣನವರನ್ನು ಕರೆತಂದರು. ಕೊಟ್ರೇಶಿ ತನ್ನ ಪೋನಿನಿಂದ ತನ್ನ ಅಣ್ಣ ಆನಂದನಿಗೆ ಡಯಲ್ ಮಾಡಿ, ಚಂದ್ರಣ್ಣನಿಗೆ ಫೋನು ಕೊಟ್ಟ. ಚಂದ್ರಣ್ಣ ಅದ್ಯಾವ ಕಾರಣಕ್ಕೆ ಸ್ಫೀಕರಿನಲ್ಲಿ ಹಾಕಿದರೋ ಗೊತ್ತಿಲ್ಲ,... ಆ ಕಡೆಯಿಂದ ಆನಂದ, "ಚಂದ್ರಣ್ಣಾ... ನೀವು ಊರಿಗೆ ದೊಡ್ಡ ಮನುಷ್ಯರು... ನಾನು ನಿಮ್ಮ ಉಸಾಬರಿಗೆ ಬರಲ್ಲ... ನಿಮ್ಮ ಮೇಲಿನ ಗೌರವದಿಂದ ಹೇಳ್ತೀನಿ, ನಾನು ನನ್ನ ಹೆಸರಿನಲ್ಲಿರೋ ಪ್ರಾಪರ್ಟಿ ಯಾರಿಗಾದ್ರೂ ಮಾರ್ತೀನಿ, ಹೆಂಗಾದರೂ ಇರ್ತೀನಿ... ನಿಮ್ಮ ಕೆಲ್ಸ ನೀವ್ ನೋಡೋದು ಒಳ್ಳೇದು..." ಎಂದು, ಚಂದ್ರಣ್ಣನ ಮಾತೂ ಕೇಳದೇ ಆ ಕಡೆ ಫ಼ೋನು ಇಟ್ಟುಬಿಟ್ಟ. ಕೆಟ್ಟು ಪಟ್ಟಣ ಸೇರು ಅಂತಾರೆ ನಿಜ. ಆದರೆ, ಒಳ್ಳೆಯವನಾಗೇ ಇದ್ದ ಆನಂದನಿಗೆ ಈ ನಮನಿ ದಾರ್ಷ್ಯ ಬರಬಾರದಾಗಿತ್ತು... ಎಂದು ಎಲ್ಲರೂ ಅಂದುಕೊಳ್ಳುವ ಹೊತ್ತಿಗೆ, ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡ ಮನಸ್ಥಿತಿ ಚಂದ್ರಣ್ಣನದಾಗಿತ್ತು. ಅವರ ಮುಂದೆ ಆಟಾಡಿಕೊಂಡು ಬೆಳೆದು, ದೂರದ ಬೆಂಗಳೂರಿನ ನೀರು ಕುಡಿದ ಆನಂದನೇ ಇಷ್ಟು ಮಾಡಿರುವಾಗ ಸುತ್ತಲಿನ ಹತ್ತು ಕೆರೆಗಳಿಂದ ನೀರು ಕುಡಿದ ಚಂದ್ರಣ್ಣ ಸುಮ್ಮನೆ ಇರುವುದಾದರೂ ಹೇಗೆ?!

ಊರಿಗೆ ಹಿರೀ ಜನ ಅಂತ ಇರ್ತಾರಲ್ಲ, ಅವ್ರದ್ದೂ ಒಂದು ಮಾತು ಅಂತ ಇರತ್ತೆ ಊರಲ್ಲಿ. ತಕ್ಷಣ ಚಂದ್ರಣ್ಣ, ಹತ್ತಿರದ ಪೋಲೀಸ್ ಸ್ಟೇಷನ್ನಿಗೆ ಫ಼ೋನ್‌ ಮಾಡಿ, ದಫ಼ೇದಾರರ ಹತ್ರ ಅವರ ಸಾಹೇಬ್ರು ಜೊತೆ ತಕ್ಷಣ ಬರಬೇಕು ಎಂದು ತಾಕೀತು ಮಾಡಿದರು. ನಂತರ ಅಲ್ಲಿಗೆ ದೌಡಾಯಿಸಿದ ಪೋಲೀಸರಿಗೆ, ’ನಾನು ಹೇಳುವವರೆಗೂ ಇಲ್ಲೇನೂ ಕದಲದಂತೆ ನೋಡಿಕೊಳ್ಳಿ’ ಎಂದು ಹುಕುಂ ಹಾಕಿ ಹೊರಟು ಹೋದರು.

***

ಒಂದು ರೀತಿ ಚಲನ ಚಿತ್ರ ನೋಡಿದ ರೀತಿಯಲ್ಲಿ, ಬೈಕ್ ಶೋ ರೂಮ್ ಆರಂಭವಾಗುವ ಸೂಚನಾ ಫಲಕಗಳೂ, ಬ್ಯಾನರ್‌ಗಳೂ, ಕಲರ್ ಪೇಪರ್‌ಗಳೂ ಇದ್ದಕ್ಕಿದ್ದ ಹಾಗೆ ಸದ್ದಡಗಿದಂತೆ ನಿಶ್ಶಬ್ಧಗೊಂಡವು. ಊರಿನ ಮಂಡಲ ಪ್ರಧಾನರೂ, ಹಲವು ರಾಜಕೀಯ ಮುಖಂಡರೂ, ಹೋಟೇಲಿನ ಮುಂದೆ ನಿಂತು ಹಿಂದಿಯಲ್ಲಿ, ಬಂದಿದ್ದ ದಾಂಡಿಗರಿಗೆ ಹುಕುಂ ಕೊಡಲು, ಅವರೆಲ್ಲ ಯಾವುದೋ ದೊಡ್ಡ ಕೋರ್ಟಿನಿಂದ ಸ್ಟೇ ಆರ್ಡರು ಬಂದಂತೆ ಸ್ತಬ್ಧವಾಗಿ, ಬಂದ ದಾರಿಗೆ ಹಿಂತಿರುಗಿದರು. ಊರಿನ ಆಸ್ತಿಯ ಒಂದು ಭಾಗವಾಗಿರುವ ಸುಧಾ ಹೋಟಲ್ಲನ್ನು ಸ್ಥಳಾಂತರ ಮತ್ತು ಸ್ಥಳ ಪಲ್ಲಟಗೊಳಿಸಲು ಯಾರೂ ಅಕ್ಕಪಕ್ಕದವರು ಒಪ್ಪದಿದ್ದರಿಂದ ಈಗಾಗಲೇ ಕೊನೇ ಹಂತದವರೆಗೆ ಬಂದ ಆಸ್ತಿಯ ಲೇವಾದೇವಿಯನ್ನು ರದ್ದುಗೊಳಿಸಿದಂತೆ ಪಂಚಾಯತಿಯವರು ಪರವಾನಗಿ ಹೊಡಿಸಿದರು. ಯಾರು ಏನೇ ಅಂದರೂ ಪಟ್ಟಣ ಪಂಚಾಯಿತಿಯ ಅನುಮತಿ ಇಲ್ಲದೇ ಯಾವ ಮಾರಾಟವೂ ಇತ್ಯರ್ಥಗೊಳ್ಳದ್ದರಿಂದ ಎಲ್ಲರೂ ನಿರುಮ್ಮಳರಾಗುವಂತಾಯಿತು.

ಕೊಟ್ರೇಶಿ ತನ್ನ ಕಾಯಕವನ್ನು ಹಾಗೇ ಮುಂದುವರೆಸಿಕೊಂಡು ಹೋಗುತ್ತಿದ್ದಾನೆ... ಆದರೆ, ಇವತ್ತಿನವರೆಗೂ ಆನಂದನ ಪತ್ತೆ ಯಾರಿಗೂ ನಮ್ಮೂರಿನ ಸುತ್ತುಮುತ್ತಲೂ ಎಲ್ಲೂ ಆದಂತಿಲ್ಲ! ಅಮ್ಮ ಕಾಲದಲ್ಲಿ ಲೀನವಾಗೇನೋ ಇದ್ದಾರೆ, ಆದರೆ ಅಮ್ಮನ ಕೈ ರುಚಿ ಈಗ ಮುಂದಿನ ತಲೆಮಾರನ್ನೂ ತಬ್ಬಿಕೊಳ್ಳುತ್ತಿದೆಯಂತೆ.

Monday, May 18, 2020

ಹುಲು ಮಾನವರು ಹೊರಗಡೆ ಬರುತ್ತಿದ್ದಾರೆ, ಹುಷಾರ್!


... ಹೀಗನಿಸಿದ್ದು, ನಮ್ಮ ಹಿತ್ತಲಿನ ಹಿಂಬಾಗದಲ್ಲಿ ಮೇಯುತ್ತಿದ್ದ ಎರಡು ಜಿಂಕೆಗಳು ಹಟಾತ್ತನೆ ಹೊರಗೆ ಬಂದ ನನ್ನನ್ನು ನೋಡಿ ಓಡಿ ಹೋಗಿದ್ದನ್ನು ಕಂಡು.  ಸುಮಾರು ಎಂಟು ವಾರಗಳ ಕಾಲ ನಾವೆಲ್ಲ ನಮ್ಮ ಚಲನವಲನಗಳನ್ನು ಮನೆಯ ಒಳಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೆವು.  ಈ ಎರಡು ತಿಂಗಳುಗಳಲ್ಲಿ ಹೆಚ್ಚೆಂದರೆ ಇಪ್ಪತ್ತು ಮೈಲುಗಳ ದೂರವನ್ನು ಕಾರಿನಲ್ಲಿ ಕ್ರಮಿಸಿರಬಹುದು, ಅದೂ ಸಹ ಮನೆಯ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಬರುವುದಕ್ಕೆ ಮಾತ್ರ.  ಎರಡು ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದ ಪ್ರಾಣಿ-ಪಕ್ಷಿಗಳು ಮತ್ತೆ ಈ ಮಾನವ ಪ್ರಾಣಿಯ ಸಹವಾಸಕ್ಕೆ ಮರು-ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆಯೋ, ಏನೋ?

ಕೊರೋನಾ ವೈರಸ್ ಹಲವಾರು ತೊಂದರೆಗಳನ್ನು ಮನುಕುಲಕ್ಕೆ ಬಳುವಳಿಯಾಗಿ ಕೊಟ್ಟರೂ ಸಹ, ಅದು ನಿಸರ್ಗಕ್ಕೆ ಒಳ್ಳೆಯದನ್ನೇ ಮಾಡಿದೆ. ಗಾಳಿಯಲ್ಲಿ  ಪೊಲ್ಯೂಷನ್ ಲೆವೆಲ್‌ಗಳು ಕಡಿಮೆಯಾಗಿರುವುದು, ಸಮುದ್ರದಲ್ಲಿ ಮತ್ಸ್ಯ ಸಂತತಿ ಹೆಚ್ಚಾಗಿರುವುದು, ಅಲ್ಲಲ್ಲಿ ಎಸೆಯುವ ಕಸ-ಪ್ಲಾಸ್ಟಿಕ್‌ಗಳ ಕಡಿಮೆಯಾಗಿರುವುದು, ವಾಹನಗಳ ಸಂಚಾರವಿಲ್ಲದೆ ಇಂಧನ ಉಳಿತಾಯವಾಗಿರುವುದು... ಹೀಗೆ ಅನೇಕಾನೇಕ ಅನುಕೂಲಗಳಾಗಿವೆ.

ಆದರೆ, ಈ ಪ್ರಶ್ನೆ ಆಗಾಗ್ಗೆ ಎದ್ದು ನಿಲ್ಲುತ್ತದೆ - ನಮ್ಮ ನಡವಳಿಕೆಯಲ್ಲಿ ಇನ್ನು ಮುಂದಾದರೂ ಬದಲಾವಣೆಗಳನ್ನು ಕಾಣುತ್ತೇವೆಯೋ ಅಥವಾ ಎರಡು ತಿಂಗಳ ನಂತರ ಏನೂ ಆಗಿರದವರಂತೆ ಮೈ ಕೊಡವಿಕೊಂಡು ಮತ್ತೆ ನಮ್ಮ ನಮ್ಮ ಜೀವನಕ್ರಮದಲ್ಲಿ ತೊಡಗಿಕೊಳ್ಳುತ್ತೇವೆಯೋ? ಈ ಕೊರೋನಾ ವೈರಸ್ ಸುದ್ದಿ ಹೆಚ್ಚು ಮಾಡಿತೇ ವಿನಾ, ಹಿಂದಿನ ಮಹಾಮಾರಿಗಳಿಗೆ ಹೋಲಿಸಿದರೆ ಇದರ ಪರಿಣಾಮ ಕಡಿಮೆ ಎಂದೇ ಹೇಳಬೇಕು.  ಹದಿನಾರು ವರ್ಷಗಳ ಹಿಂದೆ ಸುನಾಮಿ ಬಂದಾಗ ಇಷ್ಟೇ ಜನ ಸತ್ತು ಹೋಗಿದ್ದ ನೆನಪು... ಆದರೆ, ಆ ನೆನಪು ನಮ್ಮ ಅವಶೇಷಗಳ ಅಡಿಯಲ್ಲಿ ಅದೆಂದೋ ಸಿಕ್ಕಿ ನಲುಗಿ ಹೋಗಿದೆ. ಅಂತೆಯೇ, ಈ ಕೊರೋನಾ ವೈರಸ್ಸಿನ ಸಾಹಸವೂ ಕೂಡ.   ಕೇವಲ ಮೂರು ಲಕ್ಷ ಜನರು ವಿಶ್ವದಾದ್ಯಂತ ಸತ್ತು ಹೋದರಲ್ಲ ಎಂದು ಸಾಡಿಸ್ಟ್ ಆಗಿ ಈ ಮಾತನ್ನು ಹೇಳುತ್ತಿಲ್ಲ... ಸಾವು ಯಾವತ್ತಿದ್ದರೂ ನೋವಿನ ವಿಚಾರವೇ, ಆದರೆ ನಾವು ಈ ಮಹಾಮಾರಿಯಿಂದೇನೂ ಒಳ್ಳೆಯದನ್ನು ಕಲಿಯದೇ ಇರುವಂತಾದರೆ, ಅದು ನಮ್ಮ ದುರ್ದೈವ ಅಷ್ಟೇ.



ಈ ಕೋವಿಡ್‌ನಿಂದಾಗಿ ವಾಹನ ಅಪಘಾತಗಳು ಕಡಿಮೆಯಾಗಿವೆ.  ತುರ್ತಾಗಿ ಬೇಕಾಗಿಲ್ಲದ ಶಸ್ತ್ರ ಚಿಕಿತ್ಸೆಗಳು ಮುಂದೂಡಲ್ಪಟ್ಟಿವೆ.  ಅನಗತ್ಯವಾಗಿ ಆಸ್ಪತ್ರೆಗಳನ್ನು ಸುತ್ತುವವರ ಸಂಖ್ಯೆ ಕಡಿಮೆ ಆಗಿದೆ.  ಅಂಥವರನ್ನು ಸುಲಿಯುವ ಬಿಸಿನೆಸ್ ಮೈಂಡೆಡ್ ನರ್ಸಿಂಗ್ ಹೋಮ್‌ಗಳು ಬಾಗಿಲು ಹಾಕಿ ಸುಮ್ಮನಿದ್ದವು.  ಎಲ್ಲದಕ್ಕಿಂತ ಮುಖ್ಯ ಅನಗತ್ಯ ಖರ್ಚುಗಳು ಕಡಿಮೆ ಆಗಿದ್ದವು.  ಹೊರಗಡೆಯ ಚಟುವಟಿಕೆಳೆಲ್ಲ ಕಡಿಮೆಯಾದ್ದರಿಂದ ಜೇಬಿಗೂ ಒಂದಿಷ್ಟು ಹೊರೆ ಕಡಿಮೆ ಎನಿಸಿತ್ತು.

ಇದೀಗ ತಾನೆ ಹೊರಬರುತ್ತಿರುವ ನಮ್ಮನ್ನೆಲ್ಲ ನೋಡಿ - ಹುಲುಮಾನವರು ಹೊರಗೆ ಬರುತ್ತಿದ್ದಾರೆ, ಹುಷಾರ್! ಎಂದು ನಮ್ಮ ಸುತ್ತಲಿನ ಎಲ್ಲ ಜೀವಿಗಳೂ ಸಹ ಒಂದು ಕ್ಷಣ ದಂಗಾಗಿರಬಹುದಲ್ಲವೇ?

Thursday, May 07, 2020

ಏರ್‌ಪ್ಲೇನುಗಳು ಹಾರಲು ಅದು ಹೇಗೆ ಸಾಧ್ಯ?

ನಾನು ಮೊಟ್ಟ ಮೊದಲನೇ ಸಾರಿ ಬಾಂಬೆ ಏರ್‌ಪೋರ್ಟ್‌ನಲ್ಲಿ ದೊಡ್ಡ ಜೆಂಬೋ ಜೆಟ್ ವಿಮಾನವನ್ನು ನೋಡಿದಾಗ, ಏರ್‌ಪೋರ್ಟಿನಲ್ಲಿಯೇ ನನ್ನ ಸಹ ಪ್ರಯಾಣಿಗರೊಂದಿಗೆ ಇದು ಅಷ್ಟು ವೇಗವಾಗಿ ಎತ್ತರದಲ್ಲಿ ಹಾರಾಡಲು ಹೇಗೆ ಸಾಧ್ಯ?  ಏರೋಡೈನಮಿಕ್ಕು ಅಂತೆಲ್ಲಾ ಅವರೇನೇನೋ ಸಮಾಧಾನ ಹೇಳಿದರೂ, ನನಗೆ ಅದರ ಒಳಗೆ ಕುಳಿತು ಅದು ವೇಗವಾಗಿ ಓಡಿ, ಅಂತರದಲ್ಲಿ ತೇಲತೊಡಗಿದಾಗಲೇ ನನಗೆ ಹೊರಗೆ ನೋಡಿದಾಗ ನಂಬಬೇಕೋ ಬಿಡಬೇಕೋ ಗೊತ್ತಾಗಿರಲಿಲ್ಲ!
ನಮ್ಮ ಸೈನ್ಸ್, ಫಿಸಿಕ್ಸ್ ತರಗತಿಯಲ್ಲಿ ಮನಸಿಟ್ಟು ಕೇಳುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ, ಆಗೆಲ್ಲ ಗಾಳಿಯಿಂದ ಪೇಪರ್ ಎದ್ದು ಹಾರಾಡುವುದೇ ಏರೋ ಡೈನಮಿಕ್ ಫೋರ್ಸ್ ಎಂದು ನಂಬಿಕೊಂಡ ದಿನಗಳು.  ಅಂತಹ ಹಳ್ಳಿಯ ಎಡಬಿಡಂಗಿ ಜಗಮೊಂಡನನ್ನು ತೆಗೆದುಕೊಂಡು ಏಕ್‌ದಂ ಮೊಟ್ಟ ಮೊದಲನೇ ಪ್ರಯಾಣವೇ ಇಂಟರ್‌ನ್ಯಾಷನಲ್ ಪ್ರಯಾಣವಾಗಿರುವಂತಾದಾಗ ಯಾರು ತಾನೆ ಹೇಗೆ ನಂಬ ಬಲ್ಲರು?

***
ಆಗಿನ ಎಂಭತ್ತರ ದಶಕದಲ್ಲಿ ಏರ್‌ಪ್ಲೇನಿನ ಸಹವಾಸ ಮಾಡುವವರು, ಮಾಡುತ್ತಿದ್ದವರು ಬಹಳ ಧನಿಕರಾಗಿರುತ್ತಿದ್ದರು.  ನಮ್ಮೂರಿನ ಬಸ್ಸು-ಲಾರಿಗಳನ್ನು ಮತ್ತು ಅಪರೂಪಕ್ಕೊಮ್ಮೆ ಕಾರುಗಳನ್ನು ರಸ್ತೆ ಮೇಲೆ ಓಡುವುದನ್ನ ನೋಡುತ್ತಿದ್ದ ನಾವು ಅನಂತರ ಅಂತರ ರಾಜ್ಯ ಪ್ರಯಾಣಕ್ಕೆ ರೈಲಿನಲ್ಲಿ ಹೋಗಿದ್ದನ್ನು ಬಿಟ್ಟರೆ, ಉಳಿದೆಲ್ಲ ರೀತಿಯ ಪ್ರಯಾಣ ಅಂದರೆ ದೊಡ್ಡ ಹಡಗು ಅಥವಾ ವಿಮಾನದಲ್ಲಿ ಓಡಾಡುವುದು ಕನಸೇ ಆಗಿತ್ತು.  ಅಪರೂಪಕ್ಕೊಮ್ಮೆ, ರಾತ್ರಿ ಎಲ್ಲಾದರೂ ಓಡಾಡುತ್ತಿದ್ದಾಗ ನಿರಾಳವಾದ ಆಕಾಶವನ್ನು ನೋಡುತ್ತಿದ್ದರೆ, ಅವುಗಳ ಸದ್ದೂ ಸಹ ಕೇಳದಷ್ಟು ಅನತಿ ದೂರದಲ್ಲಿ, ಮಿಣಿಮಿಣಿ ದೀಪ ಹಾಕಿಕೊಂಡು ಹಾರುತ್ತಿರುವ ವಿಮಾನಗಳು ನಮಗೆ ಗಗನ ಚುಕ್ಕಿಗಳೇ ಆಗಿದ್ದವು.  ಅಂತಹ ಒಂದು "ವಿಮಾನ"ದ ಕಲ್ಪನೆ ಬಹಳ ವಿಚಿತ್ರವಾಗಿರುತ್ತದೆ: ಅವುಗಳ ಕಿಟಕಿ-ಬಾಗಿಲುಗಳು ಹೀಗಿರಬಹುದು/ಹಾಗಿರಬಹುದು!  ಅವುಗಳಲ್ಲಿ ಗಗನಸಖಿಯರು ಎಷ್ಟೆಲ್ಲ ಸುಂದರಿಯರಿರುತ್ತಾರೆ! ಪ್ರಯಾಣಿಕರೆಲ್ಲ ಒಳ್ಳೊಳ್ಳೆಯ ಉಡುಪುಗಳನ್ನು ಧರಿಸಿಕೊಂಡೋ, ಸೂಟು ಬೂಟಿನಲ್ಲಿರುತ್ತಾರೆ!  ಇತ್ಯಾದಿ, ಇತ್ಯಾದಿ... ಇದು ನಿಜವಾಗಿಯೂ "ಮೇಲ್" ದರ್ಜೆಯ ಪ್ರಯಾಣದ ವಿಧಿ ವಿಧಾನ ಎಂದು ನನಗೆ ಗ್ಯಾರಂಟಿಯಾಗಿತ್ತು.  ಆದರೆ, ನನ್ನ ಮೊದಲ ಅನುಭವದಲ್ಲಿಯೇ, ಈ ಎಲ್ಲ ಅನುಭೂತಿಗಳು ಸಂಪೂರ್ಣ ಯಾವತ್ತಿಗೋ ನಶಿಸಿಹೋದವು!

ವಿಮಾನಗಳ ಕಿಟಕಿಗಳು ಬಹಳ ಚಿಕ್ಕವು.  ಬಸ್ಸು ರೈಲಿನ ಕಿಟಕಿಗಳ ಹಾಗೆ ಅವುಗಳಲ್ಲಿ ಓಪನ್/ಕ್ಲೋಸ್ ಎಂದು ನೆಗೋಟೀಯೇಟ್ ಮಾಡೋ ಅಂತದ್ದು ಏನೂ ಇರಲ್ಲ.  ಬರೀ ಅವುಗಳ ಕವರನ್ನು ಮುಚ್ಚಬೇಕು, ಇಲ್ಲ ತೆರೆದಿರಬೇಕು, ಅಷ್ಟೇ.  ಇನ್ನು ಈಗಿನ ಏರ್‌ಪ್ಲೇನುಗಳ ಸೀಟುಗಳೋ ಆ ದೇವರಿಗೇ ಪ್ರೀತಿ.  ನಮ್ಮೂರಿನ ಸೆಮಿ ಲಕ್ಸುರಿ ಬಸ್ಸುಗಳ ಸೀಟುಗಳು ಇದಕ್ಕಿಂತ ಚೆನ್ನಾಗಿದ್ದವು.  ಅವರು ಕೊಡೋ ಊಟ, ಅದನ್ನು ನಾವು ಸಮಯವಲ್ಲದ ಸಮಯದಲ್ಲಿ ಲಘುಬಗೆಯಿಂದ ತಿಂದಂತೆ ಮಾಡಿ, ಪೇಪರಿಗೆ ಕೈ ಒರೆಸಿ ದೂರವಿಡುವುದು!  ಅಲ್ಲದೇ ಸಹ ಪ್ರಯಾಣಿಕರ್‍ಯಾರೂ ಸೂಟು-ಬೂಟಿನಲ್ಲಿ ಇದ್ದಂತಿಲ್ಲ... ಯಾವುದೋ ತೇಪೆ ಹಾಕಿದ ಜೀನ್ಸ್ ಅನ್ನು ಹಾಕಿಕೊಂಡವರೂ ಇದ್ದರೂ.  ಒಮ್ಮೆ ಕುಳಿತುಕೊಂಡರೆ ಗಂಟೆಗಟ್ಟಲೆ ಕುಳಿತೇ ಇರಬೇಕು, ಅಲ್ಲಿಲ್ಲಿ ಓಡಾಡುವಂತಿಲ್ಲ, ಆಕಡೆ ತಿರುಗುವಂತಿಲ್ಲ, ಈ ಕಡೆ ತಿರುಗುವಂತಿಲ್ಲ. ಆಮೇಲೆ ಏಕತಾನತೆಯ ಒಂದೇ ಒಂದು ಸ್ವರದ ಕರ್ಕಶ ನಾದ... ಜೊತೆಯಲ್ಲಿ ಬೇರೆ ಟೊಂಕಕ್ಕೆ ಸೀಟುಬೆಲ್ಟ್ ಅನ್ನು ಕಟ್ಟಿಕೊಂಡಿರಬೇಕು. ಇನ್ನು ಗಗನ ಸಖಿಯರೆಲ್ಲ "ಕ್ಯಾಬಿನ್ ಕ್ರೂ"ಗಳಾಗಿದ್ದರು, ಅವರೂ ಸಹ ನಮ್ಮಂತೆಯೇ ಸಹಜವಾಗಿ ಕಂಡುಬಂದರು.  ಅಬ್ಬಾ, ಮೊಟ್ಟ ಮೊದಲ ಬಾರಿ ಯೂರೋಪನ್ನು ದಾಟಿ ಅಮೇರಿಕಕ್ಕೆ ಬರುವುದೆಂದರೆ, ಪ್ರಾಣವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಬಂದಂತಾಗಿತ್ತು.  ಆದರೂ ಏನೆಲ್ಲ ಕನಸುಗಳು, ಹಾಗೆ-ಹೀಗೆ ಎನ್ನುವ ಮಾತುಗಳು... ನಮ್ಮ ಸೂಟ್‌ಕೇಸ್‌ಗಳಲ್ಲಿ ಇನ್ನೆಂದಿಗೂ ಸಾಕಾಗುವಷ್ಟು ಮಸಾಲೆ ಪದಾರ್ಥಗಳು, ಚಟ್ಣಿಪುಡಿಗಳು... (ನಮ್ಮ ಜೊತೆಗೆ ಬಂದ ಕುಮರೇಸನ್ ಒಂದು ಮೂಟೆ ಅಕ್ಕಿಯನ್ನೂ ತಂದಿದ್ದ!)... ಒಂದು ರೀತಿ ಭಾರತವನ್ನು ಬಿಟ್ಟು ಅಮೇರಿಕಕ್ಕೆ ಬರುವಾಗ ಒಂದು ರೀತಿಯ ನೋವು ಆಗಿದ್ದು ಸಹಜ... ಆದರೆ, ನಾವು ಬಂದದ್ದು H1B ವೀಸಾದಲ್ಲಿ, ಕೇವಲ ಮೂರೇ ಮೂರು ವರ್ಷಗಳ ತರುವಾಯ ವಾಪಾಸು ಹೋಗುತ್ತೇವಲ್ಲ, ಮತ್ತೇನು ತಲೆಬಿಸಿ!

***

ಕೆಲವೊಮ್ಮೆ ಹೀಗೆಯೇ ಆಗುತ್ತದೆ... ನಾವು ಊಹಿಸಿಕೊಂಡ ತತ್ವಗಳು ನಮ್ಮ ಕಲ್ಪನೆಯನ್ನು ಮೀರಿ ಬೆಳೆಯುತ್ತವೆ.  ಆದರೆ, ಆ ಬೆಳೆದ ಊಹೆಗಳು ನಮ್ಮ ಬುದ್ಧಿಗೆ ಮೀರಿ ಪ್ರಬುದ್ಧವಾಗಿರುತ್ತವೆ.  ಒಂದು ವಿಮಾನದ ಅಗಲ-ಉದ್ದ, ಇಷ್ಟಿಷ್ಟೇ ಇರಬೇಕು ಎಂದು ಇಂಜಿನಿಯರುಗಳು ಡಿಸೈನ್ ಮಾಡಿರುತ್ತಾರಲ್ಲ?  25 ಕೆಜಿ. ಸೂಟ್‌ಕೇಸ್ ಒಂದು ಗಗನದಲ್ಲಿ ಹಾರಾಡಲು ಸಾಧ್ಯವೇ? ಇಲ್ಲ.  ಆದರೆ, ಅದನ್ನು 78,000 ಕೆಜಿ, ಜೆಂಬೋ ಜೆಟ್‌ನಲ್ಲಿ ಇಟ್ಟು ಅದನ್ನು ಗಂಟೆಗೆ 920 ಕಿಲೋಮೀಟರ್ ವೇಗದಲ್ಲಿ ನೆಲದಿಂದ 11  ಕಿಲೋಮೀಟರ್ ಎತ್ತರದಲ್ಲಿ ಹಾರಿಸಿ ನೋಡಿ ಅಂತಹ ವಿಮಾನ ಬರೀ ಒಂದು ಸೂಟ್‌ಕೇಸ್ ಮಾತ್ರ ಏಕೆ 250 ಟನ್ ಭಾರವನ್ನೂ ಎತ್ತಿಕೊಂಡು ಹೋಗಬಲ್ಲದು!  ಇದನ್ನು ನಾವು ನಮ್ಮ ಹುಲುಮಾನವರ ಮನದಲ್ಲಿ ಹೇಗೆ ಊಹಿಸಲು ಸಾಧ್ಯವಿಲ್ಲವೋ ಅದೇ ರೀತಿ, ಪ್ರಪಂಚದ ಅನೇಕಾನೇಕ ಸೂಕ್ಷ್ಮಗಳು ನಮ್ಮನ್ನು ಮೀರಿದವಾಗಿರುತ್ತವೆ.  ಇಂತಹ ವಿಸ್ಮಯಗಳನ್ನು ನೋಡಿ, ಸವೆದು, ತನು-ಮನ ತಣಿಸಿಕೊಳ್ಳಲು ಎಷ್ಟು ಆಲೋಚಿಸದರೂ ಸಾಲದು ಎನ್ನುವುದು ಈ ಹೊತ್ತಿನ ತತ್ವವಾಗುತ್ತದೆ.

ನಮ್ಮ ಸುತ್ತಲಿನ ಪ್ರತಿಯೊಂದರಲ್ಲೂ ಈ ರೀತಿಯ ವಿಶ್ವರೂಪ ದರ್ಶದನ ಅವಕಾಶಗಳಿವೆ... ಅವುಗಳನ್ನು ನೋಡಲು ಕಣ್ಣುಗಳಿರಬೇಕಷ್ಟೆ!

Wednesday, May 06, 2020

ಗೌಡರು ಚಹಾ ಪುಡಿ ಕದ್ದ ಪ್ರಸಂಗವು...

ಇದು ಮೂರು ದಶಕಗಳ ಹಳೆಯ ಕಥೆಯಾದರೂ ಇವತ್ತಿಗೂ ನಮ್ಮನೆಯಲ್ಲಿ ನಗೆ ಉಕ್ಕಿಸುತ್ತದೆ.  ಮೊನ್ನೆ ಕೊರೋನಾ ವೈರಸ್ ಸ್ಪೆಷಲ್ ಎಂದು ನಮ್ಮ ಹಳವಂಡಗಳನ್ನೆಲ್ಲ ಹರಡಿಕೊಂಡು ಅಕ್ಕ-ತಮ್ಮ ಮಾತನಾಡುತ್ತಿದ್ದಾಗ, ಅಲ್ಲಿಯೂ ನುಸುಳಿತು, ಈ ಚಹಾ ಪುಡಿಯ ಕಥೆ... ಇದನ್ನು ನೆನಪಿಸಿಕೊಂಡಾಗಲೆಲ್ಲ ಇವತ್ತಿಗೂ ನಮ್ಮಲ್ಲಿ ನಗೆ ಉಕ್ಕಿಸುವುದು ಖಂಡಿತ.

***

ನನ್ನ ಅಕ್ಕ ಆನವಟ್ಟಿಯಿಂದ ಹನ್ನೆರೆಡು ಕಿಲೋ ಮೀಟರ್ ದೂರದ ಜಡೆ ಗ್ರಾಮದಲ್ಲಿ ಟೀಚರ್ ಆಗಿ ನೇಮಕಗೊಂಡಾಗ, ಪ್ರತಿನಿತ್ಯವೂ ಬಸ್ಸಿನಲ್ಲಿ ಹೋಗಿ ಬರುವ ಕಷ್ಟವೇಕೆ ಎಂದು ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಇದ್ದಳು.  ಆಗೆಲ್ಲಾ ಬಸ್ಸುಗಳ ಅನುಕೂಲ ಅಷ್ಟು ಇರಲಿಲ್ಲ.  ಬಸ್ಸುಗಳ ಅನುಕೂಲವಿದ್ದರೂ ಹನ್ನೆರಡು ಕಿಲೋಮೀಟರ್ ಅನ್ನು ಕಾಲುನಡಿಗೆಯಲ್ಲಿ ಎರಡೂ ಕಾಲು ಘಂಟೆಯೊಳಗೆ ಕ್ರಮಿಸಬಹುದಿತ್ತು, ಅದೇ ದೂರಕ್ಕೆ ಬಸ್ಸಿನಲ್ಲಿ ಮೂರು ಘಂಟೆಗಳ ಕಾಲ ತೆಗೆದುಕೊಳ್ಳುತ್ತಿತ್ತು.  ಅಲ್ಲದೇ ಎರಡು ಬಸ್ಸುಗಳನ್ನು ಬದಲಾಯಿಸಬೇಕಾಗಿತ್ತು: ಆನವಟ್ಟಿಯಿಂದ ತವನಂದಿಗೆ ಒಂದು, ತವನಂದಿಯಿಂದ ಜಡೆಗೆ ಹೋಗುವ ಬಸ್ಸು ಮತ್ತೊಂದು.

ಮನೆ ಅಂದ ಮೇಲೆ ಒಂದಿಷ್ಟು ಪಾತ್ರೆ-ಪಡಗ ಇವೆಲ್ಲ ಇರಬೇಕಾದ್ದೆ.  ಅಡುಗೆ ಮಾಡಿಕೊಳ್ಳುತ್ತೇವೆ ಎಂದ ಮೇಲೆ, ಎಲ್ಲ ಸೌಲಭ್ಯಗಳ ಜೊತೆಗೆ ಕಾಫಿ-ಟೀ ಮಾಡಿಕೊಳ್ಳುವುದಕ್ಕೂ ಅನುಕೂಲವಿಲ್ಲದಿದ್ದರೆ ಹೇಗೆ? ಈ ರೀತಿ, ನನ್ನ ಅಕ್ಕ ಒಂದು ಸಣ್ಣ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟು ಸಾಮಾನುಗಳ ಜೊತೆಗೆ ಒಂದು ಸಣ್ಣ ವ್ಯವಸ್ಥಿತ ಕುಟುಂಬಕ್ಕೆ ಏನೇನು ಬೇಕೋ ಅಷ್ಟನ್ನೂ ಹೊಂದಿಸಿಕೊಂಡು ನೆಮ್ಮದಿಯಿಂದ ಇದ್ದಳು.

ಹೀಗಿರುವಾಗ ಒಂದು ಸಣ್ಣ ತೊಂದರೆ ಕಾಣಿಸಿಕೊಳ್ಳತೊಡಗಿತು.  ಆಗಿನ ಕಾಲದಲ್ಲಿ ಕಾಫಿ ಪುಡಿ, ಟೀ-ಪುಡಿಯನ್ನು ಬಹಳಷ್ಟು ದಾಸ್ತಾನು ಮಾಡಿ ಯಾರೂ ಇಟ್ಟುಕೊಳ್ಳುತ್ತಿರಲಿಲ್ಲವೆನಿಸುತ್ತದೆ.  ಅಕ್ಕ ತಂದಿಟ್ಟುಕೊಂಡ ಚಾಪುಡಿ ಡಬ್ಬದಲ್ಲಿ ದಿನೇದಿನೇ ಪುಡಿಯ ಪ್ರಮಾಣ ಕಡಿಮೆ ಆಗುವುದನ್ನು ಇವಳು ಗಮನಿಸಿದಳು.  ಇವಳು ಬಿಟ್ಟರೆ ಮತ್ತೆ ಬೇರೆ ಯಾರೂ ಇರದ ಮನೆಯಲ್ಲಿ ಅದು ಖಾಲಿ ಆಗಲು ಹೇಗೆ ತಾನೆ ಸಾಧ್ಯ? ಅದರೂ ಇರಲಿ ಎಂದು ಡಬ್ಬದಲ್ಲಿ ಒಂದು ಗುರುತು ಮಾಡಿ ಮರುದಿನ ಶಾಲೆಗೆ ಹೋಗಿ ಬಂದು ನೋಡುತ್ತಾಳೆ ಮತ್ತೆ ಕಡಿಮೆ ಆಗಿದೆ.  ಇದು ಏನೇ ಕಿತಾಪತಿ ಇದ್ದರೂ ಪಕ್ಕದ ಮನೆ ಗೌಡರ ಕಿತಾಪತಿಯೇ ಸೈ ಎಂದು, ಇವರಿಗೆ ಬುದ್ಧಿ ಕಲಿಸಬೇಕೆಂದು ಯೋಚನೆ ಮಾಡಿದಳು.

ಒಂದು ಪೋರ್ಶನ್ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸೋದು ಸಹಜ.  ಬಾಡಿಗೆ ಕೊಡುವ ಮುಖೇನ ಅರ್ಧ ಮನೆಯನ್ನು ಇನ್ನೊಬ್ಬರಿಗೆ ವಾಸಿಸಲಿಕ್ಕೆ ಕೊಟ್ಟು ಅದರಿಂದ ಒಂದು ನಿರ್ದಿಷ್ಟ ಆದಾಯ ಪಡೆಯುವುದು ಎಲ್ಲರೂ ಬಲ್ಲ ವಾಡಿಕೆ.  ಆದರೆ, ಈ ರೀತಿ ಬಾಡಿಗೆ ಮನೆ ಕೊಟ್ಟವರು, ಟೀ ಪುಡಿಯನ್ನು ಕದಿಯುತ್ತಾರೆ ಎಂದು ಯಾರು ತಾನೇ ಯೋಚಿಸಲಿಕ್ಕೆ ಸಾಧ್ಯ?

ನನ್ನ ಅಕ್ಕ ಅಂದಿನಿಂದ ಟೀ ಮಾಡಿ ಉಪಯೋಗಿಸಿದ್ದ ಪುಡಿಯನ್ನು ಸಂಗ್ರಹಿಸಿ ಇಡಲಾರಂಭಿಸಿದಳು.  ಅದು ಸುಮಾರು ಒಂದು ಡಬ್ಬ ತುಂಬುವ ಪ್ರಮಾಣ ಬರುತ್ತಲೇ, ಅದನ್ನು ಒಟ್ಟು ಗೂಡಿಸಿ, ಎರಡು ಮೂರು ಸಾರಿ ಚೆನ್ನಾಗಿ ಕುದಿಸಿ ಅದರಲ್ಲಿದ್ದ ಚಹಾದ ಗುಣವನ್ನೆಲ್ಲಾ ತೆಗೆದುಬಿಟ್ಟು, ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿ ಹಾಕಿದಳು.  ಅದು ಚೆನ್ನಾಗಿ ಒಣಗಿದ ನಂತರ, ಮೇಲ್ನೋಟಕ್ಕೆ ಕಪ್ಪು ಚಹಾಪುಡಿಯಂತೆ ಕಂಡು ಬಂದರೂ ಅದರಲ್ಲಿ ಚಹಾದ ಒಂದು ಲವಲೇಶ ಅಂಶವೂ ಇದ್ದಿರಲಿಲ್ಲ.  ನಂತರ ಆ ಪುಡಿಯನ್ನೆಲ್ಲ ತನ್ನ ಚಹಾಪುಡಿ ಡಬ್ಬದಲ್ಲಿ ಹಾಕಿಟ್ಟು ಕಳ್ಳ ಬಂದು ಕದಿಯುವುದನ್ನು ನಿರೀಕ್ಷಿಸಿದಳು.

ಒಂದೆರಡು ದಿನದಲ್ಲಿ ಕಳ್ಳ ಬಂದು ಟೀಪುಡಿಯನ್ನು ಕದ್ದಿದ್ದಾಯಿತು.  ಆದರೆ, ಪಕ್ಕದ ಮನೆಯಲ್ಲಿ ಟೀ ಕುದಿಸುತ್ತಿದ್ದವರು ಬೈಯುವುದು ಕೇಳಿ ಬಂದು ಇವಳಿಗೆ ನಗುತಡೆಯದಾಯಿತು.  ಇವಳ ಮನೆಯಿಂದ ಕದ್ದ ಟೀ ಪುಡಿಯಲ್ಲಿ ಟೀ ಅಂಶ ಇದ್ದರೆ ತಾನೆ ಅದು ತನ್ನ ಗುಣವನ್ನು ತೋರಿಸುವುದು.  ಅಂದಿನಿಂದ ಇವಳ ಮನೆಯಲ್ಲಿ ಟೀ ಪುಡಿ ಕಳ್ಳತನವಾಗುವುದು ನಿಂತು ಹೋಯಿತಂತೆ!

Friday, May 01, 2020

ಸಾಲವೆಂಬ ಶೂಲ!

ನಮ್ಮ ಹಳ್ಳಿಕಡೆಯಲ್ಲಿ ಒಂದು ಮಾತು ಬರುತ್ತಿತ್ತು, "ಸಾಲಾ-ಸೂಲಾ ಮಾಡಿಯಾದ್ರೂ...".  ಇದನ್ನ ಹೆಗ್ಗಳಿಕೆಯ ವಿಷಯವಾಗಿ ಬಳಸಬಹುದಿತ್ತು, ಅಥವಾ ತೆಗಳಿಕೆಯ ಮಾತಾಗಿಯೂ ಬಳಸಬಹುದಾಗಿತ್ತು.  "ಸಾಲಾ-ಸೂಲಾ ಮಾಡಿ ಓದ್ಸಿದ್ರೂ ನನ್ನ ಮಗ ಕೈಗೆ ಹತ್ತದವನಾದ!" ಎಂದು ತಲೆ ಮೇಲೆ ಕೈ ಇಟ್ಟುಕೊಂಡವರನ್ನು ನೋಡಿದ್ದೇನೆ.  ಅಂತೆಯೇ, "ಸಾಲಾ-ಸೂಲಾ ಮಾಡಿ, ದೊಡ್ಡ ಮನೆ ಕಟ್ಟಿಸಿದವರು..", ಅಂತಹವರನ್ನೂ ಸಹ ನೋಡಿದ್ದೇನೆ.  ಒಟ್ಟಿನಲ್ಲಿ ಆಗಿನ ನಮ್ಮ ಸಾಮಾಜಿಕ ವ್ಯಾಪ್ತಿಯಲ್ಲಿ ಸಾಲವೆಂಬುದು ಯಾವತ್ತಿಗೂ ಶೂಲವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.

ಸಾಲವನ್ನು ಕೈಗಡ ಎಂದು ತೆಗೆದುಕೊಳ್ಳಬಹುದಿತ್ತು. ಉದ್ರಿ ಎಂದು ಅಂಗಡಿಗಳಲ್ಲಿ ಬರೆಸಬಹುದಿತ್ತು.  ಎರವಲು ಪಡೆಯಬಹುದಿತ್ತು. ಕಡ ತೆಗೆದುಕೊಳ್ಳಬಹುದಿತ್ತು. ಕಯ್ಬದಲು ಮಾಡಿಕೊಂಡು "ಋಣ" ಹೆಚ್ಚಿಸಿಕೊಳ್ಳಬಹುದಿತ್ತು.  ಹೀಗೆ ತೆಗೆದುಕೊಂಡ ಸಾಲ ಎಲ್ಲವೂ "ಋಣ"ಮಯ ವಾಗಿತ್ತು ಎಂದರೆ ತಪ್ಪಾಗಲಾರದು.  ಆದ್ದರಿಂದ, ಸಹಜವಾಗೇ ಸಾಲಕ್ಕೆ ನೆಗೆಟಿವ್ ಕನ್ನೋಟೇಷನ್ ಇದ್ದೇ ಇದೆ.

***
ನಮ್ಮ ವಂಶಜರಲ್ಲಿ ಕಳೆದ ಎರಡು ತಲೆಮಾರುಗಳಲ್ಲಿ ಸಾಲ ಮಿತಿ ಮೀರಿದೆ.  ಎರಡು ತಲೆಮಾರುಗಳ ಹಿಂದೆ, ಕೈಗಡ ತೆಗೆದುಕೊಳ್ಳುವುದು ಎಂದರೆ ಅದೊಂದು ಅಕ್ಷಮ್ಯ ಅಪರಾಧವಾಗಿತ್ತು.  ಮೂಲತಃ ಸರ್ಕಾರಿ ಕೆಲಸದ ಸಂಬಳದಲ್ಲಿ (ನನಗೆ ಗೊತ್ತಿರುವ ಹಾಗೆ) ನಾಲ್ಕು ತಲೆಮಾರುಗಳಿಂದ ಬದುಕಿದ್ದ ನನ್ನ ಹಿರಿಯರು, ಯಾವಾಗಲೂ "ಹಾಸಿಗೆ ಇದ್ದಷ್ಟೇ ಕಾಲು ಚಾಚು!" ಎನ್ನುವುದನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು.  ನನ್ನ ತಾತನವರು ತಮ್ಮ ಟ್ರಂಕಿನಲ್ಲಿರುವ ಒಂದು ಪುಸ್ತಕದಲ್ಲಿ ತಮ್ಮ ಸಂಬಳ ಬಂದ ದಿನ ಎಲ್ಲ ರೂಪಾಯಿಗಳನ್ನು ಅಚ್ಚುಕಟ್ಟಾಗಿ ತೆಗೆದಿಟ್ಟು, ತಿಂಗಳು ಕಳೆದಂತೆ ಒಂದೊಂದೇ ನೋಟನ್ನು ಮನೆಯ ಒಂದೊಂದು ಖರ್ಚುಗಳಿಗೋಸ್ಕರ ಬಳಸುತ್ತಾ ಬರುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.  ಕೊನೆಯಲ್ಲಿ ನನ್ನ ತಾತನವರು ತೀರಿಕೊಂಡಾಗ ಆ ಪುಸ್ತಕದಲ್ಲಿದ್ದ ಗರಿಗರಿಯಾದ ಹತ್ತು ರುಪಾಯಿ ನೋಟುಗಳು ನಮ್ಮ ಮನೆಯಲ್ಲಿ ಇವತ್ತಿಗೂ ಹಾಗೆಯೇ ಇದೆ.  ಆಗೆಲ್ಲ ಹತ್ತು ರುಪಾಯಿಗಳು ಬಹಳ ದೊಡ್ಡ ಮೊತ್ತವಾಗಿರುತ್ತಿತ್ತು.  ಬೇಸಿಗೆಗೆಂದು ಅಜ್ಜನ ಮನೆಗೆ ಹೋದಾಗ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತಂದದ್ದು ನನಗೆ ನೆನಪಿದೆ.

ನನ್ನ ತಾತನವರು, ಇನ್ನೊಂದು ಮಾತನ್ನು ಯಾವಾಗಲೂ ಹೇಳುತ್ತಿದ್ದುದು, ಈಗ ಪ್ರಸ್ತುತವೆನಿಸುತ್ತಿದೆ, "ಆಳಾಗಿ ದುಡಿ, ಅರಸಾಗಿ ಉಣ್ಣು".  ತಮ್ಮ ಜೀವಿತಾವಧಿಯಲ್ಲಿ ಎಷ್ಟೊಂದು ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲವೊಮ್ಮೆ ಗಂಜಿ-ಅಂಬಲಿಯನ್ನು ಕುಡಿದು ಬದುಕಿದ್ದರೂ ಅದು ಪರಮಾನ್ನ, ಪರಮಾತ್ಮನ ಪ್ರಸಾದವೆಂದೇ ನಂಬಿಕೊಂಡು ಇದ್ದುದರಲ್ಲಿ ಹಂಚಿಕೊಂಡು ಉಂಡು ಬದುಕಿ ಬಂದ ಕುಟುಂಬದವರು ಅವರೆಲ್ಲರು.  ಮಾನ-ಮರ್ಯಾದೆಗಳು ಎಲ್ಲಕ್ಕಿಂತ ಹೆಚ್ಚು.  ದಿನನಿತ್ಯ ತಪ್ಪದ ಶುಚಿಕರ್ಮಗಳು, ದೇವರ ಪೂಜೆ, ಶುಭ್ರವಾದ ಬಟ್ಟೆ, ಪ್ರತಿನಿತ್ಯವೂ ಗುಡಿಸಿ ಒರೆಸಿ ಸ್ವಚ್ಛ ಮಾಡಿಕೊಂಡು ಬರುತ್ತಿದ್ದ ಮನೆಯ ಒಳಗೆ-ಹೊರಗೆ, ಓದುವುದಕ್ಕೆ ಸಾಕಷ್ಟು ಪುಸ್ತಕಗಳು.  ಆಗಾಗ್ಗೆ ಬಂದು ಹೋಗುತ್ತಿದ್ದ ನೆಂಟರು-ಇಷ್ಟರು... ಬೇಡವೆಂದರೂ ಒಂದರಲ್ಲೊಂದು ತೊಡಗಿಕೊಳ್ಳ ಬೇಕಾದಂಥ ಪೂಜಾ ಕರ್ಮಗಳು, ಹಬ್ಬ ವಿಧಿ-ವಿಧಾನಗಳು -- ಹೀಗೇ ಅನೇಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುಖವಾದ ಜೀವನ, ತುಂಬು ಕಣ್ಣಿನ ನಿದ್ರೆ, ದೈವದತ್ತ ಆರೋಗ್ಯ - ಇವೆಲ್ಲದರ ಜೊತೆ ಸಾಲರಹಿತ ಜೀವನ!  ಅವರೆಲ್ಲರೂ ಪರಿಪೂರ್ಣರು ಎಂದು ನಾನು ಬಲವಾಗಿ ನಂಬಿಕೊಂಡಿದ್ದೇನೆ.

ಲಂಚ ಅಥವಾ ಗಿಂಬಳವಿಲ್ಲದ ಸರ್ಕಾರಿ ನೌಕರಿಯಲ್ಲಿ ಸಾಲವಿಲ್ಲದೇ ಅನೇಕ ಹೊಟ್ಟೆಗಳನ್ನು ಹೊರೆಯುತ್ತಾ ದೊಡ್ಡ ಕುಟುಂಬವನ್ನು ಸಾಕುವುದು ಸುಲಭದ ಮಾತಲ್ಲ.  ಆಗೆಲ್ಲಾ ಅವಿಭಾಜ್ಯವಾಗಿ ಬದುಕುತ್ತಿದ್ದ ತುಂಬಿದ ಕುಟುಂಬಗಳಲ್ಲಿ ಬರೀ ತಮ್ಮ ತಮ್ಮ ಪರಿವಾರವನ್ನು ಹೊಟ್ಟೆ ಹೊರೆಯುವುದು ಯಾವ ದೊಡ್ಡ ವಿಚಾರವೂ ಅಲ್ಲವೇ ಅಲ್ಲ... ಅವರವರ ಕುಟುಂಬಗಳ ಜೊತೆ, ಅಜ್ಜ-ಅಜ್ಜಿ, ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ, ಹೀಗೆ... ಅನೇಕರು ಬೇಕು-ಬೇಡವೆಂದರೂ ಆಯಾ ಕುಟುಂಬಗಳಲ್ಲಿ ಸೇರಿ ಹೋಗಿರುತ್ತಿದ್ದರು.  ಆದುದರಿಂದಲೇ ಮನೆಯಲ್ಲಿ ಒಂದಿಷ್ಟು ಜನರಿಗೆ ಯಾವಾಗಲೂ ಅಡುಗೆ ಮನೆಯನ್ನು ಬಿಟ್ಟು ಹೊರಬರಲು ಸಾಧ್ಯವಾಗದಿದ್ದುದು.  ಏಕಾದಶಿ ಅಥವಾ ಸೂತಕದ ಸಮಯದಲ್ಲೂ ಸಹ ಮನೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳು ಇರುತ್ತಿದ್ದವು.  ಮನೆಯವರಿಗೆಲ್ಲಾ ಸ್ನಾನಕ್ಕೆ ನೀರು ಕಾಸಿಕೊಟ್ಟು, ತಿಂಡಿ ಮಾಡಿ, ಕಾಫಿ ಕುಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತೇನೋ? ಅವುಗಳ ಜೊತೆಯಲ್ಲಿ ಜಾನುವಾರುಗಳಿಗೆ ಬಾಯಾರು ಕೊಡುವುದು, ನಾಯಿ-ಬೆಕ್ಕುಗಳಿಗೆ ಊಟವಿಕ್ಕುವುದು.  ಹೀಗೆ ಪ್ರತಿನಿತ್ಯ ಅನೇಕ ಬಾಯಿ ಮತ್ತು ಕೈಗಳಿಗೆ ಉಸಿರಾಗಬೇಕಿತ್ತು, ಉತ್ತರ ಕೊಡಬೇಕಿತ್ತು.  ಯಾರೂ ಯಾವತ್ತೂ ಉದಾಸೀನತೆ, ಆಲಸ್ಯಗಳಿಂದಾಗಿ ನಟ್ಟ ನಡುವಿನ ದಿನ ಮಲಗಿದ್ದನ್ನು ನಾನು ನೋಡಿಲ್ಲ!

ಸರಳ ಜೀವನವೇನೋ ಹೌದು, ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಒಂದು ಕ್ಷಣವೂ ಬಿಡುವಿರದೇ ದುಡಿದು ದಣಿಯುವ ದಿನಗಳು ಅವರದಾಗಿದ್ದವು.  ವಾರದ ದಿನಗಳು, ವಾರಾಂತ್ಯದ ದಿನಗಳಲ್ಲಿ ಕಛೇರಿಗೆ ಹೋಗಿ ಬರುವುದರ ಹೊರತಾಗಿ ಮತ್ತೇನೂ ವ್ಯತ್ಯಾಸವಿರಲಿಲ್ಲ.

***
ಇಂತಹ ಸೋಶಿಯಲಿಸ್ಟಿಕ್ ವ್ಯವಸ್ಥೆಯಲ್ಲಿ ಬೆಳೆದು ಬಂದ ನನಗೆ, ಅಮೇರಿಕಕ್ಕೆ ಬಂದ ಹೊಸತರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕ್ರೆಡಿಟ್ ಕಾರ್ಡ್ ಬಂದಾಗ ಅದೇಕೆ ಅಷ್ಟೊಂದು ಸಂಭ್ರಮವಾಗಿತ್ತೋ ಗೊತ್ತಿಲ್ಲ.  ಆಗ ನಮ್ಮ ಕ್ರೆಡಿಟ್ ಹಿಸ್ಟರಿ ಎಲ್ಲೂ ಇರದ ಸಮಯದಲ್ಲಿ ನಾವೇ ಅಡ್ವಾನ್ಸ್ ಆಗಿ ದುಡ್ಡು ಕೊಟ್ಟು, ನಮ್ಮ ಕ್ರೆಡಿಟ್ ಹಾಗಾದರೂ ಬೆಳೆಯಲಿ ಎಂದು, ಒಂದು ಬಂಗಾರದ ಬಣ್ಣದ ಕ್ರೆಡಿಟ್ ಕಾರ್ಡ್ ಅನ್ನು "ಕೊಂಡಿದ್ದೆವು"!  ನಮ್ಮ ರೂಮ್‌ಮೇಟ್‌ಗಳಲ್ಲಿ ನನಗೇ ಮೊದಲು ಅಂತಹ ಕಾರ್ಡ್ ಬಂದಿದ್ದರ ಸಂತೋಷವನ್ನು ಆಚರಿಸಲು, ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಹೋಗಿ, ಅಲ್ಲಿನ ಬಿಲ್ ಅನ್ನು ನನ್ನ ಹೊಸ ಕಾರ್ಡ್‌ನಲ್ಲಿ ಪಾವತಿಸಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

ಡೆಬಿಟ್ ಕಾರ್ಡ್ ಆದ್ದರಿಂದ, ಅದು ಒಂದು ರೀತಿಯ ಸಾಲವಲ್ಲ ಎನ್ನುವ ನಂಬಿಕೆಯಲ್ಲಿ ನಮ್ಮ ಸೋಶಿಯಲಿಸ್ಟಿಕ್ ನೆಲೆಗಟ್ಟಿನ ಮೌಲ್ಯಗಳಿಗೆ ನಾನು ಇನ್ನೂ ಗಟ್ಟಿಯಾಗಿ ಅಂಟಿಕೊಂಡಿದ್ದ ಕಾಲವದು.

ಒಂದು ದಿನ ನಾನು ನನ್ನ ಸಹಪಾಠಿ, ಪಾಕಿಸ್ತಾನದ ಆಲಿ ನಾಕ್ವಿಯ ಜೊತೆಗೆ ಸ್ಟೀವನ್ಸ್ ಇನ್ಸ್‌ಟಿಟ್ಯೂಟ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಾನು ಅವನಿಗೆ ಹೇಳಿದ್ದು ಚೆನ್ನಾಗಿ ನೆನಪಿದೆ.  "ಹೀಗೆ ಬಂದು ಸ್ವಲ್ಪ ಕಾಲದಲ್ಲೇ ಮತ್ತೆ ವಾಪಾಸ್ ಹೋಗುವ ನನಗೆ ಯಾವ ಸಾಲದ ಹೊರೆಯೂ ಬೇಕಾಗಿಲ್ಲ.  ಕೊನೆಯವರೆಗೂ ಹೀಗೇ ಬಾಡಿಗೆಯ ಮನೆಯಲ್ಲಿ ಇರುತ್ತೇನೆ!" ಎಂಬುದಾಗಿ.

ಅದೇ ದಿನ, ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ, ಪ್ರೊಫೆಸರ್ ಸ್ಟಾಕರ್ಟ್ ಅವರು, ಫೈನಾನ್ಸಿಯಲ್ ಅನಾಲಿಸಿಸ್ ಮಾಡುತ್ತಾ, ನಾವೆಲ್ಲರೂ ಏಕೆ/ಹೇಗೆ 401Kಯಲ್ಲಿ ಹಣವನ್ನು ತೊಡಗಿಸಬೇಕು,  ಎಲ್ಲರೂ ಕಡಿಮೆ ಇಂಟರೆಸ್ಟ್‌ನಲ್ಲಿ ಮಾರ್ಟ್‌ಗೇಜ್‌ ತೆಗೆದುಕೊಂಡು, ಅದರಿಂದ ಮನೆಯನ್ನು ಕೊಳ್ಳಬೇಕು,  ಹಾಗೆ ಮಾಡುವುದರಿಂದ ಟ್ಯಾಕ್ಸ್‌ ಕೊಡುವುದರಲ್ಲಿ ಹೇಗೆ ಅನುಕೂಲವಾಗುತ್ತದೆ, ಇತ್ಯಾದಿ, ಇತ್ಯಾದಿ... ಹಾಗೆ, ಹಣಕಾಸಿನ ವಿಚಾರಗಳನ್ನು ಕೇಳುತ್ತಲೇ ಅದೇ ದಿನ ಮುಂಜಾನೆ ಮಾಡಿದ ನನ್ನ "ಭೀಷ್ಮ ಪ್ರತಿಜ್ಞೆ" ಗಾಳಿಗೆ ತೂರಿ ಹೋಗಿ, ಅಂದಿನಿಂದ ಕೇವಲ ಮೂರೇ ತಿಂಗಳುಗಳಲ್ಲಿ ನನ್ನ ಮೊದಲ "ಮನೆ"ಯನ್ನು ಖರೀದಿ ಮಾಡಿಯಾಗಿತ್ತು!

ಕೇವಲ 250 ಡಾಲರ್ ಕೊಟ್ಟರೆ ತಿಂಗಳ ಬಾಡಿಗೆ ಮುಗಿದು ಹೋಗುತ್ತದೆ,  ಇವತ್ತು ಕೆಲಸವಿದ್ದರೆ ನಾಳೆ ಇಲ್ಲ, ಹೇಳೀ ಕೇಳಿ H1B ವೀಸಾದಲ್ಲಿರುವವರು ನಾವು, ಈ ಮಾರ್ಟ್‌ಗೇಜ್ ಸಹವಾಸ ನಿನಗೇಕೆ? ಎಂದು ನನ್ನ ರೂಮ್‌ಮೇಟ್‌ಗಳು ಹೇಳಿದ್ದನ್ನು ಕೇಳಲಿಲ್ಲ!  (ಆಗಿನ ಕಾಲದಲ್ಲಿ ಕಾರ್ ಅನ್ನು ಕ್ಯಾಶ್ ಕೊಟ್ಟು ಕೊಂಡಿದ್ದರೂ, ನನ್ನ ತಿಂಗಳ ಫೋನ್ ಬಿಲ್, ಮನೆಯ ಬಾಡಿಗೆಗಿಂತ ಹೆಚ್ಚು ಇರುತ್ತಿತ್ತು!).  ಅಂತೂ-ಇಂತೂ ನಾನೂ ಸಾಲದ ಕೂಪದಲ್ಲಿ ಬಿದ್ದು, ಒಂದಲ್ಲ ಎರಡಲ್ಲ ನೂರು ಸಾವಿರ ಡಾಲರ್ ಸಾಲ ಮಾಡಿ, ಮನೆಯನ್ನು ಕೊಂಡುಕೊಂಡೆ!  ಆಗ ಒಂದು ಡಾಲರ್‌ಗೆ 34 ರುಪಾಯಿಯ ಸಮವಿತ್ತು.  ಅಂದರೆ, ಏಕ್‌ದಮ್, ಬರೋಬ್ಬರಿ 34 ಲಕ್ಷ ರುಪಾಯಿಯ ಸಾಲ!

ಸುಮಾರು 21 ವರ್ಷಗಳ ಹಿಂದೆ ಆರಂಭವಾದ ಈ ಸಾಲದ ಬಾಬತ್ತು ಯಾವತ್ತಿಗೂ ನೂರು ಸಾವಿರ ಡಾಲರಿಗಿಂತ ಕಡಿಮೆಯಾಗಲೇ ಇಲ್ಲ!  ಚಿಕ್ಕ ಮನೆಗಳು ದೊಡ್ಡವಾದಂತೆ, ಚಿಕ್ಕ ಕುಟುಂಬ ದೊಡ್ಡದಾಯಿತು.  ಚಿಕ್ಕ ಕಾರುಗಳ ಬದಲು ದೊಡ್ಡ ಕಾರು ಬಂದಿತು... ಅಂತೆಯೇ ನನ್ನ ತಲೆಯ ಮೇಲಿನ ಸಾಲವೂ ದೊಡ್ಡದಾಗುತ್ತಲೇ ಹೋಯಿತು... ವರ್ಷಗಳು ಕಳೆದಂತೆ ಒಂದರ ಮುಂದೆ ಅನೇಕ ಸೊನ್ನೆಗಳು ಸೇರುತ್ತಲೇ ಹೋದವು.  ಇವತ್ತಿಗೇನಾದರೂ ನನ್ನ ಒಟ್ಟು ಸಾಲದ ಮೊತ್ತವನ್ನೇನಾದರೂ ನನ್ನ ಹಿರಿಯರು ಬಂದು ನೋಡಿದರೆ, ಅವರೆಂದೂ ನನ್ನನ್ನು ಕ್ಷಮಿಸುವುದಿಲ್ಲ!

ಒಟ್ಟಿನಲ್ಲಿ ನನ್ನ ಪರಿವಾರದಲ್ಲಿ ಯಾರೂ ಮಾಡಿರದ ಸಾಲವನ್ನು ನಾನು ಮಾಡಿದ್ದೇನೆ... ಇನ್ನು ಮುಂದಿನ ತಲೆಮಾರುಗಳು ಹೇಗೋ ಏನೋ... ಸಾಲರಹಿತ ತಲೆಮಾರಿನಿಂದ ಸಾಲದ ತಲೆಮಾರಿಗೆ ದೊಡ್ಡ ಲಂಘನವನ್ನು ಮಾಡಿರುವಲ್ಲಿ ನನ್ನ ಪಾತ್ರ ದೊಡ್ಡದು!

***
ನಮ್ಮ ಸುತ್ತಲೂ ಈಗ ಯಂತ್ರಗಳಿವೆ:  ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಒಣಗಿಸಲು, ಇಸ್ತ್ರಿ ಮಾಡಲು, ಇತ್ಯಾದಿ. ಇಲ್ಲಿ ನಾವುಗಳು  ಹೆಚ್ಚು ಕೈ-ಬಾಯಿಗಳಿಗೆ ಉತ್ತರ ಕೊಡಬೇಕಾಗಿಲ್ಲ... ಹೆಚ್ಚೂ-ಕಡಿಮೆ, ಅಡುಗೆ ಮಾಡುವುದಕ್ಕೆ ಎಷ್ಟು ಸಮಯಬೇಕೋ, ತಿನ್ನುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ!  ಸಾಲ ದೊಡ್ಡದಿದೆ.  ಹೂಡಿಕೆಗಳು ಹಲವಿವೆ.  ಆದರೂ, ಮಾರ್ಕೆಟ್‌ನ ತೂಗುಯ್ಯಾಲೆಯಲ್ಲಿ ನಮ್ಮ ನಮ್ಮ ಮನಸೂ ಕನಸೂ ತೂಗುತ್ತಿರುತ್ತವೆ... ಮೊದಮೊದಲ ಕೆಲವು ವಾರಗಳಲ್ಲಿ, ಈ ಕೊರೋನಾ ವೈರಸ್ ದೆಸೆಯಿಂದಾಗಿ, ಮನೆಯಲ್ಲೇ ಕುಳಿತು, ದಿನದ ಮೂರು ಹೊತ್ತು ಅಡುಗೆ ಮಾಡಿ, ಉಂಡು, ತೊಳೆದಿಡುವ ಕಾಯಕ ದೊಡ್ಡದೆನಿಸಿತ್ತಿತ್ತು, ಈಗ ಅದಕ್ಕೂ ಹೊಂದಿಕೊಂಡಿದ್ದಾಗಿದೆ... ಆದರೆ, "ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚುವುದು" ಬದುಕಾಗಿ ಹೋಗಿದೆ.  "ಆಳಾಗಿ ದುಡಿಯುವುದು ಇದ್ದರೂ ಅರಸಾಗಿ ಉಣ್ಣುವ" ಸಮಾಧಾನ ಚಿತ್ತ ಇನ್ನೂ ಕಾಣಬಂದಿಲ್ಲ!  ಅಂದು ಸಾಲರಹಿತ ಹಿರಿಯರು ಕಣ್ತುಂಬ ನಿದ್ರೆಯನ್ನು ಮಾಡುತ್ತಿದ್ದರೂ, ಮೈ ತುಂಬ ಸಾಲವಿರುವ ನಮಗೆ ಇಂದು ಅನೇಕ ಚಿಂತೆಗಳು ಕೊರಗುವಂತೆ ಮಾಡುತ್ತವೆ... ನಾಳೆ ಹೇಗೋ ಎನ್ನುವ ಬವಣೆ ನಮ್ಮ ನಾಳೆಯನ್ನು ಮರೀಚಿಕೆಯನ್ನಾಗಿ ದೂರದಲ್ಲೇ ಇಡುತ್ತಿದೆ!

ಇಲ್ಲಿ ನಾವಿರುವ ನೆಲ, ನೆಲೆ, ನೆರೆಹೊರೆ, ದೇಶ, ಭಾಷೆ, ಕಂಪನಿಗಳು ಮೊದಲಾದ ಎಲ್ಲವೂ ಕ್ಯಾಪಿಟಲಿಸಮ್ಮಿನಲ್ಲಿ ಮಿಂದು ಪುಳಕಗೊಂಡವುಗಳು... ಇಲ್ಲಿ ಸಾಲವೆಂಬುದು ಶೂಲ ಅಲ್ಲವೇ ಅಲ್ಲ... ಸಾಲದು ಎನ್ನುವುದು ಬೇಕು ಎಂಬುದಕ್ಕೆ ತಾಯಿಯಾದಂತೆ, ನಮಗೆಲ್ಲ ಸಾಲ ಎನ್ನುವುದು ಒಂದು ರೀತಿಯ ತೆವಲಾಗಿ (addiction) ಬಿಟ್ಟಿದೆ... ಇದನ್ನು ಬಿಟ್ಟಿರುವುದು ಸಾಧ್ಯವೇ?

Thursday, April 30, 2020

ಬರಹದತ್ತ ಮುಖ ಮಾಡಿಸಿದ ಕೋವಿಡ್

ಇವತ್ತಿಗೆ ಬರೋಬ್ಬರಿ ಏಳು ವಾರವಾಯಿತು... ನನ್ನಂಥವರು ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿ.  ಈ ಕೋವಿಡ್‌ನಿಂದ ಯಾರು ಯಾರಿಗೆ ಏನೇನು ಅನುಕೂಲ-ಅನಾನುಕೂಲವಾಗಿದೆಯೋ, ನನಗಂತೂ ಇದು ಬರಹ-ಓದು-ಸಂಭಾಷಣೆಗಳಲ್ಲಿ ತೊಡಗಿಸಿದೆ.

ಏನೇನು ಹೊಸತುಗಳು ಈ ಏಳು ವಾರದಲ್ಲಿ ಶುರುವಾದವು ಎಂದು ಪಟ್ಟಿ ಮಾಡುತ್ತಾ ಹೋದಾಗ ಈ ಕೆಳಗಿನವು ಕಂಡು ಬಂದವು:
- ಮೂರು ಹೊತ್ತೂ ಮನೆ ಊಟ ನಮಗೆ ಬೇಕಾದಂತೆ ಮಾಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ಕುಕಿಂಗ್ ಶೋಗಳನ್ನು ನೋಡಲು ಶುರು ಮಾಡಿದ್ದು, ಜೊತೆಗೆ ರೆಸಿಪಿಗಳನ್ನು ಹುಡುಕಿದ್ದು
- ಮನೆಯಲ್ಲೇ ಇದ್ದುದರಿಂದ ನಾಲ್ಕೈದು ಜೊತೆ ಬಟ್ಟೆಗಳನ್ನೇ ಪುನರಾವರ್ತನೆಯಾಗಿ ಬಳಸಿದ್ದು
- ಈ ವರೆಗೆ ಮರೆತು ಹೋಗಿದ್ದ ಅನೇಕ ಬ್ಲಾಗುಗಳನ್ನು ತೆರೆದು ಓದಿದ್ದು
- ಈ ವರೆಗೆ ಮರೆತಂತಿದ್ದ "ಅಂತರಂಗ"ದ ಬಾಗಿಲು ತೆಗೆದು ಮತ್ತೆ ಬರೆಯಲು ಶುರು ಮಾಡಿದ್ದು (ಏಪ್ರಿಲ್ ತಿಂಗಳಿನಲ್ಲಿ ದಿನಕ್ಕೊಂದು ಲೇಖನವನ್ನು ಹಾಕಿದ್ದು)
- ಸ್ನೇಹಿತರ ಬಳಿ ಒಳ್ಳೆಯ ಸಿನಿಮಾಗಳ ರೆಕಮೆಂಡೇಷನ್ ಅನ್ನು ಕೇಳಿ ಸಿನಿಮಾ ನೋಡಿದ್ದು
- ಬಂಧುಗಳ ಜೊತೆ, ಸ್ನೇಹಿತರ ಜೊತೆ ದೀರ್ಘಕಾಲ ಮಾತನಾಡಿದ್ದು
- ವಾರದಲ್ಲಿ ಒಂದು ನಿಮಿಷವೂ ಕೂಡ ಕಾರಿನಲ್ಲಿ  ಪ್ರಯಾಣಿಸದೇ ಇದ್ದದ್ದು
- ಬಂದಂತ ವಾಟ್ಸಾಪ್ ಮೆಸ್ಸೇಜುಗಳನ್ನೆಲ್ಲ ನೋಡಿದ್ದು
- ವೀಕೆಂಡ್ ದಿನಗಳನ್ನು ಹೇಗೆ ಕಳೆಯುವುದಪ್ಪಾ ಎಂದು ಚಿಂತಿಸಿದ್ದು
- ನಮ್ಮ ಪಕ್ಕದ ಮನೆಯವರ ಜೊತೆ ವೆಬೆಕ್ಸ್ ಕಾನ್‌ಫರೆನ್ಸಿನಲ್ಲಿ ಮಾತನಾಡಿದ್ದು
- ಮನೆಯ ಮೂಲೆ ಮೂಲೆಯನ್ನೂ (ಸ್ಟೆಪ್ಸ್ ಕೌಂಟ್ ಆಗಲೆಂದು) ತಿರುಗಿದ್ದು
- (ಅನೇಕ ವರ್ಷಗಳ ನಂತರ) ಮನೆಯನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ್ದು

ಇವೆಲ್ಲ ಏನೋ ದೊಡ್ಡ ವಿಷಯ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರಬಹುದು.  ಆದರೆ, ಎರಡು ತಿಂಗಳ ಹಿಂದಿನ (ವ್ಯವಸ್ಥಿತ) ವ್ಯಸ್ತ ಜೀವನ ಇಂದು ಅವ್ಯಸ್ತವಾಗಿದೆ ಎಂದು ಹೇಳಲು ಬಾರದು.  ಆದರೆ, ನಮ್ಮೆಲ್ಲರಿಗೂ ಸಿಗುವುದು ಇಂತಿಷ್ಟೇ ಸಮಯವಾದರೂ ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.  ನಾವು ನಮ್ಮ ಬದುಕಿನಲ್ಲಿ ಸಾಧಿಸಿರುವುದು ಒಂದು ಸಾಸಿವೆ ಕಾಳು ಗಾತ್ರದಷ್ಟು ಮಾತ್ರ ಎನ್ನುವ ಭಾವನೆ ಮೂಡಲು ಗುರು ಶಂಕರಾಚಾರ್ಯರು ಕೇವಲ 32 ವರ್ಷದ ಅವರ ಜೀವಿತದಲ್ಲಿ ಎಷ್ಟೊಂದನ್ನು ಸಾಧಿಸಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತದೆ.  ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, ಭರತ ಖಂಡದ ಉದ್ದಕ್ಕೂ ಅಲೆದಾಡಿ ಅದೆಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.


***
ಈ ಕೋವಿಡ್‌ ದಯೆಯಿಂದ ನಿಮ್ಮ ನಿಮ್ಮ ಹೊಸ ಅನುಭವಗಳೇನೇನಿವೆ? ಹಂಚಿಕೊಳ್ಳಬಹುದೇ?

Friday, April 24, 2020

ಗಂಡಾಂತರ

ಕನ್ನಡಿಗರು ಬಹಳ ಬುದ್ಧಿವಂತರು! ಹೀಗೆಂದು ಅನ್ನಿಸಿದ್ದು, ಮೊನ್ನೆ ನಾನು ರಿಸ್ಕ್ ಎನ್ನುವ ಪದಕ್ಕೆ ಕನ್ನಡದಲ್ಲಿ ಸಮನಾರ್ಥಕ ಪದವನ್ನು ಹುಡುಕುತ್ತಿದ್ದಾಗ.  ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಎಂತೆಂತ ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ, ಆದರೆ ನಾವು ಇಲ್ಲಿನ ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ ದಿನೇದಿನೇ ಅನೇಕ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದೂ ಅಲ್ಲದೇ ಅವುಗಳನ್ನು ಮಿಟಿಗೇಟ್ ಹಾಗೂ ಮ್ಯಾನೇಜ್ ಮಾಡಬೇಕಾಗಿ ಬರುತ್ತದೆ.  ರಿಸ್ಕ್ ಮ್ಯಾನೇಜ್‌ಮೆಂಟ್ ಎನ್ನುವುದು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಿನ್ನ ದೊಡ್ಡದೊಂದು ಭಾಗ.  ನಾವು ಬರೆಯುವ ಡಾಕ್ಯುಮೆಂಟ್‌ಗಳಲ್ಲಿ ರಿಸ್ಕ್ ಎನ್ನುವ ಪದ ಬಂದಾಗಲೆಲ್ಲ ನಾವು ಅದನ್ನು ತೊಂದರೆಅಥವಾ ಅವಗಢ ಎಂದುಕೊಳ್ಳದೇ ನಮ್ಮ ಕಾರ್ಯದಲ್ಲಿ ಸಹಜವಾಗಿ ಬರುವ ಸಂಕಷ್ಟಗಳು ಎಂದುಕೊಂಡು ಅದನ್ನು ಎದುರಿಸುತ್ತೇವೆ ಹಾಗೂ ಉಪಶಮನ (mitigate) ಗೊಳಿಸುತ್ತೇವೆ.



"ರಿಸ್ಕ್" ಎನ್ನುವ ಪದಗಳಿಗೆ ಇಂಗ್ಲೀಷಿನಲ್ಲಿ a situation involving exposure to danger, ಎನ್ನುವ ನಾಮ ಪದವಾಗಿ ಅಥವಾ exposing oneself to danger or harm ಎನ್ನುವ ಕ್ರಿಯಾಪದವಾಗಿಯೂ ಬಳಸುವುದನ್ನು ನೋಡುತ್ತೇವೆ.  ಮಾಮೂಲಿ ವ್ಯಾಖ್ಯೆಯಲ್ಲಿ ರಿಸ್ಕ್ ಎನ್ನುವ ಪದ ಕೆಟ್ಟದ್ದನ್ನು ಸೂಚಿಸುತ್ತದೆಯಾದರೂ, ನಾವು ನಮ್ಮ ದಿನನಿತ್ಯದ ಪ್ರಾಜೆಕ್ಟಿನಲ್ಲಿ ಬರುವ ಆಡಚಣೆಗಳನ್ನು ಹಾಗೂ ವ್ಯವಹಾರದಲ್ಲಿ ಆಗಬಹುದಾದ ಲಾಭ ಮತ್ತು ನಷ್ಟವನ್ನೂ ಸಹ ರಿಸ್ಕ್ ಅಥವಾ ರಿಸ್ಕ್ ತೆಗೆದುಕೊಂಡಿದ್ದರ ಫಲಿತಾಂಶ ಎಂದೇ ಕರೆಯುತ್ತೇವೆ.  ಇನ್ನು ರಿಸ್ಕ್ ಸೀಕಿಂಗ್ (risk seeking) ಹಾಗೂ ರಿಸ್ಕ್ ಅವರ್ಸ್ (risk averse) ಜನರೂ ಸಹ ನಮ್ಮ ಮಧ್ಯೆ ಕಾಣಸಿಗುತ್ತಾರೆ.  ರಿಸ್ಕ್ ಸೀಕಿಂಗ್ ಎಂದರೆ ತಮ್ಮನ್ನು ತಾವು ಪದೇಪದೇ ಗಂಡಾಂತರಕ್ಕೆ ಒಡ್ಡಿಕೊಳ್ಳುವವರು ಎಂದು ಭಾಷಾಂತರ ಮಾಡಲಾಗದು.

ಕನ್ನಡ ನಿಘಂಟಿನಲ್ಲಿ ರಿಸ್ಕ್ ಎನ್ನುವ ಪದಕ್ಕೆ ಅಪಾಯ, ಗಂಡಾಂತರ, ಕೇಡು, ನಷ್ಟ, ಹಾನಿ, ತೊಂದರೆ, ಮುಂದೆ ಸಂಭವಿಸಬಹುದಾದ ತೊಂದರೆ, ಕಷ್ಟ, ಕುತ್ತು ಎನ್ನುವ ಪದಗಳು ಸಿಗುತ್ತವೆ.  ಆದರೆ, ನಮ್ಮ ಇಂಗ್ಲೀಷಿನ ಪರಿಭಾಷೆಯಲ್ಲಿ ಹೇಳುವಂತೆ take risk ಎಂದು ನಾವು ಯಾರಿಗೂ ಕನ್ನಡದಲ್ಲಿ ಹೇಳೋದಿಲ್ಲ.  "ಮುಂದೆ ಗಂಡಾಂತರ ಬಂದೀತು, ಎಚ್ಚರ!" ಎಂದು ಹೇಳಿದರೂ "ಸುಮ್ಮನೇ ಅಪಶಕುನ ನುಡಿಯಬೇಡ!" ಎಂದು ಯಾರಾದರೂ ಗದರಿಸಿಬಿಟ್ಟಾರು!  ರಿಸ್ಕ್ ತೆಗೆದುಕೊಳ್ಳುವುದನ್ನು ನಾವು ಕನ್ನಡಿಗರು ತುಂಬಾ ನೆಗೆಟಿವ್ ಆಗಿ ನೋಡುವುದರಿಂದಲೇ ಏನೋ, ನಾವು ಎಂದೂ ಎಲ್ಲೂ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೋಗುವುದೇ ಇಲ್ಲ, ಅದೇ ನೋಡಿ ನಮ್ಮ ಜಾಯಮಾನ...ಅದಕ್ಕೇ ನಾವು ಕನ್ನಡಿಗರು ಬಹಳ ಬುದ್ಧಿವಂತರು ಎಂದು ಆರಂಭದಲ್ಲಿ ಬರೆದಿದ್ದು.
ನಮ್ಮ ಕನ್ನಡಿಗರಿಗೆ ಒಂದು ಕೆಲಸವನ್ನು ಬಿಟ್ಟು ಮತ್ತೊಂದು ಹುಡುಕುವುದಕ್ಕಾಗಲೀ, ಒಂದು ಮನೆಯನ್ನು ಬದಲಾಯಿಸಿ ಮತ್ತೊಂದಕ್ಕೆ ಹೋಗುವುದಕ್ಕಾಗಲೀ, ಈಗಿನ ಸ್ಥಿತಿಯಿಂದ ಮತ್ತೊಂದು ಸ್ಥಿತಿಯ ಬಗ್ಗೆ ಆಲೋಚಿಸುವುದರಲ್ಲಾಗಲೀ ಎಲ್ಲೂ ಮನಸ್ಸೇ ನಿಲ್ಲೋದಿಲ್ಲ.  "ದಿನ ದಿನ ಗಂಡಾಂತರವನ್ನು ತೆಗೆದುಕೊಳ್ಳುವವರಿಗೆ ನೂರು ವರ್ಷ ಆಯಸ್ಸು" ಇದೆಯೆಂದು ಸಾರುವ ತೆಲುಗಿನ ನಾಣ್ಣುಡಿಯನ್ನು ನಮ್ಮ ಆಫೀಸಿನಲ್ಲಿ ಕೆಲಸ ಮಾಡುವ ತೆಲುಗು ಪರಂಪರೆಯವರು ಹಾಗೆಂದು ಉದ್ಧರಿಸುವುದಷ್ಟೇ ಅಲ, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ ಕೂಡ.  ಆದರೆ, ಅದೇ ನಮ್ಮ ಕನ್ನಡಿಗರ ವಿಷಯಕ್ಕೆ ಬಂದರೆ ಬದಲಾವಣೆಗಳ ರಿಸ್ಕ್ ನಮಗೆ ಬಹಳ ದೊಡ್ಡದಾಗಿ ಕಾಣುತ್ತದೆ.  ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ ಏನನ್ನಾದರೂ ಏಕೆ ಬದಲಿಸಬೇಕು, ನೀವೇ ಹೇಳಿ!?

ನಾವು ಕನ್ನಡಿಗರು ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಮೊದಲಿಗರಲ್ಲ.  ಎಲ್ಲಿ ನಾವು ಮೊದಲಿಗರಾಗಲು ಹಿಂಜರಿಯುತ್ತೇವೆಯೋ ಅಲ್ಲಿ ನಾವು ಲೀಡರುಗಳಾಗೋದಿಲ್ಲ.  ಎಲ್ಲಿ ನಮ್ಮ ಹಿರಿತನವಿರುವುದಿಲ್ಲವೋ ಅಲ್ಲಿನ ಕಾರ್ಯವೈಖರಿಗಳು ನಮ್ಮ ಆಲೋಚನೆಯಂತೆ ನಡೆಯುವುದಿಲ್ಲ.  ಎಲ್ಲಿ ನಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯುವುದಿಲ್ಲವೋ ಅಲ್ಲಿ ನಾವು ಯಾವಾಗಲೂ ಹೊರಗಿನವರಾಗಿರುತ್ತೇವೆ, ಅಲ್ಲದೇ ಅಲ್ಲಿ ಬೇರೊಬ್ಬರ, ಬೇರೆಯವರ ಆಲೋಚನೆಗಳಿಗೆ ಆಸ್ಪದ ಸಿಗುತ್ತದೆ.  ಇವುಗಳೆಲ್ಲದರಿಂದಾಗಿ ನಮ್ಮತನ ದೂರವಾಗಿ ನಮ್ಮನ್ನು ಮತ್ಯಾನ್ಯಾರೋ ದುಡಿಸಿಕೊಳ್ಳಲು ತೊಡಗುತ್ತಾರೆ, ಹೀಗೆ ದುಡಿದುಕೊಂಡು ಬೆಳೆಯುವ ಜೀವಕ್ಕೆ ಕರ್ಮಠತನ ಲಭಿಸುತ್ತದೆ.  ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿ ವ್ಯಸ್ತವಾಗಿರುವ ಕರ್ಮಠತನದ ಮನಸ್ಸಿಗೆ ಬದಲಾವಣೆ ಬೇಕೆಂದು ಅನ್ನಿಸದೇ ಅದು ಯಥಾಸ್ಥಿತಿಗೆ (status quo) ಶರಣಾಗಿ ವಿಷವರ್ತುಲಕ್ಕೆ (vicious circle) ಸಿಕ್ಕು ವಿಲವಿಲ ಒದ್ದಾಡುವಂತಾಗುತ್ತದೆ.

ಇವುಗಳೆಲ್ಲದರಿಂದ ಮುಕ್ತಿ ಬೇಕೆಂದಾದಲ್ಲಿ, ರಿಸ್ಕ್ ತೆಗೆದುಕೊಳ್ಳಲೇ ಬೇಕಾಗುತ್ತದೆ.  ರಿಸ್ಕ್ ಅನ್ನುವ ಪದವನ್ನು ನಾವು ಕನ್ನಡಿಗರು ಅಪಾಯ ಅಥವಾ ಗಂಡಾಂತರ ಎನ್ನುವ ಅರ್ಥದಲ್ಲಿ ಬಳಸುವ ಬದಲು, ರಿಸ್ಕ್ ಅನ್ನು ಬದಲಾವಣೆಯ ಕೈಪಿಡಿಯನ್ನಾಗಿ ಸ್ವೀಕರಿಸಿ ಅದಕ್ಕೊಂದು ಸಾಹಸೀ ಪರಿಭಾಷೆಯನ್ನು ಕೊಡಬೇಕಾಗುವುದು, ಇಂದಿನ ದಿನಗಳ ಮಹಾ ಅಗತ್ಯಗಳಲ್ಲೊಂದು.
ಎದ್ದೇಳಿ, ಇನ್ನಾದರೂ ಸ್ವಲ್ಪ ರಿಸ್ಕ್ ತಗೊಳ್ಳಿ, ತೊಂದರೆ ಏನೋ ಆಗೋದಿಲ್ಲ, ಕನ್ನಡಿಗರು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದರೇನೇ, ತೊಂದರೆ!

***

Risk ಅನ್ನುವುದಕ್ಕೆ ಮತ್ತಿನ್ನೇನು ಪದಗಳನ್ನು ಕನ್ನಡದಲ್ಲಿ ಬಳಸಬಹುದು?

Wednesday, April 22, 2020

ನನ್ನ ದೇಶ ನನ್ನ ಜನ

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
ತೀರಿಸುವೆನೆ ಅದರ ಋಣ
ಈ ಒಂದೇ ಜನ್ಮದಿ|
ನೂರು ಭಾವ ಭಾಷೆ ನೆಲೆ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು|

ನಮ್ಮ ದೇಶದಲ್ಲಿ ಒಂದು ಕೋಮಿನವರು ವೈರಸ್ ಸೋಂಕನ್ನು ಉದ್ದೇಶ ಪೂರ್ವಕವಾಗಿ ಹರಡುತ್ತಿದ್ದಾರೆ... ಇಡೀ ಪ್ರಪಂಚವೇ ವೈರಸ್‌ ದೆಸೆಯಿಂದ ನಲುಗುತ್ತಿದ್ದರೆ ಅದನ್ನು ಕೆಲವರು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ... ನಮ್ಮ ಯುವಕ-ಯುವತಿಯರು ಪಾಕಿಸ್ತಾನಕ್ಕೆ ಜೈಕಾರ ಹಾಕುವುದನ್ನು ತಮ್ಮ ಹಕ್ಕು ಎಂದುಕೊಂಡಿದ್ದಾರೆ... ಎಂದೆಲ್ಲ ಮಾಧ್ಯಮಗಳಲ್ಲಿ ಓದಿದಾಗ ಚೆನ್ನವೀರ ಕಣವಿಯವರ ಈ ಹಾಡು ನೆನಪಿಗೆ ಬಂತು.  ಇನ್ನೂ ಕೇವಲ ಎಪ್ಪತ್ತಮೂರು ವರ್ಷಗಳನ್ನು ಕಳೆದ ನಮ್ಮ "ಸ್ವಾತಂತ್ರ್ಯ" ನಮ್ಮನ್ನು ಈ ಸ್ಥಿತಿಗೆ ತಂದಿದೆ.  ಇನ್ನೊಂದಿನ್ನೂರು ವರ್ಷಗಳಲ್ಲಿ ನಮ್ಮ ಯುವ ಜನರ "ದೇಶಭಕ್ತಿ" ಇದೇ ರೀತಿಯಲ್ಲಿ ಮುಂದುವರೆದು, ನಮ್ಮೆಲ್ಲರ ದೇಶ ಪ್ರೇಮ, ವಿಶ್ವಾಸ, ಒಗ್ಗಟ್ಟು, ಭಾವೈಕ್ಯತೆ, ಘನತೆ ಇವೆಲ್ಲವೂ ಏನಾಗಬಹುದು ಎಂದು ಯೋಚಿಸಿದಾಗ ನಿಜವಾಗಿಯೂ ಬೆನ್ನ ಹುರಿಯಲ್ಲಿ ಕಂಪನವಾಯಿತು.  ಇಂದಿನ ಯುವಕರೇ ಮುಂದಿನ ಪ್ರಜೆಗಳು, ನಾಳಿನ ಭಾರತದ ಭವಿತವ್ಯರು - ಎಂದೆಲ್ಲ ಯೋಚಿಸಿಕೊಂಡಾಗ ಹೆದರಿಕೆಯ ಜೊತೆಗೆ, ಖೇದವೂ ಒಡಮೂಡಿತು.

***
1947ರ ಸ್ವಾತ್ರಂತ್ರ್ಯ ನಿಜವಾಗಿಯೂ ನಮ್ಮನ್ನು ಒಂದುಗೂಡಿಸಿತೇ? ಬ್ರಿಟೀಷ್ ಮತ್ತು ಇತರ ವಸಾಹತುಶಾಹಿಗಳ ಅಧಿಕಾರ ಅವಧಿ ಇರದೇ ಇರುತ್ತಿದ್ದರೆ ಇಂದಿನ ನಮ್ಮ ಅಖಂಡ ಭಾರತ ಹೇಗಿರುತ್ತಿತ್ತು? ಬ್ರಿಟೀಷರ ಭಾಷೆ ನಮ್ಮನ್ನು ಒಂದುಗೂಡಿಸಿತೇ? ಅವರ ಆಚಾರ-ವಿಚಾರ ಹಾಗೂ ನಡೆವಳಿಕೆಗಳು ನಮ್ಮನ್ನು ಮುಂದುವರೆದವರನ್ನಾಗಿ ಮಾಡಿದವೇ? ಎಪ್ಪತ್ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಸಂಗ್ರಾ?ಮದ ಸಮಯದಲ್ಲಿ ಮಾಹಿತಿ ಇರದಿದ್ದರೂ ಕೋಟ್ಯಾಂತರ ಮಂದಿ ಬ್ರಿಟೀಷರ ವಿರುದ್ಧ ಹೋರಾಡಿ ತಂದು ಕೊಟ್ಟ ಈ ಸ್ವಾಂತಂತ್ರ್ಯಕ್ಕೆ ಇಂದು ಅಂಗೈಯಲ್ಲಿ ಮಾಹಿತಿ ಸಿಗುವ ಅನುಕೂಲದ ಸಮಯದಲ್ಲಿ ಯುವ ಜನತೆಯಿಂದ ಅದಕ್ಕೇಕೆ ಕಡಿವಾಣ ಬೀಳುತ್ತಿದೆ? ದೇಶದ ಸಹನೆಯನ್ನೇಕೆ ಕೆಲವರು ಪರೀಕ್ಷಿಸುವಂತಾಗಿದೆ?  ನಿಜವಾಗಿಯೂ ನಮ್ಮ ದೇಶದಲ್ಲಿ ಸ್ವಾತಂತ್ರ್ಯವಿದೆಯೇ? ಹಾಗಿದ್ದರೆ ಅದರ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆಯೇ?

***

ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ, ಇಸ್ಲಾಂ ಮೂಲದ ಜೊತೆಗೆ ಮಧ್ಯ ಪ್ರಾಚ್ಯ ನೆರೆಹೊರೆಯ ಸಂಪ್ರದಾಯವನ್ನು ಮೈವೆತ್ತ ನೆರೆಯ ಪಾಕಿಸ್ತಾನ 1947ರಿಂದಲೂ ಬಡರಾಷ್ಟ್ರವಾಗೇ ಮುಂದುವರೆದಿದೆ.  ಒಂದು ಕಾಲದಲ್ಲಿ ತನ್ನಲ್ಲಿ ಬೆಳೆಯುವ ಹತ್ತಿಯನ್ನು ಸಂಸ್ಕರಿಸುವ ಕೈಗಾರಿಕೆಯೂ ಇಲ್ಲದೆ ಒಂದು ಸಣ್ಣ ಸೂಜಿಯಿಂದ ಹಿಡಿದು ಕಾರಿನವರೆಗೂ ಹೊರ ರಾಷ್ಟ್ರಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡು ತನ್ನ ಆಂತರಿಕ ಸಂಘರ್ಷಗಳನ್ನು ಒಂದು ಕಡೆ ಹತ್ತಿಕ್ಕಲೂ ಆಗದೆ ಬಚ್ಚಿಡಲೂ ಆಗದೆ ಬಳಲುತ್ತಿರುವ ರಾಷ್ಟ್ರ ಪಾಕಿಸ್ತಾನ.  ಅನೇಕ ಮುತ್ಸದ್ದಿಗಳು ಹುಟ್ಟಿಬಂದ ನೆಲದಲ್ಲೇ ಇಸ್ಲಾಂ ಪ್ರವಾದಿಗಳು ಜನರ ಮನದಲ್ಲಿ ಸೇಡು, ಕಿಚ್ಚಿನ ಕ್ರಾಂತಿಯನ್ನು ಬಿತ್ತುತ್ತಾ ಬಂದರು.  ಭಾರತವನ್ನು ದ್ವೇಷಿಸುವುದೇ ಪ್ರಣಾಳಿಕೆಯೆಂಬಂತೆ ನಾಯಿಕೊಡೆಗಳಂತೆ ಅಲ್ಲಲ್ಲಿ ಪಕ್ಷಗಳು ಹುಟ್ಟಿದವು.  ಅವೇ ಮುಂದೆ ಭಯೋತ್ಪಾದಕ ಸಂಘಟನೆಗಳಾದವು.  ಅನೇಕ ಮಿಲಿಟರಿ ಕ್ಯೂ (ರಕ್ತಪಾತ) ಹಾಗೂ ಅನೇಕ ಭ್ರಷ್ಟಾಚಾರದ ಅಧೋಗತಿಯಲ್ಲಿ ದೇಶ ಹಾಳಾಗಿ ಹೋಯಿತು.  ಒಂದು ಕಾಲದಲ್ಲಿ ವಿದೇಶೀ ಸಹಾಯವಿಲ್ಲದಿದ್ದರೆ ಯಾವತ್ತೋ ಭೂಪಟದಲ್ಲಿ ನಾಪತ್ತೆಯಾಗಿ ಹೋಗುವಂತಿದ್ದ ಪಾಕಿಸ್ತಾನಕ್ಕೆ ಬಲವಾಗಿ ಸಿಕ್ಕಿದ್ದು ನ್ಯೂಕ್ಲಿಯರ್ ಶಕ್ತಿ.  ನವದೆಹಲಿಯಿಂದ ಕೇವಲ ಐನೂರು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದ ಅಸ್ಥಿರತೆಯನ್ನು ನಾವು ಬಹಳ ಸೂಕ್ಷವಾಗಿ ನೋಡಿಕೊಂಡು ಬರುವಂತ ಸ್ಥಿತಿ ಇಂದಿಗೂ ಇದೆ.  ಯಾವುದೋ ಧಾರ್ಮಿಕ ಮೂಲಭೂತವಾದಿಗೆ ಈ ಅಣ್ವಸ್ತ್ರವೇನಾದರೂ ದೊರೆತರೆ ಅದು ಪ್ರಪಂಚದ ವಿನಾಶಕ್ಕೆ ಕಾರಣವಾಗಬಹುದು!

ಇಂತಹ ಪಾಕಿಸ್ತಾನವನ್ನು ನಮ್ಮಲ್ಲಿನ ಕೆಲವು ಯುವಕ-ಯುವತಿಯರು ಬೆಂಬಲಿಸುತ್ತಾರೆ.  ಇಂತಹ ಪಾಕಿಸ್ತಾನಕ್ಕೆ ಜಯಕಾರ ಹಾಕುತ್ತಾರೆ ಎಂದು ಕೇಳುತ್ತಲೇ ಹೊಟ್ಟೆ ತೊಳಸಿದಂತಾಗುತ್ತದೆ.  ಈ ಯುವಕ-ಯುವತಿಯರಿಗೆ ನಿಜವಾದ ಪಾಕಿಸ್ತಾನದ ಅರಿವೇ ಇಲ್ಲ.  ಯಾವ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆಯೋ, ಯಾವ ದೇಶದಲ್ಲಿ ಮೈನಾರಿಟಿ ಜನರ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲವೋ, ಯಾವ ದೇಶದಲ್ಲಿ ಧರ್ಮದ ಹೊರೆಯನ್ನು ಬಲವಂತವಾಗಿ ಹೇರಲಾಗುತ್ತದೆಯೋ - ಅಂತಹ ದೇಶದ ಮೇಲೆ ನಮ್ಮ ದೇಶದಲ್ಲಿ ನಿಜವಾದ ಸ್ವಾತಂತ್ರ್ಯದ ಉಸಿರಿನ ಬೆಲೆ ಗೊತ್ತಿರದ ಯುವಕ-ಯುವತಿಯರ ಮಮಕಾರ ಹೆಚ್ಚಾಗಲು ಏನು ಕಾರಣ, ಅದರ ಮೂಲ ನೆಲೆಯೇನು ಎಂದು ಗಂಭೀರವಾಗಿ ಯೋಚನೆ ಮಾಡಬೇಕಾಗುತ್ತದೆ.

ಪಾಕಿಸ್ತಾನದ ಪರವಾಗಿ ಕೂಗಿದ ಜೆ.ಎನ್.ಯು. ವಿದ್ಯಾರ್ಥಿಗಳು ಎಲ್ಲರೂ ಮುಸಲ್ಮಾನರಲ್ಲ.  ಕಾಶ್ಮೀರದಿಂದ ಕೇರಳದವರೆಗೆ ಒಂದು ರೀತಿಯಲ್ಲಿ ಯುವಜನತೆಯ ಬ್ರೈನ್‌ವಾಶ್ ಮಾಡಲಾಗುತ್ತಿದೆ.   ಚೀನಾದಲ್ಲಿ ಹುಟ್ಟಿ ಅಲ್ಲಿ ಪ್ರಬಲವಾಗಿ ಬೆಳೆದ ಮಾವೋಯಿಸಂ ನಮ್ಮ ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತದೆ.  ಸರ್ಕಾರದ ವಿರುದ್ಧ, ಪ್ರಜಾಸತ್ತತೆಯ ವಿರುದ್ಧ ಧ್ವನಿ ಎತ್ತುವುದು ಎಂದರೆ ಪಕ್ಕದ ಪಾಕಿಸ್ತಾನವನ್ನು ಹೊಗಳುವುದು ಎಂದಾಗಿ ಹೋಗಿಬಿಟ್ಟಿದೆ. ನಮಗೆ  ಸ್ವಾತಂತ್ರ್ಯ ಸಿಕ್ಕ ಮೊದಲ ಐವತ್ತು ವರ್ಷಗಳಲ್ಲಿ ಈ ಸ್ಥಿತಿ ಇರಲಿಲ್ಲ... ನಾವೆಲ್ಲ ಕಂಡ ಎಂಭತ್ತರ, ತೊಂಭತ್ತರ ದಶಕದ ಭಾರತದಲ್ಲಿ, ನಮ್ಮ ಶಾಲಾದಿನಗಳಲ್ಲಿ ಒಂದು ದಿನವೂ ಯಾರೂ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಿಲ್ಲ... ನಾವೆಲ್ಲ  ಅನೇಕ ಜನವಿರೋಧಿ ನೀತಿಗಳ ವಿರುದ್ಧವೋ, ಕಾನೂನಿನ ಪರವಾಗಿಯೋ, ಅಥವಾ ರಾಜ್ಯ-ದೇಶ-ಭಾಷೆಗಳ ಪರವಾಗಿಯೋ ಸತ್ಯಾಗ್ರಹ, ಸಂಗ್ರಾಮಗಳನ್ನು ಮಾಡಿದ್ದೇವೆ.  ಆದರೆ, ಇಂದಿನ ಯುವಜನತೆಯ ದೇಶದ್ರೋಹದ ಹಾದಿಯನ್ನು ಎಂದೂ ಹಿಡಿದಿದ್ದಿಲ್ಲ.  ನಾವು ಶಾಲೆಗೆ ಹೋಗುತ್ತಿದ್ದಾಗ ಪ್ರತಿದಿನವೂ ರಾಷ್ಟ್ರಗೀತೆಯನ್ನು ಹೇಳುತ್ತಿದ್ದೆವು, ಧ್ವಜವಂದನೆಯನ್ನು ಮಾಡುತ್ತಿದ್ದೆವು.  ನಮ್ಮೆಲ್ಲರಿಗಿಂತ ದೇಶ ಯಾವತ್ತೂ ದೊಡ್ಡದಾಗಿತ್ತು.  ಆದರೆ ಇಂದಿನ ಯುವಜನತೆಯ ಮನಃಸ್ಥಿತಿಯನ್ನು ನೋಡಿದಾಗ ಅದೇ ಭಾವನೆ ಖಂಡಿತ ಒಡಮೂಡುವುದಿಲ್ಲ.
ನನ್ನ ದೇಶ ಉನ್ನತವಾದುದು.  ಜನರಿಗೆ ನಿಜವಾಗಿಯೂ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಬದುಕನ್ನು ಕಲ್ಪಿಸಿಕೊಟ್ಟಿದೆ.  ಹಾಡು ಹಗಲೇ ದರೋಡೆ, ಅತ್ಯಾಚಾರ, ಕೊಲೆ-ಸುಲಿಗೆ ಮಾಡಿದವರೂ ಸಂವಿಧಾನದ ವಿಧಿಯ ಪ್ರಕಾರ ಶಿಕ್ಷೆಗೆ ಗುರಿಪಡುತ್ತಾರೆ.  ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕುಗಳಿವೆ.  ಆದರೆ ಜನರು ತಮ್ಮ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಅವೇ ಹಕ್ಕುಗಳ ಮಗ್ಗುಲಲ್ಲಿರುವ ಕರ್ತವ್ಯಗಳನ್ನು ಮರೆಯುತ್ತಾರೆ.  ತಮ್ಮ ಮೈಕ್ರೋ ಫ್ಯಾಮಿಲಿಗಳ ಸಂತೋಷಕ್ಕಾಗಿ ದೊಡ್ಡ ದೇಶದ ಘನತೆ ಗೌರವವನ್ನು ಮರೆಯುತ್ತಾರೆ.  ರಾಷ್ಟ್ರ ಯಾವತ್ತೂ ಸೆಕೆಂಡರಿಯಾಗುತ್ತದೆ, ತಮ್ಮ ಸ್ವಾರ್ಥ ದೊಡ್ಡದಾಗುತ್ತಾ ಹೋಗುತ್ತದೆ.

ಎಪ್ಪತ್ತು ವರ್ಷಗಳ ನಂತರ ನಮ್ಮ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೇ ಇರುವಾಗ, ಈ ಎದೆಕರಗದ ದೇಶಭಕ್ತಿಯ ಜನ ಯಾವ ರೀತಿಯಲ್ಲಿ ದೇಶವನ್ನು ಮುಂದೆ ತಂದಾರು? ಇನ್ನು ನೂರಿನ್ನೂರು ವರ್ಷಗಳಲ್ಲಿ ನಮ್ಮ ದೇಶ ನಮ್ಮ ದೇಶವಾಗೇ ಇರುವುದೋ ಅಥವಾ ಮೊದಲಿನ ಹಾಗೆ ಹಂಚಿಕೊಂಡು ತುಂಡು ತುಂಡಾಗುವುದೋ ಎಂದು ಸಂಕಟವಾಗುತ್ತದೆ.


 




















ಭಾರತ ದೇಶವನ್ನು ಹಳಿಯುವವರು ತಮ್ಮ ದೇಶದ ಬಗ್ಗೆ ಒಂದಿಷ್ಟು ಕನಿಷ್ಠ ಮಾಹಿತಿಯನ್ನಾದರೂ ತಿಳಿದುಕೊಂಡು ತಮ್ಮ ವಾದವನ್ನು ಮಂಡಿಸಿದ್ದರೆ ಚೆನ್ನಾಗಿತ್ತು.  ಒಂದು ದೇಶದ ನಿಜವಾದ ಸ್ವಾತಂತ್ರ್ಯದ ಅರಿವಾಗುವುದು ಆ ಸ್ವಾತ್ಯಂತ್ರ್ಯ ಇಲ್ಲವಾದಾಗಲೇ!
(ಮಾಹಿತಿ ಕೃಪೆ: ವಿಕಿಪೀಡಿಯ)

Thursday, April 16, 2020

God is great!

ದಿನವಿಡೀ ಕಂಪ್ಯೂಟರ್ ಬಳಸುವ ನಮ್ಮಂತಹವರಿಗೆ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಆಗುವ ಬೆಳವಣಿಗೆಗಳು ಕೆಲವೊಮ್ಮೆ ತಲೆನೋವಾಗಿ ಪರಿಣಮಿಸುತ್ತವೆ.  ಸೆಕ್ಯೂರಿಟಿಯ ಹೆಸರಿನಲ್ಲಿ ಅಥವಾ ಹೊಸದಾಗಿ ಹುಟ್ಟಿರುವ ತಂತ್ರಜ್ಞಾನದ ಹೆಸರಿನಲ್ಲಿ ಆಗುವ ಒಂದಲ್ಲಾ ಒಂದು ಆವಿಷ್ಕಾರಗಳು ನಮ್ಮ ಲರ್ನಿಂಗ್ ಕರ್ವ್ ಅನ್ನು ಟೆಸ್ಟ್ ಮಾಡುತ್ತವೆ; ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ.  ಇಂತಹದರ ಉದಾಹರಣೆಗಳಲ್ಲಿ ನಮ್ಮ ಕಂಪನಿಯ ಕಂಪ್ಯೂಟರ್ ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಲವಂತವಾಗಿ ಬದಲಾಯಿಸುವ ಪಾಸ್ವರ್ಡ್ ನಿಯಮಗಳನ್ನು ಹೆಸರಿಸಲೇ ಬೇಕು.  ಮೊದಮೊದಲು ಸಹಜ ಎನ್ನುವಂತಿದ್ದ ಪಾಸ್ವರ್ಡ್ ಪಾಲಿಸಿಗಳು ಈಗ ತಲೆನೋವುಗಳಾಗುತ್ತಿವೆ (ಅಥವಾ ಈ ಒಂದು ಭಾವನೆ ನಮಲ್ಲರಿಗೂ ವಯಸ್ಸಾಗುತ್ತಿದೆ ಎಂಬುದರ ಸೂಚಕವೂ ಇರಬಹುದು!).

ಅಯ್ಯೋ ಪಾಸ್ವರ್ಡ್ ಅಂದರೆ ಅದೇನು ದೊಡ್ಡ ವಿಷಯ ಎಂದು ಮೂಗೆಳೆದುಬಿಟ್ಟೀರಾ - ಪ್ರತಿ ಐದು-ಹತ್ತು ನಿಮಿಷಗಳಿಗೊಮ್ಮೆ ಆಕ್ಟಿವಿಟಿ ಇಲ್ಲದಿದ್ದರೆ ತಮ್ಮಷ್ಟಕ್ಕೆ ತಾವೇ ಲಾಕ್ ಆಗುವ ಕಂಪ್ಯೂಟರುಗಳಿಗೆ ಪಾಸ್ವರ್ಡ್ ಪದೇಪದೇ ಹಾಕುತ್ತಲೇ ಇರಬೇಕು.  ಅಷ್ಟೇ ಅಲ್ಲ, ಒಮ್ಮೆ ಲಾಗಿನ್ ಆದ ಮೇಲೆ, ಮತ್ತೆ ನಾವು ಬಳಸುವ ಪ್ರತಿಯೊಂದು ಸಿಸ್ಟಮ್ಗೂ ಕೂಡ ಈ ಪಾಸ್ವರ್ಡ್ ಅನ್ನು ಹಾಕುತ್ತಲೇ ಇರಬೇಕು.  ಒಟ್ಟಿನಲ್ಲಿ, ದಿನಕ್ಕೆ ಏನಿಲ್ಲವೆಂದರೂ ಒಂದು ಇಪ್ಪತ್ತೈದು ಬಾರಿಯಾದರೂ ಬಳಸುವ ಈ ಪಾಸ್ವರ್ಡ್ ಬಹಳ ದುಬಾರಿಯಾದ ಕಮಾಡಿಟಿ ಎಂದರೆ ತಪ್ಪಿಲ್ಲ.  ಅಕಸ್ಮಾತ್, ಎಲ್ಲಾದರೂ ಮರೆತು ಬಿಟ್ಟರೆ, ಅಂತಹ ದೊಡ್ಡ ಉಪಟಳ ಇನ್ನೊಂದಿಲ್ಲ!  ಒಟ್ಟಿನಲ್ಲಿ, ನಾವು-ನಮ್ಮ ಕೆಲಸದ ನಡುವೆ ಅವಿನಾಭಾವ ಸಂಬಂಧವನ್ನು ಬೆರೆಸುವ ಈ ಪಾಸ್ವರ್ಡ್ ಗಳಿಗೆ ದೊಡ್ಡ ಸ್ಥಾನವನ್ನು ಕೊಡಲೇಬೇಕಾಗುತ್ತದೆ!

ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್ವರ್ಡ್ ಅನ್ನು ಕಡ್ಡಾಯವಾಗಿ ಬದಲಾಯಿಸುವುದು ಬಹಳ ವರ್ಷಗಳಿಂದ ನಡೆದುಬಂದಿದೆ, ಅದರಲ್ಲೇನೂ ವಿಶೇಷವಿಲ್ಲ.  ಆದರೆ ಮೊದಲೆಲ್ಲಾ, ಪಾಸ್ವರ್ಡ್ ಪಾಲಿಸಿಗಳು ನಮ್ಮ ಉಗ್ರಾಣದೊಳಗಿರುವ ನಾಲ್ಕೈದು ಪಾಸ್ವರ್ಡ್ಗಳನ್ನು ಒಂದಾದನಂತರ ಒಂದನ್ನಾಗಿ ಬಳಸಲು ಬಿಡುತ್ತಿದ್ದವು.  ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಪಾಸ್ವರ್ಡ್ನಂತೆ ವರ್ಷಕ್ಕೆ ನಾಲ್ಕು ಪಾಸ್ವರ್ಡ್ಗಳಿದ್ದರೆ ಆಯಿತು.  ಮತ್ತೆ ಅದನ್ನೇ ರೀಸೈಕಲ್ ಮಾಡಿದ್ದರೆ ರಗಳೆ ಇರುತ್ತಿರಲಿಲ್ಲ.  ಆದರೆ, ಇತ್ತೀಚೆಗೆ ಮತ್ತೊಂದು ಪಾಲಿಸಿಯನ್ನು ಸೇರಿಸಿಬಿಟ್ಟರು - ಒಮ್ಮೆ ಬಳಸಿದ ಪಾಸ್ವರ್ಡ್ ಅನ್ನು ಮತ್ತೆ ಹನ್ನೆರಡು ಸಲ ಪಾಸ್ವರ್ಡ್ ಬದಲಾಯಿಸುವವರೆಗೂ ಬಳಸುವಂತಿಲ್ಲ!  ಅಂದರೆ, ಇಂದು ಬಳಸುವ ಪಾಸ್ವರ್ಡ್ ಇನ್ನು ಮೂವತ್ತಾರು ತಿಂಗಳ ನಂತರವೇ ಬಳಸಲು ಸಾಧ್ಯ!  ಅಂದರೆ ಮೂರು ವರ್ಷಗಳ ನಂತರ... ಇದನ್ನು ನೋಡಿ God is great! ಎನ್ನುವ ಉದ್ಗಾರ ತನ್ನಷ್ಟಕ್ಕೆ ತಾನೇ ಹೊರಗೆ ಬಂತು.  ನಾನೇ ಹನ್ನೆರಡು ಬಾರಿ ಪಾಸ್ವರ್ಡ್ ಅನ್ನು ಒಂದೇ ದಿನದಲ್ಲಿ ಬದಲಾಯಿಸಿ ಮತ್ತೆ ಅದೇ ಪಾಸ್ವರ್ಡ್ ಅನ್ನು ಉಪಯೋಗಿಸಿದರೆ ಹೇಗೆ ಎನ್ನುವ ಯೋಚನೆ ತಕ್ಷಣಕ್ಕೆ ಬಂತಾದರೂ, ಅದು ಸೆಕ್ಯೂರಿಟಿಯ ಉದ್ದೇಶವನ್ನು ಡಿಫೀಟ್ ಮಾಡುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಲಿಲ್ಲ, ಅದರ   ಬದಲಿಗೆ ’God is great! ಎನ್ನುವ ಪಾಸ್ವರ್ಡ್ ಅನ್ನೇ ಬಳಸಿದರೆ ಹೇಗೆ ಎನ್ನುವ ನಿರ್ಧಾರಕ್ಕೆ ಬಂದೆ.  ಆದರೆ, ನಮ್ಮ ಪಾಸ್ವರ್ಡ್ನಲ್ಲಿ  upper case ಅಕ್ಷರಗಳಿರಬೇಕು, ಅಂಕಿಗಳಿರಬೇಕು ಎಂದೆಲ್ಲ ನಿಯಮಗಳಿವೆ.  ಅದನ್ನೆಲ್ಲ ಸೇರಿಸಿ, God is great! ಅನ್ನು ಬಳಸಿ ಒಂದು ಹೊಸ ಪಾಸ್ವರ್ಡ್ ಸೃಷ್ಟಿಸಿದೆ.  ಆದರೆ, ಈ ಪಾಪ್ಯುಲರ್ ಹೇಳಿಕೆಯಂಥ ಪಾಸ್ವರ್ಡ್ ಅನ್ನು ಪದೇಪದೇ ಟೈಪ್ ಮಾಡುವಾಗಲೂ ಒಂದಲ್ಲ ಒಂದು ಸಂವೇದನೆಗಳು ನನ್ನ ಮನಪಟಲದಲ್ಲಿ ಹಾದು ಹೋಗುತ್ತಿದ್ದವು.  God is great! ಅನ್ನುವುದನ್ನು ಅನೇಕ ಭಾವನೆಗಳಲ್ಲಿ ಈ ಮೂರು ತಿಂಗಳಲ್ಲಿ ಹೇಳಿಕೊಂಡಿದ್ದೇನೆ!

***
ಕನ್ನಡ ವ್ಯಾಕರಣ ತರಗತಿಯಲ್ಲಿ ನನಗೆ ಇಷ್ಟವಾಗುವ ವಿಷಯ ವಸ್ತುಗಳಲ್ಲಿ ವಿಭಕ್ತಿ-ಪ್ರತ್ಯಯಗಳೂ ಒಂದು.  ಪ್ರಥಮ-ಉ, ದ್ವಿತೀಯ-ಅನ್ನು, ತೃತೀಯ-ಇಂದ, ಚತುರ್ಥಿ-ಗೆ, ಇಗೆ, ಅಕ್ಕೆ, ಪಂಚಮಿ-ದೆಸೆಯಿಂದ, ಷಷ್ಟಿ-ನನ್ನ, ನಮ್ಮ, ಸಪ್ತಮಿ-ಲ್ಲಿ, ಒಳಗೆ, ಇತ್ಯಾದಿ...

ಇಂಗ್ಲೀಷ್ ನಲ್ಲಿ ಅನೇಕ ಪದಗಳಿವೆ ನಿಜ.  ಆದರೆ, ಈ ವಿಭಕ್ತಿ-ಪ್ರತ್ಯಯಗಳ ದೆಸೆಯಿಂದ ಭಾರತೀಯ ಭಾಷೆಗಳ ಪದಗಳು ಅನೇಕ ರೀತಿಯಲ್ಲಿ ಉಲ್ಭಣಗೊಳ್ಳುತ್ತವೆ, ಬದಲಾವಣೆಗೊಳಗಾಗುತ್ತವೆ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುತ್ತವೆ.

ಉದಾಹರಣೆಗೆ: "ಬಾಳೇ ಪ್ರೇಮಗೀತೆ", "ಬಾಳೂ ಬೆಳಕಾಯಿತು", "ಬಾಳಿನ ದಾರಿಯಲಿ", "ಬಾಳಿನಿಂದ ಬಾಳಿಗೆ", "ಬಾಳಿನ ದೆಸೆಯಿಂದ", "ಬಾಳನ್ನು ಬದುಕಿ", "ಬಾಳೇ ಹಾಳಾಯಿತು"... ಹೀಗೆ ’ಬಾಳು’ ಎನ್ನುವ ಪದ ಅನೇಕ ಬೆಳವಣಿಗೆಗಳನ್ನು ಪಡೆಯುತ್ತದೆ. ಇವೆಲ್ಲವನ್ನೂ ಇಂಗ್ಲೀಷಿಗೆ ಅಷ್ಟು ಸುಲಭವಾಗಿ ತರ್ಜುಮೆ ಮಾಡಲಾಗದು.

ಹೀಗೆ ಯೋಚಿಸುತ್ತಿರುವಾಗ, ನನ್ನ ಪಾಸ್ವರ್ಡ್ "God is great!" ಅನ್ನು ತೆಗೆದುಕೊಂಡು ಈ ಮೂರು ಪದಗಳಲ್ಲಿ ಎಷ್ಟೊಂದು ಕಾಂಬಿನೇಷನ್ ಮಾಡಬಹುದು ಎಂದು ಯೋಚಿಸಿದಾಗ ನನಗೆ ಈ ಕೆಳಗಿನ ವಾಕ್ಯಗಳು ಹೊಳೆದವು ಆಷ್ಟೇ!

God is great
Is God great
Great is God

God is great! ಅನ್ನು ಕನ್ನಡಕ್ಕೆ ತರ್ಜುಮೆ ಮಾಡಿದಾಗ "ದೇವರು ದೊಡ್ಡವನು" ಎಂದು ಯೋಚಿಸಿದೆ... ಈ ಎರಡೇ ಪದಗಳನ್ನು ಎಷ್ಟು ರೀತಿಯಲ್ಲಿ ಬದಲಾವಣೆ ಮಾಡಿ ಹೊಸ ಹೊಸ ಅರ್ಥಗಳನ್ನು ಹುಡುಕಬಹುದು ಎಂದು ಯೋಚಿಸಿದಾಗ ಈ ಕೆಳಗಿನ ಸಾಲುಗಳು ಹೊಳೆದವು:

ದೇವರು ದೊಡ್ಡವನು
ದೊಡ್ಡವನು ದೇವರು
ದೇವರೇ ದೊಡ್ಡವನು
ದೊಡ್ಡವನೇ ದೇವರು
ದೇವರು ದೊಡ್ಡವನೇ
ದೊಡ್ಡವನು ದೇವರೇ
ದೇವರೇ ದೊಡ್ಡವನೇ
ದೊಡ್ಡವನೇ ದೇವರೇ
ದೇವರೂ ದೊಡ್ಡವನು
ದೊಡ್ಡವನೂ ದೇವರು

ಈ ಮೇಲಿನವನ್ನು ಹೇಳುವಾಗಿನ ಇಂಟೋನೇಷನ್, ಅದಕ್ಕೆ ಸಂಬಂಧಿಸಿದ ಸಂದರ್ಭ ಹಾಗೂ ಅವುಗಳಿಗೆ ಜೋಡಿಸುವ ಭಾವನೆಗಳನ್ನು ಬಳಸಿ ಅನೇಕ ಕಾಂಬಿನೇಷನ್ನುಗಳನ್ನು ಮಾಡಬಹುದು.  ಇವುಗಳನ್ನು ಅಷ್ಟು ಸುಲಭವಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಲಾಗುವುದಿಲ್ಲ.  ಕೇವಲ ಎರಡೇ ಪದಗಳಲ್ಲಿ ಈ ಲಾಲಿತ್ಯವಿರುವ ನಮ್ಮ ಭಾಷೆಯನ್ನು ಒಂದು ದೇಶೀಯ (native) ಪರಿಸರದಲ್ಲಿ ಇದ್ದು ಕಲಿಯದಿದ್ದರೆ, ಅಷ್ಟು ಸಹಜವಾಗಿ ಮನಮುಟ್ಟುವುದಿಲ್ಲ.  ಉತ್ತರ ಅಮೇರಿಕದಲ್ಲಿ ನಾವು ಮಕ್ಕಳಿಗೆ ಕನ್ನಡ ಹೇಳಿಕೊಡುವಾಗ ಈ ಸೂಕ್ಷ್ಮಗಳನ್ನು ಹೇಳಿಕೊಡಲಾಗದು.  ಎಲ್ಲರೂ ವ್ಯಾಕರಣವನ್ನು ಕಲಿಯದಿದ್ದರೂ ದಿನನಿತ್ಯದ ನಮ್ಮ ಮಾತುಕತೆ, ಬರವಣಿಗೆಗಳಲ್ಲಿ ನಾವು ಅದೆಷ್ಟು ರೀತಿಯಲ್ಲಿ ಈ ವಿಭಕ್ತಿ-ಪ್ರತ್ಯಯಗಳನ್ನು ಬಳಸುತ್ತೇವೆ ಎಂದು ಯೋಚಿಸಿದಾಗ ಆಶ್ಚರ್ಯವೆನಿಸುತ್ತದೆ.
ನೋಡಿ, ಹೀಗೆ ಈ ಪಾಸ್ವರ್ಡ್ ಬದಲಾಯಿಸುವ ದೆಸೆಯಿಂದ ನಮ್ಮ ಕನ್ನಡ ಭಾಷೆಯ ಹಿರಿಮೆಯನ್ನು ಕೊಂಡಾಡುವಂತಾಯ್ತು!

Monday, April 13, 2020

ನೋಡುವ ಕಣ್ಣಿರಲು...

ನಿನ್ನೆ ಶುಭ್ರವಾದ ಮುಂಜಾನೆ ಹೊರಗೆ ತಿರುಗಾಡಿಕೊಂಡು ಬರುವಾಗ ಇನ್ನೇನು ಅದಾಗ್ಗೆ ನಿದ್ದೆಯಿಂದ ಕಣ್ಣೊರೆಸಿಕೊಂಡು ಎದ್ದೇಳುತ್ತಿದ್ದ ಸೂರ್ಯ.  ಸೂರ್ಯನ ಸ್ನೇಹಿತರಾದ ಪಕ್ಷಿ ಸಂಕುಲದ ಸದಸ್ಯರುಗಳು ಬಹಳ ಗಡಿಬಿಡಿಯಲ್ಲಿ ತಮ್ಮ ದಿನಗಳನ್ನು ಆರಂಭಿಸುತ್ತಿದ್ದಂತೆ ಕಂಡುಬಂತು.  ಅವುಗಳ ಚಿಲಿಪಿಲಿ ಧ್ವನಿಯೊಂದಿಗೆ ಪೈಪೋಟಿ ನೀಡುತ್ತೇವೆ ಎಂದು ನಂಬಿಕೊಂಡು ಆಗೊಮ್ಮೆ ಈಗೊಮ್ಮೆ ಬೊಗಳುವ ನಾಯಿಗಳ ಸದ್ದು ದೂರದಲ್ಲಿ ಕೇಳುತ್ತಿತ್ತು.  ಹಿಂದಿನ ದಿನದ ವಿಪರೀತ ಗಾಳಿ, ಸ್ವಲ್ಪ ಮಳೆ/ಆಲಿಕಲ್ಲುಗಳ ಆಘಾತದಲ್ಲಿಸ್ವಲ್ಪ ನೊಂದಂತೆ ಕಂಡ ಗಿಡಮರಗಳೂ ಸಹ ಮುಂಬರುವ ಬಿಸಿಲನ್ನು ಆಹ್ಲಾದಿಸಲು ಸ್ವಲ್ಪವೂ ಅಲುಗಾಡದೇ ಕಾಯುತ್ತಿದ್ದವು.  ವಿಶ್ವದಾದ್ಯಂತ ಕೊರೋನಾ ವೈರಸ್ ಸುದ್ದಿಗೆ ಗ್ರಾಸವಾಗಿ ಹೆದರಿದ್ದ ಚಂದ್ರ ದೂರದಲ್ಲಿ ಅವತರಿಸಿದ್ದರೂ, ಇಂದು ಮತ್ತೇನು ಗ್ರಹಚಾರ ಕಾದಿದೆಯೋ, ತನಗೆಲ್ಲಿ ಸೋಂಕು ತಗುಲೀತು ಎನ್ನುವ ಹುನ್ನಾರದಿಂದ ಮೋಡಗಳ ನಡುವೆಯೇ ಮುಖವನ್ನು ಹುದುಗಿಸಿಕೊಂಡು ಆಗಾಗ್ಗೆ ಚಲಿಸುವ ಮೋಡಗಳ ಕೃಪೆಯಲ್ಲಿ ತೂಗುಯ್ಯಾಲೆಯಲ್ಲಿ ಆಟವಾಡುತ್ತಿದ್ದ.




ಸುತ್ತಲಿನಲ್ಲಿ ಹಸಿರು ತುಂಬಿಕೊಂಡಿದ್ದರೂ ನಾವು ನಡೆಯುವ ರಸ್ತೆಯಲ್ಲಿ ಮಾಗಿದ ಎಲೆಗಳು ಹಿಂದಿನ ದಿನದ ಗಾಳಿ-ಮಳೆಯ ರಭಸದ ಭರಾಟೆಯನ್ನು ನೆನಪಿಸುವಂತೆ ತಮ್ಮನ್ನು ತಾವು ರಸ್ತೆಯ ಮುಖದ ಮೇಲೆ ಚಾಚಿಕೊಂಡಿದ್ದವು.  ಅಲ್ಲಿಲ್ಲಿ ಮುರಿದು ಬಿದ್ದ ಒಣಗಿದ ಎಲೆರಹಿತ ಮರದ ಟೊಂಗೆಗಳು ಅದ್ಯಾವುದೋ ಗಣಿತದ ಸಮೀಕರಣವನ್ನು ಧ್ಯಾನಿಸಿಕೊಳ್ಳುವಂತೆ ತಮ್ಮನ್ನು ತಾವು ಚದುರಿಸಿಕೊಂಡಿದ್ದು, ಹಲವಾರು ಕೋನಗಳಿಂದ ಅನೇಕ ಬಹುಭುಜಾಕೃತಿಗಳ ಸಾಧ್ಯತೆಯನ್ನು ಎತ್ತಿ ತೋರಿಸುತ್ತಿದ್ದವು.  ಈಗಾಗಲೇ ಹಲವಾರು ಬಾರಿ ಮಳೆಯಲ್ಲಿ ಮಿಂದು ತೋಯ್ದು ಹೋದ ನೆಲ ಯಾವುದೇ ಕಂಪನ್ನು ಬೀರುತ್ತಿರಲಿಲ್ಲ, ಅದರ ಬದಲಿಗೆ ಹಿಂದಿನ ದಿನ ಕತ್ತರಿಸಿದ ಹುಲ್ಲಿನ ಗರಿಕೆಗಳು ಬೀಸುವ ಗಾಳಿಗೆ ತಮ್ಮ ಹಲುಬನ್ನು ನಿಲ್ಲಿಸಿ, ಒಂದು ರೀತಿಯ ಗಾಢವಾದ ಪರಿಮಳವನ್ನು ಎಲ್ಲಕಡೆಗೆ ಹರಡಿದ್ದವು.  ರಸ್ತೆಯ ಬದಿಯಲ್ಲಿ ಗುಂಪು ಕಟ್ಟಿಕೊಂಡು, ಪುಡಿಪುಡಿ ಮಣ್ಣಿನಲ್ಲಿ ಮನೆಕಟ್ಟುವ ಇರುವೆಗಳ ಚಡಪಟಿಕೆ ಜೋರಾಗಿ ನಡೆದಿತ್ತು.  ತಮ್ಮ ಭವಿಷ್ಯದ ಸೌಧದ ಮೇಲೆ ತಣ್ಣೀರೆರೆಚಿದ ಮಳೆರಾಯನಿಗೆ ಆಗಾಗ್ಗೆ ಎದ್ದು ಎರಡು ಕಾಲಿನಲ್ಲಿ ನಿಂತು ಶಾಪಹಾಕುತ್ತಿರುವವರಂತೆ ಕಂಡುಬಂದವು.  ಏನೇ ಆದರೂ ಛಲವನ್ನು ಬಿಡಬಾರದು ಎಂದು ತಮ್ಮ ಸೈನಿಕರುಗಳಿಗೆ ಮಳೆಯಿಲ್ಲದ ಶುಭ್ರ ಮುಗಿಲಿನಡಿಯಲ್ಲಿ ಕವಾಯತು ಮಾಡಿಸಲು ಹಿರಿಯ ಇರುವೆಗಳು ತಾಕೀತು ಮಾಡುತ್ತಿರುವಂತೆನಿಸಿತು.

"ನೋಡೋದಕ್ಕೆ ಎಷ್ಟೆಲ್ಲಾ ಇದೆ!" ಎಂಬ ಉದ್ಗಾರ ಹೊರಬರಲು ಯಾವ ಸದ್ದಿನ ಸಹಕಾರವೂ ಬೇಕಾಗಿರಲ್ಲ.  ಇದೇ ಸೃಷ್ಟಿಯಲ್ಲಿ ಎಲ್ಲವೂ ಇವೆ...ನೋಡುವ ಕಣ್ಣಿರಲು...ಬ್ರಹ್ಮಾಂಡವೇ ಒಂದು ಚಿತ್ರಪಟವಾಗುತ್ತದೆ.  ಆದರೆ ಚಿತ್ರಕಾರನೊಬ್ಬನನ್ನು ಬಿಟ್ಟು ಮತ್ತೆಲ್ಲವನ್ನೂ ಇಲ್ಲಿ ಕಾಣಲು ಸಾಧ್ಯ? ಅಥವಾ ಚಿತ್ರಕಾರನೇ ಚಿತ್ರದ ಒಂದು ಅಂಗವಾಗಿಬಿಡುತ್ತಾನೆಯೋ? ಇಲ್ಲಿನ ವಿಸ್ಮಯದ ಲೋಕ ಮೇಲ್ನೋಟಕ್ಕೆ ಸರಳ, ಗೊಂದಲ ರಹಿತವಾಗಿ ಕಂಡುಬಂದರೂ ಒಳಗೊಳಗೆ ಎಂತೆಂಥ ಸತ್ಯಗಳನ್ನು ಬಚ್ಚಿಟ್ಟುಕೊಂಡ ಪ್ರಸಂಗಗಳಿವೆ.  ಚಿಂತೆ-ಚಿಂತನೆಗಳಲ್ಲಿ ತೊಡಗಿಕೊಂಡ ಮನಗಳಿಗೆ ಮೇಲ್ನೋಟಕ್ಕೆ ಬಿಡುಬೀಸಾಗಿ ಎಲ್ಲವೂ ತೆರೆದುಕೊಂಡಂತೆ ಕಂಡರೂ, ಸುತ್ತಲಿನ ಜೀವ-ನಿರ್ಜೀವ ವಸ್ತುಗಳಲ್ಲಿ ವಿಷಯಗಳು ಅಡಗಿಕೊಂಡಿವೆ.  ಅದಕ್ಕಾಗಿಯೇ ಇಂಥವುಗಳನ್ನು "ವಸ್ತು-ವಿಷಯ" ಎನ್ನೋದಿರಬೇಕು!  ವಸ್ತುನಿಷ್ಠತೆ, ವಾಸ್ತವವನ್ನು ಆಧರಿಸಿರುವಂತೆ ಅದೇ ನಿಜ ಹಾಗೂ ಅದೇ ನಿಜವಾದ ನೆರೆಹೊರೆಯಾಗಬಲ್ಲದು.

ಈ ನೆರೆಹೊರೆಯ ಮೋಡಿಯಲ್ಲಿ ಮಿಂದ ಮನಸ್ಸು ಒಂದು ಕ್ಷಣ ಯಾವುದು ನಿಜ, ಯಾವುದು ಅದ್ಭುತ, ಯಾವುದು ಗೋಪ್ಯ, ಯಾವುದು ನಿಗೂಢವಾದದ್ದು ಎನ್ನುವುದನ್ನೆಲ್ಲ ಲೆಕ್ಕ ಹಾಕತೊಡಗಿತು.  ಇವೆಲ್ಲಕ್ಕಿಂತ ಮೇಲಾಗಿ ಇಂಥ ನಿಗೂಢತೆಯನ್ನು ತನ್ನ ಮಡಿಲಿನಲ್ಲಿ ಹುದುಗಿಕೊಂಡು ಅದ್ಯಾವ ಗಣಿತದ ಸಮೀಕರಣಗಳನ್ನು ಹೆಣೆದು ಈ ವ್ಯವಸ್ಥೆಯನ್ನು ಅದ್ಯಾರು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದಾರೋ ಎಂದು ಸೋಜಿಗವಾಯಿತು!

Thursday, April 09, 2020

ಯಾಕಿಷ್ಟು ಬೇಸರ ಈ ನಿಸರ್ಗಕ್ಕೆ?!

ಛೇ! ಈ ಮಾನವ ಜಾತಿಯೇ ಹೀಗೆ.  ಎಂದೂ ಸಮಾಧಾನ ಚಿತ್ತದ ಪ್ರಾಣಿಯಂತೂ ಅಲ್ಲವೇ ಅಲ್ಲ.   ಬಿಸಿಲಿದ್ದರೆ ಬಿಸಿಲೆಂಬರು, ಛಳಿಯಾದರೆ ಛಳಿಯೆಂಬರು.  ಏನಿಲ್ಲದಿದ್ದರೂ ಶೀತ, ಉಷ್ಣ, ವಾತ, ಪಿತ್ತವೆಂದಾದರೂ ನರಳುತ್ತಲೇ ಇರುವವರು.  ಅತ್ಯಂತ ದುರ್ಬಲವಾಗಿ ಜನಿಸಿ ತನ್ನ ಕೈ-ಕಾಲು ಬಲಿಯುವವರೆಗೂ ಇನ್ನೊಬ್ಬರ ಆಶ್ರಯವಿಲ್ಲದಿದ್ದರೆ ಸತ್ತೇ ಹೋಗುವ ಪ್ರಾಣಿ, ಮುಂದೆ ಇಡೀ ಜಗತ್ತನ್ನೇ ಆಳುವ ದುಸ್ಸಾಹಸವನ್ನು ಮೆರೆದು, ಪ್ರಬಲವಾಗಿ ಹೋರಾಡಿ-ಹಾರಾಡಿ ಮತ್ತೆ ಮಣ್ಣು ಸೇರುವ ಜೀವಿ!  ಮತ್ಯಾವ ಜೀವಿಯೂ ತೋರದ ಕೃತ್ರಿಮತೆ, ಕೃತಕತೆ, ಕೌತುಕ, ಕೋಲಾಹಲ, ಕಪಟತನವನ್ನೆಲ್ಲ ಮೆರೆದು, ತನ್ನ ಇರುವಿಗೇ ಕಳಂಕ ಬರುವಂತೆ ತಾನು ತುಳಿವ ಮಣ್ಣನ್ನೇ ಗೌರವಿಸದ ಸ್ವಾರ್ಥಿ.

***
ನನ್ನ ಮೇಲ್ಮೈಯಲ್ಲಿರುವ ಸಮುದ್ರವನ್ನೆಲ್ಲ ಶೋಧಿಸಿ ತೆಗೆದರು.  ನನ್ನನ್ನು ಆಶ್ರಯಿಸಿದ ಜಲಚರಗಳಿಗೆ ಅನೇಕ ಸಂಕಷ್ಟಗಳನ್ನು ತಂದರು.  ಅನೇಕ ಗುಡ್ಡ-ಬೆಟ್ಟಗಳನ್ನು ಕಡಿದು ನೆಲಸಮ ಮಾಡಿದರು.  ನನ್ನ ಮೈ ಮೇಲೆ ಕಂಗೊಳಿಸುತ್ತಿದ್ದ ವನರಾಶಿಯನ್ನು ಅಳಿಸಿ ಹಾಕಿದರು.  ಅರಣ್ಯವನ್ನು ನಂಬಿಕೊಂಡಿದ್ದ ಜೀವಿಗಳನ್ನು ಸರ್ವನಾಶ ಮಾಡಿದರು.  ಭೂಮಿ, ಸಮುದ್ರ-ಸಾಗರಗಳಲ್ಲಿ ಮಾಡಿದ್ದು ಸಾಲದು ಎಂಬಂತೆ ನಭದಲ್ಲೂ ಅನೇಕ ರೀತಿಯ ಕಾರ್ಖಾನೆಗಳ ಹೊಗೆಯಿಂದ ಉಸಿರುಗಟ್ಟಿಸುವಂತೆ ಮಾಡಿದರು.  ನೆಲದಾಳದಲ್ಲೂ ಇವರ ಶೋಧ ನಿಲ್ಲದೇ, ಅಲ್ಲಿಂದಲೂ ಇಂಧನವನ್ನು ಬಗೆದು ತೆಗೆದರು. ಇವರುಗಳ ಹೊಟ್ಟೆ ತುಂಬುವುದಕ್ಕೆ ಅನೇಕ ಜೀವಿಗಳನ್ನು ತಿಂದು ತೇಗುವುದೂ ಅಲ್ಲದೇ ನಿರ್ನಾಮವನ್ನೂ ಮಾಡಿದರು.  ಕೆಲವು ಜೀವಿಗಳ ಅವಶೇಷವನ್ನು ಹೇಳಹೆಸರಿಲ್ಲದೆ ಹೊಸಕಿ ಹಾಕಿದರು.  ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲ ಕಡೆಯೂ ಇವರ ಸಂತತಿ ಬೆಳೆಯಿತು.  ಎಲ್ಲಿ ಇವರ ಸಂತತಿ ಬೆಳೆಯತೊಡಗಿತೋ, ಅಲ್ಲಿ ಮತ್ಯಾವ ಜೀವಿಗೂ ನೆಲೆಯಿಲ್ಲದಂತಾಯಿತು - ಇವರುಗಳು ಓಡಾಡುವ ದಾರಿಯಲ್ಲಿ ಗರಿಕೆ ಹುಲ್ಲೂ ಬೆಳೆಯದಂತಾಯಿತು!

***
ನನ್ನನ್ನು ನಾನು ಸರಿ ತೂಗಿಸಿಕೊಳ್ಳಬಲ್ಲೆ.  ಇವರ ಆಟ ಹೀಗೇ ಮುಂದುವರೆದರೆ, ಒಂದು ದಿನ ಇವರನ್ನೂ ಇಲ್ಲವಾಗಿಸುವ ಶಕ್ತಿ ನನಗಿದೆ.  ಸಹಬಾಳ್ವೆಯ ಮೂಲ ಮಂತ್ರವನ್ನು ಅರಿತು, ಈ ಹುಲು ಮಾನವರು ಇನ್ನಾದರೂ ಹೊಂದಿಕೊಂಡಾರು.  ಇಲ್ಲವೆಂದರೆ, ಇವರೇ ಮಾಡಿದ ಅಡುಗೆಯನ್ನು ಇವರೇ ಒಂದು ದಿನ ಉಣ್ಣುತ್ತಾರೆ, ಇವರ ಕರ್ಮಗಳಿಗೆ ಸರಿಯಾದ ಬೆಲೆಯನ್ನೇ ತೆತ್ತುತ್ತಾರೆ.

Source: https://www.theworldcounts.com/





Monday, April 06, 2020

ಮೋಡ ಕರಗುವ ಸಮಯ

ಸೋಶಿಯಲ್ ಅಥವಾ ಫಿಸಿಕಲ್ ಡಿಸ್ಟನ್ಸಿಂಗ್?

ಈ ಕರೋನಾ ವೈರಸ್ ಹಾವಳಿಯಿಂದಾಗಿ ಇತ್ತೀಚೆಗೆ ಇನ್ನೊಂದು phrase ನಮ್ಮನ್ನೆಲ್ಲ ಆಳುತ್ತಿದೆ: ಸೋಶಿಯಲ್ ಡಿಸ್ಟನ್ಸಿಂಗ್ (social distancing).  ನಾವೆಲ್ಲರೂ ಈ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಒಬ್ಬರಿಂದ ಮತ್ತೊಬ್ಬರ ಕಾಂಟ್ಯಾಕ್ಟ್ ಅನ್ನು ಕಡಿಮೆ ಮಾಡುವುದು, ಗ್ರೂಪ್/ಗ್ಯಾದರಿಂಗ್‌ಗಳಿಂದ ಸಂಪೂರ್ಣವಾಗಿ ದೂರವಿರುವುದು ಎಂದರ್ಥ.
ಒಂದು ಕುಟುಂಬದ ಸದಸ್ಯರಲ್ಲಿ ಯಾರಿಗೂ ಖಾಯಿಲೆ ಅಥವಾ ರೋಗದ ಲಕ್ಷಣಗಳು ಇಲ್ಲದಿದ್ದರೆ, ಅವರೆಲ್ಲರೂ ಒಟ್ಟಿಗೆ ಇರಬಹುದು.  ಆದರೆ, ಅದೇ ಕುಟುಂಬದಲ್ಲಿ ಯಾರೊಬ್ಬರಿಗಾದರೂ ಸೋಂಕು ತಗಲಿದರೆ ಅವರನ್ನು ಕೂಡ ಪ್ರತ್ಯೇಕಿಸಿ ಇಡಬೇಕಾಗುತ್ತದೆ.

ಇದು ನಮ್ಮೆಲ್ಲರ ಸೋಶಿಯಲ್ ಡಿಸ್ಟನ್ಸಿಂಗ್ ಅಥವಾ ಇದು ಭೌತಿಕವಾದ ಡಿಸ್ಟನ್ಸಿಂಗ್? ಇದಕ್ಕೇಕೆ ಫಿಸಿಕಲ್ ಡಿಸ್ಟನ್ಸಿಂಗ್ ಅನ್ನೋದಿಲ್ಲ ಎಂದು ಕೆಲವರು ಯೋಚಿಸಬಹುದು.  Social distancing, ಎಂದು ಹೇಳುವಾಗ ಅಲ್ಲಿ ಜನರು ಒಬ್ಬರಿಂದ ಮತ್ತೊಬ್ಬರಿಗೆ ಇಂತಿಷ್ಟು ದೂರದಲ್ಲಿ ಇರಿ ಎಂದು ಹೇಳುತ್ತಿದ್ದಾರೆ, ಗುಂಪುಗಳಲ್ಲಿ ಸೇರಬೇಡಿ ಎಂದು ಹೇಳುತ್ತಿದ್ದಾರ‍ೆ - ಇಲ್ಲಿ ಅವರು Social ಎಂದು ಬಳಸುತ್ತಿರುವುದು ’ಸಾಮಾಜಿಕ’ ಎನ್ನುವ ಪದದ ಸಮನಾರ್ಥಕ.  ಆದರೆ, ಒಬ್ಬರಿಂದ ಮತ್ತೊಬ್ಬರು ದೂರವಿದ್ದ ಮೇಲೆ, ಅಲ್ಲಿ ಭೌತಿಕವಾಗಿ (physically) ಯಾವುದೇ ಕಾಂಟ್ಯಾಕ್ಟ್ ಬರುವುದೇ ಇಲ್ಲವಾದ್ದರಿಂದ, ಈ ಕೊರೋನಾ ವೈರಸ್ ಸಂಬಂಧವಾಗಿ ಎಲ್ಲರೂ Social Distancing ಎಂತಲೇ ಹೇಳುತ್ತಿರುವುದು.

ಜೊತೆಗೆ, ಇಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಅನ್ನು ಒಂದು ಸಮುದಾಯದ ಪರವಾಗಿ ಹೇಳುವಂತೆಯೂ ಪರಿಗಣಿಸಬಹುದು.  ಜನರು ಗುಂಪುಗಳಲ್ಲಿ ಭಾಗವಹಿಸುತ್ತಿರುವಾಗ ಒಬ್ಬರನ್ನು ಪರಸ್ಪರ ಮುಟ್ಟದೇ ಇದ್ದರೂ ಸಹ, ಅವರೆಲ್ಲರೂ ಒಂದು ಕೋಣೆಯಲ್ಲಿ ಸೇರಿಕೊಂಡರೆಂದರೆ, ಅಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯವಿದೆ.  ಈ ಕಾರಣದಿಂದಲೇ, ಹತ್ತಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಬಾರದು ಎಂದು ಹೇಳುತ್ತಿರುವುದು.

***
ರಾಜ್ಯಗಳ ಬಾರ್ಡರುಗಳು

ಉತ್ತರ ಅಮೇರಿಕದ ಹೆಗ್ಗಳಿಕೆಯಾಗಿ ನಾವೆಲ್ಲ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ "ಫ್ರೀ" ಆಗಿ ಓಡಾಡಿಕೊಂಡಿದ್ದೆವು.  ಈ ಕೋವಿಡ್ ದಯೆಯಿಂದ,  ಜನರ ಸ್ವಾತಂರ್ತ್ಯಕ್ಕೆ ಮೊಟ್ಟ ಮೊದಲ ಸಲ ಉತ್ತರ ಅಮೇರಿಕದಲ್ಲಿ ಸಂಕಷ್ಟ ಬಂದಿದೆ.  ಈಗ ಅಮೇರಿಕದ ಸಣ್ಣ ರಾಜ್ಯಗಳಲ್ಲೊಂದಾದ ರೋಡ್ ಐಲ್ಯಾಂಡ್, ತನ್ನ ರಾಜ್ಯಕ್ಕೆ ಬರುವ ಹೊರ ರಾಜ್ಯದ ಪ್ರಯಾಣಿಕರನ್ನು (ಅದರಲ್ಲೂ ನ್ಯೂ ಯಾರ್ಕ್‌ನವರನ್ನು) ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸುತ್ತಿದೆ.  ಇದೇ ಮಾದರಿ ಉಳಿದ ರಾಜ್ಯಗಳಲ್ಲೂ ನಡೆಯುತ್ತಿದೆ, ಎಂದು ಕೇಳಿಬರುತ್ತಿದೆ.

ನಮ್ಮ ಕರ್ನಾಟಕದಿಂದ ತಮಿಳು ನಾಡು, ಕೇರಳ, ಮಹಾರಾಷ್ಟ್ರ‍, ಆಂಧ್ರಪದೇಶ ರಾಜ್ಯಗಳಿಗೆ ಹೋಗಿ ಬಂದವರಿಗೆ ಗೊತ್ತಾಗುತ್ತದೆ.  ಒಂದು ಗಡಿ ದಾಟಿ ಬಂದ ಮೇಲೆ ಅದೆಷ್ಟು ಬದಲಾವಣೆಗಳು ಕಾಣಸಿಗುತ್ತವೆ ಎಂದು.  ಆದರೆ, ಇಂದು ಮೊಟ್ಟ ಮೊದಲ ಬಾರಿ ಅಮೇರಿಕದಲ್ಲಿ ಗಡಿಯನ್ನು ಮುಚ್ಚುವುದರ ಮೂಲಕ ಅಲ್ಲದೇ ರಾಜ್ಯಗಳ ಗಡಿಗಳಲ್ಲಿ ಪೋಲೀಸರು ಕಾಯುತ್ತಿರುವುದರ ಮೂಲಕ free ಯಾಗಿದ್ದ ದೇಶ ಮೊಟ್ಟ ಮೊದಲ ಬಾರಿಗೆ ಕೋವಿಡ್ ವೈರಸ್ಸಿನ ಸಂಕೋಲೆಗಳಲ್ಲಿ ಸುತ್ತಿಕೊಂಡು ಬಳಲುತ್ತಿದೆ ಎನ್ನುವಂತಾಗಿದೆ.

***
ಮೋಡ ಕರಗುವ ಸಮಯ

ಇಂದು ಮಧ್ಯಾಹ್ನ ಒಳ್ಳೆಯ ಬಿಸಿಲಿನ ಸಮಯ ನಮ್ಮ ಮನೆಯ ಹೊರಗಡೆಯ ಥರ್ಮಾಮೀಟರಿನಲ್ಲಿ 66 ಡಿಗ್ರಿ (ಸುಮಾರು 17 ಡಿಗ್ರಿ ಸೆಲ್ಸಿಯಸ್) ತೋರಿಸುತ್ತಿತ್ತು.  ನಮ್ಮ ಮನೆಯ ಹಿಂದಿನ ಡೆಕ್‌ನಲ್ಲಿ ಒಳ್ಳೆಯ ಗಾಳಿ ಬೀಸುತ್ತಿತ್ತು.  ಮೇಲೆ ಶುಭ್ರವಾದ ಆಕಾಶ.  ಯಾರು ಹೊರಗೆ ಬರಲಿ ಬಿಡಲಿ, ಸೂರ್ಯದೇವ ತನ್ನ ದೈನಂದಿನ ಕಾರ‍್ಯಾಚರಣೆಯನ್ನು ಮುಂದುವರೆಸಿ ಮೇಲೇರಿ ಕೆಳಗಿಳಿಯುತ್ತಿದ್ದ.  ಪಶ್ಚಿಮದ ಕಡೆ ಒಂದಿಷ್ಟು ಬಿಳಿಯ ಮೋಡಗಳು ಹಿಂಡು ಹಿಂಡಾಗಿ ತುಂಬಿಕೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಉಳಿದ ಕಡೆಯೆಲ್ಲ ಶುಭ್ರವಾದ ನೀಲಾಕಾಶವಿತ್ತು.
ಇಷ್ಟು ದಿನ ಹೊರಗೆ ಬರದೆ ಇದ್ದುದರಿಂದಲೋ ಏನೋ, ನನಗೆ ಈ ತಿಳಿ ಬಿಸಿಲು ಬಹಳ ಅಪ್ಯಾಯಮಾನವಾಗಿ ಗೋಚರಿಸಿತು.  ಜೊತೆಗೆ ಹದವಾಗಿ ಕಾದ ಡೆಕ್ಕಿನ ಮರದ ಹಲಗೆಗಳು ಬರಿಗಾಲಿಗೂ ಮುದವನ್ನು ನೀಡುತ್ತಿದ್ದವು.  ಆ ಸಮಯಕ್ಕೆ ಖಾಲಿ ಇದ್ದ ಡೆಕ್ ಮೇಲೆ ಮಲಗಿದರೆ ಹೇಗೆ ಎನ್ನಿಸಿದ್ದೇ ತಡ, ತಡ ಮಾಡದೆ ಅಲ್ಲೇ ಒಂದು ಕಡೆ ಮೇಲ್ಮುಖವಾಗಿ ಮಲಗಿಕೊಂಡು, ಸೂರ್ಯ ತಮ್ಮನ್ನೇನು ತಿಂದು ಬಿಡುತ್ತಾನೇನೋ ಎಂದು ಸ್ವಲ್ಪ ಹೆದರಿದಂತೆ ನಿಧಾನವಾಗಿ ಚದುರುತ್ತಿದ್ದ ಮೋಡಗಳ ಕಡೆಗೆ ಗಮನಕೊಟ್ಟೆ.

ಒಂದಿಷ್ಟು ಮೋಡಗಳು ಒಟ್ಟಿಗಿದ್ದವು, ಸ್ವಲ್ಪ ಹೊತ್ತು ಬಿಟ್ಟು ನೋಡುವುದರಲ್ಲಿ, ಅವುಗಳ ಯಾವುದೋ ಒಂದು ತುಣುಕು ಗುಂಪಿನಿಂದ ಮತ್ತೊಂದು ಕಡೆ ಚಲಿಸಿತು. ಸ್ವಲ್ಪ ಹೊತ್ತಿನಲ್ಲಿ ಅದು ಇದ್ದಲ್ಲಿಯೇ ಕರಗಿ ಮಾಯವಾಯಿತು!  ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಹಾಗೆಯೇ, ಮೋಡದ ತುಣುಕೊಂದು ಗುಂಪಿನಿಂದ ಬೇರ್ಪಡುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅದು ನಿಧಾನವಾಗಿ ಕರಗಿ ಗಾಳಿಯೊಳಗೆ ಲೀನವಾಗುತ್ತದೆ - ಒಂದು ರೀತಿಯಲ್ಲಿ ಕಾಟನ್‌ಕ್ಯಾಂಡಿ ತಿನ್ನುವ ಹುಡುಗನ ಮಿಠಾಯಿ ಕಡಿಮೆಯಾಗುವಂತೆ.  ಅವೆಲ್ಲ ಮೋಡವೇ ಸರಿ, ಆದರೆ ಆ ಮೋಡದ ತುಣುಕುಗಳು ನನ್ನ ಕಣ್ಣೆದುರೇ ಕರಗಿ ಗಾಳಿಯಲ್ಲಿ ಲೀನವಾಗುವ ಪರಿಯನ್ನು ಇಷ್ಟು ಕ್ಲಿಯರ್ ಆಗಿ ನಾನು ನೋಡಿದ್ದಿಲ್ಲ... ಐದು ನಿಮಿಷದೊಳಗೆ, ಬೀಸುವ ಗಾಳಿ ಜೋರಾಗ ತೊಡಗಿತೆಂದು ಮತ್ತೆ ಮನೆ ಒಳಗೆ ಬಂದೆ, ಆದರೆ ಮೋಡದ ಗುಂಪು ನಿಧಾನವಾಗಿ ಚದುರುತ್ತಲೇ ಇತ್ತು.  ಅದೇ ಸಮಯದಲ್ಲಿ, ಎಲ್ಲಿಯೋ ಹುಟ್ಟಿ ಎಲ್ಲೋ ಸೇರುವ, ಮೋಡಕ್ಕಾಗಲೀ, ಮುಗಿಲಿಗಾಗಲೀ ಯಾವ ಬಣ್ಣವೂ ಇಲ್ಲ, ಅವೆಲ್ಲವೂ ತನ್ನ ಸುತ್ತಲಿನ ಸೂರ್ಯನ ಕೃಪೆಯಿಂದ ಬಣ್ಣವನ್ನು ಪಡೆದವುಗಳು ಎಂಬ ಸೂಕ್ಷ್ಮ ಹೊಳೆದು, ಅದು ಈ ಹೊತ್ತಿನ ತತ್ವವಾಯಿತು!

Friday, April 03, 2020

... ಸ್ಕ್ರೀನುಗಳೇ ಗೆದ್ದವು!

ಕೊರೋನಾ ವೈರಸ್ ದೆಸೆಯಿಂದ ಕೊನೆಗೆ ಗೆದ್ದವು - ಈ ಸ್ಕ್ರೀನುಗಳು!  ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೆ ಈ ಸ್ಕ್ರೀನುಗಳದ್ದೇ ದರ್ಬಾರು, ಅವುಗಳ ಸುತ್ತಮುತ್ತಲೂ ನಮ್ಮದೆಲ್ಲ ಒಂದು ರೀತಿ ಡೊಂಬರಾಟ ಇದ್ದ ಹಾಗೆ!

ವಿಪರ್ಯಾಸವೆಂದರೆ, ನಾನು ಇತ್ತೀಚೆಗಷ್ಟೇ Tiffany Shlain ಬರೆದ 24/6 The Power of Unplugging One Day A Week ಪುಸ್ತಕ ಓದಿದ ನಂತರ ಹೀಗಾಗಿದ್ದು.  ಎಷ್ಟೆಲ್ಲ ತಂತ್ರಜ್ಞಾನ ಮುಂದುವರೆದಿದ್ದರೂ ಸಹ, ಅರ್ಥೋಡಾಕ್ಸ್ ಯಹೂದಿಗಳು ಇಂದಿಗೂ ಕೂಡ ಸೆಬಾತ್ (Shabbat) ಆಚರಿಸಿಕೊಂಡು ಬಂದಿದ್ದಾರ‍ೆ.  ಅವರುಗಳು ವೃತ್ತಿಯಿಂದ ವೈದ್ಯರಿರಲಿ, ಇಂಜಿನಿಯರುಗಳಿರಲಿ, ಅಥವಾ ಯಾರೇ ಇರಲಿ ವಾರಕ್ಕೊಂದು ದಿನ, ಯಂತ್ರಗಳ ಸಹವಾಸವಿಲ್ಲದೆ ಬದುಕುತ್ತಾರೆ.  ಈ ಪುಸ್ತಕದಲ್ಲಿ ಲೇಖಕಿ ತನ್ನ ಕುಟುಂಬ ಮೌಲ್ಯಗಳನ್ನು ಎತ್ತಿ ಹಿಡಿದು ಅವುಗಳನ್ನು ತಂತ್ರಜ್ಞಾನಕ್ಕೂ ವಿಸ್ತರಿಸಿ Techonology Shabbat ಅನ್ನು ಪರಿಚಯಿಸುತ್ತಾರೆ.  ನಾನು ಈ ಪುಸ್ತಕವನ್ನು ಓದಿ, ಕಷ್ಟಸಾಧ್ಯ ಎಂದು ಪಕ್ಕದಲ್ಲಿಟ್ಟೆ, ಆದರೂ ಸಹ ವಾರಕ್ಕೊಂದು ದಿನ ಟೆಕ್ನಾಲಜಿ ಅಥವಾ ಯಾವುದೇ ಸ್ಕ್ರೀನುಗಳ ಪರಾಧೀನತೆ ಇಲ್ಲದೇ ಬದುಕುವಂತಿದ್ದರೆ ಎಂದು ಅನ್ನಿಸದೇ ಇರಲಿಲ್ಲ.

***
ಎಲ್ಲ ಕಡೆ ಕೊರೋನಾ ವೈರಸ್ಸು ಹಾವಳಿಯಿಂದ ನಮ್ಮ ಆಫೀಸಿನ ಕೆಲಸವಷ್ಟೇ ಅಲ್ಲ, ದೈನಂದಿನ ಸಂಭಾಷಣೆ, ವಿಚಾರ-ವಿನಿಮಯ, ಮನರಂಜನೆ, ಮಾಹಿತಿ, ಸುದ್ದಿ-ಸಮಾಚಾರ ಮೊದಲಾದ ಎಲ್ಲವೂ ನಮಗೆ ಈ ಸ್ಕ್ರೀನುಗಳಿಂದಾನೇ ದೊರೆಯೋದು.  ನಾವು ಹೊಸದಾಗಿ iPhoneನಲ್ಲಿ ಬಂದಿರೋ Screen Time ಉಪಯೋಗಿಸಿ ದಿನದಲ್ಲಿ/ವಾರದಲ್ಲಿ ಬಳಸಿದ ಎಲ್ಲ ಅಪ್ಲಿಕೇಶನ್ನುಗಳನ್ನೂ ನೋಡುತ್ತಿದ್ದೆವು.  ಆದರೆ, ಈಗೆಲ್ಲ ನಮ್ಮ ಸ್ಕ್ರೀನುಗಳ ಉಪಯೋಗ ದಿನೇದಿನೇ ಹೆಚ್ಚಾಗುತ್ತಿದೆ.  ಅದರಲ್ಲೂ ಹೊರಗಡೆ ಹೋಗದೆ ಮನೆಯಲ್ಲಿ ಕುಳಿತಿರುವ ನಮಗೆಲ್ಲ ಈ ಚಿಕ್ಕ-ದೊಡ್ಡ ಸ್ಕ್ರೀನುಗಳೇ ದೊಡ್ಡ ಸವಲತ್ತುಗಳಾಗಿವೆ.  ಅಕಸ್ಮಾತ್ ನಮ್ಮಿಂದ ಊಟವನ್ನಾದರೂ ದೂರವಿಡಬಹುದು, ಆದರೆ ಸ್ಕ್ರೀನುಗಳನ್ನಲ್ಲ ಎಂದು ರಚ್ಚೆ ಹಿಡಿದು ಒದ್ದಾಡುವ ಮಗುವಿನಂತಾಗಿದೆ ಮನಸ್ಥಿತಿ.

ಇತ್ತೀಚೆಗೆ ಎಲ್ಲೋ ಓದಿದ ನೆನಪು, "ಹೊರಗೆಲ್ಲೂ ಸುತ್ತಾಡಲಾಗದಿದ್ದರೇನಂತೆ... ಮನದಾಳದ ಒಳಗೆ ಹೋಗಿ ನೋಡಿ!"  ಇದಂತೂ ಹೇಳಲು ಬಹಳ ಸುಲಭವಾದುದು.  ಆದರೆ ಮನದಾಳದೊಳಗಡೆ ಇಳಿಯಲು ತೊಡಗಿದರೆ, ನೂರೊಂದು ತೊಡಕುಗಳು.  ಜಗದೆಲ್ಲ ಸಮಸ್ಯೆಗಳು ಬಂದು ನಮ್ಮ ಕೊರಳನ್ನು ಸುತ್ತಿಕೊಳ್ಳುವ ಅನುಭವ.  ಇರದ ಜಂಜಡಗಳೆಲ್ಲ ಬಂದು ಒಮ್ಮೆಲೇ ರಭಸದಿಂದ ಅಪ್ಪಳಿಸುವ ಅಳೆಯಂತೆ ಒಂದರ ಹಿಂದೆ ಮತ್ತೊಂದು ಬಂದು ಮನದ ದಂಡೆಯನ್ನು ತಬ್ಬಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಚಂದವಾಗಿ  ಹೊರಗಡೆ ಸುತ್ತಾಡುವ ಮನಸ್ಸಿಗೆ ಒಳಗಿನ ಪಯಣಕ್ಕೆ ಇಷ್ಟೊಂದು ಗಾಭರಿ ಏಕೋ?  ಮನಸ್ಸನ್ನು ತಡುವಿಕೊಂಡು ಒಂದೊಂದೇ ಮೆಟ್ಟಿಲನ್ನು ಇಳಿದು ನೆಲಮಾಳಿಗೆಯ ನೆಲವೇನೋ ತಡಕಾಡೀತೆಂದು ಕಾಲನ್ನು ಆಡಿಸಿ ನೋಡಿದರೆ ಆ ಕತ್ತಲೆಯ ಕೋಣೆಯಲ್ಲಿನ ತೆಳ್ಳಗಿನ ಹವೆ ತನ್ನೊಳಗಿನ ಆರ್ಧ್ರತೆಯೊಂದಿಗೆ ಒಂದು ಕುಮುಟು ವಾಸನೆಯನ್ನೂ ಅಲವತ್ತುಕೊಂಡಿರುವುದರಿಂದಲೋ ಏನೋ ಒಂದು ರೀತಿಯ ತಣ್ಣಗಿನ ಅನುಭವದ ಜೊತೆಗೆ ನಮ್ಮ ಹಳೆಯ ನೆನಪುಗಳ ಪದರಗಳನ್ನು ಪಕ್ಕಳ ಪಕ್ಕಳವಾಗಿ ಕಿತ್ತು ತರುವುದು.

***

ಸದಾ ಸುಖವನ್ನು ಬಯಸುವ ನಾವು, ಸಾವಿಗೆ ಹೆದರುವ ಸಂತತಿಯಾಗಿ ಇತಿಹಾಸದಲ್ಲಿ ದಾಖಲಾಗಲಿದ್ದೇವೆ.  ಕಣ್ಣಿಗೆ ಕಾಣದ, ಜೀವವಿದ್ದೂ ಇರದ, ಉಸಿರಿನ ಮೂಲಕ್ಕೇ ತಂತ್ರದಿಂದ ಲಗ್ಗೆ ಹಾಕುವ ಸೂಕ್ಷ್ಮ ಜೀವಿಗಳ ವಿರುದ್ಧ ಹೆಣೆಯುವ ಪಾಟೀ ಸವಾಲುಗಳು ನಮ್ಮಲ್ಲಿಲ್ಲ.  ನಾವು ಈ ಯುದ್ಧಕ್ಕೆ ಸನ್ನದ್ದರಾದವರಂತೂ ಅಲ್ಲವೇ ಅಲ್ಲ.  ಒಂದು ದೇಶದ ಮಿಲಿಟರಿ ಪಡೆಗೆ ಶತ್ರುಗಳ ವಿರುದ್ಧ ಸೆಣೆಸಾಡುವ ತರಬೇತಿಯನ್ನು ನೀಡಲಾಗಿರುತ್ತದೆ.  ನಿಜವಾದ ಯುದ್ಧವಿರಲಿ, ಇಲ್ಲದಿರಲಿ ಒಂದು ಸಿಮ್ಯುಲೇಟೆಡ್ ಎನೈರ್‌ಮೆಂಟಿನಲ್ಲಾದರೂ ಅವರಿಗೆ ಯುದ್ಧದ ಆಗು-ಹೋಗುಗಳನ್ನು ಅರಿವಿಗೆ ಮೂಡಿಸಿ ಅವರನ್ನು ತಕ್ಕ ಮಟ್ಟಿಗೆ ತಯಾರು ಮಾಡಿರಲಾಗುತ್ತದೆ.  ಅವರು ತಮ್ಮ ಮೈ-ಮನಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಆಗಾಗ್ಗೆ ಕವಾಯತ್ ಅನ್ನಾದರೂ ಮಾಡಿಕೊಂಡು ತಯಾರಿರುತ್ತಾರೆ.  ಆದರೆ, ವಿಶ್ವದಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಷಕರು, ನರ್ಸುಗಳು, ಮೊದಲಾದವರಿಗೆ ಈ ರೀತಿಯ ಯುದ್ಧಕಾಲದ ಯಾವುದೇ ತಯಾರಿಯೂ ಇರೋದಿಲ್ಲ.  ಮೆಡಿಕಲ್ ಸ್ಕೂಲ್‌ನಲ್ಲಿ ಓದು ಮುಗಿಸಿ ರೆಸಿಡೆನ್ಸಿ ಮಾಡಿದವರೆಲ್ಲರೂ ಈ ಕಣ್ಣಿಗೆ ಕಾಣದ ಶತ್ರುಗಳನ್ನು ಹೊಡೆದೋಡಿಸೋ ಯೋಧರಲ್ಲ.  ಪ್ರತಿ ದಿನವೂ ಎದ್ದು ಕೊರೋನಾ ವೈರಸ್ ಸೋಂಕಿದ ರಣರಂಗಕ್ಕೆ ಸೇವಾ ಮನೋಭಾವನೆಯಿಂದ ಹೋಗಿ, ಕೈಲಾದ ಸೇವೆಯನ್ನು ಮಾಡಿ, ಯಾವುದೇ ಸೋಂಕನ್ನು ತಮಗೆ ತಗುಲಿಸಿಕೊಳ್ಳದೇ, ಇನ್ನೊಬ್ಬರಿಗೆ ಹರಡದೇ, ಕೆಲಸ ಮುಗಿದ ಮೇಲೆ ಮತ್ತೆ ಮನೆಗೆ ಬಂದು ತಮ್ಮ ಕುಟುಂಬದವರನ್ನು ಸಂತೈಸುವ ಕೆಲಸ ಮಾಡುತ್ತಿರುವ ಈ ಎಲ್ಲ ಯೋಧರಿಗೂ ಈ ಯುದ್ಧದಲ್ಲಿ ಬದುಕುಳಿದ ನಾವೆಲ್ಲರೂ ಚಿರಋಣಿಗಳಾಗುತ್ತೇವೆ.  ಈ ಮೆಡಿಕಲ್ ಫೀಲ್ಡ್‌ನಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಇಂಥ ಯೋಧರದ್ದು ನಿಜವಾದ ಕೆಚ್ಚೆದೆ, ಇವರೇ ಇಂದಿನ ಹೀರೋಗಳು.  ನಮ್ಮ ಮಾನವ ಜನಾಂಗ ಮುಂದಿನ ಹೆಜ್ಜೆ ಇಡುವಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಳ್ಳುತ್ತಿರುವ ಯೋಧರು.

Thursday, April 02, 2020

ಕೊರೋನಾ ವೈರಸ್ ನಮ್ಮ ಶಕ್ತಿಯನ್ನು ಕ್ಷೀಣಿಸಿದೆಯೇ?

ನಾವು, ಜನಸಾಮಾನ್ಯರು ಅಥವಾ ನಮ್ಮ ಮಾನವ ಜನಾಂಗವನ್ನು ಒಟ್ಟಿಗೆ ಪ್ರತಿನಿಧಿಸುವ ನಾವೆಲ್ಲರೂ ಈ ಕಳೆದ ನೂರು ವರ್ಷಗಳಲ್ಲಿ ದುರ್ಬಲರಾಗಿದ್ದೇವೆಯೇ?

ಅಂಕಿ-ಅಂಶಗಳ ಪ್ರಕಾರ ನಾವೆಲ್ಲರು ಧೀರ್ಘಾಯುಗಳು, ನಮ್ಮ ಬದುಕಿನ ಗುಣಮಟ್ಟ ಹೆಚ್ಚಿದೆ, ನಮ್ಮ ಮೌಲ್ಯ (net worth) ವೃದ್ಧಿಯಾಗಿದೆ.  ನಮ್ಮ ಸಂಖ್ಯೆ ಹೆಚ್ಚಿದೆ - 1900 ರಲ್ಲಿ 1.6 ಬಿಲಿಯನ್ ಇದ್ದದ್ದು 2020ಕ್ಕೆ 7.8 ಬಿಲಿಯನ್ ಆಗಿದೆ.  ಅದರಂತೆ ನಮ್ಮ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ: ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್, ರಸ್ತೆ ಅಫಘಾತ, ಡಯಬೀಟಿಸ್ ಮೊದಲಾದಂತೆ ಮಿಲಿಯನ್ನುಗಟ್ಟಲೆ ಜನ ಸಾಯುತ್ತಲೇ ಇದ್ದಾರೆ.  ಫ್ಲೂ (ಇನ್‌ಫ್ಲೂಯೆಂಜ಼ಾ) ಒಂದರಿಂದಲೇ ವರ್ಷಕ್ಕೆ ಸಾವಿರಾರು ಜನ ಸಾಯುತ್ತಿದ್ದಾರ‍ೆ.  ನಿಮಗೆಲ್ಲ ನೆನಪಿರುವಂತೆ, 2004ರ ಡಿಸೆಂಬರ್ 26ರಂದು ಬಂದ ಸುನಾಮಿಯಿಂದ ಸುಮಾರು ಎರಡೂವರೆ ಲಕ್ಷ ಜನ ಸತ್ತು ಹೋಗಿದ್ದು, ಸಾವಿರಾರು ಜನ ತಮ್ಮ ಮನೆ-ಮಠವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ.


ಆದರೆ, ಈ ಕೋವಿಡ್-೧೯ ಎನ್ನುವ ಮಹಾಮಾರಿ ನಮ್ಮೆಲ್ಲರನ್ನು ಎಲ್ಲಿ ಆಪೋಷನ ತೆಗೆದುಕೊಳ್ಳುವುದೋ ಎನ್ನುವುದು ಎಲ್ಲರ ಭೀತಿ.  ಎಲ್ಲರನ್ನೂ ಒಮ್ಮೆಲೇ ಬಲಿ ತೆಗೆದುಕೊಂಡ ಸುನಾಮಿಯಂತಲ್ಲ ಇದರ ಕಥೆ, ಒಂದು ಸಾಮಾಜಿಕ ವ್ಯವಸ್ಥೆಯನ್ನೇ ಹಂತ-ಹಂತವಾಗಿ ಮಲಗಿಸಿ, ಯಾವ ಶಸ್ತ್ರಾಸ್ತವನ್ನೂ ಬಳಸದೇ ಎಲ್ಲರನ್ನೂ ಮುಗಿಸಿಬಿಡುವ ಶಕ್ತಿ ಈ ವೈರಸ್ಸಿಗಿದೆ.
ಆದರೆ, ಮತ್ತೆ ಅದೇ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ: ಈ ನೂರು ವರ್ಷಗಳಲ್ಲಿ ನಾವು ದುರ್ಬಲರಾಗಿದ್ದೇವೆಯೇ?

ನಮ್ಮ ಗ್ಲೋಬಲೈಜೇಷನ್ ಅನ್ನೋದೇ ನಮಗೆ ಶಾಪವಾಯಿತು.  ನೂರು ವರ್ಷಗಳ ಹಿಂದೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಇಷ್ಟೊಂದು ಕ್ಷಿಪ್ರವಾಗಿ ಹೋಗಿ-ಬರುವ ವ್ಯವಸ್ಥೆ ಇದ್ದಿರಲಿಲ್ಲ.  ಅಲ್ಲದೇ ನಮ್ಮೆಲ್ಲರ ಓಡಾಟಗಳು ಸ್ಥಳೀಯ ಜಿಲ್ಲೆ-ಪ್ರ್ಯಾಂತ್ಯಗಳಿಗೆ ಸೀಮಿತವಾಗಿರುತ್ತಿದ್ದುದು ವಿಶೇಷ.  ಒಂದು ದೇಶದಲ್ಲಿ ಹುಟ್ಟಿದ ಮಹಾಮಾರಿ ಮತ್ತೊಂದು ದೇಶವನ್ನು ಈಗ ಆಕ್ರಮಿಸುತ್ತಿರುವಂತೆ ಅತಿಯಾದ ವೇಗದಲ್ಲಂತೂ ಆಕ್ರಮಿಸುತ್ತಿರಲಿಲ್ಲ.  ಜೊತೆಗೆ, ಆಗಿನ ಕಾಲದಲ್ಲಿ ವಾಹನ ವ್ಯವಸ್ಥೆಗಳೇ ಇರಲಿಲ್ಲ - ಇದ್ದರೂ ಕೆಲವೇ ಜನರಿಗೆ ಸೀಮಿತವಾಗಿರುತ್ತಿತ್ತು.  ಆದರೆ, ಈಗ ಹಾಗಿಲ್ಲ.  ಪ್ರಪಂಚ ಒಂದು ಹಳ್ಳಿಯಾಗಿದೆ (global village), ಅದರಂತೆ ಒಂದು ಹಳ್ಳಿಯಲ್ಲಾಗುವ ಎಲ್ಲ ಘಟನೆಗಳಿಗೂ ಆ ಹಳ್ಳಿಯ ಎಲ್ಲರೂ ಸ್ಪಂದಿಸುತ್ತಾರೆ, ಅದನ್ನು ಪ್ರತಿಬಿಂಬಿಸುತ್ತಾರೆ.  ಈಗಿನ ಟ್ರೆಂಡುಗಳೂ ಕೂಡ ಹುಟ್ಟುವುದೂ-ಸಾಯುವುದೂ ಅಷ್ಟೇ ವೇಗವಾಗಿ.

ಆದರೆ, ನಮ್ಮ ಹೆಚ್ಚಿನ ವಿದ್ಯಾಭ್ಯಾಸ (or simply awareness), ನಮ್ಮಲ್ಲಿ ಹುಲುಸಾಗಿ ಬೆಳೆದು ಯಥೇಚ್ಛವಾಗಿ ಸಿಗುವ ತಂತ್ರಜ್ಞಾನ, ಇವು ನಮ್ಮಲ್ಲಿನ ಆರ್ಗನೈಜೇಷನ್ ಶಕ್ತಿಯನ್ನು ಕಡಿಮೆ ಮಾಡಿವೆಯೇ?

ಉದಾಹರಣೆಗೆ: ಭಾರತದ ಸ್ವಾತಂತ್ರ್ಯ ಸಂಗ್ರಾಮ (೧೮೫೭-೧೯೪೭) ವನ್ನು ವಿಶ್ಲೇಷಿಸಿದಾಗ, ಆಗಿನ ಕಾಲದಲ್ಲಿ ಅದು ಹೇಗೆ ಆರಂಭವಾಗಿ, ದೇಶದುದ್ದಕ್ಕೂ ಬೆಳೆಯಿತು? ಎಂದು ಸೋಜಿಗಗೊಳ್ಳಬೇಕಾಗುತ್ತದೆ.  ಈಗಿನ ಕಾಲದಲ್ಲಾದರೆ ಕ್ಷಣಾರ್ಧದಲ್ಲಿ ದೇಶವೇನು? ವಿಶ್ವದ ಯಾವ ಭಾಗವನ್ನು ಬೇಕಾದರೂ ನಮ್ಮ ಸುದ್ದಿಗಳಿಗಾಗಿ ತಡಕಾಡಬಹುದು.  ಆಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ, ಜನರು ಈಗಿನಂತೆ ಹೆಚ್ಚು-ಹೆಚ್ಚು ಪದವೀಧರರಾಗಿರಲಿಲ್ಲ, ಆದರೆ ಸಮರ್ಥ ನಾಯಕತ್ವವನ್ನು ನಂಬಿ ಅವರೆಲ್ಲರೂ ಮುಂದೆ ಬಂದಿದ್ದರು, ತಮ್ಮ ತಮ್ಮ ಮನೆ-ಮಠವನ್ನು ತೊರೆದು ರಾಷ್ಟ್ರದ ಬಲವಾಗಿ ನಿಂತಿದ್ದರು.  ಮಾಡು-ಇಲ್ಲವೇ-ಮಡಿ ಎನ್ನುವ ಚಳವಳಿಯಲ್ಲಿ ಆನೇಕರು ತಮ್ಮ ಕೊರಳನ್ನು ಸಮರ್ಪಿಸಿದ್ದರು.

ಅವರದ್ದೂ ಸಹ ಜೀವವಲ್ಲವೇ? ಅವರೆಲ್ಲರಿಗೂ ಜೀವವಿರಲಿಲ್ಲವೇ? ಅವರಿಗೂ ಕೂಡ ತಮ್ಮ-ತಮ್ಮ ಸಂಸಾರಗಳ ಹೊಣೆ ಇದ್ದಿರಲಿಲ್ಲವೇ? ಆದರೆ, ತಮ್ಮ ವೈಯಕ್ತಿಕ ಆಗುಹೋಗುಗಳ ಮುಂದೆ ರಾಷ್ಟ್ರ ದೊಡ್ಡದಾಗಿತ್ತು.  ಹೋರಾಟ ಉಸಿರಾಗಿತ್ತು.  ರಾಷ್ಟ್ರ ನಾಯಕರುಗಳಿಗೆ ಬೆಂಬಲ ಕೊಡಬೇಕಾಗಿತ್ತು.  ಹೀಗೆ, ಅವರುಗಳೆಲ್ಲ ದೊಡ್ಡದನ್ನು ಗುರಿಯಾಗಿಟ್ಟುಕೊಂಡು, ಉಳಿದೆಲ್ಲವನ್ನು ಗೌಣವಾಗಿ ಕಂಡಿದ್ದರು.

ಮುಂದೆ ಕಾಲ ಕ್ರಮೇಣ, ಕುಟುಂಬಗಳು ಅವಿಭಕ್ತ ಪರಿಧಿಯನ್ನು ದಾಟಿ, ನ್ಯೂಕ್ಲಿಯರ್ ಕುಟುಂಬಗಳಾದವು.  ಜನರ ವಲಸೆ ಸಹಜವಾಯಿತು.  ನಗರೀಕರಣ ಹೆಚ್ಚಿತು.  ವಿದ್ಯಾಭ್ಯಾಸದ ಮಟ್ಟ ಬೆಳೆಯಿತು.  ಆದರೆ - ರಾಷ್ಟ್ರ, ಸ್ವಾತಂತ್ರ್ಯ, ಬಿಡುಗಡೆ, ಸ್ವಇಚ್ಛೆ, ಪ್ರಜಾಪ್ರಭುತ್ವ ಇವುಗಳು ಜನರಿಗೆ ಆಯ್ಕೆಯ ಹಕ್ಕನ್ನು ನೀಡಿದವು.  ಜನರು ತಮಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವಂತಾದರು.
ಈ ಆಯ್ಕೆಯ ಪ್ರತಿಫಲವಾಗಿ ಕೆಲವೊಮ್ಮೆ ಅದರಲ್ಲಿ ನನಗೆ ಸ್ವಾರ್ಥ ಕಂಡುಬರುತ್ತದೆ.  ಒಂದುವೇಳೆ, ಈಗೇನಾದರೂ ಸ್ವತಂತ್ರ್ಯ ಭಾರತದ ಚಳುವಳಿಯಂಥವು ಆರಂಭವಾದರೆ, ಅದಕ್ಕೆ ಬೆಂಬಲ ಕೊಡುವವರಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.  ಈ ಬೆಂಬಲ ಎನ್ನುವುದು ತನು-ಮನ-ಧನದ ರೂಪದಲ್ಲಿರಬಹುದು, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಭಿಸಿರಬಹುದು (petition), ಅಥವಾ ಘೇರಾವ್/ಬಂದ್ (ಸತ್ಯಾಗ್ರಹ) ಮತ್ತಿತರ ಭೌತಿಕ ರೂಪದಲ್ಲಿರಬಹುದು.

ನಮ್ಮಲ್ಲಿ ಚಳವಳಿಗಳಾದಾಗ ವ್ಯವಸ್ಥೆಯ ವಿರುದ್ಧ ಜನ ತಮ್ಮ ’ಆತ್ಮಾರ್ಪಣೆ" ಮಾಡಿಕೊಳ್ಳುವುದನ್ನು ನೋಡಿದ್ದೇವೆ.  ಇದಕ್ಕೂ ಒಂದು ಹೆಜ್ಜೆ ಮುಂದುವರಿದು ಯೋಚಿಸಿದಾಗ ಒಂದು ವ್ಯವಸ್ಥೆಯ ವಿರುದ್ಧ ಅಥವಾ ಮತ್ತೊಂದು ವ್ಯವಸ್ಥೆಯ ಪರವಾಗಿ ಜನರು "ಆತ್ಮಾಹುತಿ"ಯನ್ನು ಮಾಡಿಕೂಳ್ಳುವುದನ್ನು ನೋಡಿದ್ದೇವೆ.  ಆದರೆ, ಒಂದು ಖಾಯಿಲೆಯನ್ನು ಹರಡುವ ವೈರಸ್ಸಿನ ವಿರುದ್ಧವಾಗಿ ಜನರನ್ನು ಮೂರು ವಾರಗಳ ಕಾಲ ಕೂಡಿ ಹಾಕಿರುವಂತೆ ಕೇಳಿಕೊಂಡಾಗ ಜನರಿಗೆ ಮನೆಯಲ್ಲಿರಲು ಕಷ್ಟವಾಗುತ್ತದೆ!  ಅದರಿಂದ, ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆಯಲ್ಲ!

***
ಜನರು ಸುಖದ ಸುಪ್ಪತ್ತಿಗೆಯಲ್ಲಿ (comfort zone) ಕುಳಿತು ತೇಲಾಡುತ್ತಿರುವಾಗ ಯಾವುದೇ ಸಂಶೋಧನೆಗಳು ಹೊರಗೆ ಬಾರವು.  ಆಭರಣವಾಗುವ ಮೊದಲು ಚಿನ್ನಕ್ಕೆ ಮೂಸೆಯಲ್ಲಿ ಪುಟವಿಟ್ಟ ಹಾಗೆ, ಶಿಲ್ಪ ಕಲಾಕೃತಿ ಆಗುವ ಮೊದಲು ಕಠಿಣವಾದ ಶಿಲೆಯನ್ನು ಬಾಚಿ-ಚಾಣಗಳ ಮೂಲಕ ಕುಟ್ಟಿದ ಹಾಗೆ, ಕಬ್ಬನ್ನು ಹಿಂಡಿ ಸವಿಯಾದ ಬೆಲ್ಲವನ್ನು ತೆಗೆದ ಹಾಗೆ - ಒಂದು ಸಮಾಜವೂ ತನ್ನ ಕಷ್ಟಗಳ ಕುಲುಮೆಯಲ್ಲಿ ಬೇಯಬೇಕಾಗುತ್ತದೆ, ಹಾಗಾಗುವುದರಿಂದಲೇ ಮುಂದಿನ ತಲೆಮಾರಿಗೆ ನಾವು ಹೊಸದೇನನ್ನೋ ತೆಗೆದುಕೊಂಡು ಹೋಗಲು ಸಾಧ್ಯ.  ಇಲ್ಲಿ ಸಾಧನೆ ಮುಖ್ಯವಾಗುತ್ತದೆ, ಇಲ್ಲಿ ದಿಢೀರ್ ಜನಪ್ರಿಯತೆ ಸಿಗುವುದಿರಲಿ ವರ್ಷಗಟ್ಟಲೇ ಮಾಡಿದ ಶ್ರಮಕ್ಕೆ ಕಿರುಗಾಸು ಬೆಲೆಯೂ ಸಿಗದಂತಾಗಬಹುದು, ಆದರೆ ಈ ರೀತಿಯು ಅನೇಕ ಪ್ರಯತ್ನಗಳು ನಮ್ಮನ್ನು ಸಂಪೂರ್ಣರನ್ನಾಗಿ ಮಾಡುವುದರ ಜೊತೆಗೆ ಸಬಲರನ್ನಾಗಿಯೂ ಮಾಡಬಲ್ಲವು - ಎಂಬುದು ಈ ಹೊತ್ತಿನ ನನ್ನ ನಂಬಿಕೆ!

Thursday, April 26, 2018

ಚಿತ್ರಗಳ ನೆನಪು

ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡು ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!

Sunday, February 28, 2016

ಆಜಾದಿಯಿಂದ ಬರಬಾದಿಯವರೆಗೆ...

ಈ ತಿಂಗಳ ೯ನೇ ತಾರೀಖಿನಿಂದ ಜೆಎನ್‌ಯು ನಲ್ಲಿ ಕೆಲವು ವಿದ್ಯಾರ್ಥಿಗಳು ಕವನಗಳನ್ನು ಓದುತ್ತೇವೆ ಎಂದು ಪರ್ಮಿಷನ್ ತೆಗೆದುಕೊಂಡು ಅಫಝಲ್ ಗುರುವನ್ನು ಗಲ್ಲಿಗೇರಿಸಿದ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಅನೇಕ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಕೂಗಲಾಯ್ತು (ಈ ಹೇಳಿಕೆಗಳನ್ನು ಯಾರು ಕೂಗಿದರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದ್ದು, ಈ ಸಂಬಂಧ ಇನ್ನೂ ಪೋಲೀಸ್ ಇನ್ವೆಸ್ಟಿಗೇಷನ್ ನಡೆಯುತ್ತಿದೆ).  ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಜೊತೆಗೆ ವಿದ್ಯಾರ್ಥಿ ನಾಯಕನನ್ನು ಬಂಧಿಸಲಾಯ್ತು.  ನಂತರ ಕೋರ್ಟಿನ ಆವರಣದಲ್ಲೇ ವಿದ್ಯಾರ್ಥಿ ನಾಯಕನನ್ನು ಥಳಿಸಲಾಯ್ತು.  ಈಗ ಐವರು ವಿದ್ಯಾರ್ಥಿಗಳು ತಿಹಾರ್ ಜೈಲಿನಲ್ಲಿ ದಿನಗಳನ್ನು ಎಣಿಸುತ್ತಿದ್ದರೆ, ದೇಶದಾದ್ಯಂತ ಅವರನ್ನು ಮುಕ್ತಗೊಳಿಸಲು ಅನೇಕ ಚಳುವಳಿ/ಆಂದೋಲನಗಳು ನಡೆದಿವೆ.  ಇದು ರಾಜಕೀಯವಾಗಿಯೂ ತೀವ್ರವಾಗಿ ಬೆಳೆದಿದ್ದು ಸಂಸತ್ತಿನಲ್ಲಿ ಪಕ್ಷ-ಪ್ರತಿಪಕ್ಷಗಳ ನಾಯಕರುಗಳು ಅನೇಕ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದು, ದೇಶದಾದ್ಯಂತ ಇದು ಅನೇಕ ವಿಚಾರಧಾರೆಗಳನ್ನು ಹರಿಸಿದೆ.  ಇದಕ್ಕೆಲ್ಲ ಒಂದು ರೀತಿಯ ಟ್ರಿಗ್ಗರ್ ಆಗಿ ಕಳೆದ ತಿಂಗಳು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲ ಹಾಗೂ ಅದನ್ನು ಸರ್ಕಾರ ನಿಭಾಯಿಸಿದ ವಿಧಾನ ಎಂಬ ಮಾತುಗಳೂ ಜಾರಿಯಲ್ಲಿವೆ.  ಇಷ್ಟಕ್ಕೂ ಅಫಝಲ್ ಗುರು, ರೋಹಿತ್ ವೇಮುಲ, ಕನ್ಹೈಯಾ ಕುಮಾರ್, ಉಮರ್ ಖಾಲೀದ್, ಅನಿರ್ಬಾನ್ ಭಟ್ಟಾಚಾರ್ಯ, ಯಾಕೂಬ್ ಮೆಮನ್ ಇವರಿಗೆಲ್ಲ ಏನು ಸಂಬಂಧ?  ಇವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇರಬೇಕೇ? ಅದರಲ್ಲೂ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಯಾರಾದರೂ ಕೂಗಬಹುದೇ?  ಅಕಸ್ಮಾತ್ ಇದು ಒಂದು ರಾಷ್ಟ್ರ ವಿರೋಧೀ ಕಾರ್ಯಾಚರಣೆಯೇ ಆಗಿದ್ದಲ್ಲಿ, ಇದರ ಮೂಲ ಎಲ್ಲಿದೆ? ಇದಕ್ಕೆಲ್ಲ ಹಣಕಾಸು ಒದಗಿಸುವವರು ಯಾರು? ಈ ಘರ್ಷಣೆ ಕೇವಲ ಕಳೆದೆರಡು-ಮೂರು ವರ್ಷಗಳಲ್ಲಿ ಹುಟ್ಟಿದ್ದೇ? ಅಥವಾ ಇದರ ಹಿಂದೆ ಹಲವಾರು ವರ್ಷಗಳಿಂದ ಅನೇಕ ಕಾರಣಗಳು ಇವೆಯೋ?

ಈ ನಿಟ್ಟಿನಲ್ಲಿ ಮೊದಲು ಮುಖ್ಯ ವಿದ್ಯಾರ್ಥಿಗಳ ಬಗ್ಗೆ ತಿಳಿಯೋಣ:
ಕನ್ಹೈಯಾ ಕುಮಾರ್ ಮೂಲತಃ ಬಿಹಾರ್‌ನವನು. ವಿದ್ಯಾರ್ಥಿ ದಿನಗಳಿಂದಲೂ ಕಮ್ಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತನಾಗಿ ದುಡಿದವನು.

ಕೆಲವು ವರ್ಷಗಳಿಂದ ಜೆಎನ್‌ಯು ನಲ್ಲಿ ಆಫ್ರಿಕನ್ ಸ್ಟಡೀಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ೨೦೧೫ ರಲ್ಲಿ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ಆಗಿ ಚುನಾಯಿತನಾದವನು.  ತನ್ನ ಪ್ರಚೋದನಾಕಾರಿ ಭಾಷಣಳಿಂದ ಮುಂದೆ ಬಂದವನು.
ಉಮರ್ ಖಾಲೀದ್ ಮೂಲತಃ ಮಹಾರಾಷ್ಟ್ರದವನು.  ವಿದ್ಯಾರ್ಥಿ ದಿನಗಳಿಂದಲೂ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ ಕಾರ್ಯಕರ್ತನಾಗಿ ದುಡಿದವನು.  ಜೆಎನ್‌ಯುನಲ್ಲಿ ಕೆಲವು ವರ್ಷಗಳಿಂದ ಎಮ್‌ಎ, ಎಮ್‌ಫಿಲ್ ಮಾಡಿ ಮುಗಿಸಿದ್ದು, ಈಗ ಸೋಶಿಯಲ್ ಸೈನ್ಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ಅಫ್‌ಝಲ್ ಗುರು ಕಾರ್ಯಕ್ರಮ ನಡೆಸುವ ಬಗ್ಗೆ ಮೊದಲು ಈತನೇ ಜೆಎನ್‌ಯು ಪರ್ಮಿಷನ್ ಕೇಳಿದ್ದು,  ವಿಶ್ವ ವಿದ್ಯಾನಿಲಯದ ಅಡ್ಮಿನಿಸ್ಟ್ರೇಷನ್ ನಿರಾಕರಿಸಿದ ಮೇಲೆ, ಈತ ಪಾಂಪ್ಲೆಟ್ಟುಗಳನ್ನು ಮುದ್ರಿಸಿ, ಸೋಶಿಯಲ್ ಮೀಡಿಯಾ ಮಾಧ್ಯಮಗಳ ಮೂಲಕ ಅನೇಕ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಎಂದು ಇವನ ಮೇಲೆ ಆರೋಪವಿದೆ.

***

ಭಾರತ ಒಂದು ಪ್ರಬಲವಾದ ರಾಷ್ಟ್ರ, ಪ್ರಜಾಪ್ರಭುತ್ವವನ್ನು ಎಲ್ಲ ಕೋನಗಳಿಂದಲೂ ಅಳೆದರೆ ನಿಜವಾದ ಸ್ವಾತ್ರಂತ್ರ್ಯ ಎಲ್ಲರಿಗೂ ಇದೆ. ಅದು ಅಭಿವ್ಯಕ್ತಿ ಸ್ವಾತ್ರಂತ್ರ್ಯವಾಗಿರಬಹುದು, ಅಥವಾ ಸಂಘಟನಾ ಸ್ವಾತಂತ್ರ್ಯವಾಗಿರಬಹುದು.  ಈ ಮೂಲಭೂತ ಸ್ವಾತಂತ್ರ್ಯವೇ ಒಂದು ಕಾಲದಲ್ಲಿ ನಮ್ಮ ಸ್ವತಂತ್ರ ಹೋರಾಟಗಾರರ ಹಕ್ಕು ಆಗಿತ್ತು.  ಅದರ ಮುಖಾಂತರವೇ ದೇಶವನ್ನು ಆಳುತ್ತಿದ್ದ ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದು, ಸತ್ಯಾಗ್ರಹಗಳನ್ನು ಸಂಘಟಿಸಿ, ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದರಿಂದಲೇ ನಾವು ಬ್ರಿಟೀಷ್ ರಾಜ್ಯದಿಂದ ಮುಕ್ತಿ ಪಡೆದದ್ದು.  ಈ ಸ್ವಾತಂತ್ರ್ಯ ಹೋರಾಟ ಒಂದೆರಡು ವರ್ಷದ್ದಲ್ಲ, ಬದಲಿಗೆ ಹಲವು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಹರಡಿ ಅನೇಕರ ತ್ಯಾಗ ಬಲಿದಾನಗಳಿಂದ ಈಗಿರುವ ಮುಕ್ತ ದೇಶ ಹುಟ್ಟಲು ಸಾಧ್ಯವಾಯ್ತು.  ಆದರೆ ಅಲ್ಲಿ, ಪರ-ವಿರೋಧಗಳ ಬಗ್ಗೆ ಒಮ್ಮತವಿತ್ತು, ಯಾರು ನಮ್ಮವರು ಯಾರು ಪರಕೀಯರು ಎನ್ನುವುದು ಗೊತ್ತಿತ್ತು.  ಜೊತೆಗೆ ನಮ್ಮ ನಾಯಕರೂ ಸಹ ಮಂದವಾದ ಮತ್ತು ತೀವ್ರವಾದದ ಭಿನ್ನತೆಯನ್ನು ಹೊರತು ಪಡಿಸಿದರೆ ದೇಶದ ಸಮಸ್ಯೆಗಳ ಆಳವನ್ನು ತಿಳಿದವರಾಗಿದ್ದರು.  ನಿಜವಾದ ದೇಶಭಕ್ತರಾಗಿದ್ದರು.  ನಮಗೆ ಸ್ವಾತ್ರಂತ್ರ್ಯ ಸಿಗುವುದಕ್ಕೆ ನೂರು ವರ್ಷಗಳ ಮೊದಲೇ ಈ ಮನೋಭಾವ ದೇಶದ ಉದ್ದಗಲಕ್ಕೂ ಹರಡಿತ್ತು.  ವೈಚಾರಿಕ ಪಂಥ, ಭಕ್ತಿ ಪಂಥ, ಉಗ್ರ ಪಂಥ, ಶಾಂತಿ ಪಂಥ - ಈ ಎಲ್ಲರ ಗುರಿ ಬ್ರಿಟೀಷರಿಂದ ನಮ್ಮನ್ನು ಮುಕ್ತಗೊಳಿಸುವುದೊಂದೇ ಆಗಿತ್ತು.  ಅದು ನಿಜವಾದ ದೇಶ ಪ್ರೇಮ, ನಿಜವಾದ ದೇಶಭಕ್ತಿ.  ಲಕ್ಷಾಂತರ ಕುಟುಂಬಗಳು ಸಾವಿಗೀಡಾದವು.  ಯಾವೊಂದು ನೇರ ಲಾಭ ಅಥವಾ ದುರ್ಬಳಕೆ ಇಲ್ಲದ ಶುದ್ಧ ಮನೋಭಾವದ ಅನೇಕ ಯೋಧರು ಹಿಂದೆ ಮುಂದೆ ನೋಡದೆ ಜೀವ ತೆತ್ತರು.

ನಾವು ಇಂದಿನ ರಾಷ್ಟೀಯವಾದಿ ಚಳುವಳಿಗಳನ್ನು ಈ ಒಂದು ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.  ಈ ಮೇಲೆ ಹೇಳಿದ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಬೇಕಾಗಿರುವುದು ಏನು?  ಭಾರತ ಸರ್ಕಾರ ಮತ್ತು ಭಾರತದ ಟ್ಯಾಕ್ಸ್ ಪೇಯರ್ಸ್ ಹಣ ಕೊಟ್ಟು ಓದಿಸುತ್ತಿರುವ ಇವರಿಗೆಲ್ಲ ಅಫಝಲ್ ಗುರು, ಯಾಕೂಬ್ ಮೆಮನ್ ಆಪ್ತರೇಕಾಗುತ್ತಾರೆ?  ಈ ತೀವ್ರತರ ಆಲೋಚನೆಗಳು ಕೇವಲ ಒಂದೆರಡು ವರ್ಷಗಳಲ್ಲಿ ಹುಟ್ಟದೇ ಅನೇಕ ಮೈತ್ರಿ ಪಕ್ಷಗಳು ಹಲವು ವರ್ಷಗಳಿಂದ ರಾಜಕೀಯ ವಾತಾವರಣವನ್ನು ದೇಶದಾದ್ಯಂತ ಹುಟ್ಟು ಹಾಕಿರುವುದು ನಿದರ್ಶನಕ್ಕೆ ಬರುತ್ತದೆ.  ವಿಶ್ವ ವಿದ್ಯಾನಿಲಯಗಳಲ್ಲಿ ರಾಜಕೀಯ ಪ್ರೇರಣೆ ಇರಬೇಕೆ ಬೇಡವೇ?  ವಿಶ್ವವಿದ್ಯಾನಿಲಯ ಮುಕ್ತ ಆಲೋಚನೆಗಳನ್ನು ಬೆಳೆಸಬೇಕೆ ಅಥವಾ ಕೇವಲ ಶೈಕ್ಷಣಿಕ ಸಂಬಂಧಿ ಆಲೋಚನೆಗಳನ್ನು ಮಾತ್ರ ಬೆಳೆಸಬೇಕೆ?  ಈ ಪ್ರಶ್ನೆಗಳು ನಮ್ಮ ನಂಬಿಕೆಯ ಬುಡವನ್ನು ಅಲುಗಾಡಿಸುತ್ತವೆ.
ಈ ಹೈದರಾಬಾದ್ ಮತ್ತು ಜೆಎನ್‌ಯು ವಿದ್ಯಮಾನಗಳನ್ನು ಕೂಲಂಕಶವಾಗಿ ನೋಡಿದಾಗ ಅನೇಕ ಮೂಲ ಕಾರಣಗಳು ಗೊತ್ತಾಗುತ್ತವೆ:

ಭಾರತ ಸರ್ಕಾರದ ಎಚ್.ಆರ್.ಡಿ. ಮಿನಿಸ್ಟ್ರಿ ಅನೇಕ ದಲಿತ ಸಂಘಟನೆಗಳನ್ನು ಮಟ್ಟ ಹಾಕಲು ಪ್ರಯತ್ನಿಸಿತು ಎನ್ನುವ ಆರೋಪವಿದೆ.  ತಮಗೆ ಬೇಕಾದವರನ್ನು ಮಾತ್ರ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ ಎಂಬ ಆರೋಪವಿದೆ.  ರೋಹಿತ್ ವೇಮುಲನ ಸಾವನ್ನು ರಾಜಕೀಯ ದಾಳವಾಗಿ ಬಳಸಲಾಯ್ತು ಎನ್ನುವ ಆಲೋಚನೆಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಮೂಲ ಸ್ಥಂಭಗಳಾದ ಮುಕ್ತ ಆಲೋಚನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂಬುದು.  ಇದಕ್ಕೂ ಒಂದು ಹೆಜ್ಜೆ ಹಿಂದೆ ಹೋಗಿ ನೋಡಿದರೆ ದೇಶದ ಉದ್ದಗಲಕ್ಕೂ ಮಕ್ಕಳಿಗೆ ಯಾವ ರೀತಿಯಲ್ಲಿ ಇತಿಹಾಸವನ್ನು ಬೋಧಿಸಲಾಗಿದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.  ಈ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಬಲಿ ಕೊಟ್ಟು ದೇಶದ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ         ಗಲ್ಲಿಗೊಳಗಾದ ಅಫಝಲ್ ಗುರು ಮತ್ತು ಯಾಕೂಬ್ ಮೆಮನ್ ಪರ ಏಕೆ ನಿಲ್ಲುತ್ತಾರೆ ಎಂಬುದನ್ನು ಯೋಚಿಸಬೇಕಾಗುತ್ತದೆ.  ನಾವೊಂದು ಸಮಸ್ಯೆಯ ವಿರುದ್ಧ ಹೋರಾಟ ಮಾಡಿದಾಗ, ನಾವು ಎಲ್ಲಿ ಗೆರೆಯನ್ನು ದಾಟುತ್ತಿದ್ದೇವೆ ಎನ್ನುವ ತಿಳುವಳಿಕೆ ಈ ವಿದ್ಯಾರ್ಥಿಗಳಿಗೆ ಇಲ್ಲದಿರುವುದು ಗೊತ್ತಾಗುತ್ತದೆ, ಜೊತೆಗೆ ರಾಜಕೀಯ ದಾಳಗಳಿಗೆ ಬಲಿಪಶುಗಳಾದ ಮೌಢ್ಯವೂ ಎದ್ದು ಕಾಣುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ವಿದ್ಯಾರ್ಥಿಗಳು ನಡೆಸುವ ಧರಣಿ ಕಾರ್ಯಕ್ರಮಗಳಿಗೆ ಹಣಕೊಡುವವರಾರು? ಅಫಝಲ್ ಗುರುವಿನ ಸಾವಿರಾರು ಫೋಟೋಗಳನ್ನು ಪ್ರಿಂಟ್ ಮಾಡಲು ಯಾರು ಹಣಕೊಟ್ಟರು?  ಅಫಝಲ್ ಗುರುವಿಗೆ ಅನ್ಯಾಯವಾಗಿದೆ ಎಂದುಕೊಂಡರೆ ಅದನ್ನು ಅವನು ಬದುಕಿದ್ದಾಗ ಸುಪ್ರೀಮ್ ಕೋರ್ಟ್‌ನಲ್ಲಿ ಕಂಟೆಸ್ಟ್ ಏಕೆ ಮಾಡಲಿಲ್ಲ?  ಇದರ ಹಿಂದೆ ನಮ್ಮ ದೇಶದ ವಿವಿಧ ರಾಜಕೀಯ ಶಕ್ತಿಗಳು ಮಾತ್ರ ಇವೆಯೇ? ಅಥವಾ ಹೊರ ದೇಶಗಳ ಹುನ್ನಾರವಿದೆಯೇ? ಇಷ್ಟು ದಿನ ಕೇವಲ ಮೂಲಭೂತವಾದದ ಬಗ್ಗೆ ಓದುತ್ತಿದ್ದ ನಮಗೆ ಈಗ ಹಿಂದೂ ವಿದ್ಯಾರ್ಥಿಗಳು ಒಂದು ದೇಶದ ಉಚ್ಛ ನ್ಯಾಯಾಲಯ ದೇಶದ್ರೋಹಿಯೆಂದು ಪರಿಗಣಿಸಿದ ಕೆಲವು ಮುಸ್ಲಿಂ ಪ್ರತಿವಾದಿಗಳನ್ನು ದೈವತಾ ಸ್ವರೂಪಿಗಳೆಂದು ಕರೆಯುವಷ್ಟರ ಮಟ್ಟಿಗೆ ದೇಶದ ವಿದ್ಯಾರ್ಥಿಗಳ ನೈತಿಕ ತಿಳುವಳಿಕೆಯ ಬಗ್ಗೆ ಚಿಂತೆ ಪಡುವಂತೆ ಮಾಡಿದೆ.

***
ಘೋಷಣೆಗಳನ್ನು ಯಾರೇ ಕೂಗಿರಲಿ, ಅವುಗಳನ್ನು ಕೂಗಿದ್ದಂತೂ ನಿಜ.  ಒಬ್ಬನ ವಾಕ್ ಸ್ವಾತಂತ್ರ್ಯದಲ್ಲಿ ಏನೇನೆಲ್ಲ ಮಾಡಲು ಸಾಧ್ಯವಿದೆ?  ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರಿಗೆ ಜಗತ್ತಿನಾದ್ಯಂತ ಉಳಿದ ದೇಶಗಳು ಯಾವ ರೀತಿಯ ಟ್ರೀಟ್‌ಮೆಂಟ್ ಅನ್ನು ಕೊಡುತ್ತವೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ.  ನಮ್ಮ ಸುತ್ತ ಮುತ್ತ ಕಮ್ಯೂನಿಷ್ಟ್ ದೇಶಗಳಿವೆ, ಅವುಗಳಲ್ಲಿ ನಡೆಯುವ ಸುದ್ದಿಯೂ ಹೊರಬರದಂತೆ ನರಮೇಧ ನಡೆದಾಗಲೆಲ್ಲ ಇದೇ ವಿದ್ಯಾರ್ಥಿಗಳು ಚಳುವಳಿ ನಡೆಸುತ್ತಾರೆಯೇ? ಅವರ ಪ್ರತೀಕಾರದ ಪರಿಮಿತಿ ಎಷ್ಟು?  ನಮ್ಮ ಪಕ್ಕದ ದೇಶಗಳಲ್ಲಿ ನೂರಾರು ಜನ ಅಮಾಯಕರು ಸತ್ತಾಗ ಇದೇ ವಿದ್ಯಾರ್ಥಿಗಳ ತಿಳುವಳಿಕೆಗೆ ಅದು ನಿಲುಕದ ವಿಷಯವಾಗಿರುವುದೇಕೆ?  ಕಮ್ಯೂನಿಸಮ್‌ನ ತತ್ವಗಳೇನು? ಹಾಗೂ ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರವೇನು ಎಂಬುದನ್ನು ಯೋಚಿಸಲಾರದಷ್ಟು ಈ ವಿದ್ಯಾರ್ಥಿಗಳು ಶೂನ್ಯರಾದರೇಕೆ?
ಈ ವಿದ್ಯಾರ್ಥಿಗಳು ಅನವಶ್ಯಕವಾಗಿ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವಾಗ ನನಗೆ ಬೇಸರವಾಗುವ ಒಂದು ಸಂಗತಿ ಎಂದರೆ ನಮ್ಮ ದೇಶದಲ್ಲೇ ಅನೇಕ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿರುವಾಗ ಅವುಗಳನ್ನು ನಿರ್ಮೂಲನ ಮಾಡಲು ಈ ವಿದ್ಯಾರ್ಥಿಗಳು ಯಾಕೆ ಯೋಚಿಸಬಾರದು?  ವಿಜ್ಞಾನ, ತಂತ್ರಜ್ಞಾನ ಮುಂದುವರೆದು ಜಗತ್ತಿನ ಉಳಿದ ಯುವಜನತೆ ಅನೇಕ ಉನ್ನತ ಚಿಂತನೆ, ಧೋರಣೆಗಳಲ್ಲಿ ತೊಡಗಿದ್ದರೆ ನಮ್ಮ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಫಝಲ್ ಗುರುವಿನ ಹಿಂದೆ ಏಕೆ ಬಿದ್ದಿದ್ದಾರೆ?  ಇವರೇ ನಮ್ಮ ಮುಂದಿನ ನಾಗರೀಕರೆ? ಇವರೇ ನಮ್ಮ ಮುಂದಿನ   ಲೀಡರುಗಳೇ?

ಒಂದು ದೇಶದ ಸತ್ಯಾನಾಶ ಎಂದರೆ ಏನು? ಭಾರತವನ್ನು ಸಂಪೂರ್ಣ ಬುಡಮೇಲು ಮಾಡುವುದೇ? ಅಥವಾ ಅದನ್ನು ತುಂಡು ತುಂಡು ಮಾಡಿ ವಿಭಜನೆ ಮಾಡುವುದೇ?  ನಾವೆಲ್ಲ ಇಂದೂ ಸಹ ಬೇರೆ ಬೇರೆ ಪ್ರಾಂತ್ಯದವರೇ? ಅನೇಕ ಭಾಷೆ ಸಂಸ್ಕೃತಿ ವೈವಿಧ್ಯತೆಗಳ ಪ್ರತೀಕ ಭಾರತ, ಇಂಥ ಭೂಮಿಯಲ್ಲಿ ಅನೇಕ ವೈರುಧ್ಯಗಳೂ ಇರುವುದು ಸಹಜ.  ಆ ವೈರುಧ್ಯಗಳನ್ನು ನಾವು ವಿಚಾರವಾದಿಗಳಾಗಿ ಬಗೆಹರಿಸಿಕೊಳ್ಳುತ್ತೇವೆಯೋ ಅಥವಾ ಕಾನೂನು ಅಧಿಕಾರಗಳಿಂದ ಸಂಭ್ರಮಿಸಿಕೊಳ್ಳುತ್ತೇವೆಯೋ ಅನ್ನುವುದು ಮುಖ್ಯವಾಗುತ್ತದೆ.  ಇಂದಿನ ಮಾಧ್ಯಮಗಳು ದೂರದ ದೇಶಗಳಿಗೆ ಹರಡುತ್ತಿರುವ ಬಿಸಿಬಿಸಿ ಸುದ್ದಿ ಈ ವರೆಗೆ ನಮ್ಮ ದೇಶದ ವಿದ್ಯಾರ್ಥಿಗಳ ಬಗ್ಗೆ ಒಳ್ಳೆಯ ಮನೋಭಾವನೆಯನ್ನು ಮೂಡಿಸಲು ಸೋತಿವೆ ಎಂದು ಹೇಳಲು ಖೇದವಾಗುತ್ತದೆ.

ಒಟ್ಟಿನಲ್ಲಿ ಕಳೆದ ಇನ್ನೂರು ವರ್ಷಗಳ ಸತತ ಹೋರಾಟದ ಬಳಿಕ ದೊರೆತ ನಮ್ಮ ಆಜಾದಿ, ಸ್ವಾತಂತ್ರ್ಯಾ ನಂತರ ಕೇವಲ ಆರು ದಶಕಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ದೇಶದ ಬರಬಾದಿಯ ಕಡೆಗೆ ಯೋಚಿಸುವಂತೆ ಮಾಡಿದ್ದು ನಿಜವಾಗಿಯೂ ನಮ್ಮ ದುರ್ದೆಶೆ.

***
ಈ ಲೇಖನ ಈ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.
 

Saturday, April 12, 2014

... ಎನ್ನಾರೈ ಗಳು ಒಂಥರಾ ಸಪ್ಪೆ ನಾಯ್‌‍ಗಳು...

ಬಹಳ ದಿನಗಳ ನಂತರ ಫೋನ್‌ನಲ್ಲಿ ಮಾತಾಡಕ್ ಸಿಕ್ಕಿದ್ದು ನನ್ನ ಹಳೆಯ ಸ್ನೇಹಿತ ಸುಬ್ಬ.

"ಏನೋ, ಸಮಾಚಾರ? ಹ್ಯಾಗಿದೀಯಾ? ಏನ್ ಕಥೆ?" ಅಂತ ಲೋಕೋಭಿರಾಮವಾಗಿ ಕೇಳಿದೆ,

"ಏನಿಲ್ಲ, ಚೆನ್ನಾಗಿದ್ದೀನಿ, ಬೆಳೆ, ಕೊಯ್ಲು, ಎಲೆಕ್ಷನ್ನು ಅಂತೆಲ್ಲಾ ಸ್ವಲ್ಪ ಬ್ಯುಸಿ ಅಷ್ಟೇ...ನೀನ್ ಹೆಂಗಿದಿ? ಅದೆಷ್ಟು ದಿನಾ ಆಯ್ತ್ ಮಾರಾಯ ನಿನ್ ಹತ್ರ ಮಾತಾಡೀ, ಬಾಳಾ ಖುಷಿ ಆಯ್ತು ನೋಡ್"

"ನಮಿಗೇನ್ ಆಗತ್ತೆ, ನಾವೆಲ್ಲಾ ಚೆನ್ನಾಗೇ ಇದ್ದೀವಿ, ಆರಕ್ಕೇರಲ್ಲ ಮೂರಕ್ಕಿಳಿಯಲ್ಲ" ಅಂದೆ.

"ಹೌದು, ಅದೇನೋ ಮಾರ್ಕೆಟ್ಟುಗಳು ಬೀಳ್ತಾ ಇದಾವೇ ಅಂತ ಕೇಳ್ದೆ, ಏನ್ ನಡೀತಾ ಇದೆ?" ಎಂದು ಕಾಳಜಿ ತೋರಿಸಿದ.

"ಅದೇನಿಲ್ಲ, ಲಾಸ್ಟ್ ಈಯರ್ ಮಾರ್ಕೆಟ್ಟುಗಳೆಲ್ಲ ಮೇಲ್ ಹೋಯ್ತಲ್ಲಾ, ಈ ವರ್ಷ ಒಂದಲ್ಲಾ ಒಂದು ಕಾರ್ಣ ಹಿಡಕೊಂಡು ಅವಕಾಶ ಸಿಕ್ಕಾಗೆಲ್ಲ ಕೆಳಗಡೆ ಬೀಳ್ತಾನೇ ಇವೆ. ಒಂದ್ಸರ್ತಿ ಚೈನಾದಲ್ಲಿ ಪ್ರಾಬ್ಲಮ್ಮು ಅಂತ ಬಿತ್ತು, ಇನ್ನೊಂದ್ಸರ್ತಿ ಎಮರ್ಜಿಂಗ್ ಮಾರ್ಕೇಟ್ಟಲ್ಲಿ ಪ್ರಾಬ್ಲಂ ಅಂತ ಬಿತ್ತು, ಮತ್ತೊಂದ್ ಸರ್ತಿ ರಷ್ಯಾದ ಪೂಟಿನ್ನ್ ದೆಸೆಯಿಂದ ಬಿತ್ತು...ಇನ್ನೂ ವರ್ಷ ಶುರುವಾಗಿ ಮೂರು ತಿಂಗಳು ಮುಗ್ದು ನಾಕಕ್ಕೆ ಬಿತ್ತು - ಆಗ್ಲೆ ನಾಕ್ ಸರ್ತಿ ಮಗುಚಿಕೊಂತು ನೋಡು..." ಎಂದು ಸಿಎನ್‌ಬಿಸಿ ಡಾಮಿನಿಕ್ ಚು ಥರ ನನ್ನ ಸ್ಟಾಕ್ ಮಾರ್ಕೆಟ್ ತತ್ವವನ್ನು ಅರುಹಿದೆ.

ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, "ಅಲ್ಲಾ ಮಾರಾಯಾ, ಆ ಪುಟಿನ್ ನೋಡು, ಹೆಂಗ್ ಗೆದ್ಕೋಂಬಿಟ್ಟಾ, ಕ್ರಿಮಿಯಾ ಅಂತಾ ಅಲ್ಲಿಗೇ ನಿಲ್ಲುಸ್ತಾನೋ, ಅಥವಾ ಇನ್ನೂ ತನ್ನದೇ ದೊಡ್ಡು ಅಂತ ಮಂತ ಶುರು ಹಚ್ಗೊಂತಾನೋ?"
"ಅವ್ನು ಏನ್ ಮಾಡ್ತಾನೋ ಕಾಣೇ, ಆದ್ರೆ ನಮ್ ಕಡೆಯವ್ರು ಸ್ಯಾಂಕ್ಷನ್ನು, ಗೀಂಕ್ಷನ್ನು ಅಂತ ಫೋರ್ಸ್ ಹಾಕ್ತಾನೇ ಅವ್ರೆ" ಅನ್ನೋಷ್ಟರಲ್ಲಿ,

"ಏ ಸುಮ್ನಿರೋ, ನಿಮ್ ಸ್ಯಾಂಕ್ಷನ್ನುಗಳ ಮುಖಾ ನೋಡ್ಕೊಂಡು ಅದುಮಿಕ್ಯಂಡ್ ಇರೋಕೇ ಅವ್ನೇನು ಸದ್ದಾಮ್ ಹುಸೇನ್ ಕೆಟ್ಟೋದ್ನೇ? ಒಂದ್ಸರ್ತಿ ಕಮ್ಯುನಿಷ್ಟ್ ಆದ್ರೇ ಯಾವಾಗ್ಲೂ ಕಮ್ಮುನಿಷ್ಟೇ ತಿಳಕಾ" ಎಂದು ಅವನ ಪ್ರಪಂಚದ ಇತಿಹಾಸದ ಪ್ರಹಸನವನ್ನು ನಿವೇದಿಸಿದ.

ಇನ್ನು ಇವನ ಹತ್ರ ರಷ್ಯದ ವಿಚಾರ ಮಾತಾಡ್ಬಾರ್ದು ಅಂದುಕೊಂಡು, ನಿಧಾನವಾಗಿ ಟಾಪಿಕ್ ಬದಲಾಯಿಸಿದೆ, "ಹೌದು, ಅಡಿಕೆ ಬೆಳೆ ಬಂಪರ್ ಬಂದಿದೆ ಅಂತ ಕೇಳ್ದೆ, ಹೆಂಗಿದೆ ವ್ಯವಹಾರ?"

"ಕೆಂಪ್ ಅಡಿಕೆಗೆ ಸ್ವಲ್ಪ ಬೆಲೆ ಬಂದ್ ನಾವ್ ಬಚಾವಾದ್ವಿ, ಇಲ್ಲಾಂದ್ರೆ ಈ ವರ್ಷ ಬಾಳ ಕಷ್ಟ ಇತ್ತು. ಎಲ್ಲ ಕಡೆ ಬೆಲೆ ಜಾಸ್ತಿ, ದುಡ್ಡೀಗ್ ಬೆಲೇನೇ ಇಲ್ಲ, ಹೆಂಗ್ ನಮ್ ಜೀವ್ನ ನಡೀತಾ ಇದೆ ಅಂತ ಬಿಡಿಸಿ ಹೇಳೋದೇ ಕಷ್ಟಾ"

"ಬರೀ ಕೃಷಿ ಅಂತ ನಂಬ್ಕೊಳ್ಳೋದ್ ಬಿಟ್ಟು, ನೀನು ಒಂದಿಷ್ಟು ಎಲೆಕ್ಷನ್ನ್ ಟೈಮಲ್ಲಿ ಕಾಸ್ ಮಾಡ್ಕೊಳ್ಳೋದಪ್ಪಾ"

"ಏ ಸುಮ್ನಿರೋ ಮಾರಾಯಾ, ಇವರು ಕೊಡೋ ಎಂಜಲು ಕಾಸಿಗೆ ನಾವ್ ಕೈ ಚೆಲ್ಲಿಕೊಂಡು ಕೂತ್ರೆ ತೋಟದ ಕೆಲ್ಸಾ ಎಲ್ಲಾ ಮಠ ಹತ್ತ್ ಹೋಗುತ್ತೆ, ಅದರ ಸವಾಸ ಅಲ್ಲ..."


"ಏ ಯಾಕೋ ಹಂಗಂತಿ? ನಾನು ಎಲೆಕ್ಷನ್ನ್ ಕಮೀಷನ್ನ್ ವೆಬ್ ಸೈಟ್ ನೋಡಿದ್ನಪ್ಪಾ, ಒಂದೊಂದು ಕ್ಯಾಂಡಿಡೇಟ್‌ಗಳು ಫೈಲ್ ಮಾಡಿರೋ ಅಫಿಡೇವಿಟ್ಟ್ ನೋಡಿದ್ರೆ, ಎಲ್ಲೆಲ್ಲೂ ಕೋಟಿ ಕೋಟೀ, ಎಲ್ಲಿಂದ ಬಂತೋ ಇವುಗಳ್ ಹತ್ರ ಇಷ್ಟೊಂದು? ಒಬ್ಬೊಬ್ರ ಹತ್ರ ನೂರು, ಸಾವಿರ ಕೋಟಿ..." ಎಂದು ನಿಜವಾಗಿ ಆಶ್ಚರ್ಯ ವ್ಯಕ್ತಪಡಿಸಿದೆ.

"ಅದೇ ನಿಜವಾದ ಮರ್ಮ ನೋಡು. ಎಷ್ಟೋ ಜನ ನೆಟ್ಟಗೆ ಹೈಸ್ಕೂಲೂ ಪಾಸಾಗಿರಂಗಿಲ್ಲ, ಲೆಕ್ಕಕ್ಕೆ ತೋರಿಸಿರೋದೆ ಕೋಟಿಗಟ್ಟಲೆ ಅಂದ್ರೆ ಇನ್ನು ಒಳಗೆಷ್ಟು ಇಟ್ಟಿರಬಹುದು?"

"ಹಂಗಂದ್ರೆ ಇವುಗಳ ಮುಂದೆ ನಮ್ಮ ವಾರನ್ನ್ ಬಫೆಟ್ಟು, ಬಿಲ್ ಗೇಟ್ಸ್ ಇವ್ರೆಲ್ಲ ಲೆಕ್ಕಕ್ಕೇ ಇಲ್ಲ..." ಅಂತ ಲೇವಡಿ ಮಾಡಿದೆ, ಅವನು ಅದನ್ನು ನಿಜ ಅಂದುಕೊಂಡು,

"ಮತ್ತಿನ್ನೇನು, ಆ ಫೋರ್ಬ್ಸು, ಫಾರ್ಚೂನ್ ನವರಿಗೆಲ್ಲ ಇಂಡಿಯಾದ್ ಬಗ್ಗೆ ಒಂದು ವರದಿ ಮಾಡೋಕ್ ಹೇಳು, ನಮ್ಮಲ್ಲಿ ನಿಜವಾಗಿ ಎಷ್ಟು ದುಡ್ಡಿದೇ ಅಂತ ಗೊತ್ತಾಗುತ್ತೆ?"

"ಹಾಗಾದ್ರೆ, ನಮ್ ಅಮೇರಿಕದ ಬಿಲಿಯನ್ನುಗಳೆಲ್ಲ ಲೆಕ್ಕಕ್ಕೇ ಇಲ್ಲ ಅನ್ನು?" ಎಂದು ಮೂದಲಿಸಿದ್ದಕ್ಕೆ...

"ಗುರುವೇ, ನಿನಗೇನ್ ಗೊತ್ತಿದೆ ಹೇಳು, ಒಂಥರ ಇನ್ನೂ ಹೈಸ್ಕೂಲ್ ಹುಡುಗನಂಗೆ ಮಾತಾಡ್ತಿ ನೋಡು. ಕಳೆದ ವರ್ಷ ನಿನ್ನ ಅಮೇರಿಕದ ಇಂಡೆಕ್ಸ್‌ಗಳು ಅಬ್ಬಬ್ಬ ಅಂದ್ರೆ ಎಷ್ಟು ಪರ್ಸೆಂಟ್ ಮೇಲಕ್ಕ್ ಹೋದ್ವು ಹೇಳೂ, ಇಪ್ಪತ್ತೋ ಮೂವತ್ತೋ ಪರ್ಸೆಂಟ್ ತಾನೆ? ಕಳೆದ ಐದು ವರ್ಷದಲ್ಲಿ ಮಾರ್ಕೆಟ್ಟು ಕೆಳಗ್ ಬಿದ್ದದ್ದು ಡಬ್ಬಲ್ಲೋ ತ್ರಿಬ್ಬಲ್ಲೋ ಆಯ್ತಲ್ಲಾ? ಅದೇ ದೊಡ್ದು ತಾನೆ? ಹುಚ್ಚಪ್ಪಾ, ಕೇಳು...2009 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರ್‌ಗಳನ್ನ 2014 ರಲ್ಲಿ ಹಾಕಿರೋ ಎಲೆಕ್ಷನ್ನ್ ಪೇಪರುಗಳಿಗೆ ಕಂಪೇರ್ ಮಾಡಿ ನೋಡು. ನಮ್ಮ ದೇಶದ ಒಬ್ಬೊಬ್ಬ ರಾಜಕೀಯ ನಾಯಕನ ಪರ್ಸನಲ್ಲ್ ಸ್ವತ್ತು ಅದೆಷ್ಟು ಸಾವಿರ ಪರ್ಸೆಂಟ್ ಬೆಳೆದಿದೆ ಅಂತ? ಒಂದ್ ಕೆಲ್ಸಿಲ್ಲ, ಉದ್ಯಮಾ ಇಲ್ಲಾ, ಹೇಳಿ-ಕೇಳಿ ಸಮಾಜ ಸೇವೆ ರಾಜಕೀಯದ ಕೆಲ್ಸ, ಎಲ್ಲಿ ನೋಡಿದ್ರೂ ಇನ್‌ಫ್ಲೇಷನ್ನ್ ಜಾಸ್ತಿ ಅಗಿರೋ ಹೊತ್ನಲ್ಲಿ ಅದ್‍ ಹೆಂಗೆ ಐದು ವರ್ಷದ ಹಿಂದೆ ಹತ್ತು ಕೋಟಿ ಡಿಕ್ಲೇರ್ ಮಾಡ್ದೋನು ಈ ಸರ್ತಿ ನೂರು ಕೋಟಿ ಡಿಕ್ಲೇರ್ ಮಾಡ್ತಾನೆ? ಅದನ್ನ್ ಯಾವ್ ಇಂಡೆಕ್ಸಿಗೆ ಹೋಲಿಸ್ತಿ?"

"ಹೌದೋ ಸುಬ್ಬಾ ಎಲ್ಲಿಂದ ಬರುತ್ತೆ ದುಡ್ಡು ಇವ್ರಿಗೆ? ಕೆಲವ್ರದ್ದಂತೂ 760, 800 ಕೋಟಿಗಳಷ್ಟು ಒಟ್ಟು ಮೊತ್ತ ಅಂತಲ್ಲಪ್ಪಾ?"

"ಏಳ್ನೂರು ಕೋಟಿ ಬಾಳಾ ಕಡಿಮೆ ಆಯ್ತು, ಇನ್ನೂ ಸಾವ್ರ ಸಾವ್ರ ಕೋಟಿಗಟ್ಟಲೇ ಇದ್ದೋರು ಇದಾರೆ, ತಿಳ್ಕಾ"

"ಮತ್ತೆ ಇವ್ರ ಹತ್ರ ಇಷ್ಟೊಂದು ದುಡ್ಡು ಇರೋರ್, ರಾಜಕೀಯಾನಾದ್ರೂ ಯಾಕ್ ಮಾಡ್ತಾರೆ, ಸುಮ್ನೆ ತಾವ್ ತಮ್ದು ಅಂತ ಇರಬಾರ್ದಾ?"

"ಅದೇ ವಿಶೇಷ ನೋಡು, ಅದು ನಿಮ್ಮಂತೋರಿಗೆ ಅರ್ಥ ಆಗಲ್ಲ, ಯಾರು ರಾಜಕೀಯಕ್ಕ್ ಬರ್ತಾರೆ ಅಂತ ತಿಳಕಂಡೀ? ದುಡ್ಡ್ ಇಲ್ದೋನ್ ದುಡ್ಡು ಮಾಡೋಕ್ ಬರ್ತಾನೆ, ದುಡ್ಡ್ ಮಾಡ್ದೋನ್ ಅದನ್ನ ಉಳಸ್ ಕೊಳೋಕ್ ಬರ್ತಾನೆ".

"ಅಲ್ಲಾ ಮಾರಾಯಾ, ನಾವ್ ಸುಮ್ನೇ ಊರೂ-ಕೇರೀ, ದೇಶ-ಮನೆ ಬಿಟ್ಟು ಅದನ್ನ ಇದನ್ನ ಓದಿ, ಇತ್ಲಾ ಕಡೇ ಬಂದಿದ್ದೆಲ್ಲಾ ವೇಷ್ಟ್ ಆಯ್ತು ಅನ್ನು, ಸುಮ್ನೇ ಯಾವ್ದಾರ ಪಾರ್ಟಿ ಪಕ್ಷದ ಹೆಸ್ರು ಹಿಡಕೊಂಡ್ ಒಂದಿಪ್ಪತ್ತ್ ವರ್ಷ ಓಡಾಡಿದ್ರೆ ನಾವೂ ಕೋಟಿ-ಕೋಟಿ ಎಣಿಸ್ಬೋದಿತ್ತು..." ಈ ಮಾತಿನಿಂದ ಸುಬ್ಬನಿಗೆ ಸ್ವಲ್ಪ ಸಿಟ್ಟು ಬಂತು ಅಂತ ಅನ್ಸುತ್ತೆ, ನನ್ನ ಮಾತಿನ್ನ ಮಧ್ಯೆ ಹೀಗನ್ನೋದೇ,

"ಅವಾಗ ಇದು ಎಲ್ಲಿಗೆ ಬರುತ್ತೆ ಗೊತ್ತೇನೋ? ನಿನ್ನಂಥಾ ಎನ್ನಾರೈಗಳು ಒಂಥರಾ ಸಪ್ಪೆ ನಾಯ್‌ಗಳು ಇದ್ದಂಗೆ, ಇತ್ಲಾಗ್ ಬೊಗೊಳೋದೂ ಇಲ್ಲ, ಅತ್ಲಾಗ್ ಕಚ್ಚೋದೂ ಇಲ್ಲ. ನಾಯಿ ಅಂದ್ರೆ ನಾಯಿ ಇದ್ದ ಹಾಗೆ ಇರ್‌ಬಕು, ಇವೆಲ್ಲ ನಮಿಗ್ ಬ್ಯಾಡಾ ಅಂತ ಬಿಟ್ಟ್ ವಿರಾಗಿಗಳಾಗ್ ಹೋದ್‌ಮೇಲೆ ಅವಾಗವಾಗ ಇಂಥಾ ಚಿಂತಿ ಯಾಕ್ ಹಚ್‌ಗಂತೀರ್ ಹೇಳು? ಅದರಿಂದ ಏನ್ ಉದ್ದಾರಾಗಿದೆ? ಒಂದ್ಸರ್ತಿ ಮೂಡ್ ಬಂದಾಗ ದುಡ್ಡೇನು ಸರ್ವಸ್ವ ಅಲ್ಲಾ ಅಂತಾ ಬಾಷ್ಣಾ ಬಿಗೀತಿ, ಈಗ ಇಲೆಕ್ಷನ್ನ್ ಅಂಕಿ-ಅಂಶ ನೋಡ್ಕೊಂಡು ದುಡ್ಡೇ ದುಡ್ಡೂ ಅಂತೀ, ನಿನಗೂ ಈ ರಾಜಕಾರ್ಣಿಗಳಿಗೂ ಏನರ ವ್ಯತ್ಯಾಸ ಐತಾ?" ಎಂದು ಎಲೆ-ಅಡಿಕೆ ಹಾಕ್ಕೊಂಡು ಚೆನ್ನಾಗ್ ಉಗದಾ... ಆದ್ರೆ ನಾನು ಬಿಟ್ಟು ಕೊಡ್ಲಿಲ್ಲಾ,

"ನಿಮ್ದು ದೊಡ್ಡ ವ್ಯಾಪಾರೀ ಮನೋಭಾವ್ನೆ ದೇಶ, ನಿನ್ನಂಥೋರ್ ಹತ್ರ ತಪ್ಪೂ-ಸರಿ ಅಂತ ಏನ್ ಮಾತಾಡೋದ್ ಹೇಳು? ಭ್ರಷ್ಟಾಚಾರ ವ್ಯವಸ್ಥೆನಲ್ಲಿ ಪ್ರತಿ ಓಟಿಗೆ ಎರಡೆರಡು ಸಾವ್ರ ಅಂತ ಮಾರ್ಕೋಳ್ಳೋರು ನೀವು" ಅಂತ ನಾನು ಧ್ವನಿ ಜೋರು ಮಾಡಿದೆ,

’ನೋಡು, ಸುಖಾ ಸುಮ್ನೇ ಅನ್ನಬ್ಯಾಡ. ಭ್ರಷ್ಟಾಚಾರ ವ್ಯವಸ್ಥೇ ಎಲ್ಲಾ ಕಡೆ ಇದೆ, ನಿಮ್ಮಲ್ಲಿ ನಾಜೂಕಾಗಿ ಸಗಣೀನ ಫೋರ್ಕ್ ತೊಗೊಂಡ್ ತಿಂತೀರಿ, ಆ ಚೈನಾದವ್ರು ಚಾಪ್ ಸ್ಟಿಕ್ಕ್‌ನಲ್ಲಿ ತಿಂತಾರೆ, ಮತ್ತೊಂದ್ ಕಡೆ ಚಮಚಾದಲ್ಲಿ ತಿಂತಾರೆ, ಆದ್ರೆ ನಮ್ ಕಡೆ ಅವಕಾಶ ಸಿಕ್ಕಾಗ ನೀಟಾಗಿ ಕೈ ಹಾಕಿ ಕಲಸಿಗೊಂಡು ತಿಂತಾರೆ. ಅಲ್ಟಿಮೇಟ್ಲಿ ಅಂತಾ ಏನ್ ವ್ಯತ್ಯಾಸ ಇಲ್ಲ, ಎಲ್ಲಾ ಒಂದೇ"

"ಏನ್ ಅಂತ ಮಾತಾಡ್ತಿಯೋ, ಏನೇ ಆದ್ರೂ ಅಮೇರಿಕದ ಜನ ನಿಮ್ ಥರ ದುಡ್ಡಿಗ್ ಓಟ್ ಹಾಕೋದಿಲ್ಲ, ತಿಳಕಾ..."

"ನೀ ಏನ್ ಮಾತಾಡ್ತಿದಿಯೋ, ಇಷ್ಟು ವರ್ಷ ಅಲ್ಲಿದೀ, ಇಷ್ಟೋ ಗೊತ್ತಾಗಂಗಿಲ್ಲ ಅಂದ್ರೆ ಹೆಂಗೆ? ಗುರುವೇ ಎಲೆಕ್ಷನ್ನ್ ಕ್ಯಾಂಫೇನ್ ಫಂಡು ಅಂಥ ಕಾರ್ಪೋರೇಷನ್ನುಗಳು ಪಕ್ಷಕ್ಕೆ ಕೊಡೋ ದುಡ್ಡೂ ಎಲ್ಲಿಂದ ಬರುತ್ತೆ ಎಲ್ಲೀಗ್ ಹೋಗುತ್ತೆ?"

"ಅದು ಲೀಗಲೈಜ್ಡ್ ವ್ಯವಸ್ಥೆ ಅಲ್ವಾ..."

"ನಿನ್ ತಲೆ, ಲೀಗಲ್ಲು... ನಾವು ನಿಮ್ಮನ್ನ ಸಪೋರ್ಟ್ ಮಾಡ್ತೀವಿ ಅಂತ ಪಾರ್ಟಿಗಳಿಗೆ ದೇಣಿಗೆ ಕೋಡೋದರಲ್ಲಿ ಕಂಪನಿಗಳ ಸ್ವ ಇಚ್ಚೆ ಸ್ವಾರ್ಥ ಒಂದಿಷ್ಟೂ ಇಲ್ಲಾ ಅಂದ್ರೆ ಅವರ್ಯಾಕೆ ಕೊಡ್ತಾರೆ?"

"ಅದು ಕಂಪನಿಗಳ ಲೆಕ್ಕ, ನಮ್ಮ ಜನಸಾಮಾನ್ಯರದ್ದೇನು ಅದ್ರಲ್ಲಿ ಪಾತ್ರ ಇಲ್ಲ"

"ಥೂ ನಿನ್ನ, ಅದೇ ತಪ್ಪು, ನೀನು ಕಂಪನೀನಲ್ಲಿ ಇನ್ವೆಷ್ಟ್ ಮಾಡ್ದಿ ಅಂದ್ರೆ, ಅದ್ರಲ್ಲಿ ನೀನೂ ಶಾಮೀಲೂ ಅಂತ ತಾನೇ ಅರ್ಥ. ನಿನಗೆ ಬೇಕೋ ಬೇಡ್ವೋ ನೀನಿರೋ ವ್ಯವಸ್ಥೆ ನಿನ್ ಸುತ್ಲೂ ಸುತ್ತ್ ಕೊಳ್ಳೋದೇ ಮಾಡರ್ನ್ ಸೋಷಿಯಲ್ಲಿಸ್ಸಮ್ಮು ನೋಡು, ಒಂಥರಾ ಡೊಕೋಮೋ ಅಂಥ ನೆಟ್‌ವರ್ಕ್ ಕರೀತಾನೇ ಇರುತ್ತೆ ಎಲ್ಲ್ ಹೋದ್ರೂ ಬಿಡಂಗಿಲ್ಲ" ಎಂದು "ಡೊಕೋಮೋ..." ಅಡ್ವರ್ಟೈಸ್‌ಮೆಂಟ್ ಇಮಿಟೇಟ್ ಮಾಡಿ ಜೋರಾಗಿ ನಕ್ಕ.

"ಹಂಗಂದ್ರೆ ಎಲೆಕ್ಷನ್ನು ಅಂದ್ರೆ ಬರೀ ರೊಕ್ಕ ಇರೋರ್ ಆಟ ಅನ್ನು, ಇನ್ನು ಸಾಮಾನ್ಯರ ಪಾಲು ನಾಯಿ ಪಾಲು ?"

"ಇದು ಹೆಂಗೆ ಗೊತ್ತಾ, ಇದು ಬೈ ಡೆಫನಿಷನ್ ಯಾರು ಬೇಕಾದ್ರೂ ಭಾಗವಹಿಸೋ ಪ್ರಜಾಪ್ರಭುತ್ವ ವ್ಯವಸ್ಥೇನೇ, ಆದ್ರೆ ದುಡ್ಡಿರೋರು ದೊಡ್ಡಪ್ಪ ಅಷ್ಟೇ. ಒಂಥರಾ ಈ-ಟಿವಿ ಡ್ಯಾನ್ಸ್ ಪ್ರೋಗ್ರಾಂ ತಕಧಿಮಿತ ಬರುತ್ತಲ್ಲ ಹಂಗೆ, ಅವರ ಸ್ಲೋಗನ್ನ್ ಏನ್ ಹೇಳು? ’ಯಾರು ಬೇಕಾದ್ರು ಕುಣೀಬೋದು’ - ಆದ್ರೆ ನಾವು ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕೊಡ್ತೀವಿ ಅಂತ ಹಂಗೆ.

"ಸರಿ ಬಿಡು, ಇನ್ನೇನು ಎಲೆಕ್ಷನ್ನು ಮುಗಿಯುತ್ತೇ, ಅಮೇಲೇ ಕುದುರೆ ವ್ಯಾಪಾರ ಶುರು, ಒಬ್ಬೊಬ್ಬ ಎಮ್ಮೆಲ್ಲೆಗಳನ್ನ ಎಂಪಿಗಳನ್ನ ಕೊಡೊ-ಕೊಳ್ಳೋ ಆಟ ನಡೆಯುತ್ತೇ" ಅಂದೆ,

"ಈ ಎಮ್ಮೆಲ್ಲೆಗಳನ್ನ ಹೆಂಗೆ ಕೊಳ್ತಾರೆ ಅನ್ನೋದಕ್ಕೆ ತೆಲುಗಿನಲ್ಲಿ ಲೀಡರ್ ಅಂತ ಒಂದು ಸಿನಿಮಾ ಇದೆ ನೋಡು, ಅದ್ರಲ್ಲಿ ಒಂದು ಫ್ಯಾಟ್ ಕೀ ಕೊಟ್ಟು ಅದ್ರಲ್ಲಿರೋ ಎಲ್ಲಾ ಬೀರು ಅಲ್ಮೇರಾಗಳಲ್ಲಿ ನೋಟುಗಳನ್ನ ತುಂಬಿ ಇಟ್ಟಿರ್ತಾರೆ, ಅಂತದನ್ನ ಬ್ಯಾಡ ಅನ್ನೋದಕ್ಕೆ ಬಾಳಾ ಗಟ್ಟಿ ಎದೆ ಬೇಕು, ಸೋ ಐ ಡೋಂಟ್ ಬ್ಲೇಮ್ ದೆಮ್"

"ಸರಿ, ಟೈಮ್ ಆಯ್ತು...ಈ ಎಲೆಕ್ಷನ್ನಲ್ಲಿ ನಿನ್ ಪ್ರಿಡಿಕ್ಷನ್ನ್ ಏನು, ಕರ್ನಾಟಕದಲ್ಲಿ ಯಾರ್ ಬರ್ತಾರೆ, ದೇಶದ ಚುಕ್ಕಾಣೀ ಯಾರ್ ಹಿಡೀತಾರೆ?"


"ನನ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಕಷ್ಟ, ಗಣಿ ದೊರೆಗಳ ಸವಾಸದಿಂದ ಬಾಳ ಗಬ್ಬಿಟ್ಟ್ ಹೋಗವ್ರೆ ನಮ್ ನಾಯಕ್ರು. ಅಲ್ದೇ ಆಳೋ ಪಕ್ಷದ ಪರವಾಗಿ ಕಾಂಗ್ರೆಸ್ ಮೆಜಾರಿಟಿ ಬರ್ಬೋದು. ಆದ್ರೆ ದೇಶದಲ್ಲಿ ಸ್ವಲ್ಪ ಮೋದಿ ಅಲೆ ನಡೀತಾ ಇದೆ. ಏನಾಗತ್ತೋ ಗೊತ್ತಿಲ್ಲ"

"ಮತ್ತೇ, ಆಪೂ... ಪಾಪೂ, ಇವೆಲ್ಲ?"

"ಏ, ತೆಗಿ ತೆಗಿ, ಆಪ್ ಬರ್ಬೇಕು ಅಂದ್ರೆ, ಇನ್ನೊಂದು ಇಪ್ಪತ್ತೈದು ವರ್ಷಾನಾದ್ರೂ ಬೇಕು, ಒಬ್ಬ ಕಪಾಳ ಮೋಕ್ಷದ ನಾಯಕನಿಂದ ಇಡೀ ದೇಶದ ರಾಜ್‌ಕಾರ್ಣ ಬದಲಾಗೋಕ್ಕೆ ಸಾಧ್ಯವೇ?"

"ಯಾಕ್ ಆಗ್‌ಬಾರ್ದು?"

"ಅದೇ ನಿಂಗೊತ್ತಾಗೋಲ್ಲ ಅನ್ನೋದು. ದುಡ್ಡಿಗೆ ಓಟ್ ಮಾರ್ಕೊಳ್ಳೋ ಜನರಲ್ಲಿ ಒಂಥರ ಎನ್‌ಟೈಟಲ್ಲ್‌ಮೆಂಟ್ ಬರುತ್ತೆ. ಅದ್ಕೇ ನಮ್ ಜನ ಗಾದೆ ಮಾಡಿರೋದು - ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡಾ - ಅಂತ" ಎಂದು ದೊಡ್ಡದಾಗಿ ನಕ್ಕ.

"ಮತ್ತೇನಪ್ಪಾ ಸಮಾಚಾರ..."

"ಮತ್ತೇನಿಲ್ಲ ಗುರುವೇ, ಅಯ್ಯೋ ಅಡಿಕೇ ಮಂಡಿಗ್ ಹೋಗ್ಬೇಕು, ನಿನ್ ಹತ್ರ ಮಾತಾಡಿ ಹೊತ್ ಹೋಗಿದ್ದೇ ಗೊತ್ತಾಗಿಲ್ಲ, ಅವಾಗವಾಗ ಫೋನ್ ಮಾಡ್ತಾ ಇರು" ಎಂದು ನನ್ನ ಉತ್ತರಕ್ಕೂ ಕಾಯ್ದೆ ಫೋನ್ ಇಟ್ಟೇಬಿಟ್ಟ...ನಾನು ಒಂಥರಾ ಟಿ.ವಿ. ನೈನ್ ಬ್ರೇಕಿಂಗ್ ನ್ಯೂಸ್ ನೋಡಿದ ಶಾಕ್‌ನಲ್ಲಿ ಆಫೀಸಿನ ಕೆಲಸಕ್ಕೆ ತಿರುಗಿದೆ.