Friday, May 08, 2020

ಕೊರೋನಾಗೂ ಮತ್ತು ಊಟ-ತಿಂಡಿಗೂ ಎತ್ತಣ ಸಂಬಂಧ?

ಊಟ-ತಿಂಡಿಯ ವಿಷಯವನ್ನು ಎಂದೂ ಲಘುವಾಗಿ ತೆಗೆದುಕೊಳ್ಳಲೇ ಬಾರದು ಎನ್ನುವುದು ಈ ಹೊತ್ತಿನ ತತ್ವ.  ಈ ಕೋವಿಡ್ ದೆಸೆಯಿಂದ ಸಮಯಕ್ಕೆ ಸರಿಯಾಗಿ ದಿನಕ್ಕೆ ಮೂರು ಹೊತ್ತು ಮನೆಯ ಪಾಕವೇ ಗತಿಯಾದ್ದರಿಂದ ಎಲ್ಲರಂತೆ ನಾನೂ ಸಹ ಕುಕಿಂಗ್ ಶೋ, ರೆಸಿಪಿಗಳನ್ನು ಹುಡುಕಿಕೊಂಡು ಹೋಗಿರುವುದು ಇತ್ತೀಚಿನ ಬೆಳವಣೆಗೆಗಳಲ್ಲೊಂದು!  ಮೊದಲೆಲ್ಲವಾದರೆ, ಮಧ್ಯಾಹ್ನದ ಊಟಕ್ಕೆ ಸಾಕಾಗುವಷ್ಟು ಬೆಳಿಗ್ಗೆಯೇ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗಿ, ಆಫೀಸಿನ ಕೆಲಸದ ಮಧ್ಯೆ ಮೈಕ್ರೋವೇವ್ ಅವನ್‌ನಲ್ಲಿ ಬಿಸಿಮಾಡಿಕೊಂಡು ತಿಂದ ಹಾಗೆ ಶಾಸ್ತ್ರ ಮಾಡುವುದನ್ನು ಊಟವೆಂದು ಕರೆಯುತ್ತಿದ್ದೆವು.  ಕೊರೋನಾ ವೈರಸ್ಸಿನ ಸಹಾಯದಿಂದಾಗಿ ನಾವು ಈಗ ಮನೆಯಲ್ಲೇ ಬಿಸಿಬಿಸಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೀತಿಯಲ್ಲಿ "ಸಾತ್ವಿಕ"ವಾಗಿ ಆಹಾರವನ್ನು ಸವಿದು ಸೇವಿಸುತ್ತಿದ್ದೇವೆಂದರೆ ಅತಿಶಯೋಕ್ತಿಯೇನಲ್ಲ!

***
ಅಮೇರಿಕಕ್ಕೆ ಬಂದು ಎರಡು ದಶಕದ ಮೇಲಾದರೂ ಇವತ್ತಿಗೂ ನಾನು ಭಾರತದ ಅನುಕೂಲಗಳ ಪೈಕಿ ಅತ್ಯಂತ ಮಿಸ್ ಮಾಡಿಕೊಳ್ಳುವುದೆಂದರೆ ಹೊಟೆಲ್/ಖಾನಾವಳಿಯಲ್ಲಿ ದೊರೆಯುವ ಸಾಂಬಾರು, ಪಲ್ಯಗಳು, ಸರಿ ರಾತ್ರಿ ಎರಡು-ಮೂರು ಘಂಟೆಯವರೆಗೂ ಬಸ್‌ಸ್ಟ್ಯಾಂಡಿನ ಬದಿಯಲ್ಲಿ ಇಟ್ಟುಕೊಂಡ ಚಾ ಅಂಗಡಿಗಳು, ಯಾವತ್ತಿಗೂ ಎಲ್ಲೆಲ್ಲಿಯೂ ಸಿಗುವ ಇಡ್ಲಿ-ಚಟ್ಣಿಗಳು!  ನಾನು ವಿದ್ಯಾರ್ಥಿ ದೆಸೆಯಿಂದಲೇ (ಸುಮಾರು ಹದಿನೈದು ವರ್ಷ ವಯಸ್ಸಿನವಾಗಿದ್ದಾಗಿನಿಂದ) ಮನೆಯಿಂದ ಹೊರಗೆ ಉಳಿದವನಾಗಿದ್ದರಿಂದ ಈ ಹೊಟೇಲು-ಖಾನಾವಳಿಗಳಲ್ಲಿ ಎರಡು ರೂಪಾಯಿಗೆ ಕೊಡುತ್ತಿದ್ದ ಸಾಂಬಾರು-ಪಲ್ಯಗಳು ಎಷ್ಟೋ ಸಾರಿ ದಿನದ ಹಸಿವನ್ನ ತಣಿಸಿವೆ ಎನ್ನಬಹುದು.  ಅದೂ ಪರೀಕ್ಷೆ ಹತ್ತಿರ ಬರುತ್ತಿದ್ದ ಸಂದರ್ಭಗಳಲ್ಲಿ ನನ್ನ ರೂಮಿನಲ್ಲಿ ಒಂದಿಷ್ಟು ಅನ್ನ ಮಾಡಿಕೊಂಡು ಹತ್ತಿರದ ಹೊಟೇಲಿನಿಂದ ಸಾರು ತಂದು ಊಟ ಮಾಡಿದ ದಿನಗಳು ಎಷ್ಟೋ ಇವೆ. ಅಲ್ಲದೇ ರಾತ್ರಿಯ ಹೊತ್ತು ಓದಿ ಬೋರಾದರೆ ಸ್ನೇಹಿತರ ಜೊತೆಗೆ ಎಷ್ಟು ಹೊತ್ತಿಗೆ ಬೇಕಾದರೂ ಟೀ ಕುಡಿಯಲು ಕೈಗಾಡಿಗಳ ಬಳಿಗೆ ಹೋಗಬಹುದಿತ್ತು.

ಅಮೇರಿಕದಲ್ಲಿ ಊಬರ್ ಈಟ್ಸ್ ಇರಲಿ ಮತ್ತೊಂದು ಇರಲಿ, ಆಗ ಅಲ್ಲಿ ಸಿಗುತ್ತಿದ್ದ ಅನುಕೂಲಗಳನ್ನು ಮಾತ್ರ ಸೃಷ್ಟಿಸಲಾರವು.  ಒಂದು ರೀತಿಯಲ್ಲಿ ಇವತ್ತಿಗೂ ಭಾರತದಲ್ಲಿ ಈ ರೀತಿಯ ಸರ್ವಿಸುಗಳು ಇರಬಹುದೇನೋ.  ಆಗ ಜೇಬಿನಲ್ಲೆಲ್ಲಾ ಹತ್ತು ರೂಪಾಯಿ ಇದ್ದರೆ ಅದು ಬಹಳ "ದೂರ" ಬರುತ್ತಿತ್ತು... ಈಗಂತೂ ಹಣದುಬ್ಬರ ಹಣದ ಬೆಲೆಯನ್ನೇ ತಿಂದು ಹಾಕಿತಂತಾಗಿ, ನೂರು ರೂಪಾಯಿ ನೋಟಿನಲ್ಲಿ ಗಾಂಧೀ ಮುಖವೂ ಬಾಡಿದಂತಿದೆ.

***
ನಮ್ಮ ಭಾರತೀಯ ಆಹಾರ ಪದ್ಧತಿಯನ್ನು ಎಷ್ಟು ಕೊಂಡಾಡಿದರೂ ಸಾಲದು.  ಈ ಸಾಲನ್ನು ಬರೆಯಲು ನನಗೆ ಯಾವ ಅಥಾರಿಟಿಯೂ ಇಲ್ಲ, ಹಾಗೆ ಇರಬೇಕೆಂದೇನೂ ಇಲ್ಲ... ಶತಮಾನಗಳಿಂದ ನಮ್ಮ ಆಹಾರ ಪದ್ದತಿ ಬಹಳಷ್ಟು ಬೆಳೆದು ಬಂದಿದೆ.  ಈ ಕೊರೋನಾ ವೈರಸ್ ಸೃಷ್ಟಿಸಿದ ಒಂದು ತಾತ್ಕಾಲಿಕ ನಿರ್ವಾತವನ್ನು ಮುಚ್ಚಿಕೊಳ್ಳಲು ನಾವೆಲ್ಲ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವಂತೆ, ಇತ್ತೀಚೆಗೆ ನಾನು ನಡೆಸಿದ "ಸಾತ್ವಿಕ" ಆಹಾರದ ಬಗ್ಗೆ "ಸಂಶೋಧನೆ"ಯೂ ಒಂದು... ಅದರ ಬಗ್ಗೆ ಇನ್ನೊಮ್ಮೆ ಬರೆದರೆ ಆಗದೇ?!

ನಿಮಗೆ ಹೊತ್ತು ಹೊತ್ತಿಗೆ ಊಟ-ತಿಂಡಿಯ ಅಗತ್ಯವೇನು ಅದರ ಮಹತ್ವವೇನು ಎಂದು ತಿಳಿಯಲು ಹೆಚ್ಚಿನ ಅಧ್ಯಯನವನ್ನೇನೂ ಮಾಡಬೇಕಾಗಿಲ್ಲ... ಇಬ್ಬರು ಮಿಡ್ಲ್‌ಸ್ಕೂಲ್ ಮಕ್ಕಳನ್ನು ಮೂರು ತಿಂಗಳು ಮನೆಯಲ್ಲೇ ಇಟ್ಟುಕೊಂಡು ಸಮಯಕ್ಕೆ ಸರಿಯಾಗಿ ಊಟಕೊಟ್ಟು ಅವರನ್ನು ಸಾಕಿ ನೋಡಿ... ನಿಮಗೆ ಗೊತ್ತಿರದಂತೆ ನೀವೊಬ್ಬ ದೊಡ್ಡ ಎಕ್ಸ್‌ಪರ್ಟ್ ಆಗಿರುತ್ತೀರಿ!

No comments: