Sunday, September 30, 2007

ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಸವಾಲುಗಳೇ ಬೇರೆ...

ಇಷ್ಟು ದಿನ ಎಲ್ಲಿತ್ತೋ ಏನೋ ಈಗ ದಿಢೀರನೇ ಬಂದ ಸ್ನೇಹಿತನ ಹಾಗೆ ಸೆಪ್ಟೆಂಬರ್ ಕೊನೇ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ನಾವು ಮುಂಗಾರು ನಿರೀಕ್ಷಿಸೋ ಹಾಗೆ ಮುಂಬರುವ ಛಳಿಗಾಲವನ್ನು ನಿರೀಕ್ಷಿಸೋದು ಅಭ್ಯಾಸವಾಗಿ ಹೋಗಿಬಿಟ್ಟಿದೆ. ಕಳೆದ ವರ್ಷದ ಛಳಿ ಹಾಗಿತ್ತು ಹೀಗಿತ್ತು, ಇನ್ನು ಮುಂಬರುವ ಛಳಿ ಹೇಗಿರುತ್ತೋ ಏನೋ ಎಂಬುದು ಕೆಲವು ಮಾತುಕಥೆಗಳನ್ನು ಆರಂಭಗೊಳಿಸಬಲ್ಲ ವಾಕ್ಯವಾಗಬಹುದು.

ನಾನು ಈ ದೇಶಕ್ಕೆ ಬಂದ ಹೊಸತರಲ್ಲಿ ಮೊದಮೊದಲು ಆಫೀಸಿನ ಎಲಿವೇಟರುಗಳಲ್ಲಿ ಯಾರಾದರೂ What a nice day! ಅಥವಾ Its very nice outside! ಎಂದು ಉದ್ಗಾರವೆತ್ತಿದಾಗೆಲ್ಲ ’ಅಯ್ಯೋ, ಇವರೆಲ್ಲ ಬದುಕಿನಲ್ಲಿ ಬಿಸಿಲನ್ನೇ ನೋಡದವರ ಹಾಗೆ ಆಡುತ್ತಿದ್ದಾರಲ್ಲ!’ ಎಂದು ಸ್ವಗತವನ್ನಾಡಿಕೊಳ್ಳುತ್ತಿದ್ದೆ. ಆದರೆ ನಾನೂ ಈಗ ಅವರಂತೆಯೇ ಆಗಿ ಹೋಗಿದ್ದೇನೆ. ಚೆನ್ನಾಗಿ ಬಿಸಿಲು ಇದ್ದಾಗ ಅದೇನು ಮಾಡುತ್ತೇವೋ ಬಿಡುತ್ತೇವೋ ಆದರೆ ಕೆಟ್ಟ ಛಳಿ ಇದ್ದಾಗೆಲ್ಲ ರಜೆ ಇದ್ದರೂ ಇರದಿದ್ದರೂ ಗೂಡು ಸೇರಿಕೊಂಡು ಬಿಡೋದು ಕೊನೇಪಕ್ಷ ನನ್ನ ಅನುಭವ. ಹೀಗೆ ಬರೋ ಛಳಿ, ವಾತಾವರಣದ ಉಷ್ಣತೆಯನ್ನಷ್ಟೇ ಕಡಿಮೆ ಮಾಡಿದ್ದರೆ ಪರವಾಗಿರಲಿಲ್ಲ, ದಿನದಲ್ಲಿ ಸೂರ್ಯನ ಬೆಳಕು ಬೀಳುವ ಅವಧಿಯನ್ನೂ ಕುಗ್ಗಿಸುವುದು ಕೂಡ ಮನಸ್ಸಿಗೆ ಸಾಕಷ್ಟು ಹಿಂಸೆಯನ್ನು ಉಂಟು ಮಾಡಬಲ್ಲದು. ಡಿಸೆಂಬರ್ ಇಪ್ಪತ್ತೊಂದರ ಹೊತ್ತಿಗೆಲ್ಲಾ ದಿನದ ಸೂರ್ಯನ ಬೆಳಕು ಕೆಲವೇ ಕೆಲವು ಘಂಟೆಗಳಿಗೆ ಸೀಮಿತವಾಗಿ ಇನ್ನೇನು ಪ್ರಪಂಚವೇ ಛಳಿಯಲ್ಲಿ ಸೋಲುತ್ತಿರುವ ಅನುಭವವನ್ನು ಉತ್ತರ ಅಮೇರಿಕಾ ಖಂಡದವರಿಗೆ ಹುಟ್ಟಿಸುತ್ತದೆ.

ಛಳಿ ತನ್ನ ಬೆನ್ನ ಹಿಂದೆ ಹೊತ್ತು ತರುವ ವ್ಯವಹಾರಗಳ ಯಾದಿ ದೊಡ್ಡದು - ಹಿಮ ಬೀಳುವುದನ್ನು ತೆಗೆಯಲು, ಬೆಚ್ಚಗಿನ ಬಟ್ಟೆಗಳನ್ನು ಹೊದೆಯಲು, ಮುಖ-ಮೈ ಚರ್ಮ ಒಡೆದು ಹೋಗದ ಹಾಗೆ ಕ್ರೀಮ್ ಅನ್ನು ಮೆತ್ತಿಕೊಳ್ಳಲು, ಕಾರು-ಮನೆಗಳಲ್ಲಿ ಬೆಚ್ಚಗಿನ ವಾತಾವರಣವನ್ನು ಇಟ್ಟುಕೊಳ್ಳಲು - ವ್ಯಕ್ತಿಯ ಮಟ್ಟದಲ್ಲಿ ಹಾಗೂ ಸಂಸ್ಥೆಗಳಿಗೂ ಅನುಗುಣವಾಗುವಂತೆ ಇನ್ನೂ ಅನೇಕ ರೀತಿಗಳಲ್ಲಿ ಛಳಿ ಇನ್‌ಫ್ಲೂಯೆನ್ಸ್ ಮಾಡುತ್ತದೆ. ಬಿಸಿಲಿನಲ್ಲಿ ಒಂದು ರೀತಿಯ ಸಮಾನತೆಯ ಮಟ್ಟವನ್ನು ಗುರುತಿಸಿದರೂ ಛಳಿಯಲ್ಲಿ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾದ ಹಾಗೆ ಕಂಡು ಬಂದಿದ್ದು ನನ್ನ ಭ್ರಮೆ ಇದ್ದಿರಬಹುದಾದರೂ, ವರ್ಷದ ಆರು ತಿಂಗಳು ಭಾರತದ ಉದ್ದಗಲಕ್ಕೂ ಇದೇ ರೀತಿ ಛಳಿ/ಹಿಮ ಬಿದ್ದು ಹೋಗಿದ್ದರೆ ಏನೇನೆಲ್ಲ ಬದಲಾಗುತ್ತಿತ್ತು ಎಂದು ನಾನು ಬಹಳಷ್ಟು ಯೋಚಿಸಿದ್ದಿದೆ. ಬಿಸಿಲಿನಲ್ಲಿ ಕಂಬಳಿ ಹೊರುವ ನಮ್ಮೂರಿನ ಗ್ವಾರಪ್ಪಗಳಿಂದ ಹಿಡಿದು ರಸ್ತೆ-ರಸ್ತೆಗಳಲ್ಲಿ ಭಿಕ್ಷೆ ಬೇಡುವವರಿಂದ ಹಿಡಿದು ಉಳ್ಳವರ ವರೆಗೆ ಏನೇನೇಲ್ಲ ಬದಲಾಗುತ್ತಿತ್ತು. ಇಲ್ಲಿನ ರಸ್ತೆಗಳು ಅಗಲವಾಗಿರುವುದಕ್ಕೆ ಕಾರಣ ವರ್ಷದ ಮೂರು ತಿಂಗಳು ಬೀಳುವ ಹಿಮ ಎಂದು ಹೇಳಲು ಯಾವ ಸಮೀಕರಣವನ್ನು ಹುಡುಕಲಿ? ಇಲ್ಲಿನ ಜನರು ವ್ಯವಸ್ಥಿತವಾದ ಮನೆಗಳಲ್ಲಿ ಇದ್ದು, ಪ್ರಪಂಚದ ಎಲ್ಲರಿಗಿಂತ ಹೆಚ್ಚು ಸಂಪನ್ಮೂಲ ಹಾಗೂ ಶಕ್ತಿಯನ್ನು ಬಳಸುವುದನ್ನು ಯಾವ ತತ್ವದಿಂದ ದೃಢೀಕರಿಸಲಿ? ವರ್ಷದಲ್ಲಿ ಮೂರು-ನಾಲ್ಕು ತಿಂಗಳು ಬೀಳುವ ಹಿಮ ಜನರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಹುಟ್ಟಿಸುತ್ತದೆ ಎನ್ನುವುದಾದರೆ, ಅಂತಹ ಬದಲಾವಣೆಗಳು ಎಲ್ಲರ ದೃಷ್ಟಿಯಲ್ಲಿ ಒಳ್ಳೆಯವು ಎಂದು ಹೇಳಲು ಬಾರದಿದ್ದರೂ ನಾನಂತೂ ಅವುಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.

ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಸವಾಲುಗಳು ಬೇರೆ - ಅಲ್ಲಿನ ಮರಗಳಿಗೆ ಒಂದಕ್ಕಿಂತ ಒಂದು ಹೆಚ್ಚು ಎತ್ತರಕ್ಕೆ ಬಲಶಾಲಿಯಾಗಿ ಬೆಳೆದು ಸೂರ್ಯನ ಕಿರಣಗಳನ್ನು ತಾವೇ ಮೊದಲು ಮುಟ್ಟಬೇಕು ಎಂಬ ಮಹದಾಸೆ, ತಮ್ಮ ಎಲೆಗಳು ವರ್ಷದಲ್ಲಿ ಎಲ್ಲ ದಿನಗಳೂ ದ್ಯುತಿಸಂಶ್ಲೇಷಣೆಯಿಂದ ಬೇಕಾದ ಶಕ್ತಿಯನ್ನು ಪೂರೈಸುವ ಎಂದೂ ನಿಲ್ಲದ ಕಾರ್ಖಾನೆಗಳಿದ್ದ ಹಾಗೆ. ಆದರೆ ಈ ಛಳಿ ಪ್ರದೇಶದ ಮರಗಳೋ ವರ್ಷಕ್ಕೊಮ್ಮೆ ತಮ್ಮ ತಮ್ಮ ಎಲೆಗಳ ಸಂತತಿಯನ್ನು ರಿ ನ್ಯೂ ಮಾಡದೇ ವಿಧಿಯೇ ಇಲ್ಲ, ವರ್ಷದಲ್ಲಿ ಕೆಲವೊಮ್ಮೆ ಆರು ತಿಂಗಳು ಎಲೆಗಳಿಲ್ಲ ಬೋಳು ಮರಗಳು ಒಣ ಕಟ್ಟಿಗೆಗಳ ಹಾಗೆ ಕೊನೆ ಕೊನೆಗೆ ಗಾಳಿ ಬೀಸಿದರೂ ತೊನೆದಾಡದ ಸ್ಥಿತಿಯನ್ನು ತಲುಪಿಹೋಗುತ್ತವೆ. ಸೂರ್ಯನ ಬೆಳಕು ಬಿದ್ದರೂ ಅದು ನೇರವಾಗಿ ತಮ್ಮ ಮೇಲೆ ಬೀಳದ ಹಾಗೆ ಹಿಮ ಮುಸುಕಿದ್ದರೂ ಎಂತಹ ಕೆಟ್ಟ ಛಳಿಯಲ್ಲಿ ಬದುಕುಳಿಯುವ ದಿಟ್ಟತನವನ್ನು ಹುಟ್ಟಿನಿಂದ ಪಡೆದುಕೊಂಡು ಬರುತ್ತವೆ. ಈ ಹೊರಗಿನ ಮರಗಳ ಕಷ್ಟವನ್ನು ನೋಡಲಾರದೇ ನಮ್ಮಂತಹವರ ಮನೆಯ ಒಳಗೆ ಬೇಸಿಗೆಯಲ್ಲಿ ಸೊಂಪಾಗಿ ಬೆಳೆಯುವ ಮಲ್ಲಿಗೆ-ತುಳಸಿ-ಬಾಳೆ ಗಿಡಗಳು ಛಳಿಗಾಲದಲ್ಲಿ ಸುರುಟಿಕೊಂಡಿದನ್ನು ನಾನು ಕಣ್ಣಾರೆ ನೋಡಿದ್ದೇನೆ. ಛಳಿ ಪ್ರದೇಶದ ಪ್ರಾಣಿ ಪಕ್ಷಿಗಳು ಖಂಡಿತವಾಗಿ ಭಿನ್ನವಾದವುಗಳು. ನಮ್ಮೂರಿನ ಪಾರಿವಾಳ-ಕಾಗೆ-ಗುಬ್ಬಿಗಳ ಹಾಗೆ ಇಲ್ಲಿಯವುಗಳಲ್ಲ, ನಮ್ಮೂರಿನ ಕೆರೆಗಳಲ್ಲಿ ಈಜು ಹೊಡೆಯುವ ಹಂಸಗಳು ಇಲ್ಲಿಯವಲ್ಲ, ಇಲ್ಲಿನ ಅಳಿಲುಗಳೂ ಸಹ ಭಿನ್ನವಾದವುಗಳೇ. ಅವುಗಳ ಪ್ರಬೇಧ ಒಂದೇ ಇರಬಹುದು ಆದರೆ ಅವುಗಳ ನಡತೆ, ಅವು ವಾತಾವರಣಕ್ಕೆ ಹೊಂದಿಕೊಳ್ಳುವ ರೀತಿ ಖಂಡಿತ ಭಿನ್ನವಾದದ್ದು.

ಈ ಸೃಷ್ಟಿಯಲ್ಲಿನ ಭಿನ್ನತೆ ಇಲ್ಲಿನವರ ಮೈ-ಮನ-ಚರ್ಮದಲ್ಲಿ ಅಡಕವಾಗಿದೆ, ಆದರೆ ನಮ್ಮಂತಹವರಿಗೆ ಅದು ನಮ್ಮ ಚರ್ಮದಿಂದ ಕೆಳಕ್ಕೆಂದೂ ಇಳಿಯುವುದೇ ಇಲ್ಲ. ನಾವೆಂದೂ ಛಳಿಗಾಲವನ್ನು ಒಂದು ಹೀಗೆ ಬಂದು ಹೋಗುವ ಹಂತವನ್ನಾಗಿ ಗುರುತಿಸಿಕೊಂಡಿದ್ದೇವೆಯೋ ಹೊರತು ಬದುಕಿನ ಅಂಗವಾಗಿ ಅಲ್ಲ. ಬೇಕೆಂದರೆ ನಾಳೆ ಆಫೀಸಿನಲ್ಲಿನ ಸ್ಥಳೀಯರನ್ನು ನೋಡಿ, ಅವರುಗಳಲ್ಲಿ ತೊಡುವ ಬಟ್ಟೆಗಳಲ್ಲಿ ಫಾಲ್ ಇನ್‌ಫ್ಲುಯೆನ್ಸ್ ಇದ್ದೇ ಇರುತ್ತದೆ, ಆದರೆ ನಾನು ತೊಡುವ ಬಟ್ಟೆಗಳಲ್ಲಿ ಅಂತಹ ವ್ಯತ್ಯಾಸವಿರೋದಿಲ್ಲ. ಇದೊಂದು ಅಂಶವೇ ಸಾಕು ದಕ್ಷಿಣ ಭಾರತದ ನಾನು ಎಂದಿಗೂ ಇಲ್ಲಿ ಭಿನ್ನವಾಗಿ ಇರಲು - ಹಾಗಿರುವುದು ಒಳ್ಳೆಯದೋ ಕೆಟ್ಟದ್ದೋ ಯಾರಿಗೆ ಗೊತ್ತು?

Wednesday, September 26, 2007

ಸುಬ್ಬನೂ ಎಲೆಕ್ಷನ್ನಿಗೆ ನಿಲ್ತಾನಂತೆ!

’ಯಾಕೋ ಸುಬ್ಬ, ಒಂಥರಾ ಇದೀಯಾ ಇವತ್ತು!’ ಎಂದು ಈ ಸಂಜೆ ಅವನ ಮುಖವನ್ನು ನೋಡಿದ ಕೂಡ್ಲೇ ಕೇಳಬೇಕು ಅನ್ನಿಸಿದ್ದು ನಿಜ. ಅವನ ಮುಖ ನೋಡಿದ್ರೆ ಇನ್ನೇನು ಇವತ್ತೋ ನಾಳೆಯೋ ಅವನೇ ಸಾಯ್ತಾನೇನೋ ಅನ್ನೋ ಹಾಗಿದ್ದ.

’ಏನಿಲ್ಲ...’ ಎಂಬ ಚಿಕ್ಕದಾದ ಬೇಸರದ ಉತ್ತರ ಮತ್ತೇನೋ ಇದೆ ಕೆಣಕು, ಕೇಳು ಎಂದು ನನ್ನನ್ನು ಪುಸಲಾಯಿಸುತ್ತಿತ್ತು.

’ಅದೇನ್ ಇದ್ರೂ ನನ್ನ ಹತ್ರ ಹೇಳೋ ಪರವಾಗಿಲ್ಲ...’ ಎಂದು ಎಲ್ಲಾ ಸಮಸ್ಯೆಗಳಿಗೂ ಉತ್ತರ ಕಂಡು ಹಿಡಿಯೋನ ಹಾಗೆ ದೊಡ್ಡ ಆಶ್ವಾಸನೆಯನ್ನು ನೀಡಿದೆ, ನನ್ನ ಬಳಿ ಉತ್ತರದ ಬದಲಿಗೆ ಪ್ರಶ್ನೆಗಳೇ ಹೆಚ್ಚಿರೋವು ಎಂದು ನನಗೂ ಇತ್ತೀಚೆಗೆ ಅರಿವಾಗಿರುವುದರಿಂದ ಅವನ ಸಮಸ್ಯೆಗೆ ನಾನು ಕೇಳೋ ಪ್ರಶ್ನೆಗಳು ಉತ್ತರವನ್ನು ಕಂಡುಕೊಳ್ಳದಿದ್ದರೆ ಎಂದು ನನಗೂ ಒಮ್ಮೆ ದಿಗಿಲಾಯಿತು.

ಸುಬ್ಬ ಸಾವಕಾಶವಾಗಿ ಸೋಫಾದಲ್ಲಿ ಕೊಸರಿಕೊಂಡು, ’ನಾನು ಬದಲಾಗಿಬಿಟ್ಟಿದ್ದೀನಿ ಕಣೋ!’ ಎಂದ. ನನಗೋ ಇವನೇನು ಬದಲಾಗ್ತಾನೆ ಮಹಾ ಎಂದು ಒಮ್ಮೆ ಲೇವಡಿ ಮಾಡೋಣ ಎನ್ನಿಸಿದರೂ ಸುಬ್ಬ ಫೈನಲ್‌ನಲ್ಲಿ ಕ್ಯಾಚು ಬಿಟ್ಟು ಪಾಕಿಸ್ತಾನ ಸೋಲಲು ಕಾರಣವಾದ ಮಹಮದ್ ಹಫೀಜನ ಥರ ಮುಖ ಗಂಟು ಹಾಕಿಕೊಂಡಿದ್ದನ್ನು ನೋಡಿ, ’ಯಾವುದರ ಬಗ್ಗೆ ಹೇಳ್ತಿದ್ದೀಯೋ ಪುಣ್ಯಾತ್ಮ...’ ಎಂದು ಸಾಂತ್ವನವನ್ನು ನುಡಿಯುವಂತೆ ತೋರಿಯೂ ಹೆಚ್ಚು ವಿವರವನ್ನು ಕೇಳಲು ಶುರು ಮಾಡಿದೆ.

ಸುಬ್ಬ ಸ್ವಲ್ಪ ಚೇತರಿಸಿಕೊಂಡು, ’ಏನಿಲ್ಲ, ನನ್ನ ಆಕ್ಸೆಂಟು ಬದಲಾಗಿದೆ, ಇಲ್ಲಿ ಬಂದ ಮೇಲೆ ನಮ್ಮೂರಿನ ಥರ ಕಾಫಿ ಕುಡುದ್ರೆ ರುಚಿ ಸೇರೋದಿಲ್ಲ ಬಿಸಿ ನೀರು ಕುಡಿದ ಹಾಗಿರುತ್ತೆ, ಅದರ ಬದಲಿಗೆ ಬ್ಲ್ಯಾಕ್ ಕಾಫಿ ಕುಡುದ್ರೇನೇ ಸಮಾಧಾನ, ಇನ್ನು ಇಲ್ಲಿನ ಚಾನೆಲ್ ಸೆವೆನ್ ನ್ಯೂಸ್ ನೋಡೀ ನೋಡೀ ಬಿಬಿಸಿ ನ್ಯೂಸ್ ಯಾವುದೋ ಬೇರೆ ಗ್ರಹವೊಂದರ ಸಮಾಚಾರವನ್ನು ಭಿತ್ತರಿಸುವಂತೆ ಕಾಣ್ಸುತ್ತೆ...’ ಎಂದು ಇನ್ನೇನನ್ನೋ ಮುಂದುವರೆಸುತ್ತಾ ಅವನ ರೈಲನ್ನು ಹೊಡೆಯುತ್ತಲೇ ಇದ್ದವನಿಗೆ ನಾನು ಮಧ್ಯೆ ಬಾಯಿ ಹಾಕಿ ತಡೆಯೊಡ್ಡಿದೆ,

’ಎಲಾ ಇವನಾ, ಟೂರಿಸ್ಟ್ ಅಂತ ಬಂದೋನ್ ನೀನಪಾ, ನೀನೇ ಹಿಂಗಂದ್ರೆ?!’

’ಟೂರಿಸ್ಟ್ ಅಂತ ಏನೋ ಬಂದಿದ್ದೀನಿ, ಅದು ವೀಸಾ-ಟಿಕೇಟ್ ಮಟ್ಟಿಗೆ ಮಾತ್ರ, ನಾನು ಎಲ್ಲ್ ಹೋದ್ರೂ ಅಲ್ಲಿನ ಸ್ಥಿತಿ-ಗತಿ ಬಗ್ಗೆ ತಲೆಕೆಡಿಸಿಕೊಳ್ಳೋದು ನಿನಗೆ ಗೊತ್ತೇ ಇದೆಯಲ್ಲಾ? ನಾನು ಅಲ್ಲಿದ್ರೆ ಮಳೆ-ಬೆಳೆ ಹೆಂಗಾಗುತ್ತೇ ಈ ವರ್ಷಾ ಅಂತ ಮುಗಿಲ್ ನೋಡ್ತೀನಿ, ಇಲ್ಲಿ ಬಂದ ಮೇಲೂ ಫಾರ್ಮರ್ಸ್ ಆಲ್ಮನ್ಯಾಕ್ ಓದ್ತೀರೋದನ್ನ ನೀನೇ ನೋಡಿದ್ದೀಯಲ್ಲಾ? ನಾವು ತೋಟಾ ಮಾಡೋರು ಎಲ್ಲಿದ್ರೂ ತೋಟಾ ಮಾಡೋರೇ - ಅಮೇರಿಕದಲ್ಲಿರಲಿ, ಆಫ್ರಿಕದಲ್ಲಿರಲಿ’ ಎಂದು ತನ್ನನ್ನು ತಾನು ಮೆಚ್ಚಿಸಿಕೊಂಡ.

’ಅದ್ಸರಿ, ನೀನು ಬಂದು ಇಷ್ಟೊಂದು ತಿಂಗಳಾಯ್ತು, ಇವತ್ತ್ಯಾಕೆ ನಿನಗೆ - ನಾನು ಬದಲಾಗಿದ್ದೇನೆ - ಅನ್ನೋ ದಿವ್ಯದೃಷ್ಟಿ ಬಂತೋ?’ ಎಂದು ನಾಟಕೀಯವಾಗಿ ಕೇಳಿದ್ದಕ್ಕೆ,

’ಅದೇ ಬರ್ಮಾ ದೇಶದಲ್ಲಿ ಅರಾಜಕತೆ ಶುರುವಾಯ್ತಲ್ಲಾ ಅದರ ಬಗ್ಗೆ ಓದ್ತಾ ಇದ್ದೆ ಎಲ್ಲೋ ಒಂದು ಕಡೆ, ಊರಿನ್ ನೆನಪು ಬಂತು. ಜೊತೆಗೆ ಇಲ್ಲಿನ ಮಾಧ್ಯಮಗಳನ್ನು ತಿರುತಿರುವಿ ನೋಡಿದ್ರೆ ಇವರಿಗೆ ಬೆಳಗ್ಗಿಂದಾ ಸಂಜೀವರಿಗೂ ಡಾವ್ ಜೋನ್ಸೂ-ನ್ಯಾಸ್‌ಡಾಕೂ ಬಿಟ್ರೆ ಬೇರೆ ಪ್ರಪಂಚಾನೇ ಇಲ್ಲೇನೋ ಅನ್ನಿಸಿ ಬಿಟ್ಟಿತು. ಎಲ್ಲ್ಯಾದ್ರೂ ಚೂರೂ-ಪಾರೂ ಸುದ್ದಿ ಬರತಾವೆ ಇಲ್ಲಾ ಅಂತಲ್ಲಾ...ಆದ್ರೂ ಈ ದೇಶ ಒಂಥರಾನಪಾ...’

ಈಗ ಗೊತ್ತಾಯ್ತು ಸುಬ್ಬನ ಈ ಸ್ಥಿತಿಗೆ ಕಾರಣವೇನು ಎಂದು ಅಂದುಕೊಂಡಿದ್ದು ನನ್ನ ತಪ್ಪು ಊಹೆಯಾಗಿತ್ತು. ಬದಲಾದ ಬರ್ಮಾದ ಸ್ಥಿತಿಗತೀಗೂ, ತಾನೇ ಬದಲಾಗಿದ್ದೇನೆ ಅನ್ನೋದಕ್ಕೂ ಯಾವ ತಾಳಮೇಳವೂ ಕಾಣಲಿಲ್ಲ. ಹೋಗ್ಲಿ, ಪ್ರವಾಸಿಯಾಗಿ ಬಂದವರು ಒಂದೆರಡು ಅಂಶಗಳನ್ನು ಬಳುವಳಿ ಪಡೆದು ಕಲಿಯಬಾರದೇಕೆ, ತಮ್ಮ ತನವನ್ನು ಬಿಟ್ಟು ಇತರರದ್ದನ್ನು ಪ್ರಯತ್ನಿಸಬಾರದೇಕೆ ಎಂದು ನನ್ನ ಮನಸ್ಸಿನಲ್ಲಿ ಸಮಜಾಯಿಷಿ-ಸಾಂತ್ವನಗಳು ಹುಟ್ಟುತ್ತಿದ್ದರೆ ಅವುಗಳನ್ನು ಅವನಿಗೆ ಹೇಗೆ ಹೇಳುವುದು ಎಂಬ ಗುಂಗಿನಲ್ಲೇ ನಾನು ಮುಳುಗಿ ಹೋಗುತ್ತಿರುವಾಗ ಅವನ ಈ ಮಾತು ನನ್ನನ್ನು ಎಚ್ಚರಿಸಿತು,

’ಅಮೇರಿಕ ಅನ್ನೋದು ಮಹಾನ್ ಅಲೆ, ಅದು ತನ್ನೊಳಗೆ ಎಂತಹ ಪರ್ವತವನ್ನೂ ಎತ್ತಿ ಹಾಕ್ಕೊಳ್ಳುತ್ತೆ, ಅದರ ವಿರುದ್ಧ ಎದ್ದು ನಿಲ್ಲೋನು, ತನ್ನತನವನ್ನೇ ರೂಢಿಸಿಕೊಂಡು ಮುಂದುವರೆಯೋನು ಅದಕ್ಕಿಂತ ಬಲಶಾಲಿಯಾಗಬೇಕೇ ವಿನಾ ದುರ್ಬಲನಾಗಿರಬಾರ್ದು - ಆ ಬಲ ನಮ್ಮಂಥ ತೃತೀಯ ಜಗತ್ತಿನಿಂದ ಬಂದಂತಹವರಿಗೆ ಕಷ್ಟ ಸಾಧ್ಯ. ಹಾಗಾಗಿ ನಮ್ಮತನವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಕಳೆದುಕೊಳ್ಳುವಂತೆ ಮಾಡುವಲ್ಲಿ ಇಲ್ಲಿನ ವಾತಾವರಣ ಬಹಳಷ್ಟು ಸಹಾಯವನ್ನೇನೋ ಮಾಡುತ್ತೇ, ಆದರೆ ಅವರವರತನವನ್ನು ಕಳೆದುಕೊಂಡ ಜಾಗದಲ್ಲಿ ಮತ್ತಿನ್ನೇನೋ ಬಂದು ನೆಲೆಸಿ ಅಂತಹ ಪ್ರತಿಯೊಬ್ರೂ ಮುಖ್ಯವಾಹಿನಿಯಲ್ಲಿ ಭೌತಿಕವಾಗಿದ್ರೂ ಮಾನಸಿಕವಾಗಿ ವಿಮುಖರಾಗುವಂತೆ ಮಾಡುತ್ತೆ’.

ಇವನ್ಯಾವತ್ತಿಂದ ಸಿನಿಮಾ ಪಾಟೀಲನ ಥರ ನಾನ್ ಸ್ಟಾಪ್ ಡೈಲಾಗುಗಳನ್ನು ಶುರು ಹಚ್ಚಿಕೊಂಡ ಎಂದು ಗೊತ್ತಾಗದೇ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತಾಗಿತ್ತು ನನ್ನ ಪರಿಸ್ಥಿತಿ. ಆದ್ರೂ ಸ್ವಲ್ಪ ಪುಶ್ ಬ್ಯಾಕ್ ಮಾಡಿದ್ರೆ ಇನ್ನೇನಾದ್ರೂ ಧ್ವನಿ ಹೊರಡುತ್ತೋ ನೋಡೋಣ ಎಂದುಕೊಂಡವನಿಗೆ ಸ್ವಲ್ಪ ನಿರಾಶೆ ಹುಟ್ಟಿಸಿತ್ತು ಸುಬ್ಬನ ಪ್ರಕ್ರಿಯೆ,

ನಾನೆಂದೆ, ’ನೋಡೋ, ಪ್ರವಾಸಿಯಾಗಿ ಬಂದವನಾಗಲೀ, ವಲಸಿಗರಾಗಿ ಬಂದವರಾಗಲೀ ಅವರವರ ನೆಲೆಗಟ್ಟನ್ನು-ಮಿತಿಯನ್ನು ಅರಿತು ಅದರಂತೆ ನಡೆಯಬೇಕೇ ವಿನಾ ಇರೋ ಸ್ವಲ್ಪ ಸಮಯದಲ್ಲಿ ಎಲ್ಲವನ್ನು ಅರೆದು ಕುಡೀತೀನೀ ಅನ್ನೋದು ಭಂಡತನವಾಗೋದಿಲ್ವೇ?’

ಅದಕ್ಕವನು ಉತ್ತರವಾಗಿ, ’ಭಂಡತನ ಅನ್ನೋದೇನೂ ಅಷ್ಟೊಂದು ಸಮಂಜಸ ಅನ್ಸಲ್ಲ, ನಮ್ಮೊಳಗೆ ನಡೆಯೋ ಬದಲಾವಣೇನ ಒಂದು ಹೆಜ್ಜೆ ಮುಂದೆ ಹೋಗಿ ಹೇಳ್ದೆ ಅಂತಂದ್ರೆ ಒಪ್ಪಿಕೋಬೋದೋ ಏನೋ’ ಎಂದು ಅಡ್ಡಗೋಡೆಯ ದೀಪ ಇಟ್ಟವರ ಹಾಗೆ ಮಾತನಾಡಿದ.

ಅವನಿಗೆ ನೋವಾದಲ್ಲೇ ಚುಚ್ಚೋಣವೆಂದುಕೊಂಡು, ’ಈಗ ನನಗೆ ಗ್ಯಾರಂಟಿ ಅನ್ಸಿತು ನೀನು ಬದಲಾಗಿದೀಯಾ ಅಂತ!’ ಎಂದೆ.

ಅವನು ಒಂದು ಕ್ಷಣ ಮುಖದ ಮೇಲೆ ಖುಷಿಯನ್ನು ವ್ಯಕ್ತಪಡಿಸಿದವನಂತೆ ಕಂಡುಬಂದು, ’ಆಞ್, ಹೌದಾ...’ ಎಂದು ಇನ್ನೇನನ್ನೋ ಹೇಳಲು ಹೋದವನನ್ನು ಅರ್ಧಕ್ಕೆ ತಡೆದು,

’ಇನ್ನೇನ್ ಮತ್ತೇ, ನಿನ್ನ ಪ್ರಶ್ನೆಗಳೋ, ಉತ್ತರಗಳೋ, ನೀನು ನೀಡೋ ಸಮಜಾಯಿಷಿಯೋ...ಇವೆಲ್ಲ ಇಲ್ಲಿನ ಕಾಂಗ್ರೇಸ್‌ಮನ್ನುಗಳ ಥರ ಆಗ್ತಾ ಇವೆ ನೋಡು, ಅವರು ಯಾವತ್ತು ಯಾವ ಪ್ರಶ್ನೆಗೆ ನೇರವಾಗಿ ಉತ್ತರಕೊಟ್ಟಿರ್ತಾರೆ ತಾವು ಹುಟ್ಟಿದಾಗಿನಿಂದ?’ ಎಂದು ಕಿಚಾಯಿಸಿದೆ.

’ಹೌದಾ, ಹಂಗಾಂದ್ರೆ ಊರಿಗ್ ಹೋದೇನೇ ಪುರಪಂಚಾಯ್ತಿ ಎಲೆಕ್ಷನ್ನಿಗ್ ನಿತಗಂಬಿಡ್ತೀನಿ!’ ಎಂದು ತನ್ನೊಳಗಿನ ಸಂಭ್ರಮದಲ್ಲಿ ಕಳೆದುಕೊಂಡ. ನಾನು ಮುರಾ ಸಂಜೆ ಹೊತ್ತಿಗೆ ಸ್ವಲ್ಪ ಬೆಳಕು-ಗಾಳಿಯಾದರೂ ಬರಲಿ ಎಂದು ಕಿಟಕಿ ಬಾಗಿಲನ್ನು ಎತ್ತಿದೆ, ಈಗಾಗಲೇ ಫಾಲ್ ಬಿದ್ದಿರೋದನ್ನು ಸೂಚಿಸುವಂತೆ ನೆಲದ ಮೇಲೆ ಅಲ್ಲಲ್ಲಿ ಒಣಗಿದ ಎಲೆಗಳು ಹರಡಿಕೊಂಡಿದ್ದವು. ಇನ್ನೇನು ಇವತ್ತಿನ ನನ್ನ ಕಥೆ ಮುಗಿಯಿತು ಎಂದು ಡ್ಯೂಟಿ ಪೂರೈಸಿದವನ ಹಾಗೆ ನಿಧಾನವಾಗಿ ಸೂರ್ಯ ಜಾರಿಕೊಳ್ಳುತ್ತಿದ್ದ.

ನಾನು ’ಎಲೆಕ್ಷನ್ನಿಗೆ ನಿಂತಾರೂ ನಿತಗೋ, ಕೂತಾರೂ ಕೂರು...ಕೊನೆಗೆ ಒಂದಿಷ್ಟು ಲೋಕಕಲ್ಯಾಣ ಕೆಲ್ಸವನ್ನು ಮಾಡೋದ್ ಮರೀ ಬ್ಯಾಡಾ!’ ಎನ್ನೋ ಮಾತುಗಳು ಅವನದ್ದೇ ಅದ ಗುಂಗಿನಲ್ಲಿದ್ದ ಸುಬ್ಬನಿಗೆ ಕೇಳಿಸಲೇ ಇಲ್ಲ.

Tuesday, September 25, 2007

ಏನ್ ಬೇಡಾ ಅಂದ್ರೂ ಈ ಕೆಲ್ಸಾ ಮಾಡ್‌ಬೋದ್ ನೋಡಿ...

ಹತ್ತ್ ಹನ್ನೊಂದ್ ವರ್ಷದ್ ಹಿಂದೆ ನಾವೆಲ್ಲಾ ನೋಡಿದ ಹಾಗೆ ಒಂದು ಡಾಲರ್‌ಗೆ ಸುಮಾರು ಮುವ್ವತ್ತಾರೂವರೆ ರೂಪಾಯಿ ಇತ್ತು. ಇನ್ನು ಸ್ವಲ್ಪ ದಿನಗಳಲ್ಲಿ ಆ ಕಾಲ ಮತ್ತೆ ಪುನಃ ಮರುಕಳಿಸ್ತಾ ಇದೆ ಅಂತ ಹೇಳೋದರಲ್ಲಿ ತಪ್ಪೇನೂ ಇಲ್ಲಾ. ವಿದೇಶಕ್ಕೆ ವಲಸೆ ಬಂದವರಿಗೆ ಅವರು ಲೆಕ್ಕದಲ್ಲಿ ಎಷ್ಟೇ ದಡ್ಡರಾದ್ರೂ ಹಿಂದುಳಿದವರಾದ್ರೂ ಕೊನೇಪಕ್ಷ ಅವರ ತಲೆಯಲ್ಲಿ ಒಂದು ಕ್ಯಾಲ್ಕುಲೇಟರ್ ಪ್ರಾಸೆಸ್ ಯಾವಾಗ್ಲೂ ನಡೀತಲೇ ಇರುತ್ತೆ - ಅದೇ ರುಪಾಯಿ-ಫಾರಿನ್ ಕರೆನ್ಸಿ ಕನ್ವರ್ಷನ್ ಫ್ಯಾಕ್ಟರ್! ಯಾವುದೇ ಅಂಗಡಿಯಲ್ಲಿ ಏನೇ ಕೊಂಡರೂ, ಒಂದು ಸ್ಟಾರ್‌ಬಕ್ಸ್ ಕಾಫಿಯಿಂದ ಹಿಡಿದು ವಾಷಿಂಗ್ ಮೆಷೀನ್ ವರೆಗೆ, ಅದು ರುಪಾಯಿಗೆ ತನ್ನಿಂದ ತಾನೇ ಕನ್ವರ್ಟ್ ಆಗೇ ಆಗುತ್ತದೆ, ನಮ್ಮ ಸಮಾಧಾನಕ್ಕಾಗಿಯಾದರೂ. ನನ್ನಂತಹವರಿಗೆ ಕರೆನ್ಸಿ ಕನವರ್ಷನ್ ಪ್ರಾಸೆಸ್ ಜೊತೆಗೆ ಟೆಂಪರೇಚರ್ ಕನ್ವರ್ಷನ್ (ಫ್ಯಾರನ್‌ಹೈಟ್‌‍ನಿಂದ ಸೆಂಟಿಗ್ರೇಡ್ ಹಾಗೂ ವೈಸಾ ವರ್ಸಾ) ಕೂಡಾ ತಲೆಯಲ್ಲಿ ಯಾವಾಗ್ಲೂ ನಡೆಯುತ್ತಿರುವ ಪ್ರಾಸೆಸ್ಸುಗಳಲ್ಲೊಂದು, ಅದು ಬೇರೆ ವಿಷಯ.

ನಾಲ್ಕೈದು ವರ್ಷಗಳ ಹಿಂದೆ (ಇರಬೇಕು), ರೂಪಾಯಿ ಬೆಲೆ ಇಳಿಮುಖವಾಗಿ ನಲವತ್ತೆಂಟು ದಾಟಿ ಹೋಗಿದ್ದ ಕಾಲದಲ್ಲಿ, ನಾವುಗಳೆಲ್ಲ ರೂಪಾಯಿ ಕಥೆ ಮುಗಿಯಿತೆಂದುಕೊಂಡು ಎರಡು ಡಾಲರ್‌ಗೆ ನೂರು ರುಪಾಯಿ ಎಂದು ಕನ್ವರ್ಷನ್ ಮಾಡಿಕೊಳ್ಳಲು ಆರಂಭಗೊಂಡಿದ್ದೆವು. ಅದೇ ಸಮಯದಲ್ಲಿ ಬಿಪಿಓ ಟ್ರಾನ್ಸಾಕ್ಷನ್ನೂ ಕೂಡಾ ಹೆಚ್ಚಾದದ್ದೆಂದು ಕಾಣಿಸುತ್ತದೆ, ಇನ್‌ಫೋಸಿಸ್, ವಿಪ್ರೋಗಳಂತ ಕಂಪನಿಗಳವರು ತಮ್ಮ ಲಾಭವನ್ನು ರುಪಾಯಿಗೆ ಕನ್ವರ್ಟ್ ಮಾಡಿಕೊಂಡು ಬಹಳ ಖುಷಿ ಪಡುತ್ತಿದ್ದ ಕಾಲ. ರೂಪಾಯಿಯ ಬೆಲೆಯ ಹೆಚ್ಚಳದಲ್ಲಿ ಇಳಿತವಾದಂತೆ ಡಾಲರ್‌ನಲ್ಲಿ ವ್ಯವಹಾರ ಮಾಡೋ ಎಕ್ಸ್‌ಪೋರ್ಟ್‌ನವರಿಗಂತೂ ಬಹಳ ಅನುಕೂಲವಾದರೆ, ಅದೇ ರೂಪಾಯಿಯನ್ನು ಡಾಲರ್‌ಗೆ ಕನ್ವರ್ಟ್ ಮಾಡಿಕೊಂಡು ಜೀವನ ಸಾಗಿಸೋ ಪ್ರಯಾಣಿಕರಿಗಾಗಲೀ, ವಿದ್ಯಾರ್ಥಿಗಳಿಗಾಗಲೀ ಅಷ್ಟೇ ಅನಾನುಕೂಲವಾದೀತು. ಜೊತೆಯಲ್ಲಿ, ಅಮೇರಿಕದಂತಹ ರಾಷ್ಟ್ರಗಳಿಂದ ಭಾರತಕ್ಕೆ ಹಣ ಕಳಿಸೋ ನನ್ನಂಥವರು ರೂಪಾಯಿಯ ಬೆಲೆ ಕುಸಿದಷ್ಟೂ ನೇರವಾಗಿ ಅನುಕೂಲಿತರಾದಂತೆ ಕಂಡುಬಂದರೂ ಒಂದಕ್ಕೆರೆಡು ಬೆಲೆ ತೆರುವ ರೀತಿಯಿಂದಲಾದರೂ ಹೆಚ್ಚು ಹೆಚ್ಚು ರೂಪಾಯಿಯನ್ನು ಬಳಸತೊಡುಗುವುದು ಸಹಜ. ಒಟ್ಟಿನಲ್ಲಿ, ರೂಪಾಯಿಯ ಬೆಲೆ ಏರುಮುಖವಾಗುವುದು ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದೇ ಎಂದು ಹೇಳಬೇಕು. ಕ್ಯಾಚ್ ಏನಪ್ಪಾ ಎಂದರೆ, ರೂಪಾಯಿಯ ಬೆಲೆ ಬರೀ ಡಾಲರ್‌ಗೆ ಸಂಬಂಧಿಸಿದಂತೆ ಏರಿದರೆ ಮಾತ್ರ ಸಾಲದು, ಜಪಾನಿನ ಯೆನ್, ಯೂರೋಪಿನ ಯೂರೋ ಪೌಂಡ್ ಮುಂತಾದವುಗಳಿಗೂ ಸಹ ಪೈಪೋಟಿ ನೀಡುವುದು. ಡಾಲರ್ ಬೆಲೆಯಲ್ಲಿ ಇಳಿಮುಖವಾದಂತೆ ಉಳಿದೆಲ್ಲ ಕರೆನ್ಸಿಗಳು ಇಳಿಮುಖವಾಗಿ ರೂಪಾಯಿಯ ಪ್ರಾಬಲ್ಯ ಹೆಚ್ಚಾದರೆ ಒಳ್ಳೆಯದು ಎನ್ನುವುದು ನನ್ನ ಅನಿಸಿಕೆ.

ಸರಿ, ನಾವು ರೂಪಾಯಿಯ ಬೆಲೆ ಏರಿದಂತೆ ಇಲ್ಲಿಂದ ಡಾಲರ್ ಅನ್ನು ಕಳಿಸಿದರೆ ಬ್ಯಾಂಕ್ ಕನ್ವರ್ಷನ್ ಮಾಡಿದ ನಂತರ ಪ್ರತೀ ಡಾಲರ್‌ಗೆ ನಮಗೆ ಕೈಗೆ ಸಿಗುವಾಗ ಮುವತ್ತೈದೇ ರುಪಾಯಿಯಾಗಬಹುದು. ಆ ಮುವತ್ತೈದು ರೂಪಾಯಿಯನ್ನು ತೆಗೆದುಕೊಂಡು ನಾವೇನು ಮಾಡುತ್ತೇವೆ ಅನ್ನೋದು ಮುಖ್ಯ. ಈಗಾಗಲೇ ನನ್ನಂತಹವರು ಪರ್ಸನಲ್ ಹಣವನ್ನು ಬ್ಯಾಂಕುಗಳ ಮೂಲಕ ಭಾರತಕ್ಕೆ ಕಳಿಸದಿದ್ದರೂ, ಮತ್ತೊಂದು ದಿಸೆಯಲ್ಲಿ ಭಾರತಕ್ಕೆ ವಿದೇಶಿ ಹಣ ನುಗ್ಗುತ್ತಲೇ ಇದೆ, ಅದೇ ಇನ್‌ವೆಷ್ಟ್‌ಮೆಂಟ್‌ಗೋಸ್ಕರ - ಭಾರತದ ಸೆಕ್ಯೂರಿಟೀಸ್ ಮಾರ್ಕೆಟ್ಟುಗಳಲ್ಲಿ ಹಣವನ್ನು ತೊಡಗಿಸಲು ನಾ ಮುಂದು ತಾ ಮುಂದು ಎಂದು ವ್ಯಕ್ತಿಯ (individual) ಮಟ್ಟದಿಂದ ಹಿಡಿದು ಸಂಸ್ಥೆಗಳವರೆಗೆ (institution) ಎಲ್ಲರೂ ಮುನ್ನುಗ್ಗುತ್ತಿರುವುದು ಇತ್ತೀಚಿನ ಬೆಳವಣಿಗೆಗಳಲ್ಲೊಂದು. ಈ ಐ-ಐ (i-i ಅಂದರೆ individual-institution) ಹಣ ಭಾರತಕ್ಕೆ ಹರಿದು ಬರುತ್ತಿರುವ ವಿಷಯ ಇಂದು ನಿನ್ನೆಯದಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಐ-ಐ ಹಣ ಹೆಚ್ಚಾಗಿರುವುದು ಒಂದು ಮಹತ್ತರ ಬೆಳವಣಿಗೆ.

ಹಾಗಾದ್ರೆ, ಏನೂ ಬೇಡಾ ಅಂದ್ರೂ ನಾವೆಲ್ಲ ಯಾವ ಕೆಲಸವನ್ನು ಮಾಡಬಹುದು? ಒಂದು ಭಾರತದಂತಹ ಏರುಮುಖದ ಮಾರುಕಟ್ಟೆಗಳಲ್ಲಿ ಹಣ ತೊಡಗಿಸುವುದು, ಮತ್ತೊಂದು ಹಾಗೆ ಹಣ ತೊಡಗಿಸುವವರಿಗೆ ಅನುಕೂಲವಾಗಲೆಂದು ಫೈನಾನ್ಸಿಯಲ್ ಸರ್ವೀಸಸ್ ಕಂಪನಿಗಳನ್ನು ತೆರೆಯುವುದು. ಉದಾಹರಣೆಗೆ, ಅಮೇರಿಕದಲ್ಲಿ ಸಿಗುವ ಫೈನಾನ್ಸಿಯಲ್ ಸರ್ವೀಸ್ ಬಗ್ಗೆ ಎಲ್ಲರಿಗೂ ಗೊತ್ತಿರೋದೇ - ನಿಮ್ಮ ಗಟ್ಟಿತನವನ್ನು ಆಧರಿಸಿ ಸಾವಿರ ಡಾಲರುಗಳಿಂದ ಹಿಡಿದು ಮಿಲಿಯನ್ ಡಾಲರುಗಳ ವರೆಗೆ ನೀವು ಹೂಡಿಕೆಯನ್ನು ಮಾಡಿದ್ದಲ್ಲಿ, ನಿಮ್ಮ ಫೈನಾನ್ಸಿಯಲ್ ಅಡ್ವೈಸರ್ ಎನ್ನುವ ಮಹಾಶಯ ನಿಮ್ಮ ಹೂಡಿಕೆಯ ಧೇಯೋದ್ದೇಶಗಳಿಗನುಗುಣವಾಗಿ ನಿಮ್ಮ ಹಣವನ್ನು ಸರಿಯಾಗಿ ಮಾರುಕಟ್ಟೆಯಲ್ಲಿ ತೊಡಗಿಸಿ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತಾನೆ. ಅವನ ಹಿಂದೆ ಬ್ಯಾಂಕು, ಇನ್‌ವೆಷ್ಟ್‌ಮೆಂಟ್ ಸಂಸ್ಥೆಗಳ ನೆಟ್‌ವರ್ಕ್ ಹಾಗೂ ಸಪೋರ್ಟ್ ಇರಬಹುದು, ಅಥವಾ ಆತ ಒಬ್ಬೊಂಟಿ ವ್ಯಕ್ತಿಯಾಗಿರಬಹುದು. ಯಾವುದೂ ಬೇಡವೆಂದರೆ ನಿಮ್ಮ ಹಣವನ್ನು ನೀವೇ ಆನ್‌ಲೈನ್ ಮಾಧ್ಯಮ (ಇ-ಟ್ರೇಡ್, ಅಮೆರಿಟ್ರೇಡ್, ಇತ್ಯಾದಿ)ಗಳಲ್ಲಿ ತೊಡಗಿಸಬಹುದು. ಆದರೆ ಭಾರತದಲ್ಲಿ ನೇರವಾಗಿ ಹಣವನ್ನು ತೊಡಗಿಸಬೇಕೆಂದುಕೊಂಡವರಿಗೆ ಈ ರೀತಿಯ ಅನುಕೂಲಗಳು ಇವೆಯೆಂದು ನನಗೆ ತಿಳಿದಿದ್ದರೂ ಅವು ಅಮೇರಿಕನ್ ಮಾರುಕಟ್ಟೆಯಲ್ಲಿ ದೊರೆಯುವ ಸೌಲಭ್ಯಗಳಿಗೆ ಯಾವ ರೀತಿಯಲ್ಲೂ ಇನ್ನೂ ಪೈಪೋಟಿ ಕೊಡುವ ಹಂತದಲ್ಲಿಲ್ಲ - ಮುಂದೆ ಒಂದು ಮಹಾನ್ ಆಗಿ ಬೆಳೆಯಬಹುದಾದ ಕ್ಷೇತ್ರವಿದು. ಅದಕ್ಕೋಸ್ಕರವೇ, ನಿಮ್ಮಲ್ಲಿ ಇಂತಹ ಸರ್ವೀಸ್ ಮೈಂಡೆಡ್‌ನೆಸ್ ಇದ್ದರೆ - ನನ್ನಂತಹವರಿಗೆ ಅನುಕೂಲವಾಗಲೆಂಬಂತೆ ಒಂದು ಸಣ್ಣ ಉದ್ಯಮವನ್ನು ತೆರೆದು ಮುಂದೆ ಅದೇ ಮಹಾ ಕಾರ್ಪೋರೇಷನ್ ಆಗಿ ಬೆಳೆಯುವ ಎಲ್ಲ ಲಕ್ಷಣವೂ ಇರೋದರಿಂದ ಇದು ಖಂಡಿತವಾದ ಸುಸಮಯ ಎಂದು ನನ್ನ ’ಅಂತರಂಗ’ ಕಣೀ ಹೇಳತೊಡಗುವುದನ್ನು ನಾನು ಎಷ್ಟೇ ಕಷ್ಟಪಟ್ಟರು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ! ಈಗಾಗಲೇ IBI, SBI ಮುಂತಾದ ಬ್ಯಾಂಕುಗಳು ಆ ಕೆಲಸವನ್ನು ಮಾಡುತ್ತಿವೆ ಎಂದಿರಾ, ಅವುಗಳ ಸರ್ವೀಸನ್ನು ಬಲ್ಲವರೇ ಬಲ್ಲರು - ನೀವಾದರೂ ಒಂದು ನಂಬಿಕಸ್ಥ ಹೊಸ ಕಂಪನಿಯನ್ನು ಹೊರಡಿಸಿ ನಾವೆಲ್ಲ ನಿಮ್ಮ ಸಹಾಯವನ್ನು ಪಡೆದು ಜೀವನದಲ್ಲಿ ಸ್ವಲ್ಪವಾದರೂ ಮುಂದೆ ಬರೋಣ, ಏನಂತೀರಿ? ಅಮೇರಿಕದ ಇನ್ವೆಷ್ಟ್‌ಮೆಂಟ್ ಬ್ಯಾಂಕಿಂಗ್ ಕಂಪನಿಗಳು ಭಾರತದಲ್ಲಿ ಟಿಕ್ಕಾಣಿ ಹೂಡಿ ಅವರ ಹೆಸರುಗಳನ್ನು ಮನೆ ಮಾತು ಮಾಡುವುದರ ಮೊದಲೇ ಮಹಾನ್ ಸುವರ್ಣ ಅವಕಾಶವೇ ಕಾದಿದೆ ಎಂಬುದು ನನ್ನ ಅಭಿಮತ.

Monday, September 24, 2007

ಏನು ರೋಷ, ಏಕೀ ವೈಭವೀಕರಣ?

ಈಗ್ಗೆ ಮೂರ್ನಾಲ್ಕು ತಿಂಗಳಿನಿಂದ ಉದಯ ಟಿವಿ ಸಬ್‌ಸ್ಕ್ರೈಬ್ ಮಾಡಿಕೊಂಡು ಕನ್ನಡ ಕಾರ್ಯಕ್ರಮಗಳನ್ನು ಬಿಡುವಿನಲ್ಲೋ ಅಥವಾ ಡಿವಿಆರ್ ಕೃಪಾಕಟಾಕ್ಷದಿಂದಲೋ ನೋಡಿ ಒಂದು ಹೆಜ್ಜೆ ನಮ್ಮೂರಿಗೆ ಹತ್ತಿರವಾಗುತ್ತೇನೆ ಎಂದುಕೊಂಡಿದ್ದ ನನಗೆ ಸಂತೋಷಕ್ಕಿಂತಲೂ ಭ್ರಮನಿರಸನವಾದದ್ದೇ ಹೆಚ್ಚು ಎಂದರೆ ತಪ್ಪಾಗಲಾರದು. ನನ್ನ ಈ ಮಾನಸಿಕ ಜಾಗೃತಿಯ ಹಿಂದೆ ಕನ್ನಡಿಗರದ್ದಾಗಲೀ, ಉದಯ ಟಿವಿಯವರದ್ದಾಗಲೀ ತಪ್ಪು ಇದೆ ಎನ್ನುವುದಕ್ಕಿಂತಲೂ ನನ್ನಲ್ಲಿನ ಬದಲಾವಣೆಯನ್ನು ಒರೆಗೆ ಹಚ್ಚಿ ಸುತ್ತಲನ್ನು ವಿಶೇಷವಾಗಿ ನೋಡುವ ಪ್ರಯತ್ನವಿದು ಅಷ್ಟೇ.

ನನಗೆ ಬುದ್ಧಿ ತಿಳಿದಾಗಿನಿಂದಲೂ ಕನ್ನಡ ನಾಟಕ, ಸಿನಿಮಾ, ದೊಡ್ಡಾಟ, ಬಯಲಾಟ, ವೀರಗಾಸೆ, ಯಕ್ಷಗಾನ, ಜಾನಪದ ಗಾಯನ/ನೃತ್ಯ ಮುಂತಾದವುಗಳನ್ನು ಸಹಜವಾಗಿ ನೋಡಿ ಬೆಳೆದವನು ನಾನು. ಇವತ್ತಿಗೂ ಯಕ್ಷಗಾನದ ಒಂದು ಪದವಾಗಲೀ ಸಂಭಾಷಣೆಯಾಗಲಿ ಮೈನವಿರೇಳುವಂತೆ ಮಾಡುವುದು ಖಂಡಿತ. ಅದೇ ರೀತಿ ಹಳೆಯ ಜಾನಪದ ಹಾಡುಗಳಾಗಲೀ, ಮಟ್ಟಾಗಲೀ ಮತ್ತೊಂದಾಗಲೀ ಅವುಗಳನ್ನು ಕೇಳುವುದೇ ಮನದಲ್ಲಿ ಬಹಳಷ್ಟು ಉತ್ಸಾಹವನ್ನು ಉಂಟು ಮಾಡುತ್ತವೆ. ಕೆರೆಗೆಹಾರದ ಕಥೆಯಾಗಿರಬಹುದು, ಗೋವಿನ ಹಾಡಾಗಿರಬಹುದು, ಮಾಯದಂಥ ಮಳೆಯಾಗಿರಬಹುದು, ಹಳೆಯ ಸಿನಿಮಾ ಹಾಡುಗಳಾಗಿರಬಹುದು - ಇವುಗಳಲ್ಲಿ ಏಕತಾನತೆ ಇದೆ, ಒರಿಜಿನಾಲಿಟಿ ಇದೆ, ಮೂಲವಿದೆ ಹಾಗೂ ಶೋಧಿಸುವ ಮನಸ್ಸಿಗೆ ಮುದ ನೀಡುವ ಗುಂಗಿದೆ. ಹಲವಾರು ಸಾಮಾಜಿಕ ನಾಟಕಗಳಲ್ಲಿ, ತಾಳಮದ್ದಳೆಗಳಲ್ಲಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಯಾವುದೊಂದು ಮನೋರಂಜನಾ ಪ್ರಬೇಧದಲ್ಲಿಯೂ ನಮ್ಮದೇ ಆದ ಒಂದು ಸೊಗಡಿದೆ. ಕ್ಷಮಿಸಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಮನೋರಂಜನಾ ಪ್ರಬೇಧದ ಜೀವ ಸಂಕುಲದಲ್ಲಿ ಸಿನಿಮಾ ಪ್ರಪಂಚವಾಗಲೀ, ಅಥವಾ ಇಂದಿನ ಕಿರುತೆರೆಯ ಕಣ್ಣೀರಿನ ಕೋಡಿಗಳಾಗಲೀ ಇವೆಯೇ ಅನ್ನೋದು ಬಹು ದೊಡ್ಡ ಪ್ರಶ್ನೆ. ಆದರೆ ನೀವೇ ನೋಡಿದಂತೆ ನನಗೆ ಅಪ್ಯಾಯಮಾನವಾಗುವಂತಹ ಯಾವುದೇ ಮಾಧ್ಯಮದ ಹತ್ತಿರಕ್ಕೂ ಸಿನಿಮಾ ಬಂದಿಲ್ಲ, ಅದರಲ್ಲಿಯೂ ಇತ್ತೀಚಿನ ಸಿನಿಮಾಗಳಾಗಲೀ ಹಾಗೂ ಅನೇಕ ಕಿರುತೆರೆಯ ಕಾರ್ಯಕ್ರಮಗಳಾಗಲೀ ಬಹು ದೂರ.

ನಾವು ಹೈ ಸ್ಕೂಲು ಕಾಲೇಜುಗಳಲ್ಲಿ ಅನೇಕ ಚರ್ಚಾಸ್ಪರ್ಧೆಗಳಲ್ಲಿ ವಾದ ಮಾಡುತ್ತಿದ್ದುದು ಇನ್ನೂ ನನಗೆ ಚೆನ್ನಾಗಿ ನೆನಪಿದೆ - ಭಾರತದ ಸುದ್ದಿ ಮಾಧ್ಯಮಗಳು ಸ್ವಾಯುತ್ತವಾಗಬೇಕು, ಶಾಲಾ ಕಾಲೇಜುಗಳಲ್ಲಿ ಮುಕ್ತವಾಗಿ ಲೈಂಗಿಕತೆಯ ಬಗ್ಗೆ ಪಾಠ ಹೇಳಿಕೊಡಬೇಕು, ವಿದೇಶಿ ಮಾಧ್ಯಮಗಳ ನಡೆನುಡಿ ಸಂಸ್ಕೃತಿಗಳ ಅನುಕರಣೆ ಸಲ್ಲ - ಮುಂತಾಗಿ. ಇಂದಿಗೂ ನಮ್ಮಲ್ಲಿನ ಸುದ್ದಿ ಮಾಧ್ಯಮಗಳು (ಟಿವಿ, ರೆಡಿಯೋ ಹಾಗೂ ವೃತ್ತಪತ್ರಿಕೆಗಳು) ಸ್ವಾಯುತ್ತವಾಗಿವೆ ಎಂದೇನೂ ನನಗನ್ನಿಸೋದಿಲ್ಲ, ಆದರೆ ಯಾವುದಾದರೊಂದು ಕ್ರೈಮ್ ಸಂಗತಿಯನ್ನು ವರದಿ ಮಾಡುವಾಗ ನಮ್ಮಲ್ಲಿನ ಮಾಧ್ಯಮಗಳಿಗೆ ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿ ಎಂಬುದೇ ಇಲ್ಲ ಎನ್ನಿಸಿದೆ. ರಕ್ತದ ಹೊಳೆ, ಕೊಳೆತು ಕೃಶವಾಗುತ್ತಿರುವ ಹೆಣಗಳು, ಸತ್ತ ಮಕ್ಕಳು, ಛಿದ್ರವಿಛಿದ್ರವಾದ ಜಾನುವಾರುಗಳು, ಮುಖದ ಮೇಲೆ ಬ್ಲೇಡಿನಿಂದ ಕೊಯಿಸಿಕೊಂಡು ಹತ್ಯೆಗೊಳಗಾದ ರೌಡಿಗಳು, ಗುಂಡಿನೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದ ದೇಹಗಳು ಇತ್ಯಾದಿ - ಇವುಗಳನ್ನೆಲ್ಲ ವಾರ್ತಾ ಮಾಧ್ಯಮದಲ್ಲಿ ನೋಡಿ ನನಗಂತೂ ಸಾಕಾಗಿ ಹೋಗಿದೆ. ನಿಜವಾಗಿಯೂ ಕೇಳುಗರಿಗೆ ಆ ಪ್ರಮಾಣದ ಡೀಟೈಲ್‌ನ ಅವಶ್ಯಕತೆ ಇದೆಯೇ? ನಮ್ಮಲ್ಲಿನ ಸುದ್ಧಿ ಮಾಧ್ಯಮಗಳ ಕಾರ್ಯಕ್ರಮ ಹಾಗೂ ಬರಹ ಯಾವ ರೇಟಿಂಗ್‌ಗೆ ಒಳಪಡುತ್ತವೆ? ಶಾಲಾ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಓದಿ/ನೋಡಲು ಅವು ಲಾಯಕ್ಕೇ ಎನ್ನುವ ಪ್ರಶ್ನೆ ನನಗಂತೂ ಪದೇಪದೇ ಮನಸ್ಸಿನಲ್ಲಿ ಏಳುತ್ತಿರುತ್ತದೆ. ಆದರೆ ಅವುಗಳಿಗೆಲ್ಲಾ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಾಧ್ಯಮಗಳ ತಂತ್ರಜ್ಞಾನ ಏನೇ ಬದಲಾದರೂ ಅವು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು, ವರದಿಗಳನ್ನು ಹೀಗೆಯೇ ತೋರಿಸಿಕೊಂಡು ಬಂದಿದ್ದರೆ ಇಂದು ಅಂತಹ ಕಾರ್ಯಕ್ರಮಗಳನ್ನು ವಿಶೇಷವಾಗಿ ನೋಡುತ್ತಿರುವ ನನ್ನಲ್ಲಿನ ಬದಲಾವಣೆಗಳನ್ನೇ ದೂರಲೇ? ಅಥವಾ ಸದಾ ವಿದೇಶಿ ಸೋಗನ್ನು ಹಾಕಿಕೊಂಡಿರುವ ದೇಶಿಗಳಿಗೆ ಬೇಕಾದಷ್ಟು ವಿದೇಶಿ ಚಾನೆಲ್ಲುಗಳ ಕಾರ್ಯಕ್ರಮಗಳ ರೂಪುರೇಶೆಯನ್ನು ನೋಡಿ ಕಲಿಯುವುದಾಗಲೀ, ತಮಗೆ ಅನ್ವಯಿಸಿಕೊಳ್ಳುವುದಾಗಲೀ ಏನೂ ಇಲ್ಲವೇ?

ನಾನು ಹಿಂದಿ ಸಿನಿಮಾಗಳನ್ನು ನೋಡದೇ ಹಲವಾರು ವರ್ಷಗಳೇ ಕಳೆದು ಹೋದವು, ಇತ್ತೀಚಿನ ಅನೇಕ ಕನ್ನಡ ಚಲನ ಚಿತ್ರಗಳನ್ನು ನೋಡಿ ನನಗಂತೂ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ ಹಾಗೂ ಬಿಗಡಾಯಿಸಿದೆ ಎನ್ನಿಸಿಬಿಟ್ಟಿತು. ಇಂದಿನ ಸಿನಿಮಾಗಳು ಜನಪ್ರಿಯತೆಯ ಸೋಗಿಗೆ ಕಟ್ಟುಬಿದ್ದು ಅನೇಕ ರಂಗುರಂಗಿನ ಅಂಶಗಳನ್ನು ಒಳಗೊಂಡು ಈಗಿನ ಟಿವಿ-ವಿಸಿಡಿ ಕಾಲದಲ್ಲೂ ಪ್ರೇಕ್ಷಕ ಪರಮಾತ್ಮನನ್ನು ಥಿಯೇಟರಿಗೆ ಹೊರಡಿಸುವ ಯಾವುದೋ ಒಂದು ಮಹಾನ್ ಪ್ರಯತ್ನವಿದ್ದಿರಬಹುದು, ನನ್ನಂತಹವರು ಥಿಯೇಟರಿಗೆ ಹೊಕ್ಕು ಕೊಡುವ ರೂಪಾಯಿಯನ್ನು ನಂಬದೇ ಇದ್ದಿರಬಹುದಾದ ಒಂದು ವ್ಯವಸ್ಥಿತ ಇಂಡಸ್ಟ್ರಿಯಾಗಿರಬಹುದು. ಆದರೆ, ಇಂದು ಥಿಯೇಟರಿನಲ್ಲಿ ಬಿಡುಗಡೆಯಾದದ್ದು ನಾಳೆ ಪುಕ್ಕಟೆಯಾಗಿ ಟಿವಿ ಮುಂತಾದ ಮಾಧ್ಯಮಗಳ ಮೂಲಕ ಬಿಕರಿಯಾಗಿ ಸಮಾಜವನ್ನು ಅಲ್ಲೋಲಕಲ್ಲೋಲಗೊಳಿಸುತ್ತಲ್ಲಾ, ಅದಕ್ಕ್ಯಾರು ಜವಾಬ್ದಾರರು? ಇಂದಿನ ಹೀರೋಗಳಿಗೆ ಅದೇನು ರೋಷ, ಅದೇನು ಆವೇಶ, ಸಿನಿಮಾಗಳಲ್ಲಿ ಸೇಡು-ರೋಷದ ಅದೇನು ವೈಭವಿಕರಣ? ಪ್ರೇಕ್ಷಕರನ್ನು ಕುರಿಗಳೆಂದು ಭಾವಿಸಿ ಸಿನಿಮಾದಲ್ಲಿ ಹೀರೋಗಳ ರೂಪುರೇಶೆಯನ್ನು ಅವರ ನಡತೆಯನ್ನು ಯದ್ವಾತದ್ವಾ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಕಲಾವಿದರ ಹೆಸರಿನಲ್ಲಿ ಕಳಪೆಯನ್ನು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ತಂಡದವರಿಗೆ ಧಿಕ್ಕಾರವಿರಲಿ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅದು ಹೇಗೆ ತಾನೇ ನ್ಯಾಯವಾದೀತು? ಇವರ ಮನೆಯಲ್ಲಿರೋ ಶಾಲೆಗೆ ಹೋಗೋ ಮಕ್ಕಳು ಆ ರೀತಿಯ ಪ್ರಶ್ನೆಗಳನ್ನು ಕೇಳೋದಿಲ್ಲವೇ? ಒಬ್ಬನನ್ನು ಕೊಲೆಗೈದವನು ಕೊಲೆಗಡುಕನೇ - ಯಾವ ಕಾರಣಕ್ಕಾದರೇನಂತೆ, ಅದಕ್ಕೆ ನ್ಯಾಯಾನ್ಯಾಯ ಹೇಳುವುದು ಎರಡೂವರೆ ಘಂಟೆ ನಂತರ ಸಿನಿಮಾದ ಕರ್ಕಶ ಶಬ್ದಗಳಿಗೆ ಅಲ್ಲಿ ಹುಟ್ಟಿ ಹೊರಬರುವ ಧ್ವನಿಗಳಿಗೆ ಕಂಗಾಲಾದ ಪ್ರೇಕ್ಷಕನ ಮನಸ್ಥಿತಿಯಲ್ಲ. ಸಾಮಾಜಿಕ ನ್ಯಾಯ ಎಂದಿಗೂ ಸಾಮಾಜಿಕ ನ್ಯಾಯವೇ ಎನ್ನುವ ಸರಳ ಸಮೀಕರಣ ನಮ್ಮ ಪರಂಪರೆಗೆ ಏಕೆ ಸಿದ್ಧಿಸದೋ ಕಾಣೆ. ಗಟ್ಟಿ ಇದ್ದವನು ಬದುಕುತ್ತಾನೆ ಅನ್ನೋದು ಹೊಡೆದಾಡಿ ಬಡಿದಾಡಿ ಬದುಕುವುದು ಎನ್ನುವ ಮಟ್ಟಿಗೆ ಸಂದು ಹೋಗಿರೋದು ನಮ್ಮವರ ಸಮಸ್ಯೆ ಅಲ್ಲ, ನನ್ನ ಸಮಸ್ಯೆ - ಏಕೆಂದರೆ ಮೊದಲೆಲ್ಲ ಈ ರೀತಿಯ ವಿಷಯಗಳು ಕಾಣಿಸುತ್ತಿರಲಿಲ್ಲ, ಕಾಣಿಸಿದ್ದರೂ ಅವು ಎಲ್ಲೋ ಹುಟ್ಟಿ ಕರಗುವ ಧ್ವನಿಗಳಾಗುತ್ತಿದ್ದವು, ಆದರೆ ಇಂದು ಅಂತಹ ಧ್ವನಿಗಳೇ ಮುಖ್ಯವಾಹಿನಿಗಳಾಗಿವೆ ನನ್ನ ಮನಸ್ಸಿನಲ್ಲಿ.

ನಮ್ಮ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಪರಂಪರೆಗೆ ಬೇಕಾದಷ್ಟು ಸೃಜನಶೀಲತೆ ಇದೆ. ಇವತ್ತಿಗೂ ಒಂದು ಪ್ರೇಮಗೀತೆಯಿಂದ ಹಿಡಿದು, ಧಾರುಣ ಕಥೆಯವರೆಗೆ ಹೆಣಿಗೆಯನ್ನು ನೇಯಬಲ್ಲ ಒರಿಜಿನಾಲಿಟಿ ನಮ್ಮಲ್ಲೂ ಇದೆ. ಹಾಗಿದ್ದಾಗ ಹೊರಗಿನಿಂದ ಕದ್ದು ತಂದು ತಮ್ಮದನ್ನಾಗಿ ಮಾಡಿ ತೋರಿಸುವ ಅವಸ್ಥೆ ಯಾರಿಗೂ ಬೇಡ. ನಮ್ಮಲ್ಲಿನ ಯುವಕರಾಗಲೀ, ವೃತ್ತಿಕರ್ಮಿಗಳಾಗಲೀ ತಟ್ಟನೆ ಪ್ರತಿಫಲವನ್ನು ಹುಡುಕಿ ಹೀಗಾಯಿತೋ ಎಂದು ಎಷ್ಟೋ ಸಾರಿ ಯೋಚಿಸಿದ್ದೇನೆ. ಹತ್ತು-ಹದಿನೈದು ವರ್ಷ ಸಂಗೀತ ಸಾಧನೆ ಮಾಡಿ ಮುಂದೆ ಬರಲಿ - ಆಗ ಒಡಲೊಳಗಿನ ಪ್ರತಿಭೆಗೆ ಒಂದು ಒರೆಹಚ್ಚಿ ತೀಡಿದಂತಾಗಿ ಪ್ರಭೆ ಹೊರ ಸೂಸುತ್ತಿತ್ತೋ ಏನೋ ಆದರೆ ನಮ್ಮಲ್ಲಿನ ವಜ್ರದ ಹರಳುಗಳು ಅದರಿನ ರೂಪದಲ್ಲೇ ಹೊಳೆಯಲು ಹೊರಟು ಯಾವುದೋ ವಕ್ರಕಿರಣ-ವರ್ಣಗಳನ್ನು ಸೂಸುವುದನ್ನು ನೋಡಲು ಸಾಧ್ಯವೇ ಇಲ್ಲ ಎನ್ನಿಸಿದೆ. ಮನೋರಂಜನೆಗೆ ಸೀಮಿತವಾದ ಯಾವುದೇ ಅಂಗವಿರಲಿ - ನಿರ್ದೇಶನವಿರಲಿ, ವಸ್ತ್ರವಿನ್ಯಾಸವಿರಲಿ, ಚಿತ್ರಕಥೆ ಬರೆಯುವುದಿರಲಿ, ಸಂಕಲನ ಮಾಡುವುದಿರಲಿ - ಇವುಗಳಿಗೆ ತಕ್ಕ ಮಟ್ಟಿನ ತರಬೇತಿ ಇಲ್ಲದೇ ನಾನೂ ಕೆಲಸ ಮಾಡುತ್ತೇನೆ ಎಂದು ಮೀಡಿಯೋಕರ್ ಕೆಲಸ ಮಾಡಿ ಅದರ ಮೇಲೆ ಜೀವನವನ್ನಾಧರಿಸುವುದಿದೆ ನೋಡಿ - ಅದು ಬಹಳ ಕಷ್ಟದ ಕೆಲಸ. ವಿದೇಶದ ಸಿಂಫನಿ ಆರ್ಕೇಷ್ಟ್ರಾಗಳಲ್ಲಿ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ನಿರಂತರವಾಗಿ ದುಡಿದು ಅದರ ಮೇಲೇ ಜೀವನವನ್ನಾಧರಿಸುವ ಸಾಮಾಜಿಕ ನೆಲೆಗಟ್ಟು ನಮ್ಮಲ್ಲಿ ಇಲ್ಲದಿರಬಹುದು, ಕಲಾವಿದರಿಗೆ ಅವರ ಪ್ರತಿಭೆಗೆ ತಕ್ಕ ಪೋಷಣೆ ಸಿಗದೇ ಇರಬಹುದು ಆದರೆ ನನ್ನಂತಹ ಸಾಮಾನ್ಯನಿಗೂ ಗೊತ್ತಾಗುವಷ್ಟು ಕಳಪೆ ಗುಣಮಟ್ಟದ ಕಾರ್ಯಕ್ರಮಗಳನ್ನು ಹೊರತರುವುದಾದರೂ ಏಕೆ? ಅದರಿಂದ ಯಾರಿಗೇನು ಲಾಭವಿದೆ ಹೇಳಿ ನೋಡೋಣ.

ಮಚ್ಚೂ-ಲಾಂಗು ಸಂಸ್ಕೃತಿ ನಮ್ಮದೇ, ಇಲ್ಲವೆಂದಾದರೆ ಎಲ್ಲಿಂದ ಬಂತು? ಒಂದು ಕಾಲದಲ್ಲಿ ರಿವಾಲ್ವರ್‌ನಿಂದ ಗುಂಡು ಹೊಡೆಸಿಕೊಂಡು ಸಾಯುವುದೇ ಅಪರೂಪವಾಗಿರುವಂಥ ಕನ್ನಡ ನಾಡಿನಲ್ಲಿ ಇಂದು ಎಷ್ಟೋ ಜನರ ಕೊಲೆಯನ್ನು ಗುರುತು ಸಿಗದ ಮುಸುಕುಧಾರಿಗಳು ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಏನು ಕಾರಣ? ಸಿನಿಮಾದಿಂದ ಸಮಾಜ ಪ್ರೇರಣೆ ಪಡೆಯುತ್ತದೆಯೋ, ಅಥವಾ ಸಮಾಜ ಇರುವುದನ್ನು ಸಿನಿಮಾ ಹೀಗೆ ಎಂದು ಗುರುತಿಸುತ್ತದೆಯೋ? ಕಾಲೇಜ್‌ಗೆ ಚಕ್ಕರ್ ಹೊಡೆದು ಮನೆಯಲ್ಲಿ ಅಪ್ಪ ಅಮ್ಮರಿಗೆ ತಿನ್ನೋಕೆ ಗತಿ ಇರದ ಪರಿಸ್ಥಿತಿಯಲ್ಲಿನ ನಾಯಕನನ್ನು ವೈಭವೀಕರಿಸಿ ನಮ್ಮ ಸಿನಿಮಾ ಕಥೆಗಳು ಯಾವ ನ್ಯಾಯವನ್ನು ಸಾರುತ್ತಿವೆ? ಸಿನಿಮಾ ಹೀರೋಗಳೆಲ್ಲಾ ಗೆಲ್ಲಲೇ ಬೇಕೆಂದರೆ ಹಾಗಾದರೆ ಅವು ಸಮಾಜದ ನಿಜವಾದ ಪ್ರತಿಬಿಂಬವಲ್ಲ ಎಂದಂತಾಗಲಿಲ್ಲವೇ? ಬುದ್ಧಿವಂತರು ಕಳಪೆ ಸಿನಿಮಾವನ್ನೇಕೆ ನೋಡಬೇಕು, ಅವುಗಳಿಗೆ ನಮ್ಮ ಭಾಷೆ, ಭಾವನೆ, ಹಾಗೂ ನಾವು ನೆಚ್ಚುವ ನಾಯಕರನ್ನೇಕೆ ಬಲಿಕೊಡಬೇಕು?

ನೀವು ಏನೇ ಹೇಳಿ ಕಳಪೆಯನ್ನು, ಕಡಿಮೆ ಗುಣಮಟ್ಟದ್ದನ್ನು ಹೀಗಿದೆ ಎಂದು ಹೇಳುವ ಸ್ಪಷ್ಟತೆ ನಮ್ಮಲ್ಲಿನ್ನೂ ಬರಲೇ ಇಲ್ಲ - ನಾನೋದುವ ಸಿನಿಮಾ ವಿಮರ್ಶೆಗಳಿಗೆ ಜೀವವೇ ಇರೋದಿಲ್ಲ. ವಿಮರ್ಶೆಗೆ ಒಳಪಡದ ಮಾಧ್ಯಮಕ್ಕೆ ಒಂದು ರೀತಿ ಲಂಗುಲಗಾಮು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಒಂದು ಕಾಲದಲ್ಲಿ ನಾನೋದುತ್ತಿದ್ದ ’ವಿಜಯಚಿತ್ರ’ ವಾರಪತ್ರಿಕೆಯಲ್ಲಿ ’ಮೆಚ್ಚದ್ದು-ಮೆಚ್ಚಿದ್ದು’ ಎಂಬ ಅಂಕಣದಲ್ಲಾದರೂ ನಮ್ಮಂತಹವರು ಒಂದಿಷ್ಟು ಸಂಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆವು. ಇಂದಿನ ಮುಂದುವರೆದ ಮಾಧ್ಯಮಗಳಲ್ಲಿ ಅಂತಹ ಸುಲಭವಾದ ಸಾಧನಗಳು ಪ್ರೇಕ್ಷಕನಿಗೆ ಇವೆಯೋ ಇಲ್ಲವೋ, ಇದ್ದರೂ ಅಲ್ಲಿಂದ ಅಣಿಮುತ್ತುಗಳನ್ನು ಆರಿಸಿ ತಮ್ಮನ್ನು ತಾವು ಬೆಳೆಯಲು ಬಳಸಿಕೊಳ್ಳುವ ಮಹಾನ್ ಕಲಾವಿದರ ಕಾಲವಂತೂ ಇದ್ದಂತಿಲ್ಲ...

ಕ್ಷಮಿಸಿ, ಇವೆಲ್ಲವೂ ನನ್ನಲ್ಲಿನ ಬದಲಾವಣೆಯಿಂದ ಹುಟ್ಟಿಬಂದವುಗಳು - ನಮ್ಮ ಮಾಧ್ಯಮಗಳು ಹೇಗಿವೆಯೋ ಹಾಗೇ ಇರಲಿ!

Sunday, September 23, 2007

ಭಾನುವಾರದ ಒಣಮನಸ್ಸು

ಇವತ್ತು ಬೆಳಗ್ಗಿನಿಂದಲೂ ಒಂಥರಾ ಯಾರ ಮೇಲಾದ್ರೂ ಕಿರುಚಾಡಬೇಕು ಅನ್ನೋ ಅಸ್ತವ್ಯಸ್ತ ಮನಸು, ಯಾಕ್ ಹೀಗೆ ಅಂತ ನೋಡ್ತಾ ಹೋದ್ರೆ ಸಾವಿರದ ಒಂದು ಕಾರಣಗಳು...ನಾನೂ moody ಆಗಿ ಬಿಟ್ಟೆನೇ ಎಂದು ಚಿವುಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ... ಸ್ವಲ್ಪ ಕೆದಕಿ ನೋಡಿದಾಗ ಒಂದು ಮಹಾ ಕಾರಣ ಗಂಟು ಬಿದ್ದಿತು. ಎರಡು ವಾರದ ಹಿಂದೆ ನನ್ನ ಪರ್ಸನಲ್ ಲ್ಯಾಪ್‌ಟಾಪಿನ ಹಾರ್ಡ್ ಡ್ರೈವ್ ಮಠ ಹತ್ತಿ ಹೋಗಿದ್ದು, ಇವತ್ತು ಅದನ್ನು ರಿಪೇರಿ ಮಾಡಿ ಡೇಟಾ ರಿಕವರಿ ಮಾಡುವ ಪುಣ್ಯಾತ್ಮ ಕೊಟ್ಟ ಎಸ್ಟಿಮೇಟನ್ನ್ ನೋಡಿದ ಮೇಲೆ ಡೇಟಾ ಮುಖ್ಯವೋ ಹಣ ಮುಖ್ಯವೋ ಎಂದು ಒಂದನೇ ಕ್ಲಾಸಿನ ಹುಡುಗನ ಹಾಗೆ ಮನಸಿನಲ್ಲೇ ಕೂಡಿಸಿ ಭಾಗಿಸಿ ಗುಣಿಸಿ ಕಳೆದರೂ ಉತ್ತರ ದೊರೆಯವಲ್ಲದು.

ಸುಮಾರು ಒಂದು ತಿಂಗಳ ಹಿಂದೆ ನನಗೇ ನಾನು ರಿಮೈಂಡರ್ ಬರೆದುಕೊಂಡು ಒಂದು ದಿನ ಪರ್ಸನಲ್ ಲ್ಯಾಪ್‌ಟಾಪಿನ ಡೇಟಾ ಬ್ಯಾಕ್‌ಅಪ್ ಮಾಡಿಡಬೇಕು ಎಂದುಕೊಂಡಿದ್ದೆ. ಅದಾದ ಒಂದು ವಾರದ ನಂತರ ಇದ್ದಕ್ಕಿದ್ದ ಹಾಗೆ ಒಂದು ಬ್ಲೂ ಸ್ಕ್ರೀನ್ ಎರರ್ ಮೆಸೇಜ್ ಬಂತು, ಎರರ್ ಅನ್ನು ಓದಿ ಬರೆದುಕೊಳ್ಳಲೂ ಆಸ್ಪದ ಕೊಡದ ಹಾಗೆ ಸಿಸ್ಟಂ ನಿಂತು ಹೋಯಿತು. ಮತ್ತೆ ಪುನಃ ಚಾಲೂ ಮಾಡಿ ನೋಡಿದರೆ ಕೆಲಸ ಮಾಡುತ್ತಿಲ್ಲ, ಬದಲಿಗೆ ’ಕ್ಲಿಕ್ ಕ್ಲಿಕ್’ ಶಬ್ದ ಬೇರೆ. ಅಷ್ಟು ಹೊತ್ತಿಗೆಲ್ಲಾ ನನಗೆ ಆಗಿದ್ದೇನು ಎಂದು ಗೊತ್ತಾಗಿ ಹೋಗಿತ್ತು, ಇನ್ನು ಹಾರ್ಡ್ ಡ್ರೈವ್ ತೆರೆದೇ ಅದರಲ್ಲಿರೋ ಡೇಟಾ ರಿಕವರಿ ಮಾಡಬೇಕು, ಹೆಚ್ಚೆಂದರೆ ಒಂದು ಐನೂರು ಡಾಲರ್ ಖರ್ಚಾಗುತ್ತೇನೋ ಎಂದುಕೊಂಡಿದ್ದವನಿಗೆ ಇವತ್ತಿನ ಎಸ್ಟಿಮೇಟ್ ಪ್ರಕಾರ ಸಾವಿರದ ಏಳುನೂರು ಡಾಲರುಗಳಂತೆ! ಬೇರೆಡೆ ಕೇಳಿ ನೋಡಬೇಕು, ಆದರೂ ಐನೂರು ಡಾಲರುಗಳಿಗೆ ಅದನ್ನು ಬಿಚ್ಚಿ ಸರಿ ಮಾಡುವ ಭೂಪ ಸಿಗುವವರೆಗೆ ಇನ್ನು ಅದೆಷ್ಟು ವರ್ಷಗಳು ನನಗೆ ಬೇಕೋ!

ಆ ಹಾರ್ಡ್‌ಡ್ರೈವ್‌ನಲ್ಲಿ ಅಸಂಖ್ಯ ಫೈಲುಗಳು ನನಗೆ ಬೇಕಾದವುಗಳು ಇದ್ದವು - ಫೋಟೋಗಳು, ಹಾಡುಗಳು, ಸ್ಪ್ರೆಡ್‌ಶೀಟುಗಳು, ಡಾಕ್ಯುಮೆಂಟುಗಳು, ನಾನು ಈ ಕಂಪನಿ ಸೇರಿದಂದಿನ ಮೊದಲ ದಿನದಿಂದ ಪೇರಿಸಿಟ್ಟ ಇ-ಮೇಲುಗಳು, ’ಅಂತರಂಗ’ದ ಒರಿಜಿನಲ್ ಫೈಲುಗಳು, ನಾನಾ ರೀತಿಯ ಸಾಫ್ಟ್‌ವೇರುಗಳು, ಇತ್ಯಾದಿ. ಈಗ ಅವುಗಳಿಗೆಲ್ಲ ಒಂದೊಂದು ಬೆಲೆ ಕಟ್ಟಿ ಅವುಗಳ ಮೊತ್ತವನ್ನು ತುಲನೆ ಮಾಡಿ ನೋಡಬೇಕಾದ ಸಂದರ್ಭ ಬಂದಿದೆ. ಅವುಗಳೆಲ್ಲ ಬೇಕೋ, ಬೇಡವೋ...ಬೇಕಿದ್ದರೆ ಎಷ್ಟು ಹಣವನ್ನು ಖರ್ಚು ಮಾಡಬಲ್ಲೆ, ಇಡೀ ಕಂಪ್ಯೂಟರ್‌ಗೇ ಸಾವಿರದ ಇನ್ನೂರನ್ನು ಕೊಟ್ಟು ಮೂರು ವರ್ಷ ಉಪಯೋಗಿಸಿರುವ ನಾನು ಇನ್ನು ಕೇವಲ್ ಹಾರ್ಡ್‌ಡ್ರೈವ್ ಸರಿ ಮಾಡಿಸಲು ಹತ್ತಿರ ಹತ್ತಿರ ಅದರ ಎರಡು ಪಟ್ಟು ಹಣವನ್ನು ಖರ್ಚು ಮಾಡುವುದು ತರವೇ ಅಥವಾ ನಮ್ಮ ಮಾಹಿತಿ, ಡೇಟಾ ಮುಖ್ಯ ಅವುಗಳಿಗೆ ಯಾವ ಬೆಲೆಯನ್ನು ಕಟ್ಟಲಾಗದು ಎನ್ನುವುದು ಸರಿಯೇ?

ಈ if ಮತ್ತು when ಗಳ ವ್ಯತ್ಯಾಸದಲ್ಲಿ ನಾನಂತೂ ನಲುಗಿ ಹೋಗಿದ್ದೇನೆ. If the hard drive crashes...ಎನ್ನುವುದಕ್ಕಿಂತ When the hard drive crashes ಎನ್ನುವುದು ಸರಿಯಾದದ್ದು. ಇವತ್ತಲ್ಲ ನಾಳೆ ಹಾಳಾಗುತ್ತದೆ ಎಂದು ಗೊತ್ತಿದ್ದ ನನಗೆ ಬೇಕಾದ್ದನ್ನು ಸಂರಕ್ಷಿಸಿಡ ತಪ್ಪಿಗೆ ಇಂದು ತೆರಬೇಕಾದ ಬೆಲೆ ಬಹಳ. ತಂತ್ರಜ್ಞಾನ ಯಾವುದೇ ರೀತಿಯಲ್ಲಿ ಮುಂದುವರೆಯಲಿ ಬಿಡಲಿ, ನಾವು ಅವಿಷ್ಕರಿಸುವ ಹೊಸ ಮಾರ್ಗಗಳು ಅಷ್ಟೇ ವಲ್ನರೆಬಲ್ ಅನ್ನಿಸೋಕೆ ಶುರುವಾಗಿದ್ದೇ ಇವತ್ತಿನ ಒಣಮನಸ್ಸಿನ ಹಿಂದಿನ ಮೂಲ ಕಾರಣ. ನನ್ನ ವಸ್ತುಗಳಿಗೆ, ಮಾಹಿತಿಗೆ, ಅವುಗಳ ಹಿಂದಿನ ಫೈಲುಗಳಿಗೆ ಬೆಲೆ ಕಟ್ಟಲಾಗದು ಸರಿ, ಆದರೆ ಇವತ್ತಲ್ಲ ನಾಳೆ ಎಂದು ಮುಂದೂಡುತ್ತಲೇ ಬಂದ ಬ್ಯಾಕ್‌ಅಪ್ ಕಾಯಕಕ್ಕೆ ಇಷ್ಟೊಂದು ದೊಡ್ಡ ಹೊಡೆತ ಬೀಳಬಾರದಿತ್ತು. ಹೀಗೇ ಒಂದು ದಿನ ಗೂಗಲ್ ವೇರ್‌ಹೌಸ್‌ಗಳಿಗೆ ಬೆಂಕಿ ಬಿದ್ದು ’ಅಂತರಂಗ’ದಂತಹ ಎಲ್ಲ ಬ್ಲಾಗ್‌ಗಳೂ ತಮ್ಮ ತಮ್ಮ ಹಿಂದಿನ ಫೈಲುಗಳನ್ನು ಕಳೆದುಕೊಂಡವೆನ್ನೋಣ, ಅಂದರೆ ನಮ್ಮ ಇತಿಹಾಸ, ನಾವು ನಡೆದು ಬಂದ ಹಾದಿಗೆ ಅಷ್ಟೇ ಬೆಲೆಯೇ? ಅಥವಾ ನಮ್ಮ ಇತಿಹಾಸ ಎನ್ನುವುದು ಕೆಲವು ಕಂಪ್ಯೂಟರ್ ಸರ್ವರ್ ಅಥವಾ ಹಾರ್ಡ್‌ಡ್ರೈವ್‌ಗಳ ಮೇಲೆ ಅವಲಂಭಿತವಾಗಬೇಕೆ? ಗೂಗಲ್ ಅಥವಾ ಯಾಹೂ ಅಂತಹ ಕಂಪನಿಗಳು ತಮ್ಮ ತಮ್ಮ ಡಿಸಾಸ್ಟರ್ ರಿಕವರಿ ಪ್ರೊಸೀಜರ್ ಪ್ರಕಾರ ಅವರ ಸರ್ವರ್ ಹಾಗೂ ಮಾಹಿತಿಯನ್ನು ಬ್ಯಾಕ್‌ಅಪ್ ಮಾಡಿ ಇನ್ನೆಲ್ಲೋ ಫಿಸಿಕಲ್ ಲೊಕೇಷನ್ನಲ್ಲಿ ಇಟ್ಟಿರಬಹುದು, ಇಡದೆಯೂ ಇರಬಹುದು - ಒಂದು ಇ-ಮೇಲ್ ಅಕೌಂಟ್ ತೆರೆದರೆ ಅದರಲ್ಲಿನ ಟರ್ಮ್ಸ್ ಮತ್ತು ಕಂಡೀಷನ್ಸ್ ಅನ್ನು ಪೂರ್ಣವಾಗಿ ಓದಿದ್ದವರಿಗೆ ಗೊತ್ತಿರುತ್ತದೆ, ಈ ಫ್ರೀ ಆಗಿ ಸಿಗಬಹುದಾದ ಅಮೂಲ್ಯ ಸಾಧನಗಳು ಅಷ್ಟೇ ವಲ್ನರಬಲ್ ಎಂಬುದಾಗಿ.

ಕೆಟ್ಟ ಮೇಲೆ ಬುದ್ಧಿ ಬಂತು - ಎಂದ ಹಾಗೆ ನಾನು ನನ್ನೆಲ್ಲ ಮಾಹಿತಿ/ಡೇಟಾವನ್ನು ಬ್ಯಾಕ್‌‍ಅಪ್ ಮಾಡಿಟ್ಟು ಬಿಟ್ಟಿದ್ದೇನೆ ಎಂದುಕೊಂಡರೆ ಅದು ತಪ್ಪು. ಈಗ ಟೈಪ್ ಮಾಡುತ್ತಿರುವ ಆಫೀಸ್ ಲ್ಯಾಪ್‌ಟಾಪ್, ಮತ್ತೆ ಮನೆಯಲ್ಲಿರುವ ಡೆಸ್ಕ್‌ಟಾಪ್ ಇವೆಲ್ಲವನ್ನೂ ಹಾಗೇ ಬಿಟ್ಟಿದ್ದೇನೆ, ಕೆಟ್ಟು ಹೋದರೆ ಹೋಗಲಿ ಎಂದು. ಅಷ್ಟೊಂದು ಫೈಲುಗಳನ್ನು ಕಳೆದುಕೊಂಡವನಿಗೆ ಇನ್ನೊಂದಿಷ್ಟು ಹೋದರೆ ಏನೂ ಅನಿಸದಿರಬಹುದು ಎಂಬ ಹುಂಬ ನೆಪದ ಹಿನ್ನೆಲೆಯಲ್ಲಿ. ಆದರೆ ಇವತ್ತಲ್ಲ ನಾಳೆ ನನಗೆ ಬೇಕಾದ ಎಲ್ಲ ಫೈಲುಗಳನ್ನು ಡಿವಿಡಿ ಬರ್ನ್ ಮಾಡುವುದರ ಮೂಲಕ ಉಳಿಸಿಕೊಳ್ಳಬೇಕು, ಜೊತೆಗೆ ಯಾವುದಾದರು ಆನ್‌ಲೈನ್ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿ ಕೈ ತೊಳೆದುಕೊಳ್ಳಬೇಕು. ದುಡ್ಡುಕೊಟ್ಟಾದರೂ ಡೇಟಾವನ್ನು ಉಳಿಸಿಕೊಳ್ಳುವುದು ಜಾಣತನ, ಇಲ್ಲವೆಂದಾದರೆ ನನ್ನ ಹಾಗೆ ಒಣ ಭಾನುವಾರವನ್ನಷ್ಟೇ ಅಲ್ಲ, ಇಡೀ ವಾರವನ್ನು ಕಳೆದರೂ ಕಳೆದು ಹೋದುದು ಮತ್ತೆ ಬರಬೇಕಾದರೆ ಬಹಳ ಕಷ್ಟವಿದೆ.

ಇವತ್ತಲ್ಲ ನಾಳೆ - ಹಾಳಾಗಿರುವ ಹಾರ್ಡ್‌ಡ್ರೈವ್ ಅನ್ನು ಭಾರತಕ್ಕೋ, ಸಿಂಗಪುರಕ್ಕೋ, ಮಲೇಶಿಯಾಕ್ಕೋ ಕಳಿಸಿ, ಅಷ್ಟೊಂದು ದುಬಾರಿ ಬೆಲೆಯನ್ನು ತೆರದೆ ಡೇಟಾ ರಿಕವರ್ ಮಾಡಿಸಬಹುದು ಎನ್ನುವುದು ಎಲ್ಲೋ ಅಂತರಾಳದಲ್ಲಿ ಹುಟ್ಟಿ ಬೆಳೆಯುವ ಅಲೆ, ಅಥವಾ ನಂಬಿಕೆ ಅಥವಾ ಹುಂಬತನದ ಪರಮಾವಧಿ. ಏಕೆಂದರೆ ಒಂದು ಪತ್ರವನ್ನು ಮೇಲ್ ಮಾಡೋದಕ್ಕೆ ಎರಡು ವಾರ ತೆಗೆದುಕೊಳ್ಳೋ ನಾನು ಇನ್ನು ಹಾರ್ಡ್‌ಡ್ರೈವ್ ಅನ್ನು ಮತ್ಯಾವುದೋ ದೇಶಕ್ಕೆ ಕಳಿಸಿ ಅದನ್ನು ಫಾಲ್ಲೋ ಅಪ್ ಮಾಡಿ ಯಶಸ್ವಿಯಾಗಿ ಹಿಂತಿರುಗಿಸಿಕೊಳ್ಳುವುದೆಂದರೆ ನನ್ನ ಮಟ್ಟಿಗೆ ಗೌರಿಶಂಕರವನ್ನು ಹತ್ತಿದಂತೆಯೇ ಸರಿ.

ಈಗಿರುವ ಆಪ್ಷನ್ನುಗಳು ಇಷ್ಟೇ - ಒಂದೇ ಒಂದಕ್ಕೆರಡು ಅಥವಾ ಮೂರು ಪಟ್ಟು ಹಣ ತೆತ್ತು ಡೇಟಾ ರಿಕವರಿ ಮಾಡಿಸುವುದು, ಇಲ್ಲಾ ಹೋದರೆ ಹೋಗಲಿ ಎಂದು ಅದನ್ನು ಬದಿಗೆಸೆದು ಮತ್ತೊಂದನ್ನು ತಂದು ಕೂರಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ತಪ್ಪಿನಿಂದ ಪಾಠ ಕಲಿಯುವುದು, ಅಲ್ಲಲ್ಲ ಕಲಿತ ಪಾಠವನ್ನು ಆಚರಣೆಗೆ ತರುವುದು!

Friday, September 21, 2007

ಸುಳಿವು ಕೊಡುವ ಸಂಗೀತ

ಜೇಮ್ಸ್ ಬಾಂಡ್ ಚಿತ್ರದಲ್ಲಿ ಅದರ ಥೀಮ್ ಮ್ಯೂಸಿಕ್ ಆಗಾಗ್ಗೆ ಕೇಳ್ಸುತ್ತೆ, ಬಾಂಡ್ ದುಷ್ಟರ ಕೂಟವನ್ನು ಹೊಕ್ಕಾಗ, ದುಷ್ಟರನ್ನು ಸೆದೆಬಡಿಯುತ್ತಿರುವಾಗ, ಅಪಾಯದ ಸುಳಿಯಲ್ಲಿ ಸಿಲುಕುವಾಗ, ಸುಳಿಯಿಂದ ಹೊರಬರುತ್ತಿರುವಾಗ...ಹೀಗೆ ಅನೇಕ ಸನ್ನಿವೇಶಗಳಲ್ಲಿ ಅದು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ಪ್ರೇರೇಪಿಸಿ ಮುಂಬರುವ ಅಪಾಯದ ಸುಳಿವನ್ನು ಹೀರೋಗಿಂತ ಮೊದಲೇ ಪ್ರೇಕ್ಷಕರಿಗೆ ನೀಡುವ ತಂತ್ರವದು. ನಿಜ ಜೀವನದಲ್ಲೂ ಹೀಗೇ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಲ್ವಾ? ನಮಗೆ ಬರೋ ತೊಂದರೆ ತಾಪತ್ರಯಗಳು, ನಾಳೆಯ ಕೆಲಸದ ಬಗ್ಗೆ ಇಂದೇ ಕೇಳುವ ಬಾಸಿನ ಬಗ್ಗೆ, ದೂರದಲ್ಲೆಲ್ಲೋ ಹೊಂಚು ಹಾಕಿ ಕುಳಿತು ಟ್ರಾಫಿಕ್ ವಯಲೇಷನ್‌ಗೆ ಟಿಕೇಟ್ ಕೊಡುವ ಮಾಮಾನ ಬಗ್ಗೆ, ನಮ್ಮ ಪಕ್ಕದಲ್ಲೇ ಇದ್ದು ನಮ್ಮ ವಿರುದ್ಧ ಸಂಚು ಮಸೆಯುವವರನ್ನು ಕುರಿತು...ಇತ್ಯಾದಿಯಾಗಿ ಸುಳಿವು ಸಿಕ್ಕಿದ್ದರೆ ಎಷ್ಟೊಂದು ಚೆನ್ನಿತ್ತು!

ಅಥವಾ ನಮ್ಮ ಸುತ್ತ ಮುತ್ತಲು ಬೇಕಾದಷ್ಟು ಆ ರೀತಿಯ ಸುಳಿವುಗಳು ಇರುತ್ತವೆಯೋ ಏನೋ, ಅದನ್ನು ನೋಡುವ ಕೇಳಿಸಿಕೊಳ್ಳುವ ಮನಸ್ಥಿತಿ ಇರಬೇಕಷ್ಟೇ. ಯಾವುದೋ ಒಂದು ಅವಘಡದಿಂದ ಪಾರಾಗಿ ಹೊರಬಂದ ಮೇಲೆ ಅಥವಾ ನೋವು ಅನುಭವಿಸಿ ಅದರಿಂದ ಸುಧಾರಿಸಿಕೊಂಡ ಮೇಲೆ ಅಯ್ಯೋ ಆ ಸುಳಿವು ಸಿಕ್ಕಿತ್ತು, ಅದನ್ನು ನಾನು ಗಮನಿಸಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡಿರುವ ಪ್ರಸಂಗಗಳೂ ಇಲ್ಲದೇನಿಲ್ಲ. ಇಂಗ್ಲೀಷ್‌ನಲ್ಲಿ hind site is 20/20 ಅಂತಾರಲ್ಲ ಹಾಗೆ. ಆದರೆ ಅತಿಯಾಗಿ ಇಂತಹ ಆಘಾತಕಾರಿ ಸಂಗೀತದ ಸುಳಿಯನ್ನು ಹುಡುಕಿಕೊಂಡೋ ಅಥವಾ ಪ್ರಾಬ್ಲೆಮ್ಮುಗಳನ್ನು ಆಲೋಚಿಸಿಕೊಂಡು ಅದಕ್ಕೆಲ್ಲಾ ಉತ್ತರವನ್ನೋ ಅಥವಾ ಕಾಂಟಿಜೆನ್ಸಿಯನ್ನೋ ಪ್ಲಾನು ಮಾಡಿಕೊಂಡು ಹೋಗುವುದೂ ಅಷ್ಟೇ ಅಪಾಯಕಾರಿಯಾದ ಸಮಸ್ಯೆಯಾಗಬಹುದು. ನೋಡದೇ ಬರುವ ಆಘಾತ, ಗೊತ್ತಿರುವ ಸಮಸ್ಯೆಗಳ ನಡುವೆ ಎಲ್ಲೋ ಒಂದು ಎಡೆ ಮಾಡಿಕೊಂಡು ಉಪಾಯವಾಗಿ ಕೆಲಸ ಸಾಗಿಸುವುದು ದೈನಂದಿನ ಸವಾಲು ಅಷ್ಟೇ, ಇವರೆಡರ ನಡುವೆ ಇರುವ ವ್ಯತ್ಯಾಸ ಚಿಂತೆ ಹಾಗೂ ಚಿಂತನೆಗಳಿರುವಷ್ಟೇ ಸೂಕ್ಷ್ಮವಾದದ್ದು.

ಆದರೆ, ಸಮಸ್ಯೆಗಳಿರದ ಕೆಲಸವಾಗಲೀ ಬದುಕಾಗಲೀ ಯಾವುದಿದ್ದೀತು? ಸಮಸ್ಯೆಗಳು ಬರುವುದೇ ನಮ್ಮನ್ನು ಸುಧಾರಿಸುವುದಕ್ಕೆ ಮುಂಬರುವ ಇನ್ನೊಂದ್ಯಾವುದೋ ಸನ್ನಿವೇಶಗಳಿಗೆ ನಮ್ಮನ್ನು ಅನುವು ಮಾಡುವುದಕ್ಕೆ. ನಮಗೆ ಎಂಟನೆ ತರಗತಿಯ ಕನ್ನಡ ನಾನ್ ಡೀಟೈಲ್‌ನ ’ಶಿಖರಗಾಮಿಗಳು’ ಪಾಠದಲ್ಲಿ ತೇನಸಿಂಗ್‌ ಬಗ್ಗೆ ಹೇಳುವಾಗ ಒಂದು ಮಾತು ಬರುತ್ತಿತ್ತು - ದೈಹಿಕ ಪರಿಶ್ರಮದಿಂದ ದೇಹ ಗಟ್ಟಿಯಾಗುವ ಹಾಗೆ ಮಾನಸಿಕ ಸಂಕಷ್ಟಗಳು ಮನಸ್ಸನ್ನೂ ಅಷ್ಟೇ ಗಟ್ಟಿಗೊಳಿಸುತ್ತವೆ - ಎಂಬುದಾಗಿ. ನಮ್ಮ ಭಾರತದ ಆಫೀಸುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೇಗೋ ಗೊತ್ತಿಲ್ಲ, ಇಲ್ಲಿನ ಹೆಚ್ಚೂ ಕಡಿಮೆ ಎಲ್ಲ ಕೆಲಸಗಳಲ್ಲಿ, ನನ್ನ ಸ್ನೇಹಿತನೊಬ್ಬ ಹೋಗುವ ಮರೀನ್‌ಕಾರ್ಪ್ ಮಿಲಿಟರಿ ಅಸೈನ್‌ಮೆಂಟ್‌ನಿಂದ ಹಿಡಿದು, ಕಾರ್ಪೋರೇಟ್ ಪ್ರಾಜೆಕ್ಟುಗಳವರೆಗೆ ಎಲ್ಲಿ ಹೋದರೂ lessons learned ಎಂದು ಒಂದು ವರದಿ ತಯಾರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಈ ರೀತಿ ಕಲಿತ ಪಾಠಗಳು ಹೆಚ್ಚಿದ್ದರೂ ಕಷ್ಟ, ಕಡಿಮೆಯಾದರೂ ಕಷ್ಟ ಎನ್ನಿಸಿದ್ದಿದೆ. ಇತ್ತೀಚೆಗೆ ಪ್ರಾಜೆಕ್ಟ್ ‍ ಮಾಡಿ ಮುಗಿಸಿದ ಮೇಲೆ (ತಪ್ಪಿನಿಂದ) ಕಲಿತ ಪಾಠಗಳನ್ನು ಒಪ್ಪಿಸಬೇಕಾಗಿ ಬಂದಿದ್ದು ಇನ್ನೂ ಸಂಕಷ್ಟದ ಪರಿಸ್ಥಿತಿಯೊಂದನ್ನು ಹುಟ್ಟು ಹಾಕಿತ್ತು. ಯಾರ ಮೇಲೂ (ನೇರವಾಗಿ) ಬೆರಳು ಮಾಡಿ ತೋರುವಂತಿಲ್ಲ, ಆದರೆ ವ್ಯವಸ್ಥಿತವಾದ ವರದಿಯೊಂದನ್ನು ತಯಾರಿಸಬೇಕು, ಇದೆಂಥ ಕಷ್ಟದ ಕೆಲಸ ಎಂದು ಒಮ್ಮೆ ಅನ್ನಿಸಿದ್ದೂ ಹೌದು.

ಸಮಸ್ಯೆಗಳ ಬಗ್ಗೆ ಯೋಚಿಸಿ ಒಂದು ಹೆಜ್ಜೆ ಮುಂದೆ ಹೋದರೆ ಸಮಸ್ಯೆಗಳು ಒಂದು ಮಾನಸಿಕ ನೆಲೆಗಟ್ಟೋ ಅಥವಾ ಭೌತಿಕ ಸ್ಥಿತಿಯೋ, ನಾವೇ ಹುಟ್ಟಿಸಿಕೊಂಡವುಗಳನ್ನು ಸಮಸ್ಯೆಗಳು ಎಂದು ಕರೆಯಬೇಕೋ ಅಥವಾ ನಮ್ಮಿಂದ ನಿವಾರಣೆಯಾಗಬಲ್ಲದು ಸಮಸ್ಯೆಯಾಗೇ ಹೇಗೆ ಉಳಿಯುತ್ತದೆ ಎಂದು ಹಲವಾರು ಪ್ರಶ್ನೆಗಳು ಎದುರಾದವು. ಜೊತೆಗೆ ಪ್ರತಿಯೊಂದು ಸಮಸ್ಯೆಗೂ ಉತ್ತರವೆನ್ನುವುದು ಇದೆಯೇ? ಅಥವಾ ಉತ್ತರವಿಲ್ಲದ್ದನ್ನೂ ಉತ್ತರವಿರುವಂತಹದ್ದನ್ನೂ ಸಮಸ್ಯೆ ಎಂದು ಒಂದೇ ಹೆಸರಿನಿಂದ ಹೇಗೆ ಕರೆಯಲು ಸಾಧ್ಯ? ಹೀಗೆ ಸಮಸ್ಯೆಯನ್ನು ಕುರಿತು ಯೋಚಿಸಿದಷ್ಟೂ ಸಮಸ್ಯೆ-ಉಪಸಮಸ್ಯೆಗಳು ಸೃಷ್ಟಿಯಾದವೇ ವಿನಾ ಉತ್ತರಗಳೇನೂ ದೊರಕಲಿಲ್ಲ.

’ಯೋಚಿಸಿ ಮುಂದೆ ನಡೆ...’, ’ಆಲೋಚಿಸಿ ಕೆಲಸ ಮಾಡು, ಮಾತನಾಡು...’ ಎಂದು ಹೇಳುವುದೇನೋ ಸುಲಭ, ಆದರೆ ನಿಜವಾಗಿಯೂ ಅದು ಸಾಧ್ಯವೇ? ಕೆಲವೊಮ್ಮೆ ಹಿಂದಿನ ಅನುಭವಗಳಿಂದ ಕಲಿತ ಪಾಠಗಳು ಸಮಸ್ಯೆಗಳಿಗೆ ತಂತಾನೆ ಉತ್ತರವನ್ನು ಕಂಡುಕೊಳ್ಳಬಲ್ಲವಾದರೂ ಅನುಭವದ ಒಂದೇ ಒಂದು ಸಮಸ್ಯೆ ಎಂದರೆ ಎಂದು ಪೂರ್ವಭಾವಿಯಾಗಿ ಬರದೇ ಕೆಲಸವೆಲ್ಲ ಆದ ಬಳಿಕ ಬರುವಂಥದ್ದು. ಮತ್ತೆ ಅದೇ ರೀತಿಯ ಕೆಲಸ ಮಾಡುವಲ್ಲಿಯವರೆಗೆ ಆ ಅನುಭವ ಕಲಿಸಿದ ಪಾಠದ ಅಗತ್ಯವೇನೂ ಇರಲಾರದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೀವನವೆನ್ನುವುದು ಬರೀ ನಮ್ಮ ತಪ್ಪಿನಿಂದ ಕಲಿಯುವ ಪಾಠಗಳ ಸಂಗ್ರಹ ಎಂದು ಯಾರಾದರೂ ದೊಡ್ಡ ಮನುಷ್ಯರು ಹೇಳಿದ್ದಾರು, ಹಾಗೆ ಹೇಳಿರುವ ಅವರ ಅನುಭವವನ್ನು ನಾವು ನಮ್ಮ ಅನುಭವದ ಮಸೂರದಲ್ಲಿ ನೋಡುವುದಾದರೂ ಹೇಗೆ?

ಏನೇ ಆದ್ರೂ ಜೇಮ್ಸ್ ಬಾಂಡ್‌ಗೆ ಇರೋ ಹಾಗೆ ನಮಗೂ ಒಂದು ಪರ್ಸನಲ್ ಮ್ಯೂಸಿಕ್ ರಿಮೈಂಡರ್ ಇದ್ದಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು ಅಂತ ಬೇಕಾದಷ್ಟು ಸಾರಿ ಅನ್ನಿಸಿದೆ. ನಿಮಗೇನಾದ್ರೂ ಆ ರೀತಿಯ ಸಂಗೀತವನ್ನು ಸಿದ್ಧಿಸಿಕೊಳ್ಳುವ ಸಾಧನವೇನಾದ್ರೂ ತಿಳಿದಿದ್ರೆ ನಮಗೂ ಒಂದಿಷ್ಟು ತಿಳಿಸ್ತೀರಾ ತಾನೇ?

***

MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

Wednesday, September 19, 2007

ಅಂತರಂಗದಲ್ಲಿ ಆಡಿಯೋ - ಇನ್ನೂರೈವತ್ತರ ಹೊಸ ಪ್ರಯೋಗ

ಬರೀ ಹದಿನೆಂಟು ತಿಂಗಳಲ್ಲಿ ’ಅಂತರಂಗ’ದಲ್ಲಿ ಇನ್ನೂರೈವತ್ತು ಲೇಖನಗಳು ಬಂದಿವೆ ಅನ್ನೋದನ್ನ ನನಗೇ ನಂಬೋಕಾಗ್ತಾ ಇಲ್ಲ...ದಿನಾ ಸಾಯೋರಿಗೆ ಅಳೋರ್ ಯಾರು ಅನ್ನೋ ಹಾಗೆ ಕೆಲವರು ಬಂದು ಮತ್ತೆ ಬಾರದೇ ಹೋದರೂ, ಇವತ್ತಿಗೂ ತುಂಬಾ ಜನ ಇಲ್ಲಿನ ಲೇಖನಗಳನ್ನ ನೋಡ್ತಾ ಇರೋದರ ಜೊತೆಗೆ ಇಲ್ಲಿಗೆ ಒಂದು ಸೀಮಿತ ವೀಕ್ಷಕರಿದ್ದಾರೆ ಅನ್ನೋದಂತೂ ಸ್ಪಷ್ಟ. ಈ ಬರಹಗಳ ಸಂಖ್ಯೆಗೇನೂ ಮಹತ್ವವಿಲ್ಲ ಬಿಡಿ, ಆದರೆ ಹೆಚ್ಚೂ ಕಡಿಮೆ ಅರ್ಧ ಘಂಟೆಯಲ್ಲಿ ಹುಟ್ಟಿ ದಾಖಲಾಗೋ ಈ ಲೇಖನಗಳಿಗೆ ಬೇಕಾದಷ್ಟು ಮಿತಿಗಳಂತೂ ಇವೆ. ಇಲ್ಲಿನ ಲೇಖನಗಳು ಪರಿಪೂರ್ಣವಂತೂ ಅಲ್ಲವೇ ಅಲ್ಲ, ಜೊತೆಯಲ್ಲಿ ಈ ಲೇಖನಗಳು ಸಾಧಿಸೋ ತರ್ಕಕ್ಕೆ ಹೆಚ್ಚಿನ ಪಕ್ಷ ಯಾವುದಾದ್ರೂ ಹುಂಬ ತರ್ಕ ಇರುತ್ತ್ಯೇ ವಿನಾ ಸರಿಯಾದ ದಾಖಲೆಗಳಾಗಲೀ ಪರಾಮರ್ಶೆಗಳಾಗಲೀ ಸಿಗೋದಿಲ್ಲ...ಯಾಕೆ ಇಲ್ಲಾ ಅಂತಂದ್ರೆ ಅವುಗಳನ್ನ ಒಟ್ಟು ಮಾಡುತ್ತಾ ಹೋದ್ರೆ ಅದಕ್ಕೆ ಸಮಯ ತಗೊಳುತ್ತೆ, ಇದಕ್ಕಿಂತ ಹೆಚ್ಚಿನ ಸಮಯ ಯಾರ ಬಳಿಯಲ್ಲಿದೆ ಹೇಳಿ!?

ತಮಾಷೆಯ ಮಾತು ಹಾಗಿರಲಿ, ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ರೆ ಹೇಗೆ ಅನ್ನೋ ಆಸೆ ಬಂದಿದ್ದಂತೂ ನಿಜ. ನಿನ್ನೆ ಬರೆದ ’ಒಣದ್ರಾಕ್ಷಿ ಸ್ನೇಹಿತರ ಪರಸಂಗ’ ಲೇಖನದಲ್ಲಿ ಯಾವತ್ತೂ ಮಾತನಾಡದ ಒಣದ್ರಾಕ್ಷಿಗಳಿಂದ ಒಂದಿಷ್ಟು ಕಲ್ಪನೆಯ ಪಾತ್ರಗಳನ್ನು ಸೃಷ್ಟಿಸಿದ್ದೆ, ಹಾಗೆ ಮಾಡೋದರಿಂದ ಹೇಳೋದನ್ನ ನಿರ್ಭಿಡೆಯಿಂದ ಹೇಳಬಹುದು ನೋಡಿ ಒಂದು ರೀತಿ ಕಾರ್ಟೂನ್ ಶೋಗಳಲ್ಲಿ ಬರೋ ಪಾತ್ರಗಳ ಹಾಗೆ ಯಾರನ್ನೂ ಅಫೆಂಡ್ ಮಾಡದೆ. ಈ ದಿನ ಕನ್ನಡ ಬರಹಗಳಿಗೆ ಆಡಿಯೋ ಸ್ವರೂಪವನ್ನು ಕೊಟ್ಟರೆ ಹೇಗೆ ಎಂದು ಇಲ್ಲೊಂದು ತುಣುಕು ಎಮ್‌ಪಿ೩ ಪೈಲ್ ಅನ್ನು ಹಾಕಿದ್ದೇನೆ, ಈ ಪ್ರಯೋಗ ಮುಂದೆ ಬೆಳೆಯುತ್ತೋ ಬಿಡುತ್ತೋ ಗೊತ್ತಿಲ್ಲ, ಕೊನೇಪಕ್ಷ ಭಾಷೆಯ ಬಳಕೆಯ ಸಂದರ್ಭದಲ್ಲಿ ಬರೆದು ಸಿದ್ಧಪಡಿಸಲಾರದ್ದನ್ನು, ಸಾಧಿಸಿ ತೋರಿಸಲಾಗದ್ದನ್ನು ಹೇಳಿಯಾದರೂ ತೋರಿಸೋಣವೆಂಬ ಹುಂಬ ಕಲ್ಪನೆ ಅಷ್ಟೇ.

MP3 ಆಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

ಭಾಷೆ ಅನ್ನೋದು ಬರೆದಾಗಲೇ ಚೆಂದವಂತೆ, ಆದ್ರೆ ಒಂದು ಆಡುವ ಧ್ವನಿಯಲ್ಲಿರೋ ಜೀವಂತಿಕೆಯನ್ನ ಬರವಣಿಗೆಗೆ ಹೇಗೆ ತರೋದು? ಅದರಲ್ಲಿರೋ ಸವಾಲುಗಳೇ ಬೇರೆ. ಉದಾಹರಣೆಗೆ, ’ನಮಸ್ಕಾರ ಸಾರ್ ಹೇಗಿದ್ದೀರಾ?’ ಅನ್ನೋದನ್ನ ಬರೆದ್ರೆ ಯಾವ ಧ್ವನಿಯಲ್ಲಿ ಹೊರ ಹೊಮ್ಮುತ್ತೆ ಅಂತ ಹೇಳೋದ್ ಕಷ್ಟಾ. ಪ್ರತೀ ವಾಕ್ಯವನ್ನ ಯಾರು ಯಾವಾಗ ಯಾವ ಸಂದರ್ಭದಲ್ಲಿ ಹೇಳಿದ್ರು ಅನ್ನೋದರ ಮೇಲೆ ಆಯಾ ವಾಕ್ಯದ ಹಿಂದಿನ ಜೀವಂತಿಕೆ ನಿರ್ಣಯವಾದ್ರೂ ಅದನ್ನ ಬರೆದವರಿಗಿಂತ್ಲೂ ಓದೋರಿಗೆ ತಾನೇ ಅದು ಹೆಚ್ಚು ಅರ್ಥವಾಗಬೇಕಾದ್ದು? ಓದೋರಿಗೆ ನಿಜವಾಗ್ಲೂ ಬರವಣಿಗೆಯ ಹಿಂದಿನ ಧ್ವನಿ ತಲುಪಿಸುವ ನಿಟ್ಟಿನಲ್ಲಿ ಬರವಣಿಗೆಯ ಜೊತೆಗೆ ಶಬ್ದವನ್ನೂ ಜೊತೆ ಮಾಡಿದ್ರೆ ಹೇಗೆ ಎಂಬ ಆಲೋಚನೆ ಮೂಡಿತು. ಜೊತೆಗೆ ’ಅಂತರಂಗ’ದ ಕೆಲವು ಬರಹಗಳನ್ನ ಆಡಿಯೋ ರೂಪದಲ್ಲಿ ಹಾಕಿದ್ರೆ ಹೇಗೆ ಎನ್ನೋ ಉಪಾಯ ಹೊಳೆಯಿತು, ಅದರ ಬೆನ್ನ ಹಿಂದೆ ಒಂದಿಷ್ಟು ವೆಬ್ ಸೈಟ್‌ಗಳನ್ನು ಹುಡುಕಿಕೊಂಡು ಹೋದ ನನಗೆ ಕೆಲವು ಪುಕ್ಕಟೆ ಸಾಫ್ಟ್‌ವೇರುಗಳ ಸಹಾಯದಲ್ಲಿ ಸುಲಭವಾಗಿ MP3 ಆಡಿಯೋ ಫೈಲುಗಳನ್ನು ತಯಾರ್ಸೋಕ್ ಆಯ್ತು. ಹಾಗೆ ತಯಾರಿಸಿದ್ದನ್ನ ಅಪ್‌ಲೋಡ್ ಮಾಡಿ ಅದನ್ನ ಆಡಿಯೋ ರೂಪದಲ್ಲಿ ಲಿಂಕ್ ಮಾಡಿ, ಈಗ ನಿಮ್ಮ ಮುಂದೆ ಒಂದು ತುಣುಕನ್ನ ಇಡ್ತಾ ಇದ್ದೇನೆ. ಇದನ್ನ ನೋಡಿ/ಕೇಳಿ ನಿಮಗೇನನ್ನಿಸುತ್ತೋ ತಿಳಿಸಿ.

ನಾವು ಆಡೋ ನುಡಿ, ಅದರ ಧ್ವನಿಯಲ್ಲಿನ ಬದಲಾವಣೆಗಳು, ಆಕ್ಸೆಂಟುಗಳು, ಆಡುನುಡಿಗಳು, ಡಯಲೆಕ್ಟುಗಳು, ಕೀರಲು ಸ್ವರದಿಂದ ಹಿಡಿದು ಬೋರ್ ಹೊಡೆಸುವ ಒಂದೇ ವೇಗದ ಧ್ವನಿಗಳವರೆಗೆ ಇವೆಲ್ಲವೂ ಸಾಕಷ್ಟು ವೈವಿಧ್ಯತೆಯನ್ನು ನೀಡುತ್ತವೆ. ಬರೆಯೋ ಮಾಧ್ಯಮಕ್ಕೆ ಮಾತಿನ ಮಾಧ್ಯಮಕ್ಕಿಂತ ಸಾಕಷ್ಟು ಮಿತಿಗಳಿವೆ. ಎಷ್ಟೋ ಸಾರಿ, ನಾವು ಏನು ಹೇಳಬೇಕೆಂದುಕೊಂಡಿರುತ್ತೇವೆ ಅವೆಲ್ಲವನ್ನೂ ಹೇಳೋಕೇ ಆಗೋದಿಲ್ಲ, ಇನ್ನು ಕೆಲವು ಸಾರಿ ನಾವು ಬರೆಯೋದೇ ಒಂದು ಅದರ ಅರ್ಥವೇ ಇನ್ನೊಂದು ಎನ್ನುವಂತಾಗುವುದು ಸಾಮಾನ್ಯ ಎಂದು ನನ್ನ ಅನಿಸಿಕೆ.

ಈ ಪ್ರಯೋಗ ಯಶಸ್ವಿಯಾಗದಿದ್ದರೇನಂತೆ ನಷ್ಟವಂತೂ ಇಲ್ಲ, ಆದರೆ ಬೇಕೆನಿಸಿದ್ದನ್ನು ಮಾತಿನ ರೂಪದಲ್ಲಿ ದಾಖಲಿಸಿ ಕೊನೆಗೆ ಅದನ್ನು ಸಾವಧಾನವಾಗಿ ಟೈಪ್ ಮಾಡಿಕೊಂಡು ಯಾವತ್ತಿದ್ದರೂ ಬರವಣಿಗೆಗೆ ಇಳಿಸುವುದು ಇದ್ದೇ ಇರುತ್ತೆ. ಜೊತೆಗೆ, ನೀವು ಮಾತನಾಡಿದ್ದನ್ನು ಇನ್ನೊಬ್ಬರು ವೇಗವಾಗಿ ಟೈಪ್ ಮಾಡಿಕೊಟ್ಟರೂ ನಡೆದೀತು. ಅಕ್ಷರಗಳ ಜೊತೆಗೆ ಮಾತನ್ನೂ ತೇಲಿಬಿಡುವುದು ಒಂದು ಆಲೋಚನೆಯಾದರೆ, ಬರವಣಿಗೆಯ ಶಿಸ್ತನ್ನು ಕಾಪಾಡಿಕೊಂಡು ಬಂದ ಕೆಲವರಿಗೆ ಅವರವರ ಮಾತಿನ ಶಿಸ್ತನ್ನೂ ಕಾಪಾಡಿಕೊಂಡು ಹೋಗುವುದು ಅಗತ್ಯವಾಗುತ್ತದೆ, ಇಲ್ಲವೆಂದಾದರೆ ಮೊದಲೆಲ್ಲ ಆತ್ಮವಿಶ್ವಾಸದಿಂದ ಕನ್ನಡದಲ್ಲಿ ಮಾತನಾಡುತ್ತಿದ್ದ ನನಗೆ ಆಯಾ ಸಂದರ್ಭಕ್ಕೆ ಯೋಗ್ಯ ಪದಗಳನ್ನು ಹುಡುಕುವ ಆಭಾಸವಾದಂತಾಗುತ್ತದೆಯೇನೋ ಎನ್ನುವ ಹೆದರಿಕೆ ಇತ್ತೀಚೆಗೆ ಹೆಚ್ಚಾಗುತ್ತಿತ್ತೇಕೆ?

Tuesday, September 18, 2007

ಒಣದ್ರಾಕ್ಷಿ ಸ್ನೇಹಿತರ ಪರಸಂಗ

ಬೇಯಿಸಿದ ಓಟ್‌ಮೀಲ್‌ಗೆ ಹಾಕೋಕೇ ಅಂತ ಒಣದ್ರಾಕ್ಷಿ ಡಬ್ಬದ ಮುಚ್ಚಲ ತೆಗೆದರೆ ಅಲ್ಲಿ ಎಲ್ಲವೂ ಖಾಲೀಯಾಗಿ ಡಬ್ಬದ ಕೆಳಗೆ ಒಂದು ಮೂಲೆಯಲ್ಲಿ ಎರಡು ದ್ರಾಕ್ಷಿಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ’ಏನ್ರಯ್ಯಾ, ಸಮಾಚಾರ?’ ಅಂತ ಮಾತನಾಡಿಸ್ಸಿದ್ದಕ್ಕೆ ಬೇಕೋ ಬೇಡವೋ ಎನ್ನುವಂತೆ ನನ್ನ ಕಡೆ ನೋಡಿದವು, ಅದ್ಯಾವ್ದೋ ತಪ್ಪಸ್ಸು ಮಾಡ್ತಾ ಇರೋ ಋಷಿ ಮಧ್ಯೆ ಯಾರೋ ತೊಂದ್ರೇ ಕೊಟ್ರು ಅಂತ ಕೋಪಿಸಿಕೊಂಡಿದ್ದನಂತಲ್ಲ ಹಾಗೆ. ’ನಾನೇನ್‌ರಯ್ಯಾ ಮಾಡ್ಲಿ...ಉಳಿದವ್ರೆಲ್ಲಾ ಎಲ್ಲಿ?’ ಎಂದು ಮತ್ತೊಂದು ಪ್ರಶ್ನೆ ಹಾಕಿದೆ ಅದಕ್ಕಾದ್ರೂ ಉತ್ರಾ ಕೊಡ್ಲಿ ಅನ್ನೋ ಹುಮ್ಮಸ್ಸಿನಲ್ಲಿ, ಆದ್ರೂ ಸುಮ್ನೆ ಕುಂತಿವೆ! ಎಲಾ ಇವ್ನಾ ಎಂದುಕೊಂಡು ಒಂದು ಸ್ಟೀಲ್ ಚಮಚೆಯಿಂದ ಅವುಗಳನ್ನು ತವಕದಿಂದ ಅಲುಗಾಡಿಸಿ ನೋಡಿದೆ. ನಾನು ಅವುಗಳನ್ನು ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಳ್ಳಿದರೆ ಕಷ್ಟಪಟ್ಟು ಒಲ್ಲದ ಮನಸ್ಸಿನಿಂದ ಹೋಗೋಕೇನೋ ತಯಾರಿದ್ದಾವೆ, ಆದ್ರೆ ಒಬ್ಬರನ್ನೊಬ್ಬರು ಬಿಟ್ಟು ಅಗಲ್ತಾ ಇಲ್ಲಾ. ’ಯಾಕ್ರೋ, ಹುಷಾರಿಲ್ವಾ?’ ಎಂದು ಇನ್ನೊಂದು ಪ್ರಶ್ನೆ ಬಿಸಾಕಿದ್ದಕ್ಕೆ ’ಈ ಮಾರಾಯಾ ಬರೀ ಪ್ರಶ್ನೆಗಳಿಂದ್ಲೇ ತಲೇ ತಿಂತಾನೇ’ ಅಂತ ಮನಸ್ಸಿನ್ನಲ್ಲೇ ಅಂದುಕೊಂಡಿರಬೇಕು, ಇದ್ದದ್ದರಲ್ಲಿ ಒಬ್ಬನಿಂದ ಧ್ವನಿಯೊಂದು ಹೊರಗೆ ಬಂತು.

’ಹುಷಾರಿಲ್ಲ ಅಂತೇನಿಲ್ಲಾ...ನಮ್ ಸ್ನೇಹಿತ್ರುಗಳು ಎಲ್ಲೋ ಕಾಣಿಸ್ತಾ ಇಲ್ಲಾ ಅಂತ ಬೇಜಾರ್ ಮಾಡ್ಕೋಂಡ್ ಕೂತೀದೀವಿ...’

ನಾನು, ’ಸ್ನೇಹಿತ್ರಾ? ಯಾರು...ನಿಮ್ ಜೊತೆ ಯಾವ್ ಸ್ನೇಹಿತ್ರಿದ್ರು?’ ಎಂದು ಕಳಕಳಿಯಿಂದ ಕೇಳಿದ್ದಕ್ಕೆ,

’ಊ, ನಾವೆಲ್ಲಾ ಒಟ್ಟಿಗೆ ಹುಟ್ಟೀ, ಬೆಳೆದು ಬಂದಿದ್ವಿ...ಇಲ್ಲೀವರೆಗೆ ಬಂದಿದ್ವಿ, ಒಬ್ಬರ ಕೈ ಒಬ್ರು ಹಿಡಕೊಂಡು...ಆದ್ರೆ ದಿನಾ ದಿನಾ ನಮ್ ಸಂಖ್ಯೆ ಖಾಲೀ ಆಗ್ತಾ ಆಗ್ತಾ ಈಗ ನೋಡಿ ನಾವಿಬ್ರೇ ಇರೋ ಹಾಗಾಗಿದೆ’ ಎಂದು ಇನ್ನು ಸ್ವಲ್ಪ ಆದ್ರೆ ಅತ್ತೇ ಬಿಡ್ತಾವೇನೋ ಅನ್ನೋ ಸ್ವರದಲ್ಲಿ ಸಮಜಾಯಿಷಿ ಸಿಕ್ಕಿತು.

ನನಗೇನು ಗೊತ್ತು, ಈ ಒಣ ದ್ರಾಕ್ಷಿಗಳಿಗೂ ಅನ್ಯೋನ್ಯತೆ, ಸ್ನೇಹ, ಸಂಬಂಧ ಇರುತ್ತೇ ಅಂತ. ಅವುಗಳ ಬಗ್ಗೆ ಇನ್ನಷ್ಟು ತಿಳಕೊಳ್ಳಬೇಕು ಅನ್ನಿಸ್ತು, ಆದ್ರೆ ಮೊದಲ ಭೇಟಿಯಲ್ಲೇ ಪೂರ್ವಾಪರ ವಿಚಾರ್ಸೋದು ಶಿಷ್ಟಾಚಾರ ಅಲ್ಲಾ ಅಂತ ಬಲವಂತವಾಗಿ ಸುಮ್ಮನಿದ್ದೆ. ಆಫೀಸಿಗೆ ಅರ್ಜೆಂಟಾಗಿ ಹೋಗ್‌ಬೇಕು ಅನ್ನೋ ತವಕ ಒಂದು ಕಡೆ, ಟೇಬಲ್ ಮೇಲೆ ಛಳಿ ಗಾಳಿ ಜೊತೆಗೆ ಫ್ರೆಂಡ್‌ಶಿಪ್ ಮಾಡ್ಕೊಂಡು ಇನ್ನೊಂದ್ ಸ್ವಲ್ಪಾ ಹೊತ್ನಲ್ಲೇ ಆರಿ ತಣ್ಣಗಾಗಿ ಬಿಡ್ತೀವಿ ಅಂತ ನನ್ ಮೇಲೆ ಪಂಥಾ ಕಟ್ಟಿರೋ ಕಾಫಿ ಗ್ಲಾಸೂ, ಓಟ್‌ಮೀಲ್ ಭರಣೀನೂ ಮತ್ತೊಂದು ಕಡೆ. ಇವತ್ತು ದ್ರಾಕ್ಷೀ ಇಲ್ಲದೇ ಓಟ್‌ಮೀಲ್ ತಿಂದ್ರೂ ಪರವಾಗಿಲ್ಲ, ಅಷ್ಟೊಂದು ಅನ್ಯೋನ್ಯತೆಯಿಂದ ಇರೋ ಸ್ನೇಹಿತರ ಬಂಧನವನ್ನ ಮುರಿಯೋದ್ ಬೇಡ ಅಂತ ಮನಸ್ಸು ಆಗಷ್ಟೇ ಇಳಿಸಿದ ಸಕ್ರೆ ಪಾಕದ ಥರ ಹರಳುಗಟ್ಟತೊಡಗಿತ್ತು.

ಇದ್ದಕ್ಕಿದ್ದ ಹಾಗೆ, ಇವರ ಸ್ನೇಹಿತ್ರೆನ್ನೆಲ್ಲ ಹಿಂತಿರುಗಿಸಿ ತಂದು ಕೊಟ್ಟಂತೆ ಮಾಡಿದ್ರೆ ಹೇಗೆ ಅನ್ನೋ ಆಲೋಚ್ನೇ ಬಂದಿದ್ದೇ ತಡ ಒಡನೆಯೇ ಪ್ಯಾಂಟ್ರಿ ಕ್ಲಾಸೆಟ್ಟಿನಿಂದ ಸನ್‌ಮೇಡ್ (sun maid) ರೇಸಿನ್ ಡಬ್ಬವನ್ನು ತಂದೆ, ಇನ್ನೇನು ಮುಚ್ಚಲವನ್ನು ತೆಗೆದು ಖಾಲಿಯಾದ ಡಬ್ಬದೊಳಗೆ ಸುರಿಯಬೇಕು ಆಗ ಈ ಸ್ನೇಹಿತರ ಭಾವನೆಗಳಿಗೆ ಸ್ವಲ್ಪವೂ ಬೆಲೆಕೊಡದೆ ಎಂಥಾ ಹುಂಬ ಕೆಲಸವನ್ನು ಮಾಡುತ್ತಿದ್ದೇನೆ ಎಂದೆನಿಸಿದ್ದರಿಂದ, ನಿಧಾನವಾಗಿ ಅಕ್ವೇರಿಯಂ‌ನಲ್ಲಿರುವ ಮೀನನ್ನು ತೆಗೆಯುವ ಹಾಗೆ ಚಮಚೆಯಿಂದ ಅಗಲದ ಸ್ನೇಹಿತರನ್ನು ತೆಗೆದು ದ್ರಾಕ್ಷಿ ಡಬ್ಬದ ಮುಚ್ಚಲದ ಮೇಲೆ ಹಾಕಿದೆ, ಸನ್‌ಮೇಡ್ ರೇಸಿನ್ ಡಬ್ಬದಿಂದ ಸುಮಾರು ಅರ್ಧ ಡಬ್ಬಿ ತುಂಬುವವರೆಗೆ ದ್ರಾಕ್ಷಿ ಡಬ್ಬವನ್ನು ತುಂಬಿದೆ, ಆಗಲಾದರೂ ತಮ್ಮ ಅಗಲಿದ ಸ್ನೇಹಿತರನ್ನು ಇವರಿಬ್ಬರೂ ಮರೆಯಲಿ ಎಂಬ ಆಸೆಯಲ್ಲಿ, ಆದರೆ ಆದದ್ದೇ ಬೇರೆ.

ನಾನು ಅರ್ಧ ಡಬ್ಬವನ್ನು ತುಂಬುತ್ತಿರುವುದನ್ನು ನೋಡಿ ಇಬ್ಬರ ಮುಖವೂ ಪೆಚ್ಚಾಯಿತು, ಏಕೆ ಎಂದು ಹೊಳೆಯಲಿಲ್ಲ, ಕೇಳಿಯೇ ಬಿಡೋಣವೆಂದು, ’ಈಗೇನಾಯ್ತು?’ ಎಂದೆ.

ಇಬ್ಬರೂ ಒಬ್ಬರನೊಬ್ಬರನ್ನು ನೋಡಿಕೊಂಡು, ’ಏನಿಲ್ಲ, ಅವರೆಲ್ಲಾ ನಮ್ ಸ್ನೇಹಿತ್ರಲ್ಲಾ...’ ಎಂದು ಒಕ್ಕೊರಲಿನಿಂದ ಉತ್ತರ ಕೊಟ್ಟವು. ಎಲಾ ಇವ್ನಾ...’ನಿಮಗೆ ಹೇಗೆ ಗೊತ್ತಾಯ್ತು?’ ಎಂದಿದ್ದಕ್ಕೆ,

’ನಮ್ ಸುತ್ಲೂ ಬಾಳಾ ವರ್ಷದಿಂದ ಇದ್ದು ಬೆಳದೋರಿಗೂ ಇವರಿಗೂ ತುಂಬಾ ವ್ಯತ್ಯಾಸ ಇದೆ, ಈಗ ಮನುಷ್ಯರನ್ನು ತಗೊಂಡ್ರೇ ಎಲ್ಲರೂ ಒಂದೇನಾ?’ ಎಂದು ನನ್ನನ್ನೇ ಪ್ರಶ್ನಿಸಿದವು. ಇದೊಳ್ಳೇ ಕಥೆಯಾಯ್ತಲ್ಲಪ್ಪಾ, ಬೆಳ್ಳಂಬೆಳಗ್ಗೆ, ಏನಾದ್ರೂ ಹಾಳ್ ಬಡಿಸಿಕೊಂಡ್ ಹೋಗ್ಲೀ, ತಿಂಡಿ ತಿನ್ನದಿದ್ರೂ ಪರವಾಗಿಲ್ಲ ಆಫೀಸಿಗೆ ಹೋಗಿ ಬಿಡಲಾ ಎಂದು ಒಂದು ಮನಸ್ಸಿಗೆ ಅನ್ನಿಸಿದ್ರೂ, ನೋಡೇ ಬಿಡೋಣ ಇವರ ಸ್ನೇಹ ಎಲ್ಲೀವರೆಗೆ ಬರುತ್ತೆ ಅಂತ ಇನ್ನೊಂದು ಮನಸ್ಸಿಗೆ ಅನ್ನಿಸಿದ್ದು ನಿಜ. ನಾನು ಮತ್ತೆ ಪ್ರಶ್ನೆ ಕೇಳತೊಡಗಿದೆ.

’ನೀವಿಬ್ರೂ ಎಲ್ಲಿ ಬೆಳದೋರು? ಯಾವೂರಿನವ್ರು?’

’ನಮ್ಮೂರು ತುಂಬಾ ದೂರಾ ಸಾರ್, ನಾವು ನಿಮ್ಮನೇ ಡಬ್ಬಿಗೆ ಹೇಗ್ ಬಂದ್ವೋ ಗೊತ್ತಿಲ್ಲಾ, ಒಂದೇ ಗದ್ದೇಲ್ ಹುಟ್ಟಿದ್ವಿ, ಒಂದೇ ಗೊಂಚಲಲ್ಲಿ ಬೆಳೆದಿದ್ವಿ, ಒಂದೇ ಕಡೆ ಒಣಗಿದ್ರೂನ್ವೆ ನಾವ್ ಯಾವತ್ತೂ ಜೊತೆ ಬಿಟ್ಟೋರಲ್ಲಾ...ಹೀಗಿರೋ ಸ್ನೇಹಿತ್ರು ಅವರವ್ರ ಕಾಲಾ ಬಂತೂ ಅಂತ ಒಂದೊಂದ್ ಕಡೇ ಹೋದ್ರು, ಕೊನೇಗ್ ನಾವ್ ಮಾತ್ರ ಉಳಿದೀದೀವ್ ನೋಡ್ರಿ, ನಮ್ ಕಥೆ ಇನ್ನೇನಾಗುತ್ತೋ ಅನ್ನೋ ಭಯ ಬೇರೆ...’ ಎಂದು ತಮ್ಮ ಅಳಲನ್ನು ತೋಡಿಕೊಂಡವು.

’ಓ ಹಾಗಾ...’ ಎಂದು ಯಾರದ್ದೋ ಪ್ರಶ್ನೆಗೆ ಉತ್ತರ ಹೊಳೆದವರ ಹಾಗೆ ಧ್ವನಿ ಹೊರಗಡೆ ಬಂದರೂ, ಈ ಸ್ನೇಹಿತರುಗಳ ಬಗ್ಗೆ ಚಿಂತಿಸೋದು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಅವರಿಗೆ ಸಮಜಾಯಿಷಿ ಹೇಳೋ ಹಾಗೆ,

’ನೋಡ್ರಪಾ, ನಿಮ್ ಸ್ನೇಹಿತ್ರು ಎಲ್ಲೆಲ್ಲಿ ಹೋಗೋವ್ರೇ ಅಂತ ನನಗೂ ತಿಳೀದೂ, ಈ ಭೂಮಿಗ್ ಬಂದೋರೆಲ್ಲಾ ಒಂದಲ್ಲ ಒಂದ್ ದಿನ ಹೋಗೋದೇ ಅಂತ ನಿಮಗೂ ತಿಳಿದಿರ್‍ಬೇಕು, ಅಂಥಾದ್ದರಲ್ಲಿ ಹೋದೋರ್ ಬಗ್ಗೆ ಮರುಕಾ ಪಟ್ಟು ಯಾರಿಗೇನ್ ಸುಖಾ ಇದೆ...’ ಎಂದು ಉಪದೇಶ ಸಾರೋ ನನ್ನ ಮಾತನ್ನ ಅರ್ಧದಲ್ಲೇ ತುಂಡು ಮಾಡಿ, ಅವರಲ್ಲೊಬ್ಬ ಹೀಗನ್ನೋದೇ,

’ನೀವೇನೋ ದೊಡ್ಡ ಮನುಷ್ಯರೂ ಅಂತ ಅಂದುಕೊಂಡಿದ್ವಿ, ಹುಟ್ಟೀ ಸಾಯೋದೇನಿದ್ರೂ ದೇಹಾ ಸಾರ್, ಆದ್ರೆ ಸಂಬಂಧ-ಬಾಂಧವ್ಯಾ ಅನ್ನೋದೂ ದೇಹಕ್ಕಿಂತ ದೊಡ್ಡದು. ನಾವು ಎಲ್ಲೋ ಕಳಕೊಂಡ ನಮ್ ಸ್ನೇಹಿತ್ರು ಬಗ್ಗೆ ಮರುಗ್ತಾ ಇದ್ರೆ ಮುಂದಿನ್ ದಾರೀ ನೋಡ್ರೀ ಅಂತ ಹೇಳ್ತೀರಲ್ಲಾ ಸಾರ್...’ ಎಂದು ಅಳುಮುಖದಿಂದ ಸಿಟ್ಟಿಗೆ ಪರಿವರ್ತನೆಗೊಂಡವು.

’ಲೋ, ಮನಸ್ಸು ಮಾಡಿದ್ರೆ ನಿಮ್ಮನ್ನ್ ಒಂದೇ ಮುಕ್ಕಿಗೆ ತಿಂದ್ ಬಿಸಾಕ್ತೀನ್ ನೋಡ್ರೀ...’ ಎಂದು ಹೆದರಿಸೋಣವೆಂದು ನಾಲಿಗೆ ತುದೀವರೆಗೆ ಬಂದರೂ ಕಷ್ಟಪಟ್ಟು ತಡೆದುಕೊಂಡೆ, ಇನ್ನೊಂದ್ ಸರ್ತಿ ಪ್ರಯತ್ನಿಸೋಣಾ ಅಂತ,

’ನೋಡ್ರೋ, ನಿಮ್ ಕಷ್ಟಾ ನನಗರ್ಥಾ ಆಗುತ್ತೇ, ಆದ್ರೆ ನಿಮ್ಮ್ ಸಮಸ್ಯೇ ಕೇಳೋಕಾಗ್ಲೀ ಅದಕ್ಕ್ ಪರಿಹಾರಾ ಹುಡುಕೋಕ್ ಆಗ್ಲಿ ನನ್ ಹತ್ರ ಟೈಮಿಲ್ಲ, ಆಫೀಸಿಗೆ ಬೇರೆ ಹೊತ್ತಾಗ್ತಾ ಇದೆ...’ ಎನ್ನೋ ಮಾತನ್ನೂ ಅರ್ಧದಲ್ಲೇ ತಡೆದು, ಅವರಿಬ್ಬರಲ್ಲಿ ಮತ್ತೊಬ್ಬ,

’ಕಂಡಿದ್ದೀವಿ ನಡೀರಿ ನಿಮ್ ಆಫೀಸ್ ಕೆಲ್ಸಾನಾ...ಆಫೀಸಲ್ಲಿದ್ದಾಗ ಮನೇ ಬಗ್ಗೆ ಕೊರಗ್ತೀರಿ, ಮನೇಲಿದ್ದಾಗ ಆಫೀಸಿನ್ ವಿಷ್ಯಾ ತೆಲೆಕೆಡಿಸಿಕಂತೀರಿ...ನಿಮ್ ಆಫೀಸೂ, ಆಫೀಸ್ ಕೆಲ್ಸಾ, ಆಫೀಸ್ ತಿರುಗಾಟಾ ಅಂತೆಲ್ಲಾ ಅಂದೂ ಅಂದೇ ನಿಮ್ಮ್ ಮನಸಿನ್ನಷ್ಟೇ ನಿಮ್ಮ್ ನಿಮ್ಮ್ ಸಂಬಂಧಗಳೂ ಸಣ್ಣವಾಗಿರೋದು...ಕೊನೇಗೆ ನಮ್ಮಂತೋರ್ ಸತ್ರೆ - ಒಳ್ಳೇ ಸ್ನೇಹಿತ್ರು, ಸಂಬಂಧಗಳ ಜೀವಂತಿಕೆಗೆ ತಡಪಡಿಸೋರು - ಅಂತ ನಮ್ ಗೋರೀ ಮೇಲೆ ಬರೀತಾರೆ, ಇನ್ನು ನಿಮ್ಮಂತೋರಿಗೆ ದಿನಾ ಆಫೀಸಿಗೆ ಹೋಗೋ ದಾಸಯ್ಯಾ ಸತ್ತಾ ಅಂತ ಬರೀತಾರೆ...’ ಎಂದು ಜೋರು ಮಾಡತೊಡಗಿದವು. ನನಗಂತೂ ಈ ಫುಟ್‍‌ಪಾತ್ ಮೇಲೆ ಇದ್ದೋರಿಗೆ ಸಹಾಯ ಮಾಡಕ್ಕೋಗಿ ಅವರೇ ಎದುರಿಗೆ ತಿರುಗಿ ಬಿದ್ದ ಅನುಭವವಾದಂತಾಗಿ, ಈ ಒಣದ್ರಾಕ್ಷಿಗಳು ನಿಜವಾಗಿಯೂ ಮಾತನಾಡುತ್ತಿವೆಯೇ ಎಂದು ಪರೀಕ್ಷಿಸುವಂತಾಯಿತು. ಮತ್ತೆ ಸಮಜಾಯಿಷಿ ಹೇಳೋ ಧ್ವನಿಯಲ್ಲಿ ಶುರು ಮಾಡಿದೆ,

’ನಿಮಗ್ಗೊತ್ತಾಗಲ್ಲ, ನಾವು ಇವತ್ತು ದುಡಿದು ನಾಳೇ ತಿನ್ನಬೇಕು, ದುಡಿದದ್ದನೆಲ್ಲ ಬಿಲ್ ಕಟ್ಟೋದಕ್ಕೇ ಆಗಿ ಹೋಗುತ್ತೇ, ಇನ್ನು ಸಂಸಾರ ತೂಗಿಸೋದೂ ಅಂದ್ರೆ...’ ಎಂದು ರಾಗ ಎಳಿಯುತ್ತಿದ್ದ ಹಾಗೆ...

’ಮತ್ತೆ ಶುರು ಮಾಡಿದ್ರಾ ನಿಮ್ ಅಳುಮುಂಜೀ ರಾಗಾನಾ...’ಎಂದು ಇಬ್ಬರೂ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಸ್ವಲ್ಪ ಖುಷಿಯನ್ನು ಕಿರುಚುವಿಕೆಯಲ್ಲಿ ಅಭಿವ್ಯಕ್ತಗೊಳಿಸಿ ಅರ್ಧ ತುಂಬಿದ ಒಣ ದ್ರಾಕ್ಷಿ ಡಬ್ಬದೊಳಗೆ ಜಿಗಿದು ಅವುಗಳಲ್ಲಿ ಒಂದಾಗಿ ಹೋದವು.

’...ನಿಮ್ಮನ್ನಾ ಒಂದ್ ಕೈ ನೋಡೇ ಬಿಡ್ತೀನಿ...’ ಎನ್ನುವ ನನ್ನ ಧ್ವನಿ ಹಲ್ಲಿನ ಹಿಂದೆಯೇ ಉಳಿದು ಹೋಗಿ, ಒಣದ್ರಾಕ್ಷಿ ಡಬ್ಬವನ್ನು ಗಟ್ಟಿಯಾಗಿ ಮುಚ್ಚುಳ ಹಾಕಿದೆ, ಮತ್ತೆನ್ನೆಲ್ಲಿಯಾದರೂ ಓಡಿ ಹೋಗಿ ಕಾರಿನ ವಿಂಡ್‌ಶೀಲ್ಡ್ ಹಿಂದೆ ಸೇರಿ ಬಿಟ್ಟಾರು ಎನ್ನುವ ಹೆದರಿಕೆಯಂತೂ ಇತ್ತು, ಸದ್ಯ ಹಾಗಾಗಲಿಲ್ಲ!

Sunday, September 16, 2007

ಪಾನೀಪೂರಿಯ ಅಲೆ

ಒಂದು ವಾರದ ಹಿಂದೆ ಸ್ನೇಹಿತರೊಬ್ಬರ ಮನೆಯಲ್ಲಿ ಪಾನೀಪೂರಿ ಮಾಡಿ ಕೊಟ್ಟಿದ್ದರು, ಅವರು ತಟ್ಟೆಯಲ್ಲಿ ತಂದು ಸುತ್ತಲೂ ಸಣ್ಣ ಸಣ್ಣ ಪೂರಿಗಳನ್ನು ಇಟ್ಟು ಮಧ್ಯೆ ಪೂರಿ ಒಳಗೆ ತುಂಬೋದಕ್ಕೆ ಈರುಳ್ಳಿ-ಕೊತ್ತುಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಇಟ್ಟು, ಪಕ್ಕದಲ್ಲಿ ಮ್ಯಾಷ್ಡ್ ಅಲೂಗಡ್ಡೆಯ ಜೊತೆಗೆ ಒಂದು ಸೂಪ್ ಬೌಲ್‌ನಲ್ಲಿ ಪಾನೀ ಅನ್ನೂ ಇಟ್ಟಿದ್ದರು. ಅವರು ಪಾನೀಪೂರಿ ತಯಾರಿಸಿದ್ದಕ್ಕಿಂತಲೂ ಅವರ ಪ್ರೆಸೆಂಟೇಷನ್ ಬಹಳ ಇಷ್ಟವಾಯ್ತು. ಒಂದೊಂದೇ ಪೂರಿ ಹೊಟ್ಟೆ ಒಳಗೆ ಹೋಗುತ್ತಿದ್ದ ಹಾಗೆ ನಾಲಗೆಗೆ ತಡೆ ಅನ್ನುವುದೇ ಇಲ್ಲವಾಗಿ ಹತ್ತರ ಮೇಲೆ ತಿಂದರೂ ಇನ್ನೂ ಬೇಕು ಅನ್ನುವಂತಾಗಿತ್ತು, ಅಷ್ಟು ರುಚಿಯಾಗಿತ್ತು! ಎಷ್ಟೇ ರುಚಿಯಾಗಿದ್ದರೂ, ನಾವು ಚಮಚೆಯಿಂದ ಪಾನಿಯನ್ನು ಪೂರಿಯೊಳಗೆ ತುಂಬಿಕೊಳ್ಳುತ್ತಿದ್ದೆವಾದ್ದರಿಂದ ಭಾರತದಲ್ಲಿ ರಸ್ತೆ ಬದಿಯಲ್ಲಿ ಪಾನೀಪೂರಿಯನ್ನು ತಿಂದಷ್ಟು ರುಚಿಯಂತೂ ಇರಲಿಲ್ಲ, ಏಕೆಂದರೆ ಅಲ್ಲಿ ಪಾನೀ ಇಟ್ಟ ಕೊಳಗದೊಳಗೆ ಆತ ಕೈ ಮುಳುಗಿಸಿ ಪೂರಿಯ ತುಂಬ ಪಾನಿಯನ್ನು ಹಾಕಿಕೊಟ್ಟಾಗಲೇ ಅದರ ರುಚಿ, ಹಿಂದೆ
ಬನಿಯನ್ ಚಹಾದ ಮಹಿಮೆಯನ್ನು
ಓದಿದವರಿಗೆ ಆಹಾರ ಪದಾರ್ಥಗಳ ರುಚಿಯ ಬಗ್ಗೆ ಮತ್ತೆ ಹೇಳುವುದೇನಿದೆ?

ಆದರೆ ಈ ದಿನ ಪಾನೀಪೂರಿಯನ್ನು ವಿಶೇಷವಾಗಿ ನೆನೆಸಿಕೊಳ್ಳಬೇಕಾಗಿ ಬಂತು ಏಕೆಂದರೆ ಅಂದು ಸ್ನೇಹಿತರ ಮನೆಯಲ್ಲಿ ಸ್ಪೂರ್ತಿ ಸಿಕ್ಕು ನಾನೂ ಮನೆಯಲ್ಲಿ ಮಾಡೋಣವೆಂದು ಪಾನೀಪೂರಿ ಪ್ರಾಜೆಕ್ಟನ್ನು ಕೈ ಹಚ್ಚಿಕೊಂಡರೆ ಗಣಪತಿ ಹಬ್ಬದ ಪ್ರಯುಕ್ತವೇನೋ ಎನ್ನುವಂತೆ ಬರೀ ವಿಘ್ನಗಳೇ ಎದುರಾಗುತ್ತಿದ್ದವು. ಅಡುಗೆಮನೆಗೆ ಬೇಕಾದಷ್ಟು ಸಾರಿ ಹೋಗಿ ಗೊತ್ತು ಆದರೆ ಯಾವ ಯಾವ ಸಾಮಾನು ಎಲ್ಲೆಲ್ಲಿದೆ ಎಂದು ಗೊತ್ತಿರಬೇಕಲ್ಲ? ಉಪ್ಪು ಸಿಕ್ಕರೆ ಸಕ್ಕರೆ ಸಿಗದು, ಸಕ್ಕರೆ ಸಿಕ್ಕರೆ ಮತ್ತಿನ್ನೇನೋ ಸಿಗದು. ಹೀಗಿದ್ದಾಗ್ಯೂ ನಾನೂ ಒಂದು ಪಾನೀಪೂರಿಯನ್ನು ಸೆಟ್ ಅನ್ನು ತಯಾರಿಸಿ ಅದರಲ್ಲಿ ಬೇಕು ಬೇಕಾದ ಅನ್ನುವುದಕ್ಕಿಂತಲೂ ಕೈಗೆ ಸಿಕ್ಕವುಗಳನ್ನು ನೀಟಾಗಿ ಜೋಡಿಸತೊಡಗಿದೆ. ಮೊದಲೇ ಅಂಗಡಿಯಿಂದ ತಂದ ಪೂರಿ - ಗೋದಿ ಹಿಟ್ಟನ್ನು ಗೋಲಿಯಾಕಾರದಲ್ಲಿ ಕಲೆಸಿ ಲಟ್ಟಣಿಗೆಯಲ್ಲಿ ನಾದು ಎಣ್ಣೆಯಲ್ಲಿ ಹುರಿಯುವಷ್ಟು ವ್ಯವಧಾನ ಈ ಪ್ರಪಂಚದಲ್ಲಿ ಯಾರಿಗಿದೆ ಹೇಳಿ - ಮೇಲೆ ಒತ್ತಿದರೆ ಕೆಳಗೂ ಬಿರುಕುಬಿಡುತ್ತಿತ್ತು. ಹಾಗೂ ಹೀಗೂ ಮಾಡಿ ಒಂದು ಹತ್ತು ಪೂರಿಯನ್ನು ತಯಾರು ಮಾಡಿ ಅದರ ಜೊತೆಯಲ್ಲಿ ಬಿಸಿ ಚಹಾವನ್ನು ಮಾಡಿಟ್ಟುಕೊಂಡು ಚುಮು ಚುಮು ಛಳಿ ಇದ್ದರೂ ಹೊರಗಡೆ ಕುಳಿತು ಸಂಜೆಯ ಹೊತ್ತಿಗೆ ಮನೆಯ ಸುತ್ತಲು ಚಿರ್ಪ್ ಚಿರ್ಪ್ ಎನ್ನುವ ಮಿಡತೆಗಳ ಸದ್ದಿನೊಂದಿಗೆ ಆಸ್ವಾದಿಸುವುದಿದೆ ನೋಡಿ, ಅದರ ಮುಂದೆ ಯಾವ ಸ್ವರ್ಗಸುಖವೂ ಇಲ್ಲ ಬಿಡಿ.

ನಾನು ಅಡುಗೆ ಮಾಡೋದೇ ಕಡಿಮೆ - ಥ್ಯಾಂಕ್ ಗುಡ್‌ನೆಸ್, ಈ ದೇಶದಲ್ಲಿ ಬ್ರೆಡ್ಡೂ-ಬನ್ನಿಗೇನೂ ಕಡಿಮೆ ಇಲ್ಲ - ಎರಡು ಘಂಟೆ ವ್ಯಯಿಸಿ ಒಂದು ಬಿಸಿಬೇಳೆ ಬಾತ್ ಮಾಡಿ ತಿಂದು ಅದರ ಪಾತ್ರೆಗಳನ್ನು ತೊಳೆದು ಒಪ್ಪ ಮಾಡುವುದಕ್ಕೆ ಇನ್ನೊಂದು ಘಂಟೆಯನ್ನು ವ್ಯಯಿಸುವುದು ನನ್ನ ಜಾಯಮಾನದಲ್ಲೇನೂ ಬರೆದ ಹಾಗಿಲ್ಲ. ತಿನ್ನುವುದಕ್ಕಾಗಿ ಬದುಕಬಾರದು, ಬದುಕುವುದಕ್ಕಾಗಿ ತಿನ್ನಬೇಕು - ಎನ್ನುವ ವೇದಾಂತವನ್ನು ಬಹಳ ವರ್ಷಗಳ ಹಿಂದೆಯೇ ಅನುಸರಿಸಿ ಅದೇ ರೀತಿ ಇವತ್ತಿಗೂ ಚಾಚೂ ತಪ್ಪದೇ ನಡೆದುಕೊಂಡು ಬಂದಿದ್ದಾಗಿದೆ. ನಾಲಗೆ ರುಚಿ ಆದೇಶಿಸೋ ಹೊರವಲಯದ ತಿನ್ನುವಿಕೆಯಲ್ಲಿ ಏನು ಸುಖ ಇದೇ ಹೇಳೀ, ಅದು ಕ್ಷಣಿಕವಾದದ್ದು, ಅದರ ಬದಲಿಗೆ ಏನೋ ಒಂದು ಪುಸ್ತಕವನ್ನು ಓದಿದರೆ ಬರೆದರೆ ಅದು ಯಾವತ್ತಿಗೂ ಇರುವಂತದ್ದು. ಅಂತಹದ್ದರಲ್ಲಿ ದಿನದ ಕಾಲು ಭಾಗವನ್ನು ತಿನ್ನುವುದಕ್ಕಾಗಿ ಬಳಸುವ ಯಾರನ್ನಾದರೂ ನೋಡಿ ಮರುಕಪಡದೇ ಇನ್ನೇನನ್ನು ಮಾಡಬೇಕೋ? ಆದರೆ, ತಿನ್ನುವವರಲ್ಲಿ ಎಲ್ಲರೂ ಒಂದೇ ರೀತಿ ಎಂದು ಹೇಳಲಾಗದು. ಕೆಲವರು ಕಂಬಳಿಹುಳುವಿನ ಥರ ಯಾವಾಗಲೂ ಕುರುಕಲುಗಳನ್ನು ಮೇಯುತ್ತಲೇ ಇದ್ದರೆ ಇನ್ನು ಕೆಲವರು ನಿಯಮಿತವಾಗಿ ಹೊತ್ತುಹೊತ್ತಿಗೆ ಊಟ-ತಿಂಡಿ ಮಾಡಿಕೊಂಡಿರುವವರು. ಆದರೆ ನಮ್ಮ ಗುಂಪಿಗೆ ಸೇರುವವರೇ ಬಹಳ ಮಂದಿ, ದಿನಕ್ಕೆ ಇಂತಿಷ್ಟೇ ಹೊತ್ತಿಗೆ ಇಂಥದ್ದನ್ನೇ ತಿನ್ನಬೇಕು ಎಂದು ಅಶ್ವಮೇಧಯಾಗ ಮಾಡುವವರನ್ನು ಬದುಕಲೇ ಅಯೋಗ್ಯರು, ತಿನ್ನಲು ಮಾತ್ರ ಯೋಗ್ಯರು ಎಂದು ಹಣೆಪಟ್ಟಿಕೊಡದೇ ಮತ್ತಿನೇನು ಮಾಡಬೇಕು.

ತಿನ್ನೋದರ ಬಗ್ಗೆಯೇ? ನನಗೂ ಗೊತ್ತು...ದಾವಣಗೆರೆ ಮಸಾಲೆ ಮಂಡಕ್ಕಿಯಿಂದ ಹಿಡಿದು, ಧಾರವಾಡಾ ಪೇಡಾದವರೆಗೆ, ಮೈಸೂರಿನ ಮಸಾಲೆ ದೋಸೆಯಿಂದ ಹಿಡಿದು, ಮದ್ದೂರುವಡೆ ವರೆಗೆ, ಯಾವುದೋ ಒಂದು ಸೀಜನ್ ನಲ್ಲಿ ಸಿಗೋ ಆನೆಬಂಡಾದಿಂದ ಹಿಡಿದು, ನೇರಳೇಹಣ್ಣಿನಿಂದ ಹಿಡಿದು, ಥರಾವರಿ ಪಲ್ಯ-ಪದಾರ್ಥಗಳಿಗೆ ಬರೋ ಕಳಲೆಯವರೆಗೆ. ಒಂದೆಲಗದ ಸೊಪ್ಪಿನಿಂದ ಹಿಡಿದು ಹರಿವೇ ಸೊಪ್ಪಿನವರೆಗೆ, ಅಪರೂಪಕ್ಕೆ ಮಾಡೋ ನುಗ್ಗೇ ಸೊಪ್ಪಿನಿಂದ ಹಿಡಿದು ಬಸಳೇ ಸೊಪ್ಪಿನವರೆಗೆ... ಇವೆಲ್ಲವನ್ನು ನೆನೆನೆನೆಸಿಕೊಂಡೇ ಬಾಯಲ್ಲಿ ಹಲವರಿಗೆ ನೀರು ಊರಿರಬಹುದು. ಆದರೆ, ಇದರ ಹಿಂದಿನ ಮರ್ಮ ಕೆಲವರಿಗೆ ಮಾತ್ರ ಗೊತ್ತು. ಅಮೇರಿಕದ ಉದ್ದಗಲಕ್ಕೂ ಭಾರತೀಯ ಮೂಲದ ಅಂಗಡಿಗಳೇನೂ ಇಲ್ಲ, ಹತ್ತಿಪ್ಪತ್ತು ವರ್ಷಗಳ ಹಿಂದೆ ಒಂದು ಪೌಂಡು ತೊಗರಿಬೇಳೆಯನ್ನು ಪೋಸ್ಟ್‌ನಲ್ಲಿ ಎಷ್ಟೋ ಜನ ತರಿಸಿಕೊಂಡು ಹೋಳಿಗೆ ಮಾಡಿಕೊಂಡು ತಿಂದಿದ್ದಿರಬಹುದು, ಇತ್ತೀಚೆಗೆ ಇಂತಹ ಅಂಗಡಿಗಳು ಹೆಚ್ಚಾಗಿರಬಹುದು, ಆದರೆ ನಮಗೆ ಬೇಕಾದ ಪದಾರ್ಥ, ತರಕಾರಿ ಮುಂತಾದವುಗಳು ಯಾವಾಗಲೂ ಸಿಗುತ್ತವೆ ಎಂದು ಗ್ಯಾರಂಟಿ ಕೊಡಲಿಕ್ಕೆ ಬಾರದು. ಹಲ್ಲಿದ್ದಾಗ ಕಡೆಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವುದನ್ನು ನಮ್ಮಂತಹವರನ್ನು ನೋಡೇ ಹೇಳಿರಬಹುದು. ಅಂದರೆ ನನ್ನ ಆಹಾರ ಪದಾರ್ಥಗಳ ವೈರಾಗ್ಯದ ಹಿಂದೆ ಅಭಾವ ಕಾರಣ, ನನ್ನ ಹಾಗೇ ಬೇಕಾದಷ್ಟು ಮಂದಿ ಇದ್ದಾರೆ ಎನ್ನೋದೂ ನನಗೆ ಗೊತ್ತು.

ಹಾಗಿಲ್ಲವೆಂದಾಗಿದ್ದರೆ, ನಮ್ಮೂರುಗಳಲ್ಲಿ ಗಣಪತಿ ಹಬ್ಬಕ್ಕೆಂದು ಎಲ್ಲರೂ ಬಿಸಿಬಿಸಿ ಹೋಳಿಗೆಯನ್ನು ತುಪ್ಪ ಹಾಲು ಹಾಕಿಕೊಂಡು ಸವಿಯುತ್ತಿದ್ದರೆ ಇಲ್ಲಿ ನಾವು ಹಗಲೂ-ರಾತ್ರಿ ಕೆಲಸವನ್ನು ಮಾಡಿಕೊಳ್ಳುವ ಪ್ರಮೇಯವೇಕೆ ಬರುತ್ತಿತ್ತು. ನಮ್ಮ ಭಾರತೀಯ ಹಬ್ಬಗಳಿಗೆ ರಜೆ ತೆಗೆದುಕೊಳ್ಳಬೇಕೆಂದರೂ ಎಷ್ಟೋ ಜನರಿಗೆ ಹಾಗೆ ಆಗದು. ಅನಿವಾಸಿಗಳ ಹಬ್ಬಗಳೆಲ್ಲ ವೀಕ್‌ಎಂಡಿನಲ್ಲೇ ಬರೋದು ಎಂದು ತಮಾಷೆ ಮಾಡುತ್ತಿರುವವರಿಗೂ ಅಣಕಿಸುವಂತೆ ಗಣೇಶನ ಹಬ್ಬ ಶನಿವಾರಕ್ಕೆ ಬಂದರೂ ಎಮರ್ಜನ್ಸಿ ಕೆಲಸದ ಮೇಲೆ ದುಡಿಯಬೇಕಾಗಿ ಬಂದವರಿಗೆ ಹಬ್ಬಗಳೆಲ್ಲ ಸೆಕೆಂಡರಿಯಾಗಿ ಕಾಣಿಸದೇ ಇನ್ನೇನಾದೀತು? ಹಬ್ಬಗಳನ್ನು ಆದರಿಸಿ, ಆಚರಿಸುವುದಕ್ಕೆ ಹಲವು ರೂಪಗಳು - ಹೊಸಬಟ್ಟೆ ಧರಿಸುವುದಾಗಲೀ, ಸುಗ್ಗಿ ಸಮೃದ್ಧಿಯ ಸೂಚಕವಾಗಿಯಾಗಲೀ, ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಆಸ್ವಾದಿಸುವುದಾಗಲೀ, ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವುದಾಗಲೀ, ಕುಲದೇವರ ಆರಾಧನೆಯಾಗಲೀ ಎಲ್ಲವೂ ಮುಖ್ಯವಾದ ಕಾರಣಗಳೇ. ಸಮಾಜದ ಹಲವು ಧ್ಯೋತಕಗಳಲ್ಲೊಂದಾಗಿ ಬರುವ ಹಬ್ಬಗಳನ್ನು ಸ್ಕಿಪ್ ಮಾಡಿಕೊಂಡು ಹೋಗುವ ನಾವೆಲ್ಲರೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಬೆಲೆಯನ್ನು ತೆತ್ತಲೇ ಬೇಕಾಗುತ್ತದೆ. ಮಕ್ಕಳು-ಮರಿ ಇದ್ದವರಿಗೆ ಹಬ್ಬಗಳು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಯನ್ನು ಒಂದು ತಲೆಯಿಂದ ಮತ್ತೊಂದು ತಲೆಗೆ ರವಾನಿಸುವ ಕೊಂಡಿಯಾಗಿರುವಾಗ ಪ್ರತಿಯೊಂದು ಹಬ್ಬವೂ, ಅದರ ವೈಶಿಷ್ಠ್ಯವೂ ಬಹಳ ಮುಖ್ಯ.

ತಿಂಡಿ-ಹಬ್ಬಗಳನ್ನು ನೆನೆಸಿಕೊಳ್ಳುತ್ತಿರುವಾಗ ಒಂದು ರೂಪಕ ನೆನಪಿಗೆ ಬಂತು. ಮಗು ಚಿಕ್ಕದಿರುವಾಗ ತಾಯಿ ಎಷ್ಟೋ ಕಷ್ಟ ಪಟ್ಟು, ಏನೇನೆಲ್ಲ ತೋರಿಸಿ, ಎಷ್ಟೇ ರಂಪ ಮಾಡಿಯಾದರೂ ಬಲವಂತವಾಗಿ ಮಗುವಿಗೆ ತಿನ್ನಿಸುತ್ತಾಳೆ. ಮುಂದೆ ಮಗು ಬೆಳೆದು ಶಾಲೆಗೆ ಹೋಗುವ ಹೊತ್ತಿಗೆ ಒಂದು ಹೋಳಿಗೆ ಹಾಕಿದಲ್ಲಿ ಎರಡು ಬೇಕು ಎಂದು ಹಠ ಹಿಡಿದರೆ ಅದಕ್ಕೆ ಬೇಕಾದಷ್ಟು ಕೊಡುವಲ್ಲಿ ತಾಯಿ ಹುಸಿ ಮುನಿಸು ತೋರಿಸುತ್ತಾಳೆ, ಅಥವಾ ಮಾಡಿದ್ದೆಲ್ಲವನ್ನೂ ನೀನೇ ತಿಂದರೆ ಮನೆಯಲ್ಲಿ ಇತರರಿಗೆ ಸಾಲದು ಎನ್ನುವ ಭಯವನ್ನು ಹುಟ್ಟಿಸುತ್ತಾಳೆ. ಮಗು ಮುಂದೆ ಬೆಳೆದು ಪ್ರಬುದ್ಧತೆಯ ಹಂತಕ್ಕೆ ಬಂದಾಗ ಮತ್ತೆ ಎಲ್ಲರೂ ಒತ್ತಾಯ ಮಾಡಿ ತಿನ್ನಿಸತೊಡಗುತ್ತಾರೆ. ಇನ್ನು ಹಾಗೇ ವಯಸ್ಸಾಗುತ್ತಾ ವಯಸ್ಸಾಗುತ್ತಾ ಏನೇನೋ ಖಾಯಿಲೆಗಳು ಬರಬಹುದು ಎನ್ನುವ ಭಯದಲ್ಲಿ ನಾಲಿಗೆಯ ರುಚಿಗೆ ಮತ್ತೆ ಕಡಿವಾಣ ಬೀಳತೊಡಗುತ್ತದೆ. ಕೊನೆಗೆ ರುಚಿಯೂ-ಚಪಲವೂ ಕಡಿಮೆಯಾಗಿ ಒಂದು ದಿನ ಈ ಲೋಕವನ್ನೇ ಖಾಲಿ ಮಾಡಬೇಕಾಗಿ ಬರುತ್ತದೆ.

ಹೀಗೆ ಪಾನೀಪೂರಿ ಮಹಿಮೆ ಎಲ್ಲಿಯವರೆಗೆ ಬಂತು ನೋಡಿ, ತಿಂದಿದ್ದೂ ಅಲ್ಲದೇ, ಮಾಡಿ ನೋಡಿದ್ದೂ ಅಲ್ಲದೆ, ಅದರ ಬಗ್ಗೆ ಬರೆದು ಓದುವುದಕ್ಕೆ ಸಮಯ ಸಿಕ್ಕಿತಲ್ಲಾ ಅಷ್ಟೇ ಸಾಕು, ಏನಂತೀರಾ?

Tuesday, September 11, 2007

ಅಯ್ಯೋ, ಅರು ವರ್ಷಗಳು ಕಳೆದು ಹೋದ್ವೇ

ಹಾ, ಹ್ಞೂ ಅಂತಾ ಇದ್ದ ಹಾಗೇ ನೋಡಿ ಆರ್ ವರ್ಷಗಳು ಕಳೆದು ಹೋದ್ವು ಎಂದೆನಿಸಿದ್ದು ಇವತ್ತು ಪ್ರಿಂಟ್ ಔಟ್ ತೆಗೆಯೋಕ್ ಹೋದಾಗ ಪ್ರಿಂಟರಿನ ಸಣ್ಣ ಡಿಸ್‌ಪ್ಲೇನಲ್ಲಿ ಕಂಡ ಸೆಪ್ಟೆಂಬರ್ ೧೧ ನ್ನು ನೋಡಿ - ’ಅಯ್ಯೋ, ಅರು ವರ್ಷಗಳು ಕಳೆದು ಹೋದ್ವೇ’ ಅಂತ ಶಬ್ದವಿಲ್ಲದ ಉದ್ಗಾರವೊಂದು ನನ್ನಲ್ಲಿ ಹುಟ್ಟಿ ಅಲ್ಲೇ ಉಳಿದುಹೋಯಿತು. ಅಬ್ಬಾ, ಏನೇನೆಲ್ಲ ಆಗಿವೆ ಈ ಆರು ವರ್ಷದೊಳಗೆ ಎಂದು ಯೋಚಿಸಿದವನಿಗೆ ೨೦೦೧ ರ ತರುವಾಯದ ಘಟನೆಗಳೆಲ್ಲ ಡಿವಿಆರ್ ನಲ್ಲಿ ಪುಲ್ ಸ್ಪೀಡ್‌ನಲ್ಲಿ ನೋಡಿದ ಸಿನಿಮಾದ ಹಾಗೆ ಕಣ್ಣ ಮುಂದೆ ಮಿಂಚಿ ಮರೆಯಾದವು.

Is the world better place now? ಎನ್ನೋ ಪ್ರಶ್ನೆಯೂ ಸಹ ಅದರಷ್ಟಕ್ಕೆ ಅದೇ ಹೊರಗೆ ಬಂತು. ಪ್ರಪಂಚವನ್ನು ಯಾವಾಗ್ಲೂ ಉತ್ತಮವಾದದನ್ನಾಗಿ ಮಾಡೋದು ಮಾನವ ಜನ್ಮದ ಇನ್ನೂ ಎಲ್ಲೂ ಅಫಿಷಿಯಲ್ ಆಗಿ ಪಬ್ಲಿಷ್ ಆಗದಿರೋ ಅಜೆಂಡಾ, ಈ ಮಾನವ ಜನ್ಮದ ಹಲವು ಬಣ್ಣದ ಜನರು ಅದನ್ನು ಮ್ಯಾನಿಫೆಷ್ಟೋ ಮಾಡಿಕೊಂಡು ಅದನ್ನು ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ, ಒಂದು ರೀತಿ ವಿಶ್ವ ಹಿಂದೂ ಪರಿಷತ್‌ನವರು ಹಿಂದೂ ಧರ್ಮವನ್ನು ಖರೀದಿಸಿಟ್ಟುಕೊಂಡ ಹಾಗೆ. ಪ್ರಪಂಚದ ಆಗು-ಹೋಗುಗಳಿಗೆಲ್ಲ ಉತ್ತರ ಹೇಳಬೇಕಾದ ಇನ್‌ಹೆರೆಂಟ್ ಕರ್ತವ್ಯವೊಂದು ಕೆಲವರಿಗೆ ಗುರಿಯಾದರೆ, ಇನ್ನು ಕೆಲವರಿಗೆ ಪ್ರಪಂಚದ ಕಣ್ಣೀರನ್ನೊರೆಸಲು ಬಟ್ಟೆ ತಯಾರು ಮಾಡುವ ಕಾಯಕ - ಕ್ಷಮಿಸಿ, ಬಟ್ಟೆಯಲ್ಲಿ ಒರೆಸಿ ಅದನ್ನು ತೊಳೆದು ಮತ್ತೆ ಬಳಸುವ ಕಷ್ಟ ಯಾರಿಗೆ ಬೇಕು, ಉಪಯೋಗಿಸಿ ಎಸೆದು ಬಿಸಾಡುವ ಟಿಷ್ಯೂಗಳಿರಲಿ.

ಧರ್ಮ - ಈ ಎಲ್ಲ ಕಾಯಕ, ಕರ್ತವ್ಯ, ಅಜೆಂಡಾ, ಮ್ಯಾನಿಫೆಷ್ಟೋ ಮುಂತಾದವುಗಳಿಗೆ ಅಡಿಗೋಲು. ಈ ಮನುಷ್ಯ ಸಂತತಿ ಹುಟ್ಟಿಸಿಕೊಂಡ ಕೆಟ್ಟ ಪರಿಸರಗಳಲ್ಲೊಂದು ಧರ್ಮ. ಕ್ಷಮಿಸಿ - ಧರ್ಮವೆನ್ನುವ ಬದಲು ಮತ ಎಂದರೆ ಸರಿ. ಧರ್ಮಕ್ಕೆ ಅನೇಕ ಅರ್ಥಗಳಿದ್ದು, ಅದು ಎಂದೂ ಕೆಟ್ಟದನ್ನು ಬಯಸೋದಿಲ್ಲ, ಆದರೆ ಧರ್ಮವೆನ್ನುವುದರ ಬದಲಿಗೆ ಮತವನ್ನು ತೆಗೆದುಕೊಂಡರೆ ಅದು ಕೆಲವು ಕಡೆ ತನ್ನನ್ನು ಪಸರಿಸು, ಸಾರು ಎಂದು ಡಿಮ್ಯಾಂಡ್ ಮಾಡುತ್ತದೆಯಂತೆ, ಇನ್ನು ಕೆಲವು ಕಡೆ ಹೊಡಿ-ಬಡಿ-ಕಡಿ ಸಂಸ್ಕೃತಿಯನ್ನು ಹೇರುತ್ತದೆಯಂತೆ, ಮತ್ತಿನ್ನಷ್ಟು ಕಡೆ ಸ್ವರ್ಗಕ್ಕೆ ದಾರಿ ಮಾಡಿಕೊಡುತ್ತದೆಯಂತೆ. ನಮ್ಮ ಮತ ಬೆಳೀ ಬೇಕು, ಅದು ಹೆಚ್ಚಿನದು, ಅದೇ ಸರ್ವಸ್ವ ಎನ್ನೋದು ಬೇಕಾದಷ್ಟು ಸಮಸ್ಯೆಗಳಿಗೆ ರೂಟ್ ಕಾಸ್. ಅದನ್ನ ಕಿತ್ತು ಎಸೆಯೋದೇನೂ ಸುಲಭದ ಮಾತಲ್ಲವೇ ಅಲ್ಲ, ಈ ತುಲನೆ ಇದ್ದಲ್ಲಿ ಪ್ರಪಂಚ ಶಾಂತಿ ಇರೋದಾದರೂ ಹೇಗೆ?

ಆಫ್ರಿಕಾದ ಕಗ್ಗತ್ತಲ್ಲನ್ನು ಓಡಿಸುತ್ತೇವೆ ಎಂದು ಒಂದೆರಡು ಮತಗಳು ಪಂಥ ಕಟ್ಟಿ ಓಡಿದವು. ಕಂಡಕಂಡವರ ಸಂಸ್ಕೃತಿಯನ್ನು ಮಕ್ಕಳಿಂದ ಆಟಿಕೆಯನ್ನು ತೆಗೆದಿರಿಸುವಷ್ಟೇ ನಾಜೂಕಾಗಿ ಆ ಮೂಲ ಜನರಿಂದ ಕಿತ್ತುಕೊಳ್ಳಲಾಯಿತು. ಇವತ್ತಿಗೆ ಆ ಖಂಡದ ಜನರು ತಮ್ಮದನ್ನು ಮರೆತರು, ತಮ್ಮದಲ್ಲದ ಇನ್ನೊಬ್ಬರದನ್ನು ತೊಟ್ಟುಕೊಂಡರು. ಆದರೆ ಅವರ ಕಣ್ಣೀರನ್ನು ಒರೆಸಲು ಯಾವ ಟಿಷ್ಯೂ ಪೇಪರುಗಳೂ ಸಾಕಾಗಲೇ ಇಲ್ಲ. ಹಸಿದ, ನಿರ್ಗತಿಕ ಮಕ್ಕಳಿಗೆ ಸಹಾಯ ಮಾಡುವ ಹೆಸರಿನಲ್ಲಿ ಮತವನ್ನು ಹೇರಿದರು. ತಾವು ತಮ್ಮ ತಮ್ಮ ಮತದಿಂದ ಉದ್ದಾರವಾದದ್ದು ಎಷ್ಟಿದೆಯೋ ಪ್ರಪಂಚವೆಲ್ಲವೂ ಅವರವರ ಮತವನ್ನು ಎತ್ತಿ ಹಿಡಿಯಬೇಕು ಎನ್ನುವುದು ಇದರ ಹಿಂದಿನ ಘೋಷಣೆ. ಸರಿ, ಪ್ರಪಂಚವನ್ನೆಲ್ಲ ಪ್ರಜಾಪ್ರಭುತ್ವಗೊಳಿಸಿ ಬಿಡೋಣ, ಹೆಚ್ಚು ಜನ ಕೈ ಎತ್ತಿದ್ದೇ ಕಾನೂನಾಗಲಿ, ಇಡೀ ಪ್ರಪಂಚಕ್ಕೆ ಎರಡು ಮತಗಳೇಕೆ ಒಂದೇ ಮತವನ್ನು ಮಾಡೋಣ - ಆಗಲಾದರೂ ಜನರ ಕಣ್ಣೀರು ಕಡಿಮೆಯಾಗುತ್ತದೆಯೋ ನೋಡೋಣ.

ಯಾರದ್ದು ತಪ್ಪು, ಯಾರದ್ದು ಸರಿ? ಯಾರ ಹಾದಿ ದೊಡ್ಡದು, ಯಾರದ್ದು ಚಿಕ್ಕದು? ಒಂದು ತಪ್ಪನ್ನು ಮತ್ತೊಂದು ತಪ್ಪು ಮಾಡುವುದರ ಮೂಲಕ ಸರಿಗೊಳಿಸಲಾದೀತೆ? ನೂರು ಜನ ಕೊಂದವನನ್ನು ಸಂಹರಿಸಲು ಸಾವಿರ ಜನರನ್ನು ಬಲಿಕೊಡುವುದು ನ್ಯಾಯವೇ? ತಂದೆ ಮಾಡಿದ ತಪ್ಪಿಗೆ ಮಕ್ಕಳು, ಮೊಮ್ಮಕ್ಕಳಿಗೆ ಶಿಕ್ಷೆ ವಿಧಿಸುವುದು ಮತವೇ? ಅಮಾಯಕರ ಜೀವನ ಶೈಲಿಯನ್ನು ಕಿತ್ತೊಗೆದು ತಮ್ಮ ಬಾವುಟವನ್ನು ಪ್ರತಿಷ್ಠಾಪಿಸುವ ಹಕ್ಕನ್ನು ಯಾರು ಯಾರಿಗೆ ಕೊಟ್ಟರು? ಈ ಮತ ಪ್ರಚಾರಕರ ನೆರಳಿಗೆ ಸಿಕ್ಕು ಸತ್ತ, ಅನಾಥರಾದ, ನೊಂದವರ ಕಣ್ಣೀರನ್ನು ಯಾರು ಒರೆಸುವವರು? ತಪ್ಪು ಮಾಡಿದವರನ್ನು ಇಡೀ ಜಗತ್ತೇ ಬೆರಳಿಟ್ಟು ತೋರಿಸಿದರೂ ಅದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನೂ ಕಳೆದುಕೊಂಡವರು ಅವರವರ ಹಣ ಐಶ್ವರ್ಯ ಮುಂತಾದವುಗಳು ಗಳಿಸಿಕೊಟ್ಟ ನ್ಯಾಯ ಹೇಳಲು ಯೋಗ್ಯರಾಗುವ ಅರ್ಹತೆಯನ್ನು ಪ್ರಶ್ನಿಸುವವರು ಯಾರು?

ಇದೆಲ್ಲ ಒಂದು ಕ್ಯಾಪಿಟಲಿಷ್ಟಿಕ್ ವ್ಯವಸ್ಥೆ. ಇಲ್ಲಿರುವವರ ಅರ್ಹತೆ ಬೇರೆ, ಇಲ್ಲಿ ಕಂಪೀಟ್ ಮಾಡುವ ವಿಧಾನವೇ ಬೇರೆ. ಇಲ್ಲಿನ ಪ್ರತಿಯೊಂದು ಕ್ಷಣವೂ ಒಂದು ವ್ಯವಸ್ಥೆ, ಕಂಪನಿ, ವ್ಯಕ್ತಿ ಗುಣಮಟ್ಟವನ್ನು ಅಳತೆ ಮಾಡುತ್ತಲೇ ಇರಲಾಗುತ್ತದೆ. ಒಮ್ಮೆ "ಒಳ್ಳೆಯವನು" ಎಂದು ಹೆಸರುಗಳಿಸಿದ್ದು ಕೇವಲ ಮೂರರಿಂದ ಆರು ತಿಂಗಳು ಮಾತ್ರ ಜೀವಂತವಿರುವ ಸತ್ಯವಾಗುತ್ತದೆ. ಈಗ ಯೋಗ್ಯನಾಗಿದ್ದವನು ಮುಂದೆ ಅಯೋಗ್ಯನಾಗಿ ಹೊರಹೊಮ್ಮಬಹುದು. ಇಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಸಾಂತ್ವನವಿದೆ, ಎಲ್ಲದಕ್ಕೂ ಹೆಚ್ಚಾಗಿ ನ್ಯಾಯವಿದೆ. ಕ್ಷಮಿಸಿ, ಎಲ್ಲವನ್ನೂ ನ್ಯಾಯದ ರೀತಿಯಲ್ಲಿ ಮಾಡಬಹುದಾದ ವಿಧಾನವಿದೆ. ಯಾವ ದೇಶದಲ್ಲಿ ಅರ್ಧಕ್ಕರ್ಧ ಇರುವ ಮಹಿಳೆಯರು ಹಿಂದುಳಿದವರೋ (minority), ಯಾವ ದೇಶದಲ್ಲಿ ಇನ್ನೂರೈವತ್ತು ವರ್ಷದ ಆಳ್ವಿಕೆಯಲ್ಲಿ ಒಬ್ಬ ಯೋಗ್ಯ ಮಹಿಳೆಯೂ ಆಳಲಿಕ್ಕೆ ಯೋಗ್ಯವಿರದೇ ಹುಟ್ಟಿ ಸತ್ತಳೋ ಅಂಥ ದೇಶದಲ್ಲಿದ್ದವರಿಗೆ ಪ್ರಪಂಚದ ವಿಷಯಗಳೇನು ಗೊತ್ತು? ಸುನ್ನಿ, ಶಿಯಾ, ಕುರ್ದಿಷ್ ಇವರ ಪರಂಪರಾನುಗತವಾದ ಸಂಬಂಧಗಳ ಬಗ್ಗೇನು ಗೊತ್ತು? ಯಾವುದೋ ನಯವಂಚಕ ಮುಂಗೋಪಿ ಮಾತುಕೊಟ್ಟು ಯುದ್ಧದ ಆಳ-ಅಂತರವನ್ನು ಅರಿಯದೇ ಸೇನಾಪಡೆಯನ್ನು ಮುನ್ನುಗ್ಗಿಸಿದ ತಪ್ಪಿಗೆ ಇಂದು ನಾಳೆ ಹುಟ್ಟುವ ಹಸುಕಂದಮ್ಮಗಳೇಕೆ ಅಳಬೇಕು? ಒಂದು ಸಂಪೂರ್ಣ ಕ್ಷೇತ್ರದ (region) ಆರೋಗ್ಯವನ್ನೇ ಹದಗೆಡಿಸಿ ಅಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ದಿಕ್ಕು ತಪ್ಪಿಸಿದವರಿಗೆ ನೈತಿಕತೆ ಎನ್ನುವುದು ಎಲ್ಲಿ ಹೋಯಿತು? ಒಂದು ಕಡೆ ಕಮ್ಮ್ಯೂನಿಸಮ್ಮ್ ಅನ್ನು ಹಾಡಿ ಹೊಗಳುವ ಸ್ನೇಹಿತರು, ಮತ್ತೊಂದು ಕಡೆ ಕಮ್ಮೂನಿಸಮ್ಮೇ ಇವರ ವೈರಿ. ಒಂದು ಕಡೆ ಭಿನ್ನಾಭಿಪ್ರಾಯಗಳನ್ನು ಹುಟ್ಟಿ ಹಾಕುವ ಸರದಾರರು, ಮತ್ತೊಂದು ಕಡೆಯಲ್ಲಿ ಅಳುವ ಮಕ್ಕಳ ಕಣ್ಣೀರನ್ನು ಒರೆಸುವವರು. ಈ ರೀತಿಯ ವಿರುದ್ಧ ದಿಕ್ಕಿನ ಪಯಣಗಳನ್ನು ಫಾರಿನ್ ಪಾಲಿಸಿ ಎಂದು ಕರೆಯುವ ಗತ್ತು ಬೇರೆ ಕೇಡಿಗೆ. ಇಂಥಾ ಗತ್ತನ್ನು ಎದುರಿಸಿ ಕೇಳಲಾರದ ಹಿಜಡಾ ವ್ಯವಸ್ಥೆ ಹಾಗೂ ನೆರೆಹೊರೆ. ಅದಿಲ್ಲವೆಂದರೆ, ಯಾವನಾದರೂ ಒಬ್ಬ ಕತ್ತಿನ ಪಟ್ಟಿ ಹಿಡಿದು ಕೇಳಿದ್ದರೆ ಎಷ್ಟೋ ಚೆನ್ನಿತ್ತು - ಹಾಗಾಗೋದಿಲ್ಲ ಬಿಡಿ.

ಹೀಗೇ ಎಣಿಸ್ತಾ ಎಣಿಸ್ತಾ ಆರು ವರ್ಷಗಳು ಕಳೆದು ಹೋದುವು, ಇನ್ನು ಅರವತ್ತು ವರ್ಷಗಳು ಬಂದರೂ ಇಂದಿನ ಪರಿಸ್ಥಿತಿ ಹೀಗೇ ಉಲ್ಬಣಗೊಂಡು ಹದಗೆಡುವ ಸಾಧ್ಯತೆಗಳೇ ಹೆಚ್ಚೇನೋ ಎಂದು ನಾನು ಎಂದುಕೊಳ್ಳುತ್ತಿರುವಾಗ ನನ್ನ ಆಶಾವಾದ ಎಲ್ಲೋ ಕಳೆದು ಹೋದ ಹಾಗೆ ಕಾಣಿಸತೊಡಗುತ್ತದೆ. ಇವತ್ತಲ್ಲ ನಾಳೆ ಹೊರಗೆ ಬರೋ ವರದಿಗಳಲ್ಲಿ ಇರುವ ಸತ್ಯದ ಅರಿವು ಎಲ್ಲರಿಗೂ ಇದೆ. ನಾನು ಮಾಡಿದ್ದು ತಪ್ಪು, ಅದಕ್ಕೋಸ್ಕರ ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಯಾವುದೊಂದು ಧ್ವನಿಯೂ ಹುಟ್ಟಿಬರೋದಿಲ್ಲ. ಯುದ್ಧಕ್ಕೆ ಹೋಗಿ ಈ ವ್ಯವಸ್ಥೆಯನ್ನು ಹುಟ್ಟಿಸಿ ಈಗ ಅರಾಮಾಗಿ ನಿದ್ರಿಸುತ್ತಿರುವ ಮುಂಗೋಪಿಗಳನ್ನು ಯಾರೂ ಪ್ರಶ್ನಿಸೋದೇ ಇಲ್ಲ. ಈಗಿರುವ ದೊರೆಗಳು ಇನ್ನೊಂದು ವರ್ಷದಲ್ಲಿ ಹೊರಗೆ ಹೋಗುತ್ತಾರೆ, ಅವರ ಹೆಸರು ಎಂದೆಂದಿಗೂ ರಾರಾಜಿಸುವಂತೆ ಬರೆಯುವ ಇತಿಹಾಸಕಾರರನ್ನು ಸಾಕಿ ಸಲಹುತ್ತಿರುವುದು ಅಲ್ಲಿ ಉಪಯೋಗಕ್ಕೆ ಬರುತ್ತದೆ. ಈ ದೊರೆಗಳ ಹೆಸರು ಅಜರಾಮರರಾಗುವಲ್ಲಿ ದಿನೇ ದಿನೇ ಸತ್ತು ತಮ್ಮ ನೆತ್ತರದಿಂದ ಗಲ್ಲಿಗಲ್ಲಿಗಳಲ್ಲಿ ಅವರದ್ದೇ ಆದ ಭಾಷೆಯಲ್ಲಿ ಮಣ್ಣಿನಲ್ಲಿ ಬರೆದು ಗಾಳಿಯಲ್ಲಿ ಕಲೆತು ಹೋಗುತ್ತದೆ. ನಾವೂ-ನೀವೂ ನೋಡುತ್ತ ನೋಡುತ್ತಲೇ ಇನ್ನೂ ಏನೇನೋ ಅವಘಡಗಳು ಆಗುವ ಎಲ್ಲಾ ಸಾಧ್ಯತೆಗಳೂ ಕಾಣುತ್ತವೆ, ಏಕೆಂದರೆ ನಮ್ಮ ಮತ ದೊಡ್ಡದು, ಅದು ಬೆಳೆಯಬೇಕು, ಬದುಕಬೇಕು, ಪಸರಿಸಬೇಕು ಎನ್ನುವ ಘೋಷಣೆ ಎಂದಿಗಿಂತಲೂ ಪ್ರಭಲವಾಗಿ ಮುಗಿಲು ಮುಟ್ಟುತ್ತಿರುವುದನ್ನು ನೀವೂ ನೋಡಿರಬಹುದಲ್ಲವೇ?

Sunday, September 09, 2007

...ಮುಂದೆ ಬರುವ ಕಷ್ಟಗಳನ್ನು ಸಹಿಸಲು ಶಕ್ತಿಯನ್ನು ಕೊಡಲಿ

ಇಪ್ಪತ್ತು ತಿಂಗಳ ಅವಧಿಯಲ್ಲಿ ಎಲ್ಲಾ ಸೇರಿ ಒಟ್ಟಿ ಮಾಡಿ ಬರೆದಿದ್ದನ್ನು ಹಿಂತಿರುಗಿ ನೋಡ್ಕೊಂಡ್ ಬರ್ತಾ ಇದ್ದೆ, ನಾನು ಬರೆದಿದ್ದನ್ನು ನನಗೆ ಓದೋ ವ್ಯವಧಾನ ಇಲ್ಲದಂತೆ ಆದ್ರೂ ಸ್ವಲ್ಪ ಕಷ್ಟಾ ಪಟ್ಟು ಓದ್ತಾ ಓದ್ತಾ ಹೋದೆ. ನಾನೇ ಬರೆದ ಕೆಲವೊಂದು ಲೇಖನಗಳು ಕೆಲವು ಉದಯಾ ಟಿವಿ ಸೀರಿಯಲ್ಲಿಗಿಂತಲೂ ಕಡೆಯಾಗಿ ಕಂಡವು, ಇನ್ನು ಕೆಲವು ಲೇಖನಗಳಲ್ಲಿ ಜೀವಂತಿಗೆ ಅನ್ನೋದು ಸ್ವಲ್ಪಮಟ್ಟಿಗಾದ್ರೂ ಉಳಿದಿತ್ತು. ಅವೆಲ್ಲವುಗಳಲ್ಲಿ ಹೆಚ್ಚಿನವುಗಳನ್ನು ನೋಡಿಕೊಂಡು ಬಂದ ನಂತರ ಅನ್ನಿಸಿದ್ದೇನಂದರೆ ನಾನು ಈ ಲೇಖನಗಳಿಗೆ ಪೂರಕವಾಗಿ ಯಾವುದೇ ಕೆಲಸವನ್ನೂ ಮಾಡುತ್ತಿಲ್ಲ - ಸರಿಯಾಗಿ ಓದುತ್ತಿಲ್ಲ, ಹಾಗೂ ತಕ್ಕಮಟ್ಟಿಗೆ ಬರೆಯುತ್ತಿಲ್ಲ ಎಂಬುದಾಗಿ.

ಕೆಲವೊಂದು ಲೇಖನಗಳಲ್ಲಿ ಅನವಶ್ಯಕವಾಗಿ ಉದ್ದುದ್ದ ಸಾಲುಗಳಿದ್ದರೆ, ಇನ್ನು ಕೆಲವುಗಳಲ್ಲಿ ಪ್ರಶ್ನೆಗಳೇ ಪ್ಯಾರಾಗ್ರಾಫ್ ಉದ್ದಕ್ಕೂ ಇರುವಂತೆ ಬರೆಯುವ ಅಗತ್ಯವೇನಿತ್ತು ಎಂದು ಬಲವಾಗಿ ಅನ್ನಿಸತೊಡಗಿತ್ತು. ಓದುಗರಿಗೆ ಬೇಕಾದದ್ದನ್ನು ಕೊಡಬೇಕಾಗಿರುವ ಮಾಧ್ಯಮಗಳು ಅಂತರ್ಮುಖಿಗಳಾಗಿ ತಮ್ಮನ್ನು ತಾವು ಯಾವಾಗಲೂ ಮುಚ್ಚಿಕೊಂಡಿರುವುದು ಸಾಧ್ಯವೇ? ಓದಿನಿಂದ ಮನೋರಂಜನೆ ಸಿಗುವುದರ ಜೊತೆಗೆ ಇತರರಿಗೆ ಸಹಾಯವಾಗುವಂತಿರಬೇಕು ಮುಂತಾಗಿ ಇನ್ನೂ ಏನೇನೋ ಆಲೋಚನೆಗಳು ಮುತ್ತಿಕೊಳ್ಳತೊಡಗಿದವು. ಇಷ್ಟೊಂದು ದಿನ ಬೇಕು-ಬೇಡಗಳ ನೀರನ್ನು ಕುಡಿದಿದ್ದೇವೆ ಎನ್ನುವುದಕ್ಕೆ ತಕ್ಕಂತೆ ಪ್ರತಿಯೊಂದು ಹಂತದಲ್ಲೂ ’ಇದರಿಂದೇನಾಯ್ತು, ಅದರಿಂದೇನಾಯ್ತು’ ಎನ್ನುವ ಪ್ರಶ್ನೆಗಳು ಹುಟ್ಟಿ ಅಂತಹ ಪ್ರಶ್ನೆಗಳಿಗೆಲ್ಲ ದೊರೆಯುವ ಉತ್ತರವೇ ದೊಡ್ಡದೆನಿಸತೊಡಗಿತ್ತು.

ಹೌದು, ನಾವು ಮಾಡುವ ಪ್ರತಿಯೊಂದು ಕೆಲಸದ ಗುಣಮಾನಕ್ಕೂ ನಮದೇ ಆದ ಒಂದು ತೃಪ್ತಿ ಇರಬೇಕು. ತೆರೆದ ಪ್ರಶ್ನೆಗಳಿಗೆ ತಕ್ಕ ಉತ್ತರ ಸಿಗಬೇಕು. ಕೊನೆಯ ಪಕ್ಷ ಅಲ್ಪಾವಧಿಯಲ್ಲಿ ಏನೂ ಪ್ರಯೋಜನವಿರದಂತೆ ಕಂಡರೂ ಧೀರ್ಘಾವಧಿಯಲ್ಲಿ ಏನಾದರೊಂದು ಉದ್ದೇಶವಿರಲೇಬೇಕು. ಒಬ್ಬ ಕಾದಂಬರಿಕಾರನಾಗಲೀ, ಅಥವಾ ಬ್ಲಾಗ್ ಬರಹಗಾರನಲ್ಲಾಗಲೀ ಅಂತಹ ವ್ಯತ್ಯಾಸವೇನೂ ಇರೋದಿಲ್ಲ. ಕಾದಂಬರಿಕಾರ ತನ್ನ ಪಾತ್ರಗಳನ್ನು ಹುಟ್ಟಿಸಿ, ಬೆಳೆಸಿ ಅದರ ಮೂಲಕ ನಿಗದಿತವಾದ ಒಂದು ಚಿತ್ರಣವನ್ನು ಕೊಟ್ಟರೆ ಒಬ್ಬ ಬ್ಲಾಗ್ ಕರ್ತೃಗೆ ಸಹ ತನ್ನದೇ ಆದ ಜವಾಬ್ದಾರಿಗಳಿರುತ್ತವೆ. ಆಯಾ ಬರಹಗಳು ಪ್ರಪಂಚದ ಹಸಿವನ್ನು ಹೋಗಲಾಡಿಸದಿದ್ದರೂ ಆ ಬರಹ ಸೃಷ್ಟಿಸಬಹುದಾದ ಒಂದು ನೆಲೆಗಟ್ಟಿಗೆ, ಅದರಲ್ಲೇಳುವ ಪ್ರಶ್ನೆಗಳಿಗೆ ಪೂರಕವಾಗಿರಬೇಕಾದದ್ದು ಬಹು ಮುಖ್ಯ. ನನಗೆ ಬೇಕಾದ ರೀತಿಯಲ್ಲಿ ನಾನು ವಸ್ತು-ವಿಷಯಗಳನ್ನು ನೋಡಿ ಬರೆಯುವುದು ಹೌದಾದರೂ ಓದುಗನ ದೃಷ್ಟಿಯಲ್ಲಿ ಕಾಳಜಿಯನ್ನು ಒಳಗೊಳ್ಳದೇ ಇದ್ದರೆ ಬರಹಗಳು ಅಪೂರ್ಣಗೊಂಡಾವು.

ಹೆಚ್ಚಿನ ಗುಣಮಟ್ಟದ ಬರಹಗಳನ್ನು ಬರೆಯಲು ಹೆಚ್ಚಿನದನ್ನು ಓದಬೇಕು, ಅದಕ್ಕೆ ತಕ್ಕ ಪರಿಶ್ರಮದಿಂದ ಹೊರಗುಳಿಯಲು ಸಾಧ್ಯವೇ ಇರದ ಪರಿಸ್ಥಿತಿ. ಈ ನಿಜವನ್ನು ಅರಿಯದೇ ಬ್ಲಾಗಿಸಲು ಹೊರಟ ಬರಹಗಾರರ ಕಿಚ್ಚು ಹೆಚ್ಚು ದಿನ ಉರಿಯದೇ ಉಳಿಯೋದು ಆಶ್ಚರ್ಯವೇನೂ ತರಿಸೋದಿಲ್ಲ. ಹೆಚ್ಚು ಜನ ವೇಗವನ್ನು ಬಯಸಿ ಕೀರ್ತಿಯ ಬೆನ್ನು ಹತ್ತುತ್ತಿರುವುದಾಗಿ ಕಂಡು ಬಂದರೆ, ಇನ್ನು ಕೆಲವು ಬರಹಗಳಲ್ಲಿ ಅಂಕಿ-ಅಂಶಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಂತೆ ಕಾಣಿಸಿತು. ಇನ್ನು ಉಳಿದ ಭಾರತೀಯ ಭಾಷೆಗಳಲ್ಲಿ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ, ಆದರೆ ಕನ್ನಡದಲ್ಲಿ ಕೆಲವು ಬ್ಲಾಗ್‌ಗಳು ಒಮ್ಮೆ ಓದಿದರೆ ಮತ್ತೊಮ್ಮೆ ಬಂದು ಇಣುಕಿ ನೋಡಬೇಕು ಎನ್ನುವ ಆಸೆಯನ್ನು ಹುಟ್ಟಿಸುವಲ್ಲಿ ಸಫಲವಾದವುಗಳು. ಬ್ಲಾಗ್ ಎನ್ನುವ ಪದವನ್ನು ಅನಿವಾಸಿ ಹರಟೆಕಟ್ಟೆ ಎಂದು ಬದಲಾಯಿಸೋದಕ್ಕೆ ಬರೋದಿಲ್ಲ, ಏಕೆಂದರೆ ಕೆಲವು ಉತ್ತಮ ಬ್ಲಾಗಿಗರು ಕರ್ನಾಟಕದಲ್ಲಿಯೇ ಇರುವವರು.

ವೇಗದ ಜೀವನವನ್ನು ಅರಸಿಕೊಂಡು ಬಂದವರಿಗೆ ಅಲ್ಲಲ್ಲಿ ಅಪರೂಪಕ್ಕೆ ಸಿಗುವ ಉತ್ತಮ ಲೇಖನಗಳು ಮರುಭೂಮಿಯಲ್ಲಿನ ಓಯಸಿಸ್ಸ್ ಹಾಗೆ. ದಾಹ ತಣಿಸಿ ಒಂದಿಷ್ಟು ತಂಪನ್ನು ನೀಡಿಯೇ ನೀಡುತ್ತವೆ. ಆದರೆ ಮುಖ್ಯ ಪ್ರಯಾಣಕ್ಕೆ ಪೂರಕವಾಗಿ ಇನ್ನೂ ಸಾಕಷ್ಟು ದೂರ ಹೋಗುವುದಕ್ಕಿದೆ ಎನ್ನುವ ಸತ್ಯ ಅನೇಕರಿಗೆ ಓಯಸಿಸ್ಸೇ ಗುರಿಯನ್ನಾಗಿ ಮಾಡದಿರಲಿ, ಜೊತೆಯಲ್ಲಿ ಮರಳುಗಾಡಿನ ಪ್ರಯಾಣವನ್ನು ಸುಖಮಯವಾಗಿಸಲಿ, ಏನಿಲ್ಲವೆಂದರೆ ಈವರೆಗೂ ಗೊತ್ತಿರದ ಹಾಗೂ ಮುಂದೆ ಬರುವ ಕಷ್ಟಗಳನ್ನು ಸಹಿಸಲು ಶಕ್ತಿಯನ್ನು ಕೊಡಲಿ.

Wednesday, September 05, 2007

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

ಹೀಗೇ ಒಂದ್ ಕ್ಷಣ ಸೋಮಾರಿತನದ ಪರಮಾವಧಿಯಲ್ಲಿ ಗದ್ದಕ್ಕೆ ಕೈ ಕೊಟ್ಟು ಕುಳಿತು ಯೋಚಿಸುತ್ತಿರುವಾಗ ಈ ಸೋಮಾರಿತನವೆನ್ನುವುದು ಏಕೆ ಅಷ್ಟೊಂದು ಸಹಜವಾಗಿ ಎಲ್ಲರಿಗೂ ಅನ್ವಯವಾಗೋದು ಒಂದು ಸಣ್ಣ ಚಿಂತೆ ಶುರುವಾಯಿತು. ಮೊದಲಿಗೆ ಮಾಮೂಲಿನ ಪ್ರತಿಕ್ರಿಯೆಯಂತೆ ಯಾರಪ್ಪಾ ಅದನ್ನು ಕುರಿತು ಯೋಚನೆ ಮಾಡೋದು ಎಂದು ಒಮ್ಮೆ ಉದಾಸೀನತೆ ಪುಟಿದೆದ್ದು ನಿಂತರೆ, ಮತ್ತೊಂದು ಕಡೆ ಅದೇನ್ ಆಗೇ ಬಿಡುತ್ತೋ ನೋಡಿಯೇ ಬಿಡೋಣ ಎನ್ನುವ ಛಲ ಅದಕ್ಕೆ ವಿರುದ್ಧ ಧ್ವನಿ ಎತ್ತಿತ್ತು. ಈ ಹೊತ್ತಿನ ತತ್ವದ ಮಟ್ಟಿಗೆ ಕಂಡುಬಂದ ಸತ್ಯಗಳು ಇವು, ಉದಾಸೀನತೆ ಹಾಗೂ ಛಲದ ವಿರುದ್ಧ ನಡೆಯುವ ಮುಖಾಮುಕಿಯಲ್ಲಿ ಯಾರು ಗೆಲ್ಲುತ್ತಾರೋ ಬಿಡುತ್ತಾರೋ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧರಿತವಾಗಬೇಕಿದೆ.

ಅದೂ ನಿಜಾ ಅನ್ನಿ, ಜೀವನದಲ್ಲಿ ಪ್ರತಿಯೊಂದನ್ನೂ ಮ್ಯಾನೆಜ್ ಮಾಡಬೇಕಾಗುತ್ತೆ, ಪ್ರತಿಯೊಂದನ್ನೂ ಮೈಂಟೇನ್ ಮಾಡಬೇಕಾಗುತ್ತೆ. ಚಕ್ರದ ಹಾಗೆ ಸುತ್ತಿ ಸುತ್ತಿ ಬರೋ ಪ್ರತಿಯೊಂದು ಬದಲಾವಣೆಗಳು ಮೇಲ್ನೋಟಕ್ಕೆ ಮಾಡಿದ್ದೇ ಮಾಡು ಎಂದು ಅಣಗಿಸುವಂತೆ ತೋರಿದರೂ ಮಾಡದೇ ಇದ್ದರೇ ವಿಧಿಯಿಲ್ಲ ಎಂದು ಕಿಚಾಯಿಸುವ ಪ್ರಸಂಗಗಳೇ ಹೆಚ್ಚು. ಸವಲತ್ತುಗಳನ್ನು ಮ್ಯಾನೇಜ್ ಮಾಡಬೇಕು, ಸಂಬಂಧಗಳನ್ನು ಮ್ಯಾನೇಜ್ ಮಾಡಬೇಕು, ಇನ್ನು ಕೆಲವನ್ನು ನಿಗದಿತ ಸಮಯದಲ್ಲಿ ಮೇಂಟೈನ್ ಮಾಡಬೇಕು ಇಲ್ಲವೆಂದರೆ ಬೇಕು ಎಂದಾಗಲೇ ಕೈಕೊಡುತ್ತವೆ. ಗಾಳಿ ಇದ್ದಲ್ಲೆಲ್ಲ ಧೂಳು ಇರೋದು ಸಹಜ ಎನ್ನುವುದು ’ಅಂತರಂಗ’ ಕಂಡುಕೊಂಡ ಸರಳ ಸತ್ಯಗಳಲ್ಲೊಂದು. ಅದರ ಅರ್ಥವೇನಪ್ಪಾ ಅಂದ್ರೆ ನಾವು ಉಪಯೋಗಿಸದೇ ಬಿಟ್ಟಿರೋ ಜಾಗ ಅಥವಾ ಕೋಣೆಯನ್ನು ಗುಡಿಸಿ ಶುಭ್ರವಾಗಿಟ್ಟುಕೊಳ್ಳಲೇ ಬೇಕಾಗುತ್ತೆ. ಕಿಟಕಿ-ಬಾಗಿಲು ಎಲ್ಲವನ್ನು ಭದ್ರಪಡಿಸಿ ಯಾರೂ ಉಪಯೋಗಿಸದ ಕೋಣೆಯನ್ನು ಒಂದು ವಾರ ಬಿಟ್ಟು ತೆರೆದು ನೋಡಿ, ಅದ್ಯಾವುದೋ ಅಗೋಚರ ಶಕ್ತಿ ನಿಮಗೆ ವಿರುದ್ಧವಾಗಿ ತಿರುಗಿ ಬಿದ್ದಂತೆ ಎಲ್ಲದರ ಮೇಲೂ ತೆಳುವಾದ ಧೂಳಿನ ಒಂದು ಲೇಪನ ಮಾಡಿರುತ್ತೆ. ಹೀಗೆ ತೆಳುವಾದ ಧೂಳನ್ನು ಒಂದು ಕಡೆ ಒರೆಸಿದರಷ್ಟೇ ಸಾಲದು, ಅಲ್ಲಿ-ಇಲ್ಲಿ, ಅತ್ತ-ಇತ್ತ ಒರೆಸುತ್ತಾ ಹಿಂದೆ ಮುಂದೆ ನೋಡುವಷ್ಟರಲ್ಲಿ ಇಡೀ ಕೊಠಡಿಯೇ ಸ್ವಚ್ಛತೆಯನ್ನು ಬೇಡಲು ತೊಡಗುತ್ತದೆ. ಇದು ಎಂದೂ ಉಪಯೋಗಿಸದೇ ಇರುವ ಕೋಣೆಯ ಕಥೆಯಾದರೆ ಇನ್ನು ಪ್ರತಿದಿನವೂ ಉಪಯೋಗಿಸುವ ಕೊಠಡಿ, ಪರಿಕರಗಳ ಕಥೆ ಇನ್ನೊಂದು ರೀತಿ. ನೀವು ಆಯಾ ವಸ್ತುಗಳನ್ನು ಉಪಯೋಗಿಸಿದಂತೆಲ್ಲಾ ಅಲ್ಲೆಲ್ಲಾ ನಿಮ್ಮ ಸಿಗ್ನೇಚರ್ ಬೀಳಲುತೊಡಗುತ್ತದೆ. ಸೂಕ್ಷ್ಮವಾದವರಿಗೆ ಬೆರಳಿನ ಗುರುತು ಕಾಣತೊಡಗಿದರೆ, ಕೊಂಕಣೀ ಎಮ್ಮೆಗೆ ಕೊಡತಿ ಪೆಟ್ಟು ಅನ್ನೋ ಹಾಗೆ ಅವರವರ ಚರ್ಮದ ಥಿಕ್‌ನೆಸ್‌ಗೆ ಅನುಸಾರವಾಗಿ ಆಯಾ ವಸ್ತುವಿನ ಫಲಾನುಭವ ಕಣ್ಣಿಗೆ ರಾಚುತ್ತದೆ.

ಈ ದಿನ ನಿತ್ಯ ಉಪಯೋಗಿಸುವ ವಸ್ತುಗಳ ರಂಪಾಟವೇ ಸೋಮಾರಿತನಕ್ಕೆ ಮೂಲಭೂತ ಕಾರಣ. ಹೊಸ ಬಟ್ಟೆಗಳನ್ನು ಧರಿಸಿ ಶೋಕಿ ಮಾಡುವುದರ ಸುಖ ಕೊಳೆಯಾದ ಅದನ್ನು ಒಗೆದು, ಒಣಗಿಸಿ, ಇಸ್ತ್ರಿ ತಾಗಿಸಿ ಜೋಪಾನವಾಗಿ ಹ್ಯಾಂಗರ್‌ಗೆ ಹಾಕುವವರೆಗೂ ಇರೋದಿಲ್ಲ. ಜನರು ವಾರಕ್ಕೆ ಐದು ದಿನಗಳಿಗಾಗೋಷ್ಟು ಬಟ್ಟೆಯ ನಾಲ್ಕು ಪಟ್ಟು ಬಟ್ಟೆಯನ್ನು ಇಟ್ಟುಕೊಳ್ಳುವುದೇಕೆ ಎಂದುಕೊಂಡಿರಿ? ಉಪಯೋಗಿಸಿ ಉಪಯೋಗಿಸಿ ಕೊಳೆ ಬಟ್ಟೆಗಳು ರಾಶಿ ಬಿದ್ದ ನಂತರ ಒಂದು ದಿನ ಅವುಗಳಿಗೆಲ್ಲ ಗ್ರಹಚಾರ ಬದಲಾವಣೆಯಾದ ಪ್ರಯುಕ್ತ ನೀರಿನ ಮುಖ ಕಾಣಿಸುತ್ತದೆ. ನಂತರ ಒಗೆದು, ಒಣಗಿಸಿದಂತೆ ಮಾಡಿದ ಮೇಲೆ ಕೆಟ್ಟ ಮುಖವನ್ನು ಮಾಡಿಕೊಂಡು (ಅದೂ ಎಷ್ಟೋ ದಿನಗಳ ನಂತರ) ಬಟ್ಟೆಗಳನ್ನು ಮಡಚಿಡಲಾಗುತ್ತದೆ. ಇನ್ನು ಇಸ್ತ್ರಿ ತಾಗಿಸುವ ಅಗತ್ಯವಿದ್ದರೆ, ಅದು ಆಯಾ ದಿನದ ಮುಂಜಾನೆಯ ಕರ್ತವ್ಯಗಳಲ್ಲೊಂದು. ಈ ಕೊಳೆಯಾಗಿ ಮತ್ತೆ ಸುಸ್ಥಿತಿಯನ್ನು ಕಾಣುವ ಬಟ್ಟೆಗಳ ಗೋಳು ಬೇಡವೆಂದೇ ನ್ಯೂಡಿಷ್ಟ್ ಬೀಚುಗಳು ಇತ್ತೀಚೆಗೆ ಹೆಚ್ಚುತ್ತಿರೋದು ಎಂದು ಕಾಣಿಸುತ್ತೆ! ಮಕ್ಕಳಿದ್ದವರು ಕೊರಗುವುದನ್ನು ನೋಡಿ ನಮಗೆ ಮಕ್ಕಳೇ ಬೇಡ ಎಂದು ನಿರ್ಧರಿಸಿಬಿಡುವ ದಂಪತಿಗಳ ಹಾಗೆ ನ್ಯೂಡಿಷ್ಟ್ ಜನರು ಬಟ್ಟೆಯನ್ನೇ ಹಾಕೋದಿಲ್ಲವಂತೆ, ಬಟ್ಟೆ ಹಾಕಿದರೆ ತಾನೇ ಅದರ ಕಷ್ಟಾ-ನಷ್ಟಾ ಎಲ್ಲಾ?

ಈ ಬಟ್ಟೆಗಳ ಸವಾಸ ಬೇಕು ಆದರೆ ಕಸ ಹೊಡೆಯುವುದಾಗಲೀ ಪಾತ್ರೆ ತಿಕ್ಕುವುದರ ಸಹವಾಸ ಬೇಡವೇ ಬೇಡ. ಅದೂ ದಿನಕ್ಕೆ ಮೂರು ಹೊತ್ತು ಮುಕ್ಕಿ ಮಿಕ್ಕಿದ್ದೆಲ್ಲವನ್ನೂ ಮುಗಿಸುವ ಜಾಯಮಾನವಿರುವವರೆಗೆ ಬದುಕು ಬಹಳ ಕಷ್ಟಾ. ಎಷ್ಟೇ ನೀಟಾಗಿ ಸಿಂಕು ತೊಳೆದಿಟ್ಟರೂ ಒಂದಲ್ಲಾ ಒಂದು ಪಾತ್ರೆಗಳು ಬಂದು ಬೀಳುತ್ತಲೇ ಇರೋದನ್ನ ನೋಡಿದ್ರೆ ಯಾರೋ ನಮಗೆ ಆಗದವರು ಮಾಟಾ-ಮಂತ್ರ ಮಾಡಿಸಿಟ್ಟಿದ್ದಾರೇನೋ ಅನ್ನಿಸುತ್ತೆ. ಅದೂ ಈ ದೇಶದಲ್ಲಂತೂ ಎಲ್ಲವನ್ನೂ ನಾವೇ ಮಾಡಿಕೂಳ್ಳಬೇಕಪ್ಪ. ವಾರವಿಡೀ ದುಡಿದು ತರೋದು ಅಲ್ಲಿಂದಲ್ಲಿಗೆ ಆಗುತ್ತೆ. ವಾರಾಂತ್ಯದಲ್ಲಿ ಇರೋ ಬರೋದನ್ನೆಲ್ಲ ಮ್ಯಾನೇಜೂ ಮೇಂಟೇನೂ ಮಾಡಿಕೊಂಡೇ ಇರಬೇಕಾಗುತ್ತೆ.

ಹೀಗೆ ಸೃಷ್ಟಿಯಲ್ಲಿ ನಮ್ಮ ವಿರುದ್ಧ ನಿಲ್ಲಬಲ್ಲ ಸಂಕೋಲೆಗಳನ್ನು ಜಯಿಸಲು ವಿಕಾಸವಾದದ ಬುನಾದಿಯ ಅಡಿಯಲ್ಲಿ ನಾವು ಪಡೆದುಕೊಂಡ ಶಕ್ತಿಯ ಸ್ವರೂಪವೇ ಸೋಮಾರಿತನ. ಅದನ್ನ ನಾವೆಲ್ಲರೂ ಪೂಜಿಸೋಣ, ಆರಾಧಿಸೋಣ. ಪ್ರಾಣಿಗಳು ನಗೋದಿಲ್ಲ, ಮನುಷ್ಯರು ನಗ್ತಾರೆ ಎನ್ನುವವರಿಗೆ ನಿಜ ಸ್ಥಿತಿಯ ಪೂರ್ತಿ ಅರಿವಂತೂ ಇಲ್ಲ. ಪ್ರಾಣಿಗಳು ಸೋಮಾರಿಗಳಾಗೋದಕ್ಕೆ ಸಾಧ್ಯವೇ ಇಲ್ಲ.

***

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

Monday, September 03, 2007

ಏನು ಸುಖವಮ್ಮಾ, ಯಾವುದು ಸುಖವಮ್ಮಾ

ನಮ್ಮಮ್ಮ ತೂಕದ ಮಾತನ್ನಾಡೋದೇ ಹೆಚ್ಚು, ಯಾವಾಗ್ ನೋಡುದ್ರೂ ಈ ಥರದ ಒಂದ್ ಮಾತನ್ನ ಎಸೀತಾನೇ ಇರ್ತಾಳೆ...’ಎಲ್ಲಾ ಸುಖವಾಗಿದೀರಾ ತಾನೇ?’, ಅನ್ನೋ ಪ್ರಶ್ನೆ ಕೆಲವೊಮ್ಮೆ ’ಎಲ್ಲಾ ಅರಾಮಾ...’ ಅನ್ನೋದರ ಮುಂದಿನ ವಾಕ್ಯವಾಗಬಹುದು ಅಥವಾ ಎಷ್ಟೋ ವಾಕ್ಯಗಳನ್ನು ಅಂತ್ಯಗೊಳಿಸುವ ಒಂದು ಲಯವಾಗಿರಬಹುದು. ಒಂದೊಂದ್ ಸಾರಿ ಸಾರ್‌ಕ್ಯಾಸಮ್ ನಲ್ಲಿ ಹೇಳ್ತಾ ಇರೋ ಹಾಗೆ ಅನ್ನಿಸಿದರೆ, ಇನ್ನೊಂದಿಷ್ಟು ಸಾರಿ ನಿಜವಾದ ಕಳಕಳಿ ಅಭಿವ್ಯಕ್ತಗೊಳ್ಳುತ್ತೆ. ಅದು ಸರಿ, ’ಅರಾಮಾ?’ ಅನ್ನೋ ಪ್ರಶ್ನೆಗೆ ’ಹೂಞ್!’ ಎಂದು ಉತ್ತರ ಕೊಟ್ರೆ, ’ಸುಖವಾಗಿದ್ದೀರಾ?’ ಅನ್ನೋ ಪ್ರಶ್ನೆಗೆ ಏನಂತ ಉತ್ತರ ಕೊಡೋಣ, ಅದೂ ಹೋಗೀ ಹೋಗಿ ಅಡಿಗರ ’ಇರುವುದೆಲ್ಲವ ಬಿಟ್ಟು...’ ಬಂದ ಮನಸ್ಸಿನವರಾದ ಮೇಲೆ. ಎಷ್ಟೋ ಸಾರಿ ಅನ್ನಿಸಿದೆ, ಹೆಚ್ಚಿನ ಪಕ್ಷ ಒಂದ್ ಕೆಟ್ಟ ಸಿಟ್ಟಿನಲ್ಲೇ, ’ಯಾವುದು ಸುಖವಮ್ಮಾ?’ ಎಂದು ಕೇಳೋಣವೆನ್ನಿಸಿದೆ, ಆಕೆಯ ವೃದ್ದಾಪ್ಯದಲ್ಲಾದರೂ ಸುಖದ ಬಗ್ಗೆ ಆಕೆಗೆ ತಿಳಿದಿದೆಯೋ ಏನೋ ಎನ್ನುವ ಸ್ವಾರ್ಥ ನನ್ನದು, ಏಕೆಂದರೆ ಕೊನೆಗೆ ಸುಖಾ ಎನ್ನುವುದು ವೃದ್ದಾಪ್ಯದಲ್ಲಾದರೂ ಸಿಗುವ ನಿಧಿಯಾಗಬಹುದೇನೋ ಎನ್ನುವ ಕಾತರತೆಯಿಂದಲಾದರೂ ಕಾಲ ಕಳೆಯಬಹುದಲ್ಲಾ.

ಈ ತಳಮಳದ ಹಿಂದೆ ಅನೇಕ ಸಂವೇದನೆಗಳಿವೆ, ಭಾವನೆಗಳಿವೆ, ಅನುಭವಗಳಿವೆ. ಮನಸ್ಸು ಮತ್ತು ತಲೆಯನ್ನು ಖರ್ಚು ಮಾಡಿಕೊಂಡು ಜೀವನ ಸಾಗಿಸುವವರ ಪ್ರತಿಯೊಂದು ಸೂಕ್ಷ್ಮತೆಯೂ ಅಡಕವಾಗಿದೆ. ಅದಕ್ಕೆಂದೇ ಅನ್ನಿಸೋದು ನಾನು ದೈಹಿಕ ಶಕ್ತಿಯನ್ನು ನಂಬಿಕೊಂಡು ಪ್ರಿಮಿಟಿವ್ ಕೆಲಸವನ್ನು ಮಾಡಿಕೊಂಡಿದ್ದರೆ ಹೇಗಿತ್ತು ಎಂದು. ಒಬ್ಬ ಕಾರ್ಪೆಂಟರ್ ಆಗಿ, ದಿನಗೂಲಿ ಮಾಡುವವನಾಗಿ, ಕನ್‌ಸ್ಟ್ರಕ್ಷನ್ ಕೆಲಸಗಾರನಾಗಿ, ರಸ್ತೆ ರಿಪೇರಿ ಮಾಡುವವನಾಗಿ, ಎಲೆಕ್ಟ್ರಿಷಿಯನ್ ಆಗಿ, ಇತ್ಯಾದಿ. ಉತ್ತಮ ಆದಾಯವೇನೂ ಇರುತ್ತಿರಲಿಲ್ಲವೇನೋ, ಆದರೆ ದಿನದ ದೈಹಿಕ ಚಿಂತೆ ಅಗತ್ಯಗಳ ಮುಂದೆ ಮನಸ್ಸಿಗೆ ದೊಡ್ಡ ಕಡಿವಾಣ ಬೀಳುತ್ತಿತ್ತು. ಆ ಮಟ್ಟಿಗೆ ಗಳಿಸಿ, ಅದೇ ಮಟ್ಟದಲ್ಲಿ ಖರ್ಚು ಮಾಡಿ ಅವತ್ತಿಂದವತ್ತಿಗೆ ಬದುಕಿದರೂ ಅಲ್ಲಿ ಇನ್ಯಾವ ರೀತಿಯ ಕೊರಗುಗಳಿರುತ್ತಿದ್ದವೋ ಆದರೆ ತಲೆಯಲ್ಲಿ ಶಾಶ್ವತವಾದ ಮರಕುಟಿಗನ ಹಾಗೆ ಕುಟುಕುತ್ತಲೇ ಇರುತ್ತಿರುವ ಒಂದು ಧ್ವನಿ ಇರುತ್ತಿರಲಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಹಾಗೆ ಬೇರೆ ವೃತ್ತಿ, ಪ್ರವೃತ್ತಿಗಳಲ್ಲಿರುವ ಕಷ್ಟ ಸುಖವನ್ನು ನಾನೇನು ಬಲ್ಲೆ, ಅಲ್ಲಿನ ಪೀಕಲಾಟಗಳನ್ನು ದಿನವೂ ಏಗುತ್ತಿರುವವರಿಗೆ ನಮ್ಮ ಬದುಕು ಸುಂದರವಾಗಿ ಕಾಣುವುದೇ ಒಂದು ದೊಡ್ಡ ರಹಸ್ಯವಲ್ಲದೇ ಇನ್ನೇನು?

ಸುಖವೆನ್ನುವುದು ಏನು ಹಾಗಾದರೆ? ಅದು ಮಾನಸಿಕ ನೆಲೆಗಟ್ಟೇ, ಭೌತಿಕ ಸ್ಥಿತಿಯೇ, ಸಾಮಾಜಿಕ ಸಂಕಲ್ಪವೇ, ಬೇಕು ಎನ್ನುವವುಗಳಿಗೆಲ್ಲ ಸಿಕ್ಕ ಉತ್ತರವೇ, ಇಲ್ಲವೆನ್ನುವವುಗಳ ಬೆಂಬಿಡದ ಪ್ರಶ್ನೆಗಳೇ? ಸುಖವೆನ್ನುವುದು ಆಂತರಿಕವಾದದ್ದೇ, ಅಥವಾ ಪ್ರತಿಯೊಬ್ಬರೂ ಕಂಡು, ಅನುಭವಿಸಿ, ಗುರುತುಹಿಡಿಯಬಲ್ಲ ಬಹಿರಂಗದ ರೂಪವೇ? ಈ ಪ್ರಪಂಚದ ಮನುಷ್ಯ ಕುಲದಲ್ಲಿ ಯಾರಾದರೂ ಸುಖವಾಗಿದ್ದಾರೆಯೇ? ಅಥವಾ ಯಾರೂ ಸುಖವಾಗಿರದೇ ಸುಖವೆನ್ನುವ ಮರೀಚಿಕೆಯನ್ನು ಅರಸುವುದೇ ಬದುಕೇ? ಸುಖವೆನ್ನುವುದು ವಿಧಿ ಲಿಖಿತ ಸಂಕೋಲೆಯೇ, ಅಥವಾ ಮಾನವ ನಿರ್ಮಿತ ಬಂಧನವೇ?

ಸುಖವೆನ್ನುವುದಕ್ಕೆ ಉತ್ತರ ಕಂಡುಕೊಳ್ಳುತ್ತಾ ಹೋದಂತೆ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಇನ್ನೂ ಹಲವು ಸ್ಥರಗಳಲ್ಲಿ ಯೋಚಿಸಿಕೊಳ್ಳುವಂತಾಯಿತು. ಒಮ್ಮೆ ಇರುವ ಸದರಿ ಸ್ಥಿತಿಯಿಂದ ಮುಕ್ತವಾಗಿ ಒಡನೆಯೇ ಮತ್ತೊಂದು ಸ್ಥಿತಿಯನ್ನು ತಲುಪುವುದು ಸುಖವೆಂದು ಕಂಡುಬಂದರೆ, ಮತ್ತೊಮ್ಮೆ ಇನ್ನು ಎಷ್ಟೋ ವರ್ಷಗಳ ನಂತರ ಬರಬಹುದಾದ ಸಾಮಾಜಿಕ ಸಾಧ್ಯತೆಯೂ ಸುಖವಾಗಿ ಕಂಡುಬಂದಿತು. ಹಲ್ಲು ನೋವಿರುವವನಿಗೆ ತಾತ್ಕಾಲಿಕ ಉಪಶಮನಕ್ಕೆಂದು ಕೊಟ್ಟ ನೋವಿನ ಮಾತ್ರೆ ಒಡನೆಯೇ ಸುಖವನ್ನು ತಂದುಕೊಟ್ಟರೆ, ಲಾಟೀನ್ ದೀಪದ ಬೆಳಕಿನಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಹತ್ತನೇ ತರಗತಿಯ ಪರೀಕ್ಷೆಗೆ ತಯಾರಾಗುತ್ತಿರುವ ಬಡಹುಡುಗನ ಒಂದು ದಿನ ನಾನೂ ಇಂಜಿನಿಯರ್ ಆಗುತ್ತೇನೆ ಎನ್ನುವ ದೀಪದ ಬೆಳಕಿಗೆ ತೊನಲಾಡುತ್ತಿರುವ ನೆರಳಿನಂತಿರುವ ಕನಸು ಎಷ್ಟೋ ವರ್ಷಗಳ ನಂತರ ಸುಖಕ್ಕೆ ಸಂಬಂಧಿಸಿದಂತೆ ತೋರಿತು. ’ಸುಖವಾಗಿದ್ದೀಯಾ?’ ಎನ್ನುವ ಪ್ರಶ್ನೆಯನ್ನು ಪ್ರತಿದಿನವೂ ಕೇಳಿ (Rhetorical) ಅದರಿಂದ ಯಾವ ಉತ್ತರವನ್ನು ನಿರೀಕ್ಷಿಸದೆಯೂ ಇರಬಹುದು, ಅದೇ ಪ್ರಶ್ನೆಯನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, ಜನ್ಮಕ್ಕೊಮ್ಮೆ ಕೇಳಿಯೂ ವಿವರವನ್ನು ಹುಡುಕಬಹುದು. ಅದೇ ಪ್ರಶ್ನೆಯನ್ನು ಯಾರು, ಎಷ್ಟು ದೂರದಲ್ಲಿರುವವರು, ಎಲ್ಲಿರುವವರು ಕೇಳಿದರು ಎನ್ನುವುದರ ಮೇಲೆ ಉತ್ತರ ಬದಲಾಗಬಹುದು.

ನನ್ನಗ್ಗೊತ್ತು - ನಾಳೆ ಬೆಳಿಗ್ಗೆ ಮಾರ್ಗದ ಮಧ್ಯೆ ರಸ್ತೆ ರಿಪೇರಿ ಮಾಡುವ ಕೆಲಸಗಾರರಿಗೆ ಈ ಬಗೆಯ ಚಿಂತೆ ಇರುವುದಿಲ್ಲವೆಂದು. ಅಂತಹವರನ್ನು ’ಸುಖವಾಗಿದ್ದೀಯಾ?’ ಎಂದು ಯಾರೂ ಕೇಳೋದೇ ಇಲ್ಲವೇನೋ, ಅಥವಾ ಕೇಳುತ್ತಾರೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಕೆಲಸದ ಮಧ್ಯೆ ತೊಡಗಿದ ಅವರ ಮನಸ್ಸು ಒಂದಲ್ಲ ಒಂದು ಹೊಯ್ದಾಟಕ್ಕೆ ತೂಗುತ್ತಿರಬೇಕಲ್ಲ - ಅವರುಗಳಂತೂ ಖಂಡಿತ ಸಂತರಲ್ಲವೇ ಅಲ್ಲ - ಅವರ ನೆಲ ನೋಡುತ್ತಿರುವ ಕಣ್ಣುಗಳ ಹಿಂದಿನ ಮನಸ್ಸಿನಲ್ಲೇನಿದೆ? ಜ್ಯಾಕ್ ಹ್ಯಾಮರ್ ಸೃಷ್ಟಿಸುತ್ತಿರುವ ಕರ್ಕಷ ಸದ್ದಿಗೂ ಹೊಂದಿಕೊಂಡ ಒರಟುತನದ ಸುಖವೆನ್ನುವುದು ಎಲ್ಲಿ ಹುದುಗಿದೆ? ಅವರ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೊಸ ರಂಗನ್ನು ಕಣ್ಣುಗಳಲ್ಲಿ ಹುಟ್ಟಿಸಿಕೊಳ್ಳುವುದು ಅವರಿಗೆ ಸುಖವಾಗಿ ಕಂಡೀತೇ? ಇವತ್ತಲ್ಲ ನಾಳೆ ನಮ್ಮ ಮಕ್ಕಳು ಸುಖವಾಗಿರಲಿ, ಬಿಳಿ ಕಾಲರ್ ಕೆಲಸಗಾರರಾಗಲಿ ಎನ್ನುವ ಕನಸು ಅವರ ಸುಖವನ್ನು ನಿರ್ಧರಿಸೀತೇ? ರಸ್ತೆಗೆ ಟಾರು ಬಳಿಯುವ ಅವರ ಋಣಾನುಬಂಧ ಹೇಗಿದ್ದಿರಬಹುದು - ಅಕ್ಕ, ತಮ್ಮ, ತಂಗಿ, ಅಣ್ಣ ಇವರುಗಳ ಒಡನಾಟ ಅವರಿಗೆ ಏನನ್ನಿಸಬಹುದು? ಒಂದು ಕ್ಷಣ ಅವರ ಮನಸ್ಸಿನಾಳಕ್ಕಿಳಿದು ಅದರ ವ್ಯಾಖ್ಯೆಯನ್ನು ಅರಿಯಬಯಸುವ ನನ್ನ ಪ್ರಯತ್ನ ರಸ್ತೆಯ ಮೇಲೆ ಸಿಗುವ ಕೆಲವೇ ಕೆಲವು ಕ್ಷಣಗಳಿಗೆ ಮಾತ್ರ ಸೀಮಿತವಾಗುತ್ತದೆ. ಕಣ್ಣ ಮುಂದಿನ ರಸ್ತೆ ಬದಲಾದ ಹಾಗೆ ಅದರ ವ್ಯಾಖ್ಯಾನ, ಅಂತಹ ವ್ಯಾಖ್ಯಾನದ ಹಿಂದಿನ ಅವತರಣಿಕೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ.

ಹಾಗಾದರೆ, ’...ಸುಖವಾಗಿದೀಯಾ ತಾನೇ?’ ಎನ್ನುವ ಪ್ರಶ್ನೆಗೆ ನಿಖರವಾದ ಉತ್ತರವಿದೆಯೋ ಅಥವಾ ದಿನೇದಿನೇ ಅದೂ ಬದಲಾಗುತ್ತದೆಯೋ? ಸದಾ ಬದಲಾಗುವುದನ್ನು ಏಕೆ ಒಂದೇ ಪದದಿಂದೇಕೆ ಅಳೆಯಬೇಕು? ಸುಖವೆನ್ನುವುದು ಎಲ್ಲರಿಗೂ ಸಮನಾದುದು ಎಂದಾದಲ್ಲಿ ಅವರವರಿಗೆ ತಕ್ಕ (ಮಟ್ಟಿನ) ಸುಖವನ್ನು ಬಿಂಬಿಸುವ ಪದಗಳೇಕೆ ಸೃಷ್ಟಿಯಾಗಲಿಲ್ಲ?

***

ನೀವು ಸುಖವಾಗಿದ್ದೀರಾ? ಯಾಕಿಲ್ಲ?