Tuesday, October 24, 2006

'ಬಡವರ ಬಂಧು'ವಿನ ನೆನಪು

ಸಿನಿಮಾ ಬಿಡುಗಡೆಯಾಗಿ ಮೂವತ್ತು ವರ್ಷಗಳು ಆದವು ಎಂದು ನನಗನ್ನಿಸಿದ್ದು ಈ ದಿನ ಇಂಟರ್‌ನೆಟ್‌ನಲ್ಲಿ ಇದರ ಬಗ್ಗೆ ಹುಡುಕಿದಾಗಲೇ! ನಾನು ಈ ಸಿನಿಮಾವನ್ನು ನೋಡಿ ಕೊನೇಪಕ್ಷ ಒಂದಿಪ್ಪತ್ತು ವರ್ಷಗಳಾದರೂ ಕಳೆದಿರಬೇಕು, ಆದರೆ ಈ ಸಿನಿಮಾದ ಹೆಚ್ಚೂ ಕಡಿಮೆ ಎಲ್ಲಾ ಹಾಡುಗಳೂ, ಮುಖ್ಯವಾದ ಸೀನುಗಳು, ಪಾತ್ರಗಳು ಎಲ್ಲಾ ಚೆನ್ನಾಗಿ ಜ್ಞಾಪಕದಲ್ಲಿವೆ, ಹೇಗೆ ಮತ್ತೆ ಏಕೆ ಅನ್ನೋದೇ ಆಶ್ಚರ್ಯ.

ಹಳ್ಳಿಯಲ್ಲಿ ಕನ್ನಡಿಗನಾಗಿ ಹುಟ್ಟಿದ ಭಾಗ್ಯಕ್ಕೆ ನನಗೆ ಇಂಗ್ಲೀಷ್ ಪರಿಚಯವಾದದ್ದೇ ಐದನೇ ತರಗತಿಯಿಂದ, ಅಂದಿನಿಂದ ಇಂದಿನವರೆಗೂ ಅದು ನನ್ನ ಹೃದಯದಲ್ಲಿರೋ ಕನ್ನಡದ ಸ್ಥಾನವನ್ನು ಕಿತ್ತುಕೊಳ್ಳಲು ಹೋರಾಟ ನಡೆಸುತ್ತಲೇ ಇದೆ, ಆದ್ರೆ ಅದು ಎಂದಿಗೂ ಸಾಧ್ಯವಿಲ್ಲ ಅನ್ನೋದು ನನಗೂ ಚೆನ್ನಾಗಿ ಗೊತ್ತು, ಆದರೆ ನನಗೆ ಬರೋ ಇಂಗ್ಲೀಷಿಗೆ ಗೊತ್ತಿಲ್ಲ. ಎಷ್ಟೋ ಸಾರಿ ಬಾಯಿ ತುಂಬಾ ಅರಳು ಹುರಿದ ಹಾಗೆ ಇಂಗ್ಲೀಷನ್ನು ಗೊಣಗೋ ಪೇಟೆ ಹುಡುಗ್ರನ್ನ ನೋಡಿ ನನಗೂ ಅವರ ಥರಾ ಇಂಗ್ಲೀಷ್ ಬಂದಿದ್ರೆ ಅಂತ ಆರ್ತನಾಗಿ ಕರಬಿದ್ದರಿಂದಲೋ ಏನೋ ಇಂಗ್ಲೀಷ್ ಮಾತನಾಡುವವರ ನಡುವೆ ವರ್ಷಾನುಗಟ್ಟಲೇ ಜೀವಿಸೋ ಹಾಗೆ ಆಗಿರೋದು ಎನ್ನೋದು ನಾನು ಹೇಳೋ ಚೀಪ್ ಜೋಕು!

ಕನ್ನಡದ ಸಿನಿಮಾದ ವ್ಯಾಪ್ತಿ ನನ್ನ ಕಣ್ಣಲ್ಲಿ ಇಷ್ಟೇ: ಹೀರೋ ಆದವನು ಸರ್ವಗುಣ ಸಂಪನ್ನ, ಹಾಡ್ತಾನೆ, ಕುಣೀತಾನೇ, ದುಷ್ಟರನ್ನ ಚಚ್ತಾನೆ, ಇತ್ಯಾದಿ. ಮೊದಲೆಲ್ಲ ಆಗಿದ್ರೆ 'ಮಿಲಿಯನ್ ಡಾಲರ್ ಬೇಬಿ' ಸಿನಿಮಾದ ಕ್ಲಿಂಟ್ ಈಸ್ಟ್‌ವುಡ್ ಆಗಲೀ 'As good as it gets' ಚಿತ್ರದ ಜಾಕ್ ನಿಕೋಲ್ಸನ್ ಆಗಲಿ ಅವರೆನ್ನೆಲ್ಲ ಹೀರೋಗಳು ಅಂತ ಒಪ್ಪಿಕೊಳ್ಳೋದಕ್ಕೆ ಸಾಧ್ಯವಿರಲಿಲ್ಲ. ನನ್ನ ಮನಸ್ಸಲ್ಲಿರೋ ಕಥಾನಾಯಕನ ವ್ಯಾಪ್ತಿಯನ್ನು ಆ ರೀತಿ ಅರಳಿಸಿದ್ದಕ್ಕೆ ಇಂಗ್ಲೀಷ್ ಸಾಹಿತ್ಯ, ಸಿನಿಮಾಗಳಿಗೆ ಧನ್ಯವಾದಗಳನ್ನ ಹೇಳಲೇ ಬೇಕು. After all, ಸಿನಿಮಾ ಬದುಕಿನ ಅಂಗವೇ ಹೊರತು ಬದುಕೇ ಸಿನಿಮಾ ಅಲ್ಲವಲ್ಲ.

ಯಾವು ಯಾವುದೋ ಇವೆಂಟುಗಳು ಟ್ರಿಗ್ಗರ್ ಆದ ಹಿನ್ನೆಲೆಯಲ್ಲಿ ಇವತ್ತು ಕಾರಲ್ಲಿ ಕುಳಿತುಕೊಂಡು ಗೊಣಗುತ್ತಾ ಹೋದೆ...

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪೂ ಮೂಡಿವೆ

ತಂದೆ-ಮಗನ ಪ್ರೀತಿ, ವಾತ್ಸಲ್ಯ ಅಂದ್ರೆ ಏನು ಅಂತ ತಿಳೀಬೇಕು ಅಂದ್ರೆ ಬಡವರ ಬಂಧು ಸಿನಿಮಾದ ಈ ಹಾಡಿನ ದೃಶ್ಯವನ್ನು ನೋಡಲೇಬೇಕು. ಪಾರ್ಶ್ವವಾಯು ಪೀಡಿತ ತಂದೆ (ಸಂಪತ್) ಹಾಗೂ ಮಗ (ರಾಜ್‌ಕುಮಾರ್) ಅಭಿನಯದಲ್ಲಿ ಮನಮೋಹಕವಾದ ಅಭಿನಯ ಎಂಥವರ ಕರಳನ್ನೂ ಕೀಚುತ್ತದೆ. ಸಂಪತ್ ಅವರ ಅಭಿನಯವನ್ನು ಪೋಷಕ ಪಾತ್ರಗಳಲ್ಲಿ, ಹೆಚ್ಚಿನದರಲ್ಲಿ ಸಿರಿವಂತನಾಗಿ ಅಥವಾ ಖಳನಾಯಕನಾಗಿ ನೋಡಿದ ಎಷ್ಟೋ ಜನರು ಸಂಪತ್ ಈ ರೀತಿ ಅಭಿನಯವನ್ನೂ ಮಾಡಬಲ್ಲರು ಎಂದುಕೊಂಡಿರಲಾರರು.

ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ
ಬಿಸಿಲು ಮಳೆಗೆ ನರಳದಂತೆ ನಿನ್ನ ನೆರಳಲಿ ಬೆಳೆಸಿದೆ
ಆ ಪ್ರೀತಿಯಾ ಮನ ಮರೆವುದೆ


ರಾಜ್‌ಕುಮಾರ್ ಸಹ ಮಗನ ಪಾತ್ರದಲ್ಲಿ ಸಿದ್ಧಹಸ್ತರು, ಅವರಿಗೆ ಹೇಳಿಕೊಡುವುದಕ್ಕೇನೂ ನಿರ್ದೇಶಕರಿಗೆ ಇದ್ದಿರಲಾರದು. ಸಂಪತ್ ಪಾದಗಳನ್ನು ತೊಳೆದು, ಮೈ ಕೈ ನೀವಿ, ಒರೆಸಿ, ಕುರ್ಚಿಯಲ್ಲಿ ಕುಳ್ಳಿರಿಸಿ ಹಿಂದಿನಿಂದ ತಬ್ಬಿಕೊಂಡು ರಾಜ್ ನಿಂತ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದಿದೆ.

ಬಳ್ಳಿಯಂತೆ ಹಬ್ಬಿ ನಿನ್ನ ಆಸರೆಯಲಿ ಬೆಳೆದೆನು
ನನ್ನ ತಾಯಿಯ ಪಾದದಾಣೆ ಬೇರೆ ಏನನು ಆರಿಯೆನು
ನೀನೆ ನನ್ನಾ ದೇವನು

ತಂದೆಗೆ ಮಗನ ಆಸರೆ, ಮಗನಿಗೆ ತಂದೆಯ ಆಸರೆ, ತಲೆಯ ಮೇಲೊಂದು ಪುಟ್ಟ ಸೂರು. ಹೊಟೇಲಿನಲ್ಲಿ ಸಪ್ಲೈಯರ್ ಆಗಿ ದುಡಿದು ಬಂದ ಹಣದಲ್ಲಿ ಜೀವನ ಸಾಗಿಸಬೇಕು. ಮನೆಯ ಚಿತ್ರಣವೂ ಬಹಳ ಸರಳ. ಇಂತಹ ಹಿನ್ನೆಲೆಗೆ ಕವಿ ಕೊಡುವ ಸರಳ 'ಬಳ್ಳಿಯಂತೆ...'ಚಿತ್ರಣ ಹಾಗೂ ಈ ಅಪರಿಮಿತ ಪ್ರೇಮವನ್ನು ಬೆಲೆಕಟ್ಟಲಾಗದ 'ತಾಯಿಯ ಪಾದದ ಆಣೆ'ಯ ಸಹಾಯದಲ್ಲಿ ತಿಳಿಸಿ ಹೇಳುವ ಹಂಬಲ.

ನೀನು ನಕ್ಕರೆ ನಾನು ನಗುವೆನು, ಅತ್ತರೇ ನಾ ಆಳುವೆನು
ನಿನ್ನ ಉಸಿರಲಿ ಉಸಿರು ಬೆರೆತಿದೆ ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೆ ಬದುಕೆನು

ಮಗನ ಸೇವೆ ಹಾಗೂ ಅಗಲಿದ ಪತ್ನಿಯ ನೆನಪಿನಲ್ಲಿ ಸಂಪತ್ ಕಂಗಳಲ್ಲಾಗಲೇ ಹನಿಗೂಡಿರುತ್ತದೆ, ಅದನ್ನ ನೆನೆದು ಕವಿ ಬರೆದ 'ನಕ್ಕು-ಅಳುವ' ಸಾಲುಗಳು ಬಹಳ ಹಿಡಿಸಿದವು. ಹೀಗೆ ತಂದೆ-ಮಗನ ಪ್ರೇಮವೂ ಇದೆ ಎಂಬುದನ್ನು ತೋರಿಸಿಕೊಟ್ಟಿರುವ ಚಿತ್ರದ ಸನ್ನಿವೇಶ ಹಾಗೂ ಅದಕ್ಕೆ ತಕ್ಕ ಹಾಡು, ಸಂಗೀತ ಹೆಚ್ಚು ಚಿತ್ರಗಳಲ್ಲಿ ಬಂದಿರಲಿಕ್ಕಿಲ್ಲ.

ಇದೊಂದು ಸಿನಿಮಾದ ಸಂಭಾಷಣೆ, ಸಂಗೀತ, ಹಾಗೂ ಹಾಡುಗಳ ಲಹರಿಯೇ 'ರಂಗಾರಾವ್-ಉದಯಶಂಕರ್' ಹಲವಾರು ಫ್ಯಾನ್‌ಗಳನ್ನು ಹುಟ್ಟಿಸಿದೆ, ಅವರಲ್ಲಿ ನಾನೂ ಒಬ್ಬ. ಹೀಗೆ ದಿಢೀರನೆ ಹಾಡು ನೆನಪಾಗಿ, ಸಂಪತ್-ರಾಜ್‌ಕುಮಾರ್ ಪಾತ್ರಗಳನ್ನು ಯೋಚಿಸುತ್ತಾ ಬರುತ್ತಿದ್ದ ಹಾಗೆ ಮನೆ ಬಂದು ತಲುಪಿದೆ. ಕೊನೇಪಕ್ಷ ಉದಯ ಟಿವಿ ಇದ್ದೋರ ಮನೆಯಲ್ಲಾದರೂ ಅಪರೂಪಕ್ಕೆ ಈ ರೀತಿಯ ಹಾಡುಗಳು ಬರುತ್ತವೆಯೋ ಏನೋ ನಮ್ಮನೆಯಲ್ಲಿ ಸಧ್ಯಕ್ಕೆ ತಲೆಯಲ್ಲಿ ತುಂಬಿಕೊಂಡ ಸಾಲುಗಳನ್ನು, ದೃಶ್ಯಸರಣಿಗಳನ್ನು ನೆನಪಿಸಿಕೊಂಡು ಖುಷಿಪಡಬೇಕಷ್ಟೇ.

***

ಒಂದು ರೀತಿಯಲ್ಲಿ ನಾನು ಸಿನಿಮಾ ನೋಡೋದು ಒಳ್ಳೆಯದೇ, ಯಾಕೆಂದ್ರೆ ಯಾವುದೇ ಕಾದಂಬರಿ ಆಧರಿಸಿದ ಸಿನಿಮಾ ಇದ್ರೆ, ಉತ್ತಮ ಕಥೆಯನ್ನ ಮೂಲವಾಗಿಟ್ಟುಕೊಂಡು ಸಿನಿಮಾವನ್ನು ಮಾಡಿದ್ರೆ ಅದನ್ನು ಓದಿ ಆಹ್ಲಾದಿಸೋ ಸುಖವೇ ಬೇರೆ, ಆದರೂ ಐನೂರು ಪುಟದ ಕಾದಂಬರಿಯನ್ನು ಎರಡೂವರೆ ಘಂಟೆಗಳಲ್ಲಂತೂ ಓದೋಕಾಗಲ್ಲವಲ್ಲ! ಒಂದು ಚಿತ್ರ ಸಾವಿರ ಪದಗಳನ್ನ ಹೇಳುತ್ತಂತೆ, ಅದಕ್ಕೇ ಒಂದು ಸಿನಿಮಾ ನೋಡಿ ಅದರ ಬಗ್ಗೆ ಪುರುಸೊತ್ತು ಸಿಕ್ಕಾಗೆಲ್ಲ ಚಿಂತನೆ ಮಾಡಿದ್ರೆ ಟೈಮಾದ್ರೂ ಪಾಸ್ ಆಗುತ್ತೆ. ಹಾಗೆ ಬೇಕಾದ್ರೆ ಇನ್ನೊಮ್ಮೆ ಅದೇ ಸಿನಿಮಾವನ್ನು ನೋಡಿದ್ರೆ ಆಯ್ತು! ಇಷ್ಟೊಂದು ಚಾನೆಲ್ಲುಗಳು ಇರೋವಾಗ ನಾನು ಅದೇ ತಾನೆ ರಿಲೀಸ್ ಆಗಿರೋ ಸಿನಿಮಾಗಳನ್ನು ಹುಡುಕಿಕೊಂಡು ಹೋಗಿ ನೋಡೋದು ಕಡಿಮೆ, ಯಾಕಂದ್ರೆ ಅದು ಉತ್ತಮ ಸಿನಿಮಾ ಆಗಿದ್ರೆ ಇವತ್ತಲ್ಲ ನಾಳೆ ನಾನು ಅದನ್ನ ನೋಡೇ ನೋಡ್ತೀನಿ ಅನ್ನೋದರಲ್ಲಿ ನನಗೆ ಅಪಾರವಾದ ವಿಶ್ವಾಸವಿದೆ. ಈ ಅರ್ಥದಲ್ಲೇ ನನಗೆ ಸಿನಿಮಾಗಳು ಅಂದ್ರೆ ಇಷ್ಟವಾಗಿದ್ದು ಅನ್ಸುತ್ತೆ - ಒಂದೊಂದ್ ಸಿನಿಮಾ ಒಂದೊಂದ್ ಕಾದಂಬರಿ ಅಂತ ಅಂದ್‌ಕೊಂಡ್ರೆ ನಾವೆಲ್ಲರೂ ನೋಡಿರಬಹುದಾದ ಸಿನಿಮಾಗಳನ್ನು ಲೆಕ್ಕ ಹಾಕಿದ್ರೆ ಬಹಳಷ್ಟಾಗೋದಿಲ್ವೇ?

'ಮೌನಿ' ಸಿನಿಮಾ ನೋಡಿದಾಗಲೋ, 'ಮತದಾನ' ನೋಡಿದಾಗಲೋ ನನಗ್ಗೊತ್ತು ಸಿನಿಮಾ ಮಂದಿರದಿಂದ ಹೊರಗೆ ಬರ್ತಾ ಇದ್ದಹಾಗೇ ಕೊನೇ ಪಕ್ಷ ಒಬ್ರಾದ್ರೂ 'ಚು, ಕಾದಂಬರಿನೇ ಚೆನ್ನಾಗಿತ್ತು' ಅಂತ ಹೇಳೋದು ಕೇಳಿಸಿಕೊಂಡಿದ್ದೇನೆ. ಅಂತಹವರಿಗೆಲ್ಲ ತಾವು ಇತ್ತೀಚೆಗೆ ಓದಿರೋ ಕನ್ನಡ ಕಾದಂಬರಿ ಹೆಸರು ಹೇಳಿ ನೋಡೋಣ ಅಂತ ಸವಾಲು ಎಸೀಬೇಕು ಅನ್ಸುತ್ತೆ, ಯಾಕಂತಂದ್ರೆ ನನಗ್ಗೊತ್ತು ಅವರೆಲ್ಲ ತಾವು ಓದಿರೋ ಹಳೆ ಸರಕಿನ ಮೇಲೆ ವಿಹರಿಸ್ತಿರೋರು ಅಂತ. ಆ ಪಟ್ಟಿಗೆ ನನ್ನ ಹೆಸರೂ ಸೇರುತ್ತೆ, ಏಕಂದ್ರೆ ಇತ್ತೀಚೆಗೆ ಕನ್ನಡ ಕಾದಂಬರಿಗಳನ್ನು ಓದದೇ ಇರೋರಲ್ಲಿ ನಾನೂ ಒಬ್ಬ.

ನನ್ನ ಮನಸ್ನಲ್ಲಿ ಬರೀ ಸಿನಿಮಾ ಹಾಡುಗಳಷ್ಟೇ ಅಲ್ಲ, ನಾನು ಓದಿರೋ ಎಷ್ಟೋ ಕಾದಂಬರಿಯ ಪಾತ್ರಗಳು, ಚಿತ್ರಗಳೂ ಕೂಡಾ ಆಗಾಗ್ಗೆ ಜೀವಂತ ವ್ಯಕ್ತಿಗಳೋ ಅಥವಾ ಸಂಬಂಧಿಗಳ ಹಾಗೆ ಮನಸ್ಸಿನಲ್ಲಿ ಬಂದು ಹೋಗ್ತಲೇ ಇರ್ತವೆ, ಅದಕ್ಕೇ ಇರಬೇಕು ಒಳ್ಳೆಯ ವಸ್ತುಗಳು ಎಲ್ಲಾ ಕಾಲದಲ್ಲೂ ನಮ್ಮ ಮನಸ್ಸಿನಲ್ಲಿ ಹಸಿರಾಗಿ ಉಳಿಯೋದು!

No comments: