ಸಹಿಸಲಾರದವುಗಳು
ಯಾವುದನ್ನ ಸಹಿಸಬಹುದು ಯಾವುದನ್ನ ಬಿಡಬಹುದು? ಈ ಪ್ರಶ್ನೆ ಎಲ್ಲರ ಮನಸಲ್ಲೂ ಆಗಿಂದಾಗ್ಗೆ ಮೂಡೋದು ಸಹಜ, ಅದಕ್ಕುತ್ತರವೂ ಅವರವರನ್ನ ಅವಲಂಭಿಸಿರುತ್ತೆ ಅನ್ನೋದು ಲೋಕೋಕ್ತಿ. ಈ ದಿನ ನನಗೆ ಸಹಿಸಲಾರದ್ದು ಎನ್ನಿಸಬಹುದಾದ ಒಂದಿಷ್ಟು ವಿಷಯಗಳನ್ನು ಹೀಗೆ ತೆರೆದಿಟ್ಟರೆ ಹೇಗೆ ಅನ್ನಿಸಿತು.
ಆಫೀಸಿಗೆ ಹೋಗೋ ಹೆಚ್ಚಿನ ದಿನಗಳಲ್ಲಿ ಒಂದೇ ಕೆಲ್ಲಾಗ್ ಅಥವಾ ಕಲ್ವರ್ ರಸ್ತೆಗಳಲ್ಲಿ ಟ್ರಾಫಿಕ್ ಲೈಟ್‌ನಲ್ಲಿ ನಾನು ಕಾರನ್ನು ನಿಲ್ಲಿಸಿದ್ರೆ ಆಗಾಗ್ಗೆ ಅತ್ತಿತ್ತ ನೋಡೋದು ನನ್ನ ರೂಢಿ. ಕೆಲವು ತಿಂಗಳುಗಳಲ್ಲಿ ಸೂರ್ಯೋದಯದ ಹೊತ್ತಿಗಾದ್ರೆ ದಿನಕ್ಕೊಂದು ಚಿತ್ರ ಅಂತಾರಲ್ಲ ಹಾಗೆ ನ್ಯೂ ಯಾರ್ಕ್ ನಗರದ ಕಡೆಯಿಂದ ಆಗಸದಲ್ಲಿ ಹೊಸ ಚಿತ್ರ ನೋಡೋಕೆ ಸಿಗುತ್ತೆ, ಕೆಲವು ಕಡೆ ಮಂಜಿನ ಹನಿಗಳು ಕಾಣ್ಸುತ್ವೆ, ಏನಿಲ್ಲಾ ಅಂದ್ರೂ ಆಯಾ ದಿನಗಳಿಗೆ ತಕ್ಕಂತೆ ಅಕ್ಕಪಕ್ಕದವರ ನಡವಳಿಕೆಗಳಾದರೂ ಕಣ್ಣಿಗೆ ಬೀಳುತ್ತವೆ. ಹೀಗೇ ಒಂದಿನಾ ಬೆಳಗ್ಗೆ ಒಬ್ರು ಕೆಲ್ಲಾಗ್ ರಸ್ತೆ ಟ್ರಾಫಿಕ್ ಲೈಟ್ ನಲ್ಲಿ ಎಲೆಕ್ಟ್ರಿಕ್ ಶೇವರ್ ಉಪಯೋಗಿಸಿ ಗಡ್ಡಾ ಶೇವ್ ಮಾಡಿಕೊಳ್ತಾ ಇದ್ರು, ಆ ದಿನ ನಾನಂದುಕೊಂಡೆ, ಛೇ ಏನಪ್ಪಾ ಬೆಳ್ಳಂಬೆಳಗ್ಗೆ ಈ ಮನುಷ್ಯನಿಗೆ ಇಷ್ಟೂ ಸಮಯ ಇಲ್ಲಾ ಅಂದ್ರೆ ಹೇಗೆ ಅಂತ. ಈ ದಿನ ಮತ್ತೆ ಅದೇ ವ್ಯಕ್ತಿಯ ದರ್ಶನವಾಯಿತು, ಹಲವಾರು ತಿಂಗಳುಗಳ ನಂತರ ಆ ವ್ಯಕ್ತಿಯನ್ನು ನೋಡಿದ ಕೂಡಲೇ ಈ ಸಾರಿ ನನಗೆ ಆಶ್ಚರ್ಯವಾಗುವುದಕ್ಕಿಂತ ಹೆಚ್ಚಾಗಿ, ಅವರ ನಡವಳಿಕೆಗೆ ತಕ್ಕನಾದ ನನ್ನದೊಂದು ನಡವಳಿಕೆಯ ನೆನಪಾಗಿ 'ನನಗೆ ಅಷ್ಟೂ ಸಮಯವಿಲ್ಲವೇ?' ಅನ್ನೋ ಮಾತನ್ನು ನಾನೇ ಕೇಳಿಕೊಳ್ಳತೊಡಗಿದೆ. ನಾನೇನೂ ಅವರ ಥರಾ ಕಾರಲ್ಲಿ ಗಡ್ಡಾ ಶೇವ್ ಮಾಡೋದಿಲ್ಲ, ಅದರ ಬದಲಿಗೆ ನನ್ನ ಶೂಸ್ ಲೇಸ್ ಅನ್ನು ಬಹಳಷ್ಟು ಸಾರಿ ಒಂದೇ ಕಲ್ವರ್ ಅಥವಾ ಕೆಲ್ಲಾಗ್ ಟ್ರಾಫಿಲ್ ಲೈಟ್ ನಲ್ಲಿಯೇ ನಾನು ಕಟ್ಟಿಕೊಳ್ಳೋದು. ಹೀಗೆ ಆ ವ್ಯಕ್ತಿ ಶೇವ್ ಮಾಡುವ ವಿಚಾರದ ಬಗ್ಗೆ ನಾನು ನನ್ನ ಅನಿಸಿಕೆಯನ್ನು ಹೊರಹಾಕುವ ಮುನ್ನ ನನ್ನ ಈ ನಡವಳಿಕೆ - ಅಂದರೆ ಟ್ರಾಫಿಕ್ ಲೈಟ್‌ನಲ್ಲಿ ಶೂ ಲೇಸ್ ಕಟ್ಟೋ ಬುದ್ಧಿ - ನೋಡಿ ನನಗೇ ಒಂದು ರೀತಿ ಮುಜುಗರವಾಗತೊಡಗಿತು.
***
ದಿನಕ್ಕೆ ಏನಿಲ್ಲ ಅಂದ್ರೂ ಹನ್ನೆರಡು ಘಂಟೆಗಿಂತಲೂ ಹೆಚ್ಚು ಆಫೀಸಿನಲ್ಲಿ ಕಳೆಯುವವರಿಗೆ ರೆಸ್ಟ್‌ರೂಮ್ ಬ್ರೇಕ್‌ಗಳು ಬಹಳ ರಿಲೀಫ್ ನೀಡುವಂತಹವು. ನಾನು ನೋಡಿರೋ ಹಾಗೆ ದಿನಕ್ಕೆ ಹಾಗೆ ಸ್ವಾಭಾವಿಕ ಎರಡೋ, ಮೂರೋ, ನಾಲಕ್ಕೋ ಬ್ರೇಕ್‌ಗಳನ್ನು ತೆಗೆದುಕೊಳ್ಳುವುದು ಎಷ್ಟೋ ಜನರ ರೂಢಿ ಕೂಡಾ. ಆದರೆ ಇಂದಿನ ದಿನಗಳಲ್ಲಿ ನಾವು ಎಷ್ಟು ಕೆಲಸ ಮಾಡಿದರೂ ಕಡಿಮೆಯೇ ಎನ್ನುವ ಪರಿಸ್ಥಿತಿಯಲ್ಲಿ, ನಾವು ಎಲ್ಲಿಗೆ ಹೋದರೂ ನಮ್ಮನ್ನು ಬಿಡದೇ ಹಿಡಿದಿಡುವ ಎಲೆಕ್ಟ್ರಾನಿಕ್ ಸಾಧನಗಳ ಹಿಡಿತದಲ್ಲಿ ರೆಸ್ಟ್‌ರೂಮ್ ಬ್ರೇಕ್‌ನಲ್ಲಿದ್ದಾಗಲೂ ಒಂದಲ್ಲ ಒಂದು ರೀತಿಯಲ್ಲಿ ಕಮ್ಮ್ಯೂನಿಕೇಟ್ ಮಾಡುವ ಅಗತ್ಯ ಬಂದೊದಗಿದೆ. ಹೀಗಿರುವಲ್ಲಿ ಎರಡು ನಿಲುವುಗಳು: ನನ್ನ ಎದುರೇ ಒಬ್ಬರು ನಾನು ರೆಸ್ಟ್‌ರೂಮ್ ನಲ್ಲಿರುವಾಗ ಫೋನ್ ಆನ್ಸರ್ ಮಾಡುವುದಿಲ್ಲ ಎನ್ನುವುದನ್ನೂ, ಮತ್ತೊಬ್ಬರು ನಿರಾಂತಕವಾಗಿ ಫೋನ್ ಹಿಡಿದು ಮಾತನಾಡುವುದನ್ನೂ ನಾನು ಕೇಳಿದ್ದೇನೆ. ನಾವು ಎಲ್ಲಿ ಇವುಗಳ ಮಧ್ಯೆ ಗೆರೆಯನ್ನು ಹಾಕುತ್ತೇವೆ ಎನ್ನುವುದು ಮುಖ್ಯ. ನನ್ನ ಪ್ರಕಾರ ಮೊದಲನೇ ನಿಲುವು, ಅಂದರೆ ರೆಸ್ಟ್‌ರೂಮ್ ನಲ್ಲಿ ನೀವು ಬಂದ ಕೆಲಸವನ್ನು ಮಾಡಿ ಆದಷ್ಟು ಕಡಿಮೆ ಸದ್ದುಗದ್ದಲಗಳನ್ನು ಮಾಡಿ ಹೊರಬರುವುದು, ಒಳ್ಳೆಯ ನಡವಳಿಕೆ, ಅದು ಸಹಿಸಬಹುದಾದ ಒಂದು ಪರಂಪರೆಯನ್ನು ಬೆಳೆಸುತ್ತದೆ. ಅದರ ಬದಲಿಗೆ ಎರಡನೆಯ ನಿಲುವು ಬಹಳಷ್ಟು ಮುಜಗರವನ್ನೂ, ಅನಾನುಕೂಲವನ್ನೂ, ಅಸಹನೆಯನ್ನೂ ಹುಟ್ಟುಹಾಕುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ನಾವು ನಡೆದುಕೊಳ್ಳುವ ರೀತಿನೀತಿ ಎಲ್ಲರಿಗೆ ಹೊಂದುವಂತಿರಬೇಕೇ ವಿನಾ ನನ್ನ ಫೋನು ನಾನು ಎಲ್ಲಿ ಬೇಕಾದರೂ ಮಾತನಾಡುತ್ತೇನೆ ಎಂದರಾಗುತ್ತದೆಯೇ? ಹೀಗೇ ಸಿನಿಮಾ ಮಂದಿರ, ಚರ್ಚು-ದೇವಸ್ಥಾನಗಳಲ್ಲಿ ಎಷ್ಟು ಬೊಬ್ಬೆ ಹೊಡೆದರೂ ಕೆಲವರು ತಮ್ಮ ಸೆಲ್ ಫೋನನ್ನು ಆರಿಸುವುದಿರಲಿ, ವೈಬ್ರೇಟ್ ಮೋಡ್‌ಗೂ ಹಾಕೋದಿಲ್ಲ. ನಾವು ಇತರರ ಅನಾನುಕೂಲಗಳಿಗೆ ಕಿವಿಗೊಡದೇ ಹೋಗುವಷ್ಟು ತಂತ್ರಜ್ಞಾನದಲ್ಲಿ ಹುದುಗಿಹೋಗಿದ್ದೇವೆಯೇ ಎಂದು ನನಗೆ ಹಲವಾರು ಬಾರಿ ಅನ್ನಿಸಿದೆ. ಸೆಲ್‌ಫೋನ್, ಪಿಡಿಎ, ಬ್ಲ್ಯಾಕ್‌ಬೆರ್ರಿ, ಲ್ಯಾಪ್‌ಟಾಪ್ ಮುಂತಾದ ಸಲಕರಣೆಗಳು ನಮ್ಮ ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಬೇಕು, ನಮ್ಮ ಸಂವಹನವನ್ನು ಅಭಿವೃದ್ಧಿಗೊಳಿಸಬೇಕು, ನಮ್ಮನ್ನು ಕಾರ್ಯತತ್ಪರರನ್ನಾಗಿಸಬೇಕು ಎಂದಲ್ಲವೇ ಇರೋದು, ಹಾಗಿದ್ದರೆ ನಮ್ಮ ನಮ್ಮ ಅಭಿವೃದ್ಧಿ ಎನ್ನುವ ಸಮೀಕರಣದಲ್ಲಿ ಇತರರ ಬೇಕುಬೇಡಗಳಿಗೆ ಸ್ಪಂದಿಸುವಷ್ಟು ವ್ಯವಧಾನ ನಮ್ಮಲ್ಲಿ ಇದೆಯೇ? ನಾವೆಲ್ಲರೂ ನಮ್ಮಷ್ಟಕ್ಕೆ ನಾವು ಕಾರ್ಯತತ್ಪರರಾದರೆ ಅದರ ಒಟ್ಟು ಮೊತ್ತ ಲೋಕದ ಕಲ್ಯಾಣವೇ? ಹೆಚ್ಚು ಸದ್ದು-ಗದ್ದಲವೇ ಪ್ರಗತಿಯ ಸಂಕೇತವೇ?
ಪ್ರತಿಯೊಂದು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಮಾಡಬಹುದಾದ ಏನೇನೆಲ್ಲ ಇದ್ದರೂ ಬಹಳಷ್ಟು ಜನ ಅದರ ಪೂರ್ಣ ಉಪಯೋಗವನ್ನು ಪಡೆದುಕೊಳ್ಳುತ್ತಾರೆ, ತಮ್ಮಲ್ಲಿರುವ ಸಾಧನಗಳನ್ನು ಪೂರ್ಣವಾಗಿ ಬಳಸುತ್ತಾರೆ ಎಂದು ನನಗೇನೂ ಅನ್ನಿಸುವುದಿಲ್ಲ - ಇದನ್ನು ವಾದಿಸಲು ನನ್ನ ಬಳಿ ಅಂಕಿಅಂಶಗಳೇನೂ ಇಲ್ಲ ಆದರೂ ಅದು ನನ್ನ ಅನುಭವ. ಅಂದರೆ ಹೆಚ್ಚು ಹೆಚ್ಚು ಆಧುನಿಕ ಪರಿಕರಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದೇನೂ ಇಲ್ಲ. ಸಾವಿರಾರು ಡಾಲರುಗಳ ರೋಲೆಕ್ಸ್ ವಾಚ್ ಕಟ್ಟಿದರೂ, ನಲವತ್ತು ರೂಪಾಯಿಗಳಿಗೆ ಶಿವಮೊಗ್ಗ ಬಜಾರಿನಲ್ಲಿ ಸಿಗುವ ಎಲೆಕ್ಟ್ರಾನಿಕ್ ವಾಚ್‌ಗಳನ್ನು ಕಟ್ಟಿಕೊಂಡರೂ ಅದರಿಂದೇನೂ ನಮ್ಮ ಸಮಯ ಪರಿಪಾಲನೆ ನಿರ್ಧಾರವೇನಾಗೋದಿಲ್ಲ, ತಡವಾಗಿ ಬಂದು ಹೋಗುವವರು ತಡ ಮಾಡಿಯೇ ಮಾಡುತ್ತಾರೆ.
***
ನಾವು ಸಂವಹನದಿಂದ ಹೇಗೆ ಬೆಳೆಯುತ್ತೇವೆಯೋ, ನಮಗೆ ಮೌನದಿಂದಲೂ ಸಹ ಅಷ್ಟೇ ಒಳ್ಳೆಯ ಅನುಕೂಲಗಳಿವೆ ಅನ್ನೋದು ನನ್ನ ಅನುಭವ. ಈ ಮೌನ ನಾವು ಇತರರ ಸಂವಹನವನ್ನು ಆಲಿಸುವಾಗ ಅಥವಾ ಏನನ್ನೋ ಗಹನವಾಗಿ ಮನದಟ್ಟು ಮಾಡಿಕೊಳ್ಳುವಾಗ ಅಪ್ಯಾಯಮಾನವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಇತರರು ನಿರ್ಮಿಸೋ ಗದ್ದಲ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ, ನಮ್ಮ ಗಮನ ಚಂಚಲವಾಗುತ್ತದೆ. ಹೀಗಿರುವಲ್ಲಿ ನಮ್ಮ ಹಾಗೇ ಇತರರು ಎಂದು ಅಂದುಕೊಳ್ಳುವುದನ್ನು ನಾವೇಕೆ ಸುಲಭವಾಗಿ ಅಳವಡಿಸಿಕೊಳ್ಳೋದಿಲ್ಲ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಿ ಮೌನದ ಮೊರೆಹೋಗತೊಡಗುತ್ತೇನೆ.
1 comment:
ನೀವು ಎತ್ತಿರುವ ಪ್ರಶ್ಣೆಗಳು ನನ್ನನ್ನೂ ಕಾಡಿವೆ.ನಾವುಗಳು ಹೆಚ್ಚೆಚ್ಚು(!)ನಾಗರೀಕರಾಗುತ್ತಾ ಹೋದಂತೆ ಬೇರೆಯವರಿಗೆ ತೊಂದರೆಯಾಗದಂತೆ ಬದುಕಬೇಕೆಂಬ ಸೆನ್ಸಿಸಿಟಿವಿಟಿಯನ್ನು
ಕಳೆದುಕೊಳ್ಳುತ್ತಿದ್ದೇವೇನೋ ಅಂತ ಅನ್ನಿಸುತ್ತೆ
`ನಿಮ್ಮ ಈ ವರ್ತನೆಯಿಂದ ನಮಗೆ ತೊಂದರೆಯಾಗುತ್ತಿದೆ'
ಎಂದು ವಿನಂತಿಸಿದರೂ ತಮ್ಮದೇ ಸರಿ ಎಂದು ಗುಟುರು ಹಾಕುವವರಿಗೆ ಏನು ಮಾಡೋಣ?
ಯಾವುದೋ ಮೂಲೆಯಹಳ್ಳಿಯಲ್ಲಿ ಇರುವ ಸೋಕಾಲ್ಡ್
`ಅನಾಗರೀಕ'ಜನಗಳಿಗೆ ಇರುವ ಸೂಕ್ಶ್ಮತೆಯಲ್ಲಿ ಕಾಲುಭಾಗವೂ
ಅಮೆರಿಕೆಯಲ್ಲಿ ಹಲವು ವರ್ಷ ಕಳೆದಿರುವ `ದೇಸಿ'ಗಳಿಗೆ ಇಲ್ಲ!
ಈ ಜನ `ದೇಶ ಸುತ್ತಿ' ಕಲಿತಿದ್ದೇನು ಅಂತ ಗೊಂದಲವಾಗುತ್ತೆ
Post a Comment