ಎಲ್ರೂ ಹೇಳೋರಾದ್ರೆ ಕೇಳೋರ್ ಯಾರು?
ಇತ್ತೀಚೆಗಂತೂ ಯಾರೂ ಯಾರ ಮಾತನ್ನೂ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ, ಈ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಜೀವಾ ತೇದು-ತೇದೂ ಎಷ್ಟು ಸರ್ತಿ ಹೇಳಿದ್ರೂ ಅಷ್ಟೇ ಅನ್ನಿಸಿ ಒಂದ್ಸರ್ತಿ 'ತುಥ್' ಅಂತ ಗಟ್ಟಿಯಾಗೇ ಹೇಳಿಕೊಂಡಿದ್ದೇನೋ ನಿಜ. ಈ active listening ಅನ್ನೋದಕ್ಕೇನೋ ಬಹುವಾಗಿ ವ್ಯಾಖ್ಯೆಗಳನ್ನು ಕೊಡ್ತಾರೆ, ಆದ್ರೆ ಯಾರ ಮಾತನ್ನೂ ಯಾರೂ ಕೇಳಿಸ್‌ಕೊಳ್ಳೋದೇ ಇಲ್ಲ, ಎಲ್ರೂ ಇನ್ನೊಬ್ರು ಮಾತನಾಡ್ತಿರಬೇಕಾದ್ರೆ, ಅವರ ಮನಸ್ಸಿನಲ್ಲಿ ಹೇಗೆ ತಮ್ಮ ಮಾತುಗಳನ್ನು ಆರಂಭಿಸಬೇಕು ಅಂತ ಸರಣಿ ಹೆಣೀತಾ ಇರ್ತಾರೇ ವಿನಾ ಮನಸ್ಸು ಕೊಟ್ಟು ಕಿವಿಕೊಟ್ಟು ಯಾರೂ ಇನ್ನೊಬ್ರ ಮಾತನ್ನ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ.
'ನಮಗೆ ಎರಡು ಕಿವಿಗಳಿರೋದ್ರಿಂದ ಹೆಚ್ಚಿಗೆ ಕೇಳಿಕೊಳ್ಳಬೇಕು' ಅನ್ನೋ ಅನುಪಾತದ ಮಾತಿಗಂತೂ ಹೋಗೋದೇ ಬೇಡ, ಎಲ್ರಿಗೂ ಮಾತನ್ನಾಡಬೇಕು ಅನ್ನೋ ತವಕಾ, ತಮ್ಮ ತಮ್ಮ ಸರದಿ ಬರೋವಲ್ಲೀವರೆಗೆ ಕಾಯಬೇಕು ಅನ್ನೋ ವ್ಯವಧಾನವಿಲ್ಲದಾಗ ಹೀಗಾಗುತ್ತೇನೋ ಅನ್ನಿಸುತ್ತೆ. ನಮ್ ಸುತ್ತಮುತ್ತಲಿನಲ್ಲಿ ಎಲ್ರೂ ಮಾತನಾಡಬೇಕು ಅಂತ ಹಾತೊರೆಯೋಕೆ ಏನಾದ್ರೂ ಒಂದು ಕಾರಣ ಅಂತ ಇರಬೇಕು - ಮಾತನಾಡೋದು ಅಂದ್ರೆ ಅಭಿವ್ಯಕ್ತಿಗೊಳಿಸೋದು, ಇಲ್ಲಂತೂ ಎಲ್ಲವನ್ನೂ ಶಬ್ದ ಮಾಡಿಯೇ ಹೇಳಬೇಕು, ಸನ್ನೆ-ಸೂಕ್ಷ್ಮ ಒಂದೂ ಇಲ್ಲ. ಎಷ್ಟೋ ಸರ್ತಿ ನಮ್ ಹೈ ಸ್ಕೂಲು ಮೇಷ್ಟ್ರುಗಳು ನಮ್ಮನ್ನ ಹೆದರಿಸ್ತಾ ಇರ್ಲಿಲ್ಲ್ವಾ ಕಣ್ಣಲ್ಲೇ? ಒಮ್ಮೆ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿಯೋ, ಅಥವಾ ಕಣ್ಣನ್ನು ಕಿರಿದಾಗಿ ಮಾಡಿಯೋ ಅವರ ಸಿಟ್ಟನ್ನ ಪ್ರದರ್ಶಿಸಿಸ್ತಾ ಇರ್ಲಿಲ್ಲ್ವಾ? ಅವೆಲ್ಲ ಇಲ್ಲಿ ನಡೆಯೋಲ್ವೋ ಏನೋ ಯಾರಿಗ್ಗೊತ್ತು?
ಈ ದೇಶದಲ್ಲಂತೂ ನಾನು ಒಬ್ರೂ ಮೂಕರನ್ನ ನೋಡಲಿಲ್ಲ, ಅದರ ಬದಲಿಗೆ ಹೆಚ್ಚು ಬಾಯಿಬಡುಕರನ್ನೇ ನೋಡಿರೋದು. ಇವತ್ತಿಗೂ ನಮ್ಮನೆಯಲ್ಲಿ ಬಲಗೈ ಹೆಬ್ಬಟ್ಟೆನ್ನ ಬಾಯಿ ಹತ್ರ ತಗೊಂಡೋಗಿ ತುಟಿಗೆ ತಾಗಿಸಿದ ಹಾಗೆ ಮಾಡಿದ್ರೆ ಒಂದು ಲೋಟಾ ನೀರಂತೂ ಖಂಡಿತ ಸಿಕ್ಕುತ್ತೆ, ಆದ್ರೆ ಇಲ್ಲಿ ಯಾರೂ ನೀರು ಕೊಡು ಅನ್ನೊದಕ್ಕೆ ಸನ್ನೆ ಮಾಡಿ ಕೇಳಿದ್ದನ್ನು ನಾನು ನೋಡಿಲ್ಲ. ನಮ್ಮ ಅವಿಭಾಜ್ಯ ಕುಟುಂಬ ವ್ಯವಸ್ಥೆಯಲ್ಲಿ ದೊಡ್ಡಪ್ಪ, ಚಿಕ್ಕಪ್ಪ, ಸೋದರ ಮಾವ, ಸೋದರತ್ತೆ ಇವರೆಲ್ಲ ನಮ್ಮನ್ನು ಬೇಕಾದಷ್ಟು "ಸನ್ನೆ-ಸೂಕ್ಷ್ಮ"ಗಳಲ್ಲಿ ಬೆಳಿಸಿದವರೇ. ಇವತ್ತಿಗೂ ಸಹ 'ಊಹೂ', 'ಇಲ್ಲ'ಗಳಿಗೆ ಎಷ್ಟೋ ಜನ ತಲೆಯಾಡಿಸೋದನ್ನ ನೋಡಿದ್ದೇನೆ.
ನಾವು ಒಂದ್ ಗಡಿ ದಾಟಿ ಇನ್ನೊಂದು ಗಡಿ ಹೊಕ್ಕರೆ ಬೇರೆ-ಬೇರೆ ಭಾಷೆಗಳ ಉಗಮ ಹಾಗೂ ಬೆಳವಣಿಗೆ ಆದಂತೆ ಸನ್ನೆಗಳ ಬೆಳವಣಿಗೆ ಎಲ್ಲಾ ಕಡೇ ಏಕಾಗಲಿಲ್ಲವೋ ಯಾರಿಗೆ ಗೊತ್ತು? ನಮ್ಮಲ್ಲಿ ಓಪನ್ ಆಗಿ 'ಧನ್ಯವಾದ' ಹೇಳೋ ಪದ್ಧತಿ ಏನೂ ಇಲ್ಲ, ಅದರ ಬದಲಿಗೆ ಕಣ್ಣಲ್ಲೇ ಧನ್ಯವಾದಗಳನ್ನ ಅರ್ಪಿಸೋದಿಲ್ಲವೇ? ನಮ್ಮವರು "ಥ್ಯಾಂಕ್ಯು-ವೆಲ್‌ಕಮ್"ಗಳನ್ನ ಹೇಳದಿದ್ದರೇನಂತೆ, ತುಂಬು ಹೃದಯದಿಂದ ಉಪಕಾರ ಸ್ಮರಣೆ ಮಾಡಿದರೆ ಸಾಕಾಗೋದಿಲ್ಲವೇ? ಹೀಗೆ ಬಾಯಿ ಬಿಟ್ಟು ಹೇಳಲಾಗದ ಹಲವಾರು ಭಾವನೆಗಳನ್ನು ಕಣ್ಣಿನ ಮೂಲಕ ಅಭಿವ್ಯಕ್ತಗೊಳಿಸಿದ್ದನ್ನ rude ನಡತೆ ಎನ್ನಲಾಗುವುದೇ? ಯಾರಾದ್ರೂ ಥ್ಯಾಂಕ್ಯೂ ಅಂದ್ರೆ 'you are welcome!' ಎಂದು ಹೇಳೋದನ್ನ ರೂಢಿ ಮಾಡಿಕೊಳ್ಳೋಕೆ ಎಷ್ಟೋ ದಿನಗಳು ಹಿಡೀತು, ಆದ್ರೂ ಅದು ಸಹಜ ಪ್ರತಿಕ್ರಿಯೆ ಅಂತ ಅನ್ನಿಸಿದ್ದೇ ಇಲ್ಲ. ಇನ್ನು ಬಾಯಿಬಿಟ್ಟು ಹೇಳದೇ ಹೋದ್ರೆ ಉಪಕಾರ ಸ್ಮರಣೆ ಮಾಡದವನು ಅಂತ ಬಿರುದು ಕೊಟ್ಟರೇ ಎನ್ನೋ ಹೆದರಿಕೆ ಬೇರೆ ಕೇಡಿಗೆ.
ಭಗವಂತ ಬಾಯ್ ಕೊಟ್ಟಾ ಅಂತ ಎಲ್ರೂ ಮಾತನಾಡಬೇಕಪ್ಪಾ, ಅದರ ಜೊತೆಯಲ್ಲಿ ಇನ್ನೊಬ್ರು ಮಾತನಾಡೋದನ್ನೂ ಹಾಗೇ ಕೇಳಬೇಕು ಅನ್ನೋದು ನನ್ನ ಒಂದು ಕೂದಳೆಯ ಕೊರಗು. ಇನ್ನೊಬ್ರು ಮಾತನಾಡ್ತಾ ಇರಬೇಕಾದ್ರೆ ನಾವುಗಳು ನಮ್ಮ-ನಮ್ಮ ಲೋಕದಲ್ಲೇ ಇದ್ರೆ ಅದರಿಂದಾನಾದ್ರೂ ಏನು ಬಂತು? ಎದುರಿಗಿದ್ದವರೇ ಮಾತನ್ನು ಕೇಳದಿರುವಾಗ ಇನ್ನು ಫೋನ್‌ನಲ್ಲಿ ಮಾತನಾಡಿದ್ದನ್ನ ಕೇಳಿಸಿಕೊಳ್ತಾರೆ ಅನ್ನೋದೇನು ಗ್ಯಾರಂಟಿ. ನನ್ನೊಡನಾಡುವ ಜನರನ್ನು ಈ ರೋಗದಿಂದ ಮುಕ್ತರನ್ನಾಗಿಸಲು ನಾನು ಹೊಸ ಮಾರ್ಗವೊಂದನ್ನು ಕಂಡುಹಿಡಿದುಕೊಂಡಿದ್ದೇನೆ, ಅದೇನೆಂದರೆ ನಾನು ಮಾತನಾಡ್ತಾ ಇರೋ ವಿಷಯದ ಬಗ್ಗೇನೇ ಅಲ್ಲಲ್ಲಿ ಸೂಚ್ಯವಾಗಿ ಪ್ರಶ್ನೆಗಳನ್ನ ಕೇಳೋದು. ನೀವೂ ಹೀಗೆ ಮಾಡಿ ನೋಡಿ, ಎಲ್ಲರೂ ನಿಮ್ಮ ಮಾತುಗಳನ್ನ ಕೇಳತೊಡಗುತ್ತಾರೆ, ಅಂದರೆ ಕಿವಿಗೊಟ್ಟು ಆಲಿಸತೊಡಗುತ್ತಾರೆ - ಆದರೆ ಅದನ್ನ ಪಾಲಿಸೋದು ಬಿಡೋದು ಅವರವರಿಗೆ ಬಿಟ್ಟ ವಿಷಯ, ಆದರೆ ನಿಮ್ಮ ಮಾತುಗಳ ಮಧ್ಯೆ ಕೇಳುವ ಪ್ರಶ್ನೆ, ಅದಕ್ಕೆ ಉತ್ತರ ಆ ಸಮಯದ ಮಟ್ಟಿಗೆ ನಿಮಗೆ ನೆನಪಿದ್ದರೆ ಅಲ್ಲಿಗೆ ಅರ್ಧ ಕಾರ್ಯ ಯಶಸ್ವಿಯಾದಂತೆಯೇ ಲೆಕ್ಕ!
4 comments:
ಅಂತರ್ಜಾಲ್ದಲ್ಲೂ ಹಾಗೇ ಆಗೈತಲ್ರೀ! ಬರೇ ಬರೆಯೋರು ಅದಾರೆ. ಓದೋರ್ಯಾಾರೂ ಇಲ್ಲ!
ಕನ್ನಡಿಗ,
ಬರೆಯೋರೆಲ್ಲ ಒಂದಲ್ಲ ಒಂದನ್ನ ಓದ್ತಾ ಇರ್ತಾರೆ, ಆದ್ರೆ ಹೆಚ್ಚು ಜನ ತಮ್ಮ ಅನಿಸಿಕೆ ಹಂಚಿಕೊಳ್ಳೋದಿಲ್ಲ ಅಷ್ಟೇ!
ಬಲ್ಲನೆಂಬುವ ಮಾತು ಎಲ್ಲವೂ ಹುಸಿ ಕಾಣೊ
ಬಲ್ಲರೆ ಬಲ್ಲೆನೆನಬೇಡ
ಸುಮ್ಮನಿರಬಲ್ಲವನೆ ಬಲ್ಲ - ಸರ್ವಜ್ಞ
:-)
-- ಪ್ರದೀಪ್ ಭಟ್
ಪ್ರದೀಪ್ ಅವರೇ,
ನಮ್ ಆಫೀಸ್‌ನಲ್ಲಿ ಜನಗಳು ಹಾರಾಡೋದನ್ನ ನೋಡಿದ್ರೆ ಇನ್ನೇನಂತೀರೋ!
Post a Comment