ಅವರವರ ನೋಟ
ಒಂದು ದೇಶದಲ್ಲಿ ಐದು, ಹತ್ತು ಹದಿನೈದು ವರ್ಷಗಳಿದ್ದರೆ ಅವರವರ ಅನುಭವದ ಮೇಲೆ ಒಂದು ರೀತಿಯ ಇಂಪ್ರೆಷ್ಷನ್ ನಿರ್ಮಾಣವಾಗುತ್ತದೆ, ಕೆಲವರು ಅದೆಷ್ಟೇ ವರ್ಷ ಯಾವುದೇ ದೇಶದಲ್ಲಿದ್ದರೂ ತಮ್ಮ ಸುತ್ತ ಮುತ್ತಲು ತಮ್ಮದೇ ಪರಿಸರವನ್ನು ನಿರ್ಮಿಸಿಕೊಂಡು ತಮ್ಮದೇ ಬಾಳ್ವೆಯನ್ನು ಬದುಕುತ್ತಾರೆ, ಇನ್ನು ಕೆಲವರು ಮೊದಲ ದಿನದಿಂದಲೇ ತಮ್ಮ ತನವನ್ನು ತೆರೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಳ್ಳಲು ಹವಣಿಸುತ್ತಾರೆ. ಈ ಎಕ್ಸ್‌ಟ್ರೀಮ್ ಗುಂಪಿನಲ್ಲಿ ಸೇರುವವರು ಬಹಳ ಮಂದಿಯೇನಲ್ಲ, ಹೆಚ್ಚಿನವರು ನನ್ನ ಹಾಗೆ ಬೆಲ್ ಕರ್ವ್‌ನ ಮಧ್ಯೆ ಎಲ್ಲೋ ಬಿದ್ದು ಒದ್ದಾಡುವವರು.
ಅಮೇರಿಕಕ್ಕೆ ಪ್ರವಾಸಕ್ಕೆಂದು ಬಂದು ಇಲ್ಲಿ ನನ್ನನ್ನು ಭೇಟಿಯಾಗುವ ಹೆಚ್ಚಿನ ಜನರನ್ನು ಮಾತನಾಡಿಸಿದಾಗ ಅವರ ಕಣ್ಣುಗಳಲ್ಲಿ ನಾನು ಅಮೇರಿಕವನ್ನು 'ನೋಡಿದ್ದೇನೆ' ಎನ್ನುವ ಆಶಾಭಾವನೆ ಕಂಡುಬರುತ್ತದೆ, ಎಷ್ಟೋ ಸಾರಿ ಅವರಿಗೆ ಅಂಕಿ-ಅಂಶಗಳ ವತಿಯಿಂದ, ಇಲ್ಲಿನ ಮುಖ್ಯವಾದ ಸ್ಥಳಗಳ ಮಾಹಿತಿ-ಹಿನ್ನೆಲೆಯ ದೃಷ್ಟಿಯಿಂದ ಸ್ಥಳೀಯರಿಗಿಂತ ಹೆಚ್ಚಿನ ತಿಳುವಳಿಕೆ ಇದ್ದಿರುವುದನ್ನೂ ಗುರುತಿಸುತ್ತೇನೆ. ಜೊತೆಗೆ ಅವರಲ್ಲಿ ದಿಢೀರನೆ ನಿರ್ಧಾರಕ್ಕೆ ಬಂದು ಬಿಡಬಲ್ಲ ಒಂದು ಗುಣವನ್ನೂ ಕಂಡುಕೊಳ್ಳುತ್ತೇನೆ. ಹೆಚ್ಚಿನ ಪಕ್ಷ ಅವರ ತತ್‌ಕ್ಷಣ ನಿರ್ಧಾರಗಳು ಬೆಳ್ಳಗಿರೋದೆಲ್ಲ ಮಲ್ಲಿಗೆ, ಕಪ್ಪಗಿರೋದೆಲ್ಲ ಕೆಟ್ಟದ್ದು ಎನ್ನುವ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹುಟ್ಟಿದವೇನೋ ಅನ್ನುವ ಸಂಶಯವೂ ಬಂದಿದೆ. ಆದರೂ ಒಬ್ಬ ಪ್ರವಾಸಿಯಾಗಿ ಒಂದು ದೇಶವನ್ನು ನೋಡಿ ಅನುಭವಿಸುವುದಕ್ಕೂ, ಅಲ್ಲೇ ಸ್ಥಳೀಯರಾಗಿ ಹಲವು ವರ್ಷ ಸುತ್ತಲನ್ನು ಕೆದಕಿ ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಆದ್ದರಿಂದಲೇ ನಾನು ಪ್ರವಾಸಿ ಕಥನಗಳನ್ನು ಒಬ್ಬರ ಅನುಭವವಾಗಿ ಓದುತ್ತೇನೆಯೇ ವಿನಾ ಅದನ್ನು ಕುರಿತು ಜನರಲೈಸ್ ಮಾಡಲೇನೂ ಹೋಗೋದಿಲ್ಲ.
ನಾನು ಇಷ್ಟು ವರ್ಷ ಇಲ್ಲಿ ಇದ್ದರೂ ಒಂದು ಊರಿನಿಂದ ಮತ್ತೊಂದು ಊರಿಗೆ ಬಸ್ಸಿನಲ್ಲೆಂದೂ ಪ್ರಯಾಣಿಸಿದವನಲ್ಲ, ಟ್ರೈನಿನಲ್ಲಿ ಸಾಕಷ್ಟು ತಿರುಗಾಡಿದ್ದೇನೆ - ಇಲ್ಲಿಯ ಬಸ್ ಸ್ಟೇಷನ್‌ಗಳು ಒಂದು ರೀತಿಯ ಬಡತನದ ವರ್ಗವನ್ನು ಪ್ರತಿನಿಧಿಸುತ್ತದೆ ಎಂದರೆ ಅದು ನನ್ನ ಮಿತಿಯೇನೂ ಅಲ್ಲ. ನಾನು ವಾಷಿಂಗ್ಟನ್ ಡಿಸಿ, ನ್ಯೂ ಯಾರ್ಕ್ ಹಾಗೂ ನೆವಾರ್ಕ್ ಬಸ್ ನಿಲ್ದಾಣಗಳಲ್ಲಿ ಯಾರನ್ನಾದರೂ ಕರೆದುಕೊಂಡು ಬರಲೆಂದೋ ಅಥವಾ ಬಿಟ್ಟು ಬರಲೆಂದೋ ಬೇಕಾದಷ್ಟು ಸಲ ಹೋಗಿದ್ದೇನೆ. ಎಷ್ಟೋ ಈ ನಿಲ್ದಾಣಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಹಲವಾರು ಸೆಕ್ಷನ್‌ಗಳಿಗೆ ಹೋಗೋದಕ್ಕೂ ಹೆದರಿಕೆಯಾಗುವಂತಹ ಸಂದರ್ಭಗಳು ಉದ್ಭವವಾಗಿ ನನ್ನ ಮನಸ್ಸು 'ದುಷ್ಟರಿಂದ ದೂರ ಇರು' ಎಂದು ಎಚ್ಚರಿಕೆ ಕೊಟ್ಟಿದೆಯಾದ್ದರಿಂದ ಧುತ್ತನೆ ಎದುರುಗೊಳ್ಳಬೇಕಾದ ಸಮಸ್ಯೆಗಳಿಂದ ಬಚಾವ್ ಆಗಿದ್ದೇನೆ - ಇಂತಹ ಧುತ್ತನೆ ಎದುರಾಗುವ ಸಮಸ್ಯೆಗಳು ಅಚಾನಕ್ ಆಗಿ ಕತ್ತಲಿನಲ್ಲಿ ಕೈಯೊಂದು ಮುಂದೆ ಬಂದು 'ಡಾಲರ್ ಕೊಡು' ಎನ್ನುವಲ್ಲಿಂದ ಹಿಡಿದು 'ವಾಲೆಟ್ ತೆಗಿ' ಎನ್ನುವ ಹುಂಬ ಆಜ್ಞೆಗಳವರೆಗೆ ವಿಸ್ತರಿಸಿಕೊಳ್ಳುತ್ತವೆ. ಈ ರೀತಿ ದಿಢೀರ್ ದಂಡನೆಗೊಳಗಾಗುವಾಗ ಕೇವಲ ಆಜ್ಞೆಯನ್ನು ಪಾಲಿಸುವ ಪಶುವಾಗುತ್ತೇನೆಯೇ ವಿನಾ ಎದುರಿನಲ್ಲಿರುವ ಒಂದು ಡಿಸ್ಟರ್ಬ್ಡ್ ಮನಸ್ಥಿತಿಯಿಂದ ಮತ್ತೇನನ್ನೂ ನಾನು ನಿರೀಕ್ಷಿಸೋದಿಲ್ಲ.
'ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ನೋಟ ಚೆಂದ' ಅನ್ನೋದೇನೋ ಸರಿ, ಆದರೆ ಈ ಶ್ರೀಮಂತ ದೇಶವನ್ನು ಸರಿಯಾಗಿ ಪೂರ್ಣವಾಗಿ ನೋಡಬೇಕಾದರೆ ನೀವು ಈ ಬಡವರ ಕಣ್ಣುಗಳಿಂದ ಪ್ರತಿಫಲನವಾದ ಬೆಳಕನ್ನು ನೋಡಲೇ ಬೇಕು, ಬರೀ ಶ್ರೀಮಂತ ಗಲ್ಲಿಗಳನ್ನು ತಿರುಗಿ ಮಹಲುಗಳಿವೆ, ಮೋಡಿಯಿದೆ ಎಂದರಾದೀತೇ? ಇಲ್ಲಿ ಹಲವಾರು ವರ್ಷದಿಂದ ಮಾನಸಿಕವಾಗಿ ಅಸ್ಥವ್ಯಸ್ಥರಾದ; ಚಳಿಯಲ್ಲಿ ಜೀವವನ್ನು ಹಿಡಿಯಲ್ಲಿಟ್ಟುಕೊಂಡು ಆರು ತಿಂಗಳಿಗಿಂತಲೂ ಹೆಚ್ಚು ಸತ್ತು ಬದುಕಿದ; ಕಂಪ್ಯೂಟರ್ ನೆಟ್‌ವರ್ಕ್ ವ್ಯವಸ್ಥೆಯಲ್ಲಿ, ದಿನೇ-ದಿನೇ ದರ ಹೆಚ್ಚುವ ಹೆಲ್ತ್‌ಕೇರ್ ಇನ್ಸೂರೆನ್ಸ್ ವ್ಯವಸ್ಥೆಯಲ್ಲಿ ಸೋತ; ಮನುಷ್ಯನ ಬದುಕು ಎಂದರೆ ಅವನು ಹೊಂದಿದ ಕಾರ್ಡುಗಳು ಎನ್ನುವ ಆಧುನಿಕ ಟ್ರ್ಯಾಪ್‌ನಲ್ಲಿ ಬಿದ್ದು ಒದ್ದಾಡುವವರ ಮನದಲ್ಲಿರುವ ಅಮೇರಿಕವನ್ನು ಚಿತ್ರಿಸುವವರು ಯಾರು? ಇಲ್ಲಿಯ ದೊಡ್ಡ ಶಹರಗಳಲ್ಲಿ ಜನರು ಹೋಮ್‌ಲೆಸ್ ಹೇಗೆ, ಏಕೆ ಆಗುತ್ತಾರೆ ಎನ್ನುವುದನ್ನು ಕಂಡು ಹಿಡಿದು ಅದಕ್ಕೆ ಔಷಧಿಕೊಡಲು ಒದ್ದಾಡುತ್ತಿರುವ ಪರಂಪರೆಯಲ್ಲಿ, ಇಲ್ಲಿನ ಮಕ್ಕಳೆಲ್ಲರಿಗೆ ಕಡ್ಡಾಯವಾಗಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ರೂಢಿಸದ ಶ್ರೀಮಂತಿಕೆಯಲ್ಲಿ, ದಿನೇ-ದಿನೇ ಇದ್ದವ ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಿರುವ ಅಭಿವೃದ್ಧಿ ಎನ್ನುವ ಮರೀಚಿಕೆಯಲ್ಲಿ, ತಪ್ಪು ಮಾಡಿದವರನ್ನೆಲ್ಲ ಜೈಲಿಗೆ ತಳ್ಳಿ ಅಥವಾ ಗುಂಡು ಹೊಡೆದು ಸಾಯಿಸಿ ಸರಿಪಡಿಸುತ್ತೇನೆ ಎನ್ನುವ ಹುಂಬ ನಂಬಿಕೆಯಲ್ಲಿ - ಅಮೇರಿಕವನ್ನು ಗುರುತಿಸಿ ಈ ದೇಶದ ದೊಡ್ಡತನವನ್ನು ಉಳಿದ ದೇಶಗಳ ಸಮಾಜೋದ್ಧಾರ ಕಾರ್ಯಕ್ರಮಗಳ ಜೊತೆ ಒಂದರ ಪಕ್ಕ ಒಂದಿಟ್ಟು ತೂಗಿ ನೋಡಿದರೆ ಹೇಗೆ ಎನ್ನುವುದು ನನ್ನ ಬಹುದಿನಗಳ ಬಯಕೆ. ಒಂದು ದೇಶದಲ್ಲಿ ತುಂಬಿಕೊಂಡಿರೋ ಮಿಲಿಯನರ್, ಬಿಲಿಯನರ್‌ಗಳ ಪಟ್ಟಿ ದೊಡ್ಡರಿರಬಹುದು ಆದರೆ ಎಲ್ಲ ವರ್ಗಗಳ ಜನರನ್ನೂ ಪರಿಗಣಿಸಿ ನೋಡಿದಾಗಲೇ ಪೂರ್ಣ ಚಿತ್ರ ದೊರೆಯುತ್ತೆ ಎನ್ನುವುದು ನನ್ನ ನಂಬಿಕೆ. ಒಂದು ಆಲೂಗಡ್ಡೆ ಚಿಪ್ಸ್ ಮಾಡಿ ಮಾರುವ ಕಂಪನಿಯೂ ಇಲ್ಲಿ ದೊಡ್ಡ ಕಾರ್ಪೋರೇಷನ್ ಆಗಿರಬಹುದು, ಅದರ ಯಾದಿಯಲ್ಲಿ ಹಲವಾರು ಮಿಲಿಯನರ್‌ಗಳು ಹುಟ್ಟಿರಬಹುದು, ಆದರೆ ರಸ್ತೆ ಬದಿಯಲ್ಲಿ ಹಾಟ್‌ಡಾಗ್ ಮಾರುವವರೂ ಸಹ ಸಣ್ಣ ಉದ್ಯಮಿಗಳೇ ಅವರ ಕಷ್ಟ ಸುಖವನ್ನೂ ಗಮನದಲ್ಲಿಡಬೇಕು ಎನ್ನುವುದು ನನ್ನ ಅಡಿ ಟಿಪ್ಪಣಿ.
ಆದರೆ ಹೀಗೆ ಬರೆಯುವ ನನಗೂ ನನ್ನ ಮೂಗಿನ ನೇರವೊಂದಿದೆ - ನಾನು ಇಲ್ಲಿ ಛಳಿಯಲ್ಲೇನೂ ನೊಂದಿಲ್ಲ, ಬಿಸಿಲಿನಲ್ಲೇನೂ ಬೆಂದಿಲ್ಲ, ಹೊರಗಡೆ ಆಟವಾಡಿಲ್ಲ, ಒಂದು ಬಹಳ ಚಿಕ್ಕ ಸಮುದಾಯವನ್ನು ಬಿಟ್ಟು ಹೆಚ್ಚಿನವರೊಡಗೂಡಿಲ್ಲ, ಒಂದು ನಗರದಿಂದ ಮತ್ತೊಂದು ನಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿಲ್ಲ, ಅಮೇರಿಕದ ಐವತ್ತು ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಇನ್ನೂ ನೋಡಿಯೇ ಇಲ್ಲ. ಪೂರ್ವದಲ್ಲಿರೋ ನನ್ನ ಕಣ್ಣಿಗೆ ಪಶ್ಚಿಮ ಯಾವುದೋ ಒಂದು ಹೊಸ ದೇಶವಾಗಿ ಕಂಡು ಬಂದಿದೆ, ಅಲ್ಲಿನವರ ಸುದ್ಧಿಗಳನ್ನು 'ಹೊರಗಿನವರ' ಸುದ್ಧಿಯನ್ನಾಗೇ ನಾನು ಸ್ವೀಕರಿಸುತ್ತೇನೆ. ಕೆಲಸ ಮಾಡುವುದಕ್ಕೆಂದೇ ಬಂದ ನಾನು ಬಂದ ದಿನದಿಂದ ಇಲ್ಲಿ ದುಡಿಯುತ್ತಲೇ ಇದ್ದೇನೆ, ಬಹಳ ಮಟ್ಟಿನ ರಜಾದಿನಗಳನ್ನು ನಾನು ಭಾರತಕ್ಕೆ ಹೋಗುವುದಕ್ಕೆಂದು ಬಳಸಿರೋದರಿಂದ ನನ್ನ ವೆಕೇಷನ್ ಏನಿದ್ದರೂ ಈ ದೇಶದಿಂದ ಹೊರಗೇ ಇದೆ, ಇವತ್ತಿನವರೆಗೂ ಇಲ್ಲಿ ರೆಡಿಯೋ, ಟಿವಿಗಳಲ್ಲಿ ಬರುವ ಸಂಗೀತದ ಭಾಷೆ, ಹಿನ್ನೆಲೆ ನನಗರ್ಥವಾಗೋದಿಲ್ಲ, ಇಲ್ಲಿನ ವ್ಯವಹಾರಗಳೂ ಬಹಳ ಕಾಂಪ್ಲೆಕ್ಸ್ ಆದುದರಿಂದ ನನ್ನ ಒಂದು ಸಣ್ಣ ವರ್ತುಲವನ್ನು ಬಿಟ್ಟರೆ ನನಗೇನೂ ಗೊತ್ತಿಲ್ಲ. ಆದರೆ ಇತ್ತೀಚೆಗೆ ನನ್ನ ಸ್ನೇಹಿತರು ಹೇಳಿರೋ ಹಾಗೆ ಭಾರತದಲ್ಲಿರುವವರಿಗೇ ನಮಗಿಂತಲೂ ಅಮೇರಿಕದವರ ಬಗ್ಗೆ ಬಹಳಷ್ಟು ಗೊತ್ತಿದೆ ಎನ್ನುವಂತಾಯ್ತು. ಇಲ್ಲಿ ತೋರಿಸುವ ಫ್ಯಾಶನ್ ಅಲ್ಲಿ ತಲುಪುವುದರಿಂದ ಹಿಡಿದು, ಇಲ್ಲಿನ ಸಾಮಾಜಿಕ ಸಂಘರ್ಷಗಳಿಗೆ ಅಲ್ಲಿನವರು ಉತ್ತರವನ್ನು ಕಂಡುಕೊಂಡಿದ್ದಾರೆ ಎನ್ನುವ ಮಹಾವಾದವೂ ನನ್ನ ಕಿವಿಗೆ ಬಿತ್ತು. ನಾನು ಹತ್ತು ದೇಶಗಳನ್ನು ನೋಡಿದ್ದೇನೆ ಎಂದು ಎದೆ ತಟ್ಟಿಕೊಂಡು ಮಾತನಾಡುವಂತಹ ದೊಡ್ಡ ಮನುಷ್ಯರಿಗೆ ಒಂದು ದೇಶದ ಬಗ್ಗೆ, ಒಂದು ಧರ್ಮದ ಬಗ್ಗೆ ಮಾತನಾಡುವುದು ಒಂದು ವಸ್ತುವನ್ನು ಅಧ್ಯಯನ ಮಾಡಿ ಅದರ ಬಗ್ಗೆ ಕಾದಂಬರಿಯನ್ನು ಬರೆದಷ್ಟು ಸುಲಭದ ವಿಚಾರವಾಗಿ ಕಂಡುಬಂದಿರುವುದನ್ನು ನೋಡಿ ಹೇಸಿಗೆಯಾಗುತ್ತದೆ. ಈ ಮಹಾತ್ಮರು ಬರೆದ ಬರಹಗಳಲ್ಲಿನ ಉತ್ತುಂಗ ನಿಲುವುಗಳ ತೂಕ ಅವರ ಆಡುಮಾತಿನ ಹಗುರವಾದ ಹಂದರದಲ್ಲಿ ಸೇರಿ ಹೋಗದೇ ಬಹಳಷ್ಟು ಗೊಂದಲಕ್ಕೊಳಗಾಗಿದ್ದೇನೆ. ಅವರವರ ಕಾದಂಬರಿಯ ಪಾತ್ರಗಳಲ್ಲಿ ಇನ್ನೂರು ಮುನ್ನೂರು ಪುಟಗಳಲ್ಲಿ ಬದುಕನ್ನು ಬಿಂಬಿಸಿ ಅದರ ಅಂಕುಡೊಂಕುಗಳನ್ನು ಪ್ರದರ್ಶನಕ್ಕಿಟ್ಟು ಇವರೆಲ್ಲ ಯಶಸ್ವಿಯಾಗಿದ್ದರೆ ಬದುಕೇಕೆ ಇನ್ನೂ ಬದುಕಾಗಿಯೇ ಉಳಿಯುತ್ತಿತ್ತು ಎಂದು ಎಷ್ಟೋ ಸಾರಿ ಕುತೂಹಲಿತನಾಗಿದ್ದೇನೆ. ಓರ್ಹಾನ್ ಪಮುಕ್ ಆಗಲೀ ಎಸ್. ಎಲ್. ಭೈರಪ್ಪನವರನ್ನಾಗಲೀ ಅವರವರ ಬರಹದ ಸಂಕೀರ್ಣತೆಯಲ್ಲಿ ಗುರುತಿಸಿಕೊಳ್ಳಲೋ ಅಥವಾ ಅವರುಗಳು ಹೇಳಿ-ಮಾಡುವ ಪರಿಪಾಟದಲ್ಲಿ ಅಳವಡಿಸಿಕೊಳ್ಳಲೋ ಎನ್ನುವ ಚಿಂತೆಗೆ ಸಿಕ್ಕುಬಿದ್ದಿದ್ದೇನೆ.
ಒಬ್ಬರ ಜೊತೆಗಿನ ಸಂವಾದ ಅವರ ಆದರ್ಶಗಳನ್ನು ಕುರಿತದ್ದಾಗಿರಬೇಕೆ ಅಥವಾ ಅವರ ಸಂಘರ್ಷಗಳನ್ನು ಅನುಮೋದಿಸಬೇಕೇ? ನನ್ನ ಸಣ್ಣ ಕಿಂಡಿಯಲ್ಲಿ ಕಾಣುವುದನ್ನು ನಾನು ಬದುಕು ಎಂದು ನಂಬಿಕೊಂಡಿರುವಾಗ ಉಳಿದವರ ನಂಬಿಕೆಗಳನ್ನು ಒಂದು ಹೋರಾಟವಾಗಿ ಸ್ವೀಕರಿಸಬೇಕೇ?
ಒಂದು ಸಮಸ್ಯೆಯನ್ನು ಹೊರಗಿನಿಂದ ಅಧ್ಯಯನ ಮಾಡುವುದಕ್ಕೂ ಅಲ್ಲೇ ಇದ್ದು ಅನುಭವಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ದೇಶವನ್ನು ಸುತ್ತಲು ಬರುವ ಪ್ರವಾಸಿಗರು ತಮ್ಮ ದೃಷ್ಟಿಕೋನವನ್ನು ತಮ್ಮೊಡನೆ ತಂದು ಅದರ ಇತಿ-ಮಿತಿಯಲ್ಲಿ ಇಲ್ಲಿನವುಗಳನ್ನು ಕಂಡುಕೊಳ್ಳುವುದು ಒಂದು ರೀತಿಯಾದರೆ, ಇಲ್ಲಿಯೇ ಎಷ್ಟೋ ವರ್ಷಗಳ ಕಾಲ ಇದ್ದೂ ತಮ್ಮನ್ನು ಸುತ್ತಲಿನಿಂದ ಐಸೋಲೇಟ್ ಮಾಡಿಕೊಂಡಿರುವವರದು ಮತ್ತೊಂದು ಬಗೆ. ಈ ಹಿನ್ನೆಲೆಯಲ್ಲಿ ಹುಟ್ಟಿಬರುವ ನೋಟ ಪೂರ್ಣವಾಗಿರುತ್ತೆ ಎಂದು ನಾನು ನಂಬೋದಿಲ್ಲ, ಆ ನಂಬಿಕೆಯಲ್ಲೇ ಆದಷ್ಟು ಜನರಲೈಸ್ ಮಾಡುವುದರಿಂದ, ಹಾಗೆ ಮಾಡುವವರಿಂದ ದೂರವಿರುವ ಪ್ರಯತ್ನವನ್ನು ಬೇಕಾಗಿಯೇ ಮಾಡತೊಡಗುತ್ತೇನೆ.
1 comment:
ಮಾನ್ಯ ಸತೀಶ್, ನಿಮ್ಮ ಬರಹ ಚಿಂತನೆಗೆ ಜಾಗ ಮಾಡಿಕೊಡತ್ತೆ. ಸಮಯವಿದ್ದಾಗ ಬಂದು ಇಣಿಕಿ ಹೋಗುವೆ.
- ರಾಘವ
Post a Comment