ಕೆಲಸ ಮತ್ತು ಒತ್ತಡ
ಹೀಗೇ ಮಾನಸಿಕ ಒತ್ತಡ, ದಿನದಿನಕ್ಕೆ ಹೆಚ್ಚಿದ ಕೆಲಸ, ಒಟ್ಟು ದುಡಿಮೆ, ದುಡಿಮೆಗೆ ತಕ್ಕ ಪ್ರತಿಫಲ (ಹಣ, ಸಂತೋಷ, ಸಂತೃಪ್ತಿ, ಮುಂತಾದ ಚೌಕಟ್ಟುಗಳು) ಇವುಗಳ ಬಗ್ಗೆ ಯೋಚಿಸುವಾಗ ನನ್ನ ಮನಸ್ಸಿಗೆ ಬಂದವನು ಐವನ್. ಅವನ ಲಾಸ್ಟ್ ನೇಮ್ ಏನೋ ನನಗಂತೂ ತಿಳಿಯದು, ಅವನೇ ಇಲ್ಲಿ ನಮ್ಮ ಮನೆಯನ್ನು ಕಟ್ಟಿಕೊಟ್ಟ ಮೇಸ್ತ್ರಿ ಎಂದರೂ ಅಡ್ಡಿ ಇಲ್ಲ. ಈತನ್ನದ್ದು ಬಹಳ ಸರಳ ಜೀವನ, ಹೆಚ್ಚೇನೂ ಓದಿರದವನು, ಕನ್‌ಸ್ಟ್ರಕ್ಷನ್ ಕೆಲಸದಲ್ಲಿ ಪರಿಣಿತ - ಸ್ಪ್ಯಾನಿಷ್, ಪೋರ್ಚುಗೀಸ್ ಭಾಷೆ ಚೆನ್ನಾಗಿ ಬರುತ್ತದೆ ಎಂದು ಅವನೇ ಹೇಳಿಕೊಳ್ಳುತ್ತಾನೆ, ಆದರೆ ಇಂಗ್ಲೀಷ್ ಮಾತ್ರ ಅಷ್ಟಕಷ್ಟೇ.
ಕೆಲವು ವರ್ಷಗಳ ಹಿಂದೆ ನಾವು ಮಾರ್ಕೆಟಿಂಗ್ ತರಗತಿಯಲ್ಲಿದ್ದಾಗ ನಮ್ಮ ಪ್ರೊಫೆಸರ್ ಒಬ್ಬರು ಸ್ಲಮ್‌ಗಳನ್ನು ಯಾವುದೋ ಮಾತಿಗೆ ಉದಾಹರಣೆ ಕೊಡುತ್ತಾ ಅಲ್ಲಿ ಬಡತನದ ಜೊತೆಗೆ ಪ್ರತಿಮನೆಯಲ್ಲಿ ಮಕ್ಕಳೂ ಹೆಚ್ಚು, ಸಂಪನ್ಮೂಲಗಳು ಕಡಿಮೆ ಇದ್ದಲ್ಲಿಯೇ ಅದರ ಅಗತ್ಯ ಹೆಚ್ಚಿರುತ್ತದೆ, ತಿನ್ನಲು ಹೆಚ್ಚು ಬಾಯಿಗಳು ಇದ್ದಲ್ಲಿ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿಯನ್ನು ಉದಾಹರಿಸಿದ್ದರು. ಐವನ್ ಮತ್ತು ಅವನ ಬಳಗದ ಹಿಸ್ಪ್ಯಾನಿಕ್ ಕೆಲಸಗಾರರದ್ದು ಒಂದು ರೀತಿಯ ಸ್ಕ್ವಯರ್ ಜಾಬ್ ಅಂತಾರಲ್ಲ ಹಾಗೆ, ದಿನಕ್ಕೆ ಇಂತಿಷ್ಟು ಘಂಟೆಗೆ ಬಂದು ಇಂತಿಷ್ಟು ಘಂಟೆಗೆ ಹೋದರಾಯಿತು, ಅವರ ಪ್ರಾಜೆಕ್ಟುಗಳಲ್ಲಿ ಸಣ್ಣ ಪುಟ್ಟ ಅಡೆತಡೆ, ವಿಳಂಬಳಿರುತ್ತವೆಯೇ ಹೊರತು ನಮ್ಮ ಐಟಿ ಅಥವಾ ಬಿಸಿನೆಸ್ಸು ಪ್ರಾಜೆಕ್ಟುಗಳ ಹಾಗೆ ಅವರದ್ದು ಪ್ರತಿದಿನ ಒಂದೊಂದು ಅವತಾರವನ್ನು ತಾಳುವುದಿಲ್ಲ. ಕನ್‌ಸ್ಟ್ರಕ್ಷನ್ ಕೆಲಸಗಳು ಒಂದಲ್ಲ ಒಂದು ರೀತಿಯಿಂದ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವಾದ್ದರಿಂದ ಅದಕ್ಕೂ ಚಿಂತಿಸಬೇಕಾದ್ದಿಲ್ಲ, ಐವನ್‌ನ ಹೆಂಡತಿ ಮನೆಯಲ್ಲೇ ಇರುವವಳು, ಮಕ್ಕಳೂ ಮುದ್ದಾಗಿದ್ದಾರೆ, ಸರಿಯಾಗಿ ಶಾಲೆಗೂ ಹೋಗುತ್ತಿದ್ದಾರೆ, ನಾವುಗಳು ತೆಗೆದುಕೊಂಡ ಹಾಗೆ ಐವನ್‌ನೂ ಹೊಸಹೊಸದನೆಲ್ಲ ತೆಗೆದುಕೊಳ್ಳುತ್ತಾನೆ, ಸಂತೋಷದಿಂದಿದ್ದಾನೆ ಎಂತಲೇ ನಾನು ಹೇಳೋದು. ಐವನ್‌ಗೆ ಕಡಿಮೆ ಸಂಬಳ ಬರುತ್ತದೆ ಎಂದು ನೀವು ಅಂದುಕೊಂಡರೆ ಅದು ತಪ್ಪು, ಅವನ ವಾರ್ಷಿಕ ಆದಾಯ ಇಲ್ಲಿನ ಎಷ್ಟೋ ಜನ ಡಾಕ್ಟರುಗಳಿಗಿಂತ ಕಡಿಮೆಯೇನಿಲ್ಲ.
ಈ ದಿನ ನಮಗೆ ಪರಿಚಯವಿರುವ ಚೈನೀಸ್ ಮೂಲದ ಡಾಕ್ಟರ್ ದಂಪತಿಗಳು ಸಿಕ್ಕಿದ್ದರು, ಗಂಡ ಹೆಂಡತಿ ಉತ್ತಮ ಕೆಲಸದಲ್ಲಿ ಇರುವವರು, ಅವರಿಗೆ ಆರು ವರ್ಷದ ಒಬ್ಬ ಮಗನಿದ್ದಾನೆ. ನಮಗೆ ಸ್ವಲ್ಪ ಹತ್ತಿರದವರಾದ್ದರಿಂದ ನಮ್ಮ ಬಳಿ ಅವರಿಗೆ ಮಾತನಾಡಲು ಮುಜುಗರವೇನಿಲ್ಲ. ಮೂರು ವರ್ಷಗಳಿಂದ ಮತ್ತೊಂದು ಮಗುವಾಗಲಿ ಎಂದು ಆಲೋಚಿಸುತ್ತಿದ್ದಾರೆ, ಆದರೆ ಅವರೇ ಹೇಳಿರೋ ಹಾಗೆ 'ಅದಕ್ಕೀಗ ಸಮಯವಿಲ್ಲ!'. ಇದೇನಪ್ಪಾ ನಾನು ಅವರ ಪರ್ಸನಲ್ ವಿಷಯವನ್ನು ಹೀಗೆ ಬಳಸಿಕೊಳ್ಳುತ್ತಿದ್ದೇನೆ ಎಂದುಕೊಳ್ಳಬೇಡಿ, ಈ ಮೇಲಿನ ಪಾತ್ರಗಳು ನಿಜವಲ್ಲ ಎಂದುಕೊಳ್ಳಿ, ಏಕೆಂದರೆ ನನಗೆ ಇಲ್ಲಿ ಎರಡು ಮಾನಸಿಕ ಸ್ಥಿತಿಗಳನ್ನು ನಿರ್ಮಿಸುವುದು ಮುಖ್ಯವೇ ಹೊರತು ಪಾತ್ರಗಳು, ಅವುಗಳ ಹೆಸರುಗಳು ಮುಖ್ಯವಲ್ಲ.
ಮೂವತ್ತರ ಹರೆಯದ ಕೊನೆಯ ದಿನಗಳನ್ನು ಎಣಿಸಿ ನಿಧಾನವಾಗಿ ನಲವತ್ತರ ಗಡಿ ಸಮೀಪಿಸುತ್ತಿರುವ ಚೈನೀಸ್ ಡಾಕ್ಟರ್ ದಂಪತಿಗಳನ್ನು ನೋಡಿದೊಡನೆ ಇವರು ಈ ಸ್ಥಿತಿಗೆ ಬರಲು ಎಷ್ಟೊಂದು ಕಷ್ಟಪಟ್ಟಿದ್ದಾರೆ, ಈಗ ಇಬ್ಬರಿಗೂ ಒಂದು ಒಳ್ಳೆಯ ಕೆಲಸವೆಂಬುದೊಂದಿದ್ದರೂ ಇನ್ನೂ ಅವರ ದುಗುಡ ಕಡಿಮೆಯೇನಾಗಿಲ್ಲ. ಅವರ ಹಳೆಯ ಸಾಲಗಳು ಹಾಗೂ ಇತ್ತೀಚೆಗಷ್ಟೇ ಮಾಡಿದ ಹೊಸ ಸಾಲಗಳು ಇನ್ನೂ ಹಾಗೇ ಇವೆ. ಇನ್ನು ಇಪ್ಪತ್ತು ವರ್ಷಗಳವರೆಗೆ ನಿರಂತರವಾಗಿ ದುಡಿದರೂ ಇನ್ನೂ ಸಾಲದು ಎನ್ನಿಸುವ ಸ್ಥಿತಿ ಇದೆ. ಅವರು ದಿನನಿತ್ಯ ಮಾಡುವ ಕೆಲಸವೂ ಬಹಳ ಮಾನಸಿಕ ಒತ್ತಡವನ್ನು ತರುವಂತಹುದೇ. ಹೀಗಿರುವಲ್ಲಿ ಇನ್ನು ಸಮಾಧಾನ, ಸಾಕು, ಇಷ್ಟಿರಲಿ ಎನ್ನುವ ಮಾತಾದರೂ ಎಲ್ಲಿಂದ ಬಂತು?
ಐವನ್ ಕೂಡಾ ನಾಳೆ ಅಂದರೆ ಸೋಮವಾರ ತನ್ನ ಕೆಲಸಗಳನ್ನು ಆರಂಭಿಸುತ್ತಾನೆ, ಅವನಿಗೆ ಅದರ ಬಗ್ಗೆ ಯಾವುದೇ ಯೋಚನೆ ಇದೆಯೋ ಇಲ್ಲವೋ ಯಾರು ಬಲ್ಲರು? ಅವನ ಗೋಡೆಗೆ ಹೊಡೆದ ಮೊಳೆ ನೇರವಾಗಿ ಹೋಗದಿದ್ದರೆ ಅದನ್ನು ಕಿತ್ತು ಬಿಸಾಡಿ ಅದೇ ಜಾಗದಲ್ಲಿ ಮತ್ತೊಂದನ್ನು ಹೊಡೆಯುವ ಸ್ವಾತಂತ್ರ್ಯವಂತೂ ಅವನಿಗೆ ಇದೆ. ಅವನು ಕಟ್ಟುಕೊಟ್ಟ ಮನೆಗಳು, ಗೋಡೆಗಳು ಬೀಳೋದಿಲ್ಲ, ಜನರು ಯಾರೂ ಅವನನ್ನು ಕೋರ್ಟು ಮೆಟ್ಟಿಲು ಹತ್ತಿಸೋದಿಲ್ಲ.
ಹಾಗಂತ ಬದುಕಲ್ಲಿ ಎಲ್ಲರೂ ಕನ್‌ಸ್ಟ್ರಕ್ಷನ್ ಕೆಲಸಗಾರರಾಗಲು ಆಗುತ್ತದೆಯೇ? ಎಲ್ಲರ ಕೆಲಸದಲ್ಲೂ ಅದರದ್ದೇ ಆದ ಭಿನ್ನ ಸವಾಲುಗಳಿವೆ. ಒಂದು ಕೆಲಸವನ್ನು ಮತ್ತೊಂದಕ್ಕೆ ಹಾಗೆ ತುಲನೆ ಮಾಡಲಾಗದು. ಆದರೆ ದಿನದ ಕೊನೆಯಲ್ಲಿ ಮಾನಸಿಕ ಒತ್ತಡಗಳನ್ನು ಕೆಲಸ ಮಾಡುವ ಪ್ರತಿಯೊಬ್ಬರೂ ಮನೆಗೆ ಹೊತ್ತುಕೊಂಡೇನೂ ಹೋಗುವುದಿಲ್ಲ. ದಿನದಲ್ಲಿ ಇರೋದು ಇಂತಿಷ್ಟೇ ಘಂಟೆಗಳು ಎಂದು ಗೊತ್ತಿದ್ದೂ ನಮ್ಮನ್ನೇಕೆ ನಾವು ಎಲ್ಲ ಸಾಲುಗಳಲ್ಲೂ ದೂಡಿಕೊಳ್ಳುತ್ತೇವೆ, ಗೆಲ್ಲುವ ಗೆಲ್ಲಬಲ್ಲ ಪ್ರತಿಯೊಂದು ಆಟಗಳಲ್ಲೂ ನಮ್ಮನ್ನೇಕೆ ನಾವು ಹೂಡಿಕೊಳ್ಳುತ್ತೇವೆ? ನಮ್ಮಿಂದ ನಾವೇ ಯಾವಾಗಲೂ ಹೆಚ್ಚಿನದನ್ನೇಕೆ ನಿರೀಕ್ಷಿಸುತ್ತೇವೆ? ಪ್ರತಿಯೊಂದರಲ್ಲೂ ಪ್ರತಿಭಾವಂತರಾಗಲು ನಾವೇನು ಸಿನಿಮಾ ಹೀರೋಗಳೇ, ನಮ್ಮ ಇತಿಮಿತಿಯನ್ನು ನಾವೇಕೆ ಸುಲಭವಾಗಿ ಒಪ್ಪಿಕೊಳ್ಳೋದಿಲ್ಲ, ಮೂಗಿನ ಮಟ್ಟಕ್ಕಿಂತ ಹೆಚ್ಚಿನ ನೀರಿನಲ್ಲೇ ಮುಳುಗಿ ನಾವು ನಡೆದಾಡುವುದಾದರೂ ಏತಕ್ಕೆ?
ಮಾನಸಿಕ ಒತ್ತಡಗಳನ್ನು ಅನುಭವಿಸಿ ತಾವು ಹಲವಾರು ಸಂಘರ್ಷಗಳಿಗೊಳಗಾಗುವ ಮಂದಿ ತಮ್ಮ ಕುಟುಂಬದ ಇತರರನ್ನೂ ನಿಧಾನವಾಗಿ ಕಂಪದ ಭೂಮಿಯಲ್ಲಿ ಎಳೆದುಕೊಂಡು ಎಲ್ಲರೂ ತಮ್ಮ ಹಾಗೇ ಅನುಭವಿಸುವಂತೆ ಮಾಡುತ್ತಾರೆ. ಇಂದಿನ ಕಡಿಮೆ ಸಮಯದಲ್ಲಿ ಹೆಚ್ಚನ್ನು ಮಾಡುವ ನಿರೀಕ್ಷೆಯೇನೋ ಸರಿ, ಅದೇನು ಹೆಚ್ಚು ಮಾಡುವುದಿದೆಯೋ ಅಷ್ಟನ್ನು ಮಾಡಿ ಮನೆಗೆ ಬಂದು ಮಕ್ಕಳ ಜೊತೆ ಒಂದಿಷ್ಟು ಸಮಯವನ್ನು ಕಳೆದರೆ ದೊಡ್ಡ ಮನುಷ್ಯರು ಸಣ್ಣವರೇನೂ ಆಗೋದಿಲ್ಲ. ಇರೋ ಒಬ್ಬ ಮಗನಿಗೆ ವಾರದಲ್ಲಿ ಕೇವಲ ಒಂದು ದಿನ ಮೀಸಲಿಡುವ ಚೈನೀಸ್ ವೈದ್ಯ ದಂಪತಿಗಳಿಗೆ ಹೇಳಿದೆ - 'ನಿಮ್ಮ ಚೈನಾ ಪರಂಪರೆಯಂತೆ ನೀವೆಲ್ಲಿದ್ದರೂ ನಿಮಗೆ ಒಂದೇ ಮಗು!' ಎಂದು, ಅವರಿಗೆ ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ, ಇದ್ದೊಬ್ಬ ಮಗನಿಗೆ ವಾರಕ್ಕೊಂದು ದಿನ ಸಮಯವನ್ನು ಮೀಸಲಿಡುವವರಿಗೆ ಇನ್ನೊಂದು ಮಗು ಬೇಕೇ ಎಂದೂ ನನ್ನಷ್ಟಕ್ಕೆ ನಾನೇ ಕೇಳಿಕೊಂಡೆ.
ಹಾಗಂದ ಮಟ್ಟಿಗೆ ನನಗೆ ಐವನ್ ಮಹಾ ತಂದೆಯಂತೇನೂ ಕಾಣೋದಿಲ್ಲ, ಅವನ ಮಕ್ಕಳು ಬೇಡುವ ಆಲ್ಜೀಬ್ರಾದ ಸಮಸ್ಯೆಯನ್ನು ನಿವಾರಿಸಲು ಅವನಿಗೆ ಬರೋದಿಲ್ಲ, ಹೋಮ್‌ವರ್ಕ್ ಮಾಡೋದರಲ್ಲಿ ಆ ಮಕ್ಕಳು ಹಿಂದೋ ಮುಂದೋ ಒಂದೂ ಗೊತ್ತಿಲ್ಲ, ಆದರೆ ಐವನ್ ಅದಕ್ಕೆಲ್ಲ ತಲೆ ತೂರಿಸುತ್ತಾನೆ ಎಂದೇನೂ ನನಗನ್ನಿಸುವುದಿಲ್ಲ. ಆದರೆ ಆತ ಪ್ರತಿದಿನವು ಮನೆಗೆ "ನಿಜ"ವಾಗಿಯೂ ಹೋಗುತ್ತಾನೆ, ತನ್ನ ಮಕ್ಕಳ ಜೊತೆ ಸಮಯವನ್ನು ಕಳೆಯುತ್ತಾನೆ. ತಂದೆಯಿಂದ ಮನೆಕಟ್ಟುವ ವಿದ್ಯೆಯನ್ನು ಬಳುವಳಿ ಪಡೆದ ಮಕ್ಕಳು ನಾಳೆ ಅಪ್ಪನ ಹಾಗೇ ಆಗಬಹುದು ಅಥವಾ ಮತ್ತಿನೇನೋ ಆಗಬಹುದು, ಆದರೆ ಈ ಡಾಕ್ಟರ್ ಮಗ ಏನಾಗುತ್ತಾನೋ, ಬಿಡುತ್ತಾನೋ ಎನ್ನುವುದು ನನ್ನ ಹೆದರಿಕೆ ಕೂಡಾ. ತಂದೆ-ತಾಯಿಯರಂತೆ ಅವನೂ ಡಾಕ್ಟರ್ ಆಗಿ ನಾಳೆ ಅವನೂ ಅವನ ಅಪ್ಪನ ಹಾಗೆ ವೀಕೆಂಡ್ ತಂದೆ ಆಗಿಬಿಟ್ಟರೆ ಎಂದು ನನ್ನ ಹೆದರಿಕೆ ಇನ್ನೂ ಬಲವಾಗತೊಡಗುತ್ತದೆ.
ನಾನೇನಾಗುತ್ತೇನೋ ಬಿಡುತ್ತೇನೋ, ನನ್ನ ಮಾನಸಿಕ ಒತ್ತಡಗಳನ್ನಂತೂ ಕಡಿಮೆ ಮಾಡಿಕೊಳ್ಳಬೇಕು, ಆಫೀಸಿನ ಕೆಲಸಗಳನ್ನು ಮನೆಗೆ ತರಬಾರದು, ವೀಕೆಂಡಿಗೆ ಮಾತ್ರ ಪೋಷಕನಾಗಬಾರದು ಎಂದೆಲ್ಲಾ ಏನೇನೋ ಮುಂದಾಲೋಚಿಸಿಕೊಳ್ಳುವ ಪರಿ ನನ್ನ ಮಾನಸಿಕ ಒತ್ತಡವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ!
1 comment:
ಸತೀಶ್,
ನಿಮ್ಮ ಪರಿಸರದಿಂದ ಹೆಕ್ಕುತ್ತಾ ಹೋಗುವ ವಿವರಗಳು, ನಿಮ್ಮ ಬರವಣಿಗೆಯ ಶಲಿಗೆ ಒಂದು ಮಹತ್ವದ ಸಂಗತಿಯಾಗಿ ಪರಿಣಮಿಸುತ್ತಿದೆ. ಜೊತೆಗೆ ನಿಮ್ಮ ಬದುಕಿನ ಬಗೆಗಿನ ಚಿಂತನೆಯೂ ಹೆಚ್ಚು ಕ್ಲಾರಿಟಿ ಪಡೆಯುತ್ತಾ ಹೋಗಬಹುದಾದ ಸಾಧ್ಯತೆ ಇನ್ನೂ ಅಧಿಕವಾಗುತ್ತಾ ಹೋದಂತೆ, ನೀವು ಜೀವನದಲ್ಲೂ ಸೆಟ್ಲ್ ಆಗಬಹುದು..ಹೀಗೆಯೇ ಬರೆಯುತ್ತಿರಿ. ಬರೆಯುವಾಗ ನಾವು ಮಹ್ತ್ತರವಾದದ್ದನ್ನೇ ಬರೆಯಬೇಕು ಎಂಬ ಹುಂಬತನದ ಹಿಂದೆ ಹೋಗದೆ, ಅನುಭವಕ್ಕೆ ಪ್ರಾಮಾಣಿಕವಾಗುಳಿದುಕೊಂದಾಗ ಬರವಣಿಗೆ ಮಹತ್ವಾದ್ದಾಗುವ ಹೋಗುವ ಪರಿ ನನ್ನನ್ನು ಯಾವತ್ತೂ ಬೆರಗುಗೊಳಿಸಿದೆ. ಹಗೆಂದು ಗಂಭೀರವಾದ ಚಿಂತನೆಗಳನ್ನು ನಾನು ಉಪೇಕ್ಸಿಸುತ್ತೇನೆ ಎನ್ನುವುದು ಈ ಪ್ರತಿಕ್ರಿಯೆಯ ತಾತ್ಪರತ್ಯವಲ್ಲ. ಪರಿಸರ ಹಾಗು ಅನುಭವದ ವಿವರಗಳು ಹೆಕ್ಕಿಕೊಳ್ಳುತ್ತಿದ್ದ ಹಾಗೆಯೇ ನೀವು "ಗಂಬೀರವಾದದ್ದನ್ನೇ' ನಿಮಗರಿವಿಲ್ಲದಂತೆ ಬರೆದುಬಿಟ್ಟಿರುತ್ತೀರ..ಈ ಅಚ್ಚರಿ ನಿಮಗೆ ಶಾಶ್ವತವಾಗಲಿ ಎಂದು ಹಾರೈಸುತ್ತಾ....
ಶೇಖರ್‌ಪೂರ್ಣ
Post a Comment