Monday, October 02, 2006

ಭಾಷೆ ಬಾರದವರು

ತಿಂಗಳಿಗೊಮ್ಮೆ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರನ್ನು ಸ್ವಚ್ಛಗೊಳಿಸೋದು ವಾಡಿಕೆ, ಮೊದಲ ತಿಂಗಳು ಧಿಡೀರನೇ ಹೀಗೆ ನೋಟಿಸ್ ಕೊಟ್ಟು ಒಂದು ವಾರಾಂತ್ಯದಲ್ಲಿ ಎಲ್ಲವನ್ನೂ ಸ್ವಚ್ಛಗೊಳಿಸುವ ಮುನ್ಸೂಚನೆ ನೀಡಿ ಇದ್ದು ಬದ್ದುದೆಲ್ಲವನ್ನು ತೆಗೆದೆಸೆದು ಪೂರ್ತಿ ಖಾಲಿ ಮಾಡಿ ಹಾಕಿದ್ದರು. ಅಂದಿನಿಂದ ನಾವೆಲ್ಲರೂ ತಿಂಗಳ ಕೊನೆ ಬರುತ್ತಿದ್ದಂತೆ ಅದರಲ್ಲಿ ನಮ್ಮ ವಸ್ತುಗಳನ್ನೆನೂ ಇಡದೆ ಮುಂಜಾಗರುಕತೆಯಿಂದಿರುತ್ತಿದ್ದೆವು, ಏಕೆಂದರೆ ಅವರು ಅದರಲ್ಲಿದ್ದುದೆಲ್ಲವನ್ನು ಎಸೆಯುತ್ತಾರೆ ಎಂದ ಮೇಲೆ ಹಾಗೆ ಮಾಡಿಯೇ ತೀರುತ್ತಾರೆ ಎನ್ನುವುದನ್ನು ಕಲಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ.

ಶುಕ್ರವಾರ ನಾನು ನನ್ನ ಊಟದ ಬ್ಯಾಗ್ ತೆಗೆದುಕೊಂಡು ಬರುವ ಹೊತ್ತಿಗೆ ಇನ್ನೇನು ರೆಫ್ರಿಜಿರೇಟರ್ ಬಾಗಿಲು ಮುಚ್ಚ ಬೇಕೆನ್ನುವ ಹೊತ್ತಿಗೆ ಕೆಳಗೆ ಇಟ್ಟ ಒಂದು ಪ್ಯಾಕೆಟ್ ನನ್ನ ಗಮನ ಸೆಳೆಯಿತು, ಅದರ ಮೇಲೆ ಕೆಂಪು ಇಂಕಿನಲ್ಲಿ ಬರೆದ ಅಕ್ಷರಗಳು ಕುತೂಹಲದಿಂದ ಓದಿಸಿಕೊಂಡು ಹೋದವು - 'cleaning crew, this packet contains breakfast cereal, don't throw this packet when you clean!' ನಾನು ಈ ಪ್ಯಾಕೇಟಿನ ಗತಿ ಇನ್ನೆನಾಗುತ್ತೋ ಎಂದು ಅದರ ಓನರ್ ಬಗ್ಗೆ ಹುಡುಕಿದಾಗ ಯಾವ ಸುಳಿವೂ ಸಿಗದೇ ಸುಮ್ಮನೇ ಬಿಟ್ಟೆನಾದರೂ ಅದು ಟ್ಯ್ರಾಷ್ ಕ್ಯಾನ್ ಸೇರುವುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೂ ಅದರ ಅದೃಶ್ಟವನ್ನು ನೋಡಿಯೇಬಿಡೋಣವೆಂದು ಇಂದು ಮುಂಜಾನೆ ಹೋಗಿ ನೋಡಿದರೆ ಫ್ರಿಜ್ ಎಲ್ಲಾ ಬಣಬಣ, ಆ ಕ್ಲೀನಿಂಗ್ ಕ್ರ್ಯೂ ಎಲ್ಲವನ್ನು ಎತ್ತಿ ಬಿಸಾಡಿದ್ದಾರೆ! ಸ್ವಲ್ಪ ಆ ಕಡೆ ಈ ಕಡೆ ವಿಚಾರಿಸಲಾಗಿ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರ್ ಸ್ವಚ್ಛ ಮಾಡುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ತಿಳಿಯಿತು. ಅಕಸ್ಮಾತ್ ಅವರಿಗೆ ಆ ಚೀಟಿಯಲ್ಲಿ ಬರೆದಿದ್ದ ಲೇಬಲ್ ಓದಲು ಬಂದಿದ್ದರೆ ಆ ಸಿರಿಯಲ್ ಹಾಗೇ ಉಳಿಯುತ್ತಿತ್ತೋ ಏನೋ ಯಾರಿಗೆ ಗೊತ್ತು?

ಇಂತಹ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ನಡುವೆ ಒಬ್ಬ ಮನುಷ್ಯ ಮೂಗಿನ ಮೇಲೆ ಕನ್ನಡಕವನ್ನಿಟ್ಟುಕೊಂಡು ಅವನು ತನ್ನಷ್ಟಕ್ಕೆ ತಾನು ಕೆಲಸ ಮಾಡುವ ವಿಧಿಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಾನೆ, ಅಪ್ಪಟ ಅಮೇರಿಕನ್ ಅಕ್ಸೆಂಟಿನಲ್ಲಿ ಇಂಗ್ಲೀಷನ್ನು ಮಾತನಾಡುವ ಈತನನ್ನು ನಾನು "0007 ಏಜೆಂಟ್" ಎಂದೇ ಕರೆಯೋದು, ಇಲ್ಲವೆಂದಾದರೆ ಮಧ್ಯ ವಯಸ್ಸಿನ ಈ ಮನುಷ್ಯ ಇಷ್ಟೊಂದು ಚೆನ್ನಾಗಿ ಇಂಗ್ಲೀಷನ್ನು ಮಾತನಾಡಿ ಈ "ಭಾಷೆ ಬಾರದ" ಉಳಿದವರ ಜೊತೆ ಇಂಥ ಕೆಲಸಕ್ಕೇಕೆ ಸೇರಿಕೊಳ್ಳುತ್ತಿದ್ದ? ಸಂಜೆ ಆರೂವರೆ ಏಳು ಘಂಟೆ ಆಗುತ್ತಲೇ ಟ್ರ್ಯಾಷ್ ಕಲೆಕ್ಟ್ ಮಾಡಿಕೊಂಡು ಒಂದಿಷ್ಟು ಜನ ಲಗುಬಗೆಯಲ್ಲಿ ಓಡಾಡಲು ಶುರು ಮಾಡಿಕೊಳ್ಳುತ್ತಾರೆ, ಇಷ್ಟು ದೊಡ್ಡ ಆಫೀಸನ್ನು ಆದ್ಯಾವ ಪರಿಯಲ್ಲಿ ಸ್ವಚ್ಛಗೊಳಿಸುತ್ತಾರೋ ಬಿಡುತ್ತಾರೋ ಒಂದೆರೆಡು ಘಂಟೆಗಳಲ್ಲಿ ಎಲ್ಲವೂ ಹೆಚ್ಚೂ ಕಡಿಮೆ ಸ್ವಚ್ಛವಾಗಿರುತ್ತವೆ. ಪ್ರತಿದಿನವೂ ಯಾರು ಇರಲಿ ಬಿಡಲಿ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸುವ ಈ ಕ್ಲೀನಿಂಗ್ ಕ್ರ್ಯೂ "ಮಾತು ಕಡಿಮೆ, ಕೆಲಸ ಜಾಸ್ತಿ" ಎನ್ನುವ ಪಂಗಡಕ್ಕೆ ಸೇರಿದವರೆಂದು ನಾನು ಲೇಬಲ್ ಕೊಡುತ್ತೇನೆ.

ಎಲ್ಲವೂ ಇಂಗ್ಲೀಷಿನಲ್ಲೇ ಅಧಿಕಾರಕ್ಕೊಳಗಾಗಿ ಸಂವಹನದಲ್ಲಿ ತೊಡಗಿರುವಂತೆ ಕಂಡುಬರುವ ನಮ್ಮ ಆಫೀಸಿನಲ್ಲೂ "ಭಾಷೆ ಬಾರದ" ಅಥವಾ ಇನ್ಯಾವುದೋ ಭಾಷೆಯಲ್ಲೇ ಅವರವರ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಬೇಕಾದಷ್ಟು ಗುಂಪುಗಳು ಕಂಡುಬರುತ್ತವೆ. ಕೆಲವರದು ಇಂಗ್ಲೀಷು ಬಾರದ, ಅವರದ್ದೇ ಆದ ಒಂದು ಸದಾ ತೆರೆದಿರುವ ಲೋಕ, ಇನ್ನು ಹಲವರಿಗೆ ಆಗಾಗೆ ಇಂಗ್ಲೀಷಿನ ಸಾಮ್ಯ್ರಾಜ್ಯದಲ್ಲಿ ಮಿನುಗುವ ಕಪ್ಪ ಕೊಟ್ಟು ಹದ್ದು ಬಸ್ತಿನಲ್ಲಿರುವ ಚಿಕ್ಕ ಪುಟ್ಟ ರಾಜರುಗಳಂತೆ ಅವರವರ ಮನೆ ಮಾತು ಹಾಗೂ ಇತರ ಭಾಷೆಗಳು. ಇಂತಹವುಗಳ ನಡುವೆ ನನಗೆ ನನ್ನದೇ ಆದ ಕನ್ನಡ ಲೋಕವಿದೆ, ಆಗಾಗ್ಗೆ ಈ ನಿಟ್ಟಿನಲ್ಲಿ ಆಲೋಚಿಸುವ ನನಗೂ ಈ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ಗೂ ಹೆಚ್ಚು ವ್ಯತ್ಯಾಸವಿದೆಯೆಂದೇನೂ ಅನ್ನಿಸಲಿಲ್ಲ!

2 comments:

Anonymous said...

ಸತೀಶ್.
ಬಹಳಾ ದಿನಗಳನಂತರ ನಿಮ್ಮ ಈ ಪುಟ್ಟ ಬರ್ವಣಿಗೆ ಗಮನ ಸೆಳೆಯಿತು. ಒಂದು ಅದ್ಭುತ ಲೋಕದ ಬಗೆಗೆ ಗಮನ ಸೆಳೆದಿದ್ದೀರಿ. ಕಪ್ಪ ಕೊಟ್ಟು ಹದ್ದು ಬ್ಸಸ್ತಿನಲ್ಲಿರುವ ನಿಮ್ಮ ಲೋಕದಲ್ಲಿ ಭಾಷೇ ಬಾರದಿರುವವರ ಬಗೆಗೆ ನಿಮ್ಮ ಗೌರವ ನಿಜಕ್ಕೂ ಮೆಚ್ಚತಕ್ಕಂತಹುದೆ. ಅದರಲ್ಲೂ 'ನಿಮ್ಮ ಕನ್ನಡದ ಲೋಕವಿದೆ' ಎಂದು ಹೇಳಿಕೊಂಡು ದ್ವೀಪಗಳಾಗಿ ಉಳಿಯುವ ಬಗೆಗೆ 'ಅಚ್ಚು ಕಟ್ಟಾಗಿ' ಕೆಲಸ ಮಾಡುತ್ತಾ ಹೋಗಬೇಕಾದ ಪರಿಯ ಬಗೆಗೆ ನಿಮ್ಮ ಮೆಚ್ಚುಗೆಯೂ ಗೌರವ ಪಾತ್ರವಾದುದೆ. ಭಾಷೆ ಬಾರದಿದ್ದರೂ ಪರವಾಗಿಲ್ಲ, ನಿಮ್ಮ ನಿಮ್ಮ ಕೆಲಸ ನೀವು ನೀವು ಮಾಡಿಕೊಂಡು ಹೋಗಿ ಎಂದೆನ್ನುವ ಧ್ವನಿಯೂ ಅಡಕಗೊಂಡಿರುವ ನಿಮ್ಮ ಈ ಲೇಖನದಲ್ಲಿ ಯಾವುದೇ ಖೇದವಿಲ್ಲ, ಅದರ ಹಿನ್ನೆಲೆಯಲ್ಲಿರುವ 'ಕಪ್ಪಗಳ' ರಾಜಕೀಯ, ಸಾಮಾಜಿಕ ಅಸಮಾನತೆ ಬಗೆಗೂ ಯಾವುದೇ ಖೇದವಿಲ್ಲದಿರುವುದು, ಈ ಮಧ್ಯದಲ್ಲಿ ಅಚ್ಚುಕಟ್ಟುತನವೊಂದೇ ನಿಲ್ಲುವ ಮೌಲ್ಯವಾದರೆ, ವಾಷಿಂಗ್‌ಟನ್ ಬಸ್ ಸ್ಟೇಶನ್, ಅಲ್ಲಿರುವ ಬಡತನ, ಸುಲಿಗೆ, ಬಿಕ್ಷಾಟನೆ ಇತಾದ್ಯಿಗಳನ್ನು ತೆರೆದಿಟ್ಟಿದ್ದರೆ ಚೆನ್ನಾಗಿರುತ್ತಿತ್ತು. ವೃತ್ತಿಪರವಾದ ಪರಿಸರದಲ್ಲಿ ಹೆಚ್ಚೂ ಕಡಿಮೆ ಎಲ್ಲವೂ ಗೌರವಗಳಿಸಿಕೊಂಡು ಬಿಡುತ್ತದೆ, ಅದು ಅನಿವಾರ್ಯವಾಗಿ ಪರೋಕ್ಷವಾದ ಗೌರವವೆ-ಕಪ್ಪವೆ. ವೃತ್ತಿಪರವಾದ ಪರಿಸರವೊಂದೇ ಜೀವನದಲ್ಲಿ ವ್ಯಾಪಕವಾಗಿರುವುದಿಲ್ಲ..ಅದರಾಚೆಗೆ ಇಣುಕು ನೋಟವನ್ನಾದರೂ ಬೀರುವ ಮನ್ನಸ್ಸು, ಕಣ್ಣುಗಳು ಬೇಕಾಗುತ್ತದೆ. ಆ ಹಂತಕ್ಕೆ ನಿಮ್ಮ ನಿಲುವುಗಳು ಬರವಣಿಗೆಯಲ್ಲಾದರೂ ಚಾಚಿಕೊಳ್ಳಲಿ ಎಂದು ಆಶಿಸುತ್ತೇನೆ...

ಇಲ್ಲದಿದ್ದರೆ ನಿಮ್ಮ ಕನ್ನಡದ ಆಲೋಚನೆಗಳಿಗೂ 'ಕಪ್ಪ ವಸೂಲು ಮಾಡುತ್ತಿರುವವರಿಗೂ-ನಿಮಗೂ ವ್ಯತ್ಯಾಸವೇ ಇಲ್ಲದಂತಾದೀತು. ಇದಕ್ಕೆ ಸ್ವಲ್ಪ ಧೈರ್ಯ ಬೇಕು, ಅದನ್ನು ದಕ್ಕಿಸುಕೊಳ್ಳುವತ್ತ ನಿಮ್ಮ ಆಲೋಚನೆ ತಿರುಗಲಿ.

ಆಗಾಗ್ಯೇ ಭೇಟಿ ಕೊಡುವ ಲಕ್ಷಣವಾಗಿಯಾದರೂ ನೀವು ಈ ಪ್ರತಿಕ್ರಿಯೆಯನ್ನು ಸ್ವೀಕರಿಸಬಹುದು, ಅಥವ ಭಾಷೆ ಬಾರದವರ ನಮ್ಮಂತಹವರ ತುಣುಕುಗಳನ್ನು ಟ್ರಾಶ್‌ಕ್ಯಾನ್‌ಗಾದರೂ ಎಸೆಯಬಹುದು. ಒಮ್ಮೊಮ್ಮೆ ಅನ್ನಿಸುತ್ತದೆ: ನಾನೇ ಭಾಷೆ ಬಾರದವನು, ಸುಮ್ಮನೆ ಬರೆದದ್ದೆಲ್ಲವನ್ನು ಟ್ರ್ಯಾಷ್‌ಕ್ಯಾನ್‌ಗೆಸೆದು ಚೊಕ್ಕ ಮಾಡಬೇಕೆಂದು. ಅದರ ಲಕ್ಷಣವೇ ಈ ಪ್ರತಿಕ್ರಿಯೆಯೋ..? ಏನೇ ಆಗಲಿ, ಕನ್ನಡದಲ್ಲಿ ಬರೆಯುತ್ತಿರುವುದರಿಂದ ಬ್ಲಾಗ್‌ಸ್ಪಾಟ್ ಎನ್ನುವ ಸ್ಲಮ್ಮಿನ ಕಸದ ತೊಟ್ಟಿಯೇ ಆದರೂ ನಾವೆಲ್ಲ ಚಿಂದಿ ಆಯುವವರಾದ್ದರಿಂದ ಅಲ್ಲಿ ರೈಸ್ಕಲಿಂಗ್‌ಗಾದರೂ ಒಂದು ಬ್ಯಾಕಪ್ ಇರಲಿ...ಅಲ್ಲವೆ.

ಒಳ್ಳೇಯದಾಗಲಿ ಎಂದು ಒಳ್ಳೆಯದನ್ನು ಆಯ್ದುಕೊಳ್ಳುತ್ತಾ ಹೋಗುವ ನಿಟ್ಟಿನಲ್ಲಿ ಈ ನನ್ನ ಸಣ್ಣ ತುಣುಕಿನ ಪ್ರತಿಕ್ರಿಯೆ..
ಶೇಖರ್‌ಪೂರ್ಣ

Satish said...

ಶೇಖರ್, ಚಿಕ್ಕ ಬರಹಕ್ಕೆ ದೊಡ್ಡ (ಮನಸ್ಸು ಮಾಡಿ) ಪ್ರತಿಕ್ರಿಯೆಯನ್ನು ಸೂಚ್ಯವಾಗಿ ನೀಡಿ ಹುರಿದುಂಬಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಆಶಯದಂತೆ ಯಾರ ಕಡೆಯೂ ವಾಲಿಕೊಳ್ಳದೆ ಇದ್ದುದನ್ನು ಇದ್ದಹಾಗೆ ನೋಡಿ ವಿವರವಾಗಿ ಬರೆಯುವ ಶ್ರಮ ನನ್ನದಾಗಲಿ ಎನ್ನುವ ಆಶಯ ನನ್ನದು.

ವಾಷಿಂಗ್ಟನ್ ಅಥವಾ ನ್ಯೂ ಯಾರ್ಕ್ ನಗರಗಳನ್ನು ನನ್ನದೇ ನೇರದಲ್ಲಿ ನೋಡಿದ ನನಗೆ ಅವುಗಳನ್ನು 'ಅಂತರಂಗ'ದಲ್ಲಿ ಬಿಚ್ಚಿಡಲು ಆಗಾಗ್ಗೆ ಅವಕಾಶಗಳು ಸಿಕ್ಕಿದ್ದರೂ ಬಸ್ ಸ್ಟೇಷನ್, ಅಥವಾ ಇಲ್ಲಿಯ ಕೆಲವರ ನಡತೆ/ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಇವತ್ತಿಗೂ ನಾನು ಹೆಣಗುತ್ತಲೇ ಇರುವುದರಿಂದ, ಎಂದು ನನ್ನ ಆಲೋಚನೆಗಳು ಪಕ್ವವಾದವು ಎಂದೆನಿಸುತ್ತದೆಯೋ ಆಗ ನಾನು ನನ್ನ ಆಂತರ್ಯವನ್ನು ಬರೆದು ತಿರುಗಿ ನೋಡುವ ಪ್ರಯತ್ನ ಮಾಡುತ್ತೇನೆ.

'ಭಾಷೆ ಬಾರದವರ'ನ್ನು ನಾನು ನೋಡಿದ್ದಕ್ಕಿಂತ ಹೆಚ್ಚಾಗಿ ನನ್ನ ಕೆಲವು ಸಾಲುಗಳನ್ನು ಚೆನ್ನಾಗಿ ವಿಮರ್ಶಿಸಿ ಒಳ್ಳೆಯದನ್ನು ಹಾರೈಸಿದ ನಿಮಗೆ ಅನಂತಾನಂತ ಧನ್ಯವಾದ.