ಕರ್ನಾಟಕ "ಬಂದ್"
ಸತ್ಯಾಗ್ರಹ ಅನ್ನೋದು ಬಹಳ ದೊಡ್ಡ ಮಾತು - Insistence of truth ಎಂದು ಅನುವಾದಿಸಿ ಹೇಳಿದರೂ ಇಂಗ್ಲೀಷರಿಗೆ ಬಾಪುವಿನ ಮನಸ್ಸಿನ್ನಲ್ಲಿದ್ದ ಸತ್ಯಾಗ್ರಹ ಹಾಗೂ ಅದರ ತೀವ್ರತೆಯ ಪರಿಣಾಮವನ್ನು ಹೇಳುವಲ್ಲಿ ಅನುವಾದ ಸೋಲುತ್ತದೆಯೆಂದೇ ಹೇಳಬೇಕು. ಇಂತಹ ಒಂದು ಮೂಲಮಂತ್ರವನ್ನು ಘೇರಾವ್, ಬಂದ್, ಮತ್ತಿತರ ರಾಜಕೀಯ ಪ್ರೇರಿತ ಹರತಾಳಗಳನ್ನಾಗಿ ಪರಿವರ್ತಿಸಿ ನೋಡುವಲ್ಲಿ ನನ್ನದು ಮೊದಲಿನಿಂದಲೂ ವಿರುದ್ಧ ದೃಷ್ಟಿಕೋನವೇ. ಇಂದು ಇಲ್ಲಿಯೂ ಸಹ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತೇನೆ - ಈ ವಿಷಯದಲ್ಲಿ ನನ್ನ ಆಲೋಚನೆಗಳು ಪ್ರೈಮರಿ ಶಾಲೆಯ ಮಕ್ಕಳ ಆಲೋಚನೆಯ ಹಾಗೆ ಕೆಲವರಿಗೆ ಕಂಡುಬರಬಹುದು, ಆದರೂ 'ಬಂದ್' ನಿಂದ ಏನೇನು ಅನುಕೂಲತೆಗಳನ್ನು ಇಷ್ಟು ದಶಕಗಳಲ್ಲಿ ಸಾಧಿಸಿಕೊಂಡಿದ್ದಾರೋ ಅವುಗಳನ್ನೆಲ್ಲ ಮುಂದೆ ತೆರೆದಿಟ್ಟರೂ ನಾನು ಬಂದ್ ಅನ್ನು ಅನುಮೋದಿಸುವುದಕ್ಕೆ ಬಹಳ ಕಷ್ಟಪಡಬೇಕಾದೀತು.
ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಗೋಡೆ ಬರಹ ಹಾಗೂ ಭಿತ್ತಿ ಚಿತ್ರಗಳನ್ನು ನಿಷೇಧಿಸಬೇಕು ಎಂದು ಕಾನೂನನ್ನು ಬದಲಾಯಿಸುವ ಬಗ್ಗೆ ಮಾತುಕತೆಗಳು ಆರಂಭವಾಗಿದ್ದವು. ಮುಂದೆ ಕಾನೂನನ್ನು ಬದಲಾಯಿಸಿದರೋ ಇಲ್ಲವೋ ಗೊತ್ತಿಲ್ಲ, ಆದರೆ ಇವತ್ತಿಗೂ ನಮ್ಮ ಊರುಗಳಲ್ಲಿ ಕಂಡಕಂಡಲ್ಲೆಲ್ಲ ಒಂದಲ್ಲ ಒಂದು ರೀತಿಯ ಗೋಡೆ ಬರಹಗಳು, ಚಿತ್ರಗಳು, ಪೋಸ್ಟರುಗಳು ಇವೆಲ್ಲ ಮಾಮೂಲು. ಮುಂದುವರಿದ ದೇಶಗಳಲ್ಲಿ ಜಾಹಿರಾತು ಹೋರ್ಡಿಂಗ್‌ಗಳು ಕಾಣುತ್ತವೆ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ರಸ್ತೆ, ಗೋಡೆ, ಫಲಕಗಳ ಮೇಲೆ ಬಣ್ಣಬಣ್ಣದ ಬರಹಗಳು ಕಾಣುತ್ತವೆ ಎನ್ನುವುದು ಬೇರೆ ವಿಷಯ; ಎಷ್ಟೋ ಜನ ಗೋಡೆ ಬರಹವನ್ನು ಒಂದು ಸಾಮಾನ್ಯ ಧ್ವನಿಯ ಪ್ರತೀಕ ಅದನ್ನು ನಿಯಂತ್ರಿಸಬಾರದು ಎಂದೂ ಹೋರಾಟ ನಡೆಸಿದ್ದರು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ಒಂದು ಬಣ ಯೋಚಿಸಿದರೆ, ಮತ್ತೊಂದು ಬಣದವರು ನಿಮ್ಮ ಧ್ವನಿಗಳನ್ನು ಪರಿವರ್ತಿಸಿಕೊಳ್ಳಿ, ಅದರ ಬದಲು ಸಾರ್ವಜನಿಕ ಆಸ್ತಿಪಾಸ್ತಿ ಅಥವಾ ಖಾಸಗೀ ಪ್ರಾಪರ್ಟಿಯನ್ನು ಹಾಳುಗೆಡವಬೇಡಿ ಎಂದು ವಾದ ಶುರುಮಾಡಿದ್ದರು. ಹೀಗೆ ದೇಶಾದ್ಯಂತ ಎಲ್ಲಿ ಹೋದರೂ ಸಾರ್ವಜನಿಕ ಧ್ವನಿ ಒಂದಲ್ಲ ಒಂದು ರೀತಿಯಲ್ಲಿ ಹೊರಬರುತ್ತಲೇ ಇದೆ, ಹೀಗೆ ಧ್ವನಿಯನ್ನು ಹೊರಡಿಸಿರೋದರಿಂದ ಏನಾನಾಗಿದೆ ಎನ್ನುವುದನ್ನು ಯಾರಾದರೂ ಗೊತ್ತಿದ್ದವರು ಇಲ್ಲಿ ತಿಳಿಸಿದ್ದರೆ ಒಳ್ಳೆಯದಿತ್ತು.
ಉದಾಹರಣೆಗೆ ಇಂದಿನ ಕರ್ನಾಟಕ ಬಂದ್ ವಿಷಯವನ್ನೇ ತೆಗೆದುಕೊಳ್ಳೋಣ - ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವುದು ಮುಖ್ಯವಾದ ಬೇಡಿಕೆಗಳಲ್ಲೊಂದು, ಆದರೆ ಈ ಕೆಳಗಿನ ವಿಷಯಗಳ ಹಿನ್ನೆಲೆಯಲ್ಲಿ ಈ ಬಂದ್ ಆಯೋಜಕರ ಸಂದೇಶಗಳು ಏನೇ ಇದ್ದರೂ ಅವು ಹೇಗೆ ಕನ್ನಡಿಗರಿಗೆ ಅನ್ವಯವಾಗುತ್ತವೆ ಎಂದು ನೋಡೋಣ:
* ಎರಡು ಸೆಕೆಂಡಿಗೊಂದು ಮಗು ಹುಟ್ಟುವ ನಮ್ಮ ವ್ಯವಸ್ಥೆಯಲ್ಲಿ ಆಸ್ಪತ್ರೆ, ಮುಂತಾದ ಅಗತ್ಯ ಸೇವೆಗಳಲ್ಲಿ ನಿರತವಾಗಿರುವ ಕೆಲಸಗಾರರು ಬಂದ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವಂತೆ ಮುಂಜಾಗರೂಕತೆ ತೆಗೆದುಕೊಳ್ಳುವವರಾರು?
* ವಯೋವೃದ್ಧರು, ಮಕ್ಕಳು ಖಾಯಿಲೆಗೆ ಬಿದ್ದರೆ ತುರ್ತು ಚಿಕಿತ್ಸೆಗೆಂದು ಅವರು ಎಲ್ಲಿ ಹೋಗಬೇಕು, ಅವರು afford ಬಸ್ಸು, ರಿಕ್ಷಾಗಳು ಸೇವೆಯಲ್ಲಿಲ್ಲದಿರುವಾಗ ಇಂತಹ ಅಸಹಾಯಕರು ಏನು ಮಾಡಬೇಕು?
* ಕಂಪನಿ, ಅಂಗಡಿ, ಮುಗ್ಗಟ್ಟುಗಳು ತಮ್ಮ ಆ ದಿನದ ಕೆಲಸವನ್ನು ನಿಲ್ಲಿಸಿರುವುದರಿಂದ ಆಗುವ ನಷ್ಟವನ್ನು ತುಂಬಿಕೊಡುವವರಾರು?
* ಒಂದು ದಿನ ಕೆಲಸ ಸ್ಥಗಿತಗೊಳಿಸಿರೋದರಿಂದ ಎಷ್ಟೋ ಯೋಜನೆಗಳಿಗೆ ಆಗುವ ನಷ್ಟವನ್ನು ಹೇಗೆ ವಿವರಿಸುವುದು? ಅವುಗಳನ್ನು ಮತ್ತೆ ಸ್ಕೆಡ್ಯೂಲಿನಲ್ಲಿ ಸರಿಯಾಗಿಡುವುದು ಹೇಗೆ?
* ಅಂದೇ ದುಡಿದು ಅಂದೇ ತಿನ್ನುವ ಕೂಲಿ ಕಾರ್ಮಿಕರಿಗೆ ಹೊಟ್ಟೆ ಹೊರೆಯುವವರಾರು?
* ಶಾಲೆ-ಕಾಲೇಜುಗಳಲ್ಲಿ ಪಾಠ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಯಾರು ಸ್ಪೆಷಲ್ ಕ್ಲಾಸುಗಳನ್ನು ಏರ್ಪಡಿಸಿ ಕ್ಲಾಸುಗಳನ್ನು ನಡೆಸುವ ವ್ಯವಸ್ಥೆಯನ್ನು ಮಾಡುತ್ತಾರೆ?
* ಇಂದೇ ಕೊನೇ ದಿನವಾಗಿ ಹಾಕಬೇಕಾದ ಎಷ್ಟೋ ಅರ್ಜಿಗಳನ್ನು ತುಂಬಿ ಬ್ಯಾಂಕು, ಅಂಚೆ ವ್ಯವಸ್ಥೆಯ ಸಹಾಯದಿಂದ ಕಳಿಸಬೇಕಾದವರಿಗೆ ಸಹಾಯ ಮಾಡುವವರಾರು?
ಹೀಗೆ ಬರೆಯುತ್ತಾ ಹೋದರೆ ಕೊನೇಪಕ್ಷ ಒಂದು ನೂರು ಪ್ರಶ್ನೆಗಳನ್ನು ಬರೆಯಬಹುದು. ಇವೆಲ್ಲವನ್ನೂ ಕೂಲಂಕಷವಾಗಿ ಗಮನಿಸಿದರೆ ಈ ಬಂದ್ ಆಚರಣೆಯಿಂದ ಕರ್ನಾಟಕದವರಿಗೆ (ಒಬ್ಬ ಸಾಮಾನ್ಯ ಕನ್ನಡಿಗನಿಗೆ ಎನ್ನೋ ಅರ್ಥದಲ್ಲಿ) ತೊಂದರೆಗಳಾದವೇ ವಿನಾ ಅನುಕೂಲಗಳೇನಾದವು ಎಂದು ಪ್ರಶ್ನೆ ಹುಟ್ಟುತ್ತದೆ. ಸರಿ ಈ ಬಂದ್ ಆಚರಣೆಯ ನಿರೀಕ್ಷೆ ಏನು, ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗಿದೆಯೇ? ಅಥವಾ ಕರ್ನಾಟಕದವರದ್ದೂ ಒಂದು ಧ್ವನಿ ಇದೆ ಒಂದು ತೋರಿಸಬೇಕಾಗಿದೆಯೇ? ಅಥವಾ ಮಹಾರಾಷ್ಟ್ರ ಸರ್ಕಾರದ ನಿಯೋಗಗಳು ಕೇಂದ್ರವನ್ನು ಇನ್ನೊಮ್ಮೆ ತಲುಪದಿರುವಂತೆ ಪರೋಕ್ಷವಾಗಿ ಹೇಳಬೇಕಾಗಿದೆಯೇ? ಅಥವಾ ಬರೀ ರಾಜಕೀಯ ಪ್ರೇರಿತ ಈ ಬಂದ್ ನಲ್ಲಿ ನನಗರಿವಿಗೆ ಬರದ, ಬಂದರೂ ಬರೆಯಲಾಗದ ಇನ್ನೇನಾದರೂ ಗುಟ್ಟುಗಳಿವೆಯೋ ಯಾರಿಗೆ ಗೊತ್ತು?
ಹೀಗೆ ವರ್ಷಕ್ಕೊಂದು ಬಂದ್ ನಡೆದರೆ ಅದನ್ನು ರಾಜ್ಯದ ರಜಾ ದಿನಗಳ ಸಾಲಿಗೆ ಸೇರಿಸಿಕೊಂಡು ನೆಮ್ಮದಿಯಿಂದಿರಬಹುದು. ಜಿಲ್ಲಾ, ತಾಲ್ಲೂಕುಗಳ ಮಟ್ಟದಲ್ಲಿ ಆಗಿಂದಾಗ್ಗೆ ನಡೆಯುವ ಹರತಾಳಗಳನ್ನು ಹೊರತುಪಡಿಸಿ ರಾಜ್ಯ ಮಟ್ಟದಲ್ಲಿ ಬೇಕಾದಷ್ಟು ಈ ರೀತಿ ನಡೆಯುತ್ತಲೇ ಇರುತ್ತವೆ. ಇನ್ನು ಸ್ವಲ್ಪ ದಿನಕ್ಕೆ ಕಾವೇರಿ ಗಲಾಟೆ ಆರಂಭವಾಗುತ್ತದೆ, ಯಾರೋ ಒಬ್ಬರು ಅಂಬೇಡ್ಕರ್ ಹೆಸರಿಗೆ ಮಸಿ ಬಳಿದರೆಂದು ಶುರುವಾಗುತ್ತದೆ, ಅನ್ಯಾಯವನ್ನು ಪ್ರತಿಭಟಿಸಿ ಹಲವು ಬಂದ್ ಗಳು, ಅನ್ಯಾಯವನ್ನು ಮೆಟ್ಟಿ ನಿಲ್ಲಲು ಇನ್ನು ಹಲವು, ಶಾಂತಿ ಸಂದೇಶವನ್ನು ಬಿಂಬಿಸಲು ಕೆಲವಾದರೆ, ಕೆಂಪು ಬಸ್ಸುಗಳನ್ನು ಸುಟ್ಟು, ಬೀದಿ ದೀಪಗಳನ್ನು ಪುಡಿ ಮಾಡುವ ಮತ್ತಷ್ಟು ಬಂದ್ ಗಳು. ಈ ಎಲ್ಲಾ ಬಂದ್ ಗಳು ಮಾಡಿದ ಒಟ್ಟು "ಸತ್ಯಾಗ್ರಹ"ವನ್ನು ಲೆಕ್ಕ ಹಾಕಿ ನೋಡಿದರೆ ನಮ್ಮ ದೇಶ-ರಾಜ್ಯದಲ್ಲಿ ಇಂದು ಅನ್ಯಾಯ, ಬ್ರಷ್ಟಾಚಾರ, ಇತ್ಯಾದಿಗಳು ಇರಲೇಬಾರದು, ಯಾವ ಗಡಿಯನ್ನು ಯಾರೂ ಆಕ್ರಮಿಸಬಾರದು, ಎಲ್ಲ ವರದಿಗಳೂ ಅನುಷ್ಠಾನಕ್ಕೆ ಬಂದಿರಬೇಕಿತ್ತು, ಸ್ವಾಯುತ್ತತೆ ಬೇಡಿದವರಿಗೆಲ್ಲ ಸಿಕ್ಕಿರಬೇಕಿತ್ತು - ಆದರೆ ಹಾಗೇನೂ ಆಗಲಿಲ್ಲವಲ್ಲ!
ಹಾಗಾದರೆ ಬಡ ಧ್ವನಿಗಳಿಗೆ ಒಂದು ಮಾಧ್ಯಮ ಅನ್ನೋದು ಬೇಡವೇ ಮತ್ತೆ? ಎಲ್ಲರೂ ಡೆಕ್ಕನ್ ಹೆರಾಲ್ಡ್‌ನಲ್ಲಿ ಫುಲ್ ಪೇಜ್ ಜಾಹಿರಾತು ಕೊಟ್ಟು ತಮ್ಮ ಸಂದೇಶವನ್ನು ಬಿಂಬಿಸುವಂತಿದ್ದರೆ ನಾವೇಕೇ ಹೀಗಿರುತ್ತಿದ್ದೆವು? ಹಾಗಿದ್ದ ಮೇಲೆ ಈ ಇಲ್ಲದವರ ಧ್ವನಿಯಾಗಿ ನಿಜವಾಗಿಯೂ ಬಂದ್ ಗಳು ಕೆಲಸ ಮಾಡುವಂತೆ ಮಾಡುವಲ್ಲಿ ಜನರು ಏಕೆ ಯೋಚಿಸೋದಿಲ್ಲ? ಸ್ವಾತಂತ್ರ್ಯೋತ್ತರ ದಶಕಗಳಲ್ಲಿ "ನಾವು ಇಂದು ನಮ್ಮ ಕೆಲಸವನ್ನು ಮಾಡುವುದಿಲ್ಲ" ಎನ್ನುವುದೇ ನಮಗೆ ತತ್ ತಕ್ಷಣ ಹೊಳೆಯುವ ಪ್ರತಿಭಟನೆಯ ಹಾದಿಯೇ? ಈ ಬಂದ್ ಸ್ಥಿತಿಗೆ ಬರದಿರುವಂತೆ, ಅದಕ್ಕೂ ಮೊದಲು ಯಾರು ಯಾರು ಏನೇನನ್ನು ಮಾಡಿದ್ದಾರೆ? ಎಷ್ಟು ನಿಯೋಗಗಳು ಎಲ್ಲೆಲ್ಲಿ ಹೋಗಿವೆ? ಕೇಂದ್ರ ಸರಕಾರದವರು ಏಕೆ ಉತ್ತರ ಕೊಡುತ್ತಿಲ್ಲ? ಬಂದ್ ಮಾಡಿದ ಮೇಲೂ ಮಹಾಜನ ವರದಿಯನ್ನು ಅನುಷ್ಠಾನ ಮಾಡದಿದ್ದರೆ ಮುಂದಿನ ಹೆಜ್ಜೆಗಳೇನು? ಗುರಿಗಳೇನು? ಹೀಗೆ ಹಲವಾರು ಪ್ರಶ್ನೆಗಳನ್ನು ಒಂದರ ಹಿಂದೊಂದು ಕೇಳಬಹುದು.
ಬೆಳಗಾವಿ, ಕಾಸರಗೋಡು, ಬಳ್ಳಾರಿ, ಬೆಂಗಳೂರನ್ನು "ಸಂರಕ್ಷಣೆ" ಮಾಡೋದು ಕರ್ನಾಟಕದ ಜನತೆಯ ನಿಲುವಾದರೆ, ಆಡಳಿತ ಹಾಗೂ ವಿರೋಧ ಪಕ್ಷದವರೆಲ್ಲ ಬೆಂಬಲಿಸುತ್ತಿರುವ ಈ "ಬಂದ್" ಗಿಂತ ಮೊದಲು ಅವರೆಲ್ಲ ಏನೇನು ಮಾಡಿದ್ದಾರೆ, ಇದಕ್ಕೋಸ್ಕರವೇ ಒಂದು ಸಮಿತಿ ಅನ್ನೋದು ಇದೆಯೇ, ಗಡಿ ವಿಚಾರಗಳನ್ನು ಪರಾಮರ್ಶಿಸಿ ನೇರವಾಗಿ ಸಂಬಂಧಪಟ್ಟವರಲ್ಲಿ ವ್ಯವಹಾರ ನಡೆದಿದೆಯೇ? ಒಂದು ವೇಳೆ ನಮ್ಮ "ಬಂದ್" ಕರೆಗೆ ಓಗೊಟ್ಟು ಮಹಾಜನ್ ವರದಿಯನ್ನು ಅನುಮೋದಿಸಿದರು ಎಂದೇ ಅಂದುಕೊಳ್ಳೋಣ, ಮರುದಿನ ಮಹಾರಾಷ್ಟ್ರದವರು ಬಂದ್ ಆಚರಣೆ ಮಾಡಿದರೆ ಕೇಂದ್ರ ಸರ್ಕಾರದವರು ಏನು ಮಾಡಬೇಕು?
***
ಇವೆಲ್ಲವನ್ನು ಬರೆಯುತ್ತಿರುವುದರಿಂದಲೇ ಹೇಳಿದ್ದು ನನ್ನ ಆಲೋಚನೆಗಳು ಇನ್ನೂ ಪರಿಪಕ್ವವಾಗಿಲ್ಲ, ಇಪ್ಪತ್ತೈದು ವರ್ಷಗಳ ಕಾಲ ಭಾರತದಲ್ಲಿದ್ದರೂ ನನಗಿನ್ನೂ "ಬಂದ್"ಗಳ ಜೀವಾಳ ಅರ್ಥವಾಗಿಲ್ಲ, ಪ್ರತಿ ಬಂದ್ ಅನ್ನೋದೂ ಸಹ ನನಗೆ ಸಾರ್ವಜನಿಕರಿಗೆ ನೇರವಾಗಿ ಒಡ್ಡುವ ಹಿಂಸೆಯಂತೆ ಕಂಡು ಬಂದಿದೆಯೇ ವಿನಾ ಗೆದ್ದಿರುವ ಅಂಶಗಳು ಕಡಿಮೆ. ಹೀಗೆ ನಮ್ಮ ವಿರುದ್ಧವಾಗಿ ನಡೆಯುವ ಎಲ್ಲ ಪಿತೂರಿಗಳನ್ನು ವಿರೋಧಿಸಿ ಎಷ್ಟು ಬೇಕಾದಷ್ಟು ಬಂದ್ ಗಳನ್ನು ಆಚರಿಸುವಂತಿದ್ದರೆ ಚೆನ್ನಾಗಿತ್ತು. ಭಾರತ್ ಬಂದ್, ಏಷ್ಯಾ ಬಂದ್, ವಿಶ್ವವೇ ಬಂದ್ ಅನ್ನೋ ಹಾಗೆ - ಏನೇನೆಲ್ಲವನ್ನು ಮಾಡಬಹುದಿತ್ತು, I am really looking forward to a bundh, so that I don't have to work tomorrow! ನಮ್ಮ ವ್ಯವಸ್ಥೆಯಲ್ಲಿ ನಮ್ಮ ಹಕ್ಕು ಕತ್ರ್ಯವ್ಯಗಳನ್ನು ಜ್ಞಾಪಿಸೊದಕ್ಕು 'ಬಂದ್' ಗಳು ಎಷ್ಟ್ರರ ಮಟ್ಟಿಗೆ ಪೂರಕವಾಗಿವೆ ಅನ್ನೋದು ಈ ಸಂದರ್ಭದಲ್ಲಿ ಏಳುವ ಮತ್ತೊಂದು ಅಲೆಯಷ್ಟೇ.
2 comments:
ನಾನು ಈಗ ತಾನೇ ಈ ಬರಹಗಳನ್ನು ಓದಿದೆ:
http://wiredal.wordpress.com/2006/10/03/bandh-o-bust/
http://wiredal.wordpress.com/2006/10/04/bandh-its-kannada-channels-on-tv-again/
ಸ್ವಾರಸ್ಯಕರವಾಗಿದೆ, ಲಿಂಕ್‌ಗಳನ್ನು ತಿಳಿಸಿದ್ದಕ್ಕೆ ಧನ್ಯವಾದಳು!
Post a Comment