Tuesday, October 31, 2006

ನಮ್ಮ ಹಾಡು ನಮ್ಮದು!

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ!


ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ...' ಎನ್ನುವ ಈ ಹಾಡಿನ ಮೇಲಿನ ವಾಕ್ಯಗಳು ತಮ್ಮ ಸತ್ವವನ್ನೇನೂ ಕಳೆದುಕೊಂಡಂತೆನಿಸಿವುದಿಲ್ಲ. ಹುಯಿಲುಗೋಳರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು...' ಎಂಬುದು ಇಂದಿಗೂ ಪ್ರಚಲಿತದಲ್ಲಿರುವ ಮತ್ತೊಂದು ಗೀತೆಯೇ. ಹೀಗೆ ಎರಡು ಹಾಡುಗಳ ಮೇಲೆ ನಮ್ಮ ಪರಂಪರೆಯನ್ನು ಅಳೆದು ತೀರ್ಮಾನ ಮಾಡಲಾಗುವುದೇ ಎಂದು ಯಾರು ಬೇಕಾದರೂ ಹುಬ್ಬೇರಿಸಬಹುದು. ಆದರೆ ನನಗಂತೂ ನಾಡಿನ ಐಕ್ಯತೆಯಲ್ಲಿ ದಿನೇದಿನೇ ವಿಶ್ವಾಸ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚೇನೂ ಆಗುತ್ತಿಲ್ಲ.

ನಾವು ಈ ಹಿಂದಿನ ದಶಕಗಳನ್ನು ಒಂದು ಅರ್ಧ ಶತಮಾನವನ್ನು ಕಳೆದು ಬಂದಿದ್ದನ್ನು ಹಿಂತಿರುಗಿ ನೋಡಲೇ ಬೇಕು, ಅದರಿಂದ ಕಲಿಯುವುದಂತೂ ಬೇಕಾದಷ್ಟಿದೆ. ಅರ್ಧ ಶತಮಾನದ ಬಳಿಕವೂ 'ಕನ್ನಡವನ್ನು ಉಳಿಸಿ...' ಎಂದು ರಿಕ್ಷಾ, ಬಸ್ಸುಗಳ ಹಿಂದೆ ಬರೆಸಿಕೊಂಡು ಓಡಾಡುವ ಸ್ಥಿತಿಯಿಂದೆಂದೂ ಹೊರಬಂದಂತೆ ನಾವು ಕಾಣುವುದೇ ಇಲ್ಲ. ಒಂದು ಕಡೆ ಕಾಸರಗೋಡಿನಂತಹ ಪ್ರಾಂತ್ಯವನ್ನು ಕನ್ನಡನಾಡಿನ ಭಾಗವನ್ನಾಗಿ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಂಡಂತೆ ಬೆಳಗಾವಿ ಮತ್ತಿತರ ಗಡಿಪ್ರದೇಶಗಳು ಎಂದಿಗಿಂತ ಹೆಚ್ಚಿನ ಪ್ರಾಂತೀಯ ಅಸ್ಥಿರತೆಯಿಂದ ಒದ್ದಾಡುತ್ತಿವೆ, ನವೆಂಬರ್ ಒಂದರ ಏಕೀಕರಣ ದಿನವನ್ನು ಎಷ್ಟೋ ಕಡೆಗೆ ಕರಾಳದಿನವನ್ನಾಗಿ ಆಚರಿಸಲಾಗುತ್ತಿದೆ, ಕನ್ನಡತನವೆನ್ನುವುದು ಪ್ರಶ್ನಾರ್ಥಕವಾಗಿ ಹೋಗಿದೆ.

ಶಾಲೆಗಳಲ್ಲಿ ಕನ್ನಡವನ್ನು (ಮಾಧ್ಯಮವಾಗಿ)ಕಲಿಸಬೇಕೆ ಬಿಡಬೇಕೆ, ಇಂಗ್ಲೀಷ್ ಅನ್ನು ಯಾವ ವರ್ಷದಿಂದ ಭಾಷೆ ಹಾಗೂ ಮಾಧ್ಯಮವಾಗಿ ಆರಂಭಿಸಬೇಕು ಎನ್ನುವುದಕ್ಕೆ ನಾವಿನ್ನೂ ಉತ್ತರವನ್ನು ಕಂಡುಕೊಂಡಂತಿಲ್ಲ. ಒಂದು ಕಡೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಶಹರಗಳು ಬೆಳವಣಿಗೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದರೆ ಎಷ್ಟೋ ಹಳ್ಳಿಗಳಲ್ಲಿ ಸಾಕಷ್ಟು ಮೂಲಭೂತ ಅನುಕೂಲಗಳಿಲ್ಲದೇ ಇನ್ನೂ ಮುಖ್ಯವಾಹಿನಿಯಿಂದ ದೂರವೇ ಉಳಿದಿವೆ. ಕರ್ನಾಟಕದಲ್ಲೇ ಉತ್ತರ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸವಿರುವುದು ಬಲ್ಲವರ ಚಿಂತೆಗೆ ಮತ್ತೊಂದು ಕಾರಣ - ಹೀಗೆ ದೊಡ್ಡದಾಗುತ್ತಿರುವ ಕಂದಕ, ಅದರಲ್ಲೂ ಕರ್ನಾಟಕವೆಂದರೆ ಬೆಂಗಳೂರು ಎನ್ನುವ ಮನೋಭಾವನೆ ಹಲವಾರು ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿರ್ಮಿಸಿದೆ.

ರಾಜಕೀಯವಾಗಿಯೂ ಸಾಕಷ್ಟು ಸ್ಥಿರತೆಯನ್ನೇನೂ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಕಂಡಂತಿಲ್ಲ. ಭಿನ್ನ-ಭಿನ್ನ ಆಡಳಿತಗಳು, ಪಕ್ಷಗಳು-ನಾಯಕರ ಧೋರಣೆ, ಮುಂದಾಲೋಚನೆ ಹಾಗೂ ಪ್ರಗತಿಯ ದೃಷ್ಟಿಯಿಂದ ರಾಜ್ಯದ ಹಿತದೃಷ್ಟಿಯಿಂದ ಏನೇನು ಕಾರ್ಯಗಳು ಆಗಬೇಕಿತ್ತೋ ಅವುಗಳೆಲ್ಲವೂ ಅಸ್ಥಿರ ಆಡಳಿತ ವ್ಯವಸ್ಥೆಯಿಂದ ಸೊರಗಿವೆ. ಆಡಳಿತದಲ್ಲಿ ಹುಟ್ಟುವ ಅಸ್ಥಿರತೆ ರಾಜ್ಯದ ನಾಯಕರುಗಳಿಗೆ ತಮ್ಮ ಪಕ್ಷದ ಶಾರ್ಟ್ ಟರ್ಮ್ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿ ಕಂಡುಬರುತ್ತದೆಯೇ ವಿನಾ ದೆಹಲಿಯಲ್ಲಿ ಧ್ವನಿಯನ್ನು ಏರಿಸಿ ಮಾತನಾಡಿ ಕರ್ನಾಟಕದ ಒಳಿತನ್ನು ಸಾಧಿಸಿಕೊಳ್ಳುವುದಾಗಲೀ, ದೂರದೃಷ್ಟಿಯಿಂದ ಯೋಚಿಸಿ ಉತ್ತಮ ಯೋಜನೆಗಳನ್ನು ಸಿದ್ಧಪಡಿಸುವುದಾಗಲೀ ದೂರವೇ ಉಳಿಯುತ್ತದೆ.

ನಮ್ಮ ಹಾಡು ನಮ್ಮದು, ಆ ಹಾಡು ಐಕ್ಯಗಾನವಾಗಲಿ, ಆದರೆ ಕನ್ನಡವನ್ನು ಉಳಿಸಿಕೊಂಡು ಹೋಗುವುದೇ ನಮ್ಮ ಮುಖ್ಯ ಸಮಸ್ಯೆಯಾಗದಿರಲಿ. ಮುಂಬರುವ ದಿನಗಳಲ್ಲಿ ಈಗಾಗಲೇ ಬೇಕಾದಷ್ಟನ್ನು ತೆರೆದುಕೊಂಡಿರುವ ಕನ್ನಡಿಗರ ಔದಾರ್ಯವನ್ನು ಕೆಣಕುವ ಮತ್ಯಾವ ಘಟನೆಗಳೂ ಘಟಿಸದಿರಲಿ. ಹಳೆಯದನ್ನು ಐತಿಹಾಸಿಕವಾಗಿ ನೋಡಿ ಮುಂದುವರಿದು, ನಾವು ಎಡವಿದಲ್ಲೆಲ್ಲ ಪಾಠವನ್ನು ಕಲಿತು ಪ್ರಗತಿಯ ಕಡೆಗೆ ಸಾಗುವ ಕೆಚ್ಚೆದೆ ನಮಗೆ ಬರಲಿ. ದೇಶದಲ್ಲಿ ಕರ್ನಾಟಕ ಮತ್ತೆ ಮೊದಲಿನದಾಗಲಿ. ಕನ್ನಡ ನಮ್ಮ ಶಕ್ತಿಯಾಗಲಿ.

***

ರಾಜ್ಯೋತ್ಸದ ಶುಭಾಶಯಗಳು.

Monday, October 30, 2006

ತಪ್ಪಿದ ಲೆಕ್ಕ

ನಿನ್ನೆ ರಾತ್ರಿ ಗಡಿಯಾರಗಳನ್ನು ಒಂದು ಘಂಟೆ ಹಿಂದಿಟ್ಟು ಕಾಲವನ್ನು ಜಯಿಸಿದವನ ಹಾಗೆ ಯೋಚಿಸಿಕೊಂಡು ಮಲಗಿದವನಿಗೆ ನನ್ನ ಮಾಮೂಲಿ ಸಮಯಕ್ಕೇ ಎಚ್ಚರವಾಗಬೇಕೇ? ಸರಿ, ಇನ್ನೇನು ಎದ್ದು ಯಾವ ಗಡಿಬಿಡಿಯಿಲ್ಲದೇ ನಿಧಾನವಾಗಿ ಆಫೀಸಿಗೆ ಹೊರಟರಾಯಿತು ಎಂದುಕೊಂಡರೆ ಬದಲಾದ ಸಮಯದ ಪ್ರಭಾವದಿಂದ ಹೆಚ್ಚು ಬೆಳಕು ಎಲ್ಲ ಕಡೆಗೆ ಕಂಡುಬಂತು ಜೊತೆಯಲ್ಲಿ ರಸ್ತೆಯ ಮೇಲಿನ ಎಂದಿಗಿಂತ ಹೆಚ್ಚು ವಾಹನಗಳು ಬೇರೆ. ಎಲ್ಲರಿಗೂ ಒಂದು ಘಂಟೆ ಉಳಿಸಿದ ಹುರುಪು, ಹೆಚ್ಚಿನವರು ತಡವಾಗಿಯಲ್ಲದಿದ್ದರೂ ಸರಿಯಾದ ಸಮಯಕ್ಕೇ ಆಫೀಸಿಗೆ ಹೊರಡುತ್ತಾರಾದ್ದಾರಿಂದ ಯಾವ ಗಡಿಬಿಡಿಯಿರುವುದಿಲ್ಲ ಎಂದುಕೊಂಡಿದ್ದು ನನ್ನ ಭ್ರಮೆ ಮಾತ್ರ. ಒಂದು ಘಂಟೆಯೇನು ಹತ್ತು ಘಂಟೆಗಳ ಕಾಲವನ್ನು ಹಿಂದೆ ಹಾಕಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳೇನೂ ಆಗೋದಿಲ್ಲ ಅನ್ನೋದು ನನ್ನ ಅಭಿಮತ.

ಮುಕ್ತವಾಗಿ ತೆರೆದ ರಸ್ತೆಗಳಿಗೆ ನನ್ನನ್ನು ನಾನು ಒಪ್ಪಿಸಿಕೊಂಡು, ನಿಂತು ನಿಂತೂ ಹೋಗುವ ಟ್ರಾಫಿಕ್‌ಗೆ ಈಗಾಗಲೇ ರೂಢಿಯಾಗಿ ಹೋಗಿರೋದರಿಂದ ನನಗರಿವಿಲ್ಲದಂತೆ ರೆಡಿಯೋ ಡಯಲ್‌ ಒತ್ತಿ ನೋಡಿ ಏನು ಸುದ್ದಿ ಬರುತ್ತದೆಯೋ ಎಂದು ಕಾದಿದ್ದವನಿಗೆ 'October is one of the deadlist months...' ಎನ್ನುವ ಸುದ್ದಿ ಕಿವಿಗಪ್ಪಳಿಸಿತು. ಈ ತಿಂಗಳಿನಲ್ಲಿ ಇವತ್ತಿಗಾಗಲೇ (ಅಕ್ಟೋಬರ್ ೩೦) ನೂರು ಜನ ಅಮೇರಿಕನ್ ಸೈನಿಕರ್ ಹತ್ಯೆಗೀಡಾಗಿದ್ದು ಬಹಳಷ್ಟು ಜನರ ಹುಬ್ಬನ್ನು ಮೇಲಕ್ಕೇರುವಂತೆ ಮಾಡಿತ್ತು, ಅಲ್ಲದೇ ನವೆಂಬರ್ ಏಳರಂದು ನಡೆಯುವ ಎಲೆಕ್ಷನ್ ಹಿನ್ನೆಲೆಯಲ್ಲಿ ಇಂತಹ ಸುದ್ದಿಗಳು ಹೆಚ್ಚು ಹೆಚ್ಚು ಮಹತ್ವ ಪಡೆದುಕೊಳ್ಳುವುದು ಸಹಜ. ಆದರೆ, ಅಕ್ಟೋಬರ್‌ನಲ್ಲಿ ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ ಹಲವಾರು ರಿಪೋರ್ಟರುಗಳು ನ್ಯಾಷನಲ್ ಪಬ್ಲಿಕ್ ರೆಡಿಯೋದಲ್ಲಿ ಈ ವರ್ಷದ ಅಕ್ಟೋಬರ್ ಅನ್ನು ವರ್ಣಿಸುತ್ತಿದ್ದರೇ ವಿನಾ ಎಲ್ಲಿಯೂ 'so far in this month' ಎನ್ನುವ ಮಾತು ಕೇಳಿಬರಲಿಲ್ಲ. ಕೆಟ್ಟದೇನೂ ಆಗದಿರಲಿ, ಆದರೂ ಇನ್ನೂ ಎರಡು ದಿನಗಳಿರುವಂತೆ ಈ ತಿಂಗಳನ್ನು ವರ್ಣಿಸಿದ್ದು ಅಕ್ಟೋಬರ್ ತಿಂಗಳನ್ನು ಅವಮಾನ ಮಾಡಿದಂತಾದ್ದರಿಂದ ಈ ರೀತಿ ಬರೆಯಬೇಕಾಯಿತು. ನಿನ್ನೆ ಸಂಜೆಯವರೆಗೆ ಈ ತಿಂಗಳು ಇರಾಕ್ ನಲ್ಲಿ ಸತ್ತ ಅಮೆರಿಕನ್ ಸೈನಿಕರ ಸಂಖ್ಯೆ ೯೯ ಇದ್ದಿದ್ದು, ಇಂದು ಮುಂಜಾನೆ ಒಬ್ಬ ಮರೀನ್ ಸೈನಿಕನ ಮೃತ್ಯುವಿನಿಂದಾಗಿ ನೂರು ಮುಟ್ಟಿತು, ಸಂಜೆ ಅಫೀಸಿನಿಂದ ಬರುವ ಹೊತ್ತಿಗಾಗಗೇ ನೂರು ಇದ್ದುದು ನೂರಾ ಒಂದು ಆಗಿಹೋಗಿತ್ತು. ಅಲ್ಲದೇ, ಇಂದು ಎಂಪ್ಲಾಯ್‌ಮೆಂಟ್ ಅವಕಾಶಗಳಿಗಾಗಿ ನಿಂತ ಒಂದು ಗುಂಪನ್ನು ಗುರಿಪಡಿಸಿ ಗಾರ್‌ಬೇಜ್‌ ಕ್ಯಾನ್ ನಲ್ಲಿ ತುಂಬಿ ಸಿಡಿಸಿದ ಬಾಂಬ್ ಒಂದು ಸುಮಾರು ಮೂವತ್ತು ಜನಗಳಿಗೂ ಅಧಿಕ ಜನ ಇರಾಕ್ ನಾಗರಿಕರನ್ನು ಬಲಿತೆಗೆದುಕೊಂಡಿತು. ಹೀಗೆ ದಿನವೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯುವ ಇರಾಕ್ ನಾಗರಿಕರ ಸಂಖ್ಯೆಯನ್ನು ಕೇಳೋದಕ್ಕೆ ನಮಗೆ ಹೆಚ್ಚು ಅವಕಾಶಗಳಿರಲಾರವು, ಆದರೆ ಇರಾಕ್‌ನಲ್ಲಿ ಸತ್ತ ಪ್ರತಿಯೊಬ್ಬ ಅಮೇರಿಕನ್ ಸೈನಿಕನ ಲೆಕ್ಕ ಎಲ್ಲರಿಗೂ ಇರುತ್ತದೆ.

ಸಹಜವಾಗಿ ದೊರೆಯೋ ಕುಡಿಯುವ ಹಾಗೂ ಬಳಸುವ ನೀರಿನ ಪ್ರಾಮುಖ್ಯತೆ ಇತ್ತೀಚಿಗೆ ಹೆಚ್ಚಿನ ಜನರನ್ನು ತಟ್ಟಿದಂತಿದೆ. ಹೆಚ್ಚುತ್ತಿರುವ ನೀರಿನ ಬಳಕೆ ಹಾಗೂ ಬಳಸಿದ ನೀರಿನಲ್ಲಿ ಮಲಿನಗಳನ್ನು ಹೆಚ್ಚು ಹೆಚ್ಚಾಗಿ ಒಂದಲ್ಲ ಒಂದು ರೀತಿಯಿಂದ ಸೇರಿಸುತ್ತಿರುವುದು ಪ್ರತಿಯೊಬ್ಬರೂ ದಿನೇ ದಿನೇ ನೀರಿಗೋಸ್ಕರ ಹೆಚ್ಚು ಬೆಲೆಯನ್ನು ತೆರುವಂತೆ ಮಾಡಿದೆ. ಮೇಲೇರಿದ ಗ್ಯಾಸೋಲಿನ್ ಬೆಲೆ ಕಡಿಮೆಯಾದರೂ ಎಷ್ಟೋ ಜನ ಬಾಟಲಿ ನೀರೋ ಮತ್ತೊಂದರ ಹೆಸರಿನಲ್ಲಿ ಒಂದು ಲೀಟರ್ ನೀರೊಂದಕ್ಕೆ ಕೊಡುತ್ತಿರುವ ಬೆಲೆ ಒಂದು ಲೀಟರ್ ಗ್ಯಾಸೋಲಿನ್‌ಗಿಂತ ಅಧಿಕವಾಗಿ ಹೋಗುತ್ತದೆ. ಹೀಗೆ ನೈಸರ್ಗಿಕ ಸಂಪನ್ಮೂಲಗಳಲ್ಲೊಂದಾದ ನೀರನ್ನು ಉಳಿಸಿ, ಬೆಳೆಸಿ ಹಾಗೂ ಮಿತವಾಗಿ ಬಳಸದೇ ಇದ್ದರೆ ಎಲ್ಲ ಲೆಕ್ಕಗಳೂ ಅಡಿಮೇಲಾಗಿ ನೀರಿಗಾಗಿ ಹಾಹಾಕಾರ ಶುರುವಾದೀತು.

ಒಂದು ಪಕ್ಷದವರು ಮತ್ತೊಬ್ಬರನ್ನು ಆಡಿಕೊಂಡು ಎಲೆಕ್ಷನ್ ಗೆಲ್ಲುವ ಆಲೋಚನೆಯನ್ನು ಮುಂದಿಟ್ಟುಕೊಂಡು ಬೇಕಾದ ಅಂಕಿ-ಅಂಶಗಳನ್ನು ಮಾತ್ರ ಹೊರಗೆ ಹಾಕೋ ಇಲ್ಲಿನ ರಾಜಕಾರಣಿಗಳಲ್ಲಿ ಸಾಕಷ್ಟು ಬುದ್ಧಿವಂತಿಕೆಯಿದೆ, ಆದರೂ ಅವರ ಲೆಕ್ಕ ಎಲ್ಲೋ ತಪ್ಪಿದೆ ಎಂದು ಅನೇಕ ಮತದಾರರ ಒಳಮನಸ್ಸಿನ ತುಡಿತ. ರಾಜಕಾರಣಿಗಳು ಯಾವದೇಶದವರಾದರೂ ಒಂದೇ, ಅಂತೆಯೇ ಅವರ ಮತದಾರ ಕೂಡ. ಒಟ್ಟಿನಲ್ಲಿ ತಪ್ಪಿದ ಲೆಕ್ಕವನ್ನು ಹೆಚ್ಚು ಹೆಚ್ಚು ದೊಡ್ಡದಾಗಿ ಮಾಡಿ ಅದನ್ನೇ ಮುಂದಿಟ್ಟುಕೊಂಡು ವಾದ ಮಾಡಿದರೆ ತಪ್ಪೇ ಸರಿಯಾಗಿ ಬಿಡಬಹುದಾದ ವಿಪರ್ಯಾಸದ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಅಥವಾ ಈಗಾಗಲೇ ಹಾಗಾಗಿ ಬಿಟ್ಟಿದೆ!

Sunday, October 29, 2006

ಓದಿ, ಬರೆದು, ಮಾತನಾಡುವ ಅನಿವಾರ್ಯತೆ

ಯಾವುದೇ ಒಂದು ಹವ್ಯಾಸ ಬೆಳೆಯೋದಕ್ಕೆ ಕೊನೆಪಕ್ಷ ಏನಿಲ್ಲವೆಂದರೂ ಇಪ್ಪತ್ತೊಂದು ದಿನಗಳು ಬೇಕಾಗುತ್ತವಂತೆ, ಹೀಗೆ ದಿನಾಲು ಬರೆಯಬೇಕು ಎನ್ನೋದು ನನಗೂ ಒಂದು ಹವ್ಯಾಸವಾಗಿ ಬೆಳೆಯಬೇಕಾದರೆ ನನಗಂತೂ ತಿಂಗಳುಗಳೇ ಬೇಕಾದವು. ನಾಗಾಲೋಟದಲ್ಲಿ ಓಡೋ ಮನಸ್ಸು ಒಂದುಕಡೆ, ನಿಧಾನವಾಗಿ ಓಡೋ ಕೈ ಬೆರಳುಗಳು ಮತ್ತೊಂದು ಕಡೆ; ನಮ್ಮ ಸುತ್ತಲೂ ಇಂಗ್ಲೀಷ್‌ಮಯವಾಗಿರೋದು ಒಂದುಕಡೆ, ಇರೋ ಒಂದಿಷ್ಟು ಕನ್ನಡ ಪದಗಳೂ ನಿಧಾನವಾಗಿ ಆವಿಯಾಗ್ತಾ ಇರೋ ಸಂಕಟ ಮತ್ತೊಂದು ಕಡೆ. ಹೀಗೆ ಹಲವಾರು ವ್ಯತ್ಯಾಸಗಳ ನಡುವೆಯೂ ಇಷ್ಟೊಂದು ದಿನ ಏನಾದರೊಂದು ಬರೆದದ್ದಾಯಿತು ಎಂದು ಒಂದಿಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡರೆ ಯೋಚನೆಗಳು ಯಾಚನೆಗಳಾಗಿ ಕಾಡತೊಡಗಿದವು. ಮನಸ್ಸಿಗೆ ಅನ್ನಿಸಿದ್ದನ್ನು ಎಷ್ಟು ನಿಧಾನವಾಗಿಯಾದರೂ ಆಗಲಿ, ಎಷ್ಟು ತಡವಾಗಿಯಾದರೂ ಆಗಲಿ ಬರೆದೇ ತೀರಬೇಕು ಎಂದು ಹಟ ತೊಟ್ಟಿರುವವರಲ್ಲಿ ನಾನೂ ಒಬ್ಬ. ಒಂದು ರೀತಿ ಹೊರಗಿನ ಆಗುಹೋಗುಗಳಿಗೆ ಪ್ರತಿಯೊಬ್ಬರೂ ಸ್ಪಂದಿಸುತ್ತಾರೆ, ನನ್ನ ಸ್ಪಂದನ ಈ ರೀತಿ ಬರಹದ ಮೂಲಕವಾದರೂ ಇರಲಿ ಎನ್ನೋದು ದೂರದಾಸೆ.

ಇತ್ತೀಚೆಗಂತೂ ನನ್ನೊಳಗೆ ಇನ್ನೊಂದು ರೀತಿಯ ಗೊಣಗಾಟ ಆರಂಭವಾಗಿದೆ - ಯಾರೇ ಕನ್ನಡಿಗರು ಸಿಕ್ಕರೂ ನಮ್ಮ ನಡುವಿನ ಸಂಭಾಷಣೆ ಹೆಚ್ಚೂ ಕಡಿಮೆ ಇಂಗ್ಲೀಷಿನಲ್ಲೇ ನಡೆಯೋದು. ಇದನ್ನು ಸ್ವಲ್ಪ ಬಿಡಿಸಿ ನೋಡಿದಾಗ ಎರಡು ಅಂಶಗಳು ಸ್ಪಷ್ಟವಾದವು: ಒಂದು, ನನಗೆ ದೊರೆಯುವ ಕನ್ನಡಿಗರು ನನ್ನ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಲಾರದವರು, ಮತ್ತಿನ್ನೊಂದಿಷ್ಟು ಮಂದಿ ಹೇಳೋದಕ್ಕೆ ಮಾತ್ರ ಕನ್ನಡಿಗರು, ಮಿಕ್ಕೆಲ್ಲದಕ್ಕೂ ಇಂಗ್ಲೀಷನ್ನೇ ಆಧರಿಕೊಂಡಿರುವವರು. ಎಲ್ಲೋ ಅಪರೂಪಕ್ಕೆ ಸಭ್ಯ ಕನ್ನಡಿಗರು ಸಿಗುತ್ತಾರೆಂದರೆ ಅಂದು ಒಂದು ರೀತಿಯ ಹಬ್ಬದೂಟವಿದ್ದ ಹಾಗೆ, ಆ ರೀತಿಯ ಅವಕಾಶಗಳು ಬರೋದು ಕಡಿಮೆ, ಬಂದಾಗಲೆಲ್ಲ ಮನಬಿಚ್ಚಿ ಘಂಟೆಗಟ್ಟಲೆ ಹರಟಿ, ಕಥೆ ಹೊಡೆದದ್ದು ಇದ್ದೇ ಇದೆ. ನಾವು ಇಲ್ಲಿಗೆ ಬಂದು ಎಷ್ಟೇ ಕನ್ನಡ ಸಂಘಗಳನ್ನು ಯಾವುಯಾವುದೋ ಕಾರಣಗಳಿಗಾಗಿ ಕಟ್ಟಿಕೊಂಡರೂ, ಒಂದು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕನ್ನಡದಲ್ಲೇ ನಡೆಸಿಕೊಡಲಾಗದವರು, ಒಂದು ವೇಳೆ ಹಾಗೇನಾದರೂ ಪ್ರಯತ್ನಿಸಿದರೂ ನಮ್ಮ ಮಾತುಗಳಲ್ಲಿ ಇಂಗ್ಲೀಷ್ ಪದಗಳು ನುಸುಳಿಯೋ ಅಥವಾ ಪೂರ್ಣ ವಾಕ್ಯವೇ ಇಂಗ್ಲೀಷಿನಲ್ಲಿರುವುದೇ ಸಹಜವಾಗುತ್ತೆ. ಒಮ್ಮೊಮ್ಮೆ ಹೀಗೆ ಆಗುವುದು, ಆಗುತ್ತಿರುವುದು ಸರಿಯಲ್ಲವೇ ಎಂದು ಯೋಚಿಸುತ್ತೇನೆ - ಉದಾಹರಣೆಗೆ ಐವತ್ತು ವರ್ಷಗಳ ಹಿಂದೆ ಕನ್ನಡವನ್ನು ಮಾತನಾಡುತ್ತಿದ್ದವರು, ಬರೆಯುತ್ತಿದ್ದವರು ತಮ್ಮ ಮಾತು/ಬರವಣಿಗೆಗಳಲ್ಲಿ ಸಂಸ್ಕೃತದ ಪದಗಳನ್ನು ಧಾರಾಳವಾಗಿ ಬಳಸುತ್ತಿರಲಿಲ್ಲವೇ? ಆಗ ಬಳಸುತ್ತಿದ್ದ ಸಂಸ್ಕೃತ ಪದಗಳಿಗೆ ಇಂದು ನಾವು ಇಂಗ್ಲೀಷ್ ಪದಗಳನ್ನು ಬಳಸಿದರೆ ತಪ್ಪೇನು? 'ನಮ್ಮ ಕಂಪ್ಯೂಟರ್ ಕೆಟ್ಟು ಹೋಗಿದೆ' ಎನ್ನುವ ವಾಕ್ಯವನ್ನು 'ನಮ್ಮ ಗಣಕಯಂತ್ರ ಕೆಟ್ಟುಹೋಗಿದೆ' ಎಂದೂ ಹೇಳಬಹುದು ಆದರೆ ಮೊದಲಿನ ವಾಕ್ಯ ಹೆಚ್ಚು ಜನರಿಗೆ ಅರ್ಥವಾಗುವುದರ ಜೊತೆಗೆ ಮೊದಲಿನ ವಾಕ್ಯದಲ್ಲಿ ಬಳಸುವ 'ಗಣಕಯಂತ್ರ' ಪದದ ಬಳಕೆ ಅಸಹಜ ಎನ್ನಿಸೋದಿಲ್ಲ. ಹಿಂದೆಲ್ಲಾ ಕೊಂಬುಕೊಟ್ಟು ಕನ್ನಡಕ್ಕೆ ತರುತ್ತಿದ್ದ ಪದಗಳನ್ನು (ಉದಾಹರಣೆಗೆ: ಬಸ್ - ಬಸ್ಸು, ಟೇಬಲ್ - ಟೇಬಲ್ಲು, ಚೇರ್ - ಚೇರು, ಇತ್ಯಾದಿ) ಯಥೇಚ್ಛವಾಗಿ ಬಳಸುತ್ತಿದ್ದ ಕಾಲದಲ್ಲಿ ಎಷ್ಟೇ ಪ್ರತಿರೋಧವಿದ್ದರೂ ಅದನ್ನು ತಡೆಯಲಾಗಲಿಲ್ಲ, ಬಂಡಿ, ಮೇಜು, ಕುರ್ಚಿ ಮೊದಲಾದ ಪದಗಳ ಬಳಕೆ ನಿಧಾನವಾಗಿ ಮರೆಯಾಗುತ್ತಿದೆ, ಅವುಗಳ ಸ್ಥಳದಲ್ಲಿ ಅನ್ಯದೇಶೀಯ ಪದಗಳು ಆಕ್ರಮಿಸಿಕೊಳ್ಳುತ್ತಿವೆ ಎಂದು ಸುಲಭವಾಗಿ ಹೇಳಬಹುದಾದರೂ, ಈ ಬಗೆಗೆ ನಿರ್ಧಾರಪೂರ್ವಕವಾಗಿ ಹೇಳಲು ಭಾಷಾತಜ್ಞರನ್ನೇ ಆದರಿಸಬೇಕಾದೀತು.

ಮಾತಿನ ಬಗೆಗೆ ಹೇಳುವ ಹೊತ್ತಿಗೆ ಬರವಣಿಗೆ ಹಾಗೂ ಓದಿನ ಬಗ್ಗೆ ಹೇಳದಿದ್ದರೆ ಹೇಗೆ? ನನ್ನ ಹಾಗೆ ಕಂಪ್ಯೂಟರ್ ಬಳಸಿ ಕನ್ನಡವನ್ನು ಬರೆದು ಓದಬಲ್ಲವರದೆಲ್ಲಾ ಒಂದೇ ಹಾಡು - ಬರವಣಿಗೆ ನಿಧಾನ, ಅದರ ಜೊತೆಗೆ ಓದುವುದಕ್ಕೆ ಸಿಗುವ ವಸ್ತುಗಳೂ ಅತಿಕಡಿಮೆಯೇ. ಹಾಸ್ಯವಾಗಲೀ, ಗಂಭೀರ ವಿಷಯಗಳಾಗಲೀ ಯಾವುದನ್ನು ತೆಗೆದುಕೊಂಡರೂ ಅಂತರ್ಜಾಲದಲ್ಲಿ ಸಿಗುವ ವಸ್ತುಗಳು ಕಡಿಮೆಯೇ ಎನ್ನಬೇಕು. ಹಿಂದೆಲ್ಲಾ ಬಿಡುವಿನಲ್ಲಿ ಓದುತ್ತಿದ್ದ ಪುಸ್ತಕ, ಪತ್ರಿಕೆಗಳು ಇಂದು ಕೆಲಸದ ಮಧ್ಯೆಯೇ ತಮ್ಮನ್ನು ಓದಿಸಿಕೊಂಡುಹೋಗುತ್ತವೆ. ಓದುಗರ ಅಟೆಂಷನ್ ಸ್ಪ್ಯಾನ್ ಕಡಿಮೆ, ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚನ್ನು ಓದುವ ಕಾರ್ಯತತ್ಪರತೆ ಎಲ್ಲರದೂ. ಹಲವಾರು ಸಂಸ್ಥೆಗಳು ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಪ್ರಕಟಿಸುವ ಮಹಾಕಾರ್ಯವನ್ನು ಮಾಡುತ್ತಿದ್ದರೂ ಪುಸ್ತಕ/ಪೇಪರ್ ಮಾಧ್ಯಮದಲ್ಲಿ ಓದುತ್ತಿರುವ ಸಂವೇದಿಸುತ್ತಿರುವ ಕನ್ನಡಿಗರಿಗೂ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ ಕನ್ನಡವನ್ನು ಓದುವ ನನ್ನಂಥವರಿಗೂ ನಡುವೆ ದೊಡ್ಡ ಕಂದಕವೇ ಇದೆ. 'ದೂರದಲ್ಲಿರೋ ನಿಮಗ್ಗೊತ್ತಾಗಲ್ಲ' ಅನ್ನೋದು ನಾನು ಒಡನಾಡುವ ಪೇಪರ್/ಪುಸ್ತಕ ಓದುಗರ ಅಂಬೋಣ, ಅವರಿಗೆಲ್ಲ ನನ್ನಂತಹ ಓದುಗರು ಹೈಟೆಕ್ ಓದುಗರಾಗಿ ಕಂಡುಬರುತ್ತಾರೆಯೇ ವಿನಾ ಹೆಚ್ಚು ಆಳವನ್ನು ಶೋಧಿಸುವವರಾಗಿಯಾಗಲೀ, ವಿಷಯಗಳಿಗೆ ಒತ್ತುಕೊಟ್ಟು ನೋಡುವವರಾಗಿಯಾಗಲೀ ಖಂಡಿತವಾಗಿ ಕಂಡುಬರೋದಿಲ್ಲ. ಅಲ್ಲಿಯ ಮಾಧ್ಯಮಗಳು ಒಂದೇ ಹಗುರವಾಗಿ ಕಂಡೋ ಅಥವಾ ಅಲ್ಲಿ ಪ್ರಕಟವಾದ ವರದಿಗಳು ನಮ್ಮ ಎತ್ತರಕ್ಕೆ ನಿಲುಕದವುಗಳು ಎಂದುಕೊಂಡೋ ಸುಮ್ಮನಿದ್ದರೆ, ಇಲ್ಲಿನ ಆಗುಹೋಗುಗಳಿಗೆ, ಸಂವೇದನಗಳಿಗೆ ಕನ್ನಡೇತರ ಮಾಧ್ಯಮಗಳಿಗೆ ಶರಣುಹೋಗುವುದು ಅನಿವಾರ್ಯವಾಗುತ್ತದೆ. ಹೀಗೆ ಕನ್ನಡೇತರ ಮಾಧ್ಯಮಗಳ ಸಾಂಗತ್ಯದಲ್ಲಿ ಹುಟ್ಟುವ ನಮ್ಮ ಆಲೋಚನೆಗಳನ್ನು ಕನ್ನಡದಲ್ಲಿ ಬರೆದುಕೊಂಡು ಹೋಗುವುದಕ್ಕೆ ತಿಣುಕಾಡಬೇಕಾಗುತ್ತದೆ.

ಓದು, ಓದಿನ ವೇಗ, ಬರವಣಿಗೆ, ಬರೆಯುವ ಶೈಲಿ ಇವುಗಳು ಕಾಲಕ್ರಮೇಣ ಬದಲಾಗುವಂತೆ, ಒಂದು ಭಾಷೆಯನ್ನು ಬಹಳ ದಿನ/ವರ್ಷಗಳ ಆಡದೇ ಹೋದರೆ ಪದಸಂಪತ್ತಿನ ದೃಷ್ಟಿಯಿಂದ ಮರೆಯಾಗಿಹೋಗಬಹುದು. ಬೇರೆ ಯಾರಾದರೂ ಮಾತನಾಡಿದಾಗ ಆಯಾ ಪದಗಳು ನಮ್ಮ ಮನಸ್ಸಿನಲ್ಲಿ ಮರುಕಳಿಸಿದರೂ ನಾವು ಅವೇ ಪದಗಳನ್ನು ಬಳಸಿ ಹೊಸ ವಾಕ್ಯಗಳನ್ನು ಸಂಭಾಷಣೆಯ ಅಂಗವಾಗಿ ಹೊಸದಾಗಿ ಹುಟ್ಟಿಸಬೇಕಾದಲ್ಲಿ ಕಷ್ಟಪಡಬೇಕಾಗುತ್ತದೆ. ಈ ರೀತಿಯ ಹಲವಾರು ವರ್ಷಗಳ ಭಾಷಾ ಬವಣೆಯೇ ಹೊರನಾಡ ಕನ್ನಡಿಗರು ಕನ್ನಡವನ್ನು ಹೆಚ್ಚು ಹೆಚ್ಚು ತಮ್ಮ ಮಾತಿನಲ್ಲಿ ಬಳಸದಿರುವಂತೆ ಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ವಿದೇಶಕ್ಕೆ ಹೋಗಿ ಇಪ್ಪತ್ತು ವರ್ಷ ಕಳೆದವರೆಲ್ಲ ಬರೀ ಹಮ್ಮು-ಬಿಮ್ಮು ಎಂಬ ಕಾರಣಕ್ಕೆ ಮಾತಿನುದ್ದಕ್ಕೂ ಇಂಗ್ಲೀಷನ್ನೇ ಮಾತನಾಡಲಾರರು, ಹಾಗೆ ಮಾತನಾಡುವುದು ವರ್ಷಾನುಗಟ್ಟಲೆ ಹಾಗೆ ಮಾಡಿದ ಅವರಿಗೆ ಸಹಜ, ಅದು ಬೇರೊಂದು ನೆಲೆಗಟ್ಟಿನಿಂದ ನಿಂತು ನೋಡಿದಾಗ ಕೃತಕವಾಗಿ ಕಂಡುಬರಬಹುದು. ನಮ್ಮತನವನ್ನು ನಾವು ಉಳಿಸಿ, ಬೆಳೆಸಿ, ರೂಢಿಸಿಕೊಂಡು ಹೋಗುವಲ್ಲಿ ಸ್ವಲ್ಪ ಮೊಂಡುತನ ಹಾಗೂ ನಮ್ಮದು ಎನ್ನುವ ಭಾವೋದ್ವೇಗ ಅನಿವಾರ್ಯ, ನಮಗೂ ನಮ್ಮ ಭಾಷೆಗೂ ಒಂದು ರೀತಿಯ ಸಂಬಂಧ ಬೆಳೆದರೆ ಮಾತ್ರ ನಮ್ಮ ಭಾಷೆ ನಮ್ಮಲ್ಲಿ ಉಳಿಯುತ್ತದೆಯೇ ವಿನಾ ಹೋದಲ್ಲಿ ಬಂದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೆರೆದುಕೊಂಡು ಅಲ್ಲಿಯವರೊಳಗೊಂದಾಗಿ ಹೋಗುತ್ತೇವೆ ಎಂದುಕೊಂಡವರಲ್ಲಿ ಭಾಷೆ ಉಳಿಯುವುದು ಕಡಿಮೆ.

ಇತ್ತೀಚೆಗೆ ಡಿ. ಆರ್. ನಾಗರಾಜ್ ಅವರ ಬರಹಗಳಿಂದ ಪ್ರಭಾವಿತನಾದ ನಾನು ಹಲವಾರು ಕೃತಿಗಳನ್ನು ಓದಿ, ಒಂದು ಉತ್ತಮ ಲೇಖನವನ್ನು ಬರೆಯುವುದು ಎಷ್ಟು ಕಷ್ಟ ಎಂಬುದನ್ನು ಅರಿತುಕೊಂಡಿದ್ದೇನೆ. ತಾವು ಓದಿದ ಪ್ರತಿಯೊಂದು ಕೃತಿಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುವುದೂ ಅಲ್ಲದೇ ಮುಂದೆ ತಾವು ಓದಿ, ಅದರ ಬಗ್ಗೆ ಬರೆಯುತ್ತಿರುವಾಗ ಪರಾಮರ್ಶೆಯ ರೂಪದಲ್ಲೋ ಅಥವಾ ತುಲನಾತ್ಮಕವಾಗಿಯೋ ಇತರ ಕೃತಿ-ಕರ್ತೃಗಳನ್ನು ನೆನೆದು ಅವುಗಳನ್ನು ಅಲ್ಲಲ್ಲಿ ಗುರುತಿಸಿಕೊಳ್ಳುವುದು ವಿಶ್ವವಿದ್ಯಾನಿಲಯದ ಪ್ರಾಂಗಣದಲ್ಲಿ ಮಾಮೂಲಿಯಾಗಿ ಕಂಡುಬರಬಹುದು, ಆದರೆ ನನ್ನಂತಹ ಸಾಮಾನ್ಯ ಓದುಗರಿಗೆ ಬಹಳ ಹೆಚ್ಚಿನದಾಗುತ್ತದೆ. ಇಂತಹ ಪ್ರೌಢ ಪ್ರಬಂಧಗಳು ಹೆಚ್ಚು ಹೆಚ್ಚು ಬಂದಲ್ಲಿ, ಅವುಗಳನ್ನು ವಿವರವಾಗಿ ಓದಿ, ಅವುಗಳಲ್ಲಿ ಹುದುಗಿರುವ ಪರಾಮರ್ಶೆಗಳನ್ನು ಹುಡುಕಿ ತೆಗೆದು ಪುಟಗಳನ್ನು ತಿರುವಿಹಾಕಿದಲ್ಲಿ ಅಂತಹ ಪ್ರಯತ್ನ ಬಹಳ ಹೆಚ್ಚಿನ ಮೌಲ್ಯವನ್ನು ದೊರಕಿಸಿಕೊಡುವುದರಲ್ಲಿ ಯಾವುದೇ ಸಂಶಯವಂತೂ ಇಲ್ಲ. ಹೀಗೆ ಹೆಚ್ಚು ಪ್ರೌಢ ಪ್ರಬಂಧಗಳನ್ನಾಗಲೀ, ಬರಹಗಳನ್ನಾಗಲೀ ಹುಡುಕಿಕೊಂಡಲೆಯುವ ನನ್ನಂತಹವರಿಗೆ ಅಂತರ್ಜಾಲದಲ್ಲಿ ಸಾಕಷ್ಟು ಅಡೆತಡೆಗಳು ಹುಟ್ಟಿಬರುತ್ತವೆ. ಇವುಗಳನ್ನೆಲ್ಲ ಮೀರಿ ಓದುಗರ ಒಂದು ಗುಂಪೋ, ಅಥವಾ ಇಂತಹ ಸಮಾನ ಮನಸ್ಕರ ಜೊತೆಗೆ ಬೆರೆಯೋಣವೆಂದರೆ ಅಲ್ಲೂ ತೊಂದರೆಗಳು ಹಲವಾರು.

ಈ ರೀತಿಯ ಓದು ಕನ್ನಡಕ್ಕೇ ಸ್ಥೀಮಿತವಾಗಬೇಕೆಂದೇನೂ ಇಲ್ಲ, ಆದರೆ ಕನ್ನಡದಲ್ಲಿ ಓದಿ, ಬರೆದು ಮಾತನಾಡಿದಾಗ ಸಿಗುವ ಖುಷಿ ನನಗಂತೂ ಬೇರೆ ಇನ್ಯಾವ ಭಾಷೆಯಲ್ಲೂ ದೊರೆಯದಾದ್ದರಿಂದ ನನ್ನ ಓದು ಅಥವಾ ಅದರ ಮಿತಿ ಹೆಚ್ಚು ಹೆಚ್ಚು ಕನ್ನಡದ ಸುತ್ತಲೇ ಗಿರಿಕಿ ಹೊಡೆಯತೊಡಗುತ್ತದೆ, ಬೇಡವೆಂದರೂ ಸುತ್ತಲಿನಲ್ಲಿ ನನ್ನ ಕಿವಿ-ಕಣ್ಣುಗಳನ್ನು ತುಂಬುವ ಇಂಗ್ಲೀಷು ಅದರಷ್ಟಕ್ಕೆ ಅದು ಮಾಹಿತಿಯನ್ನೊದಗಿಸುವ ಕೆಲಸವನ್ನು ಮಾಡುತ್ತಲೇ ಇರುವುದು ದಿನನಿತ್ಯದ ಭಾಗವಾಗಿ ಹೋಗಿಬಿಟ್ಟಿದೆ.

Tuesday, October 24, 2006

'ಬಡವರ ಬಂಧು'ವಿನ ನೆನಪು

ಸಿನಿಮಾ ಬಿಡುಗಡೆಯಾಗಿ ಮೂವತ್ತು ವರ್ಷಗಳು ಆದವು ಎಂದು ನನಗನ್ನಿಸಿದ್ದು ಈ ದಿನ ಇಂಟರ್‌ನೆಟ್‌ನಲ್ಲಿ ಇದರ ಬಗ್ಗೆ ಹುಡುಕಿದಾಗಲೇ! ನಾನು ಈ ಸಿನಿಮಾವನ್ನು ನೋಡಿ ಕೊನೇಪಕ್ಷ ಒಂದಿಪ್ಪತ್ತು ವರ್ಷಗಳಾದರೂ ಕಳೆದಿರಬೇಕು, ಆದರೆ ಈ ಸಿನಿಮಾದ ಹೆಚ್ಚೂ ಕಡಿಮೆ ಎಲ್ಲಾ ಹಾಡುಗಳೂ, ಮುಖ್ಯವಾದ ಸೀನುಗಳು, ಪಾತ್ರಗಳು ಎಲ್ಲಾ ಚೆನ್ನಾಗಿ ಜ್ಞಾಪಕದಲ್ಲಿವೆ, ಹೇಗೆ ಮತ್ತೆ ಏಕೆ ಅನ್ನೋದೇ ಆಶ್ಚರ್ಯ.

ಹಳ್ಳಿಯಲ್ಲಿ ಕನ್ನಡಿಗನಾಗಿ ಹುಟ್ಟಿದ ಭಾಗ್ಯಕ್ಕೆ ನನಗೆ ಇಂಗ್ಲೀಷ್ ಪರಿಚಯವಾದದ್ದೇ ಐದನೇ ತರಗತಿಯಿಂದ, ಅಂದಿನಿಂದ ಇಂದಿನವರೆಗೂ ಅದು ನನ್ನ ಹೃದಯದಲ್ಲಿರೋ ಕನ್ನಡದ ಸ್ಥಾನವನ್ನು ಕಿತ್ತುಕೊಳ್ಳಲು ಹೋರಾಟ ನಡೆಸುತ್ತಲೇ ಇದೆ, ಆದ್ರೆ ಅದು ಎಂದಿಗೂ ಸಾಧ್ಯವಿಲ್ಲ ಅನ್ನೋದು ನನಗೂ ಚೆನ್ನಾಗಿ ಗೊತ್ತು, ಆದರೆ ನನಗೆ ಬರೋ ಇಂಗ್ಲೀಷಿಗೆ ಗೊತ್ತಿಲ್ಲ. ಎಷ್ಟೋ ಸಾರಿ ಬಾಯಿ ತುಂಬಾ ಅರಳು ಹುರಿದ ಹಾಗೆ ಇಂಗ್ಲೀಷನ್ನು ಗೊಣಗೋ ಪೇಟೆ ಹುಡುಗ್ರನ್ನ ನೋಡಿ ನನಗೂ ಅವರ ಥರಾ ಇಂಗ್ಲೀಷ್ ಬಂದಿದ್ರೆ ಅಂತ ಆರ್ತನಾಗಿ ಕರಬಿದ್ದರಿಂದಲೋ ಏನೋ ಇಂಗ್ಲೀಷ್ ಮಾತನಾಡುವವರ ನಡುವೆ ವರ್ಷಾನುಗಟ್ಟಲೇ ಜೀವಿಸೋ ಹಾಗೆ ಆಗಿರೋದು ಎನ್ನೋದು ನಾನು ಹೇಳೋ ಚೀಪ್ ಜೋಕು!

ಕನ್ನಡದ ಸಿನಿಮಾದ ವ್ಯಾಪ್ತಿ ನನ್ನ ಕಣ್ಣಲ್ಲಿ ಇಷ್ಟೇ: ಹೀರೋ ಆದವನು ಸರ್ವಗುಣ ಸಂಪನ್ನ, ಹಾಡ್ತಾನೆ, ಕುಣೀತಾನೇ, ದುಷ್ಟರನ್ನ ಚಚ್ತಾನೆ, ಇತ್ಯಾದಿ. ಮೊದಲೆಲ್ಲ ಆಗಿದ್ರೆ 'ಮಿಲಿಯನ್ ಡಾಲರ್ ಬೇಬಿ' ಸಿನಿಮಾದ ಕ್ಲಿಂಟ್ ಈಸ್ಟ್‌ವುಡ್ ಆಗಲೀ 'As good as it gets' ಚಿತ್ರದ ಜಾಕ್ ನಿಕೋಲ್ಸನ್ ಆಗಲಿ ಅವರೆನ್ನೆಲ್ಲ ಹೀರೋಗಳು ಅಂತ ಒಪ್ಪಿಕೊಳ್ಳೋದಕ್ಕೆ ಸಾಧ್ಯವಿರಲಿಲ್ಲ. ನನ್ನ ಮನಸ್ಸಲ್ಲಿರೋ ಕಥಾನಾಯಕನ ವ್ಯಾಪ್ತಿಯನ್ನು ಆ ರೀತಿ ಅರಳಿಸಿದ್ದಕ್ಕೆ ಇಂಗ್ಲೀಷ್ ಸಾಹಿತ್ಯ, ಸಿನಿಮಾಗಳಿಗೆ ಧನ್ಯವಾದಗಳನ್ನ ಹೇಳಲೇ ಬೇಕು. After all, ಸಿನಿಮಾ ಬದುಕಿನ ಅಂಗವೇ ಹೊರತು ಬದುಕೇ ಸಿನಿಮಾ ಅಲ್ಲವಲ್ಲ.

ಯಾವು ಯಾವುದೋ ಇವೆಂಟುಗಳು ಟ್ರಿಗ್ಗರ್ ಆದ ಹಿನ್ನೆಲೆಯಲ್ಲಿ ಇವತ್ತು ಕಾರಲ್ಲಿ ಕುಳಿತುಕೊಂಡು ಗೊಣಗುತ್ತಾ ಹೋದೆ...

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪೂ ಮೂಡಿವೆ

ತಂದೆ-ಮಗನ ಪ್ರೀತಿ, ವಾತ್ಸಲ್ಯ ಅಂದ್ರೆ ಏನು ಅಂತ ತಿಳೀಬೇಕು ಅಂದ್ರೆ ಬಡವರ ಬಂಧು ಸಿನಿಮಾದ ಈ ಹಾಡಿನ ದೃಶ್ಯವನ್ನು ನೋಡಲೇಬೇಕು. ಪಾರ್ಶ್ವವಾಯು ಪೀಡಿತ ತಂದೆ (ಸಂಪತ್) ಹಾಗೂ ಮಗ (ರಾಜ್‌ಕುಮಾರ್) ಅಭಿನಯದಲ್ಲಿ ಮನಮೋಹಕವಾದ ಅಭಿನಯ ಎಂಥವರ ಕರಳನ್ನೂ ಕೀಚುತ್ತದೆ. ಸಂಪತ್ ಅವರ ಅಭಿನಯವನ್ನು ಪೋಷಕ ಪಾತ್ರಗಳಲ್ಲಿ, ಹೆಚ್ಚಿನದರಲ್ಲಿ ಸಿರಿವಂತನಾಗಿ ಅಥವಾ ಖಳನಾಯಕನಾಗಿ ನೋಡಿದ ಎಷ್ಟೋ ಜನರು ಸಂಪತ್ ಈ ರೀತಿ ಅಭಿನಯವನ್ನೂ ಮಾಡಬಲ್ಲರು ಎಂದುಕೊಂಡಿರಲಾರರು.

ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ
ಬಿಸಿಲು ಮಳೆಗೆ ನರಳದಂತೆ ನಿನ್ನ ನೆರಳಲಿ ಬೆಳೆಸಿದೆ
ಆ ಪ್ರೀತಿಯಾ ಮನ ಮರೆವುದೆ


ರಾಜ್‌ಕುಮಾರ್ ಸಹ ಮಗನ ಪಾತ್ರದಲ್ಲಿ ಸಿದ್ಧಹಸ್ತರು, ಅವರಿಗೆ ಹೇಳಿಕೊಡುವುದಕ್ಕೇನೂ ನಿರ್ದೇಶಕರಿಗೆ ಇದ್ದಿರಲಾರದು. ಸಂಪತ್ ಪಾದಗಳನ್ನು ತೊಳೆದು, ಮೈ ಕೈ ನೀವಿ, ಒರೆಸಿ, ಕುರ್ಚಿಯಲ್ಲಿ ಕುಳ್ಳಿರಿಸಿ ಹಿಂದಿನಿಂದ ತಬ್ಬಿಕೊಂಡು ರಾಜ್ ನಿಂತ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದಿದೆ.

ಬಳ್ಳಿಯಂತೆ ಹಬ್ಬಿ ನಿನ್ನ ಆಸರೆಯಲಿ ಬೆಳೆದೆನು
ನನ್ನ ತಾಯಿಯ ಪಾದದಾಣೆ ಬೇರೆ ಏನನು ಆರಿಯೆನು
ನೀನೆ ನನ್ನಾ ದೇವನು

ತಂದೆಗೆ ಮಗನ ಆಸರೆ, ಮಗನಿಗೆ ತಂದೆಯ ಆಸರೆ, ತಲೆಯ ಮೇಲೊಂದು ಪುಟ್ಟ ಸೂರು. ಹೊಟೇಲಿನಲ್ಲಿ ಸಪ್ಲೈಯರ್ ಆಗಿ ದುಡಿದು ಬಂದ ಹಣದಲ್ಲಿ ಜೀವನ ಸಾಗಿಸಬೇಕು. ಮನೆಯ ಚಿತ್ರಣವೂ ಬಹಳ ಸರಳ. ಇಂತಹ ಹಿನ್ನೆಲೆಗೆ ಕವಿ ಕೊಡುವ ಸರಳ 'ಬಳ್ಳಿಯಂತೆ...'ಚಿತ್ರಣ ಹಾಗೂ ಈ ಅಪರಿಮಿತ ಪ್ರೇಮವನ್ನು ಬೆಲೆಕಟ್ಟಲಾಗದ 'ತಾಯಿಯ ಪಾದದ ಆಣೆ'ಯ ಸಹಾಯದಲ್ಲಿ ತಿಳಿಸಿ ಹೇಳುವ ಹಂಬಲ.

ನೀನು ನಕ್ಕರೆ ನಾನು ನಗುವೆನು, ಅತ್ತರೇ ನಾ ಆಳುವೆನು
ನಿನ್ನ ಉಸಿರಲಿ ಉಸಿರು ಬೆರೆತಿದೆ ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೆ ಬದುಕೆನು

ಮಗನ ಸೇವೆ ಹಾಗೂ ಅಗಲಿದ ಪತ್ನಿಯ ನೆನಪಿನಲ್ಲಿ ಸಂಪತ್ ಕಂಗಳಲ್ಲಾಗಲೇ ಹನಿಗೂಡಿರುತ್ತದೆ, ಅದನ್ನ ನೆನೆದು ಕವಿ ಬರೆದ 'ನಕ್ಕು-ಅಳುವ' ಸಾಲುಗಳು ಬಹಳ ಹಿಡಿಸಿದವು. ಹೀಗೆ ತಂದೆ-ಮಗನ ಪ್ರೇಮವೂ ಇದೆ ಎಂಬುದನ್ನು ತೋರಿಸಿಕೊಟ್ಟಿರುವ ಚಿತ್ರದ ಸನ್ನಿವೇಶ ಹಾಗೂ ಅದಕ್ಕೆ ತಕ್ಕ ಹಾಡು, ಸಂಗೀತ ಹೆಚ್ಚು ಚಿತ್ರಗಳಲ್ಲಿ ಬಂದಿರಲಿಕ್ಕಿಲ್ಲ.

ಇದೊಂದು ಸಿನಿಮಾದ ಸಂಭಾಷಣೆ, ಸಂಗೀತ, ಹಾಗೂ ಹಾಡುಗಳ ಲಹರಿಯೇ 'ರಂಗಾರಾವ್-ಉದಯಶಂಕರ್' ಹಲವಾರು ಫ್ಯಾನ್‌ಗಳನ್ನು ಹುಟ್ಟಿಸಿದೆ, ಅವರಲ್ಲಿ ನಾನೂ ಒಬ್ಬ. ಹೀಗೆ ದಿಢೀರನೆ ಹಾಡು ನೆನಪಾಗಿ, ಸಂಪತ್-ರಾಜ್‌ಕುಮಾರ್ ಪಾತ್ರಗಳನ್ನು ಯೋಚಿಸುತ್ತಾ ಬರುತ್ತಿದ್ದ ಹಾಗೆ ಮನೆ ಬಂದು ತಲುಪಿದೆ. ಕೊನೇಪಕ್ಷ ಉದಯ ಟಿವಿ ಇದ್ದೋರ ಮನೆಯಲ್ಲಾದರೂ ಅಪರೂಪಕ್ಕೆ ಈ ರೀತಿಯ ಹಾಡುಗಳು ಬರುತ್ತವೆಯೋ ಏನೋ ನಮ್ಮನೆಯಲ್ಲಿ ಸಧ್ಯಕ್ಕೆ ತಲೆಯಲ್ಲಿ ತುಂಬಿಕೊಂಡ ಸಾಲುಗಳನ್ನು, ದೃಶ್ಯಸರಣಿಗಳನ್ನು ನೆನಪಿಸಿಕೊಂಡು ಖುಷಿಪಡಬೇಕಷ್ಟೇ.

***

ಒಂದು ರೀತಿಯಲ್ಲಿ ನಾನು ಸಿನಿಮಾ ನೋಡೋದು ಒಳ್ಳೆಯದೇ, ಯಾಕೆಂದ್ರೆ ಯಾವುದೇ ಕಾದಂಬರಿ ಆಧರಿಸಿದ ಸಿನಿಮಾ ಇದ್ರೆ, ಉತ್ತಮ ಕಥೆಯನ್ನ ಮೂಲವಾಗಿಟ್ಟುಕೊಂಡು ಸಿನಿಮಾವನ್ನು ಮಾಡಿದ್ರೆ ಅದನ್ನು ಓದಿ ಆಹ್ಲಾದಿಸೋ ಸುಖವೇ ಬೇರೆ, ಆದರೂ ಐನೂರು ಪುಟದ ಕಾದಂಬರಿಯನ್ನು ಎರಡೂವರೆ ಘಂಟೆಗಳಲ್ಲಂತೂ ಓದೋಕಾಗಲ್ಲವಲ್ಲ! ಒಂದು ಚಿತ್ರ ಸಾವಿರ ಪದಗಳನ್ನ ಹೇಳುತ್ತಂತೆ, ಅದಕ್ಕೇ ಒಂದು ಸಿನಿಮಾ ನೋಡಿ ಅದರ ಬಗ್ಗೆ ಪುರುಸೊತ್ತು ಸಿಕ್ಕಾಗೆಲ್ಲ ಚಿಂತನೆ ಮಾಡಿದ್ರೆ ಟೈಮಾದ್ರೂ ಪಾಸ್ ಆಗುತ್ತೆ. ಹಾಗೆ ಬೇಕಾದ್ರೆ ಇನ್ನೊಮ್ಮೆ ಅದೇ ಸಿನಿಮಾವನ್ನು ನೋಡಿದ್ರೆ ಆಯ್ತು! ಇಷ್ಟೊಂದು ಚಾನೆಲ್ಲುಗಳು ಇರೋವಾಗ ನಾನು ಅದೇ ತಾನೆ ರಿಲೀಸ್ ಆಗಿರೋ ಸಿನಿಮಾಗಳನ್ನು ಹುಡುಕಿಕೊಂಡು ಹೋಗಿ ನೋಡೋದು ಕಡಿಮೆ, ಯಾಕಂದ್ರೆ ಅದು ಉತ್ತಮ ಸಿನಿಮಾ ಆಗಿದ್ರೆ ಇವತ್ತಲ್ಲ ನಾಳೆ ನಾನು ಅದನ್ನ ನೋಡೇ ನೋಡ್ತೀನಿ ಅನ್ನೋದರಲ್ಲಿ ನನಗೆ ಅಪಾರವಾದ ವಿಶ್ವಾಸವಿದೆ. ಈ ಅರ್ಥದಲ್ಲೇ ನನಗೆ ಸಿನಿಮಾಗಳು ಅಂದ್ರೆ ಇಷ್ಟವಾಗಿದ್ದು ಅನ್ಸುತ್ತೆ - ಒಂದೊಂದ್ ಸಿನಿಮಾ ಒಂದೊಂದ್ ಕಾದಂಬರಿ ಅಂತ ಅಂದ್‌ಕೊಂಡ್ರೆ ನಾವೆಲ್ಲರೂ ನೋಡಿರಬಹುದಾದ ಸಿನಿಮಾಗಳನ್ನು ಲೆಕ್ಕ ಹಾಕಿದ್ರೆ ಬಹಳಷ್ಟಾಗೋದಿಲ್ವೇ?

'ಮೌನಿ' ಸಿನಿಮಾ ನೋಡಿದಾಗಲೋ, 'ಮತದಾನ' ನೋಡಿದಾಗಲೋ ನನಗ್ಗೊತ್ತು ಸಿನಿಮಾ ಮಂದಿರದಿಂದ ಹೊರಗೆ ಬರ್ತಾ ಇದ್ದಹಾಗೇ ಕೊನೇ ಪಕ್ಷ ಒಬ್ರಾದ್ರೂ 'ಚು, ಕಾದಂಬರಿನೇ ಚೆನ್ನಾಗಿತ್ತು' ಅಂತ ಹೇಳೋದು ಕೇಳಿಸಿಕೊಂಡಿದ್ದೇನೆ. ಅಂತಹವರಿಗೆಲ್ಲ ತಾವು ಇತ್ತೀಚೆಗೆ ಓದಿರೋ ಕನ್ನಡ ಕಾದಂಬರಿ ಹೆಸರು ಹೇಳಿ ನೋಡೋಣ ಅಂತ ಸವಾಲು ಎಸೀಬೇಕು ಅನ್ಸುತ್ತೆ, ಯಾಕಂತಂದ್ರೆ ನನಗ್ಗೊತ್ತು ಅವರೆಲ್ಲ ತಾವು ಓದಿರೋ ಹಳೆ ಸರಕಿನ ಮೇಲೆ ವಿಹರಿಸ್ತಿರೋರು ಅಂತ. ಆ ಪಟ್ಟಿಗೆ ನನ್ನ ಹೆಸರೂ ಸೇರುತ್ತೆ, ಏಕಂದ್ರೆ ಇತ್ತೀಚೆಗೆ ಕನ್ನಡ ಕಾದಂಬರಿಗಳನ್ನು ಓದದೇ ಇರೋರಲ್ಲಿ ನಾನೂ ಒಬ್ಬ.

ನನ್ನ ಮನಸ್ನಲ್ಲಿ ಬರೀ ಸಿನಿಮಾ ಹಾಡುಗಳಷ್ಟೇ ಅಲ್ಲ, ನಾನು ಓದಿರೋ ಎಷ್ಟೋ ಕಾದಂಬರಿಯ ಪಾತ್ರಗಳು, ಚಿತ್ರಗಳೂ ಕೂಡಾ ಆಗಾಗ್ಗೆ ಜೀವಂತ ವ್ಯಕ್ತಿಗಳೋ ಅಥವಾ ಸಂಬಂಧಿಗಳ ಹಾಗೆ ಮನಸ್ಸಿನಲ್ಲಿ ಬಂದು ಹೋಗ್ತಲೇ ಇರ್ತವೆ, ಅದಕ್ಕೇ ಇರಬೇಕು ಒಳ್ಳೆಯ ವಸ್ತುಗಳು ಎಲ್ಲಾ ಕಾಲದಲ್ಲೂ ನಮ್ಮ ಮನಸ್ಸಿನಲ್ಲಿ ಹಸಿರಾಗಿ ಉಳಿಯೋದು!

Saturday, October 21, 2006

ದೀಪಾವಳಿಯ ನೆನಪುಗಳು

ದೀಪಾವಳಿಯ ಶುಭಾಶಯಗಳು!

***
ಮೊದಲೆಲ್ಲ ಮನೆಯಲ್ಲಾದರೆ ಅಮ್ಮ ನರಕಚತುರ್ದಶಿ ದಿನ ಇನ್ನೂ ನಾಲ್ಕೂವರೆ ಆಗುತ್ತಿದ್ದಂತೆಯೇ ನಮಗೆಲ್ಲ ಅಭ್ಯಂಜನ ಮಾಡುವಂತೆ ತಾಕೀತು ಮಾಡುತ್ತಿದ್ದಳು. ಆಗೆಲ್ಲ ಇನ್ನೂ ಛಳಿಯಲ್ಲೇ ಎದ್ದು ಯಾವುದೋ ತಪ್ಪಿಗೆ ಶಿಕ್ಷೆಯೆಂಬಂತೆ ಎಣ್ಣೆ ಹಚ್ಚಿಕೊಂಡು ಸ್ನಾನಮಾಡಿ ದೇವರಿಗೆ ಕೈ ಮುಗಿಸಿ ಉಸಿರು ಬಿಡುವುದರೊಳಗೆ ನಿದ್ರೆ ಮತ್ತೆ ಆವರಿಸಿಕೊಳ್ಳುತ್ತಿದ್ದರೂ ಯಾವುದೋ ಅವ್ಯಕ್ತ ಹೆದರಿಕೆ ಆ ನಿದ್ರೆಯನ್ನು ದೂರ ಓಡಿಸುತ್ತಿತ್ತು.

ಚುಮುಚುಮು ಛಳಿಗೆ ಬೆಂಕಿ ಕಾಯಿಸಿಕೊಳ್ಳುವುದಂದರೇನು, ಹಿತ್ತಲಲ್ಲಿ ಬಿದ್ದ ತರಗೆಲೆಗಳನ್ನೆಲ್ಲ ಒಂದೊಂದಾಗಿ ಹೆಕ್ಕಿ, ಗುಡಿಸಿ ಜೋಡಿಸಿಟ್ಟು ಬೆಂಕಿಗೆ ನಿಧಾನವಾಗಿ ತಳ್ಳಿ ಒಣಗಿದ್ದ ಎಲೆಗಳು ಮುದುರಿ ಬೂದಿಯಾಗುವುದನ್ನು ನೋಡುತ್ತಾ ಮಜಾ ಮಾಡುವುದೆಂದರೇನು. ಗೋಪೂಜೆಗೆ ತಯಾರಿ ಮಾಡುವುದರಿಂದ ಹಿಡಿದು ಮರುದಿನದ ಲಕ್ಷ್ಮೀ ಪೂಜೆಗೂ ಅದಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದವು.

***

ಬೋಸ್ಟನ್‍ನಲ್ಲಿ ಯಾವುದೋ ಹೊಟೇಲ್ ಒಂದರಲ್ಲಿ ಈ ವರ್ಷ ದೀಪಾವಳಿಯನ್ನು ಕಳೆಯುತ್ತಿರುವುದು ನನ್ನ ಹಣೆಬರಹ. ನಮ್ಮ ಪ್ರಾಜೆಕ್ಟ್‌ನ ಎರಡನೇ ಫೇಸ್ ಇಂದು ಬಿಡುಗಡೆ ಆಯ್ತು, ಹಗಲೂ-ರಾತ್ರಿ ಸಮರೋಪಾದಿಯಲ್ಲಿ ಎಷ್ಟೋ ಜನ ಕೆಲಸ ಮಾಡ್ತಾ ಇರೋದನ್ನ ನೋಡಿದ್ರೆ ಒಂದು ಕಡೆ ಸಂತೋಷವಾಗುತ್ತೆ, ಮತ್ತೊಂದು ಕಡೆ ಅಷ್ಟೇ ದುಃಖವಾಗುತ್ತೆ. ಭಾರತದಲ್ಲಿರೋ ನಮ್ಮ ಕಂಪನಿಯಲ್ಲಿ ಸುಮಾರು ನಲವತ್ತು ಜನರನ್ನು ಅಗತ್ಯ ಬಿದ್ದರೆ ಕೆಲಸಕ್ಕೆ ಕರೆಯುತ್ತೇವೆ, ನೀವು ಊರು ಬಿಟ್ಟು ಎಲ್ಲೂ ಹೋಗಬೇಡಿ ಎಂದು ಬೇರೆ ಹೇಳಿದ್ದಾರಂತೆ. ಪಾಪ, ವರ್ಷಾವಧಿ ಹಬ್ಬದ ಹೊತ್ತಿನಲ್ಲಿ ಭಾರತದಲ್ಲಿ ಎಷ್ಟೋ ಜನ ತಮ್ಮ-ತಮ್ಮ ಊರುಗಳಿಗೆ ಹೋಗದೇ ಮದ್ರಾಸ್ ಹಾಗೂ ಹೈದರಾಬಾದ್‌ನಲ್ಲಿ ಸುಮ್ಮನೇ ಕಾದುಕೊಂಡಿದ್ದೇ ಬಂತು, ನಾವೆಣಿಸಿದಂತೆ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ನಡೆದು ನಮಗೆ ಭಾರತದಲ್ಲಿನ ಕೆಲಸಗಾರರ ಅಗತ್ಯ ಇಂದು ಬೀಳಲಿಲ್ಲ.

ಸಾಲಿನಲ್ಲಿ ಮೊದಲ ವ್ಯಕ್ತಿಯಾಗಿ ನಿಂತು ಆಲೋಚಿಸುವುದನ್ನು ಕಲಿಯಬೇಕಾದ ಅಗತ್ಯ ನನಗೆ ಬಹಳಷ್ಟಿದೆ. ಯಾವುದೋ ಒಂದು ಮೀಟಿಂಗ್‌ನಲ್ಲಿ ಭಾರತದಲ್ಲಿ ದೀಪಾವಳಿ ಹಬ್ಬದ ವತಿಯಿಂದ ರಜೆ ಇರುವುದು ಗೊತ್ತಿದ್ದೋ ಇಲ್ಲದೆಯೋ ಯಾರೋ ಮೇಲಿನವರು ದಿಢೀರನೆ 'ನಾವು ಭಾರತದಲ್ಲಿನ ಕೆಲಸಗಾರರನ್ನು ನಿಮ್ಮ ಸಹಾಯಕ್ಕೆ ಅನುವಾಗಿಡುತ್ತೇವೆ' ಎಂದು ಒಪ್ಪಿಕೊಂಡಾಕ್ಷಣ, ಆ ಕ್ಷಣದಲ್ಲಿ ನನ್ನಂತಹವರಿಗೆ ಅಲ್ಲಿನವರ ಸಂಕಷ್ಟಗಳ ಪರಿಚಯವಿದ್ದೂ ಆ ಬಗ್ಗೆ ಒಂದು ಮಾತನ್ನು ಆಡಲು ಗಂಟಲು ಬಿದ್ದು ಹೋಗಿಬಿಡುತ್ತದೆ. ಇಲ್ಲಿ ಯಾರು ಯಾರು ಯಾವ ಲೆವೆಲ್‌ನಲ್ಲಿ ಇದ್ದಾರೆ ಎನ್ನುವುದು ಮುಖ್ಯವೋ? ಯಾರು ಯಾವ ಮಾತನ್ನು ಆಡಬೇಕೋ ಅಷ್ಟನ್ನೇ ಆಡಬೇಕು ಎನ್ನುವ ಪ್ರಾಕ್ಟಿಕಾಲಿಟಿ ಪ್ರಸ್ತುತವೋ? ಅಥವಾ 'ನಿಮಗೆ ಇಲ್ಲಿ ಕ್ರಿಸ್‌ಮಸ್ ಇರುವ ಹಾಗೆ ಭಾರತದಲ್ಲಿ ದೀಪಾವಳಿ' ಎಂದು ಸಾರಿ ಹೇಳುವ ಎಮೋಷನಲ್ ಒತ್ತಡವೋ? ಅಥವಾ ಈ ರೀತಿಯ ಆಲೋಚನೆಯೇ ಬರದೇ ಇರಬಹುದಾದ ಬರಡಾದ ಮನಸ್ಸೋ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಮುಂದಾಳುವಾಗಿ ತನ್ನನ್ನು ಗುರುತಿಸಿಕೊಳ್ಳುವಲ್ಲಿ ಹಲವಾರು ಮಜಲುಗಳಲ್ಲಿ ನಿಂತು ಆಲೋಚಿಸಬೇಕಾದ ಅಗತ್ಯವಿದೆ, ಈ ರೀತಿಯ ಅಗತ್ಯ ಎನ್ನೋದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಪ್ರತಿಭೆಯೋ ಅಥವಾ ತನ್ನನ್ನು ತಾನು ರೂಢಿಸಿಕೊಳ್ಳುವ ಕ್ರಮವೋ, ಯಾರು ಬಲ್ಲರು.

***

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು. ನಮ್ಮ ಸಹೋದ್ಯೋಗಿ ಅರುಣ್ ಹೊಸದಾಗಿ ಮದುವೆಯಾದ ವರ್ಷ. ಆತನಿಗೂ ಅದು ಮೊದಲ ದೀಪಾವಳಿ ಹೆಂಡತಿಯೊಂದಿಗೆ. ಮೊದಲೆಲ್ಲ ನಮ್ಮ ಜೊತೆ ನಮ್ಮ ಹಾಗೆ ಒಂದು ಊಟದ ಡಬ್ಬಿಯನ್ನು ಆಫೀಸಿಗೆ ತರುತ್ತಿದ್ದವನು ಮದುವೆಯಾದ ಮೇಲೆ ನಾಲ್ಕೈದು ಬಾಕ್ಸುಗಳನ್ನಾದರೂ ತಂದು ತನ್ನ ಮುಂದೆ ಟೇಬಲ್ಲಿನ ಮೇಲೆ ಹರವಿಕೊಳ್ಳುತ್ತಿದ್ದವನನ್ನು ನಾವು ಡ್ರಮ್ಮಿಷ್ಟ್ ಎಂದೇ ಕರೆಯತೊಡಗಿದ್ದೆವು. ಒಂದು ಬಾಕ್ಸಿನಿಂದ ನಾಲ್ಕು ಬಾಕ್ಸಿಗೆ ಬೆಳೆದ ಬಡ್ತಿ ಅಷ್ಟೇ ಬೇಗನೆ ತಿರುಗಿ ಮತ್ತೆ ಒಂದು ಬಾಕ್ಸಿಗೆ ಬಂತು, ಅದು ಬೇರೆ ವಿಚಾರ.

ಅರುಣನ ಮೊದಲ ನರಕಚತುರ್ದಶಿಯನ್ನು ನೆನಪಿಸಿ ಅವನಿಗೆ ಇವತ್ತಿಗೂ ನಾನು ತಮಾಷೆ ಮಾಡುತ್ತೇನೆ. ಅರುಣ ಯಾವುದನ್ನು ಬಿಟ್ಟರೂ ನಿದ್ರೆಯನ್ನು ಮಾತ್ರ ಬಿಡುವ ಜಾಯಮಾನದವನಲ್ಲ. ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ ಹತ್ತು ಘಂಟೆಗಳಾದರೂ ಗಡದ್ದಾಗಿ ನಿದ್ರೆ ಆಗಲೇ ಬೇಕು. ಅಂತಹವನನ್ನು ಅವನ ಹೆಂಡತಿ ಪ್ರಿಯಾ ನರಕ ಚತುರ್ದಶಿಯ ದಿನ ಬೇಗನೆ ಏಳಿಸಿದ್ದೂ ಅಲ್ಲದೇ (ಚೆನ್ನಾಗಿ) ಅಭ್ಯಂಜನವನ್ನು ಮಾಡಿಸಿ ಆದಷ್ಟು ಬೇಗನೆ ಮನೆಗೆ ಬನ್ನಿ ಎಂದು ಹೇಳಿ ಬೇಗನೆ ಆಫೀಸಿಗೆ ಕಳಿಸಿಬಿಟ್ಟಿದ್ದಳು. ಈ ಮನುಷ್ಯ ಎಂದಿಗಿಂತಲೂ ಒಂದೆರಡು ಘಂಟೆ ಮೊದಲೇ ಆಫೀಸಿಗೆ ಹೊರಟವನು ಸೀದಾ ಆಫೀಸಿಗೆ ಬಂದಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ, ಅಂತಹದುರಲ್ಲಿ ಅರುಣ ತನ್ನ ಕಾರನ್ನು ಪಾರ್ಕಿಂಗ್ ಲಾಟಿನಲ್ಲಿ ನಿಲ್ಲಿಸಿ ಅಲ್ಲೇ ಸುಮಾರು ಎರಡು ಘಂಟೆಯ ಮೇಲೆ ನಿದ್ರೆ ಮಾಡಿಬಿಡೋದೆ! ಈ ಕಡೆ ಪ್ರಿಯಾ ಆಗೆಲ್ಲ ಇನ್ನೂ ಸೆಲ್‌ಫೋನುಗಳು ಹೆಚ್ಚು ಇರಲಿಲ್ಲವಾದ್ದರಿಂದ ಅರುಣನ ಆಫೀಸಿಗೆ ಫೋನ್ ಕರೆಯ ಮೇಲೆ ಕರೆ ಮಾಡುವುದೂ ಅರುಣನ ಕಡೆಯಿಂದ ಯಾವುದೇ ಉತ್ತರ ಬಾರದಿರುವುದೂ ಸ್ವಲ್ಪ ಹೊತ್ತು ನಡೆಯಿತು. ಪಾಪ, ಪ್ರಿಯಾಳ ಮನಸ್ಸಿನಲ್ಲಿ ಏನೆನೆಲ್ಲ ಆಗುತ್ತಿರಬೇಡ, ಕೊನೆಗೂ ಪ್ರಿಯಾ ರಾಜೀವನ ನಂಬರನ್ನು ಹುಡುಕಿ ಡಯಲ್ ಮಾಡಿ ರಾಜಿವ ಎಲ್ಲರ ಜೊತೆ ಸೇರಿ ಅರುಣನನ್ನು ಹುಡುಕಿ ಏಳಿಸಿ ಆಫೀಸಿಗೆ ಕರೆದುಕೊಂಡು ಬರಬೇಕಾದರೆ ಸಾಕು ಬೇಕಾಯಿತೆನ್ನಿ!

Tuesday, October 17, 2006

mUರು ಚಿತ್ರಗಳು

ದಿನಾ ಆಫೀಸಿಗೆ ಹೋಗೋ ಇಂಟರ್‌ಸ್ಟೇಟ್ ೭೮ ರಲ್ಲಿ ಅವಿರತ ಕನ್‌ಷ್ಟ್ರಕ್ಷನ್ ನಡೆದಿದೆ. ಸುಮಾರು ದೂರ ಎಕ್ಸ್‌ಪ್ರೆಸ್ ಲೇನುಗಳನ್ನು ಮುಚ್ಚಿ ಎಲ್ಲ ಟ್ರಾಫಿಕ್ಕನ್ನು ಲೋಕಲ್ ಲೇನುಗಳಿಗೆ ಬದಲಾಯಿಸಲಾಗಿದೆ. ಮೊದಲು mUರಿದ್ದ ಲೋಕಲ್ ಲೇನುಗಳನ್ನು ಈಗ ನಾಲ್ಕು ಲೇನುಗಳನ್ನಾಗಿ ಪರಿವರ್ತಿಸಲಾಗಿದೆ. ಲೋಕಲ್ ಲೇನುಗಳಲ್ಲಿ ಎಷ್ಟೋ ದೂರ ಶೋಲ್ಡರ್ ಇಲ್ಲವಾದ್ದರಿಂದ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಟ್ರಾಫಿಕ್ ಜಾಮ್ ಅನ್ನೋದು ಆಗಲೇ ಬೇಕು. ಯಾವುದಾದರೂ ಕಾರು ಬ್ರೇಕ್‌ಡೌನ್ ಆಗುವುದರಿಂದ ಹಿಡಿದು ಸಣ್ಣಪುಟ್ಟ ಆಕ್ಸಿಡೆಂಟೋ, ಫೆಂಡರ್-ಬೆಂಡರ್‌ಗಳೋ, ಅಥವಾ ಇಡೀ ಕಾರು ನಜ್ಜುಗುಜ್ಜಾಗುವ ಯಾರಾದರೂ ನೆಗೆದುಬಿದ್ದು ಹೋದ ಘಟನೆಗಳಂತೂ ಪರಿಸ್ಥಿತಿಯನ್ನು ಇನ್ನೂ ಕೈ ಮೀರಿಸಿಬಿಡುತ್ತವೆ. ಜನರ ಜೀವಗಳು ಅಥವಾ ಸಣ್ಣಪುಟ್ಟ ಅಡೆತಡೆಗಳು ಯಾರು ಯಾರಿಗೆ ಏನೇ ಅರ್ಥವನ್ನು ಕೊಟ್ಟರೂ ಕೊನೆಯಲ್ಲಿ ನನ್ನಂತಹವರಿಗೆ ಪ್ರತಿಯೊಂದು ದುರಂತ ಅರ್ಧ ಘಂಟೆಯ ಪ್ರಯಾಣವನ್ನು ಹೆಚ್ಚಿಸಿಬಿಡುತ್ತದೆ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು, ಯಾವುದೊಂದನ್ನೂ ಭಾವನಾತ್ಮಕವಾಗಿ ನೋಡದಿರುವ ಹಾಗೆ ಇಂತಹ ಘಟನೆಗಳು ನನ್ನ ಮನೋಬಲವನ್ನು ಹೆಚ್ಚಿಸುತ್ತಿರಬಹುದು, ಒಂದು ರೀತಿ ಕಟುಕನ ಅಂಗಡಿಯಲ್ಲಿ ಮಾಂಸ ಕತ್ತರಿಸುವವನ ಮನಸ್ಥಿತಿಯ ಹಾಗೆ ಯಾವ ಕುರಿಯಾದರೇನಂತೆ? ಸುಮಾರು ಐದು ತಿಂಗಳು ನಡೆಯಬಹುದಾದ ಈ ಮೆಗಾ ಪ್ರಾಜೆಕ್ಟ್ ಬಹಳಷ್ಟನ್ನು ಒತ್ತರಿಸಿದೆ - ಹೊಸದಾಗಿ ಮೇಲ್ಮೈಯನ್ನು ಪಡೆಯುತ್ತಿರುವ ಎಕ್ಸ್‌ಪ್ರೆಸ್ ಲೇನುಗಳು ಬಡದೇಶಗಳ ವಿಮಾನ ನಿಲ್ದಾಣಗಳ ರನ್‌ವೇಗಳಿಗಿಂತಲೂ ದಪ್ಪವಾದ ಕಾಂಕ್ರೀಟ್-ಆಸ್ಪಾಲ್ಟ್ ಮಿಶ್ರಣವನ್ನು ಹೊಂದಿವೆ, ನನ್ನ ಅಂದಾಜಿನ ಪ್ರಕಾರ ಈ ಹೊಸ ರಸ್ತೆಯ ದಪ್ಪ ಸುಮಾರು ಹತ್ತು ಹನ್ನೆರಡು ಅಂಗುಲಗಳು. ಸುಮಾರು ಹದಿನೈದು ಮೈಲು ದೂರ ಹನ್ನೆರಡು ಅಂಗುಲದ ರಸ್ತೆಯಲ್ಲಿ, ಶೋಲ್ಡರ್ ಸೇರಿಸಿ ಐವತ್ತು ಅಡಿ ಅಗಲವಿರಬಹುದಾದ ಈ ಪ್ರಾಜೆಕ್ಟಿನಲ್ಲಿ ಬಳಸಬಹುದಾದ ರಿಸೋರ್ಸನ್ನು ಊಹಿಸಿ ನನ್ನ ಮನಸ್ಸಿನಲ್ಲಿರುವ ವೇರಿಯಬಲ್‌ಗಳು ಅಳತೆ ಮೀರುತ್ತವೆ. ಹೊಸ ರಸ್ತೆಯ ಹುಟ್ಟಿಗಾಗಿ ಒತ್ತರಸಿಲ್ಪಟ್ಟ ಹಾಗೂ ಬಹುವಾಗಿ ಬಳಕೆಯಾಗುವ ಲೋಕಲ್ ರಸ್ತೆಯ ಸಂಪನ್ಮೂಲಗಳು, ಹೊಸ ರಸ್ತೆಯ ಹುಟ್ಟಿಗಾಗಿ ಹೊಸದಾಗಿ ತಂದು ಹಾಕಿದ ಕಚ್ಚಾವಸ್ತುಗಳು, ಹೊಸತನ ಅನ್ನೋದು ಸುಮ್ಮನೇ ಏನಲ್ಲ ಎಂದು ನನ್ನಂತಹವರು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

***

ರಸ್ತೆಗಳ ಕೃಪೆಯಲ್ಲಿ ಯಾವುದೋ ಒಂದು ಸಮಯದಲ್ಲಿ ಆಫೀಸ್ ತಲುಪೋ ನನಗೆ ನಾನು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ಬಹಳ ಮುಖ್ಯವಾಗಿ ಕಾಣುತ್ತದೆ. ಎಷ್ಟೋ ದಿನಗಳಲ್ಲಿ ನಮ್ಮ ಪ್ರಾಜೆಕ್ಟಿನ ಯಾವುದಾದರೊಂದು ಒಂದು ಸಂದಿಗ್ಧ ಸನ್ನಿವೇಶದಲ್ಲಿ ನಾನು ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರನ್ನು ನಿರ್ಧಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತೇನೆ - ಈ ಸಂಪನ್ಮೂಲಗಳಲ್ಲಿ ಸೀನಿಯರ್ ಮ್ಯಾನೇಜರುಗಳಿಂದ ಹಿಡಿದು ಕಿರಿಯ ಸಾಫ್ಟ್‌ವೇರ್ ಇಂಜಿನಿಯರುಗಳೂ ಸೇರಿರುತ್ತಾರೆ. ಇವರೆಲ್ಲರ ದಿನನಿತ್ಯದ ಕೆಲಸ ಮಾಡುವ ಸಮಯ ಈಗಾಗಲೇ ಹಲವಾರು ಮೀಟಿಂಗ್‌ಗಳಲ್ಲೋ, ಮತ್ತೊಂದರಲ್ಲೋ ಹೆಣೆದುಕೊಂಡಿದ್ದರೂ ನನಗೆ ನನ್ನ ಟ್ಯಾಸ್ಕ್ ಬಹಳ ಅಪ್ಯಾಯಮಾನವಾಗಿ ಕಂಡು ಇವರೆಲ್ಲರೂ ತಮ್ಮತಮ್ಮ ಕೆಲಸಗಳನ್ನು ಬದಿಗೊತ್ತಿ ನಾನು ಒದ್ದಾಡುತ್ತಿರುವ ಸಮಸ್ಯೆಗೆ ಸ್ಪಂದಿಸುವಂತೆ ಕೇಳಿಕೊಳ್ಳುತ್ತೇನೆ, ಅಕಸ್ಮಾತ್ ಅವರು ಒಪ್ಪದೇ ಬೇರೆ ವಿಧಿಯೇ ಇಲ್ಲ ಏಕೆಂದರೆ ನಾನು ಮಾಡುತ್ತಿರುವ ಕೆಲಸಕ್ಕೆ ಸಂಬಂಧಿಸಿದಂತೆ ವಿಷಯಗಳನ್ನು ಎಸ್ಕಲೇಟ್ ಮಾಡಿ ಕೆಲಸವನ್ನು ಮಾಡಿಸಿಕೊಳ್ಳುವ ಕಲೆ ಅಥವಾ ಅಥಾರಿಟಿ ನನಗೆ ಎಂದೋ ಸಿದ್ಧಿಸಿದೆ. ಈ ಹೊಸದಾಗಿ ಹುಟ್ಟುತ್ತಿರುವ ಪ್ರಾಡಕ್ಟ್ ಇಂಟರ್‌ಫೇಸ್ ಸ್ಥಳೀಯ ಸಂಪನ್ಮೂಲಗಳನ್ನು ಬೇಕಾದಷ್ಟು ಬಳಸಿಕೊಂಡಿದೆ, ಎಷ್ಟೋ ಜನರ ಅನುಕೂಲ-ಅನಾನುಕೂಲಗಳನ್ನು ಬದಿಗೊತ್ತಿ ನನ್ನ ಪ್ರಾಜೆಕ್ಟಿನ ಟಾಸ್ಕುಗಳು ತಲೆ ಎತ್ತಿ ನಿಂತಿವೆ. ಎಷ್ಟೋ ಸಾರಿ ಘಂಟೆಗಟ್ಟಲೆ ನಡೆಯುವ ಮೀಟಿಂಗುಗಳು ಬೇಕಾದಷ್ಟು ಜನರಿಗೆ ಹಲವಾರು ವಿಳಂಬಗಳನ್ನು ಹುಟ್ಟಿಸಿವೆ. ನಮ್ಮಲ್ಲಿ ನಡೆಯುವ ಎಲ್ಲಾ ಪ್ರಾಜೆಕ್ಟುಗಳಿಗೆ ಅವೇ ಸಂಪನ್ಮೂಲಗಳು ಬಳಕೆಯಾದರೂ ನನ್ನ ಕಣ್ಣಿಗೆ ನನ್ನ ಪ್ರಾಜೆಕ್ಟ್ ಮಾತ್ರ (ವಿಶೇಷವಾಗಿ) ಕಾಣೋದರಿಂದ ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ನಾನು ಸಂಪನ್ಮೂಲಗಳನ್ನು ಬಳಸಿ ಬಡವರ ನಡುವಿನ ಶ್ರೀಮಂತನಂತೆ ಮಿನುಗುತ್ತೇನೆ, ಅಥವಾ ಒಳಗೊಳಗೇ ಕೊರಗುತ್ತೇನೆ.

***

ನಮ್ಮ ಡಾಕ್ಟರ್ ಆಫೀಸಿನಲ್ಲಿ ಗರ್ಭಿಣಿಯ ಚಿತ್ರವೊಂದನ್ನು ತೂಗು ಹಾಕಿದ್ದಾರೆ. ಬೆಳೆಯುತ್ತಿರುವ ಮಗುವನ್ನು ಹಲವಾರು ಕೋನಗಳಲ್ಲಿ ಸೆರೆಹಿಡಿದು ತಾಯಿಯ ಹೊಟ್ಟೆಯಲ್ಲಿ ಮಗುವಿಗೆ ಸ್ಥಳ ಮಾಡಿಕೊಡುವಂತೆ ಆಗುವ ಬದಲಾವಣೆಗಳನ್ನು ಚಿತ್ರಗಳ ಸಮೇತ ವಿವರಿಸಿದ್ದಾರೆ. ಮಗುವನ್ನು ಪೋಷಿಸಿ ಅದನ್ನು ಹೊತ್ತು ಹೆರುವುದಕ್ಕೆ ಆ ತಾಯಿಯ ಅಂಗಾಗಳಲ್ಲಿ ಆಗುವ ಮಾರ್ಪಾಟು ಅಪಾರವಾದುದು. ಸಣ್ಣ-ದೊಡ್ಡಕರುಳುಗಳು ಬದಿಗೊತ್ತಿ ಅವುಗಳ ನಡುವೆ ದಿನೇದಿನೇ ಹಿಗ್ಗುವ ಗರ್ಭಾಶಯವನ್ನು, ಅದರಲ್ಲಿ ಸದಾ ಕಾರ್ಯಪ್ರವೃತ್ತವಾಗಿರುವ ಭ್ರೂಣದ ಅಗತ್ಯಗಳನ್ನು ಪೂರೈಸುವುದಕ್ಕೆ ಏನೇನೆಲ್ಲ ಬದಲಾವಣೆಗಳಾಗುತ್ತವೆ. ಕಿಬ್ಬೊಟ್ಟೆಯಿಂದ ಹಿಡಿದು ಪುಪ್ಪುಸಗಳವರೆಗೆ, ಜಠರದಿಂದ ಹಿಡಿದು ಪಿತ್ತಜನಕಾಂಗ ಮೆದೋಜೀರಕಾಂಗಗಳವರೆಗೆ, ಪಕ್ಕೆಲೆಬುಗಳನ್ನು ಹೊರತುಪಡಿಸಿ ಮತ್ತೆಲ್ಲವೂ ಹಿಗ್ಗಿ-ಕುಗ್ಗಿ ಒಂದಲ್ಲ ಒಂದು ರೀತಿಯಿಂದ ಈ ಹೊಸಜೀವಕ್ಕೆ ದಾರಿಮಾಡಿಕೊಡೋದನ್ನ ಊಹಿಸಿಕೊಳ್ಳುತ್ತೇನೆ. ಬರೀ ಮೇಲ್ಮಟ್ಟಕ್ಕೆ ಕಾಣೋ ಬದಲಾವಣೆಗಳು ಮಾತ್ರವಲ್ಲ; ತಾಯಿಯ ಒಡಲಿನೊಳಗೆ ಬಹಳಷ್ಟು ಕಿಣ್ವಗಳು ಸೃಜಿಸಲ್ಪಟ್ಟಿವೆ, ಗ್ರಂಥಿಗಳಿಂದ ನಾನಾ ರೀತಿಯ ಹಾರ್ಮೋನುಗಳ ಹುಟ್ಟಿನಲ್ಲಿ ಬದಲಾವಣೆಗಳಾಗಿವೆ, ದೇಹದಲ್ಲಿ ನೀರು-ರಕ್ತದ ಅಂಶಗಳು ಹೆಚ್ಚಿವೆ; ಹೀಗೆ ಕಣ್ಣಿಗೆ ಕಾಣದ ಹಾಗೂ ಮೇಲ್ನೋಟಕ್ಕೆ ಕಂಡುಬರುವ ಹಲವಾರು ಬದಲಾವಣೆಗಳು ಯಾರೋ ಹೇಳಿಮಾಡಿಸಿದಂತೆ ತಮ್ಮಷ್ಟಕ್ಕೆ ತಾವೇ ಒಂದರ ನಂತರ ಮತ್ತೊಂದು ಹುಟ್ಟುತ್ತಿವೆ, ಹೊಸತಿನ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಿವೆ.

***

ಹೊಸತು ಎನ್ನೋದು ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಅದನ್ನು ಪೋಷಿಸಲು ಅಗತ್ಯವಾದ ಬದಲಾವಣೆಗಳು ಬೇಕೇ-ಬೇಕು, ಹೊಸತು ಹುಟ್ಟುವುದು ಯಾವುದೋ ಒಂದು ನಿರ್ವಾತದಲ್ಲಲ್ಲ ಅದು ಇದ್ದವುಗಳ ನಡುವೆಯೇ ಹುಟ್ಟಿ-ಬೆಳೆದು-ಬದಲಾವಣೆಗಳಿಗೊಳಪಡಬೇಕು, ಹೊಸತರ ಹುಟ್ಟು ಅಥವಾ ಬೆಳವಣಿಗೆ ಅದಕ್ಕೆ ಬೇಕಾದ ಹಾಗೆ ಸಂಪನ್ಮೂಲಗಳನ್ನು ಬಳಸಿಕೊಂಡೇ ತೀರುತ್ತದೆ ಅಥವಾ ಹಾಗಿಲ್ಲವೆಂದಾದರೆ ಅದು ಸೊರಗುತ್ತದೆ, ಈ ಬೆಳವಣಿಗೆ ಯಾವುದೋ ಪೂರ್ವ ನಿರ್ಧರಿತ ಯೋಜನೆಯಂತೆ ಕಂಡುಬಂದರೂ ನಡುನಡುವೆ ಹಲವಾರು ಬದಲಾವಣೆಗಳಿಗೆ, ಸಮಯಕ್ಕೆ ತಕ್ಕಂತೆ ಮಾರ್ಪಾಟುಹೊಂದುವಲ್ಲಿ ಸುತ್ತಮುತ್ತಲಿನ ಮೇಲೆ ನಿರೀಕ್ಷೆಗಿಂತ ಹೆಚ್ಚು ಒತ್ತಡ ಬೀಳಬಹುದು.

Sunday, October 15, 2006

ಅವರವರ ನೋಟ

ಒಂದು ದೇಶದಲ್ಲಿ ಐದು, ಹತ್ತು ಹದಿನೈದು ವರ್ಷಗಳಿದ್ದರೆ ಅವರವರ ಅನುಭವದ ಮೇಲೆ ಒಂದು ರೀತಿಯ ಇಂಪ್ರೆಷ್ಷನ್ ನಿರ್ಮಾಣವಾಗುತ್ತದೆ, ಕೆಲವರು ಅದೆಷ್ಟೇ ವರ್ಷ ಯಾವುದೇ ದೇಶದಲ್ಲಿದ್ದರೂ ತಮ್ಮ ಸುತ್ತ ಮುತ್ತಲು ತಮ್ಮದೇ ಪರಿಸರವನ್ನು ನಿರ್ಮಿಸಿಕೊಂಡು ತಮ್ಮದೇ ಬಾಳ್ವೆಯನ್ನು ಬದುಕುತ್ತಾರೆ, ಇನ್ನು ಕೆಲವರು ಮೊದಲ ದಿನದಿಂದಲೇ ತಮ್ಮ ತನವನ್ನು ತೆರೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಳ್ಳಲು ಹವಣಿಸುತ್ತಾರೆ. ಈ ಎಕ್ಸ್‌ಟ್ರೀಮ್‌ ಗುಂಪಿನಲ್ಲಿ ಸೇರುವವರು ಬಹಳ ಮಂದಿಯೇನಲ್ಲ, ಹೆಚ್ಚಿನವರು ನನ್ನ ಹಾಗೆ ಬೆಲ್ ಕರ್ವ್‌ನ ಮಧ್ಯೆ ಎಲ್ಲೋ ಬಿದ್ದು ಒದ್ದಾಡುವವರು.

ಅಮೇರಿಕಕ್ಕೆ ಪ್ರವಾಸಕ್ಕೆಂದು ಬಂದು ಇಲ್ಲಿ ನನ್ನನ್ನು ಭೇಟಿಯಾಗುವ ಹೆಚ್ಚಿನ ಜನರನ್ನು ಮಾತನಾಡಿಸಿದಾಗ ಅವರ ಕಣ್ಣುಗಳಲ್ಲಿ ನಾನು ಅಮೇರಿಕವನ್ನು 'ನೋಡಿದ್ದೇನೆ' ಎನ್ನುವ ಆಶಾಭಾವನೆ ಕಂಡುಬರುತ್ತದೆ, ಎಷ್ಟೋ ಸಾರಿ ಅವರಿಗೆ ಅಂಕಿ-ಅಂಶಗಳ ವತಿಯಿಂದ, ಇಲ್ಲಿನ ಮುಖ್ಯವಾದ ಸ್ಥಳಗಳ ಮಾಹಿತಿ-ಹಿನ್ನೆಲೆಯ ದೃಷ್ಟಿಯಿಂದ ಸ್ಥಳೀಯರಿಗಿಂತ ಹೆಚ್ಚಿನ ತಿಳುವಳಿಕೆ ಇದ್ದಿರುವುದನ್ನೂ ಗುರುತಿಸುತ್ತೇನೆ. ಜೊತೆಗೆ ಅವರಲ್ಲಿ ದಿಢೀರನೆ ನಿರ್ಧಾರಕ್ಕೆ ಬಂದು ಬಿಡಬಲ್ಲ ಒಂದು ಗುಣವನ್ನೂ ಕಂಡುಕೊಳ್ಳುತ್ತೇನೆ. ಹೆಚ್ಚಿನ ಪಕ್ಷ ಅವರ ತತ್‌ಕ್ಷಣ ನಿರ್ಧಾರಗಳು ಬೆಳ್ಳಗಿರೋದೆಲ್ಲ ಮಲ್ಲಿಗೆ, ಕಪ್ಪಗಿರೋದೆಲ್ಲ ಕೆಟ್ಟದ್ದು ಎನ್ನುವ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹುಟ್ಟಿದವೇನೋ ಅನ್ನುವ ಸಂಶಯವೂ ಬಂದಿದೆ. ಆದರೂ ಒಬ್ಬ ಪ್ರವಾಸಿಯಾಗಿ ಒಂದು ದೇಶವನ್ನು ನೋಡಿ ಅನುಭವಿಸುವುದಕ್ಕೂ, ಅಲ್ಲೇ ಸ್ಥಳೀಯರಾಗಿ ಹಲವು ವರ್ಷ ಸುತ್ತಲನ್ನು ಕೆದಕಿ ನೋಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಆದ್ದರಿಂದಲೇ ನಾನು ಪ್ರವಾಸಿ ಕಥನಗಳನ್ನು ಒಬ್ಬರ ಅನುಭವವಾಗಿ ಓದುತ್ತೇನೆಯೇ ವಿನಾ ಅದನ್ನು ಕುರಿತು ಜನರಲೈಸ್ ಮಾಡಲೇನೂ ಹೋಗೋದಿಲ್ಲ.

ನಾನು ಇಷ್ಟು ವರ್ಷ ಇಲ್ಲಿ ಇದ್ದರೂ ಒಂದು ಊರಿನಿಂದ ಮತ್ತೊಂದು ಊರಿಗೆ ಬಸ್ಸಿನಲ್ಲೆಂದೂ ಪ್ರಯಾಣಿಸಿದವನಲ್ಲ, ಟ್ರೈನಿನಲ್ಲಿ ಸಾಕಷ್ಟು ತಿರುಗಾಡಿದ್ದೇನೆ - ಇಲ್ಲಿಯ ಬಸ್ ಸ್ಟೇಷನ್‌ಗಳು ಒಂದು ರೀತಿಯ ಬಡತನದ ವರ್ಗವನ್ನು ಪ್ರತಿನಿಧಿಸುತ್ತದೆ ಎಂದರೆ ಅದು ನನ್ನ ಮಿತಿಯೇನೂ ಅಲ್ಲ. ನಾನು ವಾಷಿಂಗ್ಟನ್ ಡಿಸಿ, ನ್ಯೂ ಯಾರ್ಕ್ ಹಾಗೂ ನೆವಾರ್ಕ್ ಬಸ್ ನಿಲ್ದಾಣಗಳಲ್ಲಿ ಯಾರನ್ನಾದರೂ ಕರೆದುಕೊಂಡು ಬರಲೆಂದೋ ಅಥವಾ ಬಿಟ್ಟು ಬರಲೆಂದೋ ಬೇಕಾದಷ್ಟು ಸಲ ಹೋಗಿದ್ದೇನೆ. ಎಷ್ಟೋ ಈ ನಿಲ್ದಾಣಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಹಲವಾರು ಸೆಕ್ಷನ್‌ಗಳಿಗೆ ಹೋಗೋದಕ್ಕೂ ಹೆದರಿಕೆಯಾಗುವಂತಹ ಸಂದರ್ಭಗಳು ಉದ್ಭವವಾಗಿ ನನ್ನ ಮನಸ್ಸು 'ದುಷ್ಟರಿಂದ ದೂರ ಇರು' ಎಂದು ಎಚ್ಚರಿಕೆ ಕೊಟ್ಟಿದೆಯಾದ್ದರಿಂದ ಧುತ್ತನೆ ಎದುರುಗೊಳ್ಳಬೇಕಾದ ಸಮಸ್ಯೆಗಳಿಂದ ಬಚಾವ್ ಆಗಿದ್ದೇನೆ - ಇಂತಹ ಧುತ್ತನೆ ಎದುರಾಗುವ ಸಮಸ್ಯೆಗಳು ಅಚಾನಕ್ ಆಗಿ ಕತ್ತಲಿನಲ್ಲಿ ಕೈಯೊಂದು ಮುಂದೆ ಬಂದು 'ಡಾಲರ್ ಕೊಡು' ಎನ್ನುವಲ್ಲಿಂದ ಹಿಡಿದು 'ವಾಲೆಟ್ ತೆಗಿ' ಎನ್ನುವ ಹುಂಬ ಆಜ್ಞೆಗಳವರೆಗೆ ವಿಸ್ತರಿಸಿಕೊಳ್ಳುತ್ತವೆ. ಈ ರೀತಿ ದಿಢೀರ್ ದಂಡನೆಗೊಳಗಾಗುವಾಗ ಕೇವಲ ಆಜ್ಞೆಯನ್ನು ಪಾಲಿಸುವ ಪಶುವಾಗುತ್ತೇನೆಯೇ ವಿನಾ ಎದುರಿನಲ್ಲಿರುವ ಒಂದು ಡಿಸ್ಟರ್ಬ್ಡ್ ಮನಸ್ಥಿತಿಯಿಂದ ಮತ್ತೇನನ್ನೂ ನಾನು ನಿರೀಕ್ಷಿಸೋದಿಲ್ಲ.

'ಬಡವರ ಮನೆ ಊಟ ಚೆಂದ, ಶ್ರೀಮಂತರ ಮನೆ ನೋಟ ಚೆಂದ' ಅನ್ನೋದೇನೋ ಸರಿ, ಆದರೆ ಈ ಶ್ರೀಮಂತ ದೇಶವನ್ನು ಸರಿಯಾಗಿ ಪೂರ್ಣವಾಗಿ ನೋಡಬೇಕಾದರೆ ನೀವು ಈ ಬಡವರ ಕಣ್ಣುಗಳಿಂದ ಪ್ರತಿಫಲನವಾದ ಬೆಳಕನ್ನು ನೋಡಲೇ ಬೇಕು, ಬರೀ ಶ್ರೀಮಂತ ಗಲ್ಲಿಗಳನ್ನು ತಿರುಗಿ ಮಹಲುಗಳಿವೆ, ಮೋಡಿಯಿದೆ ಎಂದರಾದೀತೇ? ಇಲ್ಲಿ ಹಲವಾರು ವರ್ಷದಿಂದ ಮಾನಸಿಕವಾಗಿ ಅಸ್ಥವ್ಯಸ್ಥರಾದ; ಚಳಿಯಲ್ಲಿ ಜೀವವನ್ನು ಹಿಡಿಯಲ್ಲಿಟ್ಟುಕೊಂಡು ಆರು ತಿಂಗಳಿಗಿಂತಲೂ ಹೆಚ್ಚು ಸತ್ತು ಬದುಕಿದ; ಕಂಪ್ಯೂಟರ್ ನೆಟ್‌ವರ್ಕ್ ವ್ಯವಸ್ಥೆಯಲ್ಲಿ, ದಿನೇ-ದಿನೇ ದರ ಹೆಚ್ಚುವ ಹೆಲ್ತ್‌ಕೇರ್ ಇನ್ಸೂರೆನ್ಸ್ ವ್ಯವಸ್ಥೆಯಲ್ಲಿ ಸೋತ; ಮನುಷ್ಯನ ಬದುಕು ಎಂದರೆ ಅವನು ಹೊಂದಿದ ಕಾರ್ಡುಗಳು ಎನ್ನುವ ಆಧುನಿಕ ಟ್ರ್ಯಾಪ್‌ನಲ್ಲಿ ಬಿದ್ದು ಒದ್ದಾಡುವವರ ಮನದಲ್ಲಿರುವ ಅಮೇರಿಕವನ್ನು ಚಿತ್ರಿಸುವವರು ಯಾರು? ಇಲ್ಲಿಯ ದೊಡ್ಡ ಶಹರಗಳಲ್ಲಿ ಜನರು ಹೋಮ್‌ಲೆಸ್ ಹೇಗೆ, ಏಕೆ ಆಗುತ್ತಾರೆ ಎನ್ನುವುದನ್ನು ಕಂಡು ಹಿಡಿದು ಅದಕ್ಕೆ ಔಷಧಿಕೊಡಲು ಒದ್ದಾಡುತ್ತಿರುವ ಪರಂಪರೆಯಲ್ಲಿ, ಇಲ್ಲಿನ ಮಕ್ಕಳೆಲ್ಲರಿಗೆ ಕಡ್ಡಾಯವಾಗಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ರೂಢಿಸದ ಶ್ರೀಮಂತಿಕೆಯಲ್ಲಿ, ದಿನೇ-ದಿನೇ ಇದ್ದವ ಇಲ್ಲದವರ ನಡುವಿನ ಕಂದಕ ದೊಡ್ಡದಾಗುತ್ತಿರುವ ಅಭಿವೃದ್ಧಿ ಎನ್ನುವ ಮರೀಚಿಕೆಯಲ್ಲಿ, ತಪ್ಪು ಮಾಡಿದವರನ್ನೆಲ್ಲ ಜೈಲಿಗೆ ತಳ್ಳಿ ಅಥವಾ ಗುಂಡು ಹೊಡೆದು ಸಾಯಿಸಿ ಸರಿಪಡಿಸುತ್ತೇನೆ ಎನ್ನುವ ಹುಂಬ ನಂಬಿಕೆಯಲ್ಲಿ - ಅಮೇರಿಕವನ್ನು ಗುರುತಿಸಿ ಈ ದೇಶದ ದೊಡ್ಡತನವನ್ನು ಉಳಿದ ದೇಶಗಳ ಸಮಾಜೋದ್ಧಾರ ಕಾರ್ಯಕ್ರಮಗಳ ಜೊತೆ ಒಂದರ ಪಕ್ಕ ಒಂದಿಟ್ಟು ತೂಗಿ ನೋಡಿದರೆ ಹೇಗೆ ಎನ್ನುವುದು ನನ್ನ ಬಹುದಿನಗಳ ಬಯಕೆ. ಒಂದು ದೇಶದಲ್ಲಿ ತುಂಬಿಕೊಂಡಿರೋ ಮಿಲಿಯನರ್, ಬಿಲಿಯನರ್‌ಗಳ ಪಟ್ಟಿ ದೊಡ್ಡರಿರಬಹುದು ಆದರೆ ಎಲ್ಲ ವರ್ಗಗಳ ಜನರನ್ನೂ ಪರಿಗಣಿಸಿ ನೋಡಿದಾಗಲೇ ಪೂರ್ಣ ಚಿತ್ರ ದೊರೆಯುತ್ತೆ ಎನ್ನುವುದು ನನ್ನ ನಂಬಿಕೆ. ಒಂದು ಆಲೂಗಡ್ಡೆ ಚಿಪ್ಸ್ ಮಾಡಿ ಮಾರುವ ಕಂಪನಿಯೂ ಇಲ್ಲಿ ದೊಡ್ಡ ಕಾರ್ಪೋರೇಷನ್ ಆಗಿರಬಹುದು, ಅದರ ಯಾದಿಯಲ್ಲಿ ಹಲವಾರು ಮಿಲಿಯನರ್‌ಗಳು ಹುಟ್ಟಿರಬಹುದು, ಆದರೆ ರಸ್ತೆ ಬದಿಯಲ್ಲಿ ಹಾಟ್‌ಡಾಗ್ ಮಾರುವವರೂ ಸಹ ಸಣ್ಣ ಉದ್ಯಮಿಗಳೇ ಅವರ ಕಷ್ಟ ಸುಖವನ್ನೂ ಗಮನದಲ್ಲಿಡಬೇಕು ಎನ್ನುವುದು ನನ್ನ ಅಡಿ ಟಿಪ್ಪಣಿ.

ಆದರೆ ಹೀಗೆ ಬರೆಯುವ ನನಗೂ ನನ್ನ ಮೂಗಿನ ನೇರವೊಂದಿದೆ - ನಾನು ಇಲ್ಲಿ ಛಳಿಯಲ್ಲೇನೂ ನೊಂದಿಲ್ಲ, ಬಿಸಿಲಿನಲ್ಲೇನೂ ಬೆಂದಿಲ್ಲ, ಹೊರಗಡೆ ಆಟವಾಡಿಲ್ಲ, ಒಂದು ಬಹಳ ಚಿಕ್ಕ ಸಮುದಾಯವನ್ನು ಬಿಟ್ಟು ಹೆಚ್ಚಿನವರೊಡಗೂಡಿಲ್ಲ, ಒಂದು ನಗರದಿಂದ ಮತ್ತೊಂದು ನಗರಕ್ಕೆ ಬಸ್ಸಿನಲ್ಲಿ ಪ್ರಯಾಣಿಸಿಲ್ಲ, ಅಮೇರಿಕದ ಐವತ್ತು ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಇನ್ನೂ ನೋಡಿಯೇ ಇಲ್ಲ. ಪೂರ್ವದಲ್ಲಿರೋ ನನ್ನ ಕಣ್ಣಿಗೆ ಪಶ್ಚಿಮ ಯಾವುದೋ ಒಂದು ಹೊಸ ದೇಶವಾಗಿ ಕಂಡು ಬಂದಿದೆ, ಅಲ್ಲಿನವರ ಸುದ್ಧಿಗಳನ್ನು 'ಹೊರಗಿನವರ' ಸುದ್ಧಿಯನ್ನಾಗೇ ನಾನು ಸ್ವೀಕರಿಸುತ್ತೇನೆ. ಕೆಲಸ ಮಾಡುವುದಕ್ಕೆಂದೇ ಬಂದ ನಾನು ಬಂದ ದಿನದಿಂದ ಇಲ್ಲಿ ದುಡಿಯುತ್ತಲೇ ಇದ್ದೇನೆ, ಬಹಳ ಮಟ್ಟಿನ ರಜಾದಿನಗಳನ್ನು ನಾನು ಭಾರತಕ್ಕೆ ಹೋಗುವುದಕ್ಕೆಂದು ಬಳಸಿರೋದರಿಂದ ನನ್ನ ವೆಕೇಷನ್ ಏನಿದ್ದರೂ ಈ ದೇಶದಿಂದ ಹೊರಗೇ ಇದೆ, ಇವತ್ತಿನವರೆಗೂ ಇಲ್ಲಿ ರೆಡಿಯೋ, ಟಿವಿಗಳಲ್ಲಿ ಬರುವ ಸಂಗೀತದ ಭಾಷೆ, ಹಿನ್ನೆಲೆ ನನಗರ್ಥವಾಗೋದಿಲ್ಲ, ಇಲ್ಲಿನ ವ್ಯವಹಾರಗಳೂ ಬಹಳ ಕಾಂಪ್ಲೆಕ್ಸ್ ಆದುದರಿಂದ ನನ್ನ ಒಂದು ಸಣ್ಣ ವರ್ತುಲವನ್ನು ಬಿಟ್ಟರೆ ನನಗೇನೂ ಗೊತ್ತಿಲ್ಲ. ಆದರೆ ಇತ್ತೀಚೆಗೆ ನನ್ನ ಸ್ನೇಹಿತರು ಹೇಳಿರೋ ಹಾಗೆ ಭಾರತದಲ್ಲಿರುವವರಿಗೇ ನಮಗಿಂತಲೂ ಅಮೇರಿಕದವರ ಬಗ್ಗೆ ಬಹಳಷ್ಟು ಗೊತ್ತಿದೆ ಎನ್ನುವಂತಾಯ್ತು. ಇಲ್ಲಿ ತೋರಿಸುವ ಫ್ಯಾಶನ್ ಅಲ್ಲಿ ತಲುಪುವುದರಿಂದ ಹಿಡಿದು, ಇಲ್ಲಿನ ಸಾಮಾಜಿಕ ಸಂಘರ್ಷಗಳಿಗೆ ಅಲ್ಲಿನವರು ಉತ್ತರವನ್ನು ಕಂಡುಕೊಂಡಿದ್ದಾರೆ ಎನ್ನುವ ಮಹಾವಾದವೂ ನನ್ನ ಕಿವಿಗೆ ಬಿತ್ತು. ನಾನು ಹತ್ತು ದೇಶಗಳನ್ನು ನೋಡಿದ್ದೇನೆ ಎಂದು ಎದೆ ತಟ್ಟಿಕೊಂಡು ಮಾತನಾಡುವಂತಹ ದೊಡ್ಡ ಮನುಷ್ಯರಿಗೆ ಒಂದು ದೇಶದ ಬಗ್ಗೆ, ಒಂದು ಧರ್ಮದ ಬಗ್ಗೆ ಮಾತನಾಡುವುದು ಒಂದು ವಸ್ತುವನ್ನು ಅಧ್ಯಯನ ಮಾಡಿ ಅದರ ಬಗ್ಗೆ ಕಾದಂಬರಿಯನ್ನು ಬರೆದಷ್ಟು ಸುಲಭದ ವಿಚಾರವಾಗಿ ಕಂಡುಬಂದಿರುವುದನ್ನು ನೋಡಿ ಹೇಸಿಗೆಯಾಗುತ್ತದೆ. ಈ ಮಹಾತ್ಮರು ಬರೆದ ಬರಹಗಳಲ್ಲಿನ ಉತ್ತುಂಗ ನಿಲುವುಗಳ ತೂಕ ಅವರ ಆಡುಮಾತಿನ ಹಗುರವಾದ ಹಂದರದಲ್ಲಿ ಸೇರಿ ಹೋಗದೇ ಬಹಳಷ್ಟು ಗೊಂದಲಕ್ಕೊಳಗಾಗಿದ್ದೇನೆ. ಅವರವರ ಕಾದಂಬರಿಯ ಪಾತ್ರಗಳಲ್ಲಿ ಇನ್ನೂರು ಮುನ್ನೂರು ಪುಟಗಳಲ್ಲಿ ಬದುಕನ್ನು ಬಿಂಬಿಸಿ ಅದರ ಅಂಕುಡೊಂಕುಗಳನ್ನು ಪ್ರದರ್ಶನಕ್ಕಿಟ್ಟು ಇವರೆಲ್ಲ ಯಶಸ್ವಿಯಾಗಿದ್ದರೆ ಬದುಕೇಕೆ ಇನ್ನೂ ಬದುಕಾಗಿಯೇ ಉಳಿಯುತ್ತಿತ್ತು ಎಂದು ಎಷ್ಟೋ ಸಾರಿ ಕುತೂಹಲಿತನಾಗಿದ್ದೇನೆ. ಓರ್ಹಾನ್ ಪಮುಕ್ ಆಗಲೀ ಎಸ್. ಎಲ್. ಭೈರಪ್ಪನವರನ್ನಾಗಲೀ ಅವರವರ ಬರಹದ ಸಂಕೀರ್ಣತೆಯಲ್ಲಿ ಗುರುತಿಸಿಕೊಳ್ಳಲೋ ಅಥವಾ ಅವರುಗಳು ಹೇಳಿ-ಮಾಡುವ ಪರಿಪಾಟದಲ್ಲಿ ಅಳವಡಿಸಿಕೊಳ್ಳಲೋ ಎನ್ನುವ ಚಿಂತೆಗೆ ಸಿಕ್ಕುಬಿದ್ದಿದ್ದೇನೆ.

ಒಬ್ಬರ ಜೊತೆಗಿನ ಸಂವಾದ ಅವರ ಆದರ್ಶಗಳನ್ನು ಕುರಿತದ್ದಾಗಿರಬೇಕೆ ಅಥವಾ ಅವರ ಸಂಘರ್ಷಗಳನ್ನು ಅನುಮೋದಿಸಬೇಕೇ? ನನ್ನ ಸಣ್ಣ ಕಿಂಡಿಯಲ್ಲಿ ಕಾಣುವುದನ್ನು ನಾನು ಬದುಕು ಎಂದು ನಂಬಿಕೊಂಡಿರುವಾಗ ಉಳಿದವರ ನಂಬಿಕೆಗಳನ್ನು ಒಂದು ಹೋರಾಟವಾಗಿ ಸ್ವೀಕರಿಸಬೇಕೇ?

ಒಂದು ಸಮಸ್ಯೆಯನ್ನು ಹೊರಗಿನಿಂದ ಅಧ್ಯಯನ ಮಾಡುವುದಕ್ಕೂ ಅಲ್ಲೇ ಇದ್ದು ಅನುಭವಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ದೇಶವನ್ನು ಸುತ್ತಲು ಬರುವ ಪ್ರವಾಸಿಗರು ತಮ್ಮ ದೃಷ್ಟಿಕೋನವನ್ನು ತಮ್ಮೊಡನೆ ತಂದು ಅದರ ಇತಿ-ಮಿತಿಯಲ್ಲಿ ಇಲ್ಲಿನವುಗಳನ್ನು ಕಂಡುಕೊಳ್ಳುವುದು ಒಂದು ರೀತಿಯಾದರೆ, ಇಲ್ಲಿಯೇ ಎಷ್ಟೋ ವರ್ಷಗಳ ಕಾಲ ಇದ್ದೂ ತಮ್ಮನ್ನು ಸುತ್ತಲಿನಿಂದ ಐಸೋಲೇಟ್ ಮಾಡಿಕೊಂಡಿರುವವರದು ಮತ್ತೊಂದು ಬಗೆ. ಈ ಹಿನ್ನೆಲೆಯಲ್ಲಿ ಹುಟ್ಟಿಬರುವ ನೋಟ ಪೂರ್ಣವಾಗಿರುತ್ತೆ ಎಂದು ನಾನು ನಂಬೋದಿಲ್ಲ, ಆ ನಂಬಿಕೆಯಲ್ಲೇ ಆದಷ್ಟು ಜನರಲೈಸ್ ಮಾಡುವುದರಿಂದ, ಹಾಗೆ ಮಾಡುವವರಿಂದ ದೂರವಿರುವ ಪ್ರಯತ್ನವನ್ನು ಬೇಕಾಗಿಯೇ ಮಾಡತೊಡಗುತ್ತೇನೆ.

Thursday, October 12, 2006

ಬಸಯ್ಯ್ ಮೇಷ್ಟ್ರು ಮಗಳು

ಪೈಪೋಟಿ ಅನ್ನೋದು ಎಲ್ಲಿ ಶುರುವಾಗಿತ್ತು ನನ್ನಲ್ಲಿ ಅನ್ನೋದನ್ನ ಯೋಚಿಸಿಕೊಂಡು ತಲೆ ಕೆರೆದುಕೊಳ್ಳುತ್ತಾ ಇದ್ದಂತೆ ನಾನು ಹತ್ತನೇ ತರಗತಿಯಲ್ಲಿದ್ದಾಗಿನ ಒಂದು ಘಟನೆ ತಟ್ಟನೆ ನೆನಪಿಗೆ ಬಂತು, ಆ ಘಟನೆಯ ಬೆನ್ನಿಗೆ ಬಂದ ಹಲವಾರು ಉಪಘಟನೆಗಳ ಗುಂಗಿಗೆ ಕಾರಿನಲ್ಲಿ ಕೂತಿದ್ದವನು ಕಾರ್‍‌ಟಾಕ್ ಕೇಳಿ ನಗುತ್ತಿರುವವರ ಹಾಗೆ ನನ್ನಷ್ಟಕ್ಕೆ ನಾನೆ ಜೋರಾಗಿ ನಕ್ಕು ಬಿಟ್ಟೆ, ಹಾಗೆ ನಕ್ಕಿದ್ದನ್ನು ಕಂಡು/ಕೇಳಿ ಇನ್ನಷ್ಟು ನಗು ಉಕ್ಕಿಬಂತು, ಸದ್ಯ ಅಕ್ಕಪಕ್ಕದ ಕಾರಿನಲ್ಲಿ ಯಾರೂ ನೋಡುತ್ತಿಲ್ಲವಲ್ಲ ಎಂದು ಒಮ್ಮೆ ಸಮಾಧಾನವಾಯಿತು!

ಆಗೆಲ್ಲ ದಿನವಿಡೀ ಕ್ರಿಕೇಟ್ ಆಡೋ ಸಂಭ್ರಮ, ಜೊತೆಯಲ್ಲಿ ಗೋಲಿ, ಬುಗುರಿ, ಚಿಣ್ಣಿದಾಂಡು ಹೀಗೆ ಆಟಗಳ ಮೇಲೆ ಆಟಗಳ ಸುರಿಮಳೆ ಒಂದೋ ಎರಡೋ. ಹೀಗೆ ಹೆಚ್ಚಿನ ದಿನಗಳೆಲ್ಲ ಶಾಲೆಗೆ ಹೋಗೋದು, ಪಾಠ ಮುಗಿಸಿ ಬಂದ ಮೇಲೆ ಆಟವಾಡೋದು, ಸಣ್ಣಪುಟ್ಟ ಮನೆಕೆಲಸ ಮಾಡಿ ರಾತ್ರಿ ಒಂಭತ್ತು ಘಂಟೆಯ ಹೊತ್ತಿಗೆ ನಿದ್ರಾದೇವಿಗೆ ಶರಣಾಗಿ ಸುಖನಿದ್ರೆಗೆ ಜಾರುವ ದಿನಗಳವು. ಯಾರಿಗುಂಟು ಯಾರಿಗಿಲ್ಲ ಅನ್ನೋ ಭಾಗ್ಯದ ಉತ್ತುಂಗದಲ್ಲಿರುವಾಗ ನಾನು ಹತ್ತನೇ ತರಗತಿಯ ಮೆಟ್ಟಿಲನ್ನೇರಿದ್ದೆ. ಅಲ್ಲಿಂದ ಶುರುವಾಯ್ತು ನೋಡಿ, ಬಿಡುವು ಸಿಕ್ಕಾಗೆಲ್ಲ 'ಓದಿಕೋ' ಎಂದು ಮೇಲಿನವರು ಮಾಡುವ ಆಜ್ಞೆ. ನನಗಂತೂ ಈ ಹತ್ತನೇ ತರಗತಿಯೊಂದು ಎಷ್ಟು ಬೇಗ ಮುಗಿಸಿದರೆ ಅಷ್ಟು ಸಾಕು ಎನ್ನುವಂತಾಗಿತ್ತು, ಹತ್ತನೇ ತರಗತಿಯ ನಂತರದ ವರ್ಷಗಳು ಬಹಳ ಒಳ್ಳೆಯವು ಎನ್ನುವ ಹುಂಬ ಕಲ್ಪನೆ ಬೇರೆ, ಅದು ಬೇರೆ ವಿಷಯ. ನಾನು ಒಂದರಿಂದ ಒಂಭತ್ತರವರೆಗೆ ಓದಿದ್ದಕ್ಕಿಂತ ಹೆಚ್ಚು ಹತ್ತನೇ ತರಗತಿಯಲ್ಲಿದ್ದಾಗಲೇ ಓದಿದ್ದು ಎನ್ನಬಹುದು. ಹಾಗಂತ ನನಗೆ ಯಾವ ವರ್ಷವು ಕಡಿಮೆ ಅಂಕಗಳು ಬಂದಿವೆ ಎಂದು ಅನ್ನಿಸಿಯೇ ಇಲ್ಲ, ಓದದಿದ್ದರೂ ಅದು ಹೇಗೋ ಮಾಡಿ ಒಳ್ಳೆಯ ಅಂಕಗಳು ಪ್ರತಿ ಪರೀಕ್ಷೆಯಲ್ಲಿಯೂ ಬರುತ್ತಿದ್ದವು!

ನಾನು ಎಷ್ಟೇ ಸಮಜಾಯಿಷಿ ಹೇಳಿದರು ನಮ್ಮ ಮನೆಯಲ್ಲಿ ಬಿಡಲೊಲ್ಲರು, ಅವೇ ಪಾಠಗಳನ್ನು ರಿವಿಜನ್ ಮಾಡುವಂತೆ ಎಲ್ಲರದೂ ಒಂದೇ ಕಾಟ ಶುರುವಾಗಿತ್ತು, ನನ್ನ ನಿದ್ರೆಗೆ ಸಂಚಕಾರ ಬಂದಿತ್ತು. ಸಂಜೆ ಏಳು ಘಂಟೆಗೆ ಆರಂಭವಾಗಿ ಒಂಭತ್ತು ವರೆಗೆ ಫಸ್ಟ್ ಶೋ ಸಿನಿಮಾ ಬಿಡುವ ಹೊತ್ತಿಗೆಲ್ಲಾ ಗೊರಕೆ ಹೊಡೆಯುತ್ತಿದ್ದ ನನಗೆ, ಹತ್ತು ಘಂಟೆಯ ಎರಡನೇ ಶೋ ಸಿನಿಮಾ ಅರಂಭವಾದರೂ ಮಲಗಬಾರದು ಎನ್ನುವ ಕಾಟ ಬೇರೆ. ಇವರ ಉಪಟಳ ಏನೇ ಇದ್ದರೂ ನಿದ್ರಾದೇವಿ ಯಾವಾಗಲೂ ನನ್ನ ಪರವಾದ್ದರಿಂದ ನಾನು ಹೆಚ್ಚೆಂದರೆ ಹತ್ತೂವರೆಗೆಲ್ಲ ನಿದ್ರೆಗೆ ಹೋಗುತ್ತಿದ್ದ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿವೆ.

ನಮ್ಮ ಮನೆಯ ಹಿಂದಿನ ಬೀದಿಯಲ್ಲಿ ಟಿಸಿಎಚ್ ಕಾಲೇಜಿನ ಕನ್ನಡ ಪಂಡಿತರಾದ ಬಸಯ್ಯ ಮೇಷ್ಟ್ರು ಮನೆ ಇತ್ತು. ಅವರ ಮಗಳೂ ಅಮೃತಾ ನನ್ನ ವಯಸ್ಸಿನವಳೇ. ನಮ್ಮೂರಿನಲ್ಲಿ ಕೋ ಎಜುಕೇಷನ್ ಇರಲಿಲ್ಲವಾದ್ದರಿಂದ ನಾವು ಬೇರೆಬೇರೆ ಶಾಲೆಗಳಿಗೆ ಹೋಗುತ್ತಿದ್ದೆವು. ಓದಿನಲ್ಲಿ ಬಹಳ ಚುರುಕು ಅಮೃತಾ ಎಂದು ನನಗೆ ಕೇಳಿ ಗೊತ್ತಿತ್ತು. ಒಂದು ದಿನ ಹೀಗೇ ರಾತ್ರಿ ಎರಡು ಘಂಟೆಯ ಹೊತ್ತಿಗೆ ಇರಬಹುದು, ನಾನು ಬಹಿರ್ದೆಸೆಗೆಂದು ಎದ್ದು ನಮ್ಮ ಹಿತ್ತಲಿಗೆ ಬಂದು ನೋಡಿದಾಗ ಬಸಯ್ಯ ಮೇಷ್ಟ್ರು ಮನೆಯಲ್ಲಿ ಇನ್ನೂ ದೀಪ ಉರಿಯುತ್ತಿರುವುದು ಕಾಣಿಸಿತು. ಆಗ ಪರೀಕ್ಷೆ ಸಮಯ ನಿಧಾನವಾಗಿ ಹತ್ತಿರಹತ್ತಿರ ಬರುತ್ತಿತ್ತು, ನಮ್ಮ ತರಗತಿಯ ಪಾಠ ಪ್ರವಚನಗಳೆಲ್ಲ ಮುಗಿದಿದ್ದವಾದ್ದರಿಂದ ನಾವು ತರಗತಿಗಳಿಗೆ ಹೋಗದೆ ನಮ್ಮ ಫೈನಲ್ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದೆವು. ನನ್ನ ಮನಸ್ಸಿಗೆ ಅದೇನು ಅನ್ನಿಸಿತೋ ಬಿಟ್ಟಿತೋ - ಅಬ್ಬಾ, ಅಮೃತಾ ಇನ್ನೂ ಓದುತ್ತಿದ್ದಾಳೆ, ನಾನು ಇಲ್ಲಿ ನಿದ್ದೆ ಹೊಡೆಯುತ್ತಿದ್ದೇನೆ - ಎಂದು ಅನ್ನಿಸಿದ್ದೇ ತಡ ನಾನೂ ಲಗುಬಗೆಯಿಂದ ಪುಸ್ತಕಗಳನ್ನು ತೆಗೆದು ಓದತೊಡಗಿದೆ, ಮನೆಯವರು ಇಷ್ಟೊತ್ತಿನಲ್ಲಿ ಅದೇನು ಓದ್‌ತೀಯೋ ಮಲಗೋ ಎಂದರೂ ಕೇಳದೇ ನಾನು ಬೆಳಗ್ಗಿನ ಜಾವದವರೆಗೆ ಆದಿನ ಓದಿದ ನೆನಪು. ಅಂದಿನಿಂದ ಒಂದು ಹೊಸ ಹವ್ಯಾಸವೂ ಹುಟ್ಟಿ ಬಿಟ್ಟಿತ್ತು - ಮಧ್ಯಾಹ್ನ ಒಂದಿಷ್ಟು ಹೊತ್ತು ನಿದ್ರೆ ಮಾಡಿದರೆ ಮಾತ್ರ ಸಾಕಾಗುತ್ತಿತ್ತು, ರಾತ್ರಿ ಎಲ್ಲಾ ಯಾವ ಸದ್ದು-ಗದ್ದಲವಿಲ್ಲದೇ ನಿರಂತರವಾಗಿ ಓದಬಹುದಾಗಿತ್ತು - ಬೆಳಗ್ಗಿನ ಜಾವ ಸಣ್ಣಗೆ ಜೊಂಪು ಬಂದು ಆಗಾಗ್ಗೆ ಮಲಗುವುದನ್ನು ಬಿಟ್ಟರೆ, ನನ್ನ ನಿದ್ರಾ ನಡವಳಿಕೆ ಸಂಪೂರ್ಣವಾಗಿ ಬದಲಾಗಿತ್ತು - ಅಂದಿನಿಂದ ಇಂದಿನವರೆಗೆ ನನಗೆ ನಿದ್ರೆ ಮಾಡುವುದಾಗಲಿ, ಮಾಡದೇ ಇರುವುದಾಗಲೀ ಯಾವತ್ತೂ ಸಮಸ್ಯೆ ಎಂದು ಅನ್ನಿಸಿಯೇ ಇಲ್ಲ - ನನಗೆ ಒಳ್ಳೆಯ ಅಂಕಗಳು ಬಂದಿದ್ದರ ಕ್ರ್ಡೆಡಿಟ್ ಅಮೃತಾಳಿಗೆ ಸೇರಬೇಕು.

ಹೀಗೆ ತಂಪು ಹೊತ್ತಿನಲ್ಲಿ ಬಸಯ್ಯ ಮೇಷ್ಟ್ರು ಮಗಳನ್ನು ನೆನೆಯುವುದಕ್ಕೆ ವಿಶೇಷ ಕಾರಣಗಳೇನೂ ಇಲ್ಲದಿದ್ದರೂ - ಆದಿನ ನನ್ನ ಮನಸ್ಸಿನಲ್ಲಿ ಹುಟ್ಟಿದ ಒಂದು ಮಿಥ್ಯಾ ಪೈಪೋಟಿಯ ಮನೋಭಾವ ಇಂದಿಗೂ ನನ್ನ ಮನಸ್ಸಿನಲ್ಲಿದೆ, ಅದು ಇನ್ನು ಮುಂದೆಯೂ ಇರುತ್ತದೆ. ಈ ಪೈಪೋಟಿಯಿಂದ ಏನೇನೋ ಆಗಿದೆ ಎಂದು ಯೋಚಿಸಿಕೊಂಡಂತೆಲ್ಲ ಹಲವಾರು ವಿಷಯಗಳಲ್ಲಿ ನನ್ನನ್ನು ಮೊದಲಿಗನನ್ನಾಗಿ ಕಂಡುಕೊಳ್ಳುತ್ತೇನೆ.

ನನಗೋಸ್ಕರ ನಾನು ಓದಿದ್ದರೆ, ನನ್ನ ಪಾಡಿಗೆ ನಾನು ಬದುಕಿದ್ದರೆ ಚೆನ್ನಿತ್ತು, ಅದರ ಬದಲಿಗೆ ಪೈಪೋಟಿ ಎನ್ನುವ ಮಧ್ಯವರ್ತಿಯ ಸಹವಾಸಕ್ಕೆ ಹೋದಾಗ ಬರಿ ಅಂಕೆ ಸಂಖ್ಯೆಗಳು ಮುಖ್ಯವಾಗಿ ಹೋಗುತ್ತವೆಯೇ ವಿನಾ ಆಯಾ ವಸ್ತುಗಳ ಸ್ವಾರಸ್ಯವೇ ಕಳೆದು ಹೋಗುವ ಹೆದರಿಕೆ ಇದೆ. ನಿನ್ನೆಗಳು ಎನ್ನುವ ಡ್ರಮ್‌ಗಳಲ್ಲಿ ಕುಳಿತು ಏರಿಳಿತಗಳಿರುವ ರಸ್ತೆಗಳಲ್ಲಿ ನಾಳೆಗಳು ಎಂಬ ಕನಸುಗಳ ಹೊತ್ತು ಸದ್ದು ಮಾಡುತ್ತಾ ಉರುಳಿಕೊಂಡು ಹೋಗುತ್ತಿರುವ ನನಗೆ ಪೈಪೋಟಿ ಎನ್ನುವುದು ಏರಿನಲ್ಲಿ ನೂಕುವ ತಂತ್ರವೋ ಅಥವಾ ಇಳಿಜಾರಿನಲ್ಲಿ ಜೋರಾಗಿ ಓಡುವಂತೆ ಮಾಡುವ ಅತಂತ್ರವೋ ಯಾರು ಬಲ್ಲರು?

Wednesday, October 11, 2006

ಸಹಿಸಲಾರದವುಗಳು

ಯಾವುದನ್ನ ಸಹಿಸಬಹುದು ಯಾವುದನ್ನ ಬಿಡಬಹುದು? ಈ ಪ್ರಶ್ನೆ ಎಲ್ಲರ ಮನಸಲ್ಲೂ ಆಗಿಂದಾಗ್ಗೆ ಮೂಡೋದು ಸಹಜ, ಅದಕ್ಕುತ್ತರವೂ ಅವರವರನ್ನ ಅವಲಂಭಿಸಿರುತ್ತೆ ಅನ್ನೋದು ಲೋಕೋಕ್ತಿ. ಈ ದಿನ ನನಗೆ ಸಹಿಸಲಾರದ್ದು ಎನ್ನಿಸಬಹುದಾದ ಒಂದಿಷ್ಟು ವಿಷಯಗಳನ್ನು ಹೀಗೆ ತೆರೆದಿಟ್ಟರೆ ಹೇಗೆ ಅನ್ನಿಸಿತು.

ಆಫೀಸಿಗೆ ಹೋಗೋ ಹೆಚ್ಚಿನ ದಿನಗಳಲ್ಲಿ ಒಂದೇ ಕೆಲ್ಲಾಗ್ ಅಥವಾ ಕಲ್ವರ್ ರಸ್ತೆಗಳಲ್ಲಿ ಟ್ರಾಫಿಕ್ ಲೈಟ್‌ನಲ್ಲಿ ನಾನು ಕಾರನ್ನು ನಿಲ್ಲಿಸಿದ್ರೆ ಆಗಾಗ್ಗೆ ಅತ್ತಿತ್ತ ನೋಡೋದು ನನ್ನ ರೂಢಿ. ಕೆಲವು ತಿಂಗಳುಗಳಲ್ಲಿ ಸೂರ್ಯೋದಯದ ಹೊತ್ತಿಗಾದ್ರೆ ದಿನಕ್ಕೊಂದು ಚಿತ್ರ ಅಂತಾರಲ್ಲ ಹಾಗೆ ನ್ಯೂ ಯಾರ್ಕ್ ನಗರದ ಕಡೆಯಿಂದ ಆಗಸದಲ್ಲಿ ಹೊಸ ಚಿತ್ರ ನೋಡೋಕೆ ಸಿಗುತ್ತೆ, ಕೆಲವು ಕಡೆ ಮಂಜಿನ ಹನಿಗಳು ಕಾಣ್ಸುತ್ವೆ, ಏನಿಲ್ಲಾ ಅಂದ್ರೂ ಆಯಾ ದಿನಗಳಿಗೆ ತಕ್ಕಂತೆ ಅಕ್ಕಪಕ್ಕದವರ ನಡವಳಿಕೆಗಳಾದರೂ ಕಣ್ಣಿಗೆ ಬೀಳುತ್ತವೆ. ಹೀಗೇ ಒಂದಿನಾ ಬೆಳಗ್ಗೆ ಒಬ್ರು ಕೆಲ್ಲಾಗ್ ರಸ್ತೆ ಟ್ರಾಫಿಕ್ ಲೈಟ್ ನಲ್ಲಿ ಎಲೆಕ್ಟ್ರಿಕ್ ಶೇವರ್ ಉಪಯೋಗಿಸಿ ಗಡ್ಡಾ ಶೇವ್ ಮಾಡಿಕೊಳ್ತಾ ಇದ್ರು, ಆ ದಿನ ನಾನಂದುಕೊಂಡೆ, ಛೇ ಏನಪ್ಪಾ ಬೆಳ್ಳಂಬೆಳಗ್ಗೆ ಈ ಮನುಷ್ಯನಿಗೆ ಇಷ್ಟೂ ಸಮಯ ಇಲ್ಲಾ ಅಂದ್ರೆ ಹೇಗೆ ಅಂತ. ಈ ದಿನ ಮತ್ತೆ ಅದೇ ವ್ಯಕ್ತಿಯ ದರ್ಶನವಾಯಿತು, ಹಲವಾರು ತಿಂಗಳುಗಳ ನಂತರ ಆ ವ್ಯಕ್ತಿಯನ್ನು ನೋಡಿದ ಕೂಡಲೇ ಈ ಸಾರಿ ನನಗೆ ಆಶ್ಚರ್ಯವಾಗುವುದಕ್ಕಿಂತ ಹೆಚ್ಚಾಗಿ, ಅವರ ನಡವಳಿಕೆಗೆ ತಕ್ಕನಾದ ನನ್ನದೊಂದು ನಡವಳಿಕೆಯ ನೆನಪಾಗಿ 'ನನಗೆ ಅಷ್ಟೂ ಸಮಯವಿಲ್ಲವೇ?' ಅನ್ನೋ ಮಾತನ್ನು ನಾನೇ ಕೇಳಿಕೊಳ್ಳತೊಡಗಿದೆ. ನಾನೇನೂ ಅವರ ಥರಾ ಕಾರಲ್ಲಿ ಗಡ್ಡಾ ಶೇವ್ ಮಾಡೋದಿಲ್ಲ, ಅದರ ಬದಲಿಗೆ ನನ್ನ ಶೂಸ್ ಲೇಸ್ ಅನ್ನು ಬಹಳಷ್ಟು ಸಾರಿ ಒಂದೇ ಕಲ್ವರ್ ಅಥವಾ ಕೆಲ್ಲಾಗ್ ಟ್ರಾಫಿಲ್ ಲೈಟ್ ನಲ್ಲಿಯೇ ನಾನು ಕಟ್ಟಿಕೊಳ್ಳೋದು. ಹೀಗೆ ಆ ವ್ಯಕ್ತಿ ಶೇವ್ ಮಾಡುವ ವಿಚಾರದ ಬಗ್ಗೆ ನಾನು ನನ್ನ ಅನಿಸಿಕೆಯನ್ನು ಹೊರಹಾಕುವ ಮುನ್ನ ನನ್ನ ಈ ನಡವಳಿಕೆ - ಅಂದರೆ ಟ್ರಾಫಿಕ್ ಲೈಟ್‌ನಲ್ಲಿ ಶೂ ಲೇಸ್ ಕಟ್ಟೋ ಬುದ್ಧಿ - ನೋಡಿ ನನಗೇ ಒಂದು ರೀತಿ ಮುಜುಗರವಾಗತೊಡಗಿತು.

***

ದಿನಕ್ಕೆ ಏನಿಲ್ಲ ಅಂದ್ರೂ ಹನ್ನೆರಡು ಘಂಟೆಗಿಂತಲೂ ಹೆಚ್ಚು ಆಫೀಸಿನಲ್ಲಿ ಕಳೆಯುವವರಿಗೆ ರೆಸ್ಟ್‌ರೂಮ್ ಬ್ರೇಕ್‌ಗಳು ಬಹಳ ರಿಲೀಫ್ ನೀಡುವಂತಹವು. ನಾನು ನೋಡಿರೋ ಹಾಗೆ ದಿನಕ್ಕೆ ಹಾಗೆ ಸ್ವಾಭಾವಿಕ ಎರಡೋ, ಮೂರೋ, ನಾಲಕ್ಕೋ ಬ್ರೇಕ್‌ಗಳನ್ನು ತೆಗೆದುಕೊಳ್ಳುವುದು ಎಷ್ಟೋ ಜನರ ರೂಢಿ ಕೂಡಾ. ಆದರೆ ಇಂದಿನ ದಿನಗಳಲ್ಲಿ ನಾವು ಎಷ್ಟು ಕೆಲಸ ಮಾಡಿದರೂ ಕಡಿಮೆಯೇ ಎನ್ನುವ ಪರಿಸ್ಥಿತಿಯಲ್ಲಿ, ನಾವು ಎಲ್ಲಿಗೆ ಹೋದರೂ ನಮ್ಮನ್ನು ಬಿಡದೇ ಹಿಡಿದಿಡುವ ಎಲೆಕ್ಟ್ರಾನಿಕ್ ಸಾಧನಗಳ ಹಿಡಿತದಲ್ಲಿ ರೆಸ್ಟ್‌ರೂಮ್ ಬ್ರೇಕ್‌ನಲ್ಲಿದ್ದಾಗಲೂ ಒಂದಲ್ಲ ಒಂದು ರೀತಿಯಲ್ಲಿ ಕಮ್ಮ್ಯೂನಿಕೇಟ್ ಮಾಡುವ ಅಗತ್ಯ ಬಂದೊದಗಿದೆ. ಹೀಗಿರುವಲ್ಲಿ ಎರಡು ನಿಲುವುಗಳು: ನನ್ನ ಎದುರೇ ಒಬ್ಬರು ನಾನು ರೆಸ್ಟ್‌ರೂಮ್ ನಲ್ಲಿರುವಾಗ ಫೋನ್ ಆನ್ಸರ್ ಮಾಡುವುದಿಲ್ಲ ಎನ್ನುವುದನ್ನೂ, ಮತ್ತೊಬ್ಬರು ನಿರಾಂತಕವಾಗಿ ಫೋನ್ ಹಿಡಿದು ಮಾತನಾಡುವುದನ್ನೂ ನಾನು ಕೇಳಿದ್ದೇನೆ. ನಾವು ಎಲ್ಲಿ ಇವುಗಳ ಮಧ್ಯೆ ಗೆರೆಯನ್ನು ಹಾಕುತ್ತೇವೆ ಎನ್ನುವುದು ಮುಖ್ಯ. ನನ್ನ ಪ್ರಕಾರ ಮೊದಲನೇ ನಿಲುವು, ಅಂದರೆ ರೆಸ್ಟ್‌ರೂಮ್ ನಲ್ಲಿ ನೀವು ಬಂದ ಕೆಲಸವನ್ನು ಮಾಡಿ ಆದಷ್ಟು ಕಡಿಮೆ ಸದ್ದುಗದ್ದಲಗಳನ್ನು ಮಾಡಿ ಹೊರಬರುವುದು, ಒಳ್ಳೆಯ ನಡವಳಿಕೆ, ಅದು ಸಹಿಸಬಹುದಾದ ಒಂದು ಪರಂಪರೆಯನ್ನು ಬೆಳೆಸುತ್ತದೆ. ಅದರ ಬದಲಿಗೆ ಎರಡನೆಯ ನಿಲುವು ಬಹಳಷ್ಟು ಮುಜಗರವನ್ನೂ, ಅನಾನುಕೂಲವನ್ನೂ, ಅಸಹನೆಯನ್ನೂ ಹುಟ್ಟುಹಾಕುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ನಾವು ನಡೆದುಕೊಳ್ಳುವ ರೀತಿನೀತಿ ಎಲ್ಲರಿಗೆ ಹೊಂದುವಂತಿರಬೇಕೇ ವಿನಾ ನನ್ನ ಫೋನು ನಾನು ಎಲ್ಲಿ ಬೇಕಾದರೂ ಮಾತನಾಡುತ್ತೇನೆ ಎಂದರಾಗುತ್ತದೆಯೇ? ಹೀಗೇ ಸಿನಿಮಾ ಮಂದಿರ, ಚರ್ಚು-ದೇವಸ್ಥಾನಗಳಲ್ಲಿ ಎಷ್ಟು ಬೊಬ್ಬೆ ಹೊಡೆದರೂ ಕೆಲವರು ತಮ್ಮ ಸೆಲ್ ಫೋನನ್ನು ಆರಿಸುವುದಿರಲಿ, ವೈಬ್ರೇಟ್ ಮೋಡ್‌ಗೂ ಹಾಕೋದಿಲ್ಲ. ನಾವು ಇತರರ ಅನಾನುಕೂಲಗಳಿಗೆ ಕಿವಿಗೊಡದೇ ಹೋಗುವಷ್ಟು ತಂತ್ರಜ್ಞಾನದಲ್ಲಿ ಹುದುಗಿಹೋಗಿದ್ದೇವೆಯೇ ಎಂದು ನನಗೆ ಹಲವಾರು ಬಾರಿ ಅನ್ನಿಸಿದೆ. ಸೆಲ್‌ಫೋನ್, ಪಿಡಿಎ, ಬ್ಲ್ಯಾಕ್‌ಬೆರ್ರಿ, ಲ್ಯಾಪ್‌ಟಾಪ್ ಮುಂತಾದ ಸಲಕರಣೆಗಳು ನಮ್ಮ ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಬೇಕು, ನಮ್ಮ ಸಂವಹನವನ್ನು ಅಭಿವೃದ್ಧಿಗೊಳಿಸಬೇಕು, ನಮ್ಮನ್ನು ಕಾರ್ಯತತ್ಪರರನ್ನಾಗಿಸಬೇಕು ಎಂದಲ್ಲವೇ ಇರೋದು, ಹಾಗಿದ್ದರೆ ನಮ್ಮ ನಮ್ಮ ಅಭಿವೃದ್ಧಿ ಎನ್ನುವ ಸಮೀಕರಣದಲ್ಲಿ ಇತರರ ಬೇಕುಬೇಡಗಳಿಗೆ ಸ್ಪಂದಿಸುವಷ್ಟು ವ್ಯವಧಾನ ನಮ್ಮಲ್ಲಿ ಇದೆಯೇ? ನಾವೆಲ್ಲರೂ ನಮ್ಮಷ್ಟಕ್ಕೆ ನಾವು ಕಾರ್ಯತತ್ಪರರಾದರೆ ಅದರ ಒಟ್ಟು ಮೊತ್ತ ಲೋಕದ ಕಲ್ಯಾಣವೇ? ಹೆಚ್ಚು ಸದ್ದು-ಗದ್ದಲವೇ ಪ್ರಗತಿಯ ಸಂಕೇತವೇ?

ಪ್ರತಿಯೊಂದು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಮಾಡಬಹುದಾದ ಏನೇನೆಲ್ಲ ಇದ್ದರೂ ಬಹಳಷ್ಟು ಜನ ಅದರ ಪೂರ್ಣ ಉಪಯೋಗವನ್ನು ಪಡೆದುಕೊಳ್ಳುತ್ತಾರೆ, ತಮ್ಮಲ್ಲಿರುವ ಸಾಧನಗಳನ್ನು ಪೂರ್ಣವಾಗಿ ಬಳಸುತ್ತಾರೆ ಎಂದು ನನಗೇನೂ ಅನ್ನಿಸುವುದಿಲ್ಲ - ಇದನ್ನು ವಾದಿಸಲು ನನ್ನ ಬಳಿ ಅಂಕಿಅಂಶಗಳೇನೂ ಇಲ್ಲ ಆದರೂ ಅದು ನನ್ನ ಅನುಭವ. ಅಂದರೆ ಹೆಚ್ಚು ಹೆಚ್ಚು ಆಧುನಿಕ ಪರಿಕರಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದೇನೂ ಇಲ್ಲ. ಸಾವಿರಾರು ಡಾಲರುಗಳ ರೋಲೆಕ್ಸ್ ವಾಚ್ ಕಟ್ಟಿದರೂ, ನಲವತ್ತು ರೂಪಾಯಿಗಳಿಗೆ ಶಿವಮೊಗ್ಗ ಬಜಾರಿನಲ್ಲಿ ಸಿಗುವ ಎಲೆಕ್ಟ್ರಾನಿಕ್ ವಾಚ್‌ಗಳನ್ನು ಕಟ್ಟಿಕೊಂಡರೂ ಅದರಿಂದೇನೂ ನಮ್ಮ ಸಮಯ ಪರಿಪಾಲನೆ ನಿರ್ಧಾರವೇನಾಗೋದಿಲ್ಲ, ತಡವಾಗಿ ಬಂದು ಹೋಗುವವರು ತಡ ಮಾಡಿಯೇ ಮಾಡುತ್ತಾರೆ.

***

ನಾವು ಸಂವಹನದಿಂದ ಹೇಗೆ ಬೆಳೆಯುತ್ತೇವೆಯೋ, ನಮಗೆ ಮೌನದಿಂದಲೂ ಸಹ ಅಷ್ಟೇ ಒಳ್ಳೆಯ ಅನುಕೂಲಗಳಿವೆ ಅನ್ನೋದು ನನ್ನ ಅನುಭವ. ಈ ಮೌನ ನಾವು ಇತರರ ಸಂವಹನವನ್ನು ಆಲಿಸುವಾಗ ಅಥವಾ ಏನನ್ನೋ ಗಹನವಾಗಿ ಮನದಟ್ಟು ಮಾಡಿಕೊಳ್ಳುವಾಗ ಅಪ್ಯಾಯಮಾನವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಇತರರು ನಿರ್ಮಿಸೋ ಗದ್ದಲ ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ, ನಮ್ಮ ಗಮನ ಚಂಚಲವಾಗುತ್ತದೆ. ಹೀಗಿರುವಲ್ಲಿ ನಮ್ಮ ಹಾಗೇ ಇತರರು ಎಂದು ಅಂದುಕೊಳ್ಳುವುದನ್ನು ನಾವೇಕೆ ಸುಲಭವಾಗಿ ಅಳವಡಿಸಿಕೊಳ್ಳೋದಿಲ್ಲ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಿ ಮೌನದ ಮೊರೆಹೋಗತೊಡಗುತ್ತೇನೆ.

Monday, October 09, 2006

ಕಿರುಗತೆ - ಜೊತೆಗಾತಿ

'ಸರ್, ನನ್ನನ್ನು ದಯವಿಟ್ಟು ಕ್ಷಮಿಸಿ, ನಿಮ್ಮಾಕೆಯ ಪ್ರಾಣಪಕ್ಷಿ ಈಗಾಗಲೇ ಹಾರಿಹೋಗಿದೆ, ಆಕೆ ಯಾವಾಗಲೋ ಕಾಲವಾಗಿದ್ದಾರೆ!' ನಿಧಾನವಾಗಿಯಾದರೂ ತುಸು ಗಂಭೀರವಾಗೇ ಈ ವಿಷಯವನ್ನು ಈ ಮನುಷ್ಯನಿಗೆ ಹೇಳುವಲ್ಲಿ ನನ್ನ ಜೀವ ಬಾಯಿಗೆ ಬಂದಿತ್ತು. ಸುಮಾರು ಎಪ್ಪತ್ತೆರಡು ವರ್ಷ ವಯಸ್ಸಿನ ಈ ಮನುಷ್ಯ ತನ್ನ ಹೆಂಡತಿಯನ್ನು ಕಂಡರೆ ಅಪಾರವಾದ ಗೌರವ ಹಾಗೂ ಪ್ರೀತಿಯುಳ್ಳವನು ಎಂಬುದು ನಮ್ಮ ಆಸ್ಪತ್ರೆಯವರಿಗೆಲ್ಲ ಯಾವಾಗಲೋ ಗೊತ್ತಾಗಿದೆ. ಕಳೆದ ಒಂದು ವಾರ ತನ್ನ ಹೆಂಡತಿಯ ಜೊತೆ ಕಳೆದವನು ಏನೇನನ್ನೆಲ್ಲ ಮಾಡಿಲ್ಲ, ಆಕೆಯ ಕೂದಲನ್ನು ಬಾಚುವುದರಿಂದ ಹಿಡಿದು, ಗಲ್ಲವನ್ನು ತೀಡಿ ನಮ್ಮೆಲ್ಲರ ಎದುರೇ ಮಕ್ಕಳನ್ನು ಮುದ್ದಿಸುವಂತೆ ಹಣೆಯ ಮೇಲೆ ಚುಂಬಿಸುವುದೇನು, ಆಕೆ ಊಟ ಮಾಡದೇ ಈತ ಎಂದು ಬಾಯಿಗೆ ಒಂದು ತೊಟ್ಟು ನೀರನ್ನು ಸೇರಿಸಿದ್ದನ್ನೂ ನಾವ್ಯಾರೂ ಕಾಣೆವು. ಹಗಲು-ರಾತ್ರಿ ಪಾಳಿಯನ್ನು ನಾವು ಮುಗಿಸಿ ಮನೆಗೆ ಹೋಗಿ ಬರುತ್ತಿದ್ದರೇನಂತೆ, ಈ ಮುದುಕ ಅಲ್ಲ ಜಂಟಲ್‌ಮ್ಯಾನ್ ತನ್ನಾಕೆಯನ್ನು ಬಿಟ್ಟು ಒಂದು ಕ್ಷಣವೂ ಇದ್ದವನಲ್ಲ.

ಆಕೆಯದ್ದು ಟರ್ಮಿನಲ್ ಕ್ಯಾನ್ಸರ್ ಎಂದು ಈಗಾಗಲೇ ಆತನಿಗೆ ತಿಳಿದು ಹೋಗಿದ್ದು ನಮ್ಮ ಆಸ್ಪತ್ರೆಗೆ ಇನ್ನೇನು ಕೊನೆಗಾಲದ ಚಿಕಿತ್ಸೆ ಅಥವಾ ವಿಶ್ರಾಂತಿ ಎನ್ನುವ ಹಂತದಲ್ಲಿರುವಾಗ ಕರೆದುಕೊಂಡು ಬಂದಿದ್ದರು. ಎಲುಬಿನ ಹಂದರದಂತಿದ್ದ ಆಕೆ ಈಗ ತಲೆ ಕೂದಲನ್ನು ಸುಮಾರಾಗಿ ಕಳೆದುಕೊಂಡು ಅಲ್ಲಲ್ಲಿ ಬೋಳುತಲೆ ಕಂಡು ಬಂದು ಕುರೂಪವಾಗಿ ಕಂಡುಬಂದರೂ ಒಂದು ಕಾಲದಲ್ಲಿ ಆಕೆ ಸುರಸುಂದರಿಯೇ ಇದ್ದಿರಬೇಕು. ಆಕೆಯ ತಲೆಯ ಬುಡದಲ್ಲಿ ಹಾಸಿಗೆಯ ಪಕ್ಕ ಇಟ್ಟ ಎರಡು ಫೋಟೋಗಳು ಅವರ ಜೀವನ ಪರ್ಯಂತ ಆತ್ಮೀಯತೆಗೆ ಸಾಕ್ಷಿಯೆನ್ನುವಂತೆ ಜೀವಂತವಾಗಿದ್ದವು. ಸುಮಾರು ನಲವತ್ತು ವರ್ಷಗಳಿಗೂ ಅಧಿಕವಾದ ತುಂಬು ದಾಂಪತ್ಯವಂತೆ, ನಮ್ಮ ಆಸ್ಪತ್ರೆಯಲ್ಲಿ ಬೇಕಾದಷ್ಟು ಜನ ಈ ರೀತಿ ಖಾಯಿಲೆಯವರನ್ನು ನಾವು ಈ ಹಿಂದೆ ನೋಡಿದ್ದರೂ ಎಂಥವರ ಮನದಲ್ಲೂ ಮಾನವೀಯ ಸಂಬಂಧವೆಂಬ ಬಳ್ಳಿಯನ್ನು ಹಬ್ಬಿಸಿ ಬಿಡಬಲ್ಲ ಚೈತನ್ಯವನ್ನು ಈ ದಂಪತಿಗಳು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದು ಎಲ್ಲರಲ್ಲೂ ಅವರ ಮೇಲೆ ಗೌರವಾದರಗಳನ್ನು ಮೊದಲ ದಿನದಿಂದಲೇ ಹುಟ್ಟಿಸಿತ್ತು.

ಆಶ್ಚರ್ಯವೆಂದರೆ ಈ ವ್ಯಕ್ತಿ ತನ್ನಷ್ಟಕ್ಕೆ ತಾನು ವಾಸ್ತವವನ್ನು ಒಪ್ಪಿಕೊಂಡಿರುವ ಬಗೆ - ಒಂದು ರೀತಿಯಲ್ಲಿ ಹೇಳೋದಾದರೆ ಆತನಿಗೆ ನಮಗೆ ಗೊತ್ತಿರದ ಸತ್ಯದ ಮತ್ತೊಂದು ಮಗ್ಗುಲು ಗೊತ್ತಿದೆ ಎನ್ನಬೇಕು, ಸತ್ಯಕ್ಕೆ ಅದೆಷ್ಟು ಮಗ್ಗುಲುಗಳಿವೆಯೋ ನಮಗೆ ಕಾಣೋದೇ ಸತ್ಯವೆಂದು ನಾವು ನಂಬಿಕೊಂಡಿದ್ದರೆ ಈ ಭೂಮಿ ದುಂಡಗಾದರೂ ಹೇಗಿರುತ್ತಿತ್ತು? ಇಲ್ಲ, ಈ ಭೂಮಿ ದುಂಡಗಿದ್ದರೆ ಮಾತ್ರ ಸಾಲದು ಅದು ತಿರುಗಲು ಈ ರೀತಿಯ ಪ್ರೀತಿಯ ಧ್ಯೋತಕವೆನ್ನುವುದೊಂದಿದ್ದರಲೇ ಬೇಕು, ಒಂದು ರೀತಿ ಬಂಡಿಯ ಗಾಲಿಗಳಿಗೆ ಕೀಲೆಣ್ಣೆಯನ್ನು ಸವರಿದ ಹಾಗೆ ಆಗಾಗ್ಗೆ ಸಂಸಾರದಲ್ಲಿ ಹುಟ್ಟಿ ಹರಡುವ ತುಮುಲವೆಂಬ ಕುಯ್ ಕುಯ್ ಸದ್ದನ್ನು ಮರೆಸಿ ನಿರ್ಮಲವಾದ ಪ್ರೀತಿಯೆಂಬ ಶಾಂತಿಯನ್ನು ಹರಡಲು. ಇಲ್ಲ, ಆಕೆಗೆ ಹತ್ತು ವರುಷದಿಂದ ಕ್ಯಾನ್ಸರ್ ಎಂಬುದು ಗೊತ್ತಾದ ಮೇಲೆ ಈ ವ್ಯಕ್ತಿ ಎದೆಗುಂದದೇ ನಿಂತು ಎಲ್ಲವನ್ನೂ ನಿಭಾಯಿಸಿಕೊಳ್ಳುವ ಸಾಮಾನ್ಯ ನಿಲುವಿನವನು. ನನ್ನ ಪೇಷಂಟಿನ ಪೋಷಕನಾದ ಆತನಲ್ಲಿ ನನ್ನದೇನು ಮಾತು - ಆದರೂ ಆತನ ಸಂಯಮ ಸದಾ ಒಳಿತನ್ನು ಆಶಿಸುವ ಕಂಗಳು, ಸತ್ಯದ ಮತ್ತೊಂದು ಮಗ್ಗುಲನ್ನು ಅರಿತ ಶಾಂತ ಮುಖ ಇವುಗಳು ನನ್ನನ್ನು ಆ ವ್ಯಕ್ತಿಯೊಡನೆ ಮಾತನಾಡುವಂತೆ ಪ್ರಚೋದಿಸಿದವು.

'ಸರ್, ಮಾನವೀಯ ಸಂಬಂಧಗಳು ಎಷ್ಟೊಂದು ಮಧುರವೆಂದು ನಮಗೆ ಹಲವಾರು ಬಾರಿ ಅನ್ನಿಸಿದರೂ ಅಷ್ಟೇ ಸಹಜವಾಗಿ ಅವುಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದೇಕೆ?'

ನನ್ನ ಪ್ರಶ್ನೆಗೆ ಗಂಭೀರತೆಯ ಮುಖವಾಡ ಸ್ವಲ್ಪ ತರಿಸಿ, ತುಟಿಯ ಮೇಲೆ ತಿಳಿನಗೆಯನ್ನು ತೋರಿಸಿಕೊಂಡು 'ನೋಡಿ, ನಮ್ಮ ನಮ್ಮ ನಡುವಿನ ಸಂಬಂಧಗಳು ವ್ಯಾಪಾರ ಧ್ಯೋತಕವಾಗಿ ನಿರ್ಮಿತವಾದವಲ್ಲ, ಅವು ಸಹಜವಾದವು - ನೀವು ಸಹಜವಾಗಿ ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದು ಎಂದಿರಿ - ನನಗೆ ಆ ಬಗ್ಗೆ ಗೊತ್ತಿಲ್ಲ, ಆದರೆ ನನ್ನ ಮತ್ತು ಆಕೆಯ ಸಂಬಂಧಗಳ ಬಗ್ಗೆ ಬೇಕಾದರೆ ಹೇಳಬಲ್ಲೆ' ಎಂದು ಹಾಸಿಗೆಯಲ್ಲಿ ಅಂಗಾತವಾಗಿ ಔಷಧಗಳ ನೆರವಿನಿಂದ ಕಣ್ಣು ಮುಚ್ಚಿ ವೆಂಟಿಲೇಟರ್ ಸಹಾಯದಿಂದ ಎದೆಯ ತಿದಿ ಉಬ್ಬಿ ಇಳಿಯುತ್ತಿದ್ದ ಹೆಂಡತಿಯ ಕಡೆಗೆ ತೋರಿಸಿ ಹೇಳಿದರು.

ಸುಮ್ಮನೇ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತ ವ್ಯಕ್ತಿ ತೊಂದರೆ ಕೊಟ್ಟೆನೇನೋ ಎನ್ನಿಸದಿರಲಿಲ್ಲ, ಕ್ಲಿಷ್ಟವಾದ ಪ್ರಶ್ನೆಗೆ ಉತ್ತರಿಸಲು ಪೂರ್ವಭಾವಿ ಸಿದ್ಧತೆ ನಡೆಸುವ ಯಾವುದೇ ತರಾತುರಿ ಅಥವಾ ಗೊಂದಲವೂ ಈ ವ್ಯಕ್ತಿಯಲ್ಲಿ ಕಂಡುಬರಲಿಲ್ಲ. ಅವರ ಸಮಾಧಾನದ ನಿಲುವೇ ನನ್ನನ್ನು ಕೆಲಸಗಳ ಮಧ್ಯೆ ಒಂದಿಷ್ಟು ನಿಲ್ಲುವ ವ್ಯವಧಾನವನ್ನು ಕಲ್ಪಿಸಿಕೊಟ್ಟಿತ್ತು.

'ಹೇಳಿ' ಎಂದೆ...'ನಿಧಾನವಾಗಿ ಯೋಚಿಸಿ, ನಿಮ್ಮ ತಂದೆ, ತಾಯಿ, ಬಂಧು, ಬಳಗ, ಸಹೋದರ-ಸಹೋದರಿಯರ ನಡುವೆ, ಮಕ್ಕಳ ನಡುವೆ ಎಲ್ಲಕ್ಕಿಂತ ಹೆಚ್ಚು ನಿಮ್ಮ ಒಡನಾಟ, ಅದರಲ್ಲೂ ಧೀರ್ಘಕಾಲೀನವಾಗಿರುವ ಸಂಬಂಧ ಎಂದರೆ ಗಂಡ-ಹೆಂಡತಿಯದು ಮಾತ್ರ. ಉದಾಹರಣೆಗೆ ನನ್ನ ಬದುಕಿನಲ್ಲಿ ಒಂದೇ ಮನೆಯಲ್ಲಿ ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ನನ್ನ ಜೊತೆ ಈಕೆ ಬದುಕಿ ಬಂದಿದ್ದಾಳೆ, ನಾವಿಬ್ಬರೂ ಒಬ್ಬರಿಗೊಬ್ಬರಾಗಿದ್ದೇವೆ, ಇಂತಹ ಧೀರ್ಘಕಾಲೀನವಾದ ಪವಿತ್ರ ಸಂಬಂಧ ಹಾಗೋ ಮೈತ್ರಿಯನ್ನು ನೆನೆದುಕೊಂಡರೆ ಯಾವ ನೆಲೆಗಳನ್ನು ಎಲ್ಲಿ ಹೇಗೆ ಕಳೆದುಕೊಳ್ಳುತ್ತೇವೆ, ಕಳೆದುಕೊಳ್ಳಬಹುದು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಈ ಪ್ರಯಾಣದಲ್ಲಿ ನಾವಿಬ್ಬರೂ ಒಂದೇ ಬಂಡಿಯಲ್ಲಿ ಪಯಣಿಸುತ್ತಿರುವಾಗ ದಾರಿಯಲ್ಲಿ ಬರುವ ಅಡೆತಡೆಗಳು ಒಂದಿಷ್ಟು ಅಲ್ಲಲ್ಲಿ ಘರ್ಷಣೆಯನ್ನೊಡ್ಡಬಹುದೇ ವಿನಾ ಅವುಗಳನ್ನು ದೊಡ್ಡದನ್ನಾಗಿ ಮಾಡಿ ಬಂಡಿಯ ಗಾಲಿಗಳನ್ನು ಕೀಳುವುದು ಜಾಣತನವಲ್ಲ. ಬಂಡಿ ನಿರಂತರವಾಗಿ ಮುಂದೆ ನಡೆದು ಅದು ಸೇರಬೇಕಾದ ಗುರಿಯನ್ನು ಸೇರಲಿ, ಆಗ ಎಲ್ಲವೂ ಸುಸುತ್ರವಾಗಿ ನಡೆಯುತ್ತದೆ - ಅದು ಸಹಜವಾದದ್ದು, ಸಹಜವಾದದ್ದೆಂದೂ ತಮ್ಮ ನೆಲೆಗಳನ್ನು ಕಳೆದುಕೊಳ್ಳೋದಿಲ್ಲ.' ಎಂದು ಕಣ್ಣು ಮುಚ್ಚಿ ಒಮ್ಮೆ ಉಸಿರನ್ನು ಜೋರಾಗಿ ಎಳೆದುಕೊಂಡು ಮತ್ತೆ ಕಣ್ಣು ಬಿಟ್ಟು ನನ್ನೆಡೆಗೆ ನೋಡಿದರೇ ವಿನಾ ಮುಂದೇನೂ ಹೇಳಲಿಲ್ಲ. ನಾನು ಅಲ್ಲಿದ್ದು ಸ್ವಲ್ಪ ಯೋಚಿಸಿ, ಅಕೆಯ ಚಾರ್ಟಿನ ಕಡೆಗೊಮ್ಮೆ ಕಣ್ಣು ಹಾಯಿಸಿ ನನ್ನ ಕೆಲಸವನ್ನು ನೋಡಿಕೊಂಡು ಹೋದೆ, ಇಂದಿಗೂ ನನ್ನ ಮನದಲ್ಲಿ ಅವರು ಹೇಳಿದ ಮಾತುಗಳು ಅನುರಣಿಸುತ್ತಲೇ ಇವೆ.

***

'ಸ್ವಲ್ಪ ಸರಿಯಾಗಿ ನೋಡಿ!' ಎಂದು ಬೇಡುವ ಆರ್ತ ಧ್ವನಿಯೊಂದು ಬಂದಾಗಲೇ ನನಗೆ ಈ ಪ್ರಪಂಚಕ್ಕೆ ಬರುವಂತಾಗಿದ್ದು. ಆಕೆಗೆ ತಗುಲಿಕೊಂಡ ವೆಂಟಿಲೇಟರ್ ಅನ್ನು ನರ್ಸ್ ಇನ್ನೂ ನಿಲ್ಲಿಸಿರಲಿಲ್ಲವಾದ್ದರಿಂದ ಅದು ತನ್ನ ಕೆಲಸವನ್ನು ಮುಂದುವರೆಸಿತ್ತು, ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದ್ದು ನನಗೆ ಖಚಿತವಾದರೂ ವೆಂಟಿಲೇಟರ್ ಅನ್ನು ನಿಲ್ಲಿಸುವ ಮೊದಲು ಜೇಬಿನಿಂದ ಸಣ್ಣ ಫ್ಲ್ಯಾಷ್‌ಲೈಟ್ ತೆಗೆದು ಕಣ್ಣುಗಳ ಮೇಲೆ ಬೆಳಗಿಸಿ, ಒಂದು ಇಕೆಜಿಯನ್ನು ತೆಗೆದು, ಉಸಿರನ್ನು ನೋಡಿ, ನಾಡಿ ಹಿಡಿದು ನೋಡಿ 'ದಯವಿಟ್ಟು ಕ್ಷಮಿಸಿ ಸರ್' ಎಂದೆ...ಆವರಿಗೆ ಗೊತ್ತಾಗಿ ಹೋಯಿತು, ಆವರಿಗೆ ತಿಳಿದ ಸತ್ಯದ ಮಗ್ಗುಲು ಬೆಳಕಿಗೆ ಬಂದಿತ್ತು, ಅವರ ಕಣ್ಣುಗಳು ನಿಧಾನವಾಗಿ ಹನಿಗೂಡತೊಡಗಿದವು. ನಾನು ಪಶುವಿನಂತೆ ಅಥವಾ ಯಂತ್ರದಂತೆ ಚಾರ್ಟುಗಳನ್ನು ಬರೆದು ಮುಗಿಸಿ, ಡೆತ್ ಸರ್ಟಿಫಿಕೇಟ್ ಬರೆಯಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ನಾಲ್ಕು ದಶಕಗಳ ಸಂಬಂಧ ಈ ರೀತಿ ನನ್ನ ಕಣ್ಣೆದುರು ಕೊನೆಗೊಂಡುದಕ್ಕೆ ನನಗೆ ಅತೀವ ಬೇಸರವೆನಿಸಿತು. ಇದ್ದಕ್ಕಿದ್ದ ಹಾಗೆ ಎಪ್ಪತ್ತೆರಡು ವರ್ಷದ ಈ ವ್ಯಕ್ತಿ ಎಂಭತ್ತೆರಡು ವರ್ಷವಾದಂತೆ ತೋರತೊಡಗಿದರು, ನಾನು ನಿಧಾನವಾಗಿ ಮುಂದಿನ ಕೋಣೆಗೆ ಹೊರಟೆ.

Sunday, October 08, 2006

ಕೆಲಸ ಮತ್ತು ಒತ್ತಡ

ಹೀಗೇ ಮಾನಸಿಕ ಒತ್ತಡ, ದಿನದಿನಕ್ಕೆ ಹೆಚ್ಚಿದ ಕೆಲಸ, ಒಟ್ಟು ದುಡಿಮೆ, ದುಡಿಮೆಗೆ ತಕ್ಕ ಪ್ರತಿಫಲ (ಹಣ, ಸಂತೋಷ, ಸಂತೃಪ್ತಿ, ಮುಂತಾದ ಚೌಕಟ್ಟುಗಳು) ಇವುಗಳ ಬಗ್ಗೆ ಯೋಚಿಸುವಾಗ ನನ್ನ ಮನಸ್ಸಿಗೆ ಬಂದವನು ಐವನ್. ಅವನ ಲಾಸ್ಟ್ ನೇಮ್ ಏನೋ ನನಗಂತೂ ತಿಳಿಯದು, ಅವನೇ ಇಲ್ಲಿ ನಮ್ಮ ಮನೆಯನ್ನು ಕಟ್ಟಿಕೊಟ್ಟ ಮೇಸ್ತ್ರಿ ಎಂದರೂ ಅಡ್ಡಿ ಇಲ್ಲ. ಈತನ್ನದ್ದು ಬಹಳ ಸರಳ ಜೀವನ, ಹೆಚ್ಚೇನೂ ಓದಿರದವನು, ಕನ್‌ಸ್ಟ್ರಕ್ಷನ್ ಕೆಲಸದಲ್ಲಿ ಪರಿಣಿತ - ಸ್ಪ್ಯಾನಿಷ್, ಪೋರ್ಚುಗೀಸ್ ಭಾಷೆ ಚೆನ್ನಾಗಿ ಬರುತ್ತದೆ ಎಂದು ಅವನೇ ಹೇಳಿಕೊಳ್ಳುತ್ತಾನೆ, ಆದರೆ ಇಂಗ್ಲೀಷ್ ಮಾತ್ರ ಅಷ್ಟಕಷ್ಟೇ.

ಕೆಲವು ವರ್ಷಗಳ ಹಿಂದೆ ನಾವು ಮಾರ್ಕೆಟಿಂಗ್ ತರಗತಿಯಲ್ಲಿದ್ದಾಗ ನಮ್ಮ ಪ್ರೊಫೆಸರ್ ಒಬ್ಬರು ಸ್ಲಮ್‌ಗಳನ್ನು ಯಾವುದೋ ಮಾತಿಗೆ ಉದಾಹರಣೆ ಕೊಡುತ್ತಾ ಅಲ್ಲಿ ಬಡತನದ ಜೊತೆಗೆ ಪ್ರತಿಮನೆಯಲ್ಲಿ ಮಕ್ಕಳೂ ಹೆಚ್ಚು, ಸಂಪನ್ಮೂಲಗಳು ಕಡಿಮೆ ಇದ್ದಲ್ಲಿಯೇ ಅದರ ಅಗತ್ಯ ಹೆಚ್ಚಿರುತ್ತದೆ, ತಿನ್ನಲು ಹೆಚ್ಚು ಬಾಯಿಗಳು ಇದ್ದಲ್ಲಿ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿಯನ್ನು ಉದಾಹರಿಸಿದ್ದರು. ಐವನ್ ಮತ್ತು ಅವನ ಬಳಗದ ಹಿಸ್ಪ್ಯಾನಿಕ್ ಕೆಲಸಗಾರರದ್ದು ಒಂದು ರೀತಿಯ ಸ್ಕ್ವಯರ್ ಜಾಬ್ ಅಂತಾರಲ್ಲ ಹಾಗೆ, ದಿನಕ್ಕೆ ಇಂತಿಷ್ಟು ಘಂಟೆಗೆ ಬಂದು ಇಂತಿಷ್ಟು ಘಂಟೆಗೆ ಹೋದರಾಯಿತು, ಅವರ ಪ್ರಾಜೆಕ್ಟುಗಳಲ್ಲಿ ಸಣ್ಣ ಪುಟ್ಟ ಅಡೆತಡೆ, ವಿಳಂಬಳಿರುತ್ತವೆಯೇ ಹೊರತು ನಮ್ಮ ಐಟಿ ಅಥವಾ ಬಿಸಿನೆಸ್ಸು ಪ್ರಾಜೆಕ್ಟುಗಳ ಹಾಗೆ ಅವರದ್ದು ಪ್ರತಿದಿನ ಒಂದೊಂದು ಅವತಾರವನ್ನು ತಾಳುವುದಿಲ್ಲ. ಕನ್‌ಸ್ಟ್ರಕ್ಷನ್ ಕೆಲಸಗಳು ಒಂದಲ್ಲ ಒಂದು ರೀತಿಯಿಂದ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವಾದ್ದರಿಂದ ಅದಕ್ಕೂ ಚಿಂತಿಸಬೇಕಾದ್ದಿಲ್ಲ, ಐವನ್‌ನ ಹೆಂಡತಿ ಮನೆಯಲ್ಲೇ ಇರುವವಳು, ಮಕ್ಕಳೂ ಮುದ್ದಾಗಿದ್ದಾರೆ, ಸರಿಯಾಗಿ ಶಾಲೆಗೂ ಹೋಗುತ್ತಿದ್ದಾರೆ, ನಾವುಗಳು ತೆಗೆದುಕೊಂಡ ಹಾಗೆ ಐವನ್‌ನೂ ಹೊಸಹೊಸದನೆಲ್ಲ ತೆಗೆದುಕೊಳ್ಳುತ್ತಾನೆ, ಸಂತೋಷದಿಂದಿದ್ದಾನೆ ಎಂತಲೇ ನಾನು ಹೇಳೋದು. ಐವನ್‌ಗೆ ಕಡಿಮೆ ಸಂಬಳ ಬರುತ್ತದೆ ಎಂದು ನೀವು ಅಂದುಕೊಂಡರೆ ಅದು ತಪ್ಪು, ಅವನ ವಾರ್ಷಿಕ ಆದಾಯ ಇಲ್ಲಿನ ಎಷ್ಟೋ ಜನ ಡಾಕ್ಟರುಗಳಿಗಿಂತ ಕಡಿಮೆಯೇನಿಲ್ಲ.

ಈ ದಿನ ನಮಗೆ ಪರಿಚಯವಿರುವ ಚೈನೀಸ್ ಮೂಲದ ಡಾಕ್ಟರ್ ದಂಪತಿಗಳು ಸಿಕ್ಕಿದ್ದರು, ಗಂಡ ಹೆಂಡತಿ ಉತ್ತಮ ಕೆಲಸದಲ್ಲಿ ಇರುವವರು, ಅವರಿಗೆ ಆರು ವರ್ಷದ ಒಬ್ಬ ಮಗನಿದ್ದಾನೆ. ನಮಗೆ ಸ್ವಲ್ಪ ಹತ್ತಿರದವರಾದ್ದರಿಂದ ನಮ್ಮ ಬಳಿ ಅವರಿಗೆ ಮಾತನಾಡಲು ಮುಜುಗರವೇನಿಲ್ಲ. ಮೂರು ವರ್ಷಗಳಿಂದ ಮತ್ತೊಂದು ಮಗುವಾಗಲಿ ಎಂದು ಆಲೋಚಿಸುತ್ತಿದ್ದಾರೆ, ಆದರೆ ಅವರೇ ಹೇಳಿರೋ ಹಾಗೆ 'ಅದಕ್ಕೀಗ ಸಮಯವಿಲ್ಲ!'. ಇದೇನಪ್ಪಾ ನಾನು ಅವರ ಪರ್ಸನಲ್ ವಿಷಯವನ್ನು ಹೀಗೆ ಬಳಸಿಕೊಳ್ಳುತ್ತಿದ್ದೇನೆ ಎಂದುಕೊಳ್ಳಬೇಡಿ, ಈ ಮೇಲಿನ ಪಾತ್ರಗಳು ನಿಜವಲ್ಲ ಎಂದುಕೊಳ್ಳಿ, ಏಕೆಂದರೆ ನನಗೆ ಇಲ್ಲಿ ಎರಡು ಮಾನಸಿಕ ಸ್ಥಿತಿಗಳನ್ನು ನಿರ್ಮಿಸುವುದು ಮುಖ್ಯವೇ ಹೊರತು ಪಾತ್ರಗಳು, ಅವುಗಳ ಹೆಸರುಗಳು ಮುಖ್ಯವಲ್ಲ.

ಮೂವತ್ತರ ಹರೆಯದ ಕೊನೆಯ ದಿನಗಳನ್ನು ಎಣಿಸಿ ನಿಧಾನವಾಗಿ ನಲವತ್ತರ ಗಡಿ ಸಮೀಪಿಸುತ್ತಿರುವ ಚೈನೀಸ್ ಡಾಕ್ಟರ್ ದಂಪತಿಗಳನ್ನು ನೋಡಿದೊಡನೆ ಇವರು ಈ ಸ್ಥಿತಿಗೆ ಬರಲು ಎಷ್ಟೊಂದು ಕಷ್ಟಪಟ್ಟಿದ್ದಾರೆ, ಈಗ ಇಬ್ಬರಿಗೂ ಒಂದು ಒಳ್ಳೆಯ ಕೆಲಸವೆಂಬುದೊಂದಿದ್ದರೂ ಇನ್ನೂ ಅವರ ದುಗುಡ ಕಡಿಮೆಯೇನಾಗಿಲ್ಲ. ಅವರ ಹಳೆಯ ಸಾಲಗಳು ಹಾಗೂ ಇತ್ತೀಚೆಗಷ್ಟೇ ಮಾಡಿದ ಹೊಸ ಸಾಲಗಳು ಇನ್ನೂ ಹಾಗೇ ಇವೆ. ಇನ್ನು ಇಪ್ಪತ್ತು ವರ್ಷಗಳವರೆಗೆ ನಿರಂತರವಾಗಿ ದುಡಿದರೂ ಇನ್ನೂ ಸಾಲದು ಎನ್ನಿಸುವ ಸ್ಥಿತಿ ಇದೆ. ಅವರು ದಿನನಿತ್ಯ ಮಾಡುವ ಕೆಲಸವೂ ಬಹಳ ಮಾನಸಿಕ ಒತ್ತಡವನ್ನು ತರುವಂತಹುದೇ. ಹೀಗಿರುವಲ್ಲಿ ಇನ್ನು ಸಮಾಧಾನ, ಸಾಕು, ಇಷ್ಟಿರಲಿ ಎನ್ನುವ ಮಾತಾದರೂ ಎಲ್ಲಿಂದ ಬಂತು?

ಐವನ್ ಕೂಡಾ ನಾಳೆ ಅಂದರೆ ಸೋಮವಾರ ತನ್ನ ಕೆಲಸಗಳನ್ನು ಆರಂಭಿಸುತ್ತಾನೆ, ಅವನಿಗೆ ಅದರ ಬಗ್ಗೆ ಯಾವುದೇ ಯೋಚನೆ ಇದೆಯೋ ಇಲ್ಲವೋ ಯಾರು ಬಲ್ಲರು? ಅವನ ಗೋಡೆಗೆ ಹೊಡೆದ ಮೊಳೆ ನೇರವಾಗಿ ಹೋಗದಿದ್ದರೆ ಅದನ್ನು ಕಿತ್ತು ಬಿಸಾಡಿ ಅದೇ ಜಾಗದಲ್ಲಿ ಮತ್ತೊಂದನ್ನು ಹೊಡೆಯುವ ಸ್ವಾತಂತ್ರ್ಯವಂತೂ ಅವನಿಗೆ ಇದೆ. ಅವನು ಕಟ್ಟುಕೊಟ್ಟ ಮನೆಗಳು, ಗೋಡೆಗಳು ಬೀಳೋದಿಲ್ಲ, ಜನರು ಯಾರೂ ಅವನನ್ನು ಕೋರ್ಟು ಮೆಟ್ಟಿಲು ಹತ್ತಿಸೋದಿಲ್ಲ.

ಹಾಗಂತ ಬದುಕಲ್ಲಿ ಎಲ್ಲರೂ ಕನ್‌ಸ್ಟ್ರಕ್ಷನ್ ಕೆಲಸಗಾರರಾಗಲು ಆಗುತ್ತದೆಯೇ? ಎಲ್ಲರ ಕೆಲಸದಲ್ಲೂ ಅದರದ್ದೇ ಆದ ಭಿನ್ನ ಸವಾಲುಗಳಿವೆ. ಒಂದು ಕೆಲಸವನ್ನು ಮತ್ತೊಂದಕ್ಕೆ ಹಾಗೆ ತುಲನೆ ಮಾಡಲಾಗದು. ಆದರೆ ದಿನದ ಕೊನೆಯಲ್ಲಿ ಮಾನಸಿಕ ಒತ್ತಡಗಳನ್ನು ಕೆಲಸ ಮಾಡುವ ಪ್ರತಿಯೊಬ್ಬರೂ ಮನೆಗೆ ಹೊತ್ತುಕೊಂಡೇನೂ ಹೋಗುವುದಿಲ್ಲ. ದಿನದಲ್ಲಿ ಇರೋದು ಇಂತಿಷ್ಟೇ ಘಂಟೆಗಳು ಎಂದು ಗೊತ್ತಿದ್ದೂ ನಮ್ಮನ್ನೇಕೆ ನಾವು ಎಲ್ಲ ಸಾಲುಗಳಲ್ಲೂ ದೂಡಿಕೊಳ್ಳುತ್ತೇವೆ, ಗೆಲ್ಲುವ ಗೆಲ್ಲಬಲ್ಲ ಪ್ರತಿಯೊಂದು ಆಟಗಳಲ್ಲೂ ನಮ್ಮನ್ನೇಕೆ ನಾವು ಹೂಡಿಕೊಳ್ಳುತ್ತೇವೆ? ನಮ್ಮಿಂದ ನಾವೇ ಯಾವಾಗಲೂ ಹೆಚ್ಚಿನದನ್ನೇಕೆ ನಿರೀಕ್ಷಿಸುತ್ತೇವೆ? ಪ್ರತಿಯೊಂದರಲ್ಲೂ ಪ್ರತಿಭಾವಂತರಾಗಲು ನಾವೇನು ಸಿನಿಮಾ ಹೀರೋಗಳೇ, ನಮ್ಮ ಇತಿಮಿತಿಯನ್ನು ನಾವೇಕೆ ಸುಲಭವಾಗಿ ಒಪ್ಪಿಕೊಳ್ಳೋದಿಲ್ಲ, ಮೂಗಿನ ಮಟ್ಟಕ್ಕಿಂತ ಹೆಚ್ಚಿನ ನೀರಿನಲ್ಲೇ ಮುಳುಗಿ ನಾವು ನಡೆದಾಡುವುದಾದರೂ ಏತಕ್ಕೆ?

ಮಾನಸಿಕ ಒತ್ತಡಗಳನ್ನು ಅನುಭವಿಸಿ ತಾವು ಹಲವಾರು ಸಂಘರ್ಷಗಳಿಗೊಳಗಾಗುವ ಮಂದಿ ತಮ್ಮ ಕುಟುಂಬದ ಇತರರನ್ನೂ ನಿಧಾನವಾಗಿ ಕಂಪದ ಭೂಮಿಯಲ್ಲಿ ಎಳೆದುಕೊಂಡು ಎಲ್ಲರೂ ತಮ್ಮ ಹಾಗೇ ಅನುಭವಿಸುವಂತೆ ಮಾಡುತ್ತಾರೆ. ಇಂದಿನ ಕಡಿಮೆ ಸಮಯದಲ್ಲಿ ಹೆಚ್ಚನ್ನು ಮಾಡುವ ನಿರೀಕ್ಷೆಯೇನೋ ಸರಿ, ಅದೇನು ಹೆಚ್ಚು ಮಾಡುವುದಿದೆಯೋ ಅಷ್ಟನ್ನು ಮಾಡಿ ಮನೆಗೆ ಬಂದು ಮಕ್ಕಳ ಜೊತೆ ಒಂದಿಷ್ಟು ಸಮಯವನ್ನು ಕಳೆದರೆ ದೊಡ್ಡ ಮನುಷ್ಯರು ಸಣ್ಣವರೇನೂ ಆಗೋದಿಲ್ಲ. ಇರೋ ಒಬ್ಬ ಮಗನಿಗೆ ವಾರದಲ್ಲಿ ಕೇವಲ ಒಂದು ದಿನ ಮೀಸಲಿಡುವ ಚೈನೀಸ್ ವೈದ್ಯ ದಂಪತಿಗಳಿಗೆ ಹೇಳಿದೆ - 'ನಿಮ್ಮ ಚೈನಾ ಪರಂಪರೆಯಂತೆ ನೀವೆಲ್ಲಿದ್ದರೂ ನಿಮಗೆ ಒಂದೇ ಮಗು!' ಎಂದು, ಅವರಿಗೆ ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ, ಇದ್ದೊಬ್ಬ ಮಗನಿಗೆ ವಾರಕ್ಕೊಂದು ದಿನ ಸಮಯವನ್ನು ಮೀಸಲಿಡುವವರಿಗೆ ಇನ್ನೊಂದು ಮಗು ಬೇಕೇ ಎಂದೂ ನನ್ನಷ್ಟಕ್ಕೆ ನಾನೇ ಕೇಳಿಕೊಂಡೆ.

ಹಾಗಂದ ಮಟ್ಟಿಗೆ ನನಗೆ ಐವನ್ ಮಹಾ ತಂದೆಯಂತೇನೂ ಕಾಣೋದಿಲ್ಲ, ಅವನ ಮಕ್ಕಳು ಬೇಡುವ ಆಲ್ಜೀಬ್ರಾದ ಸಮಸ್ಯೆಯನ್ನು ನಿವಾರಿಸಲು ಅವನಿಗೆ ಬರೋದಿಲ್ಲ, ಹೋಮ್‌ವರ್ಕ್ ಮಾಡೋದರಲ್ಲಿ ಆ ಮಕ್ಕಳು ಹಿಂದೋ ಮುಂದೋ ಒಂದೂ ಗೊತ್ತಿಲ್ಲ, ಆದರೆ ಐವನ್ ಅದಕ್ಕೆಲ್ಲ ತಲೆ ತೂರಿಸುತ್ತಾನೆ ಎಂದೇನೂ ನನಗನ್ನಿಸುವುದಿಲ್ಲ. ಆದರೆ ಆತ ಪ್ರತಿದಿನವು ಮನೆಗೆ "ನಿಜ"ವಾಗಿಯೂ ಹೋಗುತ್ತಾನೆ, ತನ್ನ ಮಕ್ಕಳ ಜೊತೆ ಸಮಯವನ್ನು ಕಳೆಯುತ್ತಾನೆ. ತಂದೆಯಿಂದ ಮನೆಕಟ್ಟುವ ವಿದ್ಯೆಯನ್ನು ಬಳುವಳಿ ಪಡೆದ ಮಕ್ಕಳು ನಾಳೆ ಅಪ್ಪನ ಹಾಗೇ ಆಗಬಹುದು ಅಥವಾ ಮತ್ತಿನೇನೋ ಆಗಬಹುದು, ಆದರೆ ಈ ಡಾಕ್ಟರ್ ಮಗ ಏನಾಗುತ್ತಾನೋ, ಬಿಡುತ್ತಾನೋ ಎನ್ನುವುದು ನನ್ನ ಹೆದರಿಕೆ ಕೂಡಾ. ತಂದೆ-ತಾಯಿಯರಂತೆ ಅವನೂ ಡಾಕ್ಟರ್ ಆಗಿ ನಾಳೆ ಅವನೂ ಅವನ ಅಪ್ಪನ ಹಾಗೆ ವೀಕೆಂಡ್ ತಂದೆ ಆಗಿಬಿಟ್ಟರೆ ಎಂದು ನನ್ನ ಹೆದರಿಕೆ ಇನ್ನೂ ಬಲವಾಗತೊಡಗುತ್ತದೆ.

ನಾನೇನಾಗುತ್ತೇನೋ ಬಿಡುತ್ತೇನೋ, ನನ್ನ ಮಾನಸಿಕ ಒತ್ತಡಗಳನ್ನಂತೂ ಕಡಿಮೆ ಮಾಡಿಕೊಳ್ಳಬೇಕು, ಆಫೀಸಿನ ಕೆಲಸಗಳನ್ನು ಮನೆಗೆ ತರಬಾರದು, ವೀಕೆಂಡಿಗೆ ಮಾತ್ರ ಪೋಷಕನಾಗಬಾರದು ಎಂದೆಲ್ಲಾ ಏನೇನೋ ಮುಂದಾಲೋಚಿಸಿಕೊಳ್ಳುವ ಪರಿ ನನ್ನ ಮಾನಸಿಕ ಒತ್ತಡವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ!

Friday, October 06, 2006

ಔಟ್‌ಸೋರ್‌ಸಿಂಗ್ ಹಾಗೂ ಪರಕೀಯತೆ

೨೦೦೦ ನೇ ಇಸವಿ, ಯಾವುದೋ ಒಂದು ಶುಭ್ರವಾದ ದಿನದ ಮುಂಜಾನೆ, ಆಗಿನ್ನೂ ವ್ಯಾಪಾರ ಕೇಂದ್ರಗಳು ಉರುಳಿರಲಿಲ್ಲ - ಜನಗಳು ಇನ್ನೂ ನ್ಯಾಷನಾಲಿಟಿ, ಧರ್ಮಗಳ ಬಗ್ಗೆ ಇಲ್ಲಿ ಇನ್ನೂ ಹೆದರದೇ ಮಾತನಾಡುತ್ತಿದ್ದಂತಹ ಕಾಲ - ನನ್ನ ಟೀಮ್ ಮೆಂಬರ್ ಒಬ್ಬ (ವಯಸ್ಸಿನಲ್ಲಿ ನನಗಿಂತಲೂ ಬಲು ಹಿರಿಯ) ಹೀಗೇ ನನ್ನ ಜೊತೆ ಔಟ್ ಸೋರ್ಸಿಂಗ್ ವಿಷಯವನ್ನು ಕುರಿತು ವಾದ ಮಾಡಲು ಶುರುಮಾಡಿಕೊಂಡ. ಮೊದಮೊದಲು ವಿಚಾರ ವಿನಿಮಯ ಎಂದುಕೊಂಡು ಶುರುವಾದ ಮಾತು ಕೊನೆಯಲ್ಲಿ ತಾರಕ್ಕೇರಿತು, ನನಗೋ ಆದಷ್ಟು ಬೇಗ ಮಾತು ಮುಗಿಸಿ ಕೆಲಸದ ಕಡೆಗೆ ಗಮನ ಕೊಡುವ ಆಲೋಚನೆ, ಅವನಾದರೋ ನನ್ನನ್ನು ಎಷ್ಟು ಸಾಧ್ಯವೋ ಅಷ್ಟು ಕೆರಳಿಸಬೇಕು ಎಂದು ಪಣತೊಟ್ಟಂತಿತ್ತು.

ಆಗಿನ್ನೂ ಬುಷ್ ಗೆದ್ದಿರಲಿಲ್ಲ, ಚುನಾವಣಾ ಪ್ರಣಾಳಿಕೆಗಳಲ್ಲಿ ಅಮೇರಿಕನ್ನರು ಪದೇಪದೇ ಕೆಲಸಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಹಲವಾರು ಸಮೀಕ್ಷೆ, ಸುದ್ದಿಗಳು ಬಿತ್ತರವಾಗುತ್ತಿತ್ತು. ನನ್ನಂತಹ ಭಾರತೀಯರನ್ನು ನೋಡಿದರೆ, ಅದರಲ್ಲೂ ಮಾಹಿತಿ ತಂತ್ರಜ್ಜಾನದ ತುಂಬೆಲ್ಲ ಹಬ್ಬಿಕೊಂಡ ನಮ್ಮವರನ್ನು ಕಂಡು, ಹೆಚ್ಚು ಹೆಚ್ಚು ಕೆಲಸಗಳು ಭಾರತದತ್ತ ವಾಲುತ್ತಿರುವುದನ್ನು ಗಮನಿಸಿ ಕೆಲವರಿಗೆ ಸಿಟ್ಟು ಬಂದಿರಬಹುದು. ಅದನ್ನೆಲ್ಲ ತೆಗೆದು ನನ್ನ ಮೇಲೆ ತೀರಿಸಿಕೊಳ್ಳೋಕೆ ಬಂದ್ರೆ ನಾನಾದ್ರೂ ಏನ್ ಮಾಡಲಿ? ಇವರಿಗೆಲ್ಲಾ ತಮ್ಮ-ತಮ್ಮ ಕೆಲಸಗಳನ್ನ ಭಾರತಕ್ಕೆ ಕಳಿಸಿ ಅಂತ ಹೇಳಿದೋನು ನಾನಾ?

ಸರಿ, ನಮ್ಮ ಮಾತು ಯಾಕೆ ಭಾರತಕ್ಕೆ ಕೆಲಸಗಳು ಹೆಚ್ಚು ಹೋಗ್ತಾವೆ ಅಂತ ಬಂತು, ನನ್ನ ಟೀಮ್ ಮೆಂಬರ್ ಪ್ರಕಾರ ಅದಕ್ಕೆ ಒಂದೇ ಒಂದು ಕಾರಣ ಅಂದ್ರೆ ಇಂಡಿಯನ್ ಲೇಬರ್ ಬಹಳ ಚೀಪ್. ಆದರೆ ನನ್ನ ವಾದ ಹಣ ಕಡಿಮೆ ಅನ್ನೋ ಮಾತು ಸರಿ, ಅದರ ಜೊತೆಯಲ್ಲಿ ಇಂಗ್ಲೀಷ್ ಮಾತನಾಡೋ ಇಂಜಿನಿಯರುಗಳು, ಟೈಮ್ ಡಿಫರೆನ್ಸ್ ಇರೋದರಿಂದ ಆಗುವ ಅನುಕೂಲಗಳು ಜೊತೆಯಲ್ಲಿ ಒಳ್ಳೆಯ ಪ್ರಾಸೆಸ್ ಅನ್ನು ಅಳವಡಿಸಿಕೊಂಡು ಈಗಾಗಲೇ ಈ ರೀತಿಯ ಕೆಲಸಗಳಲ್ಲಿ ನುರಿತ ಅನುಭವವಿರುವ ಕಂಪನಿಗಳು, ಇತ್ಯಾದಿ. ಆದರೆ ಅವನು ಒಪ್ಪಲೊಲ್ಲ. ನಾನೆಂದೆ ಹಾಗಾದರೆ ಬರೀ ಹಣ ಕಡಿಮೆ ಅನ್ನೋ ಮಾತಿದ್ರೆ, ಭಾರತಕ್ಕಿಂತ ಕಡಿಮೆ ಹಣದಲ್ಲಿ ಕೆಲಸ ಮಾಡೋ ದೇಶದವರಿಗೆ ಇಲ್ಲಿನ ಕೆಲಸಗಳನ್ನು ಕಳಿಸಲಿ ಎಂದರೆ ಅವನ ಬಳಿ ಉತ್ತರವಿಲ್ಲ. ಅಂತೂ ಇಂತೂ ಅವನಿಗೆ ಸಮಾಧಾನ ಮಾಡಿ ಇನ್ನೇನು ಜಗಳವಾಡೋದನ್ನು ತಪ್ಪಿಸಿಕೊಳ್ಳಬೇಕಾದರೆ ಸಾಕು ಸಾಕಾಗಿ ಹೋಯಿತು.

ಕೊನೆಯಲ್ಲಿ ಒಂದು ಮಾತು ಹೇಳ್ದೆ - 'ಜಪಾನೀಸ್ ಕಾರ್ ಓಡುಸ್‌ಕೊಂಡು, ಚೈನೀಸ್ ಮೇಕ್ ಶೂಸ್ ಹಾಕ್ಕೊಂಡು, ಎಲ್ಲೆಲ್ಲೋ ಬೆಳದ ಕಾಳು, ಕಡಿ ತಿನ್ನೋರಿಗೆ ಕಾಲ್ ಸೆಂಟರ್‌ಗಳು ಎಲ್ಲಿದ್ದರೇನು, ಟೆಕ್ನಾಲಜಿ ಎಲ್ಲಿಂದ ಬಂದರೇನು?' ಇದಕ್ಕೆ ಇವತ್ತಿನವರೆಗೆ ಅವನಿಂದ ಉತ್ತರವಿಲ್ಲ.

***

ಈ ಮಾತು ಯಾಕ್ ನೆನಪಾಯ್ತು ಅಂದ್ರೆ, ನಮ್ ಆಫೀಸ್ನಲ್ಲೂ ಸಹ ಬೇಕಾದಷ್ಟು ಕೆಲಸಗಳನ್ನು ಫಿಲಿಪೀನ್ಸ್ ಮೊದಲಾದ ದೇಶಗಳಿಗೆ ಔಟ್ ಸೋರ್ಸ್ ಮಾಡಿದ್ದಾರೆ, ಆದ್ರೆ ಭಾರತದಲ್ಲಿ ನಮ್ಮ ಕಂಪನಿಯದೇ ಒಂದೆರೆಡು ಬ್ರಾಂಚ್‌ಗಳನ್ನು ತೆಗೆದು ಅಲ್ಲಿಂದ ಕೆಲಸಗಳನ್ನು ಮಾಡಿಸಿಕೊಳ್ಳೋದನ್ನ ಇನ್ ಸೋರ್ಸಿಂಗ್ ಅಂತ ಕರೆದುಕೊಂಡರೂ ಹೆಚ್ಚೂ ಕಡಿಮೆ ಇದೂ ಔಟ್ ಸೋರ್ಸಿಂಗ್ ಥರಾನೆ. ಇಲ್ಲಿ ನಮ್ ಐಟಿ ಕೆಲಸಗಾರರಿಗೆ, ಮ್ಯಾನೇಜರುಗಳಿಗೆ ವಿಪರೀತ ಕೆಲಸ, ಹಗಲು ಹೊತ್ತು ಇಲ್ಲಿನವರ ಜೊತೆ ಗೇಯಬೇಕು, ರಾತ್ರಿ ಅಲ್ಲಿನವರ ಜೊತೆ ಏಗಬೇಕು. ಹೆಚ್ಚೂ ಕಡಿಮೆ ದಿನಕ್ಕೆ ಏನಿಲ್ಲ ಅಂದ್ರೂ ಹದಿನೈದು ಘಂಟೆ ಕೆಲಸ ಮಾಡೋರುನ್ನ (ಅದರಲ್ಲೂ ವಾರಕ್ಕೆ ಕಡಿಮೆ ಅಂದ್ರೆ ಆರು ದಿವಸ) ನೋಡಿದ್ರೆ ಬಹಳ ಬೇಜಾರಾಗುತ್ತೆ. ಇಲ್ಲಿ ಕುಳಿತುಗೊಂಡು ಅಲ್ಲಿನವರಿಂದ ಕೆಲಸ ತೆಗೆಯೋದು, ಇಲ್ಲಿನ ರಿಕ್ವೈರುಮೆಂಟುಗಳನ್ನು ವಿವರಿಸಿ ಅಲ್ಲಿಂದ ಅದಕ್ಕೆ ತಕ್ಕ ಕೆಲಸ ಮಾಡಿಸಿ, ಅದನ್ನು ವೆರಿಫೈ ಮಾಡಿ ಇಲ್ಲಿನವರಿಗೆ ಪ್ರೆಸೆಂಟ್ ಮಾಡಬೇಕಾದರೆ ಅದೇನು ಕಡಿಮೆ ಕೆಲಸವಲ್ಲ, ಜವಾಬ್ದಾರಿಯೆಲ್ಲ ಇವರ ತಲೆಯ ಮೇಲೇ ಬೀಳೋದು.

ಅಲ್ಲೋ, ಕೆಲಸಗಾರರು ಬಹಳ ಬುದ್ಧಿವಂತರು, ತುಂಬಾ ಸ್ಮಾರ್ಟ್ ಹುಡುಗ/ಹುಡುಗಿಯರು ತಮ್ಮ ಎಲ್ಲಾ ಕನಸುಗಳನ್ನು ಹೊತ್ತುಕೊಂಡು ಈ ದಿನ ಕೆಲಸಕ್ಕೆ ಸೇರಿದರೆ ಇನ್ನೊಂದಿಷ್ಟು ತಿಂಗಳಲ್ಲಿ ಕಂಪನಿ ಬಿಟ್ಟು ಹೋಗೋ ಪರಿಸ್ಥಿತಿ. ಹೀಗೆ ಟೀಮಿಗೆ ಸೇರುವವರ, ಬಿಡುವವರ ಸಂಖ್ಯೆ ಬಹಳ ಹೆಚ್ಚು. ಇಂತಹ ವೇರಿಯೇಷನ್ನುಗಳ ನಡುವೆ ಟೆಕ್ನಾಲಜಿ ಜೊತೆಗೆ ಬಿಸಿನ್ನೆಸ್ಸನ್ನೂ ವಿವರಿಸಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಬಹಳ ಜಾಣತನ ಬೇಕಾಗುತ್ತದೆ. ಇದು ಬಹಳ ಮಾನಸಿಕ ಒತ್ತಡವನ್ನು ತರುವ ಕೆಲಸ ಕೂಡಾ. ಇವತ್ತಿಗೂ ಅಲ್ಲಿನ ಎಷ್ಟೋ ಕಂಪನಿಗಳಲ್ಲಿ ಕೆಲಸಗಾರರ ಅನುಭವವನ್ನು ತಿಂಗಳುಗಳಲ್ಲಿ ಅಳೆಯೋದನ್ನು ನಾವು ನೋಡಬಹುದು.

ಮೊನ್ನೆ ನಾವು ಯಾವುದೋ ಮೀಟಿಂಗ್‌ನಲ್ಲಿ ಮಾತನಾಡುತ್ತಾ ಇರಬೇಕಾದರೆ ನಮ್ಮವರಲ್ಲಿ ಒಬ್ಬರು 'ಐಟಿ ಗುಂಪಿನವರಿಗೆ ಬಿಸಿನೆಸ್ ರಿಕ್ವೈರ್‌ಮೆಂಟುಗಳು ಅರ್ಥವಾಗೋದೇ ಇಲ್ಲ, ಎಷ್ಟು ಸರ್ತಿ ಹೇಳಿದರೂ ಅಷ್ಟೇ, ಪ್ರಯೋಜನವಿಲ್ಲ!' ಎಂದು ಒಂದು ಬ್ಲಾಂಕೆಟ್ ಹೇಳಿಕೆ ಎಸೆದರು. ನಮ್ಮ ಐಟಿ ಗುಂಪಿನಲ್ಲಿ ಬಹಳಷ್ಟು ಜನ ಭಾರತೀಯರೇ ಇರೋದು. ಆ ಮೀಟಿಂಗ್ ರೂಮಿನಲ್ಲಿ ನಾನೊಬ್ಬನೇ ಭಾರತೀಯನಿದ್ದವನು, ನನಗೆ ಈ ಹೇಳಿಕೆ ಬಹಳ ಮುಜುಗರವನ್ನುಂಟು ಮಾಡಿತು. ರಾತ್ರಿ-ಹಗಲು ಕಷ್ಟ ಪಟ್ಟು ದುಡಿದ ಮೇಲೂ ನಮ್ಮವರು ಇಂತಹ ಹೇಳಿಕೆಗಳನ್ನು ಕೇಳಬೇಕಲ್ಲ ಎಂದು ಬೇಸರವಾಯಿತು. ತಮ್ಮ ಕಂಪ್ಯೂಟರ್ ಡೆಸ್ಕ್‌ಟಾಪ್ ಮೇಲೆ ಒಂದು ಐಕಾನ್ ಅನ್ನು ಎರಡು ಅಂಗುಲ ಈಚೆಗೆ ಸರಿಸಿದರೂ ಮೈ ಮೇಲೆ ಚೇಳು ಬಿದ್ದಂತೆ ಆಡುವ ಇವರುಗಳು ಭಾರತದಲ್ಲಿ ಇದೀಗ ತಾನೆ ಪದವಿ ಮುಗಿಸಿ, ಅಥವಾ ಇತ್ತೀಚೆಗಷ್ಟೇ ಕೆಲಸ ಆರಂಭಿಸಿದ ಐಟಿ ಇಂಜಿನಿಯರುಗಳಿಗೆ ಇಲ್ಲಿನ ಯಾವುದೋ ಒಂದು ಪ್ರಾಡಕ್ಟ್ ವಿವರಗಳು ಗೊತ್ತಾಗಲಿಲ್ಲವೆಂದಾಕ್ಷಣ ಅದನ್ನು ಜನರೈಲೇಷನ್ ಮಾಡುವುದು ಎಷ್ಟರಮಟ್ಟಿಗೆ ಸರಿ? ನಮ್ಮ ಪ್ರಾಡಕ್ಟ್‌ಗಳ ಕಾಂಪ್ಲೆಕ್ಸಿಟಿ ಇಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೇ ಇನ್ನೂ ಸಂಪೂರ್ಣವಾಗಿ ತಿಳಿದಿರೋದಿಲ್ಲ, ಇನ್ನು ಹತ್ತು ತಿಂಗಳು ಮದ್ರಾಸಿನಲ್ಲಿ ಕೂತು ಇಲ್ಲಿಂದ ಫೋನು, ಇ-ಮೇಲುಗಳಲ್ಲಿ ಪಡೆದ ರಿಕೈರ್‌ಮೆಂಟುಗಳನ್ನು ಅಲ್ಲಿ ಕೋಡ್ ಡೆವಲಪ್ ಮಾಡಿದವರಿಗೆ ಹೇಗೆ ಗೊತ್ತಾದೀತು? ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ಇಲ್ಲಿನ ಪೋಸ್ಟ್ ಝಿಪ್ ಕೋಡ್ ನಲ್ಲಿ ೫+೪ ಸಂಖ್ಯೆಗಳಿರುತ್ತವೆ ಎಂದು ಗೊತ್ತಿರಲಿಲ್ಲ, ಇನ್ನು ಇಲ್ಲಿನ ಪ್ರಾಡಕ್ಟ್‌ಗಳು, ಇವರ ಆಕ್ಸೆಂಟುಗಳನ್ನು ಅರ್ಥ ಮಾಡಿಕೊಳ್ಳಲು ಎಷ್ಟೋ ತಿಂಗಳು ಬೇಕಾಯಿತು, ಅದೂ ಇಲ್ಲಿಗೆ ಬಂದು ಹಲವಾರು ಮುಖತಃ ಭೇಟಿಗಳನ್ನು ಮಾಡಿದ ಮೇಲೆ, ಹಾಗಿರುವಾಗ ಬಿಸಿನೆಸ್ ರಿಕ್ವೈರ್‌ಮೆಂಟ್ ಅನ್ನು ತಿಳಿದುಕೊಳ್ಳುವಲ್ಲಿ, ಅದನ್ನು ಬಿಡಿಸಿ ಹೇಳುವಲ್ಲಿ ಇಲ್ಲಿ ಕೆಲಸ ಮಾಡುವ ಮಿಡ್ ಲೆವಲ್ ಮ್ಯಾನೇಜರುಗಳ ಮೇಲೆ ಒತ್ತಡ ಹೆಚ್ಚಿದೆ ಎಂದೇ ಅರ್ಥವಲ್ಲವೆ?

ಚೈನಾದಲ್ಲಿ ಕುಳಿತು, ಯಾವುದೋ ಒಂದು 'ಸಾಕ್ಸ್ ಟೌನ್'ನಲ್ಲಿ ದಿನಕ್ಕೆ ಮಿಲಿಯನ್ನ್ ಗಟ್ಟಲೆ ಸಾಕ್ಸ್ ಹೊರತರುವಂತಹ ರಿಪೀಟೆಬಲ್ ಪ್ರಾಸೆಸ್ಸುಗಳಿಗೂ, ಪ್ರತಿದಿನ ಬದಲಾಗುವ ರಿಕ್ವೈರ್‌ಮೆಂಟುಗಳನ್ನು ಮನನ ಮಾಡಿಕೊಂಡು, ಅದನ್ನು ಅಭಿವೃದ್ಧಿ ಪಡೆಸಿ, ಪರೀಕ್ಷಿಸಿ, ಇಂಟಿಗ್ರೇಟ್ ಮಾಡಿ, ಇಲ್ಲಿಗೆ ಕಳಿಸಿ, ಮತ್ತೆ ಇಲ್ಲಿನ ಫೀಡ್‌ಬ್ಯಾಕ್ ಪ್ರಕಾರ ಅದನ್ನು ಬದಲಾಯಿಸಿ, ತಿದ್ದಿ, ಪರೀಕ್ಷಿಸಿ, ಇಂಟಿಗ್ರೇಟ್ ಮಾಡಿ ಕಳಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಜೊತೆಯಲ್ಲಿ ಈ ದಿನ ಇದ್ದಿರುವ ನಿಮ್ಮ ಚೀಫ್ ಪ್ರೋಗ್ರಾಮರ್ ನಾಳೆ ಮತ್ಯಾವುದೋ ಕಂಪನಿ/ಕೆಲಸ/ದೇಶವನ್ನು ಹುಡುಕಿಕೊಂಡು ಹೋಗುವ ಹೆದರಿಕೆಯೂ ಇದೆ. ಈ ನಿಟ್ಟಿನಲ್ಲಿ ನನ್ನಂತಹ ಕೆಲಸಗಾರರ ಮೇಲೆ ಔಟ್‌ಸೋರ್ಸಿಂಗ್ ತರುವ ಒತ್ತಡ ಅಪಾರವಾದುದು, ಕಂಪನಿಗಳಿಗೆ ಗ್ಲೋಬಲೈಜೇಷನ್ ಅಳತೆಗೋಲಿನಲ್ಲಿ ವಿಶ್ವಮಾನ್ಯತೆ ಸಿಕ್ಕರೂ, ಕೆಲಸಗಾರರಿಗೆ ಇದ್ದುದರಲ್ಲಿ ಹೊಂದಿಕೊಂಡು ದುಡಿಯುವ, ಎಷ್ಟು ದುಡಿದರೂ ಕೆಲಸ ಮುಗಿಯದ, ಕೆಲಸ ಮುಗಿದರೂ ಉತ್ಕೃಷ್ಟತೆ ಇರದಿರುವ, ಉತ್ಕ್ಟುಷ್ಟತೆ ಇದ್ದರೂ ಉತ್ತಮ ಅಭಿರುಚಿ/ಅಭಿಪ್ರಾಯವಿರದ ಮೇಲಿನವರು ಆಡುವ ಚುಚ್ಚು ಮಾತುಗಳು ಬಹಳ ದುಬಾರಿಯೆಂದೆನಿಸುತ್ತವೆ.

ಇಂತಹ ಮ್ಲಾನ ಸನ್ನಿವೇಶಗಳಲ್ಲಿ ನನ್ನ ಪರಕೀಯ ಕಂದಕಗಳು ಇನ್ನೂ ವಿಸ್ತಾರವಾಗತೊಡಗುತ್ತವೆ.

Wednesday, October 04, 2006

ಎಲ್ರೂ ಹೇಳೋರಾದ್ರೆ ಕೇಳೋರ್ ಯಾರು?

ಇತ್ತೀಚೆಗಂತೂ ಯಾರೂ ಯಾರ ಮಾತನ್ನೂ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ, ಈ ಕಾನ್‌ಫರೆನ್ಸ್ ಕಾಲ್‌ಗಳಲ್ಲಿ ಜೀವಾ ತೇದು-ತೇದೂ ಎಷ್ಟು ಸರ್ತಿ ಹೇಳಿದ್ರೂ ಅಷ್ಟೇ ಅನ್ನಿಸಿ ಒಂದ್ಸರ್ತಿ 'ತುಥ್' ಅಂತ ಗಟ್ಟಿಯಾಗೇ ಹೇಳಿಕೊಂಡಿದ್ದೇನೋ ನಿಜ. ಈ active listening ಅನ್ನೋದಕ್ಕೇನೋ ಬಹುವಾಗಿ ವ್ಯಾಖ್ಯೆಗಳನ್ನು ಕೊಡ್ತಾರೆ, ಆದ್ರೆ ಯಾರ ಮಾತನ್ನೂ ಯಾರೂ ಕೇಳಿಸ್‌ಕೊಳ್ಳೋದೇ ಇಲ್ಲ, ಎಲ್ರೂ ಇನ್ನೊಬ್ರು ಮಾತನಾಡ್ತಿರಬೇಕಾದ್ರೆ, ಅವರ ಮನಸ್ಸಿನಲ್ಲಿ ಹೇಗೆ ತಮ್ಮ ಮಾತುಗಳನ್ನು ಆರಂಭಿಸಬೇಕು ಅಂತ ಸರಣಿ ಹೆಣೀತಾ ಇರ್ತಾರೇ ವಿನಾ ಮನಸ್ಸು ಕೊಟ್ಟು ಕಿವಿಕೊಟ್ಟು ಯಾರೂ ಇನ್ನೊಬ್ರ ಮಾತನ್ನ ಕೇಳೋದೇ ಇಲ್ಲವೇನೋ ಅನ್ನಿಸುತ್ತೆ.

'ನಮಗೆ ಎರಡು ಕಿವಿಗಳಿರೋದ್ರಿಂದ ಹೆಚ್ಚಿಗೆ ಕೇಳಿಕೊಳ್ಳಬೇಕು' ಅನ್ನೋ ಅನುಪಾತದ ಮಾತಿಗಂತೂ ಹೋಗೋದೇ ಬೇಡ, ಎಲ್ರಿಗೂ ಮಾತನ್ನಾಡಬೇಕು ಅನ್ನೋ ತವಕಾ, ತಮ್ಮ ತಮ್ಮ ಸರದಿ ಬರೋವಲ್ಲೀವರೆಗೆ ಕಾಯಬೇಕು ಅನ್ನೋ ವ್ಯವಧಾನವಿಲ್ಲದಾಗ ಹೀಗಾಗುತ್ತೇನೋ ಅನ್ನಿಸುತ್ತೆ. ನಮ್ ಸುತ್ತಮುತ್ತಲಿನಲ್ಲಿ ಎಲ್ರೂ ಮಾತನಾಡಬೇಕು ಅಂತ ಹಾತೊರೆಯೋಕೆ ಏನಾದ್ರೂ ಒಂದು ಕಾರಣ ಅಂತ ಇರಬೇಕು - ಮಾತನಾಡೋದು ಅಂದ್ರೆ ಅಭಿವ್ಯಕ್ತಿಗೊಳಿಸೋದು, ಇಲ್ಲಂತೂ ಎಲ್ಲವನ್ನೂ ಶಬ್ದ ಮಾಡಿಯೇ ಹೇಳಬೇಕು, ಸನ್ನೆ-ಸೂಕ್ಷ್ಮ ಒಂದೂ ಇಲ್ಲ. ಎಷ್ಟೋ ಸರ್ತಿ ನಮ್ ಹೈ ಸ್ಕೂಲು ಮೇಷ್ಟ್ರುಗಳು ನಮ್ಮನ್ನ ಹೆದರಿಸ್ತಾ ಇರ್ಲಿಲ್ಲ್ವಾ ಕಣ್ಣಲ್ಲೇ? ಒಮ್ಮೆ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿಯೋ, ಅಥವಾ ಕಣ್ಣನ್ನು ಕಿರಿದಾಗಿ ಮಾಡಿಯೋ ಅವರ ಸಿಟ್ಟನ್ನ ಪ್ರದರ್ಶಿಸಿಸ್ತಾ ಇರ್ಲಿಲ್ಲ್ವಾ? ಅವೆಲ್ಲ ಇಲ್ಲಿ ನಡೆಯೋಲ್ವೋ ಏನೋ ಯಾರಿಗ್ಗೊತ್ತು?

ಈ ದೇಶದಲ್ಲಂತೂ ನಾನು ಒಬ್ರೂ ಮೂಕರನ್ನ ನೋಡಲಿಲ್ಲ, ಅದರ ಬದಲಿಗೆ ಹೆಚ್ಚು ಬಾಯಿಬಡುಕರನ್ನೇ ನೋಡಿರೋದು. ಇವತ್ತಿಗೂ ನಮ್ಮನೆಯಲ್ಲಿ ಬಲಗೈ ಹೆಬ್ಬಟ್ಟೆನ್ನ ಬಾಯಿ ಹತ್ರ ತಗೊಂಡೋಗಿ ತುಟಿಗೆ ತಾಗಿಸಿದ ಹಾಗೆ ಮಾಡಿದ್ರೆ ಒಂದು ಲೋಟಾ ನೀರಂತೂ ಖಂಡಿತ ಸಿಕ್ಕುತ್ತೆ, ಆದ್ರೆ ಇಲ್ಲಿ ಯಾರೂ ನೀರು ಕೊಡು ಅನ್ನೊದಕ್ಕೆ ಸನ್ನೆ ಮಾಡಿ ಕೇಳಿದ್ದನ್ನು ನಾನು ನೋಡಿಲ್ಲ. ನಮ್ಮ ಅವಿಭಾಜ್ಯ ಕುಟುಂಬ ವ್ಯವಸ್ಥೆಯಲ್ಲಿ ದೊಡ್ಡಪ್ಪ, ಚಿಕ್ಕಪ್ಪ, ಸೋದರ ಮಾವ, ಸೋದರತ್ತೆ ಇವರೆಲ್ಲ ನಮ್ಮನ್ನು ಬೇಕಾದಷ್ಟು "ಸನ್ನೆ-ಸೂಕ್ಷ್ಮ"ಗಳಲ್ಲಿ ಬೆಳಿಸಿದವರೇ. ಇವತ್ತಿಗೂ ಸಹ 'ಊಹೂ', 'ಇಲ್ಲ'ಗಳಿಗೆ ಎಷ್ಟೋ ಜನ ತಲೆಯಾಡಿಸೋದನ್ನ ನೋಡಿದ್ದೇನೆ.

ನಾವು ಒಂದ್ ಗಡಿ ದಾಟಿ ಇನ್ನೊಂದು ಗಡಿ ಹೊಕ್ಕರೆ ಬೇರೆ-ಬೇರೆ ಭಾಷೆಗಳ ಉಗಮ ಹಾಗೂ ಬೆಳವಣಿಗೆ ಆದಂತೆ ಸನ್ನೆಗಳ ಬೆಳವಣಿಗೆ ಎಲ್ಲಾ ಕಡೇ ಏಕಾಗಲಿಲ್ಲವೋ ಯಾರಿಗೆ ಗೊತ್ತು? ನಮ್ಮಲ್ಲಿ ಓಪನ್ ಆಗಿ 'ಧನ್ಯವಾದ' ಹೇಳೋ ಪದ್ಧತಿ ಏನೂ ಇಲ್ಲ, ಅದರ ಬದಲಿಗೆ ಕಣ್ಣಲ್ಲೇ ಧನ್ಯವಾದಗಳನ್ನ ಅರ್ಪಿಸೋದಿಲ್ಲವೇ? ನಮ್ಮವರು "ಥ್ಯಾಂಕ್ಯು-ವೆಲ್‌ಕಮ್"ಗಳನ್ನ ಹೇಳದಿದ್ದರೇನಂತೆ, ತುಂಬು ಹೃದಯದಿಂದ ಉಪಕಾರ ಸ್ಮರಣೆ ಮಾಡಿದರೆ ಸಾಕಾಗೋದಿಲ್ಲವೇ? ಹೀಗೆ ಬಾಯಿ ಬಿಟ್ಟು ಹೇಳಲಾಗದ ಹಲವಾರು ಭಾವನೆಗಳನ್ನು ಕಣ್ಣಿನ ಮೂಲಕ ಅಭಿವ್ಯಕ್ತಗೊಳಿಸಿದ್ದನ್ನ rude ನಡತೆ ಎನ್ನಲಾಗುವುದೇ? ಯಾರಾದ್ರೂ ಥ್ಯಾಂಕ್ಯೂ ಅಂದ್ರೆ 'you are welcome!' ಎಂದು ಹೇಳೋದನ್ನ ರೂಢಿ ಮಾಡಿಕೊಳ್ಳೋಕೆ ಎಷ್ಟೋ ದಿನಗಳು ಹಿಡೀತು, ಆದ್ರೂ ಅದು ಸಹಜ ಪ್ರತಿಕ್ರಿಯೆ ಅಂತ ಅನ್ನಿಸಿದ್ದೇ ಇಲ್ಲ. ಇನ್ನು ಬಾಯಿಬಿಟ್ಟು ಹೇಳದೇ ಹೋದ್ರೆ ಉಪಕಾರ ಸ್ಮರಣೆ ಮಾಡದವನು ಅಂತ ಬಿರುದು ಕೊಟ್ಟರೇ ಎನ್ನೋ ಹೆದರಿಕೆ ಬೇರೆ ಕೇಡಿಗೆ.

ಭಗವಂತ ಬಾಯ್ ಕೊಟ್ಟಾ ಅಂತ ಎಲ್ರೂ ಮಾತನಾಡಬೇಕಪ್ಪಾ, ಅದರ ಜೊತೆಯಲ್ಲಿ ಇನ್ನೊಬ್ರು ಮಾತನಾಡೋದನ್ನೂ ಹಾಗೇ ಕೇಳಬೇಕು ಅನ್ನೋದು ನನ್ನ ಒಂದು ಕೂದಳೆಯ ಕೊರಗು. ಇನ್ನೊಬ್ರು ಮಾತನಾಡ್ತಾ ಇರಬೇಕಾದ್ರೆ ನಾವುಗಳು ನಮ್ಮ-ನಮ್ಮ ಲೋಕದಲ್ಲೇ ಇದ್ರೆ ಅದರಿಂದಾನಾದ್ರೂ ಏನು ಬಂತು? ಎದುರಿಗಿದ್ದವರೇ ಮಾತನ್ನು ಕೇಳದಿರುವಾಗ ಇನ್ನು ಫೋನ್‌ನಲ್ಲಿ ಮಾತನಾಡಿದ್ದನ್ನ ಕೇಳಿಸಿಕೊಳ್ತಾರೆ ಅನ್ನೋದೇನು ಗ್ಯಾರಂಟಿ. ನನ್ನೊಡನಾಡುವ ಜನರನ್ನು ಈ ರೋಗದಿಂದ ಮುಕ್ತರನ್ನಾಗಿಸಲು ನಾನು ಹೊಸ ಮಾರ್ಗವೊಂದನ್ನು ಕಂಡುಹಿಡಿದುಕೊಂಡಿದ್ದೇನೆ, ಅದೇನೆಂದರೆ ನಾನು ಮಾತನಾಡ್ತಾ ಇರೋ ವಿಷಯದ ಬಗ್ಗೇನೇ ಅಲ್ಲಲ್ಲಿ ಸೂಚ್ಯವಾಗಿ ಪ್ರಶ್ನೆಗಳನ್ನ ಕೇಳೋದು. ನೀವೂ ಹೀಗೆ ಮಾಡಿ ನೋಡಿ, ಎಲ್ಲರೂ ನಿಮ್ಮ ಮಾತುಗಳನ್ನ ಕೇಳತೊಡಗುತ್ತಾರೆ, ಅಂದರೆ ಕಿವಿಗೊಟ್ಟು ಆಲಿಸತೊಡಗುತ್ತಾರೆ - ಆದರೆ ಅದನ್ನ ಪಾಲಿಸೋದು ಬಿಡೋದು ಅವರವರಿಗೆ ಬಿಟ್ಟ ವಿಷಯ, ಆದರೆ ನಿಮ್ಮ ಮಾತುಗಳ ಮಧ್ಯೆ ಕೇಳುವ ಪ್ರಶ್ನೆ, ಅದಕ್ಕೆ ಉತ್ತರ ಆ ಸಮಯದ ಮಟ್ಟಿಗೆ ನಿಮಗೆ ನೆನಪಿದ್ದರೆ ಅಲ್ಲಿಗೆ ಅರ್ಧ ಕಾರ್ಯ ಯಶಸ್ವಿಯಾದಂತೆಯೇ ಲೆಕ್ಕ!

Tuesday, October 03, 2006

ಕರ್ನಾಟಕ "ಬಂದ್"

ಸತ್ಯಾಗ್ರಹ ಅನ್ನೋದು ಬಹಳ ದೊಡ್ಡ ಮಾತು - Insistence of truth ಎಂದು ಅನುವಾದಿಸಿ ಹೇಳಿದರೂ ಇಂಗ್ಲೀಷರಿಗೆ ಬಾಪುವಿನ ಮನಸ್ಸಿನ್ನಲ್ಲಿದ್ದ ಸತ್ಯಾಗ್ರಹ ಹಾಗೂ ಅದರ ತೀವ್ರತೆಯ ಪರಿಣಾಮವನ್ನು ಹೇಳುವಲ್ಲಿ ಅನುವಾದ ಸೋಲುತ್ತದೆಯೆಂದೇ ಹೇಳಬೇಕು. ಇಂತಹ ಒಂದು ಮೂಲಮಂತ್ರವನ್ನು ಘೇರಾವ್, ಬಂದ್, ಮತ್ತಿತರ ರಾಜಕೀಯ ಪ್ರೇರಿತ ಹರತಾಳಗಳನ್ನಾಗಿ ಪರಿವರ್ತಿಸಿ ನೋಡುವಲ್ಲಿ ನನ್ನದು ಮೊದಲಿನಿಂದಲೂ ವಿರುದ್ಧ ದೃಷ್ಟಿಕೋನವೇ. ಇಂದು ಇಲ್ಲಿಯೂ ಸಹ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತೇನೆ - ಈ ವಿಷಯದಲ್ಲಿ ನನ್ನ ಆಲೋಚನೆಗಳು ಪ್ರೈಮರಿ ಶಾಲೆಯ ಮಕ್ಕಳ ಆಲೋಚನೆಯ ಹಾಗೆ ಕೆಲವರಿಗೆ ಕಂಡುಬರಬಹುದು, ಆದರೂ 'ಬಂದ್' ನಿಂದ ಏನೇನು ಅನುಕೂಲತೆಗಳನ್ನು ಇಷ್ಟು ದಶಕಗಳಲ್ಲಿ ಸಾಧಿಸಿಕೊಂಡಿದ್ದಾರೋ ಅವುಗಳನ್ನೆಲ್ಲ ಮುಂದೆ ತೆರೆದಿಟ್ಟರೂ ನಾನು ಬಂದ್ ಅನ್ನು ಅನುಮೋದಿಸುವುದಕ್ಕೆ ಬಹಳ ಕಷ್ಟಪಡಬೇಕಾದೀತು.

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಗೋಡೆ ಬರಹ ಹಾಗೂ ಭಿತ್ತಿ ಚಿತ್ರಗಳನ್ನು ನಿಷೇಧಿಸಬೇಕು ಎಂದು ಕಾನೂನನ್ನು ಬದಲಾಯಿಸುವ ಬಗ್ಗೆ ಮಾತುಕತೆಗಳು ಆರಂಭವಾಗಿದ್ದವು. ಮುಂದೆ ಕಾನೂನನ್ನು ಬದಲಾಯಿಸಿದರೋ ಇಲ್ಲವೋ ಗೊತ್ತಿಲ್ಲ, ಆದರೆ ಇವತ್ತಿಗೂ ನಮ್ಮ ಊರುಗಳಲ್ಲಿ ಕಂಡಕಂಡಲ್ಲೆಲ್ಲ ಒಂದಲ್ಲ ಒಂದು ರೀತಿಯ ಗೋಡೆ ಬರಹಗಳು, ಚಿತ್ರಗಳು, ಪೋಸ್ಟರುಗಳು ಇವೆಲ್ಲ ಮಾಮೂಲು. ಮುಂದುವರಿದ ದೇಶಗಳಲ್ಲಿ ಜಾಹಿರಾತು ಹೋರ್ಡಿಂಗ್‌ಗಳು ಕಾಣುತ್ತವೆ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ರಸ್ತೆ, ಗೋಡೆ, ಫಲಕಗಳ ಮೇಲೆ ಬಣ್ಣಬಣ್ಣದ ಬರಹಗಳು ಕಾಣುತ್ತವೆ ಎನ್ನುವುದು ಬೇರೆ ವಿಷಯ; ಎಷ್ಟೋ ಜನ ಗೋಡೆ ಬರಹವನ್ನು ಒಂದು ಸಾಮಾನ್ಯ ಧ್ವನಿಯ ಪ್ರತೀಕ ಅದನ್ನು ನಿಯಂತ್ರಿಸಬಾರದು ಎಂದೂ ಹೋರಾಟ ನಡೆಸಿದ್ದರು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ಒಂದು ಬಣ ಯೋಚಿಸಿದರೆ, ಮತ್ತೊಂದು ಬಣದವರು ನಿಮ್ಮ ಧ್ವನಿಗಳನ್ನು ಪರಿವರ್ತಿಸಿಕೊಳ್ಳಿ, ಅದರ ಬದಲು ಸಾರ್ವಜನಿಕ ಆಸ್ತಿಪಾಸ್ತಿ ಅಥವಾ ಖಾಸಗೀ ಪ್ರಾಪರ್ಟಿಯನ್ನು ಹಾಳುಗೆಡವಬೇಡಿ ಎಂದು ವಾದ ಶುರುಮಾಡಿದ್ದರು. ಹೀಗೆ ದೇಶಾದ್ಯಂತ ಎಲ್ಲಿ ಹೋದರೂ ಸಾರ್ವಜನಿಕ ಧ್ವನಿ ಒಂದಲ್ಲ ಒಂದು ರೀತಿಯಲ್ಲಿ ಹೊರಬರುತ್ತಲೇ ಇದೆ, ಹೀಗೆ ಧ್ವನಿಯನ್ನು ಹೊರಡಿಸಿರೋದರಿಂದ ಏನಾನಾಗಿದೆ ಎನ್ನುವುದನ್ನು ಯಾರಾದರೂ ಗೊತ್ತಿದ್ದವರು ಇಲ್ಲಿ ತಿಳಿಸಿದ್ದರೆ ಒಳ್ಳೆಯದಿತ್ತು.

ಉದಾಹರಣೆಗೆ ಇಂದಿನ ಕರ್ನಾಟಕ ಬಂದ್ ವಿಷಯವನ್ನೇ ತೆಗೆದುಕೊಳ್ಳೋಣ - ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎನ್ನುವುದು ಮುಖ್ಯವಾದ ಬೇಡಿಕೆಗಳಲ್ಲೊಂದು, ಆದರೆ ಈ ಕೆಳಗಿನ ವಿಷಯಗಳ ಹಿನ್ನೆಲೆಯಲ್ಲಿ ಈ ಬಂದ್ ಆಯೋಜಕರ ಸಂದೇಶಗಳು ಏನೇ ಇದ್ದರೂ ಅವು ಹೇಗೆ ಕನ್ನಡಿಗರಿಗೆ ಅನ್ವಯವಾಗುತ್ತವೆ ಎಂದು ನೋಡೋಣ:

* ಎರಡು ಸೆಕೆಂಡಿಗೊಂದು ಮಗು ಹುಟ್ಟುವ ನಮ್ಮ ವ್ಯವಸ್ಥೆಯಲ್ಲಿ ಆಸ್ಪತ್ರೆ, ಮುಂತಾದ ಅಗತ್ಯ ಸೇವೆಗಳಲ್ಲಿ ನಿರತವಾಗಿರುವ ಕೆಲಸಗಾರರು ಬಂದ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವಂತೆ ಮುಂಜಾಗರೂಕತೆ ತೆಗೆದುಕೊಳ್ಳುವವರಾರು?
* ವಯೋವೃದ್ಧರು, ಮಕ್ಕಳು ಖಾಯಿಲೆಗೆ ಬಿದ್ದರೆ ತುರ್ತು ಚಿಕಿತ್ಸೆಗೆಂದು ಅವರು ಎಲ್ಲಿ ಹೋಗಬೇಕು, ಅವರು afford ಬಸ್ಸು, ರಿಕ್ಷಾಗಳು ಸೇವೆಯಲ್ಲಿಲ್ಲದಿರುವಾಗ ಇಂತಹ ಅಸಹಾಯಕರು ಏನು ಮಾಡಬೇಕು?
* ಕಂಪನಿ, ಅಂಗಡಿ, ಮುಗ್ಗಟ್ಟುಗಳು ತಮ್ಮ ಆ ದಿನದ ಕೆಲಸವನ್ನು ನಿಲ್ಲಿಸಿರುವುದರಿಂದ ಆಗುವ ನಷ್ಟವನ್ನು ತುಂಬಿಕೊಡುವವರಾರು?
* ಒಂದು ದಿನ ಕೆಲಸ ಸ್ಥಗಿತಗೊಳಿಸಿರೋದರಿಂದ ಎಷ್ಟೋ ಯೋಜನೆಗಳಿಗೆ ಆಗುವ ನಷ್ಟವನ್ನು ಹೇಗೆ ವಿವರಿಸುವುದು? ಅವುಗಳನ್ನು ಮತ್ತೆ ಸ್ಕೆಡ್ಯೂಲಿನಲ್ಲಿ ಸರಿಯಾಗಿಡುವುದು ಹೇಗೆ?
* ಅಂದೇ ದುಡಿದು ಅಂದೇ ತಿನ್ನುವ ಕೂಲಿ ಕಾರ್ಮಿಕರಿಗೆ ಹೊಟ್ಟೆ ಹೊರೆಯುವವರಾರು?
* ಶಾಲೆ-ಕಾಲೇಜುಗಳಲ್ಲಿ ಪಾಠ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಯಾರು ಸ್ಪೆಷಲ್ ಕ್ಲಾಸುಗಳನ್ನು ಏರ್ಪಡಿಸಿ ಕ್ಲಾಸುಗಳನ್ನು ನಡೆಸುವ ವ್ಯವಸ್ಥೆಯನ್ನು ಮಾಡುತ್ತಾರೆ?
* ಇಂದೇ ಕೊನೇ ದಿನವಾಗಿ ಹಾಕಬೇಕಾದ ಎಷ್ಟೋ ಅರ್ಜಿಗಳನ್ನು ತುಂಬಿ ಬ್ಯಾಂಕು, ಅಂಚೆ ವ್ಯವಸ್ಥೆಯ ಸಹಾಯದಿಂದ ಕಳಿಸಬೇಕಾದವರಿಗೆ ಸಹಾಯ ಮಾಡುವವರಾರು?

ಹೀಗೆ ಬರೆಯುತ್ತಾ ಹೋದರೆ ಕೊನೇಪಕ್ಷ ಒಂದು ನೂರು ಪ್ರಶ್ನೆಗಳನ್ನು ಬರೆಯಬಹುದು. ಇವೆಲ್ಲವನ್ನೂ ಕೂಲಂಕಷವಾಗಿ ಗಮನಿಸಿದರೆ ಈ ಬಂದ್ ಆಚರಣೆಯಿಂದ ಕರ್ನಾಟಕದವರಿಗೆ (ಒಬ್ಬ ಸಾಮಾನ್ಯ ಕನ್ನಡಿಗನಿಗೆ ಎನ್ನೋ ಅರ್ಥದಲ್ಲಿ) ತೊಂದರೆಗಳಾದವೇ ವಿನಾ ಅನುಕೂಲಗಳೇನಾದವು ಎಂದು ಪ್ರಶ್ನೆ ಹುಟ್ಟುತ್ತದೆ. ಸರಿ ಈ ಬಂದ್ ಆಚರಣೆಯ ನಿರೀಕ್ಷೆ ಏನು, ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗಿದೆಯೇ? ಅಥವಾ ಕರ್ನಾಟಕದವರದ್ದೂ ಒಂದು ಧ್ವನಿ ಇದೆ ಒಂದು ತೋರಿಸಬೇಕಾಗಿದೆಯೇ? ಅಥವಾ ಮಹಾರಾಷ್ಟ್ರ ಸರ್ಕಾರದ ನಿಯೋಗಗಳು ಕೇಂದ್ರವನ್ನು ಇನ್ನೊಮ್ಮೆ ತಲುಪದಿರುವಂತೆ ಪರೋಕ್ಷವಾಗಿ ಹೇಳಬೇಕಾಗಿದೆಯೇ? ಅಥವಾ ಬರೀ ರಾಜಕೀಯ ಪ್ರೇರಿತ ಈ ಬಂದ್ ನಲ್ಲಿ ನನಗರಿವಿಗೆ ಬರದ, ಬಂದರೂ ಬರೆಯಲಾಗದ ಇನ್ನೇನಾದರೂ ಗುಟ್ಟುಗಳಿವೆಯೋ ಯಾರಿಗೆ ಗೊತ್ತು?

ಹೀಗೆ ವರ್ಷಕ್ಕೊಂದು ಬಂದ್ ನಡೆದರೆ ಅದನ್ನು ರಾಜ್ಯದ ರಜಾ ದಿನಗಳ ಸಾಲಿಗೆ ಸೇರಿಸಿಕೊಂಡು ನೆಮ್ಮದಿಯಿಂದಿರಬಹುದು. ಜಿಲ್ಲಾ, ತಾಲ್ಲೂಕುಗಳ ಮಟ್ಟದಲ್ಲಿ ಆಗಿಂದಾಗ್ಗೆ ನಡೆಯುವ ಹರತಾಳಗಳನ್ನು ಹೊರತುಪಡಿಸಿ ರಾಜ್ಯ ಮಟ್ಟದಲ್ಲಿ ಬೇಕಾದಷ್ಟು ಈ ರೀತಿ ನಡೆಯುತ್ತಲೇ ಇರುತ್ತವೆ. ಇನ್ನು ಸ್ವಲ್ಪ ದಿನಕ್ಕೆ ಕಾವೇರಿ ಗಲಾಟೆ ಆರಂಭವಾಗುತ್ತದೆ, ಯಾರೋ ಒಬ್ಬರು ಅಂಬೇಡ್ಕರ್ ಹೆಸರಿಗೆ ಮಸಿ ಬಳಿದರೆಂದು ಶುರುವಾಗುತ್ತದೆ, ಅನ್ಯಾಯವನ್ನು ಪ್ರತಿಭಟಿಸಿ ಹಲವು ಬಂದ್ ಗಳು, ಅನ್ಯಾಯವನ್ನು ಮೆಟ್ಟಿ ನಿಲ್ಲಲು ಇನ್ನು ಹಲವು, ಶಾಂತಿ ಸಂದೇಶವನ್ನು ಬಿಂಬಿಸಲು ಕೆಲವಾದರೆ, ಕೆಂಪು ಬಸ್ಸುಗಳನ್ನು ಸುಟ್ಟು, ಬೀದಿ ದೀಪಗಳನ್ನು ಪುಡಿ ಮಾಡುವ ಮತ್ತಷ್ಟು ಬಂದ್ ಗಳು. ಈ ಎಲ್ಲಾ ಬಂದ್ ಗಳು ಮಾಡಿದ ಒಟ್ಟು "ಸತ್ಯಾಗ್ರಹ"ವನ್ನು ಲೆಕ್ಕ ಹಾಕಿ ನೋಡಿದರೆ ನಮ್ಮ ದೇಶ-ರಾಜ್ಯದಲ್ಲಿ ಇಂದು ಅನ್ಯಾಯ, ಬ್ರಷ್ಟಾಚಾರ, ಇತ್ಯಾದಿಗಳು ಇರಲೇಬಾರದು, ಯಾವ ಗಡಿಯನ್ನು ಯಾರೂ ಆಕ್ರಮಿಸಬಾರದು, ಎಲ್ಲ ವರದಿಗಳೂ ಅನುಷ್ಠಾನಕ್ಕೆ ಬಂದಿರಬೇಕಿತ್ತು, ಸ್ವಾಯುತ್ತತೆ ಬೇಡಿದವರಿಗೆಲ್ಲ ಸಿಕ್ಕಿರಬೇಕಿತ್ತು - ಆದರೆ ಹಾಗೇನೂ ಆಗಲಿಲ್ಲವಲ್ಲ!

ಹಾಗಾದರೆ ಬಡ ಧ್ವನಿಗಳಿಗೆ ಒಂದು ಮಾಧ್ಯಮ ಅನ್ನೋದು ಬೇಡವೇ ಮತ್ತೆ? ಎಲ್ಲರೂ ಡೆಕ್ಕನ್ ಹೆರಾಲ್ಡ್‌ನಲ್ಲಿ ಫುಲ್ ಪೇಜ್ ಜಾಹಿರಾತು ಕೊಟ್ಟು ತಮ್ಮ ಸಂದೇಶವನ್ನು ಬಿಂಬಿಸುವಂತಿದ್ದರೆ ನಾವೇಕೇ ಹೀಗಿರುತ್ತಿದ್ದೆವು? ಹಾಗಿದ್ದ ಮೇಲೆ ಈ ಇಲ್ಲದವರ ಧ್ವನಿಯಾಗಿ ನಿಜವಾಗಿಯೂ ಬಂದ್ ಗಳು ಕೆಲಸ ಮಾಡುವಂತೆ ಮಾಡುವಲ್ಲಿ ಜನರು ಏಕೆ ಯೋಚಿಸೋದಿಲ್ಲ? ಸ್ವಾತಂತ್ರ್ಯೋತ್ತರ ದಶಕಗಳಲ್ಲಿ "ನಾವು ಇಂದು ನಮ್ಮ ಕೆಲಸವನ್ನು ಮಾಡುವುದಿಲ್ಲ" ಎನ್ನುವುದೇ ನಮಗೆ ತತ್ ತಕ್ಷಣ ಹೊಳೆಯುವ ಪ್ರತಿಭಟನೆಯ ಹಾದಿಯೇ? ಈ ಬಂದ್ ಸ್ಥಿತಿಗೆ ಬರದಿರುವಂತೆ, ಅದಕ್ಕೂ ಮೊದಲು ಯಾರು ಯಾರು ಏನೇನನ್ನು ಮಾಡಿದ್ದಾರೆ? ಎಷ್ಟು ನಿಯೋಗಗಳು ಎಲ್ಲೆಲ್ಲಿ ಹೋಗಿವೆ? ಕೇಂದ್ರ ಸರಕಾರದವರು ಏಕೆ ಉತ್ತರ ಕೊಡುತ್ತಿಲ್ಲ? ಬಂದ್ ಮಾಡಿದ ಮೇಲೂ ಮಹಾಜನ ವರದಿಯನ್ನು ಅನುಷ್ಠಾನ ಮಾಡದಿದ್ದರೆ ಮುಂದಿನ ಹೆಜ್ಜೆಗಳೇನು? ಗುರಿಗಳೇನು? ಹೀಗೆ ಹಲವಾರು ಪ್ರಶ್ನೆಗಳನ್ನು ಒಂದರ ಹಿಂದೊಂದು ಕೇಳಬಹುದು.

ಬೆಳಗಾವಿ, ಕಾಸರಗೋಡು, ಬಳ್ಳಾರಿ, ಬೆಂಗಳೂರನ್ನು "ಸಂರಕ್ಷಣೆ" ಮಾಡೋದು ಕರ್ನಾಟಕದ ಜನತೆಯ ನಿಲುವಾದರೆ, ಆಡಳಿತ ಹಾಗೂ ವಿರೋಧ ಪಕ್ಷದವರೆಲ್ಲ ಬೆಂಬಲಿಸುತ್ತಿರುವ ಈ "ಬಂದ್" ಗಿಂತ ಮೊದಲು ಅವರೆಲ್ಲ ಏನೇನು ಮಾಡಿದ್ದಾರೆ, ಇದಕ್ಕೋಸ್ಕರವೇ ಒಂದು ಸಮಿತಿ ಅನ್ನೋದು ಇದೆಯೇ, ಗಡಿ ವಿಚಾರಗಳನ್ನು ಪರಾಮರ್ಶಿಸಿ ನೇರವಾಗಿ ಸಂಬಂಧಪಟ್ಟವರಲ್ಲಿ ವ್ಯವಹಾರ ನಡೆದಿದೆಯೇ? ಒಂದು ವೇಳೆ ನಮ್ಮ "ಬಂದ್" ಕರೆಗೆ ಓಗೊಟ್ಟು ಮಹಾಜನ್ ವರದಿಯನ್ನು ಅನುಮೋದಿಸಿದರು ಎಂದೇ ಅಂದುಕೊಳ್ಳೋಣ, ಮರುದಿನ ಮಹಾರಾಷ್ಟ್ರದವರು ಬಂದ್ ಆಚರಣೆ ಮಾಡಿದರೆ ಕೇಂದ್ರ ಸರ್ಕಾರದವರು ಏನು ಮಾಡಬೇಕು?

***

ಇವೆಲ್ಲವನ್ನು ಬರೆಯುತ್ತಿರುವುದರಿಂದಲೇ ಹೇಳಿದ್ದು ನನ್ನ ಆಲೋಚನೆಗಳು ಇನ್ನೂ ಪರಿಪಕ್ವವಾಗಿಲ್ಲ, ಇಪ್ಪತ್ತೈದು ವರ್ಷಗಳ ಕಾಲ ಭಾರತದಲ್ಲಿದ್ದರೂ ನನಗಿನ್ನೂ "ಬಂದ್"ಗಳ ಜೀವಾಳ ಅರ್ಥವಾಗಿಲ್ಲ, ಪ್ರತಿ ಬಂದ್ ಅನ್ನೋದೂ ಸಹ ನನಗೆ ಸಾರ್ವಜನಿಕರಿಗೆ ನೇರವಾಗಿ ಒಡ್ಡುವ ಹಿಂಸೆಯಂತೆ ಕಂಡು ಬಂದಿದೆಯೇ ವಿನಾ ಗೆದ್ದಿರುವ ಅಂಶಗಳು ಕಡಿಮೆ. ಹೀಗೆ ನಮ್ಮ ವಿರುದ್ಧವಾಗಿ ನಡೆಯುವ ಎಲ್ಲ ಪಿತೂರಿಗಳನ್ನು ವಿರೋಧಿಸಿ ಎಷ್ಟು ಬೇಕಾದಷ್ಟು ಬಂದ್ ಗಳನ್ನು ಆಚರಿಸುವಂತಿದ್ದರೆ ಚೆನ್ನಾಗಿತ್ತು. ಭಾರತ್ ಬಂದ್, ಏಷ್ಯಾ ಬಂದ್, ವಿಶ್ವವೇ ಬಂದ್ ಅನ್ನೋ ಹಾಗೆ - ಏನೇನೆಲ್ಲವನ್ನು ಮಾಡಬಹುದಿತ್ತು, I am really looking forward to a bundh, so that I don't have to work tomorrow! ನಮ್ಮ ವ್ಯವಸ್ಥೆಯಲ್ಲಿ ನಮ್ಮ ಹಕ್ಕು ಕತ್ರ್ಯವ್ಯಗಳನ್ನು ಜ್ಞಾಪಿಸೊದಕ್ಕು 'ಬಂದ್' ಗಳು ಎಷ್ಟ್ರರ ಮಟ್ಟಿಗೆ ಪೂರಕವಾಗಿವೆ ಅನ್ನೋದು ಈ ಸಂದರ್ಭದಲ್ಲಿ ಏಳುವ ಮತ್ತೊಂದು ಅಲೆಯಷ್ಟೇ.

Monday, October 02, 2006

ಭಾಷೆ ಬಾರದವರು

ತಿಂಗಳಿಗೊಮ್ಮೆ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರನ್ನು ಸ್ವಚ್ಛಗೊಳಿಸೋದು ವಾಡಿಕೆ, ಮೊದಲ ತಿಂಗಳು ಧಿಡೀರನೇ ಹೀಗೆ ನೋಟಿಸ್ ಕೊಟ್ಟು ಒಂದು ವಾರಾಂತ್ಯದಲ್ಲಿ ಎಲ್ಲವನ್ನೂ ಸ್ವಚ್ಛಗೊಳಿಸುವ ಮುನ್ಸೂಚನೆ ನೀಡಿ ಇದ್ದು ಬದ್ದುದೆಲ್ಲವನ್ನು ತೆಗೆದೆಸೆದು ಪೂರ್ತಿ ಖಾಲಿ ಮಾಡಿ ಹಾಕಿದ್ದರು. ಅಂದಿನಿಂದ ನಾವೆಲ್ಲರೂ ತಿಂಗಳ ಕೊನೆ ಬರುತ್ತಿದ್ದಂತೆ ಅದರಲ್ಲಿ ನಮ್ಮ ವಸ್ತುಗಳನ್ನೆನೂ ಇಡದೆ ಮುಂಜಾಗರುಕತೆಯಿಂದಿರುತ್ತಿದ್ದೆವು, ಏಕೆಂದರೆ ಅವರು ಅದರಲ್ಲಿದ್ದುದೆಲ್ಲವನ್ನು ಎಸೆಯುತ್ತಾರೆ ಎಂದ ಮೇಲೆ ಹಾಗೆ ಮಾಡಿಯೇ ತೀರುತ್ತಾರೆ ಎನ್ನುವುದನ್ನು ಕಲಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ.

ಶುಕ್ರವಾರ ನಾನು ನನ್ನ ಊಟದ ಬ್ಯಾಗ್ ತೆಗೆದುಕೊಂಡು ಬರುವ ಹೊತ್ತಿಗೆ ಇನ್ನೇನು ರೆಫ್ರಿಜಿರೇಟರ್ ಬಾಗಿಲು ಮುಚ್ಚ ಬೇಕೆನ್ನುವ ಹೊತ್ತಿಗೆ ಕೆಳಗೆ ಇಟ್ಟ ಒಂದು ಪ್ಯಾಕೆಟ್ ನನ್ನ ಗಮನ ಸೆಳೆಯಿತು, ಅದರ ಮೇಲೆ ಕೆಂಪು ಇಂಕಿನಲ್ಲಿ ಬರೆದ ಅಕ್ಷರಗಳು ಕುತೂಹಲದಿಂದ ಓದಿಸಿಕೊಂಡು ಹೋದವು - 'cleaning crew, this packet contains breakfast cereal, don't throw this packet when you clean!' ನಾನು ಈ ಪ್ಯಾಕೇಟಿನ ಗತಿ ಇನ್ನೆನಾಗುತ್ತೋ ಎಂದು ಅದರ ಓನರ್ ಬಗ್ಗೆ ಹುಡುಕಿದಾಗ ಯಾವ ಸುಳಿವೂ ಸಿಗದೇ ಸುಮ್ಮನೇ ಬಿಟ್ಟೆನಾದರೂ ಅದು ಟ್ಯ್ರಾಷ್ ಕ್ಯಾನ್ ಸೇರುವುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೂ ಅದರ ಅದೃಶ್ಟವನ್ನು ನೋಡಿಯೇಬಿಡೋಣವೆಂದು ಇಂದು ಮುಂಜಾನೆ ಹೋಗಿ ನೋಡಿದರೆ ಫ್ರಿಜ್ ಎಲ್ಲಾ ಬಣಬಣ, ಆ ಕ್ಲೀನಿಂಗ್ ಕ್ರ್ಯೂ ಎಲ್ಲವನ್ನು ಎತ್ತಿ ಬಿಸಾಡಿದ್ದಾರೆ! ಸ್ವಲ್ಪ ಆ ಕಡೆ ಈ ಕಡೆ ವಿಚಾರಿಸಲಾಗಿ ನಮ್ಮ ಆಫೀಸಿನಲ್ಲಿ ರೆಫ್ರಿಜಿರೇಟರ್ ಸ್ವಚ್ಛ ಮಾಡುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ತಿಳಿಯಿತು. ಅಕಸ್ಮಾತ್ ಅವರಿಗೆ ಆ ಚೀಟಿಯಲ್ಲಿ ಬರೆದಿದ್ದ ಲೇಬಲ್ ಓದಲು ಬಂದಿದ್ದರೆ ಆ ಸಿರಿಯಲ್ ಹಾಗೇ ಉಳಿಯುತ್ತಿತ್ತೋ ಏನೋ ಯಾರಿಗೆ ಗೊತ್ತು?

ಇಂತಹ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ನಡುವೆ ಒಬ್ಬ ಮನುಷ್ಯ ಮೂಗಿನ ಮೇಲೆ ಕನ್ನಡಕವನ್ನಿಟ್ಟುಕೊಂಡು ಅವನು ತನ್ನಷ್ಟಕ್ಕೆ ತಾನು ಕೆಲಸ ಮಾಡುವ ವಿಧಿಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಾನೆ, ಅಪ್ಪಟ ಅಮೇರಿಕನ್ ಅಕ್ಸೆಂಟಿನಲ್ಲಿ ಇಂಗ್ಲೀಷನ್ನು ಮಾತನಾಡುವ ಈತನನ್ನು ನಾನು "0007 ಏಜೆಂಟ್" ಎಂದೇ ಕರೆಯೋದು, ಇಲ್ಲವೆಂದಾದರೆ ಮಧ್ಯ ವಯಸ್ಸಿನ ಈ ಮನುಷ್ಯ ಇಷ್ಟೊಂದು ಚೆನ್ನಾಗಿ ಇಂಗ್ಲೀಷನ್ನು ಮಾತನಾಡಿ ಈ "ಭಾಷೆ ಬಾರದ" ಉಳಿದವರ ಜೊತೆ ಇಂಥ ಕೆಲಸಕ್ಕೇಕೆ ಸೇರಿಕೊಳ್ಳುತ್ತಿದ್ದ? ಸಂಜೆ ಆರೂವರೆ ಏಳು ಘಂಟೆ ಆಗುತ್ತಲೇ ಟ್ರ್ಯಾಷ್ ಕಲೆಕ್ಟ್ ಮಾಡಿಕೊಂಡು ಒಂದಿಷ್ಟು ಜನ ಲಗುಬಗೆಯಲ್ಲಿ ಓಡಾಡಲು ಶುರು ಮಾಡಿಕೊಳ್ಳುತ್ತಾರೆ, ಇಷ್ಟು ದೊಡ್ಡ ಆಫೀಸನ್ನು ಆದ್ಯಾವ ಪರಿಯಲ್ಲಿ ಸ್ವಚ್ಛಗೊಳಿಸುತ್ತಾರೋ ಬಿಡುತ್ತಾರೋ ಒಂದೆರೆಡು ಘಂಟೆಗಳಲ್ಲಿ ಎಲ್ಲವೂ ಹೆಚ್ಚೂ ಕಡಿಮೆ ಸ್ವಚ್ಛವಾಗಿರುತ್ತವೆ. ಪ್ರತಿದಿನವೂ ಯಾರು ಇರಲಿ ಬಿಡಲಿ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸುವ ಈ ಕ್ಲೀನಿಂಗ್ ಕ್ರ್ಯೂ "ಮಾತು ಕಡಿಮೆ, ಕೆಲಸ ಜಾಸ್ತಿ" ಎನ್ನುವ ಪಂಗಡಕ್ಕೆ ಸೇರಿದವರೆಂದು ನಾನು ಲೇಬಲ್ ಕೊಡುತ್ತೇನೆ.

ಎಲ್ಲವೂ ಇಂಗ್ಲೀಷಿನಲ್ಲೇ ಅಧಿಕಾರಕ್ಕೊಳಗಾಗಿ ಸಂವಹನದಲ್ಲಿ ತೊಡಗಿರುವಂತೆ ಕಂಡುಬರುವ ನಮ್ಮ ಆಫೀಸಿನಲ್ಲೂ "ಭಾಷೆ ಬಾರದ" ಅಥವಾ ಇನ್ಯಾವುದೋ ಭಾಷೆಯಲ್ಲೇ ಅವರವರ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಬೇಕಾದಷ್ಟು ಗುಂಪುಗಳು ಕಂಡುಬರುತ್ತವೆ. ಕೆಲವರದು ಇಂಗ್ಲೀಷು ಬಾರದ, ಅವರದ್ದೇ ಆದ ಒಂದು ಸದಾ ತೆರೆದಿರುವ ಲೋಕ, ಇನ್ನು ಹಲವರಿಗೆ ಆಗಾಗೆ ಇಂಗ್ಲೀಷಿನ ಸಾಮ್ಯ್ರಾಜ್ಯದಲ್ಲಿ ಮಿನುಗುವ ಕಪ್ಪ ಕೊಟ್ಟು ಹದ್ದು ಬಸ್ತಿನಲ್ಲಿರುವ ಚಿಕ್ಕ ಪುಟ್ಟ ರಾಜರುಗಳಂತೆ ಅವರವರ ಮನೆ ಮಾತು ಹಾಗೂ ಇತರ ಭಾಷೆಗಳು. ಇಂತಹವುಗಳ ನಡುವೆ ನನಗೆ ನನ್ನದೇ ಆದ ಕನ್ನಡ ಲೋಕವಿದೆ, ಆಗಾಗ್ಗೆ ಈ ನಿಟ್ಟಿನಲ್ಲಿ ಆಲೋಚಿಸುವ ನನಗೂ ಈ "ಭಾಷೆ ಬಾರದ" ಕ್ಲೀನಿಂಗ್ ಕ್ರ್ಯೂ ಗೂ ಹೆಚ್ಚು ವ್ಯತ್ಯಾಸವಿದೆಯೆಂದೇನೂ ಅನ್ನಿಸಲಿಲ್ಲ!

Sunday, October 01, 2006

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೇ...

ಓಹ್, ಹಾ ಹ್ಞೂ ಅನ್ನೋದರೊಳಗೆ ಸೆಪ್ಟೆಂಬರ್ರೇ ಮುಗಿದು ಹೋಯ್ತಲ್ಲಪ್ಪಾ ಈ ವರ್ಷಾ ಅಂದ್‌ಕೊಂಡೋರಲ್ಲಿ ನಾನೂ ಒಬ್ಬ. ಸೆಪ್ಟೆಂಬರ್ ಮುಗಿಯುತ್ತಲೂ ಇಲ್ಲಿ ನಾವಿರೋ ಸ್ಥಳದಲ್ಲಿ ಒಂದ್ ಕಡೆ ಸ್ವೆಟರ್, ಕೋಟುಗಳು ಹೊರಗಡೆ ಬಂದು ಇನ್ನೂ ಛಳಿ ಬಿದ್ದಿಲ್ಲಾ ಅಂತ ಹೇಳಿಕೊಂಡು ಹಾಗೇ ಅಂಗಿಯನ್ನು ತೊಟ್ಟು ತಿರುಗುವ ನನ್ನಂತಹವರಿಗೂ ಒಂದು ರೀತಿಯ ಛಳಿಯ ಹೆದರಿಕೆಯನ್ನು ಹುಟ್ಟಿಸಿದರೆ ಮತ್ತೊಂದು ಕಡೆ ಬೇಸಿಗೆ ಶುರುವಾಗಿ ಆಗಲೇ ಮುಗಿದುಹೋಯಿತೇ ಎನ್ನುವಂತಾಗಿತ್ತು. ಈ ವರ್ಷದ ಸೆಪ್ಟೆಂಬರ್ ಆರಂಭದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಮಾರಂಭ ಸಡಗರದಲ್ಲಿ ಮೊದಲವಾರವನ್ನು ಆಪೋಶನವನ್ನು ತೆಗೆದುಕೊಂಡರೆ, ಕೊನೆಯಲ್ಲಿ ದಸರಾ, ವಿಜಯದಶಮಿಯನ್ನು ಹೊತ್ತು ತಂದು ಮುಂಬರುವ ದೀಪಾವಳಿಯನ್ನಾಗಲೇ ನೆನಪಿಸುವಂತಾಗಿರುವುದು ವಿಶೇಷ. ಸರಿಯಾಗಿ ಇನ್ನು ಹನ್ನೆರಡು ಹದಿಮೂರು ವಾರ ಮುಗಿದರೆ ಈ ವರ್ಷದ ಆಯಸ್ಸು ಮುಗಿದಂತೆ ಮತ್ತೊಂದು ಹೊಸವರ್ಷ ಆರಂಭವಾಗುತ್ತದೆ, ಮುಂಬರುವ ಐವತ್ತೆರಡು ಹೊಸವಾರಗಳು ತಮ್ಮ ಹೊಸಮುಖಗಳನ್ನು ಪರಿಚಯಿಸಿಕೊಳ್ಳಲು ಕಾದಿರುತ್ತವೆ.

ಹೀಗೆ ವರ್ಷಗಳನ್ನು ವಾರಗಳಲ್ಲಿ ಅಳೆಯೋದಕ್ಕೆ ಬೇರೇನು ಕಾರಣವಿಲ್ಲ - ಇಲ್ಲಿಗೆ ಬಂದ ಮೇಲೆ ಮೆಟ್ರಿಕ್ ಪದ್ಧತಿಯ ಎಲ್ಲಾ ಮೂಲಮಾನಗಳನ್ನು ಬದಿಗೊತ್ತಿ, ಆಡಿ-ಮೈಲು-ವಾರಗಳ ಅಳತೆಯ ಚಕ್ಕರದಲ್ಲಿ ಸಿಕ್ಕಿಹಾಕಿಕೊಂಡಿರುವವರು ಹಲವರು, ಅದರಲ್ಲಿ ನಾನೂ ಒಬ್ಬ. ಕ್ಯಾಮೆರಾ ಲೆನ್ಸ್ ಅಳತೆಯ ಲೆಕ್ಕಕ್ಕೆ ಮಾತ್ರ ಮಿಲಿ ಮೀಟರುಗಳನ್ನು ಬಳಸುತ್ತೇನೆಯೇ ವಿನಾ ಮತ್ತೆಲ್ಲದಕ್ಕೂ ಹೆಚ್ಚೂ ಕಡಿಮೆ ಇಂಚು, ಅಡಿ, ಮೈಲು, ಗ್ಯಾಲನ್ನುಗಳ ಲೆಕ್ಕವೇ. ಈ ಲೆಕ್ಕದ ಮಹಿಮೆಯನ್ನು ಕೊಂಡಾಡುತ್ತಾ ಹೋದಂತೆ ಎರಡು ವಿಷಯಗಳು ಗೋಚರಿಸಿದವು: ಮೊದಲನೆಯದಾಗಿ ವಿಶ್ವದಾದ್ಯಂತ ಜನರು ಉಷ್ಣತೆಯನ್ನು ಅಳೆಯಲು ಯಾವ ಸ್ಕೇಲ್ ಅನ್ನು ಬಳಸಿದರೂ (ಸೆಲ್ಶಿಯಸ್, ಫ್ಯಾರನ್‌ಹೈಟ್, ಕೆಲ್ವಿನ್) ಇಲ್ಲಿನ ಫ್ಯಾರನ್‌ಹೈಟ್ ಸ್ಕೇಲ್ ನನಗೆ ವಾತಾವರಣದ ಉಷ್ಣತೆಯನ್ನು ಅಳೆಯಲು ವಿಸ್ತೃತವಾದದ್ದು ಎನ್ನಿಸಿದ್ದು ಹಾಗೂ ಎರಡನೆಯದಾಗಿ ವಿಶ್ವದಾದ್ಯಂತ ಜನರ ಎತ್ತರವನ್ನು ಗುರುತಿಸಿ ಬಳಸುವಲ್ಲಿ ಅಡಿ-ಇಂಚುಗಳೇ ಹೆಚ್ಚು ಬಳಕೆಯಲ್ಲಿರುವುದು. ಸೆಂಟಿಗ್ರೇಡ್ ಸ್ಕೇಲಿನ ಬಳಕೆಯಲ್ಲಿ ತಪ್ಪು-ಸರಿ ಎನ್ನುವಂತದ್ದೇನೂ ಇಲ್ಲ, (ಭಾರತದಲ್ಲಿ) ನಮ್ಮೂರಿನ ಉಷ್ಣತೆ ಕಡಿಮೆ ಎಂದರೆ ಹದಿನೈದು ಡಿಗ್ರಿಯಿಂದ ಹಿಡಿದು ಹೆಚ್ಚೆಂದರೆ ನಲವತ್ತು ಮುಟ್ಟೀತು - ಅದನ್ನು ಇಲ್ಲಿಯವರ ತರಹ ಅರವತ್ತೈದರಿಂದ ನೂರಾ ಹದಿನೈದು ಎಂದು ಗುರುತಿಸಿದಾಗ ಉಷ್ಣತೆಯ ರೇಂಜ್ ಹೆಚ್ಚಾಗಿ ಇದ್ದ ಹವಾಗುಣದಲ್ಲೇ ಹೆಚ್ಚು ಆಪ್ಷನ್ನುಗಳು ಕಂಡಂತೆ ಅನ್ನಿಸೀತು. ಯಾವ ಸ್ಕೇಲನ್ನು ಎಲ್ಲಿಯಾದರೂ ಬಳಸಲಿ, ಇವತ್ತಿಗೂ ನಮ್ಮೂರುಗಳಲ್ಲಿ "ನೂರು ಡಿಗ್ರಿ ಜ್ವರ" ಎಂದರೆ ಎಲ್ಲರಿಗೂ ಜ್ವರದ ಕಾವು ಅರಿವಿಗೆ ಬರುತ್ತದೆ!

ಇನ್ನೆನು ಕೆಲವೇ ದಿನಗಳಲ್ಲಿ ಮರಗಿಡಗಳು ತಮ್ಮ ಎಲೆಗಳನ್ನು ಉದುರಿಸಲು ಆರಂಭಿಸುತ್ತವೆ, ಅದಕ್ಕೂ ಮೊದಲು ಒಂದು ರೀತಿ ಕೆಂಪು ಬಣ್ಣ ಎಲ್ಲ ಕಡೆ ತುಂಬಿಕೊಳ್ಳುತ್ತದೆ. ಅಕ್ಟೋಬರ್ ಎರಡನೇ ವಾರ ಹತ್ತಿರ ಬರುತ್ತಿದ್ದಂತೆ ನಿಧಾನವಾಗಿ ಗಾಳಿ ಬೀಸತೊಡಗುತ್ತದೆ, ನಸುಕಿನಲ್ಲಿ ಇಬ್ಬನಿ ಹೆಚ್ಚು ಕಡೆ ತೇವವನ್ನು ಹಿಡಿದಿಡುವ ಸಾಹಸ ಮಾಡುತ್ತಾ, ಒಂದೆರೆಡು ಘಂಟೆ ತಡವಾಗಿ ಉದಯಿಸುವ ಸೂರ್ಯನೇನು ಮಾಡುತ್ತಾನೆ ನೋಡುತ್ತೇನೆ ಎಂದು ಸಡ್ಡು ಹೊಡೆದಂತೆ ತೋರಿಸಿಕೊಳ್ಳುತ್ತದೆ. ಆಗಾಗ್ಗೆ ಸುರಿಯುವ ಮಳೆ ಅಥವಾ ಸುರಿಯದ ಬರೀ ನೀಲಾಕಾಶ ಮುಂಬರುವ ಥಂಡಿಕಾಲದ ಗಾಢತೆಯ ಮುನ್ಸೂಚನೆಯನ್ನು ಮಾಡಿಕೊಡುತ್ತವೆ. ಈ ದೇಶ-ಊರುಗಳಲ್ಲಿ ವೃತ್ತಪತ್ರಿಕೆಗಳನ್ನು ಓದಿದರೆ ಮಾತ್ರ ಎಲ್ಲಿ ಬರಬಿದ್ದಿದೆ, ಯಾವ ಬೆಳೆ ಏನಾಗಿದೆ ಎಂದು ತಿಳಿಯೋದು. ಅದನ್ನು ಬಿಟ್ಟರೆ ನಾವು ಓಡಾಡುವ ಊರು-ದಾರಿಗಳಲ್ಲಿ ಯಾವನೊಬ್ಬನೂ ಜಮೀನುದಾರನಂತೆ ಕಾಣಿಸೋದಿಲ್ಲ, ಎಲ್ಲೂ ಯಾರೂ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ಕೇಳಿ ಬರೋದಿಲ್ಲ. ಟಿ.ವಿ., ರೆಡಿಯೋಗಳಲ್ಲಿ ಆ ರೀತಿಯ ಕಾರ್ಯಕ್ರಮಗಳು ದಿನಾಲು ಬರಬಹುದು, ಅವುಗಳನ್ನು ನೋಡಲು/ಕೇಳಲು ಯಾರಿಗೆ ತಾನೆ ವ್ಯವಧಾನವಿದೆ? ನಮ್ಮ ಪ್ರತಿಕ್ರಿಯೆ ಏನಿದ್ದರೂ ಮಾಧ್ಯಮಗಳು ಬಿಂಬಿಸುವ ಪ್ರೈಮ್ ಟೈಮ್ ಕಾರ್ಯಕ್ರಮಗಳ ಬಗ್ಗೆ ಮಾತ್ರ.

ಒಂದು ಅಭಿವೃದ್ಧಿ ಹೊಂದಿದ ದೇಶದ ಸ್ಪಂದನಗಳೇ ಬೇರೆ, ಅವುಗಳನ್ನು ನೋಡುವಾಗ ನಮಗಿರಬೇಕಾದ ದೃಷ್ಟಿಕೋನವೇ ಬೇರೆ. ನಮ್ಮೂರುಗಳಲ್ಲಿ ನಾಡಿ ನೋಡಿ ಮದ್ದು ನೀಡುವ ವೈದ್ಯರಂತೆ ಇಲ್ಲಿಯ ಪಲ್ಸ್ ನೋಡಲು ಬೇಕಾದ ಪರದೆಗಳೇ ಬೇರೆ. ಇಷ್ಟು ವರ್ಷವೇನು ಇನ್ನೆಷ್ಟು ದಿನಗಳ ಕಾಲ ಈ ದೇಶದಲ್ಲಿ ಇದ್ದರೂ ಒಂದು ಹಸುವಿನ ಮೈದಡವಿ ನೋಡಿಲ್ಲ, ಇವತ್ತಿಗೂ ಒಂದು ಕೆಜಿ ಅಕ್ಕಿ ಬೆಲೆ ಎಷ್ಟು ಎಂದು ಅಪರೂಪಕ್ಕೊಮ್ಮೆ ಕೇಳುವ ನನ್ನ ಅಮ್ಮನಿಗೆ ಕೊಡಬೇಕಾದ ಉತ್ತರ ನನ್ನ ಬಳಿ ತಯಾರಿರುವುದಿಲ್ಲ. ಬೇರೆಲ್ಲದ್ದಕ್ಕೂ ನನ್ನ ಮನಸ್ಸಿನಲ್ಲಿ ಬೇಕಾದಷ್ಟು ಕ್ಯಾಲುಕುಲೇಶನ್‌ಗಳು ನಡೆದರೂ ಎರಡು ಪೌಂಡು ಅನ್ನೋದು ಸರಿ ಸುಮಾರು ಒಂದು ಕೆಜಿ ಹತ್ತಿರ-ಹತ್ತಿರವಾದರೂ ಇಪ್ಪತ್ತು ಪೌಂಡು ಅಕ್ಕಿಗೆ ಇಂತಿಷ್ಟು ಡಾಲರ್ ಆದರೆ ಒಂದು ಕೆಜಿ ಅಕ್ಕಿಗೆ ಎಷ್ಟು ಎನ್ನೋದನ್ನು ಲೆಕ್ಕ ಹಾಕಲು ನಾನು ಒಂದಿಷ್ಟು ಸೆಕೆಂಡುಗಳನ್ನು ಹೆಚ್ಚಾಗೇ ತೆಗೆದುಕೊಳ್ಳುತ್ತೇನೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿಯೊಬ್ಬರ ಆದಾಯದ ಸರಾಸರಿ ಎಂಟರಿಂದ ಹತ್ತರಷ್ಟನ್ನು ಮೂಲ ಆಹಾರ ಪದಾರ್ಥಗಳ ಮೇಲೆ ಬಳಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಶೇಕಡಾವಾರು ಸಂಖ್ಯೆ ಬಹಳ ಹೆಚ್ಚು. ಇಲ್ಲಿ ಆಹಾರ ಉತ್ಪನ್ನಗಳು ಒಂದು ರೀತಿಯ 'ಕಮಾಡಿಟಿ', ಅಲ್ಲಿ ಅವುಗಳು ಅತ್ಯಂತ ಹೆಚ್ಚು ಅಗತ್ಯದ ವಸ್ತುಗಳು - ಅಂದರೆ ಇಲ್ಲಿ ಆಹಾರದ ಅಗತ್ಯವಿಲ್ಲವೆಂದರ್ಥವಲ್ಲ, ಇಲ್ಲಿ it is a given, ಅಲ್ಲಿ ಅದು ದಿನವೂ derive ಮಾಡಬೇಕಾದ ಒಂದು ಸಮೀಕರಣ.

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೆ ಮೂರನೇ ಕ್ವಾರ್ಟರ್ ಮುಗಿಯಿತು ಎಂದು ವಾಲ್ ಸ್ಟ್ರೀಟ್‌ನಲ್ಲಿ ಎಂದಿಗಿಂತ ಹೆಚ್ಚು ಹುರುಪು ಕಂಡುಬರುತ್ತದೆ, ಈ ಮೂರನೇ ಕ್ವಾರ್ಟರ್ ಮುಗಿಯುವ ಹೊತ್ತಿಗೆ ಬರುವ ಅಂಕೆ-ಸಂಖ್ಯೆಗಳು ಮುಂಬರುವ ಹಾಲಿಡೇ ದಿನಗಳ ರೀಟೈಲ್ ವಾಪಾರ ವಹಿವಾಟುಗಳನ್ನು ಹೆಚ್ಚೂಕಡಿಮೆ ನಿರ್ಧರಿಸಿಬಿಡಬಲ್ಲವು, ಸೆಪ್ಟೆಂಬರ್‌ವರೆಗೆ ಮೇಲುರುತ್ತಿದ್ದ ಸೂಚ್ಯಾಂಕ ಅಕ್ಟೋಬರ್‌ನಲ್ಲಿ ಸ್ವಲ್ಪ ಕೆಳಕ್ಕಿಳಿಯಬಹುದು. ಈಗಾಗಲೇ ಸ್ವಲ್ಪ ಸೊರಗಿದ ಡಾಲರ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೂ ನೆಲಕಚ್ಚಿ ಹಿಡಿಯುವಂತೆ ಮಾಡುವ ಶಕ್ತಿಗಳು ಉದಯವಾಗಬಹುದು. ನವೆಂಬರ್ ತಿಂಗಳಿನಲ್ಲಿ ಬರುವ ಸ್ಥಳೀಯ ಚುನಾವಣೆಗಳು ಸೆನೆಟ್ ಹಾಗೂ ಕಾಂಗ್ರೆಸ್ ನಲ್ಲಿ ರಿಪಬ್ಲಿಕನ್-ಡೆಮಾಕ್ರ್ಯಾಟಿಕ್ ಪಕ್ಷಗಳ ಮೇಲುಕೈಯನ್ನು ನಿರ್ಧರಿಸಿ ಬಿಡುವ ಹಿನ್ನೆಲೆಯಲ್ಲಿ ಆಡಳಿತ, ಪಾಲಿಸಿ, ಮುಂಬರುವ ಬಿಲ್‌ಗಳು ಇವುಗಳ ಮೇಲೆಲ್ಲ ತಕ್ಕ ಮಟ್ಟಿಗೆ ಪರಿಣಾಮ ಬೀರುತ್ತವೆ. ಎಲ್ಲರೂ ನಿಚ್ಚಳ ಬಹುಮತವನ್ನು ಸಾಧಿಸಬೇಕು, ತಮ್ಮ ತಮ್ಮ ಪಕ್ಷ ಸೀಟುಗಳನ್ನು ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರನ್ನು ಇನ್ನೂ ಹೆದರಿಸುವಂತೆ ಭಯೋತ್ಪಾದಕರ ವಿಷಯಗಳ ಚರ್ಚೆ, ಅಭ್ಯರ್ಥಿಗಳ ನಿಲುವುಗಳನ್ನು ಮಾತ್ರ ಬಿಂಬಿಸಲಾಗುತ್ತದೆಯೇ ವಿನಾ ಅವುಗಳ ಹಿಂದಿನ ವಿಷಯಗಳನ್ನು ಸಗಣಿ ಸಾರಿಸಿಬಿಡುವಂತೆ ತೋರಿಸಲಾಗುತ್ತದೆ. ಭಯೋತ್ಪಾದಕತೆಯನ್ನು ನಿರ್ಮೂಲನಗೊಳಿಸಲು ಅಮೇರಿಕದವರಿಗೆ ಸಪೋರ್ಟು ನೀಡಿದ್ದಾರೆ ಅನ್ನೋ ಕಾರಣಕ್ಕೆ ಮುಷಾರಫ್‌ ಅನ್ನು ತುಂಬಿದ ಸಭೆಯಲ್ಲಿ ಗೌರವಿಸಲಾಗುತ್ತದೆ, ಆದರೆ ಈ ವ್ಯಕ್ತಿಯೂ ಒಬ್ಬ ಸರ್ವಾಧಿಕಾರಿ, ಆಳುವ ಸರ್ಕಾರದಿಂದ ಅಧಿಕಾರವನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಹತೋಟಿಗೆ ತಂದುಕೊಂಡವನು ಎನ್ನುವುದನ್ನು ಇಲ್ಲಿನ ಬುದ್ಧಿವಂತರ ಸಭೆ ಜಾಣತನದಿಂದ ಮರೆಯುತ್ತದೆ. ಮುಷಾರಫ್ ಇಲ್ಲಿ ತನಗೆ ಸಿಕ್ಕ ಆತಿಥ್ಯಕ್ಕೆ ಹಿಗ್ಗಿ ಹೋಗುತ್ತಾರೆ - ಅವರ ಮೂಗಿನ ನೇರದ ಕೆಳಗೆ ಪಾಕಿಸ್ತಾನದ ಗುಪ್ತಚಾರ ಪಡೆ ಏನೆಲ್ಲವನ್ನು ಮಾಡಿದೆ ಎನ್ನುವ ವರದಿಗಳು ಒಂದರ ಮೇಲೊಂದು ಹೊರಬೀಳುತ್ತಲೇ ಇರುತ್ತವೆ - ಇವಕ್ಕೆಲ್ಲ ಯಾರೂ ಗಮನಕೊಡುವಂತೆಯೇ ಕಾಣಿಸೋದಿಲ್ಲ.

ಈ ಬುದ್ಧಿವಂತರ ನಾಡಿನಲ್ಲಿರೋ ಮೇಧಾವಿಗಳಿಗೆ ಇರಾಕ್ ಸಮಸ್ಯೆಗೊಂದು ಗತಿ ಕಾಣಿಸೋಕಾಗೋದಿಲ್ವಾ ಅಂತ ಎಷ್ಟೋ ಸಾರಿ ಅನ್ನಿಸಿದೆ. ಅದೂ ಇತ್ತಿಚೆಗಂತೂ ಅಲ್ಲಿ ಬಹಳ ಜನ ಸಾಯ್ತಾ ಇರೋದೂ, ಸ್ಥಳೀಯ ಸರ್ಕಾರ ತನ್ನ ಕೈಯಲ್ಲಿ ಸಾಧ್ಯವಾದದ್ದೆನ್ನೆಲ್ಲ ಮಾಡಿಯೂ ಪರಿಸ್ಥಿತಿ ಹೀಗಿದೆ ಎಂದರೆ ಅದಕ್ಕೆ ಯಾರೂ ಏನನ್ನೂ ಮಾಡಲಾಗುವುದಿಲ್ಲವೇ? ಅಷ್ಟು ಚಿಕ್ಕ ದೇಶವನ್ನು ಹತೋಟಿಯಲ್ಲಿಡುವುದು ಇಷ್ಟೊಂದು ಕಷ್ಟಕರವಾದ ವಿಷಯವೆಂದು ನನಗೆ ಏಕೋ ಇನ್ನೂ ಅರಿವಿಗೆ ಬರುತ್ತಿಲ್ಲ. ಸಾಕಷ್ಟು ಸಂಕೀರ್ಣವಾದ ಸಮಸ್ಯೆ ಆದರೂ ಒಂದಲ್ಲ ಒಂದು ರೀತಿಯಿಂದ ಬಗೆ ಹರಿಸಬಹುದು ಎಂದು ನನ್ನ ಮನಸ್ಸು ಹೇಳುತ್ತೆ, ಆದರೆ ನನಗೆ ಪೂರ್ಣ ವಿಷಯದ ಅರಿವು ಇರದೆಯೂ ಇರಬಹುದು ಎನ್ನುವ ಸಮಜಾಯಿಷಿಯೂ ಹುಟ್ಟುತ್ತೆ.

ಇಷ್ಟು ಬರೆಯುವ ಹೊತ್ತಿನಲ್ಲಿ ಮುಂಬರುವ ಛಳಿಗಾಲಕ್ಕೆ ಮೈಮನಸ್ಸುಗಳು ಸಿದ್ಧವಾದಂತೆನಿಸುತ್ತೆ, ಎಲ್ಲರಂತೆ ನಾನೂ ಕೂಡಾ ಫಾಲ್ ಕೋಟ್ ತೆಗೆದು ನಾಳೆ ಆಫೀಸಿಗೆ ಹೋಗುವಾಗ ಸಿಗುವಂತೆ ತೆಗೆದಿರಿಸುತ್ತೇನೆ, ಛಳಿ ಬೀಳೋದು ನಿಸರ್ಗ ನಿಯಮ ಅದಕ್ಕೆ ತಯಾರಾರಿರಬೇಕಾದುದು ನನ್ನ ಕರ್ಮ ಎಂದುಕೊಂಡು ಸುಮ್ಮನಾಗುತ್ತೇನೆ.