Monday, August 28, 2006

ಹಾರಿಸಿ ತಂದ ಸಂಗೀತ

ಜುಲೈ ೨೪ ರ ಸೋಮವಾರ ಮುಂಜಾನೆ ಏಳೂ ಐವತ್ತರ ಹೊತ್ತಿಗೆ ಎನ್‌ಪಿಆರ್ ನ ಮಾರ್ನಿಂಗ್ ಎಡಿಷನ್‌ನಲ್ಲಿ ಒಂದು ಇಪ್ಪತ್ತು ಸೆಕೆಂಡ್ ಕೇಳಿಸಿದ ಟ್ಯೂನ್ "ಬಂಧನ" ಚಿತ್ರದ 'ಬಣ್ಣಾ, ಬಣ್ಣಾ' ಹಾಡಿನ 'ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು ನೂರಾಸೆಯ ಚಿಲುಮೆಯ ಬಣ್ಣ' ಸಾಲಿನ ಟ್ಯೂನ್ ನ ಹಾಗಿತ್ತು. ನಂತರ ಮನೆಗೆ ಬಂದು ಎಷ್ಟೇ ಹುಡುಕಿದರೂ ಮಾರ್ನಿಂಗ್ ಎಡಿಷನ್ ಟ್ಯೂನ್ ನ ಲಿಸ್ಟ್ ನಲ್ಲಿ ಅದು ಸಿಗಲೇ ಇಲ್ಲ, ಅದು ವಾಷಿಂಗ್ಟನ್ ಸ್ಟೇಷನ್ ನಿಂದ ಬಂದಿರದೇ ಸ್ಥಳೀಯ ನ್ಯೂ ಯಾರ್ಕ್ ಪಬ್ಲಿಕ್ ರೇಡಿಯೋದವರು ಮಧ್ಯೆ ಬ್ರೇಕ್ ನಲ್ಲಿ ಹಾಕಿದ್ದು ಎಂದು ಗೊತ್ತಾಯಿತು. ಎನ್.ಪಿ.ಅರ್. ಹಾಗೂ ಮೆಂಬರ್ ಸ್ಟೇಷನ್ ವೆಬ್ ಸೈಟ್‌ಗಳನ್ನು ಎಷ್ಟೇ ಹುಡುಕಿದರೂ ಆ ಟ್ಯೂನ್ ನ ಹಿನ್ನೆಲೆ ಸಿಗಲೇ ಇಲ್ಲ.

ಆದರೂ ನ್ಯಾಷನಲ್ ಪಬ್ಲಿಕ್ ರೇಡಿಯೋದ ಅಥೆಂಟಿಸಿಟಿಯನ್ನು ಬಲ್ಲ ನನಗೆ 'ಬಣ್ಣಾ, ಬಣ್ಣಾ' ಹಾಡನ್ನು ಬರೆದ ಉದಯಶಂಕರ್ ಅವರು ಯಾವುದೋ ಟ್ಯೂನ್ ನಿಂದ ಪ್ರಭಾವಿತರಾಗಿ ಈ ಮೇಲಿನ ಸಾಲುಗಳನ್ನು ಬರೆದಿರಬಹುದು ಎನ್ನಿಸಿತು. ನಮ್ಮ ಭಾರತೀಯ ಚಲನಚಿತ್ರ ಸಂಗೀತಕಾರರು ಹಿಂದೆಲ್ಲಾ ಹಾಡುಹಗಲೇ ನೇರವಾಗಿ ಎಷ್ಟೋ ಟ್ಯೂನ್‌ಗಳನ್ನು ಎಲ್ಲೆಲ್ಲಿಂದಲೋ ಹಾರಿಸಿ ಭಾರತೀಯಮಯ ಮಾಡಿದ್ದನ್ನು ಬೇಕಾದಷ್ಟು ಸಾರಿ ಕೇಳಿದ್ದೇನೆ, ಓದಿದ್ದೇನೆ, ಹಾಗೂ ಅನುಭವಿಸಿದ್ದೇನೆ. ಈ ರೀತಿ ಹಾಡು, ಟ್ಯೂನ್‌ಗಳನ್ನು ಕದಿಯುವಲ್ಲಿ ಎಲ್ಲರೂ ಸೇರಿಕೊಂಡಿದ್ದಾರೆ, ಕನ್ನಡದವರೂ ಇದಕ್ಕೆ ಹೊರತೇನೂ ಅಲ್ಲ.

ಎ. ಆರ್. ರೆಹಮಾನ್, ರಾಜನ್-ನಾಗೇಂದ್ರ, 'ದೇವಾ', ಇಳಯರಾಜಾ, ಉದಯಶಂಕರ್, ಹಂಸಲೇಖಾ ಮುಂತಾದ ಎಲ್ಲರೂ ಒಂದಲ್ಲ ಒಂದು ರೀತಿಯಿಂದ 'ಹೊರಗಿನ' ಸಂಗೀತದಿಂದ ಪ್ರೇರಿತರಾದವರೇ, ಪ್ರೇರಣೆ ದೊರೆಯುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಇನ್ನೊಬ್ಬರ ಸಂಗೀತವನ್ನು ಮಕ್ಕೀ ಕಾ ಮಕ್ಕೀ ನಕಲು ಮಾಡಿಕೊಂಡು ಅವರದ್ದೇ ಸ್ವಂತದ್ದು ಎಂದು ಪ್ರಚಾರಗಿಟ್ಟಿಸಿಕೊಂಡು ಅದರಿಂದ ಕಾಸು ಮಾಡಿಕೊಳ್ಳುವುದು ತಪ್ಪು ಎನ್ನೋದು ನನ್ನ ಅನಿಸಿಕೆ.

ಯಾವ ಒಬ್ಬ ವ್ಯಕ್ತಿ ಜನಪ್ರಿಯತೆಗೆ ಕಟ್ಟುಬಿದ್ದು, ಸುಲಭವಾದ ದಾರಿಯನ್ನು ಹಿಡಿದು, ತನ್ನ ಸಂಗೀತವನ್ನು ಕೇಳುವ ಮುಗ್ಧ ಜನರಿಗೆ ತಾನು ನಕಲು ಮಾಡುತ್ತಿರುವುದು ಅರಿವಿಗೆ ಬಂದಿಲ್ಲ ಎಂದುಕೊಂಡು ಸೃಜನಶೀಲತೆಯ ಸೋಗನ್ನು ಹಾಕಿಕೊಳ್ಳುತ್ತಾನೋ ಅಂತಹವರನ್ನು ಏಕೆ ಗೌರವಿಸಬೇಕು ಎನಿಸೋದಿಲ್ಲವೇ?

'ಎಲ್ಲರೂ ಮಾಡ್ತಾರೆ', ಅನ್ನೋದು ತಾನು ಮಾಡುವ, ಮಾಡುತ್ತಿರುವ ತಪ್ಪಿಗೆ ಉತ್ತರವಾಗಲಾರದು. ಸಂಗೀತ ಸಂಯೋಜನೆಯೆಂಬ ಕಾಯಕ ಬಹಳ ದೊಡ್ಡದು. ಎಷ್ಟೋ ದೂರದಲ್ಲಿ ಕುಳಿತು ನಮ್ಮ ಸಂಗೀತವೆಂದು ಯಾವುದೋ ಒಂದು ಹಾಡನ್ನು ಕೇಳುತ್ತಿರುವಾಗ ಮಧ್ಯೆ ಈ ಟ್ಯೂನನ್ನು ಎಲ್ಲೋ ಕೇಳಿದ ಹಾಗಿದೆಯೆಲ್ಲಾ ಎಂದು ಎನಿಸಿಬಿಟ್ಟರೆ ಇನ್ನು ಆ ಸಿಡಿ/ಕ್ಯಾಸೆಟ್ಟನ್ನಿಟ್ಟುಕೊಂಡಾದರೂ ಏನು ಪ್ರಯೋಜನ? ನಾನು ಕನ್ನಡ ಹಾಡುಗಳನ್ನು ಕೇಳಲು ಬಯಸುವುದಾದರೆ ಅದರಲ್ಲಿರುವ ಭಾಷೆ, ಭಾವನೆಗಳಷ್ಟೇ ಅಲ್ಲ, ಅದರಲ್ಲಡಗಿರುವ ಸಂಗೀತವೂ ನಮ್ಮದೇ ಎನ್ನುವ ಪ್ರೀತಿಯಿಂದ - ಇನ್ಯಾರಿಗೂ ಗೊತ್ತಾಗಲಾರದು ಎನ್ನುವ ಹುಂಬತನದಿಂದಲೋ, ಅಥವಾ ಗೊತ್ತಾದರೂ ಗೊತ್ತಾಗಲಿ ಎನ್ನುವ ಭಂಡತನದಿಂದಲೋ ಹೊರಬರುವ ಸಿಡಿ/ಕ್ಯಾಸೆಟ್ಟುಗಳನ್ನು, ಅಂತಹ ಚೀಪ್ ಕೃತ್ಯಕ್ಕೆ ಇಳಿದವರನ್ನು ಧಿಕ್ಕರಿಸುವುದೇ ಒಬ್ಬ ಕೇಳುಗ ಕೊಡಬಹುದಾದ ನ್ಯಾಯ.

ನಾನು ದಿನವೂ ಪಾಶ್ಚಾತ್ಯ ಕ್ಲಾಸಿಕಲ್ ಮ್ಯೂಸಿಕ್ಕನ್ನು WQXR (96.3) ರೆಡಿಯೋ ಸ್ಟೇಷನ್‌ನಲ್ಲಿ ಮುಂಜಾನೆ ಕೇಳಿಯೇ ಏಳೋದು. ಇವತ್ತಿಗೂ ೨೫೦ ವರ್ಷಗಳ ಹಿಂದಿನ ಸಂಗೀತ ಅಷ್ಟೇ ತಾಜಾವಾಗಿ ಹೊರಬಂದಂತೆ ಕೇಳಿಸುತ್ತದೆ, ಅಲ್ಲದೇ ನಾನು ಕೇಳುವ ಪ್ರತಿಯೊಂದರಲ್ಲೂ ಒಂದು ಸ್ವಂತಿಕೆ ಇದೆ. ಮೋಝಾರ್ಟ್, ಬಾಕ್ ಇರಲಿ, ಉಳಿದ ಸಣ್ಣ-ಪುಟ್ಟ ಕಲಾವಿದರೂ ತಮ್ಮ ಶಕ್ತ್ಯಾನುಸಾರ ಕೊಡುಗೆ ನೀಡಿದ್ದಾರೆ. ಆದರೆ ಸುಮಾರು ೫೦೦೦ ವರ್ಷಕ್ಕೂ ಹೆಚ್ಚು ಸಂಸ್ಕೃತಿ ಇರುವ ನಮಗೆ, ಸುಮಾರು ೨೦೦೦ ವರ್ಷಕ್ಕೂ ಹೆಚ್ಚು ಭಾಷಾ ಹಿನ್ನೆಲೆಯಿರುವ ನಮಗೆ, ಇಂತಹ ಭಾಷೆಗಳಲ್ಲಿ ಸಿನಿಮಾ ಸಂಗೀತವನ್ನು ಕೊಡುವ ಸಂಗೀತ ನಿರ್ದೇಶಕರುಗಳಿಗೆ ತಮ್ಮದೇ ಆದ ಸ್ವಂತಿಕೆ ಇಲ್ಲವೆಂದರೆ? ಹಾಗಾದರೆ ನಮ್ಮ ಸೃಜನಶೀಲತೆಯೆಲ್ಲಾ ಎಲ್ಲಿ ಸೋರಿ ಹೋಯಿತು? ಸಿನಿಮಾ ಸಂಗೀತದಲ್ಲಿಲ್ಲದಿದ್ದರೆ ಇನ್ನೆಲ್ಲೆಲ್ಲಿ ಮಹಾಸಾಧನೆಗಳಾಗಿವೆ ಎಂದು ನೋಡುತ್ತಾ ಹೋದಾಗ ರಾಷ್ಟ್ರೀಯ ಮಟ್ಟದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಹಲವಾರು ತಾರೆಗಳು ಮನಸ್ಸಿಗೆ ಬಂದು ಒಂದು ರೀತಿ ಸಮಾಧಾನವಾಯಿತು. ಆದರೆ, ಹೆಚ್ಚು ಜನರನ್ನು ತಲುಪುವ ಮಾಧ್ಯಮವಾಗಿ ಸಿನಿಮಾ ಸಂಗೀತ ಸೊರಗಿರೋ ನೋವೂ ಹೆಚ್ಚಾಯಿತು. ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸಲು ಬೇಕಾದ ತಕ್ಕ ಮನಸ್ಥಿತಿ ಎಲ್ಲರಿಗೂ ಇರುವಂತದ್ದಲ್ಲ, ಉತ್ತಮವಾದ ಸಂಗೀತವನ್ನು ಹೊರಡಿಸಲು ಎಷ್ಟು ಸಾಧನೆ ಬೇಕೋ ಅದನ್ನು ಆಸ್ವಾದಿಸಲು ಸಹ ಅಷ್ಟೇ ಸಂಸ್ಕಾರಬೇಕಾಗುತ್ತದೆ - ಇದನ್ನೆಲ್ಲ ಎಲ್ಲಿಂದ ತರೋದು ಎಂದು ಯೋಚಿಸಿದಷ್ಟೂ ನೂಲಿನ ಗಂಟು ಇನ್ನೂ ಗೋಜಲವಾಗತೊಡಗಿತು.

ನಮ್ಮಲ್ಲಿ ಕಾಪಿರೈಟ್ ಕಾನೂನು ಹೆಚ್ಚು ಹೆಚ್ಚು ಬೆಳೆದು ಹೀಗೆ ಹಾಡಹಗಲು ಕದ್ದು ತರುವ ಎಲ್ಲರನ್ನೂ ವಿಚಾರಿಸಿಕೊಳ್ಳುವಂತಾಗಬೇಕು, ಅಂತಹವರ ಸಂಗೀತವನ್ನು ಯಾರೂ ಕೊಳ್ಳದಿರುವಂತಾಗಬೇಕು, ಸಂಖ್ಯೆಗೆ ಹೆಚ್ಚು ಪ್ರಾಶಸ್ತ್ಯ ಕೊಡದೇ ಉತ್ಕೃಷ್ಟತೆಗೆ ಹೆಚ್ಚು ಮಹತ್ವಸಿಗುವಂತಾಗಬೇಕು. ನಾವು ನಮ್ಮ ಸಿನಿಮಾಗಳಲ್ಲಿ ಮಸಾಲೆ ಎಂದುಕೊಂಡು ಮೆಲ್ಲುವುದನ್ನು ಅದು ಮಸಾಲೆಯಲ್ಲ ಗ್ರೀಸು ಎಂದು ಎಲ್ಲರಿಗೂ ಅರಿವಾದಂತಾಗಬೇಕು - ಎನ್ನುವುದೆಲ್ಲ ನನ್ನ ಮಹತ್ವಾಕಾಂಕ್ಷೆಗಳೇನಲ್ಲ, ಹೇಳಿಕೊಳ್ಳುವುದಕ್ಕೆ ಒರಿಜಿನಲ್ ಆಗಿ ಅಲ್ಪ ಸ್ವಲ್ಪವಾದರೂ ಇರಲಿ ಎನ್ನುವ ಸಣ್ಣ ಆಸೆಯಷ್ಟೇ.

ಒಬ್ಬ ಸಂಗೀತಗಾರ ಅಥವಾ ಕಲಾವಿದ ಸೃಷ್ಟಿಸಿದ್ದೆಲ್ಲ ಮಹಾನ್ ಆಗಲಾರದು ಎನ್ನುವ ನಿಜಸ್ಥಿತಿಯ ಅರಿವು ನನಗಿದೆ. ಒಂದು ಕೃತಿಯನ್ನು ಮತ್ತೊಬ್ಬ ಕೃತಿಕಾರ ಒರಿಜಿನಲ್ ಕೃತಿಗೆ ಯಾವ ಕ್ರೆಡಿಟ್ಟನ್ನು ಕೊಡದೇ ಇದ್ದ ಹಾಗೇ ಬಳಸಿ, ಬೆಳೆಸಿಕೊಳ್ಳುವುದು ಆರೋಗ್ಯಕರ ಬೆಳವಣಿಗೆಯಂತೂ ಅಲ್ಲ. ಕ್ರಿಯಾಶೀಲ ವ್ಯಕ್ತಿಗಳ ಮನೋಭಾವ ಇದಕ್ಕೆ ಸ್ಪಂದಿಸದೇ ಹೋದರೆ ಕೊನೆಗೆ ಕಾನೂನಾದರೂ ಒರಿಜಿನಲ್ ಕೃತಿಯ ಕರ್ತೃವಿನ ಹಕ್ಕುಗಳಿಗೆ ಆಸರೆಯಾಗಲಿ, ಹೀಗೆ ಹುಟ್ಟುವ ನಿಯಂತ್ರಿತ ವಾತಾವರಣದಲ್ಲಿ ತಾಜಾ ಕೃತಿಗಳು ಮಾತ್ರ ಹೊರಕ್ಕೆ ಬರಲಿ.

13 comments:

kalsakri said...

I rhink the tune 'baNNa , baNNa ' is picked up from whistling in 'Good Bad and the Ugly' Pls checkup

Anonymous said...

ಹೌದು. ನೀವು ಕೇಳಿದ ಬಣ್ಣ ಬಣ್ಣ ಟ್ಯೂನ್ "good bad ugly" ಅಥವಾ client east wood ನ ಅನೇಕ ಸಿನಿಮಾಗಳಲ್ಲಿ ಬಳಕೆಯಾಗಿದೆ.

'ಬಣ್ಣಾ, ಬಣ್ಣಾ' ಹಾಡನ್ನು ಬರೆದ ಉದಯಶಂಕರ್ ಅವರು ಯಾವುದೋ ಟ್ಯೂನ್ ನಿಂದ ಪ್ರಭಾವಿತರಾಗಿ ಈ ಮೇಲಿನ ಸಾಲುಗಳನ್ನು ಬರೆದಿರಬಹುದು ಎನ್ನಿಸಿತು." -

ಇಲ್ಲ. ಇಲ್ಲಿ ಉದಯಶಂಕರ್ ಕೈವಾಡವಿರಲಾರದು. ಎಂ.ರಂಗರಾವ್ ಕೊಟ್ಟ ರಾಗಕ್ಕೆ ಅವರು ಹಾಡು ಬರೆದುಕೊಟ್ಟಿದ್ದಾರೆ :)

ಒಂದು ದಿನ jay leno show ನಡುವೆ "ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ" ರಾಗ ಕೇಳಿ ನನಗೂ ತುಂಬಾ ಆಶ್ಚರ್ಯವಾಗಿತ್ತು.

ಸರಸ್ವತಿಯ ಸಪ್ತಸ್ವರಗಳು ಮಾತ್ರ ಒರಿಜಿನಲ್, ಉಳಿದಿದ್ದೆಲ್ಲ ಎಲ್ಲೋ ಒಂದು ಕಡೆ ಒಂದನ್ನೊಂದು ಹೋಲುತ್ತವೆ ಎಂದು ಉದಾರ ಮನೋಭಾವ ತಳೆದು ಬಿಡಿ :)

Anonymous said...

ಬಣ್ಣ ಹಾಡಿನ ಪಲ್ಲವಿ ಕ್ಲಿಂಟ್ ಈಸ್ಟ್‌ವುಡ್‌ನ "for a few dollars more" ಚಿತ್ರದ ಹಿನ್ನಲೆ ಸಂಗೀತದಿಂದ ಸ್ಫೂರ್ತಿ ಪಡೆದದ್ದಾಗಿದೆ. ಆದರೆ ಈ ಹಾಡಿನ ಚರಣ ಸ್ವಂತದ್ದಾಗಿದೆ. ಪಾಶ್ಚಾತ್ಯ ಸಂಗೀತವನ್ನು ಕನ್ನಡದ್ದೇ ಅಂತನಿಸಬೇಕಾದರೆ ಅದರಲ್ಲಿ ಸಂಗೀತ ನಿರ್ದೇಶಕರ ಜಾಣ್ಮೆ ಇದೆ. ಯಾವುದೋ ಒಂದು ಹಾಡು ಪಾಶ್ಚಾತ್ಯ ಸಂಗೀತದಿಂದ ಪ್ರೇರಣೆ ಪಡೆದಿದ್ದರೆ ನೂರಾರು ಒರಿಜನಲ್ ಸಂಗೀತ ನೀಡಿದ ಎಂ. ರಂಗರಾವ್ ಅಂತಹವರನ್ನು ಟೀಕಿಸುವುದು ಸರಿಯಲ್ಲ.

ನಮ್ಮ ಕ್ಲಾಸಿಕಲ್ ಸಂಗೀತಗಾರರು ಸಹಾ ಬಿತೊವನ್, ಮೊಜಾರ್ಟ್ ನಂತೆ ನೂರಾರು ರಾಗಗಳನ್ನು ಸೃಷ್ಟಿಸಿದ್ದಾರೆ. ಅದ್ದರಿಂದ ನಾಚಿಕೆ ಪಟ್ಟುಕೊಳ್ಳುವುದು ಬೇಡ. ಅದೂ ಅಲ್ಲದೆ, ನೀವು ಪಾಶ್ಚಾತ್ಯ ಕ್ಲಾಸಿಕಲ್ ಸಂಗೀತವನ್ನು ನಮ್ಮ ಸಿನಿಮಾ ಸಂಗೀತಕ್ಕೆ ಹೋಲಿಸಹೊರಟಿದ್ದೀರಿ. ಇದು ನಮ್ಮ ತ್ಯಾಗರಾಜರ ಕೀರ್ತನೆಗಳನ್ನು ಪಾಪ್ ಮೂಸಿಕ್ ಜೊತೆ ಹೋಲಿಸಿದಂತೆ ಹಾಸ್ಯಾಸ್ಪದ. ನಮ್ಮ ಕನ್ನಡದ ಅನೇಕ ಸಿನಿಮಾ ಸಂಗೀತ ನಿರ್ದೇಶಕರೂ ಯಾವ ಪಾಶ್ಚಾತ್ಯ ಸಂಗೀತಜ್ಞನಿಗೆ ಕಡಿಮೆ ಇಲ್ಲದಂತೆ ಅನೇಕ ಒರಿಜಿನಲ್ ಟ್ಯೂನ್ ಇತ್ತಿದ್ದಾರೆ. ನನಗೇನೋ ನಮ್ಮ ಭಾರತೀಯ ಸಂಗೀತದಷ್ಟು ರಾಗಗಳು, ವೈವಿಧ್ಯ ಪಾಶ್ಚಾತ್ಯ ಹಾಡುಗಳಲ್ಲಿಲ್ಲ ಅಂತ ಅನಿಸುತ್ತೆ.

Satish said...

ಕಲ್‌ಸಕ್ರಿ ಅವರೇ, 'ಬಣ್ಣ' ಟ್ಯೂನ್ ನ ಅಸಲಿ ಬಣ್ಣವನ್ನು ಕಂಡು ಹಿಡಿದು ಮೊದಲು ಇಲ್ಲಿ ಅನಿಸಿಕೆ ಬರೆದದ್ಕಕ್ಕೆ ಧನ್ಯವಾದಗಳು!

sritri ಅವರೇ, ಉದಾರ ಮನೋಭಾವನೆ ತಾಳದೇ ಬೇರೆ ವಿಧಿ ಇಲ್ಲ, 'ಕಾಪಿ ಕ್ಯಾಟ್'ಗಳ ಬಗ್ಗೆ ಉಳಿದೆಡೆ ಓದುತ್ತಾ ಹೋದ ಹಾಗೆ ಎಷ್ಟೋ ಜನ ಹಿಂದೀ, ದಕ್ಷಿಣ ಭಾರತದ ಸಂಗೀತ ನಿರ್ದೇಶಕರ ಬಣ್ಣ ಜಾಲಾಡುವ ಲೇಖನಗಳು ಅಂತರ್ಜಾಲದಲ್ಲಿ ಸಿಕ್ಕವು. ಇವರು ಕದ್ದು ತರುವುದು ಉಳಿದವರಿಗೆ ಗೊತ್ತಾಗದು ಎಂಬ ಹುಂಬ ನಂಬಿಕೆಯೋ; ಕದ್ದು ತಂದರೆ, ಸಿಕ್ಕಿ ಬಿದ್ದರೆ ಏನೂ ಆಗದು ಎಂಬ ಭಂಡತನವೋ ಅಥವಾ ಇವರಲ್ಲಿ ಪ್ರತಿಭೆ ಇಲ್ಲದಿರುವುದೋ ಯಾವುದು ನಿಜವಾದ ಕಾರಣ ಎಂದು ಹುಡುಕಿ ಸುಸ್ತಾಗಿದ್ದೇನೆ!

ದೀಪಾ ಅವರೇ, ರಂಗಾರಾವ್ ಅವರನ್ನು ಟೀಕಿಸುವುದು ನನ್ನ ಉದ್ದೇಶವಲ್ಲ, 'ಬಣ್ಣ' ಹಾಡು ಕೇವಲ ಒಂದು ಉದಾಹರಣೆಯಷ್ಟೇ. ನೀವು ಹೇಳಿದಂತೆ 'ಪಾಶ್ಚಾತ್ಯ ಸಂಗೀತವನ್ನು ಕನ್ನಡದ್ದೇ ಅಂತನಿಸಬೇಕಾದರೆ ಅದರಲ್ಲಿ ಸಂಗೀತ ನಿರ್ದೇಶಕರ ಜಾಣ್ಮೆ ಇದೆ.' ಎನ್ನುವುದನ್ನು ನನಗೆ ಒಪ್ಪಲು ಕಷ್ಟವಾಗುತ್ತಿದೆ, ಅದನ್ನು 'ಜಾಣ್ಮೆ' ಎಂದು ಏಕೆ ಕರೆಯಬೇಕು?

ಭಾರತೀಯ ಶಾಸ್ತ್ರೀಯ ಸಂಗೀತದ ಮೇಲಾಗಲೀ, ನಮ್ಮ ರಾಗಗಳ ಪರಂಪರೆಯ ಮೇಲಾಗಲೀ ನನಗೆ ಕಿಂಚಿತ್ ಅನುಮಾನವೂ ಇಲ್ಲ. ನಾನು ಪಾಶ್ಚಾತ್ಯ ಸಂಗೀತದ ವಿಷಯವನ್ನು ಎರಡು ಕಾರಣಗಳಿಂದ ಬರೆದಿದ್ದೇನೆ - ಒಂದು, ಅದನ್ನು ನಿತ್ಯ ಕೇಳುತ್ತಿರುವುದರಿಂದ ಅದರ ವಿಸ್ತಾರದ ಬಗ್ಗೆ, ಒರಿಜಿನಾಲಿಟಿಯ ಬಗ್ಗೆ ಇರೋ ಗೌರವ, ಎರಡನೆಯದಾಗಿ - ಅವುಗಳನ್ನು ನಮ್ಮ ಸಂಗೀತದಲ್ಲಿ ಅಳವಡಿಸಿಕೊಂಡಾಗ ಅದರ ಒರಿಜಿನಲ್ ಕರ್ತೃವಿಗೆ ನಮ್ಮವರು ಕೊಡದ ಮಾನ್ಯತೆ.

ನೀವು ಹೇಳಿದಂತೆ ಭಾರತೀಯ ಸಂಗೀತ ಪರಂಪರೆ ಅಗಾಧವಾದದ್ದು, ನಮ್ಮ ಸಂಗೀತ ನಿರ್ದೇಶಕರು ಸಿನಿಮಾ ಸಂಗೀತದ ಇತಿ-ಮಿತಿಯಲ್ಲಿ ಅನರ್ಘ್ಯ ರತ್ನಗಳನ್ನು ಸೃಷ್ಟಿಸಿದ್ದಾರೆ ಎನ್ನೋದನ್ನು ನಾನು ಒಪ್ಪುತ್ತೇನಾದರೂ, 'ದೊಡ್ಡವರೂ' ಕದ್ದು ತರುವ 'ಸಣ್ಣತನ'ವನ್ನು ತೋರಿಸುವ ಉದಾಹರಣೆಗಳನ್ನು ನೋಡಿದಾಗ ಮನಸ್ಸು ಖಿನ್ನವಾಗುತ್ತದೆ.

Anonymous said...

ಸತೀಶ್,

ಎಲ್ಲೋ ಒಂದು ಕಡೆ ಓದಿದ ನೆನಪು. ಪ್ರಪಂಚದ ಎಲ್ಲಾ ಸಾಹಿತಿಗಳನ್ನು ಒಟ್ಟಿಗೆ ನಿಲ್ಲಿಸಿದರೆ ಒಬ್ಬರ ಕೈಯಿ ಇನ್ನೊಬ್ಬರ ಜೇಬಿನಲ್ಲಿ ಇರುತ್ತೆ ಅಂತ. ಅದರ ಅರ್ಥ ಎಲ್ಲರೂ ಕೃತಿಚೌರ್ಯ ಮಾಡಿರುತ್ತಾರೆ ಅಂತ ಅಲ್ಲ. ಪ್ರತಿಯೊಂದು ಸಾಹಿತ್ಯ ಕೃತಿಯಲ್ಲಿ ಇನ್ನೊಂದರಿಂದ ಸ್ಪೂರ್ತಿ ಪಡೆದ ಅಂಶ ಇರುತ್ತೆ ಅಂತ. ಇದು ಸಂಗೀತಕ್ಕೂ ಅನ್ವಯವಾಗುತ್ತೆ. "ನಿರ್ದೇಶಕರ ಜಾಣ್ಮೆ" ಅಂತ ಏಕೆ ಬರೆದೆನೆಂದರೆ ಒಂದು ಆಂಗ್ಲ ಕೃತಿಯನ್ನು ಕನ್ನಡದ್ದೇ ಅನ್ನುವಷ್ಟರ ಮಟ್ಟಿಗೆ ಅನುವಾದ ಮಾಡುವ ಸೃಜನಶೀಲತೆ ಈ ಸಂಗೀತದಲ್ಲೂ ಇದೆ.

ಅಷ್ಟಕ್ಕೂ ರಂಗರಾವ್ ಅವರು ಈ ಸಂಗೀತವನ್ನು ಅಳವಡಿಸಿದಾಗ ಅವರೂ ಯಾರಿಗೂ ಗೊತ್ತಾಗದಂತೆ ಕದ್ದುಮುಚ್ಚಿ ತಂದರು ಎಂದು ಬರೆಯುವುದು ಎಷ್ಟು ಸರಿ? ಆ ಸಮಯದಲ್ಲಿ ಆ ಚಿತ್ರತಂಡದವರಿಗೆ, ಬೇರೆ ಸಂಗೀತ ನಿರ್ದೇಶಕರಿಗೆ ಸಹಜವಾಗಿ ಈ ಸಂಗೀತದ ಮೂಲ ತಿಳಿದೇ ಇರುತ್ತೆ. ಒಂದು ಚಿತ್ರದಲ್ಲಿ ಬರುವ ಸಂಭಾಷಣೆ, ಸನ್ನಿವೇಶ, ಪಾತ್ರಗಳು, ಸಂಗೀತದ ರಾಗಗಳು ಹಿಂದೆ ಹಲವಾರು ಚಿತ್ರಗಳಲ್ಲಿ ಬಂದುಹೋಗಿರುತ್ತೆ. ಸಂಗೀತಕ್ಕೆ ಮಾತ್ರ ಕಾಪಿರೈಟ್ ಏಕೆ ಅನ್ವಯ ಆಗಬೇಕು? ಸಂಭಾಷಣೆ, ಸನ್ನಿವೇಶಗಳು ಏಕೆ ಆಗಬಾರದು? ಕಾಳಿದಾಸನ 'ಮೊದಲ ನೋಟದಲ್ಲೇ ಪ್ರೇಮ' ಎಂಬ ಅಂಶವನ್ನು ಬಳಸಿಕೊಂಡ ಶೇಕ್ಸ್‌ಪಿಯರನ ರೋಮಿಯೋ-ಜೂಲಿಯಟ್ ಅನ್ನು ಕಾಪಿಕ್ಯಾಟ್ ಅಂತ ಹೇಳಬಹುದೆ? ಎಲ್ಲಾ ಮಾಹಿತಿಯ ಮೂಲವನ್ನು ಸಿನಿಮಾದಲ್ಲಿ ಕೃತಜ್ಞತೆಗಳು ಎಂಬ ಶೀರ್ಷಿಕೆಯಡಿ ಹಾಕ ಹೊರಟರೆ ಅದೇ ಒಂದು ದೊಡ್ಡ ಸಿನಿಮಾ ಆಗುತ್ತದೆ. ಮೂಲವಸ್ತುವಿಗೆ ಸಣ್ಣಪುಟ್ಟ ಬದಲಾವಣೆ ಮಾಡಿ ತನ್ನದೇ ಎಂದು ಹೇಳಿಕೊಳ್ಳುವುದು ಖಂಡಿತಾ ತಪ್ಪು. ಆದರೆ ಮೂಲದ ಸಣ್ಣಪುಟ್ಟ ಅಂಶಗಳನ್ನು ಬಳಸಿಕೊಂಡು ಹೊಸತನ್ನು ರಚಿಸುವುದು ತಪ್ಪಲ್ಲ ಎಂದು ನನ್ನ ಅಭಿಪ್ರಾಯ. ಅದೇ ಎವಲ್ಯೂಶನ್ ಅಲ್ಲವೆ? sritri ಅವರು ಹೇಳಿದಂತೆ ಒಂದು ಮಾರ್ಜಿನ್ ಒಳಗೆ ಉದಾರ ಮನೋಭಾವ ತಳೆಯಬೇಕು.

ಅಕ್ಕಿಯೊಳಗನ್ನವನು ಮೊದಲಾರು ಕಂಡವನು?
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ
ದಕ್ಕುವುದೆ ಜಸ ನಿನಗೆ ಮಂಕುತಿಮ್ಮ?

ಇಳೆಯಿಂದ ಮೊಳಕೆವೊಗೆವಂದು ತಮಟೆಗಳಿಲ್ಲ
ಫಲಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

Anonymous said...

ದೀಪಾರವರು ತಮ್ಮ ಪ್ರತಿಕ್ರಿಯೆಯಲ್ಲಿನ ಪದ್ಯಕ್ಕೆ ಡಿವಿಜಿ ಯವರ ಹೆಸರನ್ನು ಉಲ್ಲೇಖಿಸದೆ ಕಾಪಿರೈಟ್ ಉಲ್ಲಂಘಿಸಿದ್ದಾರೆ :)

Satish said...

ದೀಪಾ ಅವರೇ,

ನಿರ್ದೇಶಕರ ಜಾಣ್ಮೆಯನ್ನು ಒಪ್ಪಬಹುದು, ಆದರೆ ಈ 'ಅಳವಡಿಕೆ' ಚಿತ್ರತಂಡದ ಇತರರಿಗೆ ಗೊತ್ತಿರುತ್ತದೆಯೋ ಇಲ್ಲವೋ ನನಗೆ ತಿಳಿದಿಲ್ಲ.

ಈ 'ಅಳವಡಿಕೆ'ಗಳನ್ನು ಬಳಸಿಕೊಂಡಾಗ ಮೂಲ ಕರ್ತೃವಿನ ಉಲ್ಲೇಖವನ್ನು ಏಕೆ ಮಾಡೋದಿಲ್ಲ? 'ಅಳವಡಿಕೆ'ಗೆ ಮೂಲ ಕರ್ತೃವಿನ ಅಪ್ಪಣೆ ಬೇಡವೇ? ಅಕಸ್ಮಾತ್ ಈ ಹೊಸ ಸಂಗೀತ 'ಹಿಟ್' ಆಯಿತೆಂದರೆ ಮೂಲ ಕರ್ತೃವಿನೊಂದಿಗೆ ಯಾವ ರೀತಿಯಲ್ಲಿ ಸಂಭಾವನೆ ಹಂಚಲ್ಪಡುತ್ತದೆ? ಹೀಗೆ ಹಲವಾರು ಪ್ರಶ್ನೆಗಳು ಏಳುತ್ತವೆ.

ಮೂಲವಸ್ತುವಿಗೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲಿ, ಆದರೆ ಇದ್ದದ್ದನ್ನು ಇದ್ದಹಾಗೇ ಕಾಪಿ ಮಾಡಿ 'ತನ್ನದು' ಎಂದು ಹೇಳಿಕೊಳ್ಳುವ ಉದಾಹರಣೆಗಳಿಗೆ ಕೊರತೆ ಇಲ್ಲ. ನನಗೆ ಉದಾರ ಮನೋಭಾವಕ್ಕಿಂತಲೂ ವಾಕರಿಕೆ ಬರೋದೇ ಹೆಚ್ಚು ಸಹಜವೆನಿಸುತ್ತೆ, ಇದು ನನ್ನೊಬ್ಬನ ಅಭಿಪ್ರಾಯ ಮಾತ್ರ.

ನಾನೂ ಕೂಡಾ ಗುಂಡಪ್ಪನವರ ಅಭಿಮಾನಿ, 'ಹೊಲಿ ನಿನ್ನ ತುಟಿಗಳನು' ಎನ್ನುವುದನ್ನು ನಮ್ಮ ಸಂಗೀತ ನಿರ್ದೇಶಕರು ಅಕ್ಷರಷಃ ಪಾಲಿಸುತ್ತಿದ್ದಾರೇನೋ? :-)
-----

ಮೋಹನ್ ಅವರೇ, ಸರಿಯಾಗೇ ಹೇಳಿದ್ದೀರಿ :-)

Anonymous said...

ನನ್ನದಷ್ಟು ತಲೆಹರಟೆಗಳು...

೧) ಉದಯಶಂಕರ್ ಅವರನ್ನು ಇದರಲ್ಲಿ ಯಾಕೆ ಎಳಕೊಂಡು ಬಂದ್ರಿ? ಅವರು ಸಾಹಿತಿ ಅಷ್ಟೆ. ಅವರಿಗೂ ಸಂಗೀತದ ಟ್ಯೂನ್ ಗೆ ಯಾವ ಸಂಬಂಧವೂ ಇಲ್ಲ. ಆದ್ದರಿಂದ ಒಬ್ಬರ ಮೇಲೆ ಆಪಾದನೆ ಮಾಡುವಾಗ ಸ್ವಲ್ಪ ಎಚ್ಚರದಿಂದಿರುವುದು ಒಳ್ಳೆಯದು.

೨) ರಂಗರಾವ್ ಸಂಗೀತ ನಕಲು ಮಾಡಿದ ಸಂಗತಿ ಚಿತ್ರತಂಡದವರಿಗೆ ಗೊತ್ತಿರಲಾರದು ಎಂದೇಕೆ ನೆಗಟೀವ್ ಆಗಿ ಭಾವಿಸುತ್ತೀರಿ? ಅವರು ಈ ವಿಷಯವನ್ನು ನಿರ್ದೇಶಕರಿಗೆ, ನಿರ್ಮಾಪಕರಿಗೆ ಹೇಳಿದ್ದು ಅವರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಿರಬಹುದು. ನಮ್ಮ ನಿಮ್ಮಂತಹ ಜನಸಾಮಾನ್ಯರಿಗೇ ಈ ವಿಷಯ ತಿಳಿದಿರುವಾಗ ಇನ್ನು ಚಿತ್ರರಂಗದ ಮಂದಿಗೆ ತಿಳಿಯದು ಎಂಬ ಮಾತು ಸರಿಯಲ್ಲ. ಹೀಗಿರುವಾಗ ಸಂಗೀತ ನಿರ್ದೇಶಕರ ಮೇಲೆ ಗೂಬೆ ಕೂರಿಸುವುದು ಸರಿಯೆ? 'ಭಾದ್ರಪದ ಶುಕ್ಲದಾ ಚೌತಿಯಂದು...', 'ಎದ್ದೇಳು ಮಂಜುನಾಥ...' ದಂತಹ ಚಿರಕಾಲ ಉಳಿಯುವ ಸಂಗೀತ ನೀಡಿದ ಹಳೆಯ ತಲೆಮಾರಿನ ರಂಗರಾವ್ ರಂತಹವರು ಯಾವುದೋ ಜುಜುಬಿ ಪಾಶ್ಚಾತ್ಯ ಸಂಗೀತವನ್ನು ಕದ್ದು ತಮ್ಮದೆಂದು ಕೊಳ್ಳುವ ಮನೋಭಾವದವರಾಗಿರುವುದಿಲ್ಲ. ಅದೇನಿದ್ದರೂ ಬಾಲಿವುಡ್ ಅಥವಾ ಇತ್ತೀಚಿನವರ ಗುಣ.

೩) ನೂರು ಇನ್ನೂರು ರೂಪಾಯಿಗಳಿಗೆ ನಮ್ಮ ಸಿನಿಮಾ ಮಂದಿ ಸಂಗೀತ ನೀಡಿದ್ದಾರೆ (ರಾಜನ್-ನಾಗೇಂದ್ರ ?). (ವೀಣೆ ಶೇಷಣ್ಣನವರು ಎಲ್ಲೆಲ್ಲಿ ಮಾವಿನ ತೋರಣ ಹಾಕಿರುತ್ತೋ ಅಲ್ಲೆಲ್ಲಾ ಕುಳಿತು ೫ ರೂಪಾಯಿಗಳಿಗೆ ಸಂಗೀತ ನೀಡಿದ್ದರಂತೆ! ). ಸಂಗೀತ ನೀಡಿ ಕಾಸುಮಾಡಿಕೊಳ್ಳುವ ಟ್ರೆಂಡ್ ಏನಿದ್ದರೂ ಇತ್ತೀಚಿನಿನದು (ಬಾಲಿವುಡ್, ರೆಹಮಾನ್...). ಆದ್ದರಿಂದ ಕಾಪಿ ಮಾಡಿಬಿಟ್ಟರು ಎಂದು ದೊಡ್ಡ ಆರೋಪ ಹೊರಿಸಿ ವಾಕರಿಸಿಕೊಳ್ಳಬೇಡಿ. ನಾವು ಗಣಕತಜ್ಞರು (ನೀವೂ ಇರಬಹುದು). ನಮ್ಮ ಕೆಲಸಕ್ಕೆ ಬೇಕಾದ ಸೋರ್ಸ್ ಕೋಡ್ ಅನ್ನು ಗೂಗಲ್‌ನಲ್ಲಿ ಹುಡುಕಿ ಹಲವಾರು ಕಡೆಗಳಿಂದ ಪಡೆದುಕೊಳ್ಳುತ್ತೇವೆ (ಯಾರೋ ಪುಣ್ಯಾತ್ಮರು ಬರೆದದ್ದು). ನಮ್ಮ ಪ್ರಾಡಕ್ಟ್‌ನಲ್ಲಿ ಅವೆಲ್ಲಾ ಒರಿಜಿನಲ್ ಕೋಡ್ ಬರೆದವರ ಹೆಸರನ್ನು ಕ್ರೆಡಿಟ್‌ನಲ್ಲಿ ಹಾಕುತ್ತೇವೆಯೇ? ಆ ಕೋಡ್ ಅನ್ನು ಮಕ್ಕಿಕಾಮಕ್ಕಿ ಕಾಪಿ ಮಾಡಿ ನಮ್ಮದೇ ಎಂದು ಬೀಗುವುದಿಲ್ಲವೆ?

೪) ನಮ್ಮಜನಕ್ಕೆ, ವ್ಯವಸ್ಥೆಗೆ ಕಾಪಿರೈಟ್ ಬಗ್ಗೆ ಮಾಹಿತಿ ಕಡಿಮೆ. ಆದ್ದರಿಂದ ಕಾಪಿ ಪ್ರಸಂಗಗಳು ನಡೆದಾದ ಅದರಲ್ಲಿ ಯಾವುದೇ (ಪಾಶ್ಚಾತ್ಯ ದೇಶಗಳಲ್ಲಿನ ಹಾಗೆ) ದುರುದ್ದೇಶ ವ್ಯಾಪಾರೀ ಉದ್ದೇಶಗಳಿಗಿಂತ ವ್ಯಾವಹಾರಿಕ ಅಜ್ಞಾನವೇ ಹೆಚ್ಚು ಕಾರಣವಿರುತ್ತೆ.

೫) ನನಗೇನೋ (ಇದು ನನ್ನೊಬ್ಬನ ಅಭಿಪ್ರಾಯ ಮಾತ್ರ) ನಮ್ಮವರು ಕಾಪಿಮಾಡಿದ ಸಂಗೀತ ಕೇಳಿದಾಗ ವಾಕರಿಕೆ ಬರಲ್ಲ. ಆದರೆ ಯಾವಾಗ ನಮ್ಮ ಬಾಸುಮತಿ ಅಕ್ಕಿಯನ್ನು ಬಾಸ್ಮತಿ ರೈಸ್ ಅಂತ ಕಾಪಿರೈಟ್ (ಪೇಟೆಂಟ್) ಮಾಡಿಸಿ ತಮ್ಮದೆಂದು ಪಾಶ್ಚಾತ್ಯರು ಕರೆದರೋ ಆಗಿನಿಂದ ಆ ಅಕ್ಕಿ ತಿಂದಾಗೆಲ್ಲಾ ವಾಕರಿಕೆ ಬರುತ್ತೆ!

ಅನಾಮಧೇಯ.

Satish said...

ಮಾನ್ಯ ಅನಾಮಧೇಯರೇ,

First of all, ನಿಮ್ಮದಂತೂ ಖಂಡಿತ ತಲೆಹರಟೆಯಲ್ಲ!
೧) Point well received - ಆದರೂ ಸಂಗೀತ ನಿರ್ದೇಶಕರು ಹಾಗೂ ಗೀತ ರಚನೆಗಾರರು ಇಬ್ಬರೂ ಸಾಂಗತ್ಯದಲ್ಲಿ ಕೆಲಸ ಮಾಡುವುದನ್ನು ನಾನು ಬಲ್ಲೆ.

೨) ರಂಗಾರಾವ್ ಅವರ ಒಂದು ಉದಾಹರಣೆಯನ್ನು ನಾನು ಕೊಟ್ಟಿದ್ದೇನೆಯೇ ವಿನಾ ಅವರ ಮೇಲೆ ಗೂಬೆ ಕೂರಿಸುವುದು ಖಂಡಿತಾ ನನ್ನ ಉದ್ದೇಶವಲ್ಲ. 'ಯಾವುದೋ ಜುಜುಬಿ ಪಾಶ್ಚಾತ್ಯ ಸಂಗಿತ' ಎನ್ನಬೇಡಿ - ರಂಗಾರಾವ್ ಅಂತಹವರಿಗೂ ಸ್ಪೂರ್ತಿ ನೀಡಿದ ಸಂಗೀತ ಎನ್ನಿ ಬೇಕಾದರೆ. ಯಾರು ಎಲ್ಲಿಂದ ಬೇಕಾದರೂ ಕಾಪಿ ಮಾಡಿಕೊಳ್ಳಲಿ, ಚಲನಚಿತ್ರದಲ್ಲಿ, ಕ್ಯಾಸೆಟ್/ಸಿಡಿ ಮೇಲೆ ಮೂಲದ ಬಗ್ಗೆ ತಿಳಿಸುವುದು ಒಳ್ಳೆಯದು.

೩) ನಮ್ಮ ಸಂಗೀತ ನಿರ್ದೇಶಕರ ಪರಂಪರೆಯ ಬಗ್ಗೆ ನನಗೆ ಅಪಾರ ಗೌರವವಿದೆ. ನೀವು ತಿಳಿಸಿದ ನೂರು, ಐದು ರೂಪಾಯಿಗಳನ್ನು inflation ಗೆ adjust ಮಾಡಿಕೊಂಡರೂ ಅದೂ ತುಂಬಾ ಕಡಿಮೆ. ಸೋರ್ಸ್ ಕೋಡ್ ಓಪನ್ ಇದ್ದಾಗ ಅದನ್ನು ಯಾರು ಬೇಕಾದರೂ ಬಳಸಲಿ/ಬೆಳಸಲಿ ಎಂದಲ್ಲವೇ? ಕಾಪಿರೈಟ್ ಅಥವಾ ಪ್ರೊಟೆಕ್ಟೆಡ್ ಸೋರ್ಸ್‌ನಿಂದ ಹೇಳದೇ ಕೇಳದೇ ತೆಗೆದುಕೊಂಡರೆ ಅದು ತಪ್ಪಾಗುತ್ತದೆ.

೪) ನಮ್ಮ ಜನರಿಗೆ ಮಾಹಿತಿ ಕಡಿಮೆ ಇರಬಹುದು ಆದರೆ ಸೌಜನ್ಯದ ಕೊರತೆ ಏಕಿದೆ? ಪ್ರಪಂಚದಲ್ಲಿ ನಡೆಯೋ ಪ್ರತಿಯೊಂದಕ್ಕೂ ಸ್ಪಂದಿಸಲು ಪ್ರಯತ್ನಿಸೋ ನಮಗೆ ಇತರ "ಒಳ್ಳೆಯ" ನಡವಳಿಕೆಗಳೂ ಹಿತವೇಕೆನಿಸುವುದಿಲ್ಲ?

೫) ನಮಗೆ ಸಹಜ ಹಾಗೂ ಸಾಮಾನ್ಯವೆನಿಸಿದ್ದನ್ನ ಕಾಲಕ್ರಮೇಣ ಯಾರಾದರೂ 'ನಮ್ಮದು' ಬೇಲಿ ಹಾಕಿಕೊಂಡರೆ ಅದು ಪ್ರಶ್ನಿಸಬೇಕಾದ್ದೇ. ಆಲೂಗಡ್ಡೆ ವಿಶ್ವಮಾನ್ಯವಾದದ್ದಾರೂ ಐಡಹೋ ಆಲೂಗಡ್ಡೆಗೆ ಅದರದ್ದೇ ಆದ ಹೆಸರಿದೆ. ಒಂದು ಬೆಳೆಯನ್ನು ವಿಶೇಷವಾದ ರೀತಿಯಲ್ಲಿ ಪೋಷಿಸಿ, ಬೆಳೆಸಿ, ಪಸಲನ್ನು ಭಿನ್ನವಾಗಿ ಮಾರುಕಟ್ಟೆಗೆ ತರುವ ಎಸ್ಟಾಬ್ಲಿಷ್ಡ್ ಪ್ರಾಸೆಸ್ಸನ್ನು ಯಾರಾದರೂ 'ನಮ್ಮದು' ಎಂದು ಕರೆದುಕೊಂಡರೆ ಅದರಲ್ಲೇನು ತಪ್ಪಿದೆ?

ನಿಮ್ಮ ನಿಜ ನಾಮಧೇಯದಲ್ಲೇ ಬರೆದಿದ್ದರೆ ಇನ್ನೂ ಚೆನ್ನಾಗಿತ್ತು!

Anonymous said...

ಕಾಪಿರೈಟ್ ಕಾಯ್ದೆಗಳು ಆಯಾ ದೇಶಕಾಲವನ್ನು ಅವಲಂಬಿಸಿವೆ. ಕೆಲವು ಲಿಂಕ್ಸ್ ಇಲ್ಲಿವೆ.

http://www.pdinfo.com/
http://www.sls.lib.il.us/reference/workshop/suite6.html

ನೆನಪಿಡಿ. ಅನೇಕ ಕಾನೂನುಗಳು ಇತ್ತೀಚೆಗೆ ಆದವು. ಕೆಲವು ಕಾನೂನುಗಳ ಬಗ್ಗೆ ಇನ್ನೂ ಕೋರ್‍ಟಿನಲ್ಲಿ ವಾಗ್ವಿವಾದ ನಡೆಯುತ್ತಿವೆ. ಭಾರತದಲ್ಲಿ ಇಂತಹ ಕಾನೂನುಗಳಿವೆಯೇ? ಇದ್ದರೆ ಅವು ಯಾವಾಗಿನಿಂದ ಜಾರಿಗೊಂಡಿವೆ? ಆ ಬಗ್ಗೆ ನಮ್ಮ ದೇಶ ತನ್ನ ಪ್ರಜೆಗಳಿಗೆ ಖಚಿತ ಮಾಹಿತಿಯನ್ನು ಕೊಟ್ಟು ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ಸಂಗೀತ ನಿರ್ದೇಶಕರನ್ನು (ಅಥವಾ ಯಾರೊಬ್ಬರನ್ನು) ಟೀಕಿಸಲಾಗದು. ಎಲ್ಲದಕ್ಕೂ ಅಮೆರಿಕಾದಲ್ಲಿನ ಕಾನೂನುಗಳನ್ನು ನಾವು ಅವಲಂಬಿಸಲಾಗುವುದಿಲ್ಲ. ಅಮೇರಿಕಾದಲ್ಲಿ ಈ ಕಾನೂನುಗಳನ್ನು ಮಾಡಿದಾಗ ನಮ್ಮವರಿನ್ನೂ ಬ್ರಿಟೀಷರಿಂದ ಗುಂಡೇಟು ತಿನ್ನುತ್ತಿದ್ದರು. ನೆನಪಿರಲಿ.

ಒಂದು ವೇಳೆ ನಮ್ಮ ಕಾನೂನಿನ ಪ್ರಕಾರ ಈ ಪಾಶ್ಚತ್ಯ ಹಾಡುಗಳು ಪಬ್ಲಿಕ್ ಡೊಮೈನ್‌ (ಓಪನ್ ಸೋರ್ಸ್) ಆಗಿದ್ದರೂ ಅವನ್ನು ಉಪಯೋಗಿಸಿಕೊಂಡಾಗ ಮೂಲಕರ್ತೃವನ್ನು ನೆನೆಯಬೇಕಾದ ನೈತಿಕ ಜವಾಬ್ದಾರಿ ಎದುರಾಗುತ್ತದೆ. ಆದರೆ ಇದು ಭಾರತೀಯ ಸಿನಿಮಾ ಸಂಗೀತಜ್ಞ ಮಾತ್ರ ಪಾಲಿಸಬೇಕಾದ ವಸ್ತುವಲ್ಲ.

ನಮ್ಮಲ್ಲೇ ಎಷ್ಟು ಮಂದಿ...

೧) ಕಾಲೇಜಿನಲ್ಲಿ ಓದುವಾಗ "no parts of this book can be copied or reproduced" ಅನ್ನುವ ಪುಸ್ತಕಗಳನ್ನು ಜೆರಾಕ್ಸ್ ಕಾಪಿ ಮಾಡಿಸಿಲ್ಲ?
೨) ನಮ್ಮ ಅಂತರಜಾಲ ತಾಣಗಳಲ್ಲಿ, ಬ್ಲಾಗುಗಳಲ್ಲಿ ಬೇಕಾದ ಚಿತ್ರಗಳನ್ನು, ಮಾಹಿತಿಯನ್ನು ಅಲ್ಲಿ ಇಲ್ಲಿ ಹುಡುಕಿ ಹೇಳದೇ ಕೇಳದೇ ಬಳಸಿಕೊಂಡಿಲ್ಲ?
೩) ಅಮೇರಿಕಾದಲ್ಲಿ ಕನ್ನಡ, ಹಿಂದಿ ಚಿತ್ರಗಳ ಪೈರೇಟೆಡ್ ಕ್ಯಾಸೆಟ್‌ಗಳನ್ನು ಒಂದು ಡಾಲರ್ ಕೊಟ್ಟು ತಂದು ನೋಡಿ ಆನಂದಿಸಿ "ಮೇರಾ ಭಾರತ್ ಮಹಾನ್" ಎಂದುಕೊಂಡಿಲ್ಲ?
೪) ಇಂದಿಗೂ ಕನ್ನಡ ಸಂಗೀತ ಅಂತರಜಾಲ ತಾಣಗಳಿಂದ ಬಿಟ್ಟಿ ಸಂಗೀತವನ್ನು ಕೇಳಿ ಸವಿಯುತ್ತಿಲ್ಲ?
೫) ಓಪನ್ ಸೋರ್ಸ್ ಕೋಡ್ ಅನ್ನು ಬಳಸಿಕೊಂಡರೂ ಕೃತಜ್ಞತೆಗಾದರೂ ಮೂಲಕರ್ತೃವನ್ನು ನೆನೆಯದೆ ನಾನೇ ಮಾಡಿದ್ದು ಎಂದು "ತುಟಿಗಳ ಹೊಲಿಗೆಯನ್ನು ಬಿಚ್ಚಿಕೊಂಡಿಲ್ಲ"?

ಇವೆಲ್ಲಾ ಪಬ್ಲಿಕ್ ಡೊಮೈನ್ ಏನು? ಅವುಗಳ ಮೂಲಕರ್ತೃವನ್ನು ನಾವು ಕೃತಜ್ಞತೆಯಿಂದ ಸ್ಮರಿಸಿದ್ದೀವೇನು? ಹೀಗಿರುವಾಗ ಇನ್ನೊಬ್ಬರ ನೈತಿಕತೆಯನ್ನು ಪ್ರಶ್ನಿಸುವ ಹಕ್ಕು ನಮಗೆಲ್ಲಿದೆ?

ಕಾಪಿರೈಟ್ ಉಲ್ಲಂಘಿಸಬೇಕೆಂದು ನನ್ನ ಅಭಿಪ್ರಾಯವಲ್ಲ. ಮೂಲಕೃತಿಯನ್ನು ಕಾಪಿಮಾಡಿ ತನ್ನದೆಂದು ಹೇಳಿಕೊಂಡು ಮೆರೆಯುವ, ಹಣಮಾಡುವ ವ್ಯಕ್ತಿಗಳ ಬಗ್ಗೆ ನಿಮ್ಮಂತೆ ನನಗೂ ಸಹಾ ತಿರಸ್ಕಾರವಿದೆ. ಆದರೆ ಸಾರಾಸಗಟಾಗಿ ಎಲ್ಲರನ್ನೂ ಅಪರಾಧಿಗಳೆಂದು ಪರಿಗಣಿಸದೆ ಪ್ರತಿಯೊಂದರ ಸಮಯ, ಸನ್ನಿವೇಶಗಳನ್ನು ಅವಲೋಕಿಸಿ ನಂತರ ತೀರ್ಮಾನ ತೆಗೆದುಕೊಳ್ಳುವ ಉದಾರಭಾವ ಇರಬೇಕು. ಅಮೇರಿಕಾದವರು ಆಲೂಗಡ್ಡೆಯನ್ನು, ಬಾಸ್ಮತಿ ಅಕ್ಕಿಯನ್ನು ತಮಗೆ ಬೇಕಾದ ಕೆಮಿಕಲ್ ಗೊಬ್ಬರ ಹಾಕಿ ಬೆಳೆಸಿ ಏರೋಪ್ಲೇನಿನಲ್ಲಿ ಮಾರುಕಟ್ಟೆಗೆ ತರಲಿ. ನಾವೇನು ಬೇಡ ಅನ್ನುವುದಿಲ್ಲ. ಆದರೆ ಸಗಣಿ ಕಾಂಪೋಸ್ಟ್ ಗೊಬ್ಬರಹಾಕಿ ಬೆಳೆಸಿ ಎತ್ತಿನಗಾಡಿಯಲ್ಲಿ ಮಾರ್ಕೆಟ್‌ಗೆ ತರುವ ನಮ್ಮ ಬಡ ರೈತನಿಗೆ "ಈ ಅಕ್ಕಿ ಕಾಪಿರೈಟ್ ಆಗಿದೆ. ನೀನು ಬೆಳೆಯಬಾರದು" ಎಂದು ತಡೆಯುವ ಅಮೇರಿಕಾದ ಸೊಕ್ಕನ್ನು ಸಹಿಸಲಾಗುವುದಿಲ್ಲ. (http://www.biotech-info.net/basmati_patent.html)

ನನಗೆ ಅನಾಮಧೇಯನಾಗಿರುವುದೇ ಇಷ್ಟ. ಇಷ್ಟುದಿನ ನೀವೂ ಸಹಾ ಅಂತರಂಗಿಗಳಾಗಿದ್ದು ಈಗಷ್ಟೇ ಪಬ್ಲಿಕ್ ಡೊಮೈನ್‌ಗೆ ಓಪನ್ ಸೋರ್ಸ್ ಆಗಿ ಬಂದಿದ್ದೀರಲ್ಲವೆ?

-ಅನಾಮಧೇಯ

Anonymous said...

ಬಂಧನ ಚಿತ್ರಕ್ಕೆ ಸಾಹಿತ್ಯ ರಚಿಸಿದವರು ಆರ್.ಎನ್.ಜಯಗೋಪಾಲ್. ಚಿ. ಉದಯಶಂಕರ್ ಅಲ್ಲ!

ravihara said...

ಬಹಳ ಚೆನ್ನಾಗಿವೆ ನಿಮ್ಮ ಬರಹಗಳು.

ವಿಶ್ವಾಸಿ,
ರವಿಶಂಕರ

Anonymous said...

ಯಾವುದೋ ಹಾಡಿಗಾಗಿ ಹುಡುಕುತ್ತಿದ್ದಾಗ ಈ ಲೇಖನ ಕಣ್ಣಿಗೆ ಬಿತ್ತು. ಬಣ್ಣಾ ಬಣ್ಣಾ ಹಾಡು ಬೀಮಪಲಾಸಿ (ಭೀಮಫಲಾಶ್ರೀ) ರಾಗ ಆಧಾರಿತವಾಗಿದೆ. ಈ ರಾಗ ಎಂ.ರಂಗರಾವ್ ಅವರ ಅಚ್ಚುಮೆಚ್ಚಿನ ರಾಗ. ಈ ರಾಗದಲ್ಲೇ ೫೦ ಕ್ಕೂ ಹೆಚ್ಚು ಹಾಡುಗಳನ್ನು ಅವರು ಮಾಡಿದ್ದಾರೆ! ಈ ಟ್ಯೂನ್ ಅವರನ್ನು ಆಕರ್ಷಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.