ಸೋಜಿಗಗಳು ನೂರು
ಈ ವರ್ಷದ ಮೇ ಒಂದು ವಿಶೇಷವಾದ ತಿಂಗಳೆಂದೇ ಹೇಳಬೇಕು. ೨೦೦೬ ರ ಮೇ ತಿಂಗಳಿನಲ್ಲಿ ದಿನಕ್ಕೊಂದರಂತೆ ೩೧ ಲೇಖನಗಳು ಬರೆದು ’ಅಂತರಂಗ’ದಲ್ಲಿ ಪ್ರಕಟಿಸಿದ ನನಗೆ ೨೦೦೭ ರ ಮೇ ತಿಂಗಳಿನಲ್ಲಿ ಕೇವಲ ೭ ಲೇಖನಗಳನ್ನಷ್ಟೇ ಪ್ರಕಟಿಸಲು ಸಾಧ್ಯವಾಯಿತು, ಹಾಗೇ ಈ ವರ್ಷದ ಮೇ ತಿಂಗಳಿನ ಈ ೨೫ ದಿನಗಳಲ್ಲಿ ಇದುವರೆಗೂ ಬರೆದು ಪ್ರಕಟಿಸಿದ್ದು ಕೇವಲ ಎರಡೇ ಎರಡು ಲೇಖನಗಳು. ಈ ಕಡೆ ಆಫೀಸಿನ ಕೆಲಸ ಓಡಾಟ ಹಾಗೂ ಅನೇಕಾನೇಕ ಕಾರಣಗಳಿಂದ ಕಂಪ್ಯೂಟರಿನ ಮುಂದೆ ಕುಳಿತು ಪರ್ಸನಲ್ ಟೈಮ್ ಎಂದು ಪುರುಸೊತ್ತು ಸಿಕ್ಕಿದ್ದೇ ಹೆಚ್ಚಾದರೆ ನನಗೆ ಆಶ್ಚರ್ಯವಾಗುವಂತೆ ಕನ್ನಡಪ್ರಭದ ಬ್ಲಾಗಾಯಣ ಹಾಗೂ ದಟ್ಸ್‌ಕನ್ನಡ ಪೋರ್ಟಲ್ಲುಗಳ ಮೂಲಕ ’ಅಂತರಂಗ’ಕ್ಕೆ ಭೇಟಿಕೊಡುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು ಈಗಾಗಲೇ ಈ ತಿಂಗಳ ಮೇ ಭೇಟಿ ಹಾಗೂ ಪೇಜ್ ವ್ಯೂವ್ ಅಂಕಿ-ಅಂಶಗಳ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿರುವ ವಿಶೇಷವೇ ಹೌದು. Thanks to the portals and thanks to all of you!
***
ಈ ತಿಂಗಳು, ಈ ದಿನ ಮತ್ತೊಂದು ರೀತಿಯಲ್ಲಿ ವಿಶೇಷವಾದದ್ದೇ ಅನ್ನಬೇಕು - ಯಾವೊಂದು ಪಕ್ಷಕ್ಕೆ ನಿಚ್ಚಳ ಬಹುಮತ ಬರದೇ ಮತ್ತೆ ತೇಲಾಡುವ ಒಪ್ಪಂದಗಳು ಸರ್ಕಾರಗಳು ಬರುತ್ತವೆಯೇನೋ ಎಂದು ಕೊರಗುತ್ತಿದ್ದವರಲ್ಲಿ ನಾನೂ ಒಬ್ಬ. ಕಾಂಗ್ರೇಸೋ ಬಿಜೇಪಿಯೋ ಯಾವುದೋ ಒಂದು ಪಕ್ಷಕ್ಕೆ ಬಹುಮತ ಬಂತಲ್ಲ, ಇನ್ನಾದರೂ ಇವರಿವರಲ್ಲೇ ಕಚ್ಚಾಡಿಕೊಳ್ಳದೇ ಒಂದು ಐದು ವರ್ಷ ನಿರಾಳವಾಗಿ ಸರ್ಕಾರವನ್ನು ನಡೆಸಿ ಜನರ ಸಮಸ್ಯೆಗಳಿಗೆ ಅವರ ಪ್ರತಿನಿಧಿಗಳು ಸ್ಪಂದಿಸುವ ವ್ಯವಸ್ಥೆಯಾದರೆ ಸಾಕು!
ಹ್ಞಾ, ಈಗಾಗಲೇ ಕಾಲಚಕ್ರದ ಬರಹಗಳು ಆರಂಭವಾಗಿವೆ, ಇನ್ನು ಕಾಲಚಕ್ರದ ಮೇಷ್ಟ್ರು-ನಂಜ, ತಿಮ್ಮಕ್ಕ ಇವರೆಲ್ಲ ಸೇರಿ ಹೆಚ್ಚು ಹೆಚ್ಚು ಕಟ್ಟೆ ಪಂಚಾಯಿತಿ ಹಚ್ಚಿಕೊಳ್ಳುತ್ತಾರೆ ನೋಡುತ್ತಿರಿ.
ಈ ವರ್ಷದ ಚುನಾವಣೆಯ ಫಲಿತಾಂಶ ಬಹಳ ಸ್ವಾರಸ್ಯಕರವಾಗಿದೆ:
224 ಸ್ಥಳಗಳಲ್ಲಿ ನಡೆದ ಚುನಾವಣೆಗಳಲ್ಲಿ 943 ಪಕ್ಷೇತರರನ್ನು ಬಿಟ್ಟು 31 ಪಕ್ಷಗಳ 1299 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆಂದರೆ ನಂಬಲು ಕಷ್ಟವಾಗುತ್ತದೆ. ನೂರಕ್ಕೆ 42 ರಷ್ಟು ಪಕ್ಷೇತರರು, ಕೆಲವೊಂದು ಕ್ಷೇತ್ರಗಳಲ್ಲಿ ಐದು-ಆರು ಜನರು ಸ್ಪರ್ಧಿಸಿದ್ದು ಹೊಸಬರಲ್ಲಿ ಹೆಚ್ಚು ಉತ್ಸಾಹವನ್ನು ಇನ್ನೂ ಉಳಿಸಿರುವುದು ನನಗಂತೂ ಆಶ್ಚರ್ಯ ತಂದಿತು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜನಸ್ಪಂದನಕ್ಕೆ ಕಿವಿಗೊಡುವ ತಾಳ್ಮೆ ಎಷ್ಟು ಜನರಿಗಿದ್ದೀತು? NDTV ಯ ವರದಿಯಂತೆ ಇಂದಿನ ರಾಜಕೀಯದ ಹಿರಿಯ ತಲೆಗಳೆಲ್ಲ ಭಯಂಕರ ಶ್ರೀಮಂತರಿರಬಹುದು, ಕೋಟ್ಯಾಧೀಶ್ವರರಿರಬಹುದು ಆದರೆ ಈ ರಾಜಕೀಯವನ್ನೇ ನಂಬಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತೇವೆ, ಇದರಲ್ಲೇ ಇದ್ದು ನಾವೂ ಒಂದು ದಿನ ಕೋಟ್ಯಾಧಿಪತಿಗಳಾಗುತ್ತೇವೆ ಎನ್ನುವ ತತ್ವ ನಿನ್ನೆಯಷ್ಟಂತೂ ಇಂದು ಸರಳವಿಲ್ಲ.
ಆರು ಜನ ಪಕ್ಷೇತರ ಅಭ್ಯರ್ಥಿಗಳನ್ನು ಬಿಟ್ಟು ಖಾತೆ ತೆರೆದ ಪಕ್ಷಗಳೆಂದರೆ ಮೂರೇ ಮೂರು: ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್. ಉಳಿದ 28 ಪಕ್ಷದ 634 ಜನ ಅಭ್ಯರ್ಥಿಗಳಲ್ಲಿ ಹೆಚ್ಚು ಜನರಿಗೆ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗದಾಗಿದ್ದು ನನಗೆ ಜನಾದೇಶ ಕಡಿಮೆ ಪಕ್ಷಗಳ ಸರ್ಕಾರದತ್ತ ಒಲವು ತೋರಿಸುತ್ತಿರುವಂತೆ ಕಂಡುಬಂತು.
ನನ್ನ ಹುಟ್ಟೂರು ಆನವಟ್ಟಿ, ಸೊರಬಾ ತಾಲೂಕಿನಲ್ಲಿ 1967 ರಿಂದ ಗೆದ್ದು ಬರುತ್ತಿದ್ದ ಬಂಗಾರಪ್ಪನವರ ಕುಟುಂಬದ ಯಶೋಗಾಥೆಗೆ ಕಡಿವಾಣ ಬಿದ್ದಿದೆ, ನಾಲ್ಕು ದಶಕಗಳ ನಂತರ ಹೊಸನಗರದ ಹಾಲಪ್ಪನವರು ಬಿಜೆಪಿ ಟಿಕೇಟಿನಲ್ಲಿ ಸಾಕಷ್ಟು ಬಹುಮತದಲ್ಲೇ ಗೆದ್ದುಬಂದಿರುವುದು (43%) ನಿಜವಾಗಲೂ ವಿಶೇಷ ಹಾಗೂ ವಿಚಿತ್ರ. ನಮ್ಮೂರಿನ ರಸ್ತೆಗಳಲ್ಲಿ, ಅಂಗಡಿ ಗೂಡುಗಳಲ್ಲಿ, ಹಳ್ಳಿಪಾಡುಗಳಲ್ಲಿ ಯಾವ ಯಾವ ರೀತಿಯ ಮಾತುಕಥೆಗಳು ನಡೆದಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ ಅಷ್ಟೇ. ಪಕ್ಕದ ಶಿಕಾರಿಪುರದಲ್ಲಿ ಬಂಗಾರಪ್ಪನವರು ಈ ಇಳಿ ವಯಸ್ಸಿನಲ್ಲಿ ಸ್ಪರ್ಧಿಸಿ ಏನು ಮಾಡುತ್ತಾರೋ ಎಂದುಕೊಂಡ ನನಗೆ ಗೆದ್ದ ಎಡಿಯೂರಪ್ಪನವರ ಮುಂದೆ (66%) ಬಂಗಾರಪ್ಪನವರು 30% ಮತಗಳಿಸಿದ್ದು ನಿಜವಾಗಲೂ ಸೋಜಿಗ ಮೂಡಿಸಿತು.
ಇನ್ನು ಬೆಂಗಳೂರು-ಜಯನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭಾಗವಹಿಸಿದ್ದ ರವಿರೆಡ್ಡಿಯವರನ್ನು ಕುರಿತು ಅವರ ಅನುಭವಗಳ ಬಗೆಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಮ್ಮೆಲ್ಲರ ನಡುವಿನ ಧ್ವನಿಯಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿನ ರಾಜಕೀಯ ಕರ್ಮಕಾಂಡದಲ್ಲಿ ಮೌಲ್ಯಾಧಾರಿತ ಧೋರಣೆಗಳನ್ನು ಮುಂದಿಟ್ಟುಕೊಂಡು ಅವರು ಪಡೆದ 244 ಮತಗಳಿಂದ ನಾವೆಲ್ಲ ಕಲಿಯುವುದು ಸಾಕಷ್ಟಿದೆ.
ನಾವಿರುವ ಅಮೇರಿಕದಲ್ಲಾಗಲೀ ಮುಂದುವರೆದ ಜನರಿರುವ ನಗರಗಳಲ್ಲಿ ಹೆಚ್ಚು ಜನರು ಓಟ್ ಹಾಕಲು ಹೋಗುತ್ತಾರೆ ಎನ್ನುವುದು ಒಂದು ದೊಡ್ಡ ಕಲ್ಪನೆಯೇ ಸರಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೆಚ್ಚು ಹೆಚ್ಚು ಮತಗಟ್ಟೆಗೆ ಬಂದಿದ್ದು ಚುನಾವಣಾ ಅಂಕಿ-ಅಂಶಗಳನ್ನು ಗಮನಿಸಿದ ನಿಮಗೆ ಮನವರಿಕೆಯಾದೀತು.
***
ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಇಷ್ಟವಾಗುವಂತೆ ನಮ್ಮ ಸರ್ಕಾರಿ ಪೋರ್ಟಲುಗಳು ಚೆನ್ನಾಗಿ ಬೆಳೆದು ಬಂದಿವೆ, ಚುನಾವಣೆ ಸಂಬಂಧಿ ಅಂಕಿ-ಅಂಶಗಳಿಗಾಗಿ ನಾನು ಈ ಪೋರ್ಟಲುಗಳನ್ನು ನೋಡಿದಾಗಲೆಲ್ಲ ನನಗೆ ಎಂದೂ ನಿರಾಶೆಯಾದದ್ದಂತೂ ಇಲ್ಲ, ಬೇಕಾದರೆ ಚುನಾವಣಾ ಆಯೋಗದ ವಿವರಗಳನ್ನು ನೀವೇ ಖುದ್ದಾಗಿ ನೋಡಿ, ಇಲ್ಲಿ ನಿಮಗೆ ಬೇಕಾದ ಅಭ್ಯರ್ಥಿಯ ಚುನಾವಣೆ ಅರ್ಜಿ, ಅದಕ್ಕೆ ಲಗತ್ತಿಸಿದ ಕಾಗದ ಪತ್ರಗಳಿಂದ ಹಿಡಿದು ವಿವರವಾದ ಫಲಿತಾಂಶವನ್ನೂ ಇಲ್ಲಿ ನೋಡಬಹುದು.