Tuesday, March 11, 2008

ಈ ಮಹಾನುಭಾವರ ಬಗ್ಗೆ ಬರೆಯೋದೇ ತಪ್ಪೇ?

ನಾನು ದಿನನಿತ್ಯದ ವಿದ್ಯಮಾನಗಳ ಬಗ್ಗೆ ಓದಿ ಅವರಿವರು ಮಹಾನುಭಾವರ ಬಗ್ಗೆ ಚಿಂತಿಸಿ ಬರೆಯೋ ಪ್ರಕ್ರಿಯೆ ಹಾಗಿರಲಿ, ಪ್ರಪಂಚದಾದ್ಯಂತ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎನ್ನೋದನ್ನ ತಿಳಿದುಕೊಳ್ಳೋ ಸವಾಲೇ ಇತ್ತೀಚೆಗೆ ದೊಡ್ಡದಾಗಿ ಕಾಣಿಸ್ತಾ ಇದೆ. ಅಂತಾದ್ದರಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಯಾರ ಹೆಸರು ಹೆಚ್ಚು ಚರ್ಚೆಗೆ ಒಳಪಡುತ್ತೋ, ನಾವು ದಶಕಗಳಿಂದ ಯಾರನ್ನು ಓದಿ/ನೋಡಿ ಬಲ್ಲೆವೋ ಅವರ ಹೆಸರೇ ಮನಸ್ಸಿನಲ್ಲಿ ಉಳಿಯೋದು ಸಹಜ ಎನಿಸಿಬಿಟ್ಟಿದೆ.

ಹೀಗಿರುವಾಗ, ನನಗಾದ ಇತ್ತೀಚಿನ ಎರಡು ಮಹತ್ತರ ನಿರಾಶೆಗಳನ್ನು ಇಲ್ಲಿ ದಾಖಲು ಮಾಡಬೇಕಾಯಿತು: ಒಂದು ಅಜ್ಞಾತವಾಸದಿಂದ ಹಿಂತಿರುಗಿದ ಬೆನಝೀರ್ ಭುಟ್ಟೋರನ್ನು ವ್ಯವಸ್ಥೆ ಬಲಿ ತೆಗೆದುಕೊಂಡದ್ದು, ಮತ್ತೊಂದು ನಿನ್ನೆ ಹೊರಬಂದ ನ್ಯೂ ಯಾರ್ಕ್ ಗವರ್ನರ್ ಎಲಿಯಟ್ ಸ್ಪಿಟ್ಝರ್ (Eliot Spitzer) ಸುದ್ದಿಯ ಪ್ರಕಾರ ಆತ ವೇಷ್ಯಾವಾಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು. ಅಂದಿನ ನ್ಯೂ ಜೆರ್ಸಿಯ ಗವರ್ನರ್ ಜಿಮ್ ಮಕ್‌ಗ್ರೀವೀ (Jim McGreevey) ಆಗಷ್ಟ್ ೨೦೦೪ ರಲ್ಲಿ ತನ್ನ ಹೋಮೋ ಸೆಕ್ಸ್ಯವಲ್ ಜೀವನ ಶೈಲಿಯನ್ನು ಬಹಿರಂಗ ಪಡಿಸಿ ರಾಜೀನಾಮೆ ಕೊಟ್ಟಿದ್ದರೆ, ನಾಲ್ಕು ವರ್ಷಗಳ ಬಳಿಕ ಎಲಿಯಟ್ ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುಳಿಗೆ ಸಿಕ್ಕು ರಾಜೀನಾಮೆ ಕೊಡುವ ಸಂದರ್ಭ ಬರುತ್ತದೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ.

ಡಲ್ಲಾಸ್ ನ್ಯೂಸ್ ನಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳನ್ನು ನೋಡಿದರೆ ಇದೇನು ಅವರಿಬ್ಬರ ಜೋಡಿಯೂ ಮಾತನಾಡಿಕೊಂಡು ಈ ರೀತಿಯ ಪ್ರೆಸ್ ಕಾನ್‌ಫರೆನ್ಸ್ ಕೊಡುತ್ತಿದ್ದಾರೇನೋ ಅನ್ನಿಸುವುದು ನಿಜ.***

ಭುಟ್ಟೋ ಬಗ್ಗೆ ಬರೆದೆ, ಆಕೆಯನ್ನು ಸಮಾಜ ಆಪೋಷನ ತೆಗೆದುಕೊಂಡಿತು, ಸ್ಪಿಟ್ಝರ್ ಬಗ್ಗೆ ಬರೆದು ಆತ ವಾಲ್ ಸ್ಟ್ರೀಟ್ ದೊರೆಗಳನ್ನು ಕಾಡಿಸಿದ್ದರ ಬಗ್ಗೆ ಬರೆದು ನಿಜವಾಗಿಯೂ ಉತ್ತಮ ಅಡ್ಮಿನಿಷ್ಟ್ರೇಟರ್ ಎಂದು ಹಾಡಿ ಹೊಗಳಿದರೆ ಆತನಿಗೆ ಈ ಸ್ಥಿತಿ ಬಂದಿತು.

ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುದ್ದಿಗಳ ಹಿಂದೆ ಅದೇನು ಅಡಗಿದೆಯೋ ಆದರೆ ಆತ ಸಾರ್ವಜನಿಕ ಕ್ಷಮೆ ಕೋರಿದ್ದಂತೂ ನಿಜ. ಅಲ್ಲಿಗೆ ಕಥೆ ಮುಗಿದಂತೆಯೇ, ಯಾವೊಬ್ಬ ಪ್ರಸಿದ್ಧ ಹಾಗೂ ಪವರ್‌ಫುಲ್ ರಾಜಕಾರಣಿ ಹಾಗೂ ವ್ಯಕ್ತಿ ದೇಶದ ರಾಜಕಾರಣದಲ್ಲಿ ಮಿಂಚುತ್ತಾನೆ ಎಂದು ಸಮಾಜ ಕನಸು ಕಂಡಿತ್ತೋ ಅದೆಲ್ಲವೂ ನೀರಿನಲ್ಲಿ ತೊಳೆದ ಹೋಮವಾಗಿ ಹೋಯಿತು. ಈ ಸ್ಕ್ಯಾಂಡಲ್ಲನ್ನು ಗೆದ್ದು ಸ್ಪಿಟ್ಝರ್ ಹೊರಬರದೇ ಇರುತ್ತಾನೆಯೇ, ಅಥವಾ ಹಾಗೆ ಹೊರಬಂದರೂ ಸಮಾಜಕ್ಕೆ ಯಾವ ಮುಖವನ್ನು ತೋರಿಸಬಲ್ಲ ಎನ್ನುವುದು ನಿಜವಾಗಿ ಇನ್ನು ಕಾಲ ನಿರ್ಣಯಿಸಬೇಕಾದ ವಿಚಾರ.

***

ಪ್ರೆಸಿಡೆಂಟ್ ಆಗಿದ್ದಾಗ ಬಿಲ್ ಕ್ಲಿಂಟನ್ ಅದೇನೇನನ್ನೋ ಮಾಡಲಿಲ್ಲವೇ ಎಂದು ಪ್ರಶ್ನೆಗಳು ಏಳುವುದು ಸಹಜ - "What I think is what I say, what I say is what I do!" ಎಂದು ಕೆಲವು ತಿಂಗಳುಗಳ ಹಿಂದೆ ಎದೆ ತಟ್ಟಿಕೊಂಡು ನ್ಯೂ ಯಾರ್ಕ್ ಗವರ್ನರ್ ಪಟ್ಟ ಏರಿ ಮುಂದೆ ಮೇಲೆ ಬರಬೇಕಾಗಿದ್ದ ಸ್ಪಿಟ್ಝರ್ ಗೂ ಅಂದಿನ ಪ್ರೆಸಿಡೆಂಟ್ ಕ್ಲಿಂಟನ್ನ್ ಗೂ ಇರೋ ಸವಾಲುಗಳು ಬೇರೆಯವೇ ಅನ್ನೋದು ನನ್ನ ಅಭಿಮತ.

ಒಟ್ಟಿನಲ್ಲಿ ನ್ಯೂ ಯಾರ್ಕ್ ರಾಜ್ಯ, ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತೊಬ್ಬ ಮುಖಂಡ/ಮುಂದಾಳುವನ್ನು ಕಳೆದುಕೊಂಡಿದೆ. ದಶಕಗಳ ಛಲ, ಮುಂಬರುವ ಪ್ರವೃತ್ತಿ, ಆಶಾವಾದ ಹಾಗೂ ಹಾವರ್ಡ್ ಶಿಕ್ಷಣ ಇವೆಲ್ಲವೂ ಒಂದೇ ಒಂದು ಸುದ್ದಿಯಲ್ಲಿ ತೊಳೆದು ಹೋದ ಹಾಗಿದೆ. ದೇಶದ ರಾಜಕಾರಣ ಒಬ್ಬ ಪ್ರಬುದ್ಧ ಲೀಡರ್‌ನನ್ನು ಇಲ್ಲದಂತಾಗಿಸಿಕೊಂಡಿದೆ.

ಅಮೇರಿಕದಲ್ಲಿ ಜನ ಇತ್ತೀಚೆಗೆ ಸ್ಟಾಕ್ ಮಾರ್ಕೆಟ್ ಸ್ಕ್ಯಾಂಡಲ್ಲುಗಳಲ್ಲಿ (ಎನ್ರಾನ್, ಎಮ್‌ಸಿಐ, ಇತ್ಯಾದಿ) ಬಳಲಿ ತಮ್ಮ ಮುಖಂಡರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ Integrity (Truthfulness, Honest and Trust worthiness) ಯನ್ನು ನಿರೀಕ್ಷಿಸುವುದು ಸಹಜವೇ. ಇರಾಕ್ ಯುದ್ಧದಲ್ಲಿ ಹಲವಾರು ಸುಳ್ಳನ್ನು ಹೇಳಿದ ಅಡ್ಮಿನಿಷ್ಟ್ರೇಷನ್ನ್ ಬಗ್ಗೆ ಹಲವಾರ ಅಸಮಧಾನವೂ ಇರಬಹುದು. ಇವೆಲ್ಲ ಹಿನ್ನೆಲೆಯಲ್ಲಿ ಸ್ಪಿಟ್ಝರ್ ಭವಿಷ್ಯವನ್ನು ಒರೆ ಹಾಕಿ ನೋಡಿದರೆ ನನಗಂತೂ ಮೂಸೆಯಲ್ಲಿ ಕರಗಿ ಹೊಳೆಯುವ ಬಂಗಾರದ ಬದಲು ಸುಟ್ಟು ಕರಕಲಾದ ಕಟ್ಟಿಗೆಯ ಅವಶೇಷವೇ ಕಾಣುತ್ತದೆ.

ಇನ್ನು ಸ್ಪಿಟ್ಝರ್ ಅನ್ನು ಆತನ ದೇವರೇ ಕಾಪಾಡಬೇಕು!

3 comments:

Santhu said...

Eliot Spitzer ಬಗ್ಗೆ ಓದಿ ನಂಗೂ ಬೇಜಾರಾಯಿತು. ಗುಡ್ಡ ಹತ್ತೋವಾಗ ಇದ್ದ ಎಥಿಕ್ಸ್ ನ ತುದಿ ಮುಟ್ಟಿದ್ಮೇಲ್ ಬಿಟ್ರೆ ಹೀಗೆ ಆಗೋದ್ ಅನ್ಸುತ್ತೆ ಅಲ್ವಾ?

L said...

ಅದಲ್ಲ ಮಜಾ ಸತೀಶ್- ನಮ್ಮಲ್ಲಿ ಮಠಾಧಿಪತಿಗಳನ್ನೂ ಸಹ ಅವರ ಪೀಠದಿಂದ ಇಳಿಸಲು ಇಷ್ಟು ಹಗರಣ ಸಾಕೆ ಹೇಳಿ ;-) ಪೂರ್ವ ಪಷ್ಚಿಮಗಳ ಅಂತರ... ನಿರಂತರ...

Satish said...

ಸಂತು,
ಸ್ಪಿಟ್ಝರ್ ಕಥೆ ಮುಗಿಯಿತು ಬಿಡಿ, ಅಂತಾ ಮಹಾನುಭಾವರು ಜಗತ್ತನ್ನು ನೋಡೋ ರೀತಿಯೇ ಬೇರೆ.

L,
ನಮ್ಮ ಮಠಾಧಿಪತಿಗಳು ಪುಣ್ಯವಂತರು, ಪೂರ್ವ ಪಶ್ಚಿಮಗಳ ಅಂತರವೇನೇ ಇರಲಿ, ಜನರು ಮಾತ್ರ ಎಲ್ಲಿ ಹೋದರೂ ಒಂದೇ!