Wednesday, April 02, 2008

ಚಿಲ್ರೆ ಜನಾ ಸಾರ್...

ಇವರು ಕಟ್ಟಿಕೊಂಡ ಪ್ರಾಸೆಸ್ಸುಗಳೇ ಇವರನ್ನ ಕೊನೆಗೆ ಕಟ್ಟಿಕೊಳ್ಳೋದು ಅಂತ ಅನ್ನಿಸಿದ್ದು, ಕೇವಲ ಎರಡು ಸೆಂಟುಗಳ ಸಲುವಾಗಿ ಇಪ್ಪತ್ತು ಡಾಲರ್ ಚಿಲ್ಲರೆ ಮಾಡಿಸಬೇಕಾದ ಪ್ರಸಂಗ ಒದಗಿ ಬಂದಾಗ. ನನ್ನ ಹತ್ತಿರ ಇದ್ದ ಡಾಲರ್ ಬಿಲ್ ಒಂದರಲ್ಲಿ ನಾನು ಏನನ್ನೋ ಕೊಂಡುಕೊಳ್ಳುತ್ತೇನೆ ಎಂದು ಅಂಗಡಿಯನ್ನು ಹೊಕ್ಕ ನನಗೆ ಬೇಕಾದ ವಸ್ತು ಒಂದು ಡಾಲರ್ ಒಳಗಡೆ ಇದ್ದರೂ ಅದಕ್ಕೆ ಏಳು ಪ್ರತಿಶತ ಟ್ಯಾಕ್ಸ್ ಸೇರಿಸಿ ಒಟ್ಟು ಬಿಲ್ ಡಾಲರಿನ ಮೇಲೆ ಎರಡು ಸೆಂಟ್‌ಗಳಾದಾಗ ನನ್ನ ಬಳಿ ಇದ್ದ ಹಣಕಾಸಿನ ಸಾಧನ ಸಾಮಗ್ರಿಗಳು ಒಮ್ಮೆ ಗರಬಡಿದು ಹೋಗಿದ್ದವು: ಈ ಕಡೆ ಡೆಬಿಟ್, ಕ್ರೆಡಿಟ್ ಕಾರ್ಡ್ ಉಪಯೋಗಿಸಲಾರದ ದೀನತೆ, ಆ ಕಡೆ ಇಪ್ಪತ್ತ್ ಡಾಲರುಗಳನ್ನು ಎರಡು ಸೆಂಟಿನ ಸಲುವಾಗಿ ಮುರಿಸಲು ಹಿಂಜರಿದ ಕೊಸರಾಟ ಜೊತೆಗೆ ಅಂಗಡಿಯ ಎಲೆಕ್ಟ್ರಾನಿಕ್ ವ್ಯವಸ್ಥೆಯಲ್ಲೇ ಹುಟ್ಟಿ ಬೆಳೆದವು ಎನ್ನುವಂತೆ ಆಡುವ ಒಂದು ಸೆಂಟನ್ನು ಬಿಟ್ಟೂ ಕೆಲಸ ಮಾಡಲಾರೆ ಎನ್ನುವ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ಪ್ರಾಸೆಸ್ಸುಗಳು.

ಈ ಒಂದು ಅಥವಾ ಎರಡು ಸೆಂಟುಗಳ ಹಣೆಬರಹವೇ ಇಷ್ಟು - ದಾರಿಯಲ್ಲಿ ಬಿದ್ದರೂ ಯಾರೂ ಅವನ್ನು ಮೂಸಿ ನೋಡದಂಥವುಗಳು, ಅವುಗಳನ್ನು ಉತ್ಪಾದಿಸುವುದರ ಒಟ್ಟು ಮೊತ್ತ ಅವುಗಳ ಮುಖಬೆಲೆಗಿಂತ ಹೆಚ್ಚಿರುವಂತಹವು. ನಮ್ಮ ಕೆಫೆಟೇರಿಯಾ ಮೊದಲಾದ ಸ್ಥಳಗಳಲ್ಲಿ ಸೇಲ್ಸ್ ರಿಜಿಸ್ಟರ್ ಪಕ್ಕದಲ್ಲಿ ಕೆಲವರು ಚೇಂಜ್ ತೆಗೆದುಕೊಳ್ಳದೇ ಬಿಟ್ಟು ಹೋದ ಕಾಪರ್ ಕಾಯಿನ್ನುಗಳನ್ನು ಇಟ್ಟಿರುತ್ತಾರೆ, ನನ್ನಂತಹ ಕಂಜೂಸು ಮನುಷ್ಯರಿಗೆ ಉಪಯೋಗಕ್ಕೆ ಬರಲಿ ಎಂದು! ನನ್ನಂತಹವರು ಎಂದರೆ, ಅನೆಯ ಹಾಗಿನ ಡಾಲರನ್ನು ಹೇಗೆ ಬೇಕೆಂದರಲ್ಲಿ ಎಲ್ಲಿ ಬೇಕೆಂದರಲ್ಲಿ ಹೋಗಗೊಟ್ಟು, ಒಂದೆರಡು ಸೆಂಟುಗಳ ಬಾಲವನ್ನು ಹಿಡಿದು ಎಳೆಯುವಂತಹವರು - ಹೆಚ್ಚೂ ಕಡಿಮೆ ಇನ್ನೊಬ್ಬರ ಒಂದೆರಡು ಸೆಂಟುಗಳನ್ನು ಧಾರಾಳವಾಗಿ ಬಳಸಿದ್ದಿದೆಯೇ ಹೊರತು, ಊಹ್ಞೂ, ನಾವಂತೂ ಕೈ ಎತ್ತಿಯೂ ಇನ್ನೊಬ್ಬರಿಗೆ ಕೊಟ್ಟವರಲ್ಲ. ನಮ್ಮಂತಹವರಿಗೆ ಸಿಂಹಸ್ವಪ್ನವಾಗಿಯೆಂದೇ ಈ ಕಟ್ಟು ನಿಟ್ಟಿನ ಚಿಲ್ಲರೆ ಎಣಿಸಿ ಲೆಕ್ಕ ಇಟ್ಟುಕೊಳ್ಳುವ ಟರ್ಮಿನಲ್ಲುಗಳು, ಅವುಗಳನ್ನು ನಾನು ಶಪಿಸೋದೇ ಹೆಚ್ಚು.

ನೀವು ತರಕಾರಿ ತೆಗೆದುಕೊಳ್ಳೋದಕ್ಕೆ ಯಾವತ್ತಾದರೂ ಫಾರ್ಮರ್ಸ್ ಮಾರ್ಕೆಟ್ಟಿಗೆ ಹೋಗಿ ನೋಡಿ, ಅಲ್ಲಿನ ತೂಕಗಳಾಗಲೀ, ಅಳತೆಗಳಾಗಲೀ ಮೇಲಾಗಿ ಚಿಲ್ಲರೆ ಪ್ರಾಸೆಸ್ಸುಗಳಾಗಲೀ ಎಲ್ಲವೂ ಧಾರಾಳವಾಗಿರುತ್ತವೆ. ನಮ್ಮೂರಿನ ಸಂತೆಯಲ್ಲಿ ಯಾವನಾದರೂ ಬೀನ್ಸು-ಬದನೇಕಾಯಿಗಳನ್ನು ಕೆಜಿ ಕಲ್ಲಿಗೆ ನಿಖರವಾಗಿ ತೂಗಿದನೆಂದರೆ - ’ಏನೂ, ಬಂಗಾರ ತೂಗ್‌ದಂಗ್ ತೂಗ್ತೀಯಲಾ’ ಎಂದು ಯಾರಾದರೂ ಬೈದಿರೋದು ನಿಜ. ಆದರೆ, ಈ ಪಾಯಿಂಟ್ ಆಫ್ ಸೇಲ್ಸ್ ಟರ್ಮಿನಲ್ಲುಗಳಿಗೆ ಧಾರಾಳತೆಯೆನ್ನುವುದನ್ನು ಕಲಿಸಿದವರು ಯಾರು? ಒಂದು ಪೌಂಡಿಗೆ ಇಂತಿಷ್ಟು ಬೆಲೆ ಎಂದು ಮೊದಲೇ ಪ್ರೊಗ್ರಾಮ್ ಮಾಡಿಸಿಕೊಂಡಿರುವ ಇವುಗಳು, ನೀವು ಆಯ್ದುಕೊಂಡ ಪ್ರತಿಯೊಂದು ವಸ್ತುವಿನ ಅಣು-ಅಣುವಿಗೂ ಆ ರೇಟ್ ಅನ್ನು ಅನ್ವಯಿಸಿ, ಅದರ ಒಟ್ಟು ಮೊತ್ತವನ್ನು ನಿಮ್ಮ ರಶೀದಿಗೆ ಸೇರಿಸದಿದ್ದರೆ ಅವುಗಳ ಜನ್ಮವೇ ಪಾವನವಾಗದು. ಇಂತಹ ಸಂದರ್ಭಗಳಲ್ಲೇ ನನಗನ್ನಿಸೋದು, ಧಾರಾಳತೆಗೂ-ಬಡತನಕ್ಕೂ ಅನ್ಯೋನ್ಯತೆ ಇದೆ ಎಂದು. ಹೆಚ್ಚು ಹೆಚ್ಚು ಸಿರಿವಂತರ ಜೊತೆ ವ್ಯವಹಾರ ಮಾಡಿ ನೋಡಿ ಅನುಭವಿಸಿದವರಿಗೆ ಗೊತ್ತು, ಅಲ್ಲಿ ಪ್ರತಿಯೊಂದು ಪೈಸೆಗೂ ಅದರ "ವ್ಯಾಲ್ಯೂ" ಇದೆ, ಅದೇ ಬಡತನದಲ್ಲಿ ಇಂದಿನ ನೂರು ರುಪಾಯಿ ಇಂದಿದೆ, ಅದು ಒಂದಲ್ಲ ಒಂದು ರೀತಿಯಲ್ಲಿ ಕೆಲಸಕ್ಕೆ ಬಂದರಾಯಿತು, ಅದರ ಹಿಂದು-ಮುಂದಿನ ಕರ್ಮ-ಮರ್ಮವನ್ನು ನೆನೆಸಿಕೊರಗುವ ಮನಸ್ಥಿತಿಯೇ ಅಲ್ಲಿಲ್ಲ!

ಇಪ್ಪತ್ತು ಡಾಲರನ್ನು ಮುರಿಸಲಿ ಬಿಡಲಿ, ನಾನು ತೆರಬೇಕಾದರ್ ಎರಡು ಸೆಂಟ್ ಅನ್ನು ಅಂಗಡಿಯವರು ಬಿಡುವಂತಿದ್ದರೆ...ಎಂದು ಒಮ್ಮೆ ಅನ್ನಿಸಿದ್ದು ನಿಜ. ನಮ್ಮೂರಿನ ಶೆಟ್ಟರ ಕಿರಾಣಿ ಮಳಿಗೆಗಳಲ್ಲಿ ಹಾಗೆ ಹಿಂದೆ ಮಾಡಿದ ಅನುಭವ ನನ್ನ ಈ ಕಸಿವಿಸಿಗೆ ಇಂಬು ನೀಡಿರಬಹುದು, ಅಥವಾ ’ಏನು ಎರಡು ಸೆಂಟ್ ತಾನೇ...’ ಎನ್ನುವ ಧಾರಾಳ ಧೋರಣೆ (ನನ್ನ ಪರವಾಗಿ) ಕೆಲಸಮಾಡಿರಬಹುದು. ಈ ಆಲೋಚನೆಗಳ ಒಟ್ಟಿಗೇ, ಹೀಗೇ ನನ್ನಂತಹವರಿಗೆ ಎರಡೆರಡು ಸೆಂಟುಗಳನ್ನು ಬಿಡುತ್ತಾ ಬಂದರೆ ಅಂಗಡಿಯವನ ಕಥೆ ಏನಾದೀತೂ ಎನ್ನುವ ಕೊರಗೊಂದು ಹುಟ್ಟುತ್ತದೆ, ಅದರ ಜೊತೆಗೇ ಜನರೇಕೆ ಸ್ವಲ್ಪ ಉದಾರಿಗಳಾಗಬಾರದು ಎನ್ನುವ ಧಾರಾಳತೆಯೂ ಒದಗಿ ಬರುತ್ತದೆ. ಲೆಕ್ಕ ಅನ್ನೋದು ಮನುಷ್ಯನ ಸೃಷ್ಟಿ, ಧಾರಾಳತೆ ಉದಾರತೆ ಮುಂತಾದವುಗಳು ಭಾವನೆಗಳು ಅವು ಲೆಕ್ಕಕ್ಕೆ ಸಿಕ್ಕುವವಲ್ಲ ಹೀಗಿರುವಾಗ ನಮ್ಮೂರಿನ ಧಾರಾಳ ಆಲೋಚನೆ ಅನುಭವಗಳ ಸಂತೆಯಲ್ಲಿ ಈ ಶ್ರೀಮಂತರ ನಾಡಿನ ಯಂತ್ರಗಳು ತೋರುವ ನಿಖರತೆಯನ್ನು ನಾನು ಯಾವ ಮಟ್ಟದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಿ? ಬರೀ ನನ್ನೊಳಗಿನ ಉದಾರತೆಯನ್ನು ಎಲ್ಲರಿಗೂ ಸಮವೆಂದು ಹೊಸ ಸಾಮಾಜಿಕ ಚಳುವಳಿಯನ್ನು ಹುಟ್ಟು ಹಾಕಲೇ, ಅಥವಾ ಬಡವರೊಳಗಿನ ಲೆಕ್ಕಕ್ಕೆ ಸಿಗದ ಅನಂತವಾದ ಮೌಲ್ಯವನ್ನು ಎಲ್ಲರಲ್ಲೂ ಇರಲಿ ಎಂದು ಹಾರೈಸಲೇ.

ಏನೇ ಹೇಳಿ, ನನ್ನ ಅನಿಸಿಕೆಯ ಪ್ರಕಾರ ಭಿಕ್ಷುಕರಿಗೂ ಬಡವರ ಮನೆಯಲ್ಲೇ ಸುಭಿಕ್ಷವಾಗಿ ಸಿಕ್ಕೀತು, ಅದೇ ಶ್ರೀಮಂತರ ಮನೆಯ ಮುಂದೆ ’ನಾಯಿ ಇದೆ ಎಚ್ಚರಿಕೆ’ ಎನ್ನುವ ಫಲಕವನ್ನು ದಾಟಿ, ಒಂದು ವೇಳೆ ಮನೆಯವರು ಪುರುಸೊತ್ತು ಮಾಡಿಕೊಂಡು ತಮ್ಮ ದೊಡ್ಡ ಮನೆಯಲ್ಲಿನ ಮುಂಬಾಗಿಲನ್ನು ತೆರೆದು ಭಿಕ್ಷುಕರನ್ನು ಗಮನಿಸುವ ಪ್ರಸಂಗ ಬಂದರೂ ಅದು ’ನಿನಗೇನಾಗಿದೆ ಧಾಡಿ ದುಡಿದು ತಿನ್ನಲಿಕ್ಕೆ?’ ಎನ್ನುವ ತತ್ವ ಪ್ರದಾನವಾದ ಬೈಗಳ ಕೆಲವೊಮ್ಮೆ ಸ್ವಲ್ಪ ಭಿಕ್ಷೆಯನ್ನೂ ಹೊತ್ತು ತಂದೀತು. ಏನ್ ಹೇಳ್ಲಿ, ಚಿಲ್ರೇ ಜನಾ ಸಾರ್, ಪ್ರತಿಯೊಂದಕ್ಕೂ ಯೋಚಿಸೋರು - ಅವರೇ ಬಡವರು; ಹೋಗಿದ್ದು ಹೋಗ್ಲಿ ಏನ್ ಬೇಕಾದ್ರಾಗ್ಲಿ ಅನ್ನೋರೇ ಶ್ರೀಮಂತರು, ಬುದ್ಧಿವಂತರು - ಯಾಕೆಂದ್ರೆ ನಿನ್ನೆ-ನಾಳೆಗಳ ಬಗ್ಗೆ ಯೋಚಿಸಿರೋ ಧಣಿಗಳು ಕಡಿದು ಕಟ್ಟಿಹಾಕಿರೋದು ಅಷ್ಟರಲ್ಲೇ ಇದೆ, ಏನಂತೀರಿ?

No comments: