Sunday, April 06, 2008

ಬೇವು-ಬೆಲ್ಲ ಇರದ ಹೊಸ ವರ್ಷಗಳು

ಓಹ್, ನಮಸ್ಕಾರ, ನಾವು ದಕ್ಷಿಣ ಭಾರತದ ಮಂದಿ ಹಾಗೂ ಇದು ನಮಗೆ ಹೊಸ ವರ್ಷ ಮತ್ತು ಅದರ ಆಚರಣೆ! ಅಯ್ಯೋ, ಇದೇನ್ odd ಈಗ ಏಪ್ರಿಲ್ ಮಧ್ಯೆ ಹೊಸವರ್ಷ ಶುರುವಾಯ್ತು ಅಂತೀರಾ? ಹಾಗೇ ಸಾರ್, ನಮ್ಮ ಕ್ಯಾಲೆಂಡರಿನಲ್ಲಿ ಮಹತ್ವದ ದಿನಗಳೆಲ್ಲ ಆರಂಭವಾಗೋದು ಇಂಗ್ಲೀಷಿನ ಕ್ಯಾಲೆಂಡರಿನ ಮಧ್ಯ ಭಾಗಕ್ಕೆ, ಅದನ್ನ odd ಅಂಥಾ ಬೇಕಾದ್ರೂ ಕರೆದುಕೊಳ್ಳಿ, even ಅಂಥಾನಾದ್ರೂ ಉದ್ಗರಿಸಿ ನಮಗೇನೂ ಇಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಆರಂಭವಾಗೋದಕ್ಕೆ ಮೊದಲೂ ನಮ್ಮ ದಿನಗಳು ಹೀಗೇ ಇದ್ವು ಅನ್ನೋದಕ್ಕೆ ಹಲವರು ಪುರಾವೆಗಳನ್ನೇನು ಒದಗಿಸೋ ಅಗತ್ಯ ಇಲ್ಲ, ಒಂದೇ ಮಾತ್ನಲ್ಲಿ ಹೇಳೋದಾದ್ರೆ ನಮ್ಮದು ಹಳೇ ಸಂಸ್ಕೃತಿ, ಹಳೇ ಪರಂಪರೆ, ನಾವು ಹಳಬರು ಅಷ್ಟೇ!

ನಿಮಗೆ ನಂಬಿಕೆ ಬರಲಿಲ್ಲಾಂತಂದ್ರೆ ನಿಮ್ಮ ಲಾನೋ ಗಾರ್ಡನ್ನಿನಲ್ಲಿರೋ ಗಿಡಮರಗಳನ್ನ ಹೋಗಿ ವಿಚಾರಿಸಿಕೊಂಡು ಬನ್ನಿ, ನಿಮ್ಮ Spring ಸೀಸನ್ ಮಾರ್ಚ್ ಇಪ್ಪತ್ತೊಂದಕ್ಕೇ ಶುರುವಾಗಿರಲೊಲ್ಲದ್ಯಾಕೆ, ಈ ಗಿಡಮರಗಳಿಗೆ ಏಪ್ರಿಲ್ ಆರನೇ ತಾರೀಖ್ ಚಿಗುರಿಕೊಳ್ಳೀ ಅಂಥಾ ನಾನೇನೂ ಆರ್ಡರ್ ಕಳಿಸಿಲ್ಲಪ್ಪಾ. ಈಗಾದ್ರೂ ಗೊತ್ತಾಯ್ತಾ ನಮ್ ಚೈತ್ರ ಮಾಸ, ವಸಂತ ಋತು ಅನ್ನೋ ಕಾನ್ಸೆಪ್ಟೂ, ಎನ್ ತಿಳಕೊಂಡಿದೀರಾ ನಮ್ಮ ಪರಂಪರೇನೇ ದೊಡ್ದು, ಅದರ ಮರ್ಮಾ ಇನ್ನೂ ಆಳ...ಆದ್ರೆ ನನಗೆ ಅಷ್ಟು ಡೀಟೇಲ್ ಗೊತ್ತಿಲ್ಲ ಏನ್ ಮಾಡ್ಲಿ ಹೇಳ್ರಿ?

***

ಬೇವು-ಬೆಲ್ಲ ತಿನ್ನದೇ ಯುಗಾದಿಯನ್ನೂ ಹೊಸವರ್ಷವನ್ನೂ ಆಚರಿಸಿಕೊಳ್ಳುತಿರೋ ಹಲವಾರು ವರ್ಷಗಳಲ್ಲಿ ಇದೂ ಒಂದು ನೋಡ್ರಿ. ಅವನೌವ್ವನ, ಏನ್ ಕಾನ್ಸೆಪ್ಟ್ ರೀ ಅದು, ಬದುಕಿನಲ್ಲಿ ಬೇವು-ಬೆಲ್ಲ ಎರಡೂ ಇರಬೇಕು ಅಂತ ಅದು ಯಾವನು ಯಾವತ್ತು ಕಾನೂನ್ ಮಾಡಿದ್ದಿರಬಹುದು? ಭಯಂಕರ ಕಾನ್ಸೆಪ್ಟ್ ಅಪಾ, ಎಂಥೆಂಥಾ ಫಿಲಾಸಫಿಗಳನ್ನೆಲ್ಲ ಬೇವು-ಬೆಲ್ಲದಲ್ಲೇ ಅರೆದು ಮುಚ್ಚಿ ಬಿಡುವಷ್ಟು ಗಹನವಾದದ್ದು. ನಾವೆಲ್ಲ ಹಿಂದೆ ಬೇವಿನ ಮರಾ ಹತ್ತಿ ಪ್ರೆಶ್ ಎಲೆಗಳನ್ನು ಕೊಯ್ದುಕೊಂಡು ಬಂದು ಪಂಚಕಜ್ಜಾಯದೊಳಗೆ ಅಮ್ಮ ಸೇರಿಸಿಕೊಡ್ತಾಳೆ ಅಂತಲೇ ಕಣ್ಣೂ-ಬಾಯಿ ಬಿಟಗೊಂಡು ಕಾಯ್‌ಕೊಂತ ಕುಂತಿರತಿದ್ವಿ. ನಾನಂತೂ ಬೇವಿನ ಮರದ ಮ್ಯಾಲೇ ಒಂದಿಷ್ಟು ಎಲೆಗಳನ್ನು ತಿಂದು ಒಂದ್ ಸರ್ತಿ ಕಹಿ ಕಷಾಯ ಕುಡಿದೋರ್ ಮಖಾ ಮಾಡಿದ್ರು, ಮತ್ತೊಂದು ಸರ್ತಿ ಇವನು ಬೇವಿನ ಎಲೇನೂ ಹಂಗೇ ತಿಂತಾನೇ ಭೇಷ್ ಎಂದು ಯಾರೋ ಬೆನ್ನು ಚಪ್ಪರಿಸಿದ ಹಾಗೆ ನನಗೆ ನಾನೇ ನೆನೆಸಿಕೊಂಡು ನಕ್ಕಿದ್ದಿದೆ. ನಮ್ಮೂರ್ನಾಗ್ ಆಗಿದ್ರೆ ಇಷ್ಟೊತ್ತಿಗೆ ಕಹಿ ಬೇವಿನ ಗಿಡಗಳು ಒಳ್ಳೇ ಹೂ ಬಿಟಗೊಂಡು ಮದುವೆಗೆ ಅಲಂಕಾರಗೊಂಡ ಹೆಣ್ಣಿನಂತೆ ಕಂಗೊಳಿಸುತ್ತಿದ್ದವು ಅಂತ ಆಲೋಚ್ನೆ ಬಂದಿದ್ದೆ ತಡ ಇಲ್ಲಿ ನಮ್ಮ ಗಾರ್ಡನ್ನಿನ್ಯಾಗೆ ಏನ್ ನಡದತಿ ಅಂತ ನೋಡೋ ಆಸೆ ಬಂತು. ತಕ್ಷಣ ಇನ್ನೂ ನಲವತ್ತರ ನಡುವೆ ಉಷ್ಣತೆ ಇರೋ ಈ ಊರಿನ ಛಳಿಗೆ ಹೆದರಿಕೆ ಆಗಲಿ ಎನ್ನುವಂತೆ ನನ್ನಲ್ಲಿದ ಬೆಚ್ಚನೆ ಜಾಕೆಟ್ ಒಂದನ್ನು ಹೊದ್ದು ಹೊರ ನಡೆದೆ.

ಮನೆಯ ಸುತ್ತಲಿನ ಹುಲ್ಲು ಹಾಸೋ, ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುತ್ತಿರೋ ನಿರುದ್ಯೋಗಿ ಯುವಕನ ಗಡ್ಡವನ್ನು ನೆನಪಿಗೆ ತಂದಿತು, ಈಗಲೋ ಆಗಲೋ ಚಿಗುರೊಡೆದು ಹುಲುಸಾಗಿ ಬೆಳೆಯುವ ಲಕ್ಷಣಗಳೆಲ್ಲ ಇದ್ದವು. ಹೊರಗಡೆಯ ಪೇಪರ್ ಬರ್ಚ್ ಮರಗಳು ಇಷ್ಟು ದಿನ ಗಾಳಿಗೆ ತೊನೆದೂ ತೊನೆದೂ ಕಷ್ಟಪಟ್ಟು ಕೆಲಸ ಮಾಡಿಯೂ ದಿನಗೂಲಿ ಸಂಬಳ ಪಡೆದು ಬದುಕನ್ನು ನಿಭಾಯಿಸೋ ಮನೆ ಯಜಮಾನನ ಮನಸ್ಥಿತಿಯನ್ನು ಹೊದ್ದು ನಿಂತಿದ್ದವು. ಅಕ್ಕ ಪಕ್ಕದ ಥರಾವರಿ ಹೂವಿನ ಗಿಡಗಳಲ್ಲಿ ಬದುಕಿನ ಸಂಚಾರ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟೇಷನ್ನಿನಲ್ಲಿ ಮುಂಜಾನೆ ಐದೂವರೆಗೆಲ್ಲಾ ಸಿಟಿಬಸ್ಸುಗಳು ಪ್ರಾರಂಭವಾಗಿ ಮೊದಲ ಟ್ರಿಪ್ ಹೊರಡುವಾಗ ಇರುವ ಗಲಾಟೆ ವಾತಾವರಣ ಇದ್ದಂತಿತ್ತು. ಇನ್ನು ನನಗೆ ತಿಳಿಯದ ಅನೇಕ ಹೂವಿನ ಮರಗಳು ಮುಂಬರುವ ಅದ್ಯಾವುದೋ ಜಾತ್ರೆಗೆ ಸಿದ್ಧವಾಗುವ ತೇರಿನಂತೆ ನಿಧಾನವಾಗಿ ಮೊಗ್ಗೊಡೆಯುತ್ತಿದ್ದವು. ಇಷ್ಟು ದಿನ ಬಲವಾಗಿ ಬೀಸಿದ ಗಾಳಿಯ ದೆಸೆಯಿಂದ ನಮ್ಮ ಮನೆಯ ಬದಿಯಲ್ಲಿನ ಬರ್ಚ್ ಮರವೊಂದರ ದೊಡ್ಡ ಗೆಲ್ಲು ಮುರಿದು ಸಂಪೂರ್ಣ ಕೆಳಗೆ ವಾಲಿಕೊಂಡಿದ್ದು ಸ್ವಲ್ಪ ಹಿಡಿದೆಳೆದರೂ ಕಿತ್ತು ಬರುವಂತಿತ್ತು, ಇನ್ನೇನು ಕಿತ್ತೇ ಬಿಡೋಣ ಎಂದು ಮನಸು ಮಾಡಿ ಗೆಲ್ಲನ್ನು ಮುಟ್ಟಿದವನಿಗೆ ಮುರಿದು ಬಿದ್ದರೂ ಚಿಗುರುವುದನ್ನು ಮರೆಯದ ಆ ಗೆಲ್ಲಿನ ಜೀವಂತಿಕೆಗೆ ನಾನೇಕೆ ಭಂಗ ತರಲಿ ಎಂದು ಕೀಳದೇ ಹಾಗೆ ಬಿಟ್ಟು ಬಂದದ್ದಾಯಿತು. ಒಟ್ಟಿಗೆ ವಸಂತನಾಗಮನ ನಮ್ಮ ಮನೆಗೂ ಬಂದಿದೆ, ಬೇವು-ಬೆಲ್ಲ ತಿನ್ನದಿದ್ದರೇನಂತೆ, ಆ ರೀತಿಯಲ್ಲಿ ನಾವೂ ಹೊಸವರ್ಷದ ಭಾಗಿಗಳೇ ಎಂದು ನನ್ನ ನೆರೆಹೊರೆಯೂ ಸಂತೋಷದ ಮುಖಭಾವ ಹೊದ್ದುಕೊಂಡದ್ದು ಸ್ವಲ್ಪ ಸಮಾಧಾನವನ್ನು ತಂದಿತು.

***

ನಮಗೆ ನಮ್ಮ ನೀತಿ ಚೆಂದ. ಆದರೆ ನಮ್ಮ ಹೊಸವರ್ಷ ನಮಗೆ ಗೊತ್ತಿರೋ ಒಂದಿಷ್ಟು ಜನರಿಗೆ ’ಹೊಸವರ್ಷದ ಶುಭಾಶಯಗಳು’ ಎಂದು ಹೇಳಿ ಮುಗಿಸುವಲ್ಲಿಗೆ ಸೀಮಿತವಾಗಿ ಹೋಯಿತಲ್ಲ ಎಂದು ಒಂದು ರೀತಿಯ ಕಸಿವಿಸಿ. ತೆಲುಗರೋ ಕನ್ನಡಿಗರೋ ಒಟ್ಟಿಗೆ ದಕ್ಷಿಣ ಭಾರತದ ಹೆಚ್ಚು ಜನ ಆಚರಿಸುವ ಹೊಸ ವರ್ಷದ ಆಚರಣೆ ಇದು. ಚಾಂದ್ರಮಾನ ಯುಗಾದಿ ಇರುವ ಹಾಗೆ ಸೂರ್ಯಮಾನದ ಯುಗಾದಿಯೂ ಇದೆ. ಬದುಕಿನಲ್ಲಿ ಸ್ವಾತಂತ್ರ್ಯ ಅಂದರೆ ಇದೇ ಇರಬೇಕು, ನಿಮಗೆ ಯಾವಾಗ ಬೇಕು ಆಗ ಆಚರಿಸಿಕೊಳ್ಳಿ ಎನ್ನುವ ಫ್ರೀಡಮ್! ನಿಮಗೆ ಯಾವ ದೇವರು ಬೇಕು ಅದನ್ನು ಪೂಜಿಸಿಕೊಳ್ಳಿ ಎನ್ನುವ ಧೋರಣೆ. ನಿಮ್ಮ ತರ್ಕ ನಿಮ್ಮ ನೀತಿ ನಿಮ್ಮ ಧರ್ಮ, ಅದ್ದರಿಂದಲೇ ಇರಬೇಕು ಸನಾತನ ಧರ್ಮಕ್ಕೆ ಯಾವುದೇ ಪ್ರವಾದಿಗಳಿರದಿದ್ದುದು. ಇದು ಮತವಲ್ಲ, ಧರ್ಮ, ಜೀವನ ಕ್ರಮ, ಸ್ವಭಾವ, ನಿಮ್ಮ-ನಮ್ಮ ರೀತಿ ನೀತಿ - ಅವೆಲ್ಲವೂ ಒಡಗೂಡಿಯೇ ನಾವು ಒಂದಾಗಿರೋದು - ವೈವಿಧ್ಯತೆಯಲ್ಲೂ ಏಕತೆ.

ನಿಮಗೆ ನಿಮ್ಮ ಹೊಸವರ್ಷ ಯಾವಾಗ ಬೇಕಾದರೂ ಆರಂಭವಾಗಲಿ, ನನಗಂತೂ ಹೊಸವರ್ಷ ಶುರುವಾಗಿದೆ...ಮುಂಬರುವ ದಿನಗಳು ನಮಗೆಲ್ಲ ಒಳ್ಳೆಯದನ್ನು ಮಾಡಲಿ!

ಹೊಸ ವರ್ಷದ ಶುಭಾಶಯಗಳು, ಸರ್ವಧಾರಿ ನಾಮ ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ!

4 comments:

Karthik said...

ಯುಗಾದಿಯ ಶುಭಾಶಯಗಳು. ನಮ್ಮ ಸಂಸ್ಕೃತಿನೇ ಸಂಸ್ಕೃತಿ ಬಿಡೀ ಸಾರ್. ಎಲ್ಲ ನಮ್ಮ ಹಬ್ಬಗಳೂ ಪ್ರಾಕೃತಿಕವಾಗಿದೆ.

1. ಸಂಕ್ರಾಂತಿ ಹಬ್ಬ ಛಳಿಗಾಲದಲ್ಲಿ ಬರೋದ್ರಿಂದ, ಎಳ್ಳು ಮತ್ತೆ ಎಣ್ಣೆ ಅಂಶ ಇರೋ ಅಂಥಾ ಪದಾರ್ಥಗಳ ಉಪಯೋಗ. ಎಳ್ಳು ಬೀರೋ ಸಂಪ್ರದಾಯದಿಂದ ಎಲ್ಲ ನಮ್ಮ ಬಂಧುಗಳ ಭೇಟಿ super concept

2. ಯುಗಾದಿ ಹಬ್ಬ ಅದೆಷ್ಟು ಸರಿಯಾದ ಸಮಯದಲ್ಲಿ ಬರುತ್ತದೆ ಅಲ್ಲ್ವ ? ಪ್ರಕೃತಿಯಲ್ಲಿ ಬದಲಾವಣೆಯಾಗಿ ಹೊಸ ಎಲೆ ಚಿಗುರುವ ಸಮಯಕ್ಕೆ ಸರಿಯಾಗಿ ಈ ಹಬ್ಬ

3. ರಾಮನವಮಿ ಸುಡು ಬೇಸಿಗೆಯಲ್ಲಿ ಬರುತ್ತದಾದ್ದರಿಂದ ಮನೆಯಲ್ಲಿ ಬೀದಿಯಲ್ಲಿ ಪಾನಕ ಕೋಸಂಬರಿಯ ಸಮಾರಾಧನೆ

ಹೀಗೀ ಎಲ್ಲ.. ಇದು ಕೆಲವು ಉದಾಹರಣೆ ಅಶ್ಟೆ.

ಒಟ್ನಲ್ಲಿ ನಮ್ ಸಂಸ್ಕೃತಿಯ ಔನ್ನತ್ಯಕ್ಕೆ ಸಾಟಿಯಿಲ್ಲ

Edgar Dantas said...

hey nice blog really enjoyed goin through it really nice post too.I really appreciate it
with regards
edgar dantas
www.gadgetworld.co.in

ಸುಪ್ತದೀಪ್ತಿ suptadeepti said...

ಶುಭಾಶಯಗಳು ಸಾರ್. ಹೊಸವರ್ಷಕ್ಕೆ ಸರಿಯಾಗಿ ಹೊಸತನಕ್ಕೊಂದು ಪ್ಲಾನ್ ಮಾಡಿ ಕಾಯ್ತಾ ಕೂತಿದೀರಲ್ಲ! ಅದಕ್ಕಾಗಿಯೂ ಶುಭಾಶಯಗಳು, ಹಾರೈಕೆಗಳು.

Satish said...

ಕಾರ್ತಿಕ್,
ನಮ್ಮ ಹಬ್ಬಗಳು ಸೊಗಸು ನಮ್ಮ ನಾಡಿನಲ್ಲಿ ಇನ್ನೂ ಚೆನ್ನಾಗಿರುತ್ತೆ, ಅಲ್ವೇ? ಇಲ್ಲಿ ಎಲ್ಲಿಂದ ರಾಮನವಮಿ ಪಾನಕ-ಕೋಸುಂಬರಿಯನ್ನು ಸವಿಯೋಣ!

ಎಡ್ಗರ್,
ಧನ್ಯವಾದಗಳು, ಆಗಾಗ್ಗೆ ಹೀಗೇ ಭೇಟಿಕೊಡ್ತಾ ಇರಿ.

ಸುಪ್ತದೀಪ್ತಿ,
ಹೊಸದಾಗಿ ಏನೋ ಒಂದು ಇರಲೇ ಬೇಕಲ್ವೇ? ಹೊಸತರ ನಿನಾದ ಇನ್ನೂ ಶುರುವಾಗಿಲ್ಲ! :-)