Sunday, February 10, 2008

ಮೌನದ ಮೊರೆ

ಇತ್ತೀಚಿನ ದಿನಗಳನ್ನ ವೇಗಮಯ ದಿನಗಳು ಎಂದು ಕರೆದುಕೊಂಡರೆ - ನಮ್ಮ ಮುಂದುವರೆದ ಟೆಕ್ನಾಲಜಿ, ಎಲ್ಲವೂ ಈ ಕೂಡಲೇ ಬೇಕು ಎನ್ನುವ ಮನಸ್ಥಿತಿಯ ಹಿನ್ನೆಲೆಯಲ್ಲಿ - ಯಾರೂ ಮೌನಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡೋದಿಲ್ಲವೇ ಎಂದು ಎಷ್ಟೋ ಸಾರಿ ಅನ್ನಿಸಿದ್ದಿದೆ. ನಮ್ಮ ಆಫೀಸಿನಲ್ಲಿ ನಡೆಯುವ ಮುಖಾಮುಖಿ ಮೀಟಿಂಗುಗಳಲ್ಲಾಗಲೀ ಅಥವಾ ಟೆಲಿಫೋನ್ ಮೂಲಕ ನಡೆಯೋ ಕಾನ್‌ಫರೆನ್ಸ್ ಕರೆಗಳಾಗಲೀ ಇವು ಯಾವುದರಲ್ಲೂ ಪ್ರಶ್ನೆಯೊಂದರ ಉತ್ತರ ಹೊರಹೊಮ್ಮುವುದಕ್ಕೂ ಕಾಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೇ ನನ್ನ ಅನುಭವ. ಯಾರೋ ಪ್ರಶ್ನೆ ಕೇಳಿದ್ದಕ್ಕೆ ಥಟ್ಟನೆ ಉತ್ತರ ಹೇಳಿಬಿಡಬೇಕು, ಇಲ್ಲವೆಂದಾದರೆ ನಮಗೆ ಉತ್ತರ ಗೊತ್ತಿಲ್ಲವೆಂದು ಅವರೇ ತಮ್ಮ ಪ್ರಶ್ನೆಯನ್ನು ಉತ್ತರಿಸಿಕೊಂಡಾರು.

ಮಾತು-ಮೌನದಲ್ಲಿ ’ಪಂಚವಟಿ’ಯ ಲಕ್ಷ್ಮಣನ ಬಗ್ಗೆ ಬರೆದಿದ್ದೆ, ಕೆಲವೊಮ್ಮೆ ನಮ್ಮ ಮಾತುಗಳನ್ನು ನಾವು ಮನಸಿನಲ್ಲಿಯೋ ಹೊರಗೋ ಹರವಿಕೊಂಡು ಅದರ ವಿಸ್ತಾರವನ್ನು ನೋಡಿಕೊಳ್ಳೋದು ಸಹಜ. ಯಾರೋ ಒಂದು ಪ್ರಶ್ನೆಯನ್ನು ಕೇಳಿದರೆಂದು ಅವರ ಪ್ರಶ್ನೆ ಕೇಳಿ ನಿಲ್ಲಿಸಿದ ನಂತರ ನಮ್ಮ ಉತ್ತರದ ಧ್ವನಿ ಹುಟ್ಟುವ ಮೊದಲು ಇರುವ ಮೌನವನ್ನು ಕಡಿಮೆ ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ, ಅವರು ಕೇಳಿದ ಪ್ರಶ್ನೆಗೆ ನಾವು ಕೊಡಬೇಕಾದ ಉತ್ತರಕ್ಕೆ ಒಂದೆರಡು ಕ್ಷಣಗಳನ್ನು ಹೆಚ್ಚು ತೆಗೆದುಕೊಂಡರಾಗದೇ? ಲೀಡರ್‌ಶಿಪ್ ಕಾನ್ಟೆಕ್ಸ್ಟಿನಲ್ಲಿ ಆಕ್ಟಿವ್ ಲಿಸನಿಂಗ್ (active listening) ಬಗ್ಗೆ ಏನೇ ಹೇಳಿ ಕೊಟ್ಟಿರಲಿ, ನಾವು ಇನ್ನೊಬ್ಬರಿಗೆ ಕೊಡಬೇಕಾದ ಉತ್ತರ ಅವರ ಪ್ರಶ್ನೆಯೊಂದಿಗೆಯೇ ನಮ್ಮ ತಲೆಯಲ್ಲಿ ಆರಂಭವಾಗುತ್ತದೆ ಎಂಬುದು ಸುಳ್ಳಲ್ಲ. ಯಾರು ಏನು ಹೇಳಿದರು ಎಂಬುವುದಕ್ಕಿಂತ ಅವರು ಹೇಳಿದ್ದಕ್ಕೆ ನಾವೇನು ಹೇಳಬೇಕು ಎಂದು ನಮ್ಮ ಮನಸ್ಸಿನ ವ್ಯಾಪಾರದಲ್ಲಿ ಮುಳುಗಿ ಹೋಗುವುದಿದೆ ನೋಡಿ, ಅದು ನಿಜವಾಗಿಯೂ ಚಿಂತಿಸಬೇಕಾದ ವಿಚಾರ.

ಅಮೇರಿಕನ್ನರು ಏಕೆ ಉದ್ದುದ್ದವಾಗಿ ಮಾತನಾಡುತ್ತಾರೆ ಎಂದು ಕೇಳಿಕೊಂಡರೆ ನಿಜವಾದ ಕಾರಣದ ಬದಲು ನಮ್ಮ ಸುಬ್ಬನ ಶೈಲಿಯಲ್ಲಿ ಹಗುರವಾದ ಉತ್ತರವೊಂದು ಹೊಳೆಯಿತು. ಎದುರಿನವರು ಕೇಳಿದ ಪ್ರಶ್ನೆಯೇನೇ ಇರಲಿ ನಿಮ್ಮ ಉತ್ತರವನ್ನು ಈ ರೀತಿ ಆರಂಭಿಸಿದ್ದಾದರೆ ಈ ಮೊದಲಿನ ಕೆಲವು ವಾಕ್ಯಗಳನ್ನು ಹೇಳುವ ಹೊತ್ತಿಗಾದರೂ ನಿಮಗೆ ನಿಜವಾದ ಉತ್ತರ ಹೊಳೆದೀತು

"First of all, he brings up a very valid point, I mean, looking at it from the
context of this scenario, more or less, he kind of read my mind..."

ಸುಮ್ನೇ ತಮಾಷೆಗೆ ಹೇಳ್ದೆ ಅಷ್ಟೇ, ನೀವು ವೆದರ್ರೋ ಮತ್ತೊಂದನ್ನೋ ಸೇರಿಸಿಕೊಂಡೋ, ಅಥವಾ ಅವರೂ ಇವರಿಗೆ ಥ್ಯಾಂಕ್ಯೂಗಳನ್ನು ಸೇರಿಸಿಕೊಂಡು ನಿಮ್ಮ ಆರಂಭ ವಾಕ್ಯವನ್ನು ಬೇಕಾದಷ್ಟು ಉದ್ದ ಮಾಡಿಕೊಳ್ಳಬಹುದು ಸಂದರ್ಭಕ್ಕನುಸಾರವಾಗಿ, ನಿಮಗೆ ಸಿಕ್ಕೋದು ಹತ್ತು ಸೆಕೆಂಡ್ ಹೆಚ್ಚಿಗೆ ಅದರ ಮೂಲಕ ನೀವು ಕೊಡಬೇಕಾದ ಉತ್ತರವನ್ನು ಇನ್ನಷ್ಟು ಯೋಚಿಸಿಕೊಳ್ಳೋದಕ್ಕೆ ಸಮಯ ಸಿಕ್ಕಿದ ಹಾಗೆ ಆಯ್ತು ತಾನೆ?

***

ಏಕೋ ನಾವೆಲ್ಲ ಮೌನದ ಮೊರೆ ಹೋಗೋ ಬದಲು ಗದ್ದಲದ ಮೊರೆ ಹೋಗುತ್ತಿದ್ದೇವೆ. ಸುತ್ತಲಿನ ಪರಿಸರದ್ದು ಅದರದ್ದೇ ಆದ ಒಂದು ಶಬ್ದ ಗಾಂಭೀರ್ಯ ಇದ್ದರೆ ನಾವು ನಮ್ಮ ಐಪಾಡ್‌ಗಳನ್ನು ಕಿವಿಗೆ ಸಿಕ್ಕಿಸಿಕೊಂಡು ಸಂಗೀತ/ಸಾಹಿತ್ಯದ ಸೋಗಿನಲ್ಲಿ ನಮ್ಮದೇ ಆದ ಪ್ರಪಂಚವನ್ನು ಕಲ್ಪಿಸಿಕೊಳ್ಳುತ್ತೇವೆ. ಸದ್ದಿನಲ್ಲಿ ಎಲ್ಲವೂ ಇದೆ ಎಂದುಕೊಂಡವರು ಒಂದೆರಡು ಘಂಟೆ ಮೌನವನ್ನು ಅನುಭವಿಸಿ ನೋಡಲಿ ಅದರಲ್ಲಿಯೂ ಬೇಕಾದಷ್ಟಿದೆ - ಮೌನ ಒಂದು ರೀತಿ ಮಾತಿಲ್ಲದ ಸಿನಿಮಾದ ಹಾಗೆ, ಮನದ ಪರದೆಯ ಮೇಲೆ ಏನೇನೋ ಚಿತ್ರಗಳು ಮೂಡಿ ಮರೆಯಾಗಿ ನಮ್ಮದೇ ಆದ ಮತ್ತೊಂದು ಪ್ರಪಂಚ ತೆರೆದುಕೊಳ್ಳೋದು ನಿಜ. ನಾನು ಹಿಂದೆ ಎಲ್ಲೋ ಓದಿದ ಹಾಗೆ ನಮ್ಮ ಹೊರಗಿನ ಪ್ರಪಂಚದಷ್ಟೇ ಆಳ ಹಾಗೂ ವಿಸ್ತಾರವಾದ ಪ್ರಪಂಚ ನಮ್ಮ ಮನಸ್ಸಿನೊಳಗೂ ಇದೆ. ಇವುಗಳ ವ್ಯತ್ಯಾಸ ಒಂದು ರೀತಿ ಆಸ್ಟ್ರೋಫಿಸಿಕ್ಸ್ ಹಾಗೂ ಕ್ವಾಂಟಮ್ ಮೆಕ್ಯಾನಿಕ್ಸ್‌ಗಳ ನಡುವಿನ ವ್ಯತ್ಯಾಸದ ಹಾಗೆ - ಒಂದು, ಬಹು ದೂರದ ವಸ್ತುವಿನ ಚಲನವಲನವನ್ನು ಗ್ರಾವಿಟೇಷನ್ ಎನ್ನುವ ವೀಕ್ ಫೋರ್ಸ್‌ನ ಮಾಧ್ಯಮದಲ್ಲಿ ಕಲ್ಪಿಸಿಕೊಂಡರೆ ಮತ್ತೊಂದು ಅಣುಗಳನ್ನು ಮೀರಿರುವ ಪಾರ್ಟಿಕಲ್ಲುಗಳ ನಡುವಿನ ಸ್ಟ್ರಾಂಗ್ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೋರ್ಸ್‌ನ ಅಳತೆಯನ್ನು ಹಿಡಿದ ಹಾಗೆ.

ನಮಗೆ ವಿಶ್ರಾಂತಿಯನ್ನು ಕೊಡುವ ನಿದ್ರೆ, ನಮ್ಮ ಮನಸ್ಸಿನ ಸಂವೇದನೆಗಳನ್ನು ಹಿಡಿತದಲ್ಲಿಟ್ಟು ನಮ್ಮ ಸಂಸ್ಕಾರಗಳಿಂದ ನಮ್ಮನ್ನು ಹೊರನಿಲ್ಲಿಸಿ ನೋಡುವಂತೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಧ್ಯಾನ ಮುಂತಾದವುಗಳೆಲ್ಲ ಮೌನದ ಮಡಿಲಲ್ಲಿ ನೆಲೆಗೊಂಡರೆ ನಮ್ಮ ಭೌತಿಕ ಜಗತ್ತು ನಾವು ಏನು ಹೇಳುತ್ತೇವೆ ಅರ್ಥಾಥ್ ನಾವು ಯಾವ ಯಾವ ಶಬ್ದ/ಪದಗಳನ್ನು ಬಳಸುತ್ತೇವೆ ಎಂಬುದನ್ನು ಅವಲಂಭಿಸಿದೆ. ಮೌನ-ಶಬ್ದ ನಡುವಿನ ವ್ಯತ್ಯಾಸ, ಅವೆರಡೂ ವಿಭಿನ್ನ ಚೌಕಟ್ಟಿನ ಸಾಧ್ಯತೆ-ಬಾಧ್ಯತೆಗಳು ನಮಗೆ ಅನಿವಾರ್ಯವೂ ಹೌದು, ಆದರೆ ಇತ್ತೀಚಿನ ಪ್ರಪಂಚದ ಮೌನದ ಮೊರೆ ಹೋಗುವುದಕ್ಕಿಂತ ಹೆಚ್ಚಾಗಿ ಶಬ್ದದ ಮೊರೆ ಹೊಕ್ಕಿದೆ ಎಂದೇ ನನ್ನ ಅಭಿಪ್ರಾಯ.

***

ಈ ಯುಗದಲ್ಲಿಯೂ ಇಂದ್ರಿಯಗಳನ್ನು ಜಯಿಸುವುದು ಸಾದ್ಯವಿರಬೇಕಿತ್ತು, ಎಲ್ಲಿ ಬೇಕೆಂದರಲ್ಲಿ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದಕ್ಕೆ. ಏನಾದರೂ ಹೇಳಲೇ ಬೇಕು ಎಂದು ಹೇಳುವುದಕ್ಕಿಂತ ಸುಮ್ಮನಿರುವುದನ್ನು ಕಲಿಯಬೇಕು ಎಂದು ಬೇಕಾದಷ್ಟು ಸಾರಿ ಅನ್ನಿಸಿದೆ. ಕೆಲವೊಮ್ಮೆ ನಾನು ಬೇಕೆಂದೇ ಎರಡು ಕ್ಷಣಗಳ ಕಾಲ ಮೌನದ ಮೊರೆಯನ್ನು ಹೊಕ್ಕರೆ ಫೋನಿನಲ್ಲಿ ಮಾತನಾಡುವ ಆ ಕಡೆಯವರು ಲೈನ್ ಎಲ್ಲಿ ಡಿಸ್ಕನೆಕ್ಟ್ ಆಗಿಹೋಯಿತೋ ಎಂದು ಅರಚಿಕೊಳ್ಳುವುದನ್ನು ನೋಡಿ ಸೋಜಿಗಪಟ್ಟಿದ್ದೇನೆ. ಅಕಸ್ಮಾತ್ ನಮ್ಮ ನಡುವಿನ ಸಂಪರ್ಕದ ಎಳೆ ಒಮ್ಮೆ ಕಡಿದು ಹೋಯಿತು ಎಂತಲೇ ಅಂದುಕೊಳ್ಳೋಣ ಅದರಿಂದೇನಾಯಿತು? ಮತ್ತೆ ಫೋನ್ ಮಾಡಿದರಾಗದೇ? ಇಷ್ಟೊಂದು ಸಂವಹನ/ಸಂಪರ್ಕ ಮಾಧ್ಯಮಗಳಿಗೆ ಆದ್ಯತೆಕೊಡುವ ಜನರಿಗೆ, ಈ ಸಂತತಿಯಲ್ಲಿ ಅದೇಕೆ ಅಷ್ಟೊಂದು ಮಿಸ್-ಕಮ್ಮ್ಯೂನಿಕೇಷನ್ನುಗಳು ನಡೆಯುತ್ತವೆ ಎಂದು ಚಿಂತಿಸಿದ್ದೇನೆ. ನನ್ನ ಊಹೆಯ ಪ್ರಕಾರ ನಮ್ಮ ಸಂಬಂಧಗಳು (ಗಂಡ-ಹೆಂಡತಿ, ತಂದೆ-ತಾಯಿ-ಮಕ್ಕಳು, ಸಹೋದರರು-ಸಹೋದರಿಯರು, ಸ್ನೇಹಿತರು) ಇತ್ತೀಚಿನ ಅತಿ ಕಮ್ಮ್ಯೂನಿಕೇಶನ್ನಿನ ಮಾಧ್ಯಮಗಳಿದ್ದರೂ ಅಷ್ಟೇ ದೂರಹೋಗಿವೆ. ಎಲ್ಲಿ ಏನು ಬೆಳವಣಿಗೆಯಾದರೇನು ಬಂತು, ಅದ್ಯಾವುದೋ ಒಂದು ಅವ್ಯಕ್ತ ಪ್ರೀತಿಯಿಂದ ಬದುಕಿನ ಸಂಬಂಧಗಳನ್ನು ನೋಡದ ಹೊರತು? ನಮಗೆ ಗೊತ್ತಿರುವುದೆಲ್ಲವನ್ನೂ ನಾವು ಅನುಭವಿಸಿ ಆಚರಿಸುವುದೆಲ್ಲವನ್ನೂ ಭಾಷೆಯಲ್ಲಿ ಕಟ್ಟಿಡುತ್ತೇವೆ ಎನ್ನುವುದು ಎಂದು ಯಶೋಗಾಥೆಯಾದೀತು?

ಏನೋ, ಬಾಯಿ ಇದ್ದವರು ಹೊರಗಿನದನ್ನು ಗೆಲ್ಲುತ್ತಾರಿರಬಹುದು, ಕೊನೆಗೆ ತಮ್ಮೊಳಗಿನದನ್ನು ಅರಿತುಕೊಳ್ಳುವುದಕ್ಕಾದರೂ ಮೌನವನ್ನು ನಾವು ಆಶ್ರಯಿಸಿದ್ದೇ ಆದರೆ ಅದು ಎಲ್ಲೋ ಒಂದು ಸಮತೋಲನವನ್ನು ತಂದುಕೊಟ್ಟೀತೇನೋ ಎನ್ನುವುದು ನನ್ನ ಆಶಯ.

2 comments:

vidya said...
This comment has been removed by the author.
Satish said...

ಯಾಕೋ ವಿದ್ಯಾ ಅವ್ರು ತಾವು ಬರೆದಿದ್ದನ್ನ ಅಳಿಸಿ ಬಿಟ್ರು ಬಿಡಿ! ಅವರಂತೂ ಕಣ್ಣಿಗೂ ಸಿಗ್ತಾ ಇಲ್ಲಾ ಇತ್ತೀಚೆಗೆ...