ಕನ್ನಡದಲ್ಲಿ ಹಾಸ್ಯ ಬರಹಗಳ ಬಗ್ಗೆ ಬರೀ ಬೇಕು ಅಂತ ಬಹಳ ದಿನಗಳಿಂದ ಅಂದ್‌ಕೊಳ್ತಾನೇ ಇದ್ದೆ, ಆದ್ರೆ ಇಲ್ಲೀವರೆಗೂ ಅದು ಸರಿ ಅಂತ ಅನ್ಸಿರಲಿಲ್ಲ, ಆದ್ರೂ ಈ ಸಮಯದಲ್ಲಿ ನನ್ನ ಮನಸ್ಸಿಗೆ ಬಂದದ್ದನ್ನ ಬರೆದೆ ಅಂತ ಅಂದ್ರೆ ಒಂದ್ ಕಲ್ ಚಪ್ಪಡಿ ಭಾರ ಕಳೀತು ಅಂದುಕೋತೀನಿ. ಆದ್ರೆ, ನೀವು ಇದನ್ನ ಓದಿ ಕಲ್ ತಗೊಂಡ್ ನನ್ ಕಡೆ ಬಿಸಾಕೋಕ್ ಮೊದಲು ನನ್ನ ಇತಿ-ಮಿತಿ ಹೇಳ್ಕೊಂಬಿಡ್ತೀನಿ, ಅದರ ಮೇಲೆ ನೀವ್ ಏನ್ ಮಾಡ್ತೀರಿ ಅನ್ನೋದು ನಿಮಗೆ ಬಿಟ್ಟದ್ದು!
ನಾನು ಒಂಥರಾ - ಯಾಕೆ ಒಂಥರಾ ಅಂದ್ರೆ, ಈ ಬದುಕು ಅನ್ನೋ ನಾಟಕದಲ್ಲಿ ಅನಿವಾಸಿ ಪಾರ್ಟ್ ಸಿಕ್ಕು ಅದನ್ನ ಇವತ್ತಿಗೋ ಆಡ್ತಾ ಇರೋ ಹೊತ್ತಿಗೆ ನಮ್ ಕನ್ನಡ ನಾಡಲ್ಲಿ ಏನೇನೋ ಡೆವಲಪ್‌ಮೆಂಟ್ ಎಲ್ಲಾ ಆಗಿ ಹೋಗ್ತಾ ಇದ್ದಾವೆ, ಅದನ್ನ ಒಂದು ದಶಕದ ಮಟ್ಟಿಗೆ ಮಿಸ್ ಮಾಡ್‌ಕೊಂಡಿದ್ದೀನಿ. ನಮ್ ಸಮಾಜವಾಹಿನಿಗಳಾದ ರೆಡಿಯೋ, ಟಿವಿ ಹಾಗೂ ಹಲವಾರು ಪತ್ರಿಕೆಗಳನ್ನ ನಾನು ಇಷ್ಟೊಂದು ವರ್ಷ ಮಿಸ್ ಮಾಡ್‌ಕೊಂಡಿರೋದ್ರಿಂದ ನನ್ನ ಬೆಳವಣಿಗೆಯಲ್ಲಿ ಕನ್ನಡ ನಾಡಿನ ವಿಷಯಗಳು ಬಂದ್ರೆ - ಅಂದ್ರೆ, ಸಾಹಿತ್ಯ, ಸಂಗೀತ, ರಾಜಕೀಯ, ದೈನಂದಿನ ಆಗುಹೋಗುಗಳು, ರೇಡಿಯೋ/ಟಿವಿ ಕಾರ್ಯಕ್ರಮಗಳು ಇವನ್ನೆಲ್ಲ ಕೇಳಿಲ್ಲ/ನೋಡಿಲ್ಲ - ನನ್ ಹಣೇಬರಹಕ್ಕೆ, ಅದು ಹೆಂಗಾದ್ರೂ ಇರಲಿ, ಇವತ್ತಿಗೂ ಕಾಸರವಳ್ಳಿ ದ್ವೀಪ, ಹಸೀನಾ ಸಿನಿಮಾ ನೋಡಿಲ್ಲ, ಟಿಎನ್ ಸೀತಾರಾಮ್‌ದೂ ಒಂದೂ ಸಿರಿಯಲ್ ನೋಡಿಲ್ಲ, ಅದರ ಜೊತೇನಲ್ಲಿ ಸಂಕ್ರಾಂತಿಯಾಗಲಿ, ಪಾಪ-ಪಾಂಡುವಾಗಲಿ, ಕುಬೇರಪ್ಪ ಅಂಡ್ ಸನ್ಸ್ ಆಗಲಿ ನೋಡಿಲ್ಲ. ವಿಷ್ಯಾ ಹೀಗಿದ್ದು, ನಾನ್ಯಾವ ಅಥಾರಿಟಿಯಿಂದ ಕನ್ನಡ ಸಾಹಿತ್ಯ/ಸಿನಿಮಾ/ಕಿರುತೆರೆಯಲ್ಲಿ ಬರೋ ಸಾಹಿತ್ಯದ ಮೇಲೆ, ಹಾಸ್ಯದ ಮೇಲೆ ಮಾತಾಡ್ಲಿ? ಅದಕ್ಕೋಸ್ಕರನೇ ಈ ಬರಹ ಬರೆಯೋಕ್ ಆಗ್ದೇ ಇಷ್ಟು ದಿನಾ ಸುಮ್ನೇ ಇದ್ದದ್ದು. ಆದ್ರೆ, ಆವಾಗವಾಗ ನನ್ನ ಸುಬ್ಬನ ಕಥೆಗಳನ್ನು ನೆನಪಿಸಿಕೊಂಡು ಎಷ್ಟೋ ಜನ ಕೇಳ್ತಿರ್ತಾರೆ, ಒಂದು ರೀತಿ ಒರಿಜಿನಲ್ ಹಾಸ್ಯ ಬರಹ ಬರೆಯೋದು ದೊಡ್ಡ ಚಾಲೆಂಜೇ ಸರಿ, ಅದು ನನ್ ಕೈಯಲ್ಲಿ ಆಗೋಲ್ಲ ಅಂತಾನೇ ಸುಮ್ನೇ ಇದ್ದದ್ದು ಅಂದ್ರೂ ಸಹ, ಒಂದು ಮನಸು ಯಾಕೆ ಪುನಃ ಬರೆಯೋಕ್ ಪ್ರಯತ್ನಾ ಮಾಡ್‌ಬಾರ್ದು ಅಂತ ಕೇಳಿಕೊಳ್ತಾನೇ ಇದೆ!
ಕನ್ನಡ ಹಾಸ್ಯವನ್ನು ನೋಡ್ಲಿಲ್ಲ ಅಂದ ಮಾತ್ರಕ್ಕೆ ಉಳಿದದ್ದೆನ್ನೆಲ್ಲ ಸುಮ್ನೆ ಬಿಟ್ಟೆ ಅಂತ ಅರ್ಥ ಅಲ್ಲ, ಇಲ್ಲಿಗೆ ಬಂದ ಮೇಲೆ ಹಲವಾರು ಚಾನೆಲ್ಲುಗಳಲ್ಲಿ ಬೇಕಾದಷ್ಟು ವರ್ಷ ಸೈನ್‌ಫೆಲ್ಡ್, ಫ್ರೆಂಡ್ಸ್, ಹನಿಮೂನರ್ಸ್, ಚೀಯರ್ಸ್, ಥ್ರೀಸ್ ಕಂಪನಿ, ಟೈಟಸ್, ಅಕ್ಕಾರ್ಡಿಂಗ್ ಟು ಜಿಮ್, ಜಾರ್ಜ್ ಲೋಪೆಝ್, ಕಿಂಗ್ ಆಫ್ ಕ್ವೀನ್ಸ್, ಎವರಿಬಡಿ ಲವ್ಸ್ ರೇಮಂಡ್, ಫ್ರೇಜರ್, ಮುಂತಾದ ಸಿಟ್‌ಕಾಮ್ (situation comedy) ಗಳನ್ನು ಮನತಣಿಯೆ ನೋಡಿ ಆನಂದಿಸಿದ್ದೇನೆ. ಇವುಗಳಲ್ಲಿ ಚೀಯರ್ಸ್, ಥ್ರೀಸ್ ಕಂಪನಿ ಹಾಗೂ ಸೈನ್‌ಫೆಲ್ಡ್‌ಗಳ ಹೆಚ್ಚೂ ಕಡಿಮೆ ಎಲ್ಲ ಎಪಿಸೋಡ್‌ಗಳನ್ನೂ ನೋಡಿ ಅದರ ಸ್ಕ್ರಿಪ್ಟನ್ನೂ ಸಹ ಓದಿದ್ದೇನೆ. ತುಂಬಾ ಎತ್ತರದಿಂದ ಇವುಗಳ ಕ್ವಾಲಿಟಿಯನ್ನೆಲ್ಲ ಒಂದೇ ಸಾಲಿನಲ್ಲಿ ಅಳೆದು ಬರೀ ಬೇಕು ಅಂದುಕೊಂಡ್ರೆ - ಇವುಗಳ ಕಲಾವಿದರಲ್ಲಿ ಹೆಚ್ಚಿನವರು ಬ್ರಾಡ್‌ವೇ ಮಟ್ಟದವರು, ಹಾಗೂ ಈ ಸ್ಕ್ರಿಪ್ಟ್‌ಗಳನ್ನು ಬರೆದವರು ತಕ್ಕಮಟ್ಟಿಗೆ ಅವರವರ ಒರಿಜಿನಾಲಿಟಿಯಲ್ಲಿ ಬರೆದರೂ ಅವರ ಗಾಢ ಪ್ರತಿಭೆ, ವಿಷಯ ಹಾಗೂ ಸಾಮಾನ್ಯ ಜ್ಞಾನದ ಹರಿವು ಬೇಕಾದಷ್ಟು ಎದ್ದೆದ್ದು ಕಂಡುಬರುತ್ತೆ.
ಏನಪ್ಪಾ, ಇವ್ನು ಇಂಗ್ಲೀಷ್ ಹಾಸ್ಯ ಧಾರಾವಾಹಿಗಳನ್ನ ಕನ್ನಡಕ್ಕೆ ಹೋಲ್ಕೆ ಮಾಡಿ ಬಯ್ಯೋಕ್ ಶುರುಮಾಡ್ತಾನೆ ಅಂತ ಕೂತಲ್ಲೇ ಹಾರ್‌ಬೇಡಿ - ಇಲ್ಲೀವರೆಗೂ ನನಗನ್ನಿಸಿದ ಹಾಗೆ ಚೆನ್ನಾಗಿರೋದನ್ನ ಹಾಗಿದೆ ಅಂತ ಹೇಳಿದ್ದೀನಿ ಅಷ್ಟೇ!
ನಾನು ಇನ್ನೂ ಉದಯ ಟಿವಿ ಹಾಕ್ಸಿಲ್ಲ, ಆದ್ರೆ ನನ್ ಸ್ನೇಹಿತರೊಬ್ಬರಿಗೆ ಒಂದು ವಾರದ ಧಾರಾವಾಹಿಗಳೆಲ್ಲವನ್ನೂ ಟೇಪ್‌ನಲ್ಲಿ ರೆಕಾರ್ಡ್ ಮಾಡಿಕೊಡಿ ಅಂತ ಕೇಳಿಕೊಂಡು ಅವರ ಸಹಾಯದಿಂದ ಯಾವ್ಯಾವ್ದೋ ಸಿರಿಯಲ್‌ಗಳನ್ನೆಲ್ಲ ನೋಡಿದ್ದಕ್ಕೆ ನನ್ನ ಉಸಿರು ನಿಂತ್ ಹೋಗೋದೊಂದ್ ಬಾಕಿ ಇತ್ತು - ಒಂದೇ ಸಾಲಿನಲ್ಲಿ ಹೇಳೋದಾದ್ರೆ ಹೆಚ್ಚಿನವುಗಳಲ್ಲಿ ಯಾವುದೇ ತೂಕ, ಕ್ವಾಲಿಟಿ - ನಟನೆ ಹಾಗೂ ಬರಹದ ದೃಷ್ಟಿಯಿಂದ - ಕಂಡುಬರಲಿಲ್ಲ, ಎಲ್ರೂ ಒಂಥರ ನಾವೀಸ್ ಆಗಿ ಕಂಡ್ ಬಂದ್ರು, ಕ್ಯಾಮೆರಾ ಚಾಲನೆಯಿಂದ ಹಿಡಿದು, ಹಿನ್ನೆಲೆ ಸಂಗೀತದಿಂದ ಹಿಡಿದು, ಸಂಭಾಷಣೆಗಳವರೆಗೆ ಬಹಳ ಸಪ್ಪೆಯಾಗಿತ್ತು - ಹಂಗಂತ ಎಕ್ಸೆಪ್ಷನ್ ಇಲ್ಲ ಅಂತೇನೂ ಇರ್ಲಿಲ್ಲ - ಕ್ವಾಲಿಟಿ ಅನ್ನೋದು ಎಕ್ಸ್‌ಪ್ಷನ್ ಆಗಿತ್ತೇ ವಿನಾ ನಾರ್ಮ್ ಆಗಿರಲಿಲ್ಲ. ಒಂದು ಕಡೆ ತುಂಬಾ ದುಃಖಾ ಆಯ್ತು - ಕೈಲಾಸಂ, ಬೀಚಿ, ಗೊರೂರ್ ಮುಂತಾದೋರ್ ಹಾಸ್ಯ ಓದ್ ಬೆಳದೋನ್ ನಾನು, ಆ ಮಟ್ಟಿನ ಒರಿಜಿನಾಲಿಟಿ ಇಲ್ವೇ ಇಲ್ಲ ಅನ್ನಿಸ್ತು. ಅಲ್ಲಿಂದ ಇಲ್ಲಿಂದ ಫಾರಿನ್ ಸಂಸ್ಕೃತಿ ಅಂದ್ರೆ ಬರೀ ಕೋಕ್ ಕುಡಿಯೋದನ್ನ ಮಾತ್ರ ಅಳವಡಿಸಿಕೊಳ್ಳೋ ಮಂದಿಗೆ ಪ್ರಪಂಚದಾದ್ಯಂತ ಉಳಿದವರು ಹೆಂಗಿದ್ದಾರೆ ಎಂದು ನೋಡೋ ವ್ಯವಧಾನಾನೂ ಇಲ್ವೇ ಎಂದು ಖೇದವಾಯ್ತು. ನನ್ ಹತ್ರ ಒರಿಜಿನಾಲಿಟಿ ಇಲ್ಲದಿದ್ರೇನಂತೆ ಕೊನೇಪಕ್ಷ 'ಹಿಂಗೂ ಮಾಡ್‌ಬಹುದು' ಅನ್ನೋ ಐಡಿಯಾಕ್ಕೊಸ್ಕಾರಾನಾದ್ರೂ ನಾನು ಅದೂ-ಇದೂ ಓದ್ತೀನಿ, ಏನೇನೆಲ್ಲಾ ನೋಡ್ತೀನಿ. ಸ್ಪೂರ್ತಿ ಪಡೆಯೋದರಲ್ಲಿ ಏನೂ ತಪ್ಪಿಲ್ಲ, ಅಲ್ಲಿಂದ ಇದ್ದ ಹಾಗೇ ಇದ್ದುದನ್ನು ಕದ್ದು ತರೋದೂ ಅಲ್ದೇ ಅದನ್ನು ತನ್ನದು ಎನ್ನೋದರಲ್ಲಿ ತಪ್ಪಿದೆ.
ನಾನ್ ಬರೆದ್ರೆ ನನಗೇ ಹೆದರಿಕೆ ಆಗುತ್ತೆ, ಪ್ರತಿಸಾರಿ ಬರೆದು ಮುಗಿಸಿ 'ಪಬ್ಲಿಷ್' ಮಾಡಿದಾಗ್ಲೂ this is another piece of junk ಅನ್ಸುತ್ತೆ, ಆದ್ರೆ ನಾನು ಬರೆಯೋದರ ಉದ್ದೇಶ ನನಗೊಂದು ಶಿಸ್ತು ಬರಲಿ, ನೂರು ಬರೆದ್ರೆ ಎರಡಾದ್ರೂ ಒಳ್ಳೇದಿರಲಿ ಅನ್ನೋದು. ನನಗೂ ನನ್ನದೇ ಆದ ಸೃಜನಶೀಲತೆ ಅನ್ನೋದಿದೆ, ಅದನ್ನ ಪ್ರತಿಭೆಯ ಮಟ್ಟದಲ್ಲಿ ನಾನು ಬೆಳೆಸೋಕಾಗುತ್ತೋ ಇಲ್ವೋ, ಅದಕ್ಕೆ ತಕ್ಕ ಪರಿಶ್ರಮ ಪಟ್ರೆ ಒಂದು ಸುಮಾರಾದ ಲೇಖನವನ್ನಾದರೂ ಬರೀತೀನಿ ಅನ್ನೋದು ನನ್ನ ವಿಶ್ವಾಸ. ಅಷ್ಟೂ ಮಾಡಿ ನಾನು ಇದನ್ನ ಪುಲ್‌ಟೈಮ್ ಏನ್ ಮಾಡ್ತಾ ಇಲ್ವಲ್ಲ - ದಿನದ ನಲವತ್ತೆಂಟು ಅರ್ಧ ಘಂಟೆಗಳಲ್ಲಿ ನಾನು ಕೇವಲ ಒಂದು ಅರ್ಧ ಘಂಟೆ ಮಾತ್ರ ಇದಕ್ಕೆ ವ್ಯಯಿಸ್ತೀನಿ. ಆದ್ರೆ, ಅದೇ ಇದನ್ನೇ ನಾನು ಫುಲ್‌ಟೈಮ್ ಮಾಡಿ ಇದರಿಂದಲೇ ನಮ್ಮನೆ ಒಲೆ ಉರಿಯೋದು ಅಂತಾದ್ರೆ ನಾನು ಎಷ್ಟೋ ದಿನ ನಿದ್ದೇನೆ ಮಾಡ್ದೇ ಗೇಯೋಕ್ ಸಿದ್ಧಾ ಇದ್ದೀನಿ/ಇರ್ತೀನಿ. ಯಾಕ್ ಈ ಮಾತು ಹೇಳ್ದೆ ಅಂದ್ರೆ ನಮ್ಮವರೆಲ್ಲ ಎಲ್ಲಿ ಆತುರಕ್ಕೆ ಸಿಕ್ಕು ಈ ರೀತಿ ಅರೆಬೆಂದ ಕೆಲ್ಸಾ ಮಾಡ್ತಾರೋ ಅನ್ನಿಸಿದ್ದರಿಂದ. ನಮ್ಮಲ್ಲಿನ ಪ್ರತಿಭೆಗಳೆಲ್ಲ ಎಲ್ಲಿ ಹೋದ್ವು ಹಾಗಾದ್ರೆ? ಅನ್ನೋದಕ್ಕೆ ನನ್ನಲ್ಲ್ ಉತ್ರ ಇಲ್ಲ - 'ಹೆಚ್ಚಿನವು ಪರದೇಶಕ್ಕೆ ಹೋಗವೆ' ಎಂದು ಕಿಸಕ್ಕನೆ ನಕ್ಕು ಹಲ್ ಕಿರಿಯೋರ್ ಮುಂದೆ ನನ್ನ ಸಲಾಮ್ ಅಷ್ಟೇ, ಯಾಕಂದ್ರೆ ಪರದೇಶಕ್ಕೆ ಬಂದ ಮೇಲೇನೇ ನನಗೆ ಬದುಕನ್ನೋದ್ ಏನು ಅಂತ ಸ್ವಲ್ಪ ಮಟ್ಟಿಗಾದ್ರೂ ಅರ್ಥ ಆಗಿದ್ದು, ಸಮಾಜದಲ್ಲಿ ನೆಟ್ಟಗೆ ನಿಲ್ಲೋಕ್ ಶಕ್ತಿ ಬಂದಿದ್ದು.
ಕಣ್ಣೀರಿನ ಕೋಡಿ ಹುಟ್ಟು ಹಾಕೋ ಧಾರಾವಾಹಿಗಳ ಜೊತೆಗೆ ನಮ್ಮ್ ಜನಕ್ಕೆ ನಿಜವಾದ ಒರಿಜಿನಲ್ ಮನರಂಜನೆ ಕೊಡಬೇಕು ಅನ್ನೋದು ನನ್ನ ಬಹಳ ಉದ್ದವಾದ ಕನಸುಗಳಲ್ಲಿ ಒಂದು. ಹೊರದೇಶಗಳ ಸಿಟ್‌ಕಾಮ್ ಗಳಿಂದ ಪ್ರಭಾವಿತನಾಗಿ ನಮ್ಮದೇ ಒಂದು ಒರಿಜಿನಲ್ ಸಿಟ್‌ಕಾಮ್ ಕೊಡಬೇಕು, ಅದರ ಥರಾವರಿ ಸ್ಕ್ರಿಪ್ಟ್‌ಗಳನ್ನ ಬರೀಬೇಕು, ಅಲ್ಲಿ-ಇಲ್ಲಿ ಈಗಾಗ್ಲೇ ಬರೆದದ್ದನ್ನ ಓದಬೇಕು - ಸಿನಿಮಾ ತಂತ್ರಜ್ಞರ ಜೊತೆ ಚರ್ಚಿಸಬೇಕು, ಇತ್ಯಾದಿ ಇತ್ಯಾದಿ - ಆಸೆಗಳಿಗೇನು ಒಂದ್ ಸಾವ್ರ. ಇವತ್ತಲ್ಲ ನಾಳೆ, ಈ ಜನ್ಮದಲ್ಲಿ ಅಲ್ದಿದ್ರೆ ಮುಂದಿನ ಜನ್ಮದಲ್ಲಾದ್ರೂ ಹಾಗ್ ಆಗ್ಲಿ/ಆಗುತ್ತೆ. ಆದ್ರೆ, ನಮ್ ಬರಹಗಾರ್ರು ತಮ್ಮ ಸ್ವಂತ ಪ್ರತಿಭೆಯನ್ನ ಬರಹದಲ್ಲಿಳಿಸಬೇಕು, ಎಲ್ಲಿಂದ ಬೇಕಾದ್ರೂ ಸ್ಪೂರ್ತಿ ಪಡೀಲಿ ಆದರೆ ವಸ್ತುಗಳನ್ನ ಹಾರಿಸಿ ತರಬಾರ್ದು - ಸ್ವಂತ ಕನ್ನಡದ ಹಿನ್ನೆಲೆನಲ್ಲಿ ಒಂದೆರೆಡು ಧಾರಾವಾಹಿಗಳು ಬಂದ್ರೆ (ನಾನ್ ಹೇಳ್ತಾ ಇರೋದು ಶುದ್ಧ ಹಾಸ್ಯವನ್ನು ಕೇಂದ್ರವಾಗಿಟ್ಟುಕೊಂಡು) ಮುಂದೆ ಅದೇ ಬೆಳೆದು ದೂಡ್ಡ ಹೆಮ್ಮರವಾಗುತ್ತೆ ಅನ್ನೋದು ನನ್ನ ಆಶಯ.
ಏನಂತೀರಿ?