Saturday, March 08, 2025

ಅಂತರಂಗ - 500

ಒಂದಾನೊಂದು ಕಾಲದಲ್ಲಿ, ಬ್ಲಾಗುಗಳು ಅಂದರೆ, web log ಗಳು ಚಲಾವಣೆ ಇದ್ದ ಸಮಯದಲ್ಲಿ, ನಾನೂ ಒಂದು ಬ್ಲಾಗ್ ಅಂತ ಶುರುಮಾಡಿದ್ದು, ಈ ವರ್ಷಕ್ಕೆ ಬರೋಬ್ಬರಿ 20 ವರ್ಷದ ವಾರ್ಷಿಕೋತ್ಸವವನ್ನ celebrate ಮಾಡ್ತಾ ಇದೆ.

ಈ ಬ್ಲಾಗ್ ಪ್ರಪಂಚದಲ್ಲಿ, ಕಳೆದ  ಇಪ್ಪತ್ತು ವರ್ಷಗಳಲ್ಲಿ ನಾನು ಬರೆದಿದ್ದು, ಕೊರೆದಿದ್ದು, ಎಲ್ಲಾ ಸೇರಿಸಿದ್ರೆ, ಒಟ್ಟು 572 ಲೇಖನಗಳು. ಅದರಲ್ಲಿ, ಅಂತರಂಗದ್ದೇ 500 ಲೇಖನಗಳು. ಇನ್ನು ಕಾಲಚಕ್ರದಲ್ಲಿ 57 ಲೇಖನ ಇದ್ರೆ, ದಾರಿದೀಪದಲ್ಲಿ 15 ಲೇಖನಗಳನ್ನ ಬರೆಯೋಕೆ ಆಗಿರೋದು.

ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನವೆಂಬರ್ 22, 2005ರಂದು ಸ್ವಾಗತ ಅಂತ ಒಂದು ಲೇಖನವನ್ನು ಹಾಕಿದ್ದು.

ಆಗೆಲ್ಲ, ಹೆಚ್ಚು ಲೇಖಕರು online ಮಾಧ್ಯಮದಲ್ಲಿರಲಿಲ್ಲ. ನಂತ್ರ ಒಬ್ಬೊಬ್ರಾಗೆ ಹುಟ್ಟಿಕೊಂಡ್ರು... ಹಾಗೇ ಸಮಯ ಕಳೆದಂತೆ ಮುಂದುವರೆದ ಸೋಶಿಯಲ್ ಮೀಡಿಯಾ ಅಬ್ಬರದಲ್ಲಿ ತಮ್ಮನ್ನು ತಾವು ಕಳೆದುಕೊಂಡ್ರು ಅಥವಾ ತೊಡಗಿಸಿಕೊಂಡ್ರು ಅನ್ನಬೇಕು.

2005ರ ನವೆಂಬರ್ ನಲ್ಲಿ ಓಪನ್  ಆದ ಬ್ಲಾಗು, ಮತ್ತೆ ಡಿಸೆಂಬರ್ ಅಷ್ಟೊತ್ತಿಗೆ ಯಾವುದೇ ಸದ್ದು ಮಾಡದೇ ಒಂದು ಮೂಲೆಯಲ್ಲಿ ಬಿದ್ದಿತ್ತು. ಮತ್ತೆ, 2006 ರ ಮಾರ್ಚಿನಿಂದ ಮತ್ತೆ ಬಾಗಿಲು ತೆಗೆದುಕೊಂಡಿದ್ದು, ಇಂದಿಗೂ ಮುಚ್ಚಿಲ್ಲ!


ಅಂತರಂಗ - 500 posts, 190 followers


ಇವತ್ತು ಅಂತರಂಗವನ್ನ ಕಲಕಿ ನೋಡ್ದಾಗ ಗೊತ್ತಾಯ್ತು, ಅದಕ್ಕೂ ಸುಮಾರು 200 ಜನ ಫ಼ಾಲ್ಲೋವರ್ಸ್ ಇದ್ದಾರೆ, ದಿನಕ್ಕೆ ಕಮ್ಮೀ ಅಂದ್ರೆ ಒಂದು 25 ಜನಾನಾದ್ರೂ ಭೇಟಿ ಕೊಡ್ತಾರೆ, ತಿಂಗಳಿಗೆ ಒಂದೈದು ಸಾವಿರ unique ವಿಸಿಟರ್ಸ್ ಬರ್ತಾರೆ ಅನ್ನಬಹುದು.

ಪರವಾಗಿಲ್ಲ: 20 ವರ್ಷಕ್ಕೆ ಸುಮಾರು ಎರಡುವರೆ ಲಕ್ಷ visitors ಅನ್ನ ಈ ಲೇಖನಗಳ ಲೋಕ ಸಂಪಾದಿಸಿದೆ ಅಂತ ತಿಳಿದು ಸಂತೋಷವಾಯ್ತು.

ಈ ಲೇಖನಗಳು ಸುಮಾರು ನೂರಕ್ಕೂ ಹೆಚ್ಚು ಟಾಪಿಕ್ಕುಗಳನ್ನು ಒಳಗೊಂಡಿರುವುದು ಒಂದು ವಿಶೇಷ. ಇನ್ನೊಂದು ವಿಶೇಷ ಏನೂ ಅಂದರೆ, 2006 ರ ಮೇ ತಿಂಗಳಿನಲ್ಲಿ ಪ್ರತಿದಿನವೂ ಒಂದಲ್ಲ ಒಂದು ಲೇಖನವನ್ನು ಪ್ರಕಟಿಸಿರಿವುದು.

ಈ 20 ವರ್ಷಗಳಲ್ಲಿ ಸಾಕಷ್ಟು ಜನರ ಜೊತೆಗೆ ಬೆರೆಯೋದಕ್ಕೆ ಈ ಲೇಖನಗಳು ಸಹಾಯ ಮಾಡಿವೆ. ಈ ಲೇಖನಗಳಲ್ಲಿ ಹೆಚ್ಚಿನ ಪಾಲು, personal musings ಅಂತಾರಲ್ಲ, ಹಾಗೆ. ಯಾರು ಓದಲಿ, ಬಿಡಲಿ - ಬರೆದುಕೊಂಡು ಹೋಗೋದು ನನಗೆ ಒಂದು ಹವ್ಯಾಸವಾಗಿದೆ. ಹೆಚ್ಚು ಬರೆದಂತೆ ಹೆಚ್ಚು ಓದಬೇಕಾಗುತ್ತದೆ, ಹೆಚ್ಚು ಓದಿದಂತೆ ಮತ್ತಷ್ಟು ಬರೆಯಬಹುದೇನೋ ಎಂಬುದು ಈ ಹೊತ್ತಿನ ಆಶಯ.

ನನ್ನ ಈ ಕಿರು ಪ್ರಯತ್ನವನ್ನ ಸಲಹಿ, support ಮಾಡಿ,  ಬೆನ್ನು ತಟ್ಟಿ, ಆಗಾಗ್ಗೆ ಚಿವುಟಿ, ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ "ಅಂತರಂಗ"ದ ಅನಂತ ನಮನಗಳು!

Friday, March 07, 2025

25-25-25 (ಅನಿವಾಸಿ ಬದುಕು)

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು 25 ವರ್ಷಗಳನ್ನು ಕಳೆದರೆ ಏನೇನಾಗಬಹುದು? ಅನ್ನೋದರ ಬಗ್ಗೆ ಒಂದು ಕುತೂಹಲಕರವಾದ ಸ್ವ ವಿಮರ್ಶೆ ಅಷ್ಟೇ!

ನಾವೆಲ್ಲ ನೀರಿನ ಒಂದೊಂದು ಬಿಂದುವಿದ್ದ ಹಾಗೆ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದು, ಮತ್ತಿನ್ನೇಲ್ಲೋ ಸಾಗರವನ್ನು ಅರಸಿಕೊಂಡು ಹೋಗಿ ಸೇರಿ, ಮತ್ತೆ ಹನಿಯಾಗಿ ಹುಟ್ಟಿ ಬರುವವರು. ಈ ರೀತಿ, ಕೊನೇಪಕ್ಷ ಒಂದು ಮಿಲಿಯನ್ ಸರ್ತಿ ಮಾಡಿದ್ರೆ, ಮೋಕ್ಷ ಅಂತೇನಾದ್ರೂ ಸಿಗುತ್ತೋ ಏನೋ... ಇರ್ಲಿ, ಅದು ಇನ್ನೊಂದು ದಿನದ ಟಾಪಿಕ್ ಆಗುತ್ತೆ ಬಿಡಿ!

ಭಾರತದಲ್ಲಿ ಹುಟ್ಟಿ ಬೆಳೆದು ಅಲ್ಲೇ ಜೀವನವನ್ನ ಕಳೆಯೋರಿಗೆ ನಮ್ಮ ವಲಸಿಗರ ಬದುಕನ್ನ ಅರ್ಥೈಸಿಕೊಳ್ಳೋಕಾಗಲ್ಲ! ವಲಸಿಗರ ಜೀವನವೇ ಒಂದು ರೀತಿಯಲ್ಲಿ ವಿಶೇಷವಾದದ್ದು... ಒಂದು ಸಣ್ಣ ಉದಾಹರಣೆಯ ಮೂಲಕ ಹೇಳೋದಾದ್ರೆ, ನಾವೆಲ್ಲ ನಮ್ಮ ನಮ್ಮ ಶಾಲೆಗಳಲ್ಲಿ ಹಿಂದೆ ಗಣಪತಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸ್ತಿದ್ದಾಗ, ನಮ್ಮ ಜೊತೆಗೆ ಓದುತ್ತಾ ಇದ್ದ ಬೆರಳೆಣೆಕೆಯ ಕೆಲವು ಹಿಂದುಗಳಲ್ಲದ ಹುಡುಗರಿಗೆ ಯಾವ ರೀತಿಯ feeling ಬರ್ತಿತ್ತೋ... ಇಲ್ಲಿ ಬಂದವರಿಗೆ ಮೊದಮೊದಲಿಗೆ ಹಾಗನ್ಸುತ್ತೆ.

ನಮ್ಮ ಅಣ್ಣ ಯಾವಾಗ್ಲೂ ಹೇಳೋ ಹಾಗೆ, "ನಮ್ಮೂರುಗಳಲ್ಲಿ ನಾವು ನೀರು ಕುಡುಕೊಂಡ್ ಬೇಕಾದ್ರೂ ಬದುಕಬಹುದು. ಆದ್ರೆ, ನಿಮ್ಮದಲ್ಲದ ದೇಶದಲ್ಲಂತೂ ಖಂಡಿತ ಹಾಗಾಗಲ್ಲ!"

ಅಮೇರಿಕದ ವಿಚಾರದಲ್ಲಿ ಹೇಳೋದಾದರೆ, ಹೊಸ ಬದುಕನ್ನ ಅರಸಿಕೊಂಡು, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದವರ ಕತೆ ಯಾವಾಗ್ಲೂ ರತ್ನಕಂಬಳಿಯ ಮೇಲೆ ನಡೆದಂತೆ ಇರೋದಿಲ್ಲ. ಇಲ್ಲಿನ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ, ಪ್ರತಿದಿನವೂ "ಈಸಬೇಕು, ಇದ್ದು ಜೈಸಬೇಕು". ಅದರ ಜೊತೆಗೆ, your past performance is not an indication of future results! ಅನ್ನೋ ಧ್ಯೇಯವಾಕ್ಯವನ್ನ ಅರ್ಥಮಾಡಿಕೊಳ್ಳಬೇಕಾದ್ರೇ ಸುಮಾರು ಸಮಯ ಹಿಡಿಯುತ್ತೆ.

ಹಂಗಂತ, ಅಮೇರಿಕದ ವಿಚಾರವನ್ನು, ಇಲ್ಲಿ ತಮ್ಮ ಮಕ್ಕಳ ಮನೆಗೆ ಬೇಸಿಗೆ ಸಮಯದಲ್ಲಿ ಭೇಟಿ ಕೊಡುವ ತಂದೆ-ತಾಯಿಯರ ಅನುಭವದ ಮೂಲಕ ಸರಳೀಕರಿಸಲಾಗೋದಿಲ್ಲ. ನೀವು ಯಾವುದೋ ದೇಶದ ರಿಸಾರ್ಟ್‌ನ all inclusive vacation package ತಗೊಂಡು, ಒಂದು ವಾರ ರಿಸಾರ್ಟಿನ safety net ನಲ್ಲಿದ್ದುಕೊಂಡು ಬಂದು, ನಾನು ಆ ದೇಶವನ್ನು ನೋಡಿದ್ದೇನೆ ಅಂತ ಹೇಳಿದ್ರೆ ಹೇಗಾಗುತ್ತೋ ಹಾಗೆ.

ಯಾವ್ದೂ ಬೇಡ, ಅಮೇರಿಕದ ಒಂದು ಫ಼್ಯಾಮಿಲಿಯಲ್ಲಿ ಒಂದು ಸಾಕುಪ್ರಾಣಿಯನ್ನು ಇಟ್ಟುಕೊಳ್ಳೋ ಅನುಭವ ಉಳಿದ ಎಲ್ಲ ದೇಶಗಳ ಅನುಭವಕ್ಕಿಂತ ಬಿನ್ನ, ಅಂತಂದ್ರೆ ನೀವು ನಂಬ್ತೀರಾ? ಇಲ್ಲಿನ ಐವತ್ತುರಾಜ್ಯಗಳಲ್ಲಿ ಸಾಕು ಪ್ರಾಣಿಗಳನ್ನ ಇಟ್ಟುಕೊಳ್ಳೋದರ ಬಗ್ಗೆ, ಐವತ್ತು ಕಾನೂನುಗಳಿರಬಹುದು. ನಮ್ಮ ನ್ಯೂ ಜೆರ್ಸಿಯ ಮನೆಗಳಲ್ಲಿ, ನಾವು ಇಟ್ಟುಕೊಳ್ಳೋ ನಾಯಿ-ಬೆಕ್ಕುಗಳಿಗೆ ಟೌನ್‌ಶಿಪ್‌ನಿಂದ ಲೈಸೆನ್ಸ್ ತಗೋಬೇಕು ಅಂದ್ರೆ ನಿಮಗೆ ಆಶ್ಚರ್ಯ ಆಗದಿದ್ರೆ ಸಾಕು.

ಅಮೇರಿಕದಲ್ಲಿ ಸಂಬಂಧಗಳನ್ನ ಹೇಗೆ "ಇನ್-ಲಾ" ಅಂತ ಕರೆದುಕೊಳ್ತಾರೋ, ಹಾಗೇ ಇಲ್ಲಿ ಕಾನೂನು-ಕಟ್ಟಳೆಗಳು ಜಾಸ್ತಿ ಅಂತಾನೇ ಹೇಳ್ಬೇಕು. ನನ್ನ ಹಾಗೆ ಕೆಲಸ ಮಾಡೋ ಹೆಚ್ಚಿನವರು ಒಂದು ವಿಚಾರದಲ್ಲಿ ಬಹಳ ಸಂತೋಷವನ್ನು ಅನುಭವಿಸ್ತೀವಿ ಅಂತಂದ್ರೆ - ಅದು ಭ್ರಷ್ಟಾಚಾರ/ಲಂಚಗುಳಿತನ ಇರದೇಇರೋದು... ನಾವು ಕಳೆದ 25 ವರ್ಷಗಳಲ್ಲಿ ಲಂಚವನ್ನ, ಯಾರಿಂದಲೂ ತಗೊಳೋದೂ ಇಲ್ಲ, ಯಾರಿಂದಲೂ ನಿರೀಕ್ಷಿಸೋದೂ ಇಲ್ಲ. ಇಲ್ಲಿನ ಸರ್ಕಾರಿ ಕಛೇರಿಗಳಿಗೂ ನಮ್ಮ ಒಡನಾಟಕ್ಕೂ ಒಂದು ರೀತಿ ದೂರವೇ... ಇಲ್ಲಿ, ಬಹಳ ಅಪರೂಪಕ್ಕೊಮ್ಮೆ ನಾವು ಸರ್ಕಾರಿ ಕಛೇರಿಗಳನ್ನ ಎಡತಾಕ್ತೀವಿ... ಅದನ್ನ ಬಿಟ್ರೆ, ಉಳಿದವೆಲ್ಲ ಕೆಲಸಗಳು ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಮುಖೇನ ನಡೆಯುತ್ತೆ. ಸರ್ಕಾರಿ ಕಛೇರಿಗಳೂ ಕೂಡಾ ಇಲ್ಲಿ ಲಂಚಮುಕ್ತವಾಗಿ, ಪ್ರಾಸೆಸ್ಸ್ ಓರಿಯೆಂಟೆಡ್ ಸಿಸ್ಟಮ್ ಆಗಿ ಕೆಲಸ ಮಾಡುತ್ತೆ ಅಂತ ಹೇಳ್ಕೊಳ್ಳೋಕ್ಕೆ ಹೆಮ್ಮೆ ಆಗುತ್ತೆ.

ಇಲ್ಲಿನ ವ್ಯವಸ್ಥೆಯಲ್ಲಿ trust ಇದೆ. India ದಲ್ಲಿ ಕೂತಗೊಂಡು ಕೆಲವರು, ನಿಮ್ಮ ಅಮೇರಿಕನ್ ಎಲೆಕ್ಷನ್ ಸಿಸ್ಟಂ ಚೆನ್ನಾಗಿಲ್ಲ, ಬರೀ ಸಿಗ್ನೇಚರ್ ನೋಡಿ ಜನರನ್ನ identify ಮಾಡ್ತಾರೆ, ಅಂತ ವಿಡಿಯೋ ಮಾಡ್ತಾರಲ್ಲ! ಅದನ್ನ ನೋಡಿ ಹೇಳ್ಬೇಕು ಅನ್ನುಸ್ತು.

ನಮ್ಮ ಮನೆಗಳಲ್ಲಿ ಗಾಜಿನ ಕಿಟಕಿ ಬಾಗಿಲುಗಳಿಗೆ ಮೆಟಲ್ ಕಟಕಟೆ ಹಾಕ ಬೇಕಾಗಿಲ್ಲ - ಮನೆಗೆ ಒಂದು ಸೆಕ್ಯುರಿಟಿ ಸಿಸ್ಟಂ ಇರುತ್ತೆ ಅನ್ನೋದು ಬಿಟ್ರೆ, ಇಲ್ಲಿ ನಾವಂತೂ ಜೈಲಿನಲ್ಲಿ ಬದುಕಿದ ಹಾಗೆ ಬದುಕೋದಿಲ್ಲ.

ಇಲ್ಲಿ ಗಾಳಿ ಸ್ವಚ್ಛವಾಗಿದೆ, ನೀರು ಯಥೇಚ್ಚವಾಗಿ ಸಿಗುತ್ತೆ, cost of living ಕಡಿಮೇನೇ relatively speaking. ಆಮೇಲೆ, ಜನರಿಗೆ ಸಿಸ್ಟಮ್ ಮೇಲೆ ನಂಬಿಕೆ ಹೆಚ್ಚು! ನಿಜವಾಗಿಯೂ, freedom ಅಂದ್ರೆ ಏನು, liberty ಅಂದ್ರೆ ಏನು, justice system ಅನ್ನೋದು ಹೇಗೆ ಕೆಲ್ಸ ಮಾಡುತ್ತೆ ಅಂತ ತಿಳೀತಾ ಹೋದಹಾಗೆ - ಈ ಹಿಂದೆ ನಾವು ಅನುಭವಿಸದ ವ್ಯವಸ್ಥೆಗಿಂತ, ಇಲ್ಲಿ ಬಹಳ ಬಿನ್ನವಾಗಿರೋ ಕಾರಣ - ಒಮ್ಮೆ ಇಲ್ಲಿಗೆ ಬಂದೋರು ಈ ವ್ಯವಸ್ಥೆಯನ್ನ ಇಷ್ಟ ಪಡದೇ ಇರೋ ಚಾನ್ಸೇ ಇಲ್ಲ. ಮುಖ್ಯವಾಗಿ, ಇಲ್ಲಿ ಅವಕಾಶವಾದಿಗಳಾಗಿ ಬಂದವರಿಗೆ ಯಾವತ್ತೂ ನಿರಾಶೆ ಆಗೋದಿಲ್ಲ - sky is the limit! ಅಂತಾರಲ್ಲ ಹಾಗೆ, ಅವರು ಎಷ್ಟು ಎತ್ತರಕ್ಕೆ ಬೇಕಾದ್ರೂ ಬೆಳೀಬಹುದು.

ಉಳಿದೆಲ್ಲ immigrantsಗಳಿಗೂ ನಮಗೂ ಇರೋ ಬಹು ಮುಖ್ಯ ವ್ಯತ್ಯಾಸ ಅಂದ್ರೆ ನಾವು ಇಲ್ಲಿ ಅವಿದ್ಯಾವಂತರಾಗಿ,  ಭಿಕ್ಷೆ ಬೇಡಿಕೊಂಡಾಗಲಿ, ಹಸಿವಿನಿಂದ ಕಂಗಾಲಾಗಿಯಾಗಲಿ, religious oppression ನಿಂದಾಗಲೀ, political indifference ನಿಂದಾಗಲೀ, asylum seeking ನಿಂದಾಗಲೀ ಬಂದಿಲ್ಲ... ನಾವು ಇಲ್ಲಿ skilled workers ಆಗಿ, engineers ಆಗಿ, doctors ಆಗಿ ಬಂದವರಿಗೆ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ... ಕರ್ಮ ಜೀವನವನ್ನ ಆಧರಿಸಿಕೊಂಡು, ನಮ್ಮ ಕೆಲಸವನ್ನು, ಕೈಕಾಲುಗಳನ್ನು ನಂಬಿಕೊಂಡು ಬಂದವರು. ಇದರಿಂದಾಗಿ ನಮ್ಮಂಥವರ ಅನಿವಾಸಿ ಅಮೇರಿಕನ್ ಅನುಭವ ಇತರೆ ದೇಶದವರ ಅನುಭವಕ್ಕಿಂತ ಬಿನ್ನವಾಗಿರಲು ಸಾಧ್ಯ!

25 ವರ್ಷಗಳ ಅಮೇರಿಕನ್ ಬದುಕಿನ ಬಗ್ಗೆ ಹೇಳಿದ್ರೂ ಕಮ್ಮೀನೆ. ಈಗ ಇಷ್ಟು ಸಾಕು, ಸಮಯ ಬಂದಾಗ ಇನ್ನೊಂದಿಷ್ಟು ವಿಚಾರಗಳನ್ನ ಸೇರಿಸ್ತಾ ಹೋಗ್ತೀನಿ.


Thursday, March 06, 2025

ಆರೋಗ್ಯವೇ ಭಾಗ್ಯ

ಇತ್ತೀಚಿನ ದಿನಗಳಲ್ಲಿ ಜನರಿಗೆಲ್ಲ ತಮ್ಮ ತಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ಇದೆ ಅಂತ ಅಂದುಕೋ ಬಹುದು.

ಜನರೆಲ್ಲ Organic food ಐಟಮ್ಮುಗಳನ್ನು ಖರೀದಿ ಮಾಡ್ತಾರೆ. ಈಗಂತೂ ಈ hypher inflation ಕಾಲದಲ್ಲಿ organic food item ಅಂದ್ರೆ ಇನ್ನೂ costly. 

ಜನರಿಗೆಲ್ಲ ತಾವು ಏನು ತಿಂತೀವಿ, ತಿನ್ನಬಾರದು ಅನ್ನೋದರ ಬಗ್ಗೆ ಹೆಚ್ಚು ತಿಳುವಳಿಕೆ ಇದ್ದಂತೆ ತೋರುತ್ತೆ.

ನಾವು ಹೆಚ್ಚಿನ ಮಟ್ಟಿಗೆ ಆರೋಗ್ಯ ಅಂದ್ರೆ, ದೈಹಿಕವಾಗಿ ಆರೋಗ್ಯ ಅಂದುಕೋತಿವಿ. ಆದ್ರೆ, ಸಾಮಾಜಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಎಲ್ಲರೀತಿಯಿಂದಲೂ ಆರೋಗ್ಯವಾಗಿರೋದು ಬಹಳ ಮುಖ್ಯವಾಗುತ್ತೆ.

A sound mind in a sound body ಅನ್ನೋದು ಎಷ್ಟು ಸತ್ಯವೋ, ಅಷ್ಟೇ ಸತ್ಯ - A sound body with a sound mind.

ಯಾಕೆ ಹೀಗೆ ಹೇಳ್ತಾ ಇದ್ದೀನಿ ಅಂದ್ರೆ ಈ social media ಪರಾಕಾಷ್ಟೆಯ ಕಾಲದಲ್ಲಿ, ನಿಮ್ಮ ಮಾನಸಿಕ ಸ್ವಾಸ್ಥ್ಯ ಹಾಳೋಗೋದಕ್ಕೆ ಒಂದೆರಡು ಕಾರಣಗಳಲ್ಲ, ಹಲವಾರು ಕಾರಣಗಳು ತಂತಾನೇ ಹುಟ್ಟಿಕೊಂಡು ಬರಬಹುದು. ಕೆಲವೊಮ್ಮೆ ಈ mis-information ಕಾಲದಲ್ಲಿ, ಯಾವುದು ಸತ್ಯ, ಯಾವುದು ಮಿಥ್ಯ ಅನ್ನೋದನ್ನ ಹೇಳೋದೇ ಕಷ್ಟ... ಹೀಗಿದ್ದಕ್ಕೆ ನನ್ನಂಥವರು ಕೆಲವರು ಹೆಚ್ಚಿನ ಸೊಶಿಯಲ್ ಮೀಡೀಯ ಪೋಸ್ಟ್‌ಗಳನ್ನು consume ಮಾಡ್ದೇ ಇರೋದು ಅನ್ಸುತ್ತೆ.

ಮೊನ್ನೆ ನನ್ನ ಸ್ನೇಹಿತರೊಬ್ರು ಹೇಳ್ತಾ ಇದ್ರು: "ಒಮ್ಮೆ ನಲವತ್ತು ವರ್ಷ ದಾಟಿದ ಮೇಲೆ ಗಂಡಸರಿಗೆ ತಮ್ಮ ತಲೆಯ ಮೇಲಿನ ಕೂದಲಿನ ಚಿಂತೆ, ಹೆಂಗಸರಿಗೆ ಬೊಜ್ಜಿನ ಚಿಂತೆ!" ಅಂತ.

ನಮ್ ಆಫ಼ೀಸಿನಲ್ಲೂ ಕೆಲವರಿದ್ದಾರೆ, ಅವರು ಅಫ಼ಿಷಿಯಲ್ಲಾಗಿ ಐವತ್ತು ದಾಟಿದ್ರೂ, forever 21 ಅನ್ನೋ ಥರ ಡ್ರೆಸ್ ಮಾಡ್ತಾರೆ! ತಮ್ಮ attitude ಗಳಲ್ಲಿ ತಾವು young ಅಂತ ತೋರಿಸಿಕೊಳ್ತಾರೆ. ಇಂಥವರೇ ಎಲ್ಲದನ್ನೂ over ಆಗಿ ಮಾಡೋದು.

ಈಗ ನಲವತ್ತು, ಐವತ್ತಕ್ಕೆ ಬಂದ ಜನ ಎಲ್ಲ, ಒಂದು ಕಾಲದಲ್ಲಿ ತಮ್ಮ 20-30ಗಳನ್ನ enjoy ಮಾಡಿರ್ತಾರಲ್ವ? ಯಾವುದೇ complaint ಇಲ್ಲದೇ? ಹಾಗಿದ್ದಾಗ ಜನರು ತಮ್ಮ 40, 50, 60ರ ವರ್ಷಗಳನ್ನ ಅಷ್ಟೇ ಸಹಜವಾಗಿ ಯಾಕೆ enjoy ಮಾಡೋಲ್ಲ?

ಎಲ್ಲರೂ ತಾವು young ಆಗಿ ಕಾಣಲೇ ಬೇಕು ಅಂತ ಏನಾದ್ರೂ ರೂಲ್ಸ್ ಇರುತ್ತಾ? ನಾವು ಹೇಗೆ ಕಾಣ್ತೀವಿ ವಯಸ್ಸಾದ ಮೇಲೆ ಅನ್ನೋ ನಿದರ್ಶನಕ್ಕೆ ನಮ್ಮ ನಮ್ಮ ತಂದೆ-ತಾಯಿಗಳೇ ಇಲ್ವೇ? ಯಾವುದೇ ಸಮಾಜದಲ್ಲಿ ವಯಸ್ಸಾದವರನ್ನ ನಿರ್ಲಕ್ಷ್ಯ ಮಾಡಲಾಗುತ್ತಾ? ನಮ್ಮ ಕಾರ್ಪೋರೇಟ್ world ನಲ್ಲಿ ಹೇಗೆ? ಹೊಸದಾಗಿ ಕೆಲಸಕ್ಕೆ ಸೇರಿರೋ millenials, Gen-Z ಕಿಡ್ಸ್ ನಡುವೆ ಕೆಲ್ಸ ಮಾಡೋಕೆ ಅಂಜಿಕೆ-ಅಳುಕಾದರೂ ಏಕೆ? ಎಲ್ಲಕ್ಕಿಂತ ಮುಖ್ಯವಾಗಿ - Aging ಅನ್ನೋದು ಸಹಜವಾಗಿ ನಡೆಯೋ ಪ್ರಕ್ರಿಯೆ, ಅದನ್ನ ವಿರೋಧಿಸಿ ಅಥವಾ ಬಿಡಿ, ಅದಂತೂ ನಿಲೋದಿಲ್ಲ, ಅಲ್ವೇ?

ನೀವು 4 ಅಥವಾ 5 ವರ್ಷದ ಮಗು ಅಲ್ಲ ಅಂದ್ರೆ ಅದರ ನಂತ್ರ ಬರೋ ಎಲ್ಲ ವರ್ಷಗಳಲ್ಲೂ ನೀವು ವಯಸ್ಸಾದವರೇ... ಯಾಕೆಂದ್ರೆ, ಕೇವಲ 4-5 ವರ್ಷದ ಮಕ್ಕಳು ಮಾತ್ರ, ಹೆಂಗ್ ಬೀಳ್ತಾರೋ ಹಂಗೆ ಎದ್ದು ಕುತಗೊಂತಾರೆ. ಮೇಲ್ಗಡೆ stairs ಇಂದ ಉರುಳಿ ಬಿದ್ರೂ ಏನೂ ಆಗೋದಿಲ್ಲ ಅನ್ನೋ ವಯಸ್ಸು ಅದು. ಅದೇ, ನಾವೇನಾದ್ರೂ ಈಗ ಮೆಟ್ಟಿಲು ಇಳಿಯುವಾಗ ಸ್ವಲ್ಪ ಜಾರಿದ್ರೂ ಅದು ಉಳುಕಾಗಿ-ಅಳುಕಾಗಿ ಸುದಾರಿಸ್ಕೊಳ್ಳೋಕ್ಕೇ ವಾರಗಳೇ ಬೇಕಾಗಬಹುದು.

ನನ್ನ ವಿಚಾರ ಇಷ್ಟೇ... ಬದುಕಿರುವ ಎಲ್ಲರಿಗೂ ವಯಸ್ಸಾಗೋದು ಸಹಜ. ಹಾಗಿದ್ದಾಗ, ನಾವು ನಮ್ಮ ವಯಸ್ಸನ್ನ ಮುಚ್ಚಿಡ್ತಾ ಇದ್ದೀವಿ ಅನ್ನೋ ಪ್ರಯತ್ನನೇ ತಪ್ಪು! ನಾವು ಕನ್ನಡಿಯಲ್ಲಿ ನೋಡ್ಕೊಳ್ಳೋ ನಮ್ಮನ್ನೇ ನಾವು ಇಷ್ಟಪಡಲ್ಲ ಅಂದ ಮೇಲೆ, ನಮ್ಮ ಮೇಲಿನ ಯಾರ ಇಷ್ಟ-ಕಷ್ಟಾ ತಗೊಂಡು ಏನ್ ತಾನೇ ಮಾಡ್ತೀರಾ? ನಾವು ಹೇಗಿದ್ದೇವೋ ಹಾಗೆ ಇರ್ತೀವಿ. ಒಬ್ಬರು ದಪ್ಪ-ಸಣ್ಣ-ಕುಳ್ಳ-ಎತ್ತರವಾಗಿ ಇದ್ದಾರೆ ಅಂದ್ರೆ, ಅದಕ್ಕೆ ಹಲವಾರು ಕಾರಣಗಳಿರುತ್ತೆ. ನಾವು ಬುದ್ಧಿವಂತರು - ಎಲ್ಲವೂ ನಮ್ಮ control ನಲ್ಲಿಯೇ ಇದೇ ಅಂತ ಅಂದುಕೊಂಡ್ರೆ ಅದರಷ್ಟು ದೊಡ್ಡ ಮೂರ್ಖತನ ಮತ್ತೊಂದಿಲ್ಲ.

ಎಲ್ಲಕ್ಕಿಂತ ಮುಖ್ಯ ಅಂದ್ರೆ, ನಮ್ಮ ಮಾನಸಿಕ ಸ್ವಾಸ್ಥ್ಯ around -- how do we look and how do we feel TODAY! ಇಷ್ಟು clarity ನಮ್ಮ ಮೇಲೆ ನಮಗೆಲ್ಲ ಬಂತು ಅಂದ್ರೆ, ಅರ್ಧ ಆರೋಗ್ಯ ಬಂದಂತೇನೆ. ಇನ್ನು ಉಳಿದ ಅರ್ಧ ನಮ್ಮ ಇತರ ಆಯಾಮಗಳ ಮೇಲೆ ನಿಂತಿರುತ್ತೆ.

ಆರೋಗ್ಯ ಮುಖ್ಯ - ಅದನ್ನ ನೋಡಿಕೊಂಡು, ಕಾಪಾಡಿಕೊಂಡು, ಉಳಿಸಿಕೊಂಡು ಹೋಗೋ ಜವಾಬ್ದಾರಿ ನಮ್ಮದೆಲ್ಲರದು - ಹೀಗಂತ ಅನ್ಸಿದ್ದು ಈ ಹೊತ್ತಿನ ತತ್ವ! ನಿಮಗೇನ್ ಅನ್ಸುತ್ತೆ?

Friday, February 28, 2025

ಕಾಡುವ ಹಾಡು: ಬಾನಲ್ಲು ನೀನೆ ಭುವಿಯಲ್ಲು ನೀನೆ

ಕಾಡುವ ಹಾಡು: ಬಾನಲ್ಲು ನೀನೆ ಭುವಿಯಲ್ಲು ನೀನೆ

ಚಿತ್ರ: ಬಯಲು ದಾರಿ

ಗೀತರಚನೆ: ಚಿ. ಉದಯಶಂಕರ್

ಸಂಗೀತ: ರಾಜನ್-ನಾಗೇಂದ್ರ


ಗಾಯಕರು: ಎಸ್. ಜಾನಕಿ

ನಟಿ: ಕಲ್ಪನ, ಅನಂತ್‌ನಾಗ್

ಛಾಯಾಗ್ರಾಹಕ: ಆರ್. ಚಿಟ್ಟಿಬಾಬು

ನಿರ್ದೇಶನ: ದೊರೈ-ಭಗವಾನ್


ಚಿತ್ರ ಬಿಡುಗಡೆಯಾದ ವರ್ಷ: 1976

ಚಿತ್ರಕತೆ, ಕಾದಂಬರಿ: ಭಾರತೀಸುತ

ಸುಮಾರು 50 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರ, ಮತ್ತು ಈ ಹಾಡು ಇಂದಿಗೂ ನಮ್ಮೆಲ್ಲರ  ಮನಸ್ಸಿನಲ್ಲಿ ಹಾಸಿ ಹೊಕ್ಕಾಗಿ ನಿಂತಿದೆ.

ಹಾಡಿನ ಮೊದಲ ಹತ್ತೊಂಬತ್ತು ಸೆಕೆಂಡುಗಳು, ಸಂಗೀತ ಮಾಂತ್ರಿಕ ರಾಜನ್-ನಾಗೇಂದ್ರರ ಕ್ರಿಯೇಟಿವಿಟಿಯನ್ನು ಎತ್ತಿ ಹಿಡಿಯುತ್ತದೆ.

ಸುಮ್ಮನೇ "ಬಾನಲ್ಲು ನೀನೇ..." ಎಂದು ಹಾಡನ್ನು ಆರಂಭ ಮಾಡಿದರೆ ಏನು ಪ್ರಯೋಜನ? ಅದಕ್ಕೊಂದು ಹಿನ್ನೆಲೆ ಇರದೇ ಹೋದರೆ? ಈ ಸಂದರ್ಭದಲ್ಲೇ ಮಲೆನಾಡಿನ ಚಿತ್ರಣವನ್ನು ಪ್ರತಿನಿಧಿಸುವ ಹಸಿರು-ಹೊನ್ನೆಲೆಗಳ ನಡುವೆ ಮಿನುಗು ತಾರೆ ಕಲ್ಪನಾ ಹಳದಿ ಸೀರೆಯಲ್ಲಿ ಪ್ರಕಟಗೊಳ್ಳುವ ಹೊತ್ತಿಗೆಲ್ಲ ಹಾಡಿನ ರಾಗ ಮತ್ತು ಮುಖ್ಯವಾಗಿ ತಾಳ ಆರಂಭಗೊಂಡು ಒಂದು ಪುಳಕಿತ ಮತ್ತು ರಮಣೀಯ ಸನ್ನಿವೇಶವನ್ನು ಸೃಷ್ಟಿಸುತ್ತವೆ.

ಒಟ್ಟು 32 ಸೆಕೆಂಡುಗಳ ಕಾಲ ಇಂಟ್ರೋ ಮ್ಯೂಸಿಕ್ ಕೊಟ್ಟಿಗೆ ಹಾರದ (ಚಾರ್ಮಾಡಿ ಘಾಟ್) ಪರಿಸರವನ್ನು ಯಥೇಚ್ಚವಾಗಿ ಪರಿಚಯ ಮಾಡಿಕೊಡುವುದರ ಜೊತೆಗೆ, ಉಲ್ಲಸಿತ ನಾಯಕಿ ಕಲ್ಪನಾಳನ್ನು ನೋಡುಗರಿಗೆ ಪರಿಚಯಿಸುತ್ತದೆ.

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ

ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ|

ಹಾಡಿನ ಪ್ರತಿಯೊಂದು ಸಾಲೂ ಕೂಡ, ಕಡಿಮೆ ಒತ್ತಕ್ಷರಗಳಿಂದ ಪೋಣಿಸಿಕೊಂಡು ಪ್ರಾಸಬದ್ಧವಾಗಿ ಕೊನೆಗೊಂಡಿದೆ.

ಹಾಡು ಮೇಲ್ನೋಟಕ್ಕೆ ಪ್ರೇಮಗೀತೆಯಾಗಿ ಕಂಡರೂ, ಅದರ ಅಂತರಾಳದಲ್ಲಿ ದೇವರನ್ನೂ ಕೂಡಾ ಸ್ಮರಿಸಿದಂತಿದೆ.

ಪ್ರೀತಿಯಲ್ಲಿ ಕರಗಿ ಹೋದ ಪ್ರಿಯತಮೆ, ತನ್ನ ಮನದಾಳದಲ್ಲಿ ನೆಲೆಯೂರಿದ ಪ್ರಿಯಕರನ್ನು ಹೊರಗಿನ ಆಯಾಮಗಳಿಗೂ ಹೋಲಿಸಿ, ಅವನನ್ನು ಎಲ್ಲ ಕಡೆಯಲ್ಲೂ ಕಾಣತೊಡಗುತ್ತಾಳೆ. ಆಕೆಗೆ, ಬಾನು-ಭೂಮಿಯ ಬಯಲುಗಳಲೆಲ್ಲ ಕಡೆಯಲ್ಲೂ ತನ್ನ ಪ್ರಿಯತಮನೇ ಕಾಣುವ ದೃಶ್ಯ.

ಈ ಹಾಡಿಗೆ ಸಂಬಂಧಿಸಿದಂತೆ, ಕಲ್ಪನಾ ಅವರ ಕಾಸ್ಟ್ಯೂಮ್ ಮತ್ತು ಮೇಕಪ್ ವಿಚಾರದಲ್ಲಿ ಎರಡು ಮಾತೇ ಇಲ್ಲ. ಇರುವ ಸರಳ ವಿಷಯವನ್ನು, ತನ್ನ ಉದ್ದವಾದ ಸರ/ನೆಕ್ಲೇಸ್ ಬಳಸಿ, ಅದರ ಜೊತೆ ಆಡಿಕೊಂಡು, ನಲಿದಾಡಿಕೊಂಡು ಹೇಳುವ ಕ್ಲೋಸ್ ಅಪ್ ವಿಡಿಯೋ ತುಂಬಾ ಇಷ್ಟವಾಗುತ್ತದೆ. ಬಾನಿಗೆ ಬಾನಿನ ಹಿನ್ನೆಲೆ, ಭುವಿಗೆ ಭುವಿಯ ಹಿನ್ನೆಲೆಯನ್ನು ಹಿಡಿದಿರುವ ಛಾಯಾಚಿತ್ರಣದ ಕೌಶಲ್ಯವನ್ನು ನೀವು ಇಲ್ಲಿ ನೋಡಬಹುದು.

ಈಗೆಲ್ಲ ಬೈಸಿಕಲ್‌ನಲ್ಲಿ ಯಾರಾದರೂ ಡಬಲ್ ರೈಡ್ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ, ಮುಂದಿನ ಕೆಲವು ಕ್ಷಣಗಳು, ಅನಂತನಾಗ್-ಕಲ್ಪನ ಬೈಸಿಕಲ್‌ನಲ್ಲಿ ಓಡಾಡುವುದನ್ನು ನೆನೆಸಿಕೊಂಡು ನಾಯಕಿಯ ಮುಖ ಪುಲಕಗೊಳ್ಳುವುದನ್ನು ಬಹಳ ಹತ್ತಿರದಿಂದ ನೋಡುವಂತೆ ಸೆರೆಹಿಡಿದಿದ್ದಾರೆ.

ಹೂವಲ್ಲಿ ನಿನ್ನ ಮೊಗವನ್ನು ಕಂಡೆ


ಮೊಗದಲ್ಲಿ ನಿನ್ನ ಹೂನಗೆಯ ಕಂಡೆ

ನಗುವಲ್ಲಿ ನಿನ್ನ ಚೆಲುವನ್ನು ಕಂಡೆ

ಚೆಲುವಲ್ಲಿ ನಿನ್ನ ಒಲವನ್ನು ಕಂಡೆ

ಒಲವಿಂದ ಬಾಳ ಹೊಸದಾರಿ ಕಂಡೆ|

ಹೂವು-ಮೊಗ-ಹೂನಗೆ-ಚೆಲುವು-ಒಲವುಗಳನ್ನು ತಳುಕು ಹಾಕಿಕೊಂಡು ಈ ಸಾಲುಗಳು ಒಂದನ್ನೊಂದು ಚೆನ್ನಾಗಿ ಪೋಷಿಸಿಕೊಂಡಿವೆ.

ಹೂವಿನಿಂದ ಆರಂಭವಾದ ಒಲವಿನಿಂದ ಬಾಳಿನ ಹೊಸದಾರಿಯನ್ನು ಕಂಡುಕೊಂಡದ್ದನ್ನು ಜಗತ್ತಿಗೆ ಸಾರುತ್ತಿರುವ ನಾಯಕಿಯ ಮನದಲ್ಲಿ ಯಾವುದೇ ಅಳುಕಿಲ್ಲ, ಅಂಜಿಕೆ ಇಲ್ಲ.

ಮುಗಿಲಲ್ಲೂ ನೀನೇ ಮನದಲ್ಲೂ ನೀನೇ


ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ|


ಒಲವಿನಿಂದ ಹೊಸದಾರಿ ಕಂಡ ನಾಯಕಿಗೆ ಮುಗಿಲು-ಮನದಲ್ಲಿ ತೇಲುವ ನಾಯಕನ ಚಿತ್ರ ಮೂಡಿ ಮರೆಯಾಗುತ್ತದೆ. ಸುಂದರವಾದ ಸಂಗೀತದ ಹಿನ್ನೆಲೆಯಲ್ಲಿ, ಕನ್ನಡ ಚಿತ್ರಗಳಲ್ಲಿ ಆಗಿನ ಕಾಲದಲ್ಲಿ ಹೆಲಿಕ್ಪಾಪ್ಟರುಗಳನ್ನು ಬಳಸಿದ್ದರು ಎಂಬು ಅಭಿಮಾನವೂ ಮೂಡುತ್ತದೆ.

ಪ್ರೀತಿ ಎಂದರೆ ಬರೀ ಬಯಲಿನ ಜೀವನವಷ್ಟೇ ಏನೋ... ಎನ್ನುವಂತೆ ಒಂದು ಸುಂದರವಾದ ಆಲಾಪನೆ ಆರಂಭವಾಗುತ್ತದೆ. ಸುಮಾರು ಹದಿನೆಂಟು ಸೆಕೆಂಡುಗಳ ಈ ಆಲಾಪನೆಯಲ್ಲಿ ನಾಯಕಿ ಬಯಲಿನ ತುಂಬೆಲ್ಲ ಓಡಾಡಿ, ಬಾನಿಗಷ್ಟೇ ಬಯಲಲ್ಲ, ಭುವಿಗೂ ಬಯಲಿದೆ ಎಂದು ಸಾರುವಂತೆ ಕಾಣುತ್ತದೆ.

ಪ್ರೀತಿ-ಒಲವು-ಚೆಲುವು ಎಂದರೆ ಬರೀ ಸುಖವಷ್ಟೇ ಅಡಗಿದೆ ಎಂದು ಹೇಳಿದವರಾರು? ಮುಂದಿನ ಐದು ಸಾಲುಗಳು, ಜೀವನದ ಪರಿಪೂರ್ಣತೆಯನ್ನು ಸೂಕ್ಷ್ಮವಾಗಿ ಹೇಳುತ್ತವೆ.

ಬಿರುಗಾಳಿ ಬೀಸಿ ಎದುರಾದರೇನು


ಭೂಕಂಪವಾಗಿ ನೆಲ ಬಿರಿದರೇನು

ಕಡಲೆಲ್ಲ ಹೊಮ್ಮಿ ಬಳಿ ಬಂದರೇನು

ಮಳೆಯಂತೆ ಬೆಂಕಿ ಧರೆ ಗಿಳಿದರೇನು

ಜೊತೆಗಿರಲು ನೀನು ಭಯಪಡೆನು ನಾನು|


ಜೀವನವೆಂದರೆ ಹೂವು-ಚೆಲುವು-ಒಲವುಗಳ ಜೊತೆಗೆ ಇವು ಕೂಡ ಬರಬಹುದು, ಬಂದರೆ ಏನಾದೀತು? What's the worst that can happen? If you're with me, I'm ready to face anything.. ಎಂದು ಧೈರ್ಯ ಸಾರುವ ಸಾಲುಗಳು.

ಬಿರುಗಾಳಿ ಬೀಸಿ ಎದುರಾಗಬಹುದು, ಭೂಕಂಪದಿಂದ ನೆಲ ಬಿರಿಯಬಹುದು, ಕಡಲೆಲ್ಲ ಹೊಮ್ಮಿ ಒಮ್ಮೆಲೇ ಬಳಿ ಬರಬಹುದು, ಮಳೆಯಂತೆ ಬೆಂಕಿಯೇ ನೆಲಕ್ಕೆ ಸುರಿಯಬಹುದು.. ಇಷ್ಟೆಲ್ಲ ಆದರೂ ಅಥವಾ ಇನ್ನೇನೇ ಆದರೂ ಎಲ್ಲಿಯವರೆಗೆ ನಿನ್ನ ಜೊತೆ ಇರುವುದೋ ಅಲ್ಲಿಯವರೆಗೆ ಭಯ ಪಡೆನು ಎಂದು ಅಭಯವನ್ನು ಸೂಸುವ ಸಾಲುಗಳು.

ಈ ಪ್ಯಾರದಲ್ಲಿ ಒಂದು ರೀತಿ, ಪ್ರೇಮ ಕವನದಲ್ಲಿ ದಿಢೀರನೆ ಹೆದರಿಕೆಯನ್ನು ಹುಟ್ಟಿಸುವಂತೆ ಮಾಡುತ್ತವಾದರೂ, ಕೊನೆಯ ಸಾಲು - "ರವಿ-ಶಶಿ ಎರಡರಲ್ಲೂ ನೀನೇ" ಎಂದು ಮತ್ತೆ ಪ್ರೀತಿಯ ತನ್ಮಯತೆಯನ್ನು ಸಾರಿ ಸಮಾಧಾನ ಮಾಡುತ್ತವೆ.

ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ


ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ|

ಪ್ರೇಮ-ಪ್ರೀತಿ ಅಂದರೆ ಹೀಗೇ... ಅದಕ್ಕೊಂದು ಆಕಾರ, ಗಾತ್ರ, ಅಂಕಣ, ಬಣ್ಣ, ಗುಣ, ಮಿತಿ, ಪರಿಮಿತಿ - ಯಾವುದೂ ಇಲ್ಲ.

ಪ್ರೇಮ-ಪ್ರೀತಿಯಲ್ಲಿ ತೊಡಗಿದವರು, ಅಥವಾ ಬಿದ್ದವರು, ಎಂಥಾ ಒಂದು ಸಂಕಷ್ಟದ ಸ್ಥಿತಿ ಬಂದರೂ ಜೊತೆಯಾಗಿಯೇ ಎದುರಿಸುತ್ತೇವೆ ಎಂಬ ನಂಬಿಕೆಯಲ್ಲಿ ಒಂದಾದಾಗ ಬಾಳಿಗೆ ಒಂದು ಅರ್ಥ ಬರುತ್ತದೆ. ಅದೇ ರೀತಿ, ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ಎದುರಿಸುವ ಪ್ರತಿಯೊಂದು ದುಗುಡ, ದುಮ್ಮಾನವೂ ಅವರ ಪ್ರೀತಿಯನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.

ಈ ಹಾಡಿನ ಸಾಲುಗಳನ್ನು ಹೇಗೆ ಚಿತ್ರೀಕರಿಸಬಹುದಿತ್ತು ಎಂದು ಯೋಚಿಸಿದಾಗ, ನಿರ್ದೇಶಕರ ಸ್ಥಳದ ಆಯ್ಕೆಯ ಬಗ್ಗೆ ಶಬಾಶ್ ಎನ್ನಲೇ ಬೇಕಾಗುತ್ತದೆ. ಯಾವುದೇ ಒಂದು ಸಹಾಯವಿಲ್ಲದೇ ಕಲ್ಪನಾ ಅವರು ಅನಾಯಾಸವಾಗಿ ಈ ಕಲ್ಲಿನ ಮೇಲೆ ನಿಂತು ಅಭಿನಯವನ್ನು ನೀಡಿದ್ದು ಹಾಡಿನ ಆಳಕ್ಕೆ ಮತ್ತಷ್ಟು ಅರ್ಥವನ್ನು ಕಲ್ಪಿಸುತ್ತದೆ.

ಜೊತೆ ಇರಲು ನೀನು, ಭಯಪಡೆನು ನಾನು - ಎಂದು ಈ ಜೋಡಿ ಮರಗಳ ಅಡಿಯಲ್ಲಿ ಸೇರುವಾಗ - ಕಾಡ್ಗಲ್ಲು ಮತ್ತು ಅದರ ಜೊತೆಗಿದ್ದ ಕಷ್ಟ-ಕಾರ್ಪಣ್ಯಗಳೆಲ್ಲವೂ ಮಂಜಿನಂತೆ ಮರೆಯಾಗಿ ಹೋಗುತ್ತವೆ. ಇಲಿ ತೋರಿಸಿರುವ ಎರಡು ಮರಗಳಲ್ಲಿ ಒಂದು ಮರ ಈಗಲೂ ಚಾರ್ಮಾಡಿ ಘಾಟ್ ನಲ್ಲಿದೆ, ಇನ್ನೊಂದು ಮರ ಕಾಲ ಕ್ರಮೇಣ ಸತ್ತು ಹೋಗಿದೆ.

ಈ ಹಾಡನ್ನು ಇಲ್ಲಿ ನೋಡಬಹುದು.

***

ಕನ್ನಡದ ಮಿನುಗುತಾರೆ ಕಲ್ಪನ (1943-1979) ಅವರು, ತಮ್ಮ 15 ವರ್ಷದ ಸಿನಿಮಾ ಜೀವನದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳ ಲೀಡ್ ರೋಲ್‌ನಲ್ಲಿ ನಟಿಸಿದ್ದನ್ನು ಗಮನಿಸಿದರೆ, ಆಗಿನ ಕಾಲದಲ್ಲಿ ಅವರು ಎಂಥ ಪ್ರತಿಭಾಶೀಲರಾಗಿದ್ದರು, ಅದೆಷ್ಟು ಪರಿಶ್ರಮವನ್ನು ಪಟ್ಟಿದ್ದರು, ಎಂದು ಊಹಿಸಿದಾಗಲೆಲ್ಲ ಅವರ ಮೇಲೆ ನಮ್ಮ ಅಭಿಮಾನ ಮತ್ತಷ್ಟು ಹೆಚ್ಚುತ್ತದೆ. ಕಲ್ಪನಾ ಅವರು ಆಗಿನ ಕಾಲದಲ್ಲಿ ಮಾತ್ರ ಅತ್ತ್ಯುತ್ತಮ ನಟಿಯಾಗಿರಲಿಲ್ಲ, ಕನ್ನಡಿಗರ ಮನದಲ್ಲಿ ಅವರು ಎಂದಿದ್ದರೂ ಅತ್ಯುತ್ತಮ ನಟಿಯೇ.

ಈ ಹಾಡಿನೊಂದರಲ್ಲಿಯೇ, ಗಾಯಕಿ ಎಸ್. ಜಾನಕಿಯವರು ಎಲ್ಲ ಪ್ರೇಮಿಗಳಿಗೂ ಹತ್ತಿರವಾಗುತ್ತಾರೆ.

ಈ ಹಾಡಿನ ಅಭಿನಯದಲ್ಲಿ ಕಲ್ಪನಾ ಅವರಿಗೆ ಸರಿಸಾಟಿ ಕೊಡುವ ಮತ್ತೊಬ್ಬ ಅಭಿನೇತ್ರಿಯನ್ನು ಹುಡುಕುವುದು ಕಷ್ಟವಾಗುತ್ತದೆ

ಇನ್ನು ಹಾಡಿನ ಸಂಗೀತ ಸಂಯೋಜನೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಹಾಡಿನ ಸ್ವಾರಸ್ಯ, ಪ್ರೇಮಿಯ ಆಂತರ್ಯ, ಸಾಹಿತ್ಯದ ಪ್ರತಿಯೊಂದು ಪದವನ್ನೂ ಸಹ ಸ್ಫುಟವಾಗಿ ಮತ್ತು ಸಹಜವಾಗಿ ಚಿತ್ರೀಕರಿಸಲು ಅನುವಾಗುವಂತೆ ಸಂಗೀತವನ್ನು ಹೆಣೆದಿದ್ದಾರೆ. ಇಂತಹ ಹಾಡುಗಳಿಂದಲ್ಲವೇ ನಾವು ರಾಜನ್-ನಾಗೇಂದ್ರ ಅವರಂಥ ಜೋಡಿಯನ್ನು ಎಂದೂ ಮರೆಯದಂತಾಗಿರುವುದು.

ಇನ್ನು ನಿರ್ದೇಶಕ ದೊರೈ-ಭಗವಾನ್ ಅವರು, ಆಗೆಲ್ಲ ರಾಜ್‌ಕುಮಾರ್ ಅವರನ್ನು ಹಾಕಿಕೊಂಡು ನಿರ್ದೇಶನ ಮಾಡುತ್ತಿದ್ದ ಕಾಲದಲ್ಲಿ, ಮೊಟ್ಟ ಮೊದಲನೇ ಬಾರಿಗೆ ಅನಂತನಾಗ್-ಕಲ್ಪನಾ ಅವರನ್ನು ಈ ಕತೆಗೆ ನಾಯಕ-ನಾಯಕಿಯನ್ನಾಗಿ ಆರಿಸಿಕೊಂಡಿರುವುದೂ "ಬಯಲುದಾರಿ" ಚಿತ್ರದ ಒಂದು ವಿಶೇಷ. 

 

ರಾಜನ್-ನಾಗೇಂದ್ರ

                                                    ದೊರೈ-ಭಗವಾನ್

Thursday, February 13, 2025

ಈ ವರ್ಲ್ಡ್ ಲೀಡರುಗಳ ಎನರ್ಜಿ ಹಿಂದಿನ ರಹಸ್ಯ ಏನು?

ಇತ್ತೀಚೆಗೆ ನಮ್ಮ ರಾಜಕೀಯ ಮುಖಂಡರನ್ನೆಲ್ಲ ನೋಡಿದ್ರೆ, ಇವ್ರಿಗೆಲ್ಲ ವಯಸ್ಸಾಗ್ತಾ ಇದ್ದಂಗೆ ಒಂದು ರೀತಿಯ ಹರೆಯ-ಹುಮ್ಮಸ್ಸು ಎದ್ದು ಕಾಣಿಸುತ್ತಲ್ಲಾ?

ಕಳೆದ ತಿಂಗಳು ಆಕ್ಟಾಜೆನೇರಿಯನ್ ಅಂದ್ರೆ, ಎಂಭತ್ತರ ಹರೆಯದ ನವಯುವಕ ಬೈಡೆನ್ ಅಧಿಕಾರದಿಂದ ಕೆಳಗಿಳಿದ ಮೇಲೆ, ಅವರಿಗಿಂತ ಸ್ವಲ್ಪವೇ ವಯಸ್ಸಿನಲ್ಲಿ ಕಡಿಮೆ ಇದ್ದು, ಇನ್ನೆರಡು ವರ್ಷಗಳಲ್ಲಿ ಎಂಬತ್ತು ಮುಟ್ಟುವ ನವ ತರುಣ.

ಇವರನ್ನೆಲ್ಲ ನೋಡಿದ್ರೆ ಅನ್ಸುತ್ತೆ, Eighty is new fifty ಅಂತ. ನಮಗೆಲ್ಲ ಒಂದು ದಿನ ಆಫ಼ೀಸಿಗೆ ಹೋಗಿ ಬಂದ್ರೆ ಉಸ್ಸಪ್ಪ ದಸ್ಸಪ್ಪಾ ಅನ್ಸೋವಾಗ, ಇವರಿಗೆಲ್ಲ ಅದು ಎಲ್ಲಿಂದ ಎನರ್ಜಿ ಬರುತ್ತೆ?

ಈ ನಿಟ್ಟಿನಲ್ಲಿ 74 ವರ್ಷದ ಮೋದಿಯವರನ್ನೂ ಸೇರಿಸಿ ಹೇಳ್ಬೇಕು, ಅವರಂತೂ ದಿನದ 24 ಗಂಟೆಯೂ ಕೆಲ್ಸ ಮಾಡೋರ ಹಾಗೆ ಕಾಣಿಸ್ತಾರೆ.

ಯಾವ ಪಕ್ಷದ ಲೀಡರುಗಳೇ ಇರಲಿ, ಈ ರಾಜಕೀಯ ‍ರ್ಯಾಲಿಗಳಲ್ಲಿ ಭಾಗವಹಿಸಿ, ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯೋದಿದೆ ನೋಡಿ, ಅದರಷ್ಟು ಕಷ್ಟದ ಕೆಲಸ ಇನ್ನೊಂದಿಲ್ಲ. ಎಲೆಕ್ಷನ್ ಸಮಯದಲ್ಲಿ ಎಲ್ಲಾ ನಾಯಕರುಗಳು ಪಡೋ ಕಷ್ಟಾ ನೋಡಿ, ನಮಗೇ ಸಾಕಪ್ಪಾ ಅನ್ನಿಸುತ್ತೆ, ಅಂಥಾದ್ದರಲ್ಲಿ, ಅವರು ತಮ್ಮ ಸ್ಕೆಡ್ಯೂಲ್ಡ್ ಪ್ರೋಗ್ರಾಮ್‌ಗಳನ್ನ ಅದು ಹೇಗೆ ನಿಭಾಯಿಸ್ತಾರೋ, ಅನ್ಸುತ್ತೆ.

ನೀವು ಹೇಳ್ಬೋದು, ಅವರಿಗೆ ಸಪೋರ್ಟ್ ಸ್ಟಾಫ಼್ ಇರುತ್ತೆ, ಅವರ ಹತ್ರ ರಿಸೋರ್ಸುಗಳು ಇರುತ್ತೆ ಅಂತ. ಸುಮ್ನೆ ಬರಕೊಂಡ್ ಬಂದ ಭಾಷ್ಣನ ಓದಿದ್ರೆ , ಜನ ಮರುಳಾಗಿ ಓಟ್ ಹಾಕ್ತಾರೆ ಅಂದ್‌ಕೊಂಡಿದ್ದೀರಾ? ರಾಜಕೀಯದಲ್ಲಿ ಗೆಲ್ಲೋದಕ್ಕೆ ಬೇಕಾದಷ್ಟು ಸ್ಟ್ರಾಟೆಜಿಗಳು ಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಯಾವ ಸಮಯದಲ್ಲಿ ಹೇಗೆ ಮಾತಾಡಬೇಕು ಅನ್ನೋ ಪ್ರಜ್ಞೆ ಇರಬೇಕು.

ಏನೇ ಇರಲಿ, ಮೋದಿ ಆಗ್ಲಿ, ಟ್ರಂಪ್ ಆಗ್ಲಿ, ಈ ವಯಸ್ಸಿನಲ್ಲಿ ಇಷ್ಟೊಂದು ಕೆಲ್ಸ ಮಾಡ್ತಾರಲ್ಲ ಅಂತ ಹೆಮ್ಮೆ ಪಡಬೇಕು.

***

ಈ ವರ್ಲ್ಡ್ ಲೀಡರುಗಳು ನಮ್ಮ ಥರಾ ಸಾಮಾನ್ಯ ಮನುಷ್ಯರು ತಾನೇ? ಜೀವನದಲ್ಲಿ ಮಹತ್ಸಾಧನೆಯ ಉದ್ದೇಶದಿಂದ ಅವರೆಲ್ಲ ಮುಂದೆ ಬಂದಿರ್ತಾರೆ. ಒಂದು ದೇಶಕ್ಕೆ ಒಬ್ಬರೇ ಪ್ರೆಸಿಡೆಂಟು ಅನ್ನೋ ಹಾಗೆ, ಎಲ್ಲರನ್ನು ಹಿಂದಿಕ್ಕಿ ಆ ಅಧಿಕಾರ ಸೂತ್ರ ಹಿಡಿಯೋದು ಅಂದ್ರೆ ಸುಮ್ನೇ ನಾ?

ಇಳೀ ವಯಸ್ಸಿನವರ ಈ ಪಾಡು ಇರಲಿ. ಭಾರತದಲ್ಲಿ ಅದೆಷ್ಟು ಮಹಾ ಪುರುಷರು ತಮ್ಮ ಚಿಕ್ಕ ವಯಸ್ಸಿನಲ್ಲಿ ಎಷ್ಟೊಂದು ಸಾಧನೆ ಮಾಡಿ ಕಾಲವಾಗಿಲ್ಲ. ಉದಾಹರಣೆಗೆ, ರಾಮಾನುಜಾಚಾರ್ಯರು ಬದುಕಿದ್ದು ಕೇವಲ 32 ವರ್ಷ ಮಾತ್ರ - ಅಷ್ಟೇ ಚಿಕ್ಕ ವಯಸ್ಸಿನಲ್ಲಿ ನಮ್ಮ ನೂರು ಜನ್ಮದ ಸಾಧನೆಯನ್ನು ಮಾಡಿದ್ದಾರೆ ಅಂದುಕೋ ಬಹುದು. ಹಾಗೆ, ಸ್ವಾಮಿ ವಿವೇಕಾನಂದ ಬದುಕಿದ್ದೂ ಕೂಡ 39 ವರ್ಷಗಳು ಮಾತ್ರ.

ಯಾಕೆ ಈ ಉದಾಹರಣೆಗಳನ್ನ ಹೇಳ್ತೀನಿ ಅಂದ್ರೆ, ವಯಸ್ಸು ಒಂದು ನಂಬರ್ ಮಾತ್ರ. ಇಂಥವರಿಂದ ಪ್ರೇರೇಪಣೆ ಪಡೆದು ನಾವೂ ಒಂದಿಷ್ಟು ಕಲೀಬೋದು, ಸಾಧಿಸಬಹುದು.

***

ಸುಮ್ನೇ ಹೀಗೆ ಮಾತಾಡ್ತಾ ನನ್ ಫ಼್ರೆಂಡ್ ಸುಬ್ಬನಿಗೆ ಈ ಬಗ್ಗೆ ಪ್ರಶ್ನೆ ಹಾಕಿದ್ದಕ್ಕೆ, ಹಾರಿಕೆ ಉತ್ರ ಕೊಟ್ಟ ನೋಡಿ!

"ಏ, ನೀ ಸುಮ್ನಿರೋ... ನಮ ಥರ, ಬೈಡೆನ್ ಏನು ಬೆಂಡೇಕಾಯಿ ತಿಂತಾನ? ಟ್ರಂಪ್ ಏನು ತೊಂಡೇಕಾಯಿ ತಿಂತಾನ? ಅವರ ಎನರ್ಜಿ ಎಲ್ಲ ಬೇಕನ್-ಪಾಕನ್ ಇಂದ ಬರುತ್ತೋ ಏನೋ ಯಾರಿಗೆ ಗೊತ್ತು?"

ನಿಜವಾಗಿ, ಅವರಿಗೆ ಈ ಇಳಿ ವಯಸ್ಸಿನ್ನಲ್ಲಿ ಅಷ್ಟೊಂದು ಎನರ್ಜಿ ಹೇಗೆ ಬರುತ್ತೆ?

ನಿಮಗೇನಾದ್ರೂ ಗೊತ್ತಾ?

Tuesday, February 11, 2025

I hate ಕನ್ನಡಿಗರು (with use these 3 things)...

ನನಗೆ ಕನ್ನಡಿಗರನ್ನ ಕಂಡ್ರೆ ಪ್ರೀತೀನೆ... ಅದು ನಿಮಗೆಲ್ಲ ಗೊತ್ತೇ ಇರೋ ವಿಷ್ಯಾ... ಆದ್ರೆ, ಈ ಮೂರು ವಿಷಯಗಳಲ್ಲಿ, ಕನ್ನಡಿಗರನ್ನ ಕಂಡ್ರೆ, ಒಂಥರ, ಸಿಟ್ಟು, ಬೇಜಾರು - ತಮ್ಮ ಒರಿಜಿನಾಲಿಟಿನೇ ಇಲ್ದೇ ಇರೋ ಮೂದೇವಿಗಳು ಅಂತ ಜರೀ ಬೇಕು ಅನ್ಸುತ್ತೆ ಇವರ್ನೆಲ್ಲಾ ನೋಡ್ದಾಗ!

ನೇರವಾಗಿ ವಿಷ್ಯಕ್ಕೆ ಬರೋಣ.

ಮೊದಲ್ನೆಯದು: ಸರ್... ಅಲ್ಲಾ ನಮ್ ಕನ್ನಡಿಗರು, ಎಲ್ಲರನ್ನೂ "ಸರ್" ಅನ್ನೋದ್ಯಾಕೆ?

ಉತ್ತರ ಭಾರತದವರು ಮೋದಿಯವರನ್ನ, ಮೋದಿ ಜಿ ಅಂತ ಕರೀತಾರೆ... ನಾವು ಎಲ್ರನ್ನೂ "ಸರ್" ಅಂತೀವಿ.

ಪುನೀತ್ ರಾಜ್‌ಕುಮಾರ್ ಸರ್, ಶಂಕರ್‌ನಾಗ್ ಸರ್, ಅಂಬರೀಷ್ ಸರ್, ಇತ್ಯಾದಿ, ಇತ್ಯಾದಿ... ಜೀವನದ ಪಯಣವನ್ನ ಮುಗಿಸಿದೋರಿಗಷ್ಟೇ ಅಲ್ಲ, ಬದುಕಿರೋರನ್ನ ರೆಫ಼ೆರನ್ಸ್ ಮಾಡ್ದಾಗಲೂ "ಸರ್" ಅಂತಾನೇ ಅಂತಿರ್ತಾರೆ.

ಇವರಿಗೆಲ್ಲ, "ರಾಜ್‌ಕುಮಾರ್ ಅವರು", "ವಿಷ್ಣುವರ್ಧನ್ ಅವರು..." ಅಂದ್ರೆ ಮರ್ಯಾದೆ ಕಮ್ಮಿ ಅಂತ ಯಾರ್ ಅಂದೋರು?

ದಯವಿಟ್ಟು, ನಿಮ್ಮಲ್ಲಿ ಒಂದು ಔನ್ಸ್ ಆತ್ಮಾಭಿಮಾನ, ಸ್ವಾಭಿಮಾನ ಅಂತೇನಾದ್ರೂ ಇದ್ರೆ, ಎಲ್ರನ್ನೂ ಮರ್ಯಾದೆಯಿಂದ "...ಅವರು" ಅಂತ ಕರೀರಿ, ಅದರಿಂದ ನಿಮ್ಮ ಮರ್ಯಾದೆಗೇನೂ ಕುಂದ್ ಬರಲ್ಲ.

ಅದರ ಬದಲಿಗೆ ನೀವು, "ಸರ್" ಅಂತ ರಾಗ ಎಳೆದ್ರೆ, ಬಕೆಟ್ ಹಿಡದಂಗ್ ಆಗುತ್ತೆ.  ಇನ್ನಾದ್ರೂ ಬಕೇಟ್ ಹಿಡಿಯೋದು ಬಿಟ್ಟು, ಮರ್ಯಾದೆ (ಕೊಟ್ಟ್) ಮಾತಾಡಿ! ನಮ್ಮ ಟಿವಿ anchor ಗಳು ಶುರುಮಾಡಿದ ರೋಗವೇನೋ ಇದು ಅಂತ ಒಮ್ಮೊಮ್ಮೆ ಅನುಮಾನವೂ ಆಗುತ್ತೆ.

ನಾವು "ಸರ್" ಅಂತ ಕರೆಯೋದು - ಕೇವಲ ಎರಡು ರೀತಿ ಜನಗಳಿಗೆ ಮಾತ್ರ. ಒಂದು ಬ್ರಿಟೀಷ್ ಸರ್ಕಾರದಿಂದ ಪುರಸ್ಕರಿಸ್ಕೊಂಡು ಸರ್ ಪದವಿ ಪಡೆದವರಿಗೆ... ಉದಾಹರಣೆಗೆ ಸರ್ ಎಮ್. ವಿಶ್ವೇಶ್ವರಯ್ಯ... ಅಂತೀವಿ. ಮತ್ತೊಂದು,  ನಮ್ಮ ಶಾಲೆಯ ಮೇಷ್ಟ್ರುಗಳಿಗೆ, ನಿಜವಾಗಲೂ ಗೌರವದ ರೂಪದಲ್ಲಿ "ಸರ್ ಅಥಾವಾ ಸಾರ್" ಅಂತೀವಿ... ಅದಿಷ್ಟು ಬಿಟ್ರೆ, ಬೇರೆ ಕಡೆ ಬಳಸೋ ಸಾರ್ ಗೆ ಅರ್ಥ ಇರೋಲ್ಲ.

***

ಎರಡನೆಯದು: ಈ ಕನ್ನಡ ಸಿನಿಮಾಗಳ ವಿಚಾರಕ್ಕೆ ಬಂದಾಗ ಬೆಂಗಳೂರು ಗಾಂಧಿನಗರನ "ಸ್ಯಾಂಡಲ್ ವುಡ್" ಅಂತ ಕರೆಯೋದು.

ನಾನು ತಿಳಿದುಕೊಂಡ ಹಾಗೆ, ಇದು ಬಾಲಿವುಡ್, ಟ್ಯಾಲಿವುಡ್, ಕ್ಯಾಲಿವುಡ್ ಗಳ ರಾಗ ಮತ್ತು ರೋಗ... ಸುಮ್ನೆ ಅಂಧಾನುಕರಣೆ... ಅಮೇರಿಕದ ಹಾಲಿವುಡ್‌ನಲ್ಲಿ ಮೂವಿಗಳು ತಯಾರಾಗ್ತಾವೆ... ಹಾಗಾಗಿ ಎಲ್ಲೆಲ್ಲಿ ಮೂವಿಗಳು ತಯಾರಾಗ್ತಾವೋ ಅಲ್ಲಿನ ಪ್ರದೇಶದ ಹೆಸರುಗಳನ್ನೆಲ್ಲ "ವುಡ್" ಅನ್ನೋ ಪದದಿಂದ ಕೊನೆಗೊಳಿಸಿದರೆ ಹೇಗೆ ಅನ್ನೋ ಐಡಿಯಾ ಯಾವನೋ ಒಬ್ಬ ಹುಂಬನಿಗೆ ಬಂತು. ನಂತರ ಆ ರೋಗ ದೇಶವ್ಯಾಪಿ ಹರಡ್ತು.

ಬರೀ 2024 ಒಂದು ವರ್ಷದಲ್ಲೇ ಭಾರತದಲ್ಲಿ ತಯಾರಾದ ಚಿತ್ರಗಳ ಸಂಖ್ಯೆ ಸುಮಾರು 580 ಇವೆ. ಅದರಲ್ಲಿ ಹಿಂದಿ, ತೆಲುಗು ಚಿತ್ರಗಳದ್ದು ಸಿಂಹಪಾಲು. ನಮ್ಮ ಕನ್ನಡ ಭಾಷೆಯಲ್ಲೇ ಸುಮಾರು 50 ಸಿನಿಮಾಗಳು ಬಿಡುಗಡೆಯಾಗಿವೆ. ಅಂತದ್ದರಲ್ಲಿ, ಹಾಲಿವುಡ್ ಹೆಸರಿನ ಅನುಕರಣೆ ಮಾಡೋದಾದ್ರೂ ಏಕೆ?

ಈ ಕೆಟ್ಟ ರೋಗ ನಿಲ್ಲಬೇಕು... ನಮ್ಮತನ ಅಂತ ಸ್ವಲ್ಪಾನಾದ್ರೂ ಮರ್ಯಾದೆ ಇದ್ರೆ, ಇನ್ನಾದ್ರೂ ಈ "ವುಡ್"ಗಳ ಬಳಕೆ ಎಲ್ಲ ಕಡೆ ನಿಲ್ಲಿಸಬೇಕು, ಭಾರತದಾದ್ಯಂತ.

***

ಮೂರನೆಯದು: ಬ್ರದರ್ರು, ಸಿಸ್ಟರ್ರು...

ನಮ್ಮ ಅಚ್ಚ ಕನ್ನಡದಲ್ಲಿ, ಅಣ್ಣ, ತಮ್ಮ, ತಂಗಿ, ಅಕ್ಕ ಅಂತ ಪದಗಳಿರುವಾಗ... mother, father, brother, sister ಅಂತ ಯಾಕೆ ಪದ ಬಳಸ್ತಾರೋ, ಕನ್ನಡ ವಾಕ್ಯಗಳಲ್ಲಿ?

ಅತ್ತಿಗೆ, ನಾದಿನಿ, ಸೋದರ ಸೊಸೆ - ಇವರಿಗೆಲ್ಲ sister-in-law ಅನ್ನೋದು ಯಾವ ನ್ಯಾಯ ನೀವೇ ಹೇಳಿ.

ಅಣ್ಣನ ಮಗಳಿಗೂ, ತಂಗಿಯ ಮಗಳಿಗೂ ನಮ್ಮ ಸಂಬಂಧದಲ್ಲಿ ವ್ಯತ್ಯಾಸ ಇದೆ... ಅವರನ್ನ ನೀಸು, ಗೀಸು ಅಂತ ಹೇಳೋದು ಸರೀನಾ...

ಇಂಗ್ಲೀಷ್ ಮಾತೋಡೋರಿಗೆ ಸಂಬಂಧದ ಬೆಲೆ ಏನು ಗೊತ್ತು? ಹಂಗಿದ್ರೆ, ಎಲ್ರನ್ನೂ ಅಂಕಲ್ ಅಂತ ಕರೀತಿದ್ರು? ಎಲ್ಲ ಕಾನೂನು ಮಯವಾಗಿರುವ ಅವರ ಕಲ್ಚರ್‌ನಲ್ಲಿ "ಇನ್-ಲಾ" ಅಂತ ಯಾರನ್ನ ಬೇಕಾದ್ರೂ ಕರೀತಾರೆ... ಆದ್ರೆ, ಅಂತಃಕರಣ, ಕಕ್ಕುಲಿಕೆ, ಪ್ರೀತಿ, ವಿಶ್ವಾಸ, ಮಮತೆ, ಪ್ರೇಮ, ಸ್ನೇಹ, ವಾತ್ಸಲ್ಯಗಳನ್ನು ಆಧರಿಸಿ ನೆಲೆನಿಂತ ಸಂಬಂಧಗಳ ಮೇಲೆ ಅವುಗಳಿಗೆಲ್ಲ ಒಂದು appropriate ಪದವನ್ನಿಟ್ಟುಕೊಂಡಿದ್ದೀವಿ.

ಯಾರಿಗಾದ್ರೂ ಸಡನ್ ಆಗಿ ಒಂದು ಹೊಡ್ತಾ ಬಿದ್ರೆ, ಅವರೆಲ್ಲ, ಕನ್ನಡದಲ್ಲಿ ಅಮ್ಮ/ಅವ್ವ ಅಂತಾರೇ ಹೊರತು, ಮಮ್ಮಿ, ಮದರ್ರು ಅನ್ನಲ್ವಲ್ಲಾ?

ಈ ರೀತಿ, ಇಂಗ್ಲೀಷಿನಲ್ಲಿ ಸಂಬಂಧಗಳನ್ನು ಹೇಳೋ ರೋಗವನ್ನೂ ನಾವು ಗುಣಮಾಡಿಕೊಳ್ಳಲೇ ಬೇಕು? ನಮ್ಮ brother ಬಂದ್ರು ಅಂದ್ರೆ, ನಾನು ಅಣ್ಣ ಅಂದುಕೊಳ್ಳಲೋ, ತಮ್ಮ ಅಂದುಕೊಳ್ಳಲೋ?

ಇಲ್ಲಾಂದ್ರೆ ಪೂರ್ತೀ ಇಂಗ್ಲೀಷ್ನಲ್ಲೇ ಮಾತಾಡ್ರಪ, ಕನ್ನಡ ಯಾಕಾದ್ರೂ ಬೇಕೂ?

ಈ ದೊಡ್ಡ ರೋಗ ಮೊದಲು ನಿಲ್ಬೇಕು.  ಏನಂತೀರಿ?

***

I hate ಕನ್ನಡಿಗರು (with these 3 things)...


Sunday, February 09, 2025

OTP ಎನ್ನುವ ಸಿಂಹಸ್ವಪ್ನ, ಎಡಬಿಡದೆ ಕಾಡುವ ಭಯ...

ವಿಂದ್ಯ ಪರ್ವತದ ದಕ್ಷಿಣ ಭಾಗದಲ್ಲಿರುವ ದಕ್ಷಿಣ ಪ್ರಸ್ಥಭೂಮಿಯ ಒಡಲೊಳಗಿಂದ ಈ ಬ್ಯಾಂಕಿಂಗ್ ವ್ಯವಸ್ಥೆ ಹೊರಬಂತು - ನಮ್ಮ ಕರ್ನಾಟಕದ ಮಂಗಳೂರು ಕಡೆಯವರ ಕೊಡುಗೆ ಮತ್ತು ಸರ್. ಎಂ. (ಮೋಕ್ಷಗುಂಡಂ) ವಿಶ್ವೇಶ್ವರಯ್ಯನವರ ದೂರದರ್ಶಿತ್ವವನ್ನು ನಾವು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಂದಿಗೂ ಕಾಣಬಹುದು.

ಆದರೆ, ಇಂದು ನಮ್ಮ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಒಂದು OTP ಎನ್ನುವ ಪೆಡಂಭೂತ ನಿಧಾನವಾಗಿ ನುಂಗ್ತಾ ಇದೆ ಅಂದ್ರೆ ನಂಬ್ತೀರಾ?

ನನಗೆ ವೈಯಕ್ತಿಕವಾಗಿ ಒಂದು ಇವತ್ತಿಗೂ ಅರ್ಥವಾಗದಿರುವುದು ಏನು ಅಂದ್ರೆ, ಪ್ರಪಂಚದ ಉದ್ದಗಲಕ್ಕೂ Technology ಕ್ಷೇತ್ರದಲ್ಲಿ ಕೆಲಸ ಮಾಡೋ ನಮಗೆ, ನಮ್ಮ internal ಬ್ಯಾಂಕಿಂಗ್ ವ್ಯವಸ್ಥೆ ಏಕೆ ಇಷ್ಟು ಕೆಟ್ಟದಾಗಿದೆ ಅನ್ನೋದು.

ನೀವು ಯಾವತ್ತಾದ್ರೂ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳ sites ನೋಡಿದ್ರೆ, ಅವರ technology choice, user interface, navigation, user experience, error handling ಇವನ್ನೆಲ್ಲ ನೋಡಿದ್ರೆ, ಬ್ಯಾಂಕಿಂಗ್ ಕಸ್ಟಮರ್ ಅನುಕೂಲಗಳೆಲ್ಲವೂ, ಇಲ್ಲಿ ಮಟಾಸ್ ಅನ್ಸುತ್ತೆ. ಪ್ರತಿ ಮೂರು ತಿಂಗಳಿಗೆ expire ಆಗೋ ಲಾಗಿನ್ ಪಾಸ್ವರ್ಡುಗಳು, ಕಾಂಪ್ಲಿಕೇಟೆಡ್ ಪ್ರೊಫ಼ೈಲ್ ಪಾಸ್ವರ್ಡ್ಗಳು ಇವುಗಳನ್ನ maintain ಮಾಡೋದಕ್ಕೆ ಒಂದು ದೊಡ್ಡ ಡೇಟಾಬೇಸೇ (database) ಬೇಕು!

ಒಂದು ಕಾಲದಲ್ಲಿ ನಾವು SBM ಒಂದು ಶಾಖೆಗೆ ಹೋದ್ರೆ, ವೈಯಕ್ತಿಕವಾಗಿ ಅಲ್ಲಿನ ಸ್ಟಾಫ಼್ ಎಲ್ಲರೂ ಪರಿಚಯ ಇರೋರು. ಅದು ಮುಂದೆ ಬದಲಾಗ್ತಾ ಬದಲಾಗ್ತಾ ನಮ್ಮ ಕನ್ನಡದವರೇ ಆದ ಸ್ಟಾಫ಼್ ಪ್ರತೀ ಮೂರು ವರ್ಷಕ್ಕೊಮ್ಮೆ transfer ಆಗ್ತಾ ಹೋದ್ರು. ಈಗ SBM ಇದ್ದಿದ್ದು SBI ಆದ ಮೇಲೆ, ಮೊದಲೇ ಹದಗೆಟ್ಟ ವ್ಯವಸ್ಥೆಯಲ್ಲಿ ಉತ್ತರ ಭಾರತದ ಗುಪ್ತಾಗಳು, ಮಿಶ್ರಾಗಳು ಸೇರಿಕೊಂಡು ಈಗೇನಾದ್ರೂ ನೀವು SBI ಒಳಗೆ ಕಾಲಿಟ್ರೆ, ಅಲ್ಲಿನ ಒಂದು ವ್ಯವಸ್ಥೆ ನೋಡಿ ದಂಗಾಗಿ ಬಿಡ್ತೀರ.

ಹೌದು, ಈ ಆನ್‌ಲೈನ್‌ನ ಬ್ರಹ್ಮಾಂಡ ವ್ಯವಸ್ಥೆಯಲ್ಲಿ ನೀವಾದ್ರೂ ಬ್ಯಾಂಕ್ ಬ್ರಾಂಚುಗಳಿಗೆ ಏಕೆ ಹೋಗಬೇಕು ಅಂತ ನೀವು ಕೇಳಬಹುದು.

ನಿಮಗೆ ಬೆಂಗಳೂರಿನ ಒಂದು ಬ್ಯಾಂಕ್ ಉದಾಹರಣೆ ಕೊಡ್ತೀನಿ. ನಿಮ್ಮ ಅಕೌಂಟಿನಲ್ಲಿ ಏನೇ ಬದಲಾವಣೆ ಮಾಡ್ತೋದಿದ್ರೂ, ನೀವು ನಮ್ಮ ಖಾತೆಯನ್ನ ಎಲ್ಲಿ ಓಪನ್ ಮಾಡಿದ್ವೋ ಅಲ್ಲಿಗೆ ಬನ್ನಿ ಅಂತ ಕರೀತಾರೆ. ಸಣ್ಣ ಪುಟ್ಟ ಊರುಗಳಾದರೆ ಸುಲಭವಾಗಿ ಹೋಗಬಹುದು, ಆದ್ರೆ, ಈ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋದು ಅಂದ್ರೆ ಅದಕ್ಕೆ ಅರ್ಧ ದಿನ ಬೇಕಾಗುತ್ತೆ.

ಸರಿ, second Saturday ನೂ ಸೇರಿ, ಅವರ holiday ಗಳನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಂಡು,  appointment ತೊಗೊಂಡು ಹೋದ್ರೂ ಕೂಡ ನಿಮಗೇನು ಒಳ್ಳೆಯ ಸರ್ವೀಸು ಸಿಗುತ್ತೆ ಅನ್ನೋ ಗ್ಯಾರಂಟೀ ಅಂತೂ ಇಟ್ಕೋಬೇಡಿ.

ನೀವು NRI ಗಳು ಅಂತ ಗೊತ್ತಾದ ತಕ್ಷಣ, ಅವರಿಗೆ ನಿಮ್ಮ ಮೇಲೆ ಅವರ ನಾನಾ ರೀತಿಯ ಹೊಸ ಪ್ರಾಡಕ್ಟುಗಳನ್ನ experiment ಮಾಡ್ಬೇಕು ಅನ್ಸುತ್ತೆ. ಹೊಸ ಇನ್ಸೂರೆನ್ಸ್ ಸ್ಕೀಮುಗಳಿರಬಹುದು, ವಿವಿಧವಾದ ಸೇವಿಂಗ್ಸ್ ಸರ್ಟಿಫ಼ಿಕೇಟುಗಳಿರಬಹುದು... ಇತ್ಯಾದಿ ಇತ್ಯಾದಿ... ಇವೆಲ್ಲದರ ನಡುವೆ ನೀವು ಹೋದ ಕೆಲ್ಸ ಆದ್ರೆ ಪುಣ್ಯ, ಇಲ್ಲಾಂದ್ರೆ ಇನ್ನೊಂದ್ ದಿನ ಬನ್ನಿ ಅಂತ ಹೇಳುದ್ರೂ ಹೇಳ್‌ಬಹುದು.  ನೀವು ಸಪ್ಪೆ ಮುಖ ಹಾಕ್ಕೊಂಡ್ ವಾಪಾಸ್ ಬರ್ತಾ ನಿಮಗೆ, ಅಲ್ಲಿನ ಬಾಗಿಲ ಹಿಂದೆ, "ಗ್ರಾಹಕರೇ ದೇವರು!" ಅನ್ನೋ ಜಾಣನುಡಿ ಕಂಡ್ರೂ ಕಾಣಬಹುದು.

ನಾವೆಲ್ಲ ನಮ್ ನಮ್ ಲಂಚ್ ಅನ್ನು ನಮ್ ನಮ್ ಡೆಸ್ಕ್‌ನಲ್ಲಿ ತಿಂತೀವಲ್ಲ, ಹಂಗೆಲ್ಲ ಏನೂ ಇಲ್ಲ... ಬೆಳಿಗ್ಗೆ ಹತ್ತು ಗಂಟೆಗೆ ಓಪನ್ ಆಗೋ ಬ್ಯಾಂಕ್‌ಗಳಿಗೆ ಮಧ್ಯಾಹ್ನ ಕರೆಕ್ಟ್ ಆಗಿ ಎರಡೂವರೆಗೆ ಲಂಚ್ ಬ್ರೇಕ್ ಬೀಳತ್ತೆ! ಅಷ್ಟರೊಳಗೆ ಜಾಣತನದಿಂದ ನಿಮ್ಮ ಕೆಲ್ಸ ಮಾಡಿಸ್‌ಕೋ ಬೇಕು!

ಅದೆಲ್ಲಾ ಇರ್ಲಿ ಬಿಡಿ, ಇವತ್ತಿನ ವಿಷ್ಯಕ್ಕೆ ಬರೋಣ.... OTP ಅನ್ನೋ ಪೆಡಂಭೂತ ಇಡೀ ಇಂಡಿಯಾನೇ ಅವರಿಸಿಕೊಂಡ್ ಬಿಟ್ಟಿದೆ... ಇಂಡಿಯಾದಲ್ಲಿರೋ ಕಂಪ್ಯೂಟರ್ ಸರ್ವರ್ ಗಳು ತಮ್ಮ 10% ಕ್ಯಾಪಸಿಟಿಯನ್ನ Random generation ಮಾಡೋಕೆ ಬಳಸ್ತಾವೇನೋ ಅನ್ಸುತ್ತೆ... ಕಾಫ಼ಿ ಆರ್ಡರ್ ಮಾಡೋಕು OTP, ಕಾಫ಼ಿ ಕುಡಿಯೋಕು OTP ಬೇಕೇ ಬೇಕು... ಕಂಡ್ ಕಂಡಲ್ಲೆಲ್ಲ OTP ಹಾವಳೀನೇ ಹಾವಳಿ!

ಈ OTP ಅಂದಾಕ್ಷಣ, ನಮ್ಮೂರಿನ ದೊಡ್ಡ ದೊಡ್ಡ ಸವಕಾರರ ನೆನಪು ಬಂತು! ಒಂದು ಕಾಲದಲ್ಲಿ ದುಡ್ಡ್ ಕೊಟ್ಟು ಕೆಲ್ಸಾ ಮಾಡಿಸ್ತಿದ್ದ ಪುಣ್ಯಾತ್ಮರಿಗೆ ಈ OTP ಒಂಥರ ಲೆವಲ್ಲರ ಥರ ಆಗಿ ಹೋಗಿದೆ! ನಿಮಗ್ಗೊತ್ತಾ? ನಮ್ಮ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ, ಈ OTP ಬಿಟ್ಟಿಲ್ಲ ಅಂತ?

ಈ OTP ನನ್ನ ದೃಷ್ಟೀಲೀ ಒಂದು ಲೆವಲ್ಲರ್ ಇದ್ದ ಹಾಗೆ... ಒಂದು ಕಾಲದಲ್ಲಿ Taxes, and Death were levellers ಅಂತಿದ್ವಲ್ಲ ಹಂಗೆ! ನೀವು 2 ವಾರ ಇಂಡಿಯಾ ರಜಾ ಮುಗುಸ್ಗೊಂಡ್ ಬಂದ್ ಇಲ್ಲಿ ಹಾಯಾಗಿ ನಿದ್ರೆ ಮಾಡ್ತಿದ್ರೆ, ದಿಢೀರ್ ಅಂತ ಎಚ್ರ ಆಗುತ್ತೆ... ನಿಮ್ ಫ಼ೋನ್ ಟನ್ ಅಂತ ಸೌಂಡ್ ಮಾಡ್ದಾಗ ನಿಮಗೆ ಹೆದರಿಕೆ ಆಗುತ್ತೆ! ಹಾಗಿದೆ ಈ OTP ಝಲಕ್ ಒಂಥರ ಅದರ ಟ್ರೋಮಾದಿಂದ ಹೊರಗೆ ಬರೋಕೆ ಆಗಲ್ಲ ಅನ್ನೋ ಹಾಗೆ!!

SatisHFaction: ಕನ್ನಡ ಪಾಡ್‌ಕ್ಯಾಸ್ಟ್


Tuesday, January 28, 2025

Keep this Team in mind...

ಈಗಂತೂ ಕ್ರಿಕೆಟ್ ಮ್ಯಾಚ್‌ಗಳು, ಘಳಿಗೆಗೊಂದು ಘಂಟೆಗೊಂದು ಅನ್ನೋ ಹಾಗೆ ಲೈವ್ ಟಿವಿ ಮೇಲೆ ಬರ್ತಾನೇ ಇರುತ್ವೆ. T20 format ನಲ್ಲಿರೋ ಕ್ರಿಕೇಟ್ ಮ್ಯಾಚ್‌ಗಳಿಂದ ಹಿಡಿದು, international test matchಗಳ ವರೆಗೂ ಒಂದಲ್ಲ ಒಂದು ಸೀರೀಸ್ ಅಥವಾ ಲೀಗ್‌ ಯಾವಾಗ್ಲೂ ನಡೀತಾನೆ ಇರುತ್ತೆ. ಅದರಲ್ಲೂ ಅನೇಕ ಫ಼್ರ್ಯಾಂಚೈಸಿ ಕ್ರಿಕೆಟ್ ಕ್ಲಬ್‌ಗಳು ಬಂದ ಮೇಲಂತೂ ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಮಟ್ಟವನ್ನೂ ಕ್ರಿಕೇಟ್ ಪ್ರೇಮಿಗಳೂ ತಲುಪಿರಬಹುದು.

ಆದ್ರೆ, ನಾನು ಈಗ ಹೇಳ್ತಾ ಇರೋ ಟೀಮು ಅಂತಿಂಥಾ ಟೀಮ್ ಅಲ್ಲ... ಅದು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ರಣಜೀ ಕ್ರಿಕೆಟ್ ತಂಡ!

ಅದರಲ್ಲೂ ಹತ್ತು ದಿನಗಳ ಹಿಂದೆ ವಿಜಯ್ ಹರಾರೆ ಟ್ರೋಫ಼ಿಯನ್ನು ಗೆದ್ದು ಹುಮ್ಮಸ್ಸಿನಿಂದ ಬೀಗ್ತಾ ಇರೋ ನಮ್ಮ ಮಯಂಕ್ ಅಗರ್‌ವಾಲ್ ನೇತೃತ್ವದ ಯುವ ತಂಡ!

ಕಳೆದ ಸಾರಿ ನಾವು ರಣಜಿ ಟ್ರೋಫ಼ಿಯನ್ನ ಗೆದ್ದಿದ್ದು 2014-15 ರಲ್ಲಿ, ಬರೋಬ್ಬರಿ ಹತ್ತು ವರ್ಷಗಳ ಹಿಂದೆ. ಅಂದು ತಮಿಳುನಾಡಿನ ತಂಡವನ್ನು ಇನ್ನಿಂಗ್ಸ್ ಮತ್ತು 217 ರನ್‌ಗಳಿಂದ ಸೋಲಿಸಿದ ಆ ರೋಚಕ ಪಂದ್ಯವನ್ನ ಮರೆಯೋದಾದ್ರೂ ಹೇಗೆ? ಆಗ, ವಿನಯ್ ಕುಮಾರ್ ಕ್ಯಾಪ್ಟನ್ ಆಗಿದ್ರು, ಕೆ.ಎಲ್. ರಾಹುಲ್ ಅದೇ ಪಂದ್ಯದಲ್ಲಿ 188 ರನ್ ಸೂರೆ ಹೊಡೆದಿದ್ರು. ಆಗ ಕರ್ನಾಟಕ ತಂಡಕ್ಕೆ ಆಡುತ್ತಿದ್ದ ಕರುಣ್ ನಾಯರ್ ಇನ್ನಿಂಗ್ಸ್ ಒಂದರಲ್ಲೇ 328 ರನ್ ದಾಖಲು ಮಾಡಿದ್ರು. ವಿನಯ್ ಕುಮಾರ್ ಶತಕವೂ ಸೇರಿದಂತೆ, 231 ಓವರುಗಳಲ್ಲಿ 762 ರನ್‌ಗಳನ್ನು ಒಟ್ಟುಗೂಡಿಸಿದ್ದನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ?

ಈ ನಮ್ಮ ತಂಡಕ್ಕೆ ಹತ್ತು ವರ್ಷಗಳಿಂದ ಮತ್ತೆ ಆ ಟ್ರೋಫ಼ಿಯನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಈ ಸರ್ತಿ ಕ್ವಾರ್ಟರ್ ಫ಼ೈನಲ್‌ಗೂ ಹೋಗ್ತೀವೋ ಇಲ್ವೋ ಅನ್ನೋ ಸಂಕಷ್ಟದಲ್ಲಿರೋ ತಂಡಕ್ಕೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಾವು ಸಪೋರ್ಟ್ ಮಾಡ್ಲೇ ಬೇಕಲ್ವಾ?

ಈ ಸಾರಿ ಇಲೈಟ್ ಗ್ರೂಪ್ C ಯಲ್ಲಿ 19 ಪಾಯಿಂಟ್‌ಗಳಿಂದ  ನಮ್ಮ ಕರ್ನಾಟಕ ತಂಡ ಮೂರನೇ ಸ್ಥಾನದಲ್ಲಿದೆ. ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿ ಕ್ರಮವಾಗಿ ಹರ್ಯಾಣ ಮತ್ತು ಕೇರಳ ತಂಡಗಳಿವೆ. 

ಇನ್ನು ಈ ಲೀಗ್‌ನಲ್ಲಿ ಕರ್ನಾಟಕ ತಂಡದ ಕೊನೆಯ ಮ್ಯಾಚ್ ಹರ್ಯಾಣದ ಮೇಲೆ ಇದೆ. ಜನವರಿ 30 ರಿಂದ ಪೆಬ್ರುವರಿ 02ರ ವರೆಗೆ ಬೆಂಗಳೂರಿನಲ್ಲಿ ನಡೆಯೋ ಈ ಮ್ಯಾಚ್‌ಗೆ ನಾವೆಲ್ಲ ಎಷ್ಟು ಬೆಂಬಲ ಕೊಡ್ತೀವೋ ಅಷ್ಟು ಒಳ್ಳೇದು.

ನಮ್ಮ ಕರ್ನಾಟಕ ತಂಡ, ಈ ಲೀಗ್‌ನಲ್ಲಿ ಕ್ವಾರ್ಟರ್ ಫ಼ೈನಲ್‌ಗೆ ಹೋಗೋದಕ್ಕೆ ಇರೋದು ಎರಡೇ ದಾರಿಗಳು: ಒಂದು, 26 ಪಾಯಿಂಟ್ಸ್ ನಲ್ಲಿರೋ ಹರ್ಯಾಣವನ್ನು ಇನ್ನಿಂಗ್ಸ್ ಪ್ಲಸ್ ರನ್‌ಗಳಿಂದ ಗೆಲ್ಲಬೇಕು, ಆಗ 7 ಪಾಯಿಂಟ್ಸ್ ಸಿಗತ್ತೆ, ಅದರಿಂದ ನಾವೂ 26 ಪಾಯಿಂಟ್ ಗಳಿಸಿ ನೆಟ್ ರನ್ ರೇಟ್ ನಲ್ಲಿ ಕ್ವಾಲಿಫ಼ೈ ಆಗಬಹುದು. ಬಲಿಷ್ಟವಾದ ಹರ್ಯಾಣವನ್ನು ಮಣಿಸೋದು ಅಷ್ಟು ಸುಲಭವಾದ ವಿಚಾರ ಏನೂ ಅಲ್ಲ. ಇನ್ನು ಎರಡನೇ ದಾರಿ ಅಂದ್ರೆ, ಈಗಾಗ್ಲೇ 21 ಪಾಯಿಂಟ್ ಗಳಿಸಿ ಎರಡನೇ ಸ್ಥಾನದಲ್ಲಿರೋ ಕೇರಳವನ್ನು ಕೊನೇ ಸ್ಥಾನದಲ್ಲಿರೋ ಬಿಹಾರದವರು ಸೋಲಿಸಬೇಕು. ಒಂದು ವೇಳೆ ಕೇರಳ ಸೋತ್ರೂ, ಕರ್ನಾಟಕ-ಹರ್ಯಾಣ ಪಂದ್ಯ ಡ್ರಾ ಆಗಿ, ಕರ್ನಾಟಕಕ್ಕೆ 3 ಪಾಯಿಂಟ್ಸ್ ಸಿಕ್ರೆ, ನಾವು ಒಟ್ಟು 22 ಪಾಯಿಂಟ್ಸ್ ತೊಗೊಂಡು ಕ್ವಾಲಿಫ಼ೈ ಆಗಬಹುದು.

***

ನಾನು ಯಾವಾಗ್ಲೂ ರಣಜಿ ಪಂದ್ಯಗಳನ್ನು ಫ಼ಾಲ್ಲೋ ಮಾಡ್ತೀನಿ. ಮೊನ್ನೆ ನಮ್ಮ ಹುಡುಗ್ರು ಪಂಜಾಬ್ ತಂಡವನ್ನ ಹೀನಾಯವಾಗಿ ಸೋಲಿಸಿದ್ರೆ ಅದು ಸುದ್ದಿ ಆಗೋದಿಲ್ಲ.  ಮೊದಲನೇ ಇನ್ನಿಂಗ್ಸ್ ನಲ್ಲಿ ತಿಣುಕಾಡಿ ನಾಲ್ಕು ರನ್ ಹೊಡೆದಿದ್ದ ಶುಭ್‌ಮನ್ ಗಿಲ್, ಎರಡನೇ ಇನ್ನಿಂಗ್ಸ್‌ನಲ್ಲಿ 171 ಬಾಲ್‌ಗಳಿಂದ 102 ರನ್ ಹೊಡೆದಿದ್ದು, ಎಲ್ಲ ಕಡೆ ದೊಡ್ಡ ಸುದ್ದಿ ಆಯ್ತು. ಅದೇ ಪಂದ್ಯದಲ್ಲಿ 277 ಬಾಲ್‌ಗಳಿಂದ 203 ರನ್ ಹೊಡೆದು, ಮನಮೋಹಕ ಇನ್ನಿಂಗ್ಸ್ ಜಯವನ್ನು ತಂದುಕೊಟ್ಟ ರವಿಚಂದ್ರನ್ ಸ್ಮರಣ್ ದ್ವಿಶತಕದ ಬಗ್ಗೆ ಯಾರೂ ಮಾತಾಡ್ಲೇ ಇಲ್ಲ! ಸ್ಮರಣ್ ಆಟದ ವೈಖರಿ ಎಷ್ಟು ಸೊಗಸಾಗಿದೆ ಅಂತ ಹೈ ಲೈಟ್ಸ್ ನೋಡಿ, ನಿಮಗೇ ಗೊತ್ತಾಗುತ್ತೆ, ಅವರ ಕಾನ್ಫ಼ಿಡೆನ್ಸ್ ಏನು, ಅವರ ಪ್ರಿಪರೇಷನ್ ಎನೂ ಅಂತ. 

ನಮ್ಮ ಬಿಸಿಸಿಐ ಸೈಟಿನಲ್ಲೂ ಕೂಡ ವಿಡಿಯೋ ಹೈಲೈಟ್ಸ್ ನೋಡೋಕೆ ಹೋದ್ರೆ, ಅಲ್ಲೂ ಕರ್ನಾಟಕದ ಒಂದೇ ಒಂದು ವಿಡಿಯೋಗಳೂ ಸಿಗಲಿಲ್ಲ - ಬರೀ ಮುಂಬೈ ತಂಡದವರ ಕೈಚಳಕವನ್ನೇ ತೋರಿಸೋದು ಅವರು.

ಬೌಲಿಂಗ್‌ನಲ್ಲಿ, ವಾಸುಕಿ ಕೌಶಿಕ್ ಮತ್ತು ಅಭಿಲಾಶ್ ಶೆಟ್ಟಿ ಅವರ ವೈಖರಿ ನೋಡೋದೇ ಒಂದು ಚೆಂದ. ಮಿಡ್ಲ್ ಆರ್ಡರ್‌ನಲ್ಲಿ  ಬ್ಯಾಟ್ ಮಾಡೋ ಅಭಿನವ್ ಮನೋಹರ್ ಮತ್ತು ಕೃಷ್ಣನ್ ಶ್ರೀಜಿತ್ ಅವರ ಬ್ಯಾಟಿಂಗ್ ಲಯ ತುಂಬಾ ಚೆನ್ನಾಗಿದೆ.

ಇಂಥ ಪಂದ್ಯಗಳಲ್ಲಿ ಆಡಿಯೇ ನಮ್ಮ ರಾಹುಲ್ ಡ್ರಾವಿಡ್ ಅಂತೋರು, ಮುಂದೆ ಬೆಳೆದು ಭಾರತದ ಗೋಡೆ ಮತ್ತು ಆಧಾರ ಸ್ಥಂಭ ಆಗಿದ್ದು. ಕರ್ನಾಟಕದಂತೆ ಪ್ರತೀ ರಾಜ್ಯಕ್ಕೂ ಅವರವರದ್ದೇ ಆದ ಹೆಮ್ಮೆಯ ಆಟಗಾರರು ಇದ್ದೇ ಇರ್ತಾರೆ. ಇಂಥ ಅಪ್ರತಿಮ ಪ್ರತಿಭೆಗಳು ಹುಟ್ಟುವ ಸ್ಥಳದಲ್ಲಿ ಅವರು ತಮಗೆ ಸಿಕ್ಕ ಅವಕಾಶಗಳನ್ನು ಹೇಗೆ ಬಳಸಿಕೊಂಡು ಮುಂದೆ ಬರ್ತಾರೆ ಅಂತ ನೋಡೋ ರೋಚಕತೆಯ ಸ್ವಾರಸ್ಯವೇ ಬೇರೆ. ಏನಂತೀರಿ?

ನಾವು ನಮ್ಮ ಕರ್ನಾಟಕದ ಕ್ರಿಕೆಟರುಗಳನ್ನು ಸಪೋರ್ಟು ಮಾಡದೇ ಇರೋದು, ಸಾಧ್ಯಾನೇ ಇಲ್ಲ! ಜೈ ಕರ್ನಾಟಕ!!



Wednesday, January 01, 2025

ನಮ್ಮ ಪ್ರಶ್ನೆಗಳೇ ನಮ್ಮ ಉತ್ತರಗಳು...

ನಮ್ಮ ಪ್ರಶ್ನೆಗಳೇ ನಮ್ಮ ಉತ್ತರಗಳು - ಹೀಗೆನಿಸಿದ್ದು ಇತ್ತೀಚೆಗೆ ನಮ್ಮ ಆಫ಼ೀಸಿನಲ್ಲಿ ನಡೆದ ಒಂದು ಘಟನೆ, ಮತ್ತು ಅವುಗಳಿಗೆ ಯಾರು ಯಾರು ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಕೂಲಂಕುಷವಾಗಿ ಗಮನಿಸಿದಾಗ.

ಈ ಲೇಖನದ ಸಾರಾಂಶವನ್ನು ಒಂದೇ ವಾಕ್ಯದಲ್ಲಿ ಹೇಳಬಹುದಾದರೆ, ಪ್ರಶ್ನೆಗಳು ನಮ್ಮ ಅಸ್ತಿತ್ವಕ್ಕೆ ಅತೀ ಅವಶ್ಯಕ ಹಾಗೂ ನಾವು ಹಾಕಿಕೊಳ್ಳುವ ಪ್ರಶ್ನೆಗಳು (ಅಂತರಂಗಿಕವಾಗಿ, ಬಹಿರಂಗಿಕವಾಗಿ), ನಮ್ಮ ನೆಲೆಯನ್ನು ನಿರ್ಧರಿಸಬಲ್ಲವು!

***

ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಅನೇಕ ಕಂಪ್ಯೂಟರ್ ಸಿಸ್ಟಮ್‌ಗಳಿರುತ್ತವೆ. ಅವುಗಳನ್ನು ಅಪ್ಲಿಕೇಶನ್‌ಗಳಾಗಿ ವಿಂಗಡಿಸಿಕೊಂಡಿರುತ್ತಾರೆ. ಈ ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಕೆಲವು ಹೊರ ಗ್ರಾಹಕರಿಗೆ ಸಂಬಂಧಿಸಿದವು, ಇನ್ನು ಕೆಲವು ಕಂಪನಿಯ ಕೆಲಸಗಾರರು ಮಾತ್ರ ಬಳಸುವಂತಹವು. ಇಂತಹ ಯಾವುದೇ ಅಪ್ಲಿಕೇಶನ್‌ಗಳಲ್ಲಿ ಏನಾದರೂ ತೊಂದರೆ  ಆದರೆ, ಆಗ ಗ್ರಾಹಕರು ಅದನ್ನು ಬಳಸಲು ಸಾಧ್ಯವಿರದ ಸ್ಥಿತಿ  ನಿರ್ಮಾಣವಾಗುತ್ತದೆ. ಇದನ್ನು "ಔಟೇಜ್" ಎಂದು ಕರೆಯುತ್ತಾರೆ.

ಉದಾಹರಣೆಗೆ, ನಾವೆಲ್ಲ ಇ-ಮೇಲ್ ಉಪಯೋಗಿಸುತ್ತೇವೆ. ಹೆಚ್ಚು ಜನರು ಬಳಸುವ ಜೀ-ಮೇಲ್ (Gmail) ಅನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಆಗಾಗ್ಗೆ ಅದರ ಸರ್ವೀಸಿನಲ್ಲಿಯೂ ವ್ಯತ್ಯಯ (outage) ಉಂಟಾಗುತ್ತದೆ. ಹಾಗಾದಾಗ, ಜನರಿಗೆ ಇ-ಮೇಲ್ ಬಳಸಲಾಗದೆ ತೊಂದರೆಯಾಗುತ್ತದೆ. ಅವರ ಬಳಕೆಗೆ ತಕ್ಕಂತೆ ಈ ವ್ಯತ್ಯಯದಿಂದ ಅಪಾಯ ಉಂಟಾಗುತ್ತದೆ.

ಈ ರೀತಿ ವ್ಯತ್ಯಯ ಅಥವಾ ಔಟೇಜ್ ಆದಾಗ, ಕಂಪನಿಯ, ಆಯಾ ಪ್ರಾಡಕ್ಟಿನ, ಆಯಾ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅತಿರಥ-ಮಹಾರಥರೆಲ್ಲ ಒಂದು ಕಾನ್‌ಫ಼ರೆನ್ಸ್‌ಕಾಲ್ ಅಥವಾ ವಾರ್‌ರೂಮಿನಲ್ಲಿ ಸೇರಿಕೊಂಡು ಅದರ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಸುತ್ತಾರೆ. ಇಂತಹ ಔಟೇಜ್ ಆದಾಗ, ಮೊದಲ ಆದ್ಯತೆಯನ್ನು, ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ, ವ್ಯತ್ಯಯಗೊಂಡ ಸರ್ವೀಸ್‌ ಅನ್ನು ಪುನಃ ಸ್ಥಾಪನೆ (restore) ಅಥವಾ ಪೂರ್ವ ಸ್ಥಿತಿಗೆ ಹಿಂತಿರುಗಿಸುವ ಪ್ರಯತ್ನಕ್ಕೆ ಕೊಡಲಾಗುತ್ತದೆ. ನಂತರ ಉಳಿದೆಲ್ಲ ವಿಚಾರಗಳು.

ಒಮ್ಮೆ ವ್ಯತ್ಯಯಗೊಂಡ ಸರ್ವೀಸುಗಳು ಪುನಃ ಸ್ಥಾಪನೆಯಾದ ನಂತರ ತೊಂದರೆಗಳು ಮುಗಿದವು ಎಂದರ್ಥವಲ್ಲ.  ಆ ಔಟೇಜ್ ಸಂಬಂಧಿ ಮೀಟಿಂಗ್ ಮತ್ತೊಂದು ರೂಪಾಂತರವನ್ನು ಪಡೆದುಕೊಳ್ಳುತ್ತದೆ ಅಷ್ಟೇ!

ಈ ಸಂದರ್ಭದಲ್ಲಿ ಬರುವ ಪ್ರಶ್ನೆಗಳು:

- ಏನಾಯ್ತು?

- ಯಾರಿಂದ?

- ಏಕೆ?

- ಏನು ಮಾಡಿದರೆ ಇದು ಸರಿ ಹೋಗುತ್ತದೆ?

- ಯಾರು ಸರ್ವೀಸುಗಳನ್ನು ರಿಸ್ಟೋರ್ ಮಾಡುತ್ತಾರೆ?

- ಇದೆಲ್ಲದರ ಮೂಲಕಾರಣ (rootcause) ಏನು?

- ಈ ರೀತಿ ಇನ್ನೊಮ್ಮೆ ಆಗದಿರಲು ಏನು ಮಾಡಬೇಕು? ಅದಕ್ಕೆಷ್ಟು ದುಡ್ಡು ಖರ್ಚಾಗುತ್ತದೆ, ಯಾವಾಗ ಸರಿಪಡಿಸಬಹುದು?

- ಈ ವ್ಯತ್ಯಯದಿಂದ ಎಷ್ಟು ಜನರಿಗೆ ತೊಂದರೆಯಾಯಿತು? ಇದರಿಂದ ಕಂಪನಿಗೆ ನಷ್ಟವಾಗಿದ್ದರೆ, ಎಷ್ಟು ನಷ್ಟವಾಯಿತು?

- ಈ ವ್ಯತ್ಯಯದ ಹಿಂದೆ ಯಾರ ಕೈವಾಡ, ಕೈಚಳಕ ಇದೆ?

- ಹಿಂದಿನ ದಿನದ ನಮ್ಮ ಎಲ್ಲ ಚೇಂಜ್ ಕಂಟ್ರೋಲುಗಳು ಸರಿಯಾಗಿಯೇ ಮುಗಿದವು ತಾನೆ?

- ಈ ಸಮಸ್ಯೆಯ ಮೂಲಕಾರಣ ನಮ್ಮ ಕೈಯಲ್ಲಿತ್ತೋ? ಅಥವಾ ನಮ್ಮ ಹತೋಟಿಯ ಹೊರಗೋ?

ಹೀಗೆ ಅನೇಕ ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರಬರುತ್ತಲೇ ಇರುತ್ತವೆ. ಈ ಪ್ರಶ್ನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಉತ್ತರಗಳು, ಒಂದೊಂದು ತಲೆಯಿಂದ ಮತ್ತೊಂದು ತಲೆಗೆ, ಒಂದು ಹಂತದಿಂದ ಮತ್ತೊಂದು ನೆಲೆಗೆ ಬದಲಾವಣೆ ಹೊಂದುತ್ತಲೇ ಇರುತ್ತವೆ.

ಆಳವಿದ್ದಷ್ಟು ಅಬ್ಬರ ಕಡಿಮೆ ಎನ್ನುವ ಹಾಗೆ ದೊಡ್ಡ ಎಕ್ಸಿಕ್ಯೂಟಿವ್‌ಗಳು ಸ್ಥಿತಪ್ರಜ್ಞರಂತೆ ಗಂಭೀರವದನರಾಗಿ, ಆಳವಾದ ಪ್ರಶ್ನೆಗಳನ್ನು ಕೇಳಿದರೆ, ಸಾಮಾನ್ಯ ಕೆಲಸಗಾರರ ಮಟ್ಟದಲ್ಲಿ, ಅವರ ತುಮುಲಗಳೇ ಬೇರೆ! ಕೆಲಸಗಾರರು, ನಿಮ್ಮ ಪ್ರಶ್ನೆಗಳು ಆಮೇಲಿರಲಿ ನಮಗೆ ಸದ್ಯದ ವಾತಾವರಣದಲ್ಲಿ ಸರ್ವೀಸುಗಳನ್ನು ಪುನಃಸ್ಥಾಪಿಸಲು ಅವಕಾಶ ಕೊಡಿ ಎಂದು ಆರ್ತರಾಗಿ ಕೇಳಿಕೊಂಡರೆ, ಎಕ್ಸಿಕ್ಯೂಟಿವ್‌ಗಳು ತಮ್ಮ ಮೇಲ್ವರ್ಗದವರಿಗೆ ರಿಯಲ್ ಟೈಮ್‌ನಲ್ಲಿ ಅಪ್‌ಡೇಟ್ ಕೊಡುವ ಧಾಟಿಯಲ್ಲಿ, ಪ್ರಶ್ನೆಗಳನ್ನು ಹಾಕುತ್ತಲೇ ಇರುತ್ತಾರೆ - ಅವರವರ ಭಾವ, ಭಕ್ತಿ ಮತ್ತು ನೆಲೆಗೆ ತಕ್ಕಂತೆ!

***

ವಿಶ್ವದ ಯಾವುದೇ ಜ್ಞಾನದ ಆರಂಭವೂ ಪ್ರಶ್ನೆಗಳಿಂದಲೇ ಆಗಿರಬೇಕು! ಪ್ರಶ್ನೆಗಳನ್ನು- ಜಿಜ್ಞಾಸೆ, ಅನುಮಾನ, ಸಂದೇಹ, ಆಕ್ಷೇಪಣೆ, ತೊಡಕು, ಶೋಧನೆ, ಅವಲೋಕನ, ಅರಸು (ಹುಡುಕು), ಕೇಳು, ಪರೀಕ್ಷಿಸು, ತಾಳೆ ಮಾಡಿ ನೋಡು - ಇತ್ಯಾದಿ ಸಮಾನಾರ್ಥಕ ಪದಗಳಲ್ಲಿ ಕೇಳಿಕೊಳ್ಳಬಹುದಾದರೆ, ಇವೆಲ್ಲಕ್ಕೂ ಸಂಕೀರ್ಣವಾಗಿ ಹುಟ್ಟುವ ಉತ್ತರಗಳಿಗೆ ಅಷ್ಟೊಂದು ಸಮಾನಾರ್ಥಕ ಪದಗಳಿಲ್ಲದಿರುವುದು ವಿಶೇಷ.

ನಾವು ನಮ್ಮನ್ನು ಕೇಳಿಕೊಂಡು (ಅಂತರಂಗಿಕವಾಗಿ, ಆಂತರ್ಯದಲ್ಲಿ) ಬೆಳೆಯುವ ಪ್ರಶ್ನೆಗಳು ನಮ್ಮನ್ನು ತಿಳುವಳಿಕೆಯುಳ್ಳವರನ್ನಾಗಿಯೂ ಮಾಡಬಹುದು. ಅದೇ ಒಂದು ಹಂತದಲ್ಲಿ ಹೆಚ್ಚಾದರೆ, ನಾವು ಹುಚ್ಚರಾಗಲೂ ಬಹುದು. ಆದರೆ, ಕುತೂಹಲ ತೀರಲೇ ಬೇಕು ಎನ್ನುವ ದಾಹಕ್ಕೆ ಪ್ರಶ್ನೆಗಳೇ ಮುಖ್ಯ. ನಾವು ಮಕ್ಕಳಿದ್ದಾಗ ಕೇಳಿದಷ್ಟು ಪ್ರಶ್ನೆಗಳನ್ನು ದೊಡ್ಡವರಾದ ಮೇಲೆ ಕೇಳುವುದು ಕಡಿಮೆಯಾಗುತ್ತದೆ ಎನ್ನಬಹುದು. ಜೊತೆಗೆ, ಹೆಚ್ಚಿನ (ಗುಣಮಟ್ಟದ) ಪ್ರಶ್ನೆಗಳನ್ನು ಕೇಳುವವರು - ನಮ್ಮ ಸಮಾಜದಲ್ಲಿ, ನಮ್ಮ ಆಫ಼ೀಸುಗಳಲ್ಲಿ ಮೇಲೆ ಮೇಲೆ ಮುಂಬಡ್ತಿಯನ್ನು ಪಡೆಯುವುದನ್ನೂ ನಾವು ಗಮನಿಸಬಹುದು.

ಒಟ್ಟಿನಲ್ಲಿ, ನಾವು ಕೇಳುವ, ಕೇಳಿಕೊಳ್ಳುವ, ಕೇಳಬಹುದಾದ ಪ್ರಶ್ನೆಗಳು, ನಮಗೆ ತಕ್ಕ ಇತಿ-ಮಿತಿ, ನೆಲೆ, ಸ್ಥಾನವನ್ನು ಕೊಡಿಸಬಲ್ಲವು, ಹಾಗೂ ನಮ್ಮನ್ನು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕೊಂಡೊಯ್ಯಬಲ್ಲವು.

ಹಾಗಂತ, ದಿನಬೆಳಗಾದರೆ, ಟಿವಿ ರಿಪೋರ್ಟರುಗಳು, ಟಿವಿಯಲ್ಲಿ ಕಂಡು ಬರುವ ಮಹಾನುಭಾವರೆಲ್ಲ ಯಾವಾಗಲೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಇವರುಗಳು, ಪ್ರಶ್ನೆ ಕೇಳುವ ಕಾಯಕದವರೇ ವಿನಾ ಅದರಿಂದ ಮಹಲನ್ನು ಕಟ್ಟುವವರಂತೂ ಅಲ್ಲ! ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲರೂ ಖಾಯಿಲೆಯಿಂದ ವಿಮುಕ್ತಿ ಪಡೆಯುತ್ತಾರೆಯೇ? ಹಾಗೇ ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ ನ್ಯಾಯ ಸಿಗುತ್ತದೆಯೇ?

***

ನಾವು ಏಕೆ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? ಕೇಳಬೇಕು? ಯಾವ ಸಮಯದಲ್ಲಿ ಯಾರಿಗೆ ಎಂತಹ ಪ್ರಶ್ನೆಗಳನ್ನು ಕೇಳಬೇಕು? ನಮ್ಮ ಪ್ರಶ್ನೆಗಳು, ಅಂದರೆ, ನಾವು ಕೇಳುವ ಪ್ರಶ್ನೆಗಳಿಂದ ನಮ್ಮ ಉದ್ದಾರವೋ? ಅಥವಾ ನಮಗೆ ಕೇಳಿದ ಪ್ರಶ್ನೆಗಳಿಗೆ, ನಾವು ನೀಡಿದ ಉತ್ತರಗಳ ಆಧಾರದ ಮೇಲೆ ನಮ್ಮ ಪ್ರಗತಿಯೋ? ನಾವು ಜೀವನದುದ್ದಕ್ಕೂ ಪ್ರಶ್ನೆಗಳನ್ನು ಹೆಚ್ಚು ಕೇಳುತ್ತೇವೆಯೋ ಅಥವಾ ಉತ್ತರಗಳನ್ನು ಕಂಡುಕೊಳ್ಳುತ್ತೇವೆಯೋ? ನಮ್ಮ ಪ್ರತಿಯೊಂದು ಆಯ್ಕೆಗಳು, ನಮ್ಮನ್ನು ಕಾಡುವ ಪ್ರಶ್ನೆಗಳಿಂದಲೋ, ಅಥವಾ ಅವುಗಳನ್ನು ಹೊಂದಿಕೊಂಡು ಬರುವ ಉತ್ತರಗಳಿಂದಲೋ? ಈ ಪ್ರಪಂಚದಲ್ಲಿ ಪ್ರಶ್ನೆಗಳೇ ಇರದಿದ್ದರೆ, ಹೇಗಿರುತ್ತಿತ್ತು? ಪ್ರಾಣಿ-ಪಕ್ಷಿಗಳ ಮನದಲ್ಲಿ ಏನೇನು ಪ್ರಶ್ನೆಗಳಿರಬಹುದು?

Source: Copilot generated image

ಅಬ್ಬಬ್ಬಾ! ಹೀಗೆ ಪ್ರಶ್ನೆಗಳು ಅಂದುಕೊಂಡಾಕ್ಷಣ ಮತ್ತಿನ್ನಷ್ಟು ಪ್ರಶ್ನೆಗಳು ಒಂದರ ಹಿಂದೆ ಒಂದು ಬರತೊಡಗುತ್ತವೆ. ಆದರೆ, ಪ್ರಶ್ನೆಗಳು ಬಂದಷ್ಟು ಸಹಜವಾಗಿ, ತೀವ್ರವಾಗಿ, ಹಾಗೂ ತ್ವರಿತಗತಿಯಿಂದ ಉತ್ತರಗಳು ಬಾರವು. ಒಂದೇ ಪ್ರಶ್ನೆಗೆ, ಕಾಲ-ದೇಶಕ್ಕೆ ಅನುಗುಣವಾಗಿ, ಅನೇಕ ಸರಿಯುತ್ತರಗಳು ಇರಬಹುದು. ಕ್ಷಿಪ್ರವಾದ ಪ್ರಶ್ನೆಗಳಿಗೆ ಶೀಘ್ರವಾದ ಉತ್ತರಗಳೇ ಇರಬೇಕು ಎಂದೇನಿಲ್ಲವಲ್ಲ! ಒಂದೇ ಪ್ರಶ್ನೆಗೆ ಮಕ್ಕಳಿಂದ ಮುದುಕರವರೆಗೆ ಅನೇಕ ಅನೇಕ ಉತ್ತರಗಳು!

ಉದಾಹರಣೆಗೆ, "ನಾನು ಯಾರು? ಅಥವಾ ನೀನು ಯಾರು?" ಎಂಬ ಸುಲಭವಾದ ಪ್ರಶ್ನೆಗೆ ಉತ್ತರಿಸಿಕೊಂಡು ಬನ್ನಿ. ನಿಮ್ಮ ತಲೆ, ಬೇತಾಳನು ಕೊಟ್ಟ ಎಚ್ಚರಿಕೆಯ ಮಾತಿನಂತೆ, ನೂರು ಹೋಳಾಗದಿದ್ದರೆ ಸಾಕು!

***

ನನ್ನ ಪ್ರಕಾರ ಕ್ಯಾಪಿಟಲಿಸ್ಟಿಕ್ ವ್ಯವಸ್ಥೆಯಲ್ಲಿ ಪ್ರಶ್ನೆಗಳನ್ನು ಕೇಳುವವರು ಹೆಚ್ಚು. ನಾವು ಎಷ್ಟೋ ಬಾರಿ ಯಾರೋ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ನಮ್ಮ ಅನುಭವಕ್ಕೆ ತಕ್ಕಂತೆ ಅದನ್ನು ಒಂದು ಪರಿಧಿಯಲ್ಲಿ ಇಟ್ಟು, ಅದಕ್ಕೆ ತಕ್ಕನಾದ ಉತ್ತರವನ್ನು ಕೊಡುತ್ತೇವೆ.

Can you tell me about yourself? ಎನ್ನುವ ಪ್ರಶ್ನೆಯನ್ನು ಒಂದು ಕೆಲಸದ ಸಂದರ್ಶನದಲ್ಲಿ ಕೇಳಿದರೆ, ನಿಮಗೆ ಯಾವ ಉತ್ತರ ಸಿಗಬಹುದೋ, ಅದೇ ಪ್ರಶ್ನೆಗೆ ಮತ್ತೊಂದು ನೆಲೆಯಲ್ಲಿ ಇನ್ನೊಂದು ಉತ್ತರ ಸಿಗಬಹುದು. ನಾವು   ನಮಗೆ ಸಿಗಬಹುದಾದ ಮಾಹಿತಿಯ ಮೇಲೆ ನಮ್ಮ ಉತ್ತರಗಳನ್ನು ಕಂಡುಕೊಳ್ಳುವುದು ಇನ್ನೊಂದು ಅಲಿಖಿತ ನಿಯಮ. ಉದಾಹರಣೆಗೆ, ಈ ಭೂಮಿ ಚಪ್ಪಟೆಯಾಗಿದೆಯೋ? ಗುಂಡಾಗಿದೆಯೋ? ಎನ್ನುವ ಪ್ರಶ್ನೆಗೆ ಉತ್ತರವನ್ನು, ನಾವು ಒಂದು ಗುಹೆಯ ಮಾನವರಾಗಿ ಚಿತ್ರಿಸಿಕೊಳ್ಳುವುದಕ್ಕೂ, ಒಬ್ಬ ಬಾಹ್ಯಾಕಾಶ ಸಂಶೋಧಕನಾಗಿ ನೋಡುವುದಕ್ಕೂ ವ್ಯತ್ಯಾಸವಿದೆ. ಹಾಗಂತ, ಯಾರು ಸರಿ ಯಾರು ತಪ್ಪು ಎನ್ನಲು ಸಾಧ್ಯವೇ?  ನಮ್ಮ ಮನೆ ಅಂಗಳದಿಂದ ಚಂದ್ರನ ದರ್ಶನವಾಗುತ್ತದೆ, ಆದರೆ, ನಾನು ನ್ಯೂ ಯಾರ್ಕ್‌ನಲ್ಲಿದ್ದುಕೊಂಡು ಲಾಸ್ ಎಂಜಲೀಸ್ ನೋಡಲು ಸಾಧ್ಯವಾಗದ್ದರಿಂದ, ನಮ್ಮ ಮನೆಗೆ ಚಂದ್ರ ಅತಿ ಸಮೀಪದಲ್ಲಿದ್ದಾನೆ ಎಂದುಕೊಳ್ಳುವುದರಲ್ಲಿ (ಆಯಾ ಸಂದರ್ಭಕ್ಕೆ ತಕ್ಕಂತೆ) ತಪ್ಪೇನೂ ಇಲ್ಲವಲ್ಲ?

ನಾವು ಹಾಕಿಕೊಳ್ಳುವ ಪ್ರಶ್ನೆಗಳೇ ನಮ್ಮನ್ನು ಉಳಿಸುವವು, ಬೆಳೆಸುವವು - ಎನ್ನುವುದು ಈ ಹೊತ್ತಿನ ತತ್ವ! ಅವರವರ ಶಕ್ತ್ಯಾನುಸಾರ ಎಲ್ಲರೂ ಪ್ರಶ್ನೆಗಳನ್ನು ಕೇಳುವಲ್ಲಿ ಶಕ್ಯರೇ! ಹಾಗಂತ, ಯಾರೂ ಇಲ್ಲಿ ಪ್ರಶ್ನಾತೀತರಲ್ಲ ಮತ್ತು ಪ್ರತಿಯೊಂದು ಪ್ರಶ್ನೆಗೆ ಉತ್ತರವಿರಬೇಕು ಎಂದೇನೂ ಇಲ್ಲ. ಈ ಪ್ರಶ್ನೆ-ಉತ್ತರಗಳ ಕಣ್ಣು-ಮುಚ್ಚಾಲೆಯ ಆಟದಲ್ಲಿ ಹೀಗೆ ಬಂದು ಹಾಗೆ ಹೋಗುವುದೇ ಜೀವನ. ಸಮರಸವೇ ಜೀವನವೆನ್ನುವುದಕ್ಕಿಂತ, ಪ್ರಶ್ನೆಗಳೇ ಜೀವನದ ಜೀವಾಳ ಎನ್ನೋಣವೇ?!