Friday, February 28, 2025

ಕಾಡುವ ಹಾಡು: ಬಾನಲ್ಲು ನೀನೆ ಭುವಿಯಲ್ಲು ನೀನೆ

ಕಾಡುವ ಹಾಡು: ಬಾನಲ್ಲು ನೀನೆ ಭುವಿಯಲ್ಲು ನೀನೆ

ಚಿತ್ರ: ಬಯಲು ದಾರಿ

ಗೀತರಚನೆ: ಚಿ. ಉದಯಶಂಕರ್

ಸಂಗೀತ: ರಾಜನ್-ನಾಗೇಂದ್ರ


ಗಾಯಕರು: ಎಸ್. ಜಾನಕಿ

ನಟಿ: ಕಲ್ಪನ, ಅನಂತ್‌ನಾಗ್

ಛಾಯಾಗ್ರಾಹಕ: ಆರ್. ಚಿಟ್ಟಿಬಾಬು

ನಿರ್ದೇಶನ: ದೊರೈ-ಭಗವಾನ್


ಚಿತ್ರ ಬಿಡುಗಡೆಯಾದ ವರ್ಷ: 1976

ಚಿತ್ರಕತೆ, ಕಾದಂಬರಿ: ಭಾರತೀಸುತ

ಸುಮಾರು 50 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರ, ಮತ್ತು ಈ ಹಾಡು ಇಂದಿಗೂ ನಮ್ಮೆಲ್ಲರ  ಮನಸ್ಸಿನಲ್ಲಿ ಹಾಸಿ ಹೊಕ್ಕಾಗಿ ನಿಂತಿದೆ.

ಹಾಡಿನ ಮೊದಲ ಹತ್ತೊಂಬತ್ತು ಸೆಕೆಂಡುಗಳು, ಸಂಗೀತ ಮಾಂತ್ರಿಕ ರಾಜನ್-ನಾಗೇಂದ್ರರ ಕ್ರಿಯೇಟಿವಿಟಿಯನ್ನು ಎತ್ತಿ ಹಿಡಿಯುತ್ತದೆ.

ಸುಮ್ಮನೇ "ಬಾನಲ್ಲು ನೀನೇ..." ಎಂದು ಹಾಡನ್ನು ಆರಂಭ ಮಾಡಿದರೆ ಏನು ಪ್ರಯೋಜನ? ಅದಕ್ಕೊಂದು ಹಿನ್ನೆಲೆ ಇರದೇ ಹೋದರೆ? ಈ ಸಂದರ್ಭದಲ್ಲೇ ಮಲೆನಾಡಿನ ಚಿತ್ರಣವನ್ನು ಪ್ರತಿನಿಧಿಸುವ ಹಸಿರು-ಹೊನ್ನೆಲೆಗಳ ನಡುವೆ ಮಿನುಗು ತಾರೆ ಕಲ್ಪನಾ ಹಳದಿ ಸೀರೆಯಲ್ಲಿ ಪ್ರಕಟಗೊಳ್ಳುವ ಹೊತ್ತಿಗೆಲ್ಲ ಹಾಡಿನ ರಾಗ ಮತ್ತು ಮುಖ್ಯವಾಗಿ ತಾಳ ಆರಂಭಗೊಂಡು ಒಂದು ಪುಳಕಿತ ಮತ್ತು ರಮಣೀಯ ಸನ್ನಿವೇಶವನ್ನು ಸೃಷ್ಟಿಸುತ್ತವೆ.

ಒಟ್ಟು 32 ಸೆಕೆಂಡುಗಳ ಕಾಲ ಇಂಟ್ರೋ ಮ್ಯೂಸಿಕ್ ಕೊಟ್ಟಿಗೆ ಹಾರದ (ಚಾರ್ಮಾಡಿ ಘಾಟ್) ಪರಿಸರವನ್ನು ಯಥೇಚ್ಚವಾಗಿ ಪರಿಚಯ ಮಾಡಿಕೊಡುವುದರ ಜೊತೆಗೆ, ಉಲ್ಲಸಿತ ನಾಯಕಿ ಕಲ್ಪನಾಳನ್ನು ನೋಡುಗರಿಗೆ ಪರಿಚಯಿಸುತ್ತದೆ.

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ

ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ|

ಹಾಡಿನ ಪ್ರತಿಯೊಂದು ಸಾಲೂ ಕೂಡ, ಕಡಿಮೆ ಒತ್ತಕ್ಷರಗಳಿಂದ ಪೋಣಿಸಿಕೊಂಡು ಪ್ರಾಸಬದ್ಧವಾಗಿ ಕೊನೆಗೊಂಡಿದೆ.

ಹಾಡು ಮೇಲ್ನೋಟಕ್ಕೆ ಪ್ರೇಮಗೀತೆಯಾಗಿ ಕಂಡರೂ, ಅದರ ಅಂತರಾಳದಲ್ಲಿ ದೇವರನ್ನೂ ಕೂಡಾ ಸ್ಮರಿಸಿದಂತಿದೆ.

ಪ್ರೀತಿಯಲ್ಲಿ ಕರಗಿ ಹೋದ ಪ್ರಿಯತಮೆ, ತನ್ನ ಮನದಾಳದಲ್ಲಿ ನೆಲೆಯೂರಿದ ಪ್ರಿಯಕರನ್ನು ಹೊರಗಿನ ಆಯಾಮಗಳಿಗೂ ಹೋಲಿಸಿ, ಅವನನ್ನು ಎಲ್ಲ ಕಡೆಯಲ್ಲೂ ಕಾಣತೊಡಗುತ್ತಾಳೆ. ಆಕೆಗೆ, ಬಾನು-ಭೂಮಿಯ ಬಯಲುಗಳಲೆಲ್ಲ ಕಡೆಯಲ್ಲೂ ತನ್ನ ಪ್ರಿಯತಮನೇ ಕಾಣುವ ದೃಶ್ಯ.

ಈ ಹಾಡಿಗೆ ಸಂಬಂಧಿಸಿದಂತೆ, ಕಲ್ಪನಾ ಅವರ ಕಾಸ್ಟ್ಯೂಮ್ ಮತ್ತು ಮೇಕಪ್ ವಿಚಾರದಲ್ಲಿ ಎರಡು ಮಾತೇ ಇಲ್ಲ. ಇರುವ ಸರಳ ವಿಷಯವನ್ನು, ತನ್ನ ಉದ್ದವಾದ ಸರ/ನೆಕ್ಲೇಸ್ ಬಳಸಿ, ಅದರ ಜೊತೆ ಆಡಿಕೊಂಡು, ನಲಿದಾಡಿಕೊಂಡು ಹೇಳುವ ಕ್ಲೋಸ್ ಅಪ್ ವಿಡಿಯೋ ತುಂಬಾ ಇಷ್ಟವಾಗುತ್ತದೆ. ಬಾನಿಗೆ ಬಾನಿನ ಹಿನ್ನೆಲೆ, ಭುವಿಗೆ ಭುವಿಯ ಹಿನ್ನೆಲೆಯನ್ನು ಹಿಡಿದಿರುವ ಛಾಯಾಚಿತ್ರಣದ ಕೌಶಲ್ಯವನ್ನು ನೀವು ಇಲ್ಲಿ ನೋಡಬಹುದು.

ಈಗೆಲ್ಲ ಬೈಸಿಕಲ್‌ನಲ್ಲಿ ಯಾರಾದರೂ ಡಬಲ್ ರೈಡ್ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ, ಮುಂದಿನ ಕೆಲವು ಕ್ಷಣಗಳು, ಅನಂತನಾಗ್-ಕಲ್ಪನ ಬೈಸಿಕಲ್‌ನಲ್ಲಿ ಓಡಾಡುವುದನ್ನು ನೆನೆಸಿಕೊಂಡು ನಾಯಕಿಯ ಮುಖ ಪುಲಕಗೊಳ್ಳುವುದನ್ನು ಬಹಳ ಹತ್ತಿರದಿಂದ ನೋಡುವಂತೆ ಸೆರೆಹಿಡಿದಿದ್ದಾರೆ.

ಹೂವಲ್ಲಿ ನಿನ್ನ ಮೊಗವನ್ನು ಕಂಡೆ


ಮೊಗದಲ್ಲಿ ನಿನ್ನ ಹೂನಗೆಯ ಕಂಡೆ

ನಗುವಲ್ಲಿ ನಿನ್ನ ಚೆಲುವನ್ನು ಕಂಡೆ

ಚೆಲುವಲ್ಲಿ ನಿನ್ನ ಒಲವನ್ನು ಕಂಡೆ

ಒಲವಿಂದ ಬಾಳ ಹೊಸದಾರಿ ಕಂಡೆ|

ಹೂವು-ಮೊಗ-ಹೂನಗೆ-ಚೆಲುವು-ಒಲವುಗಳನ್ನು ತಳುಕು ಹಾಕಿಕೊಂಡು ಈ ಸಾಲುಗಳು ಒಂದನ್ನೊಂದು ಚೆನ್ನಾಗಿ ಪೋಷಿಸಿಕೊಂಡಿವೆ.

ಹೂವಿನಿಂದ ಆರಂಭವಾದ ಒಲವಿನಿಂದ ಬಾಳಿನ ಹೊಸದಾರಿಯನ್ನು ಕಂಡುಕೊಂಡದ್ದನ್ನು ಜಗತ್ತಿಗೆ ಸಾರುತ್ತಿರುವ ನಾಯಕಿಯ ಮನದಲ್ಲಿ ಯಾವುದೇ ಅಳುಕಿಲ್ಲ, ಅಂಜಿಕೆ ಇಲ್ಲ.

ಮುಗಿಲಲ್ಲೂ ನೀನೇ ಮನದಲ್ಲೂ ನೀನೇ


ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ|


ಒಲವಿನಿಂದ ಹೊಸದಾರಿ ಕಂಡ ನಾಯಕಿಗೆ ಮುಗಿಲು-ಮನದಲ್ಲಿ ತೇಲುವ ನಾಯಕನ ಚಿತ್ರ ಮೂಡಿ ಮರೆಯಾಗುತ್ತದೆ. ಸುಂದರವಾದ ಸಂಗೀತದ ಹಿನ್ನೆಲೆಯಲ್ಲಿ, ಕನ್ನಡ ಚಿತ್ರಗಳಲ್ಲಿ ಆಗಿನ ಕಾಲದಲ್ಲಿ ಹೆಲಿಕ್ಪಾಪ್ಟರುಗಳನ್ನು ಬಳಸಿದ್ದರು ಎಂಬು ಅಭಿಮಾನವೂ ಮೂಡುತ್ತದೆ.

ಪ್ರೀತಿ ಎಂದರೆ ಬರೀ ಬಯಲಿನ ಜೀವನವಷ್ಟೇ ಏನೋ... ಎನ್ನುವಂತೆ ಒಂದು ಸುಂದರವಾದ ಆಲಾಪನೆ ಆರಂಭವಾಗುತ್ತದೆ. ಸುಮಾರು ಹದಿನೆಂಟು ಸೆಕೆಂಡುಗಳ ಈ ಆಲಾಪನೆಯಲ್ಲಿ ನಾಯಕಿ ಬಯಲಿನ ತುಂಬೆಲ್ಲ ಓಡಾಡಿ, ಬಾನಿಗಷ್ಟೇ ಬಯಲಲ್ಲ, ಭುವಿಗೂ ಬಯಲಿದೆ ಎಂದು ಸಾರುವಂತೆ ಕಾಣುತ್ತದೆ.

ಪ್ರೀತಿ-ಒಲವು-ಚೆಲುವು ಎಂದರೆ ಬರೀ ಸುಖವಷ್ಟೇ ಅಡಗಿದೆ ಎಂದು ಹೇಳಿದವರಾರು? ಮುಂದಿನ ಐದು ಸಾಲುಗಳು, ಜೀವನದ ಪರಿಪೂರ್ಣತೆಯನ್ನು ಸೂಕ್ಷ್ಮವಾಗಿ ಹೇಳುತ್ತವೆ.

ಬಿರುಗಾಳಿ ಬೀಸಿ ಎದುರಾದರೇನು


ಭೂಕಂಪವಾಗಿ ನೆಲ ಬಿರಿದರೇನು

ಕಡಲೆಲ್ಲ ಹೊಮ್ಮಿ ಬಳಿ ಬಂದರೇನು

ಮಳೆಯಂತೆ ಬೆಂಕಿ ಧರೆ ಗಿಳಿದರೇನು

ಜೊತೆಗಿರಲು ನೀನು ಭಯಪಡೆನು ನಾನು|


ಜೀವನವೆಂದರೆ ಹೂವು-ಚೆಲುವು-ಒಲವುಗಳ ಜೊತೆಗೆ ಇವು ಕೂಡ ಬರಬಹುದು, ಬಂದರೆ ಏನಾದೀತು? What's the worst that can happen? If you're with me, I'm ready to face anything.. ಎಂದು ಧೈರ್ಯ ಸಾರುವ ಸಾಲುಗಳು.

ಬಿರುಗಾಳಿ ಬೀಸಿ ಎದುರಾಗಬಹುದು, ಭೂಕಂಪದಿಂದ ನೆಲ ಬಿರಿಯಬಹುದು, ಕಡಲೆಲ್ಲ ಹೊಮ್ಮಿ ಒಮ್ಮೆಲೇ ಬಳಿ ಬರಬಹುದು, ಮಳೆಯಂತೆ ಬೆಂಕಿಯೇ ನೆಲಕ್ಕೆ ಸುರಿಯಬಹುದು.. ಇಷ್ಟೆಲ್ಲ ಆದರೂ ಅಥವಾ ಇನ್ನೇನೇ ಆದರೂ ಎಲ್ಲಿಯವರೆಗೆ ನಿನ್ನ ಜೊತೆ ಇರುವುದೋ ಅಲ್ಲಿಯವರೆಗೆ ಭಯ ಪಡೆನು ಎಂದು ಅಭಯವನ್ನು ಸೂಸುವ ಸಾಲುಗಳು.

ಈ ಪ್ಯಾರದಲ್ಲಿ ಒಂದು ರೀತಿ, ಪ್ರೇಮ ಕವನದಲ್ಲಿ ದಿಢೀರನೆ ಹೆದರಿಕೆಯನ್ನು ಹುಟ್ಟಿಸುವಂತೆ ಮಾಡುತ್ತವಾದರೂ, ಕೊನೆಯ ಸಾಲು - "ರವಿ-ಶಶಿ ಎರಡರಲ್ಲೂ ನೀನೇ" ಎಂದು ಮತ್ತೆ ಪ್ರೀತಿಯ ತನ್ಮಯತೆಯನ್ನು ಸಾರಿ ಸಮಾಧಾನ ಮಾಡುತ್ತವೆ.

ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ


ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ|

ಪ್ರೇಮ-ಪ್ರೀತಿ ಅಂದರೆ ಹೀಗೇ... ಅದಕ್ಕೊಂದು ಆಕಾರ, ಗಾತ್ರ, ಅಂಕಣ, ಬಣ್ಣ, ಗುಣ, ಮಿತಿ, ಪರಿಮಿತಿ - ಯಾವುದೂ ಇಲ್ಲ.

ಪ್ರೇಮ-ಪ್ರೀತಿಯಲ್ಲಿ ತೊಡಗಿದವರು, ಅಥವಾ ಬಿದ್ದವರು, ಎಂಥಾ ಒಂದು ಸಂಕಷ್ಟದ ಸ್ಥಿತಿ ಬಂದರೂ ಜೊತೆಯಾಗಿಯೇ ಎದುರಿಸುತ್ತೇವೆ ಎಂಬ ನಂಬಿಕೆಯಲ್ಲಿ ಒಂದಾದಾಗ ಬಾಳಿಗೆ ಒಂದು ಅರ್ಥ ಬರುತ್ತದೆ. ಅದೇ ರೀತಿ, ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ಎದುರಿಸುವ ಪ್ರತಿಯೊಂದು ದುಗುಡ, ದುಮ್ಮಾನವೂ ಅವರ ಪ್ರೀತಿಯನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.

ಈ ಹಾಡಿನ ಸಾಲುಗಳನ್ನು ಹೇಗೆ ಚಿತ್ರೀಕರಿಸಬಹುದಿತ್ತು ಎಂದು ಯೋಚಿಸಿದಾಗ, ನಿರ್ದೇಶಕರ ಸ್ಥಳದ ಆಯ್ಕೆಯ ಬಗ್ಗೆ ಶಬಾಶ್ ಎನ್ನಲೇ ಬೇಕಾಗುತ್ತದೆ. ಯಾವುದೇ ಒಂದು ಸಹಾಯವಿಲ್ಲದೇ ಕಲ್ಪನಾ ಅವರು ಅನಾಯಾಸವಾಗಿ ಈ ಕಲ್ಲಿನ ಮೇಲೆ ನಿಂತು ಅಭಿನಯವನ್ನು ನೀಡಿದ್ದು ಹಾಡಿನ ಆಳಕ್ಕೆ ಮತ್ತಷ್ಟು ಅರ್ಥವನ್ನು ಕಲ್ಪಿಸುತ್ತದೆ.

ಜೊತೆ ಇರಲು ನೀನು, ಭಯಪಡೆನು ನಾನು - ಎಂದು ಈ ಜೋಡಿ ಮರಗಳ ಅಡಿಯಲ್ಲಿ ಸೇರುವಾಗ - ಕಾಡ್ಗಲ್ಲು ಮತ್ತು ಅದರ ಜೊತೆಗಿದ್ದ ಕಷ್ಟ-ಕಾರ್ಪಣ್ಯಗಳೆಲ್ಲವೂ ಮಂಜಿನಂತೆ ಮರೆಯಾಗಿ ಹೋಗುತ್ತವೆ. ಇಲಿ ತೋರಿಸಿರುವ ಎರಡು ಮರಗಳಲ್ಲಿ ಒಂದು ಮರ ಈಗಲೂ ಚಾರ್ಮಾಡಿ ಘಾಟ್ ನಲ್ಲಿದೆ, ಇನ್ನೊಂದು ಮರ ಕಾಲ ಕ್ರಮೇಣ ಸತ್ತು ಹೋಗಿದೆ.

ಈ ಹಾಡನ್ನು ಇಲ್ಲಿ ನೋಡಬಹುದು.

***

ಕನ್ನಡದ ಮಿನುಗುತಾರೆ ಕಲ್ಪನ (1943-1979) ಅವರು, ತಮ್ಮ 15 ವರ್ಷದ ಸಿನಿಮಾ ಜೀವನದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳ ಲೀಡ್ ರೋಲ್‌ನಲ್ಲಿ ನಟಿಸಿದ್ದನ್ನು ಗಮನಿಸಿದರೆ, ಆಗಿನ ಕಾಲದಲ್ಲಿ ಅವರು ಎಂಥ ಪ್ರತಿಭಾಶೀಲರಾಗಿದ್ದರು, ಅದೆಷ್ಟು ಪರಿಶ್ರಮವನ್ನು ಪಟ್ಟಿದ್ದರು, ಎಂದು ಊಹಿಸಿದಾಗಲೆಲ್ಲ ಅವರ ಮೇಲೆ ನಮ್ಮ ಅಭಿಮಾನ ಮತ್ತಷ್ಟು ಹೆಚ್ಚುತ್ತದೆ. ಕಲ್ಪನಾ ಅವರು ಆಗಿನ ಕಾಲದಲ್ಲಿ ಮಾತ್ರ ಅತ್ತ್ಯುತ್ತಮ ನಟಿಯಾಗಿರಲಿಲ್ಲ, ಕನ್ನಡಿಗರ ಮನದಲ್ಲಿ ಅವರು ಎಂದಿದ್ದರೂ ಅತ್ಯುತ್ತಮ ನಟಿಯೇ.

ಈ ಹಾಡಿನೊಂದರಲ್ಲಿಯೇ, ಗಾಯಕಿ ಎಸ್. ಜಾನಕಿಯವರು ಎಲ್ಲ ಪ್ರೇಮಿಗಳಿಗೂ ಹತ್ತಿರವಾಗುತ್ತಾರೆ.

ಈ ಹಾಡಿನ ಅಭಿನಯದಲ್ಲಿ ಕಲ್ಪನಾ ಅವರಿಗೆ ಸರಿಸಾಟಿ ಕೊಡುವ ಮತ್ತೊಬ್ಬ ಅಭಿನೇತ್ರಿಯನ್ನು ಹುಡುಕುವುದು ಕಷ್ಟವಾಗುತ್ತದೆ

ಇನ್ನು ಹಾಡಿನ ಸಂಗೀತ ಸಂಯೋಜನೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಹಾಡಿನ ಸ್ವಾರಸ್ಯ, ಪ್ರೇಮಿಯ ಆಂತರ್ಯ, ಸಾಹಿತ್ಯದ ಪ್ರತಿಯೊಂದು ಪದವನ್ನೂ ಸಹ ಸ್ಫುಟವಾಗಿ ಮತ್ತು ಸಹಜವಾಗಿ ಚಿತ್ರೀಕರಿಸಲು ಅನುವಾಗುವಂತೆ ಸಂಗೀತವನ್ನು ಹೆಣೆದಿದ್ದಾರೆ. ಇಂತಹ ಹಾಡುಗಳಿಂದಲ್ಲವೇ ನಾವು ರಾಜನ್-ನಾಗೇಂದ್ರ ಅವರಂಥ ಜೋಡಿಯನ್ನು ಎಂದೂ ಮರೆಯದಂತಾಗಿರುವುದು.

ಇನ್ನು ನಿರ್ದೇಶಕ ದೊರೈ-ಭಗವಾನ್ ಅವರು, ಆಗೆಲ್ಲ ರಾಜ್‌ಕುಮಾರ್ ಅವರನ್ನು ಹಾಕಿಕೊಂಡು ನಿರ್ದೇಶನ ಮಾಡುತ್ತಿದ್ದ ಕಾಲದಲ್ಲಿ, ಮೊಟ್ಟ ಮೊದಲನೇ ಬಾರಿಗೆ ಅನಂತನಾಗ್-ಕಲ್ಪನಾ ಅವರನ್ನು ಈ ಕತೆಗೆ ನಾಯಕ-ನಾಯಕಿಯನ್ನಾಗಿ ಆರಿಸಿಕೊಂಡಿರುವುದೂ "ಬಯಲುದಾರಿ" ಚಿತ್ರದ ಒಂದು ವಿಶೇಷ. 

 

ರಾಜನ್-ನಾಗೇಂದ್ರ

                                                    ದೊರೈ-ಭಗವಾನ್

No comments: