Tuesday, July 01, 2025

ನಾವು ಕನ್ನಡಿಗರು ಇರೋದೇ ಹೀಗೆ...

ನಾವು ಕನ್ನಡಿಗರು ಇರೋದೇ ಹೀಗೆ...

ಹೀಗಂತ ಅನ್ನಿಸಿದ್ದು ಇತ್ತೀಚೆಗೆ, ನಮ್ಮ ಆಫ಼ೀಸಿನಲ್ಲಿ ಒಂದಿಷ್ಟು ಸಹೋದ್ಯೋಗಿಗಳ ಚಲನವಲನಗಳನ್ನ ಬಹಳ ಹತ್ತಿರದಿಂದ ಗಮನಿಸಿಕೊಂಡಾಗ.

ಒಂದು ದಿನ ಆಫ಼ೀಸಿನಲ್ಲಿ, ನಾನು ಮತ್ತೊಬ್ಬ colleage (ದಕ್ಷಿಣ ಭಾರತೀಯ) ಇಬ್ಬರೂ ಇಂಗ್ಲೀಷಿನಲ್ಲಿ ಆಫ಼ೀಸಿಗೆ ಸಂಬಂಧಿಸಿರದ ವಿಷಯಗಳನ್ನ ಮಾತನಾಡಿಕೊಂಡಿದ್ದೆವು. ಈಗಂತೂ ಬೇಕಾದಷ್ಟು ವಿಷಯಗಳಿವೆ ಮಾತನಾಡಲು. ಆಗ ನಮ್ಮ ನಡುವೆ ಮತ್ತೊಬ್ಬ ದಕ್ಷಿಣ ಭಾರತೀಯನ ಆಗಮನವಾಯಿತು. ಒಂದೆರಡು ಕುಶಲೋಪರಿಗಳ ತರುವಾಯ, ಅವರಿಬ್ಬರೂ, ನಾನಿರುವಂತೆಯೇ ತಮಿಳಿನಲ್ಲಿ ಮಾತನಾಡಲು ಶುರುಮಾಡಿದರು. ನಾನು ಇದ್ದೇನೆ, ಇಲ್ಲ ಎನ್ನವ ಯಾವ ಉಸಾಬರಿಯೂ ಇಲ್ಲದೆ, ’ನೀನು ನಮ್ಮ ಜೊತೆ ಮಾತನಾಡುವುದಾದರೆ ತಮಿಳಿನಲ್ಲಿಯೇ ಮಾತನಾಡು, ಇಲ್ಲವಾದರೆ ತೊಲಗು’ ಎಂದು ಮುಖದ ಮೇಲೆ ಹೊಡೆದಂತೆ! ನಾನು ಈ ಸೂಕ್ಷ್ಮವನ್ನು ಗಮನಿಸಿದವನೇ, ಇಂಗ್ಲೀಷಿನಲ್ಲಿ ಬೇಕಂತಲೇ, ಸ್ವಲ್ಪ ಗಟ್ಟಿಯಾಗಿ, "...Guys, I don't know what the heck heck you're talking about... take care!" ಎಂದು ಹೇಳಿ, ಅವರ ಪ್ರತಿಕ್ರಿಯೆಯನ್ನೂ ನಿರೀಕ್ಷಿಸದೇ ಅಲ್ಲಿಂದ ಹೊರಟೆ.

ಇದೇ ಸಂದರ್ಭ ಇಬ್ಬರು ಕನ್ನಡಿಗರ ನಡುವೆ ಆಗಿದ್ದರೆ ಹೇಗಿರುತ್ತಿತ್ತು? ಅವರು ಇಬ್ಬರೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರೇ? ಅಥವಾ ಆದಷ್ಟು ಬೇಗ ಇಂಗ್ಲೀಷಿಗೆ ಗಂಟುಬೀಳುತ್ತಿದ್ದರೇ?

ಆಗ ನನಗನ್ನಿಸಿದ್ದು, "ನಾವು ಕನ್ನಡಿಗರು ಇರೋದೇ ಹೀಗೆ..." ಅಂತ.

***

ನಮ್ಮ ಕನ್ನಡಿಗರನ್ನ ಯಾವ ಯಾವ ವಿಶೇಷಣಗಳನ್ನು (adjectives) ಉಪಯೋಗಿಸಿ ಗುರುತಿಸಬಹುದು ಎಂದು ನೀವು ನನ್ನನ್ನು ಕೇಳಿದರೆ, ಕನ್ನಡಿಗರು: ಉದಾರಿಗಳು, ಔದಾರ್ಯವಂತರು, ನಾಜೂಕಿನ ಮನಸ್ಥಿತಿಯವರು, ಹೆಚ್ಚು ರಿಸ್ಕ್ ತೆಗೆದುಕೊಳ್ಳದವರು, ಶಾಂತಿಪ್ರಿಯರು, ಅವರ ಭಾಷೆಯ ಮೇಲೆ ದುರಾಭಿಮಾನವನ್ನಂತೂ ಉಳ್ಳದವರು, ಹೀಗೆ ಆನೇಕ ರೀತಿಯಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು.

ನಾವು ಉತ್ತರ ಅಮೇರಿಕದ ಟೆಕ್ನಾಲಜಿ ಕಂಪನಿಗಳಲ್ಲಿನ ಎಕ್ಸಿಕ್ಯೂಟಿವ್‌ಗಳನ್ನು ಗಮನಿಸಿದರೆ, ಅವರಲ್ಲಿ ಹಿಂದಿ, ತೆಲುಗು, ತಮಿಳು ಭಾಷಿಕರು ಹೆಚ್ಚಾಗಿ ಕಂಡುಬರುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಹೆಚ್ಚಿನ ಮಟ್ಟದಲ್ಲಿ ಕನ್ನಡ ಎಕ್ಸಿಕ್ಯೂಟಿವ್‌ಗಳು ಇದ್ದರೂ, ಅವರೂ ಸಹ ತಾವು ಕನ್ನಡಿಗರೆಂದು ಸಾರ್ವಜನಿಕವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದರಲ್ಲಿ ಅದೇನೋ ಒಂದು ರೀತಿಯ ಮುಜುಗರ ಅವರಿಗೆಲ್ಲ.

ನಮ್ಮ ಕನ್ನಡಿಗರ ಮನಸ್ಥಿತಿಗೆ ಇನ್ನೊಂದು ಉದಾಹರಣೆಯನ್ನು ಕೊಡುವುದಾದರೆ, ತಾವು ಒಂದು ಕಾಲದಲ್ಲಿ ಅದೆಷ್ಟೇ ಸುಳ್ಳು ಹೇಳಿಕೊಂಡು ತಮ್ಮ ರೆಸ್ಯೂಮೆಯನ್ನು ಬಿಲ್ಡ್ ಮಾಡಿಕೊಂಡಿರಲಿ, ಅಂಥವರು ಒಮ್ಮೆ ಹೈರಿಂಗ್ ಮ್ಯಾನೇಜರ್ ಸ್ಟೇಟಸ್ ತಲುಪಿದರೆಂದರೆ ಮುಗಿದೇ ಹೋಯಿತು! ಅಂಥವರಿಗೆ ಕಂಪನಿಯ HR ರೂಲ್ಸ್‌ಗಳೆಲ್ಲ ಮೈವೆತ್ತಿಕೊಂಡಂತೆ, ಒಂಚೂರೂ ಗೈಡ್‌ಲೈನ್ ಅನ್ನು ಬದಲಾಯಿಸುವುದಿರಲಿ, ಅದನ್ನು ಬೆಂಡ್ ಕೂಡ ಮಾಡದಷ್ಟೂ ಸಾಚಾಗಳಾಗಿ ಹೋಗಿ ಬಿಡುತ್ತಾರೆ.

’ನೀವು ಹೈರ್ ಮಾಡಿರುವವರಲ್ಲಿ, ಒಬ್ಬರಾದರೂ ಕನ್ನಡಿಗರಿದ್ದಾರೆಯೇ?’ ಎಂದು ನಿಮ್ಮ ಕನ್ನಡಿಗ ಸ್ನೇಹಿತರನ್ನು ಕೇಳಿ ನೋಡಿ, ನಿಮಗೇ ಗೊತ್ತಾಗುತ್ತದೆ!

ನೀವು ಏನು ಬೇಕಾದರೂ ಮಾಡಿ, ಮತ್ತೊಬ್ಬ ಕನ್ನಡಿಗ ಇಂಟರ್‌ವ್ಯೂವರ್‌ನಿಂದ ಸೈ ಎನಿಸಿಕೊಂಡು ನೀವೇನಾದರೂ ಒಂದು ಉತ್ತಮ ಮಟ್ಟದ ಕೆಲಸವನ್ನಾಗಲೀ, ಪ್ರೊಮೋಷನ್ ಅನ್ನಾಗಲೀ ಗಿಟ್ಟಿಸಿಕೊಂಡರೆ ಅದೊಂದು ಗಿನ್ನೆಸ್ ದಾಖಲೆಯಾದೀತು!

***

ಕನ್ನಡಿಗರ ಮನಸ್ಥಿತಿ ಹೇಗಿರುತ್ತೆ? ಅವರಿಗೇನು ಬೇಕು, ಏನು ಬೇಡ ಎಂತೆಲ್ಲಾ ಕೇಳಿಕೊಂಡಾಗ, ಮನನ ಮಾಡಿಕೊಂಡಾಗ ಅದೊಂದು ದೊಡ್ಡ ಸಬ್ ರುಟೀನ್ ಆಗಿ ಹೋಗುತ್ತೆ. ಅಂತಹ ಚಿಂತನೆಗಳಲ್ಲಿ ಸೇರಿಕೊಳ್ಳುವಷ್ಟು ಸುಲಭವಾಗಿ ಅದರಿಂದ ಹೊರಬರಲಾರೆವು.

ನಮ್ಮ ಸಾಹಿತ್ಯ, ನಮ್ಮ ಸಂಗೀತ, ನಮ್ಮ ಪರಂಪರೆ ಅದೆಂತಹ ಉನ್ನತ ಮಟ್ಟದ್ದು! ನೆಟ್ಟಗೆ ಹೇಳಿದ್ದನ್ನ ಬರೆಯೋಕೆ ಬರದ ಭಾಷೆಯವುಗಳೆಲ್ಲ, ತಮ್ಮದೇ ಆದ ಒಂದು ಲಿಪಿಯೇ ಇಲ್ಲದ ಪ್ರಾಂತ್ಯದ ಜನರೆಲ್ಲ ತಿಣುಕಾಡಿ ಒದ್ದಾಡಿ ಸಂಗೀತ-ಸಾಹಿತ್ಯ ಎಂದು ತಮ್ಮನ್ನು ತಾವೇ ಬೆನ್ನು ತಟ್ಟಿಕೊಳ್ಳುತ್ತಿರುವಾಗ, ನಮಗೇನಾಗಿದೆ ದಾಢಿ? ಅನ್ನಿಸೋಲ್ಲ?

ನಾವು ಕನ್ನಡಿಗರು, ಯಾವಾಗಲೂ ಊರ್ಧ್ವ ಮುಖಿಗಳು. ನಮ್ಮ ಚಿಂತನೆಗಳೇನೇ ಇದ್ದರೂ ಅದು ಎಂದಿಗೂ ಪಾರಮಾರ್ಥದ ಕಡೆಗೆ.

ನನ್ನ ತೆಲುಗು ಸ್ನೇಹಿತನೊಬ್ಬ ನನ್ನ ತೊಳಲಾಟವನ್ನು ಕಂಡು ಹೀಗೆ ಹೇಳಿದ: "ನೀವು ಕನ್ನಡವರೇ ಸರಿ! ನಾವೆಷ್ಟೇ ಹೊಡೆದಾಡಿ, ಬಡಿದಾಡಿ, ಹಾರಾಡಿದರೂ, ನಿಧಾನವಾಗಿ ಕೊನೆಗೊಂದು ದಿನ ನಾವೆಲ್ಲ ಗ್ರೌಂಡ್ ಆಗುತ್ತೇವೆ... ನಿಮ್ಮ ಕನ್ನಡಿಗರಿಗೆ ಆ realization ಬೇಗ ಆಗಿರುತ್ತೆ, ಹಾಗಾಗಿ ನೀವೆಲ್ಲ, ಈ ಲೌಕಿಕ ವಿಷಯಗಳನ್ನು ಅಷ್ಟೊಂದು ತಲೆಗೆ ಹಚ್ಚಿಕೊಳ್ಳದೇ ಒಳ್ಳೆಯದನ್ನೇ ಮಾಡುತ್ತಿದ್ದೀರಿ.  ನಮಗೆ ನಿಮ್ಮ realization ಬರುವ ಹೊತ್ತಿಗೆ ಮುಪ್ಪಾಗಿ ಹೋಗಿ, ಕೈ ಕಾಲು ಸೋತಿರುತ್ತವೆ!"

ಅದೇನೋ ಸರಿ... ಈ ಪಾರಮಾರ್ಥದ ಒಲುಮೆಗೂ, ನಮ್ಮನ್ನು ನಾವು ನಮ್ಮವರೊಡನೆ ಗುರುತಿಸಿಕೊಳ್ಳದ, ನಮ್ಮ ಭಾಷೆಯಲ್ಲಿ ಒಡನಾಡದ, ನಮ್ಮವರನ್ನು ಕಂಡು ಒಂಚೂರೂ ಆದ್ಯತೆ ಕೊಡದ ನಾವು... ಸ್ವಲ್ಪವಾದರೂ ಬದಲಾಗದಿದ್ದರೆ ಹೇಗೆ?

ನಿಮಗೇನ್ ಅನ್ಸತ್ತೆ?

https://creators.spotify.com/pod/profile/satish-hosanagara/episodes/65-e34v75e

No comments: