ಕಾಲವಾದ kaaloo!
http://kaalachakra.blogspot.com/
ದುರದೃಷ್ಟವಷಾತ್ ಮೊನ್ನೆ ನಡೆದ ಅವಘಡದಲ್ಲಿ ನಮ್ಮೆಲ್ಲರ ಆತ್ಮೀಯ, ಕಾಳೂ, ಕಾಲೂದಾದ, ಕಾಳೂ ಮಾಮ ಎಂದೇ ಜನಪ್ರಿಯವಾಗಿದ್ದ kaaloo ಬೆಳ್ಳಿತೆರೆಯಿಂದ ನಿರ್ಗಮಿಸಿದ್ದನ್ನು ಬಹು ದುಃಖದಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ನಮ್ಮ ನಿಮ್ಮೆಲ್ಲರ ಬಯಲುಸೀಮೆಯ ತೆರೆದ ಧ್ವನಿಯ ಜೊತೆಗೆ ಹೃದಯದಲ್ಲಿ ಕರ್ನಾಟಕದ ರಾಜಕೀಯ ಚಲನವಲನಗಳನ್ನು ತನ್ನದೇ ಆದ ಧಾಟಿಯಲ್ಲಿ ತನ್ನ ಸ್ನೇಹಿತರಾದ ಕೋಡೀಹಳ್ಳಿ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರ ಜೊತೆ ಸೇರಿಕೊಂಡು ದೇವೇಗೌಡ, ಧರಮ್ ಸಿಂಗ್, ಯಡಿಯೂರಪ್ಪ ಮೊದಲಾದವರ ಚೇಲಾಗಳು ಎಷ್ಟೊತ್ತಿಗೆ ಬೇಕಾದರೂ ನನ್ನ ಮನೆ ಕಿಟಕಿ ಗಾಜುಗಳನ್ನು ಒಡೆಯಬಹುದು ಎಂದು ಒಳಗೊಳಗೆ ಹೆದರಿಕೊಂಡೇ ಪುರುಸೊತ್ತಾದಾಗಲೆಲ್ಲ ಭಾರತೀಯ ಕಾಲಮಾನದಲ್ಲಿ ಅಲ್ಲಿನ ವ್ಯತಿರಿಕ್ತ ಮನೋಸಂಕಲ್ಪಗಳ ಕಾದಾಟದಲ್ಲಿಯೂ ತನ್ನ ಮನಸ್ಸಿನ ಚಿತ್ರಗಳನ್ನು ತೆರೆದಿಡುತ್ತಿದ್ದ. ಅಂತಹ kaaloo ಇನ್ನಿಲ್ಲ!
ಆದದ್ದಿಷ್ಟೇ: ಸುಮ್ಮನಿರಲಾರದ ನಾನು ಮೊನ್ನೆ kaaloo ವನ್ನು ರಾತ್ರಿ ಊಟಕ್ಕೆ ನಮ್ಮ ಮನೆಗೆ ಆಮಂತ್ರಿಸಿ ಊಟವಾದ ಬಳಿಕ ಲೋಕಾಭಿರಾಮವಾಗಿ ಹರಟೆ ಹೊಡೆದು ರಾತ್ರಿ ಹನ್ನೊಂದೂವರೆ ಹೊತ್ತಿಗೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಇನ್‌ಫರ್ಮೇಷನ್ ಹೈವೇಯಲ್ಲಿ ಘಂಟೆಗೆ ಸುಮಾರು ೬೦ ಮೈಲಿಯ ವೇಗದಲ್ಲಿ ಡ್ರಾಪ್ ಮಾಡಲು ಹೊರಟಿದ್ದೆ. ಗೂಗಲ್‌ನವರು ಬ್ಲಾಗರ್ ಅಕೌಂಟನ್ನು ಅದೇ ಹೊತ್ತಿಗೆ ಮರ್ಜ್ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ, ಗೂಗಲ್ ವಾಹನ ಮರ್ಜ್ ಆಗುವ ಹೊತ್ತಿನಲ್ಲಿ ನನ್ನ ತಪ್ಪಿನಿಂದಾಗಿ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದ kaaloo ಬಲವಾದ ಹೊಡೆದ ಬಿದ್ದಿದ್ದರಿಂದ ಸ್ಥಳದಲ್ಲೇ ಅಸುನೀಗಿಬಿಟ್ಟರು. ರಕ್ತಸ್ರಾವವೇನೂ ಮೇಲ್ನೋಟಕ್ಕೆ ಕಂಡುಬರದಿದ್ದರೂ ಒಳಗೊಳಗೇ ಹೊಡೆತ ತಿಂದು 'ಬಡವಾ ನೀ ಮಡುಗ್ದಂಗಿರು!' ಎಂದು ಹೇಳಿದ್ದೇ ಅವರ ಕೊನೆ ಉಸಿರಾಗಿ ಹೋಯಿತು.
ಪಲ್ಸ್ ಚೆಕ್ ಮಾಡಿ ನೋಡಿದ ನಾನು ಏನೇ ತಿಪ್ಪರಲಾಗ ಹಾಕಿದರೂ, ಗೂಗಲ್ ವಾಹನದ ಅವಘಡವನ್ನು ವಿವರಿಸಿ ದೊಡ್ಡ ಕಂಪನಿಯವರಿಗೆ ಬರೆದರೂ ಯಾರೂ ನಮ್ಮ kaaloo ವನ್ನು ಉಳಿಸಿಕೊಳ್ಳಲು ಸಹಾಯ ಮಾಡದೇ ಹೋದರು.
kaaloo ವನ್ನು ತಿಂದ ನಮ್ಮ ರಸ್ತೆ, ವಾಹನ, ಗೂಗಲ್ ಅಂತಹ ದೊಡ್ಡ ಕಂಪನಿ, ನನ್ನ capitalistic ಮೈಂಡ್‌ಸೆಟ್ಟಿನವನನ್ನು kaaloo ವಿನ ಆತ್ಮೀಯರಾದ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರೆಲ್ಲರೂ ಹಳಿದಿದ್ದೇ ಹಳಿದಿದ್ದು. 'ನಿಮ್ ಅಮೇರಿಕನ್ ಆಕ್ರಮಿಕೆಯ ವಸಾಹತುಶಾಹಿ ಮನೋಭಾವದ ಮುಂಡಾ ಮೋಚಾ!' ಎಂದೂ, 'ಅಲ್ಲೀ ನೀರ್ ಕುಡ್ದು ಅಲ್ಲಿಗೇ ಜೀತಾ ಮಾಡೋ ನಿಮ್ ಕರ್ಮಕ್ಕೆ ಮೆಟ್ನಾಗ್ ಹೊಡಿಯಾ!' ಎಂತಲೂ, ಇನ್ನೂ ಮುಂತಾಗಿ kaaloo ವನ್ನು ತಿಂದು ಹಾಕಿದ ನನ್ನನ್ನು ದೂರಿ ಹಲವಾರು ಸಂದೇಶಗಳು ನಿರಂತರವಾಗಿ ಬರತೊಡಗಿವೆ.
ಕಳೆದ ವರ್ಷ "ಅಂತರಂಗಿ"ಯನ್ನು ಕೆಲಸದಿಂದ ಬಿಡಿಸಿ 'ಅಂತರಂಗ'ವನ್ನು ಬಸವನ ಹುಳುವಿನಂತೆ ಬಸವಳಿಯುವಂತೆ ಮಾಡಿದ್ದನ್ನು ಜನರು ಇನ್ನೂ ಮರೆಯುವ ಮೊದಲೇ ಮತ್ತೊಬ್ಬ ಹವ್ಯಾಸಿ ಬರಹಗಾರನನ್ನು ಇಲ್ಲವಾಗಿಸಿದ್ದಕ್ಕೆ ಅಥವಾ ಅವರ ಜವಾಬ್ದಾರಿಯನ್ನೂ ನನ್ನ ಮೇಲೆ ಹೇರಿಕೊಂಡು ಈಗಾಗಲೇ mediocre ಕೆಲಸಮಾಡಿಕೊಂಡಿರುವ ನನ್ನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸ ಜನರಿಗೆ ನಾನು ಹೇಳುವುದಾದರೂ ಏನಿದೆ.
kaaloo ವಿನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅಲ್ಲಲ್ಲಿ ಕಾಲೂವಿನ ಆತ್ಮ ಜಾಗರೂಕವಾಗಿ ಏನಾದ್ರೂ ನುಡಿದಿದ್ದೇ ಆದಲ್ಲಿ ಅದನ್ನೂ ಪುರಸ್ಕರಿಸಬೇಕಾಗಿ ನನ್ನ ಮನವಿ. ಪುರುಸೊತ್ತು ಸಿಕ್ಕರೆ kaaloo ವಿನ ಆತ್ಮಕ್ಕೆ ಇಲ್ಲಿ ಶಾಂತಿಕೋರಿ.