Thursday, March 15, 2007

ಸ್ಟಾಪ್ ಸೈನೂ ಸಿಗ್ನಲ್ ಲೈಟೂ






ವಯಸ್ಸಾಗಿರೋ ಕುರುಹು ಅನ್ನೋ ಹಾಗೆ ಪ್ರತಿಯೊಬ್ಬರಿಗೂ ಬೇಕಾದಷ್ಟು ಸೂಚನೆಗಳು ಸಿಗುತ್ತವೆ. ಅವರವರ ಮೂಗಿನ ಹೊಳ್ಳೆಗಳಲ್ಲಿ ಬೆಳೆದು ನಿಂತ ಕೂದಲುಗಳನ್ನು ಕತ್ತರಿಸುವ ಅಗತ್ಯದಷ್ಟು ಸರಳವಾದ ಅಥವಾ ಮದುವೆ-ಮುಂಜಿ ಮಾಡಿಕೊಂಡು ಸಂಸಾರ ಹೂಡುವಷ್ಟು ಸಂಕೀರ್ಣವಾದ ಹಂತಗಳನ್ನು ಎಲ್ಲರೂ ದಾಟಿಕೊಂಡು ಬಂದೇ ಬರುತ್ತಾರೆ. ನಾವು ಬೆಳೆದು ದೊಡ್ಡವರಾದ ಹಾಗೆ ನಮ್ಮ ಬೆಳವಣಿಗೆ, ನಮ್ಮ ಪ್ರಬುದ್ಧತೆ ಎಲ್ಲ ಕಡೆಗಳಲ್ಲೂ ಸಹಾಯ ಮಾಡುತ್ತದೆ ಎನ್ನೋದೇನೋ ನಿಜ, ಆದರೆ ಅದು ಎಷ್ಟೋ ಸಾರಿ ಅಸಹಾಯಕತೆಯನ್ನೂ ತಂದೊಡ್ಡುತ್ತದೆ. ಎಲ್ಲ ಮುಖ್ಯ ನಿಲುವು ನಿರ್ಧಾರಗಳಲ್ಲಿ ಅವರವರನ್ನು ಹೂಡಿಕೊಂಡು ಮುಂದೆ ಬರುವ ಅನಿರೀಕ್ಷಿತ ತಿರುವುಗಳಲ್ಲಿ ಇನ್ನು ಯಾವ ಯಾವ ನಿರ್ಧಾರವನ್ನು ಕೈಗೊಳ್ಳುವುದೋ ಏನೋ ಎನ್ನುವ ಹೆದರಿಕೆಯೂ ಮನೆಮಾಡಿಕೊಂಡಿರುತ್ತದೆ. ಸೇತುವೆ ಬಂದಾಗ ನೋಡಿದರಾಯಿತು ಈಗೇಕೆ ಎನ್ನುವ ಮಾತುಗಳು ಹೇಳಲಿಕ್ಕೆ ಮಾತ್ರ ಚೆಂದವೇನೋ ಅನ್ನಿಸೋದಿಲ್ಲವೇ, ಎಷ್ಟೋ ಸಾರಿ?

ನನ್ನ ಮಟ್ಟಿಗೆ ಹೇಳೋದಾದರೆ ಈ ಕೆಲವು ವರ್ಷಗಳ ಹಿಂದೆ ನಾನು ಟ್ರಾಫಿಕ್ ಸಿಗ್ನಲ್ ಲೈಟುಗಳನ್ನು ಅಪಾರವಾಗಿ ದ್ವೇಷಿಸುತ್ತಿದ್ದೆ, ಅವುಗಳು ನನ್ನ ವೇಗದ ಮಿತಿಯನ್ನು ಅನಗತ್ಯವಾಗಿ ಕಟ್ಟಿ ಹಾಕುವ ಶತ್ರುಗಳು ಎಂದುಕೊಂಡಿದ್ದೆ. ಈ ಅಪರೂಪಕ್ಕೆ ಸಿಗುವ ಲೈಟುಗಳು ನನ್ನಿಂದ ಯಾವುಗಲೂ ಶಾಪ ಹಾಕಿಕೊಳ್ಳುತ್ತಿದ್ದರೆ, ಎಲ್ಲಿ ಬೇಕಂದರಲ್ಲಿ ಸಿಗುವ ಸ್ಟಾಪ್ ಸೈನುಗಳು ನನಗೆ ಯಾವ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಈ ನಗರದ ಬದುಕಿನ ಅಂಗವಾಗಿ ಪ್ರತಿ ಸಿಗ್ನಲ್ ಲೈಟಿಗೆ ಒಂದಕ್ಕೆ ಐದರ ಅನುಪಾತದಲ್ಲಿ ದಾರಿಯಲ್ಲಿ ಎದುರಾಗುವ ಸ್ಟಾಪ್ ಸೈನುಗಳು ಹೇಳಲಿಕ್ಕೆ ಮಾತ್ರ 'STOP' ಎಂದು ಎಲ್ಲ ಕ್ಯಾಪಿಟಲ್ ಲೆಟರುಗಳಲ್ಲಿ ಬರೆದುಕೊಂಡು ಕೆಂಪು-ಬಿಳಿ ಬಣ್ಣದಲ್ಲಿದ್ದರೂ ಅವುಗಳಿಗೆ ನಾನಾಗಲಿ ಅಥವಾ ಮತ್ಯಾರಾಗಲಿ ಕೊಡುತ್ತಿದ್ದ ಗೌರವ ಅಷ್ಟೇ - rolling stop ಮಾಡಿಕೊಂಡು ನಿಂತೆವೋ ಬಿಟ್ಟೆವೋ ಎಂದು ಅತ್ತಿತ್ತ ಗೋಣು ತಿರುಗಿಸಿ ನೋಡಿದಂತೆ ಮಾಡಿ, ದಾರಿ ಹೋಕರಿಗೆ ನಡೆಯಲು ಅವಕಾಶವನ್ನು ಕೊಟ್ಟು ಒಳಗೊಳಗೆ ಬೈದುಕೊಂಡರೂ ಮೇಲ್ನೋಟಕ್ಕೆ ಹಲ್ಲು ಗಿಂಜಿದಂತೆ ಮಾಡಿ ಅವರವರ ಪಾಡಿಗೆ ದಾರಿ ಹಿಡಿಯುವುದು ಎಲ್ಲ ಕಡೆ ಸಾಮಾನ್ಯ ನೋಟ. ಆದರೆ ಅದೇ ಟ್ರಾಫಿಕ್ ಸಿಗ್ನಲ್ ಬಂದಿತೆಂದರೆ ಅದರ ಕಥೆಯೇ ಬೇರೆ, ಕಾರು ಡೆಡ್ ಸ್ಟಾಪಿಗೆ ಬರುವುದೂ ಅಲ್ಲದೆ, ಅನಗತ್ಯವಾಗಿ ವಿಳಂಬವನ್ನು ತಂದೊಡ್ಡುವ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸುವ ಮಹಾಕಾರ್ಯವೂ ನಡೆದು ಹೋಗುವುದು ಸರ್ವೇಸಾಮಾನ್ಯ. ನಮ್ಮ ಮುಂದಿನವರಿಗೆ ಅವರ ಮುಂದಿನವರ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು, ನಮ್ಮ ಹಿಂದಿನವರಿಗೆ ನಮ್ಮ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು ಒಂದು ರೀತಿಯಲ್ಲಿ ವೇಗವನ್ನು ಕಡಿಮೆ ಮಾಡುವುದರ ಜೊತೆಗೆ ದೃಷ್ಟಿಯನ್ನೂ ಸೀಮಿತಗೊಳಿಸುವ ಶತ್ರುಗಳು ಎಂದುಕೊಂಡು ಗಾಡಿ ಓಡಿಸುವುದೇ ಮಾಮೂಲಿಯಾಗಿ ಹೋಗಿತ್ತು.

ಆದರೆ ಇತ್ತೀಚೆಗೆ ನನ್ನ ನಿಲುವುಗಳಲ್ಲಿ ಸಂಪೂರ್ಣ ಬದಲಾವಣೆಯಾಗಿದೆ: ಸ್ಟಾಪ್ ಸೈನುಗಳು ಶತ್ರುವಿನ ಸ್ಥಾನ ಪಡೆದುಕೊಂಡಿದ್ದರೆ, ಸಿಗ್ನಲ್ ಲೈಟುಗಳು ಮಿತ್ರರಾಗಿ ಹೋಗಿವೆ!

ಸ್ಟಾಪ್ ಸೈನುಗಳು ನಮಗೆ ಗೊತ್ತಿದ್ದೋ ಗೊತ್ತಿರದೆಯೋ decision ಬೇಡುವ critical point ಗಳಾಗಿ ಕಂಡುಬರುತ್ತಿವೆ. ಟೂ-ವೇ, ಥ್ರೀ-ವೇ, ಅಥವಾ ಫೋರ್-ವೇ ಸ್ಟಾಪ್ ಸೈನುಗಳಲ್ಲಿ ಯಾವಾಗ ನಿಲ್ಲಿಸಬೇಕು, ಯಾವಾಗ ಹೊರಡಬೇಕು, ಎತ್ತ ನೋಡಬೇಕು ಎಲ್ಲವೂ ನಿಮ್ಮದೇ ಆದ ನಿರ್ಧಾರದ ಮೇಲೆ ಅವಲಂಭಿತವಾಗಿವೆ. ನೀವು ಕಾರಿನಲ್ಲಿ ಕುಳಿತು ಏನೇ ಮಾಡುತ್ತಿರಲಿ, ಯಾವುದೇ ಲೋಕದಲ್ಲಿರಲಿ - ಅದರಿಂದ ಕ್ಷಣಕಾಲವಾದರೂ ಹೊರಗೆ ಬಂದು ಅತ್ತಿತ್ತ ನೋಡಿ, ಶಾಸ್ತ್ರೋಕ್ತವಾಗಿ ಪ್ರತಿಯೊಂದು ಸ್ಟಾಪ್ ಸೈನಿಗೂ ವಿದಾಯ ಹೇಳಿ ಹೊರಡುವ ಪರಿ ಇದೆ ನೋಡಿ ಅದು ನಿಜವಾಗಿಯೂ ನಿಮ್ಮ ಸಂಕಲ್ಪವನ್ನು ಬೇಡುವಂತದ್ದು, ಇದೇ ರೀತಿ ನಗರದ ವಲಯದಲ್ಲಿ ಒಂದರ್ಧ ಘಂಟೆ ಕಾರು ಓಡಿಸಿಕೊಂಡು ಹೋದರೆ ನಿಮಗೆ ಸುಸ್ತಾಗುವುದೂ ಅಲ್ಲದೇ ಕೊನೆಗೆ ಇಡೀ ಊರು, ಕೇರಿ, ವಾತಾವರಣದಲ್ಲಿ ನೆನಪಿರುವುದು ಒಂದೇ - STOP ಎನ್ನುವ ಅಷ್ಟಭುಜಾಕೃತಿಯ ಷಡ್‌ಯಂತ್ರ! ನಾನು ಎಷ್ಟೋ ಸಾರಿ ಯೋಚಿಸಿದ್ದೇನೆ, ಈ ಸ್ಟಾಪ್ ಸೈನ್ ಅನ್ನು ಅಷ್ಟಭುಜಾಕೃತಿಯನ್ನಾಗಿಯೇ ಏಕೆ ಮಾಡಿದರು, ತ್ರಿಕೋನ, ಪಂಚಭುಜ, ಷಡ್ಭುಜಗಳೇಕೆ ಅಲ್ಲ ಎಂದು... ಅಷ್ಟುಭುಜಗಳಲ್ಲಿ ನಾಲ್ಕು ಭುಜಗಳು ನಾಲ್ಕು ದಿಕ್ಕುಗಳನ್ನೂ ಪ್ರತಿನಿಧಿಸಿ, ಇನ್ನೆರೆಡು ಮೇಲೆ ಮತ್ತು ಕೆಳಗಿನ ಲೋಕದಿಂದ ನಿಮ್ಮನ್ನು ಹೊರಗೆ ತಂದು ಆ ಕ್ಷಣದಲ್ಲಿ ಬೇಡುವ ಸ್ಥಳೀಯ ಲೌಕಿಕತೆಯನ್ನು ಸೃಷ್ಟಿಸುವ ಅಥವಾ ಹೇರುವ ಪ್ರತಿನಿಧಿಗಳಾಗಿ ಕಂಡುಬಂದು, ಮತ್ತೆರಡು ನಿಮ್ಮನ್ನು ಹತೋಟಿಯಲ್ಲಿಡುವ ಸರದಾರರಂತೆ ತೋರುತ್ತವೆ. Rolling stop ಮಾಡಿಕೊಂಡು ನಿಂತಹಾಗೆ ಮಾಡಿ ಹೊರಟರೂ ಹೊರಡದಿದ್ದರೂ ನೀವು ಎಷ್ಟೇ ಜಾಗರೂಕರಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ಐದಲ್ಲ, ಕೊನೆಗೆ ಎರಡು ಸ್ಟಾಪ್ ಸೈನುಗಳನ್ನು ನೀವು ದಾಟಿಕೊಂಡು ಮುಂದೆ ಹೋದರೂ (ಹಾಗೆ ಹಿಂದೆ ಬಂದರೂ), ವರ್ಷಗಳು ಕಳೆದ ಮೇಲೆ (ಅಂದರೆ ಐದು, ಹತ್ತು, ಇಪ್ಪತ್ತೈದು...) ನಿಮ್ಮ ಧಕ್ಷತೆ ದಿನೇದಿನೇ ಕಡಿಮೆಯಾಗಿಹೋಗುತ್ತದೆ. ದಿನವೂ ಸ್ಟಾಪ್ ಸೈನಿಗೆ ದರ್ಶನ ಕೊಟ್ಟು ಕಲಿತು ಬೆಳೆದು ನಿಪುಣತೆಯನ್ನು ಪಡೆಯುವುದಿರಲಿ, ವಯಸ್ಸಾಗುತ್ತಿದ್ದ ಹಾಗೆ ಹಿಂದಿನವರು ಹಾರ್ನ್ ಬಜಾಯಿಸುವ ವರೆಗೆ ನೀವು ಸ್ಟಾಪ್ ಸೈನಿನಲ್ಲಿ ಅತ್ತಿತ್ತ ನೋಡುತ್ತಾ ವಿಜ್ಞಾನಿಯ ಮುಖ ಮಾಡಿಕೊಂಡು ಅದೇನೋ ಮಹಾ ಸೂತ್ರವನ್ನು ಬಿಡಿಸುವವರ ಹಾಗೆ ಕಂಡುಬರುತ್ತೀರೇ ವಿನಾ ಸ್ಟಾಪ್ ಸೈನನ್ನು ಬಿಟ್ಟು ಒಂದಿಂಚೂ ಕದಲಿರುವುದಿಲ್ಲ. ದಿನವೂ ಉಪಯೋಗಿಸುವ ಕಂಪ್ಯೂಟರುಗಳು ನಮ್ಮ ವರ್ತನೆಯಿಂದ ಏನನ್ನು ಕಲಿಯದಿದ್ದರೂ ಒಂದು ರೀತಿ ನ್ಯೂಟ್ರಲ್ ಆಗಿಯಾದರೂ ಇರುತ್ತವೆ, ಆದರೆ ಈ ಸ್ಟಾಪ್ ಸೈನುಗಳಿಂದ ನಾವು ಕಲಿಯುವುದೇನೂ ಖಂಡಿತವಾಗಿ ಇಲ್ಲ, ಬದಲಿಗೆ ಎಫಿಷಿಯನ್ಸಿಯನ್ನು ಕಳೆದುಕೊಂಡ ಛಳಿಯಲ್ಲಿ ಸೊರಗಿದ ಹೀಲಿಯಂ ತುಂಬಿದ ಬೆಲೂನಿನಂತಾಗಿ ಮನಸ್ಸು-ಮಿದುಳು ಆಗಿ ಹೋಗುವುದೇ ಹೆಚ್ಚೇನೋ ಎನ್ನಿಸಿದ್ದೂ ಇದೆ.

ಹೀಗಾಗಿಯೇ ಇತೀಚೆಗೆ ನಾನು ಟ್ರಾಫಿಕ್ ಲೈಟುಗಳ ಫ್ಯಾನ್ ಆಗಿರುವುದು. ನೀವೇನೂ ನಿರ್ಧಾರ ಮಾಡಬೇಕಾಗಿಲ್ಲ, ಸ್ವಲ್ಪ ಆಚೀಚೆ ನೋಡುವ ಅಗತ್ಯ ನೆರೆಹೊರೆಯಿಂದ ನೆರೆಹೊರೆಗೆ ಬದಲಾಗಬಹುದಾದರೂ ನಿಮ್ಮ ಪಾಡಿಗೆ ನೀವಿರಬಹುದು, ನಿಮಗೋಸ್ಕರ ಯಾರೋ ಡಿಸಿಶನ್ ಮಾಡುತ್ತಾರೆ, ನಿಮ್ಮ ಮುಂದಿನವರನ್ನು ಅನುಸರಿಸಿಕೊಂಡು ನಿಮ್ಮಷ್ಟಕ್ಕೆ ನೀವು ಹೋದರೆ/ಇದ್ದರೆ ಆಯಿತಪ್ಪಾ, ಸ್ವರ್ಗದಲ್ಲಿ ಇದಕ್ಕಿಂತ ಹೆಚ್ಚು ಸುಖವೆನ್ನುವುದೇನೂ ಇಲ್ಲ! ಸಿಗ್ನಲ್ ಲೈಟಿನಲ್ಲಿ ಕುಳಿತು ತಪಸ್ಸನ್ನು ಮಾಡಿದರೂ, ಧ್ಯಾನವನ್ನು ನಡೆಸಿಕೊಂಡು ಬಂದರೂ, ಅಥವಾ 'ಅತ್ತಿತ್ತ ನೋಡದಂತೆ ಅಂಧಕನ ಮಾಡಯ್ಯಾ ತಂದೆ' ಎಂದು ಹಾಡಿದರೂ ದಿನ, ತಿಂಗಳು, ವರ್ಷಗಳುರುಳಿದ ಬಳಿದ ನಿಮ್ಮ ಬೇಡಿಕೆ ಈಡೇರಿದರೂ ಈಡೇರಬಹುದು. Minding my own business, ದಾರಿಯಲ್ಲಿ ಯಾರು ದಾಟಿದರೇನು ಬಿಟ್ಟರೇನು; ಎದುರುಗಡೆಯಿಂದ ವೆಹಿಕಲ್ ಬರುತ್ತದೆಯೋ ಬಿಡುತ್ತದೆಯೋ, ಕುತ್ತಿಗೆ ನರಗಳು ಅತ್ತಿತ್ತ ತಿರುಗಿ ನೋಡುವ ದುಃಖದಿಂದ ತಪ್ಪಿಸಿದ್ದಕ್ಕಾಗಿ ಥ್ಯಾಂಕ್ಯು ಎಂದು ಹೇಳುವುದೂ ಅಲ್ಲದೇ ನೀವು ಹೀರುತ್ತಿರುವ ಕಾಫಿಯನ್ನು ಹೆಚ್ಚು ರುಚಿಯಾಗಿ ಕಾಣಿಸುವಂತೆ ನಾಲಿಗೆಯ ಟೇಸ್ಟ್ ಬಡ್‌ಗಳಿಗೆ ಅದೇಶವನ್ನೂ ಕೊಡುತ್ತವೆ, ಅಥವಾ ಟೇಸ್ಟ್ ಬಡ್‌ಗಳು ಕಳಿಸಿದ ರುಚಿಯ ಸಂದೇಶವನ್ನು ಇಮ್ಮಡಿಯಾಗಿ ಮಿದುಳು ಮಾಸ್ಟರಿಗೆ ತಲುಪಿಸುತ್ತವೆ ಆಗ ಆ ಕೆಫೀನಿನ ಕಿಕ್ಕೂ ಇಮ್ಮಡಿಯಾಗಿ ಇನ್ನೂ ಎಷ್ಟೋ ಭಯಂಕರ ಐಡಿಯಾಗಳು ನಮಗೆ ಗೊತ್ತಿಲ್ಲದ ಹಾಗೆ ಸೆರೆಬೆಲ್ಲಮ್ಮ್‌ನಲ್ಲಿ ದಾಖಲಾಗುತ್ತವೆ! ಪ್ರಪಂಚದಲ್ಲಿನ ಜನರು ಕಾರು ಓಡಿಸುವಾಗ ಹುಟ್ಟಿ ಎಲ್ಲೋ ಅಡಗಿಕೊಳ್ಳುವ ಐಡಿಯಾಗಳನ್ನು, ಆಲೋಚನೆಗಳನ್ನೆಲ್ಲ ಹಿಡಿದು ಸಂಗ್ರಹಿಸಿ, ಪ್ರಾಸೆಸ್ಸು ಮಾಡಿದ್ದೇ ಆದರೆ ಪ್ರಪಂಚದ ಎಲ್ಲ ನೋವಿಗೂ ಅದರಲ್ಲಿ ಸಮಾಧಾನವಿದೆ ಹಾಗೂ ಎಂತಹ ಸಂದರ್ಭವನ್ನೂ ಗೆಲ್ಲುವ ಆಶ್ವಾಸನೆ ಸಿಗುತ್ತವೆ ಎನ್ನುವುದು ಹೀಗೇ ಕಾರಿನಲ್ಲಿ ಕುಳಿತಾಗ ಹುಟ್ಟಿ ಬೆಳೆದು ಈಗ ಪ್ರಬುದ್ಧವಾಗಿರುವ ನನ್ನ ಅಂಬೋಣ!

STOP ಸೈನುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸಿದ ಸಂದರ್ಭಗಳು ಅನುಪಾತದ ಲೆಕ್ಕದಲ್ಲಿ ನಿಂತು ಹೊರಡುವ ಹಾಗೆ ಮಾಡಿದ ಸಂದರ್ಭಗಳಿಗೆ ಹೋಲಿಸಿದರೆ ಬಹಳ ಕಡಿಮೆ. ಆದರೆ ಟ್ರಾಫಿಕ್ ಲೈಟುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಮಾಣವೇ ಹೆಚ್ಚು. ಅಂದರೆ "STOP" ಎನ್ನುವ ತಲೆ ಬರಹವನ್ನು ಹಗಲು-ರಾತ್ರಿ ಹೊತ್ತು ನಿಂತರೂ ಯಾರೂ ಗೌರವ ಕೊಡದಿರುವ ಇಂತಹವುಗಳನ್ನು ನಾನು ಮಿತ್ರರನ್ನಾಗಿ ಸ್ವೀಕರಿಸಬೇಕೇಕೆ? ಇವುಗಳಿಂದಾಗಿ ನನ್ನ ಕಾಫಿ ರುಚಿ ಅರ್ಧಕ್ಕರ್ಧ ಕಡಿಮೆಯಾಗಿರುವುದೂ ಅಲ್ಲದೇ ರೇಡಿಯೋ ಸ್ಟೇಷನ್ನುಗಳಲ್ಲಿ ಬರುವ ವರದಿ ಫಸ್ಟ್ ಪಿಯುಸಿಯ ಟ್ರಿಗನೋಮೆಟ್ರಿ ಲೆಕ್ಚರ್‌ನಂತೆ ಕಂಡುಬರುತ್ತಿದೆ. ಈ ಕೆಂಪು ಸೈನ್ (ಬೋರ್ಡು) ನನ್ನಲ್ಲಿ ಕೆಂಪು ಬಣ್ಣವನ್ನೂ ಅಸಡ್ಡೆ ಮಾಡುವ ಮನೋಭಾವವನ್ನು ಮೂಡಿಸಿವೆ. ಈ ಪ್ರಪಂಚದಲ್ಲಿರುವ ಸ್ಟಾಪ್ ಸೈನುಗಳನ್ನೆಲ್ಲ ತೆಗೆದು ಬಿಸಾಡಿಬಿಟ್ಟರೆ ಹೇಗೆ? ಇವು "STOP" ಎಂದು ಯಾರಿಗೆ ಆದೇಶವನ್ನು ಕೊಡುತ್ತಿವೆ, ನನ್ನಂತಹವರನ್ನು ನಿಲ್ಲಿಸಲು ಇವು ಯಾರು, ಇವುಗಳ ಹಕ್ಕೇನು? ಇವುಗಳ ಅಷ್ಟಕೋನಗಳಲ್ಲಿ ಯಾವ ಯಾವ ಷಡ್‌ಯಂತ್ರ ಅಡಗಿದೆಯೋ ಯಾರು ಬಲ್ಲರು? ಎಂಟೂ ಕಡೆಯಿಂದ ಒತ್ತಡವನ್ನು ಹೇರುವ ಇವುಗಳ ಆಟ ಅತಿಯಾಯಿತಪ್ಪಾ ಎಂದು ಅನ್ನಿಸೋದಿಲ್ಲವೇ?

ನಾನೊಬ್ಬ ಮುಕ್ತ ಜೀವಿ, ಡ್ರೈವಿಂಗ್ ಮಾಡುವುದು ನನ್ನ ಹಕ್ಕಲ್ಲ, ಅದು ನನ್ನ ಪ್ರಿವಿಲೇಜ್ ಎಂದು ಗೊತ್ತಿದೆ, ಆದರೆ ಸುಖಾಸುಮ್ಮನೆ ಸ್ಟಾಪ್ ಎಂದು ಕಾಪಿಟಲ್ ಲೆಟರುಗಳಲ್ಲಿ ಕೆಂಪು-ಬಿಳಿ ಬಣ್ಣದ ಈ ಸೈನುಗಳನ್ನು ಯಾರಾದರೂ ಕಿತ್ತು ಹಾಕಿ, ಕೊನೇಪಕ್ಷ ಏನಿಲ್ಲವೆಂದರೂ ಬಣ್ಣವನ್ನು ಬದಲಿಸಿ, "Stop" ಎಂದು ತಿದ್ದಿ, ಪ್ಲೀಜ್!

2 comments:

Anonymous said...

"ಊ...ಊ..." ಶೀರ್ಷಿಕೆಕ್ರಮವನ್ನನುಸರಿಸುವಾಗ 'ಮತ್ತು' ಪದ ಬೇಕಾಗಿಲ್ಲ. ಊ... ಎಂದು ದೀರ್ಘಸ್ವರ ಬಳಸುವುದೇ ಮತ್ತು/ಹಾಗೂ ಗಳನ್ನು ಅಪರೋಕ್ಷವಾಗಿ ಅಳವಡಿಸಿಕೊಳ್ಳುವುದಕ್ಕಾಗಿ. ಹಾಗಾಗಿ, "ಸ್ಟಾಪ್ ಸೈನೂ ಸಿಗ್ನಲ್ ಲೈಟೂ" ಎಂದರೆ ಸಾಕು. ಅಥವಾ "ಸ್ಟಾಪ್ ಸೈನು ಮತ್ತು ಸಿಗ್ನಲ್ ಲೈಟು" ಎನ್ನಬೇಕು.
ನಿಮಗೇನನಿಸುತ್ತದೆ?

Satish said...

ಮತ್ತು ಅನ್ನು - 'ಮತ್ತನ್ನು' ತೆಗೆದು ಹಾಕಿಸಿದ್ದಕ್ಕೆ ಧನ್ಯವಾದಗಳು!