'ಅಂತರಂಗ'ಕ್ಕೆ ಒಂದಿಷ್ಟು ದಿನ ರಜೆ...
ಪ್ರತಿದಿನವೂ ಒಂದಲ್ಲ ಒಂದು ಲೇಖನವನ್ನು ಬರೆದು ಹಾಕಬೇಕು ಎನ್ನುವ ಉತ್ಸಾಹಕ್ಕೆ ಅಡ್ಡಿಬರುವ ಹಲವಾರು ಅಂಶಗಳಲ್ಲಿ ಮೈಗಳ್ಳತನವೂ ಒಂದು ಎಂದು ನೇರವಾಗಿ ಹೇಳಿಕೊಂಡುಬಿಟ್ಟಿದ್ದೇನೆ. ಆದರೆ ಈಗ ಸ್ವಲ್ಪ ದಿನಗಳ ಕಾಲ ರಜೆ ತೆಗೆದುಕೊಳ್ಳುತ್ತಿರುವುದು ಒಂದು ಮಹಾ ಕಾರಣಕ್ಕಾಗಿ, ಅದೇನೆಂದರೆ ಸುಮಾರು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಹೋಗುವ ಭಾಗ್ಯ ಬಂದಿದ್ದಕ್ಕೆ.
ನನಗೆ ಗೊತ್ತಿರುವ ಹಾಗೆ ಭಾರತದಲ್ಲಿ ಎಷ್ಟೋ ಜನ ತಮ್ಮ ಜಾತಕ, ಅಥವಾ ಹಸ್ತವನ್ನು ತೋರಿಸಿ ತಮ್ಮ ಹಣೆಯಲ್ಲಿ ವಿದೇಶ ಪ್ರಯಾಣದ ಬಗ್ಗೆ ಬರೆದಿದೆಯೇ ಎಂದು ಜ್ಯೋತಿಷಿಗಳಲ್ಲಿ ಕೇಳಿಕೊಳ್ಳುವುದು ಗೊತ್ತು. ಒಂದುವೇಳೆ 'ವಿದೇಶ ಪ್ರಯಾಣ ಯೋಗ'ವೆನ್ನುವುದು ನಿಜವೆಂದುಕೊಂಡರೆ ಸಧ್ಯಕ್ಕೆ ಅಮೇರಿಕವನ್ನು ಮನೆಯಾಗಿ ಮಾಡಿಕೊಂಡ ನನ್ನಂಥವರಿಗೆ ಭಾರತಕ್ಕೆ ಹೋಗುವುದೂ ಒಂದು ವಿದೇಶ ಪ್ರಯಾಣವೇ ಅಲ್ಲವೇ? ಅಂತಹ ಯೋಗಗಳು ಎಷ್ಟು ಸಾಧ್ಯವೋ ಅಷ್ಟು ಬರಲಿ ಎನ್ನುವುದು ಒಂದು ಯೋಚನೆಯಾದರೆ, ಆಗ ಬಹುದಾದ ಖರ್ಚಿನ ದೃಷ್ಟಿಯಿಂದಲೂ ಹಾಗೂ ಇಲ್ಲಿ ಮಾಡಿ ಮುಗಿಸಬೇಕಾದ ಕೆಲಸ ಕಾರ್ಯಗಳ ದೃಷ್ಟಿಯಿಂದಲೂ ಕೆಲವೊಮ್ಮೆ ಅತಿ ಪ್ರಯಾಣವೂ ಒಳ್ಳೆಯದಲ್ಲ ಎನ್ನುವ ವಾದವನ್ನೂ ಕೇಳಿದ್ದೇನೆ. ಅಪರೂಪಕ್ಕೆ ಬಂದವನನ್ನು 'ಅಮೇರಿಕದವನು...' ಎಂದು ಆದರಿಸಿಯಾರು ಇಲ್ಲವಾದರೆ ಆಗಾಗ್ಗೆ ಬರುವವನನ್ನು 'ಹಾಕ್‌ಮಣೆ, ನೂಕ್‌ಮಣೆ, ತೋರ್‌ಮಣೆ'ವಾದಗಳು ಹೆದರಿಸಿಬಿಟ್ಟಾವು!
ಏನೇ ಇರಲಿ, ನನ್ನ ಹೆಚ್ಚೂಕಡಿಮೆ ಬರಿದಾದ ಆಲೊಚನೆಗಳ ಚೀಲವನ್ನು ತುಂಬಿಕೊಳ್ಳುವುದಕ್ಕೆ ಮುಂಬರುವ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ. ಪುರುಸೊತ್ತು ಸಿಕ್ಕಾಗಲೆಲ್ಲ ಬರೆದುಕೊಳ್ಳುತ್ತೇನಾದರೂ ಅವುಗಳನ್ನೆಲ್ಲ ಕಂಪ್ಯೂಟರಿಗಿಳಿಸಿ 'ಅಂತರಂಗ'ದಲ್ಲಿ ಹಾಕಲು ಸಮಯ ಸಿಗಲಾರದು, ಅದ್ದರಿಂದ ಒಂದಿಷ್ಟು ದಿನಗಳ ರಜೆತೆಗೆದುಕೊಳ್ಳುವುದು ಎಂದು ತೀರ್ಮಾನಿಸಿಕೊಂಡಿದ್ದೇನೆ.
'ಅಂತರಂಗ'ದ ಓದುಗರಿಗೆ ನಿರಾಶೆಯಾಗದಿರಲಿ... ಮತ್ತೆ ಜನವರಿಯಲ್ಲಿ ಇದೇ ಬರವಣಿಗೆ, ಅಥವಾ ಕೊರೆತ ಇದ್ದೇ ಇರುತ್ತೆ. ಹಾಗೇ ಅಮೇರಿಕದಲ್ಲಿ ಕಳೆದ ಹತ್ತು ವರ್ಷಗಳನ್ನು ಸೆಲೆಬ್ರೇಟ್ ಮಾಡುವುದರ ಜೊತೆಗೆ, ಸೆಲ್‌ಫೋನ್ ಕ್ರಾಂತಿಯನ್ನು ಕಂಡ ಭಾರತವನ್ನು ಮೊಟ್ಟ ಮೊದಲ ಭಾರಿಗೆ ನೋಡಿ ಬಂದ ಸಂಭ್ರಮವನ್ನೂ, ಜೊತೆಗೆ 'ಅಂತರಂಗ'ದಲ್ಲಿ ಇನ್ನು ಸ್ವಲ್ಪ ದಿನಗಳಲ್ಲಿ ಪ್ರಕಟವಾಗುವ ಇನ್ನೂರನೇ ಲೇಖನವನ್ನೂ ಗುಂಪಿಗೆ ಸೇರಿಸಿಕೊಂಡರೆ ಒಟ್ಟಿಗೆ ಬೇಕಾದಷ್ಟು ಕಾರಣಗಳಿರುವುದರಿಂದ ನನ್ನ ಲೇಖನಿಯ ಮೊನಚು, ಅಥವಾ ಟೈಪ್ ಮಾಡುವ ಗತಿಗೆ ಯಾವುದೆ ದೋಷ ಬಾರದೇ ಇದ್ದರೇನೆ ಒಳ್ಳೆಯದು ಎಂದೆನಿಸಿದೆ!
ಭಾರತದಲ್ಲಿ ಏನು ಪ್ಲಾನ್ ಇದೆ ಅಂದ್ರಾ? ಏನೂ ಇಲ್ಲ ಅನ್ನೋದೇ ಈ ಭಾರಿಯ ವಿಶೇಷ, ಸುಮ್ಮನೆ ಹೀಗೆ ಹೋಗಿ ಹಾಗೆ ಬಂದರೆ ಆಯಿತಪ್ಪ, ಅದಕ್ಕೆ ಪ್ಲಾನಾದರೂ ಏಕೆ ಬೇಕು? :-)
***
'ದಾರಿ-ದೀಪ'ದ ಓದುಗರು ದಯವಿಟ್ಟು ಕ್ಷಮಿಸಿ, ಹಲವು ತಿಂಗಳುಗಳಿಂದ ಅಲ್ಲಿ ಯಾವುದೇ ಬರಹವನ್ನು ಬರೆಯಲಾಗುತ್ತಿಲ್ಲ.
***
ನಮ್ಮ-ನಿಮ್ಮ ಭೇಟಿ ಮತ್ತೆ ಜನವರಿಯಲ್ಲಿ...ಹ್ಯಾಪ್ಪಿ ನ್ಯೂ ಇಯರ್!
No comments:
Post a Comment