Thursday, March 29, 2007

ಕಾಲವಾದ kaaloo!




http://kaalachakra.blogspot.com/

ದುರದೃಷ್ಟವಷಾತ್ ಮೊನ್ನೆ ನಡೆದ ಅವಘಡದಲ್ಲಿ ನಮ್ಮೆಲ್ಲರ ಆತ್ಮೀಯ, ಕಾಳೂ, ಕಾಲೂದಾದ, ಕಾಳೂ ಮಾಮ ಎಂದೇ ಜನಪ್ರಿಯವಾಗಿದ್ದ kaaloo ಬೆಳ್ಳಿತೆರೆಯಿಂದ ನಿರ್ಗಮಿಸಿದ್ದನ್ನು ಬಹು ದುಃಖದಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ನಮ್ಮ ನಿಮ್ಮೆಲ್ಲರ ಬಯಲುಸೀಮೆಯ ತೆರೆದ ಧ್ವನಿಯ ಜೊತೆಗೆ ಹೃದಯದಲ್ಲಿ ಕರ್ನಾಟಕದ ರಾಜಕೀಯ ಚಲನವಲನಗಳನ್ನು ತನ್ನದೇ ಆದ ಧಾಟಿಯಲ್ಲಿ ತನ್ನ ಸ್ನೇಹಿತರಾದ ಕೋಡೀಹಳ್ಳಿ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರ ಜೊತೆ ಸೇರಿಕೊಂಡು ದೇವೇಗೌಡ, ಧರಮ್ ಸಿಂಗ್, ಯಡಿಯೂರಪ್ಪ ಮೊದಲಾದವರ ಚೇಲಾಗಳು ಎಷ್ಟೊತ್ತಿಗೆ ಬೇಕಾದರೂ ನನ್ನ ಮನೆ ಕಿಟಕಿ ಗಾಜುಗಳನ್ನು ಒಡೆಯಬಹುದು ಎಂದು ಒಳಗೊಳಗೆ ಹೆದರಿಕೊಂಡೇ ಪುರುಸೊತ್ತಾದಾಗಲೆಲ್ಲ ಭಾರತೀಯ ಕಾಲಮಾನದಲ್ಲಿ ಅಲ್ಲಿನ ವ್ಯತಿರಿಕ್ತ ಮನೋಸಂಕಲ್ಪಗಳ ಕಾದಾಟದಲ್ಲಿಯೂ ತನ್ನ ಮನಸ್ಸಿನ ಚಿತ್ರಗಳನ್ನು ತೆರೆದಿಡುತ್ತಿದ್ದ. ಅಂತಹ kaaloo ಇನ್ನಿಲ್ಲ!

ಆದದ್ದಿಷ್ಟೇ: ಸುಮ್ಮನಿರಲಾರದ ನಾನು ಮೊನ್ನೆ kaaloo ವನ್ನು ರಾತ್ರಿ ಊಟಕ್ಕೆ ನಮ್ಮ ಮನೆಗೆ ಆಮಂತ್ರಿಸಿ ಊಟವಾದ ಬಳಿಕ ಲೋಕಾಭಿರಾಮವಾಗಿ ಹರಟೆ ಹೊಡೆದು ರಾತ್ರಿ ಹನ್ನೊಂದೂವರೆ ಹೊತ್ತಿಗೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಇನ್‌ಫರ್ಮೇಷನ್ ಹೈವೇಯಲ್ಲಿ ಘಂಟೆಗೆ ಸುಮಾರು ೬೦ ಮೈಲಿಯ ವೇಗದಲ್ಲಿ ಡ್ರಾಪ್ ಮಾಡಲು ಹೊರಟಿದ್ದೆ. ಗೂಗಲ್‌ನವರು ಬ್ಲಾಗರ್ ಅಕೌಂಟನ್ನು ಅದೇ ಹೊತ್ತಿಗೆ ಮರ್ಜ್ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ, ಗೂಗಲ್ ವಾಹನ ಮರ್ಜ್ ಆಗುವ ಹೊತ್ತಿನಲ್ಲಿ ನನ್ನ ತಪ್ಪಿನಿಂದಾಗಿ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದ kaaloo ಬಲವಾದ ಹೊಡೆದ ಬಿದ್ದಿದ್ದರಿಂದ ಸ್ಥಳದಲ್ಲೇ ಅಸುನೀಗಿಬಿಟ್ಟರು. ರಕ್ತಸ್ರಾವವೇನೂ ಮೇಲ್ನೋಟಕ್ಕೆ ಕಂಡುಬರದಿದ್ದರೂ ಒಳಗೊಳಗೇ ಹೊಡೆತ ತಿಂದು 'ಬಡವಾ ನೀ ಮಡುಗ್ದಂಗಿರು!' ಎಂದು ಹೇಳಿದ್ದೇ ಅವರ ಕೊನೆ ಉಸಿರಾಗಿ ಹೋಯಿತು.

ಪಲ್ಸ್ ಚೆಕ್ ಮಾಡಿ ನೋಡಿದ ನಾನು ಏನೇ ತಿಪ್ಪರಲಾಗ ಹಾಕಿದರೂ, ಗೂಗಲ್ ವಾಹನದ ಅವಘಡವನ್ನು ವಿವರಿಸಿ ದೊಡ್ಡ ಕಂಪನಿಯವರಿಗೆ ಬರೆದರೂ ಯಾರೂ ನಮ್ಮ kaaloo ವನ್ನು ಉಳಿಸಿಕೊಳ್ಳಲು ಸಹಾಯ ಮಾಡದೇ ಹೋದರು.

kaaloo ವನ್ನು ತಿಂದ ನಮ್ಮ ರಸ್ತೆ, ವಾಹನ, ಗೂಗಲ್ ಅಂತಹ ದೊಡ್ಡ ಕಂಪನಿ, ನನ್ನ capitalistic ಮೈಂಡ್‌ಸೆಟ್ಟಿನವನನ್ನು kaaloo ವಿನ ಆತ್ಮೀಯರಾದ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರೆಲ್ಲರೂ ಹಳಿದಿದ್ದೇ ಹಳಿದಿದ್ದು. 'ನಿಮ್ ಅಮೇರಿಕನ್ ಆಕ್ರಮಿಕೆಯ ವಸಾಹತುಶಾಹಿ ಮನೋಭಾವದ ಮುಂಡಾ ಮೋಚಾ!' ಎಂದೂ, 'ಅಲ್ಲೀ ನೀರ್ ಕುಡ್ದು ಅಲ್ಲಿಗೇ ಜೀತಾ ಮಾಡೋ ನಿಮ್ ಕರ್ಮಕ್ಕೆ ಮೆಟ್ನಾಗ್ ಹೊಡಿಯಾ!' ಎಂತಲೂ, ಇನ್ನೂ ಮುಂತಾಗಿ kaaloo ವನ್ನು ತಿಂದು ಹಾಕಿದ ನನ್ನನ್ನು ದೂರಿ ಹಲವಾರು ಸಂದೇಶಗಳು ನಿರಂತರವಾಗಿ ಬರತೊಡಗಿವೆ.

ಕಳೆದ ವರ್ಷ "ಅಂತರಂಗಿ"ಯನ್ನು ಕೆಲಸದಿಂದ ಬಿಡಿಸಿ 'ಅಂತರಂಗ'ವನ್ನು ಬಸವನ ಹುಳುವಿನಂತೆ ಬಸವಳಿಯುವಂತೆ ಮಾಡಿದ್ದನ್ನು ಜನರು ಇನ್ನೂ ಮರೆಯುವ ಮೊದಲೇ ಮತ್ತೊಬ್ಬ ಹವ್ಯಾಸಿ ಬರಹಗಾರನನ್ನು ಇಲ್ಲವಾಗಿಸಿದ್ದಕ್ಕೆ ಅಥವಾ ಅವರ ಜವಾಬ್ದಾರಿಯನ್ನೂ ನನ್ನ ಮೇಲೆ ಹೇರಿಕೊಂಡು ಈಗಾಗಲೇ mediocre ಕೆಲಸಮಾಡಿಕೊಂಡಿರುವ ನನ್ನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸ ಜನರಿಗೆ ನಾನು ಹೇಳುವುದಾದರೂ ಏನಿದೆ.

kaaloo ವಿನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅಲ್ಲಲ್ಲಿ ಕಾಲೂವಿನ ಆತ್ಮ ಜಾಗರೂಕವಾಗಿ ಏನಾದ್ರೂ ನುಡಿದಿದ್ದೇ ಆದಲ್ಲಿ ಅದನ್ನೂ ಪುರಸ್ಕರಿಸಬೇಕಾಗಿ ನನ್ನ ಮನವಿ. ಪುರುಸೊತ್ತು ಸಿಕ್ಕರೆ kaaloo ವಿನ ಆತ್ಮಕ್ಕೆ ಇಲ್ಲಿ ಶಾಂತಿಕೋರಿ.

11 comments:

Anonymous said...

ಪೇಪರಿನೋರ ಥರ ಬದುಕಿದ್ದವರನ್ನು ಸಾಯಿಸುವ ಖಾಯಿಲೆ ನಿಮಗೆ ಯಾವಾಗ ಶುರುವಾಯಿತೋ!

ಕಾಳಣ್ಣಂಗೇನೂ ಆಗಿಲ್ಲ. ಈಗ ತಾನೇ ಮಾತಾಡಿಸಿಕೊಂಡು ಇಲ್ಲಿಗೆ ಬರ್ತಾ ಇದೀನಿ. ಕಲ್ಲುಗುಂಡಿನಂಗೆ ಇರುವ ಕಾಳಣ್ಣ ಸತ್ತೋದ ಅಂತ ಹೇಳಿ ನಮ್ಮನ್ನು ಫೂಲ್ ಮಾಡಕ್ಕೆ ಹೋಗಿ ನೀವೇ fool ಆಗಿದ್ದೀರಿ.

ಸಿಕ್ಕಾಪಟ್ಟೆ ಕೋಪ ಬರ್ತಾ ಇದೆ ನಿಮ್ಮ ಮೇಲೆ!!!

ಸುಪ್ತದೀಪ್ತಿ suptadeepti said...

ಏನ್ರೀ ಸತೀಶ್,
ಏಪ್ರಿಲ್ ಒಂದು ಬರೋ ಮುಂದು ಇದೇನ್ ತಮಾಷೆ!!
ನಿಮ್ ಕಾಳೂ ಜೊತೆ ಇನ್ಯಾರನ್ನಾದರೂ ಕಳಿಸೋ ಹತಾಶೆ!!

ಸಾಕಪ್ಪಾ ಸಾಕು, ಇಂದೆಂಥಾ ಜೋಕು!!

Anveshi said...

ಸತೀಶರೆ,
ನಮ್ಮನ್ನು ಮಂಗ ಮಾಡಲೇಬೇಕಾಗಿರಲಿಲ್ಲ... ಆದರೂ ಚೆನ್ನಾಗಿ ಮಂಗ ಮಾಡಿದ್ದ ಕಾಳಣ್ಣನನ್ನು ಕೊಂದೇಬಿಟ್ರಾ?
ಛೆ... ಏಪ್ರಿಲ್ 1ರವರೆಗೆ ಕಾಯಬಾರದಿತ್ತಾ?????

Satish said...

sritri ಅವರೇ,

'ಪೇಪರಿನೋರ ಥರ...' ಅಂದ್ರೆ ಪೇಪರಿನಷ್ಟು ಸಣ್ಣಗೆ/ತೆಳ್ಳಗೆ ಇರುವವರೋ, ಇದ್ದರೂ ಇಲ್ಲದಿರುವ ಹಾಗಿರುವವರೋ (useless) ಅನ್ನೋ ಅರ್ಥದಲ್ಲಿ, ಅಥವಾ ಇನ್ನೇನು ಅರ್ಥವೋ ಗೊತ್ತಾಗಲಿಲ್ಲ - ನಿಮ್ಮ ಕಾಮೆಂಟನ್ನು ಓದಿ ಪೇಪರಿನವರ ಈಗಾಗಲೇ ಕುಡಿದು (ಏನನ್ನು?) ಕೆಂಪಾದ ಕಣ್ಣುಗಳು ಇನ್ನಷ್ಟು ಕೆಂಪಾಗಿವೆ ಎಂದು ವರದಿಯೊಂದು ಬಂದ ಹಾಗಿದೆ.

kaaloo ಗೆ ಏನಾಗಿದೆ? ನಮ್ಮೆಲ್ಲರ spirit ಆತ ಇದ್ದೇ ಇದ್ದಾನೆ ಬಿಡಿ, ತನ್ನ ಲೇಖನಗಳನ್ನು ಪಬ್ಲಿಷ್ ಮಾಡಲು ನನ್ನ ಲಾಗಿನ್ ಬಳಸುತ್ತಾನಷ್ಟೇ!

Satish said...

ಸುಪ್ತದೀಪ್ತಿ ಅವರೇ,

ಏಪ್ರಿಲ್ ಒಂದರ ತಮಾಷೆಯೇ ಸ್ವಲ್ಪ ಬೇಗ ಹುಟ್ಟಿಬಂದಿದೆ ಅಂದುಕೊಳ್ಳಿ, ಸದ್ಯ kaaloo ಹೋಗೋನ್ ಹೋದ ತಾನೊಬ್ನೇ ಹೋದ!

Satish said...

ಅನ್ವೇಷಿಗಳೇ,

ನಿಮ್ಮ ಟ್ರೇಡ್‌ಮಾರ್ಕನ್ನು ಯಾರೂ ಯಾರಿಗೂ ಮಾಡಿ ತೋರಿಸಲಾಗದು ಬಿಡಿ!
ನಾನಲ್ಲ ಸ್ವಾಮಿ ಕೊಂದಿದ್ದು - ನಿಮ್ಮ ವರದಿಗಾರರೊಬ್ಬರನ್ನು ಬಿಟ್ಟು ಸಮಗ್ರ ತನಿಖೆ ನಡಿಸಿ ನೀವೇ ಏಕೆ ಜಗತ್ತಿಗೆ ತಿಳಿಸಬಾರದು? ಜವರಾಯನ ಬಳಿ ಏಪ್ರಿಲ್ ಒಂದರ ಚವಕಾಶಿಯೇ...ನೀವು ಮಹಾ ಪ್ರಚಂಡರು!

Shrilatha Puthi said...

this shows ur typical capri traits..

Satish said...

Shrilatha,

ಕ್ಯಾಪ್ರಿಗಳು ಅಂದ್ರೆ ಜನ್ರನ್ನ ಕೊಲ್ಲೋರು ಅಂತಲ್ಲಾ ತಾನೆ! :-)

Shiv said...

ಕಾಳಣ್ಣ ಯಾರೀರಬಹುದು ಅಂತಾ ಕಾಲಚಕ್ರ ಓದಿದಾಗಲೆಲ್ಲಾ ಯೋಚಿಸುತಿದ್ದೆ. ನೀವೇ ಆ ಕಾಲುದಾದ ಅಂತಾ ಈಗ ಗೊತ್ತಾಯಿತು!

ಆದರೂ ಕಾಲುದಾದ ಮೊದಲಿನ ತರ ಕಾಲಣ್ಣ ತರ ನೋಡೋಕೇ ಆಗೋಲ್ಲಾ. ಓದಬೇಕಾದರೆ ಅಮೇರಿಗನ್ನಡಿಗ ಸತೀಶ್ ನೆನಪಾಗಬಹುದು

Satish said...

ಶಿವು,

kaaloo ವನ್ನು ಖಂಡಿತವಾಗಿ ಬೇರೆ ರೀತಿ ನೋಡಿ, ಕಾಲಚಕ್ರದಲ್ಲಿ ಬೇರೆ ಧ್ವನಿಯೊಂದು ಹೊರಡಬೇಕು ಎಂಬು 'ಆತ'ನ ಆಶಯವಾಗಿತ್ತು! ಆ ಧ್ವನಿ ಖಂಡಿತವಾಗಿ ಮುಂದುವರೆಸುವ ಪ್ರಯತ್ನ ನನ್ನದು.

Anonymous said...

I like play online game, I also buy flyff penya and flyff penya, the flyff money is very cheap, and use the flyff gold can buy many things, I like cheap penya, thanks, it is very good.

I like play online game, I also gw gold and GuildWars Gold, the Guild Wars Gold is very cheap, and use the GuildWars money can buy many things, I like cheap gw gold, thanks, it is very good.