...ಪ್ರಯೋಜನಕ್ಕೆ ಬಾರದ್ದು ಅಂತ ಯಾರಂದೋರು?
ಈ ಅನುಭವ ಅನ್ನೋದರ ಲಿಮಿಟೇಷನ್ನ್ ಏನೂ ಅಂತ ನನಗೆ ಹೊಳೆದಿದ್ದು ಇತ್ತೀಚೆಗೆ ಅಂತ್ಲೇ ಹೇಳಬೇಕು, ಯಾರೋ ತಾವ್ ಕಲಿತ ಪಾಠವನ್ನು ಅನುಭವ ಅಂತ ದೊಡ್ಡ ಕರೆದುಕೊಂಡಿದ್ದಿರಬಹುದು, ಅದಕ್ಕೆ ಅದು ಇಲ್ಲದೆ ಯಾವ ಕೆಲ್ಸಾನೂ ಅಷ್ಟು ಸಲೀಸಾಗಿ ಆಗಲ್ಲ, ಒಂದ್ಸರ್ತಿ ಮಾಡಿ (ಹೊಡೆತ ತಿಂದು) ಪಾಠ ಕಲಿತ ಮೇಲೆ ಅದನ್ನೇ ಅನುಭವ ಅಂತ ದೊಡ್ಡದಾಗಿ ಬೋರ್ಡು ಬರೆಸಿ ಹಾಕ್ಕೋಬಹುದು ನೋಡಿ.
ನಮ್ಮನೇಲಿ ಒಂದೆರಡು ಕಿಟಕಿಗಳಿಗೆ ಹೊಸ ಸ್ಕ್ರೀನುಗಳನ್ನು ಹಾಕೋಣ ಅನ್ನೋ ಪ್ರಾಜೆಕ್ಟು ಹಲವಾರು ಕಾರಣಗಳಿಂದ ಮುಂದೂಡಿಕೊಂಡು ಮೊನ್ನೆ ಕೈಗೂಡಿತು ನೋಡಿ. ನಾನೋ ಹುಟ್ಟಿದಾರಭ್ಯ ಗೋಡೆಗೆ ಒಂದು ಮೊಳೆಯನ್ನೂ ಸಹ ಹೊಡೆಯದವನು, ಗೋಡೆಗೆ ಎಲ್ಲಿ ನೋವಾಗುತ್ತೋ ಅನ್ನೋ ಅರ್ಥದಿಂದಲ್ಲ, ಶಾಲೆಯಲ್ಲಿ ಮುಂದಿದ್ದ ಮಕ್ಕಳು ನಾವು ಯಾವತ್ತೂ ಹ್ಯಾಂಡಿಮ್ಯಾನ್ ಸ್ಕಿಲ್ಸ್‌ಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಇವತ್ತಿಗೂ ಸಹ ಒಂದು ಏಣಿಯನ್ನು ಹತ್ತಿ ನಿಲ್ಲೋದು ಅಂದರೆ ಮುಜುಗರ, ಸಂಕೋಚ ಎಲ್ಲಕ್ಕಿಂತ ಮುಖ್ಯವಾಗಿ ಅದೇನೋ ಹಾಳು ಹೆದರಿಕೆ ಬೇರೆ ಕೇಡಿಗೆ. ಈ ಹ್ಯಾಂಡಿಮ್ಯಾನ್ ಕೆಲ್ಸದ ವಿಚಾರಕ್ಕೆ ಬಂದಾಗ ಒಂದಂತೂ ಗ್ಯಾರಂಟಿಯಾಗಿ ಕಲಿತುಕೊಂಡಿದ್ದೇನೆ - ಆಯಾ ಕೆಲಸಕ್ಕೆ ಸರಿಯಾದ ಟೂಲ್ಸ್ ಅನ್ನು ಇಟ್ಟುಕೊಂಡಿರುವುದು. ನಿಮ್ಮ ಬಳಿ ಸರಿಯಾದ, ಅಳತೆಗೆ ತಕ್ಕ ಟೂಲ್ಸ್ ಇಲ್ಲವೆಂದಾದರೆ ಸುಮ್ಮನೇ ನೀವು ಕೆಲಸಕ್ಕೆ ಕೈ ಹಾಕಿ ಕೆಟ್ಟಿರಿ. ಅದರ ಬದಲು ಸುಮ್ಮನಿರುವುದು ಒಳ್ಳೆಯದು ಇಲ್ಲವೆಂದರೆ ಇನ್ನೊಬ್ಬರಿಂದ ದುಡ್ಡು ಕೊಟ್ಟು ಮಾಡಿಸಿದರಾಯಿತು.
ಒಂದು ಅರವತ್ತೈದು ಡಾಲರ್ ಕೊಟ್ಟು ಆರಡಿ ಎತ್ತರದ ಏಣಿಯನ್ನು ತೆಗೆದುಕೊಂಡಿರದ ಬುದ್ಧಿವಂತನಾದ ನಾನು, ಇರುವ ಕಿಚನ್ ಸ್ಟೆಪ್‌ಸ್ಟೂಲಿನಲ್ಲೇ ಎರಡು ಮೆಟ್ಟಿಲು ಹತ್ತಿ ಭಾರವಾದ ಡ್ರಿಲ್ ಸೆಟ್ ಅನ್ನು ನನ್ನ ಭುಜಕ್ಕಿಂತಲೂ ಎತ್ತರ ಮಟ್ಟದಲ್ಲಿಟ್ಟುಕೊಂಡು ಅದೆಷ್ಟು ಡ್ರಿಲ್‌ಗಳನ್ನು ಕೊರೆಯಲಾದೀತು? ಅದೆಷ್ಟು ಸ್ಕ್ರೂಗಳನ್ನು ಲೀಲಾಜಾಲವಾಗಿ ಒಳಗೆ ಸೇರಿಸಲಾದೀತು? ಇಂತಹ ಕಷ್ಟಕರ ಸನ್ನಿವೇಶಗಳಲ್ಲಿ ನನ್ನ ಬಾಯಿಯಿಂದ ಸಹಸ್ರನಾಮಾರ್ಚನೆ ತನ್ನಷ್ಟಕ್ಕೆ ತಾನೇ ಹೊರಟು ಬರುತ್ತದೆ, ಅದರ ಬೆನ್ನ ಹಿಂದೆ ಸಮಜಾಯಿಷಿ ಕೂಡ:
- ಈ ಸುಡುಗಾಡು ಭಾರತೀಯರೆಲ್ಲ ಚಿಂಕರರು, ಪಕ್ಕದ ಮನೆಯವನು ಆರೂವರೆ ಅಡಿ ಎತ್ತರವಿದ್ದಾನೆ ಅವನೋ ನೆಲದ ಮೇಲೆ ನಿಂತೇ ಬಲ್ಬ್ ಬದಲಾಯಿಸುತ್ತಾನೆ!
(ಭಾರತೀಯರರು ಕುಳ್ಳಕಿರುವುದು ಅವರ ತಪ್ಪೇ? ಪಕ್ಕದ ಮನೆಯವನು ಎತ್ತರವಿರುವುದು ಅವನ ತಪ್ಪೇ?)
- ಈ ಥರ್ಡ್‌ಕ್ಲಾಸ್ ಅಮೇರಿಕದಲ್ಲಿ ಗರಾಜಿನಲ್ಲಿ ಅಲಂಕಾರಕ್ಕಿಡುವ ಏಣಿಯು ಅರವತ್ತೈದು ಡಾಲರ್ರೇ?
(ನಿನಗೆ ಬೇಕಾದರೆ ಹತ್ತೇ ಡಾಲರಿನ ಏಣಿಯನ್ನು ತೆಗೆದುಕೊಂಡು ಬಾ, ಯಾರು ಬೇಡಾ ಅಂದೋರು?)
- ಈ ಕಿಟಕಿಗಳಿಗೆ ಸ್ಕ್ರೀನ್ ಏಕೆ ಹಾಕಬೇಕು? ಅದರಿಂದ ಯಾವ ದೇಶ ಉದ್ದಾರವಾಗುತ್ತದೆ?
(ಹಾಕೋದೇ ಬೇಡ ಬಿಡು, ಯಾರು ಹಾಕು ಅಂತ ಗಂಟುಬಿದ್ದೋರು ಈಗ).
ಮೇಲೆ ಕೈ ಎತ್ತಿ ಹಿಡಿದೂ ಹಿಡಿದೂ ನೋವಾದ ಹಾಗೆ, ಎಂದೂ ಕೀ ಬೋರ್ಡನ್ನೇ ಕುಟ್ಟುತ್ತೇವೆ ಎಂದು ಶಪಥ ತೊಟ್ಟ ಕೈ ಬೆರಳುಗಳು ಯಾವತ್ತೋ ಒಮ್ಮೆ ಸ್ಕ್ರೂ ಡ್ರೈವರ್ರನ್ನು ತಿರುಗಿಸಿ ವ್ಯಥೆ ಪಟ್ಟು ಅವುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವ ಹಾಗೆ ಬಸ್ಸಿನ ಗಡಿಬಿಡಿಯಲ್ಲಿ ನಮ್ಮೂರಿನ ದೇವಸ್ಥಾನದ ಅರ್ಚಕರು ಹೈ-ಸ್ಪೀಡ್ ಅರ್ಚನೆ ಮಾಡುವ ಹಾಗೆ ನನ್ನ ಸಹಸ್ರನಾಮ ಹೊಸಹೊಸ ರೂಪವನ್ನು ಪಡೆದುಕೊಳ್ಳುತ್ತದೆ, ಆ ಹೊತ್ತಿನಲ್ಲಿ ಯಾರೇ ಕಣ್ಣಿಗೆ ಬಿದ್ದರೂ, ಏನೇ ಕಂಡರೂ ಅವುಗಳಿಗೆಲ್ಲ ಬೈಗಳು ಗ್ಯಾರಂಟಿ! ಕೊನೆಗೆ ಬೇಸತ್ತು ನನಗೆ ನಾನೆ ಬೈದುಕೊಳ್ಳುವುದೂ ಇದೆ:
- ಒಂದ್ ದಿನಾನಾದ್ರೂ ಚಿಕ್ಕ ವಯಸ್ಸಿನಲ್ಲಿ ಒಂದಿಷ್ಟು ಹ್ಯಾಂಡಿ ಸ್ಕಿಲ್ಸ್‌ಗಳನ್ನು ಕಲಿಯಲಿಲ್ಲ, ಥೂ ನಿನ್ನ ಮುಸುಡಿಗೆ ಇಷ್ಟು ಬೆಂಕಿ ಹಾಕ!
- ಅದೇನ್ ಸ್ಕೂಲ್‌ನಲ್ಲಿ ಕಿಸಿದು ಫಸ್ಟ್‌ಕ್ಲಾಸ್ ಬಂದಿದ್ದು ಅಷ್ಟರಲ್ಲೇ ಇದೆ, ಇವತ್ತಿಗೆ ನೆಟ್ಟಗೆ ಒಂದು ರೂಮಿಗೆ ಬಣ್ಣಾ ಹಚ್ಚೋಕ್ ಬರೋಲ್ವಲ್ಲೋ!
- ಗಂಡಸು ಅಂತ ಮುಖದ ಮೇಲೆ ಮೀಸೆ ಹೊತ್ತ ಮೇಲೆ ಒಂದಿಷ್ಟು ಪ್ರಿಮಿಟಿವ್ ಕೆಲ್ಸಗಳೂ ಬರ್ದೇ ಇದ್ರೆ ಆ ಮೀಸೆಗೆ ಅವಮಾನ ಅಲ್ವಾ?!
ಅಂತೂ ಇಂತೂ ಈ ಸಹಸ್ರನಾಮಾರ್ಚನೆಗಳ ಮಧ್ಯದಲ್ಲೇ (ಕಾಟಾಚಾರಕ್ಕೆ ಎನ್ನುವಂತೆ ಆರಂಭಿಸಿ ಮುಗಿಸಿದ) ಕೈಗೆತ್ತಿಕೊಂಡುದನ್ನು ಮುಗಿಸಿ ಆಯಿತು. ಮೌಂಟ್ ಎವರೆಸ್ಟ್ ಹತ್ತಿ ಇಳಿದ ತೇನ್‌ಸಿಂಗ್ ಕೂಡ ಅಷ್ಟೊಂದು ವ್ಯಥೆ ಪಟ್ಟಿರಲಾರ, ಕೆಲಸ ಮುಗಿಯುವ ಕೊನೆಯಲ್ಲಿ ಕೈ ಬೆರಳುಗಳು ಯಕ್ಷಗಾನದ ಕಾಳಿಂಗ ನಾವುಡರನ್ನು ಮೀರಿ ಭಾಗವತಿಕೆಯನ್ನು ಶುರು ಹಚ್ಚಿಕೊಂಡಿದ್ದವು. ಅದೆಷ್ಟೋ ತಪ್ಪುಗಳು, ಅವುಗಳ ನಡುವೆ ಅಲ್ಪಸ್ವಲ್ಪ ಸರಿಗಳಿಂದ ಹಿಡಿದ ಕೆಲಸವನ್ನೇನೋ ಮಾಡಿದೆ, ಕೊನೆಗೆ ಒಂದಿಷ್ಟು ಅನುಭವವಾಯ್ತು ಬಿಡು ಎಂದು ಒಮ್ಮೆ ತಂಪೆನಿಸಿತಾದರೂ - ಥೂ ಈ ಅನುಭವದ ಮನೆಗಿಷ್ಟು ಬೆಂಕೀ ಹಾಕ! ಅಂತ ಅನ್ನಿಸದೇ ಇರಲಿಲ್ಲ.
***
ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇರದಿದ್ದರೆ ಟಿವಿಯಲ್ಲಿ ಎಷ್ಟೊಂದು ಲೀಲಾಜಾಲವಾಗಿ ಸೀಲಿಂಗ್ ಪೈಂಟ್ ಮಾಡುತ್ತಾರೆ ಎಂದುಕೊಂಡು ನೀವು ನಿಮ್ಮ ಮನೆಯಲ್ಲಿನ ಒಂದು ಸಣ್ಣ ಕೊಠಡಿಯ ಸೀಲಿಂಗ್ ಅನ್ನು ಪೈಂಟ್ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಬಳಿ ಎಂಥ ಅದ್ಭುತ ರೋಲರ್‌ಗಳು ಇದ್ದರೂ (ಪೈಂಟ್ ಹೆಂಗಾದರೂ ಇರಲಿ, ಅದರ ಕಥೆ ಬೇರೆ) ಒಂದು ಛಾವಣಿ ಮುಗಿಯುವ ಹೊತ್ತಿಗೆ ನಿಮ್ಮ ಪುಪ್ಪುಸದಲ್ಲಿನ ಗಾಳಿಯೆಲ್ಲವೂ ಬರಿದಾಗಿ ನೀವು ಇನ್ನೊಂದು ಅರ್ಧ ಘಂಟೆಯಲ್ಲಿ ಕುಸಿದು ಬೀಳುತ್ತೀರಿ ಎಂದೆನಿಸದಿದ್ದರೆ ಖಂಡಿತ ನನಗೆ ತಿಳಿಸಿ. ಸೀಲಿಂಗ್ ಪೈಂಟ್ ಮಾಡುವುದಕ್ಕೆ ಅದೆಷ್ಟು ಅಪ್ಪರ್ ಬಾಡಿ ಸ್ಟ್ರೆಂಗ್ತ್ ಬೇಕು ಎನ್ನುವುದಕ್ಕೆ ನನಗೆ ತಿಳಿದ ಯಾವ ಯುನಿಟ್ಟುಗಳಿಂದಲೂ ಮೆಜರ್ ಮಾಡುವುದಕ್ಕಾಗುತ್ತಿಲ್ಲ, ಅದೇನಿದ್ದರೂ ಅನುಭವದಿಂದಲೇ ತಿಳಿಯಬೇಕು. ಹೀಗೇ ಒಂದು ದಿನ ಪೈಂಟಿಂಗ್ ಪ್ರಾಜೆಕ್ಟ್ ಅನ್ನು ನಮ್ಮ ಅಲೆಕ್ಸಾಂಡ್ರಿಯದ ಮನೆಯಲ್ಲಿ ಕೈಗೆತ್ತಿಕೊಂಡ ನನಗೆ ನಮ್ಮ ಆ ಸಣ್ಣ ಮನೆಯ ಸೀಲಿಂಗ್ ಒಮ್ಮೊಮ್ಮೆ ಅಟ್ಲಾಂಟಿಕ್ ಮಹಾಸಾಗರಕ್ಕಿಂತಲೂ ವಿಸ್ತಾರವಾಗಿ ತೋರುತ್ತಿತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇದ್ದಿರಲಾರದು!
ಅದಕ್ಕೇ ಹೇಳಿದ್ದು, ಈ ಅನುಭವ ಅನ್ನೋದು ಪ್ರಯೋಜನಕ್ಕೆ ಬಾರದ್ದು ಅಂತಾ. ಒಮ್ಮೆ ಮಾಡಿ ಕೈ ಸುಟ್ಟುಕೊಂಡೋ ಹೊಡೆತ ತಿಂದ ಮೇಲೋ ಬರುವ ಭಾಗ್ಯವನ್ನು ನೀವು ಕರೆದುಕೊಳ್ಳಲು ನಾಲ್ಕಕ್ಷರದ ಸೌಭಾಗ್ಯ ಬೇಕೆಂದರೆ ಅದನ್ನು ಅನುಭವವೆಂದುಕೊಳ್ಳಿ. ಇಲ್ಲವೆಂದಾದರೆ ನನ್ನ ಹಾಗೆ ಚಪ್ಪಟೆ ಇರುವ ನಿಮ್ಮ ಹಣೆಯಲ್ಲಿ ಎರಡೆರಡು ಬಾರಿ ಗಟ್ಟಿಸಿಕೊಂಡು ಅದರ ಮೇಲೆ ಒಂದು ಕ್ಯೂಬ್ ಐಸ್ ಇಟ್ಟು ತಣ್ಣಗೆ ಮಾಡಿಕೊಳ್ಳಿ ಅಷ್ಟೇ.
ವೇಷ್ಟು ಸಾರ್, ಎಲ್ಲಾ ವೇಷ್ಟ್ ಉ. ನಮ್ಮೂರಿನ ಮಕ್ಳು ನಾಳೆ ಶಾಲೆಯಲ್ಲಿ ಫಸ್ಟ್ ಕ್ಲಾಸ್ ಬರದಿದ್ದರೂ ಪರವಾಗಿಲ್ಲ ಮನೆ ಒಳಹೊರಗಿನ ಕೆಲಸವನ್ನು ಮಾಡಿಕೊಳ್ಳಲು ಬರಲೇ ಬೇಕು ಅಂತ ಹೊಸ ಕಾನೂನು ತರಬೇಕು ಅಂತ ಹೊಸ ಸರ್ಕಾರಕ್ಕೆ ನಾನು ಶಿಫಾರಸ್ಸು ಮಾಡ್ತೀನಿ. ಅನುಭವ ಇಲ್ಲದವರು ಮೀಸೆ ಬಿಡಲು ತಕ್ಕವರಲ್ಲ ಅಂತ ಹೊಸ ಶಾಸನವನ್ನು ಕೆತ್ತಿಸ್ತೀನಿ. ಕೈಲಾಗ್ತೋನ್ ಮೈಯೆಲ್ಲ ಪರಚಿಕೊಂಡ ಅಂತಾರಲ್ಲ ಹಾಗೆ ನನ್ನ ಕೈಯಲ್ಲಿ ಏನೂ ಮಾಡೋಕ್ ಆಗ್ತೇ ಇದ್ರೂ ಅಮೇರಿಕದ ನೀರಿನ ಋಣದ ದಯೆಯಿಂದ ಯಾವತ್ತೂ ನಾನು ಉದ್ದುದ್ದವಾಗಿ ಮಾತಾಡ್ತಲೇ ಇರ್ತೀನಿ.
ಅನುಭವಗಳಿಗೆ ಧಿಕ್ಕಾರ, ಮೈಗಳ್ಳರ ಸಂಘಕ್ಕೆ ಜೈ!