ಒಂದು ವ್ಯವಸ್ಥೆಯ ಕುರಿ
ಅಮೇರಿಕದಲ್ಲಿ ಎಲ್ಲರೂ ಅದೆಷ್ಟು ಚೆನ್ನಾಗಿ ರೂಲ್ಸುಗಳನ್ನು ಫಾಲ್ಲೋ ಮಾಡ್ತಾರೆ, ಆದರೆ ಭಾರತದಲ್ಲಿ ಹಾಗೇಕೆ ಮಾಡೋಲ್ಲ ಎನ್ನೋ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಸಾರಿ ಬಂದೇ ಬಂದಿರುತ್ತೆ. ಹಾಗೆ ಆಗೋದಕ್ಕೆ ಏನು ಕಾರಣ, ಪ್ರಪಂಚದಲ್ಲಿರೋ ಜನರೆಲ್ಲ ಒಂದೇ ಅಥವಾ ಬೇರೆ-ಬೇರೆ ಎಂದು ವಾದ ಮಾಡಬಹುದೋ ಅಥವಾ ಇಲ್ಲಿನ ವ್ಯವಸ್ಥೆಯ ಬಗ್ಗೆ ಹೇಳಬಹುದೋ ಗೊತ್ತಿಲ್ಲ.
ಅಮೇರಿಕದ ವ್ಯವಸ್ಥೆ ಕಂಪ್ಯೂಟರ್ ನೆಟ್‌ವರ್ಕ್, ಡೇಟಾಬೇಸುಗಳಿಂದ ತುಂಬಿರುವಂಥ ಒಂದು ಜಾಲ. ಈ ಜಾಲದಲ್ಲಿ ನಮ್ಮನ್ನು ಸಿಕ್ಕಿ ಹಾಕಿಕೊಳ್ಳುವ ಹಾಗೆ ಮಾಡುವ ಬಂಧನಗಳು ಹಲವಾರು - ಅವುಗಳಲ್ಲಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್, ಡ್ರೈವರ್ಸ್ ಲೈಸನ್ಸ್, ಕ್ರೆಡಿಟ್ ಕಾರ್ಡ್, ಟ್ಯಾಕ್ಸ್ ಐಡಿ, ಬ್ಯಾಂಕ್ ಅಕೌಂಟುಗಳು ಇತ್ಯಾದಿ. ಇಲ್ಲಿಗೆ ಬಂದು ಜೀವಿಸುವವರಲ್ಲಿ ಎರಡು ಯಾವಾಗಲೂ ಇದ್ದೇ ಇರುತ್ತವೆ, ಒಂದು ಸಾಲ ಮತ್ತೊಂದು ಥರಾವರಿ ಕಾರ್ಡುಗಳು. ಹೀಗೆ ನಿಮಗೆ ಬೇಕೋ ಬೇಡವೋ ಜಾಲದಲ್ಲಿ ಮೊದಲ ದಿನದಿಂದಲೇ ಗೊತ್ತಿರದೇ ಸೇರಿಕೊಳ್ಳುತ್ತೀರಿ. ಭಾರತದಲ್ಲಿ ಎಷ್ಟೋ ಜನ ಸಂಸಾರ ಬಂಧನವನ್ನು ಬಿಟ್ಟು ಯೋಗಿಗಳಾಗಿ ಹೇಳಲೂ ಹೆಸರೂ ಇಲ್ಲದೇ ಯಾವುದೋ ನದಿ ತೀರದಲ್ಲಿ, ತಪ್ಪಲಿನಲ್ಲಿ ಇವತ್ತಿಗೂ ಬದುಕೋದಿಲ್ಲವೇ? ಹಾಗೋಗೋದು ಇಲ್ಲಿ ಹೋಮ್‌ಲೆಸ್ ಜನರಿಗೆ ಮಾತ್ರ (ಅವರಿಗೋ ಒಂದೆರಡು ಐಡಿ ಗಳಾದರೂ ಇರುತ್ತವೆ).
ಈ ವ್ಯವಸ್ಥೆ - ಕಾರ್ಡು, ಐಡಿ ಗಳಿಂದ ಕೂಡಿದ ಜಾಲ - ಇದೇ ನಿಮ್ಮನ್ನು ಕಟ್ಟಿ ಹಾಕುವುದು. ಅವುಗಳ ತೂಕ ಎಷ್ಟರ ಮಟ್ಟಿಗೆ ಇರುತ್ತದೆಯೆಂದರೆ ಭಾರತದಲ್ಲಿದ್ದರೆ ಹತ್ತು ಲಕ್ಷ ಜನ್ಮಗಳ ನಂತರವಾದರೂ ಮೋಕ್ಷ ದೊರಕೀತು, ಆದರೆ ಇಲ್ಲಿ ಅದಕ್ಕೂ ಆಸ್ಪದವಿಲ್ಲ. ನನ್ನ ಪ್ರಕಾರ ಅಮೇರಿಕದಲ್ಲಿರುವ ಆತ್ಮಗಳಿಗೆ ಮೋಕ್ಷವೆಂಬುದೇ ಇಲ್ಲ!
***
ನಿಮ್ಮ ಟೆಲಿಫೋನ್ ಸಂಪರ್ಕದಿಂದ ಹಿಡಿದು ಕ್ರೆಡಿಟ್ ಕಾರ್ಡುಗಳವರೆಗೆ, ಟ್ಯಾಕ್ಸ್ ಕಟ್ಟುವುದರಿಂದ ಹಿಡಿದು ನಿಮ್ಮ ಹೆಲ್ತ್ ಇನ್ಷೂರೆನ್ಸ್‌ವರೆಗೆ ಪ್ರತಿಯೊಂದಕ್ಕೂ ನೀವು ಒಂದು ವ್ಯವಸ್ಥೆಗೆ ತಲೆ ಬಾಗಲೇ ಬೇಕು. ನಿಮ್ಮ ಜೀವನದ ಅತ್ತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಈ ವ್ಯವಸ್ಥೆ ನಿಮ್ಮ ಬೆನ್ನ ಹಿಂದೆ ಬಿದ್ದಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಮದುವೆಯಾಗುವವರೆಲ್ಲರೂ, ಹುಟ್ಟಿದ ಮಕ್ಕಳೆಲ್ಲರನ್ನೂ ಕಡ್ಡಾಯವಾಗಿ ನೋಂದಾಯಿಸಲೇ ಬೇಕು ಎಂಬ ಕಾನೂನೂ ಇಲ್ಲ, ಹಾಗೆ ಮಾಡದೇ ಇರುವುದರಿಂದಾಗುವ ಪರಿಣಾಮಗಳೂ ಅಷ್ಟೇನು ದೊಡ್ಡದಲ್ಲ. ಆದರೆ ಇಲ್ಲಿ ಹುಟ್ಟುವ ಮಗುವಿಗೆ ಆಸ್ಪತ್ರೆಯವರೇ ಹೆಸರನ್ನು ನೋಂದಾಯಿಸಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್ ಅನ್ನು ತೆಗೆದುಕೊಡುತ್ತಾರೆ, ಜೊತೆಗೆ ಜನ್ಮ ಪ್ರಮಾಣ ಪತ್ರವೂ ದೊರಕಿಸಿಕೊಳ್ಳಬೇಕಾದುದು ಅನಿವಾರ್ಯ.
ಕ್ರೆಡಿಟ್ ಕಾರ್ಡ್ ಬಿಲ್ಲ್ ಅನ್ನು ಮೂವತ್ತು ದಿನಗಳ ಒಳಗೆ ಕೊಡದೇ ಹೋದರೆ ದಂಡ ವಿಧಿಸಲಾಗುತ್ತದೆ, ಅವರವರ ಜಾತಕಗಳನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಆಗಾಗ್ಗೆ ಅಪ್‌ಡೇಟ್ ಮಾಡುವ ಕ್ರೆಡಿಟ್ ರೇಟಿಂಗ್‌ಗಳನ್ನು ಕಾಯ್ದುಕೊಂಡು ವರದಿ ಒಪ್ಪಿಸುವ ಸಂಸ್ಥೆಗಳಿಗೆ ನಿಮ್ಮ ತಪ್ಪನ್ನು ತೋರಿಸಿ ನಿಮ್ಮ "ಒಳ್ಳೆಯ ದಾಖಲೆಗೆ" ಮಸಿ ಬಳಿಯಲಾಗುತ್ತದೆ. ಮುಂದೆ ಹುಟ್ಟುವ ಲೋನ್‌ಗಳಿಗೆ ಹೆಚ್ಚು ಬಡ್ಡಿ ದರವನ್ನು ಕೊಡಬೇಕಾಗಬಹುದು. ಹಾಗೆಯೇ ನಿಮ್ಮ ಮನೆಗೆ ಬಂದು ಬೀಳುವ ಟ್ರಾಫಿಕ್ ಅಥವಾ ಪಾರ್ಕಿಂಗ್ ವಯಲೇಷನ್ ಟಿಕೇಟುಗಳ ಹಿಂದೆ ಅಥವಾ ಕೆಳಗೆ ನೀವು ಸರಿಯಾದ ಸಮಯಕ್ಕೆ ದಂಡ ಕಟ್ಟದಿದ್ದಲ್ಲಿ ನಿಮ್ಮನ್ನು ಅರೆಷ್ಟು ಮಾಡಬಹುದು ಅಥವಾ ನಿಮ್ಮ ಡ್ರೈವಿಂಗ್ ಪ್ರಿವಿಲೇಜನ್ ತೆಗೆದು ಹಾಕಬಹುದು ಎಂದು ಬರೆದಿರುತ್ತದೆ. ಇವು ಕೇವಲ ಸ್ಯಾಂಪಲ್ಲ್ ಅಷ್ಟೇ - ಈ ಸಾಲಿಗೆ ಸೇರಬೇಕಾದವುಗಳು ಅನೇಕಾನೇಕ ಇವೆ. ಇಂಥ ಒಂದು ವ್ಯವಸ್ಥೆಯಲ್ಲಿ ಯಾರು ತಾನೇ ಸರಿಯಾಗಿ ನಡೆದುಕೊಳ್ಳದೇ ಇರುವುದು ಸಾಧ್ಯ? ಬರೀ ರೂಲ್ಸ್‌ಗಳು ಇದ್ದರಷ್ಟೇ ಸಾಲದು, ಅವುಗಳನ್ನು ಇಂಪ್ಲಿಮೆಂಟ್ ಮಾಡುವ ಶುದ್ಧ ವ್ಯವಸ್ಥೆಯೂ ಇರಬೇಕು ಎನ್ನುವುದನ್ನು ನಾನೂ ಒಂದು ಕಾಲದಲ್ಲಿ ಬೆನ್ನು ತಟ್ಟುತ್ತಿದ್ದೆ, ಆದರೆ ಈಗ ಅದು ಹರ್ಯಾಸ್‌ಮೆಂಟ್ ಆಗಿ ತೋರುತ್ತದೆ.
ಇಲ್ಲಿನ ಒಂದು ದೊಡ್ಡ ಬ್ಯಾಂಕ್ ಒಂದರಲ್ಲಿ ಅವರು ಮಾಡಿದ ತಪ್ಪಿನ ಸಲುವಾಗಿ ನನ್ನ ಯಾವತ್ತೂ ಉಪಯೋಗಿಸದ ಕ್ರೆಡಿಟ್ ಕಾರ್ಡ್ ಒಂದಕ್ಕೆ $1.50 ಚಾರ್ಜ್ ಮಾಡಿಕೊಂಡಿದ್ದರು. ನಾನು ಬ್ಯಾಂಕಿನ ಕಷ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಹತ್ತು-ಹದಿನೈದು ನಿಮಿಷಗಳ ಮಾತುಕಥೆಯ ನಂತರ ಆ ತುದಿಯಲ್ಲಿದ್ದ ಲಲನಾಮಣಿ ’ಆಗಲಿ ಸರ್, ಎಲ್ಲ ಸರಿ ಹೋಗುತ್ತದೆ’ ಎಂದ ಮಾತ್ರಕ್ಕೆ ಅದು ಸರಿ ಎಂದು ನಂಬಿಕೊಂಡು ಸುಮ್ಮನಿದ್ದೆ. ಆದರೆ ಇಪ್ಪತ್ತೈದು ದಿನಗಳ ಬಳಿಕ ನನಗೊಂದು ಬಿಲ್ ಬಂತು, ಅದರಲ್ಲಿ ಬ್ಯಾಲೆನ್ಸ್ $1.50 ಇನ್ನೂ ಹಾಗೇ ಇದೆ! ಇನ್ನೆರಡು ದಿನಗಳಲ್ಲಿ ಕಟ್ಟದಿದ್ದರೆ 148% (no kidding) ಬಡ್ಡಿ ಹಾಕುತ್ತೇವೆ ಎಂಬ ಹೇಳಿಕೆ ಬೇರೆ. ಒಡನೆಯೇ ನನಗೆ ಇನ್ನೇನನ್ನೂ ಮಾಡಲು ತೋಚದೆ, ಕೂಡಲೇ ಲಾಗಿನ್ ಆಗಿ ಒಂದೂವರೆ ಡಾಲರ್ ಅನ್ನು ಕಟ್ಟಿದೆ, ಎಲ್ಲವೂ ಸರಿ ಹೋಯಿತು. ನಾನು ಬ್ಯಾಂಕಿಗೆ ಹೋಗಿ (ಅರ್ಧ ದಿನದ ಕೆಲಸ), ಅಥವಾ ಕಷ್ಟಮರ್ ಸರ್ವೀಸ್ ಅನ್ನು ಮತ್ತೆ ಸಂಪರ್ಕಿಸಿ (ಅರ್ಧ ಘಂಟೆಯ ಕೆಲಸ) ’ಇದು ನಿಮ್ಮದೇ ತಪ್ಪು, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ’ ಎಂದು ಕೂಗಬಹುದಿತ್ತು. ಆ ಕಡೆಯಲ್ಲಿರುವ ಮತ್ತಿನ್ಯಾವುದೋ ಕಷ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್‌ಗೆ ನನ್ನ ಮೇಲೆ ಕರುಣೆ ಇದೆ ಎಂದುಕೊಳ್ಳಲೇ? ಆಕೆಗೆ ಬೈದರೆ ನಾವೇ ಮೂರ್ಖರು - she has nothing to lose - ನಾವು ಇಲ್ಲಿ ಒಂದು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆಯೇ ವಿನಾ ಆಕೆಯ ವಿರುದ್ಧವಲ್ಲ. ಆಕೆಗೆ ನೀವು ಒರಟಾಗಿ ನಡೆದುಕೊಂಡರೆ ಆಕೆ ಕೆಲಸ ಮಾಡುವುದೇ ಇಲ್ಲ, ಏನು ಮಾಡುತ್ತೀರಿ? (ಹಿಂದೆ ದೊಡ್ಡ ಬ್ಯಾಂಕ್ ಒಂದರಲ್ಲಿ ಹೀಗೆ ನನಗೆ ಅನುಭವವೂ ಆಗಿದೆ, ಅಲ್ಲಿನ ಮ್ಯಾನೇಜರುಗಳು ಅಪಾಲಜಿ ಪತ್ರವನ್ನು ಕಳಿಸುವ ಮಟ್ಟಿಗೆ). So, ಪುರುಸೊತ್ತಿಲ್ಲದ ನಾನು ಇತ್ತೀಚೆಗೆ - pick your battles ಅಂಥಾರಲ್ಲ ಹಾಗೆ ಮೆತ್ತಗಾಗಿ ಹೋಗಿದ್ದೇನೆ. ನನ್ನ ಬಳಿ ಅರ್ಧ ದಿನವಿರಲಿ, ಅರ್ಧ ಘಂಟೆಯೂ ಇಲ್ಲ ಇವರ ವಿರುದ್ಧ ಹೋರಾಡಲು ಅದಕ್ಕೋಸ್ಕರವೇ ಒಂದೂವರೆ ಡಾಲರನ್ನು ದಾನ ಮಾಡಿದ್ದು.
ಇಲ್ಲಿ ಚಿಪ್ಸ್ ಮಾಡಿ ಮಾರುವುದರಿಂದ ಹಿಡಿದು ಸಗಣಿ ಮಾರುವವರ ವರೆಗೆ ಎಲ್ಲರೂ ಒಂದು ಕಾರ್ಪೋರೇಷನ್ನುಗಳು, ಈ ಕಾರ್ಪೋರೇಷನ್ನುಗಳ ಬೆನ್ನೆಲುಬಾಗಿ "ವ್ಯವಸ್ಥೆ"ಗಳಿವೆ, ಪ್ರಾಸೆಸ್ಸುಗಳಿವೆ. ಕಾರ್ಪೋರೇಷನ್ನಿನಲ್ಲಿ ಇಬ್ಬರೇ ಎಂಪ್ಲಾಯಿಗಳು ಇದ್ದರೂ ಅವರು ದುಡ್ಡನ್ನು ಹೀಗೇ ಖರ್ಚು ಮಾಡಬೇಕು, ಬಿಡಬೇಕು ಎಂಬ ಕಟ್ಟಲೆಗಳಿವೆ. ಹೆಚ್ಚು ಬುದ್ಧಿವಂತ ಜನರಿರುವ ಪ್ರಪಂಚದಲ್ಲಿ ಹೆಚ್ಚು-ಹೆಚ್ಚು ಪ್ರಾಸೆಸ್ಸುಗಳು ಹುಟ್ಟಿಕೊಂಡಿವೆ. ವ್ಯವಸ್ಥೆ ದಿನದಿಂದ ದಿನಕ್ಕೆ ಬಹಳೇ ಬದಲಾಗುತ್ತಿದೆ. ಏರ್‍ಪೋರ್ಟಿನಲ್ಲಿ ಪ್ರತಿಯೊಬ್ಬರ ಶೂ-ಚಪ್ಪಲಿ ಕಳಚಬೇಕು ಎಂಬ ನಿಯಮ ಇನ್ನೂ ಎರಡು ವರ್ಷ ತುಂಬದ ನನ್ನ ಮಗಳಿಗೂ ಅನ್ವಯವಾಗುತ್ತದೆ. ಎಲ್ಲಿ ಹೋದರೂ ನಿಯಮ, ಕಾನೂನು, ಪ್ರಾಸೆಸ್ಸು, ವ್ಯವಸ್ಥೆ - ಇವೇ ನಮ್ಮನ್ನು ಹೆಚ್ಚು ಸ್ಟ್ರೆಸ್‌ಗೆ ಒಳಪಡಿಸುವುದು ಹಾಗೂ ಅವುಗಳಿಂದ ಬಿಡುಗಡೆ ಎಂಬುದೇ ಇಲ್ಲವೇನೋ ಎಂದು ಪದೇ ಪದೇ ಅನ್ನಿಸುವುದು.
ಹಾಗಂತ ನಾನು ಶಿಲಾಯುಗದ ಬದುಕನ್ನು ಸಮರ್ಪಿಸುವವನಲ್ಲ. ಒಂದು ಕಾಲದಲ್ಲಿ ಬಕಪಕ್ಷಿಯಂತೆ ಕ್ರೆಡಿಟ್ ಕಾರ್ಡುಗಳು ಸಿಗುವುದನ್ನು ಕಾತರದಿಂದ ನೋಡುತ್ತಿದ್ದವನಿಗೆ, ಹಾಗೆ ಸಿಕ್ಕ ಮೊಟ್ಟ ಮೊದಲ ಕಾರ್ಡ್‌ನಲ್ಲಿ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗು ಎಂದು ತಾಕೀತು ಮಾಡಿದ ನನ್ನ ರೂಮ್‌ಮೇಟ್ ಒತ್ತಾಯಕ್ಕೆ ಬಾಗಿ ಸಂಭ್ರಮಿಸಿದವನಿಗೆ ಇಂದು ಕ್ರೆಡಿಟ್ಟು ಕಾರ್ಡುಗಳನ್ನು ಉಪಯೋಗಿಸಲು ಮನಸೇ ಬಾರದಾಗಿದೆ. ಅವರು ಕೊಡುವ ಫ್ರೀ ಮೈಲುಗಳಾಗಲೀ, ಡಿವಿಡೆಂಡು ಡಾಲರುಗಳಾಗಲೀ, ಪಾಯಿಂಟುಗಳಾಗಲೀ ಬೇಡವೇ ಬೇಡ ಎನ್ನಿಸಿದೆ. ನನ್ನ ಡೆಬಿಟ್ಟ್ ಕಾರ್ಡ್ ಅನ್ನು ಉಪಯೋಗಿಸಿ ಕಾಲು ಇರುವಷ್ಟೇ ಹಾಸಿಗೆ ಚಾಚಿದರೆ ಸಾಕೆ? ಎಂದು ಕೇಳಿಕೊಂಡು ಹಾಗೇ ಅನುಸರಿಸಿಕೊಂಡು ಬಂದಿದ್ದೇನೆ. ಆದರೆ, ಏಳೆಂಟು ಕ್ರೆಡಿಟ್ ಕಾರ್ಡ್ ಇರುವ ನಾನು ಪ್ರತಿ ತಿಂಗಳಿಗೊಮ್ಮೆ ಇಂಟರ್‌ನೆಟ್ ನಲ್ಲಿ ಅವುಗಳ ಬಿಲ್ ಬ್ಯಾಲೆನ್ಸ್ ಅನ್ನು ಪರೀಕ್ಷಿಸದೇ ಇರುವ ಹಾಗಿಲ್ಲ. ಪೇಪರ್ ಸ್ಟೇಟ್‌ಮೆಂಟ್ ಕಳಿಸಲು ಏರ್ಪಾಟು ಮಾಡಿದರೆ ಪ್ರತಿ ದಿನಕ್ಕೆ ಕಂತೆಗಟ್ಟಲೆ ಬರುವ ಪೋಷ್ಟಲ್ ಮೇಲ್‌ಗಳನ್ನು ಓದುವ ವ್ಯವಧಾನವಿಲ್ಲ, ಹಾಗೆ ಮಾಡುವುದು ಬೇಡವೆಂದರೆ ಆನ್‌ಲೈನ್ ನಲ್ಲಿ ಬಿಲ್ ಬ್ಯಾಲೆನ್ಸ್ ನೋಡದೇ ವಿಧಿ ಇಲ್ಲ. ಒಂದು ತಿಂಗಳು ಅವರೇನಾದರೂ ತಪ್ಪು ಚಾರ್ಜು ಉಜ್ಜಿಕೊಂಡರೂ ಅದರ ಫಲಾನುಭವಿ ನಾನೇ!
ಹೀಗೆ ದಿನೇದಿನೇ ಮನಸ್ಸು ಈ ವ್ಯವಸ್ಥೆಯಿಂದ ದೂರವಾಗ ಬಯಸುತ್ತದೆ, ಯಾವ ವ್ಯವಸ್ಥೆಗೂ ಬಗ್ಗದ ನಮ್ಮೂರು ಮೊದಮೊದಲು ತಡೆಯಲಸಾಧ್ಯವೆಂದೆನಿಸಿದರೂ ಅಲ್ಲಿ ಮಾನಸಿಕವಾಗಿ ನೆಮ್ಮದಿ ಇರುತ್ತದೆ. ಇಲ್ಲಿನ ವ್ಯವಸ್ಥೆ ತರುವ ಭಾಗ್ಯಗಳಲ್ಲಿ ರಸ್ತೆಯಲ್ಲಿ ಅಪಘಾತ-ಅವಘಡ ಸಂಭವಿಸಿದರೆ ಸಿಗುವ ತುರ್ತು ಚಿಕಿತ್ಸೆಯೂ ಒಂದು, ಆದರೆ ಹಾಗೆ ಎಂದೋ ಆಗಬಹುದಾದಂತಹ ಅಪಘಾತದ ಫಲಾನುಭವಕ್ಕೆ ಇಡೀ ಜೀವನವನ್ನೇ ಸ್ಟ್ರೆಸ್‌ನಲ್ಲಿ ಕಳೆಯಲಾಗುತ್ತದೆಯೇ? ಅಥವಾ ’ಸಾಯೋ(ರಿ)ದಿದ್ದರೆ ಎಲ್ಲಿದ್ದರೇನು?’ ಎಂದು ಕೇಳಿಕೊಳ್ಳುವ ನಮ್ಮೂರಿನ ಜಾಣ್ಣುಡಿ ಅಪ್ಯಾಯಮಾನವಾಗುತ್ತದೆಯೇ?