Sunday, October 21, 2007

... ವಿಜಯದಶಮಿಯ ಬರುವಿಕೆಗೆ ಕಾಯುತ್ತಾ...

ಸದಾ ಮನಸ್ಸಿನಲ್ಲಿ ಮಡುಗಟ್ಟಿದ ಕೋಪ ಇರೋರ ಹಾಗಿನ ಮನೋಭಾವ - ಈ ವಿಜಯದಶಮೀ ಹೊತ್ತಿಗೆ ಯಾಕಪ್ಪಾ ಬಂತು ಎಂದು ಯೋಚಿಸಿಕೊಂಡರೆ ಬೇಕಾದಷ್ಟು ಕಾರಣಗಳು ಸ್ಪಷ್ಟವಾಗಿ ಕಂಡು ಬಂದವು. ನಾನು ದಿನಕ್ಕೊಂದು ಲಾಟರಿಯನ್ನು ಗೆದ್ದಿದ್ದೇನೆ ಎಂದು ಯಾವು ಯಾವುದೋ ದೇಶದಿಂದ "ಅಧಿಕೃತ" ಇ-ಮೇಲ್‌ಗಳು ಸ್ಪ್ಯಾಮ್‌ಗಳಾಗಿ ಬಂದು ಕಾಡುವುದೂ ಅಲ್ಲದೇ ಇರೋ ಒಂದೆರಡು ಇ-ಮೇಲ್ ಅಕೌಂಟುಗಳನ್ನು ಮಟ್ಟ ಹಾಕಿಕೊಂಡು ಅಟ್ಟಹಾಸ ಗೈಯುವುದು ಎಲ್ಲದಕ್ಕಿಂತ ಮೊದಲು ನಿಂತಿತು. ಪ್ರಪಂಚದಲ್ಲಿರೋ ದುಡ್ಡೆಲ್ಲಾ ಆಫ್ರಿಕಾದಲ್ಲಿ ತುಂಬಿಕೊಂಡು ಕಗ್ಗತ್ತಲಿನ ಖಂಡದಿಂದ ’ನಿಮ್ಮ ಸಹಾಯ ಬೇಕು’ ಎಂದು ಮೇಲ್ನೋಟಕ್ಕೆ ಸುಲಭವಾಗಿ ಮಿಲಿಯನ್ ಡಾಲರ್‌ಗಳನ್ನು ಕೊಡುವಂತೆ ಕಂಡುಬಂದರೂ ಅದರ ಹಿನ್ನೆಲೆಯಲ್ಲಿ ನೀವು ಚೂರೂ-ಪಾರೂ ಉಳಿಸಿರುವ ದುಡ್ಡನ್ನು ಕಬಳಿಸುವ ಒಂದು ಕುತಂತ್ರ ವ್ಯವಸ್ಥೆಯೇ ಇದೆ ಎಂದು ಯೋಚಿಸಿದರೆ ಕಂಪ್ಯೂಟರ್ ಪರದೆಯ ಮೇಲೆ ಪಿಚ್ಚ್ ಎಂದು ಉಗುಳಿ ಬಿಡೋಣವೆನ್ನಿಸುತ್ತದೆ. ಇಂಥ ಖದೀಮರ ಕಣ್ಣಿಗೆ ನಾವೆಲ್ಲರೂ ಪಾಪಿಷ್ಟರ ಹಾಗೆ ಕಂಡುಬರುವುದೂ ಅಲ್ಲದೇ ನಮ್ಮಂಥವರನ್ನು ಗೋಳು ಹೊಯ್ದುಕೊಳ್ಳುವುದೇ ಇವರ ಬಿಸಿನೆಸ್ ಎಂದು ಯೋಚಿಸಿಕೊಂಡಾಗಲೆಲ್ಲ ಪ್ರಪಂಚ ಎಂಥ ದುರ್ಗತಿಯತ್ತ ಸಾಗುತ್ತಿದೆ ಎನಿಸೋದಿಲ್ಲವೇ?

ನೀವೇ ಯೋಚಿಸಿ, ಒಂದು ವೆಬ್‌ಸೈಟ್ ಅನ್ನು ಹೋಸ್ಟ್ ಮಾಡುವುದಿರಲಿ, ISP ಸಹಾಯದ ಮೂಲಕ ಒಂದು ಇ-ಮೇಲ್ ಅನ್ನು ಕಳಿಸುವುದಿರಲಿ, ನಮ್ಮ ನಿಮ್ಮಂಥವರ ವೈಯುಕ್ತಿಕ ಇ-ಮೇಲ್ ಅಕೌಂಟನ್ನ ಸಣ್ಣ ಪ್ರೋಗ್ರಾಮುಗಳಿಗೆ ಅಳವಡಿಸಿ ದಿನಕ್ಕೆ ಮಿಲಿಯನ್‌ಗಟ್ಟಲೆ ಜನರಿಗೆ ಸ್ಪ್ಯಾಮ್ ಕಳಿಸುವುದಿರಲಿ ಇಂಥವೆಲ್ಲವೂ ಒಂದು IP-Network ವ್ಯವಸ್ಥೆಯಲ್ಲಿಯೇ ಆಗಬೇಕು ಎಂದು ನಂಬಿಕೊಂಡಿರುವವ ನಾನು. ಹೀಗಿರುವಾಗ ಪ್ರಪಂಚಕ್ಕೆಲ್ಲಾ ಸ್ಪ್ಯಾಮ್ ಕಳಿಸುವ unsolicited ಮೆಸ್ಸೇಜುಗಳನ್ನು ಕಳಿಸುವ ದಗಾಕೋರರನ್ನು ನಮ್ಮ ವ್ಯವಸ್ಥೆಗೆ ಬಗ್ಗು ಬಡಿಯಲೇಕೆ ಆಗದು? ಜೊತೆಗೆ ಎಷ್ಟೋ ಜನ ಅಮಾಯಕರ ಬ್ಯಾಂಕ್ ಅಕೌಂಟುಗಳನ್ನು ಅಕ್ರಮಿಸಿಕೊಂಡೋ ಅಥವಾ ಮುಟ್ಟಗೋಲು ಹಾಕಿಕೊಂಡೋ ಪ್ರಪಂಚದ ಯಾವುದೋ ಮೂಲೆಯಿಂದ ಇನ್ಯಾವುದೋ ಮೂಲೆಯಲ್ಲಿನ ಹಣವನ್ನು ಎಲೆಕ್ಟ್ರಾನಿಕಲಿ ದೋಚುವವರನ್ನೂ ತಡೆಯಲಾಗದೇ?

ಆರು ತಿಂಗಳ ಹಿಂದೆ ಒಂದು ಶುಕ್ರವಾರ ಅದ್ಯಾವುದೋ ಕೆಲಸದ ನಿಮಿತ್ತ ಆಫೀಸಿಗೆ ರಜೆ ಹಾಕಿ ಮಧ್ಯಾಹ್ನದ ಹೊತ್ತು ಕಂಪ್ಯೂಟರಿನಲ್ಲಿ ಏನನ್ನೋ ನೋಡುತ್ತಿದ್ದಾಗ ಎಲ್ಲಿಂದಲೋ ಹೀಗೇ ಒಂದು ಫೋನ್ ಕಾಲ್ ಬಂತು. ನನ್ನ ಕಾಲರ್ ಐಡಿ ಎಲ್ಲ ಸಂಖ್ಯೆಗಳನ್ನು 9999999999 ತೋರಿಸಿ ಖದೀಮರ ಕಾಲ್ ಇದು ಎಂದು ಮುಂಜಾಗರೂಕತೆಯನ್ನಾಗಲೇ ಕೊಟ್ಟಿತ್ತು. ಕೆಲವೊಮ್ಮೆ ಭಾರತದ ಕರೆಗಳು Unknown ಎಂದು ಬರುತ್ತವೆ ಅಥವಾ ಮತ್ತೆಲ್ಲಿಯದೋ ಸಂಖ್ಯೆಗಳನ್ನು ತೋರಿಸುತ್ತವೆಯಾದ್ದರಿಂದ ನಾನು ಕಾಲ್ ರಿಸೀವ್ ಮಾಡಿದೆ. ಆ ಕಡೆಯವನು ತಾನು IRS (Internal Revenue Service) ಕಡೆಯವನು ಎಂದು ಹೇಳಿ ತನ್ನ ಪರಿಚಯ ಮಾಡಿಕೊಂಡ. ಅವನ ಪ್ರಕಾರ ನನಗೆ IRS ನವರು ಆರು ಸಾವಿರ ಡಾಲರ್ ಕೊಡುತ್ತಾರಂತೆ, ಅದಕ್ಕೆ ಅವನು ನನ್ನ ಬಗ್ಗೆ ಕೆಲವೊಂದಿಷ್ಟು ವಿಷಯಗಳನ್ನು ಪಡೆದುಕೊಳ್ಳುವುದಾಗಿ ತಿಳಿಸಿದ. ನನಗಾಗಲೇ ಈ ರೀತಿಯ ಹೋಕ್ಸ್ ಕರೆಗಳ ಬಗ್ಗೆ ತಿಳಿದಿದ್ದರಿಂದ ಅವರ ಇಂಗಿತವನ್ನರಿಯಲು ನನಗೇನೂ ಕಷ್ಟವಾಗಲಿಲ್ಲ. ಆದರೂ ನೋಡೋಣವೆಂದುಕೊಂಡು ಸ್ವಲ್ಪ ಮಾತನಾಡತೊಡಗಿದೆ. ಅವನ್ ಇಂಗ್ಲೀಷ್ ಆಕ್ಸೆಂಟ್ ಆಫ್ರಿಕಾದವರ ಹಾಗಿತ್ತು. ಅಮೇರಿಕನ್ ಹೆಸರನ್ನು ಹೇಳುತ್ತಿದ್ದರೂ ಆ ಹೆಸರಿನ ಉಚ್ಚಾರ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. ಅವನ ಪ್ರವರವನ್ನು ವಿಚಾರಿಸಾಗಿ ಅವನು IRS ನಲ್ಲಿ ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ. ಅವನ ಆಫೀಸ್ ವಿಳಾಸವನ್ನು ಕೇಳಲು ವಾಷಿಂಗ್ಟನ್ ಡಿಸಿಯ ಯಾವುದೋ ಒಂದು ಫೋನೀ ವಿಳಾಸವನ್ನು ತಿಳಿಸಿದ - ನನಗೆ ಡಿಸಿಯ ಬಗ್ಗೆ ಗೊತ್ತಿದ್ದರೂ ಅವನ ಜೊತೆ ಮಾತನಾಡುತ್ತಲೇ IRS ಅಫೀಷಿಯಲ್ ವೆಬ್ ಸೈಟ್ ನೋಡಲಾಗಿ ಅವನು ಹೇಳುತ್ತಿರುವ ಅಡ್ರೆಸ್ ವ್ಯಾಲಿಡ್ ಅಲ್ಲವೆಂದು ತಿಳಿಯಿತು. ನಿನ್ನ ಸೂಪರ್‌ವೈಸರ್ ಜೊತೆ ಮಾತನಾಡಬೇಕು ಎಂದರೆ, ಮೊದಲ ಖದೀಮನಿಗಿಂತಲೂ ಮತ್ತೊಬ್ಬ ಖದೀಮ ಲೈನಿಗೆ ಬಂದ, ಅವನೂ ಸುಳ್ಳಿನ ಮೇಲೆ ಸುಳ್ಳು ಹೇಳುವವನೇ.

ಅವರ ವಿಳಾಸ ಸುಳ್ಳು, ಹೆಸರುಗಳು ಸುಳ್ಳು, ಎಷ್ಟು ಕೇಳಿದರೂ ಅವರ ಫೋನ್ ನಂಬರ್ ಕೊಡಲಾರದವರು. ಅವರ ಬಿಸಿನೆಸ್ಸಿನ ಮೂಲಮಂತ್ರ ಇನ್ನೊಬ್ಬರಿಗೆ ನಾಮ ಹಾಕುವುದು. ಇನ್ನೊಬ್ಬರು ಕಷ್ಟಪಟ್ಟು ದುಡಿದ ಹಣವನ್ನು ಹಾಡಹಗಲು ದೋಚುವ ಕುತಂತ್ರಿಗಳು. ಇಂಥವರೊಡನೆ ನನದೇನು, ನಾನು ಫೋನ್ ಇಟ್ಟು ಇನ್ನೊಮ್ಮೆ ಕರೆ ಮಾಡಬೇಡಿ ಎಂದು ವಾರ್ನ್ ಮಾಡಬಹುದಿತ್ತು, ಆದರೆ ನಾನು ಹಾಗೆ ಮಾಡದೆ ಈ ದುರುಳರನ್ನು ಜೊತೆ ಸುಮಾರು ತೊಂಭತ್ತು ನಿಮಿಷ ಸತಾಯಿಸಿ, ಆಟವಾಡಿಸಿ ಅವರಿಗೆ ಬಹಳ ಪ್ರಾಮುಖ್ಯವಾಗಿ ಬೇಕಾಗಿದ್ದ ನನ್ನ ಬ್ಯಾಂಕ್ ಅಕೌಂಟ್ ನಂಬರನ್ನು ಅದೆಲ್ಲಿಲ್ಲಿಂದಲೋ ಅಂಕೆಗಳನ್ನು ಬಳಸಿ, ಕೂಡಿ ಕಳೆದು ಎಂಟು ಡಿಜಿಟ್ ಅಂಕೆಯನ್ನು ಅವರ ಒತ್ತಾಸೆಯಂತೆ ಪೂರೈಸಿದೆ. ನಾನು ತೆಗೆದುಕೊಂಡ ತೊಂಭತ್ತು ನಿಮಿಷಗಳಲ್ಲಿ ಅವರು ಅದಿನ್ನೆಷ್ಟು ಜನರನ್ನು ಕಾಂಟ್ಯಾಕ್ಟ್ ಮಾಡುವುದಿತ್ತೋ ಅಷ್ಟಾದರೂ ತಪ್ಪಿತಲ್ಲ! ನಾನು ಅಕೌಂಟ್ ನಂಬರನ್ನು ಸುಳ್ಳು ಹೇಳುತ್ತಿರುವೆನೇನೋ ಎಂದು ಅನುಮಾನವಾಗಿ ಅವರು ಪದೇ ಪದೇ ಅದನ್ನು ಕೇಳುತ್ತಿದ್ದರು, ನಾನು ನನ್ನ ಸ್ಕ್ರೀನ್ ನಲ್ಲಿ ಬರೆದುಕೊಂಡಿದ್ದರಿಂದ ಅದನ್ನು ಯಥಾವತ್ತಾಗಿ ಹೇಳುತ್ತಲೇ ಇದ್ದೆ. ಮಧ್ಯೆ ಒಂದೆರಡು ಬಾರಿ ’ನನಗೆ ಮತ್ತೊಂದು ಕರೆ ಬರುತ್ತಿದೆ, ಐದು ನಿಮಿಷ ಬಿಟ್ಟು ಫೋನ್ ಮಾಡಿ’ ಎಂದು ಹೇಳಿದ್ದಕ್ಕೆ ಆ ಕಡೆಯವರು ಹಾಗೆಯೇ ಮಾಡುತ್ತಿದ್ದರು. ಈ ಮಧ್ಯೆ ನನ್ನ ಫೋನ್ ನಂಬರ್ ಒದಗಿಸಿದ ಸೆಂಟ್ರಲ್ ಆಫೀಸಿನ ಟೆಕ್ನಿಕಲ್ ಮ್ಯಾನೇಜರ್ ಒಬ್ಬನನ್ನು ಆಫೀಸಿನ ಇನ್ಸ್‌ಟಂಟ್ ಮೆಸ್ಸೇಜ್ ವ್ಯವಸ್ಥೆಯಿಂದ ಕಾಂಟ್ಯಾಕ್ಟ್ ಮಾಡಿ ನನ್ನ ಕರೆಯ ಕಾಲ್ ರೆಕಾರ್ಡುಗಳನ್ನು ರೆಕಾರ್ಡ್ ಮಾಡಲು ಹೇಳಿದೆ. ಪ್ರತಿಯೊಂದು ಫೋನಿಗೆ ಒಳಬರುವ ಕರೆಯನ್ನು ದಾಖಲಿಸಲಾಗದಿದ್ದರೂ ಸ್ವಿಚ್‌ನಲ್ಲಿ ನೋಡಿ ಎಲ್ಲಿಂದ ಕರೆ ಒಳಬರುತ್ತಿದೆ ಎಂದು ಹೇಳಬಹುದು. ಆದರೆ ಈ ಖದೀಮರು IP-IP ನೆಟ್‌‍ವರ್ಕ್‌ನಲ್ಲಿ ಅದ್ಯಾವುದೋ ಕಂಪ್ಯೂಟರ್ ಒಂದರಿಂದ ಕರೆ ಮಾಡುತ್ತಿದ್ದರು, ಅದರ ಮೂಲವನ್ನು ಜಾಲಾಡಿಸಿ ನೋಡಿದರೆ ನನಗೆ ಗೊತ್ತಾದದ್ದು ’ನೈಜೀರಿಯಾ’ ಎಂದು, ಅಷ್ಟೇ.

ಖದೀಮರಿಗೆ ನನ್ನ ಅಕೌಂಟ್ ನಂಬರ್ ಸಿಕ್ಕಿದೆಯೆಂದುಕೊಂಡು ಬಹಳಷ್ಟು ಖುಷಿಯಾಯಿತು. ಇನ್ನೇನು ಕರೆ ಮುಗಿಯಿತು ಎಂದುಕೊಂಡಾಗ ಆ ಕಡೆಯಿಂದ ಅವರು 'thank you!' ಎಂದರು, ನಾನು ಈ ಕಡೆಯಿಂದ ಕನ್ನಡದಲ್ಲಿ ನನಗೆ ಅರಿವಿದ್ದೋ ಅರಿವಿರದೆಯೋ ’ಸೂಳಾ ಮಕ್ಳಾ’ ಎಂದೆ. ಅವ ’ಏನು ಹಾಗಂದ್ರೇ?’ ಎಂದ, ನಾನು ’thats how we say thank you in our language' ಎಂದೆ.

***

ನಿಜವಾಗಿಯೂ ಒಮ್ಮೊಮ್ಮೆ ಹೀಗನ್ನಿಸುತ್ತೆ, ಈ ಖದೀಮರೇ ಆಧುನಿಕ ಪ್ರಪಂಚದ ರಾಕ್ಷಸರು, ಇಂತಹವರನ್ನು ನೀಗಿಸೋದೇ ನಿಜವಾದ ವಿಜಯೋತ್ಸವ ಎಂಬುದಾಗಿ. ಆ ಮಹಿಷಾಸುರ, ರಾವಣ ಇವರೆಲ್ಲರಿಗೂ ಒಂದು ರೀತಿ-ನೀತಿಗಳು ಎಂಬುವುದಾದರೂ ಇದ್ದವೇನೋ ಆದರೆ ಇಂದಿನ ಕಾಲದ ಈ ರಾಕ್ಷಸರಿಗೆ ಇತರರ ರಕ್ತವನ್ನು ಕುಡಿಯುವುದನ್ನು ಬಿಟ್ಟರೆ ಬೇರೆ ಯಾವುದೇ ಆಲೋಚನೆ ಎನ್ನುವುದೇ ಇಲ್ಲ.

ಅಲ್ಲದೇ, ಒಂದು ವ್ಯವಸ್ಥಿತವಾದ ಬಿಸಿನೆಸ್ಸನ್ನು ಆರಂಭಿಸಲು ಅದೆಷ್ಟೆಲ್ಲಾ ಕಷ್ಟಗಳು ಬರುತ್ತವೆ, ಆದರೆ ಈ ಖದೀಮರು ಇತರರನ್ನು ಸುಲಿಯುವುದೇ ವ್ಯವಹಾರವನ್ನಾಗಿಟ್ಟುಕೊಂಡಿರುವ ಬಿಸಿನೆಸ್ಸುಗಳು ಅದು ಹೇಗೆ ನೆಲೆ ನಿಲ್ಲುತ್ತವೆಯೋ ಯಾರಿಗೆ ಗೊತ್ತು? ನನ್ನ ಇ-ಮೇಲ್ ಅಕೌಂಟುಗಳಿಗೆ ಪ್ರತಿಯೊಂದು ಸಾರಿ ನಾನು ಲಾಟರಿ ಗೆದ್ದುದಕ್ಕಾಗಲೀ, ಆಫ್ರಿಕಾದಲ್ಲಿ ಯಾರೋ ಸತ್ತವರ ಹಣಕ್ಕೆ ಸಹಿ ಹಾಕುವ ಅವಕಾಶ ಸಿಕ್ಕಾಗಲೀ ಕೇವಲ ಒಂದೊಂದು ಪೈಸೆ ಸಿಕ್ಕಿದ್ದರೆ ನಾನು ಇಷ್ಟೊತ್ತಿಗೆ ಲಕ್ಷಾಧೀಶ್ವರನಾಗುತ್ತಿದ್ದೆ ಎನ್ನುವುದು ಇತ್ತೀಚೆಗೆ ನಾನು ಹೇಳುವ ಜೋಕ್‌ಗಳಲ್ಲಿ ಒಂದು.

4 comments:

Sheela Nayak said...

ಸ್ವಲ್ಪ ಯೋಚಿಸಿ, ನಿಮ್ಮಂತೆ ತಂತ್ರಜ್ಞಾನ ತಿಳಿದವರಿಗೆ ಹೀಗಾದರೆ ನಮ್ಮಂತವರ ಗತಿಯೇನು? ಎಲ್ಲರಿಗೂ ಟೋಪಿ ಹಾಕಿ ಜೀವನಮಾಡುವಂತಹ ಇವರ ಕೈಗೆ ಅಮಾಯಕರು ಸಿಕ್ಕಿದರೆ ಅವರ ಗತಿಯೇನು? ಪ್ರತೀದಿನ ಇಂತಹ ಘಟನೆಯನ್ನು ನೋಡಿ ನೋಡಿ ಮೋಸಹೋಗುವಂತಹ ಮೂರ್ಖರಿಗೆ ಏನು ಹೇಳುತ್ತಿರಿ? ತಂತ್ರಜ್ಞಾನ ಪ್ರಗತಿ ಪಡೆದಂತೆ ರಾಕ್ಷಸಿಕೃತ್ಯಗಳು ಹೆಚ್ಚುತ್ತಿವೆ! ಮನಸ್ಸಿಗೆ ತುಂಬಾ ನೋವಾಗುತ್ತದೆ..ಅದರಲ್ಲೂ ಮಕ್ಕಳ ಬಗ್ಗೆ ನನಗೆ ತುಂಬಾ ಕಾಳಜಿಯಾಗುತ್ತದೆ. ಮನೆಯಲ್ಲಿ ಸೌಕರ್ಯ ಹೆಚ್ಚಿದ ಹಾಗೆ ಮಕ್ಕಳ ಮೇಲೆ ಹೆತ್ತವರ ಗಮನ ಕಡಿಮೆಯಾಗುತ್ತಾ ಹೋಗಿ ಅನಾಹುತಗಳು ಹೆಚ್ಚು

Anonymous said...

ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಜನರನ್ನು ವಂಚಿಸಲು ದಿನಕ್ಕೊಂದು ಹೊಸ ವಿಧಾನವನ್ನು ಕಂಡುಕೊಳ್ಳುತ್ತಿದ್ದಾರೆ. ನೀವು ಈ ಕಳ್ಳರಿಗೆ ಚೆನ್ನಾಗಿಯೇ ಚಳ್ಳೆಹಣ್ಣು ತಿನ್ನಿಸಿದ್ದೀರಿ. :) ಇನ್ನು ಅಪ್ಪಿತಪ್ಪಿನೂ ನಿಮಗೆ ಕಾಲ್ ಮಾಡಲಿಕ್ಕಿಲ್ಲ ಅಂತ ಭಾವಿಸುತ್ತೇನೆ. ಅಥವಾ.. ಇನ್ನೊಂದು ಅವತಾರದಲ್ಲಿ ಬರುತ್ತಾರೋ...

Satish said...

ಶೀಲಾ ಅವರೇ,

ತಂತ್ರಜ್ಞಾನ ತಿಳಿಯೋ ತಿಳಿಯದಿರೋ ಪ್ರಶ್ನೆಯೇ ಬರೋದಿಲ್ಲ, ಈ ಖದೀಮರು ಮಾಡೋ ಅನುಸರಿಸೋ ತಂತ್ರಗಳಿಗೆ ಎಂಥವರೂ ಬೇಸ್ತು ಬೀಳಬೇಕು ನೋಡಿ. ಇನ್ನೂ ಎಂಥಾ ಕುತಂತ್ರಗಳನ್ನು ಮಾಡ್ತಾರೇ ಅಂದ್ರೆ ಎಷ್ಟೋ ಬ್ಯಾಂಕು, ಕಂಪನಿಗಳ ವೆಬ್‌ಸೈಟ್‌ನ ಯಥಾನಕಲನ್ನು ಸೃಷ್ಟಿಸಿ ಅಮಾಯಕರ ಯೂಸರ್ ಇನ್ಫರ್‌ಮೇಷನ್ ಪಡೆದುಕೊಂಡು ಏನೇನೆಲ್ಲಾ ತೊಂದರೆಗಳನ್ನು ಕೊಡುತ್ತಾರಂತೆ! ಎಷ್ಟು ತಿಳಿದುಕೊಂಡರೂ ಈ ಕಿಡಿಗೇಡಿಗಳಿಗೆ ಮತ್ತೊಂದು ಹೊಸಮಾರ್ಗ ಗೊತ್ತಾಗುತ್ತದೆ.

sritri ಅವರೇ,

ಈ ಕಳ್ಳರಿಗೆ ನಮ್ಮ ಮನೆಯ ವಿಳಾಸ, ಫೋನ್ ನಂಬರ್ ಎಲ್ಲವೂ ಮೊದಲೇ ಗೊತ್ತಿರುತ್ತದೆ. ಅವರಿಗೆ ಬುದ್ಧಿಕಲಿಸುವುದು ಸಾಧ್ಯವಿಲ್ಲದ ಮಾತು, ಅವರು ಇನ್ನೊಬ್ಬರಿಗೆ ತೊಂದರೆ ಕೊಡಬೇಕು ಇನ್ನೊಬ್ಬರ ಹಣವನ್ನು ಸುಲಿಯಬೇಕು ಎಂದೇ ಒಂದು ’ಬಿಸಿನೆಸ್’ ಅನ್ನು ತೆರೆದುಕೊಂಡಿರುತ್ತಾರೆ. ಇಲ್ಲಿ ಒಬ್ಬ ಅಮಾಯಕ ವ್ಯಕ್ತಿ ಒಂದು ಕೆಟ್ಟ ವ್ಯವಸ್ಥೆಯೊಂದಿಗೆ ಹೋರಾಡುವುದು ಕಷ್ಟ. ಅಷ್ಟರಲ್ಲೂ ಇವರು ಮಾಡುವ ಅನಾಮಧೇಯ ಕರೆಗಳು, ಇವರುಗಳು ಕಳಿಸುವ ಸ್ಪ್ಯಾಮ್ ಇ-ಮೇಲ್‌ಗಳು ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಬಳಕೆದಾರರನ್ನು ಇಕ್ಕಟ್ಟಿಗೆ ಸಿಲುಕಿಸುವವೇ.

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service