Wednesday, October 31, 2007

ಒಂದು ವ್ಯವಸ್ಥೆಯ ಕುರಿ

ಅಮೇರಿಕದಲ್ಲಿ ಎಲ್ಲರೂ ಅದೆಷ್ಟು ಚೆನ್ನಾಗಿ ರೂಲ್ಸುಗಳನ್ನು ಫಾಲ್ಲೋ ಮಾಡ್ತಾರೆ, ಆದರೆ ಭಾರತದಲ್ಲಿ ಹಾಗೇಕೆ ಮಾಡೋಲ್ಲ ಎನ್ನೋ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಸಾರಿ ಬಂದೇ ಬಂದಿರುತ್ತೆ. ಹಾಗೆ ಆಗೋದಕ್ಕೆ ಏನು ಕಾರಣ, ಪ್ರಪಂಚದಲ್ಲಿರೋ ಜನರೆಲ್ಲ ಒಂದೇ ಅಥವಾ ಬೇರೆ-ಬೇರೆ ಎಂದು ವಾದ ಮಾಡಬಹುದೋ ಅಥವಾ ಇಲ್ಲಿನ ವ್ಯವಸ್ಥೆಯ ಬಗ್ಗೆ ಹೇಳಬಹುದೋ ಗೊತ್ತಿಲ್ಲ.

ಅಮೇರಿಕದ ವ್ಯವಸ್ಥೆ ಕಂಪ್ಯೂಟರ್ ನೆಟ್‌ವರ್ಕ್, ಡೇಟಾಬೇಸುಗಳಿಂದ ತುಂಬಿರುವಂಥ ಒಂದು ಜಾಲ. ಈ ಜಾಲದಲ್ಲಿ ನಮ್ಮನ್ನು ಸಿಕ್ಕಿ ಹಾಕಿಕೊಳ್ಳುವ ಹಾಗೆ ಮಾಡುವ ಬಂಧನಗಳು ಹಲವಾರು - ಅವುಗಳಲ್ಲಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್, ಡ್ರೈವರ್ಸ್ ಲೈಸನ್ಸ್, ಕ್ರೆಡಿಟ್ ಕಾರ್ಡ್, ಟ್ಯಾಕ್ಸ್ ಐಡಿ, ಬ್ಯಾಂಕ್ ಅಕೌಂಟುಗಳು ಇತ್ಯಾದಿ. ಇಲ್ಲಿಗೆ ಬಂದು ಜೀವಿಸುವವರಲ್ಲಿ ಎರಡು ಯಾವಾಗಲೂ ಇದ್ದೇ ಇರುತ್ತವೆ, ಒಂದು ಸಾಲ ಮತ್ತೊಂದು ಥರಾವರಿ ಕಾರ್ಡುಗಳು. ಹೀಗೆ ನಿಮಗೆ ಬೇಕೋ ಬೇಡವೋ ಜಾಲದಲ್ಲಿ ಮೊದಲ ದಿನದಿಂದಲೇ ಗೊತ್ತಿರದೇ ಸೇರಿಕೊಳ್ಳುತ್ತೀರಿ. ಭಾರತದಲ್ಲಿ ಎಷ್ಟೋ ಜನ ಸಂಸಾರ ಬಂಧನವನ್ನು ಬಿಟ್ಟು ಯೋಗಿಗಳಾಗಿ ಹೇಳಲೂ ಹೆಸರೂ ಇಲ್ಲದೇ ಯಾವುದೋ ನದಿ ತೀರದಲ್ಲಿ, ತಪ್ಪಲಿನಲ್ಲಿ ಇವತ್ತಿಗೂ ಬದುಕೋದಿಲ್ಲವೇ? ಹಾಗೋಗೋದು ಇಲ್ಲಿ ಹೋಮ್‌ಲೆಸ್ ಜನರಿಗೆ ಮಾತ್ರ (ಅವರಿಗೋ ಒಂದೆರಡು ಐಡಿ ಗಳಾದರೂ ಇರುತ್ತವೆ).

ಈ ವ್ಯವಸ್ಥೆ - ಕಾರ್ಡು, ಐಡಿ ಗಳಿಂದ ಕೂಡಿದ ಜಾಲ - ಇದೇ ನಿಮ್ಮನ್ನು ಕಟ್ಟಿ ಹಾಕುವುದು. ಅವುಗಳ ತೂಕ ಎಷ್ಟರ ಮಟ್ಟಿಗೆ ಇರುತ್ತದೆಯೆಂದರೆ ಭಾರತದಲ್ಲಿದ್ದರೆ ಹತ್ತು ಲಕ್ಷ ಜನ್ಮಗಳ ನಂತರವಾದರೂ ಮೋಕ್ಷ ದೊರಕೀತು, ಆದರೆ ಇಲ್ಲಿ ಅದಕ್ಕೂ ಆಸ್ಪದವಿಲ್ಲ. ನನ್ನ ಪ್ರಕಾರ ಅಮೇರಿಕದಲ್ಲಿರುವ ಆತ್ಮಗಳಿಗೆ ಮೋಕ್ಷವೆಂಬುದೇ ಇಲ್ಲ!

***
ನಿಮ್ಮ ಟೆಲಿಫೋನ್ ಸಂಪರ್ಕದಿಂದ ಹಿಡಿದು ಕ್ರೆಡಿಟ್ ಕಾರ್ಡುಗಳವರೆಗೆ, ಟ್ಯಾಕ್ಸ್ ಕಟ್ಟುವುದರಿಂದ ಹಿಡಿದು ನಿಮ್ಮ ಹೆಲ್ತ್ ಇನ್ಷೂರೆನ್ಸ್‌ವರೆಗೆ ಪ್ರತಿಯೊಂದಕ್ಕೂ ನೀವು ಒಂದು ವ್ಯವಸ್ಥೆಗೆ ತಲೆ ಬಾಗಲೇ ಬೇಕು. ನಿಮ್ಮ ಜೀವನದ ಅತ್ತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಈ ವ್ಯವಸ್ಥೆ ನಿಮ್ಮ ಬೆನ್ನ ಹಿಂದೆ ಬಿದ್ದಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಮದುವೆಯಾಗುವವರೆಲ್ಲರೂ, ಹುಟ್ಟಿದ ಮಕ್ಕಳೆಲ್ಲರನ್ನೂ ಕಡ್ಡಾಯವಾಗಿ ನೋಂದಾಯಿಸಲೇ ಬೇಕು ಎಂಬ ಕಾನೂನೂ ಇಲ್ಲ, ಹಾಗೆ ಮಾಡದೇ ಇರುವುದರಿಂದಾಗುವ ಪರಿಣಾಮಗಳೂ ಅಷ್ಟೇನು ದೊಡ್ಡದಲ್ಲ. ಆದರೆ ಇಲ್ಲಿ ಹುಟ್ಟುವ ಮಗುವಿಗೆ ಆಸ್ಪತ್ರೆಯವರೇ ಹೆಸರನ್ನು ನೋಂದಾಯಿಸಿ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್ ಅನ್ನು ತೆಗೆದುಕೊಡುತ್ತಾರೆ, ಜೊತೆಗೆ ಜನ್ಮ ಪ್ರಮಾಣ ಪತ್ರವೂ ದೊರಕಿಸಿಕೊಳ್ಳಬೇಕಾದುದು ಅನಿವಾರ್ಯ.

ಕ್ರೆಡಿಟ್ ಕಾರ್ಡ್ ಬಿಲ್ಲ್ ಅನ್ನು ಮೂವತ್ತು ದಿನಗಳ ಒಳಗೆ ಕೊಡದೇ ಹೋದರೆ ದಂಡ ವಿಧಿಸಲಾಗುತ್ತದೆ, ಅವರವರ ಜಾತಕಗಳನ್ನು ಜಾಗರೂಕತೆಯಿಂದ ಕಾಪಾಡಿಕೊಂಡು ಆಗಾಗ್ಗೆ ಅಪ್‌ಡೇಟ್ ಮಾಡುವ ಕ್ರೆಡಿಟ್ ರೇಟಿಂಗ್‌ಗಳನ್ನು ಕಾಯ್ದುಕೊಂಡು ವರದಿ ಒಪ್ಪಿಸುವ ಸಂಸ್ಥೆಗಳಿಗೆ ನಿಮ್ಮ ತಪ್ಪನ್ನು ತೋರಿಸಿ ನಿಮ್ಮ "ಒಳ್ಳೆಯ ದಾಖಲೆಗೆ" ಮಸಿ ಬಳಿಯಲಾಗುತ್ತದೆ. ಮುಂದೆ ಹುಟ್ಟುವ ಲೋನ್‌ಗಳಿಗೆ ಹೆಚ್ಚು ಬಡ್ಡಿ ದರವನ್ನು ಕೊಡಬೇಕಾಗಬಹುದು. ಹಾಗೆಯೇ ನಿಮ್ಮ ಮನೆಗೆ ಬಂದು ಬೀಳುವ ಟ್ರಾಫಿಕ್ ಅಥವಾ ಪಾರ್ಕಿಂಗ್ ವಯಲೇಷನ್ ಟಿಕೇಟುಗಳ ಹಿಂದೆ ಅಥವಾ ಕೆಳಗೆ ನೀವು ಸರಿಯಾದ ಸಮಯಕ್ಕೆ ದಂಡ ಕಟ್ಟದಿದ್ದಲ್ಲಿ ನಿಮ್ಮನ್ನು ಅರೆಷ್ಟು ಮಾಡಬಹುದು ಅಥವಾ ನಿಮ್ಮ ಡ್ರೈವಿಂಗ್ ಪ್ರಿವಿಲೇಜನ್ ತೆಗೆದು ಹಾಕಬಹುದು ಎಂದು ಬರೆದಿರುತ್ತದೆ. ಇವು ಕೇವಲ ಸ್ಯಾಂಪಲ್ಲ್ ಅಷ್ಟೇ - ಈ ಸಾಲಿಗೆ ಸೇರಬೇಕಾದವುಗಳು ಅನೇಕಾನೇಕ ಇವೆ. ಇಂಥ ಒಂದು ವ್ಯವಸ್ಥೆಯಲ್ಲಿ ಯಾರು ತಾನೇ ಸರಿಯಾಗಿ ನಡೆದುಕೊಳ್ಳದೇ ಇರುವುದು ಸಾಧ್ಯ? ಬರೀ ರೂಲ್ಸ್‌ಗಳು ಇದ್ದರಷ್ಟೇ ಸಾಲದು, ಅವುಗಳನ್ನು ಇಂಪ್ಲಿಮೆಂಟ್ ಮಾಡುವ ಶುದ್ಧ ವ್ಯವಸ್ಥೆಯೂ ಇರಬೇಕು ಎನ್ನುವುದನ್ನು ನಾನೂ ಒಂದು ಕಾಲದಲ್ಲಿ ಬೆನ್ನು ತಟ್ಟುತ್ತಿದ್ದೆ, ಆದರೆ ಈಗ ಅದು ಹರ್ಯಾಸ್‌ಮೆಂಟ್ ಆಗಿ ತೋರುತ್ತದೆ.

ಇಲ್ಲಿನ ಒಂದು ದೊಡ್ಡ ಬ್ಯಾಂಕ್ ಒಂದರಲ್ಲಿ ಅವರು ಮಾಡಿದ ತಪ್ಪಿನ ಸಲುವಾಗಿ ನನ್ನ ಯಾವತ್ತೂ ಉಪಯೋಗಿಸದ ಕ್ರೆಡಿಟ್ ಕಾರ್ಡ್ ಒಂದಕ್ಕೆ $1.50 ಚಾರ್ಜ್ ಮಾಡಿಕೊಂಡಿದ್ದರು. ನಾನು ಬ್ಯಾಂಕಿನ ಕಷ್ಟಮರ್ ಸರ್ವೀಸ್‌ಗೆ ಫೋನ್ ಮಾಡಿ ಹತ್ತು-ಹದಿನೈದು ನಿಮಿಷಗಳ ಮಾತುಕಥೆಯ ನಂತರ ಆ ತುದಿಯಲ್ಲಿದ್ದ ಲಲನಾಮಣಿ ’ಆಗಲಿ ಸರ್, ಎಲ್ಲ ಸರಿ ಹೋಗುತ್ತದೆ’ ಎಂದ ಮಾತ್ರಕ್ಕೆ ಅದು ಸರಿ ಎಂದು ನಂಬಿಕೊಂಡು ಸುಮ್ಮನಿದ್ದೆ. ಆದರೆ ಇಪ್ಪತ್ತೈದು ದಿನಗಳ ಬಳಿಕ ನನಗೊಂದು ಬಿಲ್ ಬಂತು, ಅದರಲ್ಲಿ ಬ್ಯಾಲೆನ್ಸ್ $1.50 ಇನ್ನೂ ಹಾಗೇ ಇದೆ! ಇನ್ನೆರಡು ದಿನಗಳಲ್ಲಿ ಕಟ್ಟದಿದ್ದರೆ 148% (no kidding) ಬಡ್ಡಿ ಹಾಕುತ್ತೇವೆ ಎಂಬ ಹೇಳಿಕೆ ಬೇರೆ. ಒಡನೆಯೇ ನನಗೆ ಇನ್ನೇನನ್ನೂ ಮಾಡಲು ತೋಚದೆ, ಕೂಡಲೇ ಲಾಗಿನ್ ಆಗಿ ಒಂದೂವರೆ ಡಾಲರ್ ಅನ್ನು ಕಟ್ಟಿದೆ, ಎಲ್ಲವೂ ಸರಿ ಹೋಯಿತು. ನಾನು ಬ್ಯಾಂಕಿಗೆ ಹೋಗಿ (ಅರ್ಧ ದಿನದ ಕೆಲಸ), ಅಥವಾ ಕಷ್ಟಮರ್ ಸರ್ವೀಸ್ ಅನ್ನು ಮತ್ತೆ ಸಂಪರ್ಕಿಸಿ (ಅರ್ಧ ಘಂಟೆಯ ಕೆಲಸ) ’ಇದು ನಿಮ್ಮದೇ ತಪ್ಪು, ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ’ ಎಂದು ಕೂಗಬಹುದಿತ್ತು. ಆ ಕಡೆಯಲ್ಲಿರುವ ಮತ್ತಿನ್ಯಾವುದೋ ಕಷ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್‌ಗೆ ನನ್ನ ಮೇಲೆ ಕರುಣೆ ಇದೆ ಎಂದುಕೊಳ್ಳಲೇ? ಆಕೆಗೆ ಬೈದರೆ ನಾವೇ ಮೂರ್ಖರು - she has nothing to lose - ನಾವು ಇಲ್ಲಿ ಒಂದು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆಯೇ ವಿನಾ ಆಕೆಯ ವಿರುದ್ಧವಲ್ಲ. ಆಕೆಗೆ ನೀವು ಒರಟಾಗಿ ನಡೆದುಕೊಂಡರೆ ಆಕೆ ಕೆಲಸ ಮಾಡುವುದೇ ಇಲ್ಲ, ಏನು ಮಾಡುತ್ತೀರಿ? (ಹಿಂದೆ ದೊಡ್ಡ ಬ್ಯಾಂಕ್ ಒಂದರಲ್ಲಿ ಹೀಗೆ ನನಗೆ ಅನುಭವವೂ ಆಗಿದೆ, ಅಲ್ಲಿನ ಮ್ಯಾನೇಜರುಗಳು ಅಪಾಲಜಿ ಪತ್ರವನ್ನು ಕಳಿಸುವ ಮಟ್ಟಿಗೆ). So, ಪುರುಸೊತ್ತಿಲ್ಲದ ನಾನು ಇತ್ತೀಚೆಗೆ - pick your battles ಅಂಥಾರಲ್ಲ ಹಾಗೆ ಮೆತ್ತಗಾಗಿ ಹೋಗಿದ್ದೇನೆ. ನನ್ನ ಬಳಿ ಅರ್ಧ ದಿನವಿರಲಿ, ಅರ್ಧ ಘಂಟೆಯೂ ಇಲ್ಲ ಇವರ ವಿರುದ್ಧ ಹೋರಾಡಲು ಅದಕ್ಕೋಸ್ಕರವೇ ಒಂದೂವರೆ ಡಾಲರನ್ನು ದಾನ ಮಾಡಿದ್ದು.

ಇಲ್ಲಿ ಚಿಪ್ಸ್ ಮಾಡಿ ಮಾರುವುದರಿಂದ ಹಿಡಿದು ಸಗಣಿ ಮಾರುವವರ ವರೆಗೆ ಎಲ್ಲರೂ ಒಂದು ಕಾರ್ಪೋರೇಷನ್ನುಗಳು, ಈ ಕಾರ್ಪೋರೇಷನ್ನುಗಳ ಬೆನ್ನೆಲುಬಾಗಿ "ವ್ಯವಸ್ಥೆ"ಗಳಿವೆ, ಪ್ರಾಸೆಸ್ಸುಗಳಿವೆ. ಕಾರ್ಪೋರೇಷನ್ನಿನಲ್ಲಿ ಇಬ್ಬರೇ ಎಂಪ್ಲಾಯಿಗಳು ಇದ್ದರೂ ಅವರು ದುಡ್ಡನ್ನು ಹೀಗೇ ಖರ್ಚು ಮಾಡಬೇಕು, ಬಿಡಬೇಕು ಎಂಬ ಕಟ್ಟಲೆಗಳಿವೆ. ಹೆಚ್ಚು ಬುದ್ಧಿವಂತ ಜನರಿರುವ ಪ್ರಪಂಚದಲ್ಲಿ ಹೆಚ್ಚು-ಹೆಚ್ಚು ಪ್ರಾಸೆಸ್ಸುಗಳು ಹುಟ್ಟಿಕೊಂಡಿವೆ. ವ್ಯವಸ್ಥೆ ದಿನದಿಂದ ದಿನಕ್ಕೆ ಬಹಳೇ ಬದಲಾಗುತ್ತಿದೆ. ಏರ್‍‌ಪೋರ್ಟಿನಲ್ಲಿ ಪ್ರತಿಯೊಬ್ಬರ ಶೂ-ಚಪ್ಪಲಿ ಕಳಚಬೇಕು ಎಂಬ ನಿಯಮ ಇನ್ನೂ ಎರಡು ವರ್ಷ ತುಂಬದ ನನ್ನ ಮಗಳಿಗೂ ಅನ್ವಯವಾಗುತ್ತದೆ. ಎಲ್ಲಿ ಹೋದರೂ ನಿಯಮ, ಕಾನೂನು, ಪ್ರಾಸೆಸ್ಸು, ವ್ಯವಸ್ಥೆ - ಇವೇ ನಮ್ಮನ್ನು ಹೆಚ್ಚು ಸ್ಟ್ರೆಸ್‌ಗೆ ಒಳಪಡಿಸುವುದು ಹಾಗೂ ಅವುಗಳಿಂದ ಬಿಡುಗಡೆ ಎಂಬುದೇ ಇಲ್ಲವೇನೋ ಎಂದು ಪದೇ ಪದೇ ಅನ್ನಿಸುವುದು.

ಹಾಗಂತ ನಾನು ಶಿಲಾಯುಗದ ಬದುಕನ್ನು ಸಮರ್ಪಿಸುವವನಲ್ಲ. ಒಂದು ಕಾಲದಲ್ಲಿ ಬಕಪಕ್ಷಿಯಂತೆ ಕ್ರೆಡಿಟ್ ಕಾರ್ಡುಗಳು ಸಿಗುವುದನ್ನು ಕಾತರದಿಂದ ನೋಡುತ್ತಿದ್ದವನಿಗೆ, ಹಾಗೆ ಸಿಕ್ಕ ಮೊಟ್ಟ ಮೊದಲ ಕಾರ್ಡ್‌ನಲ್ಲಿ ನನ್ನನ್ನು ಊಟಕ್ಕೆ ಕರೆದುಕೊಂಡು ಹೋಗು ಎಂದು ತಾಕೀತು ಮಾಡಿದ ನನ್ನ ರೂಮ್‌ಮೇಟ್ ಒತ್ತಾಯಕ್ಕೆ ಬಾಗಿ ಸಂಭ್ರಮಿಸಿದವನಿಗೆ ಇಂದು ಕ್ರೆಡಿಟ್ಟು ಕಾರ್ಡುಗಳನ್ನು ಉಪಯೋಗಿಸಲು ಮನಸೇ ಬಾರದಾಗಿದೆ. ಅವರು ಕೊಡುವ ಫ್ರೀ ಮೈಲುಗಳಾಗಲೀ, ಡಿವಿಡೆಂಡು ಡಾಲರುಗಳಾಗಲೀ, ಪಾಯಿಂಟುಗಳಾಗಲೀ ಬೇಡವೇ ಬೇಡ ಎನ್ನಿಸಿದೆ. ನನ್ನ ಡೆಬಿಟ್ಟ್ ಕಾರ್ಡ್ ಅನ್ನು ಉಪಯೋಗಿಸಿ ಕಾಲು ಇರುವಷ್ಟೇ ಹಾಸಿಗೆ ಚಾಚಿದರೆ ಸಾಕೆ? ಎಂದು ಕೇಳಿಕೊಂಡು ಹಾಗೇ ಅನುಸರಿಸಿಕೊಂಡು ಬಂದಿದ್ದೇನೆ. ಆದರೆ, ಏಳೆಂಟು ಕ್ರೆಡಿಟ್ ಕಾರ್ಡ್ ಇರುವ ನಾನು ಪ್ರತಿ ತಿಂಗಳಿಗೊಮ್ಮೆ ಇಂಟರ್‌ನೆಟ್ ನಲ್ಲಿ ಅವುಗಳ ಬಿಲ್ ಬ್ಯಾಲೆನ್ಸ್ ಅನ್ನು ಪರೀಕ್ಷಿಸದೇ ಇರುವ ಹಾಗಿಲ್ಲ. ಪೇಪರ್ ಸ್ಟೇಟ್‌ಮೆಂಟ್ ಕಳಿಸಲು ಏರ್ಪಾಟು ಮಾಡಿದರೆ ಪ್ರತಿ ದಿನಕ್ಕೆ ಕಂತೆಗಟ್ಟಲೆ ಬರುವ ಪೋಷ್ಟಲ್ ಮೇಲ್‌ಗಳನ್ನು ಓದುವ ವ್ಯವಧಾನವಿಲ್ಲ, ಹಾಗೆ ಮಾಡುವುದು ಬೇಡವೆಂದರೆ ಆನ್‌ಲೈನ್ ನಲ್ಲಿ ಬಿಲ್ ಬ್ಯಾಲೆನ್ಸ್ ನೋಡದೇ ವಿಧಿ ಇಲ್ಲ. ಒಂದು ತಿಂಗಳು ಅವರೇನಾದರೂ ತಪ್ಪು ಚಾರ್ಜು ಉಜ್ಜಿಕೊಂಡರೂ ಅದರ ಫಲಾನುಭವಿ ನಾನೇ!

ಹೀಗೆ ದಿನೇದಿನೇ ಮನಸ್ಸು ಈ ವ್ಯವಸ್ಥೆಯಿಂದ ದೂರವಾಗ ಬಯಸುತ್ತದೆ, ಯಾವ ವ್ಯವಸ್ಥೆಗೂ ಬಗ್ಗದ ನಮ್ಮೂರು ಮೊದಮೊದಲು ತಡೆಯಲಸಾಧ್ಯವೆಂದೆನಿಸಿದರೂ ಅಲ್ಲಿ ಮಾನಸಿಕವಾಗಿ ನೆಮ್ಮದಿ ಇರುತ್ತದೆ. ಇಲ್ಲಿನ ವ್ಯವಸ್ಥೆ ತರುವ ಭಾಗ್ಯಗಳಲ್ಲಿ ರಸ್ತೆಯಲ್ಲಿ ಅಪಘಾತ-ಅವಘಡ ಸಂಭವಿಸಿದರೆ ಸಿಗುವ ತುರ್ತು ಚಿಕಿತ್ಸೆಯೂ ಒಂದು, ಆದರೆ ಹಾಗೆ ಎಂದೋ ಆಗಬಹುದಾದಂತಹ ಅಪಘಾತದ ಫಲಾನುಭವಕ್ಕೆ ಇಡೀ ಜೀವನವನ್ನೇ ಸ್ಟ್ರೆಸ್‌ನಲ್ಲಿ ಕಳೆಯಲಾಗುತ್ತದೆಯೇ? ಅಥವಾ ’ಸಾಯೋ(ರಿ)ದಿದ್ದರೆ ಎಲ್ಲಿದ್ದರೇನು?’ ಎಂದು ಕೇಳಿಕೊಳ್ಳುವ ನಮ್ಮೂರಿನ ಜಾಣ್ಣುಡಿ ಅಪ್ಯಾಯಮಾನವಾಗುತ್ತದೆಯೇ?

8 comments:

Keshav Kulkarni said...

ಸತೀಶ್,
ತುಂಬ ಚೆನ್ನಾಗಿ ಬರೆದಿದ್ದೀರಿ! ನಾನು ಯು.ಕೆ ಗೆ ಬಂದು ಮೂರೂ ವರ್ಷಗಳಾಗುತ್ತ ಬಂತು, ಈ ಪಾಶ್ಚಿಮಾತ್ಯ ದೇಶಗಳ ವ್ಯವಸ್ಥೆಯ ಬಗ್ಗೆ ನಿಮಗನಿಸಿರುವಂತೆ ನಿಮಿಷ ನಿಮಿಷಕ್ಕೂ ಅನಿಸುತ್ತದೆ. ಕೂತರೆ, ನಿಂತರೆ ನಮ್ಮನ್ನು ಗುರಾಯಿಸುವ CCTV ಗಳು; ನಮ್ಮ ಬ್ಯಾಂಕ್ - ಕ್ರೆಡಿಟ್ ಕಾರ್ಡ್ ಗಳ ದಾಖಲೆಗಳನ್ನೆಲ್ಲ ಪ್ರತಿ ಸಾರಿ ಚೆಕ್ ಮಾಡುವ ಬ್ಯುಸಿನೆಸ್ ಜನರು; ಆಫೀಸಿನಲ್ಲಿ ಉಪಯೋಗಿಸುವ ನಮ್ಮ ಕಂಪ್ಯೂಟರ್ ಗಳನ್ನೂ ಜಾಲಾಡಿಸುವ ಐಟಿ; -- ತುಂಬ ಸೂಕ್ಶ್ಮವಾಗಿ ಅನಿವಾಸಿ ತುಮುಲಗಳನ್ನು ಬರೆದಿದ್ದೀರಿ.
ಕೇಶವ
www.kannada-nudi.blospot.com

Manoj said...

ಸತೀಶ್, ಚೆನ್ನಾಗಿ ಬರ್ದಿದೀರಾ. ನಾನು ukನಲ್ಲಿ ಸ್ವಲ್ಪ ತಿಂಗಳು ಇದ್ದೆ, ಈ ತರ torture ಇರ್ಲಿಲ್ಲ ಅಲ್ಲಿ. ಇಲ್ಲಿ ಇದೆಂತಾ torture ಸರ್, ಆಗ್ಲೆ ಸಾಕಾಗಿದೆ. Running errands ಅಲ್ಲೆ ಯೆಷ್ಟೊ ಸಮಯ ಹಾಳಾಗ್ತಾ ಇದೆ. ಇರೊ busy schedule ಅಲ್ಲಿ ಇದೆಲ್ಲ ಪ್ರೊಸೆಸ್‍ಗಳನ್ನ ಸಂಭಾಳಿಸೊದು ಭಾರಿ ಕಷ್ಟ. ಮೊದ್ಲು ಬಂದಾಗ ಮನೆ ಬಾಡಿಗೆ ತಗೊಳೊಕ್ ಹೋದ್ರೆ ಕೊಡಲ್ಲ ಅಂದ್ಬಿಟ್ರು, ನನ್ನ ಹತ್ರ ಆವಾಗ ಕ್ರೆಡಿಟ್ ಕಾರ್ಡ್ ಇರ್ಲಿಲ್ಲ, ಸೊ ಕ್ರೆಡಿಟ್ ಹಿಸ್ಟರಿ ಸಹ ಇರ್ಲಿಲ್ಲ, ಕೊನೆಗೆ ನ್ಯೂಜೆರ್ಸಿ ಅಲ್ಲಿ ಇರೊ ನನ್ನ ಮ್ಯಾನೇಜರ್ ಅವ್ನ ಕ್ರೆಡಿಟ್ ಹಿಸ್ಟರಿ ಉಪಯೋಗಿಸಿ co resident ಅಂತ ಮಾಡಿ ನಂಗೆ ಬಾಡಿಗೆ ಸಿಗೊ ಹಾಗೆ ಮಾಡ್ದ್ರು. ಸಾಕಾಗ್ ಹೋಗಿತ್ತು ಆ ಟೈಮಲ್ಲಿ.
ಈಗ್ಲು ಇನ್ನು pending taskಗಳು ಬೇಕಾದಷ್ಟಿದೆ :(

S.K.Math said...

"pick your battles ಅಂಥಾರಲ್ಲ ಹಾಗೆ" - "Life is a war to be won by picking battles which NOT to fight"

-Math

ksnayak20 said...

ನೀವು ಅಲ್ಲಿನ ವ್ಯವಸ್ಥೆಯ ಬಗ್ಗೆ ಬೇಸರ ಮಾಡಿಕೊಂಡಿದ್ದರೆ ನಾವು ಇಲ್ಲಿ ವ್ಯವಸ್ಥೆಯೇ ಇಲ್ಲದಿರುವ ಬಗ್ಗೆ ಚಿಂತಿತರಾಗಿದ್ದೇವೆ. ಏನು ಮಾಡುವುದು? ಪಾಶ್ಚಿಮಾತ್ಯ ದೇಶಗಳು ತೈಲ- ಸಂಪದ್ಭರಿತವಾದ ಕೊಲ್ಲಿ ದೇಶಗಳನ್ನು ತಮ್ಮ ಕಡೆ ಮಾಡಲು ಹೋಗಿ ಮುಸ್ಲಿಮ ಜನಾಂಗದ ದ್ವೇಷವನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಅನೇಕ ತೊಡಕುಗಳು ಅನಿಸುತ್ತೆ. ಅಲ್ಲದೇ ಅವರದೇ ಆದ ಆರ್ಥಿಕ ಸಮಸ್ಯೆಗಳು.....
ನಾವಾದರೋ ಈ ಭೃಷ್ಟಾಚಾರದ ಸಮಸ್ಯೆಯಿಂದ ನಾವು ಸೋತು ಹಣ್ಣಾಗಿದ್ದೇವೆ. ಪ್ರತಿಯೊಂದು ಕೆಲಸವಾಗಬೇಕಾದರೆ ಲಂಚ... ಕಾನೂನನ್ನು ಪಾಲಿಸಬೇಕಾದ ಅರಕ್ಷಕರೇ ಕಾನೂನನ್ನು ಮುರಿಯುತ್ತಾರೆ. ಅಧಿಕಾರಿಗಳು ಎಲ್ಲವನ್ನೂ ತಮ್ಮದೇ ರೀತಿಯಲ್ಲಿ ನಡೆಸುತ್ತಾರೆ. ಇಲ್ಲಿನ ರಸ್ತೆಗಳು ನಮ್ಮೆಲ್ಲ ಕೆಲಸವನ್ನು ವಿಳಂಬಿಸುತ್ತವೆ.....ಇಲ್ಲಿನ ಹೊಂಡಗಳಲ್ಲಿ ಹಾದು ಹೋದವರಿಗೇ ಗೊತ್ತು ಆ ಕಷ್ಟ!
ಇನ್ನು ಬ್ಯಾಂಕಗಳು ಇಲ್ಲೂ ಹಾಗೆ ತೊಂದರೆ ಕೊಡುತ್ತವೆ.ಕ್ರೆಡಿಟ್ ಕಾರ್ಡ್ ಬೇಡವೆಂದರೂ ಪದೇ ಪದೇ ಕಾರ್ಡ್ ಕೊಡುತ್ತಾರೆ, ಅಲ್ಲದೇ ಉಪಯೋಗಿಸದ ಕಾರ್ಡಿಗೆ ಬಡ್ಡಿ ಹಾಕುತ್ತಾರೆ... ಇದನ್ನು ಸರಿ ಮಾಡಲು ಎಷ್ಟು ಫೋನು, ಎಷ್ಟು ತಲೆ ಬಿಸಿ...
ನನಗೂ ನನ್ನ ಪತಿಗೂ ಈ ಕ್ರೆಡಿಟ್ ಕಾರ್ಡ್ ಎಂದರೆ ಆಗುದಿಲ್ಲ... ಸುಮ್ಮನೆ ಸಾಲದಲ್ಲಿ ತೆಗೆದುಕೊಂಡು ಮಜ ಮಾಡುವುದಕ್ಕಿಂತ ಹಾಸಿಗೆ ಇದ್ದಷ್ಟು ಕಾಲು ಚಾಚುತ್ತಿರುವ ನಮ್ಮಂತವರಿಗೆ ಇದೆಲ್ಲಾಹೇಳಿಸಿದಲ್ಲ... ಆದರೂ ಪ್ರತೀನಿತ್ಯ ಒಂದಲ್ಲ ಒಂದು ಬ್ಯಾಂಕಿನಿಂದ ಫೋನು! ಕೆಲವರಂತೂ ಕೇಳದೇ ಕಾರ್ಡನ್ನು ದಯಪಾಲಿಸಿದ್ದಾರೆ..ಅದನ್ನು ನಾವು ಹರಿದು ಹಾಕಿದ್ದೇವೆ.
ಮಾನಸಿಕ ನೆಮ್ಮದಿ! ಇಲ್ಲಿ ನೀವು ಮಾನಸಿಕ ನೆಮ್ಮದಿ ಹುಡುಕಿತ್ತಿರಿ? ಎಲ್ಲಿಂದ? ಇಲ್ಲಾದರೂ ಅಘಾತವಾದರೆ... ಸರಕಾರಗಳೇನೋ ನಿಮಗೆ ಪರಿಹಾರ ಘೋಷಿಸುತ್ತವೆ.ಸರಿ....ಆದರೆ ಅದು ಬರುವುದು ಯಾವಾಗಲೋ?
ಹಾ.. ನೀವು ಅನುಭವಿಸುವ ಮಾನಸಿಕ ತೆಂದರೆ ನಾವೇನೋ ಅನುಕಂಪ ತೋರಿಸ ಬಹುದು.. ಅಲ್ಲದೇ ಪರಿಹಾರವಾಗಿ ನೀ ವು ಇಲ್ಲೇ ಏಕೆ ಬರಬಾರದು? ಎಂದೂ ಕೇಳಬಹುದು.... ಆದರೆ ಬಹುಶಃ ನೀವೆಲ್ಲಾ ಅಲ್ಲಿನ ವ್ಯವಸ್ಥೆಗೆ ಒಗ್ಗಿ ಹೋಗಿರಬಹುದು( ಬೇರೆ ದಾರಿಯಿಲ್ಲ)..ನಾವೂ ಹಾಗೆ ಇಲ್ಲಿನ.....

sritri said...

ನನಗೇನೋ ಅಲ್ಲಿಯ ಅವ್ಯವಸ್ಥೆಗಿಂತ ಇಲ್ಲಿಯ ವ್ಯವ್ಯಸ್ಥೆ ಎಷ್ಟೋ ಮೇಲೆನ್ನಿಸುತ್ತದೆ.(ಹಾಗಿದ್ದೂ ನಾನೂ ಅಲ್ಲೇ ಹೋಗಿರಲು ಬಯಸುತ್ತೇನೆ, ಆ ಮಾತು ಬೇರೆ) ಇಲ್ಲಿ ಹೋರಾಟ ನಡೆಸಲು ಕಣ್ಣೆದುರಿಗೆ ಒಬ್ಬ ವೈರಿಯಾದರೂ ಕಾಣುತ್ತಿರುತ್ತಾನೆ. ಅಲ್ಲಿ ಇಡೀ ವ್ಯವಸ್ಥೆಯೇ ಅಗೋಚರವಾಗಿ ಎದುರು ನಿಂತಿರುತ್ತದೆ. ಕುರಿಗಳು ಮಾತ್ರ ಎಲ್ಲೆಡೆಗೂ ನಾವೇ! :)

ಅಲ್ಲಿಯ ಸರಕಾರಿ ಕಚೇರಿಗಳಲ್ಲಿ ಸುಲಭವಾಗಿ ಕೆಲಸ ಮಾಡಿಸಿಕೊಳ್ಳುವುದು (ನಿಮ್ಮಂಥ ?:))ಚಾಲಾಕಿಗಳಿಗೆ ಮಾತ್ರ ಸಾಧ್ಯ. ಲಂಚ - ಯಾರಿಗೆ? - ಎಷ್ಟು? -ಹೇಗೆ ? - ಇಂತಹ ಸುಲಭ ಕೈಪಿಡಿಯನ್ನು ಯಾರಾದರೂ ತಯಾರಿಸಿಟ್ಟರೆ ಆಗ ಅನುಕೂಲವಾಗಬಹುದು.

Satish said...

’ಕುರಿ’ ಲೇಖನಕ್ಕೆ ತಮ್ಮ ಅನಿಸಿಕೆಗಳನ್ನು ಬರೆದವರಿಗೆ, ಫೋನ್ ಮಾಡಿ, ಇಮೇಲ್ ಬರೆದು ತಮ್ಮ ಸುಖ ದುಃಖಗಳನ್ನೆಲ್ಲಾ ಹಂಚಿಕೊಂಡವರಿಗೆ ನನ್ನ ನಮನಗಳು.

ಕೇಶವ್,
ನಿಮ್ಮ ಯುಕೆ ಅನುಭವಗಳನ್ನು ಬರೆಯಿರಿ, ಅಲ್ಲಿ ಮೂವತ್ತು ವರ್ಷ ಬೆಂದಿರೋ ನಿಮ್ಮ ಅನುಭವಗಳನ್ನು ಎದಿರು ನೋಡುತ್ತಿರುತ್ತೇನೆ.

ಮನೋಜ್,
ಈ ಕಂಪ್ಯೂಟರ್ ವ್ಯವಸ್ಥೆ ಬಹಳ ಕೆಟ್ಟದು ಸಾರ್. ನಾನು ಮೊಟ್ಟ ಮೊದಲು ಕಂಪ್ಯೂಟರ್ ಬಗ್ಗೆ ಕಲಿತಾಗ ಅದು ಅನುಭವದಿಂದ ಏನನ್ನೂ ಕಲಿಯುವುದಿಲ್ಲ ಎಂದು ಕೇಳಿ ಬಹಳಷ್ಟು ಬೇಸರ ಮಾಡಿಕೊಂಡಿದ್ದೆ. ಪೆಂಡಿಂಗ್ ಟಾಸ್ಕುಗಳಲ್ಲಿ ಬಿಲ್ ಕಟ್ಟೋದನ್ನ ಮಾತ್ರ ಮರೆತೀರಿ, ಜೋಕೆ!

ಮಠ್,
ಸರ್ರ, ಯಾಕ್ರೀ ವ್ಯವಸ್ಥೀ ಬಗ್ಗೇ ಬರದ್ರ ನೀವ್ ನಿಮ್ಮ ಆಡ್ ಭಾಷೇ ಬಿಟ್ಟೇ ಹೋದಂಗ್ ಇದ್ದೀರಲ್ಲಾ, ನಾವೆಲ್ಲರ ಅಮೇರಿಕದ ಸಿಕ್ರೆ ನಿಮ್ ಕನ್ನಡದಾಗ ನಮ್ಮನ್ನ್ ಮಾತಾಡ್ಸ್ರಿ ಮತ್ತ!

ಶೀಲಾ,
ಭಾರತೀಯ ಬ್ಯಾಂಕುಗಳನ್ನು, ಕ್ರೆಡಿಟ್ಟ್ ಕಾರ್ಡು ಸಂಸ್ಥೆಗಳನ್ನೂ ಮಟ್ಟ ಹಾಕೋ ಒಂದು ಕನ್ಸ್ಯೂಮರ್ ವ್ಯವಸ್ಥೆ ಬರುತ್ತೆ ಕಾಯ್ತಾ ಇರಿ ಮುಂದೆ. ಈಗ ನಾವೂ-ನೀವು ಮಾಡಬೇಕಾದ್ದು ಇಷ್ಟೆ, ನಮ್ಮ ಪರ್ಸನಲ್ ಇನ್‌ಫರ್‍ಮೇಷನ್ ಸುಲಭವಾಗಿ ಬಿಟ್ಟು ಕೊಡಬಾರ್ದು, ಜೊತೆಗೆ ವ್ಯವಹಾರ ವಹಿವಾಟುಗಳನ್ನು ಆದಷ್ಟು ಕಡಿಮೆ ಸಂಸ್ಥೆಗಳೊಂದಿಗೆ ಇಟ್ಟುಕೊಳ್ಳಬೇಕು ಅಷ್ಟೇ.

ತ್ರಿವೇಣಿ,
ನಿಮ್ಮ ಮಾತು ಸತ್ಯ, ಎಲ್ಲಿ ಹೋದ್ರೂ ನಾವೇ ಬಲಿಪಶುಗಳು. ನಾವೆಲ್ಲಿ ಚಾಲಾಕಿಗಳು ಮೇಡಮ್, ನಾವು ರಂಗೋಲಿ ಕೆಳಗೆ ನುಸುದ್ರೆ ವ್ಯವಸ್ಥೆ ಇನ್ನೆಲ್ಲೋ ನುಸಿಯುತ್ತೆ. ನೋಡ್ತಾ ಇರಿ, ಇವತ್ತಲ್ಲಾ ನಾಳೆ ’ಅಂತರಂಗ’ದಲ್ಲಿ ವ್ಯವಸ್ಥೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ ಅನ್ನೋ ಸರಣೀ ಲೇಖನ ಬಂದ್ರೂ ಬರಬಹುದು.

Anonymous said...

Hello, there. This is a quick summary of the goodness of buying wow gold from Purchase wow gold, Purchase wow power level, the World of Warcraft network of trust Purchase wow power leveling, Purchase warcraft power leveling and understanding for WoW PL'ers Purchase warcraft gold. Come to here for Purchase wow leveling. If you are in the mood for Final Fantasy XI gil, then please go to Purchase FFXI Gil, Purchase Buy FFXI Gil, Purchase FFXI Gil Sale, Purchase Cheapest FFXI Gil, Purchase Buy Cheap FFXI Gil, Purchase final Fantasy XI Gil, Purchase Cheap FFXI Gil.

Anonymous said...

Conan Barbarian
Conan the Barbarian Wallpapers
Age of Conan Classes


Game multiplayer online rpg
multiplayer online game like runescape
free online multiplayer game

age of conan gold
aoc gold

Age of Conan Torrent
Age of Conan Trial
Age of Conan Free Trial

Hibernia
Midgard
Albion

DAOC 3 Accounts
DAOC How to Run 3 Accounts
DAOC Triple Log

daoc plat
daoc platinum
wow gold

DAOC Emissary Broken Visions
DAOC Champ Exp Quest

DAOC Artifacts
DAOC templates
Dark Ages of Camelot

EQ2 Plat
EQ2 Gold
EverQuest ii platinum Venekor

Sea Salt EQ2
EQ2 Tradeskill Seasalt
EQ2 recipie
Tier 8 EQ2 Food
Tier 9 EQ2 Food

Fading memories Everquest
Mentor everquest
eq2 guild permafrost

free warcraft servers
world of warcraft private servers

world of warcraft gold exploit
making wow gold
world of warcraft easy gold
gold wow fastest guide
free world of warcraft gold farming guides
world warcraft gold farming

wow pvp
wow arena season 4
wow s3 arena power leveling service