ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?
’ಎಲ್ಲಾ ವರ್ಚುವಲ್ ಬದುಕು - ಛೇ!’ ಎಂದು ನನಗೇ ಕೇಳುವ ಹಾಗೆ ನಾನೇ ಹೇಳಿಕೊಂಡೆ...ನಾವು ಮಾತನಾಡೋದು ಯಾವಾಗಲೂ ಇನ್ನೊಬ್ಬರ ಜೊತೆಗೇ ಎಂದು ಏನಾದರೂ ಕಾನೂನು ಇದೆಯೇ, ಮೈಥಿಲಿ ಶರಣ್ ಗುಪ್ತರ ಪಂಚವಟಿಯ ಲಕ್ಷಣ ತನ್ನಷ್ಟಕ್ಕೇ ತಾನು ಮಾತನಾಡಿಕೊಳ್ಳುತ್ತಿದ್ದನಂತೆ - ಹಾಗೂ ಈ ಜಗತ್ತಿನ ಹುಚ್ಚರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಾರೆ ಎನ್ನೋದನ್ನ ನಿಮ್ಹಾನ್ಸ್ನ ಹುಚ್ಚರ ವಿಭಾಗದಲ್ಲಿ ಯಾವತ್ತೋ ನೋಡಿ ನಕ್ಕು ಸುಮ್ಮನಾಗಿದ್ದೇನೆ, ಅಲ್ಲಿ ನಾನೇಕೆ ಹೋಗಿದ್ದೆ ಅನ್ನೋದು ದೊಡ್ಡ ಕಥೆ, ಇನ್ನೊಂದು ದಿನಕ್ಕಿರಲಿ.
ಬ್ಯಾಂಕಿನವರು ಮನಸ್ಸಿಗೆ ಬಂದಂತೆ ಏನೇನೋ ಚಾರ್ಜ್ ಮಾಡಿಕೊಂಡು ನೂರಾ ಎಂಭತ್ತು ಡಾಲರ್ರುಗಳನ್ನು ನನ್ನ ಕ್ರೆಡಿಟ್ ಕಾರ್ಡಿನ ಅಕೌಂಟಿನಲ್ಲಿ ಉಜ್ಜಿಕೊಂಡಿದ್ದನ್ನು ನೋಡಿ ಮೈ ಉರಿದು ಹೋಯಿತು. ಕೂಡಲೇ ಕಷ್ಟಮರ್ ಸರ್ವೀಸ್ ವಿಭಾಗಕ್ಕೆ ಫೋನಾಯಿಸಿ ಕೇಳಿದರೆ ಆ ಕಡೆಯಿಂದ ಕೇಳಿಸಿದ ಸ್ವರದಲ್ಲಿ ಯಾವ ಕಳಕಳಿಯಾಗಲಿ, ಕಕ್ಕುಲತೆಯಾಗಲೀ ಇರಲಿಲ್ಲ - ಏಕಿರಬೇಕು? ಎಲ್ಲವೂ ಕಂಪ್ಯೂಟರ್ ನಡೆಸಿದಂತೆ ನಡೆಯುವ ಬಿಸಿನೆಸ್ ರೂಲ್ಸ್ಗಳು, ಅವರೋ ನಮ್ಮಂಥವರ ಸಿಟ್ಟಿಗೆ ಆಹಾರವಾಗಬೇಕಾಗಿ ಬಂದ ಬಲಿಪಶುಗಳು, ಅದೂ ಕೇವಲ ನಮ್ಮ ಮಾತಿಗೆ ಮಾತ್ರ ಸಿಕ್ಕುವ ಹಾಗೆ ಅದ್ಯಾವುದೋ ಪ್ರಪಂಚದ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ...ಇಂದಿನ ವರ್ಚುವಲ್ ಪ್ರಪಂಚದಲ್ಲಿ ನಾನು ಭಾರತದ ನಮ್ಮೂರಿನ ಪಕ್ಕದ ಊರಿನ ಹುಡುಗ/ಹುಡುಗಿಯೊಂದಿಗೆ ಮಾತನಾಡುತ್ತಿದ್ದರೂ ಅವರೂ ಬೇರೆ, ನಾವೂ ಬೇರೆ. ಸಿಟ್ಟಿನಲ್ಲಿ ಯಾರು ಏನು ಸಾಧಿಸಿದ್ದಾರೆ ಹೇಳಿ? ಎಲ್ಲವನ್ನೂ ನಯವಾಗಿ ವಿವರಿಸಿದೆ, ನೂರಾ ಎಂಭತ್ತು ಡಾಲರುಗಳನ್ನು ತಪ್ಪಾಗಿ ಚಾರ್ಜ್ ಮಾಡಿದ್ದೀರಿ, ಹಿಂತಿರುಗಿಸಿ ಎಂದು ಕೇಳಿಕೊಂಡೆ. ಹತ್ತು ನಿಮಿಷ ಕಥೆ ಕೇಳಿದ ಚೆಲುವೆ ಮರುಕಪಟ್ಟವಳಂತೆ ಕಂಡುಬಂದರೂ, ’ಕ್ಷಮಿಸಿ, ಚಾರ್ಜ್ ಅನ್ನು ಹಿಂತಿರುಗಿಸುವ ಅಧಿಕಾರ ನನಗಿಲ್ಲ, ಮತ್ತೊಬ್ಬರಿಗೆ ಟ್ರಾನ್ಸ್ಫರ್ ಮಾಡುತ್ತೇನೆ...’ ಎಂದು ಕರೆಯನ್ನು ಇನ್ನೊಬ್ಬರಿಗೆ ಟ್ರಾನ್ಸ್ಫರ್ ಮಾಡಿದಳು. ಆಗ ಹೊಳೆಯಿತು, ನನ್ನ ತಾಳ್ಮೆ ಅಮೇರಿಕಕ್ಕೆ ಬಂದ ಮೇಲೆ ಏಕೆ ಹೆಚ್ಚಾಗಿದೆ ಎಂಬುದಾಗಿ! ಇಷ್ಟು ಹೊತ್ತು ಎಲ್ಲವನ್ನು ಹತ್ತು ನಿಮಿಷಗಳ ಕಾಲ ವಿಷದ ಪಡಿಸಿದ ಮೇಲೆ ಮತ್ತೆ ಅದೇ ರಾಗವನ್ನು ಇನ್ನೊಬ್ಬರ ಮುಂದೆ ಹಾಡಬೇಕಾಗಿ ಬಂದುದು. ಮತ್ತೆ ಆಲಾಪನೆಯೊಂದಿಗೆ ಶುರುಮಾಡಿದೆ, ಈ ಚೆಲುವೆ, ನಡುನಡುವೆ ’ಹ್ಞೂ...’ ಎನ್ನುತ್ತಿದ್ದಳಾದರೂ ಆಕೆ ನನ್ನ ಕಥೆಯನ್ನು ಕೇಳುತ್ತಿದ್ದ ಬಗ್ಗೆ, ನನ್ನ ವಿಚಾರದಲ್ಲಿ ಕಳಕಳಿಯ ವಿಶ್ವಾಸ ತೋರುತ್ತಿರುವುದರ ಬಗ್ಗೆ ಯಾವುದೇ ನಂಬಿಕೆಯೂ ನನಗಿರಲಿಲ್ಲವಾದ್ದರಿಂದ ನನ್ನ ಧ್ವನಿಯಲ್ಲಿ ಯಾವುದೇ ಭಾವೋದ್ವೇಗವೂ ಕಾಣಿಸಿಕೊಳ್ಳಲಿಲ್ಲ. ಅದರ ಬದಲಿಗೆ ಇದೇ ರೀತಿ ಹತ್ತು ಹದಿನೈದು ಜನರ ಮುಂದೆ ನನ್ನ ಕಥೆಯನ್ನು ತೋಡಿಕೊಂಡು, ಹತ್ತು ಇ-ಮೇಲ್ಗಳನ್ನು ಬರೆದು ನನ್ನ ತತ್ವವನ್ನು ಸಾಧಿಸಿಕೊಳ್ಳುವುದರ ಬಗ್ಗೆ ಮನಸ್ಸು ಆಲೋಚಿಸಿಕೊಂಡು ಮುಂದೆ ಬರಬಹುದಾದ ಕಷ್ಟಗಳನ್ನು ನೆನೆದು ಸಂಯಮದಿಂದಿತ್ತು. ತತ್ವದ ವಿಚಾರಕ್ಕೆ ಬಂತೆಂದರೆ, ಅದೂ ನನ್ನಂಥ ಮೂರ್ಖರ ವಿಚಾರದಲ್ಲಿ ಹಣದ ಸಂಖ್ಯೆಗೆ ಯಾವುದೇ ಮಹತ್ವವಿರದು, ಏನಾದರೂ ಮಾಡಿ ನನ್ನದನ್ನು ಸಾಧಿಸಿಕೊಂಡು ಅವರು ನನ್ನ ಹಣವನ್ನು, ಅದೂ ತಪ್ಪಾಗಿ ಚಾರ್ಜ್ ಮಾಡಿದ ಹಣವನ್ನು ಹಿಂತಿರುಗಿಸಬೇಕು. ಅಷ್ಟೇ! (ಈ ತತ್ವದ ಕುದುರೆ ಸವಾರಿ, ನನ್ನ ಬಲವಾದ ಅಂಶವೆನ್ನುವುದಕ್ಕಿಂತಲೂ, ನನ್ನ ವೀಕ್ನೆಸ್ ಎಂದರೇ ಸರಿ.)
ಸದ್ಯ, ಎರಡನೇ ಬಾರಿ ಕಥೆಯನ್ನು ಹೇಳುವಲ್ಲಿನ ಆರ್ತನಾದಕ್ಕೇ ಈ ಚೆಲುವೆ ಕರಗಿದಳು ಎಂದು ಕಾಣುತ್ತೆ...ನನ್ನ ಹಣವನ್ನು ಹಿಂತಿರುಗಿಸುತ್ತೇನೆ, ಎಂದು ಭರವಸೆಯನ್ನು ನೀಡಿಯೇ ಬಿಟ್ಟಳು...ಅಬ್ಬಾ, ದೊಡ್ಡದೊಂದು ಮೋಡ ಕರಗಿ ಮಳೆ ಸುರಿದು ಮತ್ತೆ ಬೆಳಗು ಬಂದಂತಾಯಿತು.
ಆದರೆ, ಈ ವರ್ಚುವಲ್ ಪ್ರಪಂಚದ ಯಾರಿಗೂ ಕಾಣದೇ ನಡೆದ, ನಡೆಯುವ ಟ್ರಾನ್ಸಾಕ್ಷನ್ನುಗಳಿಗಾಗಲೀ, ಸಂಭಾಷಣೆಗಳಿಗಾಗಲಿ ಅವುಗಳ ಪರಿಣಾಮವೇನೂ ತಟ್ಟದು. ಬರೀ ಸೋಮವಾರದಿಂದ-ಶುಕ್ರವಾರದವರೆಗೆ ಮುಂಜಾನೆ ಒಂಭತ್ತರಿಂದ ಸಂಜೆ ಐದರವರೆಗೆ ಗ್ರಾಹಕರ ಕಷ್ಟಗಳನ್ನು ಅರಿಯುವಂತೆ ನಟಿಸುವ ಲಲನಾಮಣಿಗಳನ್ನು ನಾನು ನನ್ನ ಆಫೀಸಿನ ಸಮಯದಲ್ಲೇ ಮಾತನಾಡಿಸಬೇಕು. ಅದರಿಂದ ಅವರ ಕೆಲಸ ನಡೆಯಿತು, ನನ್ನ ವೈಯುಕ್ತಿಕ ಕೆಲಸ ಪೂರೈಸಿತು. ಆದರೆ ಹನ್ನೆರೆಡು ಘಂಟೆಗೆ ತಯಾರಾಗಬೇಕಾಗಿದ್ದ ವರದಿ ’ತಯಾರಾಯ್ತಾ?’ ಎಂದು ಒಂದು ಘಂಟೆ ಮೊದಲೇ ಕೇಳುವ ಬಾಸಿಗೆ ಏನು ಹೇಳಲಿ? ಯಾರೋ ನೆಟ್ಟು ಬೆಳೆಸಿದ ಬಿಸಿನೆಸ್ ರೂಲ್ಸ್ಗಳಿಗೆ ಆಹಾರವಾಗಬೇಕಾಗಿ ಬಂದ ಕ್ಯಾಪಿಟಲ್ ಪ್ರಪಂಚದ ಸರಕುಗಳಿಗೆ ನೊಂದ ನನ್ನ ಅರ್ಧ ಘಂಟೆ ಸಮಯವನ್ನು ಹಿಂತಿರುಗಿಸುವವರಾರು? ಕ್ಯಾಪಿಟಲ್ ಪ್ರಪಂಚದ ಆರೋಪಗಳಿಗೆ ನೀವು ತಕ್ಕನಾಗಿ ಅಥವಾ ಪ್ರತಿಯಾಗಿ ಧ್ವನಿಯನ್ನು ಹೊರಡಿಸದೇ ಹೋದಲ್ಲಿ ನಿಮ್ಮ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಯೂನಿವರ್ಸಲ್ ಒಪ್ಪಂದವನ್ನು ಜಗತ್ತಿಗೆ ಹೇಳಿಕೊಟ್ಟವರು ಯಾರು? ನನ್ನ ಅರ್ಧ ಘಂಟೆ ಹಾಳಾಗಿ ಹೋಯಿತು, ಮನಸ್ಸು ನೊಂದಿತು, ಯಾರಿಗೂ ಬೇಡದ, ಕಂಪನಿಗಳಿಗೆ ಬೇಕಾದ ನೂರಾ ಎಂಭತ್ತು ಡಾಲರ್ ಅನ್ನು ’ಉಳಿಸಿದೆ’ ಎಂದು ಹೇಳುವಂತೆಯೂ ಇಲ್ಲದಂತಾಗಿ ಹೋಯಿತು...ಹೇ ವರ್ಚುವಲ್ ಪ್ರಪಂಚವೇ, ಏನು ನಿನ್ನ ಲೀಲೆ?
***
ಕ್ಯಾಪಿಟಲ್ ಪ್ರಪಂಚದ ದೊಡ್ಡ ಕಂಪನಿಯ ಏಣಿಯ ಕಣ್ಣುಗಳಲ್ಲಿ ಗೋಡೆಗೆ ಬಲವಾಗಿ ಒರಗಿಕೊಂಡಿರುವ ನನ್ನಂತಹವರ ಸಹೋದ್ಯೋಗಿಗಳನ್ನು ಬಿಟ್ಟು ಬೇರೆ ಬದುಕೇನಿದೆ? ಎಂದು ಬಲವಾದ ಯೋಚನೆ ಬಿಸಿಲು ಮಳೆಯಲ್ಲಿ ಹುಟ್ಟುವ ಕಾಮನಬಿಲ್ಲಿನಂತೆ ಅದ್ಯಾವುದೋ ಮನದ ಮೂಲೆಯಲ್ಲಿ ಎದ್ದು ನಿಂತಿತು. ಆಫೀಸಿನ ಬದುಕಿನ ಹೊರತಾಗಿ ನನ್ನ ಕೈಬೆರಳುಗಳಲ್ಲಿ ಎಣಿಸಬಹುದಾದಷ್ಟೇ ಸಂಬಂಧಗಳು, ಕೆಲವು ಇನ್ನೂ ಪೂರ್ಣ ಹೆಸರು ಗೊತ್ತಿರದವು, ಇನ್ನು ಕೆಲವು ಹೆಸರು ಗೊತ್ತಿದ್ದರೂ ಮುಖ ಪರಿಚಯವಿಲ್ಲದವು. ಆಗಾಗ್ಗೆ ವರ್ಚುವಲ್ ಪ್ರಪಂಚದ ಹರಿಕಾರರಂತೆ ಸಂದೇಶಗಳ ರೂಪದಲ್ಲಿ ಇನ್ಸ್ಟಂಟ್ ಮೆಸ್ಸೇಜುಗಳಾಗಿ ಬಂದು ಕಾಡುವವು. ನನ್ನ ಸ್ಪಂದನ, ಸಹಪಯಣವೇನಿದ್ದರೂ ಇಂಥವುಗಳ ಕೋರಿಕೆಗಳನ್ನು ಪೂರೈಸುವಲ್ಲಿ ಮಾತ್ರ ಸೀಮಿತವಾಗಿ ಹೋಗಿರುವುದೇ ಹೆಚ್ಚು. ನಿಮಗೆಲ್ಲರಿಗೂ ಆಗುವಂತೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಮದುವೆಯಾಗಲೀ, ಆತ್ಮೀಯ ಸ್ನೇಹಿತನ ಕಷ್ಟನಷ್ಟಗಳಿಗೆ ಸ್ಪಂದಿಸುವ ಧಾರ್ಮಿಕತೆಯಾಗಲೀ ಅದರಲ್ಲಿ ಇಲ್ಲ. ಇವತ್ತಿದ್ದವರು ನಾಳೆ ಇಲ್ಲವೆಂದರೂ ಏನೂ ಬದಲಾವಣೆಯಾದ ಹಾಗೆ ಕಾಣೋದಿಲ್ಲ.
ಯಾರನ್ನು ಸ್ನೇಹಿತರೆಂದು ಕರೆಯೋದು, ಸ್ನೇಹಿತರಿಗೆ ಇರಬೇಕಾದ ಕ್ವಾಲಿಫಿಕೇಷನ್ ಏನು? ಎಲ್ಲರೂ ಒಂದೇ ನೆಲೆಗಟ್ಟು, ಮನಸ್ಥಿತಿಯವರಾದರೆ ಅಲ್ಲಿ ಭಿನ್ನತೆ ಹೇಗೆ ಹುಟ್ಟಿ ಬೆಳೆಯುತ್ತದೆ? ಭಿನ್ನತೆ ಹುಟ್ಟಿ ಬೆಳೆಯದಿದ್ದಲ್ಲಿ, ವ್ಯತಿರಿಕ್ತ ಮನಸ್ಥಿತಿ ನಿರ್ಮಾಣವಾಗದಿದ್ದಲ್ಲಿ ಭಾಂದವ್ಯ ಬಂಜರುಭೂಮಿಯಾಗದಂತಿರುವುದಕ್ಕೆ ಏನು ಮಾಡುವುದು?
ಮಾಹಿತಿ ಜಾಲ, ಇಂಟರ್ನೆಟ್ ಸೂಪರ್ಹೈವೇ, ಮುಂತಾದ ಅಲ್ಟ್ರಾ ಮಾಡರ್ನ್ ಟೆಕ್ನಾಲಜೀ ಏನೇ ಬಂದರೂ ನಮ್ಮ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಸಣ್ಣ ಗೂಡಿನ ಚಿಕ್ಕ ಪಕ್ಷಿಯ ಧ್ವನಿಯಾಗಿ ಹೋಗಿರುವುದೇ ಹೆಚ್ಚು. ಈ ಹಕ್ಕಿಯ ರೆಕ್ಕೆಗಳು ಚಿಕ್ಕವು ಬಾನು ಮಿಗಿಲಾಗಿದ್ದರೇನಂತೆ ಹಾರಲು ಶಕ್ತಿ ಇಲ್ಲವಲ್ಲಾ...ಶಕ್ತಿ ಇದ್ದರೇನಂತೆ ಹಾರಲು ದಿಕ್ಕುಗಳು ಬೇಕಲ್ಲಾ. ಈ ಹಕ್ಕಿಯ ಕಿರಿದಾದ ಧ್ವನಿಯಲ್ಲಿನ ಸಂದೇಶಗಳೂ ಹೆಚ್ಚುಹೆಚ್ಚು ದೂರದವರೆಗೆ ಪಸರಿಸಲಾರದು. ಸಾವಿರದ ಒಂಭೈನೂರರ ಮೊದಲಲ್ಲಿ ಯಾವ ತಂತ್ರಜ್ಞಾನವಿಲ್ಲದಿದ್ದರೂ ಭಾರತದ ಉದ್ದಗಲಕ್ಕೆ ಸ್ವಾತಂತ್ರದ ಫೂರಕ ಸಂದೇಶಗಳು ಅದು ಹೇಗೆ ಹಬ್ಬುತ್ತಿದ್ದವು? ಇಂದಿನ ಮಾಹಿತಿ ಜಾಲದಲ್ಲಿ ನಮ್ಮ ಸಂದೇಶಗಳೇಕೆ ನರಸತ್ತವುಗಳಾಗಿ ಹೋಗುತ್ತವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಯಾವುದಾದರೂ ಋಷಿಗಳಿಗೆ ಮಾತ್ರ ಸಾಧ್ಯ. ಒಪ್ಪಿಕೊಳ್ಳೋಣ, ನಾವು ಬದಲಾಗಿದ್ದೇವೆ ಎನ್ನುವ ಸತ್ಯವನ್ನ. ನಮಗೆ ಅಂದು ಮುಖ್ಯವಾದದ್ದು ಇಂದು ನಿಷ್ಪ್ರಯೋಜಕ ಎಂಬ ಬೆಳವಣಿಗೆಯಾಗಿರುವುದನ್ನು ಸಹಜ ಎಂದು ಹೇಳಿ ಸುಮ್ಮನಾಗುವುದೇ ಒಳ್ಳೆಯದು.