Tuesday, July 10, 2007

ನೈತಿಕ್ ಪಟೇಲ್ ಎಂಬೋ ಗ್ಯಾಸ್ ಸ್ಟೇಷನ್ ಕೆಲಸಗಾರ

ಹಿಲರಿ ಕ್ಲಿಂಟನ್ ಬೇಕಾದ್ರೆ ಗ್ಯಾಸ್ ಸ್ಟೇಷನ್ನಲ್ಲಿರೋ ಮಹಾತ್ಮ ಗಾಂಧಿಗಳು ಅಂತಾ ತಮಾಷೆ ಬೇಕಾದ್ರೆ ಮಾಡ್ಕೊಳ್ಳಿ, ನಮ್ಮೂರ್‌ನ್ನಲ್ಲಿ ಇಲ್ಲಿ ಗ್ಯಾಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಓನರ್ರು, ಕೆಲಸಗಾರ್ರು ಹೆಚ್ಚು ಮಟ್ಟಿಗೆ ಭಾರತೀಯರೇ. ಒಂದು ತಿಂಗಳ ಹಿಂದೆ ನಮ್ಮನೆಗೆ ಹತ್ತಿರದಲ್ಲಿರುವ ಸ್ಟೇಷನ್ನಲ್ಲಿ ಕಾರು ನಿಲ್ಲಿಸಿದಾಗ ಸುಮಾರು ಇಪ್ಪತ್ತರ ಹರೆಯದ ಯುವಕನೊಬ್ಬ ಬಂದು ಸುಮಾರಾದ ಇಂಗ್ಲೀಷಿನಲ್ಲಿ ಗ್ಯಾಸ್ (ಗ್ಯಾಸೋಲಿನ್) ಆರ್ಡರ್ ತೆಗೆದುಕೊಂಡು ನನ್ನ ಕ್ರೆಡಿಟ್‌ಕಾರ್ಡ್ ಹಿಡಿದುಕೊಂಡು ಹೋದ. ಅಲ್ಲಿ ಗ್ಯಾಸ್ ಪಂಪ್ ಮಾಡಲು ಶುರುಮಾಡಿ ಬೇರೆ ಯಾರೂ ಗಿರಾಕಿಗಳಿಲ್ಲದ ಕಾರಣ ಸುಮ್ಮನೆ ನಿಂತಿದ್ದವನನ್ನು ನಾನೇ ಕರೆದು ಮಾತನಾಡಿಸಿದೆ. ಅವನ ಬೆರಗು ಕಂಗಳು, ಅವನು ಸುತ್ತಲನ್ನು ನೋಡುತ್ತಿದ್ದ ಕುತೂಹಲ ನನ್ನಲ್ಲೂ ಅವನ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವಂತೆ ಮಾಡಿತ್ತು.

ಅವನು ಹಿಂದಿನ ದಿನವಷ್ಟೇ ಭಾರತದಿಂದ ಬಂದವನೆಂದೂ, ಇವತ್ತಾಗಲೇ ಸೋಷಿಯಲ್ ಸೆಕ್ಯೂರಿಟಿ ಕಾರ್ಡ್‌ಗೆ ಅಪ್ಲೈ ಮಾಡಿದ್ದಾನೆಂದೂ ತಿಳಿಯಿತು. ಅಮೇರಿಕದ ಬಗ್ಗೆ ಏನೇನೆಲ್ಲ ತಿಳಿದುಕೊಂಡಿದ್ದೀಯೆ, ನಿನ್ನನ್ನು ಯಾರು ಕರೆದುಕೊಂಡು ಬಂದರು ಎಂದು ಕೇಳಲಾಗಿ - ನನಗೇನೂ ಗೊತ್ತಿಲ್ಲ, ನನ್ನ ಸೋದರ ಮಾವ ಕರೆದುಕೊಂಡು ಬಂದ - ಒಮ್ಮೆ ಸೋಷಿಯಲ್ಲ್ ಬಂದ ಕೂಡಲೇ ನಾನು ನನ್ನದೇ ಒಂದು ಅಂಗಡಿಯನ್ನು ತೆರೆದು ಬೇರೆಲ್ಲಾದರೂ ಹೊರಟು ಹೋಗುತ್ತೇನೆ, ಅದಕ್ಕೋಸ್ಕರ ಮಾವ ಸಹಾಯ ಮಾಡುವುದಾಗಿ ತಿಳಿಸಿದ.

'ಇಲ್ಲಿನ ಛಳಿಯ ಬಗ್ಗೆ ಕೇಳಿದ್ದೀಯೇನು?' ಎಂದು ನನ್ನ ವ್ಯಂಗ್ಯ ಮಿಶ್ರಿತ ನಗೆಚಾಟಿಕೆಗೆ ಉತ್ತರವಾಗಿ ಅವನ ಮುಗ್ಧ ನಗು ಜೊತೆಗೆ 'ನನಗೇನೂ ಗೊತ್ತಿಲ್ಲ, ಆ ದೇವ್ರು ಎಲ್ಲಿ ತೋರಿಸ್ತಾನೆ ಅಲ್ಲಿ...' ಎನ್ನುವ ಮಹದೌರ್ಯದ ಮಾತು ಬೇರೆ.

ವಾರಕ್ಕೊಮ್ಮೆ ಗ್ಯಾಸ್ ಹಾಕಿಸಲು ಹೋದಾಗಲೆಲ್ಲ ಇವನು ಹಾಕಿದ ಎಕ್ಸಾನ್ ಅವರು ಕೊಟ್ಟ ಅಂಗಿಯ ಮೇಲೆ Al ಎಂದೋ Shaw ಎಂದೋ ಮತ್ತಿನ್ನೇನಾದರೂ ಹೆಸರುಗಳಿರುತ್ತಿದ್ದವು. 'ಏನಯ್ಯಾ ಬದಲಾಗಿ ಹೋಗಿದ್ದೀಯೇ ಬಂದು ಕೆಲವೇ ದಿನಗಳಲ್ಲಿ' ಎಂದು ಚುಚ್ಚಿದರೆ, 'ನನ್ನ ಅಂಗಿ ಇನ್ನೂ ಬಂದಿಲ್ಲ, ಅದಕ್ಕೇ ಬೇರೆಯವ್ರದ್ದು ಹಾಕ್ಕೊಂಡಿದ್ದೆನೆ...' ಎಂದು ಉದ್ದವಾದ ತೋಳುಗಳನ್ನು ಮಡಚಿಕೊಂಡಿರುವುದರ ಬಗ್ಗೆ ತೋರಿಸಿ ಹೇಳುತ್ತಾನೆ.

***

ನನ್ನ ಸಹೋದ್ಯೋಗಿ ಕೆನ್ ಹೇಳ್ತಿದ್ದಾ 'ಅಲಸ್ಕಾದಲ್ಲಿ ಆಯಿಲ್ ಚೆಲ್ಲಿ ಪರಿಸರವನ್ನು ಹಾಳುಗೆಡವಿದರೆಂದು ಎಷ್ಟೋ ಜನ ಎಕ್ಸಾನ್‌ನಲ್ಲಿ ಇವತ್ತಿಗೂ ಗ್ಯಾಸ್ ಖರಿದಿಸೋದಿಲ್ಲ' ಎಂಬುದಾಗಿ. ಅವನ ಹೇಳಿಕೆ ಸುಳ್ಳೋ ನಿಜವೋ, ಸುಳ್ಳಿರಬಹುದು ಎನ್ನುವಂತೆ ಎಕ್ಸಾನ್ ಮೊಬಿಲ್ ಪ್ರಪಂಚದ ಎಲ್ಲ ಕಾರ್ಪೋರೇಷನ್ನುಗಳಲ್ಲಿನ ಲಾಭಕ್ಕಿಂತಲೂ ಹೆಚ್ಚಾಗಿ ಲಾಭದ ಮೇಲೆ ಲಾಭ ಮಾಡುತ್ತಲೇ ಬಂದಿದೆ, ಅದೂ ಇತ್ತೀಚೆಗಂತೂ ಹಲವು ದಾಖಲೆಗಳನ್ನೂ ಮೀರಿಸಿದೆ.

ನಾನು ಕಿವಿಯಲ್ಲಿ ಕೇಳುವ ಪರಿಸರ ವಾದದ ವಿವರಗಳು, ಕಣ್ಣಲ್ಲಿ ನೋಡೋ ನೋಟಕ್ಕಾಗಲೀ, ಮಾಡೋ ಕಾರ್ಯಕ್ಕಾಗಲೀ ಯಾವುದೇ ಸಂಬಂಧಗಳನ್ನು ಬೆಳೆಸಿಕೊಂಡು ಅನ್ಯೋನ್ಯವಾಗಿರದೇ ಇರೋದರಿಂದ ಹೇಳೋದೊಂದೂ ಮಾಡೋದೊಂದೂ ಅಂತಾರಲ್ಲ ಹಾಗೆ ನನ್ನ ಎಲ್ಲ ಕಾರ್ಯ ವೈಖರಿಗಳು ಅಮೇರಿಕನ್ ಮಯವಾಗಿದೆ. ಯಾವತ್ತೋ ಪರಿಸರವನ್ನು ಹಾಳುಮಾಡಿದವರು ಎನ್ನುವುದು ಎಮೋಷನಲ್ ಮಾತಾದ್ದರಿಂದ ಅದಕ್ಕೋಸ್ಕರ ಒಂದು ಮೈಲು ದೂರದಲ್ಲಿರೋ ಶೆಲ್ ಗ್ಯಾಸ್ ಸ್ಟೇಷನ್ನಿಗೆ ಹೋಗಿ ನಾನೇನು ಗ್ಯಾಸ್ ತುಂಬಿಸೋದಿಲ್ಲ. ಎಲ್ಲಿ ಬೆಲೆ ಕಡಿಮೆ ಇರುತ್ತದೋ ಅಲ್ಲಿ ಎನ್ನುವುದಕ್ಕೆ ಎರಡನೇ ಆದ್ಯತೆ, ಅದಕ್ಕಿಂತಲೂ ಮೊದಲು ಸಮಯಕ್ಕೆ ತಕ್ಕ ಹಾಗೆ ನನ್ನ ಟ್ಯಾಂಕ್ ತುಂಬಬೇಕು, ಅಷ್ಟೇ.

***

ನೈತಿಕ್ ಪಟೇಲನ ಹೊಳಪು ಕಂಗಳುಗಳು, ಅವನ ವಿಚಾರವಂತಿಕೆ ಹಾಗೂ Fresh of the boat ಎಂದು ಇಲ್ಲಿಗೆ ಬಂದಂತಹವರನ್ನು ಇಲ್ಲಿ ಹುಟ್ಟಿದ ಭಾರತೀಯರು ಕರೆಯುವ ಹಾಗಿನ ತಿಳುವಳಿಕೆ ಇವೆಲ್ಲವೂ ನನ್ನನ್ನು ಅವನ ಬಳಿ ಮಾತನಾಡುವಂತೆ ಪ್ರಚೋದಿಸುತ್ತವೆ.

ಇಂದು ಗ್ಯಾಸ್ ಹಾಕಿಸಲು ಹೋದರೆ ಬೇರೆ ಯಾರೋ ಬಂದು ಕ್ರೆಡಿಟ್ ಕಾರ್ಡ್ ಎತ್ತಿಕೊಂಡು ಹೋದರೂ, ದೂರದಲ್ಲಿದ್ದ ನೈತಿಕ್ ನನ್ನ ಕಾರನ್ನು ನೋಡಿ ತಾನೇ ಹತ್ತಿರ ಬಂದು ಮಾತನಾಡಿಸಿದ. ಇವತ್ತು ಮತ್ತೆ ಬೇರೆ ಯಾರದ್ದೋ ಹೆಸರಿನ ಅಂಗಿಯನ್ನು ಧರಿಸಿದ್ದ, ಮುಖದಲ್ಲಿ ಅದೇ ಮುಗ್ಧತೆ. ಅವನಿಗೆ ಸೋಷಿಯಲ್ (ಸೆಕ್ಯೂರಿಟಿ ಕಾರ್ಡ್) ಬಂದಿದೆ ಎಂದೂ, ಇನ್ನು ಕೆಲವೇ ದಿನಗಳಲ್ಲಿ ಅವನು ತನ್ನದೇ ಆದ ಒಂದು ಅಂಗಡಿಯನ್ನು ತೆರೆಯುತ್ತಾನೆಂದೂ ತಿಳಿಸಿದ. ಇನ್ನೂ ಎಲ್ಲಿ ಎಂಬುದು ತೀರ್ಮಾನವಾಗಿಲ್ಲ, ಹುಡುಕುತ್ತಿದ್ದೇವೆ ಆದರೆ ಅವನ ಮಾಮಾ ಎಲ್ಲದಕ್ಕೂ ಅನುಕೂಲ ಮಾಡಿಕೊಡುತ್ತಿರುವುದಾಗಿ ತಿಳಿಸಿದ. ಅವನ ಕೆಲವು ವಾರಗಳ ಪ್ರಗತಿಯನ್ನು ನೋಡಿ ಬಹಳ ಸಂತೋಷವಾಯಿತು, ಜೊತೆಗೆ ಒಬ್ಬ ಸ್ನೇಹಿತನನ್ನು ಕಳೆದುಕೊಳ್ಳುತ್ತಿರುವ ದುಃಖವೂ ಆಯಿತು.

ನೈತಿಕ್ ಒಂದೆರಡು ವಾರದಲ್ಲೇ ಗ್ಯಾಸ್ ಹಾಕಿ ತೆಗೆಯುವ ಚಟುವಟಿಕೆಗಳಲ್ಲಿ ನಿಪುಣನಾಗಿದ್ದ, ಅವನ ವೇಗ ಇಮ್ಮಡಿಸಿತ್ತು. ಥರಾವರಿ ಜನಗಳ ಬಳಿ ಮಾತನಾಡಿ ಈಗಾಗಲೇ ಇಂಗ್ಲೀಷ್ ಸುಧಾರಿಸಿದಂತೆ ಕಂಡುಬಂತು, ಎಲ್ಲಕ್ಕಿಂತ ಮುಖ್ಯವಾಗಿ ಅವನ ಹೆಚ್ಚಿದ ಆತ್ಮವಿಶ್ವಾಸ ಗಮನಕ್ಕೆ ಬಂತು.

'ಏನಯ್ಯಾ, ಅಮೇರಿಕಕ್ಕೆ ಬಂದು ಇಲ್ಲಿಯವರ ಹಾಗೆಯೇ ಗ್ಲೌಸ್ ಹಾಕ್ಕೊಂಡು ಕೆಲಸ ಮಾಡ್ತಾ ಇದ್ದೀಯಾ?' ಎಂದು ರೇಗಿಸಲು ನೋಡಿದೆ, ಅದಕ್ಕವನು ಶಾಂತವಾಗಿ 'ಮೊದಮೊದಲು ಕಷ್ಟವಾಗುತ್ತಿತ್ತು, ಈಗ ಅದೇ ರೂಢಿಯಾಗಿ ಹೋಗಿದೆ, ಒಂದು ರೀತಿಯಲ್ಲಿ ಒಳ್ಳೆಯದೇ ಅಲ್ವಾ?' ಎಂದು ಉತ್ತರಿಸಿದ.

ನಾನು ಗ್ಯಾಸ್ ಹಾಕಿಸಿಕೊಂಡು ಮನೆಯ ಹಾಡಿ ಹಿಡಿದೆ.