ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...
ಎಷ್ಟೋ ಬಾರಿ ಅನ್ಸಲ್ವಾ ನಾವೆಲ್ಲಾ ಬೆಳೀತಾ ಬೆಳೀತಾ ನಮ್ ನಮ್ ಮುಗ್ಧತೆನಾ ಕಳ್ಕೊತೀವಿ ಅಂತ? ಮಕ್ಕಳ ಹಾಗೆ ಇರಬೇಕಿತ್ತಪಾ ಮನಸ್ಥಿತಿ, ಈ ಪ್ರಬುದ್ಧತೆ, ವಿಚಾರವಂತಿಕೆ ಅನ್ನೋದೆಲ್ಲಾ ಅವರವರಲ್ಲಿರೋ ಮುಗ್ಧತೆಯನ್ನು ಹೊಡೆದೋಡಿಸಿ ಅದರ ಜಾಗದಲ್ಲಿ ಇನ್ನೇನೋ ಒಂದನ್ನ ತಂದು ಕೂರಿಸೋ ಪ್ರಭೃತಿಗಳು ಅನ್ಸಲ್ವಾ?
ಇವತ್ತು ನಾವೆಲ್ಲಾ ಆಫೀಸ್ನಲ್ಲಿ ಒಟ್ಟಿಗೇ ಮುಂಜಾನೆ ಕೆಫೆಟೇರಿಯಾಕ್ ಹೋಗ್ತಾ ಇದ್ವಿ, ಎಲ್ರೂ ಸಾವಕಾಶವಾಗಿ ನಡೀತಾ ಇದ್ರೆ, ನಾನೊಬ್ನು ಯಾವ್ದೋ ಘನಕಾರ್ಯ ಕಡಿದು ಹಾಕೋದಕ್ಕಿದೆ ಎನ್ನೋ ಹಾಗೆ ಅವಸರದಲ್ಲಿ ಮಹಡಿ ಮೆಟ್ಟಿಲುಗಳನ್ನ ಇಳೀತಾ ಇದ್ದೆ, ನನ್ನ ಸಹೋದ್ಯೋಗಿ ಒಬ್ಬನು ಕೇಳೇ ಬಿಟ್ಟ,
'ಏನಯ್ಯಾ ನೀನು ಅರ್ಜೆಂಟಿನಲ್ಲಿರೋ ಹಾಗಿದೆ?!'
ಅದಕ್ಕುತ್ತರವಾಗಿ ನಾನೆಂದೆ, 'ನೋಡು, ನೀನಗೂ ಮೂವತ್ತು ವರ್ಷ ದಾಟಿದ ಮೇಲೆ, ದಿನದ ಇಪ್ಪತ್ತ್ ನಾಲ್ಕು ಘಂಟೆಗಳು ಸಾಕೋದಿಲ್ಲ ಅಂತ ಯಾವಾಗ ಅನ್ಸುತ್ತೆ, ಆಗ ಎಕ್ಸರ್‍ಸೈಜ್ ಮಾಡೋಕೆ ಪುರುಸೊತ್ತು ಸಿಗೋದಿಲ್ಲ, ಅದರ ಬದಲಿಗೆ ಎಲ್ಲಿ ಹೋದ್ರೂ ಬಂದ್ರೂ ಈ ರೀತಿ ಅವಸರದಲ್ಲಿ ಓಡಾಡಿಕೊಂಡಿದ್ರೆ ಒಂದಿಷ್ಟು ಹಾರ್ಟ್ ರೇಟಾದ್ರೂ ಜಾಸ್ತಿ ಆಗಿ ಇನ್ನೂ ಸ್ವಲ್ಪ ದಿನ ಜಾಸ್ತಿ ಬದುಕ್‌ಬೋದು...'
ಎಲ್ಲರೂ ನಕ್ಕರೂ, ನಾನೂ ನಕ್ಕು ಮತ್ತೆ ಮುಂದುವರೆಸಿದೆ,
'ಈ ದೊಡ್ಡ ಮನುಷ್ಯರೆಲ್ಲಾ ಸೂಟ್ ಯಾಕ್ ಹಾಕ್ಕೊಂಡಿರ್ತಾರೆ ಗೊತ್ತಾ, ಅವರು ಯಾವಾಗ್ ನೋಡಿದ್ರೂ ಮುಕುಳಿಗೆ ಬೆಂಕಿ ಬಿದ್ದ ಹಾಗೆ ತಿರುಗಾಡ್‌ತಿರ್ತಾರೆ ಅನ್ನೋದ್ ಗೊತ್ತೇ ಇದೆ...'
ಆ ಕಡೆಯಿಂದ ಏನೂ ಉತ್ರ ಬರಲಿಲ್ಲ,
'ಈ ಬೇಸಿಗೆಯಲ್ಲಿ ಸೂಟ್ ಹಾಕ್ಕೊಂಡ್ ವೇಗವಾಗಿ ಓಡಾಡೋದೂ ಒಂದೇ, ಕೈಯಲ್ಲಿ ಐದು ಪೌಂಡ್ ಡಂಬೆಲ್ಲ್ ಹಿಡಿದುಕೊಂಡ್ ಜಾಗ್ ಮಾಡೋದೂ ಒಂದೆ...'
ಹೀಗೇ ಟೈಮ್ ಸಿಕ್ಕಾಗ ಅಲ್ಲಲ್ಲಿ ಸಣ್ಣ ಪುಟ್ಟ ನಗೆ ಚಾಟಿಕೆ ಹಾರಿಸಿಕೊಂಡು ಕಾಲ ಕಳೀತಿರ್ತೀನಿ - ಮತ್ತಿನ್ನೇನ್ ಮಾಡೋದು, ನಮ್ಮಂತಹವರಿಗೆ ಆಫೀಸೇ ಬದುಕು, ಬದುಕೇ ಆಫೀಸ್ ಆಗಿರೋವಾಗ, ಯಾವಾಗ್ ನೋಡಿದ್ರೂ ಎಲ್ಲರೂ ಒಂದಲ್ಲಾ ಒಂದು ಸಂದಿಗ್ಧದಲ್ಲಿ ಸಿಕ್ಕೊಂಡೇ ಇರೋವಾಗ, ಸ್ಟ್ರೆಸ್ ಅನ್ನೋದು ದಿನದ ಅವಿಭಾಜ್ಯ ಅಂಗವಾದಾಗ...
ಶುಕ್ರವಾರ ಬಂತೂ ಅಂತಂದ್ರೆ 'ಓಹ್, ಇನ್ನೇನು ವೀಕ್ ಎಂಡ್ ಬಂತೂ...' ಅಂತ ಎಲ್ಲರ ಕಣ್ಣರಳುತ್ತೆ, ವಾರಾಂತ್ಯದಲ್ಲಿ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ, ಮಾಡೋಣ ಅಂತ ಏನೇನೆಲ್ಲ ತಲೆಯೊಳಗೆ ಬಂದು ಕೊರೆಯೋಕ್ ಶುರು ಹೊಡೀತಿರ್ತಾವೆ. ಶನಿವಾರ ಎದ್ದು ಮುಖತೊಳೆದು ತಿಂಡಿ ತಿಂದಂಗ್ ಮಾಡಿ, ಕಾಫಿ ಕುಡದಂಗ್ ಮಾಡಿ ಇನ್ನೇನು ಮೈ ಮುರೀ ಬೇಕು ಅನ್ನೋಷ್ಟರಲ್ಲಿ ಮಧ್ಯಾಹ್ನವಾಗಿ ಹೋಗುತ್ತೆ. ಒಂದಿಷ್ಟು ಟಿವಿ ರಿಮೋಟಿನ ಮೇಲೆ ಕೈ ಆಡ್ಸಿ ಟಿವಿ ನೋಡ್ದಂಗ್ ಮಾಡಿ, ಮನೆ ಕ್ಲೀನ್ ಮಾಡ್ಕೊಂಡ್ ಸಂಜೆ ಶಾಪ್ಪಿಂಗ್ ಮುಗಿಸಿ ಕಾಫಿ ಕುಡಿದು, ರಾತ್ರೆ ಊಟಾ ಮುಗಿದು ಇನ್ನೂ ಮಲಗಿರಲ್ಲ ಆಗ್ಲೇ ಭಾನುವಾರ ಬಂದ್ ಹೋಗ್‌ಬಿಡುತ್ತೆ. ಒಡಹುಟ್ಟಿದವರು, ಪೋಷಕರಿಗೆ ಒಂದಿಷ್ಟ್ ಫೋನ್ ಮಾಡಿ 'ಚೆನ್ನಾಗಿದೀರಾ' ಅಂತ ಕೇಳೋ ಹೊತ್ತಿಗೆ, ಡ್ರೈಯರ್ರ್‌ನಲ್ಲಿರೋ ಬಟ್ಟೇ ತೆಗೆದು ಮಡಚಿ ಇಡೋ ಹೊತ್ತಿಗೆಲ್ಲಾ ಭಾನುವಾರ ಕಥೆ ಗೊಳಂ - ಮತ್ತೆ ಸೋಮವಾರದ ಹಾಡು. ಐದು ದಿನದ ವಾರದ ದಿನಗಳು ವೇಗವಾಗಿ ಹೋಗ್ತಾವೋ, ಎರಡು ದಿನಗಳ ವಾರಾಂತ್ಯ ವೇಗವಾಗಿ ಹೋಗುತ್ತೋ ಅನ್ನೋದಕ್ಕೆ ಯಾವ ಸೂತ್ರವನ್ನೂ ಯಾರೂ ಇನ್ನೂ ಕಂಡು ಹಿಡಿದ ಹಾಗಿಲ್ಲ.
ಹಿಡಿದ ಕೆಲಸವನ್ನು ಟೈಮಿಗೆ ಸರಿಯಾಗಿ ಮುಗಿಸಬೇಕೋ, ಅಥವಾ ಟೈಮ್ ಎಷ್ಟು ತೊಗೊಂಡ್ರೂ ಪರವಾಗಿಲ್ಲ ಹಿಡಿದ ಕೆಲಸವನ್ನು ಸರಿಯಾಗಿ ಮಾಡಬೇಕೋ ಅನ್ನೋ ಆಲೋಚನೆಗಳಲ್ಲಿ ತೊಡಗಿಕೊಂಡರೆ ಟೈಮ್ ಹೋಗಿದ್ದೇ ಗೊತ್ತಾಗಲ್ಲ. ಒಂದ್ ಕಡೆ ಘಂಟೆಯ ಬೆನ್ನು ಹತ್ತಿ ಎಲ್ಲರೂ ಒಂದಲ್ಲಾ ಒಂದು ಸ್ಕೆಡ್ಯೂಲ್‌ನಲ್ಲಿ ತೊಡಗಿಕೊಂಡಿರ್ತಾರೆ, ಅವರಿಗೆ ಅವರ ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಇನ್ನೊಂದ್ ಕಡೆ ಯಾವ್ದಾದ್ರೂ ಒಂದ್ ಪ್ರಶ್ನೆಗೆ ಯೋಚಿಸಿ ಉತ್ರ ಹೇಳೋದಕ್ಕೆ ಪುರುಸೊತ್ತು ಕೊಡದ ಹಾಗಿನ ಇವತ್ತಿನ ಮೀಟಿಂಗ್‌ನ ವಾತಾವರಣ, ನೀವು ಸರಿಯಾಗಿ ಆಲಿಸಬೇಕು (listening skills) ಅನ್ನೋದು ಒಂದು ಕಡೆ, ಹಾಗೆ ಇನ್ನೊಬ್ಬರ ಪ್ರಶ್ನೆ ಅಥವಾ ಮಾತನ್ನು ಕೇಳುವಾಗ ನಮ್ಮ ಉತ್ತರವನ್ನು ಫಾರ್ಮುಲೇಟ್ ಮಾಡದೇ ಹೋದ್ರೆ ಈ ವ್ಯವಸ್ಥೆಗೆ ತಕ್ಕಂತೆ ಸ್ಪಂದಿಸೋದೇ ಕಷ್ಟವಾಗಿ ಹೋಗುತ್ತೆ. ಎಲ್ಲವೂ ಪಟ್ಟನೆ ಆಗಿ ಬಿಡಬೇಕು ಎಂದು ಯಾರೋ ಹೊರಡಿಸಿದ ಕಾಯಿದೆ ಬೇರೆ ಕೇಡಿಗೆ.
'My door is always open for you...' ಎನ್ನುವ ಬಾಸ್‌ನ ಬಾಸಿನ ಡೋರು ಯಾವತ್ತೂ ಗುಪ್ತ ಮೀಟಿಂಗ್‌ಗಳನ್ನು ಪುರಸ್ಕರಿಸಿಕೊಂಡು ಮುಚ್ಚೇ ಇರುತ್ತೆ...'I have an open door policy...' ಎನ್ನುವ ವಾಕ್ಯ ಫಿಗರೇಟಿವ್ ಆಗಿ ಮಾತ್ರ ಬಳಕೆಗೆ ಬರುತ್ತೆ...ನೀವು ಹೇಳಿದ್ದನ್ನೆಲ್ಲ ಕೇಳ್ತೀವಿ ಅನ್ನೋ ಜನರೇ ತಮ್ಮ ಕಿವಿಗೆ ಬಿದ್ದಿದ್ದೆಲ್ಲವನ್ನೂ ಕೇಳಿಸಿಕೊಳ್ಳದೇ ಇರೋರು, ನಾಯಕತ್ವ ಅನ್ನೋ ಹೆಸರಿನಲ್ಲಿ ತಮ್ಮ ಮನಸಲ್ಲಿದ್ದದ್ದೆನ್ನೆಲ್ಲ ಮುಕ್ತವಾಗಿ ಹಂಚೋರು.
ಹಾಸ್ಯದ ಮೊರೆ ಹೋಗೋರು ಜೀವ್ನಾನ ಗಂಭೀರವಾಗಿ ನೋಡೋದಿಲ್ಲ ಅಂತ ಯಾರ್ ಅಂದೋರು, ಈ ಬ್ಯೂರೋಕ್ರಸಿಯಿಂದ ತುಂಬಿರೋ ಅಫೀಸ್ ಜೀವ್ನಾನ ತುಸು ಹಾಸ್ಯದಿಂದ ನೋಡ್ದೇ ಹೋದ್ರೆ ಎಂತೋನ್ ಹೃದಯಾನಾದ್ರೂ ನಿಂತೇ ಹೋಗುತ್ತೆ! ಇನ್ನ್ ಮೇಲಾದ್ರೂ ತಮ್ಮನ್ನು ತಾವು ಅದೆಲ್ಲೋ ಕಳೆದುಕೊಂಡು ಅವಸರದಲ್ಲಿ ಓಡಾದೋರ್ ಕಂಡ್ರೆ ಸ್ವಲ್ಪ ದಾರಿ ಬಿಡ್ತೀರಾ ತಾನೆ? ಜೊತೆಗೆ ಅಂತಹವರೇನಾದ್ರೂ ಜೋಕ್ ಹೇಳಿದ್ರೆ ನಕ್ಕಂಗ್ ಮಾಡೋದನ್ನ ಮರೀ ಬೇಡಿ ಮತ್ತೆ...