...May be onboard!
ಹೀಗೇ ಶುಕ್ರವಾರ ಸಂಜೆ ಬೇಗ ಕೆಲಸ ಮುಗಿಯಿತೆಂದು ಏನೋ ಕಡಿದು ಹಾಕುವುದು ಬಿದ್ದಿದೆಯೆಂದುಕೊಂಡು ಬಂದರೆ ಮನೆಯಲ್ಲಿ ಸುಬ್ಬ ಬೋರಲಾಗಿ ಬಿದ್ದುಕೊಂಡಿದ್ದ, ಗೊರಕೆ ಹೊಡೆಯುತ್ತಿದ್ದಾನೇನೋ ಎನ್ನುವ ಸಂಶಯ ಬಂದಿತಾದರೂ ನಾನು ಬಾಗಿಲು ತೆಗೆದ ಸದ್ದಿನಿಂದ ಅವನು ಏದ್ದೇಳುವ ಗಡಿಬಿಡಿಯನ್ನು ತೋರಿದ್ದರಿಂದಾಗಿ ಅವನ ಅವಸ್ಥೆಯನ್ನು ನೋಡಿ ನಗು ಹುಟ್ಟಿತು, ನಿದ್ರೆಯಿಂದ ಎದ್ದೇಳುವಾಗಲೂ ಅದೆಂಥ ಗಡಿಬಿಡಿ ಎಂದು ಸೋಜಿಗವಾಯಿತು. ಅವನ ಪ್ರಶ್ನಾರ್ಥಕ ಮುಖವನ್ನು ನೋಡಿ ನಾನೇ ಮಾತಿಗೆ ತೊಡಗಿದೆ...
'ಗುಡ್ ಇವನಿಂಗ್. ಏನೋ ಸಕತ್ತಾಗಿ ಮಲಗಿದ ಹಾಗಿತ್ತು!'
'ಏನಿಲ್ಲಪ್ಪಾ, ಸುಮ್ನೇ ಹೀಗೇ ಮಲಗಿದೆ ನೋಡು, ಅದೆಲ್ಲಿಂದ ನಿದ್ದೆ ಬಂತೋ ಯಾರಿಗೆ ಗೊತ್ತು?' ಎಂದು ಆಕಳಿಸಿಕೊಂಡು ನನಗೆ ಒಂದೂ ತಿಳಿಯದ ಹಾಗೆ ಮತ್ತಿನ್ನೇನೋ ಅಂದ.
'ಬೇಗ ಮುಖ ತೊಳಿಯೋ, ಹೀಗೇ ಎಲ್ಲಾದ್ರೂ ಹೋಗಿ ಬರೋಣ' ಎಂದು ಬಲವಂತ ಮಾಡಿದ್ದಕ್ಕೆ ಹಾಸಿಗೆಯಿಂದೆದ್ದು ಬೆಡ್ಶೀಟ್ ಮಡಚುವ ಲಕ್ಷಣವನ್ನು ತೋರತೊಡಗಿದ...ನಾನೂ ಬಟ್ಟೆ ಬದಲಾಯಿಸಿ ಮುಖ ತೊಳೆಯಲು ನಡೆದೆ.
ಒಂದಿಷ್ಟು ಕಾಫಿ ಕುಡಿಸಿ ಹೊರೆಡಿಸಿದ್ದನಾದರೂ ಸುಬ್ಬ ಇನ್ನೂ ನಿದ್ರೆಯ ಗುಂಗಿನಲ್ಲೇ ಇದ್ದ ಹಾಗಿತ್ತು, ತಾನೇ ತಾನಾಗಿ ಯಾವುದೇ ಮಾತನ್ನು ಆಡಬಾರದು ಎಮ್ಬ ಪ್ರತಿಜ್ಞೆಯನ್ನು ಮಾಡಿದ ಹಾಗಿತ್ತು, ನಾನೂ ಸ್ವಲ್ಪ ಹೊತ್ತು ಸುಮ್ಮನೆ ಇದ್ದೆನಾದರೂ ಅಲ್ಲಲ್ಲಿ ಮಾತನಾಡಿಸಿದ್ದಕ್ಕೆ ಒಂದೆರಡು ಪದಗಳಲ್ಲೇ ಉತ್ತರ ಕೊಡಲು ಶುರುಮಾಡಿದ್ದನ್ನು ನೋಡಿ ಸದ್ಯ ಎಂದು ಕೊಂಡೆ. ಸಂಜೆ ಕತ್ತಲು ಚುಮುಚುಮ ಬೀಳುತ್ತಿತ್ತು. ಏಪ್ರಿಲ್ ತಿಂಗಳಾದರೂ ಹವೆ ಅಷ್ಟೊಂದು ಬೆಚ್ಚಗೇನೂ ಇರಲಿಲ್ಲ, ಗಾಳಿ ಬೀಸಿದಾಗ ಸ್ವಲ್ಪ ಚಳಿ ಆಗುತ್ತಿತ್ತು ಎನ್ನುವುದನ್ನು ಬಿಟ್ಟರೆ ಒಂದು ಸ್ವೆಟರ್ ಹಾಕಿಕೊಂಡು ಓಡಾಡಬಹುದಾದ ವಾತವಾರಣವಿತ್ತು.
ನಾನು ಯಾವುದೋ ಗುಂಗಿನಲ್ಲಿ ಕಾರನ್ನು ಓಡಿಸುತ್ತಿದ್ದೆ, ಸುಬ್ಬ ಎದುರಿನ ಕಾರನ್ನು ತೋರಿಸಿ 'ಕೆಲವು ಕಾರುಗಳ ಹಿಂದಿನ ಗಾಜಿಗೆ Baby On Board ಅಂತ ಬೋರ್ಡ್ ಹಾಕಿಕೊಂಡಿರುತ್ತಾರಲ್ಲ, ಏನದರ ಮರ್ಮ!?' ಎಂದು ಈಗಷ್ಟೇ ತಪ್ಪಸ್ಸನ್ನು ಮುಗಿಸಿ ಮೇಲೆದ್ದ ಋಷಿಯ ಧ್ವನಿಯಲ್ಲಿ ಪ್ರಶ್ನೆ ಕೇಳಿದ, ನನ್ನ ಉತ್ತರಕ್ಕೆ ಕಾಯದೇ ಹಾಗೇ ಮುಂದುವರೆಸಿ, 'ಅಂದ್ರೆ ಅದನ್ನ ಓದಿ ಹಿಂದಿನ ಡ್ರೈವರುಗಳು are they expected do anything different?' ಎಂದ.
'ಹಾಗೇನಿಲ್ಲ, ಅವರು ಸುಮ್ನೆ ನಮ್ಮ ಕಾರಿನಲ್ಲಿ ಮಗುವಿದೆ ಎಂದು ಸೈನ್ ಹಾಕಿಕೊಂಡು ಹಿಂದೆ ಯಾರಾದ್ರೂ ರ್ಯಾಷ್ ಆಗಿ ಡ್ರೈವ್ ಮಾಡೋರು ಇದ್ರೆ ಅವರಿಗೆ ಒಂದ್ ರೀತಿ ಮುನ್ಸೂಚನೆ ಕೊಡೋ ಹಾಗೆ...' ಎನ್ನುವಾಗ ಮಧ್ಯೆ ತಡೆದು 'ಸದ್ಯ, ಆ ರೀತಿ ಬೋರ್ಡ್ ಹಾಕ್ಕೊಂಡ್ರೆ ಅವರಿಗೇನು ಸ್ಪೆಷಲ್ ಪ್ರಿವಿಲೇಜ್ ಬರಲ್ವಲ್ಲಾ ಅಷ್ಟು ಸಾಕು, ಅದಿರ್ಲಿ ಕಾರಿನಲ್ಲಿ ಮಗುವಿದ್ರೆ ನಿಧಾನವಾಗಿ ಹೋಗಬೇಕು ಅಂತಾ ರೂಲ್ಸ್ ಏನಾದ್ರೂ ಇದೆಯಾ?'
'ಇಲ್ಲಪ್ಪಾ ಮಗು ಇಟ್ಕೊಂಡೂ ಸರಿಯಾದ ಸ್ಪೀಡ್ನಲ್ಲೇ ಹೋಗ್ಬಹುದು'.
'ಈ ವಮ್ಮಾ ಡ್ರೈವ್ ಮಾಡೋದ್ ನೋಡಿದ್ರೆ Baby On Board ಅನ್ನೋದರ ಬದಲಿಗೆ May Be On Board ಅಂತ ಬೋರ್ಡ್ ಹಾಕ್ಕೊಂಡ್ರೆ ಎಷ್ಟೋ ಚೆನ್ನಾಗಿರುತ್ತೆ ನೋಡು, ಅದ್ ಸರಿ, ನೀನ್ಯಾಕೆ ಇಂಥಾ ವಾಹನಗಳ ಹಿಂಬದಿಯನ್ನ ಮೂಸಿಕೊಂಡು ಹೋಗೋದು ಅಂತ ಗೊತ್ತಾಗ್ಲಿಲ್ಲ' ಎಂದು ನಕ್ಕ ಮುಸುಡಿ ಮಾಡಿಕೊಂಡ.
'ಏನೋ ನೀನು ಪ್ರಶ್ನೆ ಕೇಳ್ತಿದ್ದಿ ಅಂತ ಆ ವಾಹನದ ಹಿಂದೆ ಹೊರಟೆನಪ್ಪಾ...ಅಮೇರಿಕದ ನೀರು ಕುಡಿದು ಇನ್ನೂ ತಿಂಗಳೂ ಆಗ್ಲಿಲ್ಲ, ಆಗ್ಲೇ ರೆಸ್ಟ್ಲೆಸ್ ಆಗ್ತಿದಿಯಲ್ಲಾ, ಬೆಂಗ್ಳೂರ್ ಪಂಗ್ಳೂರ್ನ್ಯಾಗೆ ಮುಚ್ಕೊಂಡು ರಸ್ತೆ ಮೇಲೆ ಘಂಟೆಗೆ ಐದು ಮೈಲಿ ವೇಗದಲ್ಲಿ ಓಡುಸ್ತೀಯಲ್ಲಾ ಅದಕ್ಕೇನ್ ಹೇಳ್ಬೇಕು?' ಎಂದು ಲೇನ್ ಬದಲಾಯಿಸಿದೆ.
'ನಮ್ಮೂರ್ಗಳಲ್ಲೆಲ್ಲೂ ಇಷ್ಟಿಷ್ಟೇ ಸ್ಪೀಡ್ ಹೊಡೀರಿ ಅಂತ ಕಾನೂನ್ ಏನೂ ಇರಲ್ಲಾ, ನಾವು ಕಂಡೀಷನ್ನ್ ಹೆಂಗಿರುತ್ತೋ ಅದಕ್ಕೆ ತಕ್ಕಂತೆ ಸ್ವಾಭಾವಿಕವಾಗಿ ಸ್ಪೀಡ್ ಹೊಡೀತೀವಿ...ಇಷ್ಟು ಸ್ಫೀಡ್ನಲ್ಲಿ ಹೊಡೆಯೋ ಅಂತ ನಮಿಗ್ಯಾವನೂ ಹೇಳೋದಿಲ್ಲ, ಇಲ್ಲಿ ಥರಾ. ನಮ್ ರಸ್ತೆ ನಮ್ಮೂರು ಹೆಂಗ್ ಬೇಕಾದಂಗೆ ಹೊಡಕಂತೀವಿ!'
'ಅಲ್ಲೆಲ್ಲಿ ಸ್ಪೀಡ್ ಹೊಡಿತಿ ಬಿಡು, ಆ ಕಾರುಗಳು, ಆ ರಸ್ತೆಗಳು, ಅಲ್ಲಿ ಜನಾ ಎಲ್ಲಾ ಒಂದೇ ಥರಾ ಇರ್ತಾರ್ ನೋಡು, ಅವರಿಗೆ ಅಲ್ಲಿಂದಲ್ಲಿಗೆ ಸಕತ್ತಾಗಿ ಮ್ಯಾಚ್ ಆಗುತ್ತೆ, ಅವರೊಳಗೆ ನೀನೂ ಒಬ್ಬ!' ಸ್ವಲ್ಪ ಸಿಟ್ಟು ಬರಲಿ ಎಂದು ಬೇಕಂತೆಯೇ ಕಿಚಾಯಿಸಿದೆ.
'ಗುರುವೇ, ಅಮೇರಿಕನ್ ನೀರು ಕುಡಿದಾಕ್ಷಣ ನೀನು ಬದಲಾಗಿ ಹೋದೆ ಎಂದು ನಿನಗೆ ಸರ್ಟಿಫಿಕೇಟ್ ಕೊಟ್ಟೋರ್ ಯಾರು?' ಎಂದು ನಾಟಕೀಯ ಶೈಲಿಯಲ್ಲಿ ಜಗ್ಗೇಶ್ ಪೋಸ್ ಕೊಟ್ಟು ಕೇಳಿದ, ನಾನು ಸುಮ್ಮನೇ ಇದ್ದು, ಟ್ರಾಫಿಕ್ ಮೇಲೆ ಗಮನ ಕೊಡೋನ ಹಾಗೆ ಮುಖ ಮಾಡಿಕೊಂಡಿದ್ದರೂ ಮುಂದುವರೆಸಿ 'ಜರ್ಸೀ ಸಿಟಿಯ ಇಂಡಿಯಾ ಬಜಾರ್ಗೆ ಕರಕೊಂಡ್ ಹೋಗು ತೋರುಸ್ತೀನಿ ಅಮೇರಿಕನ್ ನೀರು ಕುಡಿದ ಪ್ರಜ್ಞಾವಂತರು ಮಾಡೋ ಕೆಲ್ಸಾನಾ!' ಎಂದು ಓಪನ್ ಸವಾಲನ್ನು ಎಸೆದುಬಿಡೋದೆ...ನನಗಂತೂ ಸುಮ್ಮನಿದ್ದರೆ ಒಪ್ಪಿಕೊಂಡಂತೆ ಆರ್ಗ್ಯೂ ಮಾಡಿದ್ರೆ ಬೆಂಕಿಗೆ ತುಪ್ಪಾ ಸುರಿದಂತೆ ಎನ್ನಿಸಿ ಏನು ಮಾಡುವುದಕ್ಕೂ ತೋಚಲಿಲ್ಲ, ಒಂದು ಕ್ಷಣ.
ಸ್ವಲ್ಪ ತಡವರಿಸಿ ಹೇಳಿದೆ, 'May be onboard..., ಅನ್ನೋ ಕಾಮೆಂಟ್ ಹೊಡೆದೋನು ನೀನು, ಡ್ರೈವಿಂಗ್ ಅನ್ನೋದು ಪ್ರಿವಿಲೇಜೇ ಹೊರತೂ ಅದು ನಿನ್ನ ಹಕ್ಕಲ್ಲ. ನಿನಗ್ಯಾವ ಎಮರ್ಜೆನ್ಸಿ, ಅರ್ಜೆಂಟ್ ಕೆಲ್ಸಾ ಇಲ್ಲದ ಮೇಲೂ ಇನ್ನುಳಿದ ಡ್ರೈವರ್ಗಳು ಸ್ಪೀಡ್ ಆಗಿ ಹೋಗ್ಬೇಕು ಅಂತ ಡಿಮ್ಯಾಂಡ್ ಮಾಡೋ ನೀನು, ಇಷ್ಟೊಂದು ಸ್ಪೀಡ್ ಆಗಿ ಎಲ್ಲೆಲ್ಲೋ ಹೋಗಿ ಮಾಡಿ ಸಾಧಿಸಿದ್ದೇನು ಅಂತ ಸ್ವಲ್ಪ ತಿಳಿಸಿ ಹೇಳ್ತೀಯೇನು?' ಎಂದು ದೊಡ್ಡ ಸವಾಲನ್ನೇ ಎಸೆದೆ.
ಒಂದೆರಡು ಕ್ಷಣ ವಿಳಂಬದಲ್ಲಿ ಅವನಿಂದ ಉತ್ತರ ಬಂದಿದ್ದರ ಭಾವವನ್ನು ಊಹಿಸಿ, ದೊಡ್ಡ ವಾದದ ರಾದ್ಧಾಂತವೇನೋ ಆಗೋದಿಲ್ಲ ಎಂಬ ಸಮಾಧಾನ ನನ್ನದಾಯಿತು, 'ಪದೇ-ಪದೇ ನನ್ನ ಸ್ಪೀಡಿಗೂ ಇಲ್ಲೀ ಸ್ಪೀಡಿಗೂ ಕಂಪೇರ್ ಮಾಡಬೇಡ...ಈ ದೇಶ ಹುಟ್ಟಿ-ಬೆಳೆಯೋದೇ ಎಲ್ಲ ವೇಗಮಯವಾಗಿ, ಅಂಥಾದ್ದರಲ್ಲಿ ಒಂದಿಷ್ಟ್ ಜನ ತೆವಳಿಕೊಂಡೇ ರಸ್ತೆ ಸವೆಸ್ತಾರೆ ಎಂದ್ರೆ, ಅದು ಒಂದ್ ರೀತಿ ದೊಡ್ಡ ಡೇಂಜರ್ರೇ - ಈಗ ಮಕ್ಳು ಇಟ್ಗೊಂಡೋರು ನಿಧಾನವಾಗಿ ಡ್ರೈವ್ ಮಾಡಿದಾಕ್ಷಣ ಉಳಿದೋರೂ ಅದನ್ನೇ ಅನುಸರಿಸಬೇಕು ಅನ್ನೋದು ಎಲ್ಲೀ ನಿಯಮಾನಪ್ಪಾ?'
'ಸುಬ್ಬೂ, ನಿನಗೊತ್ತಾಗಲ್ಲ ಸುಮ್ನಿರು - ಇನ್ನೂ ಒಂದಿಷ್ಟು ವರ್ಷ ಅಮೇರಿಕವನ್ನ ಕಣ್ ತುಂಬಾ ನೋಡು, ಒಂದಿನ ಇದೇ ಟಾಪಿಕ್ಕನ್ನಿಟ್ಟುಕೊಂಡು ವಾದ ಮಾಡೋಣಂತೆ...' ಎಂದು ನನ್ನ ಗಾಡಿಯ ವೇಗವನ್ನು ಹೆಚ್ಚಿಸಿದೆ, ಸುಬ್ಬುಗೆ ನಾನು ಹೇಳಿದ್ದು ಇಷ್ಟವಾಗಲಿಲ್ಲವೆಂದು ಕಾಣಿಸಿತು, ಆತ ರೆಡಿಯೋ ಡಯಲ್ ಕಡೆಗೆ ಕೈ ಹಚ್ಚಿದ.