ನಮಗೊಬ್ಬ ಆಲ್ ಶಾರ್ಪ್ಟನ್ ಬೇಕೇ?
ನ್ಯೂ ಯಾರ್ಕ್ ನಗರದ ಸುತ್ತಮುತ್ತಲಿನಲ್ಲಿ ಆಲ್ ಶಾರ್ಪ್ಟನ್ನ ಕಾರ್ಯಭಾರ ಯಾವತ್ತೂ ಇದ್ದೇ ಇರುತ್ತೆ. ಶಾನ್ ಬೆಲ್ನನ್ನು ಪೋಲೀಸರು ಗುಂಡಿಟ್ಟು ಕೊಂದ ಕಥೆಯಾಗಿರಲಿ, ಆಬ್ನರ್ ಲೂಯೀಮಾನನ್ನು ಪೋಲೀಸರು ಹಿಂಸೆಗೊಳಪಡಿಸಿದ್ದಿರಲಿ, ಡಾನ್ ಐಮಸ್ ರೇಷಿಯಲ್ ಪದಗಳನ್ನು ಬಳಸಿದನೆಂದೋ, ಡ್ಯೂಕ್ ಯೂನಿವರ್ಸಿಟಿಯ ಆಟಗಾರರು ಡ್ಯಾನ್ಸರ್ ಒಬ್ಬಳ ಮೇಲೆ ಅತ್ಯಾಚಾರಮಾಡಿದರೆಂದೋ ಇನ್ನೂ ಹಲವಾರು ಕಾರಣಗಳಿಂದಾಗಿ ಈತನ ಪಡೆ ಸಂಬಂಧಿಸಿದವರನ್ನು ತತಕ್ಷಣ ಸುತ್ತುವರೆದು ಒಂದು ರೀತಿಯ "ಸತ್ಯಾಗ್ರಹ" ನಡೆಸುತ್ತದೆ. ಈ ಕಾರ್ಯಾಚರಣೆಗಳಲ್ಲಿ ಸಾಮಾನ್ಯವಾದ ಒಂದು ಅಂಶವೆಂದರೆ ಫಲಾನುಭವಿ ಆಫ್ರಿಕನ್ ಅಮೇರಿಕನ್ ಆಗಿರುತ್ತಾನೆ/ಳೆ, ಮತ್ತೊಂದು ತುದಿಯಲ್ಲಿ ವ್ಯವಸ್ಥೆ, ವ್ಯಕ್ತಿ ಅಥವಾ ಆಡಳಿತದ ತಡೆಗೋಡೆ, ಅಥವಾ ಇನ್ನು ಜೀವ/ನಿರ್ಜೀವ ವಸ್ತು/ವ್ಯಕ್ತಿ ಏನು ಬೇಕಾದರೂ ಇರಬಹುದು.
***
ಶಾರ್ಪ್ಟನ್ ನಡೆಸೋ ಕಾರ್ಯಾಚರಣೆಗಳಲ್ಲಿ ಜಯವೇ ಹೆಚ್ಚು - ಈತನ ಹೆಸರು ಕೇಳಿದರೆ ಎಷ್ಟೋ ಜನ ನಡುಗುವ ಸ್ಥಿತಿ ಇದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂದೋ, ಇನ್ನ್ಯಾವುದೇ ರೀತಿಯಲ್ಲಿ ಯಾರು ಎಷ್ಟೇ ಹೊಡೆದುಕೊಂಡರೂ ಈತನ ತಂತ್ರ ಧೃತಿಗೆಡುವುದಿಲ್ಲ. ಕಳೆದ ಹತ್ತು ವರ್ಷಗಳಿಂದಲೂ ನಾನು ನೋಡಿದಂತೆಯೇ ಈತ ಒಂದಲ್ಲಾ ಒಂದು ರೀತಿಯಲ್ಲಿ ಮಾಧ್ಯಮದಲ್ಲಿರುತ್ತಾನೆ, ಜೊತೆಗೆ ಎಷ್ಟೋ ಜನರ ಆರಾಧ್ಯದೈವ ಎಂದು ಹೆಸರು ಮಾಡಿರುವುದೂ ಅಲ್ಲದೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪ್ರಸಿಡೆಂಟಿಯಲ್ ಕ್ಯಾಂಡಿಡೇಟ್ ಆಗಿ ನಂತರ ಹೆಚ್ಚಿನ ಪಕ್ಷ ಡೆಮಾಕ್ರಟಿಕ್ ಮುಖಂಡರಿಗೆ ತನ್ನ ಎಂಡಾರ್ಸ್ಮೆಂಟ್ ಮಾಡಿದ್ದಿದೆ.
ಕಾಂಡೋಲೀಸಾ ರೈಸ್, ಕಾಲಿನ್ ಪವೆಲ್ ಇವರೆಲ್ಲರಿಗಿಂತ ಡೊಮೆಸ್ಟಿಕ್ ವಿಚಾರಗಳಲ್ಲಿ ಶಾರ್ಪ್ಟನ್ ಯಾವಾಗಲೂ ಮುಂದು. ಜೆಸ್ಸಿ ಜಾಕ್ಸನ್ ಮತ್ತು ಆಲ್ ಶಾರ್ಪ್ಟನ್ ಇವರಿಬ್ಬರು ಸೇರಿಕೊಂಡರೆಂದರೆ ಅಲ್ಲಿ ಒಂದು ಷಡ್ಯಂತ್ರ ರಚನೆಯಾಗಿರಲೇ ಬೇಕು, ಇಂಥ ಸಂದರ್ಭಗಳಲ್ಲಿ ಗೆಲ್ಲಬೇಕೆಂದರೆ ನಿಜವಾಗಿಯೂ ದೊಡ್ಡ ಗುಂಡಿಗೆಯೇ ಬೇಕು.
***
ನಿಧಾನವಾಗಿ ಮೈನ್ಸ್ಟ್ರೀಮ್ ಅಮೇರಿಕನ್ ಪರಿಸರವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿರುವ ಆಫ್ರಿಕನ್ ಅಮೇರಿಕನ್ (ಕಪ್ಪು) ಸಂಸ್ಕೃತಿಯನ್ನು ಗಮನಿಸುತ್ತಿದ್ದೇನೆ. ಅಮೇರಿಕನ್ ಜನಸಂಖ್ಯೆಯಲ್ಲಿ ಸುಮಾರು ನೂರಕ್ಕೆ ಹನ್ನೆರೆಡರಷ್ಟು ಇರುವ ಕಪ್ಪು ಜನ, ಹೆಚ್ಚೂ ಕಡಿಮೆ ಅಷ್ಟೇ ಇರಬಹುದಾದ ಹಿಸ್ಪ್ಯಾನಿಕ್ ಜನರು ಮುಖ್ಯವಾಹಿನಿಯಲ್ಲಿರುವ (ಸುಮಾರು ನೂರಕ್ಕೆ ಎಪ್ಪತ್ತು) ಬಿಳಿಯರನ್ನು ಹೆದರಿಸುತ್ತಾರೇನೋ ಅನ್ನಿಸದೇ ಇರದು. ಹಿಸ್ಪ್ಯಾನಿಕ್ ಜನರು ಭಾಷೆಯ (ಸ್ಪ್ಯಾನಿಶ್) ಮುಖಾಂತರ ತಮ್ಮ ಐಡೆಂಟಿಟಿಯನ್ನು ಸ್ಥಾಪಿಸಿಕೊಳ್ಳುತ್ತಲಿದ್ದರೆ, ಕಪ್ಪು ಜನ ತಮ್ಮದೇ ಆದ ಸಂಗೀತ, ಆಟೋಟಗಳಿಂದ ಸಮಾಜದಲ್ಲಿ ಎದ್ದು ನಿಂತಿರುವುದು ವಿಶೇಷವಾದದ್ದು. ದೇಶದಾದ್ಯಂತ ಹನ್ನೆರಡು ಪರ್ಸೆಂಟಿನಷ್ಟಿರುವ ಕಪ್ಪು-ಹಿಸ್ಪ್ಯಾನಿಕ್ ಜನರ ಡೆನ್ಸಿಟಿ ಪೂರ್ವ-ಪಶ್ಚಿಮ ತೀರಗಳ ಪ್ರದೇಶಗಳಲ್ಲಿ ಬಹಳ ಹೆಚ್ಚು (ಸುಮಾರು ೩೦%), ಹಾಗಾಗಿಯೇ ನ್ಯೂ ಯಾರ್ಕ್, ಜರ್ಸಿ ಸಿಟಿಯಂತಹ ಪ್ರದೇಶಗಳಲ್ಲಿ ದಾರಿಯಲ್ಲಿ ಎಡವಿ ಬಿದ್ದರೂ ಹಿಸ್ಪ್ಯಾನಿಕ್-ಕಪ್ಪು ಜನರ ಮೇಲೆ ನೀವು ಬೀಳೋದು!
***
ಕಳೆದ ಐದು-ಹತ್ತು ವರ್ಷಗಳಿಂದ ಭಾರತಕ್ಕೆ ಬೇಕಾದಷ್ಟು ಅಮೇರಿಕನ್ ಕೆಲಸಗಳು ಔಟ್ಸೋರ್ಸ್ ಆದದ್ದರಿಂದಲೋ, ಇನ್ನೂ ಹಲವಾರು ಕಾರಣಗಳಿಂದಲೋ ಭಾರತ, ಭಾರತಿಯರನ್ನು ಎಲ್ಲರೂ ಗುರುತಿಸುವ ಪರಿಸ್ಥಿತಿ ಬಂದಿದೆ. ಹತ್ತು ವರ್ಷದ ಹಿಂದೆ ಡೆನ್ವರ್ ಪೇಟೆಯಲ್ಲಿ ಭಾರತವೆಂದರೆ ಎಲ್ಲಿದೆ? ಎಂದು ರಸ್ತೆ ವ್ಯಾಪಾರಿಯೊಬ್ಬ ಕೇಳಿ ನಮ್ಮೆಲ್ಲರನ್ನು ದಂಗುಬಡಿಸಿದ್ದ, ಬಹುಷಃ ಈಗ ಆ ಪರಿಸ್ಥಿತಿ ಇರಲಾರದು.
ನಮ್ಮ ಪೂರ್ವ ಪ್ರದೇಶಗಳ ಗ್ಯಾಸ್ ಸ್ಟೇಷನ್, ಸೆವೆನ್-ಇಲೆವೆನ್ ಮುಂತಾದ ಸ್ಥಳಗಳಲ್ಲಿ ಭಾರತೀಯರು ಕೆಲಸ ಮಾಡುವುದು ಸರ್ವೇ ಸಾಮಾನ್ಯ. ಇಂತಹವುಗಳ ಜೊತೆಗೆ ತೊಂಭತ್ತರ ದಶಕದಿಂದ ಟೆಕ್ನಾಲಜಿ ಕೆಲಸಗಾರರೂ, ಹಾಗೂ ಅದಕ್ಕೂ ಹಿಂದೆ ವಲಸೆ ಬಂದ ವಿಜ್ಞಾನಿ/ವೈದ್ಯರೂ ಬೇಕಾದಷ್ಟು ಜನ. ಇಲ್ಲಿನ ಕೆಲಸಗಳು ಹೊರದೇಶಕ್ಕೆ ಎಲ್ಲಿಯೇ ಹೋಗಿರಲಿ, ಅವು ಭಾರತಕ್ಕೆ ಹೋಗಿವೆ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಒಂದು ರೀತಿಯ ನಂಬಿಕೆ ಹಾಗೂ ಭಯ ಎರಡೂ ಉಂಟಾಗಿವೆ, ಇವೆಲ್ಲವೂ ಭಾರತಿಯರನ್ನು ಜನಮನದಲ್ಲಿ ಸರ್ವಕಾಲಿಕವನ್ನಾಗಿ ಮಾಡಿವೆ. ಇವುಗಳ ಒಂದು ಪರಿಣಾಮವೋ ಎನ್ನುವಂತೆ ಸ್ಥಳೀಯ ರೆಡಿಯೋ-ಟಿವಿ ಕಾರ್ಯಕ್ರಮಗಳಲ್ಲಿ ಭಾರತೀಯರನ್ನು ಬೇಕಾದಷ್ಟು ಆಡಿಕೊಂಡು, ನಮ್ಮ ಆಕ್ಸೆಂಟುಗಳನ್ನು ಅಣುಗಿಸಿಕೊಂಡು, ನಮ್ಮ ನಡವಳಿಕೆಗಳನ್ನು ಹೀಯಾಳಿಸಿ ಬೇಕಾದಷ್ಟು ಕಾರ್ಯಕ್ರಮಗಳು ಬೇಕಾದಷ್ಟು ಪ್ರಸಾರವಾಗುತ್ತವೆ. ಹೋಟೆಲು, ಟ್ಯಾಕ್ಸಿಕ್ಯಾಬುಗಳು, ಗ್ಯಾಸ್ಸ್ಟೇಷನ್-ಕನ್ವೀನಿಯನ್ಸ್ ಸ್ಟೋರುಗಳಲ್ಲಿ ಕೆಲಸ ಮಾಡುವ ಕೆಲಸಗಾರರು ಬೇಕಾದಷ್ಟು ಅಮಾಯಕ ಭಾರತೀಯರು ಇಲ್ಲಿನ ಬಂದೂಕಿನ ಅಟ್ಟಹಾಸಕ್ಕೆ ಗುರಿಯಾಗುತ್ತಾರೆ - ಹೆಚ್ಚಿನ ಪಕ್ಷ ಅವು ಕಪ್ಪು ಜನರ ಹಿಂಸಾಪ್ರವೃತ್ತಿಗೆ ಬಲಿಯಾಗಿರುವ ಉದಾಹರಣೆಯೇ ಹೆಚ್ಚು.
ಹೀಗಿರುವಲ್ಲಿ ನಮ್ಮ ನಡುವೆ ಯಾರೊಬ್ಬರೂ ಚಕಾರವನ್ನೆತ್ತುವುದಿರಲಿ, ಒಂದು "ಸತ್ಯಾಗ್ರಹ"-ಧರಣಿಯನ್ನಾದರೂ ಏಕೆ ಮಾಡೋದಿಲ್ಲ ಎಂದು ನಾನು ಬೇಕಾದಷ್ಟು ಸಾರಿ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ಗುಂಡಿಗೆ ಬಲಿಯಾದ ವ್ಯಕ್ತಿ ಕಪ್ಪು ಆಗಿದ್ದರೆ ಮರುದಿನವೇ ಆಲ್ ಶಾರ್ಪ್ಟನ್ ಅಲ್ಲಿ ಹಾಜರ್, ಬೇರೆ ಏನಿಲ್ಲವೆಂದರೂ ಅವನ ಅಜೆಂಡಾ ಅಲ್ಲಿ ಹಾಜರಿರುತ್ತದೆ, ಅದೇ ಅಮಾಯಕ ಭಾರತೀಯ ಸತ್ತರೆ ವಿದ್ಯುದಾಲಿಂಗನಕೆ ಸಿಕ್ಕಿ ಸತ್ತ ಕಾಗೆಯ ಪರಿಸ್ಥಿತಿ, ಏಕೆ?
***
ಶಾರ್ಪ್ಟನ್ ಮಾಡೋದೆಲ್ಲ ಸರಿಯೇ? ಆತನ ಅಜೆಂಡಾ ಏನು, ಗುರಿ, ಉದ್ದೇಶಗಳೇನು? ಇವೆಲ್ಲದರ ಬಗ್ಗೆ ಬೇಕಾದಷ್ಟು ಕೇಳಿ/ಓದಿ/ನೋಡಿದ್ದೇನೆ - ಇದೆಲ್ಲದರ ಬಳಿಕ ನಮಗೊಬ್ಬ ಶಾರ್ಪ್ಟನ್ ಇದ್ದಿದ್ದರೆ ನಮ್ಮನ್ನು ಉಳಿದವರು ನಡೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಬೇಕಾದಷ್ಟು ಬದಲಾವಣೆಗಳಾಗುತ್ತಿದ್ದವೇನೋ ಅಥವಾ ಅದರಿಂದ ಶಾರ್ಟ್ಟರ್ಮ್ನಲ್ಲಿ ಒಳ್ಳೆಯದಾಗುತ್ತಿತ್ತೇನೋ ಎನ್ನುವ ಆಸೆ ನನ್ನದು; ಜೊತೆಯಲ್ಲಿ ಇಷ್ಟು ವರ್ಷಗಳಿಲ್ಲಿದ್ದರೂ ಇನ್ನೂ ಇಲ್ಲಿನ ಜನರ ಮನದಾಳವನ್ನು ತಿಳಿದುಕೊಳ್ಳಲ್ಲು, ಇಲ್ಲಿನ ಕಾರ್ಯತಂತ್ರವನ್ನು ಅರಿತುಕೊಳ್ಳುವ ಹೆಣಗಾಟವೂ ಇಲ್ಲದೇನಿಲ್ಲ.
ಈಗ ಹೇಳಿ ಅಮೇರಿಕದಲ್ಲಿ ನಮಗೊಬ್ಬ ಶಾರ್ಪ್ಟನ್ ಬೇಕೇ?