Wednesday, April 11, 2007

ದಗಲ್ ಬಾಜಿಗಳು...

ಇದು ಅಪರೂಪಕ್ಕೊಮ್ಮೆ ಆಗೋ ಘಟನೆ ಅಲ್ಲ, ಅಥವಾ ಬೆಂಗಳೂರಿಗೆ ಬರೀ ಸೀಮಿತವಾದ ವಸ್ತುವೂ ಅಲ್ಲ...ಇದೇ ರೀತಿಯ ಘಟನೆಗಳನ್ನು ನಾನು ಬಾಂಬೆ, ಮದ್ರಾಸುಗಳಲ್ಲಿಯೂ ನನ್ನ ಕಣ್ಣಾರೆಯೇ ನೋಡಿದ್ದೇನೆ. ನಮ್ಮ ಅಭಿವೃದ್ಧಿ, ಬೆಳವಣಿಗೆ ನಮ್ಮನ್ನು ಈ ರೀತಿಯ ಕುತಂತ್ರಗಳಿಗೆ ಈಡು ಮಾಡಿಬಿಟ್ಟಿವೆಯೇನೋ ಅನ್ನುವಷ್ಟರ ಮಟ್ಟಿಗೆ ಆಲೋಚಿಸುವಂತಾಗಿದೆ.

ನಿಲ್ದಾಣದ್ಲಲಿ ದಗಲ್ ಬಾಜಿಗಳು...
ಮೆಜೆಸ್ಟಿಕ್ ಸುತ್ತಮುತ್ತ ಸಾಕಷ್ಟು ಬೀದಿ ವ್ಯಾಪಾರಿಗಳನ್ನು ನೀವೂ ನೋಡಿರುತ್ತೀರಿ. ಆದರೆ, ಕೆಲವು ವ್ಯಾಪಾರಿಗಳ್ದಿದಾರೆ. `ರೇಟೆಸ್ಟು?' ಅಂತ ಕೇಳಿದರೆ ಸಾಕು: ರೇಟೂ ಹೇಳುತ್ತಾರೆ; ಕೊಳ್ಳದ್ದಿದರೆ ಏಟೂ ಕೊಡುತ್ತಾರೆ. ಇವರೊಂದಿಗೆ ಪೊಲೀಸರೂ ಸೇರಿಸುತ್ತಾರೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ, `ರೇಟು ಕೇಳಿ ಏಟು ತಿಂದ' ಪ್ರಕರಣ ...

ನಾವಿರೋ ಜರ್ಸಿ ಸಿಟಿಯಲ್ಲಿ ಸರ್ವೇ ಸಾಮಾನ್ಯವಾಗಿ ನೋಡಲು ಸಿಗುವಂತಹ ಘಟನೆಯೊಂದು ನೆನಪಾಯಿತು - ಸಾಮಾನ್ಯವಾಗಿ ಹಿಸ್ಪ್ಯಾನಿಕ್ ಅಥವಾ ಕಪ್ಪು ಹುಡುಗ/ಹುಡುಗಿಯರು, ರಸ್ತೆ ಮೇಲೆ ಬೇರೆಯವರು ತಮಗೆ ಅಥವಾ ತಮ್ಮ ಕಾರಿಗೆ ಜಾಗ ಬಿಡಲಿಲ್ಲ ಎನ್ನೋ ಕಾರಣಕ್ಕೆ ಮೈಮೇಲೆ ಬಿದ್ದು ಜಗಳ ಮಾಡುವ ಅಥವಾ ಯದ್ವಾತದ್ವಾ ಬೈದು ತಮ್ಮ ಕ್ರೋಧವನ್ನು ಕಾರುವ ಪರಿಸ್ಥಿತಿ ನಮ್ಮಲ್ಲಿ ಯಾವಾಗಲು ಸರ್ವೇ ಸಾಮಾನ್ಯ. ಇಂತಹ ಘಟನೆಗಳಿಗೆ ಯಾರೂ ಗಮನ ಕೊಡೋ ಹಾಗೆ ಕಾಣೋದಿಲ್ಲ, ಸಾಮಾನ್ಯ ನ್ಯಾಯ ಅನ್ನೋದು ಇಲ್ಲಿ ಪ್ರಶ್ನೆಗೂ ನಿಲುಕದಷ್ಟು ದೂರದಲ್ಲಿರುತ್ತೆ, ಇನ್ನು ಉತ್ತರದ ಕಥೆ ಹಾಗಿರಲಿ. ಎಲ್ಲರೂ ಜಾಣಕುರುಡು-ಕಿವುಡುಗಳನ್ನು ಪ್ರದರ್ಶಿಸುವ ಸೋಗಿಗೆ ಮೊರೆ ಹೋಗುತ್ತಾರೆ.

ಈ ಮೇಲಿನ ಘಟನೆ ಬೆಂಗಳೂರಿನಲ್ಲಿ ನನ್ನ ಮುಂದೆ ನಡೆದಿದ್ದರೆ ನಾನೇನು ಮಾಡುತ್ತಿದ್ದೆ, ಪ್ರತಿಭಟನೆಯ ಹಂತ ಎಲ್ಲಿಯವರೆಗೆ ಹೋಗುತ್ತಿತ್ತು? ಇಂತಹದ್ದನ್ನು ನೋಡಿಯೂ ನೋಡದಿರುವಂತಹ ನಗರದ ಮನಸ್ಥಿತಿ ಸರಿಯೋ, ಇದರಲ್ಲಿ ಸಾಮಾಜಿಕ ನ್ಯಾಯವನ್ನು ಆಗ್ರಹಿಸುವ ಮನೋಸ್ಥಿತಿ ದುರ್ಬಲವಾದದ್ದೇ? ದಿನೇ-ದಿನೇ ಮೋಸಮಾಡುವ ಮಾರ್ಗಗಳನ್ನು ಅವಿಷ್ಕರಿಸುವ ವ್ಯಾಪಾರಿಗಳನ್ನು, ಕಾನೂನು ರಕ್ಷಕರನ್ನು ಹದ್ದುಬಸ್ತಿನಲ್ಲಿಡುವವರಾರು? ಇತ್ಯಾದಿ ಪ್ರಶ್ನೆಗಳು ಎಷ್ಟು ಬೇಗ ಮನದಲ್ಲಿ ಮೂಡುತ್ತವೆಯೋ ಅಷ್ಟೇ ಬೇಗ ಮರೆಯಾಗುತ್ತವೆ.

ಇವೆಲ್ಲ ಕಲಿಯುಗದ ಕೊಡುಗೆ - ಎಂದುಕೊಂಡು ಮತ್ತೊಂದು ಯುಗ ಬರುವವರೆಗೆ ಕಾಯುವುದು ಒಂದು ಆಲ್ಟರ್‌ನೇಟಿವ್!

ಒಂದು ನಾಗರಿಕ ಪಡೆಯನ್ನು ಕಟ್ಟಿ ಕಾನೂನನ್ನು ಕೈಗೆತ್ತಿಕೊಳ್ಳದೇ ಇಂತಹ ಕುತಂತ್ರಗಳಿಗೆ ಉತ್ತರವನ್ನು ಹೇಳುವ ಅವಕಾಶವೊಂದಿದ್ದರೆ...ಎಷ್ಟೋ ಸಾರಿ ಹಲುಬಿ ಸುಮ್ಮನಾಗಿರುವುದನ್ನು ಬಿಟ್ಟರೆ, ಅಥವಾ ಈ ರೀತಿ ಬರೆಯೋದನ್ನು ಬಿಟ್ಟರೆ ನನ್ನ ಕೈಯಲ್ಲಿ ಬೇರೇನನ್ನು ಮಾಡಲು ಸಾಧ್ಯವಿಲ್ಲದ ಅಸಹಾಯಕತೆ ಅಷ್ಟೆ.

Sunday, April 08, 2007

ಆ ಹಿರಣ್ಯಕಶ್ಯಪೂ ಅಂತ ಮುಟ್ಠಾಳ್ ನನ್‌ಮಗ ಮತ್ತೊಬ್ಬ್‌ನಿಲ್ಲ!

ನಾನೂ ಸುಬ್ಬನೂ ಕಾಫಿ ಕುಡಿಯುತ್ತಾ ಸಂಜೆ ಆರು ಘಂಟೆ ಚಾನೆಲ್ ಸೆವೆನ್ ನ್ಯೂಸ್ ನೋಡಿಕೊಂಡು ಅದೆಲ್ಲೋ ಬೆಂಕಿ ಹೊತ್ತಿಕೊಂಡು ಉರೀತಾ ಇರೋ ದೃಶ್ಯಗಳನ್ನು ನೋಡ್ತಾ ನೊಣ ಹೋಗೋ ಹಾಗೆ ಬಿಟ್ಟ ಬಾಯನ್ನು ಹಾಗೇ ಬಿಟ್ಟು, ಜೊತೆಯಲ್ಲಿ ಕಣ್ಣು ಮಿಟುಕಿಸದೆ ನೋಡ್ತಾ ಕೂತಿದ್ವಿ. ಆ ನ್ಯೂಸ್ ಸ್ಟೋರಿ ಇನ್ನೂ ಮುಗಿದಿರ್ಲಿಲ್ಲ ಅಷ್ಟ್ರೊಳಗೆ ಫೋನ್ ಘಂಟೆ ಬಜಾಯಿಸಿದ್ದನ್ನು ನೋಡಿ ಕಿರಿಕಿರಿಯಾದ ಮುಖ ಮಾಡಿಕೊಂಡು ಹೋಗಿ ಫೋನ್ ಎತ್ತಿ ನೋಡಿದ್ರೆ ವಾಷಿಂಗ್ಟನ್ ಡಿಸಿಯಿಂದ ಶ್ರೀಕಾಂತ್ ಫೋನ್ ಮಾಡಿದ್ದ.

'ಓ ಏನಯ್ಯಾ ಸಮಾಚಾರ...' ಎಂದು ನಾನು ಮುಖ್ಯಮಂತ್ರಿ ಚಂದ್ರೂ ಥರ ರಾಗ ಹಾಕಿಕೇಳಿದ್ದಕ್ಕೆ, ಆ ಕಡೆಯಿಂದ 'ನನ್ನ ಮಗನ ಬರ್ಥಡೇ ಕಣಯ್ಯಾ...' ಎಂದ, ನಾನು ಒಂದು ಕ್ಷಣವೂ ತಡ ಮಾಡದೇ 'ಹ್ಯಾಪ್ಪೀ ಬರ್ಥಡೇ!' ಎನ್ನೋದೇ ತಡ,

'ನಾಟ್ ಸೋ ಫ್ಯಾಸ್ಟ್...ಸ್ವಲ್ಪ ತಡುಕೋ... ಮುಂದಿನ ತಿಂಗಳು ಐದನೇ ತಾರೀಖು ಅವನ ಮೊದಲ ಹುಟ್ಟಿದ ಹಬ್ಬ, ನೀನು ತಪ್ಪಿಸ್ದೇ ಬರಲೇ ಬೇಕು ನೋಡು, ಅದಕ್ಕೆ ಒಂದು ತಿಂಗಳು ಮೊದಲೇ ಹೇಳ್ತಾ ಇದ್ದೀನಿ, ಆಮೇಲೆ ಎತ್ತ್ ಕರ ಹಾಕ್ತು, ಕೊಟಗ್ಯಾಗೆ ಕಟ್ದೆ ಅನ್ನಬೇಡ ಮತ್ತೆ!' ಎಂದು ಆದೇಶ ಕೊಟ್ಟುಬಿಡಬೇಕೆ.

ಸರಿ ಇನ್ನೇನು ಅವನು ಫೋನು ಇಟ್ಟೇ ಬಿಡ್ತಾನೆ ಅಂತ ಅಂದುಕೊಂಡಿದ್ದು ನನ್ನ ತಪ್ಪಾಗಿತ್ತು, ಅವನು ಬರ್ತೀಯೋ ಇಲ್ಲವೋ ಅಂತ ಹಟಹಿಡಿದು ಕೂತುಬಿಟ್ಟ, ನಾನು ಬೇರೆ ಯಾವ್ದೂ ದಿಕ್ಕು ಕಾಣದೇ, 'ಯಾವ್ದೂ ಎಮರ್ಜನ್ಸಿ ಇಲ್ದೇ ಇದ್ರೇ ಬರ್ತೀನಿ ನೋಡಪ್ಪಾ!' ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಸ್ವಲ್ಪ ತಣ್ಣಗಾದೆ, 'ಸರಿ ಇಡ್ತೀನಿ ಮತ್ತೆ...' ಎಂದವನನ್ನು 'ಅಲ್ವೋ ನೀನು ಏಪ್ರಿಲ್ ನಲ್ಲಿ ಮದುವೆಯಾದದ್ದಲ್ವಾ, ಮತ್ತೇ ಮೇ ಗೆ ನಿನ್ನ ಮಗನಿಗೆ ಅದೆಂಗೆ ಒಂದು ವರ್ಷ ಆಯ್ತು... ಎಲ್ಲೋ ಅಮೇರಿಕನ್ ಲೆಕ್ಕಾ ಹಚ್ಚೀದಿ ಏನು?' ಎಂದು ನಕ್ಕೆ. ಅವನು 'ಗುರುವೇ, ಅದು ಎರಡು ವರ್ಷದ ಹಿಂದಿನ ಏಪ್ರಿಲ್ಲು, ನಿನ್ನೆ ಮೊನ್ನೆ ಆದಂಗಿದೆ ಮದುವೆ!' ಎಂದು ಗಹಗಹಿಸಿದ...'ಸರಿ ಮತ್ತೆ...' ಎಂದವನನ್ನು ಕಳಿಸಿಕೊಟ್ಟೆ.

ಇನ್ನೂ ಟಿವಿ ಮುಖ ನೋಡ್ತಾ ಇದ್ದ ಸುಬ್ಬ ಆಗಲೇ ಕಾಫಿ ಹೀರಿ ಲೋಟಾ ಬದಿಗಿಟ್ಟಾಗಿತ್ತು, ನನ್ನ ಕಾಫಿ ಲೋಟ ಅದರ ಬಿಸಿಹಬೆಯನ್ನು ಕಳೆದುಕೊಂಡು ಮಾರ್ಕೆಟ್‌ನಲ್ಲಿ ಒಂದೇ ದಿನದಲ್ಲಿ ಅರ್ಧದಷ್ಟು ಸ್ಟಾಕ್ ಬೆಲೆಯನ್ನು ಕಳೆದುಕೊಂಡ ಸನ್‌ಮೈಕ್ರೋಸಿಸ್ಟಂ ಸ್ಟಾಕ್‌ನಂತಾಗಿಹೋಗಿತ್ತು.

'ಕೊನೆಗೆ...ಬೆಂಕಿ ಕಥೆ ಏನಾಯ್ತು? ಎಷ್ಟು ಜನ ಸತ್ರೋ?' ಎಂದೆ...ಸುಬ್ಬನ ಕಡೆಯಿಂದ ಉತ್ತರ ಬರೋದು ಒಂದು ನ್ಯಾನೋ ಸೆಕೆಂಡು ತಡವಾದಂತೆನಿಸಿತು.

'ಆ ಹಿರಣ್ಯಕಶ್ಯಪೂನಂತ ಮುಟ್ಠಾಳ್ ನನ್‌ಮಗ ಇನ್ನೊಬ್ಬನಿಲ್ಲ!' ಎಂದು ಅದೆಲ್ಲಿಂದ್ಲೋ ಒಂದು ನಾಟಕದ ಡೈಲಾಗೇನೋ ಅನ್ನುವಷ್ಟು ಮಟ್ಟಿಗೆ ಕಾಮ್ ಆಗಿ ಹೇಳಿಬಿಟ್ಟ. ನಾನು ಬೆಂಕಿಗೂ-ಹಿರಣ್ಯಕಶ್ಯಪೂಗೂ ಏನು ಸಂಬಂಧ ಅನ್ನೋ ರೀತಿ ಅವನ ಕಡೆ ನೋಡಿದ್ದಕ್ಕೆ...ನನ್ನ ಕನ್‌ಫ್ಯೂಷನ್ನಿಗೆ ಒಂದು ದಮಡಿ ಬೆಲೇನೂ ಕೊಡದೇ ಅವನು ಮತ್ತೆ ಮುಂದುವರೆಸಿದ...

'ಅದಕ್ಕೇ ತಲೆ ಇಲ್ದಿದ್ದ್ ನನ್‌ಮಕ್ಳು ಅನ್ನೋದ್ ನೋಡು, ಅಷ್ಟೊಂದು ವರ್ಷ ಕಷ್ಟಾಪಟ್ಟು ತಪಸ್ಸು ಮಾಡಿ, ದೇವ್ರು ಎದ್ರಿಗೆ ಬಂದ್ರೆ, ನನಿಗೆ ಹಂಗ್ ಸಾವ್ ಬರಬಾರ್ದು, ಹಿಂಗ್ ಸಾವ್ ಬರಬಾರ್ದು ಅಂತ ಕೇಳಿದ್ನೇ ವಿನಾ, ನಾನೊಂದು ನೂರೋ, ಸಾವ್ರಾನೋ ವರ್ಷಾ ನೆಟ್ಟಗೆ ಬದುಕಿರೋ ಹಂಗ್ ಮಾಡು ಶಿವನೇ ಅಂದಿದ್ರೆ ಅವರಪ್ಪನ್ ಮನೆ ಗಂಟ್ ಹೋಗ್ತಿತ್ತಾ?'

ಇದರಲ್ಲಿ ಯಾವುದೋ ಒಂದು ಪುಡುಗೋಸಿ ಲಾಜಿಕ್ಕಿದೆ, ಆದ್ರೂ ಚಾನೆಲ್ ಸೆವೆನ್ ನ್ಯೂಸಿಗೂ, ಬೆಂಕಿ ಅವತಾರಕ್ಕೂ, ಹಿರಣ್ಯಕಶ್ಯಪೂಗೂ ಎಲ್ಲೆಲ್ಲಿಂದ ಸಂಬಂಧ ಬಂತೋ ಎಂದು ತಲೆಕೆಡಿಸಿಕೊಂಡ ನನ್ನ ಪಜೀತಿ ಸಮಾಜಶಾಸ್ತ್ರದ ಹುಡುಗ ಅಬ್‌ಸ್ಟ್ರ್ಯಾಕ್ಟ್ ಕ್ವಾಂಟಮ್ ಮೆಕ್ಯಾನಿಕ್ಸ್ ತರಗತಿಯನ್ನು ಹೊಕ್ಕಿ ಮೊದಲ ಬೆಂಚಿನಲ್ಲಿ ಕೂತಹಾಗಿತ್ತು.

ಸದ್ಯ, ಸುಬ್ಬನೇ ಸ್ವಲ್ಪ ವಿವರಿಸಿದ, ನಾನು ಇಮಿಗ್ರೇಷನ್ ಆಫೀಸರ್‌ನಿಂದ ತಪ್ಪಿಸಿಕೊಂಡಂತೆ ನಿರುಮ್ಮಳವಾದೆ...'ಅದೇ ನಿಮ್ ಶ್ರೀಕಾಂತ್ ಫೋನ್ ಮಾಡಿದ್ನಲ್ಲಾ, ಅದರ ಸಲವಾಗಿ ಯೋಚ್ನೇ ಮಾಡೋ ಹಂಗಾತ್ ನೋಡು...ಹಿರಣ್ಯಕಶ್ಯಪೂ ರಾತ್ರಿ ಅಲ್ಲ, ಹಗಲ್ ಅಲ್ಲ, ಒಳಗಲ್ಲ, ಹೊರಗಲ್ಲ, ಮೃಗಗಳಿಂದಲ್ಲ, ನರರಿಂದಲ್ಲ...ಮುಂತಾಗಿ ಎಕ್ಸ್‌ಕ್ಯೂಷನ್ ಹಾಕ್ಕೊಂಡ್ ಹೋಗೋ ಬದಲಿಗೆ ದೇವ್ರೇ ನನ್ ಮಗನ ನೂರಾ ಒಂದನೇ ಹುಟ್ಟು ಹಬ್ಬವನ್ನು ನಾನೂ ಇದೇ ದೇಹದಲ್ಲಿದ್ದುಕೊಂಡು ಸೆಲೆಬ್ರೇಟ್ ಮಾಡೋ ಹಾಗೆ ಮಾಡಪ್ಪಾ...' ಎಂದು ಬೇಡಿಕೊಂಡಿದ್ರೆ...ವಿಷ್ಣೂಗೆ ಮತ್ತೊಂದ್ ಅವತಾರ ಎತ್ತೋ ಪಜೀತೀನೂ ತಪ್ತಿತ್ತು, ಮಾಸ್ಟರ್ ಲೋಹಿತ್‌ನ ಪೀಚಲು ಮಾತಿಗೆ ಸಿಟ್ಟಾಗಿ ರಾಜ್‌ಕುಮಾರ್ ಕಂಭಕ್ಕೆ ಹೊಡೆದಿದ್ದಕ್ಕೆ ಬಿದ್ದಿರೋ ನಮ್ ಬೆಂಗ್ಳೂರಿನ ಗಂಗಾರಾಮ್ ಕಟ್ಟಡಾನೂ ಉಳಿಯೋದು, ಏನಂತಿ?!'

'ಗುರುವೇ, ಇದು ಕಲಿಗಾಲ...ಆಗಿನ್ ಕಾಲದ್ದು ಕಥೇನೇ ಬೇರೆ ಇತ್ತು, ದೇವ್ರು ವರ ಕೇಳೋ ಮುಂಚೆ ಈ ರಾಕ್ಷಸರ ಬುದ್ದೀನೆಲ್ಲ ಕಡ್ಡೀ ಹಾಕಿ ಕೆದಡಿ ಬಿಡ್ತಿದ್ದರಂತೆ, ಅಂತಾದ್ದರಲ್ಲಿ ಹಿರಣ್ಯಕಶ್ಯಪೂ ಅಷ್ಟೊಂದ್ ಎಕ್ಸ್‌ಕ್ಲೂಷನ್ ಕಂಡೀಷನ್ನಾದ್ರೂ ಹೇಳ್ದಾ, ಅವನ ಜಾಗ್ದಲ್ಲಿ ನೀನೇನಾದ್ರೂ ಇದ್ರೆ, ಒಂದು ಮಸಾಲೆ..., ಎರಡು ಕಾಲೀ... ಎಂದು ಕೃಷ್ಣಭಟ್ಟರ ಹೋಟ್ಲಿನ ಮಾಣಿಯ ಹಾಗೆ ಆರ್ಡರ್ ಕೊಡ್ತಿದ್ದೆ ನೋಡು' ಎಂದು ನಕ್ಕೆ.

'ಸುಮ್ನೇ ಮಾತಿಗ್ ಅಂದೆ, ಈ ನರಸಿಂಹಾವತಾರದ ಪಾಸಿಬಿಲಿಟಿಯನ್ನು ಯಾವನಾದ್ರೂ ಬಯೋಟೆಕ್ನಾಲಜಿ ಸೈಂಟಿಸ್ಟಿಗೆ ಬಿಡೋಣ...ಅದಿರ್ಲಿ ಮುಂದಿನ್ ತಿಂಗ್ಳು ಶ್ರೀಕಾಂತನ ಮನೆಗ್ ಹೋಗ್ತೀಯೇನು?' ಎಂದ.

'ನೋಡೋಣ, ಇನ್ನೂ ಒಂದ್ ತಿಂಗಳಿದೆಯಲ್ಲಾ...' ಎಂದು ಅದೇನೋ ನೆನಪಾದವನ ಹಾಗೆ ನಟಿಸಿ 'ಹಿರಣ್ಯಕಶ್ಯಪೂ ತಪಸ್ಸು ಮಾಡಿ ವರಕೇಳೋ ಹೊತ್ತಿಗೆ ಅವನಿಗೆ ಮಕ್ಳಿದ್ದವೇನು?' ಎಂದು ಕಣ್ಣು ಮಿಟುಕಿಸಿದೆ.

'ಗೊತ್ತಿಲ್ಲಪ್ಪಾ, ಆಗಿನ್ ಕಾಲದ ತಪಸ್ಸುಗಳೆಲ್ಲ ಹತ್ತು-ನೂರು ವರ್ಷಗಳ ತನಕಾನು ಇರ್ತಿದ್ದವಂತೆ, ಇನ್ನು ಮಕ್ಳು ಮಾಡೋಕೆ ಪುರುಸೊತ್ತೆಲಿರುತ್ತೆ? ಅಕಸ್ಮಾತ್, ಪ್ರಹ್ಲಾದ ಇರಲಿಲ್ಲ ಅಂದುಕೋ, ನಾನ್ ಹೇಳ್‌ಕೊಟ್ಟಂಗೆ ವರವನ್ನು ಕೇಳಿದ್ರೆ ಒಂದಿಷ್ಟು ವರ್ಷ ಆಯಸ್ಸು ಗಟ್ಟಿ ಇರೋದ್ರ ಜೊತೆಗೆ ಒಂದು ಗಂಡ್ ಮಗೂನು ಹುಟ್ಟಿರೋದಾ...' ಎಂದು ಬರೋಬ್ಬರಿ ವ್ಯಾಪಾರವಾದ ಹೊಟೇಲಿನ ಕೃಷ್ಣಭಟ್ಟರ ನಗೆ ನಕ್ಕ.

'ನನಗೇನೋ ಅನುಮಾನ, ನೀನೂ ಅದ್ ಯಾವ್ದೋ ಜನ್ಮದಲ್ಲಿ ಹಿರಣ್ಯಕಶ್ಯಪೂ ಆಗಿದ್ದಿಯೋ ಏನೋ...' ಎಂದು ತಿವಿದೆ, ವಾತಾವರಣ ತಿಳಿಯಾಯಿತು!

Thursday, April 05, 2007

ಮರೆಯಾದ ಮಲೆನಾಡಿನ ಐಸಿರಿ


ತನ್ನ ಪರಿಸರದ ಮೇಲೆ ಅಪಾರವಾದ ಕಾಳಜಿ, ಸುತ್ತಲನ್ನು ಸೂಕ್ಷ್ಮವಾಗಿ ನೋಡೋ ಮನಸ್ಥಿತಿ, ಘಂಟೆಗಟ್ಟಲೆ ಒಂದು ವಸ್ತುವನ್ನು ಅಧ್ಯಯನ ಮಾಡುತ್ತಿದ್ದ ಪಕ್ಷಿ ಬ್ರಹ್ಮ, ಕರ್ವಾಲೋವಿನ ಸೃಷ್ಟಿಕರ್ತ, ಅವರ ಪೀಳಿಗೆಯ ಬರಹಗಾರರಿಗೆ, ಚಿಂತಕರಿಗೆ ಸವಾಲಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಮನಗಂಡಿದ್ದ ಶೋಧಕ - ಹೀಗೆ ಹಲವಾರು ವಿಶೇಷಣಗಳಿಂದ ತೇಜಸ್ವಿಯವರನ್ನು ಗುರುತಿಸಬಹುದು.

'ಅವರು ಮುಸುಡಿಗೆ ಮಸಿ ಬಳೀದೆ ಫೇರ್ ಅಂಡ್ ಲವ್ಲಿ ಹಚ್ಚೋಕಾಗುತ್ಯೇ?' ಎಂದು ಒಂದೇ ಸಾಲಿನಲ್ಲಿ ಕಿರಣ್ ಮೋರೆ ಪ್ರಸಂಗಕ್ಕೆ ಉತ್ತರಕೊಟ್ಟು ಬುದ್ಧಿಜೀವಿಗಳ ಸೋಗಿನ ಉತ್ತರಕ್ಕೆ ಜೋತು ಬೀಳದೇ ತಮ್ಮ ಮನಸ್ಸಲ್ಲಿದ್ದುದನ್ನು ನೇರವಾಗಿ ಹಂಚಿಕೊಂಡವರು.

ಸೆಲೆಬ್ರಿಟಿಯ ಮಕ್ಕಳಾಗಿ ಹುಟ್ಟಿ ಬೆಳೆದವರಿಗೆ ಅವರದ್ದೇ ಆದ ಒಂದು ಸವಾಲಿರುತ್ತದೆ - ತಮ್ಮ ಪೋಷಕರಿಗಿಂತ ತಾವು ಎಷ್ಟು, ಹೇಗೆ, ಎಲ್ಲಿ ಭಿನ್ನರು ಅಥವಾ ಪೋಷಕರ ನಡೆನುಡಿಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬಹುದು ಅಥವಾ ತಮ್ಮದೇ ಆದ ಒಂದು ಐಡೆಂಟಿಟಿಯನ್ನು ಹೇಗೆ ಸೃಷ್ಟಿಸಿಕೊಳ್ಳಬಹುದು - ತಾವು ಏನು ಮಾಡಿದರೆ ತಮ್ಮ ತಂದೆ-ತಾಯಿಯರ ಸಾರ್ವಜನಿಕ ಬದುಕಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಮುಂತಾಗಿ ಹಲವಾರು ಆಲೋಚನೆಗಳು ನಿರಂತರವಾಗಿ ಅವರನ್ನು ಸುತ್ತುತ್ತಲೇ ಇರುತ್ತವೆ. ಒಬ್ಬ ರಾಷ್ಟ್ರಕವಿಯ ಮಗನಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಮಗನಾಗಿ, ಒಬ್ಬ ಪ್ರಸಿದ್ಧ ಕವಿ ಕಾದಂಬರಿಕಾರನ ಮಗನಾಗಿ ತಮ್ಮನ್ನು ತಾವು ಗುರುತಿಸಿಕೊಂಡಾಗೆಲ್ಲ ಹೊಸತೇನಿದೆ ಎಂದು ಹಲವಾರು ಬಾರಿ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹೀಗಿದ್ದಾಗ್ಯೂ ತಮ್ಮದೇ ವಿಶೇಷತೆಗಳಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಬೇಕಾದವರಾಗಿದ್ದ ತೇಜಸ್ವಿಯವರನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದೇ ಹೇಳಬೇಕು.

***

ಈ ಎಲ್ಲ ನಿಟ್ಟಿನಲ್ಲಿ ತೇಜಸ್ವಿ (ಪೂಚಂತೇ) ನಮ್ಮ ನಡುವಿನ ಒಬ್ಬ ಮಹಾನ್ ಚೇತನವಾಗಿದ್ದರು. ಕ್ರಾಂತಿರಂಗ-ಸಮಾಜವಾದ ಮುಂತಾಗಿ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ೭೦-೮೦ ರ ದಶಕದಲ್ಲಿ ಸ್ವಲ್ಪ ತಿಣುಕಿದಂತೆ ತೋರಿದ್ದರೂ, ಒಬ್ಬ ಬರಹಗಾರನಾಗಿ, ಕೃಷಿಕ-ಆರಂಭಕಾರನಾಗಿ, ಹಾಗೂ ಕನ್ನಡದಲ್ಲಿ ಪಕ್ಷಿಗಳ ಬಗ್ಗೆ ಬರೆದ ಅವರ ಅನೇಕ ಲೇಖನಗಳು, ಅವರು ಸೃಷ್ಟಿಸಿದ ಹಲವಾರು ಪಾತ್ರ-ಚಿತ್ರಣಗಳು ಅವರದ್ದೇ ಆದ ವಿಶೇಷವಾದ ಸ್ಥಾನವನ್ನು ಯಾವತ್ತು ನಮ್ಮ ಮನದಲ್ಲಿ ನಿಲ್ಲಿಸಿದೆ.


ಡಿಸ್ಕವರಿ ಚಾನೆಲ್‌ನಲ್ಲಿ ಹಾರೋ ಓತಿಕ್ಯಾತಗಳನ್ನು ನೋಡಿದಾಗಲೆಲ್ಲ ತೇಜಸ್ವಿಯರ ನೆನಪು ಬರೋದು ಖಂಡಿತ. ಅವರ ಕನ್ನಡದ ಕರ್ವಾಲೋ, ಅದರಲ್ಲಿನ ಚಿಂತನೆಗಳು ಯಾವ ಅಂತಾರಾಷ್ಟ್ರೀಯ ಡಾಕ್ಯುಮೆಂಟರಿಗಿಂತ ಕಡಿಮೆಯೇನಿರಲಿಲ್ಲ. ಮೂಡಿಗೆರೆಯಂತಹ ಊರಿನಲ್ಲಿದ್ದುಕೊಂಡು ಬಹುಮುಖಿ ಚಿಂತನಗಳನ್ನು ನಡೆಸುತ್ತಿದ್ದ ಚೇತನಕ್ಕೆ 'ಅಂತರಂಗ'ದ ನಮನ!

Wednesday, April 04, 2007

Abort, Retry, Ignore?

ನೆನೆಪಿದೆಯೇ, good old DOS days? ಲೇಟ್ ೮೦ರ ದಶಕದಲ್ಲಿ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್‌ ಅನ್ನು ಕಲಿತವರಿಗೆ ಡಾಸ್ (ಡಿಸ್ಕ್ ಆಪರೇಟಿಂಗ್ ಸಿಸ್ಟಮ್) ಒಂದು ವರದಾನವಾಗಿದ್ದಿರಬೇಕು, ಏಕೆಂದರೆ ಒಂದು ಸಂಪೂರ್ಣ ಆಪರೇಟಿಂಗ್ ಸಿಸ್ಟಮ್ ಅನ್ನು ಐದೂ ಕಾಲು ಇಂಚು ಪ್ಲಾಪ್ಪಿ ಡಿಸ್ಕ್ ನಲ್ಲಿ ಜನಜನಿತ ಮಾಡುವ ಕಾರ್ಯತಂತ್ರ ಮೈಕ್ರೋಸಾಪ್ಟ್ ನವರಿಗಲ್ಲದೇ ಇನ್ಯಾರಿಗೆ ಸಿದ್ಧಿಸಬೇಕು?

ಡಾಸ್ ದಿನಗಳಲ್ಲಿ ಪ್ರತಿಯೊಂದು ಕಮ್ಯಾಂಡುಗಳ ವಿವರಗಳನ್ನು ಬೆರಳತುದಿಯಲ್ಲಿಟ್ಟುಕೊಂಡು ಅದರ ಕಮ್ಯಾಂಡುಗಳನ್ನು ಕಷ್ಟಮೈಜ್ ಮಾಡಿಕೊಂಡು ನಮ್ಮದೇ ಆದ ಮೆಸ್ಸೇಜುಗಳನ್ನು ಸೃಷ್ಟಿಸಿಕೊಂಡು ಒಬ್ಬೊರಿಗೊಬ್ಬರು ತೋರಿಸಿ ನಗುತ್ತಿದ್ದ ದಿನಗಳವು...ಈಗ ಹಿಂತಿರುಗಿ ನೋಡಿದರೆ ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳಾಗಿ ಹೋಯಿತೇ ಎನ್ನಿಸಿಬಿಡುತ್ತದೆ, ಆದರೆ ಅವೆಲ್ಲವೂ ನಿನ್ನೆ ಮೊನ್ನೆಯ ಘಟನೆಗಳ ಹಾಗೆ ತೋರಿಬರುವುದು ಆ ದಿನಗಳ ಜೀವಂತಿಕೆಯನ್ನು ತೋರಿಸಿಕೊಡುತ್ತದೆ! (ಬಿಲ್ ಗೇಟ್ಸ್‌ಗೆ ಇನ್ನೂ ಡಾಸ್ ನ ಸೋರ್ಸ್ ಕೋಡ್ ನೆನಪಿದೆಯಂತೆ, ಅದೆ ಬೇರೆ ವಿಷಯ.

ಆಗ ಪ್ಲಾಪ್ಪಿ ಡಿಸ್ಕ್‌ಗಳನ್ನು ಹೆಚ್ಚುಹೆಚ್ಚು ಬಳಸುತ್ತಿದ್ದ ದಿನಗಳಲ್ಲಿ ಯಾವುದಾದರೂ ಡಿಸ್ಕ್ ಅನ್ನು ಹಾಕಿದಾಗ ಅದು ಕರಪ್ಟ್ ಆಗಿಯೋ ಅಥವಾ ಇನ್ಯಾವುದೇ ಕಾರಣಗಳಿಂದಲೋ 'Abort, Retry, Ignore?' (ARI) ಎನ್ನುವ ಮೆಸ್ಸೇಜು ಬರುತ್ತಿದ್ದುದು ಸಾಮಾನ್ಯಾವಾಗಿತ್ತು. ಈ ಮೆಸ್ಸೇಜಿನ ಮೇಲೆ ನನ್ನದೊಂದು ಫಿಲಸಾಫಿಕಲ್ ಹರಟೆಯಷ್ಟೇ:
'Abort, Retry, Ignore?' ಮೆಸ್ಸೇಜುಗಳನ್ನು ನಮ್ಮ ನಡುವಿನ ಸಂಬಂಧಗಳಿಗೂ ಅಪ್ಲೈ ಮಾಡಿದರೆ ಹೇಗೆ? ಹಲವು ವರ್ಷಗಳ ಅಲ್ಲಿ-ಇಲ್ಲಿನ ತಿರುಗಾಟದಲ್ಲಿ, ಕೆಲಸಕ್ಕೆ ಸಂಬಂಧಿಸಿದಂತೆ, ಪ್ರವೃತ್ತಿಗೆ ಸಂಬಂಧಿಸಿದಂತೆ ದೊರೆಯುವ ಅವಕಾಶಗಳಲ್ಲಿ ಎಷ್ಟೋ ಜನ ಬರುತ್ತಾರೆ ಎಷ್ಟೋ ಜನ ಹೋಗುತ್ತಾರೆ, ಇಂಥವರಲ್ಲಿ ನಮ್ಮ ಫೋನ್‌ಗಳಲ್ಲಿರುವ ಕಾಂಟ್ಯಾಕ್ಟ್ ನಂಬರುಗಳಿಂದ ಹಿಡಿದು ಆಡ್ರಸ್ ಬುಕ್ಕುಗಳವರೆಗೆ ಬೇಕಾದಷ್ಟು ಜನ ಬಂದು ಸೇರಿಕೊಂಡರೂ ಅವರನ್ನೆಲ್ಲ ನಾವು ನಮ್ಮ ಅನುಕೂಲಕ್ಕೆ, ಅಗತ್ಯಕ್ಕೆ ತಕ್ಕಂತೆ, ಅಥವಾ ನಮ್ಮ ನಡುವಿನ ಸಂಬಂಧಗಳ ಆಧಾರದ ಮೇಲೆ ಆಗಾಗ್ಗೆ ping ಮಾಡುತ್ತೇವಲ್ಲ...ಅಂತಹ ಇನಿಷಿಯೇಟಿವ್‌ಗಳಿಗೂ ಹಳೇ ಡಾಸ್ ಕಮ್ಯಾಂಡಿನ ಮೆಸ್ಸೇಜನ್ನು ಅಪ್ಲೈ ಮಾಡಿದರೆ ಹೇಗೆ?

Abort - ಕೆಲವು ಸಂಬಂಧಗಳನ್ನು ಸುಲಭವಾಗಿ ಅಬಾರ್ಟ್ ಮಾಡಬಹುದು; ಯಾರಿಗಿದೆ ಅವುಗಳ ಅಗತ್ಯ? ತೊಲಗಿ ಹೋಗಿ ಸಂಬಂಧಗಳೇ ನಿಮ್ಮ ಅಗತ್ಯ ಒಮ್ಮೆ ಇದ್ದಿರಬಹುದು, ಆದರೆ ಈಗ ಇಲ್ಲ - ಏನೋ ಬದುಕಿದ್ದೀರೋ ಇಲ್ಲವೋ ನೋಡಲು ಹೋದರೆ ಎರರ್ ಮೆಸೇಜ್‌ಅನ್ನು ಕಳಿಸುತ್ತೀರೋ? ನಿಮ್ಮನ್ನು ತೆಗೆದುಹಾಕಿ ಬಿಡುತ್ತೇನೆ...ತೊಲಗಿ!

Retry - ಕೆಲವು ಸಂಬಂಧಗಳನ್ನು ರಿ ಟ್ರೈ ಮಾಡಲೇ ಬೇಕಾಗುತ್ತದೆ, ಈಗ ಅವುಗಳ ಅಗತ್ಯವಿದೆಯೋ ಇಲ್ಲವೋ ಮುಂದೆ ಎಂದಾದರೊಮ್ಮೆ ಬೇಕಾಗುತ್ತದೆ ಎಂತಲೋ ಅಥವಾ ಈ ರೀತಿಯ ಸಂಬಂಧಗಳು ಸೂಕ್ಷ್ಮ ಎಂತಲೋ, ಅವುಗಳಿಗೆ ನೋವು ಮಾಡುವ ಕಷ್ಟ ಯಾರಿಗೆ ಬೇಕು ಅಥವಾ ಮತ್ತೊಮ್ಮೆ ಪ್ರಯತ್ನ ಮಾಡಬಾರದೇಕೆ...ಕೊನೆಗೂ ಸಿಗದಿದ್ದರೆ ಅಭಾವ ವೈರಾಗ್ಯದಲ್ಲಿ ಮತ್ತೊಂದನ್ನೇನೋ ಮಾಡಿದರಾಯಿತು!

Ignore - ಇಂತಹ ಸಂಬಂಧಗಳು ಇದ್ದರೂ ಇಲ್ಲದ ಹಾಗೆ ಜಾಣ ಕುರುಡು/ಕಿವುಡುಗಳ ಸಹಾಯದಲ್ಲಿ ಸುಮ್ಮನಿದ್ದರಾಯಿತು, ಅವುಗಳು ಮಾಡುವ ping ಗಳನ್ನು ಪುರಸ್ಕರಿಸಬೇಕು ಎಂದೇನೂ ಇಲ್ಲ. 'ಸದ್ಯಕ್ಕೆ ನಿಮ್ಮ ಅಗತ್ಯ ನಮಗಿಲ್ಲ' ಎನ್ನುವುದೇ ಜಾಣತನವಾಗಿಹೋಗಿ, ಕಡೆಗಣಿಸುವುದೇ ಖಂಡಿತವಾಗಿ ಹೋಗುತ್ತದೆ - ಓಹ್, ನೀವು ಇದ್ದೀರೋ ನನಗೆ ಗೊತ್ತಾಗಲೇ ಇಲ್ಲ!

***

ಒಂದಿಷ್ಟು ಜನ ಈ ಮೇಲಿನ ಮೇಸ್ಸೇಜುಗಳ ಜೊತೆಗೆ Fail ಎನ್ನುವುದನ್ನು ಸೇರಿಸಿಕೊಳ್ಳುತ್ತಾರೆ, ಆದರೆ ನಾನು ಕೇವಲ ARI (ಅರಿ)ಗಳಿಗೆ ಶರಣಾಗುತ್ತೇನೆ. ಫೈಲ್ ಅನ್ನೋದು ನೆಗೆಟಿವ್ ಪದ, ಅದು ನನಗೇಕೆ ಅನ್ವಯವಾಗಬೇಕು, ನಾನು ಸ್ವತಂತ್ರ, ನನ್ನ ಸಂಬಂಧ-ನಡವಳಿಕೆಗಳು ನನ್ನ ಸುತ್ತ-ಮುತ್ತ ಕೇಂದ್ರೀಕರಿಸಿಕೊಂಡಿರುವವು, ಪೈಲ್ಯೂರ್ ಎನ್ನುವುದೇನಾದರೂ ಇದ್ದರೆ ಅದು ನನಗಲ್ಲ, ನಾನು ಊರ್ಧ್ವ ಮುಖಿ, ಆಶಾಜೀವಿ, ನನಗಾನಿಕೊಂಡ ಬದುಕು, ಅದರ ಪರಿಧಿಯಲ್ಲಿ ಸುತ್ತುವ ಸಂಬಂಧಗಳ Fail ಆಗಲಾರವು...ಅರಿಗಳಿಗೆ ಶರಣು...

ಇದೇ ಮಾತನ್ನು ಶಾಂತಿನಾಥ ದೇಸಾಯರ ಥರ ಹೇಳೋದಾರೆ " 'ಅರಿ'ಗಳಿಗೆ ಶರಣು ಹೋಗೋಣ!".

Monday, April 02, 2007

ಹಿರಿಯರು-ಕಿರಿಯರು

ಕ್ರಿಕೇಟ್ ಬಗ್ಗೆ ಬರೆಯೋದಕ್ಕೆ ನಾನ್ಯಾರು, ಬ್ಯಾಟ್ ಮುಟ್ಟದೇ ಎಷ್ಟೊ ವರ್ಷಗಳಾಗಿ ಹೋಗಿರೋವಾಗ...

`ಹಿರಿಯ ಆಟಗಾರರಿಗೆ ಕಿರಿಯರನ್ನು ಕಂಡರೆ ಅಷ್ಟಕ್ಕಷ್ಟೆ. ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿದರೆ ಎಲ್ಲಿ ತಮ್ಮ ಸ್ಥಾನಕ್ಕೆ ಚ್ಯುತಿ ಬರುತ್ತದೋ ಎಂಬ ಕಾರಣಕ್ಕೆ ಕಿರಿಯರ ಬೆನ್ನುತಟ್ಟುವ ದೊಡ್ಡ ಮನಸ್ಸನ್ನು ಹಿರಿಯರು ಮಾಡಲ್ಲಿಲ. ಅದರಿಂದ ನಾಯಕ ದ್ರಾವಿಡ್ ಮೇಲೆ ಒತ್ತಡವಿತ್ತು' ಎಂಬುದು ಚಾಪೆಲ್ ಅಭಿಪ್ರಾಯ ಎಂದು ಚಾನೆಲ್ ತಿಳಿಸಿದೆ... ಎಂದು ಪ್ರಜಾವಾಣಿ ವರದಿಯಲ್ಲಿ ಓದಿದ ಮಾತ್ರಕ್ಕೆ ನಮ್ಮಲ್ಲಿ ಹಿರಿಯ ಮುಂದಾಳುಗಳು ಕಿರಿಯರನ್ನು ಬೆಂಬಲಿಸೋದೇ ಇಲ್ಲ ಎನ್ನೋ ಮಾತನ್ನು ನಾನು ಒಪ್ಪಲಾರೆ, ಎಲ್ಲ್ರರೂ ಅವರವರ ಅನಿಸಿಕೆಗಳಿಗೆ ಬಾಧ್ಯಸ್ಥರು ಅನ್ನೋ ಹಾಗೆ ಚಾಪೆಲ್ ಅಭಿಪ್ರಾಯದ ಜೊತೆಗೆ ನನ್ನದೂ ಒಂದೆರೆಡು ಇರಬಾರದೇಕೆ?

ನಾವಿಸ್ ಆಟಗಾರನಾಗಿ ಆರಂಭಿಸಿ ವೆಟಿರನ್ ಆಗಿ ರಿಟೈರ್ ಆಗುವವರೆಗೆ ಅಥವಾ ತಂಡದಿಂದ ಹಿಡಿದು ಹೊರಗೆಳೆಯುವವರೆಗೆ ಆಟಗಾರರು ತಮ್ಮ ಹಿಂದೆ Wills ಸಿಗರೆಟ್ಟೋ ಅಥವಾ ಕೋಕಾಕೋಲ ಲೈಯಬಿಲಿಟಿಯ ಟ್ರೈಲ್ ಅನ್ನು ಬಿಟ್ಟು ಕಾಸುಮಾಡಿಕೊಂಡು ಜೀವನ ಪರ್ಯಂತ 'ದೊಡ್ಡ ಮನುಷ್ಯ'ರಾಗಿ ಮೆರೆಯುವರೆಗೆ, ಅಥವಾ 'ದೇಶದ್ರೋಹ'ದ ಪಟ್ಟವನ್ನು ಅನ್‌ಅಫಿಷಿಯಲ್ ಆಗಿ ತಲೆಮೇಲೆ ಹೊತ್ತು ಮುಖ್ಯವಾಹಿನಿಯಿಂದ ದೂರವಾಗುವವರೆಗೆ, ಅಥವಾ ವೈಯುಕ್ತಿಕ ದಾಖಲೆಗಳನ್ನು ಹುಟ್ಟಿಸುವುದೇ ಆಟ - ತಂಡ ಏನು ಬೇಕಾದರೂ ಮಾಡಿಕೊಳ್ಳಲಿ ಎನ್ನುವ ಹಪಾಹಪಿತನದ ದಾಹವನ್ನು ಒಡಲಲ್ಲಿಟ್ಟುಕೊಂಡೋ ಅಥವಾ ಕಾಮೆಂಟರಿ ಬಾಕ್ಸನ್ನು ಒಂದಲ್ಲಾ ಒಂದು ದಿನ ಸೇರುವುದೇ ಜೀವನದ ಪರಮೋದ್ದೇಶವಾಗುವುದಾದರೆ ಹಾಗೇ ಇರಲಿ ಬಿಡಿ, ಯಾರು ಬೇಡಾ ಅಂದೋರು...

ನಿಮಗೆಲ್ಲ ನೆನಪಿದೆಯೇ ಇಲ್ಲವೋ ಇಮ್ರಾನ್ ಖಾನ್ ಪಾಕಿಸ್ತಾನ ತಂಡದಿಂದ ನಿವೃತ್ತಿ ಆಗೋ ಹೊತ್ತಿಗೆಲ್ಲಾ ಒಂದು ಕಿರಿಯ ಪೀಳಿಗೆಯನ್ನು ಬೆಳೆಸಿ ಹೊಸ ತಂಡವನ್ನು ಮುನ್ನಡೆಸೋ ಎಲ್ಲಾ ಕಾರ್ಯತಂತ್ರವನ್ನು ರೂಪಿಸಿ ಆಗಿತ್ತು ಎಂದು ನನ್ನ ನಂಬಿಕೆ. ಬಾಲ್ ಟ್ಯಾಂಪೆರಿಂಗ್‌ನಿಂದ ಹಿಡಿದು ಡ್ರಗ್ ಅಬ್ಯೂಸ್ ಇನ್ಸಿಡೆನ್ಸುಗಳನ್ನೊಳಗೊಂಡು, ಬೆಟ್ಟಿಂಗ್ ಹಗರಣದಲ್ಲಿ ಸಿಕ್ಕಿ ಹಲವಾರು ಸುದ್ದಿಗಳಿಗೆ ಆಹಾರವಾದರೂ ತಂಡದಲ್ಲಿ ಯುವ ಪ್ರತಿಭೆಗಳಿಗೆ ಇಂಬುಕೊಟ್ಟು ಮುನ್ನಡೆಸುವ ಕಾಯಕವನ್ನು ಪಾಕಿಸ್ತಾನದ ಕ್ಯಾಪ್ಟನ್ನುಗಳು ಭಾರತ ತಂಡದವರಿಗಿಂತ ಚೆನ್ನಾಗಿ ಮಾಡಿದ್ದಾರೇನೋ ಎಂದು ನಿಮ್ಮನ್ನೇ ಕೇಳಬೇಕು...ಆದರೆ ನಮ್ಮ ನಾಯಕರು, ಅದರಲ್ಲಿ ನಮ್ಮ ಈಗಿನ ತಂಡದಲ್ಲಿ ಹಿಂದೆ ನಾಯಕರಾಗಿ ಇರುವಂತಹವರು ಇವರೆದ್ದೆಲ್ಲಾ ಏನು ಲೆಗಸಿ ಎಂದು ಬಹಳಷ್ಟು ಯೋಚನೆ ಮಾಡಿದರೆ ಅವರವರ ಪರ್ಸನಲ್ ರೆಕಾರ್ಡುಗಳನ್ನು ಬಿಟ್ಟರೆ ನನ್ನ ಕಣ್ಣಿಗೆ ಬೇರೇನೂ ಕಾಣಲಿಲ್ಲ - ಅದು ನನ್ನ ಕುರುಡುತನವಾದರೆ ಎಷ್ಟೋ ಒಳ್ಳೆಯದು!

ಚಾಪೆಲ್ ಹೇಳಿಕೆಯನ್ನು ಒಬ್ಬ ಕೋಚ್ ಹೇಳಿಕೆ ಎನ್ನುವುದಕ್ಕಿಂತ ಒಬ್ಬ ಹೊರಗಿನವನ ಮಾತಿನಂತೆ ಕೇಳಿ ತಿಳಿದುಕೊಂಡರೆ ಅದರಲ್ಲಿ ಯಾವುದೇ ರಹಸ್ಯವೇನೂ ಇಲ್ಲ - ಪ್ರತಿಯೊಬ್ಬ ಆಟಗಾರ ತಂಡದಲ್ಲಿ ಆರಂಭಿಸಿ ಬೆಳೆದು, ನಿವೃತ್ತಿ ಹೊಂದುವ ಹೊತ್ತಿಗೆ ತನ್ನದೇ ಆದ ಒಂದು ಐತಿಹಾಸಿಕ ದಾಖಲೆಯನ್ನು ಬಿಡುವುದರ ಜೊತೆಗೆ ಕ್ರಿಕೆಟ್ಟನ್ನು ಐದು-ಹತ್ತು ವರ್ಷಗಳ ಭವಿಷ್ಯದ ಕಾಲಚಕ್ರದಲ್ಲಿ ನೋಡುತ್ತಾರೋ ಇಲ್ಲವೋ ಎನ್ನುವುದನ್ನು ಸತ್ಯಾನ್ವೇಷಿಗಳಿಗೇ ಬಿಡೋಣ, ಏಕೆಂದರೆ ನಮ್ಮಂತಹ ಸಾಧಾರಣದವರು ಹುಡುಕಿದರೆ ಸಿಗುವಂತಹ ಸರಳ ಸತ್ಯವದೇನೂ ಅಲ್ಲ!

ಟೀಮ್ ಸ್ಪಿರಿಟ್ ಸರಿ, ಎಲ್ಲ ಜೊತೆಗೂಡಿ ಆಡಿ ಟೀಮಿನ ಗುರಿಯನ್ನು ಮುಟ್ಟುವುದು ಸರಿ, ಮುಂದೆ ಟೀಮಿನಿಂದ ವ್ಯವಸ್ಥಿತವಾಗಿ ಹೊರಸರಿಯುವ ಮುನ್ನ, ಸರಿದ ಮೇಲೆ ಹಿರಿಯ ಮುಂದಾಳುಗಳು, ಅನುಭವಿಗಳು ತಮ್ಮ ಸಾರವನ್ನು, ಹಿತವಚನವನ್ನು ಕಿರಿಯರ ಸೋಲಿನ-ಗೆಲುವಿನಲ್ಲಿ ಕಂಡುಕೊಂಡಿದ್ದರೆ...ಎನ್ನುವುದೊಂದು ಆಶಾವಾದವಷ್ಟೇ!

Sunday, April 01, 2007

Heavy Metal


ನಾವೆಲ್ಲ ಯಾವ್ದೋ ಆಫೀಸ್ ಸಂಬಂಧಿ ಕೆಲಸದಲ್ಲಿ ಒಂದು ಹತ್ತು ಜನ ದೊಡ್ಡದೊಂದ್ ಕಾನ್‌ಫರೆನ್ಸ್ ರೂಮು ಹಿಡಿದು ವಾರಗಟ್ಟಲೆ ಕೆಲಸ ಮಾಡೋ ಪ್ರಸಂಗವೊಂದು ಇತ್ತೀಚೆಗೆ ಬಂದಿತ್ತು - ರಿಲೀಸ್ ಸಂಬಂಧಿ ಕೆಲಸಗಳಿಗೆ 'ವಾರ್ ರೂಮ್' ಅಂತ ಕರೆದುಕೊಂಡು ಅಲ್ಲಿ ತಲೆಕೆಡಿಸುವ, ಕೆಡಿಸಿಕೊಳ್ಳಬಹುದಾದ ವಿಷಯಗಳನ್ನೆಲ್ಲ ಒತ್ತೊಟ್ಟಿಗೆ ಹಾಕಿಕೊಂಡು 'ಕುಕ್' ಮಾಡುವ, ಅವುಗಳನ್ನು ಸಂಶೋಧಿಸಿ, ಝಾಡಿಸಿ ನೋಡಿ ಸೊಲ್ಯೂಷನ್ ಕಂಡುಹಿಡಿಯಲ್ ಒಬ್ಬೊಬ್ಬರ ಒಂದೊಂದು ಬ್ರೈನ್ ಸಾಕಾಗೋದಿಲ್ಲ, ಅದರ ಬದಲಿಗೆ ಹಲವರ ಹತ್ತು ಬ್ರೈನ್‌ಗಳನ್ನು ಕಂಬೈನ್ ಮಾಡಿ ಆ ಸಿನರ್ಜಿಯಿಂದ ಪ್ರಪಂಚ ಉದ್ಧಾರವಾದೀತೇನೋ ಎಂಬುದು ನಮ್ಮ ದೊಡ್ಡವರ ದೂರದೃಷ್ಟಿ, ಆದರೆ 'ವಾರ್ ರೂಮ್' ಗಳು ಹರಟೆ ಕೋಣೆಗಳಾಗುವುದಕ್ಕೆ ಹೆಚ್ಚು ಹೊತ್ತೇನೂ ಬೇಕಾಗೋದಿಲ್ಲ, ಒಂದೆರಡು ದಿನಗಳಲ್ಲೇ ಎಲ್ಲರ ಒಳ-ಹೊರಗಿನ ವಿಷಯಗಳು ಹೊರ-ಒಳ ಬಂದು ಅದು ಚರ್ಚಾಸ್ಪದವಾಗುವುದು ನಮ್ಮಲ್ಲಿ ಸಾಮಾನ್ಯವಾಗಿತ್ತು.

ಯಾವನೋ ಒಬ್ಬ ಸಮಯ ಸಿಕ್ಕಾಗ ಇಂಟರ್ನೆಟ್ ರೆಡಿಯೋದಲ್ಲಿ ಅದೇನನ್ನೋ ಹೊರಡಿಸಿ ರೂಮನ್ನು ಆ ಸಂಗೀತ/ಹಾಡುಗಳಿಂದ ಕಲಕುವ ಪ್ರಯತ್ನ ಮಾಡುತ್ತಿದ್ದ ಸುಸಮಯದಲ್ಲಿ ನಾನು ನನ್ನ ಕೆಲಸವನ್ನು ಮಾಡಿಕೊಂಡು ಸುಮ್ಮನಿದ್ದಾಗ ನನ್ನ ಬಾಸ್ 'what is your favourite music?' ಎಂದು ನನ್ನನ್ನುದ್ದೇಶಿಸಿ ಪ್ರಶ್ನೆಯನ್ನು ಎಸೆದುಬಿಡೋದೆ? ಗದ್ದಲವೆದ್ದ ವಾರ್ ರೂಮ್ ನಿಶ್ಯಬ್ದದ ಸ್ನೇಹಿತನಾಗಿ ಕ್ಷಣ ಕಾಲದಲ್ಲಿ ಬದಲಾಗಿ ಹೋಯಿತು. ಎಲ್ಲರೂ ಉತ್ತರಕ್ಕೆಂದು ನನ್ನ ಮುಸುಡಿಯನ್ನು ನೋಡುತ್ತಿದ್ದಾರೇನೋ ಎಂದೆನ್ನಿಸಿ ನನಗೆ ಸುಮಾರಾಗಿ ಹೋಯಿತು - rhetorical ಪ್ರಶ್ನೆಯನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳೋ ನನ್ನಂತಹವನಿಗೆ ಇನ್ನು ಬಾಸ್ ನೇರವಾಗಿ ಪ್ರಶ್ನೆ ಕೇಳಿಬಿಟ್ಟರೆ...

ಸುಮ್ನೇ 'hip-hop' ಅಥವಾ 'rap' ಎಂದು ಮುಗುಳ್ನಕ್ಕು ಸುಮ್ಮನಿರಬಹುದಿತ್ತು, ಆದರೆ ಅದರ ನಂತರ ಬರುವ 'who's your favourite?' ಎನ್ನುವ ಪ್ರಶ್ನೆಗೆ ಏನು ಉತ್ತರ ಹೇಳೋದು....'Notorious BIG...' ಎಂದು 'Biggie Biggie Biggie can't you see, sometimes your word just hyptnotize me...' ಎಂದು ಹಾಡಿ ತೋರಿಸಬಹುದಿತ್ತೋ ಏನೋ, ಆದರೆ ಅದು ನನ್ನ ನಿಜವಾದ ಉತ್ತರವಲ್ಲ...,ಒಂದು ರೀತಿ Lier Lier ಸಿನಿಮಾದ ಜಿಮ್ ಕ್ಯಾರಿಯ ಪರಿಸ್ಥಿತಿ.

'classical' ಎಂದು ಬೆಥೋವನ್ನೋ, ಮೋಝಾರ್ಟೋ, ಎಂದು ಸುಮ್ಮನಿದ್ದಿರಬಹುದಿತ್ತು...ಆದರೆ 'really?' ಎಂದು ಅದರ ಹಿಂದೆ ನನ್ನನ್ನೇ ಪ್ರಶ್ನಿಸುವ ಮನದೊಳಗಿನ ಸರದಾರರನ್ನು ಹೇಗೆ ಸುಮ್ಮನಿರಿಸೋದು?

Snoop Dawg, 50 cents, Usher, Rickie Martin, Reeba McEntire, LeAnn Womack, Jennifer Lopez, Eddier Vedder, ಮುಂತಾದವರ ಮುಖಗಳು ಹಳೇ ಕನ್ನಡ ಸಿನೆಮಾದ ಪ್ಲ್ಯಾಷ್‌ಬ್ಯಾಕಿನಂತೆ ಮನಃಪಟಲದಲ್ಲಿ ಒಂದು ನ್ಯಾನೋಸೆಕೆಂಡಿನಲ್ಲಿ ಮೂಡಿ ಮರೆಯಾದವು.

What ever happens...ಎಂದುಕೊಂಡು ನನ್ನ ನಿಜವಾದ ಉತ್ತರವನ್ನು ಹೇಳಿದೆ ...'h e a v y m e t a l'
'really!?' ಎಂದು ಹಲವಾರು ಬಿಳಿ/ಕಪ್ಪು ಗಂಟಲೊಳಗಿನ ಸ್ವರಗಳು ಅಂಬಿನಿಂದ ಹೊರಟ ಬಾಣದಂತೆ ನನ್ನ ಕಿವಿ ಪರದೆಯನ್ನು ತಲುಪಿದವು...ಅವರು ನನ್ನಿಂದ ಈ ಉತ್ತರವನ್ನು ಏಕೆ ನಿರೀಕ್ಷಿಸಲಾರರು ಎಂದು ನನಗೆ ಚೆನ್ನಾಗಿ ಗೊತ್ತು, ಆದರೂ ನಿಜವಾಗಿ ಹೇಳೋದಾದರೆ ಅವರು ಅರ್ಥ ಮಾಡಿಕೊಂಡ/ಮಾಡಿಕೊಳ್ಳಬಲ್ಲ ಸಂಗೀತದ ಸೀಮಿತೆಯಲ್ಲಿ ಹೆವಿ ಮೆಟಲ್ಲನ್ನು ನಾನು ಹೆಚ್ಚೂ ಕಡಿಮೆ ಆರಾಧಿಸೋದು ಎಂದರೆ ತಪ್ಪಾಗಲಾರದು... ಸರಿ, '...like what bands?' ಎಂದು ನನ್ನ ತಲೆಯನ್ನು ಕೊರೆಯುವ ಪ್ರಶ್ನೆಗಳಿಗೆ ನಿಧಾನವಾಗಿ 'Led Zeppelin..., Def Leppard...' ಎಂದೆ, ಕೆಲವರು '80s...' ಎಂದರು, ಇನ್ನು ಕೆಲವರು ಪ್ರಶ್ನಾರ್ಥಕವಾಗಿ ನೋಡುತ್ತಾರೆ ಎನ್ನುವುದನ್ನು ಬಿಟ್ಟರೆ ಮತ್ತೇನನ್ನೂ ಹೇಳಲಿಲ್ಲ.

ನನಗೆ ಉತ್ತರಾದಿ ಸಂಗೀತದ ಅಬ್‌ಸ್ಟ್ರ್ಯಾಕ್ಟ್ ರಾಗಗಳಲ್ಲಿ ಅಸ್ಥೆ ಹೆಚ್ಚು, ದಕ್ಷಿಣಾದಿ ಅಷ್ಟಕಷ್ಟೇ, ಹೆಚ್ಚು ಹಿಡಿಸೋದಿಲ್ಲ ಎನ್ನೋದಕ್ಕಿಂತ ರಾಗ ನುಡಿಸುವ ಕೊರಳು, ಬೆರಳುಗಳಿಗೆ ಚಿನ್ನದ ಉಂಗುರ, ಝರಿಯ ಪೀತಾಂಬರದ ಸೋಗನ್ನು ಲೇಪಿಸಿ ಕೃಷ್ಣನೇ ಸರ್ವಸ್ವ ಎಂದು ಹಾಡುವ ಹಾಡುಗಳಲ್ಲಿ ಪದಲಾಲಿತ್ಯ ನನಗೆ ಇಷ್ಟವಾದಂತೆ ಆ ರಾಗದ ಮಾಧುರ್ಯತೆ, ಕೃಷ್ಣನ ಮೂರ್ತಿಯನ್ನು ಮನದಲ್ಲಿ ಅಷ್ಟೊಂದು ವಿಜೃಂಬಣೆಯಿಂದ ತಂದೇನೂ ನಿಲ್ಲಿಸೋದಿಲ್ಲ. ಅದರ ಬದಲಿಗೆ ಸಂಗೀತ ಸಾಗರದಲ್ಲಿ ಕಷ್ಟಪಟ್ಟು ಈಜಿ, ಕೊಳೆಯಾದ ಬನೀನಿನಲ್ಲೇ ಕಚೇರಿ ಕೊಡುವ ನಮ್ಮ ಗುರುಗಳು ನನಗೆ ಬಹಳ ಅಚ್ಚುಮೆಚ್ಚು. ಉತ್ತರಾದಿ ಸಂಗೀತಕ್ಕೆ ಕೃಷ್ಣನ ವರ್ಣಿಸಿ ಹಾಡಬೇಕಾದ ಮಿತಿಯಿಲ್ಲ, ಜರಿ ಪೀತಾಂಬರ ಸೋಗಿಲ್ಲ, ಕೈಯ ಬೆರಳುಗಳಲ್ಲಿ ಶೋಭಿಸುವ ಉಂಗುರಗಳಿರಲಿ, ಉಗುರು ಕತ್ತರಿಸುವ ಅಭೀಪ್ಸೆಯೂ ಇಲ್ಲ. ಉತ್ತರಾದೀ ಸಂಗೀತಕ್ಕೆ ಬ್ರಾಹ್ಮಣನೇ ಆಗಬೇಕು ಎಂದೇನೂ ಇಲ್ಲ, ಮುಸಲ್ಮಾನರೂ ಹಾಡಿ ಸೊಬಗನ್ನು ಹೆಚ್ಚಿಸಿ ಅಫಘಾನಿಸ್ತಾನದಿಂದ ಹಿಡಿದು ಹಿಂದೂಸ್ಥಾನದ ವರೆಗೆ ಯಾವ ಮಾರುತಕ್ಕೂ ಸಿಕ್ಕದೇ ಇವತ್ತಿಗೆ ಜನನಾಡಿಯಾಗಿರೋದೆ ಅದಕ್ಕೆ ಸಾಕ್ಷಿ - ಬೇಕಾದರೆ ಅಫಘಾನಿಸ್ತಾನದ ಬಗೆಗಿನ ಡಾಕ್ಯುಮೆಂಟರಿಯಲ್ಲಿನ ವೋಕಲ್ ಅನ್ನು ಕಣ್ಣು ಮುಚ್ಚಿ ಆಸ್ವಾದಿಸಿ ಅದರ ಆಂತರಿಕ ಸೌಂದರ್ಯವನ್ನು ನೀವೇ ನೋಡಿ!

ಈ ದೇಶಕ್ಕೆ ಬಂದ ಹೊಸತರಲ್ಲಿ ಒಂದಿಷ್ಟು ರೆಡೀಯೋ ಸ್ಟೇಷನ್ನುಗಳನ್ನು ಟ್ಯೂನ್ ಮಾಡಿ ನೋಡಿ/ಕೇಳುತ್ತಿದ್ದ ಸಂದರ್ಭಗಳಲ್ಲಿ ಬೇರೆಲ್ಲ ಸಂಗೀತಗಳು ಅವುಗಳ ಮಾಧುರ್ಯವನ್ನು ಆ ಕ್ಷಣಕ್ಕೆ ನಿರ್ಮಿಸಿ ಮುಂದೆ ಹೋಗುತ್ತಿದ್ದವೇ ವಿನಾ ನನಗೆ ಅವುಗಳ ಪದಗಳು ಹೆಚ್ಚು ಗೊತ್ತಾಗುತ್ತಿರಲಿಲ್ಲ. ಆ ಮೊದಲಿನ ದಿನಗಳಲ್ಲೇ ನಾನು ಹೆವಿ ಮೆಟಲ್, ರಾಕ್ ಮ್ಯೂಸಿಕ್‌ಗಳಿಗೆ ಒಂದು ರೀತಿಯ ದಾಸನಾಗಿದ್ದು. ಇಲ್ಲಿ ಪದಗಳು ತಿಳಿಯದಿದ್ದರೇನಂತೆ, ಆ ಬ್ಯಾಸ್ ಗಿಟಾರಿನ ಕಂಪನದ ಮೇಲೆ ಮನಸ್ಸನ್ನು ನಿಲ್ಲಿಸಿದ್ದೇ ಆದರೆ ಸ್ವರ್ಗಕ್ಕೆ ಒಂದೆರೆಡು ಇಂಚಾದರೂ ಹತ್ತಿರವಾದಂತೆಯೇ ಸರಿ!

ಹೀಗೆ 'heavy metal' ಅನ್ನು ಉತ್ತರವಾಗಿ ಕೊಟ್ಟು, ನನಗೆ ತಿಳಿದ ಒಂದೆರಡು ಕಲಾವಿದರ ಬಗ್ಗೆ ವಿವರಿಸಿದ ಮೇಲೆ 'ಓಹ್' ಎನ್ನುವ ಉದ್ಗಾರ ಸುತ್ತಲಿನಿಂದ ಬಂದಿತಲ್ಲದೇ ವಾರ್ ರೂಮಿನ ಜನರು ಅಂದಿನಿಂದ ನನ್ನನ್ನು ಬೇರೆ ರೀತಿಯಲ್ಲಿ ನೋಡತೊಡಗಿದ್ದು ಕಾಕತಾಳೀಯವೇನಲ್ಲ!


***

ನಾನು ಈ ದೇಶದಲ್ಲೇ ಹುಟ್ಟಿ ಬೆಳೆದವನಾಗಿದ್ದರೆ ಉದ್ದಕ್ಕೆ ಕೂದಲನ್ನು ಬಿಟ್ಟು, ಗಡ್ಡಧಾರಿಯಾಗಿ ಇಂತಹ ಯಾವುದಾದರೊಂದು ಹೆವಿ ಮೆಟಲ್ ಬ್ಯಾಂಡನ್ನೊಂದು ಹಿಡಿದುಕೊಂಡು ಅವರ ಜೊತೆಯಲ್ಲೇ ಸುತ್ತುತ್ತಿದ್ದೆ ಎನ್ನೋದು, ನಾನು ನಮ್ಮವರ ನಡುವೆ ಹಂಚಿಕೊಳ್ಳುವ ಜೋಕ್ ಅಥವಾ ಸತ್ಯಸಂಗತಿ!

Thursday, March 29, 2007

ಕಾಲವಾದ kaaloo!




http://kaalachakra.blogspot.com/

ದುರದೃಷ್ಟವಷಾತ್ ಮೊನ್ನೆ ನಡೆದ ಅವಘಡದಲ್ಲಿ ನಮ್ಮೆಲ್ಲರ ಆತ್ಮೀಯ, ಕಾಳೂ, ಕಾಲೂದಾದ, ಕಾಳೂ ಮಾಮ ಎಂದೇ ಜನಪ್ರಿಯವಾಗಿದ್ದ kaaloo ಬೆಳ್ಳಿತೆರೆಯಿಂದ ನಿರ್ಗಮಿಸಿದ್ದನ್ನು ಬಹು ದುಃಖದಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ನಮ್ಮ ನಿಮ್ಮೆಲ್ಲರ ಬಯಲುಸೀಮೆಯ ತೆರೆದ ಧ್ವನಿಯ ಜೊತೆಗೆ ಹೃದಯದಲ್ಲಿ ಕರ್ನಾಟಕದ ರಾಜಕೀಯ ಚಲನವಲನಗಳನ್ನು ತನ್ನದೇ ಆದ ಧಾಟಿಯಲ್ಲಿ ತನ್ನ ಸ್ನೇಹಿತರಾದ ಕೋಡೀಹಳ್ಳಿ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರ ಜೊತೆ ಸೇರಿಕೊಂಡು ದೇವೇಗೌಡ, ಧರಮ್ ಸಿಂಗ್, ಯಡಿಯೂರಪ್ಪ ಮೊದಲಾದವರ ಚೇಲಾಗಳು ಎಷ್ಟೊತ್ತಿಗೆ ಬೇಕಾದರೂ ನನ್ನ ಮನೆ ಕಿಟಕಿ ಗಾಜುಗಳನ್ನು ಒಡೆಯಬಹುದು ಎಂದು ಒಳಗೊಳಗೆ ಹೆದರಿಕೊಂಡೇ ಪುರುಸೊತ್ತಾದಾಗಲೆಲ್ಲ ಭಾರತೀಯ ಕಾಲಮಾನದಲ್ಲಿ ಅಲ್ಲಿನ ವ್ಯತಿರಿಕ್ತ ಮನೋಸಂಕಲ್ಪಗಳ ಕಾದಾಟದಲ್ಲಿಯೂ ತನ್ನ ಮನಸ್ಸಿನ ಚಿತ್ರಗಳನ್ನು ತೆರೆದಿಡುತ್ತಿದ್ದ. ಅಂತಹ kaaloo ಇನ್ನಿಲ್ಲ!

ಆದದ್ದಿಷ್ಟೇ: ಸುಮ್ಮನಿರಲಾರದ ನಾನು ಮೊನ್ನೆ kaaloo ವನ್ನು ರಾತ್ರಿ ಊಟಕ್ಕೆ ನಮ್ಮ ಮನೆಗೆ ಆಮಂತ್ರಿಸಿ ಊಟವಾದ ಬಳಿಕ ಲೋಕಾಭಿರಾಮವಾಗಿ ಹರಟೆ ಹೊಡೆದು ರಾತ್ರಿ ಹನ್ನೊಂದೂವರೆ ಹೊತ್ತಿಗೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಇನ್‌ಫರ್ಮೇಷನ್ ಹೈವೇಯಲ್ಲಿ ಘಂಟೆಗೆ ಸುಮಾರು ೬೦ ಮೈಲಿಯ ವೇಗದಲ್ಲಿ ಡ್ರಾಪ್ ಮಾಡಲು ಹೊರಟಿದ್ದೆ. ಗೂಗಲ್‌ನವರು ಬ್ಲಾಗರ್ ಅಕೌಂಟನ್ನು ಅದೇ ಹೊತ್ತಿಗೆ ಮರ್ಜ್ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ, ಗೂಗಲ್ ವಾಹನ ಮರ್ಜ್ ಆಗುವ ಹೊತ್ತಿನಲ್ಲಿ ನನ್ನ ತಪ್ಪಿನಿಂದಾಗಿ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದ kaaloo ಬಲವಾದ ಹೊಡೆದ ಬಿದ್ದಿದ್ದರಿಂದ ಸ್ಥಳದಲ್ಲೇ ಅಸುನೀಗಿಬಿಟ್ಟರು. ರಕ್ತಸ್ರಾವವೇನೂ ಮೇಲ್ನೋಟಕ್ಕೆ ಕಂಡುಬರದಿದ್ದರೂ ಒಳಗೊಳಗೇ ಹೊಡೆತ ತಿಂದು 'ಬಡವಾ ನೀ ಮಡುಗ್ದಂಗಿರು!' ಎಂದು ಹೇಳಿದ್ದೇ ಅವರ ಕೊನೆ ಉಸಿರಾಗಿ ಹೋಯಿತು.

ಪಲ್ಸ್ ಚೆಕ್ ಮಾಡಿ ನೋಡಿದ ನಾನು ಏನೇ ತಿಪ್ಪರಲಾಗ ಹಾಕಿದರೂ, ಗೂಗಲ್ ವಾಹನದ ಅವಘಡವನ್ನು ವಿವರಿಸಿ ದೊಡ್ಡ ಕಂಪನಿಯವರಿಗೆ ಬರೆದರೂ ಯಾರೂ ನಮ್ಮ kaaloo ವನ್ನು ಉಳಿಸಿಕೊಳ್ಳಲು ಸಹಾಯ ಮಾಡದೇ ಹೋದರು.

kaaloo ವನ್ನು ತಿಂದ ನಮ್ಮ ರಸ್ತೆ, ವಾಹನ, ಗೂಗಲ್ ಅಂತಹ ದೊಡ್ಡ ಕಂಪನಿ, ನನ್ನ capitalistic ಮೈಂಡ್‌ಸೆಟ್ಟಿನವನನ್ನು kaaloo ವಿನ ಆತ್ಮೀಯರಾದ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರೆಲ್ಲರೂ ಹಳಿದಿದ್ದೇ ಹಳಿದಿದ್ದು. 'ನಿಮ್ ಅಮೇರಿಕನ್ ಆಕ್ರಮಿಕೆಯ ವಸಾಹತುಶಾಹಿ ಮನೋಭಾವದ ಮುಂಡಾ ಮೋಚಾ!' ಎಂದೂ, 'ಅಲ್ಲೀ ನೀರ್ ಕುಡ್ದು ಅಲ್ಲಿಗೇ ಜೀತಾ ಮಾಡೋ ನಿಮ್ ಕರ್ಮಕ್ಕೆ ಮೆಟ್ನಾಗ್ ಹೊಡಿಯಾ!' ಎಂತಲೂ, ಇನ್ನೂ ಮುಂತಾಗಿ kaaloo ವನ್ನು ತಿಂದು ಹಾಕಿದ ನನ್ನನ್ನು ದೂರಿ ಹಲವಾರು ಸಂದೇಶಗಳು ನಿರಂತರವಾಗಿ ಬರತೊಡಗಿವೆ.

ಕಳೆದ ವರ್ಷ "ಅಂತರಂಗಿ"ಯನ್ನು ಕೆಲಸದಿಂದ ಬಿಡಿಸಿ 'ಅಂತರಂಗ'ವನ್ನು ಬಸವನ ಹುಳುವಿನಂತೆ ಬಸವಳಿಯುವಂತೆ ಮಾಡಿದ್ದನ್ನು ಜನರು ಇನ್ನೂ ಮರೆಯುವ ಮೊದಲೇ ಮತ್ತೊಬ್ಬ ಹವ್ಯಾಸಿ ಬರಹಗಾರನನ್ನು ಇಲ್ಲವಾಗಿಸಿದ್ದಕ್ಕೆ ಅಥವಾ ಅವರ ಜವಾಬ್ದಾರಿಯನ್ನೂ ನನ್ನ ಮೇಲೆ ಹೇರಿಕೊಂಡು ಈಗಾಗಲೇ mediocre ಕೆಲಸಮಾಡಿಕೊಂಡಿರುವ ನನ್ನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸ ಜನರಿಗೆ ನಾನು ಹೇಳುವುದಾದರೂ ಏನಿದೆ.

kaaloo ವಿನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅಲ್ಲಲ್ಲಿ ಕಾಲೂವಿನ ಆತ್ಮ ಜಾಗರೂಕವಾಗಿ ಏನಾದ್ರೂ ನುಡಿದಿದ್ದೇ ಆದಲ್ಲಿ ಅದನ್ನೂ ಪುರಸ್ಕರಿಸಬೇಕಾಗಿ ನನ್ನ ಮನವಿ. ಪುರುಸೊತ್ತು ಸಿಕ್ಕರೆ kaaloo ವಿನ ಆತ್ಮಕ್ಕೆ ಇಲ್ಲಿ ಶಾಂತಿಕೋರಿ.

Thursday, March 15, 2007

ಸ್ಟಾಪ್ ಸೈನೂ ಸಿಗ್ನಲ್ ಲೈಟೂ






ವಯಸ್ಸಾಗಿರೋ ಕುರುಹು ಅನ್ನೋ ಹಾಗೆ ಪ್ರತಿಯೊಬ್ಬರಿಗೂ ಬೇಕಾದಷ್ಟು ಸೂಚನೆಗಳು ಸಿಗುತ್ತವೆ. ಅವರವರ ಮೂಗಿನ ಹೊಳ್ಳೆಗಳಲ್ಲಿ ಬೆಳೆದು ನಿಂತ ಕೂದಲುಗಳನ್ನು ಕತ್ತರಿಸುವ ಅಗತ್ಯದಷ್ಟು ಸರಳವಾದ ಅಥವಾ ಮದುವೆ-ಮುಂಜಿ ಮಾಡಿಕೊಂಡು ಸಂಸಾರ ಹೂಡುವಷ್ಟು ಸಂಕೀರ್ಣವಾದ ಹಂತಗಳನ್ನು ಎಲ್ಲರೂ ದಾಟಿಕೊಂಡು ಬಂದೇ ಬರುತ್ತಾರೆ. ನಾವು ಬೆಳೆದು ದೊಡ್ಡವರಾದ ಹಾಗೆ ನಮ್ಮ ಬೆಳವಣಿಗೆ, ನಮ್ಮ ಪ್ರಬುದ್ಧತೆ ಎಲ್ಲ ಕಡೆಗಳಲ್ಲೂ ಸಹಾಯ ಮಾಡುತ್ತದೆ ಎನ್ನೋದೇನೋ ನಿಜ, ಆದರೆ ಅದು ಎಷ್ಟೋ ಸಾರಿ ಅಸಹಾಯಕತೆಯನ್ನೂ ತಂದೊಡ್ಡುತ್ತದೆ. ಎಲ್ಲ ಮುಖ್ಯ ನಿಲುವು ನಿರ್ಧಾರಗಳಲ್ಲಿ ಅವರವರನ್ನು ಹೂಡಿಕೊಂಡು ಮುಂದೆ ಬರುವ ಅನಿರೀಕ್ಷಿತ ತಿರುವುಗಳಲ್ಲಿ ಇನ್ನು ಯಾವ ಯಾವ ನಿರ್ಧಾರವನ್ನು ಕೈಗೊಳ್ಳುವುದೋ ಏನೋ ಎನ್ನುವ ಹೆದರಿಕೆಯೂ ಮನೆಮಾಡಿಕೊಂಡಿರುತ್ತದೆ. ಸೇತುವೆ ಬಂದಾಗ ನೋಡಿದರಾಯಿತು ಈಗೇಕೆ ಎನ್ನುವ ಮಾತುಗಳು ಹೇಳಲಿಕ್ಕೆ ಮಾತ್ರ ಚೆಂದವೇನೋ ಅನ್ನಿಸೋದಿಲ್ಲವೇ, ಎಷ್ಟೋ ಸಾರಿ?

ನನ್ನ ಮಟ್ಟಿಗೆ ಹೇಳೋದಾದರೆ ಈ ಕೆಲವು ವರ್ಷಗಳ ಹಿಂದೆ ನಾನು ಟ್ರಾಫಿಕ್ ಸಿಗ್ನಲ್ ಲೈಟುಗಳನ್ನು ಅಪಾರವಾಗಿ ದ್ವೇಷಿಸುತ್ತಿದ್ದೆ, ಅವುಗಳು ನನ್ನ ವೇಗದ ಮಿತಿಯನ್ನು ಅನಗತ್ಯವಾಗಿ ಕಟ್ಟಿ ಹಾಕುವ ಶತ್ರುಗಳು ಎಂದುಕೊಂಡಿದ್ದೆ. ಈ ಅಪರೂಪಕ್ಕೆ ಸಿಗುವ ಲೈಟುಗಳು ನನ್ನಿಂದ ಯಾವುಗಲೂ ಶಾಪ ಹಾಕಿಕೊಳ್ಳುತ್ತಿದ್ದರೆ, ಎಲ್ಲಿ ಬೇಕಂದರಲ್ಲಿ ಸಿಗುವ ಸ್ಟಾಪ್ ಸೈನುಗಳು ನನಗೆ ಯಾವ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಈ ನಗರದ ಬದುಕಿನ ಅಂಗವಾಗಿ ಪ್ರತಿ ಸಿಗ್ನಲ್ ಲೈಟಿಗೆ ಒಂದಕ್ಕೆ ಐದರ ಅನುಪಾತದಲ್ಲಿ ದಾರಿಯಲ್ಲಿ ಎದುರಾಗುವ ಸ್ಟಾಪ್ ಸೈನುಗಳು ಹೇಳಲಿಕ್ಕೆ ಮಾತ್ರ 'STOP' ಎಂದು ಎಲ್ಲ ಕ್ಯಾಪಿಟಲ್ ಲೆಟರುಗಳಲ್ಲಿ ಬರೆದುಕೊಂಡು ಕೆಂಪು-ಬಿಳಿ ಬಣ್ಣದಲ್ಲಿದ್ದರೂ ಅವುಗಳಿಗೆ ನಾನಾಗಲಿ ಅಥವಾ ಮತ್ಯಾರಾಗಲಿ ಕೊಡುತ್ತಿದ್ದ ಗೌರವ ಅಷ್ಟೇ - rolling stop ಮಾಡಿಕೊಂಡು ನಿಂತೆವೋ ಬಿಟ್ಟೆವೋ ಎಂದು ಅತ್ತಿತ್ತ ಗೋಣು ತಿರುಗಿಸಿ ನೋಡಿದಂತೆ ಮಾಡಿ, ದಾರಿ ಹೋಕರಿಗೆ ನಡೆಯಲು ಅವಕಾಶವನ್ನು ಕೊಟ್ಟು ಒಳಗೊಳಗೆ ಬೈದುಕೊಂಡರೂ ಮೇಲ್ನೋಟಕ್ಕೆ ಹಲ್ಲು ಗಿಂಜಿದಂತೆ ಮಾಡಿ ಅವರವರ ಪಾಡಿಗೆ ದಾರಿ ಹಿಡಿಯುವುದು ಎಲ್ಲ ಕಡೆ ಸಾಮಾನ್ಯ ನೋಟ. ಆದರೆ ಅದೇ ಟ್ರಾಫಿಕ್ ಸಿಗ್ನಲ್ ಬಂದಿತೆಂದರೆ ಅದರ ಕಥೆಯೇ ಬೇರೆ, ಕಾರು ಡೆಡ್ ಸ್ಟಾಪಿಗೆ ಬರುವುದೂ ಅಲ್ಲದೆ, ಅನಗತ್ಯವಾಗಿ ವಿಳಂಬವನ್ನು ತಂದೊಡ್ಡುವ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸುವ ಮಹಾಕಾರ್ಯವೂ ನಡೆದು ಹೋಗುವುದು ಸರ್ವೇಸಾಮಾನ್ಯ. ನಮ್ಮ ಮುಂದಿನವರಿಗೆ ಅವರ ಮುಂದಿನವರ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು, ನಮ್ಮ ಹಿಂದಿನವರಿಗೆ ನಮ್ಮ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು ಒಂದು ರೀತಿಯಲ್ಲಿ ವೇಗವನ್ನು ಕಡಿಮೆ ಮಾಡುವುದರ ಜೊತೆಗೆ ದೃಷ್ಟಿಯನ್ನೂ ಸೀಮಿತಗೊಳಿಸುವ ಶತ್ರುಗಳು ಎಂದುಕೊಂಡು ಗಾಡಿ ಓಡಿಸುವುದೇ ಮಾಮೂಲಿಯಾಗಿ ಹೋಗಿತ್ತು.

ಆದರೆ ಇತ್ತೀಚೆಗೆ ನನ್ನ ನಿಲುವುಗಳಲ್ಲಿ ಸಂಪೂರ್ಣ ಬದಲಾವಣೆಯಾಗಿದೆ: ಸ್ಟಾಪ್ ಸೈನುಗಳು ಶತ್ರುವಿನ ಸ್ಥಾನ ಪಡೆದುಕೊಂಡಿದ್ದರೆ, ಸಿಗ್ನಲ್ ಲೈಟುಗಳು ಮಿತ್ರರಾಗಿ ಹೋಗಿವೆ!

ಸ್ಟಾಪ್ ಸೈನುಗಳು ನಮಗೆ ಗೊತ್ತಿದ್ದೋ ಗೊತ್ತಿರದೆಯೋ decision ಬೇಡುವ critical point ಗಳಾಗಿ ಕಂಡುಬರುತ್ತಿವೆ. ಟೂ-ವೇ, ಥ್ರೀ-ವೇ, ಅಥವಾ ಫೋರ್-ವೇ ಸ್ಟಾಪ್ ಸೈನುಗಳಲ್ಲಿ ಯಾವಾಗ ನಿಲ್ಲಿಸಬೇಕು, ಯಾವಾಗ ಹೊರಡಬೇಕು, ಎತ್ತ ನೋಡಬೇಕು ಎಲ್ಲವೂ ನಿಮ್ಮದೇ ಆದ ನಿರ್ಧಾರದ ಮೇಲೆ ಅವಲಂಭಿತವಾಗಿವೆ. ನೀವು ಕಾರಿನಲ್ಲಿ ಕುಳಿತು ಏನೇ ಮಾಡುತ್ತಿರಲಿ, ಯಾವುದೇ ಲೋಕದಲ್ಲಿರಲಿ - ಅದರಿಂದ ಕ್ಷಣಕಾಲವಾದರೂ ಹೊರಗೆ ಬಂದು ಅತ್ತಿತ್ತ ನೋಡಿ, ಶಾಸ್ತ್ರೋಕ್ತವಾಗಿ ಪ್ರತಿಯೊಂದು ಸ್ಟಾಪ್ ಸೈನಿಗೂ ವಿದಾಯ ಹೇಳಿ ಹೊರಡುವ ಪರಿ ಇದೆ ನೋಡಿ ಅದು ನಿಜವಾಗಿಯೂ ನಿಮ್ಮ ಸಂಕಲ್ಪವನ್ನು ಬೇಡುವಂತದ್ದು, ಇದೇ ರೀತಿ ನಗರದ ವಲಯದಲ್ಲಿ ಒಂದರ್ಧ ಘಂಟೆ ಕಾರು ಓಡಿಸಿಕೊಂಡು ಹೋದರೆ ನಿಮಗೆ ಸುಸ್ತಾಗುವುದೂ ಅಲ್ಲದೇ ಕೊನೆಗೆ ಇಡೀ ಊರು, ಕೇರಿ, ವಾತಾವರಣದಲ್ಲಿ ನೆನಪಿರುವುದು ಒಂದೇ - STOP ಎನ್ನುವ ಅಷ್ಟಭುಜಾಕೃತಿಯ ಷಡ್‌ಯಂತ್ರ! ನಾನು ಎಷ್ಟೋ ಸಾರಿ ಯೋಚಿಸಿದ್ದೇನೆ, ಈ ಸ್ಟಾಪ್ ಸೈನ್ ಅನ್ನು ಅಷ್ಟಭುಜಾಕೃತಿಯನ್ನಾಗಿಯೇ ಏಕೆ ಮಾಡಿದರು, ತ್ರಿಕೋನ, ಪಂಚಭುಜ, ಷಡ್ಭುಜಗಳೇಕೆ ಅಲ್ಲ ಎಂದು... ಅಷ್ಟುಭುಜಗಳಲ್ಲಿ ನಾಲ್ಕು ಭುಜಗಳು ನಾಲ್ಕು ದಿಕ್ಕುಗಳನ್ನೂ ಪ್ರತಿನಿಧಿಸಿ, ಇನ್ನೆರೆಡು ಮೇಲೆ ಮತ್ತು ಕೆಳಗಿನ ಲೋಕದಿಂದ ನಿಮ್ಮನ್ನು ಹೊರಗೆ ತಂದು ಆ ಕ್ಷಣದಲ್ಲಿ ಬೇಡುವ ಸ್ಥಳೀಯ ಲೌಕಿಕತೆಯನ್ನು ಸೃಷ್ಟಿಸುವ ಅಥವಾ ಹೇರುವ ಪ್ರತಿನಿಧಿಗಳಾಗಿ ಕಂಡುಬಂದು, ಮತ್ತೆರಡು ನಿಮ್ಮನ್ನು ಹತೋಟಿಯಲ್ಲಿಡುವ ಸರದಾರರಂತೆ ತೋರುತ್ತವೆ. Rolling stop ಮಾಡಿಕೊಂಡು ನಿಂತಹಾಗೆ ಮಾಡಿ ಹೊರಟರೂ ಹೊರಡದಿದ್ದರೂ ನೀವು ಎಷ್ಟೇ ಜಾಗರೂಕರಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ಐದಲ್ಲ, ಕೊನೆಗೆ ಎರಡು ಸ್ಟಾಪ್ ಸೈನುಗಳನ್ನು ನೀವು ದಾಟಿಕೊಂಡು ಮುಂದೆ ಹೋದರೂ (ಹಾಗೆ ಹಿಂದೆ ಬಂದರೂ), ವರ್ಷಗಳು ಕಳೆದ ಮೇಲೆ (ಅಂದರೆ ಐದು, ಹತ್ತು, ಇಪ್ಪತ್ತೈದು...) ನಿಮ್ಮ ಧಕ್ಷತೆ ದಿನೇದಿನೇ ಕಡಿಮೆಯಾಗಿಹೋಗುತ್ತದೆ. ದಿನವೂ ಸ್ಟಾಪ್ ಸೈನಿಗೆ ದರ್ಶನ ಕೊಟ್ಟು ಕಲಿತು ಬೆಳೆದು ನಿಪುಣತೆಯನ್ನು ಪಡೆಯುವುದಿರಲಿ, ವಯಸ್ಸಾಗುತ್ತಿದ್ದ ಹಾಗೆ ಹಿಂದಿನವರು ಹಾರ್ನ್ ಬಜಾಯಿಸುವ ವರೆಗೆ ನೀವು ಸ್ಟಾಪ್ ಸೈನಿನಲ್ಲಿ ಅತ್ತಿತ್ತ ನೋಡುತ್ತಾ ವಿಜ್ಞಾನಿಯ ಮುಖ ಮಾಡಿಕೊಂಡು ಅದೇನೋ ಮಹಾ ಸೂತ್ರವನ್ನು ಬಿಡಿಸುವವರ ಹಾಗೆ ಕಂಡುಬರುತ್ತೀರೇ ವಿನಾ ಸ್ಟಾಪ್ ಸೈನನ್ನು ಬಿಟ್ಟು ಒಂದಿಂಚೂ ಕದಲಿರುವುದಿಲ್ಲ. ದಿನವೂ ಉಪಯೋಗಿಸುವ ಕಂಪ್ಯೂಟರುಗಳು ನಮ್ಮ ವರ್ತನೆಯಿಂದ ಏನನ್ನು ಕಲಿಯದಿದ್ದರೂ ಒಂದು ರೀತಿ ನ್ಯೂಟ್ರಲ್ ಆಗಿಯಾದರೂ ಇರುತ್ತವೆ, ಆದರೆ ಈ ಸ್ಟಾಪ್ ಸೈನುಗಳಿಂದ ನಾವು ಕಲಿಯುವುದೇನೂ ಖಂಡಿತವಾಗಿ ಇಲ್ಲ, ಬದಲಿಗೆ ಎಫಿಷಿಯನ್ಸಿಯನ್ನು ಕಳೆದುಕೊಂಡ ಛಳಿಯಲ್ಲಿ ಸೊರಗಿದ ಹೀಲಿಯಂ ತುಂಬಿದ ಬೆಲೂನಿನಂತಾಗಿ ಮನಸ್ಸು-ಮಿದುಳು ಆಗಿ ಹೋಗುವುದೇ ಹೆಚ್ಚೇನೋ ಎನ್ನಿಸಿದ್ದೂ ಇದೆ.

ಹೀಗಾಗಿಯೇ ಇತೀಚೆಗೆ ನಾನು ಟ್ರಾಫಿಕ್ ಲೈಟುಗಳ ಫ್ಯಾನ್ ಆಗಿರುವುದು. ನೀವೇನೂ ನಿರ್ಧಾರ ಮಾಡಬೇಕಾಗಿಲ್ಲ, ಸ್ವಲ್ಪ ಆಚೀಚೆ ನೋಡುವ ಅಗತ್ಯ ನೆರೆಹೊರೆಯಿಂದ ನೆರೆಹೊರೆಗೆ ಬದಲಾಗಬಹುದಾದರೂ ನಿಮ್ಮ ಪಾಡಿಗೆ ನೀವಿರಬಹುದು, ನಿಮಗೋಸ್ಕರ ಯಾರೋ ಡಿಸಿಶನ್ ಮಾಡುತ್ತಾರೆ, ನಿಮ್ಮ ಮುಂದಿನವರನ್ನು ಅನುಸರಿಸಿಕೊಂಡು ನಿಮ್ಮಷ್ಟಕ್ಕೆ ನೀವು ಹೋದರೆ/ಇದ್ದರೆ ಆಯಿತಪ್ಪಾ, ಸ್ವರ್ಗದಲ್ಲಿ ಇದಕ್ಕಿಂತ ಹೆಚ್ಚು ಸುಖವೆನ್ನುವುದೇನೂ ಇಲ್ಲ! ಸಿಗ್ನಲ್ ಲೈಟಿನಲ್ಲಿ ಕುಳಿತು ತಪಸ್ಸನ್ನು ಮಾಡಿದರೂ, ಧ್ಯಾನವನ್ನು ನಡೆಸಿಕೊಂಡು ಬಂದರೂ, ಅಥವಾ 'ಅತ್ತಿತ್ತ ನೋಡದಂತೆ ಅಂಧಕನ ಮಾಡಯ್ಯಾ ತಂದೆ' ಎಂದು ಹಾಡಿದರೂ ದಿನ, ತಿಂಗಳು, ವರ್ಷಗಳುರುಳಿದ ಬಳಿದ ನಿಮ್ಮ ಬೇಡಿಕೆ ಈಡೇರಿದರೂ ಈಡೇರಬಹುದು. Minding my own business, ದಾರಿಯಲ್ಲಿ ಯಾರು ದಾಟಿದರೇನು ಬಿಟ್ಟರೇನು; ಎದುರುಗಡೆಯಿಂದ ವೆಹಿಕಲ್ ಬರುತ್ತದೆಯೋ ಬಿಡುತ್ತದೆಯೋ, ಕುತ್ತಿಗೆ ನರಗಳು ಅತ್ತಿತ್ತ ತಿರುಗಿ ನೋಡುವ ದುಃಖದಿಂದ ತಪ್ಪಿಸಿದ್ದಕ್ಕಾಗಿ ಥ್ಯಾಂಕ್ಯು ಎಂದು ಹೇಳುವುದೂ ಅಲ್ಲದೇ ನೀವು ಹೀರುತ್ತಿರುವ ಕಾಫಿಯನ್ನು ಹೆಚ್ಚು ರುಚಿಯಾಗಿ ಕಾಣಿಸುವಂತೆ ನಾಲಿಗೆಯ ಟೇಸ್ಟ್ ಬಡ್‌ಗಳಿಗೆ ಅದೇಶವನ್ನೂ ಕೊಡುತ್ತವೆ, ಅಥವಾ ಟೇಸ್ಟ್ ಬಡ್‌ಗಳು ಕಳಿಸಿದ ರುಚಿಯ ಸಂದೇಶವನ್ನು ಇಮ್ಮಡಿಯಾಗಿ ಮಿದುಳು ಮಾಸ್ಟರಿಗೆ ತಲುಪಿಸುತ್ತವೆ ಆಗ ಆ ಕೆಫೀನಿನ ಕಿಕ್ಕೂ ಇಮ್ಮಡಿಯಾಗಿ ಇನ್ನೂ ಎಷ್ಟೋ ಭಯಂಕರ ಐಡಿಯಾಗಳು ನಮಗೆ ಗೊತ್ತಿಲ್ಲದ ಹಾಗೆ ಸೆರೆಬೆಲ್ಲಮ್ಮ್‌ನಲ್ಲಿ ದಾಖಲಾಗುತ್ತವೆ! ಪ್ರಪಂಚದಲ್ಲಿನ ಜನರು ಕಾರು ಓಡಿಸುವಾಗ ಹುಟ್ಟಿ ಎಲ್ಲೋ ಅಡಗಿಕೊಳ್ಳುವ ಐಡಿಯಾಗಳನ್ನು, ಆಲೋಚನೆಗಳನ್ನೆಲ್ಲ ಹಿಡಿದು ಸಂಗ್ರಹಿಸಿ, ಪ್ರಾಸೆಸ್ಸು ಮಾಡಿದ್ದೇ ಆದರೆ ಪ್ರಪಂಚದ ಎಲ್ಲ ನೋವಿಗೂ ಅದರಲ್ಲಿ ಸಮಾಧಾನವಿದೆ ಹಾಗೂ ಎಂತಹ ಸಂದರ್ಭವನ್ನೂ ಗೆಲ್ಲುವ ಆಶ್ವಾಸನೆ ಸಿಗುತ್ತವೆ ಎನ್ನುವುದು ಹೀಗೇ ಕಾರಿನಲ್ಲಿ ಕುಳಿತಾಗ ಹುಟ್ಟಿ ಬೆಳೆದು ಈಗ ಪ್ರಬುದ್ಧವಾಗಿರುವ ನನ್ನ ಅಂಬೋಣ!

STOP ಸೈನುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸಿದ ಸಂದರ್ಭಗಳು ಅನುಪಾತದ ಲೆಕ್ಕದಲ್ಲಿ ನಿಂತು ಹೊರಡುವ ಹಾಗೆ ಮಾಡಿದ ಸಂದರ್ಭಗಳಿಗೆ ಹೋಲಿಸಿದರೆ ಬಹಳ ಕಡಿಮೆ. ಆದರೆ ಟ್ರಾಫಿಕ್ ಲೈಟುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಮಾಣವೇ ಹೆಚ್ಚು. ಅಂದರೆ "STOP" ಎನ್ನುವ ತಲೆ ಬರಹವನ್ನು ಹಗಲು-ರಾತ್ರಿ ಹೊತ್ತು ನಿಂತರೂ ಯಾರೂ ಗೌರವ ಕೊಡದಿರುವ ಇಂತಹವುಗಳನ್ನು ನಾನು ಮಿತ್ರರನ್ನಾಗಿ ಸ್ವೀಕರಿಸಬೇಕೇಕೆ? ಇವುಗಳಿಂದಾಗಿ ನನ್ನ ಕಾಫಿ ರುಚಿ ಅರ್ಧಕ್ಕರ್ಧ ಕಡಿಮೆಯಾಗಿರುವುದೂ ಅಲ್ಲದೇ ರೇಡಿಯೋ ಸ್ಟೇಷನ್ನುಗಳಲ್ಲಿ ಬರುವ ವರದಿ ಫಸ್ಟ್ ಪಿಯುಸಿಯ ಟ್ರಿಗನೋಮೆಟ್ರಿ ಲೆಕ್ಚರ್‌ನಂತೆ ಕಂಡುಬರುತ್ತಿದೆ. ಈ ಕೆಂಪು ಸೈನ್ (ಬೋರ್ಡು) ನನ್ನಲ್ಲಿ ಕೆಂಪು ಬಣ್ಣವನ್ನೂ ಅಸಡ್ಡೆ ಮಾಡುವ ಮನೋಭಾವವನ್ನು ಮೂಡಿಸಿವೆ. ಈ ಪ್ರಪಂಚದಲ್ಲಿರುವ ಸ್ಟಾಪ್ ಸೈನುಗಳನ್ನೆಲ್ಲ ತೆಗೆದು ಬಿಸಾಡಿಬಿಟ್ಟರೆ ಹೇಗೆ? ಇವು "STOP" ಎಂದು ಯಾರಿಗೆ ಆದೇಶವನ್ನು ಕೊಡುತ್ತಿವೆ, ನನ್ನಂತಹವರನ್ನು ನಿಲ್ಲಿಸಲು ಇವು ಯಾರು, ಇವುಗಳ ಹಕ್ಕೇನು? ಇವುಗಳ ಅಷ್ಟಕೋನಗಳಲ್ಲಿ ಯಾವ ಯಾವ ಷಡ್‌ಯಂತ್ರ ಅಡಗಿದೆಯೋ ಯಾರು ಬಲ್ಲರು? ಎಂಟೂ ಕಡೆಯಿಂದ ಒತ್ತಡವನ್ನು ಹೇರುವ ಇವುಗಳ ಆಟ ಅತಿಯಾಯಿತಪ್ಪಾ ಎಂದು ಅನ್ನಿಸೋದಿಲ್ಲವೇ?

ನಾನೊಬ್ಬ ಮುಕ್ತ ಜೀವಿ, ಡ್ರೈವಿಂಗ್ ಮಾಡುವುದು ನನ್ನ ಹಕ್ಕಲ್ಲ, ಅದು ನನ್ನ ಪ್ರಿವಿಲೇಜ್ ಎಂದು ಗೊತ್ತಿದೆ, ಆದರೆ ಸುಖಾಸುಮ್ಮನೆ ಸ್ಟಾಪ್ ಎಂದು ಕಾಪಿಟಲ್ ಲೆಟರುಗಳಲ್ಲಿ ಕೆಂಪು-ಬಿಳಿ ಬಣ್ಣದ ಈ ಸೈನುಗಳನ್ನು ಯಾರಾದರೂ ಕಿತ್ತು ಹಾಕಿ, ಕೊನೇಪಕ್ಷ ಏನಿಲ್ಲವೆಂದರೂ ಬಣ್ಣವನ್ನು ಬದಲಿಸಿ, "Stop" ಎಂದು ತಿದ್ದಿ, ಪ್ಲೀಜ್!

Thursday, March 08, 2007

ದೊಡ್ಡ ಮನುಷ್ಯರಾದ ಹಾಗೆ...

ದೊಡ್ಡ ಮನುಷ್ಯರಾದ ಹಾಗೆ ಆಫೀಸಿಗೆ ಬೆಳಿಗ್ಗೆ ಬೇಗ ಬರಬೇಕು ಹಾಗೂ ಸಂಜೆ ಆಫೀಸಿನಲ್ಲಿ ಲೇಟ್ ಆಗಿ ಇರಬೇಕು ಅಂತ ರೂಲ್ಸ್ ಏನಾದರೂ ಇದೆಯಾ ಅಂತ ಎಷ್ಟೋ ಸರ್ತಿ ಯೋಚ್ನೆ ಬಂದಿದ್ದಿದೆ. ಕೆಲವೊಂದ್ ಸರ್ತಿ ಆಫೀಸಿಗೆ ನಾನೇನಾದ್ರೂ ತಡವಾಗಿ ಬಂದಿದ್ದೇ ಆದ್ರೆ ಪಾರ್ಕಿಂಗ್ ಲಾಟ್‌ನಲ್ಲಿ ಎಲ್ಲೋ ಒಂದೂ ಸ್ಪಾಟ್ ಸಿಗದೇ ಆ ಕಡೆ ಈ ಕಡೆ ಓಡಾಡೋದು ಒಂದು ರೀತಿ ಹೈ ಸ್ಕೂಲಿನಲ್ಲಿ ತಡವಾಗಿ ಬಂದೋರಿಗೆ ಮೇಷ್ಟ್ರು ಶಿಕ್ಷೆ ಕೊಡುತಿದ್ರಲ್ಲ ಹಾಗೆ ಅನ್ಸುತ್ತೆ.

ನಾನು ಗಮನಿಸಿದ ಹಾಗೆ ನಮ್ಮ ಆಫೀಸಿನಲ್ಲಿರೋ ದೊಡ್ಡ ಮನುಷ್ಯರಿಗೆಲ್ಲ ಹಲವಾರು ಕಾಮನಾಲಿಟಿಗಳಿವೆ: ಒಳ್ಳೊಳ್ಳೆಯ ಕಾರು, ಎಸ್.ಯು.ವಿ.ಗಳನ್ನು ಆಫೀಸಿಗೆ ಹೋಗೋ ಬಾಗಿಲ ಬಳಿಯೇ ಪಾರ್ಕ್ ಮಾಡಿರೋದು, ಬೇಗ ಬಂದು ತಡವಾಗಿ ಹೋಗೋದು, ಯಾವಾಗ ನೋಡಿದ್ರೂ ಸೂಟ್ ಹಾಕ್ಕೋಂಡೇ ಇರೋದು, ದೊಡ್ಡ ದೊಡ್ಡ ಪ್ರಶ್ನೆಗಳನ್ನ ಕೇಳೋದು, ಮಾತೆತ್ತಿದ್ರೆ ಮಿಲಿಯನ್ ಡಾಲರ್ ಅನ್ನೋದು, ಇತ್ಯಾದಿ. ನಾನು ಈ ದೇಶದಲ್ಲಿರೋವರೆಗೆ ಈ ರೀತಿ 'ದೊಡ್ಡ'ವನಾಗೋದಿಲ್ಲ ಅಂತ ಮೊನ್ನೆ ತಾನೆ ನನ್ನ ನೈಜೀರಿಯನ್ ಸಹೋದ್ಯೋಗಿ ನೆನಪಿಸಿದ, ಅವನ ಹೇಳಿಕೆ ಪ್ರಕಾರ ನಾನು ಭಾರತದಲ್ಲೇನಾದ್ರೂ ಕೆಲಸ ಮಾಡಿ ಅಲ್ಲೇ ಇದ್ರೆ ಅಲ್ಲಿ ಪ್ರಸಿಡೆಂಟೋ ಮತ್ತೂಂದೋ ಆಗ್‌ಬಹುದಂತೆ, ಇಲ್ಲಿ ನನ್ನಂತಹವರು ಮೇಲೆ ಹೋಗೋಕೆ ಹೇಗೆ ಸಾಧ್ಯ?

ನಿಜವಾಗಿ ಮೇಲೆ ಹೋಗ್ಲೇ ಬೇಕೇ? ಮೇಲೆ ಹೋದ ಮೇಲೆ ಇನ್ನೇನ್ ಆಗುತ್ತೋ ಬಿಡುತ್ತೋ, ನನ್ನ ಹತ್ರ ಇರೋ ಸಾಲ ಇನ್ನಷ್ಟು ಬೆಳೀದೇ ಇದ್ರೆ ಸಾಕಪ್ಪಾ! ಈ ಅಮೇರಿಕದಲ್ಲಿ ಏನಿಲ್ಲಾ ಅಂದ್ರು ಜೋಬಿನ ತುಂಬಾ ಕಾರ್ಡುಗಳು, ತಲೆ ತುಂಬಾ ಸಾಲದ ಹೊರೆ ಇವೆಲ್ಲಾ ಮಾಮೂಲಿ. ನಮ್ಮ ತಾತ ಬದುಕಿದ ಹಾಗೆ ಸಾಲ ಮುಕ್ತನಾಗಿ ಬದುಕೋದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸತ್ತೆ ಕೆಲವೊಮ್ಮೆ.

ದೊಡ್ಡ ಮನುಷ್ಯರಾದ ಮೇಲೆ ಇನ್ನೇನ್ ಆಗುತ್ತೋ ಬಿಡುತ್ತೋ ಅಂತ ಕಲ್ಪನೆ ಮಾಡ್ಕೊಳ್ತಾ, ಮಾಡ್ಕೊಳ್ತಾ...ಇನ್ನೆಲ್ಲಿ ಯಾವ್ದಾದ್ರೂ ದೊಡ್ಡ ಮನುಷ್ಯರು ಬಂದು ದೊಡ್ಡ ಪ್ರಶ್ನೆ ಕೇಳ್ತಾರೋ ಅಂತ, ನಿಧಾನವಾಗಿ ಆಫೀಸಿನಿಂದ ಜಾಗ ಖಾಲಿ ಮಾಡ್ತೀನಿ!

(ಯಾವ್ದೋ ದೊಡ್ಡ ಮನುಷ್ಯರ ಬೋರಿಂಗ್ ಕಾಲ್ ಮಧ್ಯೆ, ಕೇವಲ ಹತ್ತೇ ನಿಮಿಷದಲ್ಲಿ ಬರೆದಿದ್ದು!)

Friday, March 02, 2007

ಕಡಿಮೆ ಸಮಯವಿದ್ದರೇನಂತೆ, ಹೆಚ್ಚು ಆಸ್ವಾದಿಸುವ ಮನಸ್ಸಿದ್ದರೆ ಆಯಿತಪ್ಪಾ!

ಸೋಮವಾರದಿಂದ ಶುಕ್ರವಾರ ಹೋಗೋದು ಅಂದ್ರೆ ಒಂದ್ ರೀತಿ ಸರತಿ ಸಾಲಿನಲ್ಲಿ ನಿಂತ ವಿಮಾನಗಳ ಹಾಗೆ ಒಂದು ವಾರ ಮುಗಿದ ಮೇಲೆ ಮತ್ತೊಂದು ವಾರ, ಅದರ ಹಿಂದೆ ಇನ್ನೊಂದು, ಮಗದೊಂದು - ಮುಗಿದೇ ಹೋಯಿತು ತಿಂಗಳು, ಹಾಗೆಯೇ ಹೋಯಿತು ವರ್ಷ! ಏನ್ ಮಾಡಿದೀಯಾ ಇಲ್ಲೀವರೆಗೆ ಅಂತ ಯಾರಾದ್ರೂ ಕೇಳಿದ್ರೆ 'ಟೈಮ್ ಇಲ್ಲಾರೀ' ಅಂತ ಹೇಳೋದೊಂದನ್ನು ಬಿಟ್ಟು ಮತ್ತೇನನ್ನೂ ಮಾಡ್ಲೇ ಸಾರ್.

'ಥೂ, ಅವನೌವ್ನ...ಈ ಟೈಮಿಗೇನ್ ಮಾಡ್ಬೇಕು?' ಅಂತ ನಮ್ಮೂರಿನವರು ಯಾರೋ ಕಿವಿ ಹಿಂದುಗಡೆ ಬಂದು ಕೇಳಿದಂಗಾಯ್ತು, ಹಿಂದೆ ತಿರುಗಿ ನೋಡಿದ್ರೆ ಯಾರೂ ಇರ್ಲಿಲ್ಲ. ಅಮೇಲ್ ಅನ್ನಿಸ್ತು, ಅದು ನಂದೇ ಧ್ವನಿ - ಒಂದೊಂದು ಸರ್ತಿ ನಾವ್ ನಾವ್ ಮಾಡೋ ಕರ್ಮಕ್ಕೆ ಒರಟು ಮಾತು ಬ್ಯಾಡಾ ಅಂದ್ರು ಬಂದ್ ಬಿಡುತ್ತೆ. ಆದ್ರೆ ಈ ಬೈಗಳ ಒಳಗಿನ ಸುಖವೇ ಬೇರೆ, ಅದೇನೆ ಇದ್ರೂ ಮನದೊಳಗಿನ ಮಾತನ್ನ ಹೇಳೋ ಒಂದು ವಿಧಾನ ಅಥವಾ ಭಾಷೆ ಕಂಡುಕೊಂಡ ಒಂದು ಹೊಸ ಆಯಾಮ ಅಂತ ದೊಡ್ಡ ಮಾತ್ನಲ್ಲ್ ಹೇಳ್ಳೋ? ಅಥವಾ ನಾವಿರೋದೇ ಹಾಗೆ, ಒರಟು ಮಾತು ಬಿಟ್ರೆ ಬೇರೇನೂ ಬರೋದೇ ಇಲ್ಲ, ಅಂತ ಇರೋ ವಿಷ್ಯಾನ ಇದ್ದ್ ಹಾಗೆ ಹೇಳ್ಳೋ?

ನನ್ನ ಕಾರಿನಲ್ಲ್ ಕುಳಿತೋ, ಆಫೀಸ್ ಕ್ಯೂಬಿನಲ್ಲಿ ಕುಳಿತೋ, ಮನೆಯ ಕುರ್ಚಿಯ ಮೇಲೆ ಕುಕ್ಕರಿಸಿಯೋ, ನಾನು ಮಾಡ್ತೀನಲ್ಲಾ ಹಾಗೆ - ಪ್ರಪಂಚದ ಆಗುಹೋಗುಗಳಿಗೆಲ್ಲಾ ಸ್ವಂದಿಸೋ ಹಾಗೇನಾದ್ರೂ ನೀವೂ ಆಡೋರಾದ್ರೆ - ನಿಮಗೆ ಪ್ರಪಂಚದ ಎಲ್ಲ ಜನರ ಟೈಮನ್ನ ಗುಡ್ಡೇ ಹಾಕ್ ಕೊಟ್ರೂ ಸಾಕಾಗೋದಿಲ್ಲ ನೋಡಿ! ಅದರ ಬದಲಿಗೆ ಒಂದಿಷ್ಟು ನಮ್ಮದೇ ಆದ nitch ಕಂಡ್‌ಕೋಬೇಕು, ಅದರಲ್ಲೇನಾದ್ರೂ ಸಾಧಿಸಿಕೋಬೇಕಪ್ಪಾ, ಆಗ ಎಲ್ಲ ಟೈಮೂ ನಿಮ್ಮ ಬಳಿ ಇದ್ದೇ ಇರತ್ತೆ. ನಿಮಗೆ ಬೆಳಿಗೆ ಒಂಭತ್ತು ಘಂಟೆಯಿಂದ ಸಂಜೆ ಐದು ಘಂಟೆವೆರೆಗಿನ ಎಂಟು ಘಂಟೆಗಳು ಎಷ್ಟು ದೊಡ್ಡ ಸಮಯ ಅಂತ ಅನುಭವಕ್ಕೇನಾದ್ರೂ ಬರಬೇಕು ಅಂದ್ರೆ ನಾನು ಹೇಳ್ದೇ ಅಂತ ಒಂದು ಸಣ್ಣ ಪ್ರಯೋಗಾ ಮಾಡಿ - ಒಂದು ದಿನ ಆಫೀಸಿಗೆ ರಜೆ ಹಾಕಿ, ಮನೆಯಲ್ಲಿ ಸುಮ್ನೇ ಕುಳಿತುಕೊಳ್ಳಿ, ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಓದಿ, ಇಲ್ಲಾ CNBC ಚಾನೆಲ್ ನೋಡಿ, ಇಲ್ಲಾ ಎರಡನ್ನೂ ಮಾಡಿ. ನಡುವೆ ನಿಸರ್ಗ ನಿಯಮದ ಬ್ರೇಕ್‌ಗಳನ್ನು ತೆಗೆದುಕೊಳ್ಳಿ...ಆಗ ಗೊತ್ತಾಗುತ್ತೆ ಎಂಟೊಂಭತ್ತು ಘಂಟೆಗಳು ಅದೆಷ್ಟು ಬೇಗ ಓಡ್ತಾವೆ ಅಂತ! ದಿನಗಳು ನಿಮಗೆ ಬೇಗ ಬೇಗ ಓಡಿ ಹೋಗ್ತಾವೆ ಅಂತ ಅನ್ನಿಸಿದ್ರೆ ಅಂದು ಒಳ್ಳೆಯ ವಿಷಯವೇ ಇರಬಹುದು, ನೀವು ವ್ಯಸ್ತರಾಗಿದ್ರೆ (busy), ನಿಮ್ಮ ಅಸ್ತವ್ಯಸ್ತತೆಯಲ್ಲಿ ಸಮಯ ಓಡಿಹೋಗಿದ್ದೇ ಗೊತ್ತಾಗಲ್ಲ, ಅಥವಾ ಸುತ್ತಲನ್ನು ನೀವು ಗಮನಿಸೋದೇ ಇಲ್ಲ.

ಸೂರ್ಯ ಹುಟ್ತಾನೆ, ಮುಳುಗ್ತಾನೆ - ಅದರಲ್ಲೇನು ವಿಶೇಷ ಅಂತ ಯಾಕ್ ಅಂದುಕೋಬೇಕು? ಬೀಳೋ ಮಳೆ ಹನಿಗಳನ್ನಾಗಲೀ, ಸ್ನೋ ಪ್ಲೇಕ್ಸ್‌ಗಳನ್ನಾಗಲೀ ಯಾಕ್ ನೋಡ್‌ಬೇಕು ಅಂತ ನನ್ನನ್ನೇನಾದ್ರೂ ನೀವು ಕೇಳಿದ್ರೆ ನಿಮಗೆ ನಿಜವಾಗ್ಲೂ ತೊಂದ್ರೆ ಇದೆ ಅಂತ್ಲೇ ನಾನು ಹೇಳೋದು. ಒಂದು ದಿನ ಮಳೆಯಲ್ಲಿ ನೆನೆದುಕೊಂಡೇ ಪಾರ್‌ಕಿಂಗ್ ಮಾಡಿ ಮನೆಗೆ ಬನ್ನಿ, ಮುಖದ ಮೇಲೆ ಬೀಳೋ ಮಳೆ ಹನಿಗಳು ನಿಮಗೇನಾದ್ರೂ ಗುಟ್ಟನ್ನು ಹೇಳ್ತಾವೋ ಕಾದು ನೋಡಿ. ಅದೂ ಬ್ಯಾಡಪ್ಪಾ, ಇನ್ನೇನು ಚೈತ್ರ ಮಾಸ ಬಂತು ತಾನೆ, ನಿಮ್ಮನೇ ಸುತ್ತಲಿರೋ ಮರದ ಎಲೆಗಳು ನಿಧಾನವಾಗಿ ಚಿಗುರೋ ಪ್ರಕ್ರಿಯೆಯನ್ನ ದಿನಕ್ಕೊಮ್ಮೆಯಾದ್ರೂ ಗಮನಿಸಿ, ಒಂದೇ ಒಂದ್ ವಾರ ನೀವು ಹೀಗೆ ಮಾಡಿದ್ದೇ ಅದ್ರೆ, ನಿಮ್ಮ ಮನದ ದುಗುಡ-ದುಮ್ಮಾನಗಳೆಲ್ಲಾ ೧೦ ಪರ್ಸೆಂಟ್ ಕಡಿಮೆಯಾಗ್ತಾವೆ ಅಂದುಕೊಳ್ಳಿ, ನಾನ್ ಗ್ಯಾರಂಟಿ ಕೊಡ್ತೀನಿ!

ಟೈಮಿಗ್ಯಾಕ್ ಬೈಯಬೇಕ್ ಹೇಳಿ? ಎಲ್ಲರಿಗೂ ಇರೋ ಸಮಯ ಇಷ್ಟೇ ಅಂತ ನಿಸರ್ಗ ಸಮತಾವಾದ ಸಾರಿರೋವಾಗ ಅದನ್ನ ಹೇಳಿಯಾಗಲೀ, ಹಳಿದುಕೊಂಡಾಗಲೀ ಏನು ಬಂದೀತು? ಕಡಿಮೆ ಸಮಯವಿದ್ದರೇನಂತೆ, ಸುತ್ತಲನ್ನು ಆಸ್ವಾದಿಸುವ ಮನಸ್ಸಿದ್ದರಾಯಿತ್ತಪ್ಪಾ. ನೀವು ನಾಳೆ ಡ್ರೈವ್ ಮಾಡ್ತೀರಲ್ಲ, ಆಗ ಬರೀ ರಸ್ತೆಯನ್ನ ನೋಡ್ದೇ ಸುತ್ತಮುತ್ತಲೂ ಸ್ವಲ್ಪ ನೋಡಿ, ಏನಾದ್ರೂ ವಿಶೇಷವಾಗಿದ್ದು ಕಂಡು ಬಂದ್ರೆ ನಮಗೂ ಸ್ವಲ್ಪ ತಿಳಿಸಿ, ಆಯ್ತಾ?

Thursday, March 01, 2007

ಮಾರ್ಚ್ ತರುವ ಸುಖಾನುಭವ

ಒಂದು ವಾರದ ಹಿಂದೆ ನಮ್ ಆಫೀಸ್‌ನಲ್ಲಿ 'ನಾನೂ ಜಿಮ್‌ಗೆ ಹೋಗ್ತೀನಿ ಇನ್ನ್‌ಮೇಲೆ' ಎಂದು ಕಣ್ಣುಗಳನ್ನು ಅಗಲಿಸಿ ಸಾರ್ವಜನಿಕವಾಗಿ ಸಾರಿಕೊಂಡು ನೆಲದಿಂದ ಮೂರಡಿ ಮೇಲೆ ಹಾರಿಹೋಗುತ್ತಿದ್ದ ನನ್ನನ್ನು 'when do you have time for that?' ಸಹೋದ್ಯೋಗಿಯೊಬ್ಬಳ ಹಿನ್ನೆಲೆಯಲ್ಲಿ ಬಂದ ಪ್ರಶ್ನೆ ದಿಢೀರನೆ ನನ್ನನ್ನು ಭೂಮಿಗೆ ಕರೆದುಕೊಂಡು ಬಂದಿದ್ದೂ ಅಲ್ಲದೇ ಪಾತಾಳ ಮಾರ್ಗವನ್ನೂ ನಿಚ್ಚಳವಾಗಿ ತೋರತೊಡಗಿತು. 'ಅದು ಮಾಡ್ತೀನಿ, ಇದು ಮಾಡ್ತೀನಿ, ಅದು ಮಾಡಬಲ್ಲೆ, ಇದನ್ನು ಮಾಡಬಲ್ಲೆ...' ಎನ್ನುವ ಎಲ್ಲ ಸ್ವರಗಳಿಗೂ ಉತ್ತರವಾಗಿ 'ಮಾಡಿದ್ದಿಷ್ಟೇ' ಎನ್ನುವ ವಾಸ್ತವ ಇತ್ತೀಚೆಗೆ ಕನ್ನಡಿಯನ್ನು ನೋಡಲೂ ಹೆದರಿಕೆಯನ್ನು ಹುಟ್ಟಿಸಿಬಿಟ್ಟಿದೆಯೇನೋ ಅನ್ನಿಸಿದ್ದೂ ಇದೆ. ಏಕೆಂದರೆ ಇಂತಹ ಸನ್ನಿವೇಶಗಳೇ ನನ್ನ ಹಾಗೂ ಕನ್ನಡಿಯಲ್ಲಿನ ಪ್ರತಿಬಿಂಬದ ನಡುವಿನ (ದ್ವಿಗುಣಗೊಂಡ ದೂರದಲ್ಲಿ) real ಮತ್ತು imaginary ಅವಕಾಶದಲ್ಲಿ ಹೊಸ ತಾಲೀಮು ನಡೆಸುವ ಅಮೆಚೂರ್ ಕಲಾವಿದರನ್ನು ಹುಟ್ಟಿಸೋದು.

But, ಎಲ್ಲ ಬಾಹ್ಯ ಕ್ರಿಯೆಗಳಿಗೂ, 'ಅಂತರಂಗ'ದ ಸಂವೇದನೆಗಳಿಗೂ ನಿಸರ್ಗದ ಯಾವುದಾದರೊಂದು ಬದಲಾವಣೆಯನ್ನು ಅನುವು ಮಾಡಿಕೊಂಡು 'ನಾಳೆಯಿಂದ ಹೀಗಾಗುತ್ತದೆ, ಹಾಗಾಗುತ್ತದೆ...' ಎಂದು ಮಂಡಿಗೆ ಮೇಯದಿದ್ದರೆ ಅದು ಬದುಕಾಗುವುದಾದರೆ ಹೇಗೆ? ಈ ಮಾತು ಹೇಳೋದಕ್ಕೆ ಕಾರಣಗಳು ಬೇಕಾದಷ್ಟಿವೆ: ಪ್ರತಿಯೊಂದು ಹೊಸ ಚೈತ್ರ ಮಾಸ ಯಾರು ಯಾರಿಗೆ ಏನೇನನ್ನು ಮಾಡಿದೆಯೋ ನನ್ನ ಬದುಕಿನಲ್ಲಂತೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ, ತರಬಲ್ಲದು...ಪ್ರಕೃತಿಯಲ್ಲಿನ ವ್ಯವಸ್ಥಿತ ಬದಲಾವಣೆಗಳಿಂದ ಹಿಡಿದು, ಆರ್ದ್ರತೆಯನ್ನು ಕಳೆದುಕೊಂಡ ಗಾಳಿ ಚೇತನವನ್ನು ಪಡೆದುಕೊಂಡು ಬೇಸಿಗೆಯಲ್ಲಿ ಬಿರುಸಾಗುವುದರವರೆಗೆ, ದಿನನಿತ್ಯ ಒಂದಲ್ಲ ಒಂದು ಚಿತ್ತಾರವನ್ನು ಬಿಡಿಸಿ ಮುಂಜಾನೆ-ಸಂಜೆಗಳ ರಂಗನ್ನು ಬಟ್ಟೆ ಅಂಗಡಿಯಲ್ಲಿ ಹೊಸ ಸೀರೆ ತೋರಿಸುವ ಹುಡುಗಿ ಹೊಸ ಸೀರೆಯ ಸೆರಗನ್ನು ಕಷ್ಟಮರುಗಳಿಗೆ ಬಿಡಿಸಿ ತೋರಿಸುವ ಹಾಗೆ ಆಕಾಶದ ಮೂಲೆಯಲ್ಲಿ ಬಿಡಿಸುವ ಥರಾವರಿ ಚಿತ್ರಗಳಿಂದ ಹಿಡಿದು, ದಪ್ಪನೆ ಕೋಟು ಜಾಕೇಟುಗಳನ್ನು ಕಳೆದುಕೊಂಡು ಟಿ-ಶರ್ಟಿನಲ್ಲಿ ಬಯಲಿನಲ್ಲಿ ಆಡುವ ಮಕ್ಕಳಿಂದ ಹಿಡಿದು - ಇನ್ನೂ ಹಲವಾರು ರೀತಿಯಲ್ಲಿ ಹೊಸತನವನ್ನು ಸಾರುವ ಮಾರ್ಚ್ ಮಾಹೆಯನ್ನು ನಾನೂ ಯಾವತ್ತೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಿದ್ದೇನೆ.

ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿಗಳಲ್ಲಿ ನನ್ನೊಳಗೇ ಇರಿಸಿ ಬೇಯಿಸಿಕೊಂಡ ಹಲವಾರು ಆಲೋಚನೆಗಳು ಹೊರಬರಲಿವೆ. ಜೊತೆಯಲ್ಲಿ ಇದೇ ಮಾರ್ಚ್ ತಿಂಗಳು ನನ್ನ ಅಮೇರಿಕೆಯ ಬದುಕಿಗೂ ಅಫಿಷಿಯಲಿ ಹತ್ತು ವರ್ಷಗಳನ್ನು ಸಾರುವ ಸಂಭ್ರಮವಿದೆ. ನವೆಂಬರ್ ೨೨, ೨೦೦೫ ರಂದು 'ಅಂತರಂಗ'ವನ್ನು ತೆರೆದಿದ್ದರೂ ನಿಜವಾಗಿ ನಾನು ಇಲ್ಲಿ ಬರೆಯಲು ಆರಂಭಿಸಿದ್ದು ಮಾರ್ಚ್ ೧೬, ೨೦೦೬ ರಂದೇ - ಅದು ಕಾಕತಾಳೀಯವಾಗಿ ನಾನು ಅಮೇರಿಕೆಯಲ್ಲಿ ಕಾಲಿಟ್ಟ ಮೊದಲ ದಿನವೂ ಹೌದು! ಜೊತೆಯಲ್ಲಿ ಇದೇ ತಿಂಗಳಿನಲ್ಲಿ 'ಅಂತರಂಗ' ೨೦೦ ಲೇಖನಗಳನ್ನು ಪೂರೈಸುವ ಮೈಲಿಗಲ್ಲಿದೆ, ಜೊತೆಯಲ್ಲಿ ಹತ್ತು ಸಾವಿರ ವಿಸಿಟರ್‌ಗಳು 'ಅಂತರಂಗ'ಕ್ಕೆ ಬಂದು ಹೋದ ಅವತರಣಿಕೆಯೂ ಸಂಭವಿಸಬಹುದು. ಹಿಂದಿನ ಲೇಖನಗಳಲ್ಲಿನ ಹಾಗೆ ಕಂಡಕಂಡದ್ದನ್ನೆಲ್ಲ ಹಳಿದು 'ಹಾಗಿದ್ದರೆ ಚೆನ್ನ, ಹೀಗಿದ್ದರೆ ಚೆನ್ನ' ಎಂದು ಒಂದೇ ಸಮ ಕುಕ್ಕರಿನ ಹಾಗೆ ಕೂಗುವುದಕ್ಕಿಂದ ಬದುಕು ಪ್ರಸ್ತುತ ಪಡಿಸುವ ಹಲವಾರು ಸವಾಲು-ಸಂವೇದನೆಗಳನ್ನು ಹೊಸ ರೀತಿಯಲ್ಲಿ ತೋರಿಸಿಕೊಳ್ಳುವ ಹುನ್ನಾರವಿದೆ; ಹೀಗೆ ಬರೆಯಬೇಕು, ಹಾಗೆ ಬರೆಯಬೇಕು ಎಂದು ಕನಸು ಕಟ್ಟಿಕೊಳ್ಳುವುದಕ್ಕಿಂತ, ಮೊದಲು ಬರೆ ಆಮೇಲೆ ಕನಸಿನ ಮಾತು ಎನ್ನುವ ವಾಸ್ತವವಿದೆ...ನೋಡೋಣ.

***

Stick around and stay tuned!

Tuesday, February 20, 2007

What have you gained from all this?

ಜನವರಿ ೧೭ ರಂದು ಭಾರತದ ಪ್ರವಾಸದ ಬಗ್ಗೆ ಕಿರಿದಾಗಿ ಬರೆದಾಗ 'ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ' ಎಂದು ಬರೆದಿದ್ದೆ. ಈ ದಿನ ಅದರ ಮೇಲೆ ಸ್ವಲ್ಪ ಬೆಳಕು ಚೆಲ್ಲಿದರೆ ಹೇಗೆ ಎನ್ನಿಸಿತು.

ಎಷ್ಟೋ ವರ್ಷಗಳ ಹಿಂದೆ ಶಿವಮೊಗ್ಗ ಮಾರ್ಕೆಟ್‌ನಲ್ಲಿ ಸೇಬು ಹಣ್ಣುಗಳನ್ನು ಕೊಂಡಾಗ ನಮ್ಮನ್ನು ಬೇಸ್ತು ಬೀಳಿಸಿ ಒಳ್ಳೆಯ ಹಣ್ಣುಗಳ ಜೊತೆಗೆ ಸಾಧಾರಣ ಹಣ್ಣುಗಳನ್ನು ದಾಟಿಸಿ ತನ್ನ 'ಕೈಚಳಕ' ತೋರಿದ ವ್ಯಾಪಾರಿಯೊಬ್ಬನನ್ನು ಇಂದಿಗೂ ನೆನೆಸಿಕೊಳ್ಳುತ್ತೇನೆ. ನೀವು ಭಾರತದಲ್ಲಿ ವ್ಯವಹಾರ ಮಾಡುವಾಗ ಸೂಕ್ಷ್ಮವಾಗಿರದಿದ್ದರೆ ನಿಮ್ಮನ್ನು ಏಮಾರಿಸಿ ನೀವು ತೆರೆಳಿದ ಬಳಿಕ ಮೀಸೆ ಮೇಲೆ ಕೈ ಆಡಿಸುವವರೇ ಹೆಚ್ಚು. ಇನ್ನು ನೀವು ಎನ್.ಆರ್.ಐ. ಎಂದು ಗೊತ್ತಾದರಂತೂ ಮುಗಿದೇ ಹೋಯಿತು, ಒಂದಕ್ಕೆರಡು ಬೆಲೆ ಹಾಕುವುದು ಇರಲಿ, 'ಬೆಪ್ಪು ಮುಂಡೇವು, ಏನೂ ಗೊತ್ತಾಗೋದಿಲ್ಲ!' ಎಂಬ ಅಸಡ್ಡೆಯ ಪ್ರದರ್ಶನವೂ ರಾಜಾರೋಷವಾಗಿ ನಡೆಯುತ್ತದೆ, ಇಷ್ಟೆಲ್ಲಾ ಆದಮೇಲೂ ನನ್ನಂತಹವರು ಮುಗುಳು ನಗುತ್ತಾ 'ಥ್ಯಾಂಕ್ಯೂ' ಎಂದು ಬೇರೆ ಹೇಳುತ್ತೇವಲ್ಲ, ನಮ್ಮ ಪ್ರಾರಬ್ಧಕ್ಕೆ ಬೈದುಕೊಳ್ಳಬೇಕೇ ವಿನಾ ಮತ್ತೇನೂ ಮಾಡೋಕಾಗೋದಿಲ್ಲ.

ಒಂದು ಲೆಕ್ಕದಲ್ಲಿ ಈ ದಿನನಿತ್ಯದ ವ್ಯವಹಾರದಲ್ಲಿ ಸತ್ಯ-ಪ್ರಾಮಾಣಿಕತೆ ಅನ್ನೋದು ಸತ್ತೇ ಹೋಗಿದೆ ಎಂದೇ ಹೇಳಬೇಕು, ಸ್ಪರ್ಧಾತ್ಮಕವಾಗಿ ಬದುಕೋದು ಎಂದರೆ ಅದನ್ನು ಮೋಸ ಮಾಡಿ ಬದುಕುವುದು ಎಂದು ಬದಲಾಯಿಸಿಕೊಂಡ ಹಾಗೆ ತೋರೋದು ಕೇವಲ ನನ್ನ ಭ್ರಮೆ ಆದರೆ ಎಷ್ಟೋ ಚೆನ್ನಾಗಿತ್ತು. ಮೊದಲೇ ಹೆಚ್ಚು ಜನರಿರುವ, ಎಲ್ಲಿ ಹೋದರೂ 'ನೆಕ್ ಟು ನೆಕ್' ಸ್ಪರ್ಧೆಯನ್ನು ಜೊತೆಯಲ್ಲಿ ತರುವ ವಾತಾವರಣ, ಅದರ ಜೊತೆಯಲ್ಲಿ ಮೋಸ ಮಾಡುವವರಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡು ಬದುಕಿ ಬರಬೇಕು ಎಂದರೆ ಅದು ದಿನನಿತ್ಯದ ಚಕ್ರವ್ಯೂಹವೇ ಸರಿ. ಈ ಕೆಳಗಿನ ಉದಾಹರಣೆಗಳನ್ನು ನೋಡಿ:

- ಬೆಂಗಳೂರಿನಲ್ಲಿ ಸಂತೋಷ್ ಚಿತ್ರಮಂದಿರಕ್ಕೆ ಹೋಗಿ 'ಕಲ್ಲರಳಿ ಹೂವಾಗಿ' ಚಿತ್ರಕ್ಕೆ ಟಿಕೇಟು ತೆಗೆದುಕೊಂಡರೆ, ಕೌಂಟರಿನ ಹಿಂದಿರುವ ವ್ಯಕ್ತಿ ಕೇಳಿದ ಹೊರತೂ ಚಿಲ್ಲರೆಯನ್ನು ಕೊಡಲಿಲ್ಲ - ಟಿಕೇಟು ಕೊಟ್ಟವನಿಗೆ ಟಿಪ್ ಕೊಡಬೇಕು ಎಂದು ನಿಯಮೇನಾದರೂ ಇದೆಯೇ?
- ಆಟೋ ರಿಕ್ಷಾ ಡ್ರೈವರ್‌ಗೆ ಐವತ್ತು ರೂಪಾಯಿಯ ನೋಟೊಂದನ್ನು ಕೊಟ್ಟು, ಉಳಿದ ಚಿಲ್ಲರೆಯನ್ನು ಕೊಡಲು ದುಡ್ಡು ಎಣಿಸುತ್ತಿರುವಾಗ ಮೊದಲು ಕೊಟ್ಟ ಐವತ್ತು ರೂಪಾಯಿಯ ನೋಟನ್ನು 'ನೀವು ಕೊಟ್ಟೇ ಇಲ್ಲಾ ಸಾರ್' ಎಂದು ಸಾಧಿಸಿ ವಾದ ಮಾಡಿದರೆ ಹಾಡ ಹಗಲೇ ಸುಳ್ಳು ಹೇಳುವ ಅವನನ್ನು ನನ್ನಂತಹವರು ಏನು ಮಾಡೋದು?
- ಒಂದು ಮಸಾಲೆ ದೋಸೆ ೨೫ ರೂಪಾಯಿ ಚಾರ್ಚ್ ಮಾಡಿಯೂ ಅದರ ಜೊತೆಯಲ್ಲಿ ಕೊಟ್ಟಿರುವ ಚಟ್ನಿ ಹಳಸಿದೆ ಎಂದು ದೂರು ಕೊಟ್ಟರೆ ನಾನು all of a sudden ಶಿಲಾಯುಗದ ಮನುಷ್ಯನಂತೆ ಆಗಿ ಹೋದೆ ಎಂದು ಸಪ್ಲೈಯರ್‌ನಿಂದ ಹಿಡಿದು ನನ್ನ ಜೊತೆಯಲ್ಲಿದ್ದವರ ಅಂಬೋಣ - ಹಳಸಿದ ಚಟ್ನಿಯನ್ನು ತಿನ್ನೋದು ನನ್ನ ಕರ್ಮವಲ್ಲ, ಆ ಭಾಗ್ಯಕ್ಕೆ ಇಪ್ಪತ್ತೈದು ರೂಪಾಯಿಗಳನ್ನು ಬೇರೆ ಕೊಡಬೇಕೇಕೆ?
- ಮನೆ ಕಟ್ಟಿಸಿಕೊಳ್ಳಬೇಕು ಎಂದು ಒಂದು ಸೈಟು ತೆಗೆದುಕೊಂಡರೆ ಅದನ್ನು 'ರಕ್ಷಣೆ' ಮಾಡಿಕೊಳ್ಳಬೇಕಂತೆ: ರಾತ್ರೋರಾತ್ರಿ ಮಂದಿರ-ಮಸೀದಿಯನ್ನು ಕಟ್ಟುವುದರಿಂದ ಹಿಡಿದು, ನಿಮ್ಮ ಸೈಟುಗಳನ್ನು ಎರಡು ಮೂರು ಜನರಿಗೆ ಮಾರಿ ನೀವು ಯಾವ ಕೋರ್ಟಿಗೆ ಎಷ್ಟು ವರ್ಷ ಅಲೆದರೂ ನಿಮ್ಮ ಸೈಟು ನಿಮಗಿಲ್ಲವಾಗಿಸುವ ವ್ಯವಸ್ಥೆ, ಉದಾಹರಣೆಗಳು ಬೇಕಾದಷ್ಟಿವೆ.

ಪ್ರಾಮಾಣಿಕತೆ ಇಲ್ಲ, ಅಥವಾ ಮೊದಲಿಗಿಂತಲೂ ಪರಿಸ್ಥಿತಿ ಬದಲಾಗಿದೆ ಎಂದೋ ನಾನು ಜೆನರಲೈಸ್ ಮಾಡಿದರೆ ತಪ್ಪಾದೀತು. ಈ ವ್ಯವಸ್ಥೆಯಲ್ಲೇ ನಾನೂ ಹುಟ್ಟಿ ಬೆಳೆದವನೇ. ನನ್ನ ರಕ್ತ ಹೀರುವ ಸೊಳ್ಳೆಗಳನ್ನು - ನನಗೆ ಏಟು ಬಿದ್ದರೂ ಪರವಾಗಿಲ್ಲ ಆದರೂ ನನ್ನ ರಕ್ತ ಹೀರಿದ ಇದನ್ನು ಸುಮ್ಮನೇ ಬಿಡಬಾರದು - ಎಂದು ಬಲವಾಗಿಯೇ ಬಾರಿಸಿ ನಿಷ್ಕರುಣೆಯಿಂದ ಹೊಸಕಿ ಹಾಕುವ ಕ್ರೂರತೆ ನನ್ನಲ್ಲಿ ಎಂದೂ ಮಾಸಲಾರದು. ಆದರೆ ಇಂತಹ ಕ್ರೌರ್ಯವನ್ನೇ ಬದುಕಾಗಿ ಮಾಡಿಕೊಂಡಿರುವುದಾದರೆ ಹೇಗೆ ಎಂದೆನಿಸದಿರಲಿಲ್ಲ. ಭಾರತದಲ್ಲಿನ ವ್ಯವಸ್ಥೆಯಲ್ಲಿ ಸೊಳ್ಳೆಗಳು ಸಮಾಜದ ಒಂದು ಭಾಗ - ನಾವು, ನಮ್ಮ ಮನೆ, ನಮ್ಮ ನೆರೆಹೊರೆ ಇರುವ ಬಗೆ, ಮುಂದೆಯೂ ಹಾಗೆ ಇರುವ ಸೂಚನೆಗಳು ಇಂದು ನಿನ್ನೆಯವಲ್ಲ. ಹಲವು ದಿನಗಳ ಕಾಲ ಅಲ್ಲಿಗೆ ರಜೆಯಲ್ಲಿ ಹೋದ ನನಗೆ ರಕ್ತ ಹೀರುವ ಸೊಳ್ಳೆಗಳಿಂದ ಮುಕ್ತಿ ಸಿಗಲಿ ಎಂದುಕೊಂಡರೆ ಅದು ಅಪಹಾಸ್ಯವಾದೀತು. ಆದರೆ ಇಂದಿನ ಸೊಳ್ಳೆಗಳು ಕಾಲನ ಸವಾಲಿನಲ್ಲಿ ಬದಲಾಗಿವೆ, ನನಗೆ ಗೊತ್ತಿರುವ ಡಿಡಿಟಿ ಅಂತಹ ಔಷಧಗಳು, ಕೀಟನಾಶಕಗಳು ಇಂದು ಯಾವ ಕೆಲಸವನ್ನೂ ಮಾಡಲಾರವು - ಬದಲಿಗೆ ಟಾನಿಕ್ ಆಗಿ ಪರಿವರ್ತಿತಗೊಳ್ಳದಿದ್ದರೆ ಸಾಕು. ಇಂದಿನ ಸೊಳ್ಳೆಗಳು ಪ್ರದರ್ಶಿಸುವ ಹೊಸಹೊಸ ಚಾಲಾಕುಗಳಿಗೆ ನನ್ನ ಉತ್ತರಗಳು ಅಷ್ಟೇ ಮಾರ್ಪಾಡು ಹೊಂದಿಲ್ಲವಾದ್ದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ನನ್ನನ್ನು ಒಬ್ಬನೇ ಬಿಟ್ಟು ಬಂದಿದ್ದಾದರೆ ಒಮ್ಮೆ ತಡವರಿಸುವುದಂತೂ ಗ್ಯಾರಂಟಿ.

ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯಬಹುದಾದರೂ ಇಲ್ಲಿ ಒಂದೆರಡು ಸಾಲುಗಳನ್ನು ಹಾಕುವುದು ಪ್ರಸ್ತುತವೆನಿಸಿತು - ಅಮೇರಿಕದ ಬದುಕು ನನ್ನಲ್ಲಿ ಚಾಲಾಕಿತನವನ್ನು ಹೆಚ್ಚಿಸಿಲ್ಲ, ಇಲ್ಲಿ ಬಂದಮೇಲೆ ರಕ್ತ ಹೀರುವ ಸೊಳ್ಳೆಗಳಿಂದ ಇನ್ನೂ ಕಚ್ಚಿಸಿಕೊಂಡಿಲ್ಲ - ಸೊಳ್ಳೆಗಳಿವೆ, ಅವುಗಳು ಇರುವಲ್ಲಿ ನಾನು ಹೋಗಿ ಮಾಡಬೇಕಾದೇನೂ ಇಲ್ಲ. ಇಲ್ಲಿ ದುಡಿದ ಹಣ, ಅದರ ಮಹತ್ವವನ್ನು ತಿಳಿಸಿಕೊಟ್ಟಿದ್ದೂ ಅಲ್ಲದೇ ನಾನು ಖರ್ಚು ಮಾಡಬಹುದಾದ ಹಣಕ್ಕೆ ಅದಕ್ಕೆ ತಕ್ಕನಾಗಿ ಸೇವೆಯನ್ನು ಅಪೇಕ್ಷಿಸುವ ಮನಸ್ಥಿತಿಯನ್ನೂ ನಿರ್ಮಿಸಿಕೊಟ್ಟಿವೆ. ಮನೆ ಕೆಲಸದಿಂದ ಹಿಡಿದು ಉಳಿದೆಲ್ಲವನ್ನೂ ನಾವು-ನಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬಹುದಾದ ತಾಕತ್ತನ್ನೂ ಅದಕ್ಕೆ ಊರುಗೋಲಾಗಬಹುದಾದ ಮೈಂಡ್‌ಸೆಟ್ ಅನ್ನೂ ಹುಟ್ಟುಹಾಕಿವೆ. ಎಲ್ಲಿಯಾದರೂ ಸಾದುತನ ಕಂಡರೆ ನಾನು ಎಂದೂ ಮೋಸ ಮಾಡಲು ತಕ್ಕದಾದ ಪ್ರಾಣಿಯೊಂದು ಸಿಕ್ಕಿತು ಎಂದು ಯೋಚಿಸಿಕೊಳ್ಳದೇ ಅದರ ಬದಲಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಲು ಮನಸ್ಸು ಮಾಡುತ್ತೇನೆ. ಹನಿಹನಿಗೂಡಿ ಹಳ್ಳವಾದರೂ ಅಂತಹ ಹಳ್ಳ ಹುಟ್ಟಿ ಹೆಚ್ಚುಕಾಲ ನಿಲ್ಲುವಂತೆ ಶ್ರಮವಹಿಸುತ್ತೇನೆ. ಒಂದು ಡಾಲರಿಗೆ ಎರಡು ಸಿಗುವ ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಸಾವಿರಾರು ಡಾಲರಿಗೆ ಯಾವುದೇ ವಸ್ತುಕೊಂಡರೂ 'ಎದುರಿನ ವ್ಯಕ್ತಿ ಮಾಸ ಮಾಡುತ್ತಿರಬಹುದೇ' ಎಂದು ಒಮ್ಮೆಯೂ ಯೋಚಿಸುವುದಿಲ್ಲ...

ಹೀಗಿನ ನನ್ನ ವರ್ತನೆ ಭೋಳೇತನವಾಗಿ ಕಂಡುಬರಬಹುದು, 'ಬಿತ್ತು ಗಿರಾಕಿ'ಯಾಗಬಹುದು, ರಕ್ತ ಹೀರುವ ಸೊಳ್ಳೆಗಳಿಗೆ ಆಶ್ರಯವಾಗಬಹುದು... ನನಗೆ ಮೋಸವಾಗುತ್ತಿರುವುದು ಗೊತ್ತಾಗಿಯೂ ಅದನ್ನು ಸಹಿಸಿಕೊಂಡು ಏನೂ ಆಗೇ ಇಲ್ಲವೆನ್ನುವ ಮನಸ್ಥಿತಿಯಂತೂ ಇನ್ನೂ ಬಂದಿಲ್ಲ...ಹೀಗೆ ಮೋಸ ಮಾಡಿದವರನ್ನು ದುರುಗುಟ್ಟಿ ನೋಡಿಯೂ ಬಾಯಿಬಿಟ್ಟು ಕೇಳಿದರೆ ಅಂತಹವರ ಅಂತಃಕರಣವನ್ನೋದೇನಾದರೂ ಇದ್ದರೂ ಅವರು ಬದಲಾಗೋದಿಲ್ಲ. ಮೋಸ ಮಾಡುವುದು ಅವರವರ ಬದುಕಿನ ಒಂದು ಅಂಗವಾಗಿಹೋಗಿದೆ ಎನ್ನಿಸದಿರಲಿಲ್ಲ.

ಹೀಗೆ ಶತಮಾನಗಳಿಂದ ಮೋಸ ಮಾಡಿ, ಮಾಡಿಸಿಕೊಂಡು, ಇಂತಹ ಹಲವಾರು ಬದುಕುಗಳನ್ನು ಬದುಕಿ, ಎಲ್ಲವನ್ನೂ ಮಾಡಿ, ನೋಡಿ, ಕಂಡಂತಹವರಿಗೆ ನನ್ನ ಒಂದೇ ಒಂದು ಪ್ರಶ್ನೆ - what have you gained from all this?

Monday, February 12, 2007

ರಾಜ್ ಸಮಾಧಿ

ಪ್ರತೀ ಸಾರಿ ರಾಜ್‌ಕುಮಾರ್ ಸಮಾಧಿ ಹತ್ತಿರ ಹೋಗಿ ಬರಬೇಕು, ಅವರು ಜೀವಂತವಾಗಿದ್ದಾಗಲಂತೂ ನನಗೆ ನೋಡುವ ಭಾಗ್ಯ ಸಿಗಲಿಲ್ಲ ಎಂದು ಅಂದುಕೊಂಡಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮ ಬದಲಾಗಿ ಹೋಗೋದು. ಅದೂ ಅಲ್ಲದೆ ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗಾದರೂ ಹೋಗಿ ಬಂದರೆ ಕೊನೇ ಪಕ್ಷ ಅದಕ್ಕೋಸ್ಕರ ಒಂದರ್ಧ ದಿನವಾದರೂ ಹೋಗದೇ ಇರೋದಿಲ್ಲ. ನನ್ನ ಅದೃಷ್ಟಕ್ಕೆ ಜನವರಿ ಹನ್ನೆರಡರಂದು ಬೆಂಗಳೂರಿನಿಂದ ಕೆಜಿಎಫ್‌ಗೆ ಹೋಗೋದಕ್ಕೆ ಟಾಟಾ ಸುಮೋ ಬುಕ್ ಮಾಡಿದಾಗ ನಮಗೆ ಸಿಕ್ಕ ಡ್ರೈವರ್ ರಾಜ್‌ಕುಮಾರ್ ಮನೆಯಲ್ಲಿ ಬಟ್ಟೆ ಇಸ್ತ್ರಿ ಹಾಕಿಕೊಂಡಿದ್ದವನೆಂದು ಅವನಿಂದಲೇ ತಿಳಿಯಿತು. ಹಾಗೇ ಕೆಜಿಎಫ್‌ನಿಂದ ಹಿಂತಿರುಗುವಾಗ ಮಧ್ಯಾಹ್ನ ಪೀಣ್ಯಾದ ಹತ್ತಿರವಿರುವ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಸಿಕ್ಕ ಚಿತ್ರಗಳಿವು.

ಪ್ರತಿ ತಿಂಗಳು ಹನ್ನೆರಡರಂದು ರಾಜ್‌ಕುಮಾರ್ ಸಮಾಧಿ ಬಳಿ ವಿಶೇಷ ಪೂಜೆ ಇರುತ್ತಂತೆ, ಆದ್ದರಿಂದ ರಾಜ್ ಅವರ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ರಿಂಗ್ ರೋಡಿಗೆ ಅಂಟಿಕೊಂಡೇ ಇರುವ ಆವರಣದಲ್ಲಿ ರಾಜ್ ಸಮಾಧಿ ಎದ್ದು ಕಾಣುತ್ತಿತ್ತು, ಸುತ್ತಲೂ ನಾನಾ ರೀತಿಯ ಬ್ಯಾನರ್‌ಗಳು ಮುಖ ಚಾಚಿಕೊಂಡಿದ್ದವು.

ಕಳೆದ ಏಪ್ರಿಲ್‌ನಲ್ಲಿ ನಡೆದ ಹಿಂಸಾಚಾರವನ್ನು ನೆನೆಸಿಕೊಂಡ ನನಗೆ ಈ ವರ್ಷ ಏಪ್ರಿಲ್ ಹನ್ನೆರಡರಂದು ಬೆಂಗಳೂರಿನಲ್ಲಿ ಗಲಾಟೆಗಳಾಗದಿದ್ದರೆ ಸಾಕು ಎಂದೆನಿಸಿತು.






Tuesday, February 06, 2007

ಒಂಟಿ ಮರದ ಹಾಡು




ಬಿದ್ದು ಹೋಗುವ ಸೂರ್ಯನನು ಆರಾಧಿಸುವುದಾದರೂ ಏಕೆ
ದಿನನಿತ್ಯ ದುಡಿಯುವ ಅವನಿಗಾದರೂ ಬೇಡವೆ ನಾಳೆ ಎಂಬ ಚಿಂತೆ
ಅಥವಾ ಕತ್ತಲು ತುಂಬಿದ ಮತ್ತರ್ಧ ಗೋಳವನು ಬೆಳಗ ಬೇಡವೆ ಬೇಕೆ
ಅಲ್ಲಿಗೆ ಹೋದರೆಷ್ಟು ಬಿಟ್ಟರೆಷ್ಟು ಎಂಬ ಯೋಚನೆಗಳ ಕಂತೆ.

ಇಂದು ನಾಳೆ ಬಿದ್ದು ಹೋಗುವ ಒಂಟಿ ಮರ ನಾನು
ನನ್ನ ಅಧಿಕಾರ, ದರ್ಪವೆಷ್ಟು ಎಂದು ಕೇಳಬಹುದು ನೀನು
ನನ್ನನ್ನು ಈ ಸ್ಥಿತಿಗೆ ತಂದವರನ್ನು ಬಿಡು
ಇಂದು ಬಾಳಿ ಬದುಕ ಬೇಕಾದವರ ಸೊಕ್ಕನ್ನು ನೋಡು.

ಬಿದ್ದು ಹೋಗುವ ಸೂರ್ಯ ಎದ್ದು ಬರುತ್ತಿರುವ ಹಾಗೆ
ಹಲವರಿಗೆ ಕಂಡೀತು ಅದು ಕನಸೇನೂ ಅಲ್ಲ
ಬಿದ್ದು-ಎದ್ದು ಬರುವ ಸೂರ್ಯರ ಬಣ್ಣಗಳಲ್ಲೂ ಹಲವು ಬಗೆ
ಪಕ್ಕನೆ ವ್ಯತ್ಯಾಸ ಗುರುತು ಸಿಗುವುದಿಲ್ಲ.

ಸೂರ್ಯನನು ನಾನು ಮುಚ್ಚಿ ಮರೆಮಾಡುತಿಹೆ ಎಂದರೆ
ಕಿರಣಗಳ ಪ್ರಕೋಪಕ್ಕೆ ನೀನೇ ಹೋಗುತಿಹೆ ನನ್ನ ಮೊರೆ
ಇರುವಷ್ಟು ದಿನ ಇಲ್ಲಿ ನಾನು ಏನು ಬೇಕಾದರೂ ಮಾಡು
ಕೊನೆಗೆ ಬಾನು ಬರಿದಾಗುವುದರೊಳಗೊಮ್ಮೆ ಎದ್ದು ನೋಡು.

Friday, February 02, 2007

ಕೋಟಿಪುರ




ನಮ್ಮೂರು ಆನವಟ್ಟಿಯಿಂದ ಉತ್ತರಕ್ಕೆ ಹಾನಗಲ್ ಮಾರ್ಗದಲ್ಲಿ ಎರಡು ಕಿಲೋ ಮೀಟರ್ ದೂರದಲ್ಲಿ ಕೋಟಿಪುರವೆಂಬ ಹಳ್ಳಿಯಿದೆ, ಅಲ್ಲಿ ಸುಂದರವಾದ ಶಿವದೇವಾಲಯವೊಂದಿದೆ. ಇದು ಚಾಲುಕ್ಯರ ಕಾಲದ್ದು (೧೦ ನೇ ಶತಮಾನ). ಕೈಟಭೇಶ್ವರ ಎನ್ನುವುದು ಇಲ್ಲಿ ಶಿವನ ಹೆಸರು. ಹಿಂದೆ ಮಧು-ಕೈಟಭರೆಂಬ ಇಬ್ಬರು ರಾಕ್ಷಸ ಸಹೋದರರನ್ನು ಸಂಹಾರ ಮಾಡಿದ್ದರಿಂದ ಈ ಹೆಸರು ಬಂದಿತಂತೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವಿದೆ, ನೀವು ಬನವಾಸಿಗೆ ಹೋದರೆ ಅಲ್ಲಿಯ ಗೈಡ್‌ಗಳು ಇದರ ಬಗ್ಗೆ ಇನ್ನೂ ಚೆನ್ನಾಗಿ ವಿವರಿಸುತ್ತಾರೆ.

ದೂರದಿಂದ ಬಂದ ನನ್ನ ಸ್ನೇಹಿತರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗಲೆಲ್ಲ ಅಲ್ಲಿಯ ಕೆತ್ತನೆಗಳನ್ನು, ಕಂಭಗಳ ನುಣುಪನ್ನು ನೋಡಿ ಬೆರಗಾಗಿ ಹೋಗುತ್ತಿದ್ದರು. ಈ ದೇವಸ್ಥಾನವನ್ನು ಕಾಪಾಡಿಕೊಂಡು ಹೋಗುವಲ್ಲಿ ಸರ್ಕಾರದ ಹಾಗೂ ಸ್ಥಳೀಯರ ಪ್ರಯತ್ನಗಳು ಶ್ಲಾಘನೀಯ. ದೇವಸ್ಥಾನದ ಒಳಗೆ ಹಾಗೂ ಹೊರಗೆ ತುಂಬಾ ತುಂಬಾ ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ. ಹಿಂದೆಲ್ಲಾ ಅಲ್ಲಲ್ಲಿ ಜೇಡರಬಲೆ ಕಾಣೀಸೋದು, ಈಗ ಹಾಗೇನೂ ಇರಲಿಲ್ಲ, ಸುತ್ತಲೂ ಹೂ ತೋಟವನ್ನು ಬೆಳೆಸಿ ನೋಡಲು ಬಹಳ ಚೆನ್ನಾಗಿ ಮಾಡಿದ್ದಾರೆ.

ನೀವು ಬನವಾಸಿಗೆ ಹೋದರೆ ಅಲ್ಲಿಂದ ಕೇವಲ ೨೦ ಕಿಮೀ ದೂರದಲ್ಲಿರುವ ಕೋಟಿಪುರಕ್ಕೂ ಹೋಗಿ ಬನ್ನಿ!