ಆ ಹಿರಣ್ಯಕಶ್ಯಪೂ ಅಂತ ಮುಟ್ಠಾಳ್ ನನ್‌ಮಗ ಮತ್ತೊಬ್ಬ್‌ನಿಲ್ಲ!
ನಾನೂ ಸುಬ್ಬನೂ ಕಾಫಿ ಕುಡಿಯುತ್ತಾ ಸಂಜೆ ಆರು ಘಂಟೆ ಚಾನೆಲ್ ಸೆವೆನ್ ನ್ಯೂಸ್ ನೋಡಿಕೊಂಡು ಅದೆಲ್ಲೋ ಬೆಂಕಿ ಹೊತ್ತಿಕೊಂಡು ಉರೀತಾ ಇರೋ ದೃಶ್ಯಗಳನ್ನು ನೋಡ್ತಾ ನೊಣ ಹೋಗೋ ಹಾಗೆ ಬಿಟ್ಟ ಬಾಯನ್ನು ಹಾಗೇ ಬಿಟ್ಟು, ಜೊತೆಯಲ್ಲಿ ಕಣ್ಣು ಮಿಟುಕಿಸದೆ ನೋಡ್ತಾ ಕೂತಿದ್ವಿ. ಆ ನ್ಯೂಸ್ ಸ್ಟೋರಿ ಇನ್ನೂ ಮುಗಿದಿರ್ಲಿಲ್ಲ ಅಷ್ಟ್ರೊಳಗೆ ಫೋನ್ ಘಂಟೆ ಬಜಾಯಿಸಿದ್ದನ್ನು ನೋಡಿ ಕಿರಿಕಿರಿಯಾದ ಮುಖ ಮಾಡಿಕೊಂಡು ಹೋಗಿ ಫೋನ್ ಎತ್ತಿ ನೋಡಿದ್ರೆ ವಾಷಿಂಗ್ಟನ್ ಡಿಸಿಯಿಂದ ಶ್ರೀಕಾಂತ್ ಫೋನ್ ಮಾಡಿದ್ದ.
'ಓ ಏನಯ್ಯಾ ಸಮಾಚಾರ...' ಎಂದು ನಾನು ಮುಖ್ಯಮಂತ್ರಿ ಚಂದ್ರೂ ಥರ ರಾಗ ಹಾಕಿಕೇಳಿದ್ದಕ್ಕೆ, ಆ ಕಡೆಯಿಂದ 'ನನ್ನ ಮಗನ ಬರ್ಥಡೇ ಕಣಯ್ಯಾ...' ಎಂದ, ನಾನು ಒಂದು ಕ್ಷಣವೂ ತಡ ಮಾಡದೇ 'ಹ್ಯಾಪ್ಪೀ ಬರ್ಥಡೇ!' ಎನ್ನೋದೇ ತಡ,
'ನಾಟ್ ಸೋ ಫ್ಯಾಸ್ಟ್...ಸ್ವಲ್ಪ ತಡುಕೋ... ಮುಂದಿನ ತಿಂಗಳು ಐದನೇ ತಾರೀಖು ಅವನ ಮೊದಲ ಹುಟ್ಟಿದ ಹಬ್ಬ, ನೀನು ತಪ್ಪಿಸ್ದೇ ಬರಲೇ ಬೇಕು ನೋಡು, ಅದಕ್ಕೆ ಒಂದು ತಿಂಗಳು ಮೊದಲೇ ಹೇಳ್ತಾ ಇದ್ದೀನಿ, ಆಮೇಲೆ ಎತ್ತ್ ಕರ ಹಾಕ್ತು, ಕೊಟಗ್ಯಾಗೆ ಕಟ್ದೆ ಅನ್ನಬೇಡ ಮತ್ತೆ!' ಎಂದು ಆದೇಶ ಕೊಟ್ಟುಬಿಡಬೇಕೆ.
ಸರಿ ಇನ್ನೇನು ಅವನು ಫೋನು ಇಟ್ಟೇ ಬಿಡ್ತಾನೆ ಅಂತ ಅಂದುಕೊಂಡಿದ್ದು ನನ್ನ ತಪ್ಪಾಗಿತ್ತು, ಅವನು ಬರ್ತೀಯೋ ಇಲ್ಲವೋ ಅಂತ ಹಟಹಿಡಿದು ಕೂತುಬಿಟ್ಟ, ನಾನು ಬೇರೆ ಯಾವ್ದೂ ದಿಕ್ಕು ಕಾಣದೇ, 'ಯಾವ್ದೂ ಎಮರ್ಜನ್ಸಿ ಇಲ್ದೇ ಇದ್ರೇ ಬರ್ತೀನಿ ನೋಡಪ್ಪಾ!' ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಸ್ವಲ್ಪ ತಣ್ಣಗಾದೆ, 'ಸರಿ ಇಡ್ತೀನಿ ಮತ್ತೆ...' ಎಂದವನನ್ನು 'ಅಲ್ವೋ ನೀನು ಏಪ್ರಿಲ್ ನಲ್ಲಿ ಮದುವೆಯಾದದ್ದಲ್ವಾ, ಮತ್ತೇ ಮೇ ಗೆ ನಿನ್ನ ಮಗನಿಗೆ ಅದೆಂಗೆ ಒಂದು ವರ್ಷ ಆಯ್ತು... ಎಲ್ಲೋ ಅಮೇರಿಕನ್ ಲೆಕ್ಕಾ ಹಚ್ಚೀದಿ ಏನು?' ಎಂದು ನಕ್ಕೆ. ಅವನು 'ಗುರುವೇ, ಅದು ಎರಡು ವರ್ಷದ ಹಿಂದಿನ ಏಪ್ರಿಲ್ಲು, ನಿನ್ನೆ ಮೊನ್ನೆ ಆದಂಗಿದೆ ಮದುವೆ!' ಎಂದು ಗಹಗಹಿಸಿದ...'ಸರಿ ಮತ್ತೆ...' ಎಂದವನನ್ನು ಕಳಿಸಿಕೊಟ್ಟೆ.
ಇನ್ನೂ ಟಿವಿ ಮುಖ ನೋಡ್ತಾ ಇದ್ದ ಸುಬ್ಬ ಆಗಲೇ ಕಾಫಿ ಹೀರಿ ಲೋಟಾ ಬದಿಗಿಟ್ಟಾಗಿತ್ತು, ನನ್ನ ಕಾಫಿ ಲೋಟ ಅದರ ಬಿಸಿಹಬೆಯನ್ನು ಕಳೆದುಕೊಂಡು ಮಾರ್ಕೆಟ್‌ನಲ್ಲಿ ಒಂದೇ ದಿನದಲ್ಲಿ ಅರ್ಧದಷ್ಟು ಸ್ಟಾಕ್ ಬೆಲೆಯನ್ನು ಕಳೆದುಕೊಂಡ ಸನ್‌ಮೈಕ್ರೋಸಿಸ್ಟಂ ಸ್ಟಾಕ್‌ನಂತಾಗಿಹೋಗಿತ್ತು.
'ಕೊನೆಗೆ...ಬೆಂಕಿ ಕಥೆ ಏನಾಯ್ತು? ಎಷ್ಟು ಜನ ಸತ್ರೋ?' ಎಂದೆ...ಸುಬ್ಬನ ಕಡೆಯಿಂದ ಉತ್ತರ ಬರೋದು ಒಂದು ನ್ಯಾನೋ ಸೆಕೆಂಡು ತಡವಾದಂತೆನಿಸಿತು.
'ಆ ಹಿರಣ್ಯಕಶ್ಯಪೂನಂತ ಮುಟ್ಠಾಳ್ ನನ್‌ಮಗ ಇನ್ನೊಬ್ಬನಿಲ್ಲ!' ಎಂದು ಅದೆಲ್ಲಿಂದ್ಲೋ ಒಂದು ನಾಟಕದ ಡೈಲಾಗೇನೋ ಅನ್ನುವಷ್ಟು ಮಟ್ಟಿಗೆ ಕಾಮ್ ಆಗಿ ಹೇಳಿಬಿಟ್ಟ. ನಾನು ಬೆಂಕಿಗೂ-ಹಿರಣ್ಯಕಶ್ಯಪೂಗೂ ಏನು ಸಂಬಂಧ ಅನ್ನೋ ರೀತಿ ಅವನ ಕಡೆ ನೋಡಿದ್ದಕ್ಕೆ...ನನ್ನ ಕನ್‌ಫ್ಯೂಷನ್ನಿಗೆ ಒಂದು ದಮಡಿ ಬೆಲೇನೂ ಕೊಡದೇ ಅವನು ಮತ್ತೆ ಮುಂದುವರೆಸಿದ...
'ಅದಕ್ಕೇ ತಲೆ ಇಲ್ದಿದ್ದ್ ನನ್‌ಮಕ್ಳು ಅನ್ನೋದ್ ನೋಡು, ಅಷ್ಟೊಂದು ವರ್ಷ ಕಷ್ಟಾಪಟ್ಟು ತಪಸ್ಸು ಮಾಡಿ, ದೇವ್ರು ಎದ್ರಿಗೆ ಬಂದ್ರೆ, ನನಿಗೆ ಹಂಗ್ ಸಾವ್ ಬರಬಾರ್ದು, ಹಿಂಗ್ ಸಾವ್ ಬರಬಾರ್ದು ಅಂತ ಕೇಳಿದ್ನೇ ವಿನಾ, ನಾನೊಂದು ನೂರೋ, ಸಾವ್ರಾನೋ ವರ್ಷಾ ನೆಟ್ಟಗೆ ಬದುಕಿರೋ ಹಂಗ್ ಮಾಡು ಶಿವನೇ ಅಂದಿದ್ರೆ ಅವರಪ್ಪನ್ ಮನೆ ಗಂಟ್ ಹೋಗ್ತಿತ್ತಾ?'
ಇದರಲ್ಲಿ ಯಾವುದೋ ಒಂದು ಪುಡುಗೋಸಿ ಲಾಜಿಕ್ಕಿದೆ, ಆದ್ರೂ ಚಾನೆಲ್ ಸೆವೆನ್ ನ್ಯೂಸಿಗೂ, ಬೆಂಕಿ ಅವತಾರಕ್ಕೂ, ಹಿರಣ್ಯಕಶ್ಯಪೂಗೂ ಎಲ್ಲೆಲ್ಲಿಂದ ಸಂಬಂಧ ಬಂತೋ ಎಂದು ತಲೆಕೆಡಿಸಿಕೊಂಡ ನನ್ನ ಪಜೀತಿ ಸಮಾಜಶಾಸ್ತ್ರದ ಹುಡುಗ ಅಬ್‌ಸ್ಟ್ರ್ಯಾಕ್ಟ್ ಕ್ವಾಂಟಮ್ ಮೆಕ್ಯಾನಿಕ್ಸ್ ತರಗತಿಯನ್ನು ಹೊಕ್ಕಿ ಮೊದಲ ಬೆಂಚಿನಲ್ಲಿ ಕೂತಹಾಗಿತ್ತು.
ಸದ್ಯ, ಸುಬ್ಬನೇ ಸ್ವಲ್ಪ ವಿವರಿಸಿದ, ನಾನು ಇಮಿಗ್ರೇಷನ್ ಆಫೀಸರ್‌ನಿಂದ ತಪ್ಪಿಸಿಕೊಂಡಂತೆ ನಿರುಮ್ಮಳವಾದೆ...'ಅದೇ ನಿಮ್ ಶ್ರೀಕಾಂತ್ ಫೋನ್ ಮಾಡಿದ್ನಲ್ಲಾ, ಅದರ ಸಲವಾಗಿ ಯೋಚ್ನೇ ಮಾಡೋ ಹಂಗಾತ್ ನೋಡು...ಹಿರಣ್ಯಕಶ್ಯಪೂ ರಾತ್ರಿ ಅಲ್ಲ, ಹಗಲ್ ಅಲ್ಲ, ಒಳಗಲ್ಲ, ಹೊರಗಲ್ಲ, ಮೃಗಗಳಿಂದಲ್ಲ, ನರರಿಂದಲ್ಲ...ಮುಂತಾಗಿ ಎಕ್ಸ್‌ಕ್ಯೂಷನ್ ಹಾಕ್ಕೊಂಡ್ ಹೋಗೋ ಬದಲಿಗೆ ದೇವ್ರೇ ನನ್ ಮಗನ ನೂರಾ ಒಂದನೇ ಹುಟ್ಟು ಹಬ್ಬವನ್ನು ನಾನೂ ಇದೇ ದೇಹದಲ್ಲಿದ್ದುಕೊಂಡು ಸೆಲೆಬ್ರೇಟ್ ಮಾಡೋ ಹಾಗೆ ಮಾಡಪ್ಪಾ...' ಎಂದು ಬೇಡಿಕೊಂಡಿದ್ರೆ...ವಿಷ್ಣೂಗೆ ಮತ್ತೊಂದ್ ಅವತಾರ ಎತ್ತೋ ಪಜೀತೀನೂ ತಪ್ತಿತ್ತು, ಮಾಸ್ಟರ್ ಲೋಹಿತ್‌ನ ಪೀಚಲು ಮಾತಿಗೆ ಸಿಟ್ಟಾಗಿ ರಾಜ್‌ಕುಮಾರ್ ಕಂಭಕ್ಕೆ ಹೊಡೆದಿದ್ದಕ್ಕೆ ಬಿದ್ದಿರೋ ನಮ್ ಬೆಂಗ್ಳೂರಿನ ಗಂಗಾರಾಮ್ ಕಟ್ಟಡಾನೂ ಉಳಿಯೋದು, ಏನಂತಿ?!'
'ಗುರುವೇ, ಇದು ಕಲಿಗಾಲ...ಆಗಿನ್ ಕಾಲದ್ದು ಕಥೇನೇ ಬೇರೆ ಇತ್ತು, ದೇವ್ರು ವರ ಕೇಳೋ ಮುಂಚೆ ಈ ರಾಕ್ಷಸರ ಬುದ್ದೀನೆಲ್ಲ ಕಡ್ಡೀ ಹಾಕಿ ಕೆದಡಿ ಬಿಡ್ತಿದ್ದರಂತೆ, ಅಂತಾದ್ದರಲ್ಲಿ ಹಿರಣ್ಯಕಶ್ಯಪೂ ಅಷ್ಟೊಂದ್ ಎಕ್ಸ್‌ಕ್ಲೂಷನ್ ಕಂಡೀಷನ್ನಾದ್ರೂ ಹೇಳ್ದಾ, ಅವನ ಜಾಗ್ದಲ್ಲಿ ನೀನೇನಾದ್ರೂ ಇದ್ರೆ, ಒಂದು ಮಸಾಲೆ..., ಎರಡು ಕಾಲೀ... ಎಂದು ಕೃಷ್ಣಭಟ್ಟರ ಹೋಟ್ಲಿನ ಮಾಣಿಯ ಹಾಗೆ ಆರ್ಡರ್ ಕೊಡ್ತಿದ್ದೆ ನೋಡು' ಎಂದು ನಕ್ಕೆ.
'ಸುಮ್ನೇ ಮಾತಿಗ್ ಅಂದೆ, ಈ ನರಸಿಂಹಾವತಾರದ ಪಾಸಿಬಿಲಿಟಿಯನ್ನು ಯಾವನಾದ್ರೂ ಬಯೋಟೆಕ್ನಾಲಜಿ ಸೈಂಟಿಸ್ಟಿಗೆ ಬಿಡೋಣ...ಅದಿರ್ಲಿ ಮುಂದಿನ್ ತಿಂಗ್ಳು ಶ್ರೀಕಾಂತನ ಮನೆಗ್ ಹೋಗ್ತೀಯೇನು?' ಎಂದ.
'ನೋಡೋಣ, ಇನ್ನೂ ಒಂದ್ ತಿಂಗಳಿದೆಯಲ್ಲಾ...' ಎಂದು ಅದೇನೋ ನೆನಪಾದವನ ಹಾಗೆ ನಟಿಸಿ 'ಹಿರಣ್ಯಕಶ್ಯಪೂ ತಪಸ್ಸು ಮಾಡಿ ವರಕೇಳೋ ಹೊತ್ತಿಗೆ ಅವನಿಗೆ ಮಕ್ಳಿದ್ದವೇನು?' ಎಂದು ಕಣ್ಣು ಮಿಟುಕಿಸಿದೆ.
'ಗೊತ್ತಿಲ್ಲಪ್ಪಾ, ಆಗಿನ್ ಕಾಲದ ತಪಸ್ಸುಗಳೆಲ್ಲ ಹತ್ತು-ನೂರು ವರ್ಷಗಳ ತನಕಾನು ಇರ್ತಿದ್ದವಂತೆ, ಇನ್ನು ಮಕ್ಳು ಮಾಡೋಕೆ ಪುರುಸೊತ್ತೆಲಿರುತ್ತೆ? ಅಕಸ್ಮಾತ್, ಪ್ರಹ್ಲಾದ ಇರಲಿಲ್ಲ ಅಂದುಕೋ, ನಾನ್ ಹೇಳ್‌ಕೊಟ್ಟಂಗೆ ವರವನ್ನು ಕೇಳಿದ್ರೆ ಒಂದಿಷ್ಟು ವರ್ಷ ಆಯಸ್ಸು ಗಟ್ಟಿ ಇರೋದ್ರ ಜೊತೆಗೆ ಒಂದು ಗಂಡ್ ಮಗೂನು ಹುಟ್ಟಿರೋದಾ...' ಎಂದು ಬರೋಬ್ಬರಿ ವ್ಯಾಪಾರವಾದ ಹೊಟೇಲಿನ ಕೃಷ್ಣಭಟ್ಟರ ನಗೆ ನಕ್ಕ.
'ನನಗೇನೋ ಅನುಮಾನ, ನೀನೂ ಅದ್ ಯಾವ್ದೋ ಜನ್ಮದಲ್ಲಿ ಹಿರಣ್ಯಕಶ್ಯಪೂ ಆಗಿದ್ದಿಯೋ ಏನೋ...' ಎಂದು ತಿವಿದೆ, ವಾತಾವರಣ ತಿಳಿಯಾಯಿತು!