ಹಿರಿಯರು-ಕಿರಿಯರು
ಕ್ರಿಕೇಟ್ ಬಗ್ಗೆ ಬರೆಯೋದಕ್ಕೆ ನಾನ್ಯಾರು, ಬ್ಯಾಟ್ ಮುಟ್ಟದೇ ಎಷ್ಟೊ ವರ್ಷಗಳಾಗಿ ಹೋಗಿರೋವಾಗ...
`ಹಿರಿಯ ಆಟಗಾರರಿಗೆ ಕಿರಿಯರನ್ನು ಕಂಡರೆ ಅಷ್ಟಕ್ಕಷ್ಟೆ. ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿದರೆ ಎಲ್ಲಿ ತಮ್ಮ ಸ್ಥಾನಕ್ಕೆ ಚ್ಯುತಿ ಬರುತ್ತದೋ ಎಂಬ ಕಾರಣಕ್ಕೆ ಕಿರಿಯರ ಬೆನ್ನುತಟ್ಟುವ ದೊಡ್ಡ ಮನಸ್ಸನ್ನು ಹಿರಿಯರು ಮಾಡಲ್ಲಿಲ. ಅದರಿಂದ ನಾಯಕ ದ್ರಾವಿಡ್ ಮೇಲೆ ಒತ್ತಡವಿತ್ತು' ಎಂಬುದು ಚಾಪೆಲ್ ಅಭಿಪ್ರಾಯ ಎಂದು ಚಾನೆಲ್ ತಿಳಿಸಿದೆ... ಎಂದು ಪ್ರಜಾವಾಣಿ ವರದಿಯಲ್ಲಿ ಓದಿದ ಮಾತ್ರಕ್ಕೆ ನಮ್ಮಲ್ಲಿ ಹಿರಿಯ ಮುಂದಾಳುಗಳು ಕಿರಿಯರನ್ನು ಬೆಂಬಲಿಸೋದೇ ಇಲ್ಲ ಎನ್ನೋ ಮಾತನ್ನು ನಾನು ಒಪ್ಪಲಾರೆ, ಎಲ್ಲ್ರರೂ ಅವರವರ ಅನಿಸಿಕೆಗಳಿಗೆ ಬಾಧ್ಯಸ್ಥರು ಅನ್ನೋ ಹಾಗೆ ಚಾಪೆಲ್ ಅಭಿಪ್ರಾಯದ ಜೊತೆಗೆ ನನ್ನದೂ ಒಂದೆರೆಡು ಇರಬಾರದೇಕೆ?
ನಾವಿಸ್ ಆಟಗಾರನಾಗಿ ಆರಂಭಿಸಿ ವೆಟಿರನ್ ಆಗಿ ರಿಟೈರ್ ಆಗುವವರೆಗೆ ಅಥವಾ ತಂಡದಿಂದ ಹಿಡಿದು ಹೊರಗೆಳೆಯುವವರೆಗೆ ಆಟಗಾರರು ತಮ್ಮ ಹಿಂದೆ Wills ಸಿಗರೆಟ್ಟೋ ಅಥವಾ ಕೋಕಾಕೋಲ ಲೈಯಬಿಲಿಟಿಯ ಟ್ರೈಲ್ ಅನ್ನು ಬಿಟ್ಟು ಕಾಸುಮಾಡಿಕೊಂಡು ಜೀವನ ಪರ್ಯಂತ 'ದೊಡ್ಡ ಮನುಷ್ಯ'ರಾಗಿ ಮೆರೆಯುವರೆಗೆ, ಅಥವಾ 'ದೇಶದ್ರೋಹ'ದ ಪಟ್ಟವನ್ನು ಅನ್ಅಫಿಷಿಯಲ್ ಆಗಿ ತಲೆಮೇಲೆ ಹೊತ್ತು ಮುಖ್ಯವಾಹಿನಿಯಿಂದ ದೂರವಾಗುವವರೆಗೆ, ಅಥವಾ ವೈಯುಕ್ತಿಕ ದಾಖಲೆಗಳನ್ನು ಹುಟ್ಟಿಸುವುದೇ ಆಟ - ತಂಡ ಏನು ಬೇಕಾದರೂ ಮಾಡಿಕೊಳ್ಳಲಿ ಎನ್ನುವ ಹಪಾಹಪಿತನದ ದಾಹವನ್ನು ಒಡಲಲ್ಲಿಟ್ಟುಕೊಂಡೋ ಅಥವಾ ಕಾಮೆಂಟರಿ ಬಾಕ್ಸನ್ನು ಒಂದಲ್ಲಾ ಒಂದು ದಿನ ಸೇರುವುದೇ ಜೀವನದ ಪರಮೋದ್ದೇಶವಾಗುವುದಾದರೆ ಹಾಗೇ ಇರಲಿ ಬಿಡಿ, ಯಾರು ಬೇಡಾ ಅಂದೋರು...
ನಿಮಗೆಲ್ಲ ನೆನಪಿದೆಯೇ ಇಲ್ಲವೋ ಇಮ್ರಾನ್ ಖಾನ್ ಪಾಕಿಸ್ತಾನ ತಂಡದಿಂದ ನಿವೃತ್ತಿ ಆಗೋ ಹೊತ್ತಿಗೆಲ್ಲಾ ಒಂದು ಕಿರಿಯ ಪೀಳಿಗೆಯನ್ನು ಬೆಳೆಸಿ ಹೊಸ ತಂಡವನ್ನು ಮುನ್ನಡೆಸೋ ಎಲ್ಲಾ ಕಾರ್ಯತಂತ್ರವನ್ನು ರೂಪಿಸಿ ಆಗಿತ್ತು ಎಂದು ನನ್ನ ನಂಬಿಕೆ. ಬಾಲ್ ಟ್ಯಾಂಪೆರಿಂಗ್ನಿಂದ ಹಿಡಿದು ಡ್ರಗ್ ಅಬ್ಯೂಸ್ ಇನ್ಸಿಡೆನ್ಸುಗಳನ್ನೊಳಗೊಂಡು, ಬೆಟ್ಟಿಂಗ್ ಹಗರಣದಲ್ಲಿ ಸಿಕ್ಕಿ ಹಲವಾರು ಸುದ್ದಿಗಳಿಗೆ ಆಹಾರವಾದರೂ ತಂಡದಲ್ಲಿ ಯುವ ಪ್ರತಿಭೆಗಳಿಗೆ ಇಂಬುಕೊಟ್ಟು ಮುನ್ನಡೆಸುವ ಕಾಯಕವನ್ನು ಪಾಕಿಸ್ತಾನದ ಕ್ಯಾಪ್ಟನ್ನುಗಳು ಭಾರತ ತಂಡದವರಿಗಿಂತ ಚೆನ್ನಾಗಿ ಮಾಡಿದ್ದಾರೇನೋ ಎಂದು ನಿಮ್ಮನ್ನೇ ಕೇಳಬೇಕು...ಆದರೆ ನಮ್ಮ ನಾಯಕರು, ಅದರಲ್ಲಿ ನಮ್ಮ ಈಗಿನ ತಂಡದಲ್ಲಿ ಹಿಂದೆ ನಾಯಕರಾಗಿ ಇರುವಂತಹವರು ಇವರೆದ್ದೆಲ್ಲಾ ಏನು ಲೆಗಸಿ ಎಂದು ಬಹಳಷ್ಟು ಯೋಚನೆ ಮಾಡಿದರೆ ಅವರವರ ಪರ್ಸನಲ್ ರೆಕಾರ್ಡುಗಳನ್ನು ಬಿಟ್ಟರೆ ನನ್ನ ಕಣ್ಣಿಗೆ ಬೇರೇನೂ ಕಾಣಲಿಲ್ಲ - ಅದು ನನ್ನ ಕುರುಡುತನವಾದರೆ ಎಷ್ಟೋ ಒಳ್ಳೆಯದು!
ಚಾಪೆಲ್ ಹೇಳಿಕೆಯನ್ನು ಒಬ್ಬ ಕೋಚ್ ಹೇಳಿಕೆ ಎನ್ನುವುದಕ್ಕಿಂತ ಒಬ್ಬ ಹೊರಗಿನವನ ಮಾತಿನಂತೆ ಕೇಳಿ ತಿಳಿದುಕೊಂಡರೆ ಅದರಲ್ಲಿ ಯಾವುದೇ ರಹಸ್ಯವೇನೂ ಇಲ್ಲ - ಪ್ರತಿಯೊಬ್ಬ ಆಟಗಾರ ತಂಡದಲ್ಲಿ ಆರಂಭಿಸಿ ಬೆಳೆದು, ನಿವೃತ್ತಿ ಹೊಂದುವ ಹೊತ್ತಿಗೆ ತನ್ನದೇ ಆದ ಒಂದು ಐತಿಹಾಸಿಕ ದಾಖಲೆಯನ್ನು ಬಿಡುವುದರ ಜೊತೆಗೆ ಕ್ರಿಕೆಟ್ಟನ್ನು ಐದು-ಹತ್ತು ವರ್ಷಗಳ ಭವಿಷ್ಯದ ಕಾಲಚಕ್ರದಲ್ಲಿ ನೋಡುತ್ತಾರೋ ಇಲ್ಲವೋ ಎನ್ನುವುದನ್ನು ಸತ್ಯಾನ್ವೇಷಿಗಳಿಗೇ ಬಿಡೋಣ, ಏಕೆಂದರೆ ನಮ್ಮಂತಹ ಸಾಧಾರಣದವರು ಹುಡುಕಿದರೆ ಸಿಗುವಂತಹ ಸರಳ ಸತ್ಯವದೇನೂ ಅಲ್ಲ!
ಟೀಮ್ ಸ್ಪಿರಿಟ್ ಸರಿ, ಎಲ್ಲ ಜೊತೆಗೂಡಿ ಆಡಿ ಟೀಮಿನ ಗುರಿಯನ್ನು ಮುಟ್ಟುವುದು ಸರಿ, ಮುಂದೆ ಟೀಮಿನಿಂದ ವ್ಯವಸ್ಥಿತವಾಗಿ ಹೊರಸರಿಯುವ ಮುನ್ನ, ಸರಿದ ಮೇಲೆ ಹಿರಿಯ ಮುಂದಾಳುಗಳು, ಅನುಭವಿಗಳು ತಮ್ಮ ಸಾರವನ್ನು, ಹಿತವಚನವನ್ನು ಕಿರಿಯರ ಸೋಲಿನ-ಗೆಲುವಿನಲ್ಲಿ ಕಂಡುಕೊಂಡಿದ್ದರೆ...ಎನ್ನುವುದೊಂದು ಆಶಾವಾದವಷ್ಟೇ!