ಕಡಿಮೆ ಸಮಯವಿದ್ದರೇನಂತೆ, ಹೆಚ್ಚು ಆಸ್ವಾದಿಸುವ ಮನಸ್ಸಿದ್ದರೆ ಆಯಿತಪ್ಪಾ!
ಸೋಮವಾರದಿಂದ ಶುಕ್ರವಾರ ಹೋಗೋದು ಅಂದ್ರೆ ಒಂದ್ ರೀತಿ ಸರತಿ ಸಾಲಿನಲ್ಲಿ ನಿಂತ ವಿಮಾನಗಳ ಹಾಗೆ ಒಂದು ವಾರ ಮುಗಿದ ಮೇಲೆ ಮತ್ತೊಂದು ವಾರ, ಅದರ ಹಿಂದೆ ಇನ್ನೊಂದು, ಮಗದೊಂದು - ಮುಗಿದೇ ಹೋಯಿತು ತಿಂಗಳು, ಹಾಗೆಯೇ ಹೋಯಿತು ವರ್ಷ! ಏನ್ ಮಾಡಿದೀಯಾ ಇಲ್ಲೀವರೆಗೆ ಅಂತ ಯಾರಾದ್ರೂ ಕೇಳಿದ್ರೆ 'ಟೈಮ್ ಇಲ್ಲಾರೀ' ಅಂತ ಹೇಳೋದೊಂದನ್ನು ಬಿಟ್ಟು ಮತ್ತೇನನ್ನೂ ಮಾಡ್ಲೇ ಸಾರ್.
'ಥೂ, ಅವನೌವ್ನ...ಈ ಟೈಮಿಗೇನ್ ಮಾಡ್ಬೇಕು?' ಅಂತ ನಮ್ಮೂರಿನವರು ಯಾರೋ ಕಿವಿ ಹಿಂದುಗಡೆ ಬಂದು ಕೇಳಿದಂಗಾಯ್ತು, ಹಿಂದೆ ತಿರುಗಿ ನೋಡಿದ್ರೆ ಯಾರೂ ಇರ್ಲಿಲ್ಲ. ಅಮೇಲ್ ಅನ್ನಿಸ್ತು, ಅದು ನಂದೇ ಧ್ವನಿ - ಒಂದೊಂದು ಸರ್ತಿ ನಾವ್ ನಾವ್ ಮಾಡೋ ಕರ್ಮಕ್ಕೆ ಒರಟು ಮಾತು ಬ್ಯಾಡಾ ಅಂದ್ರು ಬಂದ್ ಬಿಡುತ್ತೆ. ಆದ್ರೆ ಈ ಬೈಗಳ ಒಳಗಿನ ಸುಖವೇ ಬೇರೆ, ಅದೇನೆ ಇದ್ರೂ ಮನದೊಳಗಿನ ಮಾತನ್ನ ಹೇಳೋ ಒಂದು ವಿಧಾನ ಅಥವಾ ಭಾಷೆ ಕಂಡುಕೊಂಡ ಒಂದು ಹೊಸ ಆಯಾಮ ಅಂತ ದೊಡ್ಡ ಮಾತ್ನಲ್ಲ್ ಹೇಳ್ಳೋ? ಅಥವಾ ನಾವಿರೋದೇ ಹಾಗೆ, ಒರಟು ಮಾತು ಬಿಟ್ರೆ ಬೇರೇನೂ ಬರೋದೇ ಇಲ್ಲ, ಅಂತ ಇರೋ ವಿಷ್ಯಾನ ಇದ್ದ್ ಹಾಗೆ ಹೇಳ್ಳೋ?
ನನ್ನ ಕಾರಿನಲ್ಲ್ ಕುಳಿತೋ, ಆಫೀಸ್ ಕ್ಯೂಬಿನಲ್ಲಿ ಕುಳಿತೋ, ಮನೆಯ ಕುರ್ಚಿಯ ಮೇಲೆ ಕುಕ್ಕರಿಸಿಯೋ, ನಾನು ಮಾಡ್ತೀನಲ್ಲಾ ಹಾಗೆ - ಪ್ರಪಂಚದ ಆಗುಹೋಗುಗಳಿಗೆಲ್ಲಾ ಸ್ವಂದಿಸೋ ಹಾಗೇನಾದ್ರೂ ನೀವೂ ಆಡೋರಾದ್ರೆ - ನಿಮಗೆ ಪ್ರಪಂಚದ ಎಲ್ಲ ಜನರ ಟೈಮನ್ನ ಗುಡ್ಡೇ ಹಾಕ್ ಕೊಟ್ರೂ ಸಾಕಾಗೋದಿಲ್ಲ ನೋಡಿ! ಅದರ ಬದಲಿಗೆ ಒಂದಿಷ್ಟು ನಮ್ಮದೇ ಆದ nitch ಕಂಡ್‌ಕೋಬೇಕು, ಅದರಲ್ಲೇನಾದ್ರೂ ಸಾಧಿಸಿಕೋಬೇಕಪ್ಪಾ, ಆಗ ಎಲ್ಲ ಟೈಮೂ ನಿಮ್ಮ ಬಳಿ ಇದ್ದೇ ಇರತ್ತೆ. ನಿಮಗೆ ಬೆಳಿಗೆ ಒಂಭತ್ತು ಘಂಟೆಯಿಂದ ಸಂಜೆ ಐದು ಘಂಟೆವೆರೆಗಿನ ಎಂಟು ಘಂಟೆಗಳು ಎಷ್ಟು ದೊಡ್ಡ ಸಮಯ ಅಂತ ಅನುಭವಕ್ಕೇನಾದ್ರೂ ಬರಬೇಕು ಅಂದ್ರೆ ನಾನು ಹೇಳ್ದೇ ಅಂತ ಒಂದು ಸಣ್ಣ ಪ್ರಯೋಗಾ ಮಾಡಿ - ಒಂದು ದಿನ ಆಫೀಸಿಗೆ ರಜೆ ಹಾಕಿ, ಮನೆಯಲ್ಲಿ ಸುಮ್ನೇ ಕುಳಿತುಕೊಳ್ಳಿ, ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಓದಿ, ಇಲ್ಲಾ CNBC ಚಾನೆಲ್ ನೋಡಿ, ಇಲ್ಲಾ ಎರಡನ್ನೂ ಮಾಡಿ. ನಡುವೆ ನಿಸರ್ಗ ನಿಯಮದ ಬ್ರೇಕ್‌ಗಳನ್ನು ತೆಗೆದುಕೊಳ್ಳಿ...ಆಗ ಗೊತ್ತಾಗುತ್ತೆ ಎಂಟೊಂಭತ್ತು ಘಂಟೆಗಳು ಅದೆಷ್ಟು ಬೇಗ ಓಡ್ತಾವೆ ಅಂತ! ದಿನಗಳು ನಿಮಗೆ ಬೇಗ ಬೇಗ ಓಡಿ ಹೋಗ್ತಾವೆ ಅಂತ ಅನ್ನಿಸಿದ್ರೆ ಅಂದು ಒಳ್ಳೆಯ ವಿಷಯವೇ ಇರಬಹುದು, ನೀವು ವ್ಯಸ್ತರಾಗಿದ್ರೆ (busy), ನಿಮ್ಮ ಅಸ್ತವ್ಯಸ್ತತೆಯಲ್ಲಿ ಸಮಯ ಓಡಿಹೋಗಿದ್ದೇ ಗೊತ್ತಾಗಲ್ಲ, ಅಥವಾ ಸುತ್ತಲನ್ನು ನೀವು ಗಮನಿಸೋದೇ ಇಲ್ಲ.
ಸೂರ್ಯ ಹುಟ್ತಾನೆ, ಮುಳುಗ್ತಾನೆ - ಅದರಲ್ಲೇನು ವಿಶೇಷ ಅಂತ ಯಾಕ್ ಅಂದುಕೋಬೇಕು? ಬೀಳೋ ಮಳೆ ಹನಿಗಳನ್ನಾಗಲೀ, ಸ್ನೋ ಪ್ಲೇಕ್ಸ್‌ಗಳನ್ನಾಗಲೀ ಯಾಕ್ ನೋಡ್‌ಬೇಕು ಅಂತ ನನ್ನನ್ನೇನಾದ್ರೂ ನೀವು ಕೇಳಿದ್ರೆ ನಿಮಗೆ ನಿಜವಾಗ್ಲೂ ತೊಂದ್ರೆ ಇದೆ ಅಂತ್ಲೇ ನಾನು ಹೇಳೋದು. ಒಂದು ದಿನ ಮಳೆಯಲ್ಲಿ ನೆನೆದುಕೊಂಡೇ ಪಾರ್‌ಕಿಂಗ್ ಮಾಡಿ ಮನೆಗೆ ಬನ್ನಿ, ಮುಖದ ಮೇಲೆ ಬೀಳೋ ಮಳೆ ಹನಿಗಳು ನಿಮಗೇನಾದ್ರೂ ಗುಟ್ಟನ್ನು ಹೇಳ್ತಾವೋ ಕಾದು ನೋಡಿ. ಅದೂ ಬ್ಯಾಡಪ್ಪಾ, ಇನ್ನೇನು ಚೈತ್ರ ಮಾಸ ಬಂತು ತಾನೆ, ನಿಮ್ಮನೇ ಸುತ್ತಲಿರೋ ಮರದ ಎಲೆಗಳು ನಿಧಾನವಾಗಿ ಚಿಗುರೋ ಪ್ರಕ್ರಿಯೆಯನ್ನ ದಿನಕ್ಕೊಮ್ಮೆಯಾದ್ರೂ ಗಮನಿಸಿ, ಒಂದೇ ಒಂದ್ ವಾರ ನೀವು ಹೀಗೆ ಮಾಡಿದ್ದೇ ಅದ್ರೆ, ನಿಮ್ಮ ಮನದ ದುಗುಡ-ದುಮ್ಮಾನಗಳೆಲ್ಲಾ ೧೦ ಪರ್ಸೆಂಟ್ ಕಡಿಮೆಯಾಗ್ತಾವೆ ಅಂದುಕೊಳ್ಳಿ, ನಾನ್ ಗ್ಯಾರಂಟಿ ಕೊಡ್ತೀನಿ!
ಟೈಮಿಗ್ಯಾಕ್ ಬೈಯಬೇಕ್ ಹೇಳಿ? ಎಲ್ಲರಿಗೂ ಇರೋ ಸಮಯ ಇಷ್ಟೇ ಅಂತ ನಿಸರ್ಗ ಸಮತಾವಾದ ಸಾರಿರೋವಾಗ ಅದನ್ನ ಹೇಳಿಯಾಗಲೀ, ಹಳಿದುಕೊಂಡಾಗಲೀ ಏನು ಬಂದೀತು? ಕಡಿಮೆ ಸಮಯವಿದ್ದರೇನಂತೆ, ಸುತ್ತಲನ್ನು ಆಸ್ವಾದಿಸುವ ಮನಸ್ಸಿದ್ದರಾಯಿತ್ತಪ್ಪಾ. ನೀವು ನಾಳೆ ಡ್ರೈವ್ ಮಾಡ್ತೀರಲ್ಲ, ಆಗ ಬರೀ ರಸ್ತೆಯನ್ನ ನೋಡ್ದೇ ಸುತ್ತಮುತ್ತಲೂ ಸ್ವಲ್ಪ ನೋಡಿ, ಏನಾದ್ರೂ ವಿಶೇಷವಾಗಿದ್ದು ಕಂಡು ಬಂದ್ರೆ ನಮಗೂ ಸ್ವಲ್ಪ ತಿಳಿಸಿ, ಆಯ್ತಾ?